ಎಲ್ಲೂ ನಿಲ್ಲಲಾರದಂತೆ ಚಡಪಡಿಸುತ್ತಿದ್ದ ಶಾಸ್ತ್ರಿಗಳು ರಾಧೆ ಮಲ್ಲಿಗೆಯನ್ನು ಬಾಳೆಯ ನಾರಿನಲ್ಲಿ ಹೆಣೆಯುವುದನ್ನು ನೋಡಿ, “ಸರೋಜ ಮಲ್ಲಿಗೆ ಕಟ್ಟುವಾಗ ಅದೆಷ್ಟು ಮಗ್ನಳಾಗಿ ಇರುತ್ತಿದ್ದಳು. ಹಾಡುವಾಗಂತೂ ಅವಳು ಸಾಕ್ಷಾತ್ ದೇವಿಯಂತೆ ಕಾಣುತ್ತಿದ್ದಲು” ಎಂದು ನಿಟ್ಟುಸಿರಿಟ್ಟರು. ಮತ್ತೆ ಅಂಗಳದಲ್ಲಿ ಸುತಾಡುತ್ತ, “ಮಹಾದೇವಿ ತನ್ನ ಮಗಳನ್ನು ಕಂಡು ಮನಸ್ಸು ತಣಿದರೆ ಸಾಕೆನ್ನಿಸುತ್ತೆ” ಎಂದರು. ರಾಧೆ ಹೂವು ಕಟ್ಟುವುದನ್ನು ನಿಲ್ಲಿಸಿ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸತೊಡಗಿದಳು: ‘ಭಗವಂತ, ನಾನು ಕಾಯುತ್ತಿದ್ದ ಕ್ಷಣ ಈಗಲೆ ಬಂದು ಬಿಡಲಪ್ಪ’.

ಆ ದಿನ ಪ್ರಾತಃಕಾಲ ಎಳೆಬಿಸಿಲು ಆಗ ಈಗ ಕಾಣಿಸಿಕೊಳ್ಳುತ್ತ ಹವಾ ಹಿತವಾಗಿತ್ತು. ಸೂರ್ಯನ ಸವಾರಿ ಮುಗಿಲಿನ ಮೇಲೆ ನಡೆದಿತ್ತು. ಗುಡಿಸಿ ಸಾರಿಸಿದ ಅಂಗಳ ತಂಪಾಗಿತ್ತು.

ಶಾಸ್ತ್ರಿಗಳು ಮತ್ತೆರಡು ಸುತ್ತು ಬಂದು “ರಾಧೆ” ಎಂದರು. ಸ್ವಲ್ಪ ಸುಮ್ಮನಿದ್ದು ತನ್ನ ಕೈಯನ್ನು ಬೆನ್ನಿಗೆ ಕಟ್ಟಿ ನಿಂತು,

“ಅವನು ನನ್ನ ಮಗನ? ನನ್ನ ಮಗ ಆದರೂ ಅವನು ನನ್ನನ್ನು ಅಪ್ಪ ಎಂದುಕೊಳ್ಳುವವನ ? ಅವನು ತನ್ನ ತಂದೆಯನ್ನು ದೇವರಲ್ಲಿ ಹುಡುಕುತ್ತಿರುವ ಸಾಧಕನಂತೆ ಕಾಣುತ್ತಾನೆ. ಅವನು ಹುಡುಕುವುದು ಸಿಗಲಿ ಎಂದು ತಂದೆಯೆಂದುಕೊಂಡ ನಾನು ದೇವರಲ್ಲಿ ಪ್ರಾರ್ಥಿಸಬಹುದು ಅಷ್ಟೆ. ಅವನು ನನ್ನ ಮಗ ಹೌದೋ ಅಲ್ಲವೋ? ಅಂತೂ ಅವನು ನನಗೆ ಇನ್ನೊಂದು ಜನ್ಮ ಕೊಡುವವನಂತೆ ಕಾಣುತ್ತಾನೆ. ದೇವರ ಕೃಪೆಯಿಂದ ನಾನು ಮತ್ತೆ ಹುಟ್ಟಿದಂತೆ ಎನ್ನಿಸಿ ನನ್ನ ಒಳಗಿನ ಚೀರಾಟ ನಿಂತೀತು”.

* * *

ರಾಧೆ ಗಳಗಳನೆ ಅಳುತ್ತ ತಾನು ಬಚ್ಚಿಟ್ಟಿದ್ದ ಸತ್ಯವನ್ನು ಹೇಳುತ್ತ ಶಾಸ್ತ್ರಿಗಳನ್ನು ಅರಳಿಸುತ್ತ ಹೋದಳು.