ಶಾಸ್ತ್ರಿಗಳು ಬಂದು ಕಾಯುತ್ತಿದ್ದರು. ತನಗೆ ಊಟಬೇಡವೆಂದು ನಾರಾಯಣ ತನ್ನ ಮಲಗುವ ಕೋಣೆಗೆ ಸೀದ ಹೋಗಿಬಿಟ್ಟ – ತಾಯಿಗೆ ತನ್ನ ಬಾಯಿವಾಸನೆ ಗೊತ್ತಾಗದೆ ಇರಲೆಂದು. ಆದರೆ ತಾಯಿ ಅವನಿಗಾಗಿ ಕುಟ್ಟವಲಕ್ಕಿಯನ್ನು ಮೊಸರಿನಲ್ಲಿ ಕಲಿಸಿ ಅವನು ಮಲಗಿದ್ದ ಕೋಣೆಗೇ ಕಳಿಸಿದರು. ಯಾಕೆಂದರೆ ಬೇಯಿಸಿದ ಮುಸುರೆಯನ್ನು ಅವರು ಕಳಿಸುವಂತಿರಲಿಲ್ಲ. ಆದರೆ ಮಗನನ್ನು ಉಪವಾಸದಲ್ಲಿ ಮಲಗಲು ಬಿಡುವುದು ಸಾಧ್ಯವೂ ಇರಲಿಲ್ಲ. ಶಾಸ್ತ್ರಿಗಳೂ ತಾವು ರಾತ್ರೆ ಹೊತ್ತು ಫಲಾಹಾರ ಮಾತ್ರ ಮಾಡುವುದು ಎಂದಾಗ, ಅವರಿಗೂ ಕುಟ್ಟವಲಕ್ಕಿ ಮೊಸರು ಕೊಟ್ಟು, ದಿನಕರನಿಗೂ ಮೊಮ್ಮಗ ಗೋಪಾಲನಿಗೂ ಅವರು ಮಾಡಿದ ಭಕ್ಷ್ಯಭೋಜ್ಯಗಳನ್ನೆಲ್ಲ ಬಡಿಸಿದರು.

ಮಧ್ಯಾಹ್ನದ ಊಟಕ್ಕಿಂತ ಇದು ಬೇರೆಯಾಗಿತ್ತು. ಎಲೆಯ ಸುತ್ತಲೂ ಹಲವು ಪಲ್ಯಗಳು, ಕೋಸಂಬರಿ, ಹಪ್ಪಳ, ಸಂಡಿಗೆ, ಕೀರು, ತೊವ್ವೆ ಈ ವಸ್ತುಗಳನ್ನು ಶೃಂಗಾರವಾಗಿ, ಊಟದ ಮುನ್ಸೂಚನೆಯ ಪದಾರ್ಥಗಳಾಗಿ ಬಾಡಿಸಿದ ಕುಡಿ ಎಲೆ ಪಡೆದಿತ್ತು. ಮೊದಲು ತೋರದ ಪದಾರ್ಥಗಳೂ ಆಮೇಲೆ ಪ್ರತ್ಯಕ್ಷವಾಗಲಿದ್ದವು.

ಸೀತಮ್ಮನಿಗೆ ಪ್ರಯವಾಗಲೆಂದು ಅವರ ಮೊಮ್ಮಗನಂತೆಯೇ ಎಲೆಯ ಸುತ್ತಲೂ ಪರಿಸಂಚನೆ ಕಟ್ಟಿ, ಆಪೋಶನ ತೆಗೆದುಕೊಂಡು ಊಟ ಶುರುಮಾಡಿದ. “ನಿಮ್ಮ ಕಡೆಯ ಬ್ರಾಹ್ಮಣರಲ್ಲೂ ಈ ಪದ್ಧತಿಯಿದೆಯಲ್ಲವೆ?” ಎಂದು ಸೀತಮ್ಮ ಕೇಳಿದ್ದು ಅರ್ಥವಾಗದೆ ಗೋಪಾಲನ ಕಡೆ ನೋಡಿದ. ಗೋಪಾಲ ಪ್ರಶ್ನೆಯನ್ನು ವಿವರಿಸಿದ. ದಿನಕರ ಸೀತಮ್ಮನಿಗೆ ಹೂಂಗುಟ್ಟಿ ಶಾಸ್ತ್ರಿಗಳ ಕಡೆ ತಿರುಗಿ, “ನನಗೆ ಕುಟ್ಟವಲಕ್ಕಿ ಗೊತ್ತಾದ್ದು ಈ ಅಮ್ಮನಿಂದಲೇ, ನನ್ನ ಅಮ್ಮನೂ ಈ ಕಡೆಯವರು ಆದದ್ದು ಹೌದೆ ಆದರೆ, ನನಗೂ ಅವರದನ್ನು ತಿನ್ನಿಸಿರಬಹುದು” ಎಂದು ಹೇಳಿದ್ದ. ತನಗೆ ಪ್ರಿಯವೆಂದು ಈ ಭಕ್ಷ್ಯಭೋಜ್ಯಗಳ ನಡುವೆ ಕುಟ್ಟವಲಕ್ಕಿಯನ್ನು ಕೇಳಿದ್ದ.

“ಅದರಿಂದಲೇ ಹೊಟ್ಟೆ ತುಂಬಿಸಿಕೊಂಡು ಬಿಡಬೇಡ. ವ್ರತ ಹಿಡಿದ ಮುದುಕರ ಫಲಾಹಾರ ಅದು” ಎಂದು ಒಂದು ಚೂರೇ ರುಚಿಗೆಂದು ದಿನಕರನಿಗೆ ಬಡಿಸಿದ್ದರು.

ಶಾಸ್ತ್ರಿಗಳು ದಿನಕರ ಕುಟ್ಟವಲಕ್ಕಿ ತಿನ್ನುವುದನ್ನೇ ಮತ್ತೆ ನೋಡತೊಡಗಿದ್ದರು.

“ಅದು ಯಾಕೆ ಆ ಮಾಣಿಯನ್ನ ತಿಂದುಹಾಕಿ ಬಿಡುವಂತೆ ನೋಡ್ತಾ ಇದೀರಿ?” ಎಂದು ಸೀತಮ್ಮ ನಗೆಯಾಡಿದ್ದು ಕೇಳಿ ಶಾಸ್ತ್ರಿಗಳು ಗಾಬರಿಗೊಂಡರು. ‘ದೇವಿ, ಭಗವತೀ ನನ್ನ ಕಾಪಾಡು’ ಎಂದು ಜಪ ಮಾಡಿದರು. ‘ಇವನನ್ನು ನೋಡಿದರೆ ಅವನ ಮುಖದಲ್ಲಿ ಪಂಡಿತನ ವರ್ಚಸ್ಸೇ ಕಂಡಂತಾಗುತ್ತದಲ್ಲ. ಅವನ ಕಣ್ಣುಗಳು ತಾಯಿಯದರ ಹಾಗಿವೆ. ಆದರೆ ಅವನ ಚೂಪಾದ ಮೂಗು, ಮುಖದ ಬಣ್ಣ, ಬಾಯಿ ಮುಚ್ಚಿಕೊಂಡಿದ್ದಾಗ ಅವನ ತುಟಿಗಳು ಬಿಗಿ ಮುದ್ರೆಯಲ್ಲಿರುವಂತೆ ಕಾಣುವ ಅದರ ಗಡಸು ಎಲ್ಲ ಪಂಡಿತನ ಥರ ಹಾಗೆಯೇ ಇವೆಯಲ್ಲ. ಸಂಗೀತ ಕೇಳುತ್ತ ಆ ಪಂಡಿತ ಹಾಗೆಯೇ ಕೂತಿರುತ್ತಿದ್ದ. ಅವನಿಗೇ ಹುಟ್ಟಿದನೇ ಇವನು?’ಎಂದು ಬಂಗಾರದ ಜೊತೆ ಪರಾರಿಯಾದ ಪಂಡಿತನ ಮೇಲಿನ ದ್ವೇಷ ಅಸೂಯೆಗಳನ್ನು ಮತ್ತೆ ಅನುಭವಿಸುತ್ತ ನೋಡಿದರು.

ಇಲ್ಲ. ಈ ಪುಟಾಣಿ ನನ್ನ ಮಗನೇ, ನಾನು ಈಳಿಡುತ್ತ ಹುಟ್ಟಿಸಿದವನು. ಆದರೆ ಕೋಮಲವಾದ ಅಂತಃಕರಣವನ್ನು ಯಾವ ಮಾಯೆಯಲ್ಲೋ ಪಡೆದವನು. ನನ್ನವನು, ಆದರೆ ನನ್ನವನಲ್ಲ. ನನ್ನ ವಂಶೋದ್ಧಾರಕ, ಆದರೆ ನನ್ನವನು ಆಗಲಾರ ಎಂದೆಲ್ಲ ಅಂದುಕೊಳ್ಳುತ್ತ ಈ ಅನುಮಾನಗಳಿಗೆ ಮುಕ್ತಾಯವೇ ಇಲ್ಲವೆ ಎಂದು ಹಲುಬತೊಡಗಿದ್ದರು. ನನ್ನ ನರಕಕ್ಕೆ ನಾನೊಬ್ಬನೇ ಹೋಗುವೆ. ಅಲ್ಲಿ ಅನಂತಕಾಲದವರೆಗೆ ಊಳಿಡುತ್ತಲೇ ಇರುವೆ. ಇದು ನನ್ನ ಕರ್ಮ ಎಂದು ನಿಟ್ಟುಸಿರಿಟ್ಟರು. ಈ ಮುದುಕನಿಗೆ ದಾರಿ ತೋರಿಸು ಭಗವತಿ, ನನ್ನ ಹೃದಯದಲ್ಲಿರುವ ಪಂಡಿತನ ಮೇಲೆನ ದ್ವೇಷವನ್ನು ಇಂಗಿಸು. ಪಾರು ಮಾಡು ಎಂದು ಜಪಿಸುತ್ತ ತಮ್ಮ ಫಲಾಹಾರ ಮುಗಿಸಿ ತನ್ನ ನಾಳೆಯನ್ನು ಎದುರುಗೊಳ್ಳಲು ರಾತ್ರೆಯೆಲ್ಲ ಕಾದರು.

ಇವನನ್ನು ತನ್ನ ಪ್ರೇತಕಳೆಯ ಮನೆಗೆ ಕರೆದುಕೊಂಡು ಹೋಗಬೇಕೋ, ಬಾರದೋ ಎಂಬ ಸಂದಿಗ್ಧದಲ್ಲಿ ಅವರು ನಿದ್ದೆ ಮಾಡಲೇ ಇಲ್ಲ.

ಮಾರನೇ ದಿನ ಅವನು ಎದ್ದವನೇ. “ಕೇರಳದಿಂದ ಹಿಂದಕ್ಕೆ ಬರುವಾಗ ನಿಮ್ಮಲ್ಲಿದ್ದು ಹೋಗುವೆ, ಆಗದಾ ಚಿಕ್ಕಪ್ಪ?” ಎಂದುಬಿಟ್ಟ. ಯಾಕೆ ಹಾಗೆ ಥಟ್ಟನೆ ಅವನಿಗೆ ಅನ್ನಿಸಿಬಿಡಬೇಕೋ? ಆದರೆ ಶಾಸ್ತ್ರಿಗಳು ಮನಸ್ಸು ಇದರಿಂದ ಹಗುರಾಯಿತು. “ದೇವಿಯ ಇಚ್ಛೆ ಹಾಗಿರಬೇಕು. ಮಗನನ್ನು ಮನೆಗೆ ಕರೆದೊಯ್ಯಲು ನನ್ನಲ್ಲಿ ಯೋಗ್ಯತೆ ಹುಟ್ಟಲು ಕಾಯಬೇಕು” ಎಂದುಕೊಂಡು ತಾನು ಬಂದಿದ್ದ ಕಾರಿನಲ್ಲಿ ಬೆಳಗಿನ ಫಲಾಹಾರ ಮುಗಿಸಿ ಹೊರಟುಹೋದರು.

ತಾನು ಇನ್ನೂ ಹೆಚ್ಚುದಿನ ಬದುಕುವುದಿಲ್ಲ, ಬದುಕುವ ಆಸೆ ಕಳೆದುಕೊಳ್ಳುತ್ತಿದ್ದೇನೆ ಎಂದುಕೊಂಡು ರಾಧೆಯ ಮನೆಗೆ ಹೋದರು. ಯಾರು ನನ್ನ ಶ್ರಾದ್ಧ ಮಾಡುವುದು ಎಂದು ತನಗೇ ಕೇಳಿಕೊಂಡರು. ಸತ್ಯವಿದ್ದಂತೆ ಆಗಲಿ ಎಂದು ಪ್ರಶ್ನೆಯನ್ನು ದೇವರಿಗೆ ಬಿಡಲು ಪ್ರಯತ್ನಿಸಿದರು.