ಸಾಕ್ಷರತೆಯ ಮಹತ್ವವನ್ನು ಹೀಗೆ ಗುರುತಿಸಲಾಗಿದೆ:

“ಸಾಮಾಜಿಕ ಸಂಪರ್ಕ ಮತ್ತು ಸಂಬಂಧಗಳು ಲಿಖಿತ ಮಾಧ್ಯಮದ ಮೂಲಕ ಸಂಭವಿಸುವುದರಿಂದ ಸಮಾಜದಲ್ಲಿ ಸಾಕ್ಷರತೆಯು ಆತ್ಮರಕ್ಷಣೆಯ ಸಾಧನವಾಗಿರುತ್ತದೆ. ಅಕ್ಷರಜ್ಞಾನವಿಲ್ಲದವರು ತಮ್ಮನ್ನು ತಾವು ನ್ಯಾಯಾಲಯದ ಕಟಕಟೆಯಲ್ಲಿ ರಕ್ಷಿಸಿ ಕೊಳ್ಳಲಾರರು, ಬ್ಯಾಂಕಿನಿಂದ ಸಾಲ ಎತ್ತಲಾರರು, ತಮ್ಮ ವಾರಸುದಾರಿಕೆ ಹಕ್ಕುಗಳನ್ನು ಚಲಾಯಿಸಲಾರರು, ಆಧುನಿಕ ತಂತ್ರಜ್ಞಾನದ ಅನುಕೂಲ ಪಡೆದುಕೊಳ್ಳ ಲಾರರು, ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲಾರರು, ಸರಿಯಾದ ಬಸ್ಸು ಏರಲಾರರು, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲಾರರು – ಒಟ್ಟಾರೆ ಆಧುನಿಕ ಆರ್ಥಿಕತೆ ಮತ್ತು ಸಮಾಜದಲ್ಲಿ ಯಶಸ್ವಿಯಾಗಿ ಸಹ ಪಾಲುದಾರರಾಗಲಾರರು.”

(ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್, ೨೦೦೨:೧೪೩)

ಸಾಕ್ಷರತೆಯ ಮಹತ್ವವನ್ನು ತುಂಬಾ ಸರಳವಾದ ನಿದರ್ಶನದ ಮೂಲಕ ತೋರಿಸ ಬಹುದು. ಕರ್ನಾಟಕದ ವಿವಿಧ ಜಿಲ್ಲೆಗಳ ಅಭಿವೃದ್ದಿ ಸಂಬಂಧಿ ಸಿದ್ದಿಸಾಧನೆಗಳನ್ನು ಮುಖಾಮುಖಿಯಾಗಿಸಿದರೆ ಯಾವ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು ಉನ್ನತವಾಗಿ ರುವುದೋ ಅದು ಆರ್ಥಿಕವಾಗಿ ಉನ್ನತ ಅಭಿವೃದ್ದಿ ಸಾಧಿಸಿಕೊಂಡಿರುತ್ತದೆ ಎಂಬುದು ತಿಳಿಯುತ್ತದೆ. ಉದಾಹರಣೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳು. ಯಾವ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣವು ಕನಿಷ್ಟವಾಗಿರುತ್ತದೋ ಅವು ಸಹಜವಾಗಿ ಆರ್ಥಿಕವಾಗಿ ಹಿಂದುಳಿದಿರುವ-ದುಸ್ಥಿತಿಯಲ್ಲಿರುವ ಜಿಲ್ಲೆಗಳಾಗಿರುತ್ತವೆ. ಉದಾಹರಣೆ ಗುಲಬರ್ಗಾ, ಕೊಪ್ಪಳ ಮತ್ತು ರಾಯಚೂರು.

[1]

ಆಧುನಿಕ ಸಮಾಜದಲ್ಲಿ ಎದುರಿಸಬೇಕಾದ ಸಾಮಾಜಿಕ ಅಲಕ್ಷ್ಯ ಹಾಗೂ ಹತಾಶೆಗಳನ್ನು ಅಕ್ಷರಸ್ಥರು ಹೆಚ್ಚು ಯಶಸ್ವಿಯಾಗಿ ಎದುರಿಸಲು ಸಾಧ್ಯ. ಆದ್ದರಿಂದ ಶಿಕ್ಷಣದ ಸಶಕ್ತೀಕರಣದ ಪಾತ್ರವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.

ಈ ಕೋಷ್ಟಕ-೧ ಎರಡು ನೆಲೆಗಳಲ್ಲಿ ಮಹತ್ವವಾದುದಾಗಿದೆ. ಮೊದಲನೆಯದಾಗಿ ದಲಿತರು ಮತ್ತು ದಲಿತೇತರರ ನಡುವಣ ಸಾಕ್ಷರತೆಗೆ ಸಂಬಂಧಿಸಿದ ಅಂತರವನ್ನು ಅದು ತೋರಿಸುತ್ತದೆ. ಈ ಅಂತರವೂ ೧೯೯೧ ಮತ್ತು ೨೦೦೧ ಎರಡೂ ಕಾಲಘಟ್ಟಗಳಲ್ಲೂ ಕಂಡುಬರುತ್ತದೆ. ದಲಿತರ ಸಾಮಾಜಿಕ ಸ್ಥಾನಮಾನವು ಕೆಳಮಟ್ಟದಲ್ಲಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣದ ಸಾಮಾಜಿಕ ಸ್ವರೂಪ: ೧೯೯೧ ಮತ್ತು ೨೦೦೧

ಕೋಷ್ಟಕ

ವಿವರ

ಸಾಕ್ಷರತೆ ಶೇಕಡ

೧೯೯೧

೨೦೦೧

ದಶಕವಾರು ಶೇಕಡ ಬೆಳವಣಿಗೆ ಪ್ರಮಾಣ (೧೯೯೧-೨೦೦೧)

ರಾಜ್ಯದಲ್ಲಿ ಒಟ್ಟು ೫೬.೦೪ ೬೬.೬ ೧೮.೮೪
ಸಾಕ್ಷರತೆ ಪು. ೬೭.೨೬ ೭೬.೧ ೧೩.೧೪
  ಮ. ೪೪.೩೪ ೫೬.೯ ೨೮.೩೩
ಲಿಂಗ ಸಮಾನತೆ ಸೂಚಿ   ೬೫.೯೨ ೭೪.೭೭ ೧೩.೪೨
ರಾಜ್ಯದಲ್ಲಿ ಒಟ್ಟು ೬೧.೬೩ ೭೧.೪೫ ೧೭.೮೪
ದಲಿತೇತರ ಸಾಕ್ಷರತೆ ಪು. ೭೧.೭೪ ೮೦.೧೮ ೧೧.೭೬
(ಪ.ಜಾ. + ಪ.ಪಂ. ಬಿಟ್ಟು ಇತರೆ) ಮ. ೪೯.೦೬ ೬೩.೩೯ ೨೯.೨೧
ಲಿಂಗ ಸಮಾನತಾ ಸೂಚಿ   ೬೮.೩೮ ೭೯.೦೬ ೧೫.೬೨
ರಾಜ್ಯದಲ್ಲಿ ಪ.ಜಾ. ಸಾಕ್ಷರತೆ ಒಟ್ಟು ೩೮.೦೬ ೫೨.೯ ೩೮.೯೯
  ಪು. ೪೯.೬೯ ೬೩.೮ ೨೮.೩೯
  ಮ. ೨೫.೯೫ ೪೧.೭೬ ೬೦.೬೯
ಲಿಂಗ ಸಮಾನತಾ ಸೂಚಿ   ೫೨.೨೨ ೬೫.೩೬ ೨೫.೧೬
ರಾಜ್ಯದಲ್ಲಿ ಪರಿಶಿಷ್ಟ ಒಟ್ಟು ೩೬.೦೧ ೪೮.೩ ೩೪.೧೩
ಪಂಗಡ ಸಾಕ್ಷರತೆ ಪು. ೪೭.೯೫ ೫೯.೭ ೨೪.೫೧
  ಮ. ೨೩.೫೭ ೩೬.೬ ೫೫.೨೮
ಲಿಂಗ ಸಮಾನತಾ ಸೂಚಿ   ೪೯.೧೫ ೬೧.೩೧ ೨೪.೭೪
ರಾಜ್ಯದಲ್ಲಿ ಒಟ್ಟು ೩೭.೬೩ ೫೧.೫೫ ೩೬.೯೯
ದಲಿತರ ಸಾಕ್ಷರತೆ ಪು. ೪೯.೩೩ ೬೨.೫೮ ೨೬.೮೬
(ಪ.ಜಾ. + ಪ.ಪಂ.) ಮ. ೨೫.೪೬ ೪೦.೨೩ ೫೮.೦೧
ಲಿಂಗ ಸಮಾನತಾ ಸೂಚಿ   ೫೧.೬೧ ೬೪.೨೮ ೨೪.೫೫

ಮೂಲ:ಜನಗಣತಿ ವರದಿಗಳು, ೧೯೯೧ ಮತ್ತು ೨೦೦೧, ಕರ್ನಾಟಕ

ಈ ಕೋಷ್ಟಕವು ತೋರಿಸುತ್ತಿರುವ ಎರಡನೆಯ ಸಂಗತಿಯು ತುಂಬಾ ವಿಶಿಷ್ಟವಾದು ದಾಗಿದೆ. ದಲಿತರು ಮತ್ತು ದಲಿತೇತರರ ನಡುವಣ ಸಾಕ್ಷರತೆಗೆ ಸಂಬಂಧಿಸಿದ ಅಂತರವು ಸಾಪೇಕ್ಷವಾಗಿ ಕಡಿಮೆಯಾಗುತ್ತಿರುವ ಕುತೂಹಲಕಾರಿ ಸಂಗತಿಯನ್ನು ಕೋಷ್ಟಕವು ತೋರಿ ಸುತ್ತಿದೆ. ದಲಿತೇತರರ ಸಾಕ್ಷರತೆ ಪ್ರಮಾಣವು ೧೯೯೧ರಲ್ಲಿ ಒಟ್ಟು ಸಾಕ್ಷರತಾ ಪ್ರಮಾಣದ ಶೇ. ೧೦೮.೧೯ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೧೦೭.೨೮ಕ್ಕೆ ಇಳಿದಿದೆ. ಈ ಅವಧಿಯಲ್ಲಿ, ಅಂದರೆ ೧೯೯೧ರಿಂದ ೨೦೦೧ರ ದಶಕದಲ್ಲಿ ಅವರ ಸಾಕ್ಷರತಾ ಪ್ರಮಾಣವು ಶೇ. ೧೭.೮೪ರಷ್ಟು ಬೆಳವಣಿಗೆ ಕಂಡಿದೆ. ಇದಕ್ಕೆ ಇದಿರಾಗಿ ದಲಿತರ ಸಾಕ್ಷರತಾ ಪ್ರಮಾಣವು ೧೯೯೧ರಲ್ಲಿ ಒಟ್ಟು ಸಾಕ್ಷರತಾ ಪ್ರಮಾಣದ ಶೇ. ೬೭.೧೫ರಷ್ಟಿದ್ದುದು ೨೦೦೧ರಲ್ಲಿ ಶೇ. ೭೭.೪ರಷ್ಟಾಗಿದೆ. ಇದನ್ನು ಸರಳವಾಗಿ ಇನ್ನೊಂದು ಬಗೆಯಲ್ಲಿ ಹೀಗೆ ಹೇಳಬಹುದು. ದಲಿತರ ಸಾಕ್ಷರತೆ ಪ್ರಮಾಣವು ೧೯೯೧ರಲ್ಲಿ ಒಟ್ಟು ಸಾಕ್ಷರತಾ ಪ್ರಮಾಣದ ೨/೩ರಷ್ಟಿದ್ದುದು ೨೦೦೧ರಲ್ಲಿ ಅದು ೩/೪ರಷ್ಟಾಗಿದೆ. ಇವರ ಸಾಕ್ಷರತಾ ಪ್ರಮಾಣವು ೧೯೯೧ರಿಂದ ೨೦೦೧ರ ದಶಕದಲ್ಲಿ ಶೇ. ೩೬.೯೯ರಷ್ಟು ಬೆಳವಣಿಗೆ ಕಂಡಿದೆ. ದಲಿತರ ಸಾಮಾಜಿಕ ಸ್ಥಾನಮಾನವು ನಿಧಾನವಾಗಿ ಉತ್ತಮವಾಗುತ್ತಿರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

ಮಹಿಳೆಯರ ಸಾಕ್ಷರತಾ ಪ್ರಮಾಣವು-ದಲಿತರು ಮತ್ತು ದಲಿತೇತರರು-ಎರಡೂ ಗುಂಪಿನಲ್ಲೂ ಪುರುಷರ ಸಾಕ್ಷರತೆಗಿಂತ ಕಡಿಮೆಯಿರುವುದು ಕೋಷ್ಟಕದಿಂದ ತಿಳಿದು ಬರುತ್ತದೆ. ಇದು ಸಾಕ್ಷರತೆಗೆ ಸಂಬಂಧಿಸಿದ ಲಿಂಗ ಸಂಬಂಧಿ ಅಸಮಾನತೆಯ ಒಂದು ಮುಖ ಮಾತ್ರವಾಗಿದೆ. ದಲಿತ ಮಹಿಳೆಯರ ಸಾಕ್ಷರತಾ ಪ್ರಮಾಣವು ದಲಿತೇತರ ಮಹಿಳೆಯರ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆಯಿರುವುದು ಸಮಸ್ಯೆಯ ಮತ್ತೊಂದು ಕರಾಳ ಮುಖ ವಾಗಿದೆ. ಕುತೂಹಲದ ಸಂಗತಿಯೆಂದರೆ ದಲಿತೇತರ ಮಹಿಳೆಯರ ಸಾಕ್ಷರತಾ ಪ್ರಮಾಣವು ದಲಿತೇತರ ಪುರುಷರ ಸಾಕ್ಷರತಾ ಪ್ರಮಾಣದ ಶೇ. ೬೯.೨೨ರಷ್ಟು ೧೯೯೧ರಲ್ಲಿದ್ದುದು ೨೦೦೧ರಲ್ಲಿ ಅದು ಶೇ. ೭೯.೦೬ಕ್ಕೆ ಏರಿದೆ. ಆದರೆ ದಲಿತ ಮಹಿಳೆಯರ ಸಾಕ್ಷರತಾ ಪ್ರಮಾಣವು ದಲಿತ ಪುರುಷರ ಸಾಕ್ಷರತಾ ಪ್ರಮಾಣದ ಶೇ. ೫೧.೬೧ರಷ್ಟು ೧೯೯೧ರಲ್ಲಿತ್ತು. ಇದು ೨೦೦೧ರಲ್ಲಿ ಶೇ. ೬೪.೫೯ಕ್ಕೇರಿದೆ. ಲಿಂಗ ಸಮಾನತೆ ದೃಷ್ಟಿಯಿಂದ ದಲಿತ ಮಹಿಳೆಯರ ಸ್ಥಿತಿಯು ದಲಿತೇತರ ಮಹಿಳೆಯರ ಸ್ಥಿತಿಗಿಂತ ಕೆಳಮಟ್ಟದಲ್ಲಿರುವುದು ಇದರಿಂದ ಸ್ಪಷ್ಟವಾಗುತ್ತದೆ. ದಲಿತೇತರ ಮಹಿಳೆಯರ ಸಾಕ್ಷರತಾ ಪ್ರಮಾಣವು ೧೯೯೧-೨೦೦೧ರ ದಶಕದಲ್ಲಿ ಕೇವಲ ಶೇ. ೨೯.೨೧ರಷ್ಟು ಬೆಳವಣಿಗೆ ಕಂಡಿದೆ. ಆದರೆ ದಲಿತ ಮಹಿಳೆಯರ ಸಾಕ್ಷರತೆಯು ೧೯೯೧-೨೦೦೧ರ ದಶಕದಲ್ಲಿ ಶೇ. ೫೮ರಷ್ಟು ಬೆಳವಣಿಗೆ ಕಂಡಿದ್ದರೂ ಅದು ಅತ್ಯಂತ ಕೆಳಮಟ್ಟದಲ್ಲಿರುವುದು ಕಂಡುಬರುತ್ತದೆ (ಕರ್ನಾಟಕದಲ್ಲಿ ಮಾನವ ಅಭಿವೃದ್ದಿ, ೧೯೯೯).

ಸಾಕ್ಷರತೆಗೆ ಸಂಬಂಧಿಸಿದ ದಶಕವಾರು ಬೆಳವಣಿಗೆಯನ್ನು ತೋರಿಸುವ ಕೋಷ್ಟಕ-೧ ಇನ್ನೊಂದು ರೀತಿಯಲ್ಲಿ ವಿಶಿಷ್ಟವಾದುದಾಗಿದೆ. ಇಲ್ಲಿ ಬೆಳವಣಿಗೆ ಪ್ರಮಾಣ ಅತ್ಯಂತ ಕನಿಷ್ಠ ಶೇ. ೧೧.೭೬ ದಲಿತೇತರ ಪುರುಷರಿಗೆ ಸಂಬಂಧಿಸಿದ್ದರೆ ಅದರ ಗರಿಷ್ಠ ಪ್ರಮಾಣ ಶೇ. ೫೮.೦೧ ದಲಿತ ಮಹಿಳೆಯರಲ್ಲಿದೆ. ಇದು ತುಂಬಾ ಕುತೂಹಲಕಾರಿಯಾದ ಸಂಗತಿ ಯಾಗಿದೆ. ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಸಾಕ್ಷರತೆ ಮಟ್ಟವು ಉನ್ನತ ಹಂತವನ್ನು ತಲುಪಿದಂತೆ ಅದರ ಬೆಳವಣಿಗೆ ಗತಿಯು ಮಂದವಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಾಕ್ಷರತಾ ಪ್ರಮಾಣವು ಕೆಳಮಟ್ಟದಲ್ಲಿದ್ದಾಗ ಅದರ ಬೆಳವಣಿಗೆ ಗತಿಯು ತೀವ್ರವಾಗಿರುತ್ತದೆ. ಈ ಕಾರಣದಿಂದಾಗಿ ಮಹಿಳೆಯರ ಸಾಕ್ಷರತೆಯು ಸಾಪೇಕ್ಷವಾಗಿ ಅತ್ಯಂತ ಕನಿಷ್ಠವಿರುವುದರಿಂದ ಅದರ ಬೆಳವಣಿಗೆ ಪ್ರಮಾಣವು ಗರಿಷ್ಠವಾಗಿದೆ (ವಿಮಲಾ ರಾಮಚಂದ್ರನ್, ಸಂ., ೨೦೦೪).

ಕೋಷ್ಟಕ-೨ ಸಾಕ್ಷರತೆಯ ಸಾಮಾಜಿಕ ನೆಲೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ. ಇಲ್ಲಿ ಸಾಕ್ಷರತೆಯ ಸಾಮಾಜಿಕ ಅಂತರವನ್ನು ಎರಡು ವಿಧಾನದಲ್ಲಿ ಲೆಕ್ಕ ಹಾಕಲಾಗಿದೆ. ಮೊದಲನೆಯದಾಗಿ ಒಟ್ಟು ಜನಸಂಖ್ಯೆಯ, ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಮೂಹವನ್ನು ಒಳಗೊಂಡಂತೆ ಒಟ್ಟು ಜನಸಂಖ್ಯೆಯ ಸಾಕ್ಷರತೆ ಮತ್ತು ಪರಿಶಿಷ್ಟರ ಸಾಕ್ಷರತೆ ನಡುವಣ ಅಂತರವನ್ನು ಸಾಲು-೩ರಲ್ಲಿ ತೋರಿಸಿದೆ. ಎರಡನೆಯದಾಗಿ ಶಿಷ್ಟರು ಮತ್ತು ಪರಿಶಿಷ್ಟರ ಸಾಕ್ಷರತೆ ನಡುವಣ ಅಂತರವನ್ನು ಲೆಕ್ಕ ಹಾಕಲಾಗಿದೆ (ನೋಡಿ : ಸಾಲು ೫). ಇದರಿಂದ ಸಾಕ್ಷರತೆಯ ಸಾಮಾಜಿಕ ಅಂತರದ ಪ್ರಮಾಣವನ್ನು ಸರಿಯಾಗಿ ಮಾಪನ ಮಾಡಬಹುದಾಗಿದೆ. ಸಾಲು-೩ರಲ್ಲಿ ಸಾಕ್ಷರತಾ ಅಂತರ ೧೯೯೧ರಲ್ಲಿ ಶೇ. ೧೮.೪೧ ಅಂಶಗಳಿಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೧೫.೦೫ ಅಂಶಗಳಿಗೆ ಇಳಿದಿದೆ. ಆದರೆ ಶಿಷ್ಟರು ಮತ್ತು ಪರಿಶಿಷ್ಟರಿಗೆ ಪ್ರತ್ಯೇಕವಾಗಿ ಅಂತರವನ್ನು ಲೆಕ್ಕ ಹಾಕಿದರೆ ಅಂತರ ಅಧಿಕ ಮಟ್ಟದಲ್ಲಿರುವುದು ತಿಳಿಯುತ್ತದೆ. ಇಲ್ಲಿ ಅಂತರ ೧೯೯೧ರಲ್ಲಿ ಶೇ. ೨೪ ಅಂಶಗಳಷ್ಟಿದ್ದುದು ೨೦೦೧ರಲ್ಲಿ ಶೇ. ೧೯.೯೦ ಅಂಶಗಳಷ್ಟಾಗಿದೆ.

ಸಾಕ್ಷರತಾ ಅಂತರದ ಸಾಮಾಜಿಕ ಸ್ವರೂಪ ೧೯೯೧ ಮತ್ತು ೨೦೦೧

ಕೋಷ್ಟಕ

ವಿವರಗಳು

ಒಟ್ಟು ಸಾಕ್ಷರತೆ

ಪುರುಷರ ಸಾಕ್ಷರತೆ

ಮಹಿಳೆಯರ ಸಾಕ್ಷರತೆ

೧೯೯೧

೨೦೦೧

೧೯೯೧

೨೦೦೧

೧೯೯೧

೨೦೦೧

ಒಟ್ಟು ಸಾಕ್ಷರತೆ ೫೬.೦೪ ೬೬.೬೦ ೬೭.೨೬ ೭೬.೧೦ ೪೪.೩೪ ೫೬.೯೦
ಪರಿಶಿಷ್ಟರ ಸಾಕ್ಷರತೆ ೩೭.೬೩ ೫೧.೫೫ ೪೯.೩೩ ೬೨.೫೮ ೨೫.೪೬ ೪೦.೨೩
ಅಂತರ ೧೮.೪೧ ೧೫.೦೫ ೧೭.೯೩ ೧೩.೫೨ ೧೮.೮೮ ೧೬.೬೭
ಶಿಷ್ಟರ ಸಾಕ್ಷರತೆ ೬೧.೬೩ ೭೧.೪೫ ೭೧.೭೪ ೮೦.೧೮ ೪೯.೦೬ ೬೩.೩೯
ವ್ಯತ್ಯಾಸ ೨೪.೦೦ ೧೯.೯೦ ೨೨.೪೧ ೧೭.೬೦ ೨೩.೬೦ ೨೩.೧೬

ಟಿಪ್ಪಣಿ : ಸಾಲು ೩ ಮತ್ತು ಸಾಲು ೫ರಲ್ಲಿನ ಅಂತರಗಳಲ್ಲಿ ವ್ಯತ್ಯಾಸವನ್ನು ಗುರುತಿಸುವ ಅಗತ್ಯವಿದೆ. ಸಾಲು ೫ರಲ್ಲಿನ ಅಂತರವು ಸಾಲು ೩ರಲ್ಲಿನ ಅಂತರಕ್ಕಿಂತ ಅಧಿಕ ಮಟ್ಟದಲ್ಲಿದೆ.

ಲಿಂಗ ಸಮಾನತಾ ಸೂಚಿ

ಸಾಕ್ಷರತೆಗೆ ಸಂಬಂಧಿಸಿದಂತೆ ಮಹಿಳೆಯರು ಮತ್ತು ಪುರುಷರ ಸಾಕ್ಷರತೆ ಪ್ರಮಾಣಗಳ ನಡುವಿನ ಅಂತರವನ್ನು ಮಾಪನ ಮಾಡಲು ಸರಳವಾದ ಲಿಂಗ ಸಮಾನತಾ ಸೂಚಿಯನ್ನು ಇಲ್ಲಿ ಬಳಸಲಾಗಿದೆ. ಅದು ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಯಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಈ ಸೂಚಿಯು ಲಿಂಗ ಸಮಾನತೆಯಿಂದ ವಾಸ್ತವಿಕ ಸ್ಥಿತಿಯು ಎಷ್ಟು ಅಂತರದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಇಲ್ಲೂ ಕುತೂಹಲದ ಸಂಗತಿಯೊಂದು ನಮಗೆ ಗೋಚರಿಸುತ್ತದೆ. ದಲಿತೇತರರ ಲಿಂಗ ಸಮಾನತಾ ಸೂಚಿಯು (೭೯.೦೬) ದಲಿತರಿಗೆ ಸಂಬಂಧಿಸಿದ ಲಿಂಗ ಸಮಾನತಾ ಸೂಚಿಗಿಂತ (೬೪.೨೮) ಉತ್ತಮವಾಗಿದೆ. ಆದರೆ ೧೯೯೧-೨೦೦೧ರ ದಶಕದಲ್ಲಿ ಲಿಂಗ ಸಮಾನತಾ ಸೂಚಿಯ ಬೆಳವಣಿಗೆಯನ್ನು ಗಮನಿಸಿದರೆ ದಲಿತರಿಗೆ ಸಂಬಂಧಿಸಿದಂತೆ ಬೆಳವಣಿಗೆ ಪ್ರಮಾಣವು (ಶೇ. ೨೪.೫೫) ದಲಿತೇತರರ ಸೂಚಿಯ ಬೆಳವಣಿಗೆ ಪ್ರಮಾಣಕ್ಕಿಂತ (ಶೇ. ೧೫.೬೨) ಉತ್ತಮವಾಗಿದೆ. ದಲಿತೇತರರಿಗೆ ಸಂಬಂಧಿಸಿದಂತೆ ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಯ ೩/೪ಕ್ಕಿಂತ ಅಧಿಕವಿದ್ದರೆ ದಲಿತರಿಗೆ ಸಂಬಂಧಿಸಿದಂತೆ ಅದು ಕೇವಲ ೨/೩ಕ್ಕಿಂತ ಕಡಿಮೆಯಿದೆ. ಲಿಂಗ ಸಮಾನತೆ ಬಗ್ಗೆ ಮಾತನಾಡುವಾಗ ಮಹಿಳೆಯರು ಮತ್ತು ಪುರುಷರ ನಡುವಿನ ಸಾಕ್ಷರತೆಯಲ್ಲಿನ ಅಂತರದ ಜೊತೆಗೆ ದಲಿತ ಮಹಿಳೆ ಮತ್ತು ದಲಿತೇತರ ಮಹಿಳೆಯರ ನಡುವಣ ಅಂತರದ ಕಡೆಗೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಭಾಗ ೨

ಈ ಭಾಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ (೧ರಿಂದ ೧೦) ಸಂಬಂಧಿಸಿದ ಮಕ್ಕಳ ದಾಖಲಾತಿಯ ವಿವಿಧ ಆಯಾಮಗಳನ್ನು ವಿಶದವಾಗಿ ಚರ್ಚಿಸಲಾಗಿದೆ. ಪ್ರಸ್ತಾವನೆ ಯಲ್ಲಿ ತಿಳಿಸಿರುವಂತೆ ಮಕ್ಕಳ ದಾಖಲಾತಿಯ ಮೂರು ನೆಲೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದಾಖಲಾತಿಗೆ ಸಂಬಂಧಿಸಿದ ಸ್ಥಿತಿಯನ್ನು, ಅದರ ಪ್ರಾದೇಶಿಕ ಸ್ವರೂಪವನ್ನು, ದಲಿತರು ಹಾಗೂ ದಲಿತೇತರ ಆಯಾಮಗಳನ್ನು ಹಾಗೂ ದಾಖಲಾತಿಯ ಲಿಂಗ ಸಂಬಂಧಿ ನೆಲೆಗಳನ್ನು ವಿವರವಾಗಿ ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.

ಮಕ್ಕಳ ದಾಖಲಾತಿ ಸಾಧನೆ

ಕೋಷ್ಟಕ-೩ರಲ್ಲಿ ೨೦೦೫ಕ್ಕೆ ಸಂಬಂಧಿಸಿದಂತೆ ೧ರಿಂದ ೭ನೆಯ, ೮ರಿಂದ ೧೦ನೆಯ ಹಾಗೂ ಒಟ್ಟು ೧ರಿಂದ ೧೦ನೆಯ ತರಗತಿಗಳ ದಾಖಲಾತಿ ವಿವರಗಳನ್ನು ವಿಭಾಗವಾರು ಹಾಗೂ ರಾಜ್ಯಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ. ಒಂದರಿಂದ ಹತ್ತನೆಯ ತರಗತಿವರೆಗಿನ ದಾಖಲಾತಿ ಸಂಖ್ಯೆ ೯೯.೩೬ ಲಕ್ಷ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ೧-೧೦ನೆಯ ತರಗತಿಯಲ್ಲಿರುವ ಮಕ್ಕಳ ಪ್ರಮಾಣವು ಶೇ. ೧೮.೮೦ರಷ್ಟಿದೆ.

ಈ ಕೋಷ್ಟಕವು ತೋರಿಸುತ್ತಿರುವ ಒಂದು ಕುತೂಹಲಕಾರಿ ಸಂಗತಿ ಬಗ್ಗೆ ವಿವರವಾಗಿ ಚರ್ಚಿಸುವ ಅಗತ್ಯವಿದೆ. ಒಟ್ಟು ಮಕ್ಕಳ ದಾಖಲಾತಿಯ ಪ್ರಾದೇಶಿಕ ಸ್ವರೂಪಕ್ಕೆ ಇದು ಸಂಬಂಧಿಸಿದೆ. ಕರ್ನಾಟಕ ರಾಜ್ಯದ ಎರಡು ಪ್ರದೇಶಗಳಾದ ದಕ್ಷಿಣ ಕರ್ನಾಟಕ (ದ.ಕ.) ಮತ್ತು ಉತ್ತರ ಕರ್ನಾಟಕ(ಉ.ಕ.)ಗಳ ನಡುವೆ ಜನಸಂಖ್ಯೆಯ ಹಂಚಿಕೆಗಿಂತ ದಾಖಲಾದ ಮಕ್ಕಳ ಹಂಚಿಕೆಯು ಭಿನ್ನವಾಗಿದೆ. ಕೋಷ್ಟಕದ ಎರಡನೆಯ ಅಂಕಣದಲ್ಲಿ ತೋರಿಸಿರುವಂತೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣ ಕರ್ನಾಟಕದ ಪಾಲು ಶೇ. ೫೭.೩೦ರಷ್ಟಿದ್ದರೆ ಉತ್ತರ ಕರ್ನಾಟಕದ ಪಾಲು ಕೇವಲ ಶೇ. ೪೨.೭೦. ಆದರೆ ೧ರಿಂದ ೧೦ನೆಯ ತರಗತಿವರೆಗಿನ ಮಕ್ಕಳ ದಾಖಲಾತಿಯಲ್ಲಿ ಇದು ತಿರುವುಮುರುವು ಆಗಿರುವುದು ಕಂಡುಬರುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೫೭.೩೦ ಪಾಲು ಪಡೆದಿರುವ ದಕ್ಷಿಣ ಕರ್ನಾಟಕ ಪ್ರದೇಶವು ೧ರಿಂದ ೧೦ನೆಯ ತರಗತಿವರೆಗಿನ ಶಾಲಾ ಮಕ್ಕಳಿಗೆ ಸಂಬಂಧಿಸಿದಂತೆ ಅದರ ಪಾಲು ಕೇವಲ ಶೇ. ೫೩.೪೮. ಇದಕ್ಕೆ ಪ್ರತಿಯಾಗಿ ಜನಸಂಖ್ಯೆಯಲ್ಲಿ ಶೇ. ೪೨.೭೦ ಪಾಲು ಪಡೆದಿರುವ ಉತ್ತರ ಕರ್ನಾಟಕ ಪ್ರದೇಶವು ಶಾಲಾ ಮಕ್ಕಳಲ್ಲಿ ಶೇ. ೪೬.೫೨ ಪಾಲು ಪಡೆದಿದೆ. ಇದನ್ನು ಹೇಗೆ ವಿವರಿಸುವುದು?

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ (೧೦)
ದಾಖಲಾತಿ ಪ್ರಮಾಣ
: ಕರ್ನಾಟಕ ೨೦೦೫

ಕೋಷ್ಟಕ

ವಿಭಾಗಗಳು

ಪ್ರದೇಶ ರಾಜ್ಯ

ಜನಸಂಖ್ಯೆ

೨೦೦೧

ದಾಖಲಾತಿ (೨೦೦೫)

೧ – ೭

೮ – ೧೦

೧ – ೧೦

(ತರಗತಿ)

(ತರಗತಿ)

(ತರಗತಿ)

ಬೆಂಗಳೂರು ೧೮,೪೯೦,೮೧೧ ೨,೫೨೯,೯೪೫ ೭೫೪,೪೪೬ ೩,೨೮೪,೩೯೧
(೩೪.೯೯) (೩೨.೦೨) (೩೭.೦೫) (೩೩.೦೫)
ಮೈಸೂರು ೧೧,೭೯೧,೩೦೨ ೧,೫೨೭,೩೫೭ ೫೦೧,೯೪೪ ೨,೦೨೯,೩೦೧
(೨೨.೩೧) (೧೯.೩೨) (೨೪.೬೫) (೨೦.೪೨)
ದ.ಕ. ೩೦,೨೮೨,೧೧೩ ೪,೦೫೭,೩೦೨ ೧,೨೫೬,೩೯೦ ೫,೩೧೩,೬೯೨
(೫೭.೩೦) (೫೧.೩೫) (೬೧.೭೧) (೫೩.೪೮)
ಬೆಳಗಾವಿ ೧೩,೦೪೨,೧೬೩ ೨,೧೪೧,೭೨೪ ೫೦೪,೮೫೪ ೨,೬೪೬,೫೭೮
(೨೪.೬೮) (೨೭.೧೧) (೨೪.೮೦) (೨೬.೬೩)
ಗುಲಬರ್ಗಾ ೯,೫೨೬,೨೮೬ ೧,೭೦೧,೭೦೭ ೨೭೪,೬೩೪ ೧,೯೭೬,೩೪೧
(೧೮.೦೨) (೨೧.೫೪) (೧೩.೪೯) (೧೯.೮೯)
ಉ.ಕ. ೨೨,೫೬೮,೪೪೯ ೩,೮೪೩,೪೩೧ ೭೭೯,೪೮೮ ೪,೬೨೨,೯೧೯
(೪೨.೭೦) (೪೮.೬೫) (೩೮.೨೯) (೪೬.೫೨)
ರಾಜ್ಯ ೫೨,೮೫೦,೫೬೨ ೭,೯೦೦,೭೩೩ ೨,೦೩೫,೮೭೮ ೯,೯೩೬,೬೧೧
(೧೦೦.೦೦) (೧೦೦.೦೦) (೧೦೦.೦೦) (೧೦೦.೦೦)

ಮೂಲ:ಕರ್ನಾಟಕ ಸರ್ಕಾರ, ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ, ೨೦೦೫

ಈ ವಿಚಿತ್ರವನ್ನು ಅರ್ಥ ಮಾಡಿಕೊಳ್ಳಲು ನಾವು ರಾಜ್ಯದಲ್ಲಿನ ೦-೬ ವಯೋಮಾನದ ಮಕ್ಕಳ ಹಂಚಿಕೆಯನ್ನು ಪರಿಗಣಿಸಬೇಕಾಗುತ್ತದೆ.[2] ಕೋಷ್ಠಕ-೪ರಲ್ಲಿ ೧೯೯೧ ಮತ್ತು ೨೦೦೧ರಲ್ಲಿ ರಾಜ್ಯದ ವಿಭಾಗಗಳ ನಡುವೆ ೦-೬ ವಯೋಮಾನದ ಮಕ್ಕಳ ಹಂಚಿಕೆಯ ವಿವರ ನೀಡಲಾಗಿದೆ. ಈ ಕೋಷ್ಟಕದಲ್ಲಿ ೦-೬ ವಯೋಮಾನದ ಮಕ್ಕಳ ಸಂಖ್ಯೆ ಹಾಗೂ ಅವರ ವಿಭಾಗವಾರು ಹಂಚಿಕೆಯನ್ನು ಶೇಕಡವಾರು ತೋರಿಸಲಾಗಿದೆ.

ಕರ್ನಾಟಕ೬ ವಯೋಮಾನದ ಮಕ್ಕಳ ಸಂಖ್ಯೆ : ೧೯೯೧ ಮತ್ತು ೨೦೦೧

ಕೋಷ್ಟಕ

ವಿಭಾಗಗಳು

ಪ್ರದೇಶ ರಾಜ್ಯ

೦-೬ ವಯೋಮಾನದ

೦-೬ ವಯಾಮಾನದ

೧೯೯೧-೨೦೦೧ರ

ಮಕ್ಕಳು: ೧೯೯೧

ಮಕ್ಕಳು : ೨೦೦೧

ದಶಕವಾರು ಬೆಳವಣಿಗೆ

ಸಂಖ್ಯೆ (ಲಕ್ಷಗಳಲ್ಲಿ)

ಪ್ರಮಾಣ   (ಶೇ)

ಸಂಖ್ಯೆ (ಲಕ್ಷಗಳಲ್ಲಿ)

ಪ್ರಮಾಣ    (ಶೇ)

ಸಂಖ್ಯೆ (ಲಕ್ಷಗಳಲ್ಲಿ)

ಪ್ರಮಾಣ  (ಶೇ)

ಬೆಂಗಳೂರು ವಿಭಾಗ ೨೩.೧೮ ೩೧.೦೧ ೨೨.೯೦ ೩೧.೮೮  -೦.೨೮ -೧.೨೧
ಮೈಸೂರು ವಿಭಾಗ ೧೫.೬೩ ೨೦.೯೧ ೧೩.೯೫ ೧೯.೪೨  -೧.೬೮ -೧೦.೭೫
ದ.ಕ. ಪ್ರದೇಶ ೩೮.೮೧ ೫೧.೯೨ ೩೬.೮೫ ೫೧.೩೦  -೧.೯೬ -೫.೦೫
ಬೆಳಗಾವಿ ವಿಭಾಗ ೧೯.೭೦ ೨೬.೩೫ ೧೯.೧೦ ೨೬.೫೯  -೦.೬೦ -೩.೦೫
ಗುಲಬರ್ಗಾ ವಿಭಾಗ ೧೬.೨೫ ೨೧.೭೩ ೧೫.೮೮ ೨೨.೧೧  -೦.೩೭ -೨.೨೮
ಉ.ಕ. ಪ್ರದೇಶ ೩೫.೯೫ ೪೮.೦೮ ೩೪.೯೮ ೪೮.೭೦  -೦.೯೭ -೨.೭೦
ಕರ್ನಾಟಕ ರಾಜ್ಯ ೭೪.೭೬ ೧೦೦.೦೦ ೭೧.೮೩ ೧೦೦.೦೦  -೨.೯೩ -೩.೯೨

ಮೂಲ:ಜನಗಣತಿ ವರದಿಗಳು, ೧೯೯೯ ಮತ್ತು ೨೦೦೧

ಕೋಷ್ಟಕ-೪ರಲ್ಲಿನ ವಿವರಗಳ ನೆರವಿನಿಂದ ಕೋಷ್ಟಕ – ೩ಕ್ಕೆ ಸಂಬಂಧಿಸಿದಂತೆ ಎತ್ತಿರುವ ಪ್ರಶ್ನೆಗೆ ಉತ್ತರ ನೀಡಬಹುದಾಗಿದೆ. ಮೊದಲನೆಯದಾಗಿ ರಾಜ್ಯ ಮಟ್ಟದಲ್ಲಿ ೧೯೯೧ರಿಂದ ೨೦೦೧ರ ಅವಧಿಯಲ್ಲಿ ೦-೬ ವಯೋಮಾನದ ಮಕ್ಕಳ ಸಂಖ್ಯೆಯು ಕಡಿಮೆಯಾಗಿದೆ. ಎಲ್ಲ ವಿಭಾಗಗಳಲ್ಲೂ ಅದರ ಗಾತ್ರ ಕಡಿಮೆಯಾಗಿದೆ. ಆದರೆ ೦-೬ ವಯೋಮಾನದ ಮಕ್ಕಳ ಸಂಖ್ಯೆಯಲ್ಲಿನ ಕಡಿತವು ಎಲ್ಲ ವಿಭಾಗಗಳಲ್ಲೂ ಸಮನಾಗಿಲ್ಲ. ಈ ಇಳಿಕೆಯು ಮೈಸೂರು ವಿಭಾಗದಲ್ಲಿ ಅತ್ಯಧಿಕವಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅದು ಅತ್ಯಂತ ಕಡಿಮೆಯಿದೆ. ವಿಭಾಗಗಳ ನಡುವೆ ೦-೬ ವಯೋಮಾನದ ಮಕ್ಕಳ ಹಂಚಿಕೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯಾಗಿದೆ.

ಎರಡನೆಯದಾಗಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಜನಸಂಖ್ಯೆಯ ವಿಭಾಗವಾರು ಹಂಚಿಕೆ ಪ್ರಮಾಣವು ಭಿನ್ನವಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ದಕ್ಷಿಣ ಕರ್ನಾಟಕದ ಪಾಲು ಶೇ. ೫೭.೩೦. ಆದರೆ ಶಾಲಾ ದಾಖಲಾತಿಯಲ್ಲಿ ಅದರ ಪ್ರಮಾಣ ಕೇವಲ ಶೇ. ೫೩.೪೮. ಇದಕ್ಕೆ ಕಾರಣ ಅದು ೦-೬ ವಯೋಮಾನದ ಮಕ್ಕಳಿಗೆ ಸಂಬಂಧಿಸಿ ದಂತೆ ಪಡೆದಿರುವ ಪಾಲು (ಶೇ. ೫೧.೩) ಎಂಬುದನ್ನು ನಾವು ಗುರುತಿಸಬೇಕಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. ೪೨.೭೦ ಪಾಲು ಪಡೆದಿದ್ದರೂ ಉತ್ತರ ಕರ್ನಾಟಕ ಪ್ರದೇಶವು ಶಾಲಾ ದಾಖಲಾತಿಯಲ್ಲಿ ಶೇ. ೪೬.೫೨ ಪಾಲು ಪಡೆದಿದೆ. ಇದಕ್ಕೆ ಕಾರಣ ಅದು ೦-೬ ವಯೋಮಾನದ ಮಕ್ಕಳಲ್ಲಿ ಶೇ. ೪೮.೭೦ ಪಾಲು ಪಡೆದಿರುವುದು ಕಾರಣವಾಗಿದೆ.

ಕೋಷ್ಟಕ-೩ರಲ್ಲಿನ ಮತ್ತೊಂದು ಸಂಗತಿಯನ್ನು ನಾವು ಗುರುತಿಸಬೇಕಾಗಿದೆ. ಆ ಕೋಷ್ಟಕದಲ್ಲಿ ದಾಖಲಾತಿಯನ್ನು ೧ರಿಂದ ೭ ಹಾಗೂ ೮ರಿಂದ ೧೦ನೆಯ ತರಗತಿಗಳಿಗೆ ಪ್ರತ್ಯೇಕವಾಗಿ ನೀಡಲಾಗಿದೆ. ಇದು ಪ್ರಾದೇಶಿಕ ಅಸಮಾನತೆ ಬಗ್ಗೆ ಒಂದು ಸೂಕ್ಷ್ಮ ಸಂಗತಿಯನ್ನು ತೋರಿಸುತ್ತಿದೆ. ಅದೇನೆಂದರೆ ೧ರಿಂದ ೭ನೆಯ ತರಗತಿವರೆಗಿನ ದಾಖಲಾತಿಯಲ್ಲಿ ದಕ್ಷಿಣ ಕರ್ನಾಟಕದ ಪಾಲು ಶೇ. ೫೧.೩೫ ಮತ್ತು ಗುಲಬರ್ಗಾ ವಿಭಾಗದ ಪಾಲು ಶೇ. ೨೧.೫೪ರಷ್ಟಿದೆ. ಆದರೆ ೮ರಿಂದ ೧೦ನೆಯ ತರಗತಿಯ ದಾಖಲಾತಿಯಲ್ಲಿ ದಕ್ಷಿಣ ಕರ್ನಾಟಕದ ಪಾಲು ಶೇ. ೬೧.೭೧ರಷ್ಟಾದರೆ ಗುಲಬರ್ಗಾ ವಿಭಾಗದ ಪಾಲು ಕೇವಲ ಶೇ. ೧೩.೪೯. ಅಂದರೆ ೧ರಿಂದ ೭ನೆಯ ತರಗತಿಯ ಹಂತದಿಂದ ೮ರಿಂದ ೧೦ನೆಯ ತರಗತಿ ಹಂತದವರೆಗಿನ ಪರಿವರ್ತನೆಯಲ್ಲಿ ಶಾಲೆಯನ್ನು ಬಿಡುವ ಮಕ್ಕಳ ಪ್ರಮಾಣವು ಗುಲಬರ್ಗಾ ವಿಭಾಗದಲ್ಲಿ ಅತ್ಯಧಿಕವಾಗಿದೆ. ಈ ವಿಭಾಗದಲ್ಲಿ ೧ರಿಂದ ೭ನೆಯ ತರಗತಿವರೆಗಿನ ಮಕ್ಕಳ ಪ್ರಮಾಣ ಒಟ್ಟು ಮಕ್ಕಳ ಶೇ. ೮೬.೧೦ರಷ್ಟಾದರೆ ೮ರಿಂದ ೧೦ನೆಯ ತರಗತಿವರೆಗಿನ ಮಕ್ಕಳ ಪ್ರಮಾಣ ಶೇ. ೧೩.೯೦. ಆದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಇವೆರಡೂ ಹಂತಗಳ ನಡುವಿನ ಅನುಪಾತವು ೭೬.೩೪ : ೨೩.೬೬ರಷ್ಟಿದೆ. ವಿವರಗಳಿಗೆ ಕೋಷ್ಟಕ-೫ ನೋಡಿ.

ಕೋಷ್ಟಕ

ಕ್ರ.ಸಂ.

ವಿಭಾಗಗಳು

ದಾಖಲಾತಿ ಪ್ರಮಾಣ ಶೇಕಡ

೧-೭ನೆಯ ತರಗತಿ

೮-೧೦ನೆಯ ತರಗತಿ

೧. ಬೆಂಗಳೂರು ೭೭.೦೩ ೨೨.೯೭
೨. ಮೈಸೂರು ೭೫.೨೭ ೨೪.೭೩
೩. ದ.ಕ. ಪ್ರದೇಶ ೭೬.೩೪ ೨೩.೬೬
೪. ಬೆಳಗಾವಿ ೮೦.೯೨ ೧೯.೦೮
೫. ಗುಲಬರ್ಗಾ ೮೬.೧೦ ೧೩.೯೦
೬. ಉ.ಕ. ಪ್ರದೇಶ ೮೩.೧೪ ೧೬.೮೬
೭. ಕರ್ನಾಟಕ ೭೯.೫೧ ೨೦.೪೯

ಟಿಪ್ಪಣಿ :ಕೋಷ್ಟಕ ೨ರ ಆಧಾರದ ಮೇಲೆ ಗಣನೆ ಮಾಡಲಾಗಿದೆ.

ಈ ಕೋಷ್ಟಕವು ತುಂಬಾ ಕುತೂಹಲಕಾರಿಯಾದುದಾಗಿದೆ. ರಾಜ್ಯ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ ೧ರಿಂದ ೭ನೆಯ ತರಗತಿವರೆಗಿನ ಮಕ್ಕಳ ದಾಖಲಾತಿಯು ೮ರಿಂದ ೧೦ನೆಯ ತರಗತಿವರೆಗಿನ ದಾಖಲಾತಿ ಪ್ರಮಾಣಕ್ಕಿಂತ ಅಧಿಕವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಇವೆರಡರ ಪರಿಮಾಣ ೭೬.೩೪:೨೩.೬೬ರಷ್ಟಿದೆ. ಗುಲಬರ್ಗಾ ವಿಭಾಗದಲ್ಲಿ ಇದರ ಪರಿಮಾಣ ೮೬.೧೦:೧೩.೯೦ರಷ್ಟಿದೆ. ಪ್ರಾಥಮಿಕ ಹಂತ ದಿಂದ ಪ್ರೌಢಶಾಲಾ ಹಂತಕ್ಕೆ ಸಾಗುವ ಮಕ್ಕಳ ಪ್ರಮಾಣವು ಗುಲಬರ್ಗಾ ವಿಭಾಗದಲ್ಲಿ ಉಳಿದೆಲ್ಲ ವಿಭಾಗಗಳಿಗಿಂತ ಕೆಳಮಟ್ಟದಲ್ಲಿದೆ. ಇದನ್ನು ಸರಿಪಡಿಸುವ ಅಗತ್ಯವಿದೆ.

ಕೋಷ್ಟಕ-೩ ಶಾಲಾ ದಾಖಲಾತಿಗೆ ಸಂಬಂಧಿಸಿದ ಒಟ್ಟು ಸಾಧನೆ ಹಾಗೂ ಅದರ ಪ್ರಾದೇಶಿಕ ಸ್ವರೂಪವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಕೋಷ್ಟಕದಲ್ಲಿನ ಅಂಕಿಸಂಖ್ಯೆಯ ಮೂಲಕ ಮೂರು ಮುಖ್ಯ ತಥ್ಯಗಳನ್ನು ರೂಪಿಸಬಹುದಾಗಿದೆ.

೧.   ಕರ್ನಾಟಕದಲ್ಲಿ ಇಂದು ೧ರಿಂದ ೧೦ನೆಯ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಸರಿಸುಮಾರು ೧೦೦ ಲಕ್ಷ ಇದೆ. ಆದರೆ ದಕ್ಷಿಣ ಕರ್ನಾಟಕ ಪ್ರದೇಶವು ರಾಜ್ಯದ ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಕಡಿಮೆ ಪಾಲು ರಾಜ್ಯದ ಮಕ್ಕಳ ದಾಖಲಾತಿಯಲ್ಲಿ ಪಡೆದಿದೆ. ಇದಕ್ಕೆ ಪ್ರತಿಯಾಗಿ ಉತ್ತರ ಕರ್ನಾಟಕ ಪ್ರದೇಶವು ರಾಜ್ಯದ ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಅಧಿಕ ಪಾಲನ್ನು ರಾಜ್ಯದ ಶಾಲಾಮಕ್ಕಳ ಸಂಖ್ಯೆಯಲ್ಲಿ ಪಡೆದಿದೆ. ಆದರೆ ಇಂತಹ ಹಂಚಿಕೆ ೧-೭ನೆಯ ತರಗತಿ ದಾಖಲಾತಿಗೆ ಮಾತ್ರ ಅನ್ವಯಿಸುತ್ತದೆ. ಮುಂದೆ                     ೮-೧೦ನೆಯ ತರಗತಿಯ ದಾಖಲಾತಿ ತೆಗೆದುಕೊಂಡರೆ ಪರಿಸ್ಥಿತಿ ಆಶಾದಾಯಕ ವಾಗಿಲ್ಲ. ಇಲ್ಲಿ ದಕ್ಷಿಣ ಕರ್ನಾಟಕದ ಪಾಲು ಅಧಿಕವಾಗಿದೆ ಮತ್ತು ಉತ್ತರ ಕರ್ನಾಟಕದ ಪಾಲು ಕಡಿಮೆಯಾಗಿದೆ.

೨.   ಪ್ರಾದೇಶಿಕವಾಗಿ ದಾಖಲಾದ ಮಕ್ಕಳ ಹಂಚಿಕೆಯು ಜನಸಂಖ್ಯೆಯ ಹಂಚಿಕೆಗಿಂತ ಭಿನ್ನವಾಗಿದ್ದರೆ ಅದಕ್ಕೆ ಉತ್ತರವನ್ನು ೦-೬ ವಯೋಮಾನದ ಮಕ್ಕಳ ಪ್ರಾದೇಶಿಕ ಹಂಚಿಕೆಯಲ್ಲಿ ಕಂಡುಕೊಳ್ಳಬಹುದಾಗಿದೆ.

೩.    ಪ್ರಾದೇಶಿಕವಾಗಿ ೦-೬ ವಯೋಮಾನದ ಮಕ್ಕಳ ಹಂಚಿಕೆಯ ಆಧಾರದ ಮೇಲೆ ರಾಜ್ಯದಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ಒತ್ತಡ ಯಾವ ಪ್ರದೇಶದಲ್ಲಿ ಅಧಿಕವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.

ಶಾಲಾ ದಾಖಲಾತಿಯ ದಲಿತೀಕರಣ ಪ್ರಕ್ರಿಯೆ

ಕೋಷ್ಟಕ-೪ರಲ್ಲಿ ೧ರಿಂದ ೧೦ನೆಯ ತರಗತಿಗಳಿಗೆ ಸಂಬಂಧಿಸಿದಂತೆ ಎರಡು ಹಂತಗಳಲ್ಲಿ ಪರಿಶಿಷ್ಟ (ಪ.ಜಾ.+ಪ.ಪಂ.) ಮಕ್ಕಳ ಶಾಲಾ ದಾಖಲಾತಿ ವಿವರಗಳನ್ನು ವಿಭಾಗವಾರು ನೀಡಲಾಗಿದೆ. ಈ ಕೋಷ್ಟಕದಲ್ಲೂ ಕುತೂಹಲಕಾರಿ ಸಂಗತಿಯೊಂದು ನಮ್ಮ ಗಮನ ಸೆಳೆಯುತ್ತದೆ. ಒಟ್ಟಾರೆ ನೋಡಿದಾಗ ಪರಿಶಿಷ್ಟರ ಪ್ರಮಾಣ ಜನಸಂಖ್ಯೆಯಲ್ಲಿ ಎಷ್ಟಿದೆಯೋ ಅದಕ್ಕಿಂತ ಅಧಿಕವಾಗಿ ಅವರ ಪಾಲು ೧ರಿಂದ ೧೦ನೆಯ ತರಗತಿ ದಾಖಲಾತಿಯಲ್ಲಿದೆ. ಉದಾಹರಣೆಗೆ ರಾಜ್ಯಮಟ್ಟದ ಸ್ಥಿತಿಯನ್ನು ತೆಗೆದುಕೊಂಡರೆ, ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೇ. ೨೨.೯೬. ಅದೇ ರೀತಿ ೧ರಿಂದ ೧೦ನೆಯ ತರಗತಿವರೆಗಿನ ರಾಜ್ಯದ ಒಟ್ಟು ದಾಖಲಾತಿಯಲ್ಲಿ ಪರಿಶಿಷ್ಟ ಮಕ್ಕಳ ಪ್ರಮಾಣವು ಶೇ. ೨೬.೨೯ರಷ್ಟಿದೆ. ಸಾಪೇಕ್ಷವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಲಿತ ಮಕ್ಕಳ ಪ್ರತಿನಿಧೀಕರಣವು ಉನ್ನತ ಮಟ್ಟದಲ್ಲಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ರಾಜ್ಯದ ಎಲ್ಲ ನಾಲ್ಕು ವಿಭಾಗಗಳಿಗೂ ಅನ್ವಯವಾಗುವ ಸಂಗತಿಯಾಗಿದೆ. ರಾಜ್ಯವು ಹೆಮ್ಮೆಪಟ್ಟುಕೊಳ್ಳಬಹುದಾದ ಸಾಧನೆ ಇದಾಗಿದೆ. ರಾಜ್ಯದಲ್ಲಿ ೧ರಿಂದ ೧೦ನೆಯ ತರಗತಿಗಳಲ್ಲಿ ಕಲಿಯುತ್ತಿರುವ ದಲಿತ ಮಕ್ಕಳ ಸಂಖ್ಯೆ ೨೬.೧೨ ಲಕ್ಷ. ದಲಿತರ ಒಟ್ಟು ಜನಸಂಖ್ಯೆಯಲ್ಲಿ (೧೨೧.೩೮ ಲಕ್ಷ) ೧ರಿಂದ ೧೦ನೆಯ ತರಗತಿಯವರಗೆ ಶಾಲೆ ಕಲಿಯುತ್ತಿರುವ ದಲಿತ ಮಕ್ಕಳ ಪ್ರಮಾಣ  ಶೇ. ೨೧.೫೨. ಆದರೆ ದಲಿತೇತರಿಗೆ ಸಂಬಂಧಿಸಿದಂತೆ ೧ರಿಂದ ೧೦ನೆಯ ತರಗತಿಯವರೆಗೆ ಕಲಿಯುತ್ತಿರುವ ಒಟ್ಟು ದಲಿತೇತರ ಮಕ್ಕಳು ಅವರ ಜನಸಂಖ್ಯೆಯಲ್ಲಿ ಶೇ. ೧೭.೯೮ ರಷ್ಟಿದ್ದಾರೆ. ಪ್ರಸ್ತುತ ಅಧ್ಯಯನವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಶಾಲಾ ದಾಖಲಾತಿ ಪ್ರಮಾಣವು ಉತ್ತಮ ಮಟ್ಟದಲ್ಲಿರುವುದನ್ನು ದೃಢಪಡಿಸುತ್ತದೆ.

ಇದು ಅಖಂಡವಾಗಿ ಶಾಲಾ ದಾಖಲಾತಿಯನ್ನು ಪರಿಶೀಲಿಸಿದಾಗ ಕಂಡುಬರುವ ಸಂಗತಿ ಯಾಗಿದೆ. ಆದರೆ ಶಾಲಾ ದಾಖಲಾತಿಯನ್ನು ಪ್ರಾಥಮಿಕ (೧-೭) ಮತ್ತು ಪ್ರೌಢ (೮-೧೦)ವೆಂದು ವರ್ಗೀಕರಿಸಿದಾಗ ಕಂಡುಬರುವ ಸ್ಥಿತಿಯು ಭಿನ್ನವಾಗುತ್ತದೆ. ಕೋಷ್ಟಕ-೪ರಲ್ಲಿ ತೋರಿಸಿರುವಂತೆ ೧-೭ನೆಯ ತರಗತಿಗೆ ಸಂಬಂಧಿಸಿದಂತೆ ಒಟ್ಟು ದಾಖಲಾತಿಯಲ್ಲಿ ಪರಿಶಿಷ್ಟರ ಪ್ರಮಾಣ ಶೇ. ೨೭.೩೯ರಷ್ಟಿದೆ. ಆದರೆ ೮-೧೦ನೆಯ ಪ್ರೌಢ ಶಾಲೆಗಳನ್ನು ತೆಗೆದುಕೊಂಡರೆ ಅಲ್ಲಿನ ಒಟ್ಟು ದಾಖಲಾತಿಯಲ್ಲಿ ದಲಿತರ ಪ್ರಮಾಣ ಕೇವಲ ಶೇ. ೨೨.೧೦. ಉನ್ನತ ತರಗತಿಗಳಿಗೆ ಸಾಗಿದಂತೆ ದಲಿತರ ಪ್ರಮಾಣವು ಕಡಿಮೆಯಾಗುತ್ತದೆ.

ಇಷ್ಟಾದರೂ, ಒಟ್ಟು ಚಿತ್ರವು ಪ್ರೋತ್ಸಾಹದಾಯಕವಾಗಿದೆ. ಏಕೆಂದರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಪ್ರತಿನಿಧೀಕರಣವನ್ನು ೧-೧೦ನೆಯ ತರಗತಿಗಳ ದಾಖಲಾತಿಯಲ್ಲಿ ಕಾಣಬಹುದಾಗಿದೆ. ಇದನ್ನೇ ಇಲ್ಲಿ ಶಾಲಾ ದಾಖಲಾತಿಯ ದಲಿತೀಕರಣವೆಂದು ಕರೆಯಲಾಗಿದೆ. ಈ ಸಂಗತಿಯನ್ನು ಸ್ವಲ್ಪ ಎಚ್ಚರಿಕೆ ಯಿಂದ ಪರಿಗಣಿಸಬೇಕಾಗಿದೆ. ಒಟ್ಟು ದಾಖಲಾತಿಗೆ ಸಂಬಂಧಿಸಿದಂತೆ ಪ್ರಾದೇಶಿಕವಾಗಿ ನಮಗೆ ಇಂತಹ ಚಿತ್ರ ಕಂಡುಬಂದಿದೆ. ಜಾತಿ ಸ್ವರೂಪಕ್ಕೆ ಸಂಬಂಧಿಸಿದಂತೆ ದಲಿತೀಕರಣ ಪ್ರಕ್ರಿಯೆ ಕಂಡುಬಂದಿದೆ. ಇದನ್ನು ಕುರಿತಂತೆ ವಿಸ್ತೃತವಾದ ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.

ದಲಿತೀಕರಣದ ಅವರೋಹಣ ಗತಿ

ಕೋಷ್ಟಕ-೫ರಲ್ಲಿ ಸ್ಪಷ್ಟವಾಗಿರುವಂತೆ ಒಟ್ಟು ದಾಖಲಾತಿಯಲ್ಲಿ ಪರಿಶಿಷ್ಟರ ಪ್ರಮಾಣವು ಅವರು ಜನಸಂಖ್ಯೆಯಲ್ಲಿ ಪಡೆದಿರುವ ಪ್ರಮಾಣಕ್ಕಿಂತ ಅಧಿಕವಿದೆ. ಇದೊಂದು ಸ್ವಾಗತಾರ್ಹವಾದ ಸಂಗತಿಯಾಗಿದೆ. ಆದರೆ ಪ್ರೌಢಶಾಲೆಯ ಹಂತಕ್ಕೆ ಸಾಗಿದಾಗ ದಲಿತ ಮಕ್ಕಳ ಪ್ರಮಾಣವು ಕಡಿಮೆಯಾಗುತ್ತದೆ. ಇದನ್ನು ಪ್ರಸ್ತುತ ಅಧ್ಯಯನದ ಸಂದರ್ಭದಲ್ಲಿ ದಲೀತಕರಣದ ಅವರೋಹಣ ಗತಿ ಎಂದು ಕರೆಯಲಾಗಿದೆ.

ಶಾಲಾ ದಾಖಲಾತಿಯ ದಲಿತೀಕರಣ: ಕರ್ನಾಟಕ (೨೦೦೫)

ಕೋಷ್ಟಕ

ವಿಭಾಗಗಳು ಪ್ರದೇಶಗಳು ರಾಜ್ಯ

ಜನಸಂಖ್ಯೆ (ಲಕ್ಷಗಳಲ್ಲಿ) ೨೦೦೧

ಪರಿಶಿಷ್ಟರ ಜನಸಂಖ್ಯೆ (ಲಕ್ಷಗಳಲ್ಲಿ) ೨೦೦೧

೧ ರಿಂದ ೭ನೆಯ ತರಗತಿ

ದಾಖಲಾತಿ (ಲಕ್ಷಗಳಲ್ಲಿ) ೮ ರಿಂದ ೧೦ನೆಯ ತರಗತಿ

ಒಟ್ಟು ತರಗತಿ ೧-೧೦

  ಒಟ್ಟು ದಾಖಲಾತಿ ಪರಿಶಿಷ್ಟರ ದಾಖಲಾತಿ   ಒಟ್ಟು ದಾಖಲಾತಿ ಪರಿಶಿಷ್ಟರ ದಾಖಲಾತಿ   ಒಟ್ಟು ದಾಖಲಾತಿ ಪರಿಶಿಷ್ಟರ ದಾಖಲಾತಿ
ಬೆಂಗಳೂರು ೧೮೪.೯೧ ೪೩.೯೩

(೨೩.೭೫)

೨೫.೨೯ ೭.೫೩

(೨೯.೭೭)

೭.೫೪ ೧.೯೧

(೨೫.೩೩)

೩೨.೮೪ ೯.೪೪

(೨೮.೭೪)

ಮೈಸೂರು ೧೧೭.೯೧ ೨೩.೭೬

(೨೦.೧೫)

೧೫.೨೭ ೩.೬೨

(೨೩.೭೧)

೫.೦೨ ೧.೦೩

(೨೦.೫೨)

೨೦.೨೯ ೪.೬೩

(೨೨.೮೨)

ದ.ಕ.ಪ್ರ. ೩೦೨.೮೨ ೬೭.೬೯

(೨೨.೩೫)

೪೦.೫೬ ೧೧.೧೫

(೨೭.೪೯)

೧೨.೫೬ ೨.೯೪

(೨೩.೪೦)

೫೩.೧೩ ೧೪.೦೭

(೨೬.೪೮)

ಬೆಳಗಾವಿ ೧೩೦.೪೨ ೨೩.೩೪

(೧೭.೮೯)

೨೧.೪೧ ೪.೩೯

(೨೦.೫೦)

೫.೦೫ ೦.೮೪

(೧೬.೬೩)

೨೬.೪೬ ೫.೨೩

(೧೯.೭೬)

ಗುಲಬರ್ಗಾ ೯೫.೨೬ ೩೦.೩೫

(೩೧.೮೬)

೧೭.೦೨ ೬.೧೦

(೩೫.೮೪)

೨.೭೫ ೦.೭೨

(೨೬.೧೮)

೧೯.೭೬ ೬.೮೨

(೩೪.೫೧)

ಉ.ಕ. ಪ್ರದೇಶ ೨೨೫.೬೮ ೫೩.೬೯

(೨೩.೭೯)

೩೮.೪೩ ೧೦.೪೯

(೨೭.೨೯)

೭.೮೦ ೧.೫೬

(೨೦.೦೦)

೪೬.೨೨ ೧೨.೦೫

(೨೬.೦೭)

ರಾಜ್ಯ ೫೨೮.೫೦ ೧೨೧.೩೮

(೨೨.೯೬)

೭೮.೯೯ ೨೧.೬೪

(೨೭.೩೯)

೨೦.೩೬ ೪.೫

(೨೨.೧೦)

೯೯.೩೫ ೨೬.೧೨

(೨೬.೨೯)

ಮೂಲ:ಕರ್ನಾಟಕ ಸರ್ಕಾರ ೨೦೦೫:ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ : ೨೦೦೫

ವಿವಿಧ ತರಗತಿಗಳಲ್ಲಿ ದಲಿತೀಕರಣದ ಪ್ರಮಾಣ

ಕೋಷ್ಟಕ

ವಿವರ

ಒಂದನೆಯ

ತರಗತಿ

ಏಳನೆಯ

ತರಗತಿ

ಹತ್ತನೆಯ

ತರಗತಿ

ಒಟ್ಟು ದಾಖಲಾತಿ

೧-೧೦

ಒಟ್ಟು ದಾಖಲಾತಿ ೧,೧೫೭,೮೭೮ ೧,೦೧೫,೦೬೦ ೫೫೭,೭೫೫ ೯,೯೩೬,೬೧೧
(೧೧.೬೫) (೧೦.೨೨) (೫.೬೧)  
[೧೦೦.೦೦] [೧೦೦.೦೦] [೧೦೦.೦೦] [೧೦೦.೦೦]
ದಲಿತೇತರರ ೮೩೨,೩೪೪ ೭೬೧,೪೬೯ ೪೪೦೨೧೯ ೭,೩೨೯,೩೬೬
ದಾಖಲಾತಿ (೧೧.೩೬) (೧೦.೩೯) (೬.೦೧)  
[೭೧.೮೯] [೭೫.೦೨] [೭೮.೯೨] [೭೩.೭೬]
ದಲಿತರ ೩೨೫,೫೩೪ ೨೫೩,೫೯೧, ೧೧೭೫೩೬ ೨,೬೦೭,೨೪೫
ದಾಖಲಾತಿ (೧೨.೪೮) (೯.೭೨) (೪.೫೧)  
[೨೮.೧೧] [೨೪.೯೮] [೨೧.೦೮] [೨೬.೨೪]

ಟಿಪ್ಪಣೆ : ದುಂಡಗಿರುವ ಆವರಣದಲ್ಲಿರುವ ಅಂಕಿಗಳು ೧-೧೦ನೆಯ ತರಗತಿಯ ಒಟ್ಟು ದಾಖಲಾತಿಯಲ್ಲಿ ದಲಿತರು ಹಾಗೂ ದಲಿತೇತರರ ಪ್ರಮಾಣವನ್ನು ತೋರಿಸಿದರೆ ಚೌಕಾಕಾರದ ಆವರಣದಲ್ಲಿರುವ ಅಂಕಿಗಳು ಸಂಬಂಧಿಸಿದ ತರಗತಿಯ ದಾಖಲಾತಿಯಲ್ಲಿದಲಿತರು ಹಾಗೂ ದಲಿತೇತರರ ಪ್ರಮಾಣವನ್ನು ತೋರಿಸುತ್ತವೆ.

ಮೂಲ : ಕರ್ನಾಟಕ ಸರ್ಕಾರ ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿಅಂಶ, ೨೦೦೫

ಕೋಷ್ಟಕ-೭ ತುಂಬಾ ಕುತೂಹಲಕಾರಿ ಸಂಗತಿಯೊಂದನ್ನು ನಮಗೆ ತೋರಿಸುತ್ತದೆ. ರಾಜ್ಯದ ೧-೧೦ರವರೆಗಿನ ಒಟ್ಟು ದಾಖಲಾತಿಯಲ್ಲಿ ಒಂದನೆಯ ತರಗತಿಯಲ್ಲಿನ ಮಕ್ಕಳ ಪ್ರಮಾಣ ಶೇ. ೧೧.೬೫ರಷ್ಟಾದರೆ ಏಳನೆಯ ತರಗತಿಯಲ್ಲಿನ ಪ್ರಮಾಣ ಶೇ. ೧೦.೨೨. ಆದರೆ ಹತ್ತನೆಯ ತರಗತಿಯಲ್ಲಿನ ಪ್ರಮಾಣ ಕೇವಲ ಶೇ. ೫.೬೧. ಒಟ್ಟು ದಾಖಲಾತಿಯನ್ನು ದಲಿತರು ಮತ್ತು ದಲಿತೇತರರ ದಾಖಲಾತಿಯಾಗಿ ವರ್ಗೀಕರಿಸಿ ನೋಡಿದಾಗ ನಮಗೆ ಬೇರೆ ಚಿತ್ರ ಎದುರಾಗುತ್ತದೆ. ರಾಜ್ಯದಲ್ಲಿ ೨೦೦೫ರಲ್ಲಿ ದಲಿತೇತರರ ದಾಖಲಾತಿ ೭೩.೨೯ ಲಕ್ಷ. ಇವರಲ್ಲಿ ಒಂದನೆಯ ತರಗತಿಯಲ್ಲಿನ ಮಕ್ಕಳ ಪ್ರಮಾಣ ಶೇ. ೧೧.೩೬ ಹಾಗೂ ಏಳನೆಯ ತರಗತಿಯಲ್ಲಿನ ಮಕ್ಕಳ ಪ್ರಮಾಣ ಶೇ. ೧೦.೩೯. ಪ್ರೌಢ ಶಿಕ್ಷಣದ ಕೊನೆಯ ಹಂತವಾದ ಹತ್ತನೆಯ ತರಗತಿಯಲ್ಲಿನ ಈ ಮಕ್ಕಳ ಪ್ರಮಾಣ ಶೇ. ೬.೦೧.

ಒಟ್ಟು ದಾಖಲಾತಿ ಹಾಗೂ ದಲಿತೇತರರ ದಾಖಲಾತಿಗೆ ಭಿನ್ನವಾದ ಚಿತ್ರ ದಲಿತ ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಕಂಡುಬರುತ್ತದೆ. ದಲಿತರ ರಾಜ್ಯಮಟ್ಟದ ಒಟ್ಟು ದಾಖಲಾತಿ ೨೬.೦೭ ಲಕ್ಷ. ಇವರಲ್ಲಿ ಒಂದನೆಯ ತರಗತಿಯಲ್ಲಿನ ದಲಿತ ಮಕ್ಕಳ ಪ್ರಮಾಣ ಶೇ. ೧೨.೪೮. ಮುಂದೆ ಏಳನೆಯ ತರಗತಿಯಲ್ಲಿ ಅದರ ಪ್ರಮಾಣ ಶೇ. ೯.೭೨. ಆದರೆ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಹತ್ತನೆಯ ತರಗತಿಯಲ್ಲಿ ದಲಿತ ಮಕ್ಕಳ ಪ್ರಮಾಣ ಕೇವಲ ಶೇ. ೪.೫೧. ಆದರೆ ದಲಿತೇತರ ಮಕ್ಕಳ ದಾಖಲಾತಿ ಚಿತ್ರವು ಇದಕ್ಕಿಂತ ಭಿನ್ನವಾಗಿದೆ. ಒಟ್ಟು ೧ರಿಂದ ೧೦ನೆಯ ತರಗತಿಗಳಲ್ಲಿರುವ ದಲಿತೇತರ ಮಕ್ಕಳ ಸಂಖ್ಯೆ ೭೩.೨೯ ಲಕ್ಷ. ಇವರಲ್ಲಿ ಒಂದನೆಯ ತರಗತಿಯಲ್ಲಿರುವ ಮಕ್ಕಳ ಪ್ರಮಾಣ ಶೇ. ೧೧.೩೬, ಏಳನೆಯ ತರಗತಿಯಲ್ಲಿರುವವರ ಪ್ರಮಾಣ ಶೇ. ೧೦.೩೯ ಮತ್ತು ಹತ್ತನೆಯ ತರಗತಿಯಲ್ಲಿರುವವರ ಪ್ರಮಾಣ ಶೇ. ೬.೦೧.

ಅದೇ ರೀತಿ ಒಂದನೆಯ ತರಗತಿಯ ಒಟ್ಟು ದಾಖಲಾತಿಯಲ್ಲಿ ದಲಿತ ಮಕ್ಕಳ ಪ್ರಮಾಣ ಶೇ. ೨೮.೧೧ ರಷ್ಟಿದ್ದರೆ ಏಳನೆಯ ತರಗತಿಯ ಒಟ್ಟು ದಾಖಲಾತಿಯಲ್ಲಿ ಅವರ ಪ್ರಮಾಣ ೨೪.೯೮. ಆದರೆ ಹತ್ತನೆಯ ತರಗತಿಯ ಒಟ್ಟು ದಾಖಲಾತಿಯಲ್ಲಿ ದಲಿತ ಮಕ್ಕಳ ಪ್ರಮಾಣ ಕೇವಲ ಶೇ. ೨೧.೦೮. ಹೀಗೆ ಉನ್ನತ ತರಗತಿಗಳಿಗೆ ಸಾಗಿದಂತೆ ದಲಿತರ ಪ್ರಮಾಣ ಕಡಿಮೆ ಯಾಗುವ ಪ್ರಕ್ರಿಯೆಯನ್ನು ‘ದಲಿತೀಕರಣದ ಅವರೋಹಣ ಬೆಳವಣಿಗೆ’ ಎಂದು ಕರೆಯ ಲಾಗಿದೆ. ಇದು ಅನೂಚಾನವಾಗಿ ಹರಿದುಕೊಂಡು ಬಂದಿರುವ ಸಾಮಾಜಿಕ ಅಸಮಾನತೆಯ ಪರಿಣಾಮವಾಗಿದೆ. ಯಾವುದನ್ನು ಡ್ರೀಜ್-ಸೆನ್ ಅವರು ‘ಅನೂಚಾನವಾಗಿ ಹರಿದುಕೊಂಡು ಬಂದಿರುವ ಅಸಮಾನತೆ’ಯೆಂದು ಕರೆದಿದ್ದಾರೋ (೨೦೦೨:೩೪೩) ಅದನ್ನು ನಿವಾರಿಸುವ ಕಡೆಗೆ ಇಂದು ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಈ ಬಗೆಯ ಅಸಮಾನತೆಯನ್ನು ವಿಮಲಾ ರಾಮಚಂದ್ರನ್ ಅವರು (೨೦೦೪) ‘ಸಾಮಾಜಿಕ ಶ್ರೇಣೀಕರಣ’ ವೆಂದು ಕರೆದಿದ್ದಾರೆ. ಪ್ರಾಥಮಿಕ ಶಿಕ್ಷಣವು ಇಂದು ಮುಖ್ಯವಾಗಿ ಎದುರಿಸಬೇಕಾದ ಸಮಸ್ಯೆಯೆಂದರೆ ಸಮಾಜದಲ್ಲಿ ಅಂಚಿಗೆ ದೂಡಲ್ಪಟ್ಟ ಜನರನ್ನು ಒಳಗೊಳ್ಳುವುದಾಗಿದೆ. ದಲಿತೀಕರಣವು ಕೆಳಹಂತದಲ್ಲಿ ನಡೆಯುತ್ತಿದೆ. ಆದರೆ ಉನ್ನತ ಹಂತವನ್ನು ಅದಿನ್ನೂ ಪ್ರವೇಶಿಸಿಲ್ಲ. ಈ ಬಗ್ಗೆ ಪ್ರಸ್ತುತ ಅಧ್ಯಯನವು ಬೆಳಕು ಚೆಲ್ಲುತ್ತದೆ.

ದಾಖಲಾತಿಯ ಲಿಂಗ ಸ್ವರೂಪ

ಶಾಲಾ ದಾಖಲಾತಿಯ ಲಿಂಗ ಸ್ವರೂಪವನ್ನು ಸರಳವಾದ ‘ಲಿಂಗ ಸಮಾನತಾ ಸೂಚಿ’ ಎಂಬ ಮಾಪನದ ಮೂಲಕ ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಸೂಚಿಯು ದಾಖಲಾತಿಗೆ ಸಂಬಂಧಿಸಿದಂತೆ ಮಹಿಳೆಯರ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಈ ಸೂಚಿಯ ಆಧಾರದ ಮೇಲೆ ಹೆಣ್ಣುಮಕ್ಕಳ ಶಾಲಾಶಿಕ್ಷಣದ ಸಾಧನೆಯನ್ನು ಗುರುತಿಸ ಬಹುದಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ದಾಖಲಾತಿಯಲ್ಲಿ ಲಿಂಗ ಸಮಾನತಾ ಸೂಚಿ : ೨೦೦೪೦೫

ಕೋಷ್ಟಕ

ವಿಭಾಗಗಳು ಪ್ರದೇಶ ರಾಜ್ಯ

ಲಿಂಗ ಸಮಾನತಾ ಸೂಚಿ

೧-೭

೮-೧೦

೧-೧೦

ಬೆಂಗಳೂರು ವಿಭಾಗ ೯೪.೯೧ ೮೯.೯೬ ೯೩.೭೫
ಮೈಸೂರು ವಿಭಾಗ ೯೪.೫೮ ೯೪.೬೭ ೯೪.೬೦
ದಕ್ಷಿಣ ಕನ್ನಡ ಪ್ರದೇಶ ೯೪.೭೯ ೯೧.೮೧ ೯೪.೦೮
ಬೆಳಗಾವಿ ೯೨.೭೨ ೭೮.೭೦ ೮೯.೮೮
ಗುಲಬರ್ಗಾ ೮೯.೮೬ ೭೫.೨೩ ೮೭.೬೯
ಉತ್ತರ ಕನ್ನಡ ಪ್ರದೇಶ ೯೧.೪೪ ೭೭.೪೬ ೮೮.೯೩
ಕರ್ನಾಟಕ ರಾಜ್ಯ ೯೩.೧೪೭ ೮೬.೦೫ ೯೧.೬೫

ಮೂಲ:ಅನುಬಂಧ ಕೋಷ್ಟಕ-೧, ೨ ಮತ್ತು ೩ರಿಂದ ಪಡೆಯಲಾಗಿದೆ.

ಕೋಷ್ಟಕ-೮ರಲ್ಲಿ ೧-೭ ಹಾಗೂ ೮-೧೦ನೆಯ ತರಗತಿಗಳಲ್ಲಿನ ಪುರುಷರ ದಾಖಲಾತಿಗೆ ಸಾಪೇಕ್ಷವಾಗಿ ಹೆಣ್ಣುಮಕ್ಕಳ ಪ್ರಮಾಣ ಎಷ್ಟಿದೆ ಎಂಬುದನ್ನು ತೋರಿಸಲಾಗಿದೆ. ಬಹಳ ಸ್ಪಷ್ಟವಾಗಿ ಗೋಚರಿಸುವ ಸಂಗತಿಯೆಂದರೆ ಲಿಂಗ ಸಮಾನತಾ ಸೂಚಿಯ ಮಟ್ಟವು ೧- ೭ನೆಯ ತರಗತಿಗಳಲ್ಲಿ ಅಧಿಕವಿದ್ದು ೮-೧೦ನೆಯ ತರಗತಿಗಳಲ್ಲಿ ಅದು ಕಡಿಮೆಯಿದೆ. ಎರಡನೆಯದಾಗಿ ಪ್ರದೇಶ-ವಿಭಾಗವೊಂದರ ಅಭಿವೃದ್ದಿ ಮಟ್ಟಕ್ಕೂ ಮತ್ತು ಅದಕ್ಕೆ ಸಂಬಂಧಿಸಿದ ಸೂಚಿಯ ಪ್ರಮಾಣಕ್ಕೂ ಸಂಬಂಧವಿರುವಂತೆ ಕಾಣುತ್ತದೆ. ರಾಜ್ಯದಲ್ಲಿ ತೀವ್ರ ಅಭಿವೃದ್ದಿ ಹೊಂದಿದ ಮೈಸೂರು ವಿಭಾಗದಲ್ಲಿ ಸೂಚಿಯು ಅಧಿಕ ಮಟ್ಟದಲ್ಲಿದೆ ಹಾಗೂ ೧-೭, ೮-೧೦ ಹಾಗೂ ೧-೧೦ ಹೀಗೆ ಮೂರು ಹಂತದಲ್ಲೂ ಅದು ಏಕರೂಪಿಯಾಗಿದೆ. ಇದೊಂದು ವಿಶಿಷ್ಟ ಸಾಧನೆಯಾಗಿದೆ.

ಆದರೆ ಅತ್ಯಂತ ಕನಿಷ್ಟ ಸೂಚಿಯಿರುವ ಗುಲಬರ್ಗಾ ವಿಭಾಗದಲ್ಲಿ ೧-೭ನೆಯ ಹಾಗೂ ೮-೧೦ನೆಯ ತರಗತಿಗಳ ನಡುವೆ ತೀವ್ರ ವ್ಯತ್ಯಾಸವಿರುವುದನ್ನು ಗಮನಿಸಬಹುದು. (ಶೇ. ೧೪.೬೩ ಅಂಶಗಳಷ್ಟು ವ್ಯತ್ಯಾಸವಿದೆ.) ಲಿಂಗ ಸಮಾನತೆ ಮತ್ತು ಅಭಿವೃದ್ದಿಯ ಗತಿಗಳ ನಡುವೆ ಸಂಬಂಧವಿರುವುದು ಇದರಿಂದ ತಿಳಿದುಬರುತ್ತದೆ. ಆದರೆ ಇದನ್ನು ಸಮೀಕರಣದ ರೀತಿಯಲ್ಲಿ ಪ್ರತಿಪಾದಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅಭಿವೃದ್ದಿಯ ಗತಿ ಉನ್ನತ ಮಟ್ಟಕ್ಕೇರಿದಂತೆ ಲಿಂಗ ಸಮಾನತೆ ಉಂಟಾಗುತ್ತದೆ ಎಂಬುದಕ್ಕೆ ನಮಗೆ ಖಚಿತವಾದ ಆಧಾರಗಳೇನಿಲ್ಲ.


[1]

ಜಿಲ್ಲೆಗಳು ಸಾಕ್ಷರತಾ ಪ್ರಮಾಣ (೨೦೦೧) ತಲಾ ಒಟ್ಟು ದೇಶೀಯ ಉತ್ಪನ್ನ ೧೯೯೯-೨೦೦೦ (ಚಾಲ್ತಿ ಬೆಲೆ)
ಪುರುಷ ಮಹಿಳೆ ಒಟ್ಟು
ಅಭಿವೃದ್ದಿ ಹೊಂದಿದ ಜಿಲ್ಲೆಗಳು
ದಕ್ಷಿಣ ಕನ್ನಡ ೮೯.೭ ೭೭.೨ ೮೩.೪ ರೂ. ೩೯೮೧೭
ಉಡುಪಿ ೮೮.೨ ೭೫.೨ ೮೧.೨ ರೂ. ೧೯೨೦೮
ಶಿವಮೊಗ್ಗ ೮೨.೦ ೬೬.೯ ೭೪.೫ ರೂ. ೧೯೩೪೯
ಹಿಂದುಳಿದ ಜಿಲ್ಲೆಗಳು
ಗುಲಬರ್ಗಾ ೬೧.೮ ೩೭.೯ ೫೦.೦ ರೂ. ೧೩೪೪೬
ಕೊಪ್ಪಳ ೬೮.೪ ೩೯.೬ ೫೪.೧ ರೂ. ೧೩೭೮೯
ರಾಯಚೂರು ೬೧.೫ ೩೫.೯ ೪೮.೮ ರೂ. ೧೧೩೪೪

ಮೂಲ:ಕರ್ನಾಟಕ ಸರ್ಕಾರ, ೨೦೦೨, ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್, ಕರ್ನಾಟಕ, ೧೯೯೩-೯೪ರಿಂದ ೨೦೦೦-೨೦೦೧, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು, ಜನಗಣತಿ ವರದಿ, ೨೦೦೧

ಈ ಕೋಷ್ಟಕದಲ್ಲಿ ಕಂಡುಬರುವಂತೆ ಸಾಕ್ಷರತೆಯಲ್ಲಿ ಉನ್ನತ ಮಟ್ಟ ಸಾಧಿಸಿಕೊಂಡಿರುವ ಜಿಲ್ಲೆಗಳು ಆರ್ಥಿಕವಾಗಿಯೂ ಉನ್ನತ ಮಟ್ಟ ಸಾಧಿಸಿಕೊಂಡಿವೆ. ಕರ್ನಾಟಕ ರಾಜ್ಯದ ತಲಾ ಒಟ್ಟು ದೇಶೀಯ ಉತ್ಪನ್ನವು ೧೯೯೯-೨೦೦೦ದಲ್ಲಿ ರೂ. ೧೮೫೬೧ (ಚಾಲ್ತಿ ಬೆಲೆಗಳಲ್ಲಿ). ಹಿಂದುಳಿದ ಜಿಲ್ಲೆಗಳಲ್ಲಿ ಸಾಕ್ಷರತೆ ಮಟ್ಟವು ಕನಿಷ್ಟವಾಗಿದೆ ಮತ್ತು ತಲಾ ಒಟ್ಟು ದೇಶೀಯ ಉತ್ಪನ್ನವೂ ಕೆಳಮಟ್ಟದಲ್ಲಿದೆ.

[2]      ಕರ್ನಾಟಕದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ೦-೬ ವಯೋಮಾನದ ಮಕ್ಕಳ ಪ್ರಮಾಣದ ವಿವರವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ವಿಭಾಗಗಳು

ಒಟ್ಟು ಜನಸಂಖ್ಯೆಯಲ್ಲಿ ೦-೬

ವಯೋಮಾನದ ಮಕ್ಕಳ ಪ್ರಮಾಣ

ಬದಲಾವಣೆ ಪ್ರಮಾಣ

೧೯೯೧

೨೦೦೧

೧೯೯೧-೨೦೦೧ (ಶೇಕಡ)

ಬೆಂಗಳೂರು ವಿಭಾಗ ೧೫.೪೦ ೧೭.೭೫ + ೧೫.೨೫
ಮೈಸೂರು ವಿಭಾಗ ೧೪.೪೯ ೧೧.೨೦ – ೨೨.೭೦
ದ.ಕ. ಪ್ರದೇಶ ೧೫.೧೫ ೧೧.೫೩ – ೨೩.೮೯
ಬೆಳಗಾವಿ ವಿಭಾಗ ೧೭.೫೪ ೧೪.೦೫ – ೧೯.೮೯
ಗುಲಬರ್ಗಾ ವಿಭಾಗ ೨೦.೨೨ ೧೫.೯೨ – ೨೧.೨೬
ಉ.ಕ. ಪ್ರದೇಶ ೧೮.೬೪ ೧೪.೮೪ – ೨೦.೩೮
ಕರ್ನಾಟಕ ರಾಜ್ಯ ೧೬.೬೩ ೧೨.೯೪ – ೨೨.೧೮

ಎರಡೂ ಕಾಲಘಟ್ಟಗಳಲ್ಲಿ ೦-೬ ವಯೋಮಾನದ ಮಕ್ಕಳ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿರುವುದು ಉತ್ತರ ಕರ್ನಾಟಕ ಪ್ರದೇಶದಲ್ಲಿ ಎಂಬುದು ಕೋಷ್ಟಕದಿಂದ ತಿಳಿಯುತ್ತದೆ. ಉತ್ತರ ಕರ್ನಾಟಕ ಪ್ರದೇಶದ ಜನಸಂಖ್ಯೆಯು ದಕ್ಷಿಣ ಕರ್ನಾಟಕ ಪ್ರದೇಶದ ಜನಸಂಖ್ಯೆಗಿಂತ ಹೆಚ್ಚು ಎಳೆತನದಿಂದ ಕೂಡಿರುವುದು ಸ್ಪಷ್ಟವಾಗಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯುವ ಕಾರ್ಯಕ್ರಮದ ದೃಷ್ಟಿಯಿಂದ ಮೇಲಿನ ಸಂಗತಿಯು ತುಂಬಾ ಮುಖ್ಯವಾಗಿದೆ (ವಿವರವಾದ ಚರ್ಚೆಗೆ ನೋಡಿ:ಚಂದ್ರಶೇಖರ ಟಿ.ಆರ್., ೨೦೦೩, ೨೭-೩೪).