ಆಕಾಶದಲ್ಲಿ ಸೂರ್ಯನ ಕಾಮಕೇಳಿ ಕೊನೆಗೊಂಡು ಚಂದ್ರನ ಅನುಗ್ರಹವಾಗಿತ್ತು. ಆಕಾಶ ನೆಮ್ಮದಿಯಲ್ಲಿ ಪ್ರಶಾಂತವಾದಂತೆ ಕಾಣುತ್ತಿದ್ದ ಹಾಗೆಯೇ, ಸಮುದ್ರದಲ್ಲಿ ಸಾವಿರಾರು ಶ್ವೇತಾಶ್ವಗಳು ರಣರಂಗದಲ್ಲಿ ನುಗ್ಗಿದಂತೆ ಬಿಳಿ ನೊರೆಯ ಅಲೆಗಳು ನುಗ್ಗಿ, ಚಾಚಿಕೊಂಡ ಗೆಳೆಯರ ಕಾಲುಗಳನ್ನು ಒದ್ದೆ ಮಾಡಿದವು. ದಿನಕರ ಮೊದಲು ಎದ್ದುನಿಂತ. ಇನ್ನೂ ಗಾಢವಾದ ಚಿಂತೆಯಲ್ಲಿದ್ದ ನಾರಾಯಣ ತನ್ನ ತೋರವಾದ ಮೈಯನ್ನು ಎರಡು ಕೈಗಳನ್ನು ಊರಿ ಎದ್ದು ನಿಂತ. ಅವನ ಕತ್ತಿನಲ್ಲಿದ್ದ ರುದ್ರಾಕ್ಷಿಯನ್ನು ದಿನಕರ ಗಮನಿಸುತ್ತಿದ್ದಂತೆ ದಿನಕರನ ಕತ್ತಿನಲ್ಲಿದ್ದ ತಾಯಿತವನ್ನು ನಾರಾಯಣ ತಂತ್ರಿ ಗಮನಿಸಿದ.

“ಯಾವಾಗಿನಿಂದಲೂ ಈ ತಾಯಿತ ನಿನ್ನ ಕತ್ತಿನಲ್ಲಿದೆಯಲ್ಲವೆ?”

ನಾರಾಯಣ ಹೇಳಿಕೊಂಡ ಘಟನೆಯ ಭಾರದಲ್ಲಿ ತಾನೇನು ಮಾತಾಡಬೇಕೆಂದು ಹೊಳೆಯದೇ ಗೌರವದ ಮೌನದಲ್ಲಿದ್ದ ದಿನಕರನಿಗೆ ನಾರಾಯಣನ ಪ್ರಶ್ನೆಯಿಂದ ಹಗುರೆನ್ನಿಸಿತು.

“ಅದು ಮಾತೃರಕ್ಷೆ. ಹೊಳೆಗೆ ಸ್ನಾನಕ್ಕೆಂದು ಹೋಗುವ ಮುಂಚೆ ಮುದ್ದಿಸಿ ನನಗಿದನ್ನು ತಾಯಿ ಕಟ್ಟಿದರು. ನೋಡು, ನನ್ನ ಯಾತನೆಗೆ ಉತ್ತರವೇ ಇಲ್ಲ. ಸಾಯಬೇಕೆಂದು ನಿರ್ಧಾರ ಮಾಡಿ ಇದನ್ನು ತನ್ನ ಕೊರಳಿಂದೆತ್ತಿ ನನಗೆ ಹಾಕಿದರೋ? ಅವರು ಕಾಲು ಜಾರಿ ಸತ್ತಿರಬಹುದೋ? ನನ್ನ ತಂದೆ ಯಾರು? ಅಮ್ಮನ ಕೊರಳಲ್ಲಿ ಕರಿಮಣಿ ಸರವೂ ಹಣೆಯಲ್ಲಿ ಕುಂಕುಮವೂ ಇತ್ತೆನ್ನುತ್ತಾರೆ. ಅಂದರೆ ನನ್ನ ತಂದೆಯನ್ನು ಅವರು ಬಿಟ್ಟಿರಲೇ ಬೇಕು. ಯಾಕೆ ಬಿಟ್ಟರು? ಟ್ರಂಕಿನಲ್ಲಿದ್ದ ಬಂಗಾರ ಯಾರದು? ನನ್ನ ಅಪ್ಪನದೆ? ಅಮ್ಮನದೆ? ಪಾಪದ ಬಂಗಾರ ಅದಿರಬೇಕು. ನನ್ನನ್ನು ಸಾಕಿದವರ ಮಕ್ಕಳ ದುರಾಸೆಯನ್ನು ಅದು ಬೆಳೆಸಿತು. ಮತ್ತೆ ನಾನು ಮದುವೆಯಾದವಳ ಭಂಡತನಕ್ಕದು ಕಾರಣವಾಯಿತು.

“ಇವತ್ತಿನ ಬೆಲೆಯಲ್ಲಿ ಒಂದು ಕೋಟಿಗೂ ಹೆಚ್ಚಿನ ಬೆಲೆಯ ಚಿನ್ನ ಅದರಲ್ಲಿತ್ತು ಎನ್ನಿಸುತ್ತದೆ. ನನ್ನ ಅಮ್ಮ ಅದನ್ನು ಹಾರಿಸಿ ತಂದಿರಬೇಕು ಎನ್ನಿಸಿ ಕೆಲವು ಸಾರಿ ಯಾತನೆಯಾಗುತ್ತದೆ. ಹಾಳು ಚಿನ್ನ. ಅದರಲ್ಲಿ ಅರ್ಧದಷ್ಟು ಕಳಕೊಂಡು ಈಗ ಹಗುರಾಗಲು ತೊಡಗಿದ್ದೇನೆ ಎನ್ನು. ಅದು ಇನ್ನೊಂದು ದೊಡ್ಡ ಕಥೆಯೇ – ಈಗ ಬೇಡ” ಎಂದು ದಿನಕರ ನಡೆಯುತ್ತ ಆ ಕಥೆಯನ್ನೇ ಹೇಳತೊಡಗಿಬಿಟ್ಟ:

“ತ್ರಿಪಾಠಿಗಳನ್ನು ನೋಡಿದ್ದೀಯಲ್ಲ. ಹಣೆಗೆ ಕುಂಕುಮ ಹಚ್ಚಿ, ನೀಟಾಗಿ ಮಂಡನ ಮಾಡಿಸಿಕೊಂಡು, ದೊಡ್ಡ ಬಿಳಿ ಮೀಸೆಯಲ್ಲಿ ಜರಿ ಶಾಲು ಹೊದ್ದು, ಕೋಲು ಹಿಡಿದು ಅವರ ಆ ಕುರ್ಚಿಯಲ್ಲಿ ಕೂತಿರುತ್ತಿದ್ದರು. ಜಬರದಸ್ತಿನ ಅವರು ಈಗಲೂ ನನ್ನ ಕಣ್ಣಿಗೆ ಕಟ್ಟುತ್ತಾರೆ. ದೊಡ್ಡ ದನಿ ಅವರದು. ಕೂತಲ್ಲಿಂದಲೇ ಜಬರದಸ್ತಿನಲ್ಲಿ ಎಲ್ಲ ಕೆಲಸವನ್ನೂ ಮಾಡಿಸುತ್ತಿದ್ದುದು. ಫ್ಯೂಡಲ್‍ಲಾರ್ಡೇ. ಆದರೆ ಮಹಾ ದಾನಿ. ತಾನು ಕಟ್ಟಿಸಿದ ಛತ್ರದಲ್ಲಿ ಬಂದವರಿಗೆಲ್ಲ ಅನ್ನದಾನವಾಗಬೇಕು ಪ್ರತಿನಿತ್ಯ. ಅಮ್ಮನ್ ಟ್ರಂಕಿನಲ್ಲಿದ್ದ ಒಂದು ಚೂರು ಬಂಗಾರವೂ ಖರ್ಚಾಗದಂತೆ ನನ್ನನ್ನು ಹಣ ಖರ್ಚು ಮಾಡಿ ಇಂಗ್ಲಿಷ್ ಶಾಲೆಗಳಲ್ಲಿ ಬೆಳೆಸಿದರು. ನನ್ನ ವಾರಿಗೆಯ ಅವರ ಮಗನನ್ನು ಮಾತ್ರ ತನ್ನಂತೆಯೇ ತ್ರಿಪಾಠಿ ಮಾಡಲು ಯತ್ನಿಸುತ್ತ ಅವನಿಗೆ ಸಂಸ್ಕೃತ ಕಲಿಸಿದರು. ಅವನಿಗೆ ಮೊದಲಿನಿಂದಲೂ ನನ್ನನ್ನು ಕಂಡರೆ ಆಗದು. ನನ್ನ ತಾಯಿಯನ್ನು ಗುಪ್ತವಾಗಿ ಹೀಯಾಳಿಸಿ ನನ್ನನ್ನು ಅಳಿಸುತ್ತಿದ್ದ. ತನಗಿಂತ ನಾನೆಂದರೆ ತನ್ನ ತಂದೆಗೆ ಹೆಚ್ಚು ಪ್ರೀತಿಯೆಂದು ನನ್ನನ್ನು ದ್ವೇಷಿಸುತ್ತಿದ್ದ. ತ್ರಿಪಾಠಿಗಳೂ ಹಾಗೆಯೇ. ಸರ್ವರನ್ನೂ ಅಷ್ಟೊಂದು ಜಬರದಸ್ತಿನ ಕರುಣೆಯಲ್ಲಿ ಕಾಣುತ್ತಿದ್ದವರು ಮಗನನ್ನು ನಿಷ್ಕರುಣೆಯಿಂದ ದಂಡಿಸುತ್ತಿದ್ದರು.

“ಆದರೆ ನಾನು ಆಕ್ಸ್ ಫರ್ಡಿಗೆ ಓದಲೆಂದು ಹೋಗುವ ಮುಂಚೆಯೇ ತ್ರಿಪಾಠಿಗಳ ವರ್ಚಸ್ಸು ಇಳಿಮುಖವಾಗಿತ್ತು. ಛತ್ರದಲ್ಲಿ ಪ್ರತಿನಿತ್ಯ ಅನ್ನ ಸಂತರ್ಪಣೆಯನ್ನು ಅವರ ಮಗ ನಿಲ್ಲಿಸಿಬಿಟ್ಟಿದ್ದ. ತ್ರಿಪಾಠಿಗಳು ಮುದಿಸಿಂಹದಂತೆ ತಮ್ಮ ಹಳೆಯ ಕುರ್ಚಿಯಲ್ಲಿ ದಂಡ ಹಿಡಿದು ಕೂತು ವಿಷಣ್ಣರಾಗುತ್ತ ಹೋದರು.

“ತ್ರಿಪಾಠಿಗಳು ಇಚ್ಛಾಮರಣಿಗಳು ಇರಬಹುದು ಎಂದು ನನಗೀಗ ಅನ್ನಿಸುತ್ತದೆ. ಒಂದು ಬೆಳಿಗ್ಗೆ ಗಂಗೆಯಲ್ಲಿ ಸ್ನಾನ ಮಾಡಿ ಬಂದವರು ದೇವರ ಕೋಣೆಯಲ್ಲಿ ನೆಟ್ಟನೆ ಕೂರಲಾರದೆ ಒಂದು ಮಣೆಗೆ ಒರಗಿ ಕೂತರು. ತನ್ನಂತೆಯೇ ಜುಟ್ಟು ಬಿಟ್ಟು ಸಂಸ್ಕೃತ ಬಲ್ಲವನಾಗಿದ್ದ ಮಗನನ್ನು ಕರೆಯಲಿಲ್ಲ. ಆದರೆ ಕ್ರಾಪಿನಲ್ಲಿ ಆಧುನಿಕನಾಗಿಬಿಟ್ಟಿದ್ದ ನನ್ನನ್ನು ಕರೆದು ‘ಸ್ನಾನವಾಗಿದ್ದರೆ ಪಟ್ಟೆ ಮುಡಿಯುಟ್ಟುಕೊಂಡು ಬಾ’ ಎಂದರು. ಅಮ್ಮ ಸತ್ತಮೇಲೆ ನನ್ನ ಎಂಟನೇ ವರ್ಷದಲ್ಲಿ ಅವರೇ ನನ್ನ ಕಿವಿಯಲ್ಲಿ ಗಾಯತ್ರಿ ಉಪದೇಶಿಸಿ ಉಪನಯನ ಮಾಡಿಸಿದಾಗ ಉಡಲೆಂದು ಕೊಟ್ಟಿದ್ದ ಪಟ್ಟೆ ಮಡಿಯನ್ನು ಹೊದ್ದುಕೊಂಡು, ಹಿಂದಿನ ನವರಾತ್ರಿಯಲ್ಲಿ ಅವರು ಕೊಟ್ಟಿದ್ದ ಜರಿ ರೇಷ್ಮೆಯ ಧೋತ್ರವನ್ನುಟ್ಟು ಅವರ ಎದುರು ಕೂತೆ. ನನ್ನದು ಇಂಪಾದ ಸ್ವರ – ಒಳ್ಳೆಯ ಗಾಯಕಿಯಾಗಿದ್ದ ನನ್ನ ತಾಯಿಯಿಂದ ನಾನು ಪಡೆದಿದ್ದಿರಬೇಕು ಎನ್ನುತ್ತಾರೆ. ಆದಿ ಶಂಕರರು ರಚಿಸಿದ ಸ್ತೋತ್ರಗಳನ್ನೆಲ್ಲ ವಾಚನ ಮಾಡು ಎಂದರು. ನಾನು ಬಾಯಿಗೆ ಕಲಿತದ್ದನ್ನು ಪಠಿಸುವ ಮುಂಚೆ ಏನೋ ನೆನೆಸಿಕೊಂಡು ತನ್ನ ಚೀಲದಲ್ಲಿರುವ ‘ಬೀಗದ ಕೈಯನ್ನು ತೆಗೆದುಕೊಂಡು ಬಾ’ ಎಂದರು. ತಂದು ಅವರಿಗೆ ಕೊಟ್ಟೆ. ದೊಡ್ಡ ಕೀಗೊಂಚಲಿನಿಂದ ಒಂದು ಬೀಗದ ಕೈಯನ್ನು ಬಿಡಿಸಿ ನನಗೆ ಕೊಟ್ಟರು.

“ನಿನ್ನ ತಾಯಿಯ ಚಿನ್ನ ನನ್ನ ಪುಟ್ಟ ತಿಜೋರಿಯಲ್ಲಿದೆ. ಆದರೆ ಕೀ ಇದು. ಜೋಪಾನ. ದುರಾಸೆಯ ನನ್ನ ಮಗನಿಗಿದು ಸಿಗದಂತೆ ಇಟ್ಟುಕೋ. ಇಂಗ್ಲೆಂಡಿಗೆ ಹೋಗುವಾಗ ಇದನ್ನು ಇಲ್ಲಿ ಬಿಡಬೇಡ. ಹಿಂದೆ ಬಂದವನು ಈ ಮನೆಯಲ್ಲಿ ಬೆಳದದ್ದಕ್ಕೆ ನಿನ್ನ ಕಾಣಿಕೆಯಾಗಿ ಗಂಗಾ ನದಿಯ ದಂಡೆಯ ಮೇಲಿನ ನಮ್ಮ ಹಿರಿಯರು ಕಟ್ಟಿಸಿದ ದೇವಸ್ಥಾನದ ಅಚ್ಚುಕಟ್ಟನ್ನು ಉತ್ತೀರ್ಣಗೊಳಿಸು. ಇಂಗ್ಲೆಂಡಿನಲ್ಲಿ ಅಭಕ್ಷ್ಯ ಭೋಜನ, ಅಪೇಯಪಾನ ಮಾಡಬೇಡ. ಹಿಂದೆ ಬಂದು ಕುಲೀನಳಾದ ಹೆಣ್ಣನ್ನು ಕೈಹಿಡಿದು ಸದ್ಗೃಹಸ್ಥನಾಗು” ಎಂದು ನಮಸ್ಕರಿಸಿ ನನ್ನನ್ನು ಆಶೀರ್ವದಿಸಿದರು.

“ನಾನು ಶಂಕರರ ಸ್ತೋತ್ರಗಳನ್ನು ಪಠಿಸುತ್ತಿದ್ದಾಗ, ಕಣ್ಣು ಮುಚ್ಚಿದವರು ಮತ್ತೆ ಕಣ್ಣು ತೆರೆಯಲಿಲ್ಲ.

“ನಾನು ಇಂಗ್ಲೆಂಡಿಂದ ಬಂದ ಮೇಲೆ ದೇವಸ್ಥಾನವನ್ನು ದುರಸ್ತಿಗೊಳಿಸಿದೆ. ಅದೂ ಅವರ ಮಗನಿಗೆ ಬೇಕಾಗಿರಲಿಲ್ಲ. ತ್ರಿಪಾಠಿಗಳು ಕಟ್ಟಿಸಿದ ಛತ್ರ ಕ್ರಮೇಣ ಹೋಟೆಲಾಗತೊಡಗಿತ್ತು. ಅಲ್ಲಿ ಇಳಿದುಕೊಂಡವರು ಕಾಣಿಕೆಯೆಂಬ ನೆವದಲ್ಲಿ ದಿನಕ್ಕಿಷ್ಟೆಂದು ಹಣ ಕೊಡಬೇಕಾಗಿತ್ತು. ಬಿಸಿ ನೀರಿಗೆ ಬೇರೆ ಹಣ ಕೊಡಬೇಕಾಗಿತ್ತು.

“ನನಗೆ ದುಃಖವಾಯಿತು. ಒಂದು ದಿನ ತ್ರಿಪಾಠಿಗಳ ಈ ಹಿರಿಯ ಮಗ ಒಂದು ಲೆಖ್ಖದ ಪುಸ್ತಕ ತಂದು, ಹಳದಿಯಾಗಿಬಿಟ್ಟ ಹಳೆಯ ಹಾಳೆಗಳ ಮೇಲೆ ತಾನೇ ಬರೆದದ್ದನ್ನು ತನ್ನ ತಂದ ಬರೆದದ್ದೆಂದು ಕೃತಕವಾಗಿ ನಗುತ್ತ ಹೇಳಿದ:

‘ನಿನ್ನನ್ನು ಸಾಕಿ ಸಲುಹಲು ಆದ ಖರ್ಚು ಇದು’.

“ಸುಮಾರು ಹತ್ತು ಲಕ್ಷದ ವೆಚ್ಚವನ್ನು ನನ್ನ ಎದಿರು ಇಟ್ಟಿದ್ದ. ನನಗೆ ಭಯಂಕರ ಹೇಸಿಗೆಯಾಗಿ ಮೈನಡುಗತೊಡಗಿತ್ತು. ತಿಜೋರಿಯಲ್ಲಿದ್ದ ಟ್ರಂಕನ್ನು ತೆರೆದು “ನಿನ್ನ ತಂದೆ ಬರೆದಿಟ್ಟ ಲೆಖ್ಖ ಇದೆಂದು ಸುಳ್ಳು ಬೊಗಳಿ, ಅವರ ಆತ್ಮಕ್ಕೆ ಅಪಚಾರ ಮಾಡಬೇಡ. ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಬಿಡು” ಎಂದೆ. ಅವನು ಅಧೀರನಾಗಿಬಿಟ್ಟದ್ದು ಕಂಡು ನಾನೇ ಚಿನ್ನದ ಕೆಲವು ಗಟ್ಟಿಗಳನ್ನು ಮಾರಿ ಅವನಿಗೆ ಹತ್ತುಲಕ್ಷ ಕೊಟ್ಟುಬಿಟ್ಟೆ. ಇನ್ನೂ ಉಳಿದಿದ್ದ ಬಂಗಾರದ ರಾಶಿಯನ್ನು ತೆಗೆದುಕೊಂಡು ಅಲ್ಲಿ ನಿಲ್ಲದೆ ದೆಹಲಿಗೆ ಹೋಗಿಬಿಟ್ಟೆ”.

ನಾರಾಯಣ ಹೂಂಗುಟ್ಟದ ಜೊತೆಗೆ ನಡೆಯುತ್ತಿದ್ದುದು ಭಾಸವಾಗಿ, ದಿನಕರನಿಗೆ ತನ್ನ ಬಗ್ಗೆ ನಾಚಿಕೆಯಾಯಿತು. ಗಂಗೂ ಮಗ ನಿನ್ನ ಮಗನೂ ಇರಬಹುದು. ಆದರೆ ಅವನನ್ನು ನನ್ನ ಮಗನೆಂದೂ ತಿಳಿದು ಬೆಳೆಸಿದೆ ಎಮ್ದು ಹೇಳಿಕೊಂಡ ಅವನ ಪರಮ ಉದಾತ್ತವಾದ ತ್ಯಾಗ ಭಾವನೆಗೆ ಇದು ನನ್ನ ಪ್ರತಿಕ್ರಿಯೆಯೆ? ಬಂಗಾರವನ್ನು ಕೊಟ್ಟುಬಿಟ್ಟೆನೆಂದು ಕೊಚ್ಚಿಕೊಳ್ಳುವುದೇ?

ನಾರಾಯಣನ ಕಾಲುಮುಟ್ಟಿ ನಮಸ್ಕರಿಸಬೇಕು ಎಂದುಕೊಳ್ಳುತ್ತಿದ್ದಂತೆ ತನಗೆ ಆಶ್ಚರ್ಯವಾಗುವಂತೆ ನಾರಾಯಣ ಇನ್ನೇನೋ ಅಪ್ರಕೃತವಾದ ಮಾತನ್ನು ಕೇವಲ ಲಾಯರಾಗಿ ಹೇಳಿಬಿಡುವುದೆ?:

“ಬಂಗಾರವನ್ನೆನೂ ನೀನು ಕೊಡಬೇಕಾಗಿರಲಿಲ್ಲ. ಅವನು ತೋರಿಸಿದ ಲೆಖ್ಖ ತ್ರಿಪಾಠಿಗಳ ಕೈಬರಹವಲ್ಲ, ಫೋರ್ಜರಿ ಎಂದು ನೀನು ವಾದಿಸಬೇಕಾಯಿತು. ಅವನು ಕೋರ್ಟಿಗೆ ಏನಾದರೂ ಹೋಗಿದ್ದರೆ ಅವನ ವಾದ ನಿಲ್ಲುತ್ತಿರಲಿಲ್ಲ. ಹೋಗಲಿ – ಅವನು ಈ ಹಣವನ್ನು ಅವನ ತಮ್ಮಂದಿರ ಜೊತೆ ಹಂಚಿಕೊಂಡನೊ ಇಲ್ಲವೊ ನೀನು ತಿಳಿಯಬೇಕಿತ್ತು. ಪಿತ್ರಾರ್ಜಿತ ಹಣ ಅದು”.

ಅಷ್ಟು ದೊಡ್ಡ ಮಾತುಗಳನ್ನಾಡಿ ತನ್ನನ್ನು ಸಂಕಟಕ್ಕೆ ಸಿಕ್ಕಿಸಿದ ನಾರಾಯಣನಿಗೆ ಸದಾ ಇರುವಂತೆ ಕಾಣುವ ಲೌಕಿಕ ವ್ಯವಹಾರಜ್ಞತೆಯಿಂದ ದಿನಕರನಿಗೆ ಹಗುರಾಯಿತು. ಆದರೆ ಇಂಥವನೂ ಉದಾತ್ತತೆಯಲ್ಲಿ ಹೊರಳಿಬಿಡಬಲ್ಲ ಮನುಷ್ಯನೆಂಬುದು ತನ್ನನ್ನು ನಾಚಿಸಿತ್ತು. ಹೀಗೆ ನಾಚುವ ತಾನು ಏನಾದರೂ ಅವರ ಕಾಲುಮುಟ್ಟಿ ನಮಸ್ಕರಿಸಿದ್ದರೆ ಅದು ತನ್ನ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವ ಕ್ರಿಯೆಯಾಗುತ್ತಿತ್ತೇ ಹೊರತು ಸತ್ಯಕ್ಕೆ ಎದುರಾಗಿ ಹೊರಳಿಕೊಳ್ಳುವ ಒಳ ಬದುಕಿನ ಚಿಹ್ನೆಯಾಗುತ್ತಿರಲಿಲ್ಲ.

ನಿಜವಾಗಿ ಅವನು ಗಂಗೂ ಜೊತೆಗಿನ ತನ್ನ ಹರಿದ್ವಾರದ ಪ್ರಣಯ ಹೇಳಿಕೊಳ್ಳವಾಗ ನನ್ನ ಒಳಗಿಂದ ಅನ್ನಿಸುತ್ತಿದ್ದುದಾದರೂ ಏನು? ಪಶ್ಚಾತ್ತಾಪವೇ? ಅರೆ ತಿಳಿಯದವಳು ಎಂದು ಮೊದಲಿನ ಸಲ ತಾನು ಬಲಾತ್ಕಾರ ಮಾಡಿದಾಗ ಕಂಡ ಗಂಗೂ ಎಷ್ಟು ಬೇಗ ನನಗೇ ಕಲಿಸಲು ಪ್ರಾರಂಭಿಸಿದ್ದಳು? ತನ್ನಿಂದ ಕೌಮಾರ್ಯ ಕಳೆದುಕೊಂಡವಳು ಮದುವೆಯ ಸುಖ ಕಂಡಿದ್ದ ಅವನಿಂದ ಕಲಿತದ್ದನ್ನು ತನಗೇ ಕಲಿಸಲು ತೊಡಗಿದ್ದಳೆ?

ಅವಳನ್ನು ಕೂಡಿದ ಸಮಯಗಳನ್ನು ನೆನೆಸಿಕೊಳ್ಳಲು ದಿನಕರ ಶುರು ಮಾಡಿದ್ದ. ತಾಯಿಯೂ ಮಗನೂ ದೇವರ ದರ್ಶನಕ್ಕೆ ಹೋಗಿದ್ದಾಗ ಬೇಗ ಬೇಗ ಗೋಪಾಲನನ್ನು ಮಲಗಿಸಿಯೋ, ತ್ರಿಪಾಠಿಗಳ ಮಗನ ಜೊತೆ ಆಡಲು ಬಿಟ್ಟೊ, ಯಾರೂ ಹೋಗದ ಮನೆಯ ಅಟ್ಟದ ಮೂಲೆಯಲ್ಲಿ ತ್ರಿಪಾಠಿಗಳ ಮಂತ್ರ ಪಠನ ಕೇಳುತ್ತಿದ್ದಂತೆಯೇ ತಾವು ಅವಸರದಲ್ಲಿ ಕೂಡುವುದು. ಆ ಜಾಗದಲ್ಲಿ ಈ ನಾರಾಯಣನನ್ನೂ ತಾನಿಲ್ಲದಾಗ ಅವಳು ಕೂಡಿರಬಹುದೇ? ಮತ್ತೆ ಎಲ್ಲರೂ ಒಬ್ಬರ ಪಕ್ಕ ಒಬ್ಬರು ಸಾಲಾಗಿ ಮಲಗಿದ್ದಾಗ ತನ್ನ ಜೊತೆ ಗಂಗಾತಟದಲ್ಲಿ ಸುತ್ತಾಡಿ ಬರುತ್ತೇನೆಂದು ಹೇಳಿ, ಅಂಥ ಛಳಿಯಲ್ಲೂ ತ್ರಿಪಾಠಿಗಳ ಪೂರ್ವಿಕರು ಕಟ್ಟಿಸಿದ ದೇವಸ್ಥಾನದ ಬಾಗಿಲು ತೆರೆದು, ಗಣೇಶನನ್ನು ಕೆತ್ತಿದ ಕಲ್ಲು ಗೋಡೆಯ ಕೆಳಗೆ ಕೂಡುವುದು, ಕುಂಕುಮ ಗಂಧಗಳ ವಾಸನೆಯ ಎಣ್ಣೆಯಿಂದ ಒದ್ದೆಯಾದ ಕಲ್ಲಿನ ಮೇಲೆ, ಮತ್ತೆ ಕಾಷಿಯಲ್ಲಿ ಅವಳ ಇಷ್ಟದಂತೆ ತಾನೂ ಜೊತೆ ಹೋದಾಗ ತನ್ನ ಕಿರು ಕೋಣೆಯಲ್ಲೇ, ಹರಕು ಚಾಪೆಯ ಮೇಲೇ.

ರಾತ್ರೆ ಎಲ್ಲರೂ ನಿದ್ದೆ ಮಾಡುವಾಗ, ತಾಯಿ ಜೊತೆ ಮಲಗುವ ನಾರಾಯಣನ ಜೊತೆ ಎಲ್ಲಿ ಅವಳು ಕೂಡಿದ್ದೋ? ಅವಳ ಗುಪ್ತ ಸಮಯಗಳೆಲ್ಲ ನನ್ನವು ಮಾತ್ರ ಎಂದುಕೊಂಡಿದ್ದೆ. ಮತ್ತೆ ಯಾವ ಸಮಯವನ್ನು ನನ್ನ ಕಣ್ಣು ತಪ್ಪಿಸಿ ಅವನ ಜೊತೆ ಕಳೆದಳು ಹಾಗಾದರೆ? ಹರಿದ್ವಾರದಲ್ಲಿ? ಕಾಶಿಯಲ್ಲಿ? ಮಥುರಾದಲ್ಲಿ?

ಬೆಳಗಿನ ಜಾವ ಎದ್ದು ಛತ್ರದಲ್ಲಿ ಇಳಿದು ಕೊಂಡವರಿಗೆ ಬಕೇಟಿನಲ್ಲಿ ಬಿಸಿನೀರು ಸರಬರಾಜು ಮಾಡಬೇಕು. ಚಳಿಯಲ್ಲಿ ಗಂಗಾಸ್ನಾನ ಮಾಡಲಾರದ ಮುದುಕರು ಮಕ್ಕಳು ಇರುತ್ತಿದ್ದರು. ಮತ್ತೆ ಎಲ್ಲರಿಗೂ ಮಧ್ಯಾಹ್ನದ ಊಟ ಬಡಿಸುವಾಗ? ಕಾಲೇಜಿನ ಆ ರಜಾದಿನಗಳಲ್ಲಿ ತಾನೇ ವಹಿಸಿಕೊಂಡಿದ್ದ ಕೆಲಸಗಳು ಇವು. ಅವು ಈ ನಾರಾಯಣನ ಗುಪ್ತ ಸಮಯಗಳಾಗಿರಬಹುದು.

ಮತ್ತೆ ತನ್ನ ಸಹಪಾಠಿಗಳ ಮನೆಗೆ ತಾನು ಹೋಗಿರಬಹುದಾದ ಕ್ಷಣಗಳಲ್ಲೇ? ‘ನನ್ನ ಜೊತೆಯೇ ಇದ್ದು ನಿಮಗೆ ಬೇಜಾರಾಗಿರಬಹುದು. ಅಡ್ಡಾಡಿ ಬನ್ನಿ. ಕಾದಿರುತ್ತೇನೆ’ ಎಂದು ಅವಳು ಹೇಳಿದ್ದು ನೆನಪಾಗುತ್ತದೆ. ಆದರೆ ಮನೆಯಲ್ಲೆ ಇದ್ದಾಗ ಮಾತ್ರ ತನ್ನ ಕಣ್ಣು ತಪ್ಪಿಸಿ ಇರಲು ಅವಳನ್ನು ತಾನು ಬಿಟ್ಟಿದ್ದಿಲ್ಲ.

ಗಂಗು ಅವಳ ಗುಟ್ಟನ್ನು ಬಸುರಿಯಾಗಿ ನಾರಾಯಣನಿಗೆ ಹೇಳಿಬಿಟ್ಟಾಗ ಅವನ ಕಣ್ಣು ತಪ್ಪಿಸಿ ಅವಳು ತನ್ನನ್ನು ಕೂಡಿದ ವಿವರಗಳನ್ನು ಹೀಗೆಯೇ ನಾರಾಯಣ ಚಿಂತಿಸಿ ಯಾತನೆ ಪಟ್ಟಿರಬೇಕು. ತನ್ನ ಕಾಮಚೇಷ್ಟೆಯ ವಿವರಗಳನ್ನು ಅವನು, ಅವನ ಕಾಮಚೇಷ್ಟೆಯ ವಿವರಗಳನ್ನು ಈಗ ತಾನು ಯೋಚಿಸುವಾಗ ತಾನಾಗಲೀ ಅವನಾಗಲೀ ಹೊರಳಿಕೊಂಡು, ಸಂಸಾರದ ಭ್ರಮಾತ್ಮಕ ಮಾಯೆಯನ್ನು ತಿಳಿಯುವುದಿಲ್ಲ. ಬದಲಾಗಿ ಇನ್ನಷ್ಟು ಕಾಮಜ್ವರದಿಂದ ಪೀಡಿತರಾಗುತ್ತೇವೆ. ಹುಡುಕಿ ತಡಕಿ ಅದನ್ನೇ ಮೆಲುಕು ಹಾಕುತ್ತೇವೆ. ಮತ್ತೆ ಇನ್ನೊಂದು ಹೆಣ್ಣನ್ನು ಕೂಡುವ ತನಕ ಪ್ರೇಮದಂತೆ ಅಲೆಯುತ್ತಿರುತ್ತೇವೆ.

ಹೀಗೆ ಎಂದುಕೊಳ್ಳುತ್ತಲೇ ತಾನು ಬಯಸಬಾರದ ಗಂಗೂನ್ನ ಬಯಸಿ ಸ್ನೇಹಿತನಿಗೆ ದ್ರೋಹ ಬಗೆಯುವಂತೆ ತನ್ನ ರಕ್ತ ಚಲಿಸಿತ್ತು. ರಹಸ್ಯದ ಕತ್ತಲಲ್ಲಿ ಅವಳು ತನ್ನನ್ನು ತೀವ್ರವಾಗಿ ಪಡೆದು ಬಿಕ್ಕುತ್ತಿದ್ದ ನೆನಪಾಗಿತ್ತು. ಅವಳ ನಡುಪ್ರಾಯದ ಲಾವಣ್ಯ ಈಗಲೂ ಅವಳು ಮೆಟ್ಟಿಲನ್ನು ಇಳಿದುಬರುವಾಗ ತನ್ನನ್ನು ಕಂಪಿಸುವಂತೆ ಮಾಡಿತ್ತು. ಅವಳು ತನ್ನ ಪ್ರಥಮಳು; ಸ್ತ್ರೀಸುಖವನ್ನು ತನ್ನಲ್ಲಿ ಅರಳಿಸಿ ವಾಸನೆಯಾಗಿ ಉಳಿದೇ ಬಿಟ್ಟವಳು. ಇದನ್ನು ಸಮುದ್ರ ತೀರದಲ್ಲಿ ನೆನೆದು, ಭವದಿಂದ ತನಗೆ ಬಿಡುಗಡೆಯಿಲ್ಲ ಎಂದು ನಿಟ್ಟುಸಿರಿಟ್ಟಿದ್ದ. ಈ ತನ್ನ ನಿಟ್ಟುಸಿರೂ ದುಃಖದ್ದಲ್ಲ, ಬಳಲಿಕೆಯಿಂದಾಗಿತ್ತು. ಬಳಲಿಕೆಯಲ್ಲಿ ಕುಗ್ಗುತ್ತಿರುವ ಬಯಕೆಯಿಂದಾಗಿತ್ತು.

ನಾರಾಯಣ ತನ್ನ ಲಾಯರುತನದಿಂದ ಬಿಡುಗಡೆಯಾಗಿ ಮತ್ತೆ ಮಾತಾಡತೊಡಗಿದ್ದ. ಹಿತವಾದ ಚಂದ್ರನ ಬೆಳಕಿನಲ್ಲಿ ಶುಭ್ರವಾದ ಮರಳಿನ ದಂಡೆಯ ಮೇಲೆ ಈ ಮಾತುಗಳನ್ನು ಕನಸಿನಲ್ಲಿ ಕೇಳಿಸಿಕೊಳ್ಳುತ್ತಿರುವಂತೆ ಶುರುವಾಗಿ ದಿನಕರ ಮತ್ತೆ ವಿಚಲಿತನಾದ.