“ಸುರತ್ಕಲ್ಲಿನ ಹತ್ತಿರ ಬೀಚು ತುಂಬ ಚೆನ್ನಾಗಿರುತ್ತದೆ. ಹೋಗೋಣ ಬಾ” ಎಂದು ಸಂಜೆಯಾಗುತ್ತಿದ್ದಂತೆ ನಾರಾಯಣ ದಿನಕರನಿಗೆ ಹೇಳಿದ. ತಾನೇ ಡ್ರೈವ್ ಮಾಡಿದ. ನಾರಾಯಣ ಅನ್ಯಮನಸ್ಕನಾಗಿ ಇದ್ದ. ಏನೋ ಮಾತಾಡಲು ತಾನು ಕಾದಿರುವಂತೆಯೇ ಅವನೂ ಕಾದಿದ್ದಾನೆಂದೂ ದಿನಕರನಿಗೆ ಅನುಮಾನವಾಯಿತು. ಚುನಾವಣೆ ಬಗ್ಗೆ ತಾನು ಮಾಡಿದ ಟೀವಿ ಕಾರ್ಯಕ್ರಮ, ಸೌತ್ ಆಫ್ರಿಕಾ ಬಗ್ಗೆ ತಾನು ಮಾಡಿದ ವರದಿ, ಅಲ್ಲಿ ಇಲ್ಲಿ ತಾನು ಬರೆಯುತ್ತಿದ್ದ ಲೇಖನಗಳು, ಇತ್ಯಾದಿಗಳನ್ನು ಎತ್ತಿ ನಾರಾಯಣ ಮೆಚ್ಚುಗೆಯಲ್ಲಿ ಮಾತಾಡುತ್ತಿದ್ದುದು ಏನನ್ನೋ ಮುಕ್ತವಾಗಿ ಹೇಳಲಾರದೆ ಮುಚ್ಚಿಕೊಳ್ಳುವ ಉಪಾಯದಂತೆ ಕಾಣುತ್ತಿತ್ತು. ಬೀಚಿನ ಶುಭ್ರವಾದ ಮರಳಿನ ರಾಶಿಯ ಮೇಲೆ ನಡೆಯುತ್ತ, ಸಮುದ್ರ ಅಲೆಅಲೆಯಾಗಿ ಏರಿ ಬಂದು ಹಿಮ್ಮೆಟ್ಟುವುದನ್ನು ಸುಖಿಸುತ್ತ ಇಬ್ಬರೂ ಮೌನವಾಗಿದ್ದಾಗ ನಾರಾಯಣ ತನ್ನ ಕಡೆ ತಿರುಗಿ ಕೈ ಹಿಡಿದು ಹೇಳಿದ.

“ಅದೇನೋ ನಿನಗೆ ಹೇಳಲೇ ಬೇಕಾಗಿದೆ. ಈ ಇಪ್ಪತ್ತೈದು ವರ್ಷಗಳಿಂದಲೂ ನಿನಗೆ ಹೇಳಬೇಕೆಂದುಕೊಂಡು, ಹೇಳಲಾರದೆ, ನಿನ್ನನ್ನ ನೋಡದೇ ಇರುವುದೇ ವಾಸಿ ಎಂದುಕೊಂಡು ಇದ್ದುಬಿಟ್ಟಿದ್ದೆ. ನೀನು ಯಾಕೆ ಬಂದಿಯೋ ಎನ್ನಿಸಿತು ನಿನ್ನ ನೊಡಿದಾಗ. ಆದರೆ ಇವತ್ತು ಬೆಳಿಗ್ಗೆ ಗಂಗು ಬಂದು ಹೋದಮೇಲೆ ನಿನ್ನ ಹತ್ತಿರ ಮಾತಾಡಿ ಬಿಡುವ ನಿಶ್ಚಯ ಮಾಡಿಬಿಟ್ಟೆ” ಎಂದು ಸುಮ್ಮನಾದ.

ಇಬ್ಬರೂ ಕೆಲವು ಹೊತ್ತು ಏನೂ ಮಾತಾಡದೆ ಸಮುದ್ರ ನೋಡುತ್ತ ನಿಂತುಬಿಟ್ಟರು. ಸೂರ್ಯ ಅಸ್ತಮಿಸುತ್ತ ಆಕಾಶವನ್ನೆಲ್ಲ ಕ್ಷಣಕ್ಷಣಕ್ಕೂ ಬದಲಾಗುವ ಬಣ್ಣಗಳಿಂದ ತೊಯ್ಯುತ್ತಿದ್ದ. ಬೀಚಿನ ಮೇಲೆ ಬಲೆಗಳನ್ನು ಹರಡಿಕೊಂಡಿದ್ದ ಮೀನುಗಾರರಲ್ಲದೆ ಬೇರೆ ಯಾರೂ ಇರಲಿಲ್ಲ. ದಿನಕರ ಮರಳಿನ ಮೇಲೆ ಕೂತು ಮುಂದಿನದನ್ನು ಕಾಯುತ್ತ ಮರಳನ್ನು ಗುಪ್ಪೆ ಮಾಡಲು ತೊಡಗಿದ್ದ.

ನಲವತ್ತೈದು ವಯಸ್ಸಿನ ತಾನು ಬಾಲನಾಗುತ್ತಿದ್ದೇನೆ ಎನ್ನಿಸಿತು. ಏನನ್ನಾದರೂ ಕೇಳಿಸಿಕೊಳ್ಳಬಲ್ಲೆ. ಹೇಳಬಲ್ಲೆ ಎನ್ನಿಸಿತ್ತು. ನಾರಾಯಣನೂ ತನ್ನ ಸಾರ್ವಜನಿಕ ಕ್ಷೇತ್ರದಲ್ಲಿ ಜಾಗರೂಕತೆಯಿಂದ ಬಳಸುವ ಇಂಗ್ಲಿಷಿನಿಂದ ಮುಕ್ತನಾಗಿ, ತನಗರಿವಾಗದಂತೆ ಕನ್ನಡ ಬೆರೆಸಿ ತನಗೇ ಮಾತಾಡಿಕೊಳ್ಳುತ್ತಿರುವಂತೆ ಸಹಜವಾಗಿ ಬಿಟ್ಟಿದ್ದ. ಆದರೂ ಬಳಸಿ ಬಳಸಿ ಹೇಳಬೇಕಾದ್ದನ್ನು ಸುತ್ತುತ್ತಿದ್ದ. ದಿನಕರನಿಗೆ ತಾನೇ ಹೇಳಿಬಿಡಬೇಕೆನ್ನಿಸಿತು. ಆದರೆ ನಾರಾಯಣನ ತುಮುಲದಲ್ಲಿ ತನ್ನ ಮಾತು ಉಚಿತವಾಗಿ ಕಾಣಲಾರದೆಂದು ಸುಮ್ಮನಾದ. ಬಣ್ಣಗಳನ್ನೆಲ್ಲ ಕಳೆದುಕೊಳ್ಳುತ್ತ ಆಕಾಶ ತನ್ನದೇ ಆದ ವ್ಯಸನಕ್ಕೆ ಚಿರಕಾಲದಿಂದಲೂ ಹಿಂತಿರುಗುತ್ತಲೇ ಇರುವಂತೆ ಕಂಡಿತು.

“ದಿನಕರ, ನನ್ನ ಹೆಂಡತಿ ಸತ್ತಮೇಲೆ ನಾನು ಮತ್ತೆ ಮದುವೆಯಾಗಲೂ ಇಲ್ಲ. ನಮ್ಮ ಮನೆಯಲ್ಲಿ ಹೊರಗೆಲಸಕ್ಕೆಂದು ಸೇರಿದ ಗಂಗೂ ಮನೆಯವಳೇ ಆದಳು. ಗೋಪಾಲನನ್ನು ಬೆಳೆಸಿದಳು. ಆಗಲೇ ಅವಳಿಗೊಂದು ಸೋದರಿಕೆಯ ಸಂಬಂಧವಾಗಿ ಬಿಟ್ತಿತ್ತು. ಅವಳ ತಾಯಿ ವೇಶ್ಯಾ ವೃತ್ತಿಯಲ್ಲಿದ್ದವಳು. ಅನುಕೂಲವಾಗತ್ತೇಂತ ಮಂದಬುದ್ಧಿಯವನೊಬ್ಬನಿಗೆ, ಅಂದರೆ ತನ್ನ ತಮ್ಮನೊಬ್ಬನಿಗೆ, ಅವಳನ್ನು ಕೊಟ್ಟು ಮದುವೆ ಮಾಡಿದ್ದಳು. ಹೀಗೆ ಅವಳ ಕೈಹಿಡಿದವನೇ ಇವತ್ತು ಬೆಳಿಗ್ಗೆ ನನಗೆ ಹೇಳಲೆಂದು ಬಂದದ್ದು. ಅವನು ಹಸುವಿನಂತಹ ಮನುಷ್ಯ. ಹಸುಗಳನ್ನು ನೋಡಿಕೊಂಡೇ ಇದ್ದುಬಿಟ್ಟಿದ್ದಾನೆ. ಗಂಗೂಗೆ ತಾಯಿಯ ವೃತ್ತಿ ಸರಿಕಾಣದೆ ನಮ್ಮ ಮನೆ ಸೇರಿದ್ದು. ಆಗ ಅವಳು ಹೈಸ್ಕೂಲು ಮುಗಿಸಿದ್ದಳು ಬೇರೆ. ಹರಿದ್ವಾರದಿಂದ ಹಿಂದೆ ಬಂದವನು ಅವಳನ್ನು ಕಾಲೇಜಿಗೆ ಸೇರಿಸಿ ಓದಿಸಿದೆ. ಕಾಡುವ ಅವಳ ತಾಯಿ ಸತ್ತು ಅವಳಿಗೆ ಬಿಡುಗಡೆಯಾದಂತೆಯೂ ಆಗಿತ್ತು….”

ನಾರಾಯಣ ಮಾತು ನಿಲ್ಲಿಸಿದ. ದಿನಕರ ಮರಳನ್ನು ತೋಡಿ, ಈಗ ಒದ್ದೆ ಮರಳನ್ನು ಎತ್ತಿ ಅವುಗಳನ್ನು ಶಿವಲಿಂಗಗಳಾಗಿ ಮಾಡಲು ತೊಡಗಿದ್ದ. ತಾನು ನಾರಾಯಣನಿಗೆ ಹೇಳಬೇಕೆಂದು ಇದ್ದುದನ್ನು ಹೇಳುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಅನ್ನಿಸುತ್ತಿದ್ದಾಗಲೇ ನಾರಾಯಣ ದಿಡೀರನೆ ಹೇಳಿಬಿಟ್ಟ:

“ಹರಿದ್ವಾರದಲ್ಲಿ ನಾನು ಅವಳ ಜೊತೆ ಸಂಬಂಧವಿಟ್ಟುಕೊಂಡಿದ್ದೇನೆಂದು ನಿನಗೆ ಗೊತ್ತಿರಲಿಲ್ಲ. ನೀನು ಇಟ್ಟುಕೊಂಡಿದ್ದೀಯೆಂದು ನನಗೂ ತಿಳಿದಿರಲಿಲ್ಲ”.

ದಿನಕರನಿಗೆ ಹಗುರಾಗಿ ಬಿಟ್ಟಿತು. “ಆದರೆ ಅವಳನ್ನು ಮೊದಲು ಪಡೆದವನು ನಾನು. ಅವಳು ಇನ್ನೂ ಕುಮಾರಿಯಾಗಿದ್ದಳು” ಎಂದು ಹೇಳಬೇಕೆಂದು ಕ್ಷಣ ಅನ್ನಿಸಿ, ತನಗೆ ಹಾಗೆ ಅನ್ನಿಸಿದ್ದರ ಹಿಂದಿರುವ ಪಶುತ್ವಕ್ಕೆ ನಾಚಿ ಸುಮ್ಮನೇ ಕೇಳಿಸಿಕೊಂಡ.

“ಬಂದವನೇ ಕಾಲೇಜು ಸೇರಿಸಿದೆ ಎಂದೆನಲ್ಲ? ಸ್ವಲ್ಪ ದಿನಗಳಲ್ಲಿ ಅವಳು ಬಸುರಾಗಿದ್ದಾಳೆಂದು ತಿಳಿಯಿತು. ನನಗೆ ದಿಗಿಲಾಯಿತು. ಆದರೆ ಅವಳ ಗಂಡನಿಗೇ ಮಗು ಹುಟ್ಟಿದ್ದೆಂದು ಜನ ತಿಳಿಯುತ್ತಾರೆ ಎಂದೂ ಸಮಾಧಾನ ಪಟ್ಟೆ. ನಾನು ಸ್ವಾಭಾವಿಕವಾಗಿ ಪ್ರಾಕ್ಟಿಕಲ್ ಮನುಷ್ಯ. ಕಾಲೇಜಲ್ಲಿ ಓದುವುದು ಕಷ್ಟವಾಗುತ್ತೆ, ಬಸಿರು ತೆಗೆಸಿಕೊಳ್ಳಬೇಕೆಂದು ಅವಳು ಹಠ ಮಾಡಿದಳು. ನನಗೂ ಒಳಗೊಳಗೇ ಹಾಗೆನ್ನಿಸಿದರೂ ಬೇಡವೆಂದೆ. ಆದರೆ ಗರ್ಭವತಿಯಾದ ಗಂಗೂ ನನ್ನನ್ನು ಎಷ್ಟು ಪ್ರೀತಿಸಲು ಶುರು ಮಾಡಿದ್ದಳೆಂದರೆ ನನಗವಳ ಮೇಲೆ ನನ್ನ ಮೊದಲ ಹೆಂಡತಿಯಲ್ಲಿ ಇಲ್ಲದಿದ್ದ ಮೋಹ ಬೆಳೆಯತೊಡಗಿತ್ತು. ಅವಳ ನಿಸ್ಸಹಾಯಕತೆ ಕಂಡು ಈ ಮೋಹಪ್ರೀತಿಯಾಗಿ ಬೆಳೆಯಿತು. ನಾನು ಅವಳಿಗೆ ಒಂದು ಮನೆಯನ್ನು ಕೊಂಡುಕೊಟ್ಟೆ. ಅದೇ ಒಂದು ಪುಟ್ಟ ತೋಟವೂ ಕೊಟ್ಟಿಗೆಯೂ ಮನೆಯ ಹಿತ್ತಲಿನಲ್ಲಿ ಇರುವಂತೆ ನೋಡಿಕೊಂಡೆ. ಅದರ ಹಿಂದೆ ಅಮ್ಮನ ಒತ್ತಾಯವೂ ಇತ್ತು – ಎನ್ನು. ಆಗಲೇ ಐವತ್ತು ಸಾವಿರ ಖರ್ಚುಮಾಡಿ ನಾನು ಕೊಂಡ ಆ ಜಾಗಕ್ಕೀಗ ಇಪ್ಪತ್ತು ಲಕ್ಷಕೊಟ್ಟು ತಗೊಳ್ಳುವವರಿದ್ದಾರೆ. ಮಂಗಳೂರು ಬೊಂಬಾಯಿಯಾಗಿ ಬಿಟ್ಟಿದೆ.

“ಇರಲಿ. ಅವಳ ಗರ್ಭ ನಿಂತು ನಾಲ್ಕೈದು ತಿಂಗಳಾಗುತ್ತಿದ್ದಂತೆ, ಶಿಶು ಅವಳನ್ನು ಒದೆಯಲು ಶುರು ಮಾಡಿದಂತೆ ಈ ಗರ್ಭವನ್ನು ತಾನು ತೆಗೆಸಿಕೊಳ್ಳುವುದೇ ಸರಿ ಎಂದು ಮತ್ತೆ ಕಾಡಲು ತೊಡಗಿದಳು. ಒಂದು ರಾತ್ರೆ ಅವಳ ಪಕ್ಕದಲ್ಲಿ ನಾನು ಮಲಗಿದ್ದಾಗ ಬಿಕ್ಕುತ್ತ ಹೇಳಿದಳು – ಅದೇ ನಿನ್ನ ಅವಳ ಪ್ರೀತಿಯ ವಿಷಯ. ಈ ಗರ್ಭ ನಿಮ್ಮದೋ ಗೊತ್ತಿಲ್ಲ, ಅವರದೂ ಇರಬಹುದು ಎಂದುಬಿಟ್ಟಳು. ನಿಮಗೆ ಇಷ್ಟವಿಲ್ಲದಿದ್ದರೆ ನನ್ನನ್ನು ತೊರೆದುಬಿಡಿ ಎಂದು ಅತ್ತಳು.

“ನನಗೆ ನಿನ್ನಮೇಲೂ ಅವಳ ಮೇಲೂ ಭಯಂಕರ ಕೋಪ ಹುಟ್ಟಿಬಿಟ್ಟಿತು. ನಿನಗಿಂತ ಹೆಚ್ಚಾಗಿ ಅವಳ ಮೇಲೆ. ಅವಳನ್ನು ಜಪ್ಪಿ ಕೊಂದು ಬಿಡಬೇಕು ಎಂದೂ ಅನ್ನಿಸಿತ್ತು. ಆದರೆ ಲಾಯರಿನ ವಿವೇಕ ನನ್ನನ್ನು ತಡೆದಿರಬಹುದು. ಅಥವಾ ನನ್ನ ಪೂರ್ವಜರು ಮಾಡಿದ ಪುಣ್ಯ. ಇರಲಿ. ಎಂಥ ಮಾಯಾವಿ ಅವಳು ಎನ್ನಿಸಿತು. ಹರಿದ್ವಾರದಲ್ಲಿ ನಿನ್ನ ಮೇಲಿನ ಪ್ರೀತಿಯನ್ನು ನನ್ನಿಂದ ಮುಚ್ಚಿಡಲು ಸಾಧ್ಯವಾಯಿತಲ್ಲ ಅವಳಿಗೆ, ಎಂದು ಹೆಣ್ಣಿನ ಮಾಯೆಯ ಬಗ್ಗೆಯೇ ಯೋಚಿಸುತ್ತ, ಯೋಚಿಸುತ್ತ ಸಂಕಟವಾಗತೊಡಗಿತು.

“ಕೆಲವು ದಿನ ಅವಳನ್ನು ನೋಡುವುದನ್ನೇ ಬಿಟ್ಟುಬಿಟ್ಟೆ. ಒಂದು ದಿನ ಅವಳ ಮೇಲಿನ ನನ್ನ ಮೋಹವನ್ನು ಕಳೆದುಕೊಳ್ಳಲಾರದೆ ಅವಳ ಹತ್ತಿರ ಹೋದೆ. ಕಾಮಾತುರರಿಗೆ ಭಯವೂ ಇಲ್ಲ, ಲಜ್ಜೆಯೂ ಇಲ್ಲವೆನ್ನುತ್ತಾರೆ. ಅವಳ ಇಷ್ಟದಂತೆ ಗರ್ಭ ತೆಗೆಸಲೆಂದು ರಹಸ್ಯವಾಗಿ ಬೆಂಗಳೂರಿಗೆ ಅವಳನ್ನು ಕರೆದುಕೊಂಡು ಹೋದೆ. ಒಬ್ಬ ಡಾಕ್ಟರನ್ನು ಪತ್ತೆ ಮಾಡಿ ಮಾತೂ ಆಡಿದೆ.

“ಅದರ ಹಿಂದಿನ ರಾತ್ರೆ ಹೋಟೆಲಿನ ಕೋಣೆಯೊಂದರಲ್ಲಿ ಅವಳು ನನ್ನ ಪಕ್ಕ ಮಗುವಿನಂತೆ ನಿದ್ರಿಸುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಆದದ್ದನ್ನು ಯಾರಿಗೂ ನಾನು ಹೇಳಿಕೊಳ್ಳಲಾರೆ. ನನ್ನ ದೇವರೆ ಅದಕ್ಕೆ ಕಾರಣ ಎಂದುಕೊಂಡಿದ್ದೇನೆ.

“ಥಟ್ಟನೆ ಅನ್ನಿಸಿತು: ಈ ಮಗು ನನ್ನದಾದರೆ ಏನಂತೆ? ದಿನಕರನಾದರೆ ಏನಂತೆ? ಅದೂ ಒಂದು ಮಗು. ನಾನೂ ಒಂದು ಮಗುವಾಗಿ ಇದ್ದಂತೆ ಅದೂ ಒಂದು ಮಗು. ಅವಳ ಗರ್ಭದಲ್ಲಿ ಸಂಚರಿಸುತ್ತ ಬೆಳೆಯುತ್ತಿರುವ ಮಗು – ಅದು. ಅದು ಹುಟ್ಟಿಕೊಂಡು ಬೆಳೆಯಲಿ. ನನ್ನದೇ ಎಂದುಕೊಂಡುಬಿಡುತ್ತೇನೆ.

“ಹೀಗೆ ಅನ್ನಿಸಿದ್ದೇ ಅವಳನ್ನು ಎಬ್ಬಿಸಿ ಹೇಳಿದೆ. ನನ್ನನ್ನು ಅಪ್ಪಿ ಅವಳು ಖುಷಿಯಲ್ಲಿ ಬಿಕ್ಕಿದಳು. ಮಾರನೇ ದಿವಸವೇ ಅವಳನ್ನು ಹಿಂದಕ್ಕೆ ಕರೆತಂದೆ. ನನ್ನನ್ನು ನೋಡಿದ್ದೇ ಅಮ್ಮನಿಗೆ ಏನೆನ್ನಿಸಿತೊ? ದೇವರ ಪೂಜೆ ಮಾಡದೆ ನೀನು ಅದೆಷ್ಟು ದಿವಸವಾಯಿತು? ಸ್ನಾನ ಮಾಡಿ ಪೂಜೆ ಮಾಡು ಎಂದರು.

ನನ್ನಲ್ಲಾದ ಬದಲಾವಣೆಯಲ್ಲಿ ಅಮ್ಮನ ಅನುಗ್ರಹವೂ ಇದೆಯೆಂದು ನನಗನ್ನಿಸುತ್ತದೆ.”