ನಾರಯಣ ತಂತ್ರಿ ಮುಖ್ಯ ರಸ್ತೆಯಿಂದ ಕಾರನ್ನು ತಿರುಗಿಸಿ ಏನೋ ಹೇಳಿದ. ದಿನಕರನಿಗೆ ಕೇಳಿಸಲಿಲ್ಲ. ಒಂದು ಒಂಟಿಯಾಗಿದ್ದ ಹೆಂಚಿನ ಮನೆಯ ಎದುರು ನಿಲ್ಲಿಸಿದ. “ನನಗೊಂದು ಡ್ರಿಂಕ್ ಬೇಕೆನ್ನಿಸಿದಾಗ ಇಲ್ಲಿಗೆ ನಾನು ಬರುವುದಿದೆ” ಎಂದು ದಿನಕರನಿಗೆ ಕೊಂಚ ಆಶ್ಚರ್ಯವಾಗುವಂತೆ ಮಾಡಿದ. ಮನೆಯ ಒಳಕ್ಕೆ ಅದು ತನ್ನ ಸ್ವಂತದ್ದೆಂಬಂತೆ ಅವನು ಹೋಗುವಾಗ, ಮನೆಯ ಹೊರಗೆ ಬರಿಮೈಮೇಲೆ ಟವಲು ಹೊದ್ದವನೊಬ್ಬ “ರಂಗಮ್ಮಾ, ಲಾಯರು ಬಂದಿದ್ದಾರೆ” ಎಂದು ಗಟ್ಟಿಯಾಗಿ ಹೇಳುತ್ತ ಎದ್ದು ನಿಂತಾಗ ದಿನಕರನಿಗೆ ಗುಮಾನಿಯಾಯಿತು. ‘ತನ್ನಂಥವನೇ ಈ ನಾರಾಯಾಣ. ಇವನಿಗೂ ದೀರ್ಘ ಕಾಲದ ತೀವ್ರ ಭಾವವನ್ನು ಧಾರಣೆ ಮಾಡುವ ಶಕ್ತಿಯಿಲ್ಲ’ ಎಂದುಕೊಂಡ. ಎಲೆಯಡಕೆ ಮೆಲ್ಲುತ್ತಿದ್ದ ಆಕರ್ಷಕಳಾದ ಕಪ್ಪು ಹೆಂಗಸೊಬ್ಬಳು ಮೋರೆ ತೋರಿಸಿ. “ಬಂದಿರ? ಎಷ್ಟು ದಿನವಾಗಿ ಬಿಟ್ಟಿತು ಬಂದು” ಎಂದು ಉಪಚರಿಸಿದಳು.

ನಾರಾಯಣ ಮತ್ತೇನೂ ಹೇಳಬೇಕಾದ್ದು ಉಳಿದಿರಲಿಲ್ಲ. ಒಂದು ಬಾಟಲು ವ್ಹಿಸ್ಕಿ ಮತ್ತು ಜಗ್ಗಿನಲ್ಲಿ ನೀರನ್ನು ಅವಳೇ ತಂದು ಎದಿರಿಟ್ಟಿದ್ದಳು. ದಿನಕರ, “ನಾನು ಕುಡಿಯುವುದು ಬಿಟ್ಟಿದ್ದೇನೆ, ಕೊನೆಯ ಪಕ್ಷ ಈ ಬಟ್ಟೆಯನ್ನು ತೊಟ್ಟಿರುವ ತನಕ” ಎಂದ. ಆದರೆ ನಾರಾಯಣ ಸುರಿದುಕೊಂಡ ವ್ಹಿಸ್ಕಿಯ ವಾಸನೆಗೆ ತನ್ನ ದೆಹಲಿಯ ಲೋಲುಪತೆಯ ದಿನಗಳು ನೆನಪಾಗಿ ಆಸೆಯಾಗದೇ ಇರಲಿಲ್ಲ. ತಾನು ಮತ್ತೆ ಅದಕ್ಕೆ ಮರಳುವವನೇ ಎಂದುಕೊಳ್ಳುತ್ತಿದ್ದಾಗ ದಿನಕರನಿಗೆ ಏನೇನೂ ಅರ್ಥವಾಗದ ತುಳುವಿನಲ್ಲಿ ನಾರಾಯಣ ರಂಗಮ್ಮನಿಗೆ ಹೇಳಿದ: “ಇವರು ನನ್ನ ದೆಹಲಿಯಲ್ಲಿರುವ ಸ್ನೇಹಿತರು. ಬಹಳ ದೊಡ್ಡವರು. ಸದ್ಯ ವ್ರತದಲ್ಲಿದ್ದಾರೆ. ಇವರಿಗೆ ಲಿಂಬೆ ಹಣ್ಣಿನ ಶರಬತ್ತು ಮಾಡಿಕೊಡು. ಬೇರೆ ಕಾರ್ಯಕ್ರಮ ಇವರಿಗೂ ಬೇಡ, ನನಗೂ ಬೇಡ.”

ರಂಗಮ್ಮ ವೈಯಾರ ಮಾಡುತ್ತ ಒಳಹೋದ್ದನ್ನು ಕಂಡು ‘ಈ ನಾರಾಯಣನ ಪಾಡೇ ಇಷ್ಟು. ಸಮಾಧಾನಗಳನ್ನೆಲ್ಲ ಇಟ್ಟುಕೊಂಡೇ ನರಳುತ್ತಿರುತ್ತಾನೆ. ನರಳಿ ಏನೂ ಪ್ರಯೋಜನವಿಲ್ಲ ಎಂದು ತಿಳಿದು ವೇದಾಂತಿಯೂ ಆಗಿರುತ್ತಾನೆ. ಇವನೂ ಹೊರಳಿಕೊಂಡು ಹೊಸಬನಾಗುವುದಿಲ್ಲ. ನಾನೂ ಹೊರಳಿಕೊಂಡು ಹೊಸಬನಾಗುವುದಿಲ್ಲ’ಎಂದುಕೊಂಡಿದ್ದ.

ಆದರೆ ಈಗ ನಿಜವಾಗಿಯೂ ದುಃಖದಲ್ಲಿದ್ದು ಗಂಗಿಯನ್ನು ರಾಜಾರೋಷವಾಗಿ ಮದುವೆಯಾಗಿ ಬಿಡಲು ತಯಾರಾದವನನ್ನು ತಾನು ಯಾಕೆ ರಂಗಿಯ ವಯ್ಯಾರ ಕಂಡು ಸಂಶಯ ಪಡುತ್ತಿದ್ದೇನೆಂದು ತನ್ನ ಬಗ್ಗೆ ನಾಚಿಕೆ ಆಯಿತು. ತಾನು ಎಂದೆಂದೂ ಮುಗ್ಧ ಸ್ಥಿತಿಯಲ್ಲಿ ಇದ್ದುದೇ ಇಲ್ಲ. ಸರಳನಾಗದೆ ಮುಕ್ತಿಯಿಲ್ಲ, ಸರಳನಾಗುವುದು ಈ ಪ್ರಪಂಚದಲ್ಲಿ ಇರುವ ತನಕ ತನಗೆ ಸಾಧ್ಯವಿಲ್ಲ.

ಪರಮಹಂಸರು ಕಾಳಿಯ ಎದುರು ನೈವೇದ್ಯವಿಟ್ಟು, ತಾಯೀ ಇದನ್ನು ನೀನು ತಿನ್ನಲೇ ಬೇಕು ಎಂದು, ತಾಯಿ ಅಕ್ಷರಶಃ ನೈವೇದ್ಯ ತಿನ್ನುವಳೆಂದು ನಂಬಿದ್ದರಾಗಿ, ಬಿಕ್ಕಿ ಬಿಕ್ಕಿ ಅಳುತ್ತಿರುವಾಗ ಕಪ್ಪು ಬೆಕ್ಕೊಂದು ಬಂದು ನೈವೇದ್ಯವನ್ನು ತಿಂದಿತ್ತಂತೆ. ಆ ಕಪ್ಪು ಬೆಕ್ಕೇ ಕಾಳಿಯೆಂದು ಪರಮಹಂಸರು ತಿಳಿದುಬಿಟ್ಟರಂತೆ.

ತಾನಾದರೂ ಅದನ್ನು ಒಂದು ಬೆಕ್ಕೆಂದೇ ಅಂದುಕೊಳ್ಳುತ್ತಿದ್ದೆ. ಹಾಗೆ ಅಂದುಕೊಳ್ಳುತ್ತಿದ್ದೆ ಎಂದು ತನಗೆ ಗಾಢವಾದ ವಿಷಾದವೂ ಇಲ್ಲ. ಯಾಕೆಂದರೆ ನಿಜವಾಗಿಯೂ ಅದೊಂದು ಕಪ್ಪಾದ ಬೆಕ್ಕೇ. ಇಲಿಯನ್ನು ಕಂಡಿದ್ದರೆ ಅದನ್ನೂ ಹಿಡಿದು ತಿನ್ನುತ್ತಿದ್ದ ಬೆಕ್ಕು.

ನಾರಾಯಣನ ಹಾಗೆ, ತನ್ನ ಹಾಗೆ ತಿಳಿದುಬಿಟ್ಟವರಿಗೆ ಸರಳತೆಯಿಲ್ಲ, ದರ್ಶನವಿಲ್ಲ, ಬೆರಗಿಲ್ಲ, ಮಗುಚಿಕೊಳ್ಳುವುದು ಸಾಧ್ಯವಿಲ್ಲ, ಸಂಸಾರದಲ್ಲಿ ತೃಪ್ತಿಯೂ ಇಲ್ಲ, ಪ್ರಪಂಚಕ್ಕೆ ಅತೀತವಾದ್ದನ್ನು ಪ್ರಪಂಚದವನಾಗಿದ್ದೇ ತಿಳಿಯಬೇಕೆಂಬ ಆಸೆ ಪಡದಂತೆ ಇರುವುದೂ ಸಾಧ್ಯವಿಲ್ಲ. ಅಂದರೆ ತನಗೆ ಸ್ವರ್ಗವೂ ಇಲ್ಲ, ನರಕವೂ ಇಲ್ಲ. ಇರುವುದೆಂದರೆ ಗೋಳು ಮಾತ್ರ.

ನಾರಾಯಣ ವ್ಹಿಸ್ಕಿಯನ್ನು ಸೇವಿಸುತ್ತ ಧಾರಾಳವಾಗಿ ಅರಳಿಕೊಳ್ಳಲು ತೊಡಗಿದ್ದ:

“ಈ ವ್ಯಸನವನ್ನು ಮಾತ್ರ ನಾನು ಅಮ್ಮನಿಂದ ಬಚ್ಚಿಟ್ಟಿದ್ದೇನೆ ಎಂದು ತಿಳಿದಿದ್ದೇನೆ. ಅಥವಾ ಹಾಗೆ ನಾನು ತಿಳಿದುಕೊಂಡಿರಲಿ ಎಂದು ಅಮ್ಮ ನಟಿಸುತ್ತಾರೆ. ನಾವು ಹೀಗೆಲ್ಲ ಆಗಿ ಬಿಟ್ಟಿದ್ದೀವಿ ಎಂದು ವ್ಯಸನಪಟ್ಟು ಪ್ರಯೋಜನವೂ ಇಲ್ಲವೋ, ದಿನಕರ. ಸುಮ್ಮನಿದ್ದು ಬಿಡಬೇಕು. ಸುಮ್ಮನಾಗಿ ಬಿಟ್ಟವರಿಗೆ ದೇವರ ಕೃಪೆ ತನ್ನಿಂದ ತಾನಾಗಿಯೇ ಒದಗಿ ಬಿಡುವುದು ಉಂಟಂತೆ.

ಅದು ಇರಲಿ – ಶಾಸ್ತ್ರಿಗಳು ನೋಡು. ಬಂಗಾರದಂಥ ಒಂದು ಹೆಂಡತಿಯನ್ನು ಹೊಡೆದೂ ಬಡೆದೂ ಅವಳೊಬ್ಬ ಮಲಯಾಳಿ ಪಂಡಿತರ ಜೊತೆ ಓಡಿಹೋಗುವಂತೆ ಮಾಡಿದರು. ಒಂದು ಪೆಟ್ಟಿಗೆಯ ತುಂಬ ಬಂಗಾರ ತುಂಬಿಕೊಂಡು ಅವಳು ಪರಾರಿಯಾಗಿಬಿಟ್ಟಳಂತೆ. ಆದರೆ ಅವರಿಗೂ ಒಂದು ಸೂಳೆಯಿದೆ. ಹಿಂದಿನಿಂದ ಇದ್ದದ್ದು ಅದು. ತುಂಬ ಒಳ್ಳೆಯವಳು ಅವಳು ಅನ್ನು. ಅವಳ ಮಾತು ಕೇಳಿ ಇನ್ನೊಂದು ಮದುವೆಯಾದರು. ಹುಟ್ಟಿದ ಮಗಳೂ ಅಪ್ಪನ ಕಾಠಿಣ್ಯಕ್ಕೆ ಹೇಸಿ ಯಾರನ್ನೋ ಕಟ್ಟಿಕೊಂಡು ಓಡಿಹೋದಳು. ಹೀಗಾಗಿ ಶಾಸ್ತ್ರಿಗಳು ಈಗ ಪುರಾಣ ಪ್ರವಚನ ಮಾಡಿಕೊಂಡು ಅಲೀತಾರೆ. ಕರ್ಮ ಹೀಗೆ ಸವೆಯುತ್ತೆ ಅಂತ ತಿಳಿದಿದಾರೆ. ಹುಚ್ಚು ಬ್ರಾಹ್ಮಣ. ಹುಟ್ಟಿದ ಗುಣ ಸುಟ್ಟರೂ ಹೋಗಲ್ಲ ಅಂತ ಅದಕ್ಕೇ ಗಾದೆಯಿರೋದು. ಜನ ಕೂಡ ಅಂಥವರನ್ನು ಅವರು ಬದಲಾದರೂ ನಂಬದು. ಅವರೇ ಹೆಂಡತೀನ್ನ ಹೊಡೆದು ಸಾಯಿಸಿದ್ದು ಅಂತಾರೆ. ಅವಳನ್ನು ಹುಗಿದ ಹೊಂಡದಲ್ಲಿ ನೆಟ್ಟ ಹಲಸಿನ ಮರದಲ್ಲಿ ಆ ಕಾರಣದಿಂದಾಗಿ ಫಲವಾಗಿಲ್ಲ ಎಂದು ಈ ಪ್ರಾಂತ್ಯದಲ್ಲೆಲ್ಲ ಪ್ರತೀತಿಯಿದೆ. ಬಂಗಾರವನ್ನು ಬಚ್ಚಿಟ್ಟು ಆಷಾಢಭೂತಿಯಾಗಿದ್ದಾನೆಂದೂ ಹೇಳುವ ಜನ ಇದ್ದಾರೆ – ಎನ್ನು.”

ನಾರಾಯಣ ಮಾತಿನ ಗುಂಗಿನಲ್ಲೇ ಇದ್ದ. ಗಂಗೂವನ್ನು ಹೊಗಳಲು ತೊಡಗಿದ. “ನಾನು ಡ್ರಿಂಕ್ ತಗೋಳ್ತ ಇದ್ದದ್ದು ಗಂಗೂ ಮನೇಲೆ. ಚೀಟೀಲಿ ಬರೆದುಕೊಟ್ಟರೆ ಸಾಕು, ಪಾಪ ಚಂದ್ರಪ್ಪ ವ್ಹಿಸ್ಕಿಯನ್ನೂ, ಐಸನ್ನೂ ತಂದುಬಿಡುತ್ತಿದ್ದ. ನಾನು ಗಂಗಿ ಮನೇಲಿ ಒಂದು ಫ್ರಿಜ್ಜನ್ನೂ ತಂದು ಇಟ್ಟೆ. ನಮ್ಮನೇಲಿ ಅಮ್ಮ ಫ್ರಿಜ್ಜು ಬೇಡವೇ ಬೇಡ ಅಂದರು. ಅಮ್ಮನಿಗೆ ಮುಸುರೆ ಮಡೀಲಿ ನಂಬಿಕೆ. ಆಯಿತ? ಗಂಗೂ ಮಗನಿಗೆ ನಾನಲ್ಲಿ ಹೋಗಿ ವ್ಹಿಸ್ಕಿ ಕುಡಿಯೋದು ಸರಿಕಾಣಲಿಲ್ಲಾಂತ ಕಾಣುತ್ತೆ. ಗಂಗೂ ತನ್ನಲ್ಲಿ ಬಂದು ಕುಡಿಯಬಾರದೆಂದು ಕಾಲು ಹಿಡಿದು ಅತ್ತುಬಿಟ್ಟಳು. ಆಯಿತಾ? ಕುಡಿಯೋದು ಬಿಟ್ಟ ಮೇಲೆ, ಅವಳ ಹತ್ತಿರ ಹೋಗಿ ಬರೋದು ನಿಂತಿತು. ಇಲ್ಲಿಗೆ ಬಂದು ಹೋಗುವ ಚಟ ಹತ್ತಿಕೊಂಡಿತು. ಇದನ್ನೇ ಸಂಸಾರ ಅನ್ನೋದು. ನಿನ್ನ ವಿಷಯ ನಾನು ಕೇಳಲೇ ಇಲ್ಲ. ಆದರೆ ಗಂಗೂ ಕೇಳಿದಳು. ಅವಳಿಗೇನು ಉತ್ತರ ಕೊಟ್ಟಿರಬಹುದು ನಾನು ಊಹಿಸು. ಅವನ ಹಾಗಿನ ಆರ್ಟಿಸ್ಟ್ ಗಳು ಮದುವೆ ಗಿದುವೆ ಆಗದೆ ಆರಾಮಾಗಿ ಇದ್ದುಬಿಡ್ತಾರೇಂತ ಅಂದೆ. ‘ಪಾಪ ಅವರೂ ಏನೋ ದುಃಖದಲ್ಲಿದ್ದರೆ ಅಂತ ಗಂಗೂ ಅಂದುಬಿಟ್ಟಳು.”

ನಾರಾಯಣ ನಗಲು ತೊಡಗಿದ್ದ. ಅವನ ಒಳಮನಸ್ಸಿನ ಆಯಾಸವೆಲ್ಲವೂ ಪರಿಹಾರವಾದಂತೆ ಕಂಡಿತ್ತು.