“ಗಂಗೂ ಮಗನ ಹೆಸರು ಪ್ರಸಾದ ಎಂದು. ಯಾರ ಮಗನೆಂದು ತಿಳಿಯದ್ದರಿಂದ ಹರಿದ್ವಾರದ ಪ್ರಸಾದ ಎಂದು ಹೆಸರಿಟ್ಟೆವು”.

ನಾರಾಯಣ ತಿಳಿಹಾಸ್ಯದಲ್ಲಿ ಹೇಳಿದ ಈ ಮಾತು ದಿನಕರನನ್ನು ಒಳಪಡಿಸುವಂತೆ ಇತ್ತು. ಇಪ್ಪತ್ತೈದು ವರ್ಷಗಳ ನಂತರವೂ ನಿನಗೂ ಈ ಹೆಸರು ಒಪ್ಪಿಗೆಯಾಗಬಹುದು ಎನ್ನುವಂತೆ ಸಜ್ಜನಿಕೆಯ ಲೌಕಿಕತೆಯ ಧ್ವನಿ ಅದರಲ್ಲಿತ್ತು. ದಿನಕರ ಈ ಮಾತಿಗಾಗಿ ನಾರಾಯಣನನ್ನು ಗೌರವಿಸಿದ. ತನ್ನನ್ನು ಗೆಳೆಯ ಮೀರಿದ್ದಾನೆಂದು ಸಮಾಧಾನವಾಯಿತು. ಆದರೆ ಮುಂದಿನ ಮಾತುಗಳು ತನ್ನನ್ನು ಚಿರದುಃಖಕ್ಕೆ ತಳ್ಳಿದ್ದವು:

“ಪ್ರಸಾದನಿಗೆ ಐದು ವರ್ಷಗಳಾಗುವ ತನಕ ಗಂಗು ಮತ್ತು ನಾನು ನಿರಾಂತಕವಾಗಿ, ಆದರೆ ರಹಸ್ಯವಾಗಿ ಅವಳ ಮನೆಯಲ್ಲೇ ಕೂಡುತ್ತಿದ್ದೆವು. ಚಂದ್ರಪ್ಪ ನಮಗೆ ರಕ್ಷೆಯಾಗಿ ಬಿಟ್ಟಿದ್ದ. ನಾನೂ ಅವಳೂ ಕೋಣೆಯಲ್ಲಿದ್ದಾಗ ಅವನು ಗೇಟಿನ ಹೊರಗೆ ಸೌದೆ ಒಡೆಯುತ್ತಲೋ, ಬಾವಿಯಿಂದ ಹೂದೋಟಕ್ಕೆ ನೀರು ಸೇದಿ ಹಾಕುತ್ತಲೋ ಇರುತ್ತಿದ್ದ. ಯಾರಾದರೂ ಬಂದು ಕೇಳಿದರೆ ಗಂಗೂ ಇಲ್ಲ ಎಂದುಬಿಡುತ್ತಿದ್ದ. ಆ ಮಂದ ಬುದ್ಧಿಗೂ ಅಷ್ಟು ಅರಿವಾಗುತ್ತದೆ ಎಂದು ನನಗೆ ಸಂಕಟವಾಗುತ್ತಿತ್ತು. ಗಂಗೂಗೆ ಏನೆನ್ನಿಸುತಿತ್ತೋ. ಅವನ ಉಪಕಾರವನ್ನು ಹೇಗೆ ತೀರಿಸುವುದು ಎಂದು ನಮಗೆ ಗೊತ್ತಾಗುತ್ತಿರಲಿಲ್ಲ. ಪ್ರಸಾದ ಬೆಳೆಯುತ್ತಿದ್ದಂತೆ ಆತಂಕಗಳು ಹೆಚ್ಚಾದವು. ನಮ್ಮ ಪ್ರೀತಿ ಅವಸರದ್ದಾಗಿಬಿಟ್ಟಿತು. ಮುಗಿದರೆ ಸಾಕು ಎಂದು ಅವಳಿಗೆ ಅನ್ನಿಸುತ್ತಿದೆಯೆಂದು ನನ್ನ ಏಕಾಗ್ರತೆ ಕಡಿಮೆಯಾಯಿತು. ನಿನ್ನ ಯೋಚನೆಯೂ ಆಗುತ್ತಿತ್ತು. ಆದರೆ ಸುಖಪಟ್ಟಾದ ಮೇಲೆ ನೀನು ಗಂಗೂನ್ನ ಹಚ್ಚಿಕೊಂಡಿರಲಿಲ್ಲ. ನಮ್ಮ ಪಾಲಿಗೆ ಕಣ್ಮರೆಯಾಗಿ ಬಿಟ್ಟಿದ್ದಿ. ಪ್ರಸಾದ ಮಾತ್ರ ನಿನ್ನ ನೆನಪು ತರುತ್ತಿದ್ದ.

“ಪ್ರಸಾದ ಬೆಳೆಯುತ್ತಿದ್ದಂತೆ ಅಸ್ವಸ್ಥನಾದ. ಶಾಲೆಯಲ್ಲಿ ಮಕ್ಕಳು ಅವನನ್ನು ಹಂಗಿಸುತ್ತಿದ್ದರು. ನನ್ನ ಮಗ ಗೋಪಾಲನೂ ಅಸ್ವಸ್ಥನಾದ. ತಾನೇ ಬೆಳೆಸಿದ ಮಗುವನ್ನು ಅವಳು ನೋಡಬಂದರೆ ಅವನು ಅವಳನ್ನು ಕಂಡದ್ದೇ ಕಿರಿಕಿರಿಯಾಗುತ್ತಿದ್ದ. ನನ್ನ ಅಮ್ಮ ಗದರಿಸಿದರೆ ಮಾತ್ರ ಸುಮ್ಮನಾಗುತ್ತಿದ್ದ. ಅಮ್ಮನ ರಕ್ಷೆಯಲ್ಲಿ ನಾನು ಅನೈತಿಕವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ಆಗಾಗ ಅನ್ನಿಸುತ್ತಿತ್ತು. ಆದರೆ ಹೀಗೆಲ್ಲ ಅನ್ನಿಸುವುದರಿಂದ ಏನೂ ಪ್ರಯೋಜನವಿಲ್ಲ. ಮಾಯೆಯಿಂದ ನಾವು ಹಾಗೆಲ್ಲ ಬಿಡುಗಡೆ ಪಡೆಯುವುದಿಲ್ಲ. ನಾನು ಪ್ರಸಿದ್ಧನಾಗುತ್ತ ಹೋದಂತೆ ಎಲ್ಲರೂ ನನ್ನನ್ನು ಒಪ್ಪಿಕೊಂಡು ಬಿಟ್ಟಂತೆ ಕಾಣಿಸಿತು. ನಮ್ಮ ಸಂಬಂಧ ಎಲ್ಲರಿಗೆ ಗೊತ್ತಿದ್ದ. ಗುಟ್ಟಾಯಿತು.

“ಪ್ರಸಾದ ಮನೆಯಲ್ಲಿದ್ದಾಗ ನಾನು ಹೋಗುತ್ತಿರಲಿಲ್ಲ. ಆದರೆ ಕ್ರಮೇಣ ಕದ್ದು ಮುಚ್ಚಿ ಕೂಡುವುದು ಕಠಿಣವಾಗುತ್ತ ಹೋಯಿತು. ಈ ಹತ್ತು ವರ್ಷಗಳಿಂದ ಹೀಗೆ. ನಾವು ನಿರಾಯಾಸವಾಗಿ ಕೂಡಿ ಹತ್ತು ವರ್ಷಗಳ ಮೇಲಾಗಿರಬಹುದು. ಅದಕ್ಕೆ ಕಾರಣ, ಒಂದು ದಿನ ಪ್ರಸಾದ ಬಾಯಿಬಿಟ್ಟು ತಾಯಿಗೆ ಹೇಳಿದ್ದು: ‘ಅವನು ನನ್ನ ಅಪ್ಪನಾದರೆ ನಿನ್ನನ್ನು ಮದುವೆಯಾಗಲಿ’ ಎಂದುಬಿಟ್ಟನಂತೆ. ಆದರೆ ಅದು ನನಗೆ ಸಾಧ್ಯವಿರಲಿಲ್ಲ ಎಂದುಕೊಂಡೆ. ನರಳಿದೆ. ಆದರೆ ನರಳಿ ಯಾವ ಪ್ರಯೋಜನ ಹೇಳು.

“ಪ್ರಸಾದ ಸ್ಕೂಲಿಗೆ ಹೋಗುವುದೇ  ಬಿಟ್ಟುಬಿಟ್ಟ. ಮನೆಯಲ್ಲಿ ಮಂಕಾಗಿ ಕೂತಿರುವುದಕ್ಕೆ ಶುರು ಮಾಡಿದ. ಗಂಗೂ ತುಂಬ ಒಳ್ಳೆಯ ಟೀಚರೆಂದು ಹೆಸರು ಮಾಡಿದ್ದಳು. ಮಗನ ದುಃಖವನ್ನು ಹೊಟ್ಟೆಯಲ್ಲಿಟ್ಟುಕೊಂಡು ನರಳತೊಡಗಿದಳು. ಆದರೆ, ನರಳುತ್ತಿದ್ದರೆ ನರಳುತ್ತಲೇ ಇರುತ್ತೇವೆ. ಏನೂ ಬದಲಾಗಲ್ಲ. ನನ್ನನ್ನು ಹೇಗೆ ಅವಳು ಬಿಟ್ಟಾಳು ಹೇಳು?

“ಆದರೆ ಎಲ್ಲ ಬದಲಾಗಲು ಪ್ರಾರಂಭವಾಯಿತು. ಪ್ರಸಾದ ಸಂಗೀತ ಕಲಿಯಲು ತೊಡಗಿದ. ಸಂಗೀತದಲ್ಲಿ ಅವನು ಬೆಳೆಯುತ್ತಲೇ ಹೋದ. ಆದರೆ ಯಾರಿಗೂ ಅವನು ಹಾಡಲು ಮಾತ್ರ ಒಲ್ಲ. ಒಮ್ಮೊಮ್ಮೆ ನಮ್ಮ ಮನೆಗೆ ಬಂದು ಅಮ್ಮನಿಗೆ ಮಾತ್ರ ಭಜನೆಗಳನ್ನು ಹಾಡುವುದು. ಆದರೆ ಸ್ವತಃ ತನ್ನ ತಾಯಿಗೇ ಹಾಡುತ್ತಿರಲಿಲ್ಲ. ನಾನು ಎದುರು ಬಂದರಂತೂ ಹಾಡುವುದನ್ನು ನಿಲ್ಲಿಸಿ ಬಿಡುತ್ತಿದ್ದ.

“ಆದರೆ, ವಿಚಿತ್ರವೆಂದರೆ ಮನೆಯಲ್ಲಿ ತನ್ನ ಕೋಣೆಯಲ್ಲಿ ಕೂತು ಅವನು ಗಂಟೆಗಟ್ಟಳೆ ಹಾಡಿಕೊಳ್ಳುತ್ತಿದ್ದುದು ಚಂದ್ರಪ್ಪನ ಎದುರಿಗೆ ಮಾತ್ರ. ಏನೂ ಅರುಯನೆಂದು ಮೂಕಪಶುವೆಂದು ನಾವು ತಿಳಿದ ಚಂದ್ರಪ್ಪ ಪ್ರಸಾದನ ಎದುರು ಬಾಯಿಬಿಟ್ಟು ಕೂತು ಗಂಟೆಗಟ್ಟಳೆ ಕೇಳಿಸಿಕೊಳ್ಳುತ್ತಿದ್ದ. ಹಾಡುವುದಕ್ಕೆ ಮುಂಚೆ, ಹಾಡಿಯಾದ ಮೇಲೆ ಪ್ರಸಾದ ಚಂದ್ರಪ್ಪನಿಗೂ, ತನ್ನ ತಂಬೂರಿಗೂ ನಮಸ್ಕಾರ ಮಾಡುತ್ತಿದ್ದ.

“ಪ್ರಸಾದನ ವೈರಾಗ್ಯ ಬೆಳೆಯುತ್ತ ಹೋಗಿರಬೇಕು. ಆಮೇಲಿಂದ ನನ್ನನ್ನು ಕಂಡರೂ ಸಹಿಸಿಕೊಳ್ಳುವವನಂತೆ ಕಾಣತೊಡಗಿದ. ಅವನು ನನ್ನ ಕಂಡು ಮುಗುಳ್ನಕ್ಕನೆಂದರೆ ನಾನು ದಿನವೆಲ್ಲ ಗೆಲುವಾಗಿ ಬಿಡುತ್ತಿದ್ದೆ. ನನ್ನ ಸ್ವಂತ ಮಗನ ಉಪಟಳಗಳನ್ನು ಮರೆತುಬಿಡುತ್ತಿದ್ದೆ. ಪ್ರಸಾದ ನನ್ನ ಪಾಲಿಗೆ ನನ್ನ ಅಮ್ಮ ಹೇಳುವಂತೆ ಪವಿತ್ರನಾದ ಶುಕಮುನಿಯಾಗಿಬಿಟ್ಟ. ಅವನ ಉದ್ದವಾದ ಗಡ್ಡ, ಹೆಗಲಮೇಲೆ ಚೆಲ್ಲಿದ ಕೂದಲು, ಅವನು ಉಟ್ಟು ಹೊದೆಯುವ ಸಾದಾ ಬಿಳಿ ಪಂಚೆ, ಅವನ ಶಾಂತವಾದ ಕಣ್ಣುಗಳು – – ಥೇಟು ಒಬ್ಬ ಋಷಿ ಕುಮಾರನವು ಎನ್ನಿಸುತ್ತಿತ್ತು. ಇವನು ಯಾರ ಮಗನೂ ಅಲ್ಲ, ದೇವರ ಮಗ ಎಂದುಕೊಂಡು ನಾನು ಶಾಂತನಾದೆ.

“ಆದರೆ ಇವತ್ತು ಬೆಳಿಗ್ಗೆ ಎಲ್ಲ ಬದಲಾಗಿ ಬಿಟ್ಟಿತು. ಪ್ರಸಾದ ತಾಯಿಯ ಎದುರು ಹೋಗಿ ನಿಂತು,

‘ನಾನು ಯಾರು?’ ಎಂದನಂತೆ.

“ಋಷಿಯಂತೆ ಕಂಡ ಮಗನಿಗೆ ಸುಳ್ಳು ಹೇಳಲಾರದೆ, ಸತ್ಯವನ್ನು ಹೇಳಲೊಲ್ಲದೆ ಗಂಗೂ ಕಣ್ಣು ತುಂಬಿ ಬಂದು ಸುಮ್ಮನಿದ್ದಳಂತೆ. ಅವನು ನನ್ನ ಮಗನೆಂದು ಎಲ್ಲರೂ ಹೀಯಾಳಿಸಿದ್ದನ್ನು ಕೇಳಿದ್ದ ಪ್ರಸಾದನಿಗೆ ಯಾಕೆ ಸಂಶಯ ಹುಟ್ಟಿಬಿಟ್ಟಿತೊ? ಎಂದು ತಾಯಿ ಕಂಗಾಲಾಗಿದ್ದಳು. ಆದರೆ ಒಂದು ಕ್ಷಣದಲ್ಲಿ ಅವಳಿಗೆ ತಿಳಿದಿತ್ತು. ಪ್ರಸಾದ ತನ್ನನ್ನು ಅ ಪ್ರಶ್ನೆ ಕೇಳಿದ್ದಲ್ಲ. ತನಗೇ ಕೇಳಿಕೊಂಡದ್ದು ‘ನಾನು ಯಾರು?’ ಎಂದು ಮತ್ತೆ ಅಂದವನು, ‘ಅಮ್ಮ ಇದನ್ನು ತಿಳಿಯಲು ನಾನು ಸಂನ್ಯಾಸ ತೆಗೆದುಕೊಳ್ಳಬೇಕೆಂದಿದ್ದೇನೆ. ನಾನು ನಿನ್ನಲ್ಲಿ ಅಂಕುರಿಸಿದ ಹರಿದ್ವಾರಕ್ಕೇ ಹೋಗಿ ನನ್ನ ಸಂಗೀತದ ಉಪಾಸನೆ ಮುಂದುವರಿಸುತ್ತೇನೆ. ಇದಕ್ಕೆ ನಿನ್ನ ಅಪ್ಪಣೆ ಬೇಕು. ಆದರೆ ಸುಲಭವಾಗಿ ಸಂಸಾರದ ಮೋಹ ಯಾರನ್ನೂ ಬಿಡದು. ಜೊತೆಗೆ ಅಪ್ಪಯ್ಯನನ್ನೂ ಕರೆದುಕೊಂಡು ಹೋಗುತ್ತೇನೆ. ಅವರು ನನ್ನನ್ನು ಅತಿಯಾಗಿ ಹಚ್ಚಿಕೊಂಡಂತಿದೆ’ ಎಂದು ಗಂಗೂಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟನಂತೆ. ಚಂದ್ರಪ್ಪನನ್ನು ಅವನು ಅಪ್ಪಯ್ಯನೆಂದು ಕರೆಯೋದು.

“ಗಂಗೂ ಈಗ ಕಂಗಾಲಾಗಿದ್ದಾಳೆ. ಇರುವ ಒಬ್ಬನೇ ಮಗನನ್ನು ಕಳಕೊಂಡರೆ ತನ್ನ ಪಾಡೇನು ಎಂದು ದುಃಖಿಯಾಗಿ ಬಿಟ್ಟಿದ್ದಾಳೆ.

“ಮಗನನ್ನು ಉಳಿಸಿಕೊಳ್ಳಲು ಏನೇನೋ ಉಪಾಯಗಳನ್ನು ಹುಡುಕುತ್ತ ನನಗೆ ಹೇಳಿದಳು : ಮಗನಿಗೆ ಅವನ್ ಹುಟ್ಟಿನ ನಿಜವನ್ನು ತಿಳಿಸಿಬಿಡುವುದು. ಅಂದರೆ ನಿನ್ನ ಬಗ್ಗೆಯೂ ಹೇಳಿಬಿಡುವುದು. ಎಲ್ಲ ಯೋಗಾಯೋಗವೆನ್ನಿಸುತ್ತದೆ – ನೀನು ಈ ಸಮಯದಲ್ಲೇ ಇಲ್ಲಿಗೆ ಬಂದುಬಿಟ್ಟಿದ್ದೀಯ. ತನ್ನ ಸತ್ಯದಿಂದ ಮಗ ಮನೆಯಲ್ಲೇ ಉಳಿಯುತ್ತಾನೆಂದು ಗಂಗೂಗೆ ಒಂದು ಭ್ರಮೆ. ಇನ್ನೊಂದು ಭ್ರಮೆಯೆಂದರೆ ನನ್ನಿಂದ ದೇವರ ಎದುರು ಒಂದು ತಾಳಿ ಕಟ್ಟಿಸಿಕೊಂಡು ಬಿಟ್ಟರೆ ಮಗನ ಚಿತ್ತ ಕ್ಷೋಭೆಗೆ ಶಮೆ ದೊರಕುತ್ತದೆ ಎಂದು.

“ಒಂದಕ್ಕೊಂದು ಏನು ಸಂಬಂಧವೋ ತಿಳಿಯದು. ನನ್ನ ಲಾಯರ್ ತಲೆಗೆ ಅಂಥವು ಹೊಳೆಯಲ್ಲ. ನಾನಿದಕ್ಕೆ ಒಪ್ಪಿಬಿಟ್ಟೆ. ಆದರೆ ನನ್ನ ಆಸೆಬುರುಕ  ಮಗನದೇ ನನಗೆ ಚಿಂತೆ. ಎಲ್ಲಿ ಆಸ್ತಿ ಪಾಲಾಗಿ ಬಿಡಬೇಕಾಗುತ್ತದೋ ಎಂದು ಅವನು ಕಿರುಚಾಡಿ ನನ್ನನ್ನು ಕೊಲ್ಲಲು ಬಂದರೂ ಬಂದನೆ. ಅವನ್ ರಾಜಕೀಯ ನಾನು ಕಂಡಿಲ್ಲವ? ಗೂಂಡಾಗಳನ್ನು ಬಿಟ್ಟು ತನ್ನ ಎದುರಾಳಿಗಳನ್ನು ಅವನು ಹೊಡೆಸಿದ್ದಿದೆ”.

ನಾರಾಯಣನ ಮಾತು ಥಟ್ಟನೆ ಲಾಯರುಗಿರಿಯ ತಿರುವು ತೆಗೆದುಕೊಂಡಿತು:

“ನನ್ನ ಪ್ರಸಾದನಿಗೆ ವೈರಾಗ್ಯವಲ್ಲವೆ? ನನ್ನ ಆಸ್ತಿಯನ್ನೆಲ್ಲ ನನ್ನ ಮಗನಿಗೇ ಮಾಡಿ ಪತ್ರವನ್ನು ರಿಜಿಸ್ಟರ್ಡ್ ಮಾಡಿಬಿಡುತ್ತೇನೆ. ನನ್ನದು ಹೆಚ್ಚಾಗಿ ಸ್ವಯಾರ್ಜಿತವೇ. ಗಂಗೂ ಆಸ್ತಿಯನ್ನು ಹೇಗೂ ಅವಳ ಹೆಸರಿಗೇ ರಿಜಿಸ್ಟರ್ಡ್ ಮಾಡಿಬಿಟ್ಟಿದ್ದೇನೆ. ಅವಳ ಸಂಪಾದನೆ ಅವಳಿಗೆ ಸಾಕು. ನನಗೆ ಇರುವ ಒಂದೇ ಚಿಂತೆಯೆಂದರೆ ಅಮ್ಮನದು. ಅವಳು ಖಂಡಿತ ಗಂಗೂಗೆ ನಾನು ತಾಳಿಕಟ್ಟುವುದನ್ನು ಒಪ್ಪುತ್ತಾಳೆಂದು ನನಗೆ ಗೊತ್ತು. ಒಂದು ದಿನ ಚಿಂತೆಯಲ್ಲಿರುವ ನನ್ನನ್ನು ಕಂಡು ಅರ್ಥಗರ್ಭಿತವಾಗಿ ಹೇಳಿದ್ದಳು – ‘ನಿನ್ನ ಮಗನಿಗೊಂದು ಹೆಣ್ಣು ನೋಡಿ ಮದುವೆ ಮಾಡಿಬಿಡೋ. ಅವನು ತನ್ನ ಸಂಸಾರ ಮಾಡಿಕೊಂಡು ಬೇರೆಯಾಗಿ ಇರಲಿ. ಮಾಣಿಗೂ ಜವಾಬ್ದಾರಿ ಗೊತ್ತಾದಮ್ತೆ ಆಗುತ್ತದೆ. ನೀನೂ ಅಗ ನೆನಗೆ ಸರಿಕಂಡದ್ದನ್ನು ಮಾಡಬಹುದು’ ಎಂದಮೇಲೆ ಅವಳು ಪಿಸುಗುಟ್ಟುವಂತೆ ನನ್ನ ಕಿವಿಯಲ್ಲಿ ಇನ್ನೊಂದು ಮಾತು ಹಾಕಿ ನನ್ನನ್ನು ಚಕಿತಗೊಳಿಸಿಬಿಟ್ಟಳು.”

ನಾರಾಯಣ ಮಾತು ನಿಲ್ಲಿಸಿ ಕಾರಿನ ಬಾಗಿಲು ತೆರೆದು ದಿನಕರನನ್ನು ಕೂರಿಸಿಕೊಂಡು ಸ್ಟಾರ್ಟ್ ಮಾಡಿ ಹೇಳಿದ:

“ಅಮ್ಮ ಏನು ಹೇಳಿದಳು ಗೊತ್ತ?”

ದಿನಕರ ‘ಏನು’ ಎಂದ. ಕಾರನ್ನು ಬಿಡುತ್ತ ನಾರಾಯಣ ಗೌರವದ ಧ್ವನಿಯಲ್ಲಿ ಹೇಳಿದ:

“ನನ್ನ ಅಮ್ಮನಿಗೆ ಮಾತ್ರ ಇನ್ನೊಂದು ಜನ್ಮವೆತ್ತುವ ಅಗತ್ಯ ಬೀಳದು ಎನ್ನಿಸುತ್ತೆ ನನಗೆ. ಅವರು ಈ ಭವದಲ್ಲಿದ್ದೂ ಈ ಭವದಿಂದ ಮುಕ್ತರು”.

ಇನ್ನಷ್ಟು ಹೊತ್ತು ಕಳೆದು ಕಂಪಿಸುವ ಧ್ವನಿಯಲ್ಲಿ ಹೇಳಿದ:

“ಗಂಗೂ ಕೂಡ ನನಗೆ ಬಳಗದವಳಂತೆಯೇ’ ಎಂದು ಅಮ್ಮ ಅಂದುಬಿಟ್ಟಿದ್ದಳು. ವರ್ಷದ ಹಿಂದಿನ ಮಾತು ಇದು. ಗಂಗೂಗೆ ಅಮ್ಮ ಅಂದದ್ದು ಹೇಳಿದೆ. ಅದಕ್ಕವಳು ‘ಅಮ್ಮನ ಅ ಮಾತಿನಿಂದ ನಾನು ನಿಮ್ಮ ಹೆಂಡತಿಯಾಗಿ ಬಿಟ್ಟಂತೆಯೇ’ ಎಂದಿದ್ದಳು.”

ದಿನಕರ ಈ ಮಾತು ಕೇಳಿ ಕುಸಿದುಬಿಟ್ಟ. ನಾರಾಯಣ ಜೀವನದಲ್ಲಿ ತಾನು ಪಾಲುದಾರ, ಆದರೆ ಅವನ ಬಿಡುಗಡೆಯಲ್ಲಿ ತನಗೆ ಯಾವ ಪಾತ್ರವೂ ಇಲ್ಲ. ನಾರಾಯಣನಿಗೆ ಸಂಸಾರದ ಒಂದು ಚೌಕಟ್ಟಿದೆ; ಆದರೆ ತನಗೆ ಇಲ್ಲ. ಅವನಿಗೆ ಹೇಳಿ ಕೇಳುವವರೂ ಇದ್ದಾರೆ, ಸಮಾಜದ ಭಯವಿದೆ, ಅಲ್ಲೊಂದು ಅವನಿಗೆ ನಿಶ್ಚಿತ ಪಾತ್ರವಿದೆ; ಆದರೆ ತನಗೆ ಇಲ್ಲ. ಅವನಿಂದ ನೋಯುವವರು ಇದ್ದಾರೆ; ನಿರೀಕ್ಷಿಸುವವರು ಇದ್ದಾರೆ; ಆದರೆ ತನಗೆ ಇಲ್ಲ. ಪ್ರಸಾದ ನಾರಾಯಣನಿಗೆ ಇದ್ದಾನೆ; ತನಗೆ ಇಲ್ಲ. ತನ್ನಿಂದ ಅವನು ಹುಟ್ಟಿರಬಹುದು, ಇಲ್ಲದೆ ತನ್ನ ಪಾಲಿಗೆ. ಈ ದೇಹ ಅಂಥ ದಿಗ್ಭ್ರಮೆಯನ್ನು ಹೆಚ್ಚು ಕಾಲ ಧಾರಣ ಕೂಡ ಮಾಡಲಾರದು. ತನ್ನಂಥ ಅತಂತ್ರನಿಗೆ ಸಂಸಾರವೂ ಇಲ್ಲ, ಸಂನ್ಯಾಸವೂ ಇಲ್ಲ. ತನಗೆ ನೆಲೆಯೇ ಇಲ್ಲ. ತಾನು ಯಾರೆಂದು ಹುಡುಕಿದರೂ ಏನೂ ಸಿಗುವುದಿಲ್ಲ.