ಮಾತಾಡುವುದು, ಕೇಳುವುದು, ಬರೆಯುವುದು, ಓದುವುದು ಇತ್ಯಾದಿಗಳೆಲ್ಲ ದೇಹದ ವಿವಿಧ ಅಂಗಾಂಗಗಳ ಮೂಲಕ ನಿರ್ವಹಣೆಯಾಗುವ ಕ್ರಿಯೆಗಳಂತೆ ತೋರುತ್ತವೆ. ಆದರೆ ಈ ಎಲ್ಲ ಅಂಗಾಂಗಗಳ ಕ್ರಿಯಾವರ್ತವನ್ನು ನಿಯಂತ್ರಿಸುವ ಮತ್ತು ಈ ಕ್ರಿಯಾವರ್ತವನ್ನು ಅರ್ಥಪೂರ್ಣವಾಗಿ ಸಂಯೋಜಿಸುವ ಕೆಲಸ ಮೆದುಳಿನಲ್ಲಿ ನಡೆಯುತ್ತದೆ.

ಮೆದುಳಿನಲ್ಲಿ ಭಾಷಾಕಲಿಕೆ ಮತ್ತು ಬಳಕೆಗಳು ನಿಯಂತ್ರಿತವಾಗುವ ಕ್ರಮವನ್ನು ಅರಿಯಲು ಕಳೆದ ಒಂದೂವರೆ ಶತಮಾನದಿಂದ ಹಲವಾರು ಪ್ರಯತ್ನಗಳು ನಡೆದಿವೆ. ಭಾಷಾ ಕೌಶಲಗಳನ್ನು ಪಡೆಯುವಿಕೆ ಮತ್ತು ಬಳಸುವಿಕೆ ಮೆದುಳಿನಲ್ಲಿರುವ ನಿಯಂತ್ರಣ ಕೇಂದ್ರದ ವಿಕಲತೆಯಿಂದ ಪ್ರಭಾವಿತವಾಗುತ್ತವೆ. ಮರೆವು, ತೊದಲುವಿಕೆ, ಅಸ್ಪಷ್ಟವಾಗಿ ಮಾತಾಡುವುದು, ಬರೆವಣಿಗೆಯ ತೊಡಕುಗಳು, ಭಾಷಾ ಬಳಕೆಯ ವಿವಿಧ ವಿಕಲತೆಗಳು ಇತ್ಯಾದಿ ಭಾಷಾ ದೋಷಗಳನ್ನು ಈಗ ವಿವರಿಸುವುದು ಸಾಧ್ಯವಾಗುತ್ತಿದೆ. ಈ ಬಗೆಗೂ ಸಾಕಷ್ಟು ಅಧ್ಯಯನಗಳು ನಡೆದಿವೆ. ಈ ತಜ್ಞ ವಲಯದ ಸಂಗತಿಗಳನ್ನು ವಿವರಿಸುವ ಎರಡು ಲೇಖನಗಳು ಈ ಭಾಗದಲ್ಲಿವೆ.