ಪುಂಗಿ :

ಪುಂಗಿಯೆಂದಕೂಡಲೆ ನಮಗೆ ನೆನಪಿಗೆ ಬರುವವ ಹಾವಾಡಿಗ, ಅವನ ಪುಂಗಿಯ ನಾದಕ್ಕೆ ಹೆಡೆಯೆತ್ತಿ ಆಡುವ ನಾಗಸರ್ಪನನ್ನು ಅನೇಕರು ಬಲ್ಲರು. ಹಾವುಗಳಿಗೆ ಕಿವಿಗಳೇ ಇರುವುದಿಲ್ಲವಾದುದರಿಂದ ಅದಕ್ಕೆ ಪುಂಗಿಯನಾದ ಕೇಳಿಸುವುದಿಲ್ಲವೆಂದೂ ವಿಜ್ಞಾನಿಗಳು ಹೇಳುತ್ತಾರೆ. ಇನ್ನು ಕೆಲವರು ಸರ್ಪದ ಕಣ್ಣೇ ಕಿವಿಯ ಕೆಲಸ ಮಾಡುತ್ತವೆಂದೂ, ಬೇರೆ ಕೆಲವರು ಅದರ ಚರ್ಮದಲ್ಲಿಯೆ ಅಂಥ ವ್ಯವಸ್ಥೆ ಇರುತ್ತದೆಂದೂ ವಾದಿಸುತ್ತಾರೆ. ಏನಿದ್ದರೂ ಪುಂಗಿಯ ನಾದವನ್ನು ಕೇಳಿಯೇ ಹಾವು ಹೆಡೆಯಾಡುತ್ತದೆಂದು ಪ್ರಾಚೀನರು, ಇಂದಿಗೂ ಜನಪದರು ನಂಬಿಕೊಂಡು ಬಂದಿರುವುದಂತೂ ನಿಜ,

ಮಧ್ಯದಲ್ಲಿ ಬುಗುಟಾಕಾರವಾಗಿರುವ ಒಂದು ಹಾಳತ ಗಾತ್ರದ ಸೋರೆಕಾಯಿಗೆ ಬುಗುಟಿರುವ ಕೊನೆಯಲ್ಲಿ ಮಧ್ಯಕ್ಕೆ ಎರಡು ಲಾಳದ ಕಡ್ಡಿಯ ಕೊಳವೆಗಳನ್ನು ಪೀಪಿಗಳ ರೂಪದಲ್ಲಿ ಮೇಣದಿಂದ ಜೋಡಿಸಲಾಗುತ್ತದೆ. ಸೋರೆಕಾಯ ಕೆಳಭಾಗದಲ್ಲಿಯೂ ಎರಡು ಲಾಳದ ಕಡ್ಡಿಗಳನ್ನು ಒಂದರ ಮಗ್ಗಲು ಒಂದು ಜೊತೆಯಾಗಿ ಅಳವಡಿಸಿರುತ್ತಾರೆ. ಇವುಗಳಲ್ಲಿ ಒಂದಕ್ಕೆ ನಾಲ್ಕೈದು ರಂಧ್ರಗಳಿದ್ದು ಇನ್ನೊಂದಕ್ಕೆ ರಂಧ್ರವಿರುವುದಿಲ್ಲ. ಹವೆಯನ್ನು ಮೂಗಿನಿಂದ ಬಾಯ ಒಳಕ್ಕೆ ತೆಗೆದುಕೊಂಡು ಮೇಲಣ ಲಾಳದ ಕಡ್ಡಿಗಳ ಮೂಲಕ ಸೋರೆಕಾಯ ಬುಗುಟಾಕಾರದ ಭಾಗದಲ್ಲಿ ಗಾಳಿಯನ್ನು ತುಂಬಲಾಗುತ್ತದೆ. ಅದು ಕೆಳಗಿನ ಲಾಳದಕಡ್ಡಿಯ ಕೊಳವಿಯ ಮೂಲಕ ಹಾಯುವಾಗ ಸ್ಪಂದನ ಉಂಟಾಗಿ ಸ್ವರ ಹೊರಡುತ್ತದೆ. ರಂಧ್ರಗಳ ಮೇಲೆ ಬೆರಳುಗಳ ಮುಟ್ಟುವಿಕೆ ತೆರೆಯುವಿಕೆಯಿಂದಾಗಿ ಸ್ವರವೈವಿಧ್ಯ ಸಾಧಿಸಲಾಗುತ್ತದೆ. ರಂಧ್ರವಿಲ್ಲದ ಲಾಳದಕಡ್ಡಿ ಶೃತಿಯನ್ನು ಕೊಡುತ್ತದೆ. ಸರ್ಪಗಳಿಗೆ ಅತ್ಯಂತ ಹಿತಕರವಾದ ಹನುಮ ತೋಡಿರಾಗ ಸರಳವಾಗಿ ಹೊರಡುವ ರೀತಿಯಲ್ಲಿ ಪುಂಗಿಯ ಕೆಳಭಾಗದ ಲಾಳದ ಕಡ್ಡಿಯಲ್ಲಿ ರಂಧ್ರಗಳನ್ನು ಕೊರೆದಿರುತ್ತಾರೆಂದು ಹೇಳಲಾಗುತ್ತದೆ. ಪುಂಗಿಯನ್ನು ಊದುವಾಗ ಮೂಗಿನಿಂದ ಗಾಳಿ ಒಳಕ್ಕೆ ತೆಗೆದುಕೊಂಡು ಅದನ್ನು ಸೋರೆಕಾಯೊಳಗೆ ನುಸುಳಿಸುವುದರಿಂದ ಪುಂಗಿಗೆ ನಾಸಯಂತ್ರ ಎಂದೂ ಕರೆಯಲಾಗುತ್ತದೆ. ಪುಂಗಿಯನ್ನು ಹಾವಾಡಿಗರಂತೂ ಸರಿಯೆ, ಭಿಕ್ಷುಕರು ಕೂಡ ಬಳಸುತ್ತಾರೆ. ಜನಪದ ಸಣ್ಣಾಟಗಳಲ್ಲಿ ಕೆಲವರು ಪುಂಗಿಯನ್ನು ಹಿನ್ನೆಲೆ ವಾದ್ಯವಾಗಿಯೂ ಉಪಯೋಗಿಸುತ್ತಾರೆ.

ನಾಗಸ್ವರ :

ಹಾವಾಡಿಗರ ಪುಂಗಿಯ ವಿಕಸಿತ ರೂಪವೆ ನಾಗಸ್ವರವೆಂದು ಹೇಳುತ್ತಾರೆ. ಪುಂಗಿಯ ಕೆಳಭಾಗದಲ್ಲಿಯ ರಂಧ್ರಯುಕ್ತ ಲಾಳದಕಡ್ಡಿಯಿಂದ ಹೊರಡುವ ಸ್ವರ ವಿಧಾನವೇ ನಾಗಸ್ವರದಲ್ಲೂ ಕಂಡುಬರುತ್ತದೆ. ಪುಂಗಿಯ ಕೆಳಭಾಗದ ರಂಧ್ರರಹಿತ ಲಾಳದ ಕಡ್ಡಿಯೆ ನಾಗಸ್ವರಕ್ಕೆ ಶ್ರುತಿವಾದ್ಯವಾಗಿ ಪರಿಣಮಿಸಿದೆ. ಒಂದು ಸರಳ ಜನಪದ ವಾದ್ಯದ ಸ್ವರೋತ್ಪತ್ತಿತತ್ವವನ್ನಾಧರಿಸಿ, ಅದಕ್ಕಿಂತ ಉತ್ತಮವಾದ ಮತ್ತೊಂದು ಜನಪದ ವಾದ್ಯವನ್ನು ಅಭಿವೃದ್ಧಿ ಪಡಿಸಬಹುದೆಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ನಾಗಸರ್ಪವನ್ನು ಆಕರ್ಷಿಸುವ ವಾದ್ಯವಾದ ಪುಂಗಿಯಿಂದಲೆ ಅಭಿವೃದ್ಧಿಪಡಿಸಿರುವ ಇದನ್ನು ನಾಗಸ್ವರವೆಂದು ಕರೆದಿರುವುದು ಸಮಂಜಸವಾಗಿಯೆ ಇದೆ.

ಸಾಮಾನ್ಯವಾಗಿ ಎರಡುವರೆ ಅಡಿ ಉದ್ದವಾಗಿರುವ ಇದನ್ನು ಕರಿಮರದ ಕೊಳವೆಯಿಂದ ಸಿದ್ಧಪಡಿಸಲಾಗಿರುತ್ತದೆ. ಆ ಕೊಳವೆಯ ವ್ಯಾಸ ಒಂದು ಕೊನೆಯಲ್ಲಿ ಚಿಕ್ಕದಾಗಿದ್ದು ಬರಬರುತ್ತ ದೊಡ್ಡದಾಗುತ್ತ ಹೋಗಿರುತ್ತದೆ ಮತ್ತು ಕೊನೆಯಲ್ಲಿ ಗಂಟೆಯಾಕಾರ ಪಡೆದಿರುತ್ತದೆ. ಅದರ ತುದಿಯ ಸುತ್ತ ಬೆಳ್ಳಿಯ ಇಲ್ಲವೆ ಹಿತ್ತಾಳೆಯ ಸ್ವಲ್ಪ ಅಗಲವಾದ ಬಳೆಯನ್ನು ಅಣಸಿನಂತೆ ಜೋಡಿಸಲಾಗಿರುತ್ತದೆ. ತಾಡೋಲೆಯಿಂದ ಮಾಡಿದ ಪೀಪಿಯೊಂದನ್ನು ವಿಶಿಷ್ಟ ಚಿಕ್ಕ ಲೋಹದ ನಲಿಕೆಯೊಂದರಲ್ಲಿ ಅಳವಡಿಸಿ ಅದನ್ನು ಕಿರಿ ವ್ಯಾಸದ ಕೊಳವಿಯ ಭಾಗದಲ್ಲಿ ಸೇರಿಸಲಾಗುತ್ತದೆ. ಪೀಪಿಯಿಂದ ಕೆಳಗೆ ಸ್ವಲ್ಪ ಅಂತರದಲ್ಲಿ ಸಮರೇಖೆಯಲ್ಲಿ ಒಂದರ ಕೆಳಗೊಂದರಂತೆ ಹನ್ನೆರಡು ರಂಧ್ರಗಳಿದ್ದು ಏಳನ್ನು ಮಾತ್ರ ನುಡಿಸಲು ಬಳಸುತ್ತಾರೆ. ಉಳಿದ ಐದನ್ನು ಬ್ರಹ್ಮಸ್ವರಗಳೆಂದು ಕರೆಯುತ್ತಿದ್ದು, ಸಾಮಾನ್ಯವಾಗಿ ಮೇಣದಿಂದ ಅವನ್ನು ಮುಚ್ಚಿರುತ್ತಾರೆ. ಉಸಿರನ್ನು ಹತೋಟಿಯಲ್ಲಿಡಲು ಸಹಾಯಕವಾಗುವ ಇದನ್ನು ವಾದಕನು ತನಗೆ ಬೇಕಾದಾಗ ಬಳಸಿಕೊಳ್ಳುತ್ತಾನೆ. ಶ್ವಾಸೋಚ್ವಾಸ, ತುಟಿ, ನಾಲಗೆಗಳ ಹತೋಟಿಯಿಂದ ಉಸಿರನ್ನು ಊದಿ ಗಾಳಿಗೆ ಒತ್ತಡವಿತ್ತು ರಂಧ್ರಗಳ ಮೇಲೆ ಬೆರಳುಗಳನ್ನು ತೆರೆದು ಮುಚ್ಚಿ ಮಾಡಿ ವಾದಕನು ಸ್ವರಭೇದಗಳನ್ನು ರಾಗಾನುಸಾರ ಸಾಧಿಸಬೇಕಾಗುತ್ತದೆ. ಆದುದರಿಂದ ನಾಗಸ್ವರವನ್ನು ಸುಶ್ರಾವ್ಯವಾಗಿ ನುಡಿಸಲು ಅನವರತ ಸಾಧನೆ ಬೇಕು.

ಕರ್ನಾಟಕ ಸಂಗೀತದ ಗಮಕ ಅಲಂಕಾರಾದಿ ಎಲ್ಲ ಗಾಯನ ಪ್ರಸ್ತಾರಗಳನ್ನು ನಾಗಸ್ವರದಿಂದ ನುಡಿಸಲು ಸಾಧ್ಯವೆಂದು ವಿದ್ವಾಂಸರ ಅಭಿಪ್ರಾಯ. ದಕ್ಷಿಣ ಭಾರತದ ಪ್ರಾಯಃ ಎಲ್ಲ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಪೂಜಾ ಸಂದರ್ಭದಲ್ಲಿ ನಾಗಸ್ವರ ನುಡಿಸಲಾಗುತ್ತದೆ. ಇದರ ಆಧಾರ ಶ್ರುತಿವಾದ್ಯಕ್ಕೆ ‘ಒಟ್ಟು’ ಅಥವಾ ‘ಮೋರಿ’ ಎನ್ನುತ್ತಾರೆ. ತಾಳವಾದ್ಯವಾಗಿ ಡೋಲು, ತಾಳಗತಿ ಸೂಚಕವಾಗಿ ಕಂಚಿನ ತಾಳ ಇರುತ್ತವೆ. ಗಾತ್ರ ಹಾಗೂ ಉದ್ದದಲ್ಲಿ ನಾಗಸ್ವರಕ್ಕಿಂತ ಚಿಕ್ಕದಾಗಿ ಇರುವ ಆದರೆ ಅದೇ ಆಕಾರದ ವಾದ್ಯವೊಂದಿದ್ದು ಅದನ್ನು ಮುಖವೀಣೆ ಎನ್ನುತ್ತಾರೆ. ಇವೆಲ್ಲ ವಾದ್ಯಗಳ ವಾದಕರ ಮೇಳಕ್ಕೆ ನಾಗಸ್ವರಗೋಷ್ಠಿ ಎನ್ನುತ್ತಾರೆ. ಸಾಮಾನ್ಯವಾಗಿ ಇಂತಹ ಗೋಷ್ಠಿಯನ್ನು ‘ವಾಲಗ’ ಎಂದು ಕರೆಯುವುದೇ ಹೆಚ್ಚು ರೂಢಿಯಲ್ಲಿದೆ.

ನಾಗಸ್ವರ ನುಡಿಕೆ ಒಂದು ಕುಲಕಸುಬು. ಮೈಸೂರು ಭಾಗದಲ್ಲಿ ಇವರನ್ನು ತೊರವೆಯವರೆಂದು ಕರೆಯುತ್ತಾರಂತೆ. ದೇವಸ್ಥಾನ, ಅರಮನೆ, ಗುರುಮನೆ ಇವುಗಳಿಗೆ ಹೊಂದಿಕೊಂಡು ವಂಶಪಾರಂಪರ್ಯವಾಗಿ ನಾಗಸ್ವರ ನುಡಿಸುವ ಮನೆತನಗಳಿವೆ. ಆ ಮನೆತನಗಳಿಗೆ ಇನಾಮು ಭೂಮಿಗಳುಂಟು. ಗ್ರಾಮ, ನಗರಗಳಲ್ಲಿ ನಡೆಯುವ ದೇವ-ದೇವತೆಗಳ ಉತ್ಸವ, ಜಾತ್ರೆ, ಸಮಾರಂಭಗಳಲ್ಲಿ ನಾಗಸ್ವರ ನುಡಿಸಲಾಗುತ್ತದೆ. ನಾಗಸ್ವರ ಅತ್ಯಂತ ಮಂಗಲಕರ ವಾದ್ಯವೆಂಬ ನಂಬಿಕೆ ಜನಪದರಲ್ಲಿರುವುದರಿಂದ ವಿವಾಹಾದಿ ಶುಭಕಾರ್ಯಗಳ ಆರಂಭದಲ್ಲಿ ನಾಗಸ್ವರ ನುಡಿಯಲೇಬೇಕು. ‘ವಾಲಗ ಊದಿಸು’ ಎಂಬ ಪಡೆನುಡಿ ಜನಪದರಲ್ಲಿ ರೂಢಿಯಲ್ಲಿದ್ದು ಅದರರ್ಥ ವಿವಾಹ ನಡೆಯಲೆಂದೇ ಇದೆ.

ಕರಗದ ಕುಣಿತ, ಗಾರುಡಿಗ ಗೊಂಬೆಗಳ ಕುಣಿತ, ಚಟಮೇಳ (ತುಮಕೂರು ಹಾಸನ ಜಿಲ್ಲೆಗಳಲ್ಲಿ), ಡಿಕಂಬರಿ ಅಥವಾ ಡಿಗಾಂಬರಿ ಕುಣಿತ (ಬೆಂಗಳೂರು ಜಿಲ್ಲೆ), ಸೋಲಿಗರ (ಮೈಸೂರು ಜಿಲ್ಲೆ, ಬಿಳಗಿರಿರಂಗನ ಬೆಟ್ಟದ ತಪ್ಪಲು ಪ್ರದೇಶದಲ್ಲಿ ವಾಸಿಸುವ ಗಿರಿಜನವರ್ಗ) ಕ್ಯಾತೇದೇವರ ಹಬ್ಬದಲ್ಲಿಯ ಕುಣಿತ- ಹೀಗೆ ಇನ್ನೂ ಹಲವಾರು ಬೇರೆ ಬೇರೆ ಕಲಾಪ್ರದರ್ಶನಗಳ ಸಂದರ್ಭದಲ್ಲಿ ಹಳ್ಳಿಗಳಲ್ಲಿ ವಾಲಗ ನುಡಿಸಲಾಗುತ್ತದೆ. ಆಗ ನಾಗಸ್ವರಗೋಷ್ಠಿಯ ಎಲ್ಲ ವಾದಕರೂ ಇರುತ್ತಾರೆಂದು ಹೇಳಲು ಬರುವುದಿಲ್ಲ. ಬರೀ ಮುಖವೀಣೆ ನುಡಿಸಿದರೂ ಅದನ್ನು ವಾಲಗವೆಂದೇ ಹೇಳುತ್ತಾರೆ. ಕೋಲೆಬಸವನ ಆಟ, ಕೀಲುಕುದುರೆ ಕುಣಿತ, ನಂದಿಕೋಲು ಕುಣಿತ ಇತ್ಯಾದಿಗಳಲ್ಲೂ ಹಿನ್ನೆಲೆಯಾಗಿ ನಾಗಸ್ವರ ನುಡಿಸುತ್ತಾರೆ. ನಾಗಸ್ವರ ನುಡಿಸುವುದರಲ್ಲಿ ಹೆಚ್ಚಿನ ಪರಿಣತಿ ಪ್ರಸಿದ್ಧಿಗಳನ್ನು ಪಡೆದವರೂ ಇದ್ದಾರೆ. ಹೀಗೆ ನಾಗಸ್ವರವನ್ನು ಶಿಷ್ಟರು ಹಾಗೂ ಜನಪದರು ಎರಡೂ ವರ್ಗದವರು ನುಡಿಸುತ್ತಾರೆ ಎನ್ನುವುದಕ್ಕಿಂತ ಜನಪದವಾದ್ಯವನ್ನು ಶಿಷ್ಟರು ಸ್ವೀಕರಿಸಿದ್ದಾರೆಂದು ಹೇಳುವುದು ಸಮಂಜಸ.

ಶಹನಾಯಿ :

ದಕ್ಷಿಣಭಾರತಕ್ಕಿಂತ ಹೆಚ್ಚಾಗಿ ಉತ್ತರಭಾರತದಲ್ಲಿ, ಕೆಲಮಟ್ಟಿಗೆ ಉತ್ತರ ಕರ್ನಾಟಕದಲ್ಲಿ ಶಿಷ್ಟ ಹಾಗೂ ಜನಪದರು ಬಳಸುವ ವಾದ್ಯವಿದು. ಪರದೇಶದಿಂದ ಬಂದ ಅಥವಾ ಪರದೇಶದವರು ಭಾರತದಲ್ಲಿ ರೂಢಿಗೆ ತಂದ ವಾದ್ಯವಿದೆಂದು ಹೇಳುವರಾದರೂ ನೂರಾರು ವರ್ಷಗಳಿಂದ ನಮ್ಮಲ್ಲಿ ಬಳಕೆಯಲ್ಲಿರುವುದರಿಂದ ಇದು ನಮ್ಮ ದೇಶದ ವಾದ್ಯವೇ ಆಗಿಬಿಟ್ಟಿದೆ. ಪರ್ಶಿಯಾ ದೇಶದಿಂದ ಶಹನಾಯಿ ಬಂದಿಂತೆಂದು ಕೆಲವರು ಹೇಳುತ್ತಾರೆ. ‘ಐನೆ ಅಕ್ಬರಿ’ ಗ್ರಂಥದಲ್ಲಿ ಇದರ ಉಲ್ಲೇಖವಿದ್ದು ಅಕ್ಬರನ ನೌಬತ್‌ಖಾನಾದಲ್ಲಿ ಒಂಬತ್ತು ಶಹನಾಯಿಗಳಿದ್ದುದನ್ನೂ ಆ ಗ್ರಂಥ ತಿಳಿಸುತ್ತದೆ.

ಗಾಳಿವಾದ್ಯಕ್ಕೆ ಪರ್ಶಿಯನ್ ಭಾಷೆಯಲ್ಲಿ ‘ನಾಯಿ’ ಎಂಬ ಹೆಸರಿದೆಯಂತೆ. ಅದನ್ನು ಪ್ರವೀಣನಾದ ಒಬ್ಬ ವಾದಕ ದೊರೆಗೆ (ಶಹಾನಿಗೆ) ತೃಪ್ತಿಯಾಗುವಂತೆ ಬಹಳ ಸುಶ್ರಾವ್ಯವಾಗಿ ನುಡಿಸಿದನಂತೆ. ಶಹಾನಿಗೆ ಸಂತೋಷವನ್ನುಂಟು ಮಾಡಿದ ಆ ಗಾಳಿವಾದ್ಯವನ್ನು (ನಾಯಿಯನ್ನು) ‘ಶಹನಾಯಿ’ ಹಸರಿನಿಂದ ಕರೆಯಲು ಆರಂಭಿಸಿದರಂತೆ. ಈ ವಾದ್ಯಕ್ಕೆ ಹೆಸರು ಕೊಡಲು ಹುಟ್ಟಿಕೊಂಡ ಕಥೆಯಿದು. ಇನ್ನೊಂದು ಹೇಳಿಕೆಯ ಪ್ರಕಾರ ಶಹನಾಯಿ ನಿರ್ಮಿಸಿದವ ಅಮೀರ ಖುಸ್ರು. ಮಾವಿನ ಓಟೆಯನ್ನೇ ಪೀಪಿಯಾಗಿಸಿ ಊದುತ್ತಿದ್ದ ಹುಡುಗನೊಬ್ಬನನ್ನು ಕಂಡ ಖುಸ್ರು ಅದರಿಂದ ಪ್ರೇರಣೆಗೊಂಡು, ಷಹನಾಯ್ ಎಂಬ ಮರದ ಟೊಳ್ಳು ರೆಂಬೆಗೆ ಪೀಪಿ ಕೂಡಿಸಿ ಈ ವಾದ್ಯ ತಯಾರಿಸಿದನಂತೆ. ಷಹನಾಯ್ ಮರದ ರೆಂಬೆಯಿಂದ ಸಿದ್ಧಗೊಂಡ ಇದಕ್ಕೆ ‘ಶಹನಾಯಿ’ ಹೆಸರು ಬಂತಂತೆ. ಕಥೆಯ ಸತ್ಯಾಸತ್ಯತೆ ಏನೇ ಇರಲಿ, ಹಳ್ಳಿಯ ಹುಡುಗನ ಸಾಮಾನ್ಯ ಪೀಪಿಯ ವಾದ್ಯ, ಶಿಷ್ಟರ ವಾದ್ಯ ರಚನೆಗೆ ಹೇಗೆ ಪ್ರೇರಣೆ ನೀಡಬಲ್ಲುದೆಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ. ಅರೇಬಿಯದ ಹಕೀಂ-ಬೂ-ಅಲಿ ಎಂಬವನಿಂದ ಈ ವಾದ್ಯ ರಚನೆಗೊಂಡಿತೆಂದೂ ಹೇಳುವವರಿದ್ದಾರೆ.

ಕ್ರಮೇಣ ಅಗಲವಾಗುತ್ತ ಹೋಗುವ, ೪೫ ರಿಂದ ೫೦ ಸೆಂ. ಮೀ. ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಉದ್ದದ ಕಪ್ಪು ಮರದ ಕೊಳವೆಯಿಂದ ನಿರ್ಮಿತವಾದ ವಾದ್ಯವಿದು. ಕೆಲವೊಮ್ಮೆ ಮುಂದಣ ಅಗಲವಾದ ಭಾಗವನ್ನು ಹಿತ್ತಾಳೆಯ ತಗಡಿನಿಂದ ಹೊಂದಿಸಲಾಗಿರುತ್ತದೆ; ಇಲ್ಲವೆ ಹಿತ್ತಾಳೆಯದೇ ಆಗಿರುತ್ತದೆ. ಷಹನಾಯಿ ವಾದ್ಯದಲ್ಲಿ ಮುಖ್ಯವಾಗಿ ಮೂರು ಭಾಗಗಳು-ಪತ್ತಿ, ದಂಡಿ ಹಾಗೂ ಪ್ಯಾಲಾ. ತಾಳದಮರದ ಎಲೆಯಿಂದ ಸಿದ್ಧಪಡಿಸಿದ ಪೀಪಿಯ ಭಾಗವೇ ಪತ್ತಿ. ಜೋಡುನಾಲಗೆಯ ಈ ಸಾಧನವನ್ನು ಷಹನಾಯಿಯ ಕಿರಿದು ಅಗಲವಾದ ಭಾಗದ ತುದಿಯಲ್ಲಿ ಕೊಳವಿಯೊಳಗೆ ಸೇರಿರುವಂತೆ ಅಳವಡಿಸಲಾಗಿರುತ್ತದೆ. ನಾಗಸ್ವರದಲ್ಲಿ ಈ ಪೀಪಿ ಅಥವಾ ನಾಲಗೆಯನ್ನು ಒಂದು ವಿಶಿಷ್ಟ ಚಿಕ್ಕ ಲೋಹದ ನಲಿಕೆಯಲ್ಲಿ ಅಳವಡಿಸಿ ಅದನ್ನು ಕೊಳವೆಯಲ್ಲಿ ಸೇರಿಸಲಾಗಿರುತ್ತದೆ. ಆದರೆ ಇಲ್ಲಿ ಪೀಪಿಯನ್ನು ನೇರವಾಗಿ ಮರದ ಕೊಳವಿಗೇ ಜೋಡಿಸಲಾಗಿರುತ್ತದೆ. ದಂಡಿ ಎಂಬ ಭಾಗದಲ್ಲಿ ಸಾಮಾನ್ಯವಾಗಿ ಏಳರಿಂದ ಒಂಬತ್ತು ರಂಧ್ರಗಳಿರುತ್ತವೆ. ಆರು ಇಲ್ಲವೆ ಏಳು ರಂಧ್ರಗಳನ್ನು ಮಾತ್ರ ನುಡಿಸಲು ಬಳಸಲಾಗುತ್ತದೆ. ಉಳಿದವನ್ನು ಮುಚ್ಚಿರುತ್ತಾರೆ, ಇಲ್ಲವೆ ಹಾಗೆಯೆ ಬಿಟ್ಟಿರುತ್ತಾರೆ. ಗಂಟೆಯಾಕಾರದ ಕೆಳಗಿನ ಅಗಲವಾದ ಭಾಗವೇ ಪ್ಯಾಲಾ. ಶಹನಾಯಿ ನಾಗಸ್ವರ ಜಾತಿಗೆ ಸೇರಿದ ಉಸಿರವಾದ್ಯವೆನ್ನಬಹುದಾದರೂ, ರಚನಾವಿನ್ಯಾಸದಲ್ಲಿ ಮತ್ತು ಅದನ್ನು ನುಡಿಸುವಾಗ ಹೊರಡುವ ನಾದಮಾಧುರ್ಯದಲ್ಲಿ ವ್ಯತ್ಯಾಸವಿರುವುದನ್ನು ಮರೆಯುವಂತಿಲ್ಲ.

ಸ್ವರಾಭಿವ್ಯಕ್ತಿಗೆ ಶಹನಾಯಿಯಲ್ಲಿರುವ ಏಳು ರಂಧ್ರಗಳು ಸಾಲವೆಂದು ಕೆಲವರ ವಾದ. ಆದರೂ ನಾಲಗೆ ತುಟಿಗಳ ಕೌಶಲ್ಯಪೂರ್ಣ ಚಲನೆ, ಉಸಿರ ಮೇಲಿನ ವಿಶಿಷ್ಟ ಹಿಡಿತ, ರಂಧ್ರಗಳ ಮೇಲೆ ಬೆರಳುಗಳನ್ನಿರಿಸಿ ತೆಗೆಯುವ ಚಾತುರ್ಯ- ಇತ್ಯಾದಿಗಳಿಂದ ವಾದಕರು ಶಹನಾಯಿಯಿಂದ ಅತ್ಯಂತ ಮಧುರ ಸ್ವರ ಹೊರಡಿಸುತ್ತಾರೆ. ಕೋಮಲ, ಶುದ್ಧ ಹಾಗೂ ತೀವ್ರ ಸ್ವರಗಳನ್ನು ಈ ವಾದ್ಯದಲ್ಲಿ ಹೊರಡಿಸುವುದು ಬೆರಳುಗಳ ಚಲನವಲನಕ್ಕಿಂತ ಹೆಚ್ಚಾಗಿ ಉಸಿರಿನ ಮೇಲಿನ ಹಿಡಿತ ಹಾಗೂ ಅದನ್ನೂದುವ ವಿಧಾನವನ್ನವಲಂಬಿಸಿದೆಯೆಂದು ಹೇಳುತ್ತಾರೆ. ಕಂಠ, ನಾಲಗೆ, ತುಟಿ, ಉಸಿರು, ಬೆರಳಾಟ ಇವೆಲ್ಲವುಗಳ ಸಕೀಲ ಸಂಬಂಧ ತಿಳಿದು ನಿರಂತರ ಸಾಧನೆ ನಡೆದಾಗ ಮಾತ್ರ ಶಹನಾಯಿಯಿಂದ ಸುಮಧುರ ಸ್ವರ ಹೊರಡಿಸುವದು ಸಾಧ್ಯ. ಶಹನಾಯಿಗೆ ಅದೇ ಆಕಾರದ ಶ್ರುತಿವಾದ್ಯವಿದ್ದು ಅದಕ್ಕೆ ಎರಡು ಮೂರು ರಂಧ್ರಗಳಿರಬಹುದಾದರೂ ಬೇಕಾದ ಒಂದೇ ಸ್ವರಮಟ್ಟಕ್ಕೆ ಅದನ್ನು ಹೊಂದಿಸಿಕೊಳ್ಳಲಾಗುತ್ತದೆ. ಪಕ್ಕವಾದ್ಯಗಳಾಗಿ ನಕ್ಕಾರ ಇಲ್ಲವೆ ತಬಲಾ ಬಳಸಲಾಗುತ್ತದೆ. ಉತ್ತರಭಾರತದಲ್ಲಿ ಶಹನಾಯಿ ಹೆಚ್ಚು ಬಳಕೆಯಲ್ಲಿದೆಯೆಂದು ಹೇಳುವರಾದರೂ ಉತ್ತರಕರ್ನಾಟಕದಲ್ಲೂ ಬಯಲು ಉತ್ಸವ, ಮೆರವಣಿಗೆ, ಸಮಾರಂಭ ಹಾಗೂ ಮಂಗಲ ಕಾರ್ಯಗಳಲ್ಲಿ ಅದನ್ನು ನುಡಿಸುವುದುಂಟು.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿರುವ ನಾಗಸ್ವರಜಾತಿಯ ವಾದ್ಯವೆಂದರೆ ಬಜಂತ್ರಿ. ಒಬ್ಬ ಬಜಂತ್ರಿಯವನನ್ನು ನಾನು ಪ್ರಶ್ನಿಸಿದಾಗ, ಅವನು ಬಜಂತ್ರಿವಾದ್ಯಕ್ಕೇನೆ ಮೈಸೂರು ಕಡೆಗೆ ನಾಗಸ್ವರವೆಂದೂ, ಉತ್ತರ ಭಾರತದಲ್ಲಿ ಶಹನಾಯಿಯೆಂದೂ ಕರೆಯುತ್ತಿರುವುದಾಗಿ ಹೇಳಿದ. ಬಜಂತ್ರಿಯ ರಚನಾ ವಿಧಾನ ಹಾಗೂ ಅದು ಹೊರಡಿಸುವ ಸ್ವರಾಲಾಪ ಹೆಚ್ಚಾಗಿ ಶಹನಾಯಿಯನ್ನೇ ಹೋಲುತ್ತದೆ. ಬಜಂತ್ರಿಗೆ ಶ್ರುತಿವಾದ್ಯವಾಗಿ ಸನಾದಿ ಬಳಸುತ್ತಿದ್ದು ಅದು ನಾಗಸ್ವರ ಮೇಳದ ‘ಒಟ್ಟು’ ವಾದ್ಯವನ್ನು ಹೋಲುತ್ತದೆ. ಹೀಗೆ ನಾಗಸ್ವರ ಹಾಗೂ ಶಹನಾಯಿ ವಾದ್ಯಗಳ ಒಂದು ಬಗೆಯ ಸಮನ್ವಯವೊ ಎನ್ನುವಂತಿದೆ ಈ ಬಜಂತ್ರಿ ಮೇಳ.

ಉತ್ತರ ಕರ್ನಾಟಕದ ಹಳ್ಳಿ ಪಟ್ಟಣಗಳಲ್ಲಿ ಮದುವೆ, ಮುಂಜ್ವಿ, ಜಾತ್ರೆ, ಉತ್ಸವ, ಹಬ್ಬ, ಹರಿದಿನಗಳಲ್ಲಿ, ಬೀಗರನ್ನು ದೊಡ್ಡವರನ್ನು ಎದುರುಗೊಳ್ಳುವ ಸಂದರ್ಭಗಳಲ್ಲಿ ಬಜಂತ್ರಿಯವರಿಗೆ ಆಹ್ವಾನ ಇದ್ದೇ ಇರುತ್ತದೆ. ಕರಡೆಮಜಲು, ಹಲಗೆಮಜಲು, ಪುರವಂತರ ಕುಣಿತ, ನಂದಿಕೋಲು ಕುಣಿತ ಮೊದಲಾದವುಗಳಲ್ಲಿ ಹಿನ್ನೆಲೆಯಾಗಿ ಬಜಂತ್ರಿ ನುಡಿಸುವವರು ಇದ್ದೇ ಇರುತ್ತಾರೆ. ಬಜಂತ್ರಿ ನುಡಿಸುವುದು ವಂಶಪಾರಂಪರ್ಯವಾಗಿ ಮುಂದುವರಿದುಕೊಂಡು ಬಂದಿದೆ. ಧಾನ್ಯಗಳ ರಾಶಿಯ ಸಂದರ್ಭದಲ್ಲಿ ಅವರಿಗೆ ಆಯ ಕೊಡಲಾಗುತ್ತದೆ. ಬಜಂತ್ರಿ, ನಾಗಸ್ವರ, ಷಹನಾಯಿಗಳ ಹಿಂದಿರುವ ತತ್ವ ಒಂದೇ. ಅದನ್ನು ನುಡಿಸುವ ಸಂದರ್ಭಗಳೂ ಹೆಚ್ಚಾಗಿ ಒಂದೇ.

ಹಾರ್ಮೋನಿಯಂ ಅಥವಾ ಪೇಟಿ :

ಇದು ಪಶ್ಚಿಮದಿಂದ ಭಾರತಕ್ಕೆ ಆಮದಾಗಿ ಬಂದಿರುವ ವಾದ್ಯ. ಆದರೆ ಹಳ್ಳಿ ಪಟ್ಟಣಗಳಲ್ಲಿ ಬಹುತೇಕ ಎಲ್ಲ ವಾದ್ಯಗಳ ಜೊತೆ ಇದು ಬಳಕೆ ಆಗುತ್ತಿರುವುದನ್ನು ನೋಡಿದರೆ ಇದನ್ನು ನಮ್ಮದೆಂದು ತಿಳಿಯಲಡ್ಡಿಯಿಲ್ಲವೆನಿಸುತ್ತದೆ. ಹಾರ್ಮೋನಿಯಂ ಒಂದು ಗಾಳಿವಾದ್ಯವೆ ವಿನಾ ಉಸಿರು ವಾದ್ಯವಲ್ಲ. ಏಕೆಂದರೆ ಇದರಲ್ಲಿ ಸ್ವರ ಹೊರಡಿಸಲು ಬೇಕಾದ ಗಾಳಿಯನ್ನು ಬಾಯಿಂದ ಊದಿ ಪಡೆಯಲಾಗುವುದಿಲ್ಲ. ಬೇರೆ ವಿಧಾನದ ಮೂಲಕ ಗಾಳಿಯನ್ನು ದೂಡಲಾಗುತ್ತದೆ. ಇದು ಗಾಳಿವಾದ್ಯವೆಂಬ ಕಾರಣದಿಂದ ಇಲ್ಲಿ ಕೆಲವು ವಿವರಗಳನ್ನು ಹಾರ್ಮೋನಿಯಂ ಬಗ್ಗೆ ನೀಡಲಾಗಿದೆ.

ಹಾರ್ಮೋನಿಯಂ ಒಂದು ಪೆಟ್ಟಿಗೆಯಾಕಾರದ ಗಾಳಿವಾದ್ಯ. ಆದುದರಿಂದಲೆ ಅದನ್ನು ಹಳ್ಳಿಯವರು ‘ಪೇಟಿ’ ಎಂದೇ ಕರೆಯುತ್ತಾರೆ. ಪಟ್ಟಣದಲ್ಲೂ ಹಾಗೇ ಕರೆಯುವುದುಂಟು. ಆಯತಾಕಾರದ ಮರದ ಪೆಟ್ಟಿಗೆಯೊಂದಿದ್ದು ಅದರ ಮೇಲ್ಭಾಗದಲ್ಲಿ ಒಳಕ್ಕೆ ಹೊಂದಿಕೊಂಡಂತೆ ಮರದ ಹಲಗೆಯೊಂದನ್ನು ಅಳವಡಿಸಿರುತ್ತಾರೆ. ಆ ಹಲಗೆಗೆ ಹತ್ತಿಕೊಂಡು ಕೆಳಗೆ ಸ್ಥಾಯಿಗೆ ತಕ್ಕಂತೆ ಸಾಲಾಗಿ ಲೋಹದ ತೆಳು ಪಟ್ಟಿಗಳನ್ನು ಪೀಪಿಯ ರೂಪದಲ್ಲಿ ಜೋಡಿಸಿರುತ್ತಾರೆ. ಅವುಗಳಿಗೆ ಹೊಂದಿಕೊಂಡು ಹಲಗೆಯ ಮೇಲ್ಭಾಗದಲ್ಲಿ ರೀಡುಗಳಿದ್ದು ಸ್ವರ ಹೊರಡಿಸಲು ಅವನ್ನು ಬೆರಳಿನಿಂದ ಒತ್ತಲಾಗುತ್ತದೆ. ಹಲಗೆಯ ಕೆಳಗಡೆ ಪೆಟ್ಟಿಗೆಯೊಳಗೆ ಖುಲ್ಲಾ ಸ್ಥಳವಿರುತ್ತದೆ. ಪೆಟ್ಟಿಗೆಯ ಹಿಂದುಗಡೆ ತಿದಿಯೊಂದನ್ನು ಅಳವಡಿಸಿದ್ದು ಅದಕ್ಕೆ ‘ಬಾತೆ’ ಎನ್ನುತ್ತಾರೆ. ಪೆಟ್ಟಿಗೆಯ ಮುಂಭಾಗದಲ್ಲಿ ಸ್ಟಾಪರ್ಸ ಇದ್ದು ಅದನ್ನು ಮುಂದಕ್ಕೆ ಎಳೆದು ಬಾತೆ ಹಾಕಿದಾಗ ಗಾಳಿಯು ಪೆಟ್ಟಿಗೆಯಲ್ಲಿ ದೂಡಲ್ಪಟ್ಟು ಲೋಹದ ತೆಳುಪಟ್ಟಿಯಾಕಾರದ ಪೀಪಿಯಲ್ಲಿ ಕಂಪನ ಉಂಟಾಗಿ, ಮೇಲ್ಭಾಗದಲ್ಲಿ ಬೆರಳು ಒತ್ತಿದ ಕೂಡಲೆ ರಂಧ್ರದೊಳಗಿಂದ ಸ್ವರ ಹೊರಹೊಮ್ಮುತ್ತದೆ.

ಪೇಟಿಯಲ್ಲಿ ಸ್ವರಪೀಪಿಗಳು ಪಾಶ್ಚಾತ್ಯ ರೀತಿಯ ಸಮಶ್ರುತಿ ಮೇಳ ಪದ್ಧತಿಗನುಗುಣವಾಗಿ ರಚನೆಗೊಂಡಿರುವುದರಿಂದ ನಿಜಶ್ರುತಿ ಮೇಳ ಪದ್ಧತಿಯ ಭಾರತೀಯ ಸಂಗೀತಕ್ಕೆ ಪೇಟಿಯು ಸಂಗತವಾಗುವುದಿಲ್ಲವೆಂಬ ಅಭಿಪ್ರಾಯವಿದೆ. ಆದರೂ ಸ್ವರಗಳ ನುಡಿಕೆಗೆ ಬೆರಳುಗಳನ್ನು ಹೊಂದಿಸಿಕೊಂಡು, ಅದಕ್ಕೆ ತಕ್ಕಂತೆ ತಿದಿಯನ್ನು ಹಾಕುತ್ತ ಭಾರತೀಯ ಸಂಗೀತ ಸ್ವರಗಳನ್ನೇ ಅಚ್ಚುಕಟ್ಟಾಗಿ ಹೊರಡಿಸಬಲ್ಲ ಪೇಟೀ ವಾದಕರಿದ್ದಾರೆ. ಆದರೂ ಪ್ರಖ್ಯಾತ ಹಾಡುಗಾರರು ಪೇಟಿಯನ್ನು ಅವಶ್ಯವೆಂದು ಭಾವಿಸಿಲ್ಲ.

ಗಾತ್ರದಲ್ಲಿ ಸಣ್ಣದಾಗಿರುವ ಒಂದು ಪೇಟಿಯಿದ್ದು ಅದು ಬರೀ ಸೂರು ಹಿಡಿಯಲು ಮಾತ್ರ ಬರುತ್ತದೆ. ಬೇರೆ ಸ್ವರ ಹೊರಡಿಸುವ ರಚನಾ ವಿನ್ಯಾಸ ಅದರಲ್ಲಿರುವುದಿಲ್ಲ. ಇನ್ನೊಂದು ಬಗೆಯ ಪೇಟಿಯೆಂದರೆ ಕೈಪೇಟಿ. ನೆಲದ ಮೇಲೆ ಕುಳಿತು ಎಡಗೈಯಿಂದ ಬಾತೆ ಹಾಕುತ್ತ ಬಲಗೈ ಬೆರಳುಗಳಿಂದ ಇದನ್ನು ನುಡಿಸಬಹುದು. ಬಾತೆ ಹಾಕಲು ಮತ್ತೊಬ್ಬರಿಗೆ ಹೇಳಿ ಎರಡೂ ಕೈಯಿಂದಲೂ ಕೈಪೇಟಿ ಬಾರಿಸಬಹುದು. ಇನ್ನೊಂದು ಬಗೆಯ ಪೇಟಿಯೆಂದರೆ ಕಾಲಪೇಟಿ. ಇದನ್ನು ಮರಡಿನಿಂದ ಜೋಡಿಸಲಾದ ಎರಡು ಪಟ್ಟಿಕೆಗಳ ಮೇಲೆ ಅಳವಡಿಸಲಾಗಿರುತ್ತದೆ. ಇದರ ಬಾತೆ ಕೆಳಗಡೆ ಇರುತ್ತದೆ. ಕುರ್ಚಿಯೊಂದರ ಮೇಲೆ ಕುಳಿತು ಕಾಲಿನಿಂದ ಕೆಳಗಿನ ಬಾತೆ ಹಾಕುತ್ತ ಎರಡೂ ಕೈಗಳಿಂದ ವಾದಕನು ಪೇಟಿ ನುಡಿಸುತ್ತಾನೆ. ೧೮೪೦ ರಲ್ಲಿ ಈ ಬಗೆಯ ಪೇಟಿಯ ಆವಿಷ್ಕಾರವಾಯಿತೆನ್ನುತ್ತಾರೆ. ಹಳ್ಳಿ ಪಟ್ಟಣಗಳಲ್ಲಿ ಪ್ರಯೋಗಗೊಳ್ಳುವ ಸಂಗೀತ ನಾಟಕಗಳಲ್ಲಿ ಕಾಲಪೇಟಿ ಅನಿವಾರ್ಯವೆಂಬಷ್ಟರ ಮಟ್ಟಿಗೆ ಉಪಯೋಗವಾಗುತ್ತದೆ.

ಮೊದಮೊದಲು ಹಾರ್ಮೋನಿಯಂ ಆಧಾರಸ್ವರ ಹಿಡಿಯಲು ಮಾತ್ರ ಸಂಗೀತದಲ್ಲಿ ಬಳಕೆಯಾಗುತ್ತಿತ್ತು. ಆ ಮೇಲೆ ಹಾಡುವಾಗ ಕಂಠಸ್ವರಕ್ಕೆ ಉದ್ದಕ್ಕೂ ಸಾಥಿಯಾಗಿ ಬಳಕೆಗೆ ಬಂದಿತು. ಶಾಸ್ತ್ರೀಯ ಸಂಗೀತದಲ್ಲಿ ಪೇಟಿ ಮಹತ್ವದ್ದಲ್ಲ. ಆದರೂ ಹಿಂದೂಸ್ತಾನಿ ಸಂಗೀತದಲ್ಲಿ ಇತ್ತಿತ್ತಲಾಗಿ ಹೆಚ್ಚು ಹೆಚ್ಚಾಗಿ ಬಳಕೆಗೊಳ್ಳುತ್ತಿದೆ. ಪಕ್ಕವಾದ್ಯವಾಗಿ, ನಿರ್ದಿಷ್ಟವಾದ ಕೋಮಲ, ತೀವ್ರ ಹಾಗೂ ಶುದ್ಧ ಸ್ವರಗಳನ್ನು ತಿಳಿಯಲು ಇದು ಹೆಚ್ಚು ಸಹಾಯಕ. ಸ್ವತಂತ್ರವಾದ್ಯವಾಗಿಯೂ ಬಹಳ ಮಧುರವಾಗಿ ಹಾರ್ಮೋನಿಯಂ ನುಡಿಸುವ ಕಲಾವಿದರೂ ಇದ್ದಾರೆ.

ಹಳ್ಳಿಗಳಲ್ಲಂತೂ ಭಜನೆ, ಪುರಾಣ, ನಾಟಕ, ದೊಡ್ಡಾಟ, ಸಣ್ಣಾಟ ಇತ್ಯಾದಿ ಅನೇಕ ಜನಪದ ಕಲಾಪ್ರದರ್ಶನಗಳ ಸಂದರ್ಭದಲ್ಲಿ ಪೇಟಿ ಅನಿವಾರ್ಯ ವಾದ್ಯವಾಗಿದೆ. 

ಕೆಲವು ವಿಶಿಷ್ಟ ಜನಪದವಾದ್ಯಗಳು

ಸನ್ನೆಕೋಲು :

ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಬೆಳಕು ನೀಡುವ ಬಿಂಗಿ’ ಎಂದೂ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ‘ಅಂಟಿಕೆ-ಪಂಟಿಕೆ’ ಎಂದೂ ಕರೆಯುವ ಬಲೀಂದ್ರನ ಆರಾಧನೆಗೆ ಸಂಬಂಧಿಸಿದಂತೆ ಒಂದು ಆಚರಣೆಯಿದ್ದು ಕಾರ್ತೀಕಮಾಸದ ಬಲಿಪಾಡ್ಯಮಿಯಿಂದ ಮೊದಲುಗೊಂಡು ಎರಡು ಇಲ್ಲವೆ ಐದು ದಿನ ಅದನ್ನು ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಇದನ್ನು ‘ಆಣಿ-ಪೀಣಿ’ ಎಂದೂ ಕರೆಯಲಾಗುತ್ತದೆ. ಆಗ ಕೈದೀಪವೊಂದನ್ನು ಕೈಯಲ್ಲಿ ಹಿಡಿದು ಒಬ್ಬನು ಅದು ಆರದಂತೆ ನೋಡಿಕೊಳ್ಳುತ್ತ “ದೀ ಪಾಳಿ-ದೀ ಪಾಳಿ-ದೀ ಪಾಳ್ಯೊ” ಎಂದೂ “ಆಣಿ-ಪೀಣಿ-ಜಾಣಿಗೊ” ಎಂದೂ ಕೂಗುತ್ತ ಮುಂದೆ ನಡೆದರೆ ಹಿಂದಿನವರೂ ಹಾಗೆಯೇ ಕೂಗುತ್ತ ತಂಡವಾಗಿ ಮನೆ ಮನೆಗೆ ಹೋಗುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ತಂಡದವರನ್ನು ‘ಬಿಂಗಿ ಪದದವರು’ ಎಂದು ಕರೆಯುತ್ತಾರೆ. ಇಂಥ ತಂಡದವರು ಕೆಲವು ಭಾಗಗಳಲ್ಲಿ ‘ಸನ್ನೆ ಕೋಲು’ ಎಂಬ ವಾದ್ಯವನ್ನು ಬಳಸುತ್ತಾರೆ.

‘ಸನ್ನೆಕೋಲು’ ವಾದ್ಯವನ್ನು ಬಿದಿರಿನ ಜಾತಿಗೆ ಸೇರಿದ ‘ವಾಟೆ’ ಎಂಬ ಸಸ್ಯದ ಕೊಳವೆಯಂತಹ ಕಾಂಡದಿಂದ ತಯಾರಿಸುತ್ತಾರೆ. ಸುಮಾರು ಎರಡು ಅಡಿ ಉದ್ದದ ಮೂರು ಅಥವಾ ನಾಲ್ಕು ಕೊಳವೆಗಳನ್ನು ತೆಗೆದುಕೊಂಡು ಅವನ್ನು ಸಣ್ಣ ಕೊಳವೆಯ ತುಂಡುಗಳ ಸಹಾಯದಿಂದ ಜೋಡಿಸಿ ಆರೇಳು ಅಡಿ ಉದ್ದದ ಒಂದೇ ಕೊಳವೆಯನ್ನು ಮಾಡಲಾಗುತ್ತದೆ. ಅದರ ಒಂದು ತುದಿಗೆ, ತೆಂಗಿನ ಗರಿಯನ್ನು ತುತ್ತೂರಿಯಾಕಾರದಲ್ಲಿ ಸುತ್ತಿ ಜೋಡಿಸುತ್ತಾರೆ. ಇನ್ನೊಂದು ತುದಿಯನ್ನು ಬಾಯಿಗಿಟ್ಟು ಊದಿದಾಗ ‘ಬುಂಯ್’ ಎಂಬ ಧ್ವನಿ ಹೊರಡುತ್ತದೆ. ಇದು ರಾತ್ರಿಯ ಆ ತಂಪು ಹೊತ್ತಿನಲ್ಲಿ ಬಹುದೂರ ಕೇಳಿಸುತ್ತದೆ. ತಂಡದ ಒಬ್ಬ ಸದಸ್ಯನು ಸನ್ನೆಕೋಲನ್ನು ಹಿಡಿದು ಊರು ಅಥವಾ ಮನೆ ಸಮೀಪಿಸುತ್ತಿದ್ದಂತೆ ಊದುತ್ತಾನೆ. ಬಿಂಗಿ ತಂಡದವರು ಬರುತ್ತಿದ್ದಾರೆಂಬುದರ ಸೂಚನೆಯಿದು. ಚಿಕ್ಕ ಚಿಕ್ಕ ಕೊಳವೆಯುಳ್ಳ ಕೋಲುಗಳನ್ನು ಸೇರಿಸಿ ಈ ವಾದ್ಯವನ್ನು ಮಾಡಿರುವುದರಿಂದಲೂ, ತಾವು ಬರುತ್ತಿರುವ ಸನ್ನೆ(ಸೂಚನೆ) ಯನ್ನು ಇದು ಕೊಡುವುದರಿಂದಲೂ ಇದಕ್ಕೆ ಸನ್ನೆಕೋಲೆಂಬ ಹೆಸರು ಕೊಟ್ಟಿರಬಹುದು. ಸನ್ನೆಕೋಲು ವಾದ್ಯದಿಂದ ಹೊರಡುವ ಧ್ವನಿ ಭೃಂಗದ ಧ್ವನಿಯಂತೆ ಇರುವುದರಿಂದ ಇವರನ್ನು ಬಿಂಗಿ ಪದದವರೆಂದು ಕರೆಯುತ್ತಿರಬಹುದು.

ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರು ಸುಗ್ಗಿಯ ಕುಣಿತ ಮಾಡುತ್ತಿರುವಾಗ ಹೆದ್ದುಂಬೆ ಎಂಬ ಮರದಿಂದ ಮಾಡಿದ ‘ಹೆದ್ದುಂಬೆ ಕೋಲು’ ಎಂಬ ವಾದ್ಯವನ್ನು ಸಾಮಾನ್ಯವಾಗಿ ಊದುತ್ತಾರೆ. ತಮ್ಮ ತಂಡ ಹೊರಟಿದೆ ಎಂಬುದರ ಸೂಚನೆಯನ್ನು ಜನರಿಗೆ ಕೊಡುವುದೇ ಆ ಊದುವಿಕೆಯ ಉದ್ದೇಶ. ಹೆದ್ದುಂಬೆ ವಾದ್ಯದ ಬದಲು ನಾಗರಕೊಳವಿಯಿಂದ ಮಾಡಿದ ಸುಮಾರು ಎರಡು ಮೀಟರ ಉದ್ದವಿದ್ದು ಬಿಲ್ಲಿನಂತೆ ತುಸು ಬಾಗಿರುವ ‘ಸನ್ನೆಕೋಲು’ ವಾದ್ಯವನ್ನು ಊದುವುದೂ ಉಂಟು. ಇದರಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಸುಲಭವಾಗಿ ದೊರೆಯುವ ವಸ್ತುಗಳಿಂದ ಒಂದೇ ಬಗೆಯ ವಾದ್ಯವನ್ನು ಜನಪದರು ತಯಾರಿಸುವದು ಸ್ಪಷ್ಟ.

ಗಣೆ :

ಇದು ಕೊಳಲಿನಂತಹ ಇನ್ನೊಂದು ಜನಪದ ವಾದ್ಯ. ಜುಂಜಪ್ಪನ ಭಕ್ತರಾದ ಗೊಲ್ಲ ಜನಾಂಗದವರು ತಮ್ಮ ಆರಾಧ್ಯ ದೈವದ ಪವಾಡಗಳನ್ನು ಅವನ ಮಹಿಮಾತಿಶಯಗಳನ್ನು ಒಳಗೊಂಡ ಪದಗಳನ್ನು ಒಬ್ಬ ಹಾಡುತ್ತಿದ್ದರೆ, ಇನ್ನೊಬ್ಬ ಹಾಡಿನ ಜೊತೆಯಲ್ಲೆ ಗಣೆ ನುಡಿಸುತ್ತಾನೆ. ಕೃಷ್ಣನ ಕೈಯಲ್ಲಿರುವ ಕೊಳಲಿಗೆ ಗಣೆ ವಾದ್ಯವೇ ಮೂಲವಾಗಿರಬೇಕು. ಗಣೆ ಪದ ಹಾಡುವುದನ್ನೇ ಒಂದು ವೃತ್ತಿಯನ್ನಾಗಿ ಮಾಡಿಕೊಂಡ ಒಕ್ಕಲುಗಳೂ ಇವೆ.

ಜನಪದ ವಾದ್ಯಗಳಲ್ಲಿ ಗಣೆ ವಿಶಿಷ್ಟವಾದುದು. ಸುಮಾರು ನಾಲ್ಕೈದು ಅಡಿ ಉದ್ದವಿರುವ ಸಣ್ಣ ಬಿದಿರಿನ ಬೊಂಬಿಗೆ ಸ್ವರದ ರಂಧ್ರ ಕೊರೆದು ಇದನ್ನು ಸಿದ್ಧಪಡಿಸಲಾಗುತ್ತದೆ. ರಂಧ್ರದ ಸಮೀಪ ತುಟಿಯಿಟ್ಟು ಊದಿದಾಗ ಅತ್ಯಂತ ಮಧುರವಾದ ಸ್ವರ ಹೊರಹೊಮ್ಮುತ್ತದೆ. ಹಾಲುಹೊಯ್ಯುವ ಹಬ್ಬದ ಸಂದರ್ಭದಲ್ಲಿ ಸ್ವಾಮಿಯ ಮುಂದೆ ವಿಶಾಲ ಬಯಲಿನಲ್ಲಿ ಗದ್ದಿಗೆಗಂಬಳಿ ಹಾಸಿ ಅದರ ಮೇಲೆ ಕುಳಿತು ಇಡೀ ರಾತ್ರಿ ಗಣೆ ಊದುವದೂ ಉಂಟು. ಸ್ವಾಮಿಯೆ ಗಣೆಯ ಮೂಲಕ ಬಂದು ನುಡಿಸುತ್ತಾನೆಂದು ಅವರ ನಂಬಿಕೆ. ಗಣೆಯಿಂದ ನಾದ ಸರಿಯಾಗಿ ಬರದಿದ್ದರೆ ಅಶುಭವೆಂದು ಅವರ ತಿಳುವಳಿಕೆ. ಬಿದಿರ ಗಳೆಯಿಂದ ವಾದ್ಯವನ್ನು ಸಿದ್ಧಪಡಿಸುವುದರಿಂದ ‘ಗಣೆ’ ಹೆಸರು ಬಂದಿರಬೇಕು.

ಚೀನಿವಾದ್ಯ :

ಕೊಡಗು ಜಿಲ್ಲೆಯಲ್ಲಿ ಗಿರಿಜನವರ್ಗಕ್ಕೆ ಸೇರಿದ ಒಂದು ಗುಂಪು ಎರವರು. ಕೃಷಿ ಕಾರ್ಮಿಕರಾದ ಇವರು ತಮ್ಮ ದಿನನಿತ್ಯದ ಆಯಾಸ ಬೇಸರ ಪರಿಹಾರಕ್ಕಾಗಿ ಗುಡಿಸಲುಗಳ ಮುಂದೆ ಹಾಕಿದ ಬೆಂಕಿಯ ಗುಡ್ಡೆಯ ಸುತ್ತ ಹೆಣ್ಣು ಗಂಡುಗಳೆಂಬ ಭೇದವಿಲ್ಲದೆ ಎಲ್ಲರೂ ಸೇರಿ ಕುಣಿಯುತ್ತಾರೆ. ಸಂಜೆ ಊಟದ ನಂತರ ಆರಂಭವಾದ ಕುಣಿತ ನಿದ್ದೆ ಬರುವವರೆಗೂ ನಡೆಯುತ್ತದೆ. ಕುಣಿತಕ್ಕೆ ಹಿನ್ನೆಲೆಯಾಗಿ ದುಡಿ ಮತ್ತು ಚೀನಿವಾದ್ಯ ಬಳಸುತ್ತಾರೆ. ದುಡಿ ಚರ್ಮವಾದ್ಯವಾದರೆ ಚೀನಿವಾದ್ಯ ಸುಷಿರವಾದ್ಯ. ಊದುವ ಜಾಗದಲ್ಲಿ ಕೆಂಪು ತಾಳೆ ಮಡಿಕೆ ಹಾಕಿರುತ್ತಾರೆ.

ಪುಗಡಿ :

ಕಾರವಾರ, ಅಂಕೋಲಾ, ಕುಮಟಾ ಇತ್ಯಾದಿ ಕರಾವಳಿ ತಾಲೂಕುಗಳಲ್ಲಿ ಕ್ಷತ್ರಿಯ ಕುಮಾರಪಂತ್, ಹರಪಂತ್ ಹಾಗೂ ಅಂಬಿವರ್ಗದ ಮಹಿಳೆಯರು ಗಣೇಶಚತುರ್ಥಿ, ಶಿವರಾತ್ರಿಯಂತಹ ಹಬ್ಬಗಳಲ್ಲಿ, ತೊಟ್ಟಿಲು ಕಾರ್ಯದ ಸಂದರ್ಭದಲ್ಲಿ, ಕೈಯಲ್ಲಿ ಕೊಡವನ್ನು ಹಿಡಿದು ಅದರ ಬಾಯ ಬಳಿ ತಮ್ಮ ಬಾಯಿ ಇಟ್ಟು ಪೂವ್ ಪೂವ್ ಎಂದು ಊದಿದಾಗ ಅದು ಒಳಗೇ ಪ್ರತಿಧ್ವನಿಸುತ್ತದೆ. ಆ ಪ್ರತಿಧ್ವನಿಗೆ ಅನುಗುಣವಾಗಿ ಅವರು ಕುಣಿಯುತ್ತಾರೆ. ಇದೇ ಪುಗುಡಿಕುಣಿತ. ಕೊಡಗಳಲ್ಲಿ ಊದಿ ಪ್ರತಿಧ್ವನಿಸುವುದರಿಂದ ಇದೂ ಒಂದು ಬಗೆಯ ಉಸಿರು ವಾದ್ಯವೆ ಸರಿ.

ಈ ಪ್ರಬಂಧದಲ್ಲಿ ಕೆಲವು ಪ್ರಮುಖ ಸುಷಿರ-ಗಾಳಿ-ಉಸಿರು ವಾದ್ಯಗಳನ್ನು ಕುರಿತು ಹೇಳಿದೆ. ಸಾಹಿತ್ಯಕೃತಿಗಳಲ್ಲಿ ಇನ್ನು ಹಲವಾರು ಇಂಥವಾದ್ಯಗಳ ಉಲ್ಲೇಖ ಬರುತ್ತದೆ. ಉದಾ : ಮುಹರಿ (ಮೋಳಿಗೆ ಮಾರಯ್ಯನ ವಚನ), ಕರ್ಣೆ (ಚನ್ನಬಸವಣ್ಣನವರ ವಚನ), ತತ್ತರಿ (ನೇಮಿಚಂದ್ರನ ಲೀಲಾವತಿ ಹಾಗೂ ಮನಸೋಲ್ಲಾಸ), ಪಾಲಿಕೆ, ಮುಹುರಿ, ಪಾವ (ಪದ್ಮರಾಜ ಪುರಾಣ) ಇತ್ಯಾದಿ. ಅವುಗಳ ಬಗ್ಗೆ ಹೆಚ್ಚಿನ ವಿವರ ತಿಳಿದುಬರುವುದಿಲ್ಲ. ಹಲವಾರು ಸುಷಿರ ಅಥವಾ ಗಾಳಿವಾದ್ಯ ನುಡಿಸುವವರ ಶಿಲ್ಪಾಕೃತಿಗಳು ಹಾಗೂ ವರ್ಣಚಿತ್ರಗಳು ನಮ್ಮ ದೇಶದ ಪ್ರಾಚೀನ ದೇವಾಲಯಗಳಲ್ಲಿ ಇವೆ. ಅವುಗಳ ಅಧ್ಯಯನ ಅವಶ್ಯ ನಡೆಯಬೇಕು. 

ಆಧಾರಗ್ರಂಥಗಳು

೧. ಕರ್ನಾಟಕ ಜನಪದ ಕಲೆಗಳು ಸಂ:ಗೊ.ರು.ಚನ್ನಬಸಪ್ಪ ಕ.ಸಾ.ಪರಿಷತ್ ಪ್ರಕಟನೆ ಬೆಂಗಳೂರು (೧೯೭೭)
೨. ಭಾರತೀಯ ಸಂಗೀತವಾದ್ಯಗಳು ಜಿ. ಶಾಮಾಚಾರ್ಯ. ಹೆಜ್ಜೆ ಪ್ರಕಾಶನ ರಾಯಚೂರು (೧೯೮೩)
೩. ಕನ್ನಡ ಸಾಹಿತ್ಯ ಶಾಸನಗಳಲ್ಲಿ ಸಂಗೀತ ವಿಚಾರ ಎಂ. ಚಿದಾನಂದ ಮೂರ್ತಿ, ಬೆಂಗಳೂರು. ವಿ. ವಿ.(೧೯೮೪)
೪. ಪಂಪಾಸ್ಥಾನ ವರ್ಣನಂ ಚಂದ್ರಶೇಖರ ಕವಿ, ಸಂ: ಬಿ. ಶಿವಮೂರ್ತಿ ಶಾಸ್ತ್ರಿ (೧೯೫೫)
೫. ಆರಾಧ್ಯ ಚಾರಿತ್ರ ನೀಲಕಂಠಾಚಾರ್ಯ. ಸಂ: ಎನ್. ಬಸವಾರಾಧ್ಯ. ಕ.ಅ. ಸಂಸ್ಥೆ, ಮೈಸೂರು ವಿ. ವಿ. (೧೯೮೦)
೬. ಭಾರತೀಯ ಸಂಗೀತವಾದ್ಯ (ಹಿಂದಿ) ಡಾ. ಲಾಲಮಣಿ ಮಿಶ್ರ, ಭಾರತೀಯ ಜ್ಞಾನಪೀಠ ಪ್ರಕಾಶನ, ದಿಲ್ಲಿ (೧೯೭೩)
೭. ಭಾರತೀಯ ಸಂಗೀತವಾದ್ಯಗಳು ಎಲ್. ರಾಜಾರಾವ್ ಬೆಂಗಳೂರು. ವಿ. ವಿ. (೧೯೬೯)
೮. ಭಾರತೀಯ ವಾದ್ಯಗಳು ಎ.ಎಂ. ಪುರಂದರೆ. ಕ.ವಿ.ವಿ. ಧಾರವಾಡ (೧೯೭೪)