“ಜನರಂಜನಾ ಕುಣಿತ” ಎನ್ನುವ ವಿಷಯ ಎರಡು ವಿರುದ್ಧ ಚಿಂತನೆ ಮತ್ತು ಬದುಕಿನ ಹೋಳುಗಳ ಸಂಗಮ. “ಜನ” ಮತ್ತು “ರಂಜನೆ”ಯಲ್ಲಿ ಜನ ‘ಜನಪದ’ ಆದಾಗ ರಂಜನೆಯ ವಿಷಯ ಅಪ್ರಬುದ್ಧ ಮತ್ತು ಅಪ್ರಸ್ತುತವಾಗುತ್ತದೆ. “ಜನ” ಯಾವುದಾದರೂ ಒಂದು ತಾತ್ಕಾಲಿಕ ಸಮಯವೊಂದರಲ್ಲಿ ನೆರೆದಿರುವ ಗುಂಪು ಎಂದಾಗ ‘ರಂಜನೆ’ ಬದ್ಧ ಮತ್ತು ಸರಳೀಕೃತ ಅವಕಾಶಗಳ ಪ್ರಯೋಜನವಾಗುತ್ತದೆ. ಜನ ಜನಪದವಾಗುವುದು ಒಂದು ನಿರ್ದಿಷ್ಟ ಸಾಂಸ್ಕೃತಿಕ ಬದ್ಧತೆಯ ಮೇಲೆ. ಈ ಜನಪದ ಪುರಾತನವೂ ಹೌದು, ಸಮಕಾಲೀನವೂ ಹೌದು. ಇಲ್ಲಿ ರಂಜನೆಯ ಕಲ್ಪನೆ ಯಾದೃಚ್ಚಿಕ. ಅದು ಒಂದು ರೂಪದ ಪ್ರಕ್ರಿಯೆ ಅಥವಾ ಪ್ರದರ್ಶನದಲ್ಲಿ ವ್ಯಕ್ತವಾಗುವ, ಆ ರೂಪದ ಅವಿಭಾಜ್ಯ ಕ್ರಿಯೆ.

ಪ್ರತ್ಯೇಕವಾಗಿ, “ರಂಜನೆ” ಎನ್ನುವುದು ಜನಪ್ರಿಯ ಚಿಂತನೆ ಮತ್ತು ಆ ಪರಂಪರೆಯ ಅಪೇಕ್ಷೆ ಮತ್ತು ಅಭಿವ್ಯಕ್ತಿ. ರಂಜನೆಯ ಜನಪದ ಜನಪ್ರಿಯ ಜನಪದ, ನಿರ್ದಿಷ್ಟತೆ ಸ್ಪಷ್ಟತೆ ಇಲ್ಲದ ತಾತ್ಕಾಲಿಕ ಜನಪದ, ಜನಪದ ಚಿಂತನೆ, ಜನಪರ ಚಿಂತನೆ ಮತ್ತು ವ್ಯವಸ್ಥಾತ್ಮಕ ಚಿಂತನೆ. ಜನಪ್ರಿಯ ಚಿಂತನೆ ವ್ಯಕ್ತಿಗತ ಮತ್ತು ಸಮಯಗತ. ಜನಪದದೊಳಗೆ ಸುಲಭವಾಗಿ ಸಾಧ್ಯವಾಗದ ಬಯಕೆಗಳ ವ್ಯಕ್ತಿಗತ ಅಭಿವ್ಯಕ್ತಿ ತಾತ್ಕಾಲಿಕ ಅವಸರದಲ್ಲಿ ಉಂಟುಮಾಡುವ ಪರಿಣಾಮಕ್ಕೆ ಜನಪ್ರಿಯತೆಯ ಹೆಸರು ಕೊಡಬಹುದು. ಜನಪದಗಳಿಂದ ದೂರ ಬೇರೆಸರಿಯುತ್ತಿರುವ ಮನಃಸ್ಥಿತಿಗಳಲ್ಲಿ ಕೂಡ ಈ ಕಲ್ಪನೆ ಒಂದು ಆಶೋತ್ತರವಾಗಿಯೆ ಇರುತ್ತದೆ. ಈ ದೃಷ್ಟಿಯಲ್ಲಿ ಜನರಂಜನೆ ಮತ್ತು ಜನರಂಜನಾ ಕುಣಿತಗಳು ಎಂದರೆ, ಒಂದು ನಿರ್ದಿಷ್ಟ ಸಂದರ್ಭದಲ್ಲಿ, ನಿರ್ದಿಷ್ಟ ಕಾರಣಕ್ಕಾಗಿ ಕೂಡಿರುವ ಅನಿರ್ದಿಷ್ಟ ಜನಪದವೊಂದರ ಸುಖಾನುಭವ ಎಂದೆ ಕರೆಯಬೇಕು. ಯಾಕೆಂದರೆ, ಸುಖಕ್ಕೂ ಮನರಂಜನೆಗೂ, ಜನಪ್ರಿಯ ಜಾನಪದಕ್ಕೂ ನಿಕಟ ಸಂಬಂಧವಿದೆ. ಜನಪ್ರಿಯತೆ ಮತ್ತು ಜನರಂಜಕತೆಗಳು ಪರಂಪರಾನಿಷ್ಠ ಸಮಾಜ ಮತ್ತು ಆಧುನಿಕ ವ್ಯಕ್ತಿಯ ಸುಖಾನ್ವೇಷಣೆಯ ಮಧ್ಯದ ಘರ್ಷಣೆಗಳು.

ಜನರಂಜನಾ ಕುಣಿತಗಳು ಎಂದರೆ ಯಾವುವು? ಅವುಗಳನ್ನು ಗುರುತಿಸಿಕೊಳ್ಳುವುದು ಹೇಗೆ? ಎಂಬ ಚರ್ಚೆ ಜನಪದ ನೃತ್ಯಗಳು ಯಾವುವು ಎಂಬ ಮೂಲಕ್ಕೆ ಕೈ ಹಾಕುತ್ತದೆ. ಜನಪದಗಳಲ್ಲಿ ಕಂಡುಬರುವ ಎಲ್ಲ ನೃತ್ಯಗಳೂ ಜನಪದ ನೃತ್ಯಗಳು ಎಂಬುದು ನಮ್ಮ ಸಾಮಾನ್ಯ ತಿಳುವಳಿಕೆ. ಹಳ್ಳಿಗರ ನೃತ್ಯಗಳೆ ಜನಪದ ನೃತ್ಯಗಳು ಎಂದು ಕೆಲವರು ಹೇಳಿದರೆ, ಆದಿವಾಸಿಗಳ ನೃತ್ಯಗಳೂ ಇದಕ್ಕೆ ಸೇರಿಕೊಳ್ಳುತ್ತವೆ ಎಂದು ಮತ್ತೆ ಕೆಲವರು ಹೇಳುತ್ತಾರೆ. ಆದಿವಾಸಿ ನೃತ್ಯಗಳು ಅನುಷ್ಠಾನಪರ ನೃತ್ಯಗಳಾಗಿರುವುದರಿಂದ ಅವು ಜನಪದ ನೃತ್ಯಗಳಾಗುವುದಿಲ್ಲ ಎಂದು ಒಂದು ವರ್ಗದ ವಿದ್ವಾಂಸರು ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ, ಹಳ್ಳಿಗರ ನೃತ್ಯಗಳು ಮಾತ್ರ ಜನಪದ ನೃತ್ಯಗಳಲ್ಲ ಎಂದು ಪ್ರತಿಪಾದಿಸುವವರೂ ಇದ್ದಾರೆ. ಆಧುನಿಕ ಸಂದರ್ಭದಲ್ಲಿ ಜನಪದ ನೃತ್ಯಗಳೆಲ್ಲ ಮನರಂಜನೆಯ ನೃತ್ಯಗಳು. ಎಲ್ಲ ಕಡೆ ವಾಸಮಾಡುವ ಮಧ್ಯಮಸಂಸ್ಕೃತಿಯ ಉತ್ಪತ್ತಿಗಳಾಗಿ ಜನಪದ ನೃತ್ಯಗಳಿವೆ ಎಂಬುದು ಮತ್ತೊಂದು ಜನಪದ ನೃತ್ಯಕಲ್ಪನೆ. ಇಲ್ಲಿ ಸದಾ ಉಳಿದು ಬರಬಹುದಾದ ಮಧ್ಯಮವರ್ಗ ಮತ್ತು ಅದು ಹಳೆಯಸಂಪ್ರದಾಯ ರಕ್ಷಕನಾಗುವ ಐತಿಹಾಸಿಕ ಅನಿವಾರ್ಯತೆಯನ್ನು ನಿರ್ದಿಷ್ಟಪಡಿಸಿದಂತಾಗಿದೆ. ಆಧುನಿಕನಿಷ್ಠ ಮತ್ತು ಶಾಸ್ತ್ರೀಯನಿಷ್ಠಗಳ ಮಧ್ಯದ ಈ ಪರಂಪರೆಗೆ ‘ಉಳಿಸಿಕೊಳ್ಳುವ’ ಕೆಲಸವನ್ನು ವಹಿಸಲಾಗಿದೆಯೆ ಹೊರತು ‘ಸೃಷ್ಟಿಸುವ’ ಹಕ್ಕನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಳ್ಳಲಾಗಿದೆ. “ಬೆಳೆಯುವ” ಪರಿಸ್ಥಿತಿಗೆ ಈ ವರ್ಗ ಸ್ಪಂದಿಸುವುದೇ ಇಲ್ಲವೆ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಇಲ್ಲ. ಅಮೆರಿಕದಲ್ಲಿ ತಯಾರಾಗುತ್ತವೆ ಎನ್ನಲಾಗಿದೆ. ಆದರೆ ಜನರಂಜನೆ ಜನಪದದ ಸೃಷ್ಟಿಕ್ರಿಯೆ ಆಗಲಾರದು ಎಂಬುದನ್ನು ಅರಿತರೆ ಒಟ್ಟು ಜಾನಪದಕ್ಕೆ ಬರುತ್ತಿರುವ ಮಿತಿಯು ಗೊತ್ತಾಗುತ್ತದೆ. ಇದು ವಿಗತಿವಾದದಿಂದ ಪ್ರೇರಿತವಾದ ದೃಷ್ಟಿಕೋನ. ಇದನ್ನು ಒಪ್ಪಿಕೊಂಡರೆ ಜಾನಪದ ಚಿಂತನೆಗೆ ಮತ್ತು ಬೆಳವಣಿಗೆಗೆ ದೊಡ್ಡ ಕುತ್ತು.

ಅಮೆರಿಕದವರು ಹೇಳುವ ಬಹಳಷ್ಟು ಜನಪದ ನೃತ್ಯಗಳು ಲೌಕಿಕ ವಸ್ತು ಮತ್ತು ಸ್ವಭಾವಗಳ ಅನುಸರಣೆಗಳು. ಭಾರತದ ಪರಿಸ್ಥಿತಿಗೆ ಈ ಕಲ್ಪನೆ ಅನ್ವಯವಾಗುವುದಿಲ್ಲ. ನಮ್ಮ ಹರಿಜನ ಬದುಕು ಮತ್ತು ಆದಿವಾಸಿ ಬದುಕು ಬಹಳವೇನೂ ಭಿನ್ನವಲ್ಲ; ಆದಿವಾಸಿಗಳು ಕಾಲಿನಲ್ಲಿ ಬದುಕುತ್ತಾರೆ ಎನ್ನುವುದನ್ನು ಬಿಟ್ಟರೆ, ಹರಿಜನರಿಗೂ ಇತರ ಅನೇಕ ಜನವರ್ಗದವರಿಗೂ ಇದೇ ಬಗೆಯ ಸಾಮಾನ್ಯ ವ್ಯತ್ಯಾಸಗಳನ್ನು ಹೇಳಬಹುದು. ಧಾರ್ಮಿಕವಾಗಿ ಕ್ರಿಶ್ಚಿಯನ್, ಮುಸ್ಲಿಂ ವರ್ಗಗಳ ಜೊತೆಗೆ ಹೋಲಿಸಿದಾಗ ಕಾಣಬರುವ ವ್ಯತ್ಯಾಸಗಳು ಹಿಂದೂ ಜಾತಿ-ವರ್ಗ ಪದ್ಧತಿಗಳಲ್ಲಿ ಕಾಣಸಿಗುವುದಿಲ್ಲ. ಇವರಲ್ಲಿ ಇರುವ ವ್ಯತ್ಯಾಸಗಳು ಶೋಷಣಾಪರವಾದುವೇ ಹೊರತು ಆಶಯಪರವಾದುವಲ್ಲ. ಆದಕಾರಣ ಹರಿಜನರಿಂದ ಆರಂಭಗೊಂಡು ಇತರೆಲ್ಲ ವರ್ಗಗಳಲ್ಲಿ ಕಂಡುಬರುವ ಜನಪದ ನೃತ್ಯಗಳನ್ನು ನಮ್ಮ ಜಾನಪದ ಪರಿಶೀಲನೆಗೆ ತೆಗೆದುಕೊಳ್ಳಬಹುದು. ಇವುಗಳಲ್ಲಿ ಜಾತಿ ಅಥವಾ ವರ್ಗದ ಕೀರ್ತನೆಗೆ ಬದ್ಧವಾಗಿರುವ ನೃತ್ಯಗಳನ್ನು ಬಿಟ್ಟು, ಎಲ್ಲರಿಗೂ ಸಾಮಾಜಿಕ ಸಮಾನತೆಯಾಗಿ ಕಂಡುಬರುವ ನೃತ್ಯಗಳನ್ನು ಲೌಕಿಕ ಜನಪದ ನೃತ್ಯಗಳು ಎಂದು ಕರೆದುಕೊಳ್ಳಬಹುದು; ಜನರಂಜನಾ ನೃತ್ಯಗಳು ಎಂದಲ್ಲ. ಈ ನೃತ್ಯಗಳು ಜನರಂಜನೆಯಾಗಲು ಇರುವ ಕಾರಣ ಬೇರೆಯದೇ ಆಗಿದೆ.

ಜನಪದ ಕುಣಿತಗಳಲ್ಲಿ ಜನರಂಜನೆಯೆ ಏಕೆ?

ಇವತ್ತಿನ ವಿಘಟನಾತ್ಮಕ ಚಿಂತನೆಯ ದೆಸೆಯಿಂದಾಗಿ ನಮ್ಮ ಸಾಮಾಜಿಕ ಬದುಕಿನಲ್ಲಿ ಸಾಮಾನ್ಯ, ವಿಶೇಷ ಎಂಬ ಕಲ್ಪನೆಗಳು ಹಬ್ಬಿಕೊಂಡಿವೆ. ಜನಪದರ ಬದುಕಿನಲ್ಲಿ ಈ ವಿಭಜನೆ ಉಂಟು. ಆದರೆ ಅದು ಸಾಮಾನ್ಯವಿಶೇಷ. ಈಗಿನ ವೈಜ್ಞಾನಿಕತೆಯಿಂದ ಉಂಟಾದ ಅತಿಖಾಸಗೀಕರಣ ಮತ್ತು ಜನನಿರಾಕರಣೆಯಿಂದ ಅತಿವಿಶೇಷ ಅಥವಾ ಅಸಮಾನವಿಶೇಷಗಳು ಉಂಟಾಗುತ್ತಿವೆ. ಈ ಪ್ರತಿ ವಿಶೇಷವೂ ತಾತ್ಕಾಲಿಕ ಅಪೇಕ್ಷೆ ಮತ್ತು ಅಭಿರುಚಿಯ ಉತ್ಪನ್ನಗಳಾಗಿವೆ. ಎಲ್ಲವನ್ನೂ ಎಲ್ಲರೂ ಎಲ್ಲಿ ಸಮಾನವಾಗಿ, ವಿಶೇಷ ಸಾಮಾನ್ಯವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲವೊ, ಅಲ್ಲಿ ಜನಪದ ಭದ್ರಗೊಂಡು ಧನಪದ, ಆಸಕ್ತಿಪದ, ಅಧಿಕಾರಪದ ಮತ್ತು ಶೋಷಣಾಪದಗಳು ಹುಟ್ಟಿಕೊಳ್ಳುತ್ತವೆ. ಈ ಪದಗಳು ಮೌಲ್ಯಗಳಲ್ಲವಾದಕಾರಣ, ಆರ್ಥಿಕ ನಿರೀಕ್ಷಣೆಗಳಾದಕಾರಣ ಎಲ್ಲ ವಸ್ತು ವ್ಯಕ್ತಿ, ಮತ್ತು ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಸಿಗಬಹುದಾದ ಭೋಗವನ್ನು ಅಪೇಕ್ಷಿಸುತ್ತವೆ. ಇಂಥ ಭೋಗವೊಂದರ ಪರಿಭಾಷೆಯೆ “ರಂಜನೆ”. ಇದು ಕೂಡ ಒಂದು ಅಸಮಾನ್ಯವಿಶೇಷ.

‘ಜನಪದ’ ಉತ್ಪತ್ತಿಮೂಲಸಂಸ್ಕೃತಿಯ ಕೇಂದ್ರ. ‘ವಿಶೇಷ’ ಅನುಭೋಗ ಸಂಸ್ಕೃತಿಯ ಮೂಲಾಶಯ. ಆದ ಕಾರಣ ಶಿಷ್ಟ ಮತ್ತು ವಿಶೇಷಗಳು ಕೇವಲ ಅಭಿರುಚಿಗಳೆ ಹೊರತು ವಸ್ತುಸ್ಥಿತಿಗಳಲಲ್ಲ. ಇವುಗಳು ಸೃಷ್ಟಿಸುವ ಅಸಮಾನ ಅಂತರ ಆಧುನಿಕತೆ ಅಲ್ಲ. ಅದು ಉತ್ತಮ ಅಥವಾ ವಾಸ್ತವ ಚಿಂತನೆ ಕೂಡ ಅಲ್ಲ. ಆದಕಾರಣ ಪ್ರತ್ಯೇಕಿತ ರಂಜನೆಯ ಕಲ್ಪನೆ ಪಕ್ಕಾ ದೃಷ್ಟಿ ಅಲ್ಲ. ಸಾಮಾನ್ಯತಾ ಬದುಕಿನ ಅಭಿನಯಕಾರನ ಸಾಮಾಜಿಕ ಸ್ಥರಕ್ಕೂ ವಿಶೇಷ ಸೌಲಭ್ಯಗಳ (ಮಿಮರ್ಶಾ ಮಾನದಂಡ ಇತ್ಯಾದಿ) ಸಹೃದಯನ ಸಾಮಾಜಿಕ ಸ್ಥರಕ್ಕೂ ಇರುವ ವೈಚಾರಿಕ ದೂರವೆ ಜನಪದ ಕುಣಿತಗಳಲ್ಲಿ ರಂಜನೆ ಸ್ಫುರಿಸಲು ಕಾರಣ, ನೋಡುವವನ ಪ್ರಬುದ್ಧತೆ ಶಿಷ್ಟವಾಗಿ, ಆಡುವವನ ಪ್ರಬುದ್ಧತೆ ಜನಪದೀಯವಾಗಿ ಬೇರ್ಪಡುವ ಸಾಮಾಜಿ ವಿಸಂಗತಿ ಈ ವೈಚಿತ್ರ್ಯವನ್ನು ಉಂಟುಮಾಡಿದೆ. ಜನಪದ ದೃಶ್ಯಕಾರನೊಬ್ಬ ತನ್ನ ದೃಶ್ಯದೊಂದಿಗೆ ಬಂದು ಸಾಂದರ್ಭಿಕ-ಸಾಮಾಜಿಕ ಮಾನಸಿಕ ಪರಿವರ್ತನೆಯನ್ನು ಅನುಭವಿಸುವಾಗ, ನೋಡುವವನ ಅದರ ಉದ್ದೇಶ ಮತ್ತು ಅರ್ಥವನ್ನು ಗ್ರಹಿಸದಿದ್ದರೆ ರಂಜನೆ ಅನಿವಾರ್ಯವಾಗುತ್ತದೆ.

[1]

ನಮ್ಮ ‘ತಪ್ಪು ಪ್ರೇಕ್ಷಕತ್ವ’, ‘ವಿಶೇಷತೆಯ ವಿಮರ್ಶಕತ್ವ’ ಮತ್ತು ನಮಗೇ ಭಾರವಾದ ಅಕೆಡೆಮಿಕತ್ವಗಳ ಹೊರೆಯನ್ನು ನಮ್ಮ ಸ್ವಪ್ರಯತ್ನದಿಂದಲೇ ಇಳಿಸಿಕೊಂಡಲ್ಲದೆ ನಮಗೆ ಜನಪದ ಕಲೆಗಳ ಅಂತರಂಗ ಸಿಗುವುದು, “ಏಳು ಸಮುದ್ರದಾಚೆ ಕೀಳು ಸಮುದ್ರ, ಕೀಳು ಸಮುದ್ರದ ಮಧ್ಯ ಒಂದು ಬಾವಿ, ಬಾವಿಯೊಳಗೆ ಒಂದು ಬಾಳೆ, ಆ ಬಾಳೆಯೊಳಗೆ ಒಂದು ಬಟ್ಟಲು, ಆ ಬಟ್ಟಲೊಳಗೆ ನಟನೆಯಾಡುವ ಗಿಳಿಯನ್ನು ಹುಡುಕಿದಂತಾಗುತ್ತದೆ”.

ಜನರಂಜನಾ ಕುಣಿತಕ್ಕೆ ಕಾರಣಗಳು:

ಒಬ್ಬ ಧರ್ಮನಿಷ್ಠನಿಗೆ ತನ್ನ ಧರ್ಮದೊಳಗಿನ ಕುಣಿತ ರಂಜನೆಯಾಗಬಹುದು ಅಥವಾ ಅನ್ಯ ಧರ್ಮೀಯನ ಕುಣಿತ ರಂಜನೆಯಾಗಬಹುದು. ತನ್ನ ಧರ್ಮದೊಳಗಿನ ಕುಣಿತವೆ ಧರ್ಮವೂ ರಂಜನೆಯೂ ಆಗಬಹುದು. ನಮ್ಮ ಜನಪದ ಕುಣಿತಗಳನ್ನು ಗಮನಿಸಿ ; ಪಾಳ್ಳೇಗಾರಿಕೆ ಇವತ್ತಿನ ಬದುಕಿಗೆ ವಿರೋಧಸ್ಥಿತಿಯಾಗಿದೆ. ಪಾಳ್ಳೇಗಾರನ ಕುಣಿತ ಒಳ್ಳೆಯ ರಂಜನೆಯಾಗುತ್ತದೆ. ಗುಜ್ಜಾರಿವೇಷ ಭೌತಿಕವಾಗಿ ಒಂದು ಅಸಹಜತೆ; ಅದಕ್ಕೆ ಅಲಂಕಾರ ಸೇರಿದರೆ ನಮಗೆ ಅದೊಂದು ವಿಶೇಷ. ಗುಜ್ಜಾರಿಕುಣಿತದ ಅಂತರಂಗವನ್ನು ಪ್ರವೇಶಿಸಿದರೆ ಅಲ್ಲಿ ನಾವು “ಚಕ್ರವ್ಯೂಹ” ವೊಂದರಲ್ಲಿ ಸೆರೆಸಿಕ್ಕ ಮತ್ತೊಬ್ಬ ವೀರ ಅಭಿಮನ್ಯವನ್ನು ಕಾಣುತ್ತೇವೆ. ಆಗ ಷಂಡರಾದ ನಾವು ಎಲ್ಲಿಂದ ತಲೆತಪ್ಪಿಸಿಕೊಂಡು ಬಂದಿದ್ದೇವೆ ಎಂಬುದು ಅರ್ಥವಾಗುತ್ತದೆ. ನಮ್ಮ ಬದುಕಿನ ಚಾರಿತ್ರಿಕ ವಾಸ್ತವತೆಯನ್ನು ತಿಳಿಯದ ಮೂಢರಾಗಿ ನಾಚಿಕೆ ಆಗುತ್ತದೆ.

ಜನಪದ ನೃತ್ಯಗಳಲ್ಲಿ ಹಲವು ಪ್ರಸ್ತುತವಾಗದ ಕಾರಣ ರಂಜನೆಯ ಕಾರಣಗಳು ಪ್ರೇರಿತವಾಗುತ್ತವೆ. ಅವುಗಳೆಂದರೆ :

೧. ಶಿಷ್ಟ ಮತ್ತು ವಿಶೇಷ ಜನಪದಗಳು ಸಾಮಾನ್ಯ ಜನಪದಗಳ ಅಸಮಕಾಲೀನ, ಅನಾಗರಿಕ, ಪಳೆಯುಳಿಕಾರೂಪದ್ದು ಎಂದು ತಿಳಿದಿರುವುದು.

೨. ಜನಪದ ನೃತ್ಯಗಳಲ್ಲಿಯೆ ಕೆಲವು ಅಸಮಕಾಲೀನವಾಗಿರುವ ವಾಸ್ತವ ಸ್ಥಿತಿ.

೩. ಜನಪದ ಸಮಾಜದ ಮೌಲ್ಯಗಳು-ಆಚರಣೆಗಳು ಕುಸಿಯುತ್ತಿರುವುದು-ತಿರಸ್ಕೃತವಾಗುತ್ತಿರುವುದು ಇತ್ಯಾದಿ.

೪. ಆಧುನಿಕ ಆರ್ಥಿಕ-ಸಾಮಾಜಿಕ ಚಿಂತನೆ ಮತ್ತು ಸಂಬಂಧಗಳಿಗೂ ಜನಪದೀಯ ಆರ್ಥಿಕ ಸಾಮಾಜಿಕ ಚಿಂತನೆ ಮತ್ತು ಸಂಬಂಧಗಳಿಗೂ ತಾಳ-ಮೇಳ ಇಲ್ಲದಿರುವುದು.

ಈ ಕಾರಣಗಳ ಮೇಲಿಂದ ಉಂಟಾಗಿರುವ ರಂಜನಾ ಗುಣಸ್ವಭಾವಗಳು :

೧.       ಬದ್ಧತೆ ಇಲ್ಲದ ಕುಣಿತ

೨.       ಸಮಕಾಲೀನ ಅಥವಾ ಸಹ್ಯವಲ್ಲದ ವೇಷಭೂಷಣಗಳು

೩.       ಗಂಭೀರವಲ್ಲದ ನಡವಳಿಕೆಗಳು ಮತ್ತು ವರ್ತನೆಗಳು

೪.       ಮಹತ್ವದ್ದಲ್ಲವೆನ್ನುವ ವಸ್ತುಸ್ವೀಕಾರ

೫.       ಪ್ರಗತಿಯಕಡೆಗೆ ತೋರುವ ವಿಮುಖತೆ.

ಮೊದಲಿಗೆ ನಮ್ಮ ಜನರಂಜನಾ ಕುಣಿತದ ಒಂದು ಶ್ರೇಷ್ಠ ಮಾದರಿಯಿಂದ ಈ ಐದು ಗುಣಸ್ವಭಾವಗಳನ್ನು ಪರೀಕ್ಷೆಗೆ ಒಳಪಡಿಸುತ್ತೇನೆ. ಅದು ಒಂದು ಜನಾಂಗದ ಸಿದ್ಧಿಯ ಶ್ರೇಷ್ಠ ಕಲೆಯಾದ ಬಯಲಾಟದಲ್ಲಿ ಇರುವ ಹನುಮನಾಯಕನ ಪಾತ್ರದ ಕುಣಿತ.

ಬಯಲಾಟದ ಹನುಮನಾಯಕನ ವೇಷ, ಸಭ್ಯವೇಷಕ್ಕೆ ತೀರ ಭಿನ್ನವಾದದ್ದು. ಅದು ಸಾಮಾನ್ಯ ಮನುಷ್ಯನೊಬ್ಬನ ಸಭ್ಯವೇಷವೂ ಅಲ್ಲ. ಶಿಷ್ಟ ನಾಯಕನು ಖಾಸಾ ಪರಿಚಾರಕನ ವೇಷ-ಭೂಷಣವೂ ಅಲ್ಲ ; ಎಂದರೆ ಪೌರಾಣಿಕ ಸಭ್ಯತೆಯಾಗಲಿ, ಸಾಮಾನ್ಯ ಸಭ್ಯತೆಯಾಗಲಿ ಈ ವೇಷಕ್ಕೆ ಇಲ್ಲ. ಈ ವೇಷ ಬಯಲಾಟದ ವಿಭಿನ್ನ, ವಿಶಿಷ್ಟೀಕರಿಸಿದ ಪಾತ್ರಗಳ ಸಂದರ್ಭಕ್ಕೆ ಪರಾಮರ್ಶೆಯಾಗಿ ಬಂದದ್ದು.

ಠೀವಿಗೆ ಸ್ಥಿರವಾದ ಮೀಸೆ ಇಲ್ಲದೆ, ಮೇಲೊಂದು ಮೀಸೆ, ಕೆಳಗೊಂದು ಮೀಸೆ. ಒಂದು ಒಪ್ಪಿತ ಗಂಭೀರ ವರ್ಣ ಅಥವಾ ವರ್ಗದ ಮುಖಬಣ್ಣವಿಲ್ಲದೆ, ಮುಖತುಂಬ ಕಪ್ಪು, ಅದರ ಮೇಲೆ ಮೊಟ್ಟೆಯಾಕಾರದ ಬಿಳಿ ಪ್ಯಾಚುಗಳು, ಹಣೆಗೆ ನಾಮವೂ ಇಲ್ಲದೆ, ವಿಭೂತಿಯೂ ಇಲ್ಲದೆ ; ಮೂಗಿನ ಮೇಲೆ ಎಂಥದೊ ವಿಚಿತ್ರ ರೇಖೆ ಅಥವಾ ಮೂಗಿನ ತುದಿಗೆ ; ಅವನ ಉಸಿರು ಒಳ ಹೋದಂತೆ ಒಳಕ್ಕೆ ಹೋಗುವ, ಹೊರಬಂದರೆ ಹೊರಕ್ಕೆ ಬರುವ ಅಂಟಿಸಿದ ಉದ್ದನೆ ಕಾಗದದ ಚೂರು, ಸೊಂಟಕ್ಕೆ ವೀರಗಾಸೆ ಇಲ್ಲದೆ, ಎದೆಗೆ ಎದೆಕವಚ ಇಲ್ಲದೆ, ತಲೆಗೆ ನಾಟಕದ ನಿರೂಪಿತ ಆಭರಣ ಇಲ್ಲದೆ – ಇಲ್ಲದೆ ಇರುವುದೆ ಇರುವಿಕೆಯಾಗಿ-

ನಡವಳಿಕೆಯಲ್ಲಿ ; ಸುಂದರಿ ಬಂದಾಗ ಅವಳ ಅಂದಚಂದ ನೋಡಿ ಆಶ್ಚರ್ಯ ಪಡುವುದು. ಆಕೆಯ ಮುಖದ ಹತ್ತಿರ ಹೋಗಿ ಕೈತಾಗಿಸಿ ಅದನ್ನು ನೆಕ್ಕಿದಂತೆ ಮಾಡುವುದು. ಅವಳಿಗೆ ಆಸರೆ ಮುರಿಯುವುದು. ರಾಕ್ಷಸಿ ಬಂದಾಗ ಬಿಟ್ಟಕಣ್ಣು-ನೆಟ್ಟ ನೋಟದಿಂದ ಅವಳ ಉಬ್ಬುತಗ್ಗುಗಳನ್ನು ಅಳೆಯುವುದು. ರಾಕ್ಷಸ ಬಂದಾಗ ಹೆದರಿ ಹಿಂದೆ-ಮುಂದೆ ಮಾಡಿಕೊಂಡಂತೆ ನಟಿಸುವುದು. ತನ್ನ ಊಟ-ಉಪಚಾರ, ಸ್ಥಾನ-ಮಾನಗಳಲ್ಲಿ ಯಾವುದೇ ನಿರ್ದಿಷ್ಟತೆ ಇಲ್ಲದೆ ಸಿಕ್ಕಿದ್ದು ತಿಂದು, ಬೇಕಾದ್ದು ಕುಡಿದು ಕಾಲಹರಣ ಮಾಡುವುದು-

ನಾಯಕಿಯ ಬಾಗು-ಬಳಕುಗಳನ್ನು, ರಾಜಾಪಾತ್ರದ ಗತ್ತು-ಗಾಂಭೀರ್ಯ, ರಾಕ್ಷಸನ ನೆಗೆತ-ಒಗೆತಗಳನ್ನು, ಋಷಿ, ಬ್ರಾಹ್ಮಣರ ಸಾವಧಾನಪ್ರವೃತ್ತಿಗಳನ್ನು ನಟಿಸಲು ಹೋಗಿ ಅಪಹಾಸ್ಯಕ್ಕೆ ಗುರಿಯಾಗುವುದು-

ನಾಯಕ ಪಟ್ಟ ಏರಿದರೆ, ಜಯ ಜಯ ಎನ್ನುವುದು
ರಾಕ್ಷಸ ಪಟ್ಟ ಏರಿದರೆ, ಅಯ್ಯಯ್ಯಪ್ಪೊ ಎನ್ನುವುದು

ತನ್ನ ಕಣ್ಮುಂದೆ ಹೊಸ ವ್ಯವಸ್ಥೆ, ಹೊಸ ಜಗತ್ತು ಹುಟ್ಟಿ ಮುನ್ನಡೆದರೂ ತನಗೆ ಏನೂ ಆಗದೆ, ಆಗಿಲ್ಲವೆಂಬಂತೆ ಇದ್ದಕಡೆಯೆ, ಇದ್ದ ರೀತಿಯೆ ಇದ್ದು ಬಿಡುವುದು-

ಇಡೀ ನಮ್ಮ ಆರ್ಥಿಕ, ಸಾಂಸ್ಕೃತಿಕ ಸತ್ತೆಯನ್ನೇ ಗಂಭೀರ ಅಪಹಾಸ್ಯಕ್ಕೆ ಒಳಪಡಿಸಿದಂತಾಗಿದೆ.

ಜನರಂಜನಾ ಕುಣಿತದ ಬಗೆಗಳು :

ಪ್ರಕೃತಿ ಪರಿಸ್ಥಿತಿಯಲ್ಲಿ ಮತ್ತು ಸಾಂದರ್ಭಿಕ ಅರ್ಥದಲ್ಲಿ ಜನರಂಜನಾ ಕುಣಿತಗಳೆಂದರೆ: ಕುಣಿತಪ್ರಧಾನವಾದ ಮಕ್ಕಳ ಆಟಗಳು, ಕೆಲವು ಜನಪದ ನೃತ್ಯಗಳು, ಜನಪದ ನಾಟಕಗಳ ಭಾಗಗಳು ಮತ್ತು ವ್ಯಕ್ತಿಗಳು, ಉತ್ತರ ಕರ್ನಾಟಕದ ಬಗಾಟ ಬಗರಿ, ಇಬತಿ ಆಟ, ದಕ್ಷಿಣ ಕರ್ನಾಟಕದ ಕಪ್ಪೆ ಆಟ, ಚಿಟ್ಟಿಮಳೆ ಆಟ, ದೊಂಬರ ಮಕ್ಕಳ ಹಾವು ಗರುಡನ ಕುಣಿತ, ತಿಂಗಳ ಮಾವನ ಪೂಜೆಯ ಸಂದರ್ಭದಲ್ಲಿ ಬರುವ ಹೊಂಗೆಸೊಪ್ಪಿನ ವೇಷದ ಕುಣಿತ ಆಟರೂಪದ ಕುಣಿತಗಳು,

ಜನರಂಜನಾ ನೃತ್ಯಗಳಾಗಿ ಕೋತಿಕುಣಿತ, ಕರಡಿಕುಣಿತ, ಕಾಡೆಮ್ಮೆಕುಣಿತ, ಹೋಳಿಕುಣಿತ, ಸುಗ್ಗಿಕುಣಿತ, ಬೇಡರಕುಣಿತ, ಎರವರಕುಣಿತ, ಢಮಾಮಿ ಕುಣಿತ, ಕೊರಗರಕುಣಿತ, ಪಗಡಿಕುಣಿತ, ಪ್ರೇತಕುಣಿತ, ಮರಗಾಲುಕುಣಿತ ಗಾರುಡಿಕುಣಿತ, ಕೋಲಾಟ, ಪೋಟಿವೇಷ, ಬಸುರಿವೇಷ, ಗುಜ್ಜಾರಿವೇಷ, ಹುಲಿವೇಷ, ಗೇರ್ಕಳ್ಳವೇಷ, ಡಿಕಾಂಬರಿವೇಷ, ಜಂಗಿವೇಷ, ಜೋಡಿವೇಷ ಮುಂತಾದುವು ಸೇರಿಕೊಳ್ಳುತ್ತವೆ.

ಇವುಗಳನ್ನು ಸರಳವಾಗಿ

೧. ಪ್ರಾಣಿಸಂಬಂಧಿ

೨. ಮಾನವಸಂಬಂಧಿ ಮತ್ತು

೩. ದೈವಸಂಬಂಧಿ

ಜನರಂಜನಾ ಕುಣಿತಗಳೆಂದು ವಿಂಗಡಿಸಬಹುದು. ಆಶಯಾತ್ಮಕವಾಗಿ ಮಾನವ ಸಂಬಂಧಿನೃತ್ಯಗಳಲ್ಲಿ ವ್ಯಕ್ತಿಸಂಬಂಧಿ, ವಸ್ತುಸಂಬಂಧಿ ಮತ್ತು ಸಂದರ್ಭಸಂಬಂಧಿ ಎಂಬ ಮೂರು ಬಗೆಗಳನ್ನು ಮತ್ತೆ ಗುರುತಿಸಿಕೊಳ್ಳಬಹುದು. ವಾಸ್ತವದಲ್ಲಿ ಪ್ರಾಣಿ ಸಂಬಂಧಿ ಮತ್ತು ಮಾನವಸಂಬಂಧಿ ಎಂದು ವಿಂಗಡಿಸುವುದು ವೈಜ್ಞಾನಿಕವಲ್ಲ. ಪ್ರಾಣಿಗಳು ಮಾನವನ ಸಂಸ್ಕೃತಿಯೊಂದಿಗೆ ಸಂಬಂಧವೇರ್ಪಡಿಸಿಕೊಳ್ಳದೆ ಅವು ನೃತ್ಯದ ವಸ್ತುವಾಗುವುದು ಸಾಧ್ಯವೇ ಇಲ್ಲ. ಮನುಷ್ಯಸಂಬಂಧಿ ನೃತ್ಯಗಳಲ್ಲಿ ಕೂಡ ಮನುಷ್ಯರು ಕೇವಲ ನೃತ್ಯಕಾರ್ಯಭಾರಿಗಳೇ ಹೊರತು ಅವರೆ ನೃತ್ಯದ ಗುಣಾತ್ಮಕ ಆಶಯಗಳಾಗದಿರುವುದೂ ಉಂಟು. ಮಾನವಸಂಬಂಧಿ ನೃತ್ಯಗಳಲ್ಲಿ ಸಸ್ಯಸಂಬಂಧವಾದುವೂ ಇದೆ. ಸಸ್ಯಸಾಮಗ್ರಿಗಳನ್ನು ಒಳಗೊಳ್ಳುವುದರ ಜೊತೆಗೆ ಸಸ್ಯ ಸಂರಕ್ಷಣಾರ್ಥವಾಗಿ ನೃತ್ಯಗಳು ಹುಟ್ಟಿಕೊಂಡಿವೆ. ಕಾಗೆ ನೃತ್ಯ[2]   ಸಸ್ಯ ಸಂರಕ್ಷಣಾರ್ಥವಾಗಿಯೇ ಬಂದಿದೆ.

ವಾಸ್ತವದಲ್ಲಿ ಯಾವುದೇ ಜಾನಪದ ವಸ್ತು, ವ್ಯಕ್ತಿ ಮತ್ತು ಸಂದರ್ಭವನ್ನು ಕುರಿತು ಚಿಂತಿಸುವಾಗ ಅವುಗಳ ಉದ್ದೇಶ, ಗುರಿ ಮತ್ತು ಕಾರ್ಯಾಚರಣೆಯನ್ನು ಮುಖ್ಯವಾಗಿ ಇಟ್ಟುಕೊಳ್ಳಬೇಕು. ಯಾವುದು ವಸ್ತುವಾಗಿದೆ ಎನ್ನುವುದಕ್ಕಿಂತ ಜಾನಪದದಲ್ಲಿ ಯಾಕೆ ಒಂದು ವಸ್ತು, ವ್ಯಕ್ತಿ ಮತ್ತು ಸಂದರ್ಭ ಕಾರ್ಯಾಚರಣೆಯ ವಿಷಯವಾಗಿದೆ ಎಂಬುದು ಬಹಳ ಮುಖ್ಯ. ಈ ದೃಷ್ಟಿಯಿಂದ ನಮ್ಮ ಜನ ರಂಜನಾ ಕುಣಿತಗಳನ್ನು-

೧. ಸಾಮ್ಯಸಂಬಂಧಿ ಕುಣಿತಗಳು ಮತ್ತು

೨. ಜನ್ಯಾತ್ಮಕ ಸಂಬಂಧಿ ಕುಣಿತಗಳು

ಎಂದು ಗುರುತಿಸಿಕೊಳ್ಳಬಹುದು. ಸಂಬಂಧಗಳೆ ಜಾನಪದದ ಮೂಲ ಬೀಜಗಳು. ಯಾವುದಾದರೊಂದು ಬಗೆಯ ಸಂಬಂಧ ಏರ್ಪಡದೆ ಜನಪದ ವಸ್ತುವೊಂದು ಹುಟ್ಟಲಾರದು. ಈ ಜಾನಪದ ವಸ್ತುಗಳು ಎರಡು ತೆರನಾಗಿವೆ.

೧. ಹುಟ್ಟಿ ಮುಗಿದಿರುವವರ.

೨. ಹುಟ್ಟುತ್ತ ಮುಗಿಯುತ್ತ ಹೋಗುವವು.

ಹುಟ್ಟಿ ಮುಗಿದಿರುವವುಃ ಒಂದು ಹೆಣ್ಣು-ಒಂದು ಗಂಡು ಕೂಡಿದಾಗ, ಮಗು ಆದಾಗ, ಸಂಸಾರ ಏರ್ಪಟ್ಟಾಗ, ಆ ಸಂಸಾರಕ್ಕೆ ಸಾಮಾಜಿಕ ಭದ್ರತೆ ಬೇಕಾದಾಗ, ಆ ಸಾಮಾಜಿಕ ಭದ್ರತೆಗಾಗಿ ಸದಾ ನಡೆಯುವ ಹೋರಾಟಕ್ಕೆ ಸಂಬಂಧಿಸಿದವು. ಹುಟ್ಟುತ್ತ ಮುತಿಯುತ್ತ ಹೋಗುವವು ಚಾರಿತ್ರಿಕ ಭೌಗೋಳಿಕ ಸ್ವರೂಪದವಾಗಿರಬಹುದು, ವೃತ್ತಿ, ಜಾತಿ, ವರ್ಣ, ವರ್ಗ, ಸಂಸ್ಥಾನ, ದೇಶಗಳ ಪರಿಸರಕ್ಕೆ ಸಂಬಂಧಿಸಿದವುಗಳಾಗಿರಬಹುದು. ನಮ್ಮ ಜನರಂಜನಾ ಕುಣಿತಗಳಲ್ಲಿ ಈ ಎಲ್ಲ ಬಗೆಗಳಿಗೆ ಉದಾಹರಣೆಗಳಿವೆ. ಆದಕಾರಣವೆ ಸಾಮ್ಯಸಂಬಂಧಿಗಳಲ್ಲಿ ವಸ್ತುಸಂಬಂಧಿ, ರೂಪಸಂಬಂಧಿ, ಸಾಮಗ್ರಿಸಂಬಂಧಿ ಮತ್ತು ಕಾರ್ಯಸಂಬಂಧಿಗಳೆಂದು ಇರುವ ಮತ್ತು ಕಳೆದುಹೋದ ನೃತ್ಯಗಳೊಂದಿಗೆ ಪರಾಮರ್ಶಿಸಿಕೊಳ್ಳಬಹುದು. ಜನ್ಯಾತ್ಮಕಸಂಬಂಧಿಗಳಲ್ಲಿ ಇದೇ ರೀತಿ ವಸ್ತುಜನ್ಯ ಸಂಬಂಧಿ, ರೂಪ ಜನ್ಯಸಂಬಂಧಿ, ಸಾಮಾಗ್ರಿಜನ್ಯಸಂಬಂಧಿ, ಕಾರ್ಯಜನ್ಯಸಂಬಂಧಿ ಎಂದು ಗುರುತಿಸಿಕೊಳ್ಳುತ್ತಾ ಹೋಗಬಹುದು. ಇದರಿಂದ ನಮ್ಮ ಪಾಳ್ಳೇಗಾರನ ಕುಣಿತ ಅಥವಾ ಪೋಟಿವೇಷದಕುಣಿತವನ್ನು ರಾಜಾಸ್ಥಾನದ ದಾಂದಿಯರಾಸ್[3] ಕುಣಿತದೊಂದಿಗೋ ಮಧ್ಯಭಾರತದ ಆದಿವಾಸಿಗಳ ಭರ್ಜಿಕುಣಿತದೊಂದಿಗೊ ಅಧ್ಯಯನಮಾಡಲು ಸಾಧ್ಯವಾಗುತ್ತಿದೆ.

ಪ್ರಾಣಿಸಂಬಂಧಿ ಜನರಂಜನಾ ಕುಣಿತಗಳು :

ಮಾನವಸಂಸ್ಕೃತಿ ಆರಂಭಗೊಂಡದ್ದೆ ಮನುಷ್ಯ ಮತ್ತು ಪ್ರಾಣಿಗಳ ಹೊಂದಾಣಿಕೆಯ ಜೊತೆಗೆ, ಬೇಟೆ, ವ್ಯವಸಾಯ, ವ್ಯಾಪಾರ, ರಾಜ್ಯಭಾರ. -ಈ ಎಲ್ಲ ಸಮಾಜ ವ್ಯವಸ್ಥೆಗಳಲ್ಲೂ ಪ್ರಾಣಿಗಳು ಮನುಷ್ಯಸಂಸ್ಕೃತಿಯ ಭಾಗಗಳಾಗಿವೆ. ಸಾಕುಪ್ರಾಣಿಗಳಾಗಿ ಪ್ರಾಣಿಗಳ ಸಂಬಂಧ ಪಡೆದ ಮಾನವ ಪರಿಸರ ಸಮತೋಲನದ ಕಾರಣಕ್ಕಾಗಿ ಕಾಡುಪ್ರಾಣಿಗಳ ಜೊತೆಗೂ ಸಂಬಂಧ ಹೊಂದಿದ್ದಾನೆ. ಆರ್ಥಿಕವಾಗಿ ಹಸು, ಕುರಿ, ಕೋಳಿ, ಹಂದಿ, ಆಡು ಮುಂತಾದವುಗಳ ಸಂಬಂಧ ಇಟ್ಟುಕೊಂಡಿರುವಂತೆ, ನರಿ, ಆಮೆ, ಏಡಿ, ಕರಡಿ, ಕಪಿ, ಹಾವು, ಹುಲಿ, ಮೊಲ, ಇರುವೆ, ಗುಬ್ಬಚ್ಚಿ, ಪಾರಿವಾಳ, ಗಿಳಿ, ನವಿಲು ಮುಂತಾದವುಗಳೊಡನೆ ಜೈವಿಕಸಂಬಂಧ, ಸಾಮಾಜಿಕಸಂಬಂಧಗಳನ್ನು ಆರೋಪಿಸಿಕೊಂಡಿದ್ದಾನೆ. ಪ್ರಾಣಿಗಳಿಂದಲೇ ಬೇರೆಯಾದ ಈತ ತನ್ನನ್ನು ಪ್ರಾಣಿಗಳಲ್ಲಿಯೂ, ಪ್ರಾಣಿಗಳನ್ನು ತನ್ನಲ್ಲಿಯೂ ಕಂಡುಕೊಂಡಿರುವುದು ಪ್ರಾಣಿ ನೃತ್ಯಗಳಿಂದ ತಿಳಿದುಬರುತ್ತದೆ.

ಯಾವುದೆ ಜನಪದ ಕುಣಿತದ ಉಗಮ-ವಿಕಾಸ; ಭಾವ-ಸ್ವಭಾವ; ಚಿತ್ರ-ವೈಚಿತ್ರ್ಯ; ವಿಧ-ವೈವಿಧ್ಯಗಳನ್ನು ಎರಡು ಮೂಲಭೂತ ಅಂಶಗಳ ವಿಶ್ಲೇಷಣೆಯಲ್ಲಿ ಒಟ್ಟಾಗಿ ಅರ್ಥಮಾಡಿಕೊಳ್ಳಬಹುದು.

೧. ಕುಣಿತದ ಹೆಸರು

೨. ಕುಣಿತದ ಸ್ವರೂಪ-ಲಕ್ಷಣ

ಕುಣಿತದ ಹೆಸರು : ಕುಣಿಯುವ ವ್ಯಕ್ತಿ, ಸಂದರ್ಭ, ಆ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಸಂಬಂಧಗಳು, ಪರಿಸ್ಥಿತಿಗಳು, ಸಾಂಸ್ಕೃತಿ ಸ್ಥಿತಿಗಳು, ವೈರುಧ್ಯಗಳು ಮತ್ತು ಸಮಕಾಲೀನ ಪರಿಸ್ಥಿತಿಯಲ್ಲಿ ಅದಕ್ಕೆ ಇರುವ ಸ್ಥಾನ-ಮಾನಗಳನ್ನು ನಿರ್ಧರಿಸುವಂತೆ ಕುಣಿತದ ಸ್ವರೂಪ ಲಕ್ಷಣ ; ಅದರ ವಸ್ತು, ವೇಷ, ಕುಣಿತದ ಸ್ವಭಾವ, ನಡವಳಿಕೆ ಮತ್ತು ಅದರ ನಡೆಯ ಮನೋಭಾವವನ್ನು ವ್ಯಕ್ತಮಾಡುತ್ತದೆ. ಈ ಕಾರಣದ ಮೇಲೆ ನಾನು ಮುಂದೆ ವಿಶ್ಲೇಷಿಸುವ ಕೆಲವು ಕುಣಿತಗಳಿಗೆ ಕೆಳಗಿನ ಆರು ಉದ್ದೇಶಾತ್ಮಕ ಸಂಬಂಧಗಳನ್ನು ಅನ್ವಯಿಸಿ ಅವುಗಳ ಅಂತರಂಗ-ಬಹಿರಂಗವನ್ನು ಬಗೆದು ತೋರಿಸಬಯಸುತ್ತೇನೆ.

ಅವುಗಳೆಂದರೆ :

೧. ಕುಣಿತದ ಹೆಸರು

೨. ಕುಣಿತದ ವಸ್ತು

೩. ಕುಣಿತದ ವೇಷ

೪. ಕುಣಿತದ ಕುಣಿತ

೫. ಕುಣಿತದ ನಡವಳಿಕೆ

೬. ಕುಣಿತದ ಮುನ್ನಡೆ

ಈ ಆರೂ ಅಂಶಗಳ ವಸ್ತುಗಳನ್ನು ಸ್ಪಷ್ಟ ಸಂಬೋಧನೆಗಾಗಿ ನಿರೂಪಿತ ಪದ ಅಥವಾ ವಾಕ್ಯಗಳಲ್ಲಿ ಹೇಳುತ್ತೇನೆ. ಆನಂತರ, ಅವುಗಳ ಸಾವಯವ ಸಂಬಂಧ ಮತ್ತು ಸಮಗ್ರತೆಯನ್ನು ಒಟ್ಟಾಗಿ ಪರಿಶೀಲಿಸುತ್ತೇನೆ.

ಕುಣಿತ :

ಹೆಸರು ಕೋತಿ ಕುಣಿತ
ವಸ್ತು ‘ಮಂಗಮಾನವತ್ವದ ಪ್ರದರ್ಶನ’
ವೇಷ ‘ಕೋತಿ ಮನುಷ್ಯನಾಗತೊಡಗಿದ್ದು’
ಕುಣಿತ ‘ಕೋತಿ ಮನುಷ್ಯ ಆಗುತ್ತಿರುವ ಸಂತೋಷ’ ವಿಕಾಸ ಪ್ರಕ್ರಿಯೆಯ
ನಡವಳಿಕೆ ‘ಮನುಷ್ಯನ ಕೋತಿತ್ವ’
ಮುನ್ನಡೆ ‘ಮಂಗನಲ್ಲಿ ಮಾನವ ದರ್ಶನ’

ಕೋತಿ ನಮ್ಮ ತಾತನ ಮುತ್ತಾತ. ನಮ್ಮ ಜೊತೆಗೆ ಬರಲಾರದೆ, ಪ್ರಾಣಿ ಆಗಿಯೆ ಉಳಿಯುವ ಪ್ರಾಕೃತಿಕ ಹಟಕ್ಕೆ ಬದ್ಧನಾದ ಪೂರ್ವಮಾನವ. ಆತ ದೈಹಿಕವಾಗಿ ನಮ್ಮೊಡನೆ ಇವತ್ತು ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ಸುಪ್ತ ಪ್ರಜ್ಞೆಯಲ್ಲಿ ಇದ್ದಾನೆ. ಹೀಗೆ ಭೂತ ಮತ್ತು ವರ್ತಮಾನ ಜಾನಪದದಲ್ಲಿ ಒಟ್ಟೊಟ್ಟಿಗೆ ಇರುತ್ತವೆ. ಕಾರಣವಾಗಿ, ನಮ್ಮ ಶಿಸ್ತುಬದ್ಧ ಮತ್ತು ಸಂಸ್ಕೃತಿ ಸಂಪನ್ನ ನಡವಳಿಕೆಯ ಆಕಸ್ಮಿಕ ಸಂದರ್ಭಗಳಲ್ಲಿ ನಾವು ಮಂಗನಂತೆ ಹಲ್ಲು ಕಿರಿಯುತ್ತೇವೆ, ಮಕ್ಕಳೊಡನೆ ಮಂಗಾಟವಾಡುತ್ತೇವೆ. ಮಕ್ಕಳು ಆಟವಾಡುವ ವಯಸ್ಸಿಗೆ ಬಂದ ತಕ್ಷಣದಿಂದ ಮಂಗಾಟವನ್ನೆ ಶುರುಮಾಡುತ್ತವೆ. ಮಂಗ ಆಕಸ್ಮಿಕವಾಗಿ ಸತ್ತ ಸಂದರ್ಭವನ್ನು ಕಣ್ಣಾರೆ ಕಂಡರೆ ನೇರವಾಗಿ ಅವನ ಶ್ರಾದ್ಧಮಾಡಿ ನಮ್ಮ ಹಿರಿಯರಿಗೆ ಅಶ್ರುತರ್ಪಣ ನೀಡುತ್ತೇವೆ. ಈ ಮೂಲಕ ಇವತ್ತಿನ ಮಾನವ ತಾತನಾಗುವ, ತಾತನ ನಡವಳಿಕೆಯಲ್ಲಿ ಭಾಗಿಯಾಗುವ, ತಾತನನ್ನು ಸಂಪ್ರದಾಯ – ಆಚರಣೆಯಲ್ಲಿ ಉಳಿಸಿಕೊಂಡುಬರುವ ಮೂಲಕ, ತನ್ನ ಪ್ರಾಣಿತ್ವವನ್ನು ತಾನೇ ಪ್ರಾಣಿಯಾಗುವ ಮೂಲಕ ದರ್ಶಿಸಿಕೊಳ್ಳುತ್ತಾನೆ.

ಇದು ಮಾನವನನ್ನು ಪ್ರಾಣಿಯಾಗಿ, ಮಾನವಪ್ರಾಣಿಯನ್ನು ಸಂಸ್ಕೃತಿಯ ಸಂಪಾದಕನನ್ನಾಗಿ ಗುರುತಿಸಿಕೊಳ್ಳುವ ಕ್ರಮ. ಈ ಕಟುವಾಸ್ತವವನ್ನು ಇಬ್ಬರು ಸಭ್ಯರು ಜಗಳಕ್ಕೆ ಬಿದ್ದಾಗ: ನೀನು ಕಪಿ, ನೀನು ಕಪಿ ಎಂದು ಪರಸ್ಪರ ಮೂದಲಿಸಿಕೊಳ್ಳುವ ಮೂಲಕ ತಮ್ಮ ಪರಂಪರೆಯನ್ನೂ, ತಮ್ಮ ವಾಸ್ತವವನ್ನೂ ಒಟ್ಟಾಗಿ ಗುರುತಿಸಿಕೊಳ್ಳುತ್ತಾರೆ.

ಇದೆ ಕಾರಣಕ್ಕೆ ಕುಣಿತ ಬರದ ಕೋತಿಗೆ ಕುಣಿತ ಕಲಿಸುತ್ತೇವೆ. ಚಡ್ಡಿ ಹಾಕುತ್ತೇವೆ, ಪೇಟ ಸುತ್ತುತ್ತೇವೆ, ಹೆಗಲಿಗೆ ದೊಣ್ಣೆ ಕೊಟ್ಟು ‘ಕುರಿ ಕಾಯಿ ಮಂಗಣ್ಣ’ ‘ದನ ಕಾಯಿ ಮಂಗಣ್ಣ’ ಎಂದು ಆರ್ಥಿಕವಾಗಿ, ಸಾಮಾಜಿಕವಾಗಿ ನಾವು ವಿಕಾಸದ ಹಂತಗಳಲ್ಲಿ ನಡೆದುಬಂದ ದಾರಿಯನ್ನು ಅತ್ಯಂತ ಸಂತೋಷದಿಂದ ಅನುಭವಿಸುತ್ತೇವೆ : ಎಂದರೆ ನಮ್ಮ ಜನಪದ ಪರಂಪರೆಯನ್ನು ಪುನಃ ಊರ್ಜಿತಪಡಿಸುತ್ತೇವೆ. ಪರಂಪರೆಯನ್ನು ಒಪ್ಪಿ ಮುನ್ನಡೆಯುತ್ತೇವೆ. ಕಾಡುಪ್ರಾಣಿಯಾದ ಮನುಷ್ಯ – ಊರ ಪ್ರಾಣಿಯಾದುದು ; ಅವನಿಂದ ಕಾಡಿನಲ್ಲಿದ್ದ ಪ್ರಾಣಿಗಳು ಸಾಕುಪ್ರಾಣಿಗಳಾದುದು ; ಅವುಗಳನ್ನು ಸಾಕಿ ಮನುಷ್ಯನೂ ಅವುಗಳೂ ಒಟ್ಟಿಗೆ ಅಭಿವೃದ್ಧಿ ಹೊಂದಿದ್ದು ; ಕೊನೆಗೆ ಆಶ್ಚರ್ಯಕರವಾದ ಸಿದ್ಧಿಯನ್ನು ಮನುಷ್ಯ ಸಾಧಿಸಿಕೊಂಡದ್ದರ ತುಡಿತಗಳೇ ಕೋತಿ ಕುಣಿತದ ಹೆಜ್ಜೆಗಳು ; ಅದರ ಹೆಜ್ಜೆ, ಧ್ವನಿ ನಮ್ಮ ಪರಂಪರೆಯ ಅನುರಣನ ಧ್ವನಿ.

ಕುಣಿತ :

ಹೆಸರು ಕರಡಿ ಕುಣಿತ
ವಸ್ತು “ಜಾಂಬವತ್ವ ಹೇಗೆ”
ವೇಷ ಕರಿಕಂಬಳಿ ಹೆಗಡಿ
ಕುಣಿತ ಹಿಂಸೆ ಮತ್ತು ಪ್ರೀತಿ
ನಡವಳಿಕೆ ತಿರಸ್ಕಾರ ಮತ್ತು ನಿರ್ಲಕ್ಷ
ಮುನ್ನಡೆ ‘ಪೀಳಿಗೆಗಳ ದರ್ಶನ’

ಕೋತಿ ಮನುಷ್ಯನಾಗಿ ವಿಕಾಸವಾಗದ ಕಾರಣಕ್ಕೆ ಕೋತಿಕುಣಿತ ಜನಪದ ಕುಣಿತವಾಗಿ ದಾಖಲೆಯಾಗದೆ ಉಳಿದಿದೆ. ಕರಡಿಕುಣಿತ ವಾಸ್ತವತೆಯಿಂದ ವೇಷಕ್ಕೆ, ವೇಷದಿಂದ ಬದುಕಿಗೆ ಕಾಲಿಟ್ಟಿದೆ. ಸುಮಾರು ವರ್ಷಗಳ ಹಿಂದೆ ಕರಡಿಗಳನ್ನೆ ಕುಣಿಸುತ್ತಿದ್ದರು. ಉತ್ತರ ಭಾರತದ ಕಡೆ ಈಗಲೂ ನೇರ ಕರಡಿಗಳ ಕುಣಿತ ಇದೆಯಂತೆ. ಪ್ರಾನ್ಸ್‌ನ ಭಾರತ ಉತ್ಸವದಲ್ಲಿ ಕರಡಿ ಕುಣಿಸಿ ನಮ್ಮವರು ಪಡೆದ ಪ್ರಸಿದ್ಧಿ ಗೊತ್ತೆ ಇದೆಯಲ್ಲ ! ಈಗ ಕರಡಿ ವೇಷಗಳು ಬಳಕೆಯಲ್ಲಿವೆ. ಇದು ನಮ್ಮ ಪೀಳಿಗೆಗಳ ದರ್ಶನದ ಕೇಂದ್ರ ಕಲ್ಪನೆಯಾಗಿದೆ. ಕರಡಿ ಒಬ್ಬ ಮಂತ್ರವಾದಿಯ ಸ್ಥಾನದಲ್ಲಿ ಇರುವುದು; ಮಂತ್ರವಾದಿ ಮಾನವನ ಮೂಲ ಧರ್ಮದ ಪ್ರವರ್ತಕ ಮತ್ತು ಸಂವಹನಕಾರನಾಗಿರುವುದು ಇದಕ್ಕೆ ಸಮರ್ಥನೆಯಾಗಿದೆ. ಮಗ್ಗಲು ಉಚ್ಚೆ ಹುಯ್ದುಕೊಳ್ಳುವ ಮಕ್ಕಳನ್ನು ಕರಡಿ ತಲೆ-ಕೂದಲುಗಳಿಂದ ಹೆದರಿಸಿದರೆ ಅವು ಹಾಗೆ ಮಾಡಿಕೊಳ್ಳುವುದಿಲ್ಲವಂತೆ. ದಕ್ಷಿಣ ಕರ್ನಾಟಕದ ಗಡಬಡಯ್ಯಗಳು ಈ ನಡವಳಿಕೆಯನ್ನು ಮುಂದುವರಿಸಿದ್ದಾರೆ. ಕರಡಿ ವೇಷ ಊರಿನಲ್ಲಿ ಕುಣಿದರೆ ರಣಪಿಶಾಚಿ ಮತ್ತು ಬ್ರಹ್ಮಪಿಶಾಚಿಗಳು ಓಡಿಹೋಗುತ್ತವೆ ಎಂಬ ನಂಬಿಕೆ ಇದೆ. ಇದು ಆತ ನಮ್ಮ ಹಿರಯ ಮಂತ್ರವಾದಿ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ.

ಕೋತಿ ಮತ್ತು ಕರಡಿಗಳು ಪ್ರಾಣಿ ಮನುಷ್ಯರು, ಇವು ಪ್ರಾಣಿಗಳಲ್ಲ; ಪ್ರಾಣಿ ರೂಪದ ಮನುಷ್ಯರು ಎಂದು ನಿರೂಪಿಸುವುದೆ ಈ ಎರಡು ಕುಣಿತಗಳ ಉದ್ದೇಶ. ಕೋತಿ ಮತ್ತು ಕರಡಿಗಳು ಒಂದೊಂದು ಪ್ರಾಣಿ ಮನುಷ್ಯರ “ಗುಣಗಳು” ಅಥವಾ ಒಂದು ಲೆಕ್ಕದ ಒಂದು ಗುಣ. ಮಾನವಸಂಸ್ಕೃತಿಯಲ್ಲಿ ಇಂಥ ಅನೇಕ ಗುಣಗಳಿವೆ; ಆಮೆ, ಏಡಿಗಳು ಶ್ರದ್ಧೆಯ ಒಂದೊಂದು ಲೈಂಗಿಕ ಗುಣಗಳಾದರೆ, ಕರಡಿ ಮತ್ತು ನರಿ ಒಂದೊಂದು ಲೈಂಗಿಕ ವಿಕಾಸವ ಆಶ್ರದ್ಧೆಯ ಗುಣಗಳು. ಇವು ಜನಪದ ಪ್ರಗತಿಯ ಧನಾತ್ಮಕ ಮತ್ತು ಋಣಾತ್ಮಕ ಗುಣವಿಧಾನಗಳು. ಈ ಗುಣಾತ್ಮಕಗಳ ಪುನರ್‌ಪ್ರತಿಪಾದನೆಯ ಕರಡಿ ಮತ್ತು ಕೋತಿ ಕುಣಿತಗಳು. ಈ ಎರಡೇ ಪ್ರಾಣಿಗಳನ್ನು ಜಾನಪದ ಕುಣಿತಕ್ಕಾಗಿ ಯಾಕೆ ಸ್ವೀಕರಿಸಲಾಗಿದೆ. ನರಿ, ಕೋಳಿ, ಅಥವಾ ಬೆಕ್ಕುಗಳನ್ನು ಯಾಕೆ ಸ್ವೀಕರಿಸಿಲ್ಲ ಎಂದರೆ, ಇವು ಕೋತಿ ಅಥವಾ ಕರಡಿಯಂತೆ ಮಾನವನಿಗೆ ವಿಕಾಸ ಬಂಧುಗಳು ಎನಿಸದಿರುವ ವಸ್ತುಸ್ಥಿತಿ ಅಥವಾ ವಸ್ತುಸ್ಥಿತಿಯ ಬಗೆಗಿನ ಭ್ರಮೆ. ಇಲ್ಲೆಲ್ಲ ಮೂಲ ಪುರಾಣದ ಸಾಂಸ್ಕೃತಿಕ ನಾಯಕ; ಪ್ರಾಣಿ ಮನುಷ್ಯ ರೀಜನರೇಟ್ ಆಗುತ್ತಿದ್ದಾನೆ. ಅನೇಕ ಆದಿಮಾನವರಲ್ಲಿ ಸಾಂಸ್ಕೃತಿಕ ನಾಯಕ ಧೀರ ಗಂಭೀರನೂ ಹೌದು; ಹಾಸ್ಯಕ್ಕೆ ಪಕ್ಕಾಗುವ ಮನುಷ್ಯನೂ ಹೌದು.

ಕುಣಿತ :

ಹೆಸರು ಹುಲಿಕುಣಿತ
ವಸ್ತು “ಸಂರಕ್ಷಣಾ ಆರ್ಥಿಕ ನಡವಳಿಕೆ”
ವೇಷ ಹುಲಿಯ ಅನುಕರಣೆ
ಕುಣಿತ ಭಯ ಮತ್ತು ಹೊಂದಾಣಿಕೆ
ನಡವಳಿಕೆ ಪುಕ್ಕಲು ಮತ್ತು ಪ್ರತಿಭಟನೆ
ಮುನ್ನಡೆ “ಪ್ರಕೃತಿ ಸ್ವೀಕಾರ”

ಕರ್ನಾಟಕದಲ್ಲಿ ಹುಲಿವೇಷ ಸುಪ್ರಸಿದ್ಧ. ಈಗ ಇದು ಹೆಚ್ಚಾಗಿ ಮೊಹರಂ ಹಬ್ಬಗಳಲ್ಲಿ ಕಂಡುಬರುತ್ತಿದೆ. ಆದಿವಾಸಿಗಳ ಅನೇಕ ಬುಡಕಟ್ಟುಗಳಲ್ಲಿ ಹುಲಿವೇಷ ಒಂದು ಸರ್ವಸಾಧಾರಣ ಆಚರಣಾ ಆಶಯ. ಹುಲಿಗೆ ಬದಲಾಗಿ ಚಿರತೆ ಮತ್ತು ಕಿರುಬಗಳಂಥ ಪ್ರಾಣಿಗಳು ಬರಬಹುದು. ಈ ಕುಣಿತ ವೇಷದಲ್ಲಿ ಕಾಡುವಾಸಿಗಳ ಆರ್ಧಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಮೂರು ಆಶಯಗಳಿವೆ :

೧. ಗೋಪಾಲಕರು ಹುಲಿಯಿಂದ ತಮ್ಮ ಗೋವುಗಳನ್ನು ರಕ್ಷಿಸಿಕೊಳ್ಳಲು ಹುಲಿಯನ್ನು ರಕ್ಷಕದೇವತೆಯನ್ನಾಗಿ ಅಂಗೀಕರಿಸುವಿಕೆ.
೨. ಹಳ್ಳಿಗರು-ಕಾಡುವಾಸಿಗಳು ಹುಲಿಯನ್ನು ಗದ್ದಲ ಆರ್ಭಟದಿಂದ ಓಡಿಸುವ ಸಾಮಾನ್ಯ ವಿಧಾನ.
೩. ಹುಲಿ ಮತ್ತು ಮಾನವರ ಮಧ್ಯದ ಸಂಬಂಧವನ್ನು ನಿರ್ಧರಿಸುವ ರಕ್ಷಣಾತ್ಮಕ ವಿಧಾನ. ಅಂದರೆ ಸ್ನೇಹಿತ, ಸಹವಾಸಿ ಅಥವಾ ಶತ್ರುವಾಗಿ ಅಂಗೀಕರಿಸುವಿಕೆ.

ಮೊದಲ ವಿಧಾನ ಕುಲದೇವತಾ ಆರಾಧನೆಯ ಮೂಲದಿಂದ ಬಂದಿರಬಹುದು. ಎರಡನೆಯದು ಕೇವಲ ದಬ್ಬಾಳಿಕೆಯಿಂದ ಅನ್ಯರನ್ನು ಅವಕಾಶಗಳಿಂದ ದೂರ ಇಡುವ ವಿಧಾನ. ಮೂರನೆಯ ವಿಧಾನ ಉತ್ಪಾದನೆಯ ಹಂಚಿಕೆ ವ್ಯವಸ್ಥೆಗೆ ಸಂಬಂಧಿಸಿದ್ದು. ಇದು ಆದಿವಾಸಿ ಜನಪದಗಳ ವಿಕಾಸದಲ್ಲಿ ನಡೆದು ಬಂದ ಉತ್ಪತ್ತಿಯ ಹಂಚಿಕೆಯ ವಿಧಾನಗಳ ಇತಿಹಾಸವನ್ನು ಕುರಿತದ್ದಾಗಿದೆ. ನಾವು ನಮ್ಮ ಹೊಲಗಳಿಗೆ ಹಾಕುವ ಬೇಲಿಯ ಕಲ್ಪನೆಯಲ್ಲಿಯೆ ಇದರ ಮೂಲ ಇದೆ. ಇದು ಜನಪದ ‘ಗಡಿಕಲ್ಪನೆ’ ವಿಧಾನ. ನಮ್ಮ ಹೆಸರಿಗೆ ನಮ್ಮ ಆಸ್ತಿಯ ಖಾತೆ ಕಿರ್ದಿ ಇರುವುದರಿಂದ ನಮಗೆ ಬೇಲಿಹಾಕುವ ಸಮಸ್ಯೆ ದನಕರುಗಳ ತಡೆಗಾಗಿ ಎನಿಸಿದೆ. ವಾಸ್ತವದಲ್ಲಿ ಆರ್ಥಿಕಜನಪದವೊಂದು ತನಗೆ ತಾನೇ ಘೋಷಿಸಿಕೊಂಡ ಗಡಿ ಇದು. ತನ್ನ ಆರ್ಥಿಕ ಭೂಪ್ರದೇಶವನ್ನು ಆದಿವಾಸಿ ಜನ ಹೀಗೆ ವಿಂಗಡಿಸಿಕೊಳ್ಳುತ್ತಿದ್ದರು. ಅಷ್ಟು ಪ್ರದೇಶದ ಆರ್ಥಿಕ ಉತ್ಪತ್ತಿಗೆ ಅವರೆ ಹಕ್ಕುದಾರರು. ಈ ಆರ್ಥಿಕ ಹತೋಟಿಯ ಮೂಲಕಲ್ಪನೆಯೆ ಹುಲಿಕುಣಿತ; ಗೇರ್ಕಳ್ಳಕುಣಿತದ ಉದ್ದೇಶ.

ಗೇರ್ಕಳ್ಳ ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುವ ಕಿರುಬನ ಕುಣಿತ, ಕೂಲಿಕಾರರ, ಬಡವರ ಕರುಗಳನ್ನು ಹಿಡಿದು ತಿನ್ನುವ ಕಿರುಬನನ್ನು ಓಡಿಸುವ ಒಂದು ರಕ್ಷಣಾತಂತ್ರ ಅಥವಾ ಸಮರತಂತ್ರ. ಈ ಕುಣಿತದಲ್ಲಿ ಭಾಗವಹಿಸುವವರು ಕೆಳವರ್ಗದ ಜನ. ಅವರಿಗೆ ಒಂದು ಕರು, ಒಂದು ಬೆಲೆಬಾಳುವ ಆರ್ಥಿಕ ಉತ್ಪತ್ತಿಯ ಮೂಲ. ಬೆಳೆದ ಬೆಳೆಯನ್ನು ಕಾಗೆಯಿಂದ ರಕ್ಷಿಸಲು ‘ಕಾಗೆಕುಣಿತ’ ಮಾಡುವುದು ಮಧ್ಯಭಾರತದ ಆದಿವಾಸಿಗಳಲ್ಲಿ ಇದೆ. ಶ್ರೀಶೈಲದ ಕಡೆಯ ಆದಿವಾಸಿ ಗುಂಪೊದರಲ್ಲಿ ಹುಲಿಯನ್ನು ಹೆದರಿಸುವ ಒಂದು ನೃತ್ಯಾಚರಣೆ ಇದೆ. ಬೇಕಾಬಿಟ್ಟಿಯಾಗಿ ರಾಸುಗಳನ್ನು ತಿನ್ನುವ ಹುಲಿಯ ಜೊತೆಗೆ ಬಕಾಸುರನ ಜೊತೆಗೆ ಏಕಚಕ್ರಿನಗರದ ಜನ ಮಾಡಿಕೊಂಡಂತೆ ಆಗಾಗ ಒಂದೊಂದು ರಾಸನ್ನು ತಾವೇ ಕಳಿಸಿಕೊಡುವ ಒಪ್ಪಂದ ಮಾಡಿಕೊಳ್ಳುವ ಕ್ರಮ ಇಲ್ಲಿದೆ. ಕಾಡು ಮತ್ತು ತಮ್ಮ ವಾಸಸ್ಥಾನದ ಮಧ್ಯೆ ಒಂದು ಗೆರೆಯನ್ನು ಎಳೆದು, ಅಲ್ಲಿ ಎಲ್ಲರೂ ಸೇರಿ, ಕುಣಿದು-ಕುಪ್ಪಳಿಸಿ, ಕೂಗಿ, ಆರ್ಭಟಿಸಿ, ವಾದ್ಯ-ತಮಟೆ ಹೊಡೆದು ತಮ್ಮಲ್ಲೆ ಒಂದು ಗಡಿ ಒಪ್ಪಂದವನ್ನು ಮಾಡಿಕೊಂಡು ಬರುತ್ತಾರೆ. ಇದನ್ನು ಹುಲಿ ಗ್ರಹಿಸುತ್ತದೆ. ಅನಿವಾರ್ಯವಾಗಿ ಜನ ವಿಧಿಸಿದ ಗಡಿ ಮತ್ತು ಒಪ್ಪಂದಕ್ಕೆ ಅದು ತಲೆಬಾಗಬೇಕಾಗುತ್ತದೆ.

ಇಲ್ಲಿಯ ಕುಣಿತಗಳೆಲ್ಲ ರಕ್ಷಣಾತಂತ್ರದ ಕುಣಿತಗಳು. ಗೇರ್ಕಳ್ಳ ಸಿಕ್ಕಿದಂತೆ ನಟಿಸುವುದು, ಸಿಕ್ಕದೆ ಹೋಗುವುದು ; ಸಿಕ್ಕುವುದು, ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಕೊನೆಗೆ ಅದನ್ನು ಹಿಡಿದುಹಾಕಿದ ಸಮಾಧಾನ ಭಾಗವಹಿಸಿದವರಿಗೆ ಬಂದಂತೆ ಆಗುವುದು. ಹುಲಿ ವೇಷಧಾರಿಯ ಕುಣಿತ ಕೂಡ ಜಿಗಿಯುವುದು, ಕುಪ್ಪಳಿಸುವುದು, ಆರ್ಭಟಿಸುವುದು ಮತ್ತು ಕೆಲವೊಮ್ಮೆ ಅರಚಿ ನಿಲ್ಲುವುದೇ ಆಗಿದೆ.

ಹುಲಿವೇಷದ ಮುನ್ನಡೆ ಎಂದರೆ, ಪ್ರತಿಭಟನೆ ಮತ್ತು ಸ್ವೀಕಾರ. ಆಧುನಿಕರಂತೆ ಬೇಡವಾದುದನ್ನು, ಬೇಡವಾದವರನ್ನು ಕೊಂದು ಬಿಸಾಕುವುದಲ್ಲ ; (ಗೇರ್ಕಳ್ಳನನ್ನು ಶಿವಮೊಗ್ಗದ ಶ್ರೀಮಂತ ಒಕ್ಕಲು ಅಭಿನಯಿಸಬೇಕಿಲ್ಲ. ಏಕೆಂದರೆ ಅವರ ಹತ್ತಿರ ಕಿರುಬನನ್ನು ಕೊಂದು ಎಸೆಯಲು ಗನ್ನುಗಳಿವೆ) ತಾವು ಬದುಕುವುದು ಮತ್ತು ಇತರರನ್ನು ಬದುಕಲು ಬಿಡುವುದು. ಜನಪದ ಸಮಾಜದ ಈ ಧೋರಣೆ ಪ್ರಕೃತಿ ನಿರಾಕರಣೆಯಿಂದ ಬಂದುದಲ್ಲ ; ಪ್ರಕೃತಿ ಸ್ವೀಕಾರದಿಂದ ಬಂದದ್ದು. ಅಂದರೆ, ಸಂರಕ್ಷಣೆ ಮತ್ತು ಉತ್ಪತ್ತಿಗೆ ಅವಕಾಶ.[4]

ಕುಣಿತ :

ಹೆಸರು ಕೀಲುಕುದುರೆ
ವಸ್ತು ಪ್ರಣಯ
ವೇಷ ರಮ್ಯರಾಜಕುವರಿ-ರಾಜಕುವರ
ಕುಣಿತ ಮೋಹಕ
ನಡವಳಿಕೆ ಕನಸುಗಾರಿಕೆ
ಮುನ್ನಡೆ ‘ಸಾಂಪ್ರದಾಯಿಕ ಪ್ರತಿಭಟನೆ’

ಕೀಲುಕುದುರೆ ರಮ್ಯ ಕಥೆಗಳಲ್ಲಿನ ಒಂದು ಪ್ರಧಾನ ಆಶಯ. ಇದು ಮಾಂತ್ರಿಕ ಜಗತ್ತಿನ ಒಂದು ಮೋಹಕಕೊಡುಗೆ. ಜನಪದ ರಮ್ಯಕಥೆಗಳಲ್ಲಿ ರಾಜಕುಮಾರ-ರಾಜಕುವರಿಯನ್ನು ಕದ್ದು ಕೀಲುಕುದುರೆಯ ಮೇಲೆ ಹಾರಿಸಿಕೊಂಡು ಹೋಗುತ್ತಾನೆ. ಇಂಥ ಪ್ರಸಂಗಗಳು ನಮ್ಮ ಸಿನೆಮಾದಲ್ಲೂ ಇವೆ. ಕೀಲುಕುದುರೆಕುಣಿತ ಪಾತ್ರಪೋಷಣೆಯಲ್ಲಿ ಈ ಎಲ್ಲ ಅಂಶಗಳು ಇವೆ. ಬಹಳ ಸಂದರ್ಭದಲ್ಲಿ ಕೀಲುಕುದುರೆ, ಅದರ ಮೇಲೆ ರಂಜಿಸುವ ಹೆಣ್ಣು-ಗಂಡು ಮತ್ತು ಕೋಡಂಗಿಗಳು ತಮಿಳು ಸಿನೆಮಾದ ಪ್ರತಿಕೃತಿಗಳಂತೆಯೂ ಕಾಣುತ್ತಾರೆ.

ಈ ಕುಣಿತದಲ್ಲಿ, ಕುಣಿತ ಮತ್ತು ನಾಟಕೀಯತೆ ಹೆಚ್ಚು ಹರೆಯದವರಲ್ಲಿ ಹುಚ್ಚು ರಚ್ಚನ್ನು ಹಿಡಿಸಿದರೆ, ವಯಸ್ಕರಿಗೆ ತಣ್ಣನೆಯ ಅನುಭವ. ಕುಣಿಯುವವರು ಮರಗಾಲು ಕಟ್ಟಿಕೊಂಡು, ಕುದುರೆಗಳನ್ನು ಹಿಂದೆ ಮುಂದೆ ಆಡಿಸುತ್ತಾ ಶೃಂಗಾರ ಭಾವನೆಗಳನ್ನು ಬಿಚ್ಚುತ್ತಿದ್ದರೆ ಹುಡುಗ ಹುಡುಗಿಯರ ಹೃದಯಗಳು ಹಾರಾಟ-ತೂರಾಟದಲ್ಲಿರುತ್ತವೆ.


[1]        ಒಬ್ಬ ನೃತ್ಯಕಾರ ನನ್ನ ಮೇಲೆ ಮಾರಿಯಮ್ಮ ಬಂದಿದ್ದಾಳೆ ಎಂದು ಹೇಳಿಕೊಂಡು ಅರ್ಥಾತ್ ನಂಬಿಕೊಂಡು ಕುಣಿಯುತ್ತಾನೆ. ಅವನ ನಂಬಿಕೆಯನ್ನೇ ಅಲ್ಲಗಳೆಯುವ ನಾನು ಅವನನ್ನು ಮಾರಿಯಮ್ಮನ ಅವತಾರವಾಗಿ ನೋಡುವುದು ಹೇಗೆ? ಈ ನಂಬಿಕೆಗಳ ಅಂತರ ಬಹಳ ಕಡಿಮೆಯಾಗುವ ಪರಿಸ್ಥಿತಿಯಲ್ಲಿ ಇಬ್ಬರೂ ಭಾಗವಹಿಸಬೇಕು.

[2]        ಝೆಮಿನಾಗಾಗಳಲ್ಲಿ ದುಂಬಿ ಮತ್ತು ದಪ್ಪಕೊಕ್ಕರೆ (hornbill) ಕುಣಿತಗಳಿವೆ.

[3]        Dandia Ras of Rajastan is war like dance.

[4]        ಬೆಳೆ ತಿನ್ನುವ ಹುಳುಗಳಿಗೆ ಅವು ಬೆಳೆ ತಿನ್ನದಿರಲಿ ಎಂದು ಹೊಲಕ್ಕೆ ವಿಶೇಷ ಅಡುಗೆ (ಅನ್ನ, ಶ್ಯಾವಿಗೆ ಮತ್ತು ಬೇಳೆಸಾರು) ಚೆಲ್ಲುವ ಸಂಪ್ರದಾಯ ಹಾಸನ ಜಿಲ್ಲೆಯಲ್ಲಿ ಇದೆ. ಇದಕ್ಕೆ ‘ಮಸಿ ಚೆಲ್ಲುವುದು’ ಎನ್ನುತ್ತಾರೆ.