ಅಯ್ಯಪ್ಪ ದರ್ಶನಕ್ಕಾಗಿ ಶಬರಿಮಲೆ ಬೆಟ್ಟ ಹತ್ತಿ ಇಳಿದದ್ದು ತನಗೊಂದು ಕೇವಲ ಪಿಕ್ನಿಕ್‍ನಂತಾಗಿ ಬಿಟ್ಟಿತೆಂದು ದಿನಕರನಿಗೆ ಆಶ್ಚರ್ಯವಾಗಿರಲಿಲ್ಲ. ಇಳಿದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದವನು ಉದ್ದೇಶಪೂರ್ವಕವಾದ ಸಾಧನೆಗೆ ಸಿಗುವುದಲ್ಲ ಅದು ಎಂದು ತನಗೇ ಹೇಳಿಕೊಂಡಿದ್ದ. ತಣ್ಣೀರು ಮಿಂದಿದ್ದ ತನ್ನ ಮೈಯನ್ನು ಖುಷಿಯಲ್ಲಿ ಒರೆಸಿಕೊಂಡು ಬೆಟ್ಟ ಹತ್ತುವ ಮುಂಚೆಯೇ ತಾನು ಕೊಂಡಿದ್ದ ಕೇರಳದ ಅಗಲವಾದ ಕೆಂಪು ಅಂಚಿನ ಪಂಚೆಯುನ್ನುಟ್ಟು, ಖಾದಿಯ ಬಿಳಿ ಅಂಗಿಯನ್ನು ತೊಡುತ್ತಿದ್ದಾಗ ನೆನಪಾಗಿತ್ತು.

ತನ್ನನ್ನು ಅಲ್ಲಾಡಿಸಿಬಿಟ್ಟಿದ್ದ ಮಂಗಳೂರಿನ ಚಳಿಗಾಲದ ಆ ಸಂಜೆ ಮುಂದಿನ ದಿನಗಳ ಕಳವಳಗಳಲ್ಲಿ ಮತ್ತೆ ಮತ್ತೆ ನೆನಪಾಗುವುದು ಇತ್ತು.

ಕೈಯಲ್ಲಿ ತಂಬೂರಿ ಮೀಟುತ್ತ ಪದ್ಮಾಸನ ಹಾಕಿ ಹಾಡುತ್ತ ಪ್ರಸಾದ ಕೂತಿದ್ದ. ತನ್ನ ತಂದೆ ಯಾರು, ತಾಯಿ ಯಾರು ಎಂದು ಕಂಡರಿಯದ ತನಗೆ ಅವನನ್ನು ಕಂಡ ಕ್ಷಣದಲ್ಲಿ ಇವನು ನನ್ನ ಮಗನಿರಬಹುದೆ ಎಂಬ ಕುತೂಹಲ ಹುಟ್ಟಿತ್ತು. ಆದರೆ ತನ್ನನ್ನು ಕ್ರಮೇಣ ಆವರಿಸುತ್ತ ಹೋದ ಭಾವ: ಅವನ ನೀಳವಾದ ಕಣ್ಣುಗಳು ಅರ್ಧ ನಿದ್ರೆಯಲ್ಲಿ ಎಂಬಂತೆ ಅರೆ ಮುಚ್ಚಿ ತನ್ಮಯವಾಗಿದ್ದವು ಎಂಬುದು. ಸಪುರವಾದ, ಆದರೆ ಬಲವಾದ ಸ್ನಾಯುಗಳ ಅವನ ದೇಹ ನಿಟ್ಟಗೆ ಧ್ಯಾನಸ್ಥವಾಗಿತ್ತು. ಸಂಜೆಯ ಕೋಮಲವಾದ ನೆರಳಿನಲ್ಲಿ, ಆಕಾಶಕ್ಕೆ ತೆರೆದುಕೊಂಡಿದ್ದ ಹೊರಾಂಗಣದಲ್ಲಿ ಕೂತವನು ಹರೆಯದ ಮುನಿಕುಮಾರನಂತೆ ಕಂಡಿದ್ದ. ಅವನನ್ನು ತನ್ನ ಕಣ್ಣುಗಳಲ್ಲಿ ತುಂಬುಕೊಳ್ಳುತ್ತ ತಾನು ತುಸು ದೂರ ನಿಂತು ನೋಡಿದ್ದೆ. ತಲೆಯ ಉದ್ದವಾದ ಕೂದಲನ್ನು ಮುಖದ ಗಡ್ಡವನ್ನೂ ಇಂದು ತಾನೆ ಮುಂಡನ ಮಾಡಿಸಿಕೊಂಡಿರಬೇಕು. ಮುಂಡನ ಮಾಡಿಸಿಕೊಂಡ ಜಾಗ ಪೇಲವವಾಗಿ ಬಹಳ ಕಾಲ ಸೂರ್ಯನ ಬಿಸಿಲಿನಿಂದ ಮುಚ್ಚಿಕೊಂಡಿತ್ತೆಂದು ತಿಳಿಯುವಂತಿತ್ತು. ಗಾಳಿಗೂ ಬಿಸಿಲಿಗೂ ಒಡ್ಡಿಕೊಂಡು ತಿರುಗಿದ ಅವನ ಮೈ ಬಣ್ಣ ನಿಷ್ಕಳಂಕವಾಗಿತ್ತು. ಗೋಪಿಯರಿಗೆ ಮತ್ತು ಬರಿಸಿದ್ದ ಶ್ಯಾಮ ವರ್ಣ ಅವನದು.

ಬಿಳಿಯ ಒಂದು ಧೋತ್ರವನ್ನು ಸೊಂಟಕ್ಕೆ ಸುತ್ತಿ, ಬಿಳಿಯ ಇನ್ನೊಂದು ಧೋತ್ರವನ್ನು ಹೆಗಲಿನ ಮೇಲೆ ಮೈ ಪರಿವೆಯಿಲ್ಲದವನಂತೆ ಚೆಲ್ಲಿಕೊಂಡಿದ್ದ. ಅವನ ಮೂಗು ತುಸು ಬಾಗಿ ನೀಳವಾದ್ದು, ಗದ್ದ ದೃಢವಾದ್ದು, ಹಣೆ ವಿಶಾಲವಾದ್ದು ಎಂದು ಗಮನಿಸಿದ. ಅವನ ಕಿವಿಗಳು ಖಂಡಿತ ನಾರಾಯಣನದಂತೆ ಅಲ್ಲ್, ತನ್ನದರಂತೆಯೂ ಅಲ್ಲ – ತಾಯದರಂತೆ ಅವು. ಒಂಟಿಯನ್ನು ಹಾಕಿದ್ದರೆ ಎದ್ದು ಕಾಣಿಸಬಹುದಿತ್ತು. ಅವನ ಒಟ್ಟು ಮುಖದ ಲಾವಣ್ಯ ಹೆಂಗಸರನ್ನು ಮರುಳುಗೊಳಿಸಬಹುದಾದ್ದು. ಹೀಗೆ ಅನ್ನಿಸಿದಾಗ ತನ್ನ ಕಾಮುಕ ಚರಿತ್ರೆ ನೆನಪಾಗಿತ್ತು. ಅವನ ಮುಖ ಲಕ್ಷಣವನ್ನು ಹಾಗೆ ಪರಿಭಾವಿಸುವ ತನ್ನ ಗುಪ್ತ ಉದ್ದೇಶದಿಂದ ನಾಚಿಕೆಯೂ ಆಗಿತ್ತು.

ಆದರೆ ಯಾಕೆ  ನಾಚಬೇಕು? ಎಂದು ಅವನ ಸಂಗೀತದಿಂದ ಉತ್ತೇಜಿತನಾಗಿ ಯೋಚಿಸಿದ.

ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆಯುತ್ತಿದ್ದ ಆದಿಶಂಕರರು ಕಾಣಲು ಇವನಂತೆಯೇ ಇದ್ದಿರಬೇಕು. ಬಾಲ ಸನ್ಯಾಸಿಯಾಗಿದ್ದೂ ಅವರು ಗಾಢವಾದ ರತಿಜ್ಞಾನವಿದ್ದವರನ್ನು ಮೀರಿಸುವಂತೆ ದೇವಿಯನ್ನು ನಖಶಿಖಾಂತ ವರ್ಣಿಸಿದ್ದರು.

ಚಂದ್ರಪ್ಪ ಕೇವಲ ಒಂದು ಚಡ್ಡಿಯನ್ನೂ ಬನೀನನ್ನೂ ಧರಿಸಿ , ಅಗೆಯುತ್ತಿದ್ದ ಹಾರೆಯನ್ನು ಪಕ್ಕದಲ್ಲಿರಿಸಿಕೊಂಡು, ಬಾಯಿ ತೆರೆದ ಬೆರಗಿನಲ್ಲಿ ಕೈಗಂಟಿದ ಕೆಸರನ್ನು ಲೆಖ್ಖಿಸದೆ ಪ್ರಸಾದ ಹಾಡುವುದನ್ನು ಕೇಳಿಸಿಕೊಳ್ಳುತ್ತಿದ್ದ. ತಾನು ಬಂದು ಸುಮ್ಮನೆ ಮನೆಯೆದುರಿನ ನಂದಬಟ್ಟಲ, ದಾಸವಾಳ, ಪಾರಿಜಾತ, ಸಂಪಿಗೆ ಮರಗಳ ತೋಟದ ನೆರಳಿನಲ್ಲಿ ನಿಂತಿದ್ದೆ. ಚಂದ್ರಪ್ಪನ ಶ್ರಮದ ಫಲವಾಗಿ ಹೂವುಗಳ ಸುಗಂಧ ಇಡೀ ತೋಟವನ್ನು ಆವರಿಸಿತ್ತು.

ಮಗನನ್ನು ತಾನು ವಾತ್ಸಲ್ಯದಿಂದ ನೋಡುತ್ತಿರುವುದನ್ನು ಗಂಗೂ ಕಂಡಿರಬೇಕು. ಬೆಳ್ಳಿಬಟ್ಟಲಿನಲ್ಲಿ ಬಿಸಿ ಹಾಲನ್ನು ಹೊರಾಂಗಣದಿಂದ ಚಿಟ್ಟೆಯ ಮೇಲಿಟ್ಟು, ‘ಬಂದಿರಾ’ ಎಂದು ಉಪಚರಿಸಿ, ಚಿಟ್ಟೆಯ ಮೇಲೆ ಬರುವಂತೆ ಕರೆದಿದ್ದಳು. ತಲೆಯ ಮೇಲೆ ಸೆರಗು ಹೊದ್ದು ಹಣೆಗೆ ಗಂಧವನ್ನಿಟ್ಟ ಗಂಗೂ ಋಷಿಪತ್ನಿಯಂತೆ ಕಂಡಿದ್ದಳು.

ಚಿಟ್ಟೆ ಹತ್ತಿ ತಾನು ಕೂತೇ ಇದ್ದೆ- ಅದೆಷ್ಟು ಹೊತ್ತೋ ತಿಳಿಯದಂತೆ. ನೆರಳುಗಳು ಉದ್ದವಾಗಿ ದೀಪ ಹಚ್ಚುವ ಸಮಯವಾಗತೊಡಗಿತ್ತು. ಪ್ರಸಾದ ತನಗೇ ಹಾಡಿಕೊಳ್ಳುತ್ತಲೇ ಇದ್ದ — ನಿಶ್ಚಲನಾಗಿ ಕೂತು. ಯಾವ ಹಾವಭಾವವೂ ಇಲ್ಲದಂತೆ. ಅವನ ಆಲಾಪ ಅಲೆಅಲೆಯಾಗಿ ಅಲೆದು, ತಾನು ಹೊರಹೊಮ್ಮಿದ ಮೂಲ ಶೃತಿಗೆ ಮತ್ತೆ ಮತ್ತೆ ಬಂದು, ತಣಿದು, ಇಗೋ ಸರಳವಾಗಿ ಬಿಡುತ್ತ, ಇಗೋ ಮತ್ತೆ ಬಿಗಿಯಾಗಿ ಬಿಡುತ್ತ ಎರಿಳಿಯುವ ಸೋಜಿಗದಲ್ಲಿ ಪ್ರಸಾದ ತಾನು ಮುಟ್ಟಬೇಕಾದ್ದನ್ನು ಮುಟ್ಟಿದವನಂತೆ ಕಂಡಿದ್ದ.

ತಾನು ಹುಡುಕುತ್ತಿರುವ ‘ಅದೃಷ್ಟ’ ಇವನು ಈಗ ಪಡೆದುಕೊಂಡ ಹಾಗೇ ಇರುತ್ತದೆ ಎನ್ನಿಸಿತ್ತು. ಚಲನೆಯಲ್ಲಿದ್ದೂ ಅದು ನಿಶ್ಚಲ. ನಿರಾಯಾಸವಾಗಿ ಚಲಿಸುವುದರಿಂದಲೇ ಅದು ನಿಶ್ಚಲ. ಆದರೆ ತನ್ನಂಥವರಿಗೆ ಅದು ಕ್ಷಣಿಕ.

ತನ್ನ ಮಗನೇ ಅವನಾಗಿದ್ದರೂ ಏನು? ಅಗದಿದ್ದರೂ ಏನು? ತಾನು ಇನ್ನೂ ಮುಟ್ಟದ್ದನ್ನು ಅವನು ಮುಟ್ಟಿಬಿಟ್ಟಿದ್ದಾನೆ ಎನ್ನಿಸಿತು. ಆಗೀಗ ತನಗೆ ಹೊಳೆದಂತೆ ಮಾತ್ರ ಅಗುವುದನ್ನು ಅವನು ನಿಗಾ ಇಟ್ಟು ನೋಡಿರಬೇಕು. ಅವನ ಒಟ್ಟು ಶಾಂತವಾದ ಭಾವ ಹಾಗಿದೆ – ಭವದಲ್ಲಿದ್ದೂ ಭವದ ಎಗ್ಗಿಲ್ಲದಂತೆ ಇರುವುದು ಸಾಧ್ಯವೆಂದು ಅನ್ನಿಸುತ್ತಾನೆ. ಹೀಗೆ ಗುರುಭಾವದಿಂದ ತಾನು ಅವನನ್ನು ನೋದಿದ್ದೆ.

ಅದೊಂದು ಮುಹೂರ್ತ. ತಾನು ಅವನ ತಂದೆಯಾದರೇನು? ಅಲ್ಲವಾದರೇನು? ಅವನ ಕಾಲನ್ನು ಮುಟ್ಟಿ ನಮಸ್ಕರಿಸಬೇಕು ಎನ್ನಿಸಿತು. ಹೀಗೆ ತನಗೆ ಅನ್ನಿಸುತ್ತಿದ್ದಂತೆಯೇ ಸ್ಥಿತಪ್ರಜ್ಞನಂತಿದ್ದ ಪ್ರಸಾದ ತನ್ನ ಸ್ವಸ್ನಸ್ಥವಾದ ಕಣ್ಣುಗಲನ್ನು ತೆರೆದಿದ್ದ. ಇವನು ಅಪ್ಪನೋ ಅಲ್ಲವೋ ಎನ್ನುವ ಅನುಮಾನವಾಗಲೀ, ಕುತೂಹಲವಾಗಲೀ, ಆತಂಕವಾಗಲೀ ಅವನಿಗೆ ಪ್ರಸ್ತುತವೇ ಅಲ್ಲವೆನ್ನುವಂತೆ ತನ್ನನ್ನು ಅವನ ಕಣ್ಣುಗಳಲ್ಲಿ ಇಡಿಯಾಗಿ ತಂದುಕೊಳ್ಳುವಂತೆ ನೋಡಿದ್ದ. ನಿರ್ವಿಕಾರದ ದಿವ್ಯವಾದ ಅವನ ನೋಟಕ್ಕೆ ವಶವಾಗಿ ತಾನೂ ಒಂದು ಕ್ಷಣ ಅಸೆಯಿಲ್ಲದಂತೆ ತೆರೆದುಕೊಂಡಿರಬೇಕು.

ತಂಬೂರಿಯನ್ನು ಕಣ್ಣಿಗೆ ಒತ್ತಿಕೊಂಡು ಪ್ರಸಾದ ಥಟ್ಟನೇ ಎದ್ದುನಿಂತಿದ್ದ. ಎಷ್ಟು ಸುಂದರನಾದ ಉದ್ದನೆಯ ಕೋಮಲ ಸ್ವಭಾವದ ಹುಡುಗ ಎಂದು ತನಗೆ ಆ ಕ್ಷಣದಲ್ಲಿ ಅವನ ಮೇಲೆ ಪುತ್ರವಾತ್ಸಲ್ಯ ಹುಟ್ಟಿಬಿಟ್ಟಿತ್ತು.

ಮೋಹಕವೆಂದು ತನಗೆ ಕಾಣತೊಡಗಿದ್ದ ಪ್ರಸಾದನ ಕಣ್ಣುಗಳು ನಿಧಾನ ಮುಚ್ಚಿಕೊಂಡವು. ಆಮೇಲೆ ಕೈ ಮುಗಿದು ನಿಂತು, ದೇವರಿಗೆ ಎಂಬಂತೆ ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದ. ತಾನು ಹೊರಳಿಬಿಟ್ಟಂತೆನಿಸಿ ಅಶೀರ್ವಾದದ ಮಾತು ಹೊಳೆಯದೆ ಸೋಜಿಗವಾಗಿತ್ತು. ಅವನ ತಲೆಯನ್ನು ಮುಟ್ಟಿದ್ದೆ. ಮತ್ತೆ ಅವನ ಕೆನ್ನೆ ಹಿಡಿದು ನೆತ್ತಿಯನ್ನು ಮೂಸಿದ್ದೆ. ಇದನ್ನು ದೂರದಿಂದ ನೋಡುತ್ತ ನಿಂತಿದ್ದ ಗಂಗೂಗೆ ಕಣ್ಣು ತುಂಬಿಬಂದಿತ್ತು. ಅವಳಿಗೂ ಇದು ಮುಹುರ್ತವೆಂದು ಕಾಣಿಸಿರಬೇಕು. ದೀಪ ಹಚ್ಚಿ ತನಗೇ ಎನ್ನುವಂತೆ ಹೇಳಿಕೊಂಡಳು:

“ಇನ್ನು ಮುಂದೆ ನನ್ನ ಮಗ ಸಂನ್ಯಾಸಿ. ಯಾರಿಗೂ ಅವನು ನಮಸ್ಕಾರ ಮಾಡುವಂತಿಲ್ಲ. ಅವನೇ ಶ್ರೀಪಾದನಾಗಿಬಿಟ್ಟ.”

ಆಮೇಲೆ ಸೆರಗಿನಿಂದ ಕಣ್ಣೊರಸಿಕೊಂಡಿದ್ದಳು. ಅವನ ಮೇಲಿನ ತಾಯ್ತನದ ಹಂಬಲಗಳನ್ನೆಲ್ಲ ಇನ್ನು ಬಿಟ್ಟುಕೊಡಬೇಕಾಗಿ ಬಂದ ತನ್ನ ಸ್ಥಿತಿಯನ್ನು ದುಃಖದಲ್ಲಿ ಅವಳು ಎದುರುಗೊಳ್ಳುತ್ತಲೇ ತನ್ನನ್ನು ‘ಹೋಗಿಬನ್ನಿ’ ಎಂದು ಉಪಚರಿಸಿ, ಗೇಟಿನ ತನಕ ಬಂದು ಕಳುಹಿಸಿದ್ದಳು.