ಮಾನವನ ಬಹುಪಾಲು ಚಟುವಟಿಕೆಗಳೊಡನೆ ಭಾಷೆಗೆ ಸಂಬಂಧವಿದೆ. ಅನ್ಯ ಚಟುವಟಿಕೆಗಳಲ್ಲಿ ಭಾಷೆ ಒಂದು ಅಂಗವಾಗಿರಬಹುದು ಅಥವಾ ಆ ಚಟುವಟಿಕೆಗಳ ವ್ಯಾಖ್ಯೆಗಾಗಿ ಭಾಷೆ ಅವಶ್ಯವಾಗಬಹುದು. ಇವಲ್ಲದೆ ಭಾಷೆಯೇ ತಂತಾನೇ ಸ್ವಯಂಪೂರ್ಣವಾದ ಚಟುವಟಿಕೆಯಾಗಿರುವುದು ಸಾಧ್ಯ. ಇಷ್ಟು ವ್ಯಾಪಕವಾದ ಈ ಭಾಷೆಯ ಸ್ವರೂಪ, ಉದ್ದೇಶ, ಸಾಧ್ಯತೆ, ವ್ಯಾಪ್ತಿ, ಮಿತಿಗಳೆಲ್ಲವನ್ನೂ ಭಾಷಿಕರು ತಮ್ಮದೇ ಆದ ಬಗೆಯಲ್ಲಿ ತಿಳಿದಿರುತ್ತಾರೆ. ಅವರ ತಿಳುವಳಿಕೆಗಳು ಎಂಥವು, ಈ ತಿಳುವಳಿಕೆಗಳು ಎಲ್ಲ ಕಾಲ ದೇಶಗಳಲ್ಲೂ ಇರುತ್ತವೆಯಾದರೂ ಬದಲಾಗದೇ ಇರಬಲ್ಲುವೆ, ಭಾಷೆಯ ಬಗ್ಗೆ ಜನರಲ್ಲಿ ಇರುವ ಗೃಹೀತಗಳಲ್ಲಿ ತಿರುಳಿನ ಅಂಶವಿದೆಯಾದರೆ ಅದು ಯಾವುದು ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುವುದು ಅವಶ್ಯ.
ಈ ಭಾಗದಲ್ಲಿ ಭಾಷೆಯನ್ನು ಸಮುದಾಯಗಳು ಬೇರೆ ಬೇರೆ ಕಾಲ ದೇಶಗಳಲ್ಲಿ ಹೇಗೆ ವಿವರಿಸಿಕೊಂಡಿವೆ ಎನ್ನುವುದನ್ನು ವಿವರಿಸುವ ಲೇಖನಗಳಿವೆ.
Leave A Comment