ಶಾಸ್ತ್ರಿಗಳು ಶ್ರೀಮಂತ ಜಮೀನುದಾರರಾದ್ದರಿಂದ ಮಗಳನ್ನು ಮಂಗಳೂರಿನ ಕಾಲೇಜೊಂದರಲ್ಲಿ ಒದಲು ಬಿಟ್ಟಿದ್ದರು. ಓದಿನಲ್ಲಿ ಜಾಣೆಯಾದ ಹುಡುಗಿ, ಒಳ್ಳೆಯ ಕಾಲೇಜಲ್ಲೇ ಓದಲಿ ಎಂದು ಅವರ ಆಶಯ. ಯಾರಾದರೂ ಸಂಬಂಧಿಗಳ ಮನೆಯಲ್ಲಿ ಬಿಡಬೇಕು ಎಂಬ ಮಗಳ ಶೀಲ ಕಾಯುವ ತಾಯಿಯ ಆತಂಕವನ್ನು ಶಾಸ್ತ್ರಿಗಳು ಒರಟಾಗಿ ಧಿಕ್ಕರಿಸಿದ್ದರು. ಅದಕ್ಕೆ ಕಾರಣ ತನ್ನವರು ಎಂದುಕೊಳ್ಳಬಹುದಾದ ಯಾವ ಸಂಬಂಧಿಯೂ ಶಾಸ್ತ್ರಿಗಳಿಗೆ ಇರಲಿಲ್ಲ. ಹಾಗಾಗಿ ಮಗಲನ್ನು ಹಾಸ್ಟೆಲಲ್ಲಿ ಬಿಟ್ಟಿದ್ದರು. ಈ ಸ್ವಾತಂತ್ರ್ಯದ ಪರಿಣಾಮ: ಆವಳಿಗೆ ಡಿಬೇಟುಗಳಲ್ಲಿ ಸೊಗಸಾಗಿ ಮಾತಾಡುವ ಹುಡುಗನೊಬ್ಬ ಸ್ನೇಹಿತನಾಗಿಬಿಟ್ಟದ್ದು. ಅವಳೂ ಡಿಬೇಟುಗಳಲ್ಲಿ ನಿಷ್ಣಾತಳಾದ ದಿಟ್ಟ ಹುಡುಗಿಯೇ. ಡಿಬೇಟಿನ ಹುಚ್ಚಿನಲ್ಲೇ ಅವಳಿಗೆ ರಾಜಕೀಯ ಸಂಗತಿಗಳ ಹುಚ್ಚೂ ಹಿಡಿದದ್ದು. ಬಡವರ ಮನೆಯಲ್ಲಿ ಹುಟ್ಟಿ ಸ್ಕಾಲರ‍್ಶಿಪ್ ಪಡೆಯುವಷ್ಟು ಜಾಣನಾಗಿ ಎಂಜಿನಿಯರಿಂಗ್ ಓದುತ್ತಿದ್ದ ಈ ಹುಡುಗ ಜಾತಿಯಲ್ಲಿ ಮಲೆನಾಡು ಕಡೆಯ ಹಳೆಪೈಕದವನಾಗಿದ್ದ. ಗಡ್ಡ ಬೆಳೆಸಿ ಜುಬ್ಬ ಪೈಜಾಮದಲ್ಲಿರುತ್ತಿದ್ದ ಸ್ಫುರದ್ರೂಪಿಯಾದ ಹುಡುಗ ಅವನು.

ತನ್ನ ಹೆಸರನ್ನು ತಿಮ್ಮಯ್ಯ ಎನ್ನುವುದರಿಂದ ಚಾರ್ವಾಕ ಎಂದು ಬದಲಾಯಿಸಿಕೊಂಡು ಎಲ್ಲರ ಗಮನಕ್ಕೂ ಅವನು ಪಾತ್ರನಾಗಿದ್ದ. ತನ್ನನ್ನು ಎಲ್ಲರೂ ಗಮನಿಸಲೇಬೇಕಾದಂತೆ ವರ್ತಿಸುವುದು ಅವನಿಗೆ ಚಟವಾಗಿ ಬಿಟ್ಟಿತ್ತು. ಜಮೀಂದಾರಿಕೆ ಖಂಡನೆ, ಜಾತಿಪದ್ಧತಿಯ ಖಂಡನೆ ಇತ್ಯಾದಿಗಳನ್ನು ಅವನು ಹೊಸ ಶಬ್ದಗಳಲ್ಲಿ ಮಾಡಬಲ್ಲವನಾಗಿದ್ದ. ರಾಧೆಗೆ ಅದನ್ನೆಲ್ಲೆ ವಿವರಿಸಲು ತಿಳಿಯದು. ಅವನು ಕಮ್ಯುನಿಸ್ಟಾಗಿಬಿಟ್ಟು ಅದಕ್ಕೂ ಮುಂದೆ ಹೋಗಿಬಿಟ್ಟಿದ್ದ ಎಂದವಳಿಗೆ ಮಂಗಳೆಯಿಂದಲೇ ಗೊತ್ತಾದ್ದು.

ಶಾಸ್ತ್ರಿಗಳ ಮಗಳು ಮಂಗಳೆಗೆ ಅವನ ವಿಚಾರಗಳು ಆಕರ್ಷಕವಾಗಿದ್ದವು. ತನ್ನ ತಂದೆಯ ಬಗ್ಗೆ ಅವಳಲ್ಲಿ ಬೆಳೆಯುತ್ತ ಹೋಗಿದ್ದ ಅಸಮಾಧಾನಕ್ಕೆ ಚಾರ್ವಾಕನ ವಿಚಾರಗಳಿಂದ ಒಂದು ಹೊಸ ಆಯಾಮ ಸಿಕ್ಕಂತಾಗಿತ್ತು. ಮನೆಗೆ ಬಂದಾಗ ತಾಯಿ ಒತ್ತಾಯಿಸಿದರೂ ಅವಳು ದೇವರಿಗೆ ನಮಸ್ಕಾರ ಮಾಡಳು. ಬ್ರಾಹ್ಮಣರೆಲ್ಲರೂ ಜಿಗಣೆಗಳು ಇದ್ದಂತೆ ಎಂದು ವಾದಿಸುವಳು. ಅವಳು ವಿಚಾರಗಳು ತಂದೆಗೆ ಗೊತ್ತಾಗದಂತೆ ಮಹಾದೇವಿಯೂ, ರಾಧೆಯೂ ನೋಡಿಕೊಂಡಿದ್ದರು.

ಮಂಗಳೆಯ ಮನಸ್ಸಿನಲ್ಲಾಗುತ್ತಿದ್ದ ಪರಿವರ್ತನೆಯಿಂದಾಗಿ ಅವಳು ರಾಧೆಗೆ ಹತ್ತಿರವಾಗುತ್ತ ಹೋದಳು. ರಾಧೆಯ ಮನೆಯಲ್ಲಿ ತಾನು ಗಂಜಿಯನ್ನು ಯಾಕೆ ಉಣ್ಣಬಾರದೆಂದು ಹಠ ಹಿಡಿಯುವಳು. ರಾಧೆ ಅದಕ್ಕೆ ಒಲ್ಲಳು. ಆದರೆ ಒಲ್ಲೆ ಎಂದೂ ಹೇಳಲಾರಳು. ಮಂಗಳೆ ತನ್ನ ಪ್ರೇಮವನ್ನು ರಾಧೆಗೆ ಹೇಳಿಕೊಂಡಿದ್ದಳು. ‘ನಮಗೆ ಮದುವೆಯಲ್ಲಿ ನಂಬಿಕೆಯಿಲ್ಲ. ನಾವಿಬ್ಬರೂ ಒಟ್ಟಾಗಿ ಗುಪ್ತವಾಗಿ ಜನರನ್ನು ಸಂಘಟಿಸಿ ಕ್ರಾಂತಿ ಮಾಡುತ್ತೇವೆ’ ಎಂದು ಮಂಗಳೆ ಹೇಳಿದರೆ, ಮೊದಮೊದಲು ರಾಧೆ ನಂಬಿರಲಿಲ್ಲ. ಆದರೆ ಹುಚ್ಚು ಹುಡುಗಿ ನಿಜವಾಗಿಯೂ ತನ್ನ ವಿಚಾರಕ್ಕೇ ಗಂಟು ಬಿದ್ದಿದ್ದಾಳೆ ಎಂದವಳಿಗೆ ಮನದಟ್ಟಾಗತೊಡಗಿತು. ಮಂಗಳೂರಿನ ಎಲ್ಲ ಹುಡುಗಿಯರಂತೆ ಅವಳು ಇರಲಿಲ್ಲ; ಅವಳಿಗೆ ಇಡವೆ, ವಸ್ತ್ರಗಳಲ್ಲಿ ಏನೇನೂ ಆಸೆಯಿರಲಿಲ್ಲ, ಆಸೆಪಟ್ಟವರನ್ನು ಅವಳು ಹೀಯಾಳಿಸುತ್ತಿದ್ದಳು. ರಾಧೆಗೆ ಅವಳ ಎದುರು ಬಂಗಾರದ ಬಳೆ ತೊಟ್ಟಿರುವುದೂ ಅವಮಾನಕರವೆಂಬಂತೆ ಮಾಡಿದ್ದಳು.

ಅವಳು ಉಡುತ್ತಿದ್ದುದು ಸಾದಾ ಬಿಳಿ ಸೀರೆ, ಬಿಳಿಯ ಕುಪ್ಪಸ. ಕತ್ತಿನಲ್ಲಿ ಒಂದು ಸರವನ್ನಾಗಲೀ, ಕಿವಿಯಲ್ಲಿ ಬೆಂಡೋಲೆಯನ್ನಾಗಲೀ ಅವಳು ತೊಡಳು. ಒಂದು ದಿನ ವಾದಕ್ಕೆ ವಾದ ಬೆಳೆದು, “ಬಸುರಿಯಾಗಿದ್ದ ತನ್ನ ಹೆಂಡತಿಯನ್ನು ಜಪ್ಪಿ ಸಾಯಿಸಿದ ನನ್ನ ಕೊಲೆಗಡುಕ ತಂದೆಯ ಜೊತೆ ಯಾಕೆ ಸಂಬಂಧವಿಟ್ಟುಕೊಂಡಿದ್ದೀರಿ. ಮೊದಲು ನಿಮ್ಮಂಥವರ ಬಿಡುಗಡೆಯಾಗಬೇಕು” ಎಂದು ನಿಷ್ಠುರವಾಗಿ ಅವಳು ಅಂದು ಬಿಟ್ಟಳು. ಅಪ್ಪನ ಹಾಗೆಯೇ ಮಗಳು ಮಹಾನಿಷ್ಥುರಿ, ಕೆಟ್ಟ ನಾಲಗೆಯ ಹಠಮಾರಿ ಎಂದುಕೊಂಡು ರಾಧೆ ಸುಮ್ಮನಾಗಿ ಬಿಟ್ಟಿದ್ದಳು. ಅವಳು ಅಂದದ್ದನ್ನು ದುಡುಕು ಮನುಷ್ಯನಾದ ಶಾಸ್ತ್ರಿಗಳಿಗೆ ಹೇಳದೆ ಹೊಟ್ಟೆಯಲ್ಲಿಟ್ಟುಕೊಂಡಿದ್ದಳು. ತನಗೆ ದಾತಾರರಾದವರ ಮನೆಯಲ್ಲಿ ರಾಧೆಗೆ ಯಾರು ಬೇಕು? ಯಾರು ಬೇಡ?

ಇಬ್ಬರೂ ಕಾಲೇಜನ್ನು ತೊರೆದು ಓಡಿಹೋಗಿಯಾದ ಮೇಲೆ ಆರು ತಿಂಗಳ ಕಾಲ ಎಲ್ಲೆಲ್ಲಿ ಇದ್ದರೊ? ಅದೇನು ಕಡಿದರೊ ತಿಳಿಯದು. ಚಾರ್ವಾಕ ಶಿವಮೊಗ್ಗೆಗೆ ಬಮ್ದು ಒಂದು ಗ್ಯಾರೇಜಿನಲ್ಲಿ ಕಾರುಗಳನ್ನು ರಿಪೇರಿ ಮಾಡುವ ಕೆಲಸಕ್ಕೆ ನಿಂತ. ತಮ್ಮ ಹೊಟ್ಟೆಗೆ ಅವನ ದುಡಿಮೆ ಏನೇನೂ ಸಾಲದಾಗಿ ಹೋದಾಗ ಮಂಗಳೆ ರಾಧೆಗೆ ಕಾಗದ ಬರೆದಿದ್ದಳು. ‘ನಾವು ಎಲ್ಲೆದ್ದೇವೆ ತಂದೆಗೆ ತಿಳಿಸಬೇಡ. ಶೂದ್ರನೆಂದು ನನ್ನ ಗಂಡನನ್ನು ಅವರು ಕೊಂದರೂ ಕೊಂದರೆ. ನಿನಗೆ ಇಷ್ಟವಾದರೆ, ಕಷ್ಟವಾಗದಿದ್ದರೆ ನನಗೆ ಒಂದಷ್ಟು ಹಣ ಕಳುಹಿಸು. ಕ್ರಾಂತಿ ಚಿರಾಯುವಾಗಲಿ’ ಎಂದು.

ರಾಧೆ ಪ್ರತಿ ತಿಂಗಳೂ ಒಂದು ಸಾವಿರಕ್ಕೆ ಕಡಿಮೆಯಿಲ್ಲದಂತೆ ಹಣ ಕಳುಹಿಸಲು ತೊಡಗಿದಳು.

ಕೆಲವು ತಿಂಗಳುಗಳಾದ ಮೇಲೆ ಒಡಕು ಸ್ವರದ ಪತ್ರಗಳು ಬರಲು ತೊಡಗಿದವು. ಎಲ್ಲ ಗಂಡಹೆಂಡಿರ ಸಹಜ ವಿರಸದಂತೆ ರಾಧೆಗೆ ಅದು ಕಂಡಿತು. ಆದರೆ ಮಂಗಳೆಗೆ ‘ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ’ ಎಂದು ಕಾಣಿಸಲಿಲ್ಲ. ಎಲ್ಲ ಕ್ರಾಂತಿಕಾರಕ ಚಟುವಟಿಗಳಲ್ಲಿ ಅಂತರ್ಗತವಾದ ಬಿಕ್ಕಟ್ಟಾಗಿ — ಅದು ಕಂಡಿತ್ತು. ತನಗೆ ಅಂಥ ಮಾತುಗಳು ಅರ್ಥವಾಗದಿದ್ದರೂ, ತನಗೆ ಎಂಥ ಮಾತುಗಳನ್ನಾದರೂ ಹೇಳಬೇಕೆಂಬ ಮಂಗಳೆಯ ಆರ್ತತೆಯಿಂದ ರಾಧೆಗೆ ಖುಷಿಯಾಗಿತ್ತು.

‘ಚಾರ್ವಾಕ ಹೊತ್ತಿಗೆ ಸರಿಯಾಗಿ ಮನೆಗೆ ಬರುವುದಿಲ್ಲ. ಕುಡಿಯಲಿಕ್ಕೆ ಕಲಿತುಬಿಟ್ಟಿದ್ದಾನೆ. ನಿನ್ನಂಥ ಒಂದು ಹೆಣ್ಣನ್ನು ಕಟ್ಟಿಕೊಂಡು ಸಂಸಾರಿಯಾಗಬೇಕಾಗಿ ಬಂದು ತನ್ನ ಕ್ರಾಂತಿಗೆ ಅವಕಾಶವಾಗದೇ ಹೋಯಿತೆಂದು ಜಗಳವಾಡುತ್ತಾನೆ. ಆದರೆ ಅವನು ಕ್ರಾಂತಿಯ ನಿಜ ಸ್ವರೂಪ ತಿಲಿದಂತಿಲ್ಲ. ಗೃಹಿಣಿಯಾದ ಹೆಂಗಸಿಗೆ ಮಾತ್ರ ಕ್ರಾಂತಿಯ ನಿಜವಾದ ಅರ್ಥ ತಿಳಿದೀತು’ ಎಂದು ಬರೆದದ್ದಕ್ಕೆ ‘ನಿನ್ನ ಗಂಡನನ್ನು ಒಲಿಸಿಕೊಂಡು ಬಸುರಿಯಾಗಿ ಬಿಡು. ಆಗ ಎಲ್ಲ ಸರಿಹೋಗುತ್ತದೆ’ ಎಂದು ಇಂಥ ವಿಷಯಗಳಲ್ಲಿ ಘಾಟಿಯಾದ ರಾಧೆ ಬರೆದಿದ್ದಳು. ತನ್ನ ಕ್ರಾಂತಿಕಾರತೆಯ ವಿಚಾರ ಕೈಬಿಡದಂತೆ ಮಂಗಳೆ ರಾಧೆಯ ಹಿತವಚನ ಕೇಳಿರಬೇಕು.

“ಈಗ ನಮ್ಮ ಮಗಳು ಏಳು ತಿಂಗಳ ಬಸುರಿ, ನಿಮ್ಮ ಅಪ್ಪಣೆಯಾದರೆ ಕರೆದುಕೊಂಡು ಬಂದುಬಿಡುತ್ತೇನೆ. ತಾಯಿಯ ಮನೆಯಲ್ಲೇ ಅವಳಿಗೆ ಹೆರಿಗೆಯಾಗಿ ಬಿಡಲಿ. ಸಹಾಯಕ್ಕೆ ನಾನಿದ್ದೇನಲ್ಲವೆ?” ಎಂದು ತೋರಿಕೆಗೆ ಸಡಗರಪಡುತ್ತ, ಆದರೆ ಆತಂಕದಲ್ಲಿ ಕೇಳಿದಳು. “ನಿಮಗೆ ನಿಮ್ಮ ಅಳಿಯ ಬ್ರಾಹ್ಮಣನಲ್ಲವೆಂದು ಮಗಳನ್ನೇನೂ ದೂರಮಾಡಬೇಕಿಲ್ಲವಲ್ಲ. ಅಲ್ಲದೆ ಹುಟ್ಟಲಿರುವ ಕೂಸು ಅರಿಯದ್ದು. ಅದಕ್ಕೆ ಯಾವಜಾತಿ?” ಎಂದಳು. “ನಾನು ಶೂದ್ರಳಲ್ಲವ?” ಎಂದು ಕಿಚಾಯಿಸಿದ್ದಳು.

ಶಾಸ್ತ್ರಿಗಳು ಗಂಭೀರವಾಗಿ ಹೇಳಿದರು:

“ಕರೆದುಕೊಂಡು ಬಾ”.

ತನ್ನ ಮನಸ್ಸು ರಾಧೆಯ ಕೃಪೆಯಿಂದ ಸ್ಥಿಮಿತದಲ್ಲಿ ಉಳಿಯಲಿ ಭಗವತೀ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ ತನ್ನ ಶಾಪ ಕಳೆಯುವುದನ್ನು ನಿರೀಕ್ಷಿಸುತ್ತ,

“ಆ ದರಿದ್ರ ಹುಡುಗನಿಗೂ ಉಡುಪಿಯಲ್ಲಿ ಒಂದು ಗ್ಯಾರೇಜು ತೆಗೆಸಿಕೊಟ್ಟರಾಯಿತು. ನನ್ನ ಮಗಳು ದೂರವಿದ್ದುಬಿಟ್ಟರೆ ಯಾವ ಅಂಕೆ ಅಣತಿಯಿಲ್ಲದೆ ಅವನು ಕುಡಿದು ಕೆಟ್ಟುಹೋದಾನು” ಎಂದರು.

* * *

ಬಹಳ ಖುಷಿಯಲ್ಲೇ ಮಹಾದೇವಿ ಇದನ್ನೆಲ್ಲ ಹೇಳಿ, ಮೊಮ್ಮಗುವನ್ನು ತಮ್ಮ ಮನೆಯಲ್ಲಿ ಪಡೆಯಲು ಅಣಿ ಮಾಡುವುದೆಂದುಕೊಂಡು ಮನೆಗೆ ಬರುತ್ತಿದ್ದ ಶಾಸ್ತ್ರಿಗಳಿಗೆ ಹಠಾತ್ತನೆ ಹೀಗೂ ಎನ್ನಿಸಿತ್ತು:

‘ದಿನಕರ ನನ್ನ ಮಗನಲ್ಲದಿದ್ದರೆ ಆ ಟ್ರಂಕಿನಲ್ಲಿದ್ದ ಬಂಗಾರವೆಲ್ಲ ನನ್ನದೇ, ನನ್ನ ಮಗಳ ಮಗುವಿಗೆ ಸೇರಬೇಕಾದ ಆಸ್ತಿ ಅದು’.

‘ಹಾಗೆಲ್ಲ ನನಗೆ ಯೋಚನೆ ಬಾರದಂತೆ ನೋಡಿಕೋ ಭಗವತಿ’ ಎಂದು ಪ್ರಾರ್ಥಿಸುತ್ತ ಮನೆಯನ್ನು ಹೊಕ್ಕಿದ್ದೆ. ಎಂಬುದನ್ನು ತಮ್ಮ ಮನೋಕ್ಲೇಶದಿಂದ ಮುಂದೆ ಉಂಟಾಗುತ್ತಿದ್ದ ತಳಮಳಗಳಲ್ಲಿ ಶಾಸ್ತ್ರಿಗಳು ನೆನೆಯುತ್ತಿದ್ದರು.