ನಾರಾಯಣ ತಂತ್ರಿಯ ಜೊತೆ ಮಾತು ಮುಗಿಸಿ ಮಹಡಿಯಿಂದ ಕೆಳಗಿಳಿಯುತ್ತಿದ್ದ ಗಂಗೂ ಅಳುತ್ತಿರುವವಳಂತೆ ಕಂಡಿತು. ಅವಳನ್ನು ಇಪ್ಪತ್ತೈದು ವರ್ಷಗಳ ನಂತರವೂ ನೋಡಿ ದಿನಕರನಿಗೆ ಎದೆ ಹೊಡೆದುಕೊಳ್ಳತೊಡಗಿತು. ನಾರಾಯಣ ತಂತ್ರಿಯೂ ಮುಖ ಕೆಳಗೆ ಹಾಕಿ ಅವಳ ಹಿಂದಿಂದ ಹಳೆಯ ಕಾಲದ ಕಡಿದಾದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ. ಸ್ವಾಧೀನ ತಪ್ಪದಂತೆ ಕಂಬಿಯನ್ನು ಹಿಡಿದು.

ಗಂಗೂ ಇನ್ನೂ ಸಪೂರವಾಗಿಯೇ ಉಳಿದು, ಕಪ್ಪು ಬಿಳಿ ಮಿಶ್ರಿತ ತಲೆಗೂದಲನ್ನು ಗಂಟುಕಟ್ಟಿ, ಎರಡು ಕೈಗಳಿಂದಲೂ ಸೆರಗನ್ನು ಜಗ್ಗಿ ಹಿಡಿದು ಲಾವಣ್ಯವತಿಯಾದ ಫ್ರೌಢೆಯಾಗಿ ಕಾಣುತ್ತಿದ್ದಾಳೆ. ಅವಲಂಬನವಿಲ್ಲದೆ ಕೆಳಗಿಳಿದು ಬಂದವಳುತನ್ನ ಕಾಲಿಗೆ ಎರಗಿ ‘ಬಂದಿರ?’ಎಂದಳು. ಇನ್ನೂ ಅವಳ ಬಳೆಯ ಹುಚ್ಚು ಬಿಟ್ಟಂತಿರಲಿಲ್ಲ. ಎರಡು ಕೈಗಳಲ್ಲೂ ಎಷ್ಟೊಂದು ಗಾಜಿನ ಬಳೆಗಳನ್ನು ತೊಟ್ಟು, ಅದಕ್ಕೆ ಹೊಂದುವ ಬಣ್ಣದ ಸೀರೆ ಕುಪ್ಪಸಗಳನ್ನು ತೊಟ್ಟಿದ್ದಾಳೆ.

ಸೀತಮ್ಮ ಒಳಗಿನಿಂದ ಬಂದು ಹಿತವಾಗಿ ಮಾತನ್ನಾಡಲು ತೊಡಗಿದ್ದರಿಂದ ದಿನಕರನಿಗೆ ತನ್ನ ಭಾವನೆಗಳನ್ನು ತೋರಗೊಡದಂತೆ ಇರುವುದು ಸಾಧ್ಯವಾಯಿತು. ನಾರಾಯಣ ತನ್ನ ಭಾವನೆಗಳನ್ನೆಲ್ಲ ಗಮನಿಸುತ್ತ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಂತಿದ್ದ. ಈ ಬಟ್ಟೆ ತೊಟ್ಟು ತಾನು ಬಿಟ್ಟುಕೊಟ್ಟುಬಿಟ್ಟೆನೆಂದು ತಿಳಿದಿದ್ದ ತನ್ನ ನೈಜ ವ್ಯಕ್ತಿತ್ವ ಬದಲಾಗಿಲ್ಲವೆಂದು ದಿನಕರ ಯೋಚಿಸುತ್ತ, ಸಜ್ಜನಿಕೆಗಾಗಿ ಏನಾದರೂ ಹೇಳಬೇಕೆಂದು ‘ಹೇಗಿದ್ದೀರಿ’ ಇತ್ಯಾದಿ ಹಿಂದಿಯಲ್ಲಿ ಹೇಳಿದ. ಆಗಲೂ ಗಂಗೂಗೆ ಹೈಸ್ಕೂಲಿನಲ್ಲಿ ಕಲಿತ ಹಿಂದಿ ಗೊತ್ತಿತ್ತು. ಎಷ್ಟು ಸರಸವಾಗಿ ಮಾತಾದುತ್ತಿದ್ದವಳು ಈಗ ಸೀತಮ್ಮನ ಮಾತು ಕೇಳಿಸಿಕೊಳ್ಳುತ್ತ ಸುಮ್ಮಗೆ ನಿಂತಿದ್ದಳು.

“ನಮ್ಮ ಗಂಗು ಸಾಮಾನ್ಯಳಲ್ಲ” ಸೀತಮ್ಮ ಹೇಳತೊಡಗಿದ್ದರು. “ಅವಳಿಗೆ ವಯಸ್ಸಾದ್ದು ಕಾಣುತ್ತ ನೋಡು. ಹರಿದ್ವಾರದಲ್ಲಿ ಇದ್ದಂತೆಯೇ ಇದಾಳಲ್ಲವ? ಬೆಳ್ಳಗಾದ ಕೂದಲಿಗೆ ಬಣ್ಣ ಹಾಕಿಕೊ ಎಂದರೆ ಇವಳು ಕೇಳ್ತಾಳ? ವೈರಾಗ್ಯ ಬಂದು ಬಿಟ್ಟಿದೆ. ಕಾಲೇಜು ಗೀಲೇಜೆಲ್ಲ ಮುಗಿಸಿ ಮೇಡಮ್ಮೂ ಆಗಿಬಿಟ್ಟಿದ್ದಾಳೆ. ಸ್ಕೂಲಿಂದ ಬರುವಾಗ ಯಾವಾಗಲೂ ಒಂದು ಹಿಂಡು ಮಕ್ಕಳು ಅವಳ ಹಿಂದೆ. ಕಿಂದರ ಜೋಗಿ ಇವಳು. ಇವಳಿಗೆ ಮಾತ್ರ ವೈರಾಗ್ಯವೋ ಅಂದರೆ ಇವಳ ಮಗನಿಗೂ ವೈರಾಗ್ಯವೇ. ಶುಕಮುನಿ ಹಾಗೆ ಅವನು. ನಮ್ಮ ಕುಲಶೇಖರ ಗೋಪಾಲನಂತೆ ಅವನು ಅಲ್ಲವೇ ಅಲ್ಲ. ಅಂಗಿ ಸಹ ಹಾಕಲ್ಲ ಅವನು. ಬಿಳೀ ಪಂಚೆಯುಟ್ಟುಕೊಂಡು ಬಿಳೀ ಧೋತ್ರ ಹೊದ್ದುಕೊಂಡು, ಇಷ್ಟುದ್ದದ ಗಡ್ಡ ಬಿಟ್ಟುಕೊಂಡು, ಅವನು ಹಾಡೋದು ಕೇಳಬೇಕು ನೀನು. ತ್ಯಾಗರಾಜರೇ ಮತ್ತೆ ಹುಟ್ಟಿಬಂದಂತೆ ಕಾಣುತ್ತೆ. ನಮ್ಮ ಗಂಗೂ ಪುಣ್ಯಾತಗಿತ್ತಿ”.

ಸೀತಮ್ಮನ ಮಾತಿನಿಂದ ಗಂಗೂ ಪ್ರಸನ್ನಳಾದಂತೆ ಕಂಡಳು. ತನಗರ್ಥವಾಗದ ಭಾಷೆಯಲ್ಲಿ ಹೀಗೆ ಎಲ್ಲರನ್ನೂ ಸಂತೈಸುವ ಸೀತಮ್ಮನನ್ನು ನೋಡುತ್ತ ದಿನಕರ ಬೆರಗಾದ.