ಬಹುಜನರು ತಮ್ಮ ಲೇಖನ ಹಾಗೂ ಭಾಷಣಗಳಲ್ಲಿ ಮತ್ತೆ ಮತ್ತೆ ಬಳಸುವ “ಜನವಾಣಿ ಬೇರು ಕವಿವಾಣಿ ಹೂವು” ಎಂಬ ಮಾತು ಎಷ್ಟೇ ಜನಪ್ರಿಯವಾಗಿದ್ದರೂ, ಅದು ಜನಪದ ಸಾಹಿತ್ಯದ ಮಹಿತಿಗೆ ಮಾತ್ರ ಸೀಮಿತ. ಜನಪದ ಜೀವನವನ್ನೇ ಮೂಲಧನವಾಗಿರಿಸಿಕೊಂಡು  ಅದನ್ನೇ ಹಾಸಿ ಅದನ್ನೇ ಹೊದ್ದ ಜನಪದ ಸಾಹಿತ್ಯದಲ್ಲಿರುವ ಸತ್ವ-ಸ್ವತ್ವಗಳು ಶಿಷ್ಟ ಸಾಹಿತ್ಯದ ಜೀವಂತಿಕೆ ಹಾಗೂ ಅರಳುವಿಕೆಗೆ ಕಾರಣವಾಗುತ್ತವೆಂದು ಅದರ ಅರ್ಧ. ಅದೇ ರೀತಿ ಜನಪದರ ಸಹಜ ಹಾಡುವಿಕೆ, ಬಾರಿಸುವಿಕೆ ಮತ್ತು ಕುಣಿತಗಳು ಕೂಡ ಶಿಷ್ಟರ ಸಂಗೀತ ವಾದ್ಯ ಹಾಗೂ ನೃತ್ಯಗಳಿಗೆ ಬಹುಮಟ್ಟಿಗೆ ಪ್ರೇರಣೇ ನೀಡಿರುವುದನ್ನು ಮರೆಯಲಾಗದು.

ಜನಪದರ ಸಹಜತೆಯಿಂದಕೂಡಿದ ಅಂತಹ ಕಲೆಗಳನ್ನೇ ಆಸಕ್ತ ವಿದ್ವಾಂಸರು ಚೆನ್ನಾಗಿ ಅಭ್ಯಸಿಸಿ, ಸಹಜತೆಯ ಮರೆಯಲ್ಲಿರುವ ಸೂತ್ರವನ್ನು ಗುರುತಿಸಿ ನಿಯಮಗಳನ್ನು ರೂಪಿಸುವ ಶಾಸ್ತ್ರಗ್ರಂಥಗಳನ್ನು ರಚಿಸುತ್ತಾರೆ. ಇಂತಹ ಶಾಸ್ತ್ರಗ್ರಂಥಗಳು ಹುಟ್ಟಿ ಒಮ್ಮೆ ಮಾನ್ಯತೆ ಪಡೆದರೆ ತೀರಿತು ಶಿಷ್ಟಕವಿಗಳು ಹಾಗೂ ಕಲಾವಿದರು ಆ ಲಕ್ಷಣ ಶಾಸ್ತ್ರ ಗ್ರಂಥಗಳ ನಿಯಮಾನುಗುಣವಾಗಿಯೆ ಕಾವ್ಯಕಲಾರಚನೆಗೆ ತೊಡಗುತ್ತಾರೆ. ಹಾಗೆ ಬದ್ಧರಾಗಿರುವುದರಲ್ಲಿಯೆ ತಮ್ಮ ಕೃತಿಗಳಿಗೆ ಕ್ಷೇಮವೆಂದು ಅವರ ನಂಬಿಕೆ. ಶಾಸ್ತ್ರಗ್ರಂಥಗಳು ಹೇಳುವ ಲಕ್ಷಣಗಳೆಂಬ ಲಕ್ಷ್ಮಣರೇಖೆಯನ್ನು ದಾಟುವ ಧೈರ್ಯ, ಮನಸ್ಸುಗಳೆರಡೂ ಶಿಷ್ಟರಿಗಿರುವುದಿಲ್ಲ. ಕಾಲ ಕಳೆದಂತೆ ಅವರ ಕಲೆ ಕೃತಿಗಳೆರಡರಲ್ಲೂ ಗತಾನುಗತಿಕೆ ತಲೆದೋರಿ ಅವು ಜಂಗಮತ್ವವನ್ನು ಕಳೆದುಕೊಂಡು ಸ್ಥಾವರವಾಗಿ ಬಿಡುತ್ತವೆ.

ಜನಪದ ಕವಿ ಕಲಾವಿದರಿಗೆ ಈ ಬಗೆಯ ಶಾಸ್ತ್ರನಿರ್ಬಂಧವಿರುವುದಿಲ್ಲ. ಭಾವನೆಗಳಿಗೆ ಬೆದೆ ಬಂದಾಗ ಅವನ್ನು ತಮಗೆ ತಿಳಿದ ರೀತಿಯಲ್ಲಿ ಹಾಡುತ್ತ, ಬಾರಿಸುತ್ತ, ಕುಣಿಯುತ್ತ ಪ್ರಕಟಿಸುತ್ತಾರೆ. ಬಸವಣ್ಣನವರ “ತಾಳ ಮಾನ ಸರಿಸವನರಿಯೆ, ಓಜೆಬಜಾವಣೆ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂಬ ಮಾತು, ಹಾಗೆಯೆ ರತ್ನಾಕರವರ್ಣಿಯ “ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು ವಿಕಳವಾದರು ಚಿಂತೆಯಿಲ್ಲ, ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಹುದು” ಎಂಬ ಮಾತು ಜನಪದರ ಮನೋಭಾವನೆಯ, ಅವರ ಕಾವ್ಯ ಮೂಡಿಬರುವ ವಿಧಾನದ ಸೂಚಕಗಳಾಗಿವೆ. ಸಕಲ ಲಕ್ಷಣವನ್ನು ನೋಡುವ ಗೊಡವೆಗೆ ಹೋಗದಿರುವುದು, ಒಲಿದಂತೆ ಹಾಡುವುದು-ಇವು ಜನಪದ ಕಾವ್ಯ ಮತ್ತು ಕಲೆಗಳ ಪ್ರಮುಖ ವೈಶಿಷ್ಟ್ಯಗಳು. ಇದರರ್ಥ ಜನಪದರ ಕಾವ್ಯ ಕಲೆಗಳೆಲ್ಲ ತೀರ ಅತಂತ್ರವೆಂದಲ್ಲ, ಅವುಗಳಲ್ಲಿ ಅವರಿಗೇ ತಿಳಿಯದಂತೆ ಒಂದು ಬಗೆಯ ಸುಸಂಬದ್ಧತೆ ಸಹಜವಾಗಿಯೆ ಕ್ರಿಯಾಶೀಲವಾಗಿರುತ್ತದೆ. ಅದಿಲ್ಲದಿದ್ದರೆ ವಿದ್ವಾಂಸರು ಅದನ್ನೇ ಅಭ್ಯಸಿಸಿ, ಆಧರಿಸಿ ಶಾಸ್ತ್ರ ಗ್ರಂಥಗಳನ್ನು ರಚಿಸುವುದು ಹೇಗೆ ಸಾಧ್ಯವಾಗುತ್ತಿತ್ತು? ಮೊದಲು ಮಾನವ ಹಾಡಿದ, ಅವನು ಛಂದಶ್ಶಾಸ್ತ್ರ ಮುಂದಿಟ್ಟುಕೊಂಡು ಹಾಡಲಿಲ್ಲ. ಅವನು ಹಾಡಿದ ಮೇಲೆ ಅದರಿಂದ ಛಂದವೊ ವ್ಯಾಕರಣವೊ ಇನ್ನೇನೊ ಶಾಸ್ತ್ರ ಹುಟ್ಟಿಕೊಂಡಿತು. ಇದು ಉಳಿದೆಲ್ಲ ಶಾಸ್ತ್ರಗ್ರಂಥಗಳಿಗೆ ಅನ್ವಯಿಸುವ ಮಾತು.

ಶಿಷ್ಟರು ಶಾಸ್ತ್ರಾನುಸಾರ ಅದರ ನಿಯಮಗಳ ಕಟ್ಟಿಗೆ ಒಳಗಾಗಿ ಕಲಾರಚನೆಗೆ ತೊಡಗಿದರೆ, ಜನಪದರು ಅದರ ಬಗ್ಗೆ ಯೋಚಿಸದೆ, ಅದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ ಸ್ವಚ್ಛಂದ ರೀತಿಯ ಕಲಾರಚನೆಗೆ ತೊಡಗುತ್ತಾರೆ. ಶಿಷ್ಟರೆನಿಸಿಕೊಂಡವರಲ್ಲಿ ಕೆಲವರು ಅತಿ ಮಡಿವಂತರು ಜನಪದ ಕಲಾವಿದರ ರಚನೆಗಳನ್ನು ಅಬದ್ಧವೆಂದು, ಅಯೋಗ್ಯವೆಂದು ಅಶ್ಲೀಲವೆಂದು ಇನ್ನು ಏನೇನೋ ಎಂದು ಹೇಳುತ್ತಾರೆ. ಜನಪದ ಕಲಾವಿದರ ಬಳಿ ಹೆಣ್ಣುಮಕ್ಕಳನ್ನು ಕೂಡ ಕಳಿಸಬಾರದೆನ್ನುವ ಮಟ್ಟಕ್ಕೆ ಕೆಲವು ಜನ ಶಿಷ್ಟರ ತಿರಸ್ಕಾರ-ಜನಪದರ ಬಗೆಗೆ-ಮುಂದುವರಿದಿರುವುದನ್ನು ಕಾಣಬಹುದು.

ಹೀಗೆ ಶಿಷ್ಟರೆನಿಸಿಕೊಂಡವರು ಜನಪದ ಕಾವ್ಯ ಹಾಗೂ ಕಲೆಗಳನ್ನು ಕೀಳು ದೃಷ್ಟಿಯಿಂದ ಕಾಣುತ್ತ ಹೀಯಾಳಿಸುತ್ತ ಬಂದಿದ್ದರೂ ಜನಪದರು ಮಾತ್ರ ಅವರ ಮಾತುಗಳಿಗೆ ಕಿವುಡಾಗಿ ಕಾವ್ಯಕಲಾರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದು ಈಗಲೂ ಮುಂದುವರಿದಿದೆ. ಆದುದರಿಂದಲೆ ಇಂದು ನಾವು ಅವರ ಶ್ರೀಮಂತ ಸಾಹಿತ್ಯ ಹಾಗೂ ಕಲೆಗಳ ವಾರಸುದಾರರಾಗಿದ್ದೇವೆ. ಅವುಗಳ ಅಧ್ಯಯನ ಅಧ್ಯಾಪನಗಳಿಗೆ ತೊಡಗಿದ್ದೇವೆ. ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಆ ಕಾರ್ಯ ಮುಂದುವರಿದಿದೆ, ಬೇರೆ ಬೇರೆ ಸಂಘಸಂಸ್ಥೆಗಳು ಕೂಡ ಆ ಕಾರ್ಯದಲ್ಲಿ ತೊಡಗಿವೆ. ಪ್ರಾಮಾಣಿಕತೆ ಶ್ರದ್ಧೆ ಹಾಗೂ ಅರ್ಪಣ ಮನೋಭಾವನೆಯಿಂದ ಕೆಲಸ ನಡೆದಲ್ಲಿ ನಮ್ಮ ನಮ್ಮ ನಿಜವಾದ ಸಂಸ್ಕೃತಿಯನ್ನು ಜನಪದ ಸಾಹಿತ್ಯ ಹಾಗೂ ಕಲೆಗಳ ಅಧ್ಯಯನದಿಂದ ಗುರುತಿಸುವಲ್ಲಿ ನಿಶ್ಚಮವಾಗಿಯೂ ನಾವು ಸಮರ್ಥರಾಗುತ್ತೇವೆ.

ಇಲ್ಲಿ ಮತ್ತೊಂದು ಮಾತನ್ನು ಗಮನಿಸುವುದು ಅವಶ್ಯ. ಶಿಷ್ಟರೆನಿಸಿಕೊಂದ ಕೆಲವರು ಪ್ರಾಚೀನರು ಜನಪದರ ಬಗ್ಗೆ ಅವರ ಕಾವ್ಯ ಕಲಾಪ್ರಕಾರಗಳ ಬಗ್ಗೆ ತಿರಸ್ಕಾರ ಮನೋಭಾವನೆ ತಾಳಿದ್ದರೂ, ಯುಗಧರ್ಮದ ಪ್ರಜ್ಞೆಯುಳ್ಳ ಗುಣಗಳ್ಳರಾದ ಕೆಲವರಾದರೂ ಪ್ರಾಚೀನ ಕವಿ ಕಲಾವಿದರು ಶಾಸ್ತ್ರದ ಬೇಲಿಯನ್ನು ದಾಟಿಯೂ ದಾಟದಂತೆ, ಶಿಷ್ಟ ಜಾನಪದದ ಎಂದರೆ ಮಾರ್ಗ ದೇಶಿಗಳ ಸಮನ್ವಯ ಸಾಧಿಸಲು ಪ್ರಯತ್ನಿಸಿದುದೂ ಉಂಟು. “…ದೇಶಿಯೊಳ್ ಪುಗುವುದುಂ ಪೊಕ್ಕು ಮಾರ್ಗದೊಳೆ ತಳ್ವುದುಂ…ಕಾವ್ಯಬಂಧಂ ಒಪ್ಪುಗುಂ” ಎಂಬ ಪಂಪನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದೇಶಿ-ಮಾರ್ಗಗಳ ಸಮನ್ವಯದಿಂದಲೆ ಕಾವ್ಯಕ್ಕೆ ಶೋಭೆಯೆಂಬುದು ನಮ್ಮ ಹಲವಾರು ಕವಿಗಳಿಗೆ ಮನವರಿಕೆಯಾಗಿದ್ದರೂ ಅದನ್ನು ಯಶಸ್ವಿ ರೀತಿಯಲ್ಲಿ ಕಾವ್ಯಗಳಲ್ಲಿ ತಂದ ಕವಿಗಳು ಕಡಿಮೆ. ಈ ಮಾತು ಉಳಿದ ಕಲೆಗಳಿಗೂ ಅನ್ವಯಿಸುತ್ತದೆ.

ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಹೆಂಡತಿ ಪಿರಿಯ ಕೇತಲ ದೇವಿಯನ್ನು “ದೇಶಭಾಷಾ ಸಂಗೀತ ವಿದ್ಯಾಧರಿ” ಎಂದು ಶಾಸನಗಳಲ್ಲಿ ಹೇಳಿರುವುದು. ನೀಲಕಂಠ ಕವಿಯ ‘ಆರಾಧ್ಯ ಚರಿತ್ರೆ’ ಗ್ರಂಥದಲ್ಲಿ ಶ್ರೀಶೈಲ ಯಾತ್ರೆಗೆ ಹೊರಟ ಪರಿಸೆಯನ್ನು ಕವಿ ಬಣ್ಣಿಸುತ್ತ “ಭರತೋಕ್ತ ರೀತಿಯಿಂ ಗೀತಂಗಳಂ” ಕೆಲವರು ಹಾಡುತ್ತಿದ್ದರೆ, ಇನ್ನು ಕೆಲವರು ದೇಶಿಯ ಪದಜಾತಿಗಳನ್ನು ಹಾಡುತ್ತ ಕಾಲುಗಳಲ್ಲಿ ಪದಗತಿಗಳನ್ನು ತೋರುತ್ತ ನರ್ತಿಸುತ್ತ ನಡೆದಿದ್ದರೆಂದು ಹೇಳಿದ್ದಾನೆ. (ಪರ್ವತಪ್ರಕರಣ ೬-೩೬). ಅಲ್ಲಿಯೆ ಮತ್ತೊಂದೆಡೆ ಸ್ತಂಭಸೂತ್ರದಾಟಗಳು ನಡೆದಿದ್ದುದನ್ನೂ, ಬೇರೆ ಬೇರೆ ದೇಶಗಳಲ್ಲಿ ಮೆರೆಯುವ ನಾಟಕಕ್ಕೆ ಉಚಿತವಾದ ವೇಷಭೂಷಣಗಳನ್ನು ಧರಿಸಿ ಬಗೆಬಗೆಯ ನೃತ್ಯಗಳನ್ನು ಭಕ್ತರು ಮಾಡುತ್ತಿದ್ದುದನ್ನೂ ವಿವರಿಸಲಾಗಿದೆ. (ಪರ್ವತ ಪ್ರಕರಣ ೮-೩೨,೩೩). ಇದರಿಂದ ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಜನಪದರ ಕಲಾಪ್ರದರ್ಶನ ಈಗಿನಂತೆ ಆಗಲೂ ನಡೆಯುತ್ತಿತ್ತೆಂಬುದು ಸ್ಪಷ್ಟ. ಅಷ್ಟೇ ಅಲ್ಲ ರಾಣಿಯರು, ಹಿರಿಯ ಅಧಿಕಾರಿಗಳ ಹೆಂಡಂದಿರು ಕೂಡ ಅಂತಹ ಕಲೆಗಳನ್ನು ಆಸಕ್ತಿವಹಿಸಿ ಕಲಿಯುತ್ತಿದ್ದುದೂ ಉಂಟು.

ಮೇಲಣ ವಿವೇಚನೆಯಿಂದ ಮೂರು ಬಗೆಯ ಮಾದರಿಗಳು, ಶಾಸ್ತ್ರಬದ್ಧ ಶಿಷ್ಟರ ಕಲಾಕೃತಿಗಳು, ಶಾಸ್ತ್ರನಿಯಮಗಳ ಕಟ್ಟಿಗೆ ಒಳಗಾಗದ ಸ್ವಚ್ಛಂದ ಮನೋಭಾವದ ಜನಪದ ಕಲಾಕೃತಿಗಳು, ಹಾಗೆಯೆ ಎರಡನ್ನು ಎಂದರೆ ಮಾರ್ಗದೇಶಿಗಳನ್ನು ಹಿತಮಿತ ರೀತಿಯಲ್ಲಿ ಸಮನ್ವಯಗೊಳಿಸಿದ ಕಲಾಕೃತಿಗಳು ಪ್ರಾಚೀನ ಕಾಲದಿಂದಲೂ ರಚನೆಗೊಳ್ಳುತ್ತ ಬಂದಿರುವುದು ವಿದಿತವಾಗುತ್ತದೆ. ಇವುಗಳಲ್ಲಿ ಸಮನ್ವಯದೃಷ್ಟಿಯ ಶಿಷ್ಟ ಕವಿಗಳ ಮೇಲೆ ಜನಪದರ ಪ್ರಭಾವ ಬಿದ್ದಿರುವುದು ಸ್ಪಷ್ಟ. ಜೊತೆಗೆ ಇಂತಹ ಜನತಾಂತ ದೃಷ್ಟಿಯ ಸಮರ್ಥ ಸಮನ್ವಯ ಕವಿಗಳ ಹಾಗೂ ಕಲಾವಿದರ ಪ್ರಭಾವ ಜನಪದರ ಮೇಲೂ ಆಗಬಹುದೆಂಬುದನ್ನು ಮರೆಯಲಾಗದು. ಹೀಗೆ ಜನಪದರ ಪ್ರಭಾವ ಶಿಷ್ಟರ ಮೇಲೆ, ಶಿಷ್ಟರ ಪ್ರಭಾವ ಜನಪದರ ಮೇಲೆ ನಿರಂತರ ನಡೆದೇ ಇರುತ್ತದೆ, ಪರಸ್ಪರಕೊಳು-ಕೊಡೆ ಸಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಜನಪದ ಉಸಿರವಾದ್ಯಗಳ ವಿವೇಚನೆ ನನ್ನ ಪ್ರಬಂಧದ ಉದ್ದೇಶ. ಪ್ರಬಂಧದ ಆರಂಭದಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಲೇಬೇಕು. ಜನಪದ ವಾದ್ಯಗಳ-ಉಸಿರ ವಾದ್ಯಗಳ ರಚನೆಗೆ ಬಳಸುವ ಸಾಮಗ್ರಿಗಳು ಸಾಮಾನ್ಯವಾಗಿ ಆಯಾ ಪ್ರದೇಶಗಳಲ್ಲಿ ಸುಲಭವಾಗಿ ಸಿಕ್ಕುವಂತಹವು. ಅದರಿಂದಾಗಿ ಪ್ರದೇಶದಿಂದ ಪ್ರದೇಶಕ್ಕೆ ಅವು ಭಿನ್ನವಾಗಿರುವುದು ಸಹಜ. ಇನ್ನು ಒಂದೇ ವಾದ್ಯಕ್ಕೆ ಹಾಗೂ ಅದರ ಬೇರೆ ಬೇರೆ ಅಂಗಗಳಿಗೆ ಬೇರೆ ಬೇರೆ ಹೆಸರುಗಳಿರುವುದೂ ಉಂಟು. ಅದರಿಂದಾಗಿ ಇಲ್ಲಿಯೂ ಅಭಿಪ್ರಾಯ ಭಿನ್ನತೆಗೆ ಆಸ್ಪದವಿದೆ. ನಾನು ಸಣ್ಣವನಿದ್ದಾಗ ಈಗಲೂ ಸಹ ಆಗಾಗ ಕಂಡ ಮತ್ತು ಕೇಳಿದ ನನ್ನ ಇತಿಮಿತಿಯಲ್ಲಿಯೆ ಕಲಾವಿದರನ್ನು ಸ್ವತಃ ಸಂದರ್ಶಿಸಿ ತಿಳಿದ, ಜೊತೆಗೆ ಬೇರೆ ಬೇರೆ ಗ್ರಂಥಗಳಲ್ಲಿ ಓದಿದ ಹಿನ್ನೆಲೆಯಲ್ಲಿ ಈ ಪ್ರಬಂಧ ರೂಪಗೊಂಡಿದೆಯೆಂಬುದನ್ನೂ ಇಲ್ಲಿ ಸೂಚಿಸಬಯಸುತ್ತೇನೆ.

ಎಲ್ಲದಕ್ಕೂ ದೇವರನ್ನೇ ಮುಂದುಮಾಡುವುದು ಭಾರತೀಯರ ರಕ್ತಗತ ಸ್ವಭಾವ. ಆದುದರಿಂದ ವಾದ್ಯಗಳ ಉಗಮಕ್ಕೂ ಅವರು ದೈವೀಮೂಲವನ್ನು ಹೇಳಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಹಾಗೆ ಹೇಳುವವರನ್ನೂ ಅದನ್ನು ನಂಬುವವರನ್ನೂ ಅವರವರ ಪಾಡಿಗೆ ಬಿಟ್ಟು, ವಾಸ್ತವ ದೃಷ್ಟಿಯಿಂದ ಪರಿಶೀಲನೆಗೆ ತೊಡಗುವುದು ಸೂಕ್ತ.

ಆದಿಮಾನವನಿಗೆ ನಿಸರ್ಗವೇ ದೈವ, ಗುರು, ನಿಸರ್ಗದಲ್ಲಿರುವ ತನ್ನ ಅಂಕೆಗೆ ಒಳಪಡದ ಅದ್ಭುತ ಮತ್ತು ಭೀಕರ ಶಕ್ತಿಗಳ ಬಗೆಗೆ ಅವನಲ್ಲಿ ಸಹಜವಾಗಿಯೆ ಉಂಟಾಗಿರಬಹುದಾದ ಭೀತಿ. ಅದೇ ನಿಸರ್ಗ ತನಗೆ ಆಹಾರ ಒದಗಿಸಿ ಮಾರ್ಗದರ್ಶನ ನೀಡುವ, ಜೊತೆಗೆ ತನ್ನ ಸೌಂದರ್ಯವೆಲ್ಲವನ್ನು ತೆರೆದಿಟ್ಟು ಸಂತಸವನ್ನುಂಟುಮಾಡುತ್ತಿದ್ದ ಅದರ ಉಪಕಾರಪರತೆ-ಈ ಎರಡೂ ನಿಸರ್ಗವನ್ನು ದೈವತ್ವಕ್ಕೆ ಏರಿರುವಲ್ಲಿ ಆದಿಮಾನವನಿಗೆ ಪ್ರೇರಣೆ ನೀಡಿರಬಹುದು. ಹೀಗೆ ನಿಸರ್ಗ ಶಕ್ತಿಗಳ ಬಗೆಗೆ ಅವನ ಭೀತಿ, ಧನ್ಯತೆ ಇತ್ಯಾದಿಗಳ ಜೊತೆಗೆ ಹೆಣ್ಣು ಗಂಡುಗಳಲ್ಲಿಯ ಪರಸ್ಪರ ಪ್ರೇಮ ಪ್ರೀತಿ ಪ್ರಣಯ ವಾತ್ಸಲ-ಇತ್ಯಾದಿ ಭಾವನೆಗಳು ಅವನಲ್ಲಿ ಅದಮ್ಯವಾದಾಗ ಅವುಗಳನ್ನು ಪ್ರಕಟಿಸಲು ಹೊರಡಿಸುತ್ತಿದ್ದ ಧ್ವನಿಗಳೇ ಸಂಗೀತಕ್ಕೆ ಮೂಲವೆಂಬ ಅಭಿಪ್ರಾಯವಿದೆ. ಮುಂದೆ ಅನುಕರಣ ಪ್ರಿಯನಾದ ಮಾನವ ನಿಸರ್ಗದಲ್ಲಿಯ ಬೇರೆ ಬೇರೆ ಪಕ್ಷಿ ಪ್ರಾಣಿಗಳ ಧ್ವನಿಯನ್ನು ಅನೂಕರಿಸಲು ಯತ್ನಿಸಿದಾಗ ಸಂಗೀತ ಸ್ವರಗಳ ಪರಿಕಲ್ಪನೆಗೆ ಚಾಲನೆ ದೊರೆತಿರಬೇಕು. ಅದರಿಂದಾಗಿಯೆ ಹಾಡು ಮೊದಲು ಹುಟ್ಟಿತೆಂದು ಹೇಳುವುದು.

ಹೀಗೆ ಹಾಡನ್ನೇ ಗುನುಗುನಿಸುತ್ತಿದ್ದ ಮಾನವನಿಗೆ, ಒಮ್ಮೆ ಅಕಸ್ಮಾತ್ ತಾವು ವಾಸಿಸಲು ಬಿದಿರಿನಲ್ಲಿ ಭ್ರಮರಗಳು ಮಾಡಿದ ರಂಧ್ರಗಳಲ್ಲಿ ಗಾಳಿ ತುಂಬಿ ಹೊರಹೊಮ್ಮುತ್ತಿದ್ದ ಮಧುರ ಸ್ವರ ಹಿನ್ನೆಲೆಯನ್ನೊದಗಿಸಿದಾಗ ಇಡೀ ನಿಸರ್ಗವೆ ನಾದಮಾಧುರ್ಯದಿಂದ ತುಂಬಿದ್ದುದರ ಅನುಭವ ಉಂಟಾಗಿರಬೇಕು. ಆ ಅನುಭವವೆ ಕೊಳಲಿನಂತಹ ಉಸಿರುವಾದ್ಯಗಳ ರಚನೆಗೆ ಪ್ರೇರಣೆ ನೀಡಿರುವ ಸಾಧ್ಯತೆಯಿದೆ. ಹೀಗೆ ನಿಸರ್ಗದ ಜೊತೆಗಿದ್ದ ಅವನ ನಿರಂತರ ಸಂಪರ್ಕ ಅದರಿಂದಾಗಿ ಅವನು ಪಡೆದ ವಿಶಿಷ್ಟ ಬಗೆಯ ಅನುಭವಗಳು ಬೇರೆ ಬೇರೆ ಬಗೆಯ ವಾದ್ಯಗಳ ರಚನೆಗೆ ಅವನನ್ನು ತೊಡಗಿಸಿರಬೇಕು.

ಹಾಗೆ ನೋಡಿದರೆ ಸ್ವತಃ ಮಾನವದೇಹವೇ ಒಂದು ಉಸಿರುವಾದ್ಯ. ಮಾನವ ಗಾಢನಿದ್ದೆಯಲ್ಲಿದ್ದಾಗ ಅವನ ಮೂಗಿನಿಂದ ಹೊರಹೊಮ್ಮುವ ಸುಂಯ್‌ ಸುಂಯ್ ಧ್ವನಿ ಹಾಗೂ ಗೊರಕೆ, ನಾಭಿಮೂಲದಿಂದ ಕಹಳೆಯ ಪಾಂಗಿನೇವೊಲ್ ಕಂಠದ ಮೂಲಕ ಹೊರಡುವ ಕೂಗುವ ಧ್ವನಿ, ಅಪಾನವಾಯು ಹೊರಹೊಮ್ಮುವಾಗ ಹುಟ್ಟುವ ವಿಚಿತ್ರ ಧ್ವನಿ-ಇವೆಲ್ಲವನ್ನು ಕಂಡು ಕೇಳಿ ಅನುಭವಿಸಿದ ಮಾನವನಿಗೆ, ಸೀಳಿನ ಮೂಲಕ ಇಲ್ಲವೆ ರಂಧ್ರದ ಮೂಲಕ ಗಾಳಿ ಹೊರಬರುವಾಗ ಒಂದು ಬಗೆಯ ಧ್ವನಿ ಹೊರಡುತ್ತದೆಂದು ತಿಳಿದಿರಲು ಸಾಕು. ಮುಂದೆ ಬೇಟೆಗಾಗಿ ಬಿಲ್ಲು ಬಾಣಗಳ ತಯಾರಿಕೆ ಕಲಿತ ಮಾನವ ಬಿಲ್ಲಿಗೆ ಕಟ್ಟಿದ ನರದ ದಾರದಿಂದ ಹೊರಡುವ ಟೇಂಕಾರ ಶಬ್ದವನ್ನು ಕೇಳಿ ತಂತಿವಾದ್ಯಗಳ ರಚನೆ ಹೊಳೆದಿರಬೇಕು. ತಾಡನ ವಾದ್ಯಗಳ ಪರಿಕಲ್ಪನೆ ಕೂಡ ನಿಸರ್ಗದಲ್ಲಿ ಸಹಜವಾಗಿ ನಡೆಯುತ್ತಿದ್ದ ಧನ್ಯುತ್ಪಾದಕ ಘಟನೆಗಳಿಂದಲೇ ಉಂಟಾಗಿರಬಹುದು.

ಇಂದಿಗೂ ಹಳ್ಳಿಗಳಲ್ಲಿ ಮಕ್ಕಳು ಒಣಗಿದ ಜೋಳದ ದಂಟಿನ ಗಣಿಕೆಗೆ ವೃತ್ತಾಕಾರವಾಗಿ ಸುತ್ತಿಕೊಂಡಿರುವ ರವದಿಯ ಕೆಳಭಾಗವನ್ನು ಮೆಲ್ಲಗೆ ಬಿಡಿಸಿಕೊಂಡು ಊದುತ್ತಿರುವುದನ್ನು ಕಾಣಬಹುದು. ತೆಂಗಿನ ಗರಿಯಲ್ಲಿಯೆ ಒಂದು ಎಲೆಯನ್ನು ತೆಗೆದುಕೊಂಡೂ ಕೊಳವಿಯಾಕಾರದಲ್ಲಿ ಸುತ್ತ ಪೀಪಿಮಾಡಿ ಮಕ್ಕಳು ಊದುತ್ತ ಆಡುತ್ತಾರೆ. ಮಾವಿನ ಒಳ ಬೀಜದ ಎರಡು ಪಕಳೆಗಳ ತುದಿಯನ್ನು ಮೆಲ್ಲಗೆ ತಿಕ್ಕಿ ತೆಳ್ಳಗೆ ಚೂಪಾಗಿ ಮಾಡಿ ಬಾಯಲ್ಲಿಟ್ಟು ಪುಂಯ್ ಎಂದು ಊದುತ್ತಿರುವ ಹುಡುಗರೂ ಹಳ್ಳಿಗಳಲ್ಲಿ ಇಲ್ಲದಿಲ್ಲ. ಪೊಳ್ಳು ಗಲಗಿನ ಒಂದು ಬದಿಯಲ್ಲಿ ಸಿಬರು ಎಬ್ಬಿಸಿ ಸೀಳುಂಟು ಮಾಡಿ ಬಾಯಲಿಟ್ಟು ಉಸಿರನ್ನು ಹೊರಹೊಮ್ಮಿಸುತ್ತ ಸೀಟಿ ಹಾಕುವುದು ಹುಡುಗರಲ್ಲಿ ಸಾಮಾನ್ಯ. ಇಂಥ ಇನ್ನೂ ಹಲವಾರು ಉದಾಹರಣೆಗಳನ್ನು ಕೊಡಬಹುದು. ಇವೆಲ್ಲ ಉಸಿರುವಾದ್ಯದ ಅತ್ಯಂತ ಸರಳ ಉದಾಹರಣೆಗಳು. ಇವುಗಳಲ್ಲಿರುವ ತತ್ವವೇ ಜನಪದ ವಾದ್ಯಗಳಲ್ಲಿಯೂ ಇದೆ.

ಈಗ ಬಳಕೆಯಲ್ಲಿರುವ ವಿವಿಧ ಬಗೆಯ ಜನಪದ ವಾದ್ಯಗಳ ರೂಪ, ರಚನಾ ಸಾಮಗ್ರಿ, ರಚನಾ ವಿಧಾನ ಹಾಗೂ ಪ್ರಯೋಗವನ್ನು ಗಮನಿಸಿ- ಮೊದಲು ತಾಡನ ವಾದ್ಯಗಳು, ತದನಂತರ ಗಾಳಿ ಇಲ್ಲವೆ ಉಸಿರುವಾದ್ಯಗಳು, ಆಮೇಲೆ ಮೀಟಿ ಬಾರಿಸುವ ತಂತಿವಾದ್ಯಗಳು ನಿರ್ಮಾಣಗೊಂಡಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಅದು ಬಹುಮಟ್ಟಿಗೆ ಸರಿಯಾಗಿದೆ. ಕಾಲಕಳೆದಂತೆ ಮಾನವ ತನ್ನ ಬುದ್ಧಿಶಕ್ತಿಯ ಬಲದಿಂದ ಮೂಲ ವಾದ್ಯಗಳಲ್ಲಿ ಮಾರ್ಪಾಡು, ಸುಧಾರಣೆಗಳನ್ನು ಉಂಟುಮಾಡುತ್ತ ಅಭಿವೃದ್ಧಿಪಡಿಸುತ್ತಲೇ ಬಂದಿದ್ದಾನೆ.

ಸುಷಿರವಾದ್ಯಗಳು ಎಂಬ ಹೆಸರು ಶಾಸ್ತ್ರದ ಗ್ರಂಥಗಳಲ್ಲಿ ಬರುತ್ತದೆ. ಸುಷಿರ ಎಂದರೆ ರಂಧ್ರ ಎಂದರ್ಥ, ರಂಧ್ರದ ಮೂಲಕ ಗಾಳಿಯನ್ನು ನೂಕಿ ಬಾರಿಸುವ ವಾದ್ಯಗಳು ಸುಷಿರವಾದ್ಯಗಳು. ಆ ಗಾಳಿ ಮನುಷ್ಯನ ಉಸಿರಿನ ಮೂಲಕ ಬರುವಂತಿದ್ದರೆ ಅಂಥವನ್ನು ಉಸಿರು ವಾದ್ಯಗಳೆಂದು ಕರೆಯುತ್ತಾರೆ. ಹಾರ್ಮೋನಿಯಂದಂಥ ವಾದ್ಯಗಳಲ್ಲಿಯೂ ಗಾಳಿಯ ಮೂಲಕವೇ ಧ್ವನಿಯನ್ನು ಹೊರಡಿಸಲಾಗುತ್ತದೆ. ಆದರೆ ಅಲ್ಲಿ ಗಾಳಿಯನ್ನು ಉಸಿರಿನಿಂದ ತುಂಬದೆ ಬೇರೆ ವಿಧಾನದಿಂದ ತುಂಬಲಾಗುತ್ತದೆ. ಒಟ್ಟಿನಲ್ಲಿ ಗಾಳಿ ಮುಖ್ಯ, ಅದನ್ನು ವಾದ್ಯಗಳಲ್ಲಿ ಉಸಿರಿನ ಮೂಲಕ ತುಂಬಬಹುದು ಅಥವಾ ಬೇರೆ ವಿಧಾನದಿಂದ ತುಂಬಬಹುದು. ಆದುದರಿಂದ ಅಂತಹ ವಾದ್ಯಗಳನ್ನು ಗಾಳಿವಾದ್ಯಗಳೆಂದು ಕರೆಯುವುದು ಹೆಚ್ಚು ಸಮಂಜಸವೆನಿಸುತ್ತದೆ.

ಜನಪದರಲ್ಲಿ ಬಳಕೆಯಲ್ಲಿರುವ, ಹಾಗೆಯೆ ಶಿಷ್ಟರೂ ಬಳಸುತ್ತಿರುವ ಉಸಿರು ಅಥವಾ ಗಾಳಿ ವಾದ್ಯಗಳನ್ನು ಅವುಗಳ ರಚನಾವಿನ್ಯಾಸದ ಹಿನ್ನೆಲೆಯಲ್ಲಿ ಮುಖ್ಯವಾಗಿ ಎರಡು ಇಲ್ಲವೆ ಮೂರು ವಿಧವಾಗಿ ವಿಂಗಡಿಸಬಹುದು,

೧. ಒಂದೇ ರಂಧ್ರವಿದ್ದು ಪೀಪಿಯಿಲ್ಲದ ವಾದ್ಯಗಳು-ಕೊಂಬು, ಕಹಳೆ, ಶಂಖ ಇತ್ಯಾದಿ.

೨. ಒಂದಕ್ಕಿಂತ ಹೆಚ್ಚು ರಂಧ್ರಗಳಿದ್ದು ಪೀಪಿ ಇಲ್ಲದ ವಾದ್ಯಗಳು-ಕೊಳಲು, ಪುಂಗಿ, ಇತ್ಯಾದಿ.

೩. ಪೀಪಿ ಮತ್ತು ರಂಧ್ರಗಳಿರುವ ವಾದ್ಯಗಳು-ನಾಗಸ್ವರ, ಷಹನಾಯಿ, ಬಜಂತ್ರಿ ಇತ್ಯಾದಿ.

ಹೀಗೆ ಉಸಿರು ವಾದ್ಯಗಳನ್ನು ವಿಂಗಡಿಸಿರುವಲ್ಲಿ ಅವುಗಳು ರಚನೆಗೊಂಡಿರಬಹುದಾದ ಕಾಲಾನುಕ್ರಮವನ್ನೂ ಲಕ್ಷ್ಯದಲ್ಲಿರಿಸಲಾಗಿದೆ. ಇವು ಜನಪದರು ಶಿಷ್ಟರು ಎಂಬ ಭೇದವಿಲ್ಲದೆ ಎಲ್ಲರಲ್ಲಿಯೂ ಬಳಕೆಯಲ್ಲಿವೆ. ಜನಪದರಲ್ಲಿ ಇವು ಸ್ವಲ್ಪ ಒರಟಾಗಿ ಮೂಲಸ್ಥಿತಿಯಲ್ಲಿದ್ದರೆ, ಶಿಷ್ಟರಲ್ಲಿ ನಯ ನಾಜೂಕುಗಳಿಂದ ಕೂಡಿ ಸುಂದರವಾಗಿ ಅಲಂಕೃತವಾಗಿ ಅಭಿವೃದ್ಧಿಪಡೆದು ಇರಬಹುದು. ಈಗ ಕೆಲವು ಪ್ರಮುಖ ಜನಪದ-ಶಿಷ್ಟ-ಉಸಿರು ವಾದ್ಯಗಳನ್ನು ಕುರಿತು ಪರಿಶೀಲಿಸಬಹುದು.

ಕೊಂಬು :

ರಚನೆಯ ದೃಷ್ಟಿಯಿಂದ ಬಹು ಸರಳವಾದ ಜನಪದ ಉಸಿರುವಾದ್ಯವಿದು. ಇದನ್ನು ಸಿದ್ಧಪಡಿಸಲು ಬೇಕಾದ ಸಾಮಗ್ರಿ ಕೂಡ ಜನಪದರಿಗೆ ಸುಲಭವಾಗಿ ದೊರೆಯುವಂತಹುದು. ಆದುದರಿಂದ ಉಸಿರು ವಾದ್ಯಗಳಲ್ಲಿ ಕೊಂಬು ಎಲ್ಲಕ್ಕೂ ಮೊದಲು ನಿರ್ಮಾಣಗೊಂಡಿರಬಹುದಾದ ಸಾಧ್ಯತೆಯಿದೆ. ಹೆಸರೇ ಸೂಚಿಸುವಂತೆ ಕೋಣ ಇಲ್ಲವೆ ಎಮ್ಮೆಯ ವಕ್ರವಾಗಿ ಬಾಗಿರುವ ಕೊಂಬಿನ ಚೂಪಾದ ಭಾಗದಲ್ಲಿ ಒಂದು ರಂಧ್ರ ಮಾಡಿದರೆ ಸಾಕು. ಕೊಂಬುವಾದ್ಯ ಸಿದ್ಧ. ರಂಧ್ರಕ್ಕೆ ಬಾಯಿಟ್ಟು ಜೋರಾಗಿ ಊದಿದಾಗ, ಕೊಂಬು ಟೊಳ್ಳಾಗಿರುವುದರಿಂದ ಅದರೊಳಗಿಂದ ಗಾಳಿ ಹಾಯ್ದು ಬರುವಾಗ ಕಂಪನಗಳುಂಟಾಗಿ ಧ್ವನಿ ಹೊರಡುತ್ತದೆ. ಕೊಂಬುವಾದ್ಯದ ಮುಂಭಾಗ ಅಗಲವಾಗಿರುವುದರಿಂದ ಧ್ವನಿ ವರ್ಧಿಸುತ್ತ ಹೋಗಿ ಬಹುದೂರದವರೆಗೆ ಅದು ಕೇಳುವಂತಾಗುತ್ತದೆ.

ಈ ಕೊಂಬುವಾದ್ಯವನ್ನು ಮೊದಲು ಶತ್ರುಗಳ, ಕಾಡುಮೃಗಗಳ ದಾಳಿಯ ಸೂಚನೆಕೊಡಲು ಬಳಸಲಾಗುತ್ತಿತ್ತು. ಜನರೆಲ್ಲರನ್ನು ಒಂದೆಡೆ ಸೇರಿಸುವ ಉದ್ದೇಶಕ್ಕೂ ಬಳಸುತ್ತಿದ್ದರು. ಲೋಹದ ಬಳಕೆ ಆರಂಭವಾದ ಮೇಲೆ ಲೋಹದಿಂದಲೂ ಕೊಂಬುವಾದ್ಯಗಳ ನಿರ್ಮಾಣ ಆರಂಭವಾಯಿತು. ಕಾಲಕಳೆದಂತೆ ಕೊಂಬುವಾದ್ಯವನ್ನು ಮನರಂಜನೆಗಾಗಿ, ಇಲ್ಲವೆ ಒಂದು ವಿಶಿಷ್ಟ ಉದ್ದೇಶಕ್ಕಾಗಿ ದನಗಾಹಿಗಳೂ ಊದಲಾರಂಭಿಸಿದರು. ಯುದ್ಧವಾದ್ಯಗಳಲ್ಲೂ ಇದು ಸಮಾವೇಶವಾಗಿದೆ. ನಂಜುಂಡಕವಿಯ ಪ್ರಕಾರ ಕೊಂಬು ಯುದ್ಧವಾದ್ಯಗಳಲ್ಲಿ ಒಂದು.

ಬರಬರುತ್ತ ದೇವರ ಉತ್ಸವ, ಮೆರವಣಿಗೆ, ಗಣ್ಯವ್ಯಕ್ತಿಗಳ ಸ್ವಾಗತ ಹಾಗೂ ಬೀಳ್ಕೊಡುಗೆ, ಮನರಂಜನೆ ಇತ್ಯಾದಿ ಸಂದರ್ಭಗಳಲ್ಲೂ ಇತರ ವಾದ್ಯಗಳ ಜೊತೆಗೆ, ಮುಖ್ಯವಾಗಿ ಕಹಳೆಯ ಜೊತೆಗೆ ನುಡಿಸುವುದು ಆರಂಭವಾಯಿತು. ಈ ವಾದ್ಯದ ರಚನೆಯಲ್ಲಿ ಇಂದಿಗೂ ಹೆಚ್ಚಿನ ಬದಲಾವಣೆಯಾಗಿಲ್ಲ.

ಕಹಳೆ :

ಆಕಾರದಲ್ಲಿ ಕಹಳೆ ಕೊಂಬಿನಂತೆಯೆ ಇದ್ದರೂ ಅದಕ್ಕಿಂತ ಹೆಚ್ಚು ಉದ್ದ ಮತ್ತು ವಕ್ರವಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಹಿತ್ತಾಳೆಯ ಕೊಳವೆಗಳಿಂದ ರಚಿಸಿರುತ್ತಾರೆ. ಒಂದರಿಂದ ಎರಡು ಮೀಟರ ಉದ್ದದ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಕಡಿಮೆ ಉದ್ದದ ಸ್ವಲ್ಪ ವಕ್ರವಾಗಿರುವ ಕೊಳವೆಗಳನ್ನು ಒಂದರೊಳಗೊಂದು ಸೇರಿಸಿ ಇದನ್ನು ಸಿದ್ದಪಡಿಸುವುದುಂಟು. ಕೊಳವಿಗಳ ಸಂಖ್ಯೆ ಹೆಚ್ಚಾಗಿದ್ದಾಗ ಕಹಳೆ ಕೆಲಸಲ ಇಂಗ್ಲಿಷ್ S ಆಕಾರ ಪಡೆಯುವುದುಂಟು. ಬಾಯಿಹಚ್ಚಿ ಊದುವ ಕೊಳವೆಯ ವ್ಯಾಸ ಕಡಮೆಯಿದ್ದು ಅದಕ್ಕೆ ಜೋಡಿಸುವ ಕೊಳವೆಗಳ ವ್ಯಾಸ ಹೆಚ್ಚುತ್ತ ಹೋಗುತ್ತದೆ. ಕೊನೆಯ ಕೊಳವೆಯ ಮುಂಭಾಗ ಹೆಚ್ಚು ಅಗಲವಾಗಿರುತ್ತದೆ. ಕಹಳೆಯನ್ನು ಊದಲು ಹೆಚ್ಚಿನ ಶಕ್ತಿಬೇಕು. ಆರಂಭದಲ್ಲಿ ಇದರ ಉಪಯೋಗ ಬಹುಮಟ್ಟಿಗೆ ಕೊಂಬಿನಂತಿದ್ದರೂ ಕಾಲಕಳೆದಂತೆ ಬೇರೆಬೇರೆ ಸಂದರ್ಭಗಳಲ್ಲಿ ಇದನ್ನು ಬಳಸಲಾರಂಭಿಸಿದುದಕ್ಕೆ ಶಾಸನ ಮತ್ತು ಸಾಹಿತ್ಯಕೃತಿಗಳಲ್ಲಿ ಬರುವ ವಿವರಗಳು ಸಾಕ್ಷಿ ನುಡಿಯುತ್ತವೆ.

ಹದಿನೈದನೆಯ ಶತಮಾನದ ಚಂದ್ರಶೇಖರಕವಿಯ ‘ಪಂಪಾಸ್ಥಾನವರ್ಣನಂ’ ಕೃತಿಯಲ್ಲಿ “ಕನಕದ ಕುಸುಮಾಕಾರದ ಕುಡಿಗಂಟಿಕೆಯನೆಡಗೆಯ್ಯೊಳ್ ಪಿಡಿದು… ಮಿಕ್ಕಕಂಡಿಕೆಗಳಂ ಜೋಡಿಸಿ ಮುಖಗಂಟಿಗೆಯಂ ಮುರಿದು ಬಲಿದು ಬಾಯ್ದೆರೆಯ ಸಾರ್ಚಿ ಸಾರ್ಚಿ………ಶ್ರುತಿಯಂ ಕೂಡಿ ತುತ್ತುರು ತುಕುತುಕು ತುಕುತೋಂ ಧಿಕಿತೋ ಧಿತ್ತಕಿ” ಎಂದು (ಪದ್ಯ ೮೩ ವ.) ವಿರೂಪಾಕ್ಷನ ದೇವಾಲಯದಲ್ಲಿ ಕಹಳೆ ಬಾರಿಸುವವನ ಒಂದು ಶಬ್ದಚಿತ್ರ ಬರುತ್ತಿದ್ದು, ಅದನ್ನು ಓದಿದಾಗ ಕಹಳೆಯ ಬೇರೆ ಬೇರೆ ಭಾಗಗಳ ಹೆಸರುಗಳು, ಅದನ್ನು ಹಿಡಿದು ಊದುವ ವಿಧಾನ, ಅದರಿಂದ ಹೊರಹೊಮ್ಮುತ್ತಿದ್ದ ಧ್ವನಿ-ಇತ್ಯಾದಿ ಹಲವಾರು ವಿವರಗಳು ತಿಳಿದುಬರುತ್ತವೆ. ಸಿಂಹಭೂಪಾಲಕೃತ ‘ಲಾಸ್ಯರಂಜನ’ದ ಪ್ರಕಾರ ನೃತ್ಯದ ಪಕ್ಕವಾದ್ಯಕಾರರಲ್ಲಿ ಇತರರ ಜೊತೆಗೆ ಇಬ್ಬರು ಕಹಳೆಯವರೂ ಬೇಕು. ಬಿರುದುಗಳನ್ನು ಉದ್ಘೋಷಿಸುವ ಸಮಯದಲ್ಲಿ ಕಹಳೆ ನುಡಿಸುತ್ತಿದ್ದಂತೆ ಕುಮಾರವ್ಯಾಸ ಹೇಳಿದ್ದಾನೆ. ರಾಜವೈಭವ ಸೂಚನೆಗಳಲ್ಲಿ ಕಹಳೆಯೂ ಒಂದೆಂದೂ (Ec vii ಶಿಕಾ. ೮೦) ಅದು ಪಂಚಮಹಾ ಶಬ್ದಗಳಲ್ಲಿ ಸಮಾವೇಶವಾಗುತ್ತದೆಂದೂ (Ec iii ನಂಜನಗೂಡ ೧೬೪, ಕ್ರಿ. ಶ. ೧೦೦೨) ಶಾಸನಗಳು ತಿಳಿಸುತ್ತವೆ. ವಿವೇಕಚಿಂತಾಮಣಿಯಲ್ಲಿ ನಿಜಗುಣ ಶಿವಯೋಗಿ ಕೂಡ ಕಹಳೆಯನ್ನು ಪಂಚಮಹಾಶಬ್ದಗಳಲ್ಲಿ ಸೇರಿಸುವ ಜೊತೆಗೆ ದಶವಿಧನಾದಗಳಲ್ಲಿ ಕಹಳೆಯ ಧ್ವನಿಯೂ ಸೇರುತ್ತದೆಂದು ಹೇಳುತ್ತಾನೆ.

“ಕೊಂಬುಗಳು ಕರೆದಾವ ಕಾಳಿಗಳು ಊದ್ಯಾವ | ದಿಮ್ಮಿ ಕರಡೆಲ್ಲ ಕಣಕಣಿಸಿ ನಿಬ್ಬಣದ ಅಬ್ಬರ ಸಂಭ್ರಮ ಹೇಳ್ಯಾವ”-ಎಂಬ ಜನಪದ ತ್ರಿಪದಿಯಿಂದ ಕೊಂಬು ಕಹಳೆಗಳು ಮದುವೆಯ ಸಂದರ್ಭದಲ್ಲೂ ಬಳಸುತ್ತಿದ್ದ ವಾದ್ಯಗಳೆಂದು ತಿಳಿಯುತ್ತದೆ. ರಣಗಹಳೆಯ ಉಲ್ಲೇಖ ಅನೇಕ ಕಡೆ ಬರುತ್ತದೆ. ಆದುದರಿಂದ ಯುದ್ಧ ವಾದ್ಯಗಳಲ್ಲಿ ಇದು ಪ್ರಮುಖ. ಸೈನಿಕರನ್ನು ಹುರಿದುಂಬಿಸಲು ಇದರ ಬಳಕೆಯಾಗುತ್ತಿತ್ತು. ಹೆಗ್ಗಹಳೆ, ಚಿನಿಕಹಳೆ, ಜವಳಿಗಾಳೆ, ಇರುಗಾಳೆ ಇತ್ಯಾದಿ ಹಲವಾರು ಬಗೆಯ ಕಹಳೆಗಳ ಉಲ್ಲೇಖ ಶಾಸನ ಹಾಗೂ ಸಾಹಿತ್ಯ ಕೃತಿಗಳಲ್ಲಿ ಬರುತಿದ್ದು, ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಕಹಳೆಗಳ ಬಳಕೆಯಾಗುತ್ತಿದ್ದುದನ್ನು ಅದು ಸೂಚಿಸುತ್ತದೆ.

ಹೀಗೆ ಅರಂಭದಲ್ಲಿ ಒಂದು ಉದ್ದೇಶಕ್ಕಾಗಿ ನಿರ್ಮಾಣಗೊಂಡ ಈ ಜನಪದ ಉಸಿರುವಾದ್ಯ, ಅರಮನೆ ಗುರುಮನೆಗಳಲ್ಲಿ ಅವರ ವೈಭವಸೂಚಕವಾದ್ಯವಾಗಿ, ನೃತ್ಯಾದಿಗಳಲ್ಲಿ ಪಕ್ಕವಾದ್ಯವಾಗಿ ಶಿಷ್ಟರ ವಾದ್ಯಗೋಷ್ಠಿಯಲ್ಲಯೂ ಸ್ಥಾನ ಪಡೆದಿರುವುದು ಕಂಡುಬರುತ್ತದೆ. ಜನಪದರ ವಾದ್ಯಗಳು ಶಿಷ್ಟರಲ್ಲಿಯೂ ಬಳಕೆಗೊಳ್ಳಲಾರಂಭಿಸಿದುದಕ್ಕೆ ಉದಾಹರಣೆಯಿದು.

ಇನ್ನೂ ಹಳ್ಳಿಗಳಲ್ಲಿ ಕಹಳೆಯ ಬಳಕೆ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ವರ್ಗಕ್ಕೆ ಸೇರಿದ ನಲಿಕೆ ಜನಾಂಗದವರ ಎರ್ಕೋಲ ಕಲಾಪ್ರದರ್ಶನದ ಸಂದರ್ಭದಲ್ಲಿ, ಕೊಡಗು ಜಿಲ್ಲೆಯ ಕೊಡವರ ಕೊಂಬಾಟದ ಸಮಯದಲ್ಲಿ, ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ನಾಯಕ ಮತಕ್ಕೆ ಸೇರಿದವರು ವೀರ ಮಕ್ಕಳ ಕುಣಿತದ ನಂತರ ಕೆಂಡಹಾಯುವ ಸಂಪ್ರದಾಯವಿದ್ದು ಆ ಕೆಂಡ ಸಿದ್ಧಪಡಿಸಲು ಬೇಕಾದ ಕಟ್ಟಿಗೆಗಳನ್ನು ತರುವ ಸಂದರ್ಭದಲ್ಲಿ, ಕರ್ನಾಟದ ಎಲ್ಲ ಭಾಗಗಳಲ್ಲಿ ದೊಡ್ಡವರನ್ನು ಎದುರುಗೊಳ್ಳುವಾಗ, ಬೀಳ್ಕೊಡುವಾಗ, ಶ್ರೀಶೈಲದ ಕಂಬಿಯವನನ್ನು ಊರಲ್ಲಿ ಕರೆತರುವಾಗ, ಜಾತ್ರೆ, ಉತ್ಸವ ನೆರವೇರಿಸುವಾಗ, ಶವಯಾತ್ರೆ ನಡೆದಾಗ- ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ಕಹಳೆಯ ಬಳಕೆಯಾಗುತ್ತದೆ. ವಂಶಪಾರಂಪರ್ಯವಾಗಿ ಕಹಳೆ ಬಾರಿಸುವ ಮನೆತನಗಳಿವೆ. ಅವರಿಗೆ ಹಳ್ಳಿಗಳಲ್ಲಿ ರಾಶಿಯ ಸಂದರ್ಭದಲ್ಲಿ ಆಯ ದೊರೆಯುತ್ತದೆ.

ಶಂಖ :

ಇದು ಬಹಳ ಪ್ರಾಚೀನ ವಾದ್ಯವಾಗಿದ್ದು ಸಾಮವೇದದಲ್ಲಿಯೆ ಇದರ ಉಲ್ಲೇಖವಿದೆಯೆಂದು ಹೇಳಲಾಗುತ್ತಿದೆ. ಪ್ರಕೃತಿದತ್ತ ವಾದ್ಯವಿದು. ಇದರ ಒಳಭಾಗದಲ್ಲಿ ನೈಸರ್ಗಿಕ ಸುರುಳಿಯಾಕಾರದ ಟೊಳ್ಳುಭಾಗವಿರುತ್ತದೆ. ಅದರ ಮುಚ್ಚಿದ ಭಾಗದಲ್ಲಿ ಒಂದು ರಂಧ್ರ ತೆಗೆದರೆ ಸಾಕು. ಉಸಿರುವಾದ್ಯವಾದ ಶಂಖ ಸಿದ್ಧ. ರಂಧ್ರದ ಮೂಲಕ ಊದಿದ ಗಾಳಿಯು ಸುರುಳಿಗಳಲ್ಲಿ ಸುತ್ತುತ್ತ ಕಂಪನ ಪಡೆದು ಧ್ವನಿಯಾಗಿ ಹೊರಹೊಮ್ಮುತ್ತದೆ. ಅದು ಬಹುದೂರದವರೆಗೆ ಕೇಳಬಲ್ಲದು. ದೇವಾಲಯಗಳಲ್ಲಿ ದೇವರ ಪೂಜಾ ಸಂದರ್ಭದಲ್ಲಿ ಶಂಖ ಊದುವುದು ರೂಢಿ. ಶಂಖವನ್ನು ಊದಲು ಅನುಕೂಲವಾಗಲೆಂದು. ಹಾಗೂ ಅದಕ್ಕೊಂದು ಸೌಂದರ್ಯ ತರಲು ರಂಧ್ರದ ಸುತ್ತಲೂ ಹಿತ್ತಾಳೆಯ ಇಲ್ಲವೆ ಬೆಳ್ಳಿಯ ಹೊದಿಕೆ ತೊಡಿಸಿರುವುದೂ ಉಂಟು. ವಿಷ್ಣು ಶಂಖಧಾರಿ. ಶಂಖದಿಂದ ಬಂದದ್ದೇ ತೀರ್ಥವೆಂಬ ಮಾತು ಇದೆ. ಆದುದರಿಂದ ಹಿಂದೂಗಳಲ್ಲಿ ಶಂಖಕ್ಕೆ ಒಂದು ಬಗೆಯ ಧಾರ್ಮಿಕ ಮಹತ್ವವಿದೆ.

ಪಂಪ ಹೇಳಿರುವ ರಣವಾದ್ಯಗಳಲ್ಲಿ ಶಂಖವೂ ಒಂದು. ಕೃಷ್ಣ ಮಹಾಭಾರತ ಯುದ್ಧದ ಸಂದರ್ಭದಲ್ಲಿ ವೈರಿಗಳ ಎದೆ ನಡುಗುವಂತೆ ಊದಿದ ಪಾಂಚಜನ್ಯ ಒಂದು ಬಗೆಯ ಶಂಖವೇ. ಸೈನಿಕರಲ್ಲಿ ಹುರುಪು ಉತ್ಸಾಹಗಳನ್ನು ತುಂಬಲು ಇದನ್ನು ನುಡಿಸಲಾಗುತ್ತಿತ್ತು. ಶಂಖನಾದ ವೈಭವದ ಸೂಚಕವೆಂದು ಶಾಸನ ಹೇಳುತ್ತದೆ (Ec vii ಶಿಕಾ. ೮೦). ನಿಜಗುಣ ಶಿವಯೋಗಿಯ ಪ್ರಕಾರ ಶಂಖ ಪಂಚಮಹಾವಾದ್ಯಗಳಲ್ಲಿ ಒಂದು. ದಶವಿಧ ನಾದಗಳಲ್ಲಿ ಶಂಖಧ್ವನಿಯೂ ಒಂದೆಂದು ಅವನೇ ಹೇಳಿದ್ದಾನೆ.

ಕೆಂಬಾವಿ ಭೋಗಣ್ಣನ ಸಾಂಗತ್ಯದಲ್ಲಿ (ಪು. ೩೭) ಅರಮನೆಯ ಪಾತ್ರದವರ ನರ್ತನಕ್ಕೆ ಹಿನ್ನೆಲೆಯಾಗಿದ್ದ ವಾದ್ಯಗಳ ಉಲ್ಲೇಖವಿದ್ದು, ಅವುಗಳಲ್ಲಿ ಶಂಖವೂ ಇದೆ. ‘ಸಂಗೀತ ಪಾರಿಜಾತ’ ಗ್ರಂಥದಲ್ಲಿ ೧೨ ಅಂಗುಲ ಮಧ್ಯರೇಖೆಯುಳ್ಳ ಶಂಖದಿಂದ ಸಂಗೀತ ನುಡಿಸಬಹುದೆಂದು ಹೇಳಿದೆ.

[1] ಶಂಖದಿಂದ ಲಯಬದ್ಧ ಆಂದೋಲಿತ ಗಂಭೀರ ಧ್ವನಿ ಹೊರಡುವುದರಿಂದ ನಾಗಸ್ವರದ ಜೊತೆಗೆ ಕ್ವಚಿತ್ತಾಗಿ (ದಕ್ಷಿಣದ ಕರಕಾ ಹೆಸರಿನ ಗ್ರಾಮೀಣ ನೃತ್ಯದಲ್ಲಿ) ಶಂಖ ನುಡಿಸುತ್ತಾರಂತೆ.

ಗರುಡಗಂಬದ ದಾಸಯ್ಯ ಭಿಕ್ಷೆಗೆ ಬಂದಾಗ ದೇವರ ನಾಮಸ್ಮರಣೆ ಮಡಿ ಶಂಖ ಊದುತ್ತಾನೆ. ಸುಡುಗಾಡಸಿದ್ದರು ಕೂಡ ಭಿಕ್ಷೆ ನೀಡಿದವರಿಗೆ ಹರಕೆ ನೀಡಿ ಶಂಖ ಬಾರಿಸುತ್ತಾರೆ. ಬಯಲುಸೀಮೆಯಲ್ಲಿ ಕೆಲವೆಡೆ ಮಾತ್ರ ಹರಿಗೆ ಸೇವೆ ಸಂಪ್ರದಾಯದ ಆಚರಣೆಯ ಕುಣಿತದಲ್ಲಿ ಶಂಖ ಊದುವುದುಂಟು.

ಕೊಳಲು :

ಭಾರತದ ಅತ್ಯಂತ ಪ್ರಾಚೀನ ಜನಪದ ಉಸಿರುವಾದ್ಯಗಳಲ್ಲಿ ಕೊಳಲು ಒಂದು ಹರಪ್ಪಾ ಮತ್ತು ಮೊಹಂಜೊದಾರೊ ಉತ್ಖನನದಲ್ಲಿ ದೊರೆತಿರುವ ಅವಶೇಷಗಳಲ್ಲಿ ಏಳುರಂಧ್ರಗಳುಳ್ಳ ಒಂದು ಬಗೆಯ ಕೊಳಲನ್ನು ಸಂಶೋಧಕರು ಗುರುತಿಸಿದ್ದಾರೆ, ಋಗ್ವೇದದಲ್ಲಿ ‘ನಾಡಿ’ ಹೆಸರಿನ ಒಂದು ಸುಷಿರವಾದ್ಯದ ಉಲ್ಲೇಖವಿದೆ. ಸಂಸ್ಕೃತದಲ್ಲಿ ಕೊಳಲಿಗೆ ವೇಣು, ಮುರಲಿ, ವಂಶಿ ಮುಂತಾದ ಹೆಸರುಗಳಿವೆ. ಕನ್ನಡದಲ್ಲಿ ಇದನ್ನು ಪಿಳ್ಳಂಗೋವಿ ಅಥವಾ ಪಿಳ್ಳಂಗೊಳವಿಯೆಂದೂ ಕರೆಯುತ್ತಾರೆ. ಹಿಂದಿಯಲ್ಲಿ ಬಾಂಸುರಿ ಎನ್ನುತ್ತಾರೆ. ಯಜುರ್ವೇದ ಮೇಣುವಾದನವನ್ನು ಹೆಸರಿಸುತ್ತದೆ. ವಿಶ್ವವಿಜೇತ ಅಲೆಗ್ಜಾಂಡರ್‌ಗೆ ಅವನ ಗುರು ಭಾರತದಿಂದ ಗುರುದಕ್ಷಿಣೆಯಾಗಿ ತರಲು ಹೇಳಿದ ವಸ್ತುಗಳಲ್ಲಿ ಕೊಳಲು ಒಂದು. ಕೃಷ್ಣ ಮುರಲೀಧರ. ಅವನೇ ಕೊಳಲ ನಿರ್ಮಾಪಕನೆಂದು ಪುರಾಣಗಳು ಹೇಳುತ್ತವೆ. ಅವನ ಕೊಳಲಿನಿಂದ ಹೊರಹೊಮ್ಮುತ್ತಿದ್ದ ಸಹಸ್ರಾರು ರಾಗಗಳನ್ನೇ ಅವನ ಹದಿನಾರು ಸಾವಿರ ಗೋಪಿಕೆಯರು ಪ್ರತಿನಿಧಿಸುತ್ತಾರೆಂದು ಹೇಳುವ ದಂತಕಥೆಗಳಿವೆ.

ಶೂದ್ರಕನ ‘ಮೃಚ್ಚಕಟಿಕ’ದಲ್ಲಿ ಸಪ್ತವಿಧ ವಂಶಿಗಳ ಉಲ್ಲೇಖವಿದೆ. ಸಾರಂಗ ದೇವನ ‘ಸಂಗೀತರತ್ನಾಕರ’ದಲ್ಲಿ ಹದಿನಾಲ್ಕು ಬಗೆಯ ಕೊಳಲನ್ನು ಹೇಳಿದೆ. ಚಂದ್ರಶೇಖರಕವಿಯ (ಕ್ರಿ.ಶ.ಸು ೧೪೩೦) ‘ಪಂಪಾಸ್ಥಾನ ವರ್ಣನಂ’ ಗ್ರಂಥದಲ್ಲಿ (ಪದ್ಯ ೨೨ವ), ನಿಜಗುಣಶಿವಯೋಗಿಯ (ಕ್ರಿ.ಶ.ಸು ೧೫೦೦) ವಿವೇಕಚಿಂತಾಮಣಿ, ಪ್ರಭುಗನ (ಕ್ರಿ.ಶ. ಸು. ೧೫೨೦) ವೈಭೋಗರಾಜಾಸ್ಥಾನ[2] ಇತ್ಯಾದಿ ಕೃತಿಗಳಲ್ಲಿ ಹದಿನೆಂಟುಬಗೆಯ ಕೊಳಲುಗಳ ಹೆಸರನ್ನು ಹೇಳಿದೆ. ಅವುಗಳ ಉದ್ದ ಒಂದಂಗುಲದಿಂದ ಹದಿನೆಂಟಂಗುಲ. ನಿಜಗುಣಶಿವಯೋಗಿಯ ಪ್ರಕಾರ ದಶವಿಧ ನಾದಗಳಲ್ಲಿ ವಾಸ (ಕೊಳಲು) ಧ್ವನಿಯೂ ಒಂದು. ಕೊಳಲಿನ ಮುಖರಂಧ್ರ ಮತ್ತು ಉಳಿದ ತಾರ ರಂಧ್ರಗಳ ನಡುವಿನ ಅಂತರವೆ ವಿವಿಧ ಬಗೆಯ ಕೊಳಲಿಗೆ ಕಾರಣವೆಂದು ವಿದ್ವಾಂಸರ ಅಭಿಪ್ರಾಯ.

ದೇವಾಲಯಗಳ ರಂಗಭೋಗದ ಉಪಕರಣಗಳಲ್ಲಿ ವಾಂಶಿಕರೂ ಸಮಾವೇಶವಾಗುತ್ತಿದ್ದು, ಅವರಿಗೂ ಭೂದಾನವಿತ್ತ ಉಲ್ಲೇಖ ಶಾಶನಗಳಲ್ಲಿ ಬರುತ್ತದೆ (SII ix 133). ರಾಜರ ಆಸ್ಥಾನಗಳಲ್ಲಿ ನಡೆಯುತ್ತಿದ್ದ ಸಂಗೀತ – ವಾದ್ಯ – ನೃತ್ಯಗೋಷ್ಠಿಗಳ ವಿವರಣಾಸಂದರ್ಭದಲ್ಲಿ ಕೊಳಲುವಾದಕರ ಹಾಗೂ ಕೊಳಲುಗಳ ಉಲ್ಲೇಖ ಕೆಲವು ಪ್ರಾಚೀನ ಕನ್ನಡಸಾಹಿತ್ಯಕೃತಿಗಳಲ್ಲಿ ಬರುತ್ತದೆ. ಕಮಲಭವನ (ಕ್ರಿ.ಶ. ೧೨೩೫) ಶಾಂತೀಶ್ವರ ಪುರಾಣದಲ್ಲಿ (೭-೯೩ವ, ಮತ್ತು ೧೬-೬೭ವ) ‘ಬಾರಹೆ’ ಮತ್ತು ‘ಸೋಳಹೆ’ ಹೆಸರಿನ ಕೊಳಲುಗಳ ಉಲ್ಲೇಖ ಬರುತ್ತಿದ್ದು ಅವು ಪ್ರಾಯಃ ಹನ್ನೆರಡು ಮತ್ತು ಹದಿನಾರು ರಂಧ್ರಗಳುಳ್ಳ ಕೊಳಲುಗಳಾಗಿರಬೇಕು. ಭರತನ ನಾಟ್ಯಶಾಸ್ತ್ರ ಹೇಳುವ ಉತ್ತಮೋತ್ತಮ ವಾದ್ಯವೃಂದವಾಗಲು ಬೇಕಾಗುವ ವಾದ್ಯವಿಶಾರದರಲ್ಲಿ ಆರುಜನ ಕೊಳಲುವಾದಕರೂ ಇರಬೇಕೆಂದು ಹನ್ನೆರಡನೆಯ ಶತಮಾನದ ಅಗ್ಗಳನ ಚಂದ್ರಪ್ರಭುಪುರಾಣ (೧೫-೭೧-೭೩) ಹೇಳುತ್ತದೆ. ಸಿಂಹ ಭೂಪಾಲಕೃತ ‘ಲಾಸ್ಯರಂಜನ’ದ ಪ್ರಕಾರ ನೃತ್ಯದ ಪಕ್ಕವಾದ್ಯಕಾರರಲ್ಲಿ ಇಬ್ಬರು ಕೊಳಲುವಾದಕರೂ ಇದ್ದಾರೆ. ಚಂದ್ರಶೇಖರಕವಿಯ ‘ಪಂಪಾಸ್ಥಾನವರ್ಣನಂ’ ದಲ್ಲಿ “ಮತ್ತಮಾ ವಾಸುದೇವನ ವೇಣುನಾದಪ್ರಿಯನೆನಿಪ ಶ್ರೀ ವಿರೂಪಾಕ್ಷನೋಲಗದಲ್ಲಿ ಜಾತಿ ವಿಜಾತಿ……ಭುವನಾದಿ ಇವು ಮೊದಲಾದ ಹದಿನೆಂಟು ತೆರದ ವಾಸಂಗಳಿಂ ದೇಸೆವಡೆದ ವಾಸಕಾರಂ……….ಗವಸಣಿಗೆಯೊಳಗಿರ್ದ ವಾಸಮನುಗಿದು ಪಟ್ಟಣಿಗೆ ಪುದಿದಿರ್ದ ಶಲಾಕೆಯಿಂದೊಳಗಂ ಸೋದಿಸಿ ಮೇಣದ ಜೀವಾಳದಿಂದ ಮುಖರಂದ್ರ ಮನಂದಂಬಡಿಸಿ ತಾರ ಮಂದ್ರದ ಪುಂಖಮಂ ಪ್ರಮಾಣಿಸಿ ಬೆರಳ ಸಂಚಾರಂಗಳಿಂ ಸರಮಂ ಮೈದೋರಿಸಿ… ಸಕಲವಾದ್ಯಂಗಳ ಶ್ರುತಿಗೆ ತವರ್ಮನೆಯೆನಿಸಿ…ರಾಗದ ರಂಗು ಹಿಂಗದಂತೆ……ಕುಣಿವ ನರ್ತಕಿಗೆ ಕೈಗೊಡುವಂತೆ ಕೇಳ್ವರ ಕಿವಿಯಂ ಜಕ್ಕುಲಿಸುವಂತೆ ಬಿನ್ನಣದಿಂ” ಕೊಳಲನ್ನು ಬಾಜಿಸುತ್ತಿದ್ದವನ ವರ್ಣನೆ ಬಂದಿದೆ. ಹನ್ನೆರಡನೆಯ ಶತಮಾನದ ರುದ್ರಭಟ್ಟನ ಜಗನ್ನಾಥವಿಜಯದಲ್ಲಿ (೫,೨-೫) ಕೃಷ್ಣನ ಕೊಳಲಿನ ಮಧುರ ನಾದದ ವರ್ಣನೆ ಸುಂದರವಾಗಿ ಬಂದಿದೆ.

ಹಳ್ಳಿಯ ಗೋವಳನಾದ ಆನಾಯನಾರ ಮರದ ನೆರಳಿನ ಹಸಲಿನ ಮೇಲೆ ತಪ್ಪುಗಾಲಿಕ್ಕಿ ತ್ರಿಭಂಗಿಯಲ್ಲಿ ನಿಂತು ಕೊಳಲು ಬಾರಿಸುತ್ತಿದ್ದ ವರ್ಣನೆ ಬಹಳ ಹೃದ್ಯವಾಗಿ ಹರಿಹರನ ಅನಾಯನಾರರ ರಗಳೆಯಲ್ಲಿ ಬಂದಿದೆ. ಅವನ ಕೊಳಲ ನಾದಮಾಧುರ್ಯಕ್ಕೆ ಮನಸೋತ ಹಸುಗಳು ಕೆಲವು ಅವನ ಹೆಗಲು ತೋಳುಗಳ ಮೇಲೆ ತಮ್ಮ ಮುಖವಿಟ್ಟು ತಲ್ಲೀನವಾಗಿ ಆಲಿಸುತ್ತಿದ್ದ ಆತ್ಮೀಯ ಚಿತ್ರವೂ ಅಲ್ಲಿದೆ. ಡಾ. ಎಲ್. ಬಸವರಾಜು ಸಂಪಾದಿತ ಶಿವದಾಸ ಗೀತಾಂಜಲಿಯ ಒಂದು ಹಾಡಿನಲ್ಲಿ (ಪು. ೧೨೬) ನವಿಲುಗರಿ ಮುಡಿದು, ಗುಲಗಂಜಿಯಹಾರ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ಶಂಖಮಣಿ ಧರಿಸಿ, ಕೈಯಲ್ಲಿ ಕೊಳಲು ಹಿಡಿದು ಊದುತ್ತ ಗೊರವಿಯರು ಕುಣಿಯುತ್ತಿದ್ದ ಚಿತ್ರವಿದೆ.

ಹೀಗೆ ಜನಪದರ ಹಾಗೂ ಶಿಷ್ಟರ ಅತ್ಯಂತ ಪ್ರಿಯವಾದ ಈ ವಾದ್ಯ ಬಹಳ ಪ್ರಾಚೀನ ಕಾಲದಿಂದಲೂ ದೇವಸ್ಥಾನ, ಅರಮನೆ, ಗುರುಮನೆಗಳಲ್ಲಿ ನಡೆಯುತ್ತಿದ್ದ ವಾದ್ಯ-ನೃತ್ಯಗೋಷ್ಠಿಗಳಲ್ಲಿ ಅವಶ್ಯಕ ವಾದ್ಯವಾಗಿ, ಮಾನವ ಕಂಠಧ್ವನಿಗೆ ಜೊತೆ ಗೂಡುವ ವಾದ್ಯವಾಗಿ, ದನಗಾಹಿಗಳ ಗೊರವಿಯರ ಬೇಸರ ಪರಿಹರಿಸಿ ಮನರಂಜನೆ ಕೊಡುವ ವಾದ್ಯವಾಗಿ-ಕೊಳಲು ತನ್ನ ಅಸ್ತಿತ್ವವನ್ನು, ಮಹತ್ವವನ್ನು ಇಂದಿನವರೆಗೂ ಉಳಿಸಿಕೊಂಡು ಬಂದಿದೆ.

ನಾಟ್ಯಶಾಸ್ತ್ರದ ಪ್ರಕಾರ ಭರತಕಾಲೀನ ಕೊಳಲು ಬಿದಿರಿನದು (೩೦-೧೦). ಈಗಲೂ ಬಿದಿರಿನಿಂದಲೇ ಕೊಳಲು ತಯಾರಿಸುವರಾದರೂ ಕರಿಮರ, ಗಂಧದಮರ, ರಕ್ತಚಂದನ ಹಾಗೂ ದಂತವನ್ನೂ ಬಳಸಲಾಗುತ್ತದೆ. ಧಾತುನಿರ್ಮಿತ ವಂಶಿಯ ಆವಿಷ್ಕಾರ ಮತಂಗಮುನಿಯಿಂದಾಯಿತೆಂದು ಅಭಿನವಗುಪ್ತ ಹೇಳುತ್ತಾನೆ.[3] ಕೊಳಲುಗಳಲ್ಲಿ ಎರಡು ವಿಧ. ತುಟಿಯ ಎದುರಿಗೆ ನೇರಹಿಡಿದು ಬಾರಿಸುವಂಥವು, ಹಾಗೂ ಹೆಗಲಿಗೆ ಸಮಾಂತರವಾಗಿ ಅಡ್ಡಹಿಡಿದು ಮುಖರಂಧ್ರದಿಂದ ಊದಿ ನುಡಿಸುವಂಥವು.

ಅಡ್ಡ ಹಿಡಿದು ಊದುವ ಕೊಳಲುಗಳು ಸಾಮಾನ್ಯವಾಗಿ ಒಂದರಿಂದ ಒಂದೂವರೆ ಅಡಿ ಉದ್ದ ಇರುವವಾದರೂ ಸ್ವಲ್ಪ ಹೆಚ್ಚುಕಡಿಮೆ ಇರುವುದೂ ಉಂಟು. ಎಡಭಾಗದ ಮುಚ್ಚಿದ ಕೊನೆಯಿಂದ ಸುಮಾರು ಒಂದು ಅಂಗುಲ ದೂರದಲ್ಲಿ ಸ್ವಲ್ಪ ದೊಡ್ಡದಾದ ರಂಧ್ರವಿರುತ್ತದೆ. ಅದೇ ಕೊಳಲಿನ ಮುಖರಂಧ್ರ. ಅದರಿಂದ ಸ್ವಲ್ಪ ದೂರಕ್ಕೆ ಸಮರೇಖೆಯಲ್ಲಿ ಒಂದೇ ಅಳತೆಯ ಆದರೆ ಮುಖರಂಧ್ರಕ್ಕಿಂತ ಕೊಂಚ ಕಿರಿದಾದ ಆರು ರಂಧ್ರಗಳಿರುತ್ತವೆ. ಮುಖರಂಧ್ರ ಸೇರಿದಂತೆ ಒಂಬತ್ತು ರಂಧ್ರಗಳಿರುವ ಕೊಳಲುಗಳೂ ಇರುತ್ತವೆ. ಮುಖರಂಧ್ರದಿಂದ ಊರಿದಾಗ ಕೊಳವೆಯೊಳಗೆ ಗಾಳಿಯಲ್ಲಿ ಕಂಪನಗಳುಂಟಾಗಿ ಧ್ವನಿ ಹುಟ್ಟುತ್ತದೆ. ವಾದಕ ತನ್ನ ಎರಡೂ ಕೈಯ ಹೆಬ್ಬೆರಳುಗಳಿಂದ ಕೊಳಲನ್ನು ಹಿಡಿದು ಉಳಿದ ಬೆರಳುಗಳಿಂದ ಕೆಳಗಿನ ರಂಧ್ರಗಳನ್ನು ಪೂರ್ಣ, ಅರ್ಧ, ಕಾಲುಭಾಗ ಇಲ್ಲವೆ ಮುಕ್ಕಾಲು ಭಾಗ ಮುಚ್ಚಿ ತೆರೆದು ಮಾಡುತ್ತ ರಾಗಕ್ಕೆ ತಕ್ಕಂತೆ ವಿವಿಧ ಸ್ವರಗಳನ್ನು ಹೊರ ಹೊಮ್ಮಿಸುತ್ತಾನೆ. ಕೊಳಲಿನ ಉದ್ದ ಹೆಚ್ಚಾಗಿದ್ದರೆ ನಾದಮಂದತ್ವ ಅಧಿಕವಾಗಿ ತಗ್ಗು ಶ್ರುತಿಹೊರಡುತ್ತದೆ, ಉದ್ದ ಕಡಿಮೆಯಾಗಿದ್ದರೆ ಸಂಚುನಾದ ಹೆಚ್ಚು ಶ್ರುತಿ ಹೊರಡುತ್ತದೆಂದು ವಾದನವಿದ್ವಾಂಸರ ಹೇಳಿಕೆ. ವೀಣೆ ಮತ್ತು ಮಾನುಷ ಶಾರೀರ ಹೊರಡಿಸಬಲ್ಲ ವಾದನ, ಗಾನ, ಶ್ರುತಿ, ಸ್ವರ, ಗ್ರಾಮ, ಮೂರ್ಛನಾದಿಗಳೆಲ್ಲವನ್ನೂ ಕೊಳಲಿನಿಂದ ಹೊರಡಿಸಲು ಸಾಧ್ಯವೆಂದು ಸಂಗೀತರತ್ನಾಕರದ ಸಾರಂಗ ದೇವ ಹೇಳುತ್ತಾನೆ. ಕುರುಬರು ಬಾರಿಸುವ ಕೊಳಲು ದಪ್ಪ ಉದ್ದ ಹಾಳತ. ಆದುದರಿಂದ ಅದು ನುಡಿಸುವ ಧ್ವನಿ ಮಧುರ. ಸಾಮಾನ್ಯವಾಗಿ ಅವರ ಕೊಳಲಿನಲ್ಲಿ ಆರು ರಂಧ್ರಗಳಿರುತ್ತವೆ. ಬೆಟ್ಟ ಗುಡ್ಡ ಕಣಿವೆಗಳಲ್ಲಿ ಮಂದೆಗಳನ್ನು ಮೇಯಲು ಬಿಟ್ಟು ಕುರುಬರು ಇಲ್ಲವೆ ದನಗಾಹಿಗಳು ತಮ್ಮಷ್ಟಕ್ಕೆ ತಾವೆ ತನ್ಮಯರಾಗಿ ಕೊಳಲನ್ನು ಬಾರಿಸುತ್ತಿರುತ್ತಾರೆ.

ದಕ್ಷಿಣಕನ್ನಡ ಜಿಲ್ಲೆಯ ಮಂಡಾಲರ ಕಂಗಿಲು ಹಬ್ಬದ ಕುಣಿತ, ಕೊರಗರ ನವರಾತ್ರಿಯ ಹಬ್ಬದ ಕುಣಿತ, ಬೆಳಗಾವಿ ಜಿಲ್ಲೆಯ ಮರಾಠಿಗರಲ್ಲಿ ಕೆಲವರಲ್ಲಿ ಮಾತ್ರ ರೂಢಿಯಲ್ಲಿರುವ ಕೊಡದ ಕುಣಿತ, ಜೋಗಿ ಅರಸರವೇಷದ [ದ.ಕ] ಮೆರವಣಿಗೆ ಸಂದರ್ಭ, ದಪ್ಪಿನಾಟ-ಇತ್ಯಾದಿಗಳಲ್ಲಿ ಉಳಿದ ವಾದ್ಯಗಳ ಜೊತೆ ಹಿನ್ನೆಲೆಯಾಗಿ ಜನಪದರು ಕೊಳಲು ನುಡಿಸುವುದನ್ನೂ ಕಾಣಬಹುದು.


[1]        ಎಲ್. ರಾಜಾರಾವ್: ಭಾರತೀಯ ಸಂಗೀತ ವಾದ್ಯಗಳು, ಪು. ೫೩

[2]        ಎಂ. ಚಿದಾನಂದ ಮೂರ್ತಿ : ‘ಕನ್ನಡ ಸಾಹಿತ್ಯ ಶಾಸನಗಳಲ್ಲಿ ಸಂಗೀತ ವಿಚಾರ’ ಗ್ರಂಥದಲ್ಲಿ ಉದ್ಧೃತ ಪು. ೪೨.

[3]        ಎ. ಎಂ. ಪುರಂದರೆ : ಭಾರತೀಯ ವಾದ್ಯಗಳು ಪು. ೫೨