ಮೂಲ :

ಬಯಲಾಟದ ಬೇರುಗಳನ್ನು ಒಂಬತ್ತನೆಯ ಶತಮಾನದಲ್ಲಿ ಉಲ್ಲೇಖವಾದ ಪಗರಣದಲ್ಲಿ ಹುಡುಕುವ ಸಾಹಸ ನಡೆದಿದೆ. ಆದರೆ ಅವುಗಳಿಗೆ ವಿಶೇಷ ಪ್ರೇರಣೆ ದೊರೆಕಿದ್ದು ಕಿಳ್ಳೀಕೇತರ ಸೂತ್ರದಗೊಂಬೆಯಾಟ ಮತ್ತು ಬಹುರೂಪಿಗಳ ಸೋಗಿನಿಂದ ಎಂಬುದಂತೂ ಸತ್ಯ. ಸಂಕೀರ್ಣ ಕಲೆಯಾದ ಈ ಬಯಲಾಟ ಉತ್ತರ ಕರ್ನಾಟಕದ ಪ್ರಸಿದ್ಧ ಜಾನಪದ ಕಲಾಮೇಳ ವೆಂಬುದಂತೂ ಸುಳ್ಳಲ್ಲ. ಜನಪದ ಕುಣಿತಕ್ಕೆ ಒಂದು ವಿಶಿಷ್ಟ ನೆಲೆ ಸಿಕ್ಕುದು ಈ ಬಯಲಾಟಗಳಲ್ಲಿ ಮಾತ್ರ.

ಬಯಲಾಟದ ಮೂಲವನ್ನು ಕುರಿತು ವಿದ್ವಾಂಸರು ಎರಡು ಸಿದ್ಧಾಂತಗಳನ್ನು ಮುಂದಿಡುತ್ತಾರೆ. ಒಂದು ಧರ್ಮಮೂಲ ಸಿದ್ಧಾಂತ. ಇನ್ನೊಂದು ಅನುಕರಣಮೂಲ ಸಿದ್ಧಾಂತ. ಇವುಗಳಲ್ಲಿ ಅನುಕರಣ ಮೂಲ ಸಿದ್ಧಾಂತ ಹೆಚ್ಚು ಸ್ವೀಕಾರಾರ್ಹವೆಂಬುದಂತೂ ಖಚಿತ. ಮಾನವ ಮೂಲದಿಂದಲೂ ಅನುಕರಣಶೀಲ. ಈ ಅನುಕರಣ ಬುದ್ಧಿಯಿಂದಾಗಿ ಪಶು-ಪಕ್ಷಿಗಳ ನಡೆ ಧ್ವನಿಗಳನ್ನು ಅನುಕರಿಸಿ ಆಕರ್ಷಿಸಿ ಬೇಟೆಯಾಡುವ ವಿಧಾನಗಳನ್ನು ಅನುಸರಿಸಿಕೊಂಡು ಬಂದಿರುವ ಸಾಧ್ಯತೆಗಳಿವೆ. ಇಂದೂ ಮಕ್ಕಳು ಹಿರಿಯರನ್ನು ನೋಡಿ ಗಂಡ-ಹೆಂಡತಿ-ತಾಯಿಯಾಗಿ; ಕಳ್ಳ-ಪೋಲೀಸನಾಗಿ ಆಟವಾಡುವುದನ್ನು ನೋಡುತ್ತೇವೆ. ಮನುಷ್ಯನಿಗೆ ಧಾರ್ಮಿಕಭಾವನೆ ಮೂಡಿದ್ದು ಬಹಳ ತಡವಾಗಿ. ಈ ಬಯಲಾಟ ಧಾರ್ಮಿಕ ಪರಿಸರದಲ್ಲಿ ಬೆಳೆದು ಒಂದು ಸ್ವರೂಪ ತಳೆದುದನ್ನು ಅಲ್ಲಗಳೆಯಲಾಗದು.

ಆಟ :

ಬಯಲಾಟವನ್ನು ಮೂಲದಲ್ಲಿ ‘ಆಟ’ವೆಂದೇ ಕರೆಯುತ್ತಿದ್ದರು. ಆದರೆ ದೇವಾಲಯವನ್ನು ಬಿಟ್ಟು ಹೊರಬಂದು ಬಯಲಲ್ಲಿ ಆಡುವ ರೂಢಿ ಪ್ರಾರಂಭವಾದೊಡನೆ ಅದು ಬಯಲಾಟವಾಯ್ತು. ಇಂದೂ ಅಚ್ಚ ಜನಪದರ ಬಾಯಲ್ಲಿ ಇದು ‘ಆಟ’ವಾಗಿಯೇ ಇದೆ. ಪ್ರೇಕ್ಷಕರು ಇದನ್ನು ಬಯಲಾಟವೆಂದು ಕರೆಯಲಾರಂಭಿಸಿದರೂ, ಆಟ ಆಡುವವರು, ತಮ್ಮ ‘ಆಟ’ ಮೂಡಲ ಪಾಯದಾಟವೆಂದೇ ಹೇಳುತ್ತಿದ್ದರು. ಆದರೆ ಬರಬರುತ್ತ ಮೂಡಲಪಾಯ ಮುಳುಗಿ ಹೋಗಿ ಬಯಲಾಟವೆನ್ನುವ ಪದ ಸಾಮಾನ್ಯವಾಗಿ ರೂಢಿಯಲ್ಲಿ ಉಳಿದಿದೆ.

ಈ ‘ಬಯಲಾಟ’ ಇಷ್ಟಕ್ಕೇ ನಿಲ್ಲದೆ ಇನ್ನೂ ಬೇರೆ ಬೇರೆ ಶಾಖೆಗಳಾಗಿ ಬೆಳೆದು ಬಂತು. ಮೂಡಲಪಾಯದ ವಸ್ತು, ತಂತ್ರ, ಭಾಷಾವೇಶ, ಆಡಂಬರ ಮೊದಲಾದವುಗಳಲ್ಲಿ ಹೊಸತನ್ನು ತರುವ ಉ‌ದ್ದೇಶದಿಂದ ವಿಶಿಷ್ಟ ರೀತಿಯ ಆಟವೊಂದು ಜೊತೆ ಜೊತೆಗೆ ಬೆಳೆಯಹತ್ತಿತ್ತು. ಅದನ್ನು ಸಣ್ಣಾಟವೆಂದು ಕರೆಯ ಹತ್ತಿದಾಗಲೇ ಮೂಡಲಪಾಯಕ್ಕೆ ‘ದೊಡ್ಡಾಟ’ ವೆಂಬ ಹೆಸರು ಪ್ರಾಪ್ತವಾಗಿರುವ ಸಾಧ್ಯತೆ ಇದೆ. ಜಾನಪದ ರಂಗಭೂಮಿ ಹಿಗ್ಗಿದಾಗ ಆಟಗಳ ಸ್ವರೂಪಗಳನ್ನನುಲಕ್ಷಿಸಿ, ಅವುಗಳನ್ನು ವಿಂಗಡಿಸಿ ಹೇಳುವ ಅನುಕೂಲಕ್ಕಾಗಿ ‘ಸಣ್ಣಾಟ’ ‘ದೊಡ್ಡಾಟ’ಗಳೆಂಬ ಹೆಸರುಗಳು ರೂಢಿಗೆ ಬಂದವು. ಆದರೂ ಬಯಲಾಟವೆನ್ನುವ ಹೆಸರು ಸಾಮಾನ್ಯವಾಗಿ ಎರಡಕ್ಕೂ ಉಳಿದುಕೊಂಡು ಬಂದಿವೆ. ವಾದ್ಯ ಪರಿಕರಗಳನ್ನುನುಸರಿಸಿ ಇವುಗಳನ್ನು ‘ಡಪ್ಪಿನಾಟ’, ‘ಮದ್ದಳೆಯಾಟ’ ಎಂದೂ ಕರೆಯುತ್ತಾರೆ. ಈ ಸಣ್ಣಾಟದಲ್ಲಿ ಮತ್ತೆ ಸ್ತರಗಳನ್ನೂ ಕಲ್ಪಿಸಲು ರಾಧಾನಾಟ, ರಾಜಾನಾಟ, ಶರಣರಾಟ, ದಾಸರಾಟ ಮುಂತಾಗಿ ಆಟದ ವಸ್ತುವನ್ನಾಧರಿಸಿ ವಿಭಜನೆ ರೂಢಿಗೆ ಬಂತು. ಇಷ್ಟಾಗಿಯೂ ಶ್ರೀ ಕೃಷ್ಣಪಾರಿಜಾತವು ಅದೊಂದು ವಿಶಿಷ್ಟ ಆಟವಾಗಿಯೇ ಹೊರಗೆ ಉಳಿದು ಕೊಂಡಿದೆ.

ಮೂಡಲಪಾಯ ಎಂಬುದು ‘ಆಟ’ದ ಮೂಲ ಹೆಸರು. ಇದು ಪೂರ್ವ ದಿಕ್ಕಿನಿಂದ ಬಂದುದು ಎಂದು ಒಪ್ಪಿಕೊಳ್ಳುವಲ್ಲಿ ಯಾವ ಅಭ್ಯಂತರವಿಲ್ಲ. ಆದರೆ ಡಾ. ಮಲಶೆಟ್ಟಿ ಅವರು ಹೇಳಿದಂತೆ “ಇಂದಿನ ಉತ್ತರ ಕರ್ನಾಟಕದ ಪೂರ್ವಕ್ಕಿದ್ದ ವಿಜಯನಗರ ಕಾಲದ ಕಲಾವಿದರು ಪುರಸ್ಕರಿಸಿ ಘೋಷಿಸಿದ ಸಂಪ್ರದಾಯವೆಂಬುದನ್ನೂ ಸೂಚಿಸುತ್ತದೆ.”

[1] ಎಂಬ ಮಾತು ಅಷ್ಟು ಸಹಜವಾಗಿ ಒಪ್ಪಿಕೊಳ್ಳುವಂಥದೇನೂ ಅಲ್ಲ.

ಅದರಂತೆ ಸಣ್ಣಾಟದ ಹುಟ್ಟನ್ನು ಕುರಿತು ವಿವಿಧ ಪಂಡಿತರ (ಡಾ. ಹೆಂಡಿ, ಡಾ. ಸುಂಕಾಪುರ, ಶ್ರೀ ಸಿಂಪಿ ಲಿಂಗಣ್ಣ) ಅಭಿಪ್ರಾಯಗಳನ್ನು ಪರಿಶೀಲಿಸಿ ತಮ್ಮ ನಿಲುವನ್ನೂ ಪ್ರಸ್ತಾಪಿಸ ಹೊರಟ ಡಾ. ಎಂ. ಎಂ. ಕಲಬುರ್ಗಿ ಅವರು “……. ದೊಡ್ಡಾಟ ಸಣ್ಣಾಟಗಳೆಂಬ ಕವಲುಗಳಿಗೆ ಕನ್ನಡಿಗರ ವೀರ ಜೀವನ, ಭಕ್ತಿ ಜೀವನವಾಗಿ ತಿರುವು ಪಡೆದುದೇ ಕಾರಣವಾಗಿದೆ. ಸಣ್ಣಾಟಗಳೆಲ್ಲ ಸಾಮಾನ್ಯವಾಗಿ ಭಕ್ತರಾದ ಶರಣರ ಸಂತರ ಕಥೆಗಳಾಗಿರುವುದನ್ನೂ ನಾವು ಇಲ್ಲಿ ನೆನೆಯಬೇಕು.”[2] ಎಂದು ಶಿಷ್ಟ ಸಾಹಿತ್ಯದ ಹಿನ್ನೆಲೆಯೆನ್ನಿಟ್ಟುಕೊಂಡು ಚರ್ಚಿಸಿ ನಿರ್ಣಯಿಸಿದ್ದರಲ್ಲಿ ಸ್ವಲ್ಪಮಟ್ಟಿನ ಸತ್ಯಾಂಸ ಇದೆಯಾದರೂ ಗುಡ್ಡಸುತ್ತಿ ಮೈಲಾರಕ್ಕೆ ಬರುವ ಪ್ರಯಾಸವಿದೆ. ಇಲ್ಲಿ ಉಲ್ಲೇಖಿಸಿದ ಪಂಡಿತರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುವುದೂ ಅಷ್ಟು ಸುಲಭವಾದುದಲ್ಲ. ಈ ಸಣ್ಣಾಟ ಹರದೇಶಿ-ನಾಗೇಶಿ ಹಾಡಿನ ಸಂಪ್ರದಾಯದ ಹಿನ್ನೆಲೆಯಲ್ಲಿ ದೃಶ್ಯವಾಗಿ ಪರಿವರ್ತಿತಗೊಂಡುದು ಸ್ಪಷ್ಟವಿದೆ. ಎಂದು ಜಾನಪದ ಸಮಾಲೋಕದಲ್ಲಿ ಪ್ರಸ್ತಾಪಿಸಿರುವೆ. ಬೇಸರ ಬಂದ ಶ್ರವಣ, ದೃಶ್ಯವಾಗಿ ರಾಧಾನಾಟ (ಹೆಣ್ಣು ಹೆಚ್ಚು) ರಾಜಾನಾಟ (ಗಂಡು ಹೆಚ್ಚು)ಗಳಾಗಿ ರೂಪಗೊಂಡವು ಎಂಬುದು ಹೆಚ್ಚು ಸೂಕ್ತವೆಂಬುದು ನಮ್ಮ ಅಭಿಪ್ರಾಯ. ಯುಗಧರ್ಮದ ಭಕ್ತಿ ಶರಣರಾಟವಾದುದನ್ನೂ ಅಲ್ಲಗಳೆಯುವಂತಿಲ್ಲ.

ದೊಡ್ಡಾಟ :

ದೊಡ್ಡಾಟಗಳು ಮುಖ್ಯವಾಗಿ ಪೌರಾಣಿಕ ವಸ್ತು ಗಳನ್ನುಳ್ಳವು. ಅದರಲ್ಲಿಯೂ ರಾಮಾಯಣ. ಮಹಾಭಾರತ ಕಥೆಗೆ ಪ್ರಾಧಾನ್ಯ. ದುಷ್ಟ ದಮನ, ಶಿಷ್ಟಪರಿಪಾಲನ ಈ ಆಟಗಳ ಸಾಮಾನ್ಯ ನೀತಿ. ದೊಡ್ಡಾಟದ ಪಾತ್ರಗಳು ವೈಶಿಷ್ಟ್ಯಪೂರ್ಣವಾದ ವೇಷಭೂಷಣಗಳನ್ನು ಹೊಂದಿರುತ್ತವೆ. ಕಿರೀಟ, ಭುಜಕಿರೀಟ, ಗದೆ, ಖಡ್ಗ ಮೊದಲಾದ ವೈಭವಯುತವಾದ ಕಣ್ಣುಕುಕ್ಕಿಸುವ ಈ ವೇಷಭೂಷಣಗಳು ನೋಡಲು ಆಕರ್ಷಕವಾಗಿರುತ್ತವೆ. ಯುದ್ಧಪ್ರಸಂಗ ಮೊದಲಾದ ವೀರ, ರೌದ್ರ ರಸ ಪ್ರಧಾನವಾದ ದೊಡ್ಡಾಟ ಆರ್ಭಟ, ಆಟೋಪ, ಆಕ್ರೋಶಗಳಿಂದ ಕೂಡಿ ಸಾಮಾನ್ಯರಿಗೆ ರೋಚಕವಾಗಿರುತ್ತವೆ. ದೊಡ್ಡಾಟದ ಮಾತುಗಳು ಮಾತ್ರ ಜಾನಪದವೂ, ಶಿಷ್ಟವೂ ಅಲ್ಲದ ಒಂದು ರೀತಿಯ ಕೃತ್ರಿಮ ಸ್ವರೂಪದ್ದಾಗಿರುತ್ತದೆ. ಪ್ರಾಸಾನುಪ್ರಾಸಗಳಿಂದ ಕೂಡಿದ ಸಂಸ್ಕೃತ, ಹಳಗನ್ನಡದ ಪ್ರಯೋಗಗಳಿಂದ ಭೂಯಿಷ್ಟವಾಗಿರುತ್ತವೆ. ಸಂಭಾಷಣೆಗಳಲ್ಲಿ ಜಾಣ್ಮೆಯಾಗಲೀ, ವೈಚಿತ್ರ್ಯವಾಗಿಲಿ ಇರುವುದೇ ಇಲ್ಲ, ಆದರೂ ಜನಪದ ಬದುಕಿನ ವಸ್ತು, ಉಪಮೆ ವಿಧಾನಗಳನ್ನು ಬಿಟ್ಟು ದೂರ ಹೋಗುವುದಿಲ್ಲ. ಎಲ್ಲ ಪಾತ್ರಗಳಲ್ಲಿ ಪ್ರಾಸಪ್ರೀಯತೆ ಮಾತ್ರ ಎದ್ದು ಕಾಣುತ್ತದೆ. ಈ ದೊಡ್ಡಾಟದ ಹಾಡುಗಳನ್ನು ಮಾತ್ರ ಸೂತ್ರಧಾರನೇ ಹಾಡುತ್ತಾನೆ. ಆಗ ಪಾತ್ರಗಳು ನಿಷ್ಕ್ರಿಯವಾಗಿ ಅಟ್ಟದ ಮೇಲೆ ನಿಲ್ಲುವ ಬದಲು ರಾಗ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುತ್ತವೆ. ನಡುನಡುವೆ ಉದ್ಗಾರ, ಸಂಬೋಧನೆಯ ನುಡಿಗಳನ್ನು ಮಾತ್ರ ಪಾತ್ರಗಳು ಉಚ್ಚರಿಸುತ್ತಿರುತ್ತವೆ.

ದೊಡ್ಡಾಟದ ಎಲ್ಲ ಪಾತ್ರಗಳು ಅಟ್ಟದ ಹಿಂದಿನಿಂದ ರಂಗಕ್ಕೆ ಬಂದರೆ, ರಾಕ್ಷಸ ಪಾತ್ರಗಳು ಅಟ್ಟದ ಎದುರಿನಿಂದ ಪ್ರೇಕ್ಷಕರ ಮಧ್ಯದಿಂದ ರಂಗವನ್ನು ಪ್ರವೇಶಿಸುತ್ತವೆ. ದೊಡ್ಡಾಟಗಳಲ್ಲಿ ಗಂಡು ಪಾತ್ರಗಳೆ ವಿಶೇಷ. ಹೆಣ್ಣು ಪಾತ್ರಗಳ ಸಂಖ್ಯೆ ತೀರ ಕಡಿಮೆ. ಸಾರಥಿ ದೊಡ್ಡಾಟದ ಇನ್ನೊಂದು ಆಕರ್ಷಣೆ. ಗಂಭೀರ ಸನ್ನಿವೇಶಗಳಲ್ಲಿ ಹಾಸ್ಯ ಹುಟ್ಟಿಸಿ ಪ್ರೇಕ್ಷಕರ ಗಮನ ಸೆಳೆಯುವ ಪಾತ್ರವಿದು. ರಂಗಕ್ಕೆ ಬಂದ ಎಲ್ಲ ಪಾತ್ರಗಳ ಪರಿಚಯ ಮಾಡಕೊಡುವ ಈ ಸಾರಥಿ ಪ್ರೇಕ್ಷಕ ಮತ್ತು ಪಾತ್ರಧಾರಿಗಳ ನಡುವಿನ ಒಂದು ಕೊಂಡಿಯಂತಿರುತ್ತಾನೆ. ಕಾಲ್ಪೇಟಿ, ಮದ್ದಳೆ (ತಬಲಾ) ತಾಳಗಳು ಪಕ್ಕವಾದ್ಯಗಳಾಗಿದ್ದರೂ ರಾಕ್ಷಸ ಪಾತ್ರ ಬರುವಾಗ ರಣಹಲಗೆಯನ್ನು ಪ್ರಯೋಗಿಸಲಾಗುತ್ತದೆ.

ಸಣ್ಣಾಟ :

ಸಣ್ಣಾಟ ಹೆಸರಿಗೆ ತಕ್ಕಂತೆ ಎಲ್ಲದರಲ್ಲಿಯೂ ಸಣ್ಣದು. ಪಾತ್ರಗಳ ಸಂಖ್ಯೆ, ಕಥೆಯ ಹರವು, ಸಂಭಾಷಣೆ, ಕುಣಿತ, ವೇಷಭೂಷಣ ಎಲ್ಲದರಲ್ಲಿಯೂ ಇದು ದೊಡ್ಡಾಟದಿಂದ ದೂರ. ಇಲ್ಲಿ ಕಥೆಗಾರನಿರುವವನಾದರೂ (ಹಾಡಕ್ಕಿ) ‘ದೂತಿ’ ಮಾತ್ರ ಸಣ್ಣಾಟದಲ್ಲಿ ವಿಶೇಷ ಪಾತ್ರ; ಹೆಣ್ಣು ಗಂಡು ಎರಡೂ ಆಗಿ ಇದ್ದ ವೇಷದಲ್ಲಿಯೇ ಅಭಿನಯಿಸುವ ವ್ಯಕ್ತಿ. ಇಡೀ ಆಟದಲ್ಲಿ ಎರಡು, ಮೂರು ಪಾತ್ರಗಳು ಮಾತ್ರ ಪ್ರಮುಖವಾಗಿರುತ್ತವೆ. ಸಾದಾ ವೇಷಭೂಷಣ, ಆಡು ಮಾತಿನ ಸಂಭಾಷಣೆ, ವಿಶೇಷ ಆಡಂಬರವಿಲ್ಲದ ಈ ಪಾತ್ರಗಳು ಜನತೆಗೆ ತೀರ ಹತ್ತಿರವಾಗಿ ಕಾಣುತ್ತವೆ. ಇಲ್ಲಿಯ ಹಾಡುಗಳನ್ನು ಆಯಾ ಪಾತ್ರಗಳೇ ಹಾಡುವುದನ್ನು ರೂಢಿಸಿಕೊಂಡಿರುವುದೇ ವಿಶೇಷ. ಹೆಣ್ಣು-ಗಂಡಿನ ಮೇಲ್ಮೆಯನ್ನು ವಾದಕ್ಕಿಟ್ಟುಕೊಂಡು ಸಾಗುವ ಸಣ್ಣಾಟಗಳಲ್ಲಿ ಹೆಣ್ಣು ಪಾತ್ರಕ್ಕೂ ವಿಶೇಷ ಪ್ರಾಧಾನ್ಯತೆ ಇದೆ. ಮಾಯಿ, ಪ್ರಮಿಳೆ, ಸತ್ಯಭಾಮೆ ಮೊದಲಾದ ಪಾತ್ರಗಳು ಆಟಗಳ ಬೆನ್ನೆಲುಬಾಗಿರುವುದನ್ನು ಕಾಣುತ್ತೇವೆ. ಭಕ್ತಿ ಪ್ರಧಾನವಾದ ಶರಣರ ಆಟಗಳು ಪುರುಷ ಪ್ರಕೃತಿಗಿಂತ ದೊಡ್ಡವ ಎನ್ನುವುದನ್ನೇ ಸಾರುತ್ತೇವೆ. ಈ ಸಣ್ಣಾಟಗಳ ಹುಟ್ಟಿಗೆ ಕರ್ನಾಟಕದಲ್ಲಿ ಪ್ರಖ್ಯಾತವಾಗಿ ಬೆಳೆದು ಬಂದ ಹರದೇಶಿ-ನಾಗೇಶಿ ಸಂಪ್ರದಾಯವೇ ಮೂಲವೆಂದು ಹಿಂದೆ ಪ್ರಸ್ತಾಪಿಸಲಾಗಿದೆ. ಶ್ರವ್ಯ ಬೇಸರವಾಗಿ ದೃಶ್ಯಕ್ಕೆ ಪರಿವರ್ತನೆಗೊಂಡುದು ಸ್ವಾಭಾವಿಕ. ನಬಿ ಆಟವೆಂದು ಪ್ರಖ್ಯಾತವಾದ ನಾಗೇಶಿ ಸಂಪ್ರದಾಯದ ಹಾಡುಗಾರ ನಬಿ ರಾಧಾನಾಟಕ್ಕೆ ಒಂದು ಸ್ಥಾನ ಸಿಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಣ್ಣಾಟಗಳಲ್ಲಿ ಸಂಗೀತಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಅದರಲ್ಲಿಯೂ ಸಣ್ಣಾಟಗಳ ರಾಜನೆಂದು ಖ್ಯಾತಿವೆತ್ತ ಪಾರಿಜಾತದ ಹಾಡು ಕೇಳಿದರೆ ಹುಚ್ಚೆದು ಧರೆಗೆ ಬೀಳಬೇಕು, ಜಾನಪದ ಧಾಟಿಗಳನ್ನು ಶಾಸ್ತ್ರದ ಹಿಡಿತಕ್ಕೆ ತಂದುದನ್ನು ಇಲ್ಲಿ ಕಾಣಬಹುದಾಗಿದೆ. ಸಣ್ಣಾಟಗಳ ಕುಣಿತ ನಯ, ನಾಜೂಕಿನಿಂದ ಕೂಡಿದ್ದರೂ ಅದನ್ನು ಶಾಸ್ತ್ರೋಕ್ತವೆಂದು ಹೇಳಲಾಗದು. ಆದರೂ ದೊಡ್ಡಾಟ ಮತ್ತು ಸಣ್ಣಾಟಗಳಲ್ಲಿ ಕುಣಿತಕ್ಕೆ ಸಾಮಾನ್ಯ ವ್ಯತ್ಯಾಸಗಳು ಇದ್ದೇ ಇವೆ. ದೊಡ್ಡಾಟದಲ್ಲಿ ಕುಣಿತ ಕೇವಲ ಕಾಲಿನ ಕೆಲಸವಾಗಿದ್ದರೆ ಸಣ್ಣಾಟಗಳಲ್ಲಿ ಮೈ, ಕೈ ಚಲನವಲನೆಗೆ ತಕ್ಕ ಅವಕಾಶವಿದೆ.

ಕುಣಿತ :

ಬಯಲಾಟಗಳ ಕುಣಿತವೇ ಈ ಪ್ರಬಂಧದ ಉದ್ದೇಶವೆಂಬುದನ್ನು ಮರೆತಿಲ್ಲ. ಬಾಲ್ಯದಿಂದಲೂ ಹಲವಾರು ಆಟಗಳನ್ನು ನೋಡಿ ಅನುಕರಿಸಿ ಆಡಿದ ಅನುಭವವಿದ್ದರೂ ಕುಣಿತದ ಸ್ವರೂಪವನ್ನು ನಿರ್ಣಯಿಸುವ ಹಿಡಿತ ನನಗಂತೂ ಬಂದಿಲ್ಲ. ಈ ಕುಣಿತಕ್ಕೆ ಈ ಹೆಸರು, ಇದಕ್ಕೆ ಈ ಗತಿ ಎಂದು ಹೇಳುವುದು ಕಷ್ಟಸಾಧ್ಯವೇ ಸರಿ. ಆದರೂ ಇಂದು ನಾನು ಮಾಡಿದ ಕ್ಷೇತ್ರಕಾರ್ಯದಲ್ಲಿ ಗುಲ್ಬರ್ಗಾ ಜಿಲ್ಲೆಯ ಕೆಲವು ಬಯಲಾಟಕಾರರನ್ನು ಸಂದರ್ಶಿಸಿ ಹಲವಾರು ಕುಣಿತಗಳನ್ನು ನೋಡಿದೆನಾದರೂ ಆ ಕುಣಿತದ ಆಂತರ್ಯವನ್ನು ಅರಿಯುವದು ಅಷ್ಟು ಸುಲಭ ಸಾಧ್ಯವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಈ ಕುಣಿತಗಳು ಎಲ್ಲ ಪ್ರದೇಶಕ್ಕೆ ಅನ್ವಯವಾಗುತ್ತಿವೆಯಾದರೂ ಹೆಸರುಗಳಲ್ಲಿ ಪ್ರಾದೇಶಿಕ ಭಿನ್ನತೆ ಇದ್ದೇ ಇದೆ.

ಮಾನವನ ಭಾವಪ್ರಕಟನೆಯ ಮೊದಲ ಹೆಜ್ಜೆಯೇ ಕುಣಿತ. ಹುಟ್ಟಿದ ಕೂಸು ಕೈ ಕಾಲು ಬಡಿದು ಆಡುವುದನ್ನು ನೋಡಿದಾಗ, ಹಾಲುಂಡ ಕರು ಬಾಲವೆತ್ತಿ ಓಡಾಡುವಾಗ ಅವುಗಳ ಆನಂದ ಅಭಿವ್ಯಕ್ತವಾಗುತ್ತದೆ. ಅದರಂತೆ ಆಡುವ ಮಕ್ಕಳು ಕಾಲುಹೊಸೆದು ಅತ್ತು ತಮ್ಮ ಹಟವನ್ನು ಪ್ರದರ್ಶಿಸುವುದನ್ನು, ನೆಲದ ನೊದೆದಂತೆ ದೊಪ್ಪ-ದೊಪ್ಪನೆ ಹೆಜ್ಜೆಹಾಕಿ ಸಿಟ್ಟನ್ನು ಪ್ರದರ್ಶಿಸಿಸುವುದನ್ನು ನೋಡುತ್ತೇವೆ. ಸಂಕಟದಿಂದ ಒದ್ದಾಡಿದ್ದನ್ನು, ಆನಂದದಿಂದ ಕುಣಿದಾಡಿದ್ದನ್ನು ಕೇಳುತ್ತೇವೆ, ‘ಮನಸ್ಸಿಗೆ ಬಂದಾಂಗ ಕುಣೀತಾನ’, ‘ಹೆಣ್ತಿ ಹೇಳಿದಂಗ ಕುಣೀತಾನ’ ‘ಕತ್ತಿಕುಣಿದಂಗ ಕುಣೀತಾನ’ ಎಂಬ ಮಾತುಗಳನ್ನು ಇಂದೂ ರೂಢಿಯಲ್ಲಿ ಕೇಳುತ್ತೇವೆ. ಅದರ ಹಿಂದಿರುವ ವ್ಯಕ್ತಿಸ್ವಭಾವವನ್ನು ಗುರುತಿಸುತ್ತೇವೆ.

ಇದನ್ನೆಲ್ಲ ಗಮನಿಸಿದರೆ ಕಾಲು ಭಾವಾಭಿವ್ಯಕ್ತಿಯ ಪ್ರಮುಖಶಕ್ತಿಯಾಗಿ ಮಾನವನ ಮೂಲದಿಂದ ಬಂದುದನ್ನು ತೆಗೆದುಹಾಕುವಂತಿಲ್ಲ. ‘ಮನುಷ್ಯ ಸಾಮಾಜಿಕ ಜೀವಿಯಾಗಿ ಬೆಳೆದಂದಿನಿಂದಲೂ ಅವನ ಭಾವಪ್ರಕಟನೆಯ ಸಾಧನೆಗಳಲ್ಲಿ ನೃತ್ಯ ತೀರ ಮೊದಲಿನಿದ್ದಾರಬೇಕು. ಇದು ಜಗತ್ತಿನ ಉದ್ದಕ್ಕೂ ಕಂಡು ಬರುವ ವಿದ್ಯಮಾನ’ [ಯಕ್ಷಗಾನ. ಡಾ|| ಶಿವರಾಮ ಕಾರಂತ, ಪುಟ ೮೧] ಉತ್ಸಾಹ, ಆನಂದ, ಹಿಗ್ಗು, ಖೇದಗಳೆಲ್ಲ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು. “Dance is the earliest outlet for emotion and the cradle of all arts” ಎನ್ನುವ ‘Shekhara’ ಅವರ ಮಾತು ಗಮನಿಸಬೇಕಾದ್ದು, ಕುಣಿತ ಹಬ್ಬಹುಣ್ಣಿವೆ ಆರಾಧನೆಗಳ ಪ್ರಮುಖ ಅಂಗವಾಗಿ ಆದಿಕಾಲದಿಂದಲೇ ಆರಂಭವಾಗಿರುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಅದರ ಜೊತೆ ಜೊತೆಗೇ ಸಂಗೀತವು ಹುಟ್ಟಿ ಬಂದುದನ್ನು ಅಲ್ಲಗಳೆಯಲಾಗದು. ಅಂತೆಯೇ ದೊಡ್ಡಾಟಗಳಲ್ಲಿ ಒಂದನ್ನೊಂದು ಆಧರಿಸಿಕೊಂಡು ಬಂದದ್ದನ್ನು ಕಾಣುತ್ತೇವೆ.

ಬಯಲಾಟಗಳಲ್ಲಿ ಕುಣಿತಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ‘ಯಾವ ಪಾತ್ರ ಮಾಡುತ್ತೀ’ ಎಂದು ಕೇಳುವ ಬದಲು ‘ಯಾವ ಪಾತ್ರ ಕುಣಿಯುತ್ತೀ’ ಎಂದೇ ಜನರು ಕೇಳುತ್ತಾರೆ. ‘ಪಾತ್ರವಾಡು’ ಅಂದರೆ ‘ಕುಣಿ’ ಎಂದೇ ಅರ್ಥವಿದೆ. ಬಯಲಾಟಗಳಲ್ಲಿ ಮಾತಿನ ಜೊತೆ ಕುಣಿತವಿಲ್ಲ, ಹಾಡಿನ ಜೊತೆ ಮಾತ್ರ ಕುಣಿತ ಅವಶ್ಯ, ಪಾತ್ರಗಳು ರಂಗವನ್ನು ಕುಣಿಯುತ್ತಲೇ ಪ್ರವೇಶಿಸುತ್ತವೆ ಮತ್ತು ನಿರ್ಗಮಿಸುತ್ತವೆ. ಬಯಲಾಟಗಳ ಇನ್ನೊಂದು ವಿಶೇಷವೆಂದರೆ ಎಲ್ಲ ಪಾತ್ರಗಳು ಕುಣಿಯುವುದಿಲ್ಲ. ಉದಾ : ರಾಮ, ಕೃಷ್ಣ, ಧರ್ಮ, ದ್ರೌಪದಿ, ತಾರಾಮತಿ, ರಾಣಿಯವರು ಮೊದಲಾದ ಸಾತ್ವಿಕ ಪಾತ್ರಗಳು ಕುಣಿಯುವದಿಲ್ಲ. ಭೀಮಾರ್ಜುನ, ದುರ್ಯೋಧನ, ದುಶ್ಯಾಸನ, ಲವಕುಶರಂಥ ಮಧ್ಯಮ ವರ್ಗದ ಪಾತ್ರಗಳು ಕುಣಿಯುತ್ತವೆ. ಅದರಂತೆ ತಾಮಸ ವರ್ಗದ ರಾಕ್ಷಸ ಪಾತ್ರಗಳು ಅರ್ಥಕ್ಕಿಂತ ಆಟೋಪ, ಆಕ್ರೋಶಗಳಿಂದ ಕೂಡಿ ಕುಣಿಯುತ್ತವೆ. ಇದಕ್ಕೆ ರಕ್ಕಸ ಕುಣಿತ ಎನ್ನುವುದೇ ರೂಢಿ. ಈ ಪಾತ್ರಗಳು ರಂಗವನ್ನು ಪ್ರವೇಶಿಸುವಾಗ ರಣ ಹಲಿಗೆಯ ಶಬ್ದ, ಹಿಲಾಲದ ಬೆಳಕು, ಚೀರಾಟದ ಕೋಲಾಹಲ, ಜನತೆಗೆ ಭಯವನ್ನು ಹುಟ್ಟಿಸುವಂತಿರುತ್ತವೆ.

ಬಯಲಾಟದ ಕುಣಿತಗಳು ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಒಂದೇ ಬಗೆಯಾಗಿ ಕಾಣ ದೊರೆಯುತ್ತದೆ. ಇದಕ್ಕೆ ಕಾರಣ ಒಬ್ಬರ ಅನುಕರಣೆಯಿಂದ ಇನ್ನೊಬ್ಬರು ಕುಣಿತವನ್ನು ಕಲಿತರಲ್ಲದೆ ಒಂದೇ ಶಾಸ್ತ್ರೀಯ ಹೆಸರಿನ ಹಿನ್ನೆಲೆಯಲ್ಲಿ ಅಲ್ಲ. ಬಹಳಷ್ಟು ಕುಣಿತದ ಹೆಜ್ಜೆಗಳು ಬಯಲಾಟದ ಅಟ್ಟ ಏರುವ ಮೊದಲು ಆರಾಧನೆಯ ಸಾಮೂಹಿಕ ಕುಣಿತಗಳಲ್ಲಿ ಸವೆದು ಸಜ್ಜಾಗಿದ್ದವು, ಉದಾಹರಣೆಗೆ ‘ಹೆಜ್ಜೆ ಕುಣಿತ’, ‘ಬಹುರೂಪಿಗಳ’ ಕುಣಿತ, ‘ಸುಗ್ಗಿ ಕುಣಿತ’, ‘ಹುಲಿ ಕುಣಿತ’ ಮೊದಲಾದ ಆರಾಧನೆಯ ಕುಣಿತಗಳನ್ನು ಹೆಸರಿಸಬಹುದು. ಆದರೆ ಈ ಮಾತನ್ನು ಬಯಲಾಟದ ಪರಿಣತರು ಒಪ್ಪುವುದಿಲ್ಲ. ಇದಕ್ಕೆ ಕಾರಣ ಅವು ನೇರವಾಗಿ ಬಂದು ಅಟ್ಟವೇರಲಿಲ್ಲ. ಆದರೆ ಅಲ್ಲಿಯ ಕುಣಿತದ ಹೆಜ್ಜೆಯ ಗತಿ, ಗತ್ತಗಳು ಅವರಿಗರಿಯದೆಯೇ ಬಯಲಾಟಗಳಲ್ಲಿ ಬಂದು ಸೇರಿಕೊಂಡಿರುವುದನ್ನು ಗುರುತಿಸಬಹುದಾಗಿದೆ.

ದೊಡ್ಡಾಟದ ಪಾತ್ರಗಳು

‘ಕಿಡ ಕಿಡತಾ ಝಣಧಿಗಿತೋಂತೈ | ಕಿಡ ಕಿಡ ತಾಝಣ’

ಎಂಬ ಗತ್ತಿನೊಂದಿಗೆ ಕುಣಿಯುತ್ತಾ ಅಟ್ಟವನ್ನು ಪ್ರವೇಶಿಸುತ್ತವೆ. ಇಲ್ಲಿ ಪಕ್ಕವಾದ್ಯಗಳಾದ ತಬಲಾ ತಾಳದಗತ್ತು ಪ್ರಮುಖವಾಗಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಗಂಡು ಪಾತ್ರಗಳಿಗೆ ಅನ್ವಯಿಸುತ್ತದೆ. ಆದರೆ ಹೆಣ್ಣಿನ ಕುಣಿತದ ಸ್ವರೂಪವೇ ಬೇರೆಯಾಗಿದ್ದು ಎರಡೂ ತೆರನಾದ ಕುಣಿತಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಗಂಡಿನ ಪಾತ್ರದಲ್ಲಿ ಗಡಸು, ಒರಟುತನ, ಶಕ್ತಿ ಪ್ರದರ್ಶನ ಎದ್ದುಕಾಣುತ್ತಿದ್ದರೆ ಹೆಣ್ಣು ಪಾತ್ರಗಳಲ್ಲಿ ಸೌಮ್ಯವಾದ ನಯ, ನಾಜೂಕು ಪ್ರಕಟಗೊಳ್ಳುತ್ತವೆ, ಹೆಣ್ಣು ಪಾತ್ರದ ಕುಣಿತವನ್ನು

‘ಸಾsನೀ ನಿ ದ ಪ ಮ ಗ ಪ ಮ ಗ ರಿ ಸಾ’

ಈ ಸೂರಿನ ಲಯಗಳಲ್ಲಿ ಗುರುತಿಸಲಾಗುತ್ತಿದೆ, ಇಲ್ಲಿ ತಬಲಾಗಿಂತ ಪೇಟಿಯ ಸೂರು ಹೆಚ್ಚು ಪ್ರಮುಖ. ಡಾ|| ಮಲಶೆಟ್ಟಿಯವರು ಹೆಣ್ಣಿನ ಕುಣಿತವನ್ನು –

ಕಡತಕ ಧಾತೈ ಧಾತೈ-ಕಿಡತಕಧಾತಧಿನಂ
ತಧಿಂ ಗಿಡತಕ-ತಧಿಂ ಗಿಡತಕ-ತಧಿಂಗಿಡತಕ
ತಾಥೈ ತಟ ಕಡತಕಧಾ[3]

ಎಂಬ ಗತ್ತಿನಲ್ಲಿ ಗುರುತಿಸಿದ್ದನ್ನು ಕಾಣಬಹುದಾಗಿದೆ. ಇಲ್ಲಿ ಎಲ್ಲ ಕಡೆಗೆ ಪ್ರಾದೇಶಿಕ ಭಿನ್ನತೆ ಇದ್ದೇ ಇದೆ.

ಹೆಜ್ಜೆಲೆಕ್ಕ : ಬಯಲಾಟದ ಕುಣಿತಗಳನ್ನು ಸಾಮಾನ್ಯವಾಗಿ ಹೆಜ್ಜೆಯ ಲೆಕ್ಕದಿಂದ ಗುರುತಿಸಲಾಗುತ್ತದೆ. ಎರಡ್ಹೆಜ್ಜೆಯಿಂದ ಹನ್ನೆರಡು ಹೆಜ್ಜೆಯವರೆಗಿನ ವಿವಿಧ ಸಂಯೋಜನೆಗಳ ಕುಣಿತಗಳನ್ನು ಹೇಳುತ್ತಾರೆ. ಇದನ್ನು ಗಮನಿಸಿದರೆ ಈ ಶುದ್ಧ ಜಾನಪದ ಕುಣಿತಗಳನ್ನು ಒಂದು ವ್ಯವಸ್ಥೆಗೆ ತರುವ ಪ್ರಯತ್ನ ನಡೆದಿತ್ತೆಂಬುದು ಸ್ಪಷ್ಟ. ಆದರೆ ಸಿನೇಮಾದವರ ಕೈಯ್ಯಲ್ಲಿ ಕುಣಿತದ ಶಾಸ್ತ್ರೀಯ ಸ್ವರೂಪವನ್ನು ಕಾಯ್ದುಕೊಂಡು ಬರಲು ಹೇಗೆ ಇಂದು ಸಾಧ್ಯವಾಗಿಲ್ಲವೋ ಅಂಥದೇ ಒಂದು ಪರಿಸ್ಥಿತಿ ಬಯಲಾಟಗಳ ಕುಣಿತದಲ್ಲಿ ಅಂದು ವ್ಯವಸ್ಥೆಯನ್ನು ಕಾಯ್ದುಕೊಂಡು ಬರುವಲ್ಲಿ ನಿರ್ಮಾಣವಾಗಿರುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ ಒಂದು ಪ್ರದೇಶದ ಬಯಲಾಟ ಇನ್ನೊಂದು ಪ್ರದೇಶದ ತಂಡದಿಂದ ಸ್ಥೂಲವಾಗಿ ಅನುಕರಿಸಲ್ಪಟ್ಟ, ಆಂತರಿಕ ಸೂಕ್ಷಗಳು ಮಾತ್ರ ಆಯಾ ಪ್ರದೇಶದವರವೇ ಆಗಿ ಬೆಳೆದ ಕಾರಣ, ಸಂಪರ್ಕ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಸಂಭಾಷಣೆಯ ಭಾಷೆ, ಹಾಡಿನ ಧಾಟಿ, ಕುಣಿತದ ಗತ್ತುಗಳಲ್ಲಿ ಪ್ರಾದೇಶಿಕ ಭಿನ್ನತೆ ಕಂಡು ಬಂದು ಶಾಸ್ತ್ರೀಯ ವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗುವುದು ಸಾಧ್ಯವಾಗದೇ ಹೋಗಿರುವ ಸಾಧ್ಯತೆ ಇದೆ. ಅದಕ್ಕಾಗಿಯೇ ಬಯಲಾಟಗಳ ಕುಣಿತಗಳಲ್ಲಿ ಹೆಜ್ಜೆಯ ಎಣಿಕೆ ಒಂದು ಸಾಮಾನ್ಯ ಸೂತ್ರವಾಗಿ ಉಳಿದರೂ ಕುಣಿತದ ಹೆಸರುಗಳು ಬೇರ-ಬೇರೆಯಾದವು. ಇಂದು ಸಹಿತ ಬಯಲಾಟದ ಪರಿಣತರನ್ನು ಸಂದರ್ಶಿಸಿದಾಗ ಅವರು ಕುಣಿದು ತೋರಿಸಬಲ್ಲರೇ ಹೊರತು ಆ ಕುಣಿತವನ್ನು ಒಂದು ಹೆಸರಿನ ಹಿನ್ನೆಲೆಯಲ್ಲಿ ವಿವರಿಸಲಾರರು. ಆದರೂ ತಮ್ಮ ಪ್ರಾದೇಶಿಕ ಸೌಲಭ್ಯಕ್ಕಾಗಿ ಕೆಲವು ಹೆಸರುಗಳನ್ನು ಅವರು ರೂಢಿಸಿಕೊಂಡು ಬಂದಿದ್ದಾರೆ.

ಗಂಡಸರ ಕುಣಿತಗಳು :

ಗಂಡಸರ ಕುಣಿತದಲ್ಲಿ ವೈವಿಧ್ಯತೆ ಕಡಿಮೆ. ಅದರಲ್ಲಿಯೂ ದೊಡ್ಡಾಟದಲ್ಲಿ ವೀರ, ಕೌದ್ರ ರಸಗಳಿಗೆ ಮಾತ್ರ ಸೀಮಿತವಾದ ಕುಣಿತಗಳಿವೆ. ಇವುಗಳನ್ನು ವಿಶೇಷವಾಗಿ ಕಾಲಿನ ಒಂದು ಭಾಗದ ಕ್ರಿಯೆಯಿಂದ ಹೆಸರಿಸಿದ್ದನ್ನು ಕಾಣಬಹುದಾಗಿದೆ. ಇಲ್ಲಿ ವೈವಿಧ್ಯತೆ ಇಲ್ಲದಿರಲು ಇನ್ನೂ ಒಂದು ಕಾರಣವಿದೆ. ದೊಡ್ಡಾಟದ ಪಾತ್ರದ ಭರ್ಜರಿ ವೇಷ-ಭೂಷಣಗಳಿಂದಾಗಿ ಶರೀರದ ಯಾವ ಭಾಗವೂ ಭಾವಾಭಿವ್ಯಕ್ತಿಯನ್ನು ಅಭಿವ್ಯಕ್ತ ಪಡಿಸುವ ಸ್ಥಿತಿಯಲ್ಲಿರುವುದಿಲ್ಲ, ಅದಕ್ಕಾಗಿ ಕೇವಲ ಕಾಲುಮಾತ್ರ ಆ ಕಾರ್ಯ ಮಾಡಬೇಕಾಗುತ್ತದೆ. ಗಂಡಸರ ಕುಣಿತಗಳನ್ನು ಜಾನಪದದಲ್ಲಿ ಹೀಗೆ ಗುರುತಿಸಲಾಗುತ್ತಿದೆ. ಕಾಲ ಕತ್ತರಿ ಕುಣಿತ, ಅಡ್ಡ ಹೆಜ್ಜೆಯ ಕುಣಿತ, ಹಿಮ್ಮಡ ಕುಣಿತ, ತುದಿ ಬೆರಳ ಕುಣಿತ, ಕಿಸಗಾಲ ಕುಣಿತ ಮುಂತಾದವುಗಳು.

ಕಾಲ ಕತ್ತರಿ ಕುಣಿತ : ಒಂದು ಕಾಲನ್ನು ಇನ್ನೊಂದು ಕಾಲಿನ ಮುಂದೆ ಕತ್ತರಿಯಾಗಿ ಹಾಕಿ ಒಂದರ ತರುವಾಯ ಒಂದನ್ನು ಗತ್ತಿಗೆ ತಕ್ಕಂತೆ ತ್ವರಿತಗತಿಯಿಂದ ಕ್ರಿಯೆಗಳಿಸುವುದು. ವೀರರಸ ಪ್ರದರ್ಶನದಲ್ಲಿ ಆವೇಶದಿಂದ ಕತ್ತರಿ ಹೆಜ್ಜೆಗಳನ್ನು ಅಪ್ಪಳಿಸಲಾಗುತ್ತದೆ. ಇದರಲ್ಲಿ ಹತ್ತು ಹೆಜ್ಜೆಗಳಿರುತ್ತವೆ. ಕೊನೆಯ ಹೆಜ್ಜೆಯನ್ನು ‘ಭಲೆಲೆ ಶೌವ್ವಾ’ ಎಂದು ಅಪ್ಪಳಿಸಿ ಮುಗಿಸುತ್ತಾರೆ. ತ್ವರಿತಗತಿಯಿಂದ ತುದಿಗಾಲಲ್ಲಿ ಕುಣಿದರೆ ಈ ಕುಣಿತಕ್ಕೆ ಸದ್ದೂ ಬರುವುದಿಲ್ಲ.

ಅಡ್ಡ ಹೆಜ್ಜೆಯ ಕುಣಿತ : ಇದರಲ್ಲಿ ಆರು ಹೆಜ್ಜೆಯ ಲೆಕ್ಕವಿದೆ. ಒಂದು ಕಾಲನ್ನು ಭುಜಗಳ ಸಮಾಂತರದಲ್ಲಿ ಅಗಲು ಮಾಡಿ ಅಡ್ಡ ಹೆಜ್ಜೆಯನ್ನಿಟ್ಟು ಮೂರುಸಲ ಬಡಿಯುತ್ತಾರೆ. ಮತ್ತೆ ಇನ್ನೊಂದು ಕಾಲು ಅದರಂತೆ.

ಹಿಮ್ಮಡಕುಣಿತ : ಕಾಲುಗಳನ್ನು ಅಗಲುಮಾಡಿ ತುದಿಗಾಲನ್ನೂರಿ ತಾಳಕ್ಕೆ ತಕ್ಕಂತೆ ಹಿಮ್ಮಡ ಸಪ್ಪಳವಾಗುವಂತೆ ನೆಲಕ್ಕೆ ಬಡಿಯುವದು. ಎರಡೂ ಕೈಯಿಂದ ಶಸ್ತ್ರವನ್ನು ತೊಡೆಗೆ ಅಡ್ಡವಾಗಿ ಹಿಡಿದಿರುತ್ತಾರೆ. ಇದರಲ್ಲಿ ನಾಲ್ಕು ಅಧಿಕ, ನಾಲ್ಕು ಎಂಟು ಹೆಜ್ಜೆಗಳಿರುತ್ತವೆ. ಈ ರೀತಿಯ ಕುಣಿತ ಹೆಣ್ಣು ಪಾತ್ರಗಳಲ್ಲಿಯೂ ಇವೆ. ಆದರೆ ಅವರ ಒಂದು ಕೈಯಲ್ಲಿ ಕರವಸ್ತ್ರ ಇದ್ದರೆ, ಇನ್ನೊಂದು ಕೈ ಟೊಂಕದ ಮೇಲೆ ಇರುತ್ತದೆ. ಇದಕ್ಕೆ ಅಂತರ್ಗುಣಿತವೂ ಎನ್ನುತ್ತಾರೆ.

ಕುತ್ತಕುಣಿತ : ಆವೇಶದಲ್ಲಿ ತಟ್ಟನೇ ತುದಿಗಾಲೂರಿ ಕುಳಿತು ಏಳುವಾಗ ಒಂದು ಕಾಲನ್ನು ಮುಂದೆ ಹೊಡೆದು ಏಳುತ್ತಾರೆ. ಅದರಂತೆ ಇನ್ನೊಂದು ಕಾಲನ್ನು ಇದರಲ್ಲಿ ನಾಲ್ಕು ಹೆಜ್ಜೆಗಳಿರುತ್ತವೆ. ಇದು ಬಹಳ ಕಷ್ಟದ ಕುಣಿತ. ಯುದ್ಧ ಆಡುವಾಗ ಈ ರೀತಿಯ ಕುಣಿತ ಕುಣಿಯುತ್ತಾರೆ. ಇದೇ ರೀತಿಯಾಗಿ ಎರಡೂ ಕಾಲಿನ ಮೇಲೆ ಒಮ್ಮೆಲೇ ಏಳುವ ಪ್ರಯಾಸದ ಕುಣಿತವನ್ನು ಶಕ್ತಿಯಿಂದ ಕೇವಲ ಕೆಲವು ಜನರು ಮಾತ್ರ ಮಾಡುತ್ತಾರೆ.

ಗುಂಡಕುಣಿತ : ಯುದ್ಧ ಆಡುವಾಗ ಹಿಮ್ಮಡವನ್ನು ಒಂದಾದ ತರುವಾಯ ಒಂದರಂತೆ ನೆಲಕ್ಕೆ ಒದೆಯುತ್ತ ಮುಖವನ್ನು ಪ್ರೇಕ್ಷಕರ ಕಡೆಗೆ ಇಟ್ಟು ಒಂದು ಚಿಕ್ಕ ವರ್ತುಲ ಮಾಡಿ ಕುಣಿಯುತ್ತಾರೆ. ಖಡ್ಗವನ್ನು ತೊಡೆಗೆ ಅಡ್ಡವಾಗಿ ಹಿಡಿದಿರುತ್ತಾರೆ. ಎದೆ ಸೆಟಿಸಿ ಅಭಿಮಾನ ವ್ಯಕ್ತಪಡಿಸುತ್ತಾರೆ.

ಇವಲ್ಲದೆ ಇನ್ನೂ ಕೆಲವು ಕುಣಿತದ ಹೆಸರುಗಳು ಉಪಲಬ್ದವಿದೆ.

ಹೆಣ್ಣಿನ ಕುಣಿತಗಳು :

ಗಂಡಿನ ಕುಣಿತದ ಹೆಸರುಗಳಲ್ಲಿ ಕಾಲಿನ ಅಂಗಗಳು ಪ್ರಾಧಾನ್ಯತೆ ಪಡೆದಿದ್ದರೆ, ಹೆಣ್ಣಿನ ಕುಣಿತದ ಹೆಸರುಗಳಲ್ಲಿ ಕೈ ಭಾಗಗಳ ಹೆಸರುಗಳು ಪ್ರಾಧಾನ್ಯತೆ ಪಡೆದಿವೆ. ಹೆಣ್ಣುಪಾತ್ರಗಳು ಸಾಮಾನ್ಯವಾಗಿ ಕೈಯಲ್ಲೊಂದು ಚಿಕ್ಕ ಕರವಸ್ತ್ರ ಹಿಡಿದುಕೊಂಡು ಬರುತ್ತವೆ. ಕುಣಿಯಲಾರದ ಪಾತ್ರಗಳಲ್ಲಿ ಅದು ಇರುವುದಿಲ್ಲ. ಕೈ, ಮೈಗೆ ವಿಶೇಷ ಭಾರವಿರದ ಹೆಣ್ಣು ಪಾತ್ರಗಳು ಭಾವಾಭಿವ್ಯಕ್ತಿಗೆ ಇಡೀ ಶರೀರವನ್ನು ಬಳಸಲು ಸಾಧ್ಯವಿದೆ. ಆದರೂ ಬಯಲಾಟಗಳಲ್ಲಿ ಮುಖಚರ್ಯಕ್ಕೆ ವಿಶೇಷ ಗಮನವಿಲ್ಲ. ಹೆಣ್ಣು ಪಾತ್ರಗಳ ಕುಣಿತದಲ್ಲಿ ಹೆಜ್ಜೆ ವೈವಿಧ್ಯತೆ ಕಡಿಮೆಯಾದರೂ ಸಂದರ್ಭಕ್ಕನುಗುಣವಾಗಿ ಕೈಗಳಿಂದ ಗತ್ತಿಗೆ ತಕ್ಕಂತೆ ಹಾವಗಳನ್ನು ಅಭಿವ್ಯಕ್ತಪಡಿಸಬಲ್ಲವು. ಹೆಣ್ಣು-ಗಂಡು ಕೂಡಿ ಕುಣಿಯುವದನ್ನು ಬಯಲಾಟಗಳಲ್ಲಿ ಕಾಣಲಾಗುವುದಿಲ್ಲ. ಆದರೆ ಸಂಗ್ಯಾ,-ಬಾಳ್ಯಾನಂಥ ಸಾಮಾಜಿಕ ಆಟಗಳಲ್ಲಿ ಈ ಪದ್ಧತಿ ಕಾಣಿಸಿಕೊಂಡು ನಾಟಕ, ಸಿನೇಮಾದಲ್ಲಿ ಅದು ಅಶ್ಲೀಲದ ಅತಿರೇಕಕ್ಕೇರಿದ್ದನ್ನು ಕಾಣುತ್ತೇವೆ.

ಮೋಹಿನಿಕುಣಿತ : ಯಾರ ತಲೆಯ ಮೇಲೆ ತನ್ನ ಕೈಯನ್ನಿಡುವನೋ ಅವರು ಭಸ್ಮವಾಗುವಂತೆ ಶಿವನಿಂದ ವರ ಪಡೆದ ಭಸ್ಮಾಸುರ ಶಿವನ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಸುಡುವ ಪ್ರಯತ್ನಮಾಡುತ್ತಾನೆ. ಆಗ ಓಡಿ ಪಾರಾದ ಶಿವ ಅವನನ್ನು ಸೋಲಿಸಲು ಮೋಹಿನಿಯೊಬ್ಬಳನ್ನು ಕಳಿಸುತ್ತಾನೆ. ಆ ಮೋಹಿನಿ ಭಸ್ಮಾಸುರನನ್ನು ವಶಪಡಿಸಿಕೊಳ್ಳಲು ಮೋಹಜಾಲವನ್ನು ಬೀಸಿ ಅವನನ್ನು ಕುಣಿತಕ್ಕೆ ಅಣಿಮಾಡುವಳು. ಆಗ ಮೋಹಿನಿ ಭಸ್ಮಾಸುರನಿಗೆ ನೃತ್ಯವನ್ನು ಕಲಿಸುತ್ತಾ, ಕಲಿಸುತ್ತಾ ಮೈಮರೆಸಿ ಅವನ ಹಸ್ತಗಳು ಅವನ ತಲೆಯ ಮೇಲೆ ಹೋಗುವಂತೆ ಮಾಡಿ ಅದರಿಂದ ಅವನಿಗೇ ಸಾವನ್ನು ತರಿಸುತ್ತಾಳೆ. ಆ ಮೋಹಿನಿ ನೃತ್ಯವನ್ನು ಬೇರೆ ಆಟಗಳಲ್ಲಿ ಬೇರೆ-ಬೇರೆ ಸನ್ನಿವೇಶ ಬೇರೆ-ಬೇರೆ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಹಸ್ತಗಳನ್ನು ಆಕಾಶದ ಕಡೆಗೆಯೂ ಮಾಡಿ ಕುಣಿಯಲಾಗುತ್ತದೆ.

ಹೂವುಕೊಯುವ ಕುಣಿತ : ಆರಾಧನೆ ಕುಣಿತಗಳಿಂದ ಅಟ್ಟಕ್ಕೆ ಬಂದ ಈ ಕುಣಿತ ಪೂಜೆಗೆ ಹೂವು ಹರಿಯುವುದನ್ನೂ, ಅದನ್ನು ಉಡಿಗೆ ತುಂಬಿಕೊಳ್ಳುವುದನ್ನೂ ತೋರಿಸುತ್ತದೆ. ಎಡಕ್ಕೊಮ್ಮೆ ಬಲಕ್ಕೊಮ್ಮೆ ಒಂದು ಹೆಜ್ಜೆ ಜಿಗಿದು ಹೂ ಹರಿಯುವದನ್ನೂ ಇಲ್ಲಿ ಕಾಣುತ್ತೇವೆ.

ಕುಂಟಕುಣಿತ : ಬಲಗಾಲನ್ನು ಹಿಂದೆ ಚಾಚಿ ತುದಿಬೆರಳನ್ನು ಬಡಿಯುತ್ತಾ ಅಟ್ಟದ ಆ, ಈ ಕಡೆಗೆ ತಿರುಗುವ ಈ ಕುಣಿತ ಹೆಣ್ಣುಪಾತ್ರಗಳ ಕುಣಿತದ ಸಾಮಾನ್ಯ ಲಕ್ಷಣ. ಈ ರೀತಿ ಕುಣಿಯುವಾಗ ಕೈಗಳ ಬೇರೆ-ಬೇರೆ ವಿನ್ಯಾಸಗಳನ್ನು ಅವಲಂಬಿಸಿ ಹಲವಾರು ಕುಣಿತಗಳನ್ನು ಹೆಸರಿಸುತ್ತಾರೆ. ರಾಜಸಭೆ, ದರ್ಬಾರ ಮೊದಲಾದವುಗಳಲ್ಲಿ ಕುಣಿಯುವ ಹೆಣ್ಣುಪಾತ್ರಗಳ ಈ ‘ಚಾಲನ್ನು’ ಅವಲಂಬಿಸಿದರೂ ಬೇರೆ ಬೇರೆ ಗತ್ತಿಗೆ ತಕ್ಕಂತೆ ಕೈಗಳನ್ನು ಬಳಸಿಕೊಳ್ಳುತ್ತಾರೆ. ಉದಾ-ಕೊಂಡಿ ಕುಣಿತ. ಇದರಲ್ಲಿ ಎರಡೂ ಕೈಗಳನ್ನು ಮುಂದೆ ಚಾಚಿ ತೋರುಬೆರಳುಗಳನ್ನು ಕೊಂಡಿಯಂತೆ ಕೊಂಡಿಸಿ ಕುಣಿಯುತ್ತಾರೆ. ಅದರಂತೆ ಎರಡೂ ಹಸ್ತಗಳನ್ನು ಒಂದಕ್ಕೊಂದರಂತೆ ವರ್ತುಲಾಕಾರದಲ್ಲಿ ತಿಕ್ಕುವುದು. ಇದು ಸಿಟ್ಟು, ಮತ್ಸರಗಳನ್ನು ಅಭಿವ್ಯಕ್ತಪಡಿಸಿ ಹೀನಗುಣವನ್ನು ನಿವಾರಿಸುವ ಸಂಕೇತವಾಗಿರುತ್ತದೆ. ದೇವರಿಗೆ, ರಾಜರಿಗೆ ಗೌರವ ಸಲ್ಲಿಸುವಾಗ ಎರಡೂ ಹಸ್ತಗಳನ್ನು ಎದೆಯಲ್ಲಿ ಜೋಡಿಸಿ ಆ ಭುಜದಿಂದ ಈ ಭುಜಕ್ಕೆ ಅಲುಗಾಡಿಸುತ್ತಾರೆ. ಇದು ಗೌರವ ಸೂಚನೆಯನ್ನು ಅಭಿವ್ಯಕ್ತಪಡಿಸುತ್ತದೆ. ಒಂದು ಕೈಯನ್ನು ಟೊಂಕದ ಮೇಲಿಟ್ಟು ಇನ್ನೊಂದು ಕೈಯನ್ನು ಭುಜದಿಂದ ಮೇಲೆತ್ತಿ ಹೆಬ್ಬೆರಳು ತೋರು ಬೆರಳನ್ನು ಕೂಡಿಸಿ ಉಳಿದ ಮೂರು ಬೆರಳನ್ನು ನೇರವಾಗಿಟ್ಟು ಹಸ್ತವನ್ನು ಹೊರಳಿಸುತ್ತಾರೆ. ಇಲ್ಲಿ ಭರತನಾಟ್ಯದ ಕೆಲವು ಮುದ್ರೆ ಭಂಗಿಗಳನ್ನು ಗುರುತಿಸಬಹುದಾಗಿದೆ.

ಅಂತರ್ಕುಣಿತ : ಇದು ಗಂಡುಪಾತ್ರ ಹೆಣ್ಣುಪಾತ್ರ ಈರ್ವರಲ್ಲಿಯೂ ಇವೆ. ಹೆಣ್ಣುಪಾತ್ರಗಳು ತುದಿಗಾಲಿನ ಮೇಲೆ ಅಟ್ಟದ ಆ, ಈ ಕಡೆಗೆ ಸಣ್ಣ-ಸಣ್ಣ ಹೆಜ್ಜೆಗಳನ್ನಿಟ್ಟು ಕುಣಿಯುತ್ತವೆ. ಇದರಲ್ಲಿಯೇ ಬಲಕೈಯಿಂದ ಸೀರೆ ನಿರಗಿಯನ್ನು ಹಿಡಿದು ಎಡಗೈಯ ಐದೂ ಬೆರಳುಗಳನ್ನು ಭುಜಕ್ಕೆ ಹಚ್ಚಿ ಕುಣಿಯಲಾಗುತ್ತದೆ. ಇದನ್ನು ನಿಲಗಿಯ ಕುಣಿತವೆಂದೂ ಹೇಳುತ್ತಾರೆ.

ಒಂಟಿ ಹೆಜ್ಜೆಯ ಕುಣಿತ : ಒಂದು ಕಾಲನ್ನು ಬದಿಗೆ ಸರಿಸಿ ತುದಿ ಬೆರಳನ್ನು ಹಚ್ಚಿ ಹಿಮ್ಮಡಿ ಬಡಿಯುವುದು. ಮೊಣಕಾಲ ಏರಿ ಇಳಿಯುವಾಗ ಹಸ್ತವನ್ನು ಚಿತ್ತ, ಪಟ್ಟವಾಗುವಂತೆ ಬಡಿಯುವುದು. ಎಡಗೈ ಟೊಂಕದ ಮೇಲೆ ಇರುತ್ತದೆ. ಅದರಂತೆ ಇನ್ನೊಂದು ಕಾಲನ್ನು ಮಾಡುವುದು ರೂಢಿ.

ಹೀಗೆ ಇನ್ನೂ ಹಲವಾರು ಕುಣಿತಗಳನ್ನು ಹೇಳಬಹುದಾದರೂ ಹೇಳಿಕೆಯಿಂದ ಯಾವುದೂ ಸ್ಪಷ್ಟವಾಗಲಾರದು. ಇವುಗಳನ್ನು ವಿಡಿಯೋ ಕ್ಯಾಸೆಟುಗಳಲ್ಲಿ ಹಿಡಿದು ಶಾಸ್ತ್ರೋಕ್ತ ಮುದ್ರೆಗಳೇನಾದರೂ ಇವೆಯೇ ಎಂದು ಹುಡುಕಬೇಕಾಗಿದೆ.

ಪ್ರಾದೇಶಿಕ ವೈಶಿಷ್ಟ್ಯವಿರುವ ಬಯಲಾಟದ ಕುಣಿತವನ್ನು ಒಂದು ವ್ಯವಸ್ಥೆಗೆ ತರುವ ಪ್ರಯತ್ನ ನಡೆದಿಲ್ಲ, ನಡೆಯುತ್ತಿಲ್ಲ. ಬಯಲಾಟಗಳು ಸದುದ್ದೇಶದಿಂದ ಹುಟ್ಟಿ, ಬೆಳೆದು ಕೇವಲ ಮನರಂಜನೆಗಾಗಿ ಅಶ್ಲೀಲಕ್ಕಿಳಿಯುತ್ತಿಗವೆ. ಇಂದು ಬಯಲಾಟವನ್ನು ಶುದ್ಧರೂಪದಲ್ಲಿ ಆಡುವ ಮೇಳಗಳು, ಕತೆಗಾರರು ಇಲ್ಲವಾಗಿದ್ದಾರೆ. ನಿಷ್ಠಾವಂತ ನಟರಂತೂ ಸಿಕ್ಕುವುದು ದುಸ್ತರ. ನಾಟಕಗಳು ಬಂದು ಬಯಲಾಟಕ್ಕೆ ಬೆಲೆ ಇಲ್ಲದಂತಾದಾಗ ಸಿನೇಮಾ, ವಿಡಿಯೋಗಳ ಈ ಕಾಲದಲ್ಲಿ ಬಯಲಾಟ ತೀರ ಅನಾಗರಿಕ ಅಭಿವ್ಯಕ್ತಿಯಾಗಿಬಿಟ್ಟಿದೆ. ಬಯಲಾಟ ಉತ್ತರ ಕರ್ನಾಟಕದಲ್ಲಿ ಎಂದೂ ವೃತ್ತಿಯಾಗಿ ಇಲ್ಲವೇ ಇಲ್ಲ. ಹವ್ಯಾಸಿ ಕಲೆಯಾಗಿಯೇ ಬೆಳೆದು ಬಂದಿದೆ. ಶ್ರೀಕೃಷ್ಣಪಾರಿಜಾತದಂಥ ವಿಶಿಷ್ಟ ಬಯಲಾಟ ಮಾತ್ರ ಮೇಳ ಕಟ್ಟಿಕೊಂಡು ಬಹಳ ಕಾಲ ಬದುಕಿದೆ. ಅದಕ್ಕೊಂದು ಶಾಸ್ತ್ರೀಯ ಸ್ವರೂಪ ಬಂದಿದೆ. ಅದರ ಸಂಗೀತವಂತೂ ಜಾನಪದ ಸಂಗೀತದ ಉತ್ಕೃಷ್ಠ ಪದ್ಧತಿಯಾಗಿ ಬೆಳೆದುಬಂದಿದೆ. ಉತ್ತರ ಕರ್ನಾಟಕದ ಇನ್ನೊಂದು ಪ್ರಖ್ಯಾತ ಬಯಲಾಟ ಸಂಗ್ಯಾ-ಬಾಳ್ಯಾ. ಬರಹಕ್ಕೆ ಸಿಕ್ಕು ಹಳೆಯ ಮೈಸೂರಿನವರ ಹವ್ಯಾಸದಲ್ಲಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕುಲಗೆಟ್ಟ ನಾಟಕರೂಪ ತಳೆದಿದೆ.

ದೊಡ್ಡಾಟದ ಪಳೆಯುಳಿಕೆಗಳು ಮಾತ್ರ ಅಲ್ಲಲ್ಲಿ ಸಿಕ್ಕುತ್ತಿವೆ. ಅದರ ಸಂಪೂರ್ಣ ಸ್ವರೂಪ ಕಂಡುಕೊಳ್ಳುವುದೇ ಕಷ್ಟವಾಗಿರುವಾಗ ಯಕ್ಷಗಾನದಂತೆ ಅದನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಪ್ರಯತ್ನಪಡುವ ಪರಿಶ್ರಮಿ ಇನ್ನೊಬ್ಬ ಡಾ. ಕಾರಂತರ ಅವಶ್ಯಕತೆಯಿದೆ.

ಬಯಲಾಟಗಳ ಕುಣಿತಗಳ ವಿಶೇಷ ಅಧ್ಯಯನ ನಡೆಯಬೇಕಾದುದರ ಅವಶ್ಯಕತೆ ಬಹಳ ಹಿಂದೆಯೇ ಇತ್ತು. ಈಗ ಅದು ಸಂಶೋಧನೆಯ, ಸಮಸ್ಯೆಗಳ ಸಾಲಿಗೆ ಸೇರಿಹೋಗಿದೆ. ಇಂಥದರಲ್ಲಿಯೂ ಕರ್ನಾಟಕ ವಿಶ್ವವಿದ್ಯಾಲಯ ಬಯಲಾಟಗಳ ಕಮ್ಮಟ ನಡೆಸಿತು. ಅದರಿಂದ ಹೊರಬಂದ ಹೂರಣ ಏನೂ ಗೊತ್ತಾಗಲಿಲ್ಲ. ಕಲಬುರ್ಗಿಯಲ್ಲೊಮ್ಮೆ ಇಂದಿನ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರವಾಗಿದ್ದಾಗ ಶಾಸ್ತ್ರೀಯ ಕುಣಿತಗಳನ್ನು ಬಲ್ಲ ಶ್ರೀ ಮ್ಯಾಗೇರಿಯವರನ್ನು ಕರೆಸಿ, ಬಯಲಾಟದವರನ್ನು ಕುಣಿಸಿ ಆ ಕುಣಿತಗಳಲ್ಲಿಯ ಶಾಸ್ತ್ರಸಮ್ಮತ ಮುದ್ರೆಗಳನ್ನು ಗುರುತಿಸುವ ಸಾಹಸ ನಡೆಯಿತು. ನಾಟಕ ಅಕಾಡೆಮಿಯು ಇಂಥದೊಂದು ಪ್ರಯತ್ನಕ್ಕೆ ಕೈಹಾಕಿ ಹಿಂದೆ ಸರಿಯಿತು. ಮಣಿಪಾಲದಲ್ಲಿ ಇಂಥ ಸಾಹಸ ಮಾಡಿದರು.

ಬಯಲಾಟ ಕೀಳುಜನರ ಪ್ರದರ್ಶನ ಎನ್ನುವ ಕಾಲ ಇಂದೂ ಹೋಗಿಲ್ಲ. ಮಂಗಳೂರು, ಬೆಂಗಳೂರು, ಮುಂಬೈಗಳಲ್ಲಿ ಪದವೀಧರ ಯಕ್ಷಗಾನ ಸಂಘಗಳನ್ನು ಕಟ್ಟಿಕೊಂಡು ಹಲವಾರು ಹವ್ಯಾಸಿಗಳು ಅದನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಉತ್ತರ ಕರ್ನಾಟಕದ ಬಯಲಾಟ ಮಾತ್ರ ಸಂಪೂರ್ಣ ಸತ್ತಿಲ್ಲ. ಜೀವಂತ ಉಳಿಯುವ ಲಕ್ಷಣಗಳಿಲ್ಲದ ಸ್ಥಿತಿಗಳಲ್ಲಿ ಉಸಿರೆನ್ನೆಳೆಯುತ್ತಿವೆ. ಇದರ ಸಂಗೀತ, ಕುಣಿತಗಳ ವಿಶೇಷ ಅಧ್ಯಯನಕ್ಕೆ ಜಾನಪದ ಅಧ್ಯಯನ ಮಾಡಿದೆ ಪದವೀಧರರು ಮುಂದೆ ಬರಬೇಕಾಗಿದೆ.

ವಾದ್ಯ :

ಬಯಲಾಟದ ಹಾಡಿಗೆ ಕುಣಿತಕ್ಕೆ ಜೀವಾಳ ತಾಳ ಮೇಳ, ದೊಡ್ಡಾಟದಲ್ಲಿ ಮದ್ದಳೆ, ಪೇಟಿ, ತಾಳಗಳು ಪಕ್ಕವಾದ್ಯಗಳಾಗಿ ಮೊದಲಿನಿಂದ ಬಂದರೂ ಇಂದು ಮದ್ದಳೆಯ ಬದಲು ತಬಲಾ ಎಲ್ಲ ಕಡೆಗೆ ಬಂದಿದೆ. ಡಪ್ಪಿಗೆ ಬದಲಾಗಿಯೂ ಕೆಲವು ಕಡೆ ತಬಲಾ ಬಂದುದುಂಟು. ದೊಡ್ಡಾಟಗಳ ಕುಣಿತಗಳಿಗೆ ಮದ್ದಳೆಯ ಗತ್ತು, ತಾಳಮೇಳದ ಸಂಯೋಜನೆ ಮುಖ್ಯ. ಭಾವ ಸ್ಫುರಿಸುವುದು ವಾದ್ಯನಾದದಿಂದಲ್ಲದೆ ಕೇವಲ ಕುಣಿತ ಹಾಡಿನಿಂದಲ್ಲ. ತಾಳವಾದ್ಯಗಳ ಗತ್ತುಗಳು ಬಯಲಾಟದ ಪ್ರಮುಖ ಅಂಗ. ಇಡೀ ಬಯಲಾಟಕ್ಕೆ ರಂಗು ತರುವ ಶಕ್ತಿ ಈ ವಾದ್ಯಗಳಿಗಿದೆ. ತಾಳ ನುಡಿಸುವ, ಮದ್ದಳೆ, ಪೇಟಿ ಬಾರಿಸುವ, ಡಪ್ಪಿಗೆ ಚಾಪಹಾಕುವ ಕಲಾವಂತಿಕೆ ಮಾತ್ರ ಇನ್ನೂ ಕೆಲವೆಡೆ ಇದೆ. ಅದಕ್ಕಾಗಿ ಈ ಸಮ್ಮೇಳನದಿಂದ ವಾದ್ಯ, ಹಾಡು, ಕುಣಿತಗಳ ವಿಶೇಷ ಅಧ್ಯಯನಕ್ಕೆ ನಾಂದಿಯಾಗುವುದೆಂದು ಭಾವಿಸುವೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಬಯಲಾಟಗಳ ಸಮಗ್ರ ಸ್ವರೂಪದ ಅಧ್ಯಯನ ಕಳೆದ ಕೆಲವು ದಶಕಗಳಲ್ಲಿ ನಡೆಯಬೇಕಾಗಿತ್ತು. ಈಗಲಾದರೂ ಎಚ್ಚೆತ್ತು ಆ ಅಧ್ಯಯನ ಕೈಕೊಂಡರೆ ಜಾನಪದದ ಉತ್ತಮ ದರ್ಜೆಯ ಕಲೆಯನ್ನು ಉಳಿಸಿಕೊಂಡಂತಾಗುತ್ತದೆ.


[1]        ಉತ್ತರ ಕರ್ನಾಟಕದ ಬಯಲಾಟಗಳು : ಡಾ, ಬಸವರಾಜ ಮಲಶೆಟ್ಟಿ, ಪುಟ ೮೬.

[2]        ಜನಪದ ಸಂಪದ : ಡಾ. ಸುಂಕಾಪೂರ ಅಭಿನಂದನ ಗ್ರಂಥ, ಪುಟ ೧೯೧

[3]        ಉತ್ತರ ಕರ್ನಾಟಕದ ಬಯಲಾಟ ಪುಟ : ೩ ಡಾ. ಬಸವರಾಜ ಮಲಶೆಟ್ಟಿ.