ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು
ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು
ಮೇಘವರ್ಣಚ್ಛಾಯೆಯೀ ಸೃಷ್ಟಿಯಿಂ ನಮ್ಮೊ-
ಳಾಗಿಹುದು ರೂಪರುಚಿ ಮಂಕುತಿಮ್ಮ
[1]

ಬೆಳಗಾಯಿತೋ ಕಗ್ಗತ್ತಲ ಬಸಿರಿನಿಂದ ಹೊಂಬೆಳಕು ತುಳುಕಿ ಬರುತ್ತದೆ. ಅದುವರೆಗೂ ಅಂಧಕಾರದಲ್ಲಿ ಲಯವಾದ ಈ ರೂಪಲೋಕದ ದೃಶ್ಯಗಳೆಲ್ಲವೂ ಮೆಲ್ಲ ಮೆಲ್ಲನೆ ಮೈದೋರುತ್ತವೆ. ದಿವದ ಬೆಳಕಿನ ಬೆರಳು ಬಂದು ಈ ಲೋಕದ ಮೇಲೆ ಕವಿದ ಕಪ್ಪು ಹೊದಿಕೆಯನ್ನು ಮೇಲೆತ್ತುತ್ತದೆ. ನವೋದಯ ಸುಂದರ ದಿನವೊಂದನ್ನು ಸೃಜಿಸುತ್ತದೆ. ಇದು ಸೃಷ್ಟಿ! ಇನ್ನು ಹಗಲು : ನೂರಾರು ನೋಟ, ನೂರಾರು ದನಿ, ನೂರಾರು ಬಗೆಯ ಚಲನೆ-ಮಾನವ ಲೋಕದಲ್ಲಿ ಮತ್ತು ಪ್ರಕೃತಿ ಲೋಕದಲ್ಲಿ. ಈ ರಂಗಮಂಟಪದಲ್ಲಿ ದಿನದ ನಾಟಕ ಕೋಟ್ಯಂತರ ನಟರಿಂದ ಅಭಿಯಿಸಲ್ಪಡುತ್ತದೆ. ಇದು ಸ್ಥಿತಿ! ಸಂಜೆಯಾಯಿತೋ ಮೆಲ್ಲಮೆಲ್ಲನೆ ಇರುಳು ಹೊರಳುತ್ತದೆ; ಹಗಲಿನ ನೋಟಗಳೆಲ್ಲ ಕ್ರಮೇಣ ಕಗ್ಗತ್ತಲ ಗರ್ಭದಲ್ಲಿ ಲಯವಾಗುತ್ತವೆ. ರೂಪಲೋಕದ ದೃಶ್ಯಗಳೆಲ್ಲಾ ಕಗ್ಗತ್ತಲ್ಲಿ ಕರಗುತ್ತವೆ. ಮೌನ ಆವರಿಸುತ್ತದೆ. ಚಿಕ್ಕೆಯ ನೊರೆಯನ್ನು ತೂರುತ್ತಾ ಇರುಳಿನ ತೆರೆಗಳು ಹೊರಳುತ್ತವೆ. ಇದು ಪ್ರಳಯ! ಸೃಷ್ಟಿ-ಸ್ಥಿತಿ-ಪ್ರಳಯ-ಋತದ ಮೂರು ಮುಖದ ಈ ವ್ಯಾಪಾರ ದಿನದಿನವೂ ಕ್ಷಣಕ್ಷಣವೂ ನಡೆಯುತ್ತಿದೆ. ಸೃಷ್ಟಿಯಿಂದ ನವೋದಯ; ಸ್ಥಿತಿಯಿಂದ ನವಾನುಭವ; ಪ್ರಳಯದಿಂದ ಮತ್ತೆ ನವೋದಯದ ನಿರ್ಮಾಣ! ಬಿಡುವಿಲ್ಲದ ಕರ್ಮಚಕ್ರ!

ಈ ಮೂರು ವ್ಯಾಪಾರಗಳ ತೆರೆಯಲ್ಲಿ ತೇಲುವ ಜೀವ ಅದರ ತರಂಗ ಮುದ್ರೆಗಳನ್ನು ತನ್ನ ಹೃದಯದಲ್ಲಿ ತಾಳುತ್ತದೆ. ಅದರ ಸೊಗಸನ್ನು ಅನುಭವಿಸುತ್ತದೆ; ಅನುಭವಿಸಿದ್ದನ್ನು ಯಾವುದೋ ರೂಪದಲ್ಲಿ ಅಭಿವ್ಯಕ್ತಗೊಳಿಸುತ್ತದೆ.

ಕಣ್ಣೆದುರು ಕಾಣುವ ನೋಟಗಳೆಲ್ಲದಕ್ಕೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಮಾಡುವ ಬಗೆಬಗೆಯ ರೂಪಗಳಿವೆ. ಪ್ರಕೃತಿ ಒಂದು ಅದ್ಭುತ ವರ್ಣಶಿಲ್ಪಿ. ಅದು ಆಕೃತಿಗಳನ್ನು ರೂಪಿಸುವುದು ರೇಖೆಗಳಿಂದ, ಬಣ್ಣಗಳಿಂದ. ಆಗಸದ ನೀಲಿಯ ಬಾಗು; ಚಂದ್ರಬಿಂಬದ ದುಂಡನೆಯ ನುಣುಪು; ತೆರೆಗಳ ಏರಿಳಿತದಲ್ಲಿ ಕಾಣುವ ವಂಕು; ಗಿಡಬಳ್ಳಿಗಳ ಬಗೆಬಗೆಯ ಬಳುಕು; ಮುಗಿಲಲ್ಲಿ ಕ್ಷಣಕ್ಷಣಕ್ಕೂ ಬೇರೆ ಬೇರೆ ರೂಪವನ್ನು ತಾಳುತ್ತಾ ಚಲಿಸುವ ಮೇಘಮಾಲೆ, ಇವುಗಳೆಲ್ಲವೂ ನಮ್ಮಲ್ಲಿ ಅವುಗಳನ್ನು ಕುರಿತು ಒಂದು ಬಗೆಯ ರೂಪರುಚಿಯನ್ನುಂಟುಮಾಡಿವೆ. ಕಣ್ಣೆದುರು ಕಾಣುವ ವಿವಿಧ ರೂಪಗಳಲ್ಲಿ ಹಲವು ನಮಗೆ ಪ್ರಿಯವಾಗುತ್ತವೆ; ಹಲವು ನಮಗೆ ಅಪ್ರಿಯವಾಗುತ್ತವೆ; ಹಲವು ಸುಖವನ್ನೂ ಉಲ್ಲಾಸವನ್ನೂ ಉಂಟುಮಾಡುತ್ತವೆ; ಹಲವು ಅಸುಖವನ್ನೂ, ಬೇಸರವನ್ನೂ ಉಂಟುಮಾಡುತ್ತವೆ. ಈ ಕಾರಣದಿಂದ ನಾವು ಇದು ಸುಂದರವಾಗಿದೆ, ಇದು ಸುಂದರವಾಗಿಲ್ಲ ಎನ್ನುತ್ತೇವೆ. ಒಂದು ದೇಶದ ಜನಕ್ಕೆ ಸುಂದರವೆಂದು ತೋರುವ ಹಲವು ವಸ್ತುಗಳು ಮತ್ತೊಂದು ದೇಶದವರಿಗೆ ವಿಕೃತವೆಂಬಂತೆ ತೋರಬಹುದು. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಗೇ ಒಂದು ಸಂದರ್ಭದಲ್ಲಿ ಸುಂದರವೆಂದು ತೋರಿದುದು ಬೇರೊಂದು ಹೊತ್ತಿನಲ್ಲಿ ಅದೇ ವಸ್ತು ಸುಂದರವಲ್ಲವೆಂಬಂತೆ ತೋರಬಹುದು. ಯಾಕೆ ಹೀಗೆ?

ಈ ಪ್ರಶ್ನೆ ಇಂದಿನದಲ್ಲ, ನಿನ್ನೆಯದಲ್ಲ, ಬಹು ಪುರಾತನವಾದುದು. ನಮ್ಮ ರೂಪರುಚಿಗೆ ಈ ಸೃಷ್ಟಿ ಮತ್ತು ಅದರ ವ್ಯಾಪಾರಗಳೇ ಗುರು. ನಮ್ಮ ರಸಿಕತೆಗೆ ಇದೇ ಸೋಜಿಗದ ಪ್ರಯೋಗಶಾಲೆ! ಈ ಪ್ರಯೋಗಶಾಲೆಯಲ್ಲಿ ವಿಕಾಸಗೊಂಡ ಒಂದೊಂದು ಪ್ರಾಣಿಯ ಇಂದಿನ ಜೀವನವೂ ಶತ ಶತಮಾನಗಳ ಕತೆಯ ಪುಸ್ತಕ. ಜೀವಜೀವದ ಮುಖಾಂತರ ಅನಂತ ಭೂತಕಾಲವು ಭವಿಷ್ಯತ್ತಿನೆಡೆ ಪ್ರವಹಿಸುತ್ತಿದೆ. ಈ ಇತಿಹಾಸವನ್ನು ಗಮನಿಸಿದರೆ ತಿಳಿಯುತ್ತದೆ, ಈ ರೂಪರುಚಿ ಕೇವಲ ಇಂದಿನದಲ್ಲ, ನಿನ್ನೆಯದಲ್ಲ, ಅನಂತ ಕಾಲದ್ದು.

ಕೆಲವು ಬಣ್ಣಗಳನ್ನು ಕಂಡೊಡನೆಯೇ ನಮ್ಮ ಕಣ್ಣು ಅರಳುತ್ತವೆ. ನಮ್ಮ ಇಂದ್ರಿಯಗಳು ಪಡಿಮಿಡಿಯುತ್ತವೆ. ನಮಗೆ ಒಂದು ಬಗೆಯ ಪ್ರಿಯವಾದ ಅನುಭವವಾಗುತ್ತದೆ. ಆಗ ಆಹ – ಎಷ್ಟು ಚಂದ ಎಂದು ಅದರ ಪರಿಭಾವನೆಗೆ ನಿಲ್ಲುತ್ತೇವೆ. ಮತ್ತೆ ಕೆಲವು ಬಣ್ಣಗಳನ್ನು ಕಂಡೊಡನೆಯೇ ನಮ್ಮ ಇಂದ್ರಿಯಗಳ ಪ್ರತಿಕ್ರಿಯೆ ಬೇರೊಂದು ತೆರನಾಗುತ್ತದೆ. ಕಣ್ಣು ಅದನ್ನು ನೋಡಲು ನಿರಾಕರಿಸಬಹುದು; ಮುಖ ಬೇರೆಡೆ ತಿರುಗಬಹುದು. ನಮಗೆ ಇದೂ ನಮ್ಮ ಪ್ರಜ್ಞೆಯ ವ್ಯಾಪಾರ ಎನ್ನುವುದು ಗೊತ್ತಾಗದಷ್ಟು ವೇಗದಲ್ಲಿ, ಆ ಕ್ಷಣದಲ್ಲಿ ಇಂದ್ರಿಯಗಳ ಪ್ರತಿಕ್ರಿಯೆ ಆ ವಸ್ತುಗಳ ಬಗೆಗೆ ಅನಾದರ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಇದು ಏಕೆ?

ಆವರಣವಾದಿಗಳು ಹೇಳುತ್ತಾರೆ: ಶತಶತಮಾನಗಳಿಂದಲೂ ಈ ಪ್ರಾಣಿ ಸೃಷ್ಟಿಯ ಪರಿಣಾಮದೊಂದಿಗೆ ತಾನೂ ವಿಕಾಸ ಹೊಂದುತ್ತ ಬಂದಿದೆ. ಕ್ರಿಯೆ-ಪ್ರತಿಕ್ರಿಯೆಗಳಿಂದ ಕೂಡಿದ ಈ ಸೃಷ್ಟಿಯ ಸಮತೋಲನ ವ್ಯಾಪಾರದಲ್ಲಿ ಉದ್ದಕ್ಕೂ ಹರಿದು ಬಂದ ಈ ಪ್ರಾಣಿಗೆ ಆವರಣದ ಪ್ರಭಾವದಿಂದ ಹಲವು ಸ್ವಭಾವಸಿದ್ಧವಾದ ಗುಣಗಳು ರೂಪುಗೊಂಡಿವೆ. ಪ್ರಕೃತಿ ನಿರ್ಮಿತವಾದ ಈ ಆವರಣದ ಅಚ್ಚಿನಲ್ಲಿ ರೂಪುಗೊಳ್ಳುವಾಗ ಅದು ಎಷ್ಟೇ ಈ ಪ್ರಭಾವದಿಂದ ತಪ್ಪಿಸಿಕೊಂಡು ಹುದುಗಲೆತ್ನಿಸಿದರೂ ಈ ಒಂದು ನಿಯಮಕ್ಕೆ ತಲೆಬಾಗಿ ಬಂದಿದೆ. ಅದರ ಅಂಗಾಂಗಗಳ ರಚನೆ ಯಾವುದೋ ಒಂದು ಕ್ರಮಬದ್ಧವಾದ ಆವರಣಕ್ಕೆ ಪಡಿಮಿಡಿಯುವುದನ್ನು ಕಲಿತುಕೊಂಡಿದೆ. ಆದುದರಿಂದಲೇ ಕಣ್ಣು ಈ ಆವರಣದ ಪ್ರಭಾವದಿಂದ ಸೃಷ್ಟಿಯ ಸಮತೋಲನದ ರಚನೆಗೆ ಚಲನೆಗೆ ಅನುಸಾರವಾಗಿ ಹೊಂದಿಕೊಂಡಿದೆ. ಕಿವಿಯೂ ಈ ಸಮತೋಲನದ ನಿಯಮಾನುಸಾರವಾದ ನಾದಲಯಗಳಿಗೆ ಹೊಂದಿಕೊಂಡಿದೆ. ಹೀಗೆಯೇ ಉಳಿದ ಅವಯವಗಳೂ ಸೃಷ್ಟಿಯ ಸಮತೋಲನದ ಒಂದು ಕ್ರಮಬದ್ಧವಾದ ನಿಯಮಗಳಿಗೆ ಅನುಸಾರವಾಗಿ ಹೊಂದಿಕೊಂಡು ಬಾಳುವುದನ್ನು ಕಲಿತಿವೆ. ಆದುದರಿಂದ ಲೋಕದ ವಸ್ತುಗಳ ಬಗೆಗೆ, ಹಲವು ನಾದಗಳ ವರ್ಣಗಳ  ಆಕೃತಿಗಳ ಬಗೆಗೆ, ಪ್ರಿಯವಾದ ಮತ್ತು ಅಪ್ರಿಯವಾದ ಭಾವಗಳನ್ನು ತಾಳಿದೆ. ಈ ಕಾರಣದಿಂದ ಪ್ರಾಣಿಗಳ ಅಂಗರಚನೆಯಲ್ಲೇ ಸುಂದರವಾದುದನ್ನು ಬಯಸುವ, ಸುಂದರವಲ್ಲದುದನ್ನು ನಿವಾರಿಸುವ ಒಂದು ವರ್ತನೆ ಕಂಡು ಬರುತ್ತದೆ.[2] ಇದು ಪ್ರಿಯ, ಅಪ್ರಿಯ – ಎಂಬ ಭಾವನೆ ಪ್ರಾಣಿಗೆ ಉಂಟಾಗಲು ಕಾರಣವನ್ನು ಈ ವಾದ ಹೀಗೆ ವಿವರಿಸುತ್ತದೆ: ಪ್ರಿಯ ಅಪ್ರಿಯ ಭಾವನೆಗಳಿಗೂ ಆವರಣವೇ ಕಾರಣ. ಒಂದು ಬಗೆಯ ಅಂಗರಚನೆಯನ್ನುಳ್ಳ ಪ್ರಾಣಿ ಯಾವುದೋ ಒಂದು ನಿರ್ದಿಷ್ಟ ಆವರಣಕ್ಕೆ ಹೊಂದಿಕೊಂಡು ಅದು ತನಗೆ ಹಿತವೆಂಬ ಸಂವೇದನೆಯನ್ನು ಹೊಂದಿದ್ದು ಕಾರಣಾಂತರದಿಂದ ಅದು ಬೇರೊಂದು ಆವರಣಕ್ಕೆ ಸ್ಥಳಾಂತರ ಹೊಂದಿ ಬದುಕಬೇಕಾಗಿ ಬಂದಾಗ, ಹಿಂದಿನ ಆವರಣದ ಅನುಕೂಲ ಇಲ್ಲಿಯೂ ದೊರೆತಾಗ ಅದನ್ನು ಇಷ್ಟವೆಂದೂ, ಆ ಆವರಣ ಒಗ್ಗದಿದ್ದಾಗ ಅನಿಷ್ಟವೆಂದೂ ಭಾವಿಸಿರಬೇಕು. ಆದುದರಿಂದ ‘ಪ್ರಿಯ’ ಎಂದರೆ ವಸ್ತುಗಳು ತನ್ನ ಮನಸ್ಸಿಗೆ ಸುಖಪ್ರದವಾಗುವಂತೆ ಇರಬೇಕು ಎಂಬ ಭಾವನೆ. ‘ಅಪ್ರಿಯ’ ಎಂದರೆ ತನ್ನ ಮನಸ್ಸಿಗೆ ಅಸುಖವೆಂಬಂತೆ ಅನುಭವವಾಗುವ, ಈ ವಸ್ತುಗಳಿಂದ ತಾನು ಪಾರಾಗಬೇಕೆಂಬ ಭಾವನೆ. ಒಂದು ವಸ್ತು ಸುಂದರವೆಂದು ತೋರಿದರೆ ಅದಕ್ಕೆ ಕಾರಣ ಈ ಭಾವನೆಯನ್ನು ವ್ಯಕ್ತಪಡಿಸುವ ಪ್ರಾಣಿ ಬಹುಕಾಲದಿಂದಲೂ ಈ ಒಂದು ಆವರಣಕ್ಕೆ ಹೊಂದಿಕೊಳ್ಳುವ ಶಾರೀರಿಕ ಸಾಮರಸ್ಯವನ್ನು ಪಡೆದಿದೆ ಎಂದು ಅರ್ಥ. ಹೀಗೆ ಪ್ರಾಣಿಯಲ್ಲಿ ಶತಶತಮಾನಗಳಿಂದಲೂ ಬಂದ ಪ್ರಿಯ-ಅಪ್ರಿಯಗಳನ್ನು ವ್ಯಕ್ತಪಡಿಸುವ ವರ್ತನೆಗಳೇ ನಮ್ಮ ಇಂದಿನ ರೂಪರುಚಿಯ ಮೂಲ[3].

ಈ ಆವರಣವಾದಿಗಳ ವಿಚಾರಸರಣಿಯೇನೋ ತುಂಬ ಸ್ವಾರಸ್ಯವಾಗಿದ್ದರೂ, ಕೇವಲ ಆವರಣಗಳಿಗೆ ಪಡಿಮಿಡಿಯುವ ದೈಹಿಕ ವರ್ತನೆಗಳನ್ನೇ ಮಾನಸಿಕ ವ್ಯಾಪಾರದ ಮೂಲ ಚೂಲಗಳೆಂದು ಒಪ್ಪುವುದು ಕಷ್ಟ. ಅದೂ ಅಲ್ಲದೆ ಹಲವು ಪ್ರಾಣಿಗಳ ವರ್ತನೆಯ ವಿಚಾರದಲ್ಲಿ ಸರಿಯಾದುದು, ಮಾನವ ಮನಸ್ಸಿನ ವಿಚಾರದಲ್ಲೂ ಸರಿಯಾಗುತ್ತದೆಂದು ಹೇಳಲು ಬರುವುದಿಲ್ಲ. ಆದರೆ ನಮ್ಮ ಸೌಂದರ್ಯಾನುಭವಕ್ಕೆ ಮೂಲವಾದ ರೂಪರುಚಿಯಲ್ಲಿ ನಾವು ಬೆಳೆದುಬಾಳಿರುವ ಆವರಣದ ಪ್ರಭಾವವೂ ಮುಖ್ಯವಾದುದೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇಷ್ಟು ಮಾತ್ರ ನಿಜ : ನಮ್ಮಲ್ಲಿ ಸಮಸ್ತ ಭೂತಕಾಲವೇ ಅನುಭವ ರೂಪದಲ್ಲಿ ನಿಂತು ವರ್ತಮಾನವನ್ನು ರೂಪಿಸುತ್ತದೆ. ‘ಭೂತ’ ಎಂದರೆ ಹಿಂದಿನ ನಮ್ಮ ಎಲ್ಲ ಅನುಭವಗಳು ಎಂದು ಅರ್ಥವಲ್ಲ. ಯಾವುದು ಆಯಾ ಸಂದರ್ಭಕ್ಕೆ ಉಚಿತವೋ ಅಷ್ಟನ್ನು ಮಾತ್ರ ನಮ್ಮ ಪ್ರಜ್ಞೆ ಬರಮಾಡಿಕೊಳ್ಳುತ್ತದೆ. ಉಳಿದವು ‘ಅಜ್ಞಾತ’ದ ತಲಾತಲದಲ್ಲಿ ಬಿದ್ದಿರುತ್ತವೆ. ಆ ಅಜ್ಞಾತದ ದೂತರಂತೆ ಬರುವ ನಮ್ಮ ಸ್ಮೃತಿಗಳು ನಮ್ಮ ಹಿಂದೆ ಒಂದು ಅದ್ಭುತ ಪರಂಪರೆ ಇರುವುದೆಂಬುದರ ಅರಿವನ್ನು ಉಂಟುಮಾಡುತ್ತವೆ. ಅವುಗಳ ನಿಷ್ಕೃಷ್ಟವಾದ ತಿಳಿವಳಿಕೆ ನಮಗಿರದಿದ್ದರೂ, ನಮ್ಮ ವರ್ತಮಾನದಲ್ಲಿ ಭೂತದ ಪ್ರಭಾವವಿದೆ ಎಂಬುದನ್ನು ನಾವು ಅಸ್ಪಷ್ಟವಾಗಿಯಾದರೂ ಅರಿತುಕೊಳ್ಳುತ್ತೇವೆ. ನಮ್ಮ ಹುಟ್ಟಿನೊಡನೆ ಹರಿದುಬರುವ ಆನುವಂಶಿಕವಾದ ಹಲವು ಸ್ವಭಾವಗಳೇ ಇದಕ್ಕೆ ಸಾಕ್ಷಿ. ಈ ಅನಂತ ಭೂತಕಾಲ ನಮ್ಮಲ್ಲಿ ಮಿಡಿಯುತ್ತಿದೆ. ಆದರೆ ಅದು ಮತ್ತೆ ಪುನರಾವರ್ತನೆಯಾಗುವುದಿಲ್ಲ. ಪುನರಾವರ್ತನೆಯಂತೆ ಹಲವು ಸಲ ಮೇಲು ನೋಟಕ್ಕೆ ತೋರಿದರೂ, ಒಳಹೊಕ್ಕು ನೋಡಿದರೆ ಹಿಂದಾಗದ ಬೇರೊಂದು ಬದಲಾವಣೆ ಮಾನವನ ಅನುಭವದಲ್ಲಿ ಗೋಚರಿಸುತ್ತದೆ. ಆವರಣ ಒಂದೇ ಆದರೂ ಸನ್ನಿವೇಶ ಒಂದೇ ಆದರೂ ಹಿಂದಿನವರಿಗಿಂತ ಇಂದಿನವರು ಅವರವರ ಜೀವನದ ಇತಿಹಾಸದ ಬೇರೊಂದು ಕ್ಷಣದಲ್ಲಿ ನಿಂತಿರುತ್ತಾರೆ. ಅಷ್ಟೇ ಅಲ್ಲ, ಈ ಕ್ಷಣದ ಅನುಭವದಿಂದ ಮುಂದಿನ ಕ್ಷಣ ನಾವು ಪಡೆಯುವ ಅದೇ ವಸ್ತುವಿನ ಅನುಭವ ಬೇರೊಂದಾಗಿರುತ್ತದೆ. ಹೀಗೆ ನಮ್ಮ ವ್ಯಕ್ತಿತ್ವ ಪೂರ್ವಾನುಭವದಿಂದ ಬೇರೆಯಾಗಿ ನಿರಂತರವೂ ಬದಲಾಯಿಸುತ್ತಾ ಹೋಗುತ್ತಿದೆ. ಆದುದರಿಂದ ಇರವು ಎಂದರೆ ನಿತ್ಯಪರಿವರ್ತನೆ; ಪರಿವರ್ತನೆ ಎಂದರೆ ಪರಿಪಕ್ವತೆಗೇರುವಿಕೆ; ಪರಿಪಕ್ವತೆಗೇರುವುದು ಎಂದರೆ ತನ್ನನ್ನು ತಾನೇ ನಿರಂತರವೂ ಸೃಷ್ಟಿಸಿಕೊಳ್ಳುವಿಕೆ.[4]

ಅನುಭವ ವ್ಯಾಪಾರ ಹೀಗಿರುವಾಗ ಶತಶತಮಾನಗಳಿಂದ ಪ್ರಾಣಿಗಳು ತೋರುವ ಪ್ರತಿಕ್ರಿಯೆಗಳಿಂದ ಮಾತ್ರ ಮಾನವ ಮನಸ್ಸಿನ ಸೌಂದರ್ಯಾಭಿರುಚಿಯ ರಹಸ್ಯವನ್ನಳೆಯುವುದು ಪ್ರಮಾದವಾಗುತ್ತದೆ.

ಹಾಗಾದರೆ ಮನಸ್ಸಿನಲ್ಲಿ ರೂಪಲೋಕದ ವಸ್ತುಗಳಿಂದಾಗುವ ಪರಿಣಾಮದ ಸ್ವರೂಪವೇನು? ಮನಶ್ಯಾಸ್ತ್ರ ಹೇಳುತ್ತದೆ: ನಮ್ಮ ಅನುಭವಗಳಿಗೆ ಕಾರಣವಾದುದು ಈ

ಲೋಕ ಮತ್ತು ಅದಕ್ಕೆ ಪಡಿಮಿಡಿಯುವ ಇಂದ್ರಿಯಗಳು. ಈ ಲೋಕವ್ಯಾಪಾರಗಳಿಗೆ ಪಡಿಮಿಡಿಯುವ ಕ್ರಿಯೆಗೆ ಅಥವಾ ಇಂದ್ರಿಯಗಳಿಗೆ ವಸ್ತುಗಳ ಇರವು ಅರಿವಾಗುವ ವ್ಯಾಪಾರಕ್ಕೆ ವೇದನೆ (Sensation) ಎನ್ನಬಹುದು. ನಮ್ಮ ಅನುಭವ ಸಂಗ್ರಹದಲ್ಲಿ ಈ ವೇದನೆಗಳ ಪಾತ್ರ ತುಂಬ ಪ್ರಮುಖವಾದುದು. ಹಲವು ವಸ್ತುಗಳಿಗೆ ಹಲವು ತೆರನಾಗಿ ತೋರುವ ಈ ಪ್ರತಿಕ್ರಿಯೆಗಳಿಗೆ ಮೂಲವಾದುದು ಸ್ವಭಾವ (instinct). ಹೀಗೆ ಸ್ವಭಾವಜನ್ಯವಾದ

ವೇದನೆಗಳ ಅಥವಾ ಐಂದ್ರಿಯ ಪ್ರತಿಕ್ರಿಯೆಗಳ ಆಧಾರದಿಂದ ಮನಸ್ಸಿನಲ್ಲಿ ಆ ವಸ್ತುವನ್ನು ಕುರಿತ ಸಂವೇದನೆ (feeling) ಉಂಟಾಗುತ್ತದೆ. ಇಂತಹ ಸಹಸ್ರಾರು ಸಂವೇದನೆಗಳು ಪ್ರಜ್ಞೆಯ ದ್ವಾರಾ ನಮ್ಮ ಸುಪ್ತಚಿತ್ತ (subconscious) ವನ್ನು ಪ್ರವೇಶಿಸಿ ಅಲ್ಲಿ ಹುದುಗಿರುತ್ತವೆ. ಹೀಗೆ ಒದಗಿದ ಸಂವೇದನೆಗಳಿಂದ ಪ್ರಜ್ಞೆ, ಆ ಸಂವೇದನೆಗಳನ್ನು ಪ್ರಚೋದಿಸುವ ವಸ್ತುಗಳನ್ನು ಕುರಿತು ಸ್ವತಂತ್ರವಾದ ಭಾವನೆ (Idea)ಗಳನ್ನು ಕಟ್ಟುತ್ತದೆ. ಇಂತಹ ಭಾವನೆಗಳು ನಮ್ಮ ಅಂತರಂಗದಲ್ಲಿ ಶತಶತಮಾನಗಳಿಂದ ಸುಪ್ತವಾಗಿ ಹರಿದುಬಂದು ನಮಗೆ ದಿನವೂ ಒದಗುವ ಅನೇಕ ಅನುಭವಗಳನ್ನು ನಿರ್ಣಯಿಸುವ ಸ್ಮೃತಿಶಕ್ತಿಯಾಗುತ್ತವೆ. ಅಷ್ಟೇ ಅಲ್ಲ, ಇಂತಹ ಭಾವಗಳು ಅಂತರಂಗದಲ್ಲಿ  ಒಂದು ಭಾವಕ್ಷೇತ್ರವನ್ನು ನಿರ್ಮಿಸಿ ದಿನವೂ ಒದಗುವ ಅನುಭವಗಳನ್ನು ಅಳೆಯುವ ಅಳತೆಗೋಲಾಗಬಹುದು; ಇಲ್ಲವೆ ಇನ್ನೂ ಹೊಸ ಹೊಸ ಅನುಭವಗಳನ್ನು ಹಳೆಯ ಅನುಭವಗಳೊಂದಿಗೆ ಹೋಲಿಸಿ, ವ್ಯತ್ಯಾಸಗಳನ್ನು ಗಮನಿಸಿ, ಪೂರ್ವಾನುಭವಗಳನ್ನು ನೂತನ ಅನುಭವಗಳೊಂದಿಗೆ ಸಮನ್ವಯಿಸಿ ಸಂಸ್ಕಾರಗೊಳಿಸಬಹುದು. ಈ ಸಂಸ್ಕಾರ ಕಾರ್ಯ ಕೇವಲ ಸ್ವಾನುಭವದಿಂದಲೇ ಆಗಬೇಕಾಗಿಲ್ಲ; ಇತರರ ಅನುಭವಗಳನ್ನು ಪರೀಕ್ಷಿಸಿ ತನ್ನದರೊಡನೆ ಹೋಲಿಸುವುದರಿಂದಲೋ, ಅಥವಾ ಕೃತಿ ರೂಪದಲ್ಲಿ ನಿಷ್ಠಿತವಾಗಿರುವ ಅನ್ಯರ ಅನುಭವದ ಅಧ್ಯಯನದಿಂದಲೋ ಆಗಬಹುದು. ಈ ಎಲ್ಲ ಆಂತರಿಕ ಕ್ರಿಯೆಯೂ ನಾವು ವಸ್ತು ಒಂದನ್ನು ನೋಡುವಾಗ ಆಗುವ ವ್ಯಾಪಾರದ ತಳಹದಿಯಾಗಿದ್ದುಕೊಂಡು ಆ ವಸ್ತುವಿನ ಬಗೆಗೆ ಪ್ರಿಯವಾದ ಅಥವಾ ಅಪ್ರಿಯವಾದ ಭಾವನೆಗಳನ್ನುಂಟುಮಾಡುತ್ತದೆ.

ಲೋಕದ ನೂರಾರು ರೂಪಗಳನ್ನು ನೋಡುವಾಗಲೂ ನಮ್ಮ ಮನಸ್ಸು ಆಕರ್ಷಿತವಾಗುತ್ತದೆ. “ಲೋಕ ವಸ್ತುಗಳನ್ನು ಲೌಕಿಕ ಉದ್ದೇಶದಿಂದ ಸುಮ್ಮನೆ ನೋಡುವ ಕಾಲದಲ್ಲಿ ಅಥವಾ ಕೇವಲ ಕೌತುಕದಿಂದ ನೋಡುವಾಗಲೂ ನಾವು ಆ ವಸ್ತುಗಳ ರೂಪದ ಮುಖ್ಯ ಲಕ್ಷಣಗಳಾದ ವರ್ಣರೇಖಾವಿನ್ಯಾಸಗಳಿಂದ ಆಕರ್ಷಿತರಾಗುತ್ತೇವೆ. ಆಗ ವಸ್ತುಗಳ ಆಕಾರ-ಲಕ್ಷಣಗಳನ್ನು ಗಮನಿಸುವ ಉದ್ದೇಶ ಪ್ರಜ್ಞಾಪೂರ್ವಕವಾಗಿ ನಮ್ಮಲ್ಲಿ ಇರದಿದ್ದರೂ, ಮನಸ್ಸು ಅಪ್ರಜ್ಞಾಪೂರ್ವಕವಾಗಿಯೇ ವಸ್ತುವಿನ ಆಕಾರ ರೇಖಾವಿನ್ಯಾಸಗಳ ಪರಸ್ಪರ ಸಂಬಂಧವನ್ನು ಗುರುತಿಸಿ ಇಟ್ಟುಕೊಳ್ಳುತ್ತದೆ. ಈ ಅನುಭವ ಪ್ರಕೃತಿವಸ್ತುವನ್ನೋ ಕಲಾಕೃತಿಯನ್ನೋ ನೋಡುವ ಕಾಲದಲ್ಲಿ ಸೇರ್ಕೆಗೊಂಡು ಅವನ ಸೌಂದರ್ಯಾನುಭವಕ್ಕೆ ಕಾರಣವಾಗುತ್ತದೆ”.[5] ಒಟ್ಟಿನಲ್ಲಿ ಒಂದು ವಸ್ತು ಚೆನ್ನಾಗಿದೆ, ಒಂದು ವಸ್ತು ಚೆನ್ನಾಗಿಲ್ಲ ಎನ್ನುವಾಗಲೂ ಅದು ವಸ್ತುವನ್ನು ಕುರಿತು ನಮ್ಮಲ್ಲಿ ಮೂಡಿದ ಒಂದು ಬಗೆಯ ಭಾವನೆಯೇ. ಆದರೆ ಪ್ರಿಯವಾದ ಭಾವನೆಯನ್ನುಂಟುಮಾಡುವ ವಸ್ತುಗಳನ್ನು ನಾವು ವಿಶೇಷವಾಗಿ ಬಯಸುತ್ತೇವೆ. ಅಪ್ರಿಯವಾದ ಭಾವನೆಗಳನ್ನುಂಟುಮಾಡುವ ವಸ್ತುಗಳನ್ನು ನಿವಾರಿಸಬಯಸುತ್ತೇವೆ, “ನಾವು ಸುಂದರವಾದ ವಸ್ತುಗಳ ಬಗೆಗೆ ಸಂಬಂಧಿಸಿದ ಸಂವೇದನೆಗಳನ್ನು ಎಷ್ಟೇ ಆಳವಾಗಿ ಪರಿಶೀಲಿಸಿದರೂ, ಅದರ ಬಗ್ಗೆ ಏನು ವಿವರಣೆ ಕೊಟ್ಟರೂ ನಮ್ಮ ಸರಳಸಾಧಾರಣವಾದ ‘ಬೇಕು, ಬೇಡ’ಗಳೇ ಅಥವಾ ಇಷ್ಟಾನಿಷ್ಟಗಳೆ ಮೂಲವೆಂಬ ಸಿದ್ಧಾಂತವನ್ನು ತಲುಪುತ್ತೇವೆ”[6] ಎಂದು ಮನಸ್‌ಶಾಸ್ತ್ರಜ್ಞರು ಹೇಳುತ್ತಾರೆ. ಆದುದರಿಂದ ಮನಸ್ಸಿಗೆ ಯಾವುದು ಇಷ್ಟವೋ ಪ್ರಿಯವೋ ಅದು ಸಂತೋಷವನ್ನು ನೀಡುತ್ತದೆ; ಯಾವುದು ಅಪ್ರಿಯವೊ ಅನಿಷ್ಟವೊ ಅದು ಬೇಸರವನ್ನೋ ವ್ಯಥೆಯನ್ನೋ ನೀಡುತ್ತದೆ. ಹೀಗೆ ಪ್ರಿಯವಾದ, ಸಂತೋಷದಾಯಕವಾದ ವಸ್ತುಗಳನ್ನು ಸುಂದರವೆಂದೂ ಅಪ್ರಿಯವಾದ ವಸ್ತುಗಳನ್ನು ಸುಂದರವಲ್ಲವೆಂದೂ ಹೇಳುತ್ತೇವೆ. ಈ ಕಾರಣದಿಂದ “ಸೌಂದರ್ಯ ಸಂವೇದನೆ ಅದು ಇನ್ನೇನಾದರೂ ಆಗಿರಲಿ, ಅದು ಸದಾ ಸುಖಾನುಭವರೂಪವಾದುದು”.[7]

ಸುಂದರವಾದ ವಸ್ತು ಸುಖವನ್ನೇನೋ ನೀಡುವುದಾದರೂ ಈ ಸುಖದ ಪರಿ ಎಂಥದು ಎನ್ನುವುದು ಮುಖ್ಯವಾದ ಅಂಶ. ಸುಂದರವಾದ ವಸ್ತುವಿಗೆ ನಮ್ಮ ಮನಸ್ಸಿನಲ್ಲಿ ಒಂದು ಬಗೆಯ ಸುಖವನ್ನುದ್ದೀಪಿಸುವ ಶಕ್ತಿಯೂ, ಸುಂದರವಾದ ವಸ್ತುವಿನ ಸಂಪರ್ಕದಿಂದ ನಮ್ಮ ಮನಸ್ಸು ಒಂದು ಬಗೆಯ ಸುಖವನ್ನನುಭವಿಸುವ ಶಕ್ತಿಯೂ ಸಹಜವಾದುದೇ. ಆದರೆ ಮನಸ್ಸು ಸುಖವನ್ನು ಪಡೆಯಲು ಕಾರಣ ಆ ವಸ್ತು ಸುಂದರವಾಗಿದೆ ಎಂಬ ಒಂದು ಕಾರಣವಲ್ಲದೆ ಬೇರೆ ಬೇರೆಯ ಕಾರಣಗಳೂ ಆ ವಸ್ತುವಿಗಿರಬಹುದಲ್ಲವೆ? ಸುಂದರವಾದ ವಸ್ತು ಸುಖಪ್ರದವಾದುದು ಎನ್ನುವುದನ್ನು ಒಪ್ಪಿದರೆ, ಒಬ್ಬನಿಗೆ ಸುಖವನ್ನುಂಟುಮಾಡಿದ ಸುಂದರವಾದ ವಸ್ತು ಮತ್ತೊಬ್ಬನಿಗೆ ಅಸುಖವನ್ನುಂಟುಮಾಡುವುದೇಕೆ ಎಂಬ ಪ್ರಶ್ನೆಗೆ ಏನು ಉತ್ತರ ಹೇಳಬೇಕು? ವ್ಯಕ್ತಿಯ ಆವರಣ, ಸಮಾಜ, ಧರ್ಮ, ನೀತಿ, ಸಂಸ್ಕಾರ ಇತ್ಯಾದಿಗಳ ಪ್ರಭಾವದಿಂದ ಒಬ್ಬೊಬ್ಬನಿಗೂ ಒಂದೊಂದು ವಸ್ತುವಿನ ರುಚಿ ಭಿನ್ನವಾಗಬಹುದು. ಈ ಕಾರಣದಿಂದ ವ್ಯಕ್ತಿಯ ಇಷ್ಟಾನಿಷ್ಟಗಳನ್ನು ಆಧಾರವಾಗಿ ಉಳ್ಳ ಸುಖವನ್ನು ಮೂಲವಾಗಿರಿಸಿಕೊಂಡು ವ್ಯಕ್ತಿಯ ಸೌಂದರ್ಯಾಭಿರುಚಿಯನ್ನು ಸಮರ್ಥಿಸುವುದು ಸರಿ ಎಂದು ತೋರುವುದಿಲ್ಲ. ಆದುದರಿಂದ ಸುಂದರವಾದ ವಸ್ತುಗಳು ನಮ್ಮಲ್ಲಿ ಉಂಟುಮಾಡುವ ಈ ‘ಸುಖ’ ಲೌಕಿಕವಾದ-ಸಾಮಾಜಿಕವೋ, ಪ್ರಯೋಜನಾತ್ಮಕವೋ, ನೈತಿಕವೊ-ದೃಷ್ಟಿಗಳಿಗೆ ಒಳಗಾಗದೆ, ಅವುಗಳೆಲ್ಲವನ್ನೂ ಒಳಗೊಂಡು ವಿಶಿಷ್ಟವಾಗಿ ನಿಲ್ಲುವಂತಹ ಸರ್ವಸಾಧಾರಣವಾದ ಒಂದು ‘ಸುಖ’. ಈ ಒಂದು ‘ಸುಖ’ವನ್ನು ಕೊಡತಕ್ಕ ವಸ್ತುಗಳು ಸುಂದರ ಎನ್ನಬೇಕಾಗುತ್ತದೆ. ಏಕೆಂದರೆ “ವಸ್ತುಗಳು ಸುಖಪ್ರದವಾಗಿರುತ್ತವೆ-ಹಲವು ವೇಳೆ ಸುಂದರವಾಗಿರುವುದರಿಂದ, ಮತ್ತೆ ಹಲವು ವೇಳೆ ಬೇರೆಯ ಕಾರಣಗಳಿಂದ. ಆದರೆ ಸಂತೋಷದಾಯಕವಾದುವೆಲ್ಲಾ ಸುಂದರವಾಗಿರುತ್ತವೆ ಎಂದು ಹೇಳಲಾಗುವುದಿಲ್ಲ. ಯಾವ ಯಾವ ವಸ್ತುಗಳು ಎಷ್ಟರಮಟ್ಟಿಗೆ ನಮ್ಮಲ್ಲಿ ಸೌಂದರ್ಯಾನುಭವದ ಸುಖವನ್ನುಂಟುಮಾಡುತ್ತವೆಯೋ ಅಷ್ಟರಮಟ್ಟಿಗೆ ಅವು ಸುಂದರ”[8] ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಈ ‘ಸೌಂದರ್ಯಾನುಭವದ ಸುಖ’ ಲಭಿಸುವುದು ಕಲಾದೃಷ್ಟಿಗೆ. ಕಲಾದೃಷ್ಟಿ ಎಂದರೆ ವಸ್ತುಗಳ ಚೆಲುವನ್ನು ಲೌಕಿಕ ಪ್ರಯೋಜನದ ದೃಷ್ಟಿಯಿಂದ ನೋಡದೆ, ಒಂದು ರೀತಿಯ ನಿಸ್ಸಂಗ ಪರಿಭಾವನೆಯಿಂದ ಒಲಿಯುವುದು ಎಂದು ಅರ್ಥ. ನಾವು ಎಷ್ಟರಮಟ್ಟಿಗೆ ವಸ್ತುಗಳನ್ನು ನಮ್ಮ ಲೌಕಿಕ ಸಂಗದಿಂದ ಬಿಡಿಸಿಕೊಂಡು ನೋಡುತ್ತೇವೊ ಅವು ಅಷ್ಟರಮಟ್ಟಿಗೆ ಸುಂದರವಾಗುತ್ತವೆ, ಅಥವಾ ಸೌಂದರ್ಯಾನುಭವಕಾರಿಯಾಗುತ್ತವೆ. ಈ ಕ್ರಿಯೆಯಲ್ಲಿ ಮೊದಲನೆಯದು ನಿಜ್ಸಂಗತ್ವ, ಎರಡನೆಯದು ಪರಿಭಾವನೆ. ಈ ಪರಿಭಾವನೆಯ ಸೂತ್ರ ಒಲವು. ಲೋಕದಲ್ಲಿ ಬಹು ಮಂದಿಗೆ ವಸ್ತುಗಳನ್ನು ಸಂಗದೂರವಾಗಿಸಿ ನೋಡಲು ಸಾಧ್ಯವಾಗುವುದಿಲ್ಲ; ಅಷ್ಟೇ ಅಲ್ಲ, ಅವರು ವಸ್ತುವಿನ ಚೆಲುವನ್ನು ನಿಸ್ಸಂಗವಾಗಿಯೇ ನೋಡಿದರೂ ಅದನ್ನು ಅಷ್ಟಾಗಿ ಗಮನಿಸುವುದಿಲ್ಲ, ಪರಿಭಾವಿಸುವುದಿಲ್ಲ. ಆದರೆ ಕಲಾವಿದನಾದರೋ ನಿಸ್ಸಂಗದೃಷ್ಟಿಯಿಂದ ನೋಡುವುದಲ್ಲದೆ, ವಸ್ತುವಿನ ಚೆಲುವನ್ನು ಪರಿಭಾವಿಸುತ್ತಾನೆ, ಧ್ಯಾನಿಸುತ್ತಾನೆ. ಆದುದರಿಂದಲೇ ಉಳಿದವರಿಗಿಂತ ಮಿಗಿಲಾದ ಈ ‘ನಿಸ್ಸಂಗಪರಿಭಾವಕತ್ವ’ ಶಕ್ತಿಯಿಂದ ಕಲೆಗಾರ ಚೆಲುವನ್ನು ಕಾಣುತ್ತಾನೆ, ಕೃತಿಗಳಲ್ಲಿ ತೆರೆದು ತೋರುತ್ತಾನೆ. ಈ ಕಾರಣದಿಂದಲೇ ಕಲಾಕೃತಿಗಳಲ್ಲಿ ಸಹೃದಯರಿಗೂ ಚೆಲುವು ಈ ಬಗೆಯ ನಿಸ್ಸಂಗ ಪರಿಭಾವನೆಯ ಮೂಲಕ ಅನುಭವಕ್ಕೆ ಬರುತ್ತದೆ. ಉದಾಹರಣೆಗೆ ಒಂದು ಮಾವಿನ ಮರದಲ್ಲಿ ಎರಡು ಸೊಗಸಾದ ಮಾವಿನ ಹಣ್ಣುಗಳು ತೂಗುತ್ತಿವೆ ಎಂದು ಭಾವಿಸೋಣ. ಅದನ್ನು ಕಂಡ ಯಾವನೂ ಹಣ್ಣುಗಳು ಸೊಗಸಾಗಿವೆ ಎನ್ನುತ್ತಾನೆ. ಒಬ್ಬನು ಹಣ್ಣುಗಳು ಸುಂದರವಾಗಿವೆ ಎಂದಾಗ ಅಲ್ಲಿ ಅವನಿಗೆ ಹಾಗೆನ್ನಿಸಲು ಕಾರಣ – ಆ ಹಣ್ಣುಗಳ ಬಣ್ಣ, ಗಾತ್ರ, ಮತ್ತು ಆ ಹಣ್ಣುಗಳನ್ನು ಕಿತ್ತು ತಿನ್ನುವುದರಿಂದ ಒದಗಬಹುದಾದ ಸಂತೋಷದ ಕಲ್ಪನೆ. ಈ ಎಲ್ಲ ರುಚಿಯ ಭಾವಗಳೂ ಸೇರಿ ಅವನಲ್ಲಿ ಒಂದು ಬಗೆಯ ಸುಖಾನುಭವವನ್ನುಂಟುಮಾಡುತ್ತವೆ. ಇಲ್ಲಿ ಆತ ಹಣ್ಣುಗಳು ಸುಂದರವಾಗಿವೆ ಎಂದದ್ದು ಅವು ತನ್ನ ಬಯಕೆಯ, ಇಷ್ಟದ ವಸ್ತುಗಳು ಎಂಬ ಕಾರಣದಿಂದ. ಆದರೆ ಕಲೆಗಾರನೊಬ್ಬ ಅದೇ ಎರಡು ಹಣ್ಣುಗಳನ್ನು ಕಂಡ ಎಂದು ಇಟ್ಟುಕೊಳ್ಳೋಣ. ಆಗ ಅಲ್ಲಿ ಅವನಿಗೆ ಎಲ್ಲರಲ್ಲೂ ಆದ ಆ ಹಣ್ಣಿನ ಬಯಕೆ ಆಗುವುದೇ ಇಲ್ಲವೆಂದು ಅರ್ಥವಲ್ಲ. ಆದರೆ ಅವನ ದೃಷ್ಟಿಗೆ ಅವು ಕೂಡಲೇ ಲೌಕಿಕಾಪೇಕ್ಷೆಯನ್ನು ಮೀರಿದ ವಸ್ತುಗಳಾಗಿ, ಚೆಲುವಿನ ವಸ್ತುಗಳಾಗಿ ಗೋಚರಿಸುತ್ತವೆ. ಎಂದರೆ ಅವನು ಅವು ಪ್ರಚೋದಿಸಬಹುದಾದ ಲೌಕಿಕ ಬಯಕೆಯ ಸೆರೆಯಿಂದ ತನ್ನನ್ನು ಬಿಡಿಸಿಕೊಂಡು ನಿಂತು ಅವುಗಳ ಚೆಲುವನ್ನು ಸವಿಯುವಷ್ಟು ಸಾಮರ್ಥ್ಯವನ್ನು ಪಡೆದಿದ್ದಾನೆ ಎಂದಂತಾಯಿತು. ಆಗ ಅವನ ಈ ನಿಸ್ಸಂಗ ಪರಿಭಾವನೆಯ ನಿಲುವಿನಲ್ಲಿ ಆ ಎರಡು ಹಣ್ಣುಗಳು ತೂಗುವ ರೀತಿ, ಅವಕ್ಕೆ ಹಿನ್ನೆಲೆಯಾದ ಮರದ ಹಸಿರು, ಇಡೀ ಆವರಣದಲ್ಲಿ ಆ ಮರಗಳು ನಿಂತಿರುವ ಭಂಗಿ ಇವುಗಳಿಂದಾಗಿ, ಆ ಹಣ್ಣುಗಳು ಆ ವೃಕ್ಷ ಸಂಸಾರದ ಎರಡು ಮುಗ್ಧ ಶಿಶುಗಳಂತೆ ಅನುಭವಕ್ಕೆ ಬರಬಹುದು. ಈ ಅಪೂರ್ವ ಅನುಭವವನ್ನು ಪಡೆದನಂತರ ಅವನು ಮತ್ತೆ ಮತ್ತೆ ಪರಿಭಾವಿಸಿ, ಆ ಅನುಭವವನ್ನು ಪ್ರಕಟಗೊಳಿಸುವ ತೀವ್ರವಾದ ತುಡಿತ ಒದಗಿಬಂದಾಗ, ಆ ಹಣ್ಣುಗಳು ತನ್ನ ಬಗೆಗಣ್ಣಿಗೆ ಹೇಗೆ ಗೋಚರಿಸಿದುವೋ ಆ ಸತ್ಯವನ್ನು ಪಟವೊಂದರ ಮೇಲೆ ಚಿತ್ರಿಸುತ್ತಾನೆ. ಆ ಚಿತ್ರಕ್ಕೆ ಅವನು ‘ಅವಳಿ-ಜವಳಿ’ ಎಂದು ಹೆಸರೊಂದನ್ನು ಕೊಡುತ್ತಾನೆ ಎಂದು ಭಾವಿಸೋಣ. ಈ ಒಂದು ಚಿತ್ರವನ್ನು ಈಗ ಪ್ರೇಕ್ಷಕನೊಬ್ಬ ನೋಡಿದಾಗ ಅವನು ಹಿಂದೆ ಮಾವಿನ ಇದೇ ಮರದ ಹಣ್ಣುಗಳನ್ನು ಕಂಡಾಗ ಆದ ಅನುಭವದಿಂದ, ಈ ಅನುಭವ ಭಿನ್ನವೂ, ವಿನೂತನವೂ ಆಗಿ ತೋರಬಹುದು. ಹಿಂದೊಮ್ಮೆ ಇಂಥದೇ ದೃಶ್ಯವನ್ನು ತೋಟದಲ್ಲಿ ಕಂಡಾಗ ಇದೇ ರೀತಿಯ ಅನುಭವವನ್ನು ಪಡೆಯಲಾಗದಿದ್ದವನು, ಈಗ ಇಲ್ಲಿ ನಿಸ್ಸಂಗವಾಗಿಯೇ ಪರಿಭಾವಿಸಿ ಅಪೂರ್ವ ಸುಖವನ್ನು ಪಡೆಯುತ್ತಾನೆ. ಇಲ್ಲಿ ಈ ಪ್ರೇಕ್ಷಕನಿಗೆ ಒದಗುವ ಈ ನೂತನ ಅನುಭವಕ್ಕೆ ಕಾರಣ ಹೀಗೂ ಇರಬಹುದು; ತಾನು ಚಿತ್ರದಲ್ಲಿ ಕಾಣುವ ಹಣ್ಣು ಹಿಂದೊಮ್ಮೆ ತಾನು ತೋಟದಲ್ಲಿ ಕಂಡ ಹಣ್ಣನ್ನು ನೆನಪಿಗೆ ತಂದುದರಿಂದ ಪ್ರಿಯವಾಗಬಹುದು, ಅಥವಾ ಇಲ್ಲಿ ಚಿತ್ರಿತವಾಗಿರುವುದು ವಾಸ್ತವವಾದುದಲ್ಲ, ಚಿತ್ರಸ್ಥವಾದುದು ಎಂಬ ಅರಿವಿರುವುದರಿಂದ ಅಥವಾ ಆ ಚಿತ್ರಕ್ಕೆ ಕೊಟ್ಟ ಹೆಸರಿನಿಂದ ಆ ಚಿತ್ರವನ್ನು ಹಾಗೂ ಅದಕ್ಕೆ ಪ್ರೇರಕವಾದ ವಸ್ತುವನ್ನು ನೋಡುವ ಬೇರೊಂದು ನಿಲುವು ಅವನಿಗೆ ಪ್ರಾಪ್ತವಾಗಿರುವುದರಿಂದ, ಲೌಕಿಕೋದ್ದೇಶ ದೂರವಾದ, ಕಲೆಗೆ ಮಾತ್ರ ತಕ್ಕದಾದ ನಿಸ್ಸಂಗ ಪರಿಭಾವನೆಯಿಂದಲ್ಲದೆ ಬೇರೆಯ ರೀತಿಯಿಂದ ಅದನ್ನು ಒಲಿದು ನೋಡದೆ ವಿಧಿಯಿಲ್ಲ. ಅಥವಾ ಬೇರೊಂದು ಬಗೆಯಲ್ಲಿ ಹೇಳಬಹುದಾದರೆ, ಕಲಾಕೃತಿಯ ಮೋಡಿಯೇ ಅಂಥದು; ಅದು ಸಹೃದಯನನ್ನು ಅವನಿಗರಿವಿಲ್ಲದೆಯೇ ನಿಸ್ಸಂಗ ಪರಿಭಾವನೆಗೆ ನಿಲ್ಲಿಸಿ ಈ ವಿನೂತನವಾದ ‘ಸುಖ’ವನ್ನು ನೀಡುತ್ತದೆ. ಈ ಸುಖ ಅವನಿಗೆ ಹಿತವೂ, ಪ್ರಿಯವೂ ಆಗುತ್ತದೆ. ಹೀಗೆ ಕಲೆಗಾರ ತನ್ನ ಕಲಾಕೃತಿಗಳ ಮೂಲಕ ನಿಸ್ಸಂಗ ಪರಿಭಾವನೆಯಿಂದ ದೊರೆಯುವ ಆನಂದ ಎಂಥದು ಎನ್ನುವುದನ್ನು ಸಹೃದಯರಿಗೆ ಅರಿವು ಮಾಡಿಕೊಡುತ್ತಾನೆ. ಇದರಿಂದ ಸಹೃದಯರಲ್ಲೂ ನಿಸ್ಸಂಗ ಪರಿಭಾವನೆಯಿಂದ ಕಲಾಕೃತಿಗಳಲ್ಲಿಯಂತೆ ಸೃಷ್ಟಿ ಸಮಸ್ತದಲ್ಲೂ ಸೌಂದರ್ಯಾನುಭವವನ್ನು ಪಡೆಯಲು ಸಾಧ್ಯವಿದೆ ಎಂಬ ಅರಿವೂ ಆ ಒಂದು ದೃಷ್ಟಿಗೆ ಎಲ್ಲವೂ ಸುಂದರ ಎಂಬ ಸೌಂದರ್ಯದೃಷ್ಟಿಯೂ ಉದಯವಾಗಬಹುದು.

ಸೌಂದರ್ಯಾನುಭವ ನಿಸ್ಸಂಗ ಪರಿಭಾವನೆಯಿಂದ ಒದಗುವ ಒಂದು ರೀತಿಯ ಸುಖ ಎಂದು ಹೇಳಿತಷ್ಟೆ. ಆದರೆ ಈ ಸುಖ ಕೇವಲ ಹಿತವಾದ, ಪ್ರಿಯವಾದ ವಸ್ತುಗಳಿಂದಲೇ ದೊರೆಯತಕ್ಕದ್ದೆಂದು ಅರ್ಥವಲ್ಲ. ಸೌಂದರ್ಯಾನುಭವ ಎಂದಕೂಡಲೇ ಬಹುಮಂದಿಗೆ ಇದು ಕೇವಲ ಆಹ್ಲಾದಕರವಾದ, ಪ್ರಿಯವಾದ ವಸ್ತುಗಳ ಪರಿಭಾವನೆಯಿಂದ ಲಭಿಸತಕ್ಕದ್ದು ಎಂಬ ಒಂದು ಭಾವನೆ ಸಹಜವಾಗಿ ಅಂಟಿಕೊಂಡಿದೆ. ಇಲ್ಲಿನ ‘ಸುಖ’ ಲೋಕದ ಸುಖ-ದುಃಖ, ಪ್ರಿಯ-ಅಪ್ರಿಯಗಳನ್ನು ಒಳಗೊಂಡು ಅದನ್ನೂ ಮೀರಿ ನಿಲ್ಲುವಂಥಾದ್ದು. ಕವಿ ಹಲವು ವಸ್ತುಗಳನ್ನು ನೋಡಿ ಹಿಗ್ಗಿ ಆಹಾ ಎನ್ನುತ್ತಾನೆ. ಹಲವು ವಸ್ತುಗಳನ್ನು ನೋಡಿ ಕುಗ್ಗಿ ನಿಡುಸುಯ್ದು ಅಯ್ಯೋ ಎನ್ನುತ್ತಾನೆ. ಆದರೆ ಸೌಂದರ‍್ಯಾನುಭವದಲ್ಲಿ ಮಾತ್ರ ಅವೆರಡೂ ಒಂದು ರೀತಿಯ ‘ಸುಖ’ವೆಂದೇ ಭಾವಿಸುತ್ತೇವೆ. ಆದುದರಿಂದಲೇ ರಮ್ಯವಾಗಲೀ, ಉದಾರವಾಗಲೀ, ರೌದ್ರವಾಗಲೀ, ಬೀಭತ್ಸವಾಗಲೀ, ಕಲಾಲೋಕದಲ್ಲಿ ಬರುವ ಅನುಭವವನ್ನು ‘ರಸಾನುಭವ’ ಎಂಬ ಒಂದೇ ಮಾತಿನಿಂದ ನಮ್ಮ ಆಲಂಕಾರಿಕರು ನಿರ್ದೇಶಿಸಿದ್ದಾರೆ.[9] ಕೆಲವು ಸುಖಾಂತಕೃತಿಗಳು ನಮ್ಮನ್ನು ಹಿಗ್ಗಿಸಬಹುದು. ಕೆಲವು ರುದ್ರನಾಟಕಗಳು ನಮ್ಮನ್ನು ತಲ್ಲಣಗೊಳಿಸಬಹುದು. ಎರಡು ಸಂದರ್ಭಗಳಲ್ಲಿಯೂ ಕೃತಿಗಳು ನಮ್ಮನ್ನು ಒಂದು ಬಗೆಯ ನಿಸ್ಸಂಗ ಪರಿಭಾವನೆಯಲ್ಲಿ ನಿಲ್ಲಿಸಿ ಲೋಕದ ಸುಖ-ದುಃಖಾನುಭವದಿಂದ ಭಿನ್ನವಾದ ಸೌಂದರ‍್ಯಾನುಭವವನ್ನು ನೀಡುತ್ತವೆ.

ಬಹಿರಂಗದಿಂದ ಮೊದಲಾಗಿ ಅಂತರಂಗದಲ್ಲಿ ಆನಂದದ ನೆಲೆಯನ್ನು ತಲುಪುವ ಈ ವ್ಯಾಪಾರದಲ್ಲಿ ವಸ್ತುವಿನ ಪಾಲೆಷ್ಟು, ವ್ಯಕ್ತಿಯ ಪಾಲೆಷ್ಟು, ಇವೆರಡರ ಮಿಲನದ ರಹಸ್ಯವೇನು ಎನ್ನುವ ವಿಚಾರವನ್ನು ಇನ್ನು ಮುಂದೆ ಪರಿಶೀಲಿಸುವ ದೃಷ್ಟಿಯಿಂದ, ಈಗ ಇಷ್ಟುಮಾತ್ರ ಹೇಳಬಹುದು: ಸೌಂದರ‍್ಯಾನುಭವವೆಂದರೆ ಲೋಕದ ವಸ್ತುವಿನ ರೂಪರುಚಿ ರಸಜೀವಿಯ ಮನವನ್ನು ಸೋಜಿಗದ ಮೂಲಕ ಸೆರೆಗೈದು, ಲೌಕಿಕೋದ್ದೇಶ ಸಂಗದೂರವಾದ ಪರಿಭಾವನೆಯಿಂದ ಅವನ ಅಂತರಂಗದಲ್ಲಿ ಒಂದು ಬಗೆಯ ಸಾಮರಸ್ಯವನ್ನು ಪಡೆದು, ಅವನ ಪ್ರತಿಭಾಶಕ್ತಿಯಿಂದ ರೂಪುಗೊಳ್ಳುವ ಒಂದು ಲೋಕಾನುಭವ ಎನ್ನಲಾಗದ ಅನುಭವ. ಈ ಅನುಭವದ ಮುಖ್ಯ ಸ್ವರೂಪ ಆನಂದ. ಈ ಸೌಂದರ‍್ಯಾನುಭವದ ಆನಂದವೇ ಕಲೆಗಾರನ ಸೌಂದರ‍್ಯಸೃಷ್ಟಿಗೆ ಪ್ರೇರಣೆ. ಸೌಂದರ‍್ಯಾನುಭವವೆಂದರೆ ಬಹಿರಂಗ ಸೌಂದರ್ಯದ ಬಗೆಗೆ ನಾವು ತಾಳುವ ಎಚ್ಚರ ಮಾತ್ರವಲ್ಲದೆ, ನಮ್ಮ ಅಂತರಂಗದ ಸೌಂದರ‍್ಯಾನುಭವಶಕ್ತಿಯ ಬಗೆಗೂ ಎಚ್ಚರಗೊಂಡು ವಿಸ್ಮಯಗೊಳ್ಳುವ ರೀತಿಯೂ ಹೌದು!

* * *


[1] ಡಿ.ವಿ.ಜಿ. ಮಂಕುತಿಮ್ಮನ ಕಗ್ಗ: ಪುಟ – ೬೦; ಪದ್ಯ -೨೧೭.

[2] Felix Clay : The Origin of the Senses of Beauty : p.136.

[3] ಅಲ್ಲೇ : ಪು. ೧೩೬.

[4] Bergson: Creative Evolution : p.7 to 10

[5] S.N. Dasagupta : Fundamentals of Indian Art. P.118.

[6] Felix Clay : Origin of the Sense of Beauty, p. 131.

[7] H.R. Marshall: The Beautiful, p. 54.

[8] Bosanquest : History of Aesthetics : p. 6-7.

[9] ರಮ್ಯಂ ಜುಗುಪ್ಸಿತಮುದಾರಮಥಾಪಿ ನೀಚಂ

ಉಗ್ರಂ ಪ್ರಸಾದಿ ಗಹನಂ ವಿಕೃತಂ ಚ ವಸ್ತು

ಯದ್ವಾಪ್ಯವಸ್ತು ಕವಿಭಾವಕಭಾವ್ಯ ಮಾನಂ

ತನ್ನಾಸ್ತಿಯನ್ನ ರಸಭಾವಮುಪೈತಿ ಲೋಕೇ || (ದಶರೂಪಕ, iv -೮೫)

ರಮ್ಯ, ಅಸಹ್ಯ, ಉದಾರ, ನೀಚ, ಉಗ್ರ, ಪ್ರಸನ್ನ, ಕ್ಲಿಷ್ಟ, ವಿಕೃತ – ವಸ್ತು ಹೀಗೆ ಯಾವುದಾದರೂ ಆಗಿರಲಿ, ಕಡೆಗೆ ವಸ್ತುವಲ್ಲದ್ದೇ ಆಗಿರಲಿ; ಕವಿಭಾವಕರ ಭಾವನೆಗೆ ವಿಷಯವಾದ ಮೇಲೆ ರಸಮಯವಾಗದ್ದು ಲೋಕದಲ್ಲಿ ಏನೊಂದೂ ಇಲ್ಲ.”

ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯ ಮೀಮಾಂಸೆ. ಪು. ೨೧೧-೧೨ (ಎರಡನೆ ಮುದ್ರಣ)