ರಾತ್ರೆ ತನ್ನ ಕೋಣೆಗೆ ಹೋದ ದಿನಕರನಿಗೆ ನಿದ್ದೆ ಬರಲಿಲ್ಲ. ಎದ್ದು ಕೂತ. ವಾಕ್‍ಮನ್‍ನಿಂದ ಸಂಗೀತ ಕೇಳಿಸಿಕೊಳ್ಳಲು ಪ್ರಯತ್ನಿಸಿದ. ರುಚಿಸಲಿಲ್ಲ. ಟಿಬೆಟನ್ನರ ಕೃತಕವೆನ್ನಿಸಿತ್ತು. ತನ್ನ ಹೃದಯದಲ್ಲಿ ಅದಕ್ಕೆ ಸ್ಪಂದನವಿರದೇ ಹೋಗಿತ್ತು.

ಕಾಗದಗಳನ್ನು ಬರೆಯುವುದು ಎಂದುಕೊಂಡ. ಆದರೆ ತನ್ನ ಮೊದಲನೆಯ ಕಾಗದವನ್ನು ಅದನ್ನು ಎಂದೆಂದೂ ಓದದ ಮಹಾಮಾತೆಗೇ ಬರೆಯಬೇಕಾಗಿತ್ತು. ಹೀಗೆ ತನಗಾಗಿ ಒಂದು ಪತ್ರವನ್ನು ತನ್ನಿಂದಲೇ ಮಹಾಮಾತೆಯಾಗಿಬಿಟ್ಟು ಓದಲಾರದ ಇನ್ನೊಬ್ಬಳಿಗೆ ಬರೆಯುವುದೇ ತನ್ನ ಅಬ್ಸರ್ಡಿಟಿಗೆ ಸೂಚಕವಾಗಿತ್ತು. ಈ ಪತ್ರವನ್ನು ಇಂಗ್ಲಿಷಿನಲ್ಲೇ ಬರೆಯಲು ಹೊರಟು ‘ಡಿಯರ್ ಶ್ರೀಮತಿ ಮಹಾಮಾತೆ’ ಎಂದು ಶುರು ಮಾಡಿ, ನಕ್ಕು, ಹೊಡೆದುಹಾಕಿ ’ಡಿಯರ್ ಮಹಾಮಾತೆ’ ಎಂದು ಇನ್ನೊಮ್ಮೆ ಇನ್ನೊಂದು ಕಾಗದದ ಮೇಲೆ ಶುರು ಮಾಡಿದ. ಮೇಲೆ ಮಹಾಮಾತೆಗೆ ಪ್ರಿಯವಾಗಲೆಂದು ‘ಓಂ ನಮೋ ಭಗವತಿ’ ಎಂದು ದೇವನಾಗರಿಯಲ್ಲಿ ಬರೆದ.

* * *

‘ಡಿಯರ್ ಮಹಾಮಾತೆ’,

ನನ್ನ ಕಷ್ಟದ ಕಾಲದಲ್ಲಿ ನಾನು ನಿನ್ನನ್ನೂ ಗಂಗೂನನ್ನೂ ನನ್ನ ಮನಸ್ಸಿನಲ್ಲೇ ಹುಡುಕಲು ತೊಡಗಿದ್ದಾಗ, ನಿನ್ನ ಬಗ್ಗೆ ‘ಇಲ್ಲಸ್ಟ್ರೇಟಡ್ ವೀಕ್ಲಿ’ಯಲ್ಲಿ ಬಂದಿದ್ದ ವೃತಾಂತವನ್ನು ಓದಿದೆ. ಅದು ನೀನೇ ಇರಬೇಕೆಂದು ಖಚಿತವಾಗಿ ಬಿಟ್ಟಿತು. ಯಾಕೆಂದರೆ ಆ ವೃತಾಂತ ಹೀಗೆ ಶುರುವಾಗಿತ್ತು: ಒಂದು ರಾತ್ರೆ ರೈಲಿನಲ್ಲಿ ನೀನು ಕಾಶಿಗೆ ಹೋಗುತ್ತಿದ್ದಾಗ ಅಕಾಸ್ಮಾತ್ತಾಗಿ ನಿನಗೆ ಕಾಣುವಂತೆ ಮಲಗಿದ್ದ ಒಬ್ಬ ಸ್ಪುರದ್ರೂಪಿ ಯುವಕನನ್ನು ನೋಡಿದಿ. ಅಗ ನಿನಗೆ ನಿನ್ನ ಹಿಂದಿನ ಜನ್ಮದಲ್ಲಿ ರಾಧೆಯಾಗಿ ಹುಟ್ಟಿದ್ದು ನೆನಪಾಗಿಬಿಟ್ಟಿತು. ದಿವ್ಯಪ್ರೇಮ ನಿನ್ನಲ್ಲಿ ಇದ್ದಕ್ಕಿದ್ದಂತೆ ಸ್ಪುರಿಸಿಬಿಟ್ಟಿತು. ನೀನು ನಿಸ್ಸಹಾಯಕಳಾಗಿ ಬಿಟ್ಟೆ. ಭವದ ನಿನ್ನ ಶರೀರಕ್ಕೆ ಅದನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ನಿನ್ನ ಜೊತೆಯಲ್ಲಿ ತಂದೆಯಿದ್ದರೆಂಬುವುದನ್ನೂ ಮರೆತುಬಿಟ್ಟೆ. ಯಾವುದೋ ನಿಲ್ದಾಣದಲ್ಲಿ ಒಂದು ಕ್ಷಣ ನಿಂತಿದ್ದ ರೈಲಿನಲ್ಲಿ ನೀನು ಉಟ್ಟಬಟ್ಟೆಯಲ್ಲೇ ಇಳಿದುಬಿಟ್ಟೆ. ಪರಿವ್ರಾಜಕೆಯಂತೆ ಅಲೆಯಲು ತೊಡಗಿದಿ. ಹೀಗೆ ಅಲೆಯುತ್ತಲ್ಲೇ ಇದ್ದಾಗ ಒಂದು ಅರಳಿಮರದ ಕೆಳಗೆ ಬಳಲಿ ಕೂತಿದ್ದಿ. ಕೊಳಲೂದುತ್ತಿದ್ದ ಒಬ್ಬ ಗೊಲ್ಲನನ್ನು ಕಂಡಿ. ಅವನು ಕೂಡ ನೀನು ರೈಲಿನಲ್ಲಿ ಕಂಡವನಂತೆಯೇ ನಿನ್ನ ಭವಾವಳಿಯಿಂದ ನಿನ್ನನ್ನು ಬಿಡುಗಡೆ ಮಾಡಲು ಕಾಣಿಸಿಕೊಂಡ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಆಗಿದ್ದ. ನೀನು ಅವನ್ ಕೊಳಲನಾದ ಕೇಳುತ್ತ ಇಹದಿಂದ ಮುಕ್ತಳಾಗಿ ಸಾಕ್ಷಾತ್ ರಾಧೆಯಾಗಿಯೇ ಬಿಟ್ಟೆ.

ಹೀಗೆ ನಿನ್ನ ವೃತ್ತಾಂತ ಅದರಲ್ಲಿತ್ತು. ಜೊತೆಗೇ ಅದರಲ್ಲಿ ನಿನ್ನ ಸದ್ಯದ ರೂಪದ ಚಿತ್ರಗಳು ಕೂಡ ಇದ್ದವು. ನನಗೆ ಮಾತ್ರ ನಿನ್ನ ಕಣ್ಣುಗಳಲ್ಲಿ ಇನ್ನೂ ಉಳಿದೇ ಬಿಟ್ಟಿದ್ದ ಹಿಂದಿನ ತುಂಟತನ ಕಂಡುಬಿಟ್ಟಿತು.

ಡಿಯರ್ ಮಹಾಮಾತೆ, ಈ ಭವದಲ್ಲಿ ನೀನು ಪ್ರಥಮ ಪ್ರಣಯದ ಅನುಭವ ಪಡೆದದ್ದು ಕೃಷ್ಣನನ್ನು ಕಂಡು ಅಲ್ಲ – ಈಗ ಕಳವಳದಲ್ಲಿ ತೊಳಲಾಡುತ್ತಿರುವ ಈ ನನ್ನನ್ನು ನೋಡಿಯೇ. ನೆನಪಿಸುವೆ, ಕೇಳಿಸಿಕೋ.

ಇಪ್ಪತ್ತನಾಲ್ಕು ವರ್ಷಗಳ ಕೆಳಗೆ ನೀನು ಹದಿನೆಂಟು ವರ್ಷದ ಹುಡುಗಿಯಿದ್ದಿರಬೇಕು. ನೀನು ಮೇಲಿನ ಸೀಟಿನಲ್ಲಿ ಮಲಗಿದ್ದೆ. ನಿನ್ನ ತಂದೆ ಕೆಳಗಿನದರಲ್ಲಿ ಮಲಗಿದ್ದರು. ಆಮೇಲೆ ನೀನೇ ನನಗೆ ಹೇಳಿದಂತೆ ಗಂಡನ ಜೊತೆ ಬಾಳ್ವೆ ಮಾಡಲ್ಲವೆಂದು ಹಠ ಹಿಡಿದ ನಿನ್ನ ಗ್ರಹಾಚಾರ ಕಳೆಯಲಿ ಎಂದು ಕಾಶಿಗೆ ನಿನ್ನ ತ್ಮ್ದೆ ನಿನ್ನನ್ನು ಕರೆದುಕೊಂಡು ಬಂದಿದ್ದರು. (ಕಾಲೇಜು ಓದುತ್ತಿದ್ದ ಹುಡುಗಿಯಾದ್ದರಿಂದ ನೀನು ನನಗೆ ಇದನ್ನೆಲ್ಲ ನಿನ್ನ ಮುದ್ದಾದ ಹರಕು ಮುರುಕು ಇಂಗ್ಲಿಷಿನಲ್ಲೇ ಹೇಳಿದ್ದಿ.)

ಮುಖ್ಯ ವಿಷಯಕ್ಕೆ ಬರುವೆ. ನೀನು ನನಗೆ ಕಾಣುವಂತೆ ಕಿಟಕಿಯ ಪಕ್ಕದ ಸೀಟಿನಲ್ಲಿ ನಾನು ಮಲಗಿದ್ದೆ. ನೀನು ಮಲಗಿದ್ದ ಅಪ್ಪರ್ ಬರ್ತಿನ ಸರಪಳಿಯ ಕೊಂಡಿಯನ್ನು ಸರಿಯಾಗಿ ಸಿಕ್ಕಿಸಿರಲಿಲ್ಲವೆಂಬ ನನ್ನ ಆತಂಕ ನಿನ್ನನ್ನು ಚೆನ್ನಾಗಿ ನೋಡಲು ನೆವವಾಯಿತು. ನೀನು ಕೂಡ ಎರಡು ಕಣ್ಣುಗಳಲ್ಲೂ ನನ್ನನ್ನು ತುಂಬಿಕೊಳ್ಳುವಂತೆ ನೋಡಲು ತೊಡಗಿದ್ದಿ. ನಿನ್ನ ಅಪ್ಪ ನನ್ನನ್ನು ಸಂಶಯದಲ್ಲಿ ನೋಡುತ್ತ ಮಲಗಿದ್ದರೆಂಬುದು ನಿನಗೆ ಗೊತ್ತಿರಲಿಲ್ಲ. ಬಾಯನ್ನು ಅಲ್ಲಾಡಿಸುತ್ತ ತುಟಿಗಳನ್ನು ಮೃದುವಾಗಿ ಕಡಿದುಕೊಳ್ಳತೊಡಗಿದಿ – ಸುಳ್ಳು ಸುಳ್ಳೇ ಏನನ್ನೋ ತಿನ್ನುತ್ತಿರುವ ನೆವದಲ್ಲಿ. ನಿನ್ನ ಮೊಲೆಗಳು ನಿನಗೇ ಭಾರವೆಂಬಂತೆ ನಿನ್ನ ಕೈಗಳಿಂದ ಅವುಗಳನ್ನು ತುಸು ಎತ್ತುವಮ್ತೆ ನಟಿಸಿದಿ. ಹೊದಿಕೆಯ ಒಳಗೆ ಕೈ ಹಾಕಿ ಸೆಖೆ ಎಂಬಂತೆ ಫ್ಯಾನಿನ ಕಡೆ ನೋಡುತ್ತ ನಿನ್ನ ಕುಪ್ಪಸದ ಗುಂಡಿಗಳನ್ನು ಬಿಚ್ಚಿದಿ. ತಲೆಗೂದಲನ್ನು ನೇವರಿಸಿದಿ. ನಿನ್ನ ತುಟಿಗಳನ್ನು ನನಗೆ ಕಡಿಯಬೇಕೆಂದೆನ್ನಿಸಿದ್ದು ನಿನಗೆ ಗೊತ್ತಾದಂತೆ ಕಣ್ನನ್ನು ಮಿಟುಕಿಸಿಯೇಬಿಟ್ಟಿ. ಬಹಳ ತುಂಟ ಕಣ್ಣು ನಿನ್ನದು. ತನ್ನಷ್ಟಕ್ಕೆ ನಗುವ ಕಣ್ಣು ನಿನ್ನದು. ಇವತ್ತೂ ನಿನ್ನ ಕಣ್ಣುಗಳು ಹಾಗೇ ಇವೆ.

ಒಂದು ವರ್ಷದ ಹಿಂದೆ ಗಂಗೂ ಎಂಬ ಒಬ್ಬ ಹುಡುಗಿಯನ್ನು ದೇಹಗಳು ಬೆರೆತು ಕರಗಿಹೋಗುವಂತೆ ನಾನು ಪ್ರೀತಿಸಿದ್ದರ ನೆನಪು ಮರುಕಳಿಸಿತ್ತು. ನಿನ್ನನ್ನು ತಿಂದುಬಿಡುವಂತೆ ನೋಡುತ್ತ, ನಿನ್ನ ಬರ್ತ್ ಕೊಂಡಿಯಿಲ್ಲದೆ ಕಳಚೀತೆಂಬ ನನ್ನ ಅತಂಕವೇ ಕಾರಣವೆಂಬಂತೆ, ನಾನು ಎದ್ದು ನಿಂತು ನಿನ್ನ ತೊಡೆಗಳನ್ನು ಮುಟ್ಟುವಂತೆ ನನ್ನ ಎಡಗೈ ಸೋಕಿಸಹೋದಾಗ, ನೀನೂ ನನ್ನ ಕೈಗಳಿಂದ ಮುಟ್ಟಿಸಿಕೊಳ್ಳುವಂತೆ ಮಗ್ಗುಲಾಗಿ ನಿನ್ನ ಬಲತೊಡೆಯನ್ನು ನನ್ನ ಎಡಗೈಗೆ ಒತ್ತಿದಿ.

ನೀನು ಮಲಗಿದ ಬರ್ತನ್ನು ಎದ್ದುನಿಂತು ಮೇಲಕ್ಕೆ ಎತ್ತಿ ಕೊಂಡಿಸಿಕ್ಕಿಸುತ್ತಿದ್ದ ನನ್ನನ್ನು ನಿನ್ನ ಅಪ್ಪ ‘ಏಯ್’ ಎಂದು ಹೊದಿಕೆ ಎಸೆದು ಎದ್ದುನಿಂತು ಹೊಡೆದು ಕಿರುಚಾಡತೊಡಗಿದರು. ಆತಂಕದಲ್ಲಿ ನಿನ್ನ ಬರ್ತನ್ನೆತ್ತಿ ಕೊಂಡಿ ಸಿಕ್ಕಿಸುತ್ತಿದ್ದವನೊಬ್ಬನ (ಅಧುನಿಕ ಆಕರ್ಷಕ ವೇಷದವನೊಬ್ಬನಾದ ನನಂಥವನ) ಈ ಅಪರೂಪದ ಪರೋಪಕಾರಿ ಭಾವವನ್ನು ಮೆಚ್ಚಿಕೊಂಡಿದ್ದ ಇತರ ಪ್ರಯಾಣಿಕರು ಸದಾ ಉರಿಮುಖದವರಾಗಿದ್ದ ನಿನ್ನ ಅಪ್ಪನಿಗೆ ಛೀಮಾರಿ ಹಾಕಿದರು. ಇದನ್ನೆಲ್ಲ ತುಂಟತನದಿಂದ ನೋಡುತ್ತಿದ್ದ ನೀನು ಮಾತಿಲ್ಲದೆ ನನ್ನ ಜೊತೆ ಒಂದು ಒಪ್ಪಂದಕ್ಕೆ ಬಂದಿದ್ದಿಯೆಂದು ನನಗೆ ಗೊತ್ತಾಗಿಬಿಟ್ಟಿತ್ತು. ಸ್ತ್ರೀಹೃದಯ ತಿಳಿಯುವುದರಲ್ಲಿ ಈ ನನ್ನ ಈಗಿನ ಅಯ್ಯಪ್ಪ ವೇಷದಲ್ಲೂ ನಾನು ನಿಷ್ಣಾತ. ಇರಲಿ. ನಾನು ವಿನಾಕಾರಣ ನಿನ್ನ ಅನಾಗರಿಕ ತಂದೆಯಿಂದ ಅವಮಾನಿತನಾದವಂತೆಯೂ, ಆದರೆ ನಿನ್ನ ಮೂರ್ಖ ಅಪ್ಪನನ್ನು ಕ್ಷಮಿಸಿದವನಂತೆಯೂ ನಟಿಸಿದ್ದೆ. ಎಲ್ಲರೂ ದೀಪವಾರಿಸಿದ ಮೇಲೆ ನೀನು ಮೆತ್ತಗೆ ಎದ್ದು ಹೋದಿ. ನೀನು ಎಲ್ಲಿಗೆ ಹೋಗಿದ್ದಿಯೆಂಬುದನ್ನು ಊಹಿಸಿದ ನಾನೂ ಎದ್ದುಹೋಗಿ ಸೀದ ಟಾಯ್ಲೆಟ್ಟಿನ ಬಾಗಿಲು ತಳ್ಳಿದೆ. ಅದರೊಳಗೆ ಇದ್ದ ನೀನು ನನ್ನನ್ನು ತಬ್ಬಿಕೊಂಡೆ. ನೀನು ನಿನ್ನ ಕುಪ್ಪಸದ ಗುಂಡಿಗಳನ್ನು ಮಾತ್ರ ತೆರೆದದ್ದಲ್ಲ; ಟಾಯ್‍ಲೆಟ್ಟಿನಲ್ಲಿ ಅದೆಷ್ಟು ವೇಗವಾಗಿ ನಿನ್ನ ಮೊಲೆಕಟ್ಟನ್ನೂ ಬಿಚ್ಚಿ ಸೊಂಟಕ್ಕೆ ಸಿಕ್ಕಿಸಿದ್ದಿ.

ಅಲ್ಲಿನ ಉಚ್ಚೆ ವಾಸನೆಯನ್ನು ನಾವಿಬ್ಬರೂ ಗಮನಿಸಲೇ ಇಲ್ಲ. ನಾನು ನಿನ್ನ ತುಟಿಗಳನ್ನು ಕಚ್ಚತೊಡಗಿದ್ದೆ. ನೀನು ಬಿಡಿಸಿಕೊಂಡು ನನ್ನ ಕಿವಿಯನ್ನೂ ಮುಖವನ್ನೂ ಕಚ್ಚುತ್ತ, ನಿನ್ನ ಎದೆಗೆ ನನ್ನ ಕೈಗಳನ್ನು ಇಟ್ಟುಕೊಂಡು ನನಗೆ ಹೇಳಿದಿ. ಹೀಗೆ: ನೀನು ಕಾಲೇಜು ಹೋದುವ ಹುಡುಗಿಯಾಗಿದ್ದಿ. ನಿನಗೆ ಒತ್ತಾಯದಿಂದ ಮಾಡಿದ ಮದುವೆ ನಿನಗೆ ಇಷ್ಟವಿರಲಿಲ್ಲ. ನನ್ನ ಜೊತೆ ಕರೆದಲ್ಲಿಗೆ ಬಂದು ಬಿಡುವಿ ಎಂದಿ. ಪ್ರೇಮದ ಉತ್ಕರ್ಷದ ನಿನ್ನ ಮೂರ್ಖತನದಲ್ಲಿ ನೀನು ದೇವಿಯಂತೆ ನನಗೆ ಕಂಡಿ. ರೈಲು ಯಾವುದೋ ಸ್ಟೇಹನ್ನಿನಲ್ಲಿ ಬಂದು ನಿಲ್ಲುವಂತೆ ಸ್ಲೋ ಆಗುತ್ತ ಹೋಯಿತು. ಇಲ್ಲೇ ನಾವಿಬ್ಬರೂ ಇಳಿದು ಪರಾರಿಯಾಗೋಣ ಎಂದಿ. ನಿನ್ನನ್ನು ಮೋಹಿಸಿದ್ದರೂ ನನಗೆ ಅಂಥ ಧೈರ್ಯವಿರಲಿಲ್ಲ. ಆದರೆ ಅದೂ ಒಮ್ದು ಪ್ರಣಯಕೇಳಿಯ ಪೂರ್ವಭಾವಿ ಸಿದ್ಧತೆಯೆಂದುಕೊಂಡು ‘ಆಗಬಹುದು’ ಎಂದು ನಿನ್ನನ್ನು ತಡಕಾಡತೊಡಗಿದ್ದೆ.

ನೀನು ಮಾತ್ರ ಹುಚ್ಚು ಹುಡುಗಿ. ಇಳಿದೇಬಿಟ್ಟೆ. ಕ್ಷಣ ಮಾತ್ರ ನಿಂತಿದ್ದ ರೈಲು ಹೊರಟುಬಿಟ್ಟಿತು. ಆಮೇಲೆ ನಿನ್ನನ್ನು ಕಾಣದೆ ನಿನ್ನ ಅಪ್ಪ ಗೋಳಾಡುತ್ತ ಗಂಟುಮೂಟೆ ಹೊತ್ತು ಮುಂದಿನ ಸ್ಟೇಶನ್ನಿನಲ್ಲಿ ಇಳಿದುಬಿಟ್ಟಾಗ ನನಗೇನು ಮಾಡಬೇಕು ತೋಚದೆ ನಾನು ಸುಮ್ಮನಾಗಿ ಬಿಟ್ಟೆ. ಗಂಗೂ ನಂತರ ನನ್ನ ಎರಡನೇ ಸೋಲು ಇದು. ನಾನು ಯಾರನ್ನೂ ಪ್ರೀತಿಸಲಾರೆನೇನೋ ಎಂದು ನನ್ನ ಆತ್ಮರತವಾದ ವ್ಯಕ್ತಿತ್ವದ ಬಗ್ಗೆಯೇ ಈ ಘಟನೆಯ ನಂತರ ಅನುಮಾನ ಪಟ್ಟು ನರಳತೊಡಗಿದೆ. ಈಗಲೂ ಅದೇ ನರಳಾಟದಿಂದ ಪಾರಾಗದ ನಾನು ನಿನಗೆ ಈ ಪತ್ರ ಬರೆಯುತ್ತಿದ್ದೇನೆ.

ಬಹಳ ವರ್ಷಗಳಾದ ಮೇಲೆ ನಾನೊಬ್ಬ ಖ್ಯಾತ ವ್ಯಕ್ತಿಯಾದೆ. ಹಲವು ಪ್ರಣಯಗಳ ನಂತರ ಒಬ್ಬಳನ್ನು ಮದುವೆಯಾದೆ. ಆಮೇಲೆ ನಾನಿಲ್ಲದಾಗ ಇನ್ನೊಬ್ಬನ ತೋಳಿನಲ್ಲಿ ನನ್ನ ತೋಳಿನಲ್ಲಿರುವುದಕ್ಕಿಂತ ಹೆಚ್ಚಿನ ಸುಖಗಿಟ್ಟಿಸಿಕೊಳ್ಳುತ್ತಿದ್ದ ನನ್ನ ಹೆಂಡತಿಯ ಘಾತುಕತನದಿಂದ ಕ್ರುದ್ಧನಾಗಿ ಅವಮಾನಿತನಾದೆ. ಅವಳಿಗೆಷ್ಟು ನನ್ನ ಬಂಗಾರ ಕೊಟ್ಟರೆ ಅವಳು ನನ್ನನ್ನು ಬಿಟ್ಟಾಳು ಎಂಬ ವ್ಯವಹಾರದಲ್ಲಿ ನಮ್ಮ ಜಗಳ ಬೆಳೆಯುತ್ತ ಹೋದಂತೆ ಹೇಸಿದೆ. ಹೇಸಿದೆ ಮಾತ್ರ – ಹೊರಳಲಿಲ್ಲ. ಯಾಕೆಂದರೆ ನನ್ನ ಹೆಂಡತಿ ನನ್ನ ಆಸ್ತಿಗಾಗಿ ನನ್ನನ್ನು ಮದುವೆಯಾಗಿ ಇನ್ನೊಂದು ಸಂಬಂಧ ಇಟ್ಟುಕೊಂಡತೆಯೇ, ಗ್ಲಾಮರ್ ವರ್ಲ್ಡ್ ನ ನಾನು ಗ್ಲಾಮರ್ ವರ್ಲ್ಡ್ ನ ಅವಳನ್ನು ಮದುವೆಯಾಗಿ ಇನ್ನೂ ಹಲವು ಲಘು ಸಂಬಂಧಗಳನ್ನೂ ಸರ್ಕಸ್ಸಿನ ಟೈಟ್‍ರೋಪ್ ವಾಕರ‍್ನಂತೆ ನಿರ್ವಹಿಸಿದ್ದೆ. ನಾನು ಯಾರು, ನನ್ನ ಸತ್ಯವೇನು? ಎಂದು ತಿಳಿಯದ್ದರಿಂದಲೇ ಈ ಭವದ ದಿಗ್ಭಂಧನಗಳ ಭ್ರಮೆಗೆ ನಾನು ಒಳಗಾಗಿರುವುದು ಎಂದೂ ನೀನು ಹೇಳೀಯ. ಅದು ನನಗೆ ಗೊತ್ತು. ಆದರೆ ಈ ಸತ್ಯ ಸದಾ ನನಗೆ ತಿಳಿದಿದ್ದರೂ ಭ್ರಮೆಯಲ್ಲಿರುವ ತರಳೆ ನನಗೆ ಪ್ರಿಯಕರವಾಗಿಯೂ ಇತ್ತು. ಇವಳಿಗೆ ಕೊಟ್ಟ ಹೊತ್ತನ್ನು ಮರೆತು ಒನ್ನೊಬ್ಬಳಿಗೆ ಅದೇ ಹೊತ್ತನ್ನು ಗೊತ್ತು ಮಾಡುವುದು, ಇವಳ ಕೋಪ ಶಮನವಾಗಲೆಂದು ಅವಳಿಗೆ ಮೋಸ ಮಾಡುವುದು, ಇಂಥ ಕೋಪಾವೇಶಗಳನ್ನು ಉಂಟುಮಾಡುತ್ತ ಕಾಮಕೇಳಿಯ ವಿಧವಿಧದ ಸೊಗಸುಗಳ ಅನುಭವಕ್ಕೆ ವಿರಹತಾಪವನ್ನು ಒಗ್ಗರಣೆ ಮಾಡಿಕೊಳ್ಳುವುದು ನನ್ನ ಹವ್ಯಾಸವಾಗಿತ್ತು. ಅದರಿಂದ ನನ್ನಲ್ಲಿ ಉಂಟಾಗುತ್ತಲೇ ಹೋದ ಸುಸ್ತು, ನನ್ನ ಒಳಗಿಂದ ಇನ್ನೊಂದು ನಾದವನ್ನು ಕ್ಷೀಣವಾಗಿ ಕೇಳಿಸುವಂತೆಯೂ ಮಾಡಿತ್ತು.

ನನ್ನ ಹೆಂಡತಿ ಜೊತೆ ಇರಲಾರದೆ, ಬಿಡಲೂ ಆಗದೆ ಒಂದು ದಿನ ಸಜ್ಜನಿಕೆಯಲ್ಲಿ ಅವಳ ಜೊತೆ ತಾಜ್ ಕಾಂಟಿನೆಂಟಲ್‍ನಲ್ಲಿ ಸೊಗಸಾದ ಅರೋಮಾದ ಡಾರ್ಜೆಲಿಂಗ್ ಚಹಾ ಕುಡಿಯುತ್ತಿದ್ದವನು ಸೀದಾ ಬ್ಯಾಂಕಿಗೆ ಹೋಗಿ ಸೇಫ್ ಡಿಪಾಸಿಟ್ಟಿನಿಂದ ನನ್ನ ತಾಯಿ ಬಿಟ್ಟುಹೋದ ಬಂಗಾರದ ಕೆಲವು ಗಟ್ಟಿಗಳನ್ನು ಎತ್ತಿತಂದು ಸುಮಾರು ಇಪ್ಪತ್ತು ಲಕ್ಷಗಳು ಬೆಲೆಬಾಳುವ ಬಂಗಾರವನ್ನು ಅವಳಿಗೆ ಆಶ್ಚರ್ಯವಾಗುವಂತೆ ಕೊಟ್ಟುಬಿಟ್ಟೆ. ಅವಳ ಮುಖ ಅರಳಿದ್ದನ್ನು ಯಾವತ್ತೂ ಮರೆಯಲಾರೆ. ಮುಗ್ಧ ಮಗುವಿನ ಖುಷಿಯನ್ನು ಅವಳಲ್ಲಿ ಕಂಡೆ. ಬಂಗಾರ ಅವಳಲ್ಲಿ ಹೀಗೆ ಉಂಟು ಮಾಡಿದ ಭ್ರಮೆಯ ವಿಲಾಸಕಂಡು ನನ್ನ ಕರುಳು ಮಿಡಿಯಿತು. ಅವಳ ಮೇಲಿದ್ದ ದ್ವೇಷವೆಲ್ಲ ಕಳೆದುಹೋಯಿತೆನ್ನಿಸಿತ್ತು.

ಆದರೆ ಮೊದಲ ಬಾರಿ ಅವಳ ಪ್ರಣಯ ಕೇಳಿಯನ್ನು ಖುದ್ದು ಕೇಳಿಸಿಕೊಂಡಿದ್ದು ನೆನಪಾದಾಗಲೆಲ್ಲಾ ಮತ್ತೆ ಆ ದ್ವೇಷ ಮರುಕಳಿಸಿದ್ದಿದೆ. ನಾನು ನನ್ನ ಫ್ಲಾಟಿನ ಬಾಗಿಲನ್ನು ನನ್ನ ಕೀನಿಂದ ತೆರೆದು ಡ್ರಾಯಿಂಗ್ ರೂಮಿನಲ್ಲಿ ಸದ್ದಿಲ್ಲದೆ ನಿಂತಾಗ ಸಂಜೆಹೊತ್ತು ಅವಳು ಪರಮ ಸುಖದಲ್ಲಿ ನರಳುತ್ತಿದ್ದಳು. ಅವಳ ಮಿಂಡ, ಒಬ್ಬ ಯಃಕಶ್ಚಿತ್ ಎಂಜೆನಿಯರು. ಇಬ್ಬರೂ ಗದ್ಗದವಾದ ಗಂಟಲಿನಲ್ಲಿ ಪಶುವಿನ ವಿಚಿತ್ರ ಸ್ವರವನ್ನು ಹೊರಡಿಸುತ್ತ ತಣಿಯುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದಂತೆ, ನಾನು ಇನ್ನು ತಾಳಲಾರೆ, ಅವಳನ್ನು ಅಡಿಗೆಮನೆಯ ಚಾಕುವಿನಿಂದ ನುರಿದು ಸಾಯಿಸಬೇಕು ಎನ್ನಿಸಿತ್ತು. ತನ್ನ ಹೆಣ್ಣು ಇನ್ನೊಬ್ಬನಿಂದ ತಾನು ಮಾಡಿದ್ದನ್ನೇ ಮಾಡಿಸಿಕೊಳ್ಳುತ್ತಾಳೆ ಎಂಬುದು ಮಹಾ ಕಾಮೂಕರಿಗೂ ಬೆರಗಿನ ವಿಷಯವಾಗಿರುತ್ತದೆ. ಈ ಬೆರಗಿನಲ್ಲೂ ಬಿಡುಗಡೆ ಸಾಧ್ಯವಾಗಬಹುದಲ್ಲವೆ?

ಅಂತೂ ಅವಳು ಬಂಗಾರದ ಭ್ರಮೆಯಲ್ಲಿ ಹಿಗ್ಗಿದ ದೃಶ್ಯದಲ್ಲಿ ನನ್ನ ಬಿಡುಗಡೆಯ ಮುನ್ಸೂಚನೆ ಕಂಡಂತಾಗಿ ನಾನು ವ್ರತದ ಈ ವೇಷವನ್ನು ತೊಟ್ಟು, ನನ್ನ ಕೆಲಸಗಳನ್ನೆಲ್ಲ ಮುಂದೆ ಹಾಕಿ, ಮೂರು ತಿಂಗಳಿಂದ ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಅಲೆಯುತ್ತ, ಮನಸ್ಸು ತಣಿಯದಿದ್ದಾಗ, ನಿನ್ನ ಬಗ್ಗೆ ವರದಿ ಓದಿದ್ದೆ. ಮತ್ತೇನೋ ಬಿಡುಗಡೆಯ ಭರವಸೆ ಹುಟ್ಟಿತ್ತು. ನೀನು ಆಶ್ರಮ ಮಾಡಿಕೊಂಡು ಇರುವ ಜಗತ್‍ಪ್ರಸಿದ್ಧವಾದ ಮದ್ರಾಸಿನ ಹತ್ತಿರದ ನಿನ್ನ ಹಳ್ಳಿಗೆ ಒಮ್ದು ವಾರದ ಹಿಂದೆ ಬಂದೆ.

ಅದೆಷ್ಟು ಜನ. ಅದೇನು ಸಂಭ್ರಮ. ಎಲ್ಲೆಲ್ಲೂ ನಿನ್ನ ಬಣ್ಣ ಕಟ್ಟಿದ ಚಿತ್ರಗಳು, ನಿನ್ನ ಚಿತ್ರಗಳಿದ್ದ ಬಟ್ಟೆಗಳು, ನಿನ್ನ ಚಿತ್ರಗಳಿದ್ದ ಸ್ಟಿಕರ್ಸ್, ನಿನ್ನ ಚಿತ್ರಗಳಿದ್ದ ತಟ್ಟೆಗಳು – ನಿನ್ನ ಆಶ್ರಮದ ಹೊರವಲಯ ಒಂದು ಆಧುನಿಕ ಸೂಪರ್ ಮಾರ್ಕೆಟ್ಟಾಗಿ ಕಂಡಿತು. ನಿರಾಸೆಯಾಯಿತು. ಕುತೂಹಲವೂ ಆಯಿತು. ನಿನ್ನನ್ನು ನೋಡಬಂದವರಿಗೆ ಅವರವರ ಅಂತಸ್ತಿಗೆ ತಕ್ಕಂತಹ ಛತ್ರದ ರೂಮುಗಳೂ ಇದ್ದವು. ಆದರೆ ನಿನ್ನ ಮಹತ್ವದಿಂದಾಗಿಯೇ ಸಮುದ್ರ ತೀರದ ಆ ಹಳ್ಳಿಯಲ್ಲಿ ಎದ್ದುನಿಂತ ಟೂರಿಸ್ಟ್ ಹೋಟೆಲೊಂದರಲ್ಲಿ ಇಳಿದುಕೊಂಡೆ. ನನ್ನಂತೆಯೇ ನಿನ್ನನ್ನು ನೋಡಲು ಬಮ್ದ ಹಲವು ಫಾರಿನ್ ಟೂರಿಸ್ಟರೂ ಅಲ್ಲಿ ಉಳಿದಿದ್ದರು.

ನೀನು ಒಂದು ನಿಮಿಷ ಕಾಲ ಪ್ರತಿಯೊಬ್ಬನನ್ನೂ ಖಾಸಗಿಯಾಗಿ ನೋಡುವುದೆಂದರೂ, ಹತ್ತು ಗಂಟೆಗಳ ಕಾಲ ನೀನು ನಿನ್ನ ಮಂದಾಸನದಲ್ಲಿ ಭಗವತಿಯಂತೆ ಕೂತಿದ್ದರೆ ಸುಮಾರು ಆರುನೂರು ಜನರನ್ನು ಮಾತ್ರ ನೋಡಬಹುದು. ನನ್ನ ಟೀವಿ ಖ್ಯಾತಿಯನ್ನು ಎಲ್ಲರಿಂದ ಮುಚ್ಚಿಟ್ಟುಕೊಂಡ ನಾನು ನಿನ್ನ ಅಧಿಕಾರಿಗಳಿಗೆ ಮಾತ್ರ ಹೇಳಿಕೊಂಡು ಮೂರುದಿನಗಳ ನಂತರದ ಭೇಟಿ ಮಾಡುವ ಭಾಗ್ಯವಂತನಾದೆ. ಅರ್ಧ ನಿಮಿಷದ ದರ್ಶನದ ಒಂದು ಕಿಲೋಮೀಟರಿನ ಕ್ಯೂ ಮುಗಿದ ನಂತರದ, ವಿಐಪಿಗಳಿಗಾಗಿ ಇದ್ದ ಒಂದು ನಿಮಿಷದ ದರ್ಶನದ ಪುಟ್ಟ ಕ್ಯೂನಲ್ಲಿ ನಿಂತು, ನನ್ನ ನೆವದಲ್ಲಿ ಬಿಡುಗಡೆ ಪಡೆದ ನಿನ್ನ ಮುಖದರ್ಶನ ಮಾಡಲು ಮತ್ತೆ ಕಾದೆ. ನಿರೀಕ್ಷೆಯಲ್ಲಿ, ಆತಂಕದಲ್ಲಿ, ಅನುಮಾನದಲ್ಲಿ.

ಅರ್ಧ ನಿಮಿಷದ ಕ್ಯೂನವರು ನಿನ್ನ ಸ್ವಹಸ್ತದಿಂದ ತಲೆ ಮುಟ್ಟಿಸಿಕೊಳ್ಳುವಷ್ಟು ಮಾತ್ರ ಭಾಗ್ಯಶಾಲಿಗಳು. ಆದರೆ ಒಂದು ನಿಮಿಷದ ಕ್ಯೂನವರು ನಿನ್ನಿಂದ ಅಪ್ಪಿಸಿಕೊಳ್ಳುವಷ್ಟು ಪುಣ್ಯವಂತರು. ಅಲ್ಲಿರುವ ಯಾತ್ರಿಕರ ಬೆರಗಿನ ಕಥೆಗಳಿಂದ ನಾನೊಂದು ಮಾತು ಕೇಳಿದ್ದೆ. ಯಾರ ಭಕ್ತಿ ಪರಿಶುದ್ಧವಾಗಿರುತ್ತದೋ, ಯಾರು ಭವದ ಕಲ್ಮಷ ಕಳೆದುಕೊಳ್ಳುವಷ್ಟು ಕರ್ಮವನ್ನೆಲ್ಲ ಸವೆಸಿಬಿಟ್ಟು ಬಿಡುಗಡೆಯ ತುದಿಗಾಲಿನಲ್ಲಿ ನಿಂತಿರುತ್ತಾರೋ, ಅವರನ್ನು ನೀನು ತಬ್ಬಿದಾಗ ನಿನ್ನ ಮೊಲೆಯಲ್ಲಿ ಹಾಲು ಕಾಣಿಸಿಕೊಳ್ಳುವುದಂತೆ. ಅದನ್ನು ನೀನವರ ಕಣ್ಣಿಗೆ ಒತ್ತುತ್ತೀಯಂತೆ. ಸುಪ್ರೀಂ ಕೋರ್ಟಿನ ಮುದಿ ಜಡ್ಜ್ ಒಬ್ಬರಿಗೆ ನಿನ್ನ ಎದೆ ಹಾಲು ದೊರೆತು, ಅವರು ಎಲ್ಲವನ್ನೂ ಬಿಟ್ಟುಕೊಟ್ಟು ನಿನ್ನ ಸಂಸ್ಥೆಯ ಮುಖ್ಯ ಅಧಿಕಾರಿಗಳಲ್ಲಿ ಒಬ್ಬರಾಗಿ ಬಿಟ್ಟಿದ್ದಾರಂತೆ.

ನನ್ನ ಎದುರಿನವರ ನಿಮಿಷ ನಿಮಿಷ ದರ್ಶನದ ಭಾಗ್ಯವನ್ನು ವಾಚು ನೋಡಿಕೊಂಡು ಎಣಿಸುತ್ತ, ನನ್ನ ಸರದಿಗಾಗಿ ತವಕಿಸುತ್ತ, ಹತ್ತಿರವಾಗುತ್ತ, ಆಗುತ್ತ, ನಿನ್ನನ್ನು ಇಣುಕಿಯಾದರೂ ನೋಡುತ್ತಿರಬೇಕೆಂದುಕೊಂಡರೆ ತೀರ ಹತ್ತಿರವಾಗುವ ತನಕ ನೀನು ಕಾಣಿಸದಂತೆ ವಕ್ರವಾದ ರೇಖೆಗಳಲ್ಲಿ ಈ ಕ್ಯೂವನ್ನು ನಿನ್ನ ಅಧಿಕಾರಿಗಳು ನಿಲ್ಲಿಸಿರುತ್ತಾರೆ. ನಿನ್ನನ್ನು ಕಾಣುವುದೊಂದು ಹಠಾತ್ತನೆ ದೊರಕುವ ಅನುಭವದಂತಿರಬೇಕೆಂಬುದು ಅವರ ಯೋಜನೆಯೆಂದು ಕಾಣುತ್ತದೆ.

ಟೀವಿಯಲ್ಲಿ ಏನನ್ನು, ಯಾವಾಗ, ಎಷ್ಟು ಹಠಾತ್ತನೆ ಎಂಬಂತೆ ತಂದು ಪ್ರೇಕ್ಷಕರ ಆಸಕ್ತಿ ಉಳಿಸಿಕೊಳ್ಳಬೇಕೆಂಬುದರಲ್ಲಿ ನಿಷ್ಣಾತನಾದ ನಾನು ಕ್ರಮೇಣ ನನ್ನ ಆಸಕ್ತಿ ಕಳೆದುಕೊಂಡಿದ್ದೆ. ಇಂಥ ಉಪಾಯಗಳಿಂದ ನಾನು ರೋಸಿ ಹೋಗಿ ನಿನ್ನನ್ನು ಹುಡುಕಿಕೊಂಡು ಬಂದದ್ದಲ್ಲವೆ? ಕಾಮಕೇಳಿಯಲ್ಲಿ ಕಲಾವಿದರಾಗಿ ಬಿಟ್ಟವರೂ ಕೂಡ ಈ ಹಂತದ ಆಕ್ರಮಣದ ಕಲೆಯನ್ನು ಡೆಲಿಬರೇಟಾಗಿ ಬಳಸುತ್ತಾರಲ್ಲವೆ?

ನಿನ್ನನ್ನು ಸುಮ್ಮನೆ ನೋಡಿದೆ. ಅಷ್ಟು ಜನರನ್ನು ಮುಟ್ಟಿ ತಬ್ಬಿದರೂ ನೀನು ಸುಸ್ತಾಗಿದ್ದಂತೆ ಕಾಣಲಿಲ್ಲವೆಂದು ಬೆರಗಾಯಿತು. ನನ್ನನ್ನೂ ತಬ್ಬಿದಿ. ಆದರೆ ನಿನ್ನ ಮೊಲೆಯಲ್ಲಿ ಹಾಲು ಬರಿಸುವಷ್ಟು ಪುಣ್ಯವಂತ ನಾನಾಗಿರಲಿಲ್ಲ. ನಿನ್ನ ಕಣ್ಣುಗಳಲ್ಲಿ ಆ ಹಿಂದಿನ ತುಂಟತನ ಉಳಿದುಬಿಟ್ಟದ್ದನ್ನು ಕಂಡಿದ್ದೆನಲ್ಲವೆ?; ಆದರೂ ನೀನು ಹೊರಳಿಬಿಟ್ಟೆಯ? ಹೇಗೆ?; ಹೊರಳಿಕೊಂಡ ಮೇಲೂ ನಮ್ಮ ನಮ್ಮ ಭವದಲ್ಲಿ ನಾವು ಇರುವುದಲ್ಲವೆ?; ನೀನು ಇನ್ನೂ ಉಚ್ಚೆ ಹೊಯ್ಯುತ್ತಿ ಅಲ್ಲವೆ? – ಹೀಗೆ ಏನೇನೋ ನಾನು ಅನುಮಾನಿಸುತ್ತಿದ್ದಾಗ ನೀನು ನನ್ನ ತಬ್ಬಿದಿ.

ದಿವ್ಯವಾದ, ಎಷ್ಟು ಮುಟ್ಟಿದರೂ ಹಳಸದ ಪ್ರೇಮದಲ್ಲಿ ನನ್ನನ್ನು ತಬ್ಬಿದಿ. ಇದರಿಂದ ನನಗೆ ಬೆರಗಾಯಿತು. ಮತ್ತೆ ನನ್ನ ಬೆನ್ನಿಗಿದ್ದ ಇನ್ನೊಬ್ಬನನ್ನೂ ಹಾಗೆಯೇ ತಬ್ಬಿದಿ. ಆದರೆ ನಾನು ಮಾತ್ರ ನಿನಗಿರುವುದೆಂದು ನಾನು ಆ ಕ್ಷಣದಲ್ಲಿ ಭಾವಿಸುವಂತೆ ಮಾಡಿದ್ದಿ. ಅವನು ಮಾತ್ರ ನಿನಗಿರುವುದೆಂದು ಅವನು ಭಾವಿಸುವಂತೆಯೂ ಮಾಡಿದ್ದಿ. ಇದು ಕೂಡ ಹೇಗೆ ನಿನಗೆ ದಿನ ದಿನವೂ ಬೇಸರ ತರದಂತೆ ಉಳಿದ ಕಲೆಯಾಗಿರಬಹುದು ಎಂದು ಮತ್ತೆ ಯೋಚಿಸಿದೆ. ಇರಲಿ. ಕೂತೇ ಇರಬೇಕಾಗಿಬಂದ ನೀನು, ಪಾಪ, ನಿನ್ನ ವಯಸ್ಸಿಗೂ ಹೆಚ್ಚಾಗಿ ತೋರವಾಗಿ ಬಿಟ್ಟಿದಿ ಎಂದೂ ಎನ್ನಿಸಿತ್ತು.

ನಿನ್ನನ್ನು ನೋಡಿಯಾದ ಮೇಲೆ ನನಗೆ ಅಮ್ಮನಂತಾಗಿಬಿಟ್ಟಿದ್ದ ಸೀತಮ್ಮನನ್ನೂ, ನಾನು ವೈರಾಗ್ಯದಲ್ಲಿ ದಂಡಿಸಲು ಪ್ರಯತ್ನಿಸುತ್ತಿರುವ ಈ ದೇಹಕ್ಕೆ ತನ್ನ ರುಚಿಯೇನು ಎಂಬುದನ್ನು ಗುಪ್ತವಾಗಿ ತೋರಿಸಿಕೊಟ್ಟವಳಾದ ಗಂಗೂಬಾಯಿ ಎಂಬುವಳನ್ನೂ ನೋಡಲೆಂದು ಹೊರಟವನಿಗೆ ಶಾಸ್ತ್ರಿಗಳೆಂಬ ವೃದ್ಧರ ಪರಿಚಯವಾಯಿತು. ಕುಟ್ಟವಲಕ್ಕಿ ತಿನ್ನಿಸಿ ಅವರು ನನಗೆ ಯಾವುದೋ ಪೂರ್ವ ಜನ್ಮದ ಬಂಧುವಿನಂತಾಗಿಬಿಟ್ಟರು.

ಪ್ರಿಯ ಮಹಾಮಾತೆ, ನಾನೂ ನಾರಾಯಣನೂ ಒಟ್ಟಾಗಿ ಪ್ರೀತಿಸಿದ್ದ ಗಂಗೂಗೆ ಹುಟ್ಟಿದ ಮಗ ನನ್ನವನೋ? ಅವನು ವೈರಾಗ್ಯವಶನಾಗಿ ಸರ್ವಸಂಗ ಪರಿತ್ಯಾಗದ ಹವಣಿಕೆಯಲ್ಲಿದ್ದಾನಂತೆ – ಈಗ ನಾನೇನು ಮಾಡಬೇಕು? ಹೇಳು. ಈ ಭವದಿಂದ ನನಗೆ ಮುಕ್ತಿಯಿದೆಯೆ ಹೇಳು? ಅಥವಾ ಅಂಥ ಮುಕ್ತಿಯ ಬಯಕೆ ಹುಟ್ಟಾ ಅನುಮಾನಿಯಾದ ನನಗೆ ಕೇವಲ ಕುತೂಹಲದ್ದೋ ಹೇಳು. ನಿನಗೆ ನನ್ನಿಂದ ಆದದ್ದು ನಿಜವಾದರೆ, ನನಗೆ ಯಾಕೆ ಅದು ನಿನ್ನಿಂದ ಆಗಲಿಲ್ಲ? ಹೇಳು.

ಪ್ರಿಯ ಮಹಾಮಾತೆ, ಜಗತ್ತಿನ ಉದ್ಧಾರದ ಹವಣಿಕೆಯ ನಿನಗೆ ಇಂಥ ಪ್ರಶ್ನೆಗೆ ಉತ್ತರ ಕೊಡಲು ಎಲ್ಲಿ ಸಮಯ ಸಿಕ್ಕೀತು, ಹೇಳು.

ನನ್ನ ಹೆಸರನ್ನು ತೊರೆದು ಸದ್ಯ ಸ್ವಾಮಿಯಾದ
ನನ್ನ ತಾಯಿಯ ಪುಟಾಣಿ

– ಎಂದು ಕಾಗದ ಮುಗಿಸಿದ. ಸುಸ್ತಾಗಿತ್ತು. ನಿದ್ದೆ ಹೋದ.