) ಜಾನಪದದ ಪ್ರದರ್ಶನಾತ್ಮಕ ಕಲೆಗಳ ಪ್ರಪಂಚ ಬಹು ವ್ಯಾಪಕ ಮತ್ತು ಅಷ್ಟೇ ವೈವಿಧ್ಯಪೂರ್ಣ. ಬಹುತರ ಜನಪದ ಕಲೆಗಳಿಗೆ, ವಿಶೇಷವಾಗಿ ಜನಪದ ರಂಗಭೂಮಿಗೆ ಪ್ರೇರಕವಾದ ಕಲಾಪ್ರಕಾರಗಳೆಂದರೆ ಧಾರ್ಮಿಕ ಹಿನ್ನೆಲೆಯ ಸಂಕೀರ್ಣಸ್ವರೂಪದ ಆಚರಣಾತ್ಮಕ ರಂಗರೂಪಗಳು. ಆಚರಣೆಯ ಕುಣಿತಗಳು ಆಸ್ಥಾನದ ಅಲಂಕರಣ, ಅಂತಃಪುರದ ಜನಸಮುದಾಯದ ಮನರಂಜನೆಗಾಗಿ ಹುಟ್ಟಿಕೊಂಡವುಗಳಲ್ಲ; ಅಥವಾ ಒಂದು ವಿಶಿಷ್ಟ ವರ್ಗಕ್ಕೇ ಮೀಸಲಾದ ರಮ್ಯ ಕಲ್ಪನೆ, ಸೌಂದರ್ಯಾಭಿವ್ಯಕ್ತಿ ಇತ್ಯಾದಿ ಗೀಳು ಹಚ್ಚಿಕೊಂಡದ್ದೂ ಅಲ್ಲ. ಜೀವನದ ಮೂಲಭೂತ ಶ್ರದ್ಧೆಯನ್ನು ಆಧರಿಸಿ ಜನಪದದ ಸಮಷ್ಟಿ ಕ್ರಿಯೆಗಳಲ್ಲಿ ಹುದುಗಿದ ಪರಿಚಲನಾತ್ಮಕ ನಾದ ಲಯಗಳನ್ನು ಮೈಗೂಡಿಸಿಕೊಂಡು ಸಾಮೂಹಿಕ ನಂಬುಗೆಯನ್ನು ವ್ಯಾಖ್ಯಾನಿಸುವ ಆಚರಣಾತ್ಮಕ ಕುಣಿತಗಳು, ಜನಪದ ಸಮುದಾಯಗಳ ಕಲಾತ್ಮಕ ಸಮುತ್ಪತ್ತಿ ಎಂದು ಕರೆಯಬಹುದು.

ಪ್ರಾದಿಮ ಮಾನವಕಾಲದಿಂದ ಮೊದಲುಗೊಂಡು ಜನಪದ ಬದುಕಿನ ವಿಕಾಸದ ವಿವಿಧ ಹಂತಗಳಲ್ಲಿ ಅಗಣಿತ ಜನಪದವೃಂದಗಳು ಅಗೋಚರವಾದ ಶಕ್ತಿಯೊಂದನ್ನು ತಮ್ಮ ‘ದೈವ’ ಎಂದು ದೃಢವಾಗಿ ನಂಬುತ್ತಬಂದವು. ಈ ಅಮೂರ್ತಶಕ್ತಿಗೆ ರೂಪಕೊಡುವ ಹಂತದಲ್ಲಿ ಧಾರ್ಮಿಕಶ್ರದ್ಧೆಯ ಹುಟ್ಟು, ನೆಲೆ ಹುದುಗಿದೆ. ಟೇಯಲರ್ ಹೇಳುವ ‘ಬಿಲೀಫ ಇನ್‌ಸ್ಪಿರಿಚ್ಯುಅಲೆ ಬೀಯಿಂಗ್ಸ್’- ಆಧ್ಯಾತ್ಮ ಜೀವಿಗಳಲ್ಲಿ ನಂಬಿಕೆ, ಪ. ರಾಡಿನ್ ಸೂಚಿಸುವ ಸೋಶಿಯಲ್ ಪ್ರಿಸಿಪ್ಟೇಟ್ ಆಫ್ ಫೀಯರ್

[1] – ಭಯದ ಸಾಮಾಜಿಕ ವಿಧಿಗಳು, ಜನಪದ ಶ್ರದ್ಧೆ ಮತ್ತು ಆಚರಣೆಯ ಎರಡು ಸೂಕ್ಷ್ಮ ಅಂಶಗಳ ಕಡೆಗೆ ಬೆರಳುಮಾಡುತ್ತವೆ. ಒಂದು ಅತಿಮಾನವ ಅಥವಾ ಮಾನವಾತೀತಸ್ವರೂಪದ ಅಮೂರ್ತ ಅದ್ಭುತ ಶಕ್ತಿಯ ಪ್ರಭಾವ; ಇನ್ನೊಂದು ಸಾಮೂಹಿಕ ನಡವಳಿಕೆಯ ಮೇಲೆ ಹಿಡಿತ ಸಾಧಿಸುವ ವಿಧಿನಿಷೇಧಗಳ ಕಟ್ಟುಪಾಡು ಮತ್ತು ಈ ವಿಧಿಗಳನ್ನು ಮೀರಿದರೆ ಉಂಟಾಗಬಹುದಾದ ಕೇಡುಗಳ ನಿವಾರಣೆಗೆ ಜನಪದರು ಕೈಕೊಳ್ಳುವ ಆಚರಣೆಗಳು. ತಮ್ಮ ತಮ್ಮ ಬುಡಕಟ್ಟು, ವೃಂದವನ್ನು ತಮ್ಮ ಜೀವಿತದ ಅವಧಿಯಲ್ಲಿ ನಿಯಂತ್ರಿಸಿ ಅಥವಾ ಕಾಪಾಡಿ, ಆಯಾ ವೃಂದದ ವಿಸ್ಮಯ, ಭಯ, ಗೌರವಗಳಿಗೆ ಪಾತ್ರರಾಗಿ, ಮರಣಾನಂತರ ಅರ್ಚಿಸಲ್ಪಟ್ಟ ಮತ್ತು ಅಂಥ ವ್ಯಕ್ತಿಗಳ ಸುತ್ತಲೂ ಹುಟ್ಟಿಕೊಂಡ ಐತಿಹ್ಯ, ಕಟ್ಟುಕಥೆ, ಪುರಾಣಗಳ ತಲದಲ್ಲಿ ಅಡಗಿರುವ ಅಜ್ಞಾತ ಸಾಂಸ್ಕೃತಿಕ ವೀರರು ಅಂಥ ವ್ಯಕ್ತಿಗಳನ್ನು ದಿವ್ಯತೆಯಲ್ಲಿ ಪ್ರತೀಕಗೊಳಿಸಿ ವರ್ಷದ ನಿರ್ದಿಷ್ಟ ಕಾಲದಲ್ಲಿ ಆರಾಧಿಸುವುದು ವಿವಿಧ ಬಗೆಯಲ್ಲಿ ಪ್ರಾರ್ಥನೆ ಸಲ್ಲಿಸುವುದು, ಬಲಿಕೊಡುವುದು, ಮೈದುಂಬಿ ಕುಣಿಯುವುದು; ಹರಕೆ ಸಲ್ಲಿಸುವುದು ಇತ್ಯಾದಿ ಇನ್ನೊಂದು ಕ್ರಿಯಾತ್ಮಕ ಹಂತ. ಈ ಬಗೆಯ ವಿವಿಧ ಕ್ರಿಯೆಗಳಿಂದ ಆ ದೈವ ಸುಪ್ರೀತವಾಗುತ್ತದೆ; ತಮ್ಮನ್ನು ಕಾಪಾಡಿ ಸುಖ ಸಮೃದ್ಧಿಯತ್ತ ಮುನ್ನಡೆಸುತ್ತದೆ. ತಮ್ಮ ತಮ್ಮ ಗುಂಪಿನ ಮುಖ್ಯಸ್ಥ ಅಥವಾ ಅರ್ಚಕ ಆ ದೈವದ ಪ್ರತಿನಿಧಿ. ಆತ ‘ಪಾತ್ರಿ’. ಅಗೋಚರ ಶಕ್ತಿ ಈತನ ಜೊತೆ ಸಂವಹನಿಸುತ್ತದೆ. ಅಥವಾ ಈತನಲ್ಲಿ ಪ್ರತ್ಯಕ್ಷವಾಗಲೂಬಹುದು. ತಮ್ಮ ಮತ್ತು ಅಗೋಚರ ಶಕ್ತಿಯ ನಡುವೆ ಈತ ಒಂದು ಪ್ರಬಲ ಸಂವಹನ ಸೇತುವೆ. ಆತನೆದುರು ತಮ್ಮ ಅಹವಾಲು ಹೇಳಿಕೊಳ್ಳಬೇಕು. ಆಗ ದೈವದ ‘ಅಪ್ಪಣೆ’ಯಾಗುತ್ತದೆ. ಅದನ್ನು ತಾವು ಪಾಲಿಸಬೇಕು. ಇಂಥ ಒಂದು ಶ್ರದ್ಧೆಮೂಡಿದ ಕಾಲದಿಂದಲೂ ದೈವಾರಾಧನೆಯ ಅನೇಕ ರೂಪಗಳು ತಲೆದೋರಿದವು. ಧಾರ್ಮಿಕ ಹಿನ್ನೆಲೆಯ ಈ ಸ್ಥೂಲಾಂಶಗಳು ಜನಪದದ ಒಟ್ಟು ಜೀವನದ ದೃಷ್ಟಿಯಿಂದ ಅವರ ಬದುಕಿಗೆ ಅರ್ಥಪೂರ್ಣತೆ ಸತ್ವಗಳನ್ನು ತುಂಬುತ್ತ, ಆಂತರಿಕ ಅನಿಸಿಕೆ ನಂಬುಗೆಗಳನ್ನು ಗಟ್ಟಿಗೊಳಿಸುತ್ತ, ಅನೇಕ ಸಲ ಮೌಢ್ಯಕ್ಕೆ ತಿರುಗಿ ಶೋಷಣೆಗೂ ಕಾರಣವಾಗುತ್ತ, ಸಾಮಾಜಿಕವಾಗಿ ಅವರನ್ನು ನಿಯಂತ್ರಿಸುತ್ತ ಬಂದ ಸಂಗತಿಗಳಾಗಿವೆ. ಕುಲಸಂಕೇತ, ಕುಲದೇವತಾರಾಧನೆ (ಟೊಟ್ಯಾಮಿಜಮ್) ‘ಹಿರಿಯರಪೂಜೆ’ (ಆಯನ್ಸಿಸ್ಟ್ರಲ್ ವರ್ಷಿಪ್), ಪರಮಶಕ್ತಿ ಸರ್ವಶಕ್ತಿ ಕಲ್ಪನೆ (ಆಯನಿಮಿಜಮ್), ಸರ್ವ ಚೈತನ್ಯವಾದ ಮೊದಲಾದ ಧಾರ್ಮಿಕ ಶ್ರದ್ಧೆಯ ವಿವಿಧ ಹಂತಗಳಲ್ಲಿ ಆರಾಧನೆಗೆ ಬಣ್ಣವೇರುತ್ತ ಬಂದಿತು. ಜನಪದದ ಶ್ರದ್ಧೆ ಅಥವಾ ಧಾರ್ಮಿಕ ನಂಬಿಕೆ ಅವರ ಹೃದಯಾಂತರ್ಗತ ಅಲಿಖಿತ ಕರಾರುಪತ್ರವಿದ್ದಂತೆ. ನಮ್ಮ ಜನಪದ ವೃಂದಗಳು ತಾವು ನಂಬಿದ ದೈವದ ಮಹಿಮೆ, ಲೀಲೆ, ಪವಾಡ, ಪುರಾಣಗಳನ್ನು ಹಾಡಿ, ಕಥನಿಸಿ, ಆವೇಶದುಂಬಿ ಕುಣಿದು ಇಡೀ ವೃಂದದ ಮೇಲೆ ಗಾಢವಾದ ಪ್ರಭಾವ ಬೀರುತ್ತ ಬಂದವು. ಆರಾಧನೆಯ ಒಂದು ಕ್ರಮ ಮತ್ತು ಕ್ರಿಯೆಗಳೇ ಆಚರಣೆಗಳು. ಹಾಡು, ಕಥನ, ಸ್ತೋತ್ರ, ಮಹಿಮೆ, ಕುಣಿತ ಇತ್ಯಾದಿಗಳು ದೈವಾರಾಧನೆಯ ಅಂಗವಾಗಿ ಜರುಗುವ ವಿಧಿ-ವಿಧಾನಗಳಾಗಿರುವುದರಿಂದ ಇವುಗಳನ್ನು ಆಚರಣೆಯ ಹಾಡು, ಆಚರಣೆಯ ಕುಣಿತ ಎಂದು ಮುಂತಾಗಿ ಕರೆಯಬಹುದಾಗಿದೆ. ಕುಲದೇವತೆಯ ಆರಾಧನೆಯಿಂದ ಮೊದಲುಗೊಂಡು ಗ್ರಾಮದೇವತೆಗಳ ಉತ್ಸವಗಳವರೆಗೆ ಹಬ್ಬಿರುವ ಅನೇಕ ಆಚರಣೆಗಳನ್ನು ಜನಪದಕಲೆಗಳೆಂದು ಕರೆಯಬಹುದಾದರೂ ಅವು ಜನಪದರ ಅಮಾಯಕ ಶ್ರದ್ಧೆ ಮತ್ತು ಪವಾಡ, ಮಹಿಮೆ, ಕಥನಗಳ ಪರಿಧಿಯ ಅಧೀನವಾಗಿಯೇ ಅನಾವರಣಗೊಳ್ಳುವಂಥವು. ಇದು ಆಚರಣಾತ್ಮಕ ಕಲೆಗಳಲ್ಲಿ ಮೇಲುನೋಟಕ್ಕೇ ಎದ್ದುಕಾಣುವ ಅಂಶ. ಆರಾಧನೆಯ ಅಂಗವಾಗಿ ನಡೆಯುವ ಆಚರಣೆಗಳಿಗೆ ಸಂಬಂಧಿಸದ ಇನ್ನಷ್ಟು ಅಂಶಗಳನ್ನು ಗಮನಿಸುವುದು ಮುಖ್ಯವೆನಿಸುತ್ತದೆ.

ಆ) ಜನಪದವೃಂದ ಆರಾಧಿಸುವ ಯಾವುದೇ ದೇವತೆಯನ್ನು ಕುರಿತಾದ ಆಚರಣೆಗಳು ಕುತೂಹಲಕಾರಿಯಾಗಿವೆ. ಪ್ರತಿ ‘ದೈವ’ ಅಥವಾ ದೇವತೆಯನ್ನು ಕುರಿತ ಪುರಾಣ, ಕಥೆ, ಮಹಿಮೆ ಪವಾಡಗಳಿಗೂ ಮತ್ತು ಆಚರಣೆಗಳಿಗೂ ಒಂದು ಗಾಢ ಸಂಬಂಧವಿದೆ. ಶಿಷ್ಟಪದದ ಸಾಹಿತ್ಯ, ಪುರಾಣ ಕಾವ್ಯಗಳು ಆಯಾ ದೇವತೆಯ ಕಥಾನಕವನ್ನು ವಿವರಿಸಿ, ವೈಭವೀಕರಿಸಿ ತೃಪ್ತಿಹೊಂದುತ್ತವೆ. ಆದರೆ ಜನಪದರು ಅಂಥ ಕಥಾನಕದ ವಿವಿಧ ಸಂದರ್ಭಗಳನ್ನು ಮೌಖಿಕ ಪರಂಪರೆಯ ಶಾಬ್ದಿಕ ಸಂವಹನ ಮತ್ತು ಆಚರಣೆಗಳ ಮೂಲಕ ಜೀವಂತಗೊಳಿಸುತ್ತಾರೆ. ಪುರಾಣ ಮತ್ತು ಆಚರಣೆಗಳಿಗಿರುವ ಈ ಗಾಢ ಸಂಬಂಧ ಕುರಿತು ಸಂಶೋಧನೆ ನಡೆಸಿದ ವಿದ್ವಾಂಸರ ಅಭಿಪ್ರಾಯಗಳು ಇಲ್ಲಿ ಪ್ರಸ್ತುತವಾಗಬಹುದು. ಲಾರ್ಡರಗ್ಲನ್, ಸ್ಟ್ಯಾನ್ಲೀ ಈಡ್ಗರ್ ಹೈಮ್, ಸ್ಟಿತ್ ಥಾಮ್ಸನ್, ಒಟ್ಟೊ ರಾಂಕ್, ಅಂದ್ರೂಲಾಂಗ್, ರುತ್‌ಬೆನೆಡಿಕ್ಟ್ ಮುಂತಾದವರ ಅಭಿಪ್ರಾಯಗಳನ್ನು ಚರ್ಚಿಸಿದ ವಿಲಿಯಮ್ ಬಾಸ್ಕಮ್-ಮಿಥ್ ರಿಚ್ಯುಅಲ್ ಥಿಯೊರಿ- ಪುರಾಣ ಆಚರಣಾ ಸಿದ್ಧಾಂತ ಎನ್ನುವ ಒಂದು ಹೊಸ ತತ್ವವನ್ನೇ ಪ್ರತಿಪಾದಿಸಿದ್ದಾರೆ. ಸ್ಟಿತ್ ಥಾಮ್ಸನ್ ‘ಆಚರಣೆಗೆ ಸಂಬಂಧಿಸಿದ ಕಥಾನಕವೇ ಪುರಾಣ’[2] ಎನ್ನುತ್ತಾರೆ. ಹುಕ್ ಎನ್ನುವ ಇನ್ನೊಬ್ಬ ವಿದ್ವಾಂಸ, ‘ಆಚರಣೆಯ ಶಾಬ್ದಿಕ ಭಾಗ ಪುರಾಣ; ಆಚರಣೆ ಆ ಕಥಾನಕವನ್ನೇ ಅಭಿನಯಿಸುತ್ತದೆ’[3] ಎನ್ನುತ್ತಾನೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ಶ್ರದ್ಧೆ-ಪುರಾಣ, ಕಥನ, ಆರಾಧನೆ, ಆರಾಧನಾ ಕ್ರಿಯೆಯ ಅಭಿವ್ಯಕ್ತಿರೂಪಗಳು, ಆಚರಣೆಗಳು ಹೀಗೆ ಒಂದು ಕ್ರಮ ಈ ಪ್ರಕ್ರಿಯಾತ್ಮಕ ಸಂಬಂಧಗಳಲ್ಲಿ ರೂಪಗೊಂಡಿವುದು ಸ್ಪಷ್ಟ. ಪುರಾಣಗಳ ಅಭಿನಯವೇ ಆಚರಣಾತ್ಮಕ ಕುಣಿತಗಳು ಅಥವಾ ಆಚರಣೆಕುಣಿತಗಳು. ಇಲ್ಲಿ ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಎಲ್ಲ ಆಚರಣೆಗಳೂ ಕುಣಿತಗಳಾಗಿರುವುದಿಲ್ಲ ಎನ್ನುವುದು.

ಅಲಿಖಿತ ರೂಢಿ ಪರಂಪರೆಗಳ ಮೂಲಕ ವಿವಿಧ ಜನಪದವೃಂದಗಳಲ್ಲಿ ಪರಿಚಲನೆಗೊಳ್ಳುತ್ತ ಬಂದ ಆಚರಣೆಯ ಕುಣಿತಗಳು ನಮ್ಮ ಸಂಸ್ಕೃತಿಯ ಮಹತ್ವದ ಸಂವಾಹಕ ಕಲಾರೂಪಗಳಾಗಿವೆ. ಆಚರಣೆಯ ಕುಣಿತಗಳೆಂದು ಹೇಳುವಾಗ ಎದ್ದು ಕಾಣುವ ಶಬ್ದ ‘ಆಚರಣೆ’. ಕೆಲ ಸ್ನೇಹಿತರು ‘ರಿಚ್ಯುಅಲ’ ಎನ್ನುವ ಶಬ್ದವನ್ನೇ ಇದಕ್ಕೆ ಬಳಸಬೇಕು ಎಂದು ಮಡಿವಂತಿಕೆ ಸಾಧಿಸುವಂತೆ ತೋರುತ್ತದೆ. ‘ರಿಚ್ಯುಅಲ’ ಶಬ್ದ ಹುಟ್ಟುವುದಕ್ಕೂ ಮೊದಲೇ ಈ ಆಚರಣೆ ಎನ್ನುವ ಪದ ಮತ್ತು ಆಚರಣೆಗಳು ನಮ್ಮಲ್ಲಿ ಹುಟ್ಟಿಕೊಂಡಿದ್ದವು; ರೂಢಿಯಲ್ಲಿದ್ದವು ಎನ್ನುವುದನ್ನು ನಾವು ಗಮನಿಸಿದರೆ ಸಾಕು ಎಂದು ಕಾಣುತ್ತದೆ. ವಚನಗಳನ್ನು ವಿವೇಚಿಸುವಲ್ಲಿ ‘ಆಚರಣೆಯ ವಚನಗಳು’ ಎನ್ನುವ ಪದಪ್ರಯೋಗವಿದ್ದು ಅದು ಧಾರ್ಮಿಕ ಆಚರಣೆ ನಡವಳಿಕೆಗಳ ಅರ್ಥ ಹೊಂದಿರುವುದನ್ನು ಕೂಡ ಕಾಣಬಹುದು, ಅದರಂತೆ ಆಚರಣೆಯ ಕುಣಿತಗಳು ಕೂಡ ಧಾರ್ಮಿಕಶ್ರದ್ಧೆಗೆ ಬದ್ಧವಾಗಿರುವುದು ಸ್ಪಷ್ಟ.

ಇ) ಆಚರಣೆಯ ಕುಣಿತಗಳಲ್ಲಿ ಮುಖ್ಯವಾದವು ಹೆಜ್ಜೆಮೇಳ, ಸುಗ್ಗೀಕುಣಿತ, ಕೋಲಾಟ, ಎರವರ ಕುಣಿತ, ಒತ್ತೇಕೋಲ ಕುಣಿತ, ಒನಕೆ ಕುಣಿತ, ಕಂಬಿ ಕುಣಿತ, ಕಂಸಾಳೆ ಕುಣಿತ, ಕರಗದ ಕುಣಿತ, ಕಾಡ್ಯಾ ಕುಣಿತ, ನಂದೀಧ್ವಜ ಕುಣಿತ, ಕಾಸೆ ಕುಣಿತ, ವೀರಗಾಸೆ ಕುಣಿತ, ಪುರವಂತಿಕೆ ಮತ್ತು ಜೋಯಿಪಾಟ್, ಕೈತಲೆ ಆಟ, ಗೊಂದಲಿಗರ ಮೇಳ, ಮೈಲಾರನ ಭಕ್ತವೃಂದದ ಗೊರವರ ಕುಣಿತ, ಕೃಷ್ಣ ಆರಾಧನೆಯ ಗೋಪು ಕುಣಿತ ಮತ್ತು ತಾರಗಡಿ ಕುಣಿತ, ಚೌಡಮ್ಮನ ಕುಣಿತ, ಜೋಗ ಜೋಗತಿ ಕುಣಿತ ಅಥವಾ ಚೌಡಿಕಿ ಮೇಳ, ಡಿಕಾಂಬರಿ ವೇಷ, ಡೊಳ್ಳು ಕುಣಿತ ಮತ್ತು ದಟ್ಟೀಕುಣಿತ, ತೊಂಡಲದೇವರ ಕುಣಿತ, ದುಡಿ ಕುಣಿತ, ದುಮ್ಮಾಲಿ ಮೇಳ, ದೊಂಬರ ಕುಣಿತ, ಪಂಜಿನ ಕುಣಿತ, ಪಾಣಾರ ಕುಣಿತ, ಪಾಳೇಗಾರ ಕುಣಿತ, ಪುಗಡಿ ಕುಣಿತ, ಕೊಡದಕುಣಿತ, ಪೂಜಾ ಕುಣಿತ, ಪ್ರೇತಕುಣಿತ, ಪಾಣದೇವರ ಕುಣಿತ, ಬೊಳಕಾಟ್ ಕುಣಿತ, ಭೈತಾರಾಧನೆ, ನಾಗಮಂಡಲ, ಮಂಡಲ ಕುಣಿತಗಳು, ಹರಿಗೆ ಕುಣಿತ, ಮಾರೀ ಕುಣಿತ, ವೀರಮಕ್ಕಳ ಕುಣಿತ, ರಂಗದ ಕುಣಿತ, ಲಂಬಾಣಿ ಕುಣಿತ, ಸಂತಾಮ ಕುಣಿತ, ಸೋಮನ ಕುಣಿತ, ಸೋಲಿಗರ ಕುಣಿತ, ಹೀಗೆ ಸುಮಾರು ಐವತ್ತಕ್ಕೂ ಮಿಕ್ಕಿದ ದೈವೀ ಆರಾಧನೆಯ ಹಿನ್ನೆಲೆಯ ಕುಣಿತಗಳನ್ನು ಈಗಾಗಲೇ ಗುರುತಿಸಲಾಗಿದೆ.[4]  ಶ್ರೀ ಗೊ. ರು. ಚೆನ್ನಬಸಪ್ಪ ಸಂಪಾದಿಸಿದ ಕೃತಿಯೊಂದೇ ಸದ್ಯ ಕರ್ನಾಟಕದ ಕಲೆಗಳನ್ನು ಕುರಿತ ಒಂದು ಆಕರ ಗ್ರಂಥ. ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು, ಗುಲಬರ್ಗಾ, ಬೆಂಗಳೂರು ವಿಶ್ವವಿದ್ಯಾಲಯಗಳು ಮತ್ತು ಕರ್ನಾಟಕ ಜಾನಪದ ಅಕಾಡಮಿ ಪ್ರಕಟಿಸಿದ ಕೃತಿಗಳಲ್ಲಿ ಅಲ್ಲಲ್ಲಿ ಕೆಲವು ಬಿಡಿ ಬಿಡಿ ಪ್ರಬಂಧಗಳನ್ನು ಬಿಟ್ಟರೆ, ಈ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ನಡೆದಂತೆ ತೋರುವುದಿಲ್ಲ. ಈ ನಿಟ್ಟಿನ ಮಹತ್ವದ ಅಧ್ಯಯನವೆಂದರೆ ಉಡುಪಿಯ ಯಕ್ಷಗಾನಕೇಂದ್ರ ಕೈಕೊಂಡ ಅಧ್ಯಯನ ಸಂಶೋಧನೆಗಳ ಫಲವಾಗಿ ಹೊರಬಂದ ಡಾ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಉಪಾಧ್ಯಾಯ ಅವರ ‘ಭೂತಾರಾಧನೆ’ ಕೃತಿ. ಇದು ಆರಾಧನಾ ಕಲೆಗಳ ರಾಚನಿಕ ಅಧ್ಯಯನಕ್ಕೆ ನಾಂದಿ ಹಾಡಿದ ಒಂದು ಮಾದರಿಕೃತಿ.

ಈ) ಜನಪದ ಕಲೆಗಳನ್ನು ವಿಶೇಷತಃ ಆಚರಣೆಯ ಕುಣಿತಗಳನ್ನು ಕೆಲವು ನಿರ್ದಿಷ್ಟ ಸೂತ್ರಗಳಿಗೆ ನಿಯಮಗಳಿಗೆ ಒಳಪಡಿಸುವುದು ತುಂಬ ಜಟಿಲ. ಈ ಕುಣಿತಗಳ ಸಂಕೀರ್ಣ ಸ್ವರೂಪವೇ ಇದಕ್ಕೆ ಕಾರಣ. ಕೆಲವು ಕಲೆಗಳಿಗೆ ವಾದ್ಯ-ವಾದನ, ಗೀತ-ಕಥನ ಪ್ರಧಾನವಾದರೆ, ಇನ್ನು ಕೆಲವು ಕುಣಿತಪ್ರಧಾನ. ವಾದ್ಯ ಹಾಡು ಕುಣಿತಗಳ ಪರಸ್ಪರ ಸಂಕೀರ್ಣ ಸಂಯೋಜನೆ ಈ ಆಚರಣೆಯ ಕುಣಿತಗಳ ಪ್ರಕ್ರಿಯೆ ಮತ್ತು ಪ್ರಸ್ತುತಿ.

ಆಚರಣೆಯ ಕುಣಿತದಲ್ಲಿ ಎದ್ದುಕಾಣುವ ಅಂಶವೆಂದರೆ ವರ್ಷದ ನಿರ್ದಿಷ್ಟ ಕಾಲದ ಅರ್ಚನೆ, ಆರಾಧನೆ ಮತ್ತು ಆರಾಧನೆಯ ಅಂಗವಾಗಿ ದೈವಕ್ಕೆ ಸಂಬಂಧಿಸಿ ತಾವು ಹೊತ್ತ ‘ಹರಕೆ’ಗಳನ್ನು ಪೂರೈಸಲು ಆಚರಣೆಗಳನ್ನು ಜರುಗಿಸುವುದು, ‘ಹರಕೆ’ ಹೊತ್ತ ಜನಪದರು ವಿವಿಧ ಬಗೆಯ ಸೇವೆ ಸಲ್ಲಿಸುವುದು, ದೈವದ ಪುರಾಣ ಕಥಾನಕವನ್ನು ವಾದ್ಯ ಗೀತ ನೃತ್ಯಗಳ ಮೂಲಕ ಅಭಿನಯಿಸುವುದು ಈ ಆಚರಣೆಗಳ ಮುಖ್ಯ ಲಕ್ಷಣ. ಹರಕೆಗೆ ಎರಡು ಹಂತಗಳು : ಒಂದು ಕೌಟುಂಬಿಕ; ಇನ್ನೊಂದು ಸಾಮಾಜಿಕ ಅಥವಾ ಸಾಮೂಹಿಕ. ಹರಕೆ ಪೂರೈಕೆಯ ಸೇವೆ, ಆಚರಣೆಗಳೇ ಆಚರಣಾಕುಣಿತಗಳ ಮೂಲ. ಕೌಟುಂಬಿಕ ನೆಲೆಯ ಮದುವೆ, ಮಕ್ಕಳು, ಸದಸ್ಯರ ಆರೋಗ್ಯ, ದನಕರುಗಳ ಸಮೃದ್ಧಿ, ಹಿಂಗಾರಿ ಮುಂಗಾರಿ ಬೆಳೆ ಕುರಿತ ‘ಬೇಡಿಕೆ’ಗಳು ದೇವರಿಗೆ ಸಲ್ಲಿಸುವ ಸೇವೆಯ ಒಂದು ಭಾಗ. ಊರಿಗೆ ಬಂದ ಕಾಲರಾ, ಪ್ಲೇಗು, ಗ್ರಾಮದ ಮಳೆ ಬೆಳೆ ಕುರಿತಾದವು ಸಾಮೂಹಿಕ ಸೇವೆಯ ಆಚರಣೆಗಳಲ್ಲಿ ಹುದುಗಿದ ಮನೋಭಾವ. ಈ ನಂಬಿಕೆ ಹರಕೆ, ಸೇವೆ, ಆಚರಣೆಗಳಲ್ಲಿ ಹುದುಗಿರುವ ಮಹತ್ವದ ಅಂಶವೆಂದರೆ ‘ದೈವ’ ಜನಪದರ ಪಾಲಿಗೆ ಹೊರಗಿನವನಲ್ಲ; ಆತ ತಮಗೆ ಅನನ್ಯ, ಆತ್ಮೀಯ. ತಾವು ದೈವದ ಮುಂದೆ ತಮ್ಮ ತಮ್ಮ ಬೇಡಿಕೆಗಳನ್ನು ಹೇಳಿಕೊಂಡು ಅವನಿಂದ ಪರಿಹಾರ ಪಡೆಯಬಹುದು ಎನ್ನುವ ಆಂತರಿಕ ವಿಶ್ವಾಸ. ಬಂದ ವಿಪತ್ತು ಪರಿಹಾರಗೊಳ್ಳುವುದು ದೈವ ಕೃಪೆಯಿಂದ; ಅದು ದೇವರ ಪವಾಡ ಎನ್ನುವ ಗಾಢವಾದ ಶ್ರದ್ಧೆ. ಹರಕೆ ಹೊತ್ತ ಮೇಲೆ ಅದನ್ನು ಸಲ್ಲಿಸಬೇಕು, ಇಲ್ಲದೆ ಹೋದರೆ ಅನಿಷ್ಟಗಳು ಬಂದೆರಗುತ್ತವೆ; ದೈವದ ಕೋಪಕ್ಕೆ ಬಲಿಯಾಗುತ್ತೇವೆ ಎನ್ನುವುದು ಈ ಭಕ್ತರ ನಂಬುಗೆ.

) ಮೇಲೆ ಸೂಚಿಸಿದ ಐವತ್ತಕ್ಕೂ ಮಿಕ್ಕಿದ ಆರಾಧನೆಯ ಹಿನ್ನೆಲೆ ಹೊಂದಿದ ಆಚರಣೆಯ ಕುಣಿತಗಳು ಪ್ರಾದೇಶಿಕ ವೈವಿಧ್ಯ ಪಡೆದಿದ್ದು ಅವುಗಳಲ್ಲಿ ಕೆಲವು ಕಣ್ಮರೆಯಾಗುತ್ತಿವೆ; ಕೆಲವು ಮನರಂಜನೆಯ ರೂಪದಲ್ಲಿವೆ. ಮತ್ತೆ ಕೆಲವು ಮೂಲ ಅರ್ಥವಂತಿಕೆಯನ್ನು ಕಳೆದುಕೊಂಡ ಶುಷ್ಕ ಆಚರಣೆಗಳಾಗಿ ಉಳಿದುಕೊಂಡಿವೆ. ಆರ್ಥಿಕ ಬಿಕ್ಕಟ್ಟು, ಮೌಢ್ಯಕ್ಕೆ ಸಿಲುಕಿ ಮೂಲ ಶ್ರದ್ಧೆ ಸಡಿಲಾಗಿ ರೂಪುಗೊಂಡ ಧಾರ್ಮಿಕ ಶೋಷಣೆ ಮುಂತಾದುವು ಇದಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಷ್ಟಿದ್ದರೂ ಕೆಲವು ಆಚರಣೆಯ ಕುಣಿತಗಳು ನಮ್ಮ ಜನಾಂಗದಲ್ಲಿ ಬಲವಾಗಿ ಬೇರೂರಿರುವುದು ಮತ್ತು ಧಾರ್ಮಿಕ ಶ್ರದ್ಧೆಯ ಸಂಕೇತಗಳಾಗಿ ಇಂದಿಗೂ ಪರಿಚಲನೆಗೊಳ್ಳುತ್ತಿರುವುದು ಇವುಗಳನ್ನು ಕುರಿತ ಅಧ್ಯಯನಕ್ಕೆ ಪ್ರಚೋದಕವಾಗಿವೆ; ಪ್ರೇರಕವಾಗಿವೆ. ಅವುಗಳಲ್ಲಿ ಇಂದಿಗೂ ಜ್ವಲಂತ ಆಚರಣೆಯಾದ ಪುರವಂತರ ಕುಣಿತ ಒಂದನ್ನು ಮಾತ್ರ ಇಂದಿನ ಟಿಪ್ಪಣಿಗೆ ಅಳವಡಿಸಿಕೊಂಡಿದ್ದೇನೆ.

) ಕರ್ನಾಟಕದ ವಿವಿಧ ಪ್ರದೇಶಗಳ ವ್ಯಾಪ್ತಿಯನ್ನು ಪಡೆದ ಪ್ರಬಲ ದೇವತೆ ವೀರಭದ್ರ. ಅಖಿಲ ಭಾರತ ಮಟ್ಟದಲ್ಲಿ ಈ ದೇವತೆಯ ಆರಾಧನೆ ನಡೆಯುತ್ತಿರುವುದನ್ನು ಗುರುತಿಸುವ ಯತ್ನ ಇಂದಿನ ಈ ಟಿಪ್ಪಣಿಗೆ (ಅಧ್ಯಯನಕ್ಕೆ) ಹೊರಗು. ನಮ್ಮ ನಾಡಿನ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಪ್ರದೇಶಗಳಲ್ಲಿ ವೀರಭದ್ರನ ಆರಾಧನೆ ಮತ್ತು ಅದರ ಅಂಗವಾಗಿ ನಡೆಯುವ ಆಚರಣೆಗಳು ನಮಗೆ ಕಾಣುವ ರೀತಿ ವೈವಿಧ್ಯಪೂರ್ಣ ಮತ್ತು ಅಷ್ಟೆ ಅದ್ಭುತ.

ವೀರಭದ್ರ ದೇವಾಲಯಗಳು ನಾಡಿನ ಉದ್ದಗಲ ಹರಡಿವೆ. ಅವುಗಳಲ್ಲಿ ಕೆಲವು ಗೊಡಚಿ, ಸಿಂಗಟಾಲೂರು, ಚೌಡದಾನಪುರ, ಅಣ್ಣಿಗೇರಿ, ನರೇಗಲ್ಲು, ಹಿರಿಯಡ್ಕ, ಹಲಕರಟಿ, ಕೋರವಾರ, ಹಾವೇರಿ, ರಾಯಚೋಟಿ, ಕಾಳಹಸ್ತಿ, ಲೇಪಾಕ್ಷಿ ಹೀಗೆ ಇನ್ನೂ ಪಟ್ಟಿ ಬೆಳಸಬಹುದು. ವೀರಭದ್ರನ ಆರಾಧನೆಯ ಆಚರಣೆಯ ಕುಣಿತಗಳು ಬೇರೆ ಬೇರೆ ಹೆಸರಿನಿಂದ ಪ್ರಚಲಿತವಾಗಿವೆ. ಇವುಗಳಲ್ಲಿ ಕೆಲವು ಪುರವಂತಿಕೆ, ಕಾಸೆಕುಣಿತ, ನಂದೀಧ್ವಜ ಕುಣಿತ, ವೀರಗಾಸೆ, ವೀರಭದ್ರನ ಕುಣಿತ, ಜೋಯಪಾಟ್ (ಕೊಡಗು) ಮುಂತಾದವು. ಕಲಬುರ್ಗಿ ಜಿಲ್ಲೆಯ ಚೌಡಮ್ಮನ ಕುಣಿತ ಮತ್ತು ಹಾಸನ ಜಿಲ್ಲೆಯ ತೊಂಡಲದೇವ ಕುಣಿತಗಳು ವೀರಭದ್ರ ದೇವತೆಗೆ ಸಂಬಂಧಿಸಿದ ಇತರ ಆಚರಣೆಗಳು. ವೀರಭದ್ರ ಆರಾಧನೆಗೆ ಸಂಬಂಧಿಸಿದ ಪುರವಂತಿಕೆಯನ್ನು ವಿವೇಚಿಸುವ ಮೊದಲು ‘ವೀರಭದ್ರ’ನನ್ನು ಕುರಿತ ಕೆಲವು ಸಂಗತಿಗಳನ್ನು ಗಮನಿಸುವುದು ಅಗತ್ಯ.

ವೀರಭದ್ರನ ಕಥಾನಕ ವೇದ, ಶಿವಪುರಾಣ, ಮಹಾಭಾರತ, ಶಿಲಾಶಾಸನ ಇತ್ಯಾದಿಗಳಲ್ಲಿ ಉಕ್ತವಾಗಿದೆ. ವೀರಭದ್ರನನ್ನೇ ಕುರಿತ ಕೆಲವು ಪುರಾಣಗಳೂ ರಚನೆಗೊಂಡಿವೆ. ಜನಪದ ಸಾಹಿತ್ಯದಲ್ಲಿ ಈ ದೇವತೆ ಕುರಿತಾದ ಅನೇಕ ಉಲ್ಲೇಖಗಳಿವೆ.

ಆರ್ಯಪೂರ್ವದ ಭಾರತೀಯ ಜನಸಮುದಾಯ, ದ್ರಾವಿಡ ಜನಾಂಗ, ಆರ್ಯರ ದೇವತೆ ರುದ್ರ ಮತ್ತು ದ್ರಾವಿಡರ ಶಿವ. ಅವರಿವರಲ್ಲಿ ದೇವತೆಗಳ ಪಾರಮ್ಯ ಕುರಿತ ಸಂಘರ್ಷ, ಸಿಂಧೂ ಸಂಸ್ಕೃತಿಯ ಕಾಲಾವಧಿಯಲ್ಲಿ (ಬಿ. ಸಿ. ೩೦೦೦-ಬಿ. ಸಿ. ೩೫೦೦) ರುದ್ರ, ಶಿವ ದೇವತೆಗಳ ಸಮೀಕರಣ ಇತ್ಯಾದಿಗಳನ್ನು ಸಂಬಂಧಿಸಿದ ಸಂಶೋಧನೆಗಳು[5] ಭಾರತೀಯ ಮಿಶ್ರ ಸಂಸ್ಕೃತಿಯ ಬೆಳವಣಿಗೆಯಲ್ಲಿ ಒಂದು ಮಹತ್ವದ ಘಟ್ಟ ಎನ್ನುವ ಮಾತನ್ನು ಸ್ಪಷ್ಟಪಡಿಸುತ್ತವೆ. ಈ ಸಮೀಕರಣ ಸ್ವೀಕರಣಗಳಿಗೆ ಸಂಬಂಧಿಸಿದ ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ಆರ್ಯಮೂಲದ ದಕ್ಷ ಮತ್ತು ದ್ರಾವಿಡ ಮೂಲದ ಶಿವ ಇವರಿಬ್ಬರ ಸಂಘರ್ಷಣೆಯೇ ವೀರಭದ್ರನ ‘ಅವತಾರ’ಕ್ಕೆ ಕಾರಣವಾಗಿರುವ ಕಥಾನಕದ ಭಾಗ ನಮ್ಮ ವಿವೇಚನೆಗೆ ಮುಖ್ಯವಾಗುತ್ತದೆ.

ಪ್ರಜಾಪತಿ ತಾನು ನೆರವೇರಿಸಿದ ಯಜ್ಞವೊಂದಕ್ಕೆ ಎಲ್ಲ ದೇವತೆ ಋಷಿಗಳನ್ನು ಆಹ್ವಾನಿಸಿದ. ದಕ್ಷ ಆ ಯಜ್ಞಮಂಟಪಕ್ಕೆ ಬಂದಾಗ ಎಲ್ಲ ದೇವತೆಗಳೂ ಎದ್ದು ಗೌರವ ತೋರಿದರು. ಶಿವ ಮಾತ್ರ ಹಾಗೆಯೇ ಕೂತಿದ್ದ. ತನ್ನ ಅಳಿಯ ಶಿವನ ಈ ನಡುವಳಿಕೆಯಿಂದ ಕುಪಿತನಾದ ದಕ್ಷ ‘ಇವನೊಬ್ಬ ಅಶುದ್ಧ; ಅನಾಚಾರಿ, ಅಹಂಕಾರಿ. ಭೂತಗಳ ಜೊತೆ ಬೆತ್ತಲೆಯಾಗಿ ಬೂದಿ ಬಳಿದುಕೊಂಡು, ಹುಚ್ಚನಂತೆ ಸುಡಗಾಡದಲ್ಲಿ ಅಲೆದಾಡುತ್ತಾನೆ. ತನ್ನನ್ನು ತಾನು ‘ಶಿವ’ ಎಂದು ಕರೆದುಕೊಳ್ಳುತ್ತಾನೆ; ವಾಸ್ತವವಾಗಿ ‘ಅಶಿವ’. ಇಂಥ ಅಶುದ್ಧನಿಗೆ ಬ್ರಹ್ಮನ ಮಾತು ಕೇಳಿ ನನ್ನ ಮಗಳನ್ನು ಕೊಟ್ಟೆ, ಅಯೋಗ್ಯ. ಇಂದ್ರ, ವಿಷ್ಣು ಮೊದಲಾದವರಿಗೆ ಸಲ್ಲುವ ಗೌರವ ಇವನಿಗೆ ಎಂದಿಗೂ ಸಲ್ಲದು’ ಎಂದು ಮುಂತಾಗಿ ಶಿವನನ್ನು ಜರಿದನು. ಅಲ್ಲಿಯೇ ಇದ್ದ ನಂದಿ ಭೃಗು ಮುಂತಾದವರು ಅವನ ಮಾತನ್ನು ಖಂಡಿಸಿ ‘ನೀನೊಬ್ಬ ಪಶು. ನಿನ್ನ ಮುಖ ಕುರಿಯ ಮುಖವಾಗಲಿ’ ಎಂದು ಶಪಿಸಿ ಶಿವ ಸಹಿತ ಅಲ್ಲಿಂದ ಹೊರಗೆ ನಡೆದೇಬಿಟ್ಟರು. ಕಾಲಾನಂತರದಲ್ಲಿ ದಕ್ಷ ಒಂದು ಯಜ್ಞ ಹಮ್ಮಿಕೊಂಡ. ಶಿವನನ್ನುಳಿದು ಎಲ್ಲ ದೆವತೆಗಳಿಗೂ ಆಹ್ವಾನ ಹೋಯಿತು. ಕಸಿವಿಸಿಗೊಂಡ ಶಿವಸತಿ ಉಮಾ, ಶಿವನ ಅಪ್ಪಣೆ ಪಡೆದು, ಆಹ್ವಾನವಿಲ್ಲದಿದ್ದರೂ ತಂದೆ ನೆರವೇರಿಸುವ ಯಜ್ಞಕ್ಕೆ ಬಂದಳು. ತಂದೆಯ ಧೋರಣೆ ಸರಿ ಅಲ್ಲ ಎಂದು ವಾದಿಸಿದಳು. ದಕ್ಷನ ಮನಸ್ಸು ಬದಲಾಗಲಿಲ್ಲ. ತನ್ನ ಗಂಡನಿಗಾದ ಅವಮಾನ ಸಹಿಸಲಾರದೆ ಕೊನೆಗೆ ಯಜ್ಞ ಕುಂಡದಲ್ಲಿ ‘ಶಿವಾಯ ಸ್ವಾಹಾ’ ಎಂದು ತನ್ನನ್ನೇ ತಾನು ಅರ್ಪಿಸಿಕೊಂಡಳು. ಇದನ್ನು ಕಂಡ ಕೆಲವು ‘ಗಣ’ರು[6] ತಕ್ಷಣ ಶಿವನಲ್ಲಿಗೆ ಬಂದು ಭೀಕರ ಘಟನೆಯನ್ನು ವಿವರಿಸುತ್ತಾರೆ. ಉಗ್ರ ಕೋಪದಿಂದ ರುದ್ರಭೀಕರನಾದ ಶಿವ ತನ್ನ ಸುದೀರ್ಘ ಜಟೆಯನ್ನು ನೆಲಕ್ಕೆ ಅಪ್ಪಳಿಸುತ್ತಾನೆ. ಆ ಕ್ಷಣವೇ ವೀರಭದ್ರನ ತೇಜೋಮೂರ್ತಿಯ ಹುಟ್ಟು. (ಮಹಾಭಾರತ ಶಾಂತಿಪರ್ವ ಅಧ್ಯಾಯ 289, ಶಿವಪುರಾಣ ರುದ್ರಸಂಹಿತೆ ಸತಿಖಾಂಡ 2 ಅಧ್ಯಾಯ 43, ವಿಷ್ಣುಧರ್ಮೋತ್ತರ ಪುರಾಣ ಅಧ್ಯಾಯ 100 ಇತ್ಯಾದಿ ಆಕರಗಳು). ಭೃಹದ್ ಧರ್ಮಪುರಾಣದಲ್ಲಿ ವೀರಭದ್ರ ಶಿವನ ಒಂದು ಅತ್ಯುಗ್ರ ರೂಪ ಎಂದು ವರ್ಣಿಸಲಾಗಿದೆ. ಹೀಗೆ ಮೂಡಿನಿಂತ ಕ್ರುದ್ಧನಾದ ವೀರಭದ್ರ, ಶಿವನ ಆಜ್ಞೆಯಂತೆ ಗಣರೊಡಗೂಡಿ ದಕ್ಷಯಜ್ಞದ ಸ್ಥಳಕ್ಕೆ ಬರುತ್ತಾನೆ. ದಕ್ಷಬ್ರಹ್ಮನ ತಲೆ ಕತ್ತರಿಸಿ ಚೆಲ್ಲುತ್ತಾನೆ. ಯಜ್ಞವನ್ನು-ಕೆಂಡಕೊಂಡವನ್ನು-ತುಳಿದು ಚೆಲ್ಲಾಪಿಲ್ಲಿ ಮಾಡಿ ಧ್ವಂಸಗೊಳಿಸುತ್ತಾರೆ. ಹವಿಸ್ಸನ್ನು ಅರ್ಪಿಸುತ್ತಿದ್ದ ಭೃಗು ಮುಂತಾದ ಋಷಿಗಳೂ ಅವಮಾನಕ್ಕೀಡಾಗುತ್ತಾರೆ. ದಕ್ಷಬ್ರಹ್ಮನ ಹೆಂಡತಿಯ ಮೊರೆಗೆ ‘ಓಗೊಟ್ಟು ಶಿವನ ಆಣತಿಯಂತೆ ಕುರಿಯ ತಲೆಯೊಂದನ್ನು ದಕ್ಷನಿಗೆ ಜೋಡಿಸಿ ಅವನಿಗೆ ಜೀವದಾನ ಮಾಡಲಾಯಿತು. ದಕ್ಷನಿಗೆ ತನ್ನ ತಪ್ಪಿನ ಅರಿವಾಯಿತು. ಪಶ್ಚಾತ್ತಾಪಹೊಂದಿ ತನ್ನನ್ನು ರಕ್ಷಿಸುವಂತೆ ಪ್ರಾರ್ಥನೆಮಾಡಿದ. ಅಲ್ಲಿಂದ ಶಿವ ಹಿಮಾಲಯಕ್ಕೆ ಹೋಗಿ ತಪೋಮಗ್ನನಾಗುತ್ತಾನೆ. ಗಿರಿಜೆಯ ಪೂಜೆ, ತಪೋಭಂಗ ಕಾಮದಹನ, ಗಿರಿಜಾಕಲ್ಯಾಣ ಹೀಗೆ ಕಥೆ ಮುಂದುವರೆಯುತ್ತದೆ.

ಈ ಪೌರಾಣಿಕ ಕಥಾನಕದ ಸಾಹಿತ್ಯಕ ಉಲ್ಲೇಖಗಳ ವಿವರ ಇಲ್ಲಿ ಅಪ್ರಸ್ತುತ. ಆದರೆ ಚಾರಿತ್ರಿಕವಾಗಿ ಪಂಪನಿಂದ ಹರಿಹರ, ರಾಘವಾಂಕ. ಲಕ್ಕಣ ದಂಡೇಶ, ವೀರಭದ್ರರಾಜ (1530) ಷಡಕ್ಷರದೇವ, ಅಳಿಯ ಲಿಂಗರಾಜ 1900 ರಲ್ಲಿ ಆಗಿಹೋದ ರೇವಣಸಿದ್ಧಕವಿಯವರೆಗೆ ವೀರಭದ್ರನನ್ನು ಕುರಿತ ಕೃತಿ ರಚನೆ, ಶತಕ, ತಾರಾವಳಿ ಕೃತಿಗಳಿವೆ. ಜನಪದ ಸಾಹಿತ್ಯದಲ್ಲಿಯಂತೂ ಗುಗ್ಗಳ ಪೂಜಾ ಪದ, ವಡಬು, ಯಕ್ಷಗಾನ ಬಯಲಾಟಗಳ ವರೆಗೆ ಇದರ ವ್ಯಾಪ್ತಿ. 1184ರ ತಾಳಿಕೋಟೆಯ ಶಾಸನದಿಂದ ಮೊದಲುಗೊಂಡು (ವಿರುಪರಸನಿಗೆ ವೀರಭದ್ರನ ಗುಣಸ್ವಭಾವಗಳ ಹೋಲಿಕೆ) ಅಬ್ಬಲೂರು (1200), ಇಂಗಳಗಿ (1209), ಸೊರಬ (1430), ಹಲಕರಟಿ (1500) ಮುಂತಾದ ಶಾಸನಗಳಲ್ಲಿ ವೀರಭದ್ರ ದೇವತೆ ಕುರಿತ ಉಲ್ಲೇಖಗಳಿವೆ. ವೀರಶೈವನಿಷ್ಠಗೆ ಖ್ಯಾತನಾದ ಏಕಾಂತದ ರಾಮಯ್ಯ ವೀರಭದ್ರನ ಅಪರಾವತಾರವೇ ಎಂದು ನಂಬಲಾಗುತ್ತದೆ. ವೀರಭದ್ರನ ಕಥಾನಕ ಮತ್ತು ಈ ವೀರಭದ್ರಪರಂಪರೆ ಎಷ್ಟು ವ್ಯಾಪ್ತಿಯನ್ನು ಪಡೆಯಿತು.  ಎಷ್ಟೊಂದು ಜನಪ್ರಿಯತೆಯನ್ನು ಪಡೆಯಿತು ಜನಾಂಗದ ಮನಸ್ಸಿನ ಮೇಲೆ ಎಂಥ ಪ್ರಭಾವ ಬೀರಿತು, ಧಾರ್ಮಿಕ ಶ್ರದ್ಧೆಯನ್ನು ಮೂಡಿಸಿತು ಎನ್ನುವುದಕ್ಕೆ ಈ ಎಲ್ಲ ವಿವರಣೆಗಳು ಸಾಕ್ಷಿ.

ಆಚರಣೆಗಳಿಗೂ ಮತ್ತು ವೀರಭದ್ರ ಪೌರಾಣಿಕ ಕಥಾನಕಕ್ಕೂ ಇರುವ ಪರಸ್ಪರ ಗಾಢ ಸಂಬಂಧವೇ ಪುರವಂತಿಕೆಯ ರಾಚನಿಕ ಬಂಧವಾಗಿ ಮುಂದುವರೆದಿದೆ. ಈ ಪುರಾಣದ ಎರಡು ಮುಖ್ಯ ಹಂತಗಳು :

ಒಂದು: ಗಣರು ತಂದೆ ದಾಕ್ಷಾಯಿಣಿಯ ಆತ್ಮಾರ್ಪಣೆಯ ಸುದ್ದಿ-ಅದರಿಂದ ಕ್ರುದ್ಧನಾಗಿ ಜಟೆಯನ್ನು ನೆಲಕ್ಕಪ್ಪಳಿಸುವ ಉಗ್ರ ಶಿವ: ಎರಡು: ಶಿವನ ಕಣ್ಣಿಂದ ಜ್ವಾಲೆ ಚಿಮ್ಮುವುದು; ವೀರಭದ್ರನ ಹುಟ್ಟು-ಶಿವನ ಆಜ್ಞೆ. ಗಣರೊಡಗೂಡಿ ವೀರಭದ್ರ ರುದ್ರತಾಂಡವ ರೋಷದಿಂದ ಕುಣಿದು ಕುಪ್ಪಳಿಸಿ ಯಜ್ಞಮಂಟಪಕ್ಕೆ ಧಾವಿಸುವುದು, ಯಜ್ಞ ಧ್ವಂಸಗೊಳಿಸುವುದು. ದಕ್ಷನ ತಲೆ ಕತ್ತರಿಸುವುದು; ಪುನಃ ದಕ್ಷನನ್ನು ಕುರಿತಲೆಯಿಂದ ಜೀವಂತಗೊಳಿಸುವುದು. ಪುರಾಣ ಮತ್ತು ಆಚರಣೆಗಳ ಸಂಬಂಧದಲ್ಲಿ ಹುದುಗಿರುವ ಅಂಶಗಳೆಂದರೆ ಕಥಾನಕ, ಪವಾಡ (ಅದ್ಭುತ) ಘಟನೆ (ಶೌರ್ಯ), ಸೌಂದರ್ಭಿಕ ಕ್ರಿಯೆ (ಅಭಿನಯ). ಇದನ್ನು ಸಂಕ್ಷೇಪಿಸಿ ಹೇಳುವುದಾದರೆ, ಪೌರಾಣಿಕ ಘಟನೆಗಳ ಅಭಿನಯವೇ ಆಚರಣೆಗಳು.

ಶಿವಪುರಾಣದ ಪೌರಾಣಿಕ ಪದರುಗಳನ್ನು ಕೆದರುತ್ತ ಹೋದಾಗ ದೊರೆಯುವ ಶಿವ-ಪಶುಪತಿ, ನಂದಿವಾಹನ, ದೈತ್ಯನಾಥ ದಾನವಾಧಿತಿ, ನೀಲಕಂಠ-ಇತ್ಯಾದಿಗಳ ಆಚೆ ಹುದುಗಿರುವುದು ಪ್ರಾಗೈತಿಹಾಸಿಕ ಅಜ್ಞಾತಕಾಲದ ಒಬ್ಬ ಸಾಂಸ್ಕೃತಿಕವೀರ. ವೀರಭದ್ರಕೂಡ ಸಾಂಸ್ಕೃತಿಕ ವೀರ. ಆರ್ಯ ದ್ರಾವಿಡ ಜನಾಂಗ ಸಂಘರ್ಷದ ಸಂದರ್ಭದಲ್ಲಿ ತನ್ನ ಗುಂಪಿನ ಮೇಲೆ ಆದ ಅನ್ಯಾಯ, ದೌರ್ಜನ್ಯಗಳನ್ನು ಧಿಕ್ಕರಿಸಿ ಅದಕ್ಕೆ ಕಾರಣರಾದವರನ್ನು ನಾಶಮಾಡಲು ಹೋರಾಟಕ್ಕಿಳಿದ ಧೀರಶಕ್ತಿ ವೀರಭದ್ರನಾಗಿರಬೇಕೆಂದು ತೋರುತ್ತದೆ. ವೀರಭದ್ರ ಕಾಲಾನಂತರದಲ್ಲಿ ಶಿವನಂತೆಯೇ ಪುರಾಣೀಕರಣಗೊಂಡು ನಾಡಿನ ಜನಸಮುದಾಯದ ಅಧಿದೈವವಾಗಿ ಆರಾಧನೆಗೊಳ್ಳುತ್ತ ಬಂದಿರುವ ಈತ, ಒಬ್ಬ ಸಾಂಸ್ಕೃತಿಕವೀರ. ಈತ ಹೇಗೆ ಸಾಂಸ್ಕೃತಿಕ ವೀರ ಎನ್ನುವುದು ಪ್ರತ್ಯೇಕ ಪ್ರಬಂಧದ ವಿಷಯ. ಆದರೆ ಇಲ್ಲಿ ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಹೆರ್ಸ್ಕೂವಿಟ್ಸ್ ಅವರ ಮಾತನ್ನು ಗಮನಿಸಿದರೆ ಸಾಕು ಎನಿಸುತ್ತದೆ. “ಒಂದು ಜ್ವಲಂತ ಶಕ್ತಿಯಾಗಿರುವ ಪುರಾಣದ ನಿಜವಾದ ಕ್ರಿಯೆ ಸಮಜಾಯಿಷಿ, ವಿವರಣೆಗಳನ್ನು ನೀಡುವುದಲ್ಲ; ಅದು ಸಂಬಂಧಿಸಿದ ಬುಡಕಟ್ಟು, ಸಮುದಾಯವನ್ನು ಒಂದುಗೂಡಿಸುವುದು ಸ್ಥಿರೀಕರಿಸುವುದು.”[7]

ವೀರಭದ್ರ ಒಂದು ಜ್ವಲಂತ ಶಕ್ತಿ; ಆತನ ಸಾಹಸ ಪರಾಕ್ರಮಗಳು ಪುರವಂತಿಕೆಯ ಆಚರಣೆಯಲ್ಲಿ ಅಭಿನಯಿಸಲ್ಪಟುತ್ತವೆ. ನಾಡಿನ ಉದ್ದಗಲಕ್ಕೂ ಇಂದಿಗೂ ಪ್ರಚಲಿತವಾಗಿರುವ ಪುರವಂತರ ಆಚರಣೆ-ಪುರವಂತರ ಕುಣಿತವೇ ಇದಕ್ಕೆ ಸಾಕ್ಷಿ.

ಒಂದು ಪ್ರತಿಷ್ಠಾಪಿತ ವ್ಯವಸ್ಥೆಯ ವಿರುದ್ಧ ಬಂಡೆದ್ದ ವೀರಭದ್ರನ ಶೌರ್ಯ ಪರಾಕ್ರಮಗಳ ಆಚರಣೆ ಕೌಟುಂಬಿಕ, ಸಾಮಾಜಿಕ ಮಹತ್ವವನ್ನು ಪಡೆಯಿತೆಂದು ತೋರುತ್ತದೆ. ಒಂದು ಜನಾಂಗದ ವೈಚಾರಿಕ ದಿಕ್ಕನ್ನು ಬದಲಿಸುವ ಯಾವುದೇ ಘಟನೆ ಸಾಂಸ್ಕೃತಿಕ ಮೌಲ್ಯವನ್ನು ಪಡೆಯುವುದರಿಂದ ವೀರಭದ್ರನ ಆರಾಧನೆಯ ಅಂಗವಾದ ಪುರವಂತಿಕೆಯ ಆಚರಣೆ ಪುರಾಣೀಕರಣಗೊಂಡ ವಾಸ್ತವ ಧೀರ ಕಾರ್ಯಗಳ ಸಂಸ್ಮರಣೆಯಾಗಿದೆ; ಸ್ಮಾರಕೋತ್ಸವವಾಗಿದೆ. ಈ ಕಾರಣದಿಂದಲೇ ಪುರವಂತರ ಕುಣಿತ ಕರ್ನಾಟಕದ ಬಹು ಪ್ರದೇಶಗಳಲ್ಲಿ ಮನೆಮಾತಾಗಿದೆ.

) ಥರ್ಷ್ಟನ್ ಅಂದಿನ ಹಳೆಮೈಸೂರು ಭಾಗದಲ್ಲಿ ತಾನು ಕಂಡ ವೀರಭದ್ರ ಪಂಥದ ಜನರ ಒಂದು ಆಚರಣೆಯ ಕುಣಿತದ ವಿವರಣೆ ಕೊಟ್ಟಿದ್ದಾನೆ. ಪುರವಂತರಿಗೆ ‘ವೀರಭದ್ರ ಕಾಯಕದವರು’ ‘ಕಾಸಿಲಿಂಗ ವೀರರು’ ಇತ್ಯಾದಿ ಹೆಸರೂ ಇದ್ದಂತೆ ತೋರುತ್ತದೆ.

) ವೀರಭದ್ರ ಪಂಥ ಪ್ರಭಾವಗಳನ್ನು ಕುರಿತು ಶ್ರೀ ಜ. ಚ. ನಿ. ವಿಶೇಷ ರೀತಿಯ ಅಧ್ಯಯನ ನಡೆಸಿದಂತೆ ತೋರುತ್ತದೆ. ಅವರ ಬರವಣಿಗೆ ಅನೇಕ ಸಲ ಉತ್ಸಾಹ, ಅತಿಧ್ವನಿ, ವೈಭವೀಕರಣಗಳಿಂದ ತುಂಬಿರುವುದರಿಂದ ವೈಜ್ಞಾನಿಕ ದೃಷ್ಟಿಧೊರಣೆಗಳನ್ನು ಅಲ್ಲಿ ಕಾಣುವುದು ವಿರಳ. ಡಾ. ವಿ. ಶಿವಾನಂದ ಅವರ ವೀರಭದ್ರ ಕುರಿತ ಬರವಣಿಗೆ ಈ ನಿಟ್ಟಿನ ಆಕರ ಸಾಮಗ್ರಿಗಳನ್ನು ಒದಗಿಸುತ್ತದೆ; ಅಧ್ಯಯನದ ಹಾದಿಯನ್ನು ಸ್ಪಷ್ಟಪಡಿಸುತ್ತದೆ.[8] ‘ಪುರ ಇಲ್ಲದವರನ್ನು ಪುರವಂತರನ್ನಾಗಿ ಮಾಡುವ ಕಾಯಕದವರು ಪುರವಂತರು.’ ಶ್ರೀ ಜ. ಚ. ನಿ. ಅವರ ಈ ವಿವರಣೆ ನಮ್ಮನ್ನು ಯಾವ ದಡಕ್ಕೂ ಒಯ್ಯುವುದಿಲ್ಲ. ಪುರ ಇಲ್ಲದವರಿಗೆ ಪುರ ಕಟ್ಟಿಸಿಕೊಟ್ಟರೇ? ಅಥವಾ ಅವರಿಗೆ ಪುನರ್ವಸತಿ ಕಲ್ಪಿಸಿಕೊಟ್ಟರೇ? ಅವರೇನು ಯಾವುದಾದರೂ ನಾಡಿನ ಪ್ರಭುಗಳಾಗಿದ್ದರೇ? ನಿರಾಶ್ರಿತರಿಗೆ, ದುರ್ಬಲರಿಗೆ ಬೆಂಬಲವಾಗಿ ನಿಂತ ಒಂದು ಬಗೆಯ ರಕ್ಷಣಾ ದಳವಾದ ಧಾರ್ಮಿಕ ಹೊಣೆ ಮತ್ತು ಸಾಮಾಜಿಕ ಬದ್ಧತೆಯುಳ್ಳ ವೀರಭದ್ರನ ಅನುಯಾಯಿಗಳಾದ ವೀರರು, ಪುರವಂತರೆಂದು ಕರೆಸಿಕೊಂಡಂತೆಕಾಣುತ್ತದೆ. ಇಂಥ ಒಂದು ರಕ್ಷಣಾದಳದ ಉಲ್ಲೇಖ ೧೨ನೆಯ ಶತಮಾನದ ಆಂಧ್ರಪ್ರದೇಶದ ಶಾಸನವೊಂದರಲ್ಲಿ ದೊರೆಯುವುದನ್ನು ಡಾ. ವಿ. ಶಿವಾನಂದ ಗುರುತಿಸಿದ್ದಾರೆ.[9] ಒಂದು ಗ್ರಾಮದ ಹತ್ತು ಜನರ ಒಂದು ರಕ್ಷಣಾದಳಕ್ಕೆ ‘ವೀರಭದ್ರರು’ ಎಂದು ಹೆಸರು. ಈ ವೀರಭದ್ರರು ಚೋಳ ನಾಡಿನಿಂದ ಬಂದವರು. ಇವರು ಗ್ರಾಮದ ಹಿತರಕ್ಷಣೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಲೂ ಹಿಂಜರಿಯದ ಧೀರರು…’ ಇತ್ಯಾದಿ ಕರ್ನಾಟಕ, ಆಂಧ್ರ, ತಮಿಳುನಾಡು ಈ ಮೂರು ಪ್ರದೇಶಗಳಲ್ಲಿ ಪ್ರಚಲಿತವಿರುವ ವೀರಭದ್ರ ಪರಂಪರೆಯ ವಸ್ತುಸಂಗತಿಗಳ ಸಂಗ್ರಹ, ವಿಶ್ಲೇಷಣೆಗಳು ನಡೆದಾಗ ಪುರವಂತರು, ಪುರವಂತಿಕೆಯ ಆಚರಣೆ ಕುರಿತ ಖಚಿತ ವಿವರಣೆಗಳು ದೊರೆಯುವ ಸಾಧ್ಯತೆಯಿದೆ. ಈಗ ನೇರವಾಗಿ ಪುರವಂತರ ಕುಣಿತದ ವಿವೇಚನೆ ಎತ್ತಿಕೊಳ್ಳಲಾಗಿದೆ.

) ಈ ಟಿಪ್ಪಣಿಯ ಕ್ಷೇತ್ರಕಾರ್ಯಕ್ಕಾಗಿ ಆಯ್ದುಕೊಂಡದ್ದು ಧಾರವಾಡ ಜಿಲ್ಲೆಯ ಹಾವೇರಿಯ ವೀರಭದ್ರೇಶ್ವರ ದೇವಾಲಯ. ಇಲ್ಲಿಯ ಎರೇಸೀಮಿ ಚೆನ್ನಪ್ಪ ಮುಖ್ಯ ಪುರವಂತ, ಮತ್ತು ಈತ ಮುಖ್ಯ ವಕ್ತೈ ಕೂಡ.[10]  ಹಾವಣಗಿ, ಆಲದಕಟ್ಟಿ. ರಟ್ಟೀಹಳ್ಳಿ, ರಾಣೇಬೆನ್ನೂರುಗಳ ಹನುಮಂತಗೌಡ, ಮಹಾದೇವಪ್ಪ ಮುಂತಾದವರು ಇತರ ಪುರವಂತರು, ವೀರಭದ್ರನ ಶೌರ್ಯ ಪರಾಕ್ರಮಗಳ ಅಭಿನಯವೇ ಪುರವಂತರ ಆಚರಣೆಯ ವಿವಿಧ ಕ್ರಿಯೆಗಳ ಜೀವಾಳ. ಅದನ್ನು ನಮ್ಮ ಅನುಕೂಲಕ್ಕಾಗಿ ಪುರವಂತರ ಆಚರಣೆಯ ಕುಣಿತ ಎಂದು ಕರೆಯಲಾಗಿದೆ.

ಗುಗ್ಗುಳ ಹೊರಡಿಸುವುದು ಪುರವಂತಿಕೆಯ ಆಚರಣೆಯ ಒಂದು ಅವಿಭಾಜ್ಯ ಅಂಗವಾಗಿದೆ. ಹರಕೆಹೊತ್ತ ವೀರಭದ್ರ ಕುಲದೇವರಾದ ಕುಟುಂಬದವರು ಹೊರಡಿಸುವ ಗುಗ್ಗುಳದಲ್ಲಿ ‘ಮದುವೆ ಗುಗ್ಗುಳ’ ‘ಮುತ್ತೈದೆ ಗುಗ್ಗುಳ’ ಮುಂತಾದ ಹರಕೆ ಗುಗ್ಗುಳದ ಆಚರಣೆಗಳಿವೆ. ಈ ಬಗೆಯ ಗುಗ್ಗುಳದ ಆಚರಣೆಯ ರಾಚನಿಕ ಅಧ್ಯಯನವೂ ನಮ್ಮಲ್ಲಿ ನಡೆದಿಲ್ಲ. ‘ಭದ್ರಾಂಕ’ವನ್ನು ಹೊರಡಿಸಿದ ವಿದ್ವಾಂಸರು ಇದರ ಬಗ್ಗೆ ಚಕಾರವನ್ನು ಎತ್ತಿದಂತೆ ಕಾಣುವುದಿಲ್ಲ. ಇದು ಧ್ವಂಸಗೊಂಡ ಯಜ್ಞದ ಸಂಕೇತವೇ? ಗುಗ್ಗುಳದ ಕೊಡದ ಆಕಾರ ಯಾಕೆ ಹಾಗಿರಬೇಕು? (ಸುಡುವಾಗಲೇ ಕೊಡದ ಅರ್ಧಕ್ಕೆ ರಂಧ್ರಗಳನ್ನು ಬಿಡಲಾಗುತ್ತದೆ) ಗೋದಿ ಕಣಕ, ನೆನೆಸಿ ಹಾಕಿದ ಹತ್ತೀಕಾಳು, ಕಾಕುಳ್ಳ ಬೂದಿಗಳಿಗೆ ಏನಾದರೂ ವಿಶೇಷ ಅರ್ಥವಿದೆಯೇ? ಗಂಧ, ಬನ್ನಿ, ಕಾರಿ, ಅರಳಿ, ಅತ್ತಿಮರದ ಕಟ್ಟಿಗೆ ತುಂಡು ಮಾತ್ರ ಅಗ್ಗಿಷ್ಠಿಕೆಗೆ ಬಳಸುವುದರ ಹಿನ್ನೆಲೆ ಅವು ಒಳ್ಳೆ ಉರುವಲು ಎಂದೋ, ಅಥವಾ ಅದಕ್ಕೆ ಮತ್ತಾವುದಾದರೂ ಕಾರಣವಿದೆಯೋ? ಇವೆಲ್ಲ ಒಟ್ಟಾಗಿ ಯಾವ ಪ್ರಾಚೀನ ವಸ್ತುವಿಗೆ ಸಂಗತಿಗೆ ಪ್ರತೀಕ? ಇದಾವುದಕ್ಕೂ ಖಚಿತ ಉತ್ತರ ಸಿಗುವುದಿಲ್ಲ. ಆದರೆ ಆಚರಣೆಯಲ್ಲಿ ಗುಗ್ಗುಳ ಕೊಡಗಳಿಗಿರುವ ಮಹತ್ವ ನಮ್ಮ ಮುಂದೆ ಈ ಪ್ರಶ್ನೆಗಳನ್ನು ಚೆಲ್ಲುತ್ತದೆ.

) ಪುರವಂತರ ಆಚರಣೆಯ ಕುಣಿತ ಆರಂಭವಾಗುವುದಕ್ಕೆ ಮೊದಲು ಪುರವಂತರು ಹಾವೇರಿಯ ವೀರಭದ್ರ ದೇವಾಲಯಕ್ಕೆ ಸ್ವಲ್ಪ ದೂರದಲ್ಲಿರುವ ಮರುಳಸಿದ್ಧೇಶ್ವರ ದೇವಾಲಯದಲ್ಲಿ ಸಿದ್ಧರಾಗಿ ಕೂತಿರುತ್ತಾರೆ. ದೈವದ ಅಪ್ಪಣೆ ಪಡೆದ ಭಕ್ತರು ಪುರವಂತರನ್ನು ಕರೆತರುವ ಮೊದಲು ವೀರಭದ್ರನ ಗುಡಿಯ ಪ್ರಾಕಾರದ ಒಳ ಅಂಗಳದಲ್ಲಿ ಸುಮರು 10-‘ರಿಂದ15’ ಸುತ್ತಳತೆಯ ಅಗ್ನಿ ಕುಂಡದಲ್ಲಿ 3 ರಿಂದ 4 ಕಿಚ್ಚಿನರಾಸಿ ಧಗಧಗಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಭಕ್ತರ ಸೂಚನೆಯಂತೆ ಗುಗ್ಗುಳಕೊಡಹೊತ್ತವರ ಜೊತೆ ವೀರವೇಷದ ಪುರವಂತರ ಮೇಳ ಹೊರಡುತ್ತದೆ. ಶಂಖ, ಜಾಗಟಿ. ತಾಸೆ, ಸಮಾಳ, ಕರಡಿ, ಚಂಯ, ಮುಂತಾದ ವಾದ್ಯ ಧ್ವನಿ ಪರಿಸರದಲ್ಲಿ ಉತ್ಸಾಹ, ಆವೇಶ ತುಂಬುತ್ತದೆ. ಪುರವಂತರ ವೇಷ ಕೂಡ ನೆರೆದ ಜನಸಮೂಹದ ವೀರಾವೇಶಕ್ಕೆ ಕೆಲಮಟ್ಟಿಗೆ ಕಾರಣವಾಗುತ್ತದೆ.

) ಪುರವಂತರ ವೇಷಭೂಷಣದ ವಿವರ ಹೀಗಿದೆ : ಕೆದರಿದ ಜಟೆ, ರಣಗೂದಲು, ಕಾವಿರುಮಾಲು, ಕಾವಿಯ ನಿಲುವಂಗಿ, ನಡಪಟ್ಟಿ, ಆ ಪಟ್ಟಿಗೆ ಕಟ್ಟಿದ ಪಂಚಮುದ್ರೆಗಳು, ಚಂದ್ರಮುದ್ರೆ. ನರಸಿಂಹಮುದ್ರೆ, ವೀರಭದ್ರಮುದ್ರೆ ಇತ್ಯಾದಿ. ಇದರ ಜೊತೆ ತ್ರಿಮೂರ್ತಿ ಮುಖಮುದ್ರೆಗಳು, ನಾಗಾಭರಣ, ಬ್ರಹ್ಮಕಪಾಲಗಳನ್ನು ಕಟ್ಟಿಕೊಳ್ಳುತ್ತಾರೆ ಪಂಚಮುದ್ರೆಗಳಿಗೆ ಸರಪಣಿಗಂಟಿ, ಹೊಕ್ಕಳಗಂಟಿಗಳ ಅಳವಡಿಕೆ, ಕೊರಳಲ್ಲಿ ದೊಡ್ಡ ರುದ್ರಾಕ್ಷಿ ಸರ ಐದು ಸುತ್ತು, ಸಣ್ಣ ರುದ್ರಾಕ್ಷಿಸರ ಐದು ಸುತ್ತು, ತೋಳಿಗೆ, ಮುಂಗೈಗೆ ರುದ್ರಾಕ್ಷಿ ಕಂಕಣ, ಕಚ್ಚಿಹಾಕಿದ ಪಂಚೆ, ವೀರಗಾಸೆ ಅಥವಾ ಸುರವಾಲ (ಇಜಾರ), ಕಾಲಲ್ಲಿ ಗೆಜ್ಜೆ, ಗಗ್ಗರಿ, ಕೈಯಲ್ಲಿ ಕತ್ತಿ, ಬಿಲ್ಲು ಬಾಣ ಶಸ್ತ್ರಗಳು. ಪುರವಂತರ ಸಹಾಯಕ್ಕೆ ಕೆಲವು ಭಕ್ತರೂ ಸಿದ್ಧರಾಗಿರುತ್ತಾರೆ. ಗುಗ್ಗಳ ಹೊರುವವರು ಪುರವಂತರು ಮತ್ತು ಈ ಆಚರಣೆಯಲ್ಲಿ ನೇರವಾಗಿ ಭಾಗವಹಿಸುವ ಭಕ್ತರು ಎಲ್ಲ ರೀತಿಯಿಂದಲೂ ಕಟ್ಟುನಿಟ್ಟಿನ ಶುದ್ಧ ಆಚರಣೆಯುಳ್ಳವರಾಗಿರಬೇಕು-ಇದು ವಿಧಿ. ವಾದ್ಯ ಘೋಷ ವೀರಭದ್ರೇಶ್ವರನ ಉದ್ಘ್ಯೋಷಗಳ ಮಧ್ಯದಲ್ಲಿ ಹೊರಡುವ ಪುರವಂತರ ಮೆರವಣಿಗೆ ಯುದ್ಧಕ್ಕೆ ಹೊರಟ ಸೈನ್ಯದ ವೀರೋತ್ಸಾಹವನ್ನು ಕಣ್ಣಿಗೆ ಕಟಿದರೆ ಅಚ್ಚರಿಯಿಲ್ಲ.

ಈ ಆಚರಣೆಯ ವೈಶಿಷ್ಟ್ಯವೆಂದರೆ ಶಾಬ್ದಿಕ ಕಥನ ಮತ್ತು ಅದಕ್ಕನುಗುಣವಾದ ನಾಟ್ಯಕ್ರಿಯೆ-ಕುಣಿತ ಮತ್ತು ಭಾವಾಭಿನಯ-ಒಡನೊಡನೆ ಜರುಗುವುದು.

) ಮೌಖಿಕ ಪರಂಪರೆಯ ಮೂಲಕ ಸಾಗಿಬಂದ ವಡಬುಗಳು ವೀರಭದ್ರನ ಜನನ ವಿಸ್ಮಯ ಅದ್ಭುತ ಆಕಾರ, ಅತಿಮಾನವ ಶಕ್ತಿ, ರೌದ್ರಗಳನ್ನು ಬಣ್ಣಿಸುವ ಅಲಿಖಿತ ದಾಖಲೆಗಳು. ವಡಬುಗಳನ್ನು ಹೇಳುವಾಗ ಪುರವಂತರಲ್ಲಿ ರುದ್ರಾವೇಶ ಚಿಮ್ಮುತ್ತದೆ. ಶಸ್ತ್ರ ಹಾಕಿಕೊಳ್ಳುವುದು, ಭಸ್ಮ ಲೇಪ ನಡೆದಿರುತ್ತದೆ. “ಅಹಹಹಾ ರುದ್ರಾ…ಅಹಹಾ ವೀರಾ” ಎಂದು ವಡಬು ಹೇಳುತ್ತಲೇ ನೆರೆದ ಜನ ‘ಖಡೇ ಖಡೇ’ ಎಂದು ಭಕ್ತಿಯಿಂದ ಉಗ್ಗಡಿಸುತ್ತಾರೆ. ಪುರವಂತರಲ್ಲಿ ವೀರಭದ್ರನ ದಿವ್ಯಶಕ್ತಿ ಪ್ರವೇಶವಾಯಿತೆಂದು ನಂಬಿಕೆ. ಮೈದುಂಬಿದ ಪುರವಂತ; ಆವೇಶಭರಿತ ವಡಬು.

“ಆಹಹಾ ವೀರಾ; ಅಹಹಾ ಶರಭಾ” ನಮ್ಮ ಶ್ರೀ ವೀರಭದ್ರದೇವರು ಹುಟ್ಟಿದಾಗಲೇ ಹೂವಿನಕಾಶಿ, ವಿಷ್ಣುಕಾಶಿ, ಬ್ರಹ್ಮಕಾಶಿ ಮೆಟ್ಟುವ ಹೊನ್ನಿನ ಆವಿಗೆ, ಸಾವಿರ ಶಿರಸ್ಸು, ಮೂರು ಸಾವಿರಕಣ್ಣು, ಎರಡುಸಾವಿರ ಭುಜ, (ಜಂಜುವೇಕ-ಮುಂಡಲಿ) ಜಟಾ ಉರುಲು, ಶೆಡಕಿನ ಹಗ್ಗಾ, ಗಜದಾಂಡು, ಗಜಾಂಕುಶ, ಚಪ್ಪಗೊಡ್ಲಿ, ಚೆನ್ನವೀರಭದ್ರ…ಬತ್ತೀಸ ಆಯುಧಾ ಹಿಡದು…ಅಹಹಾ ವೀರಾ…ಗರಗಸದ ಬಾಣ, ಕುಂಜರದ ಬಾಕು, ಜುಂಜು ಬಿರಿಗಣ್ಣು, ಬಿಲ್ಲುದರಿನ ಹಗ್ಗಾಳಿ, ಪಿಡಿಯೋ ಗಂಡುಗತ್ತರಿ, ಕೈಯೆಂಬ ಕಠಾರಿ, ಈಟಿ, ರಣಚೂರಿ, ಅಹಹಾ ವೀರಾ… ರೌದ್ರಾಕಾರದಿಂದ ಹೂಂಕರೆಸುತ್ತ ಕೋಲಲಯೆಂದು ಹರಿದು, ಹೋಮಕ್ಕೆ ಬಂದು, ವಿಷ್ಣು ಮೊದಲಾದ ದೇವತೆಗಳನ್ನು ಸೆರೆಹಿಡಿದು, ದಕ್ಷಬ್ರಹ್ಮನ ಶಿರವನ್ನು ಅಗ್ನಿಗೆ ಆಹುತಿ ಕೊಟ್ಟು, ಅಗ್ನಿಯ ನಾಲಗೆ ಹರಿದು ಸಪ್ತಭಾಗ ಮಾಡಿ, ಅರವತ್ತಾರು ಕೋಟಿ ವೈರಿಗಳನ್ನು ಕೆಂಡಗಣ್ಣನಿಂದ ಸುಟ್ಟು ಕೆಂಡವೋಕುಳಿ ಎರಗಲು… ಅಹಹಹಾ ವೀರಾ…ಆಗ ನಮ್ಮ ವೀರಭದ್ರನು ಅವಳ ಪತಿಗೆ ಕುರಿ ತಲೆಯನ್ನಿಟ್ಟು ಕೈಲಾಸಕ್ಕೆ ಬಂದದ್ದನ್ನು ಕಂಡು, ಶಿವನು ಭಪ್ಪರೆ, ಭಲಿರೇ ಎಂದು ರತ್ನ ಕೆಚ್ಚಿದ ಸಿಂಹಾಸನದ ಮೇಲೆ ಕೂಡ್ರಿಸಿ ಹೂಮಳೆಗರೆದನು…ಕಡೇ ಕಡೇ…”

ಈ ವೀರ ವರ್ಣನೆ ಮತ್ತು ಅದಕ್ಕನುಗುಣವಾದ ಪುರವಂತರ ಆವೇಶ ಕುಣಿತಗಳಿಂದ ನೆರೆದವರು ಭಯವಿಸ್ಮಿತರಾಗುತ್ತಾರೆ. ವೀರಭದ್ರನ ಅದ್ಭುತ ಕಾರ್ಯಗಳಿಂದ ಭಕ್ತಿ ಪುಲಕಿತರಾಗುತ್ತಾರೆ.

) ಈ ರೀತಿಯಲ್ಲಿ ಪುರವಂತರ ಮತ್ತು ಕುಣಿತವಾದ್ಯ ವಾದನಗಳು ಕೂಡಿ ಅಲ್ಲಲ್ಲಿ ಬೀದಿಯುದ್ದಕ್ಕೂ ಬಯಲಾಟವೇ ತೆರೆದುಕೊಳ್ಳುತ್ತದೆ. ಈ ಅಭಿನಯ ಕುಣಿತ ಉದ್ಘೋಷಗಳು ದೊಡ್ಡಾಟದ ಸ್ವರೂಪ ರಚನೆಗೆ ಪ್ರೇರಕವಾಗಿರುವುದು ಸ್ಪಷ್ಟ.

ಈ ಎಲ್ಲ ಮೆರವಣಿಗೆ ಸಾಗಿ ದೇವಾಲಯದಲ್ಲಿ ನಿರ್ಮಿತವಾದ ಅಗ್ನಿಕುಂಡಕ್ಕೆ ಬರುತ್ತದೆ. ಅಗ್ನಿಕುಂಡದ ಸೂತ್ತಲೂ ಭಸ್ಮ, ಭಂಡಾರ ಮತ್ತು ಕುಂಕುಮದ ಚೌಕಾಕಾರದ ರಂಗವಲ್ಲಿಮಂಡಲ ರಚನೆ. ಅದರ ಮೇಲೆ ಅಲ್ಲಲ್ಲಿ ಹೇರಳವಾದ ಕಣಗಿಲ, ಮಲ್ಲಿಗೆ, ಚಂಡುಹೂ, ಸೇವಂತಿಗೆಗಳ ಸೇಸೆ, ಸರಮಾಲೆಗಳ ಅಲಂಕಾರ.

ಧಗಧಗಿಸುತ್ತಿರುವ ಅಗ್ನಿಕುಂಡದ ಸುತ್ತಲೂ ನೂರಾರು ಸ್ತ್ರೀ ಪುರುಷರು ನೆರೆಯುತ್ತಾರೆ. ಒಂದು ಕ್ಷಣ ಉರಿ ಸುತ್ತೂ ನಾಲಗೆ ಚಾಚುವಂಥ ಕಿಚ್ಚು. ಪುರವಂತರ ಆವೇಶ ಹೆಚ್ಚುತ್ತದೆ. ಪುರವಂತರು ಅಗ್ನಿಕುಂಡದಲ್ಲಿ ಹೊಕ್ಕು ಧಿಗ್ ಧಿಗ್ ಕಿಚ್ಚುತುಳಿದು ಆಚೆ ಸಾಗುತ್ತಾರೆ. ಆಶ್ಚರ್ಯವೆಂದರೆ ಹಾವೇರಿಯ ಈ ದೇವಾಲಯದಲ್ಲಿ ೫-೬ ವರ್ಷದ ಮಕ್ಕಳು, ಹದಿಹರೆಯದ ಹುಡುಗ ಹುಡುಗೆಯರು, ವೃದ್ಧರು ಹೀಗೆ ಏಕಕಾಲಕ್ಕೆ ಪುರವಂತರ ಜೊತೆಗೆ ನೂರಾರು ಜನ ಅಗ್ನಿಕುಂಡ ಪ್ರವೇಶ ಮಾಡಿ ಕಿಚ್ಚು ತುಳಿದು ಆಚೆ ಬಂದದ್ದು.

ಈ ಬಗೆಯ ಒಂದು ಸಾಮೂಹಿಕ ಮಾನಸಿಕ ಸ್ಥಿತಿ, ಚಿತ್ತಸ್ಥೈರ್ಯದ ಆಳದಲ್ಲಿ ಹುದುಗಿರುವ ಧಾರ್ಮಿಕ ಶ್ರದ್ಧೆಯನ್ನು ಪ್ರಶ್ನಿಸಬಹುದೇ? ಏಕೆಂದರೆ ಪುರವಂತರಲ್ಲದ ಇವರು ಬಗೆಬಗೆಯ ಹರಕೆ ಹೊತ್ತವರು. ಈ ಸೇವೆ ಅವರು ಹರಕೆ ಪೂರೈಸುವ ಒಂದು ವಿಧಾನ. ಇದರ ಜೊತೆಗೆ ಇರುವ ಇನ್ನೂ ಕೆಲವು ಆಚರಣೆಗಳೆಂದರೆ ಅಗ್ನಿಕುಂಡದಲ್ಲಿ ತೆಂಗಿನಕಾಯಿ ಉರುಳಿಸುವುದು, ಅಗ್ನಿಕುಂಡದ ಅಂಚಿನಲ್ಲಿ ಕುಳಿತು ಪುರವಂತರನ್ನು ಜಂಗಮರನ್ನು ಆರಾಧಿಸುವುದು ಮತ್ತು ಅವರಿಗೆ ಕಾಣಿಕೆ ಸಲ್ಲಿಸುವುದು ಇತ್ಯಾದಿ. ‘ಗುಗ್ಗುಳ’ ಮರಳಿ ಹೊರಟ ಸ್ಥಾನ ತಲುಪಿದಾಗ ಈ ಆಚರಣೆಗೆ ತೆರೆ.

) ಪುರವಂತರ ಆಚರಣೆಯಲ್ಲಿ ಕುಣಿತದ ಕೆಲವು ವಿಶಿಷ್ಟ ಮಾದರಿಗಳಿವೆ ಮತ್ತು ಅವು ವಿಶೇಷವಾಗಿ ವೀರರಸಪ್ರಧಾನವಾಗಿವೆ, ಪುರವಂತರ ಅಭಿನಯ, ಮುದ್ರೆ, ಭಾವಭಂಗಿ, ಹೆಜ್ಜೆಯ ಮಾದರಿಗಳು ಎಲ್ಲದೂ ಅದ್ಭುತ, ಭಯಾನಕ, ರೌದ್ರಗಳಿಗೆ ಪೋಷಕ. ಭಾವಾನಿಯಕ್ಕೆ ಅನುಗುಣವಾದ ಸಾಮಾನ್ಯವಾಗಿ ನಾಲ್ಕು ಕಾಲಗಳನ್ನು ಗುರುತಿಸಲಾಗಿದೆ. ೧ನೆಯ ಕಾಲದಲ್ಲಿ ಏಕತಾಳ, ೨ ಹೆಜ್ಜೆ ಕುಣಿತ ‘ಥೈರ್ಥೈ’ ‘ಥೈ ಥೈ’ ಎರಡನೆಯ ಕಾಲದಲ್ಲಿ ಆದಿತಾಳ ೩ ಹೆಜ್ಜೆ ಕುಣಿತ ‘ಥೈಥ ಕಥೈಥೈಥಕಥೈ’ ಮೂರನೆಯ ಕಾಲದಲ್ಲಿ ರೂಪತಾಳ (ರೂಪಕತಾಳ) ಧಿಕ್ ಧಿಕ್ ಥೈ ಹೀಗೆ ಬೆಳೆಯುತ್ತ ಹೋಗುವ ಈ ಕುಣಿತದ ಹೆಜ್ಜೆಗಳು ಕೊನೆಯ ಹಂತದಲ್ಲಿ, ಅಂದರೆ ವೀರಾವೇಶದ ಅಂತಿಮ ಘಟ್ಟದಲ್ಲಿ ಅರಜಂಪೆತಾಳ ಗತಿಯ ಅತ್ಯಂತ ವಿಸ್ತೃತ ರೂಪ ತಾಳುತ್ತದೆ. ‘ಧಿಗ್ ಧಿಗಿ ಧಿಗಿ ಧಿಗಿ ಧಿಗ್ ಧಿಗಿ ಧಿಗಿ’ಯಿಂದ ‘ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ’ ಹೀಗೆ ಹದಿನಾರು ಹೆಜ್ಜೆಯ ಕುಣಿತವಾಗುತ್ತದೆ. ಆಗ ಪುರವಂತ ಮಂಡಲಾಕಾರವಾಗಿಯೂ ಕುಣಿಯಬಹುದು.

ಉಪಸಂಹಾರ :

೧. ಮತ ಸಂಘರ್ಷ ಹೊಸ ಸಂಕೀರ್ಣ ಸಂಸ್ಕೃತಿಯ ರಚನೆಗೆ ಪ್ರೇರಕವಾಗಬಹುದು.

೨. ವೀರಭದ್ರ ಸ್ಥಾಪಿತವ್ಯವಸ್ಥೆ (ಯಜ್ಞ ಇತ್ಯಾದಿ)ಯ ವಿರುದ್ಧ ಬಂಡೆದ್ದ ಒಬ್ಬ ಸಾಂಸ್ಕೃತಿಕ ವೀರ.

೩. ವೀರಭದ್ರ ಸಾಂಸ್ಕೃತಿಕ ಘಟನೆಯನ್ನು-ಕಥಾನಕವನ್ನು ಆಚರಣೆಯ ಕುಣಿತದ ಮೂಲಕ ಅಭಿನಯಿಸುವ, ಸಂಸ್ಮರಿಸುವ ತಂಡವೇ ಪುರವಂತರು.

೪. ವೀರಭದ್ರ ಪರಂಪರೆಯ ಶಿಷ್ಟ ಮತ್ತು ಜನಪದ ಪರಂಪರೆಗಳ ಅಖಿಲ ಭಾರತ ವ್ಯಾಪ್ತಿಯ ಶಾಬ್ದಿಕ ಮತ್ತು ಅಶಾಬ್ದಿಕ ಸಂಗತಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವುದು ಮತ್ತು ಅದರ ಧಾರ್ಮಿಕ ಸಾಮಾಜಿಕ ಮೌಲ್ಯ ಗುರುತಿಸುವುದು.

೫. ಆರಾಧನಾ ಕಲೆಗಳು ನಮ್ಮ ಸಂಸ್ಕೃತಿಯ ಸಂವಾಹಕ ರೂಪಗಳು.


[1]      Whiihelm Dupre : Religion in Primitive Cultures, P. 62.

[2]        ‘Myth is a nerrative connected witha rite’.
Stith Thompson : Myth and Folk Toles, J. A. F. L. XVI II (1955), P. 483.

[3]        a myth is the spoken part of a ritual; the story which the ritual enacts’, quoted from william Bascom : Contributiom to Folklorestics, P. 85.

[4]        ಗೊ. ರು. ಚೆನ್ನಬಸಪ್ಪ : ಕರ್ನಾಟಕದ ಜನಪದ ಕಲೆಗಳು, ಕ. ಸಾ. ಪರಿಷತ್ತು, ಬೆಂಗಳೂರು, ೧೯೭೭.

[5]        A. P. Karmarkar: The Religion of India, Vol. I, PP. 33-49.

[6]        ‘ಗಣ’ರು ಶಿವನ ಉಗ್ರ ಅನುಯಾಯಿಗಳೆಂಬ ನಂಬಿಕೆ. ಸ್ಕಾಂದ, ಸೌಪ್ತಿಕ ಮುಂತಾದ ಪುರಾಣಗಳಲ್ಲಿ ಗಣರನ್ನು ಕುರಿತ ವಿವರಗಳಿವೆ. ನಂದಿ, ಮಹಾಕಾಲ, ಸ್ಕಂದಸ್ವಾಮಿ, ಗಣಪ ಈ ಕೆಲವರು ಮಹಾಗಣರು. ವಚನ ಸಾಹಿತ್ಯ ಮತ್ತು ಇತರ ಕನ್ನಡ ಕೃತಿಗಳಲ್ಲಿ ಗಣರ ವಿವರಣೆಯಿದೆ. ಸ್ಕಾಂದ ಪುರಾಣದ 4 ನೆಯ ಪರೀಚ್ಛೆದದ 87 ನೆಯ ಪದ್ಯದಲ್ಲಿ ಒಟ್ಟು ಗಣರ ಸಂಖ್ಯೆ 11 ಕೋಟಿ ಎಂದು ಹೇಳಲಾಗಿದೆ. ಇದು ಅಂದಿನ ಜನಸಂಖ್ಯೆಯಾಗಿರಲೂ ಸಾಧ್ಯ.

[7]        ‘The true function of a myth so far as it remains a living force, is not to provide explanation, but to stabilise and unify the community or tribe to which it belongs’. Melville J, Herskovits : Cultural Anthropology, 1960, P. 229.

[8]        ಶ್ರೀ ಜ. ಚ. ನಿ. ಮಾಮಿಡಿ ಭದ್ರಾಂಕ-1, ಸಂ. 6, ಸಂ. 22 1985.

[9]        ಡಾ. ವಿ. ಶಿವಾನಂದ, ಶ್ರೀ ಆಣಿ ವೀರಭದ್ರೇಶ್ವರ ಪುರಾಣ ಪು. 20, 1977.

[10]       ಶ್ರೀ ಎರೇಸೀಮಿ ಚೆನ್ನಪ್ಪ, ವಯ, 53, ವೀರಭದ್ರನ ಒಕ್ಕಲು, ಶಿಕ್ಷಣ ಕನ್ನಡ ಆರನೆ ಇಯತ್ತೆಯ ವರೆಗೆ. ಪುರವಂತಿಕೆ ಹಿರಿಯರಿಂದ ಬಂದುದು.
ಈ ಕ್ಷೇತ್ರಕಾರ್ಯಕ್ಕೆ ನೆರವಾದ ಹಾವೇರಿ ಶ್ರೀ ವೀರಭದ್ರೇಶ್ವರ ದೇವಾಲಯದ ಪಂಚ ಪ್ರಮುಖರು ವಿಶೇಷತಃ ಶ್ರೀ ನೀರಲಗಿ ಮತ್ತು ಶ್ರೀ ಚೌಸೆಟ್ಟಿ ಅವರಿಗೆ ಋಣಿ.