ಸಂಗೀತವು ಅತ್ಯಂತ ಪ್ರಾಚೀನಕಲೆ, ಅಷ್ಟೇ ಏಕೆ, ಅದು ವಿಶ್ವಮೋಹಕ ಕಲೆಯೂ ಅಹುದು. ವಿಶ್ವದ ಹುಟ್ಟಿನೊಂದಿಗೇ ಈ ಕಲೆಯು ಮೇಳವಿಸಿಕೊಂಡು ಬಂದಿದೆ. ಭೂಮಿಯ ಹಾಗೂ ಇತರ ಗ್ರಹಗಳ ಭ್ರಮಣದಲ್ಲಿ ಒಂದು ಬಗೆಯ ಗುಂಜಾರವವು ಅಡಗಿದೆ. ಮಾನವನು ಭೂಮಿಯ ಮೇಲೆ ಕಾಣಿಸಿಕೊಂಡ ಕೆಲ ಕಾಲದನಂತರ ಈ ಗುಂಜಾರವದತ್ತ ಲಕ್ಷ್ಯಹರಿದು ಅವನು ವಿಸ್ಮಯಗೊಂಡಿರಬೇಕು. ಭೋರ್ಗರೆಯುವ ಸಾಗರ, ಜುಳುಜುಳು ನಿನದಿಸುವ ಹೊಳೆ-ಹಳ್ಳಗಳು, ಉಲಿಯುವ ಗಾಳಿ, ಸುತ್ತಲಿನ ಪಕ್ಷಿಗಳ ಇಂಚರ ಇವುಗಳಲ್ಲಿಯೂ ಒಂದುಬಗೆಯ ಸಂಗೀತ ಅಡಗಿರುವದನ್ನು ಅವನು ಕಂಡುಕೊಂಡಿರಬೇಕು. ಇಂತಹ ನಿಸರ್ಗಶಕ್ತಿಯಿಂದ ಪ್ರಭಾವಿತನಾಗಿ ತಾನೂ ನಿಸರ್ಗದೊಂದಿಗೆ ದನಿಗೂಡಿಸತೊಡಗಿದನು. ಈ ರೀತಿಯ ಅನುಕರಣದಿಂದ ಆತನ ಕಲ್ಪನಾಶಕ್ತಿ ಕುದುರಿ ಅದಕ್ಕೆ ಬುದ್ಧಿಯು ಸಹಕಾರಿಯಾಯಿತು. ಭಾಷೆಯು ನಿರ್ಮಾಣವಾದ ನಂತರ ಅವನಲ್ಲಿ ಉಂಟಾದ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಅದು ಸಹಾಯಕವಾಯಿತು. ಹೀಗೆ ನಿಸರ್ಗದ ಸಂಗೀತದಿಂದ ಪ್ರೇರಿತನಾಗಿ ಸಂತೋಷವನ್ನು ಚಿಮ್ಮಿಸಲು ಹಾಡಿಕುಣಿಯತೊಡಗಿದನು. ಹೀಗಾಗಿ ಹಾಡು ಕುಣಿತಗಳು ಮಾನವಜೀವನದ ಅವಿಭಾಜ್ಯ ಅಂಗಗಳಾಗಿವೆ.

ಕಾಮಶಾಸ್ತ್ರದ ವ್ಯಾಖ್ಯಾನಕಾರನಾದ ಯಶೋಧರನು-“ಸ್ವರಪ್ರಧಾನವೂ ಲಯಪ್ರಧಾನವೂ ಚೇತನದ ಅವಧಾನವೂ ಆದ ಗಾನ”-ಎಂದು ‘ಗೀತ’ದ ವಿವರಣೆ ಕೊಟ್ಟಿರುವನು. ಇದೇ ಸಂಗೀತವೆಂದು ಪ್ರಸಿದ್ಧಿಪಡೆದ ಕಲೆ. ಸಂಗೀತವು ಸಾಮವೇದದಿಂದ ಹುಟ್ಟಿದ್ದು ಎಂಬುದು ಕೆಲವರ ನಂಬಿಕೆ. ಇದನ್ನು ಗಾಂಧರ್ವವಿದ್ಯೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ನಾರದನು ಸನತ್ಕುಮಾರನನ್ನು ಪರಮಾರ್ಥ ತತ್ವೋಪದೇಶವನ್ನು ನೀಡುವಂತೆ ಪ್ರಾರ್ಥಿಸಿದಾಗ ತಾನು ಸಂಗೀತಾದಿ ‘ದೇವ ಜನ ವಿದ್ಯೆ’ಗಳನ್ನು ಸಹ ಅರಿತಿರುವದಾಗಿ ವಿನಂತಿಸಿಕೊಳ್ಳುತ್ತಾನೆ ಎಂದು ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳಲಾಗಿದೆ.

ಭಾರತೀಯ ಸಂಗೀತ ಕಲಾವಿದನು ನಾದವನ್ನು ಬ್ರಹ್ಮವೆಂದರಿತು ಆರಾಧಿಸುತ್ತ ಬಂದಿದ್ದಾನೆ. ಸಂಗೀತದ ಉಗಮವನ್ನು ಕುರಿತು ಪಂಡಿತರು ಪೌರಾಣಿಕ ಹಾಗೂ ವೈಜ್ಞಾನಿಕ ಹೀಗೆ ಎರಡು ದೃಷ್ಟಿಕೋನಗಳಿಂದ ಉತ್ತರವೀಯಲು ಯತ್ನಿಸಿದ್ದಾರೆ. ಪೌರಾಣಿಕ ದೃಷ್ಟಿಯಿಂದ ನೋಡಿದರೆ- ಶಿವನು ತಾಂಡವನೃತ್ಯ ಮಾಡಿದಾಗ ಸಂಗೀತದ ಉಗಮವಾಯಿತೆಂಬುದು ಒಂದು ಹೇಳಿಕೆ. ಆ ತಾಂಡವ ನೃತ್ಯದ ಪದವಿನ್ಯಾಸಕ್ಕೆ ಸರಿಯಾಗಿ ತಾಳ ಸಂಗೀತ ಮೇಳವಿಸಲು ಬ್ರಹ್ಮನು ಗಣಪತಿಗೆ ‘ಡಮರು’-ಎಂಬ ವಾದ್ಯವನ್ನು ನಿರ್ಮಿಸಿಕೊಟ್ಟನು. ಇದೇ ಎಲ್ಲ ಚರ್ಮವಾದ್ಯಗಳ ಮೂಲವೆಂದೂ, ಹಾಗೆಯೇ ಶಿವನ ಕೈಯಲ್ಲಿಯ ಪಿನಾಕವೇ ಎಲ್ಲ ತಂತುವಾದ್ಯಗಳಿಗೆ ಆದಿಯೆಂದೂ ಹೇಳಲಾಗುವದು. ಪಿನಾಕವು ತಂತುವಾದ್ಯವಲ್ಲದಿದ್ದರೂ ಈ ಹೇಳಿಕೆ ರೂಢವಾಗಿರುವದು ಅಚ್ಚರಿಯ ಸಂಗತಿ. ಅಂತೂ ಶಿವನಿಂದಲೇ ಸಂಗೀತದ ಉತ್ಪತ್ತಿಯಾಯಿತೆಂಬುದನ್ನು ಈ ಹೇಳಿಕೆ ಸಮರ್ಥಿಸುತ್ತದೆ. ಇನ್ನೊಂದು ಹೇಳಿಕೆ ಹೀಗಿದೆ: “ಸದಾಶಿವನ ಪಂಚಮುಖಗಳಿಂದ ಮೂಲವಾಗಿ ಐದು ರಾಗಗಳು ಮೊದಲು ಹುಟ್ಟಿಕೊಂಡವು. ಪೂರ್ವಮುಖದಿಂದ ಭೈರವರಾಗ, ಪಶ್ಚಿಮಮುಖದಿಂದ ಹಿಂದೋಳರಾಗ. ಉತ್ತರಮುಖದಿಂದ ಮೇಘರಾಗ, ದಕ್ಷಿಣಮುಖದಿಂದ ದೀಪಕರಾಗ ಮತ್ತು ಆಕಾಶಮುಖದಿಂದ ಶ್ರೀರಾಗಗಳು ಹುಟ್ಟಿಕೊಂಡು ಮುಂದೆ ಅನೇಕ ರಾಗ-ರಾಗಿಣಿಗಳಿಗೆ ಮೂಲವಾದವು.” ದಾಮೋದರಪಂಡಿತನು ತನ್ನ ‘ಸಂಗೀತದರ್ಪಣ’ ಎಂಬ ಗ್ರಂಥದಲ್ಲಿ “ಸಂಗೀತವು ಶೂನ್ಯದಲ್ಲಿ ಸಾಕಾರವು ರೂಪುಗೊಂಡಂತೆ ಪರಬ್ರಹ್ಮನ ಇಚ್ಛಾಶಕ್ತಿಯಲ್ಲಿ ಮೈಗೊಂಡು ಭರತಮುನಿಗೆ ಬ್ರಹ್ಮನ ವರಪ್ರಸಾದವಾಗಿ ದೊರೆಯಿತು.” ಎಂದು ಅಭಿಪ್ರಾಯಪಟ್ಟಿರುವನು. ನಾರದೀಯ ಪುರಾಣದಲ್ಲಿ “ಷಡ್ಜವು ದೇವತೆಗಳನ್ನೂ, ಋಷಭವು ಋಷಿಗಳನ್ನೂ, ಗಾಂಧಾರವು ಪಿತೃಗಳನ್ನೂ, ಮಧ್ಯಮವು ಗಂಧರ್ವರನ್ನೂ, ಪಂಚಮವು ದೇವ-ಪಿತೃ-ಋಷಿಗಳನ್ನೂ, ನಿಷಾದವು ಯಕ್ಷರನ್ನೂ, ಧೈವತವು ಪ್ರಾಣಿ ಸಾಮಾನ್ಯರನ್ನೂ ಸಂತೋಷಪಡಿಸುತ್ತವೆ”- ಎಂಬುದಾಗಿ ಹೇಳಲಾಗಿದೆ. ಇವು ಏಳು ಸ್ವರಗಳು. ಸ್ವರದಿಂದ ರಾಗಗಳೂ, ಲಯದಿಂದ ತಾಳಗಳೂ, ವರ್ಣದಿಂದ ಕೃತಿಗಳೂ ಹುಟ್ಟಿದವು.

ವೈಜ್ಞಾನಿಕದೃಷ್ಟಿಯಿಂದ ಹೇಳುವದಾದರೆ- “ಷಡ್ಜವು ನವಿಲಿನಿಂದ. ಋಷಭವು ಚಾತಕಪಕ್ಷಿಯಿಂದ, ಗಾಂಧಾರವು ಆಡಿನಿಂದ, ಮಧ್ಯಮವು ಕ್ರೌಂಚಪಕ್ಷಿಯಿಂದ, ಪಂಚಮವು ಕೋಗಿಲೆಯಿಂದ ಧೈವತವು ಕಪ್ಪೆಯಿಂದ ಮತ್ತು ನಿಷಾದ ಸ್ವರವು ಆನೆಯಿಂದ ಹುಟ್ಟಿದವು. ಇದು ಬ್ರಹ್ಮಾದಿಗಳಿಗೂ ಸಮ್ಮತವಾದುದು.” ಎಂದುದು ಸಂಗೀತಸಾರಸಂಗ್ರಹದಲ್ಲಿಯ ವಿಚಾರ. ಇದರಿಂದ ನಿಸರ್ಗವೇ ಸಂಗೀತದ ಮೂಲಸ್ಫೂರ್ತಿಯ ಸೆಲೆಯಾಗಿರುವದನ್ನು ಮನಗಾಣಬಹುದು. ಅಂತೂ ಮೂಲತಃ ಪಶುಪಕ್ಷಿಗಳಿಂದ ಹುಟ್ಟಿಕೊಂಡ ಸಂಗೀತವು ಆಧುನಿಕ ಮಾನವನಿಂದ ಪೂರ್ಣವಿಕಾಸವನ್ನು ಪಡೆಯಿತೆಂಬುದು ಗಮನಿಸತಕ್ಕ ವಿಚಾರವಾಗಿದೆ.

ತಾಳ-ಲಯಗಳು ಸಂಗೀತದ ಅವಿಭಾಜ್ಯ ಅಂಗಗಳು. ಇದಕ್ಕೆ ನೆರವಾಗುವಂತೆ ಮಾನವನು ವಾದ್ಯಗಳನ್ನು ನಿರ್ಮಿಸಿಕೊಂಡನು. ವಾದ್ಯವೆಂದರೆ-ಗೀತದೊಡನೆ ಮೇಳವಿಸಿದ ಸಾಧನ. ವಾದ್ಯಗಳನ್ನು ಸಾಮಾನ್ಯವಾಗಿ-ಚರ್ಮವಾದ್ಯ, ತಾಳವಾದ್ಯ, ತಂತಿವಾದ್ಯ ಹಾಗೂ ಇತರವಾದ್ಯ-ಎಂದು ವಿಂಗಡಿಸಲಾಗುವದು. ಇವುಗಳಲ್ಲಿ ಯಾವುದು ಪ್ರಾಚೀನತಮ ಎಂದು ನಿರ್ಧರಿಸುವದು ಸುಲಭದಕಾರ್ಯವಲ್ಲ. ಈ ವಾದ್ಯಸಮೂಹದಲ್ಲಿ ಜನಪದ ತಂತಿವಾದ್ಯಗಳನ್ನು ಮಾತ್ರ ಇಲ್ಲಿ ಪರಿಚಯಿಸಿಕೊಡಲಾಗುವದು. ತಂತಿ ವಾದ್ಯಗಳಲ್ಲಿ ನರ (ಕರುಳಿನ ಹುರಿ), ದಾರ, ಲೋಹದ ತಂತಿ ಮತ್ತು ಜವಿ (ಕೂದಲು)-ಇವುಗಳನ್ನು ತಂತಿಯಂತೆ ಉಪಯೋಗಿಸಲಾಗುವದು.

ತಂತಿವಾದ್ಯದ ಉಗಮ :

ಆದಿಮಾನವನು ಬೇಟೆಗಾಗಿ ಬಿಲ್ಲು ಬಾಣಗಳನ್ನು ನಿರ್ಮಿಸಿಕೊಂಡನಷ್ಟೆ, ತಂತಿವಾದ್ಯಗಳ ಉಗಮವನ್ನು ನಾವು ಇಲ್ಲಿಯೇ ಕಾಣುತ್ತೇವೆ. ಬಿಲ್ಲಿಗೆ ಆ ಕಾಡು ಮಾನವನು ನರವನ್ನೇ ತಂತಿಯಂತೆ ಬಳಸಿಕೊಂಡಂತೆ ಕಾಣುತ್ತದೆ. ಇದನ್ನು ಜಗ್ಗಿ ಬಾಣ ಬಿಡುವಾಗ ಉಂಟಾಗುವ ಟಂಕಾರದಿಂದ ಸಂತಸಗೊಂಡು ತಂತಿವಾದ್ಯವನ್ನು ನಿರ್ಮಿಸಿಕೊಂಡಿರಬೇಕು. ಬೇಟೆಯ ಚರ್ಮವನ್ನು ಬಳಸಿನಿರ್ಮಿಸಿದ ವಾದ್ಯವೇ ಚರ್ಮವಾದ್ಯವಾಯಿತು. ಅನಂತರ ತಾಳವಾದ್ಯ, ಕೊಂಬು ಕಹಳೆ ಮೊದಲಾದವುಗಳು ಹುಟ್ಟಿಕೊಂಡಿವೆಯೆಂದು ಭಾವಿಸುವದು ಕ್ರಮಪ್ರಾಪ್ತವೆನಿಸುತ್ತದೆ. ಈಗ ತಂತಿವಾದ್ಯಗಳನ್ನು ಉಪಯೋಗಿಸುವವರು ಹೆಚ್ಚಾಗಿ ವೃತ್ತಿಗಾಯಕರಿರುವದು ಗಮನಿಸತಕ್ಕ ಸಂಗತಿಯಾಗಿದೆ.

ಜನಪದ ವಾದ್ಯಗಳಲ್ಲಿ ತಂತಿವಾದ್ಯಗಳು ಕೆಲವೇ ಕೆಲವು ಕಂಡುಬರುತ್ತವೆ. ೧. ಏಕತಾರಿ ೨. ತಂಬೂರಿ ೩. ಚೌಡಿಕೆ ೪. ತುಂತುಣಿ ೫. ಕಿನ್ನೂರಿ ೬. ಕಾಮಾಕ್ಷಿ. ಇವನ್ನು ಜನಪದ ತಂತಿವಾದ್ಯಗಳೆಂದು ಗುರುತಿಸಬಹುದಾಗಿದೆ. ಶಿಷ್ಟ ಸಂಗೀತಸಂಪ್ರದಾಯದಲ್ಲಿ ಕಂಡುಬರುವ ವೀಣೆ. ಸಿತಾರ, ಸರೋದ, ಪಿಟೀಲು (Fiddle) ಮೊದಲಾದ ತಂತಿವಾದ್ಯಗಳು ಜನಪದ ತಂತಿವಾದ್ಯಗಳ ಸುಧಾರಿಸಿದ ರೂಪಗಳೇ ಆಗಿವೆ. ತಂತಿವಾದ್ಯದಲ್ಲಿಯ ತಂತಿಯ ಮಹತ್ವವನ್ನು ‘ರಾಗ ಬರುವಾಗ ತಂತಿ ಹರಿಯಿತು’ ಎಂಬ ಗಾದೆ ತಿಳಿಸುತ್ತದೆ. ತಂತಿವಾದ್ಯಕ್ಕೆ ತತವಾದ್ಯ ಎಂದೂ ಕರೆಯುವರು. ತಂತಿವಾದ್ಯಗಳ ಕೆಲವು ಹೆಸರುಗಳು ನಮ್ಮ ಶಿಲಾಶಾಸನಗಳಲ್ಲಿಯೂ ಪ್ರಾಚೀನ ಗ್ರಂಥಗಳಲ್ಲಿಯೂ ದೊರೆಯುತ್ತಿವೆಯಾದರೂ ಅವುಗಳ ವಿವರಣೆ ದೊರೆಯದ ಕಾರಣ ಅವುಗಳನ್ನು ಗುರುತಿಸುವದು ಅಸಾಧ್ಯವಾಗಿದೆ. ಉದಾಹರಣೆಗಾಗಿ ಹೇಳುವದಾದರೆ ರಾವಣಹಾತೊ (ರಾವಣಹಸ್ತ ?) ಎಂಬ ಹೆಸರಿನ ತಂತಿವಾದ್ಯವನ್ನು ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಜಾನಪದ ಗಾಯಕರು ಬಳಸುತ್ತಿದ್ದಾರೆ ಎಂಬ ವಿಷಯವನ್ನು ಶ್ರೀ ಎಸ್. ಕೃಷ್ಣಸ್ವಾಮಿಯವರು ಉಲ್ಲೇಖಿಸಿದ್ದಾರೆ.1 {1. Musical instruments of India (Delhi, 1967) page 83.} ಇಲ್ಲಿಯೇ ಈ ವಾದ್ಯದ ಕೆಲಮಟ್ಟಿನ ವಿವರಣೆಯೂ ದೊರೆಯುತ್ತದೆ. ಚೆಂಗು ಎಂಬುದು ಒಂದು ತಂತಿವಾದ್ಯ.2 {2. ಗುರುರಾಜ ಚಾರಿತ್ರ್ಯ ೭-೬೬} ಆದರೆ ಇದು ಜನಪದ ವಾದ್ಯವೋ ಶಿಷ್ಟವಾದ್ಯವೋ ಹೇಳುವದು ಕಷ್ಟ. ಸಾಹಿತ್ಯಕೃತಿಗಳಲ್ಲಿ ಮತ್ತು ಶಾಸನಗಳಲ್ಲಿ ಹೀಗೆ ಅನೇಕ ವಾದ್ಯಗಳ ಹೆಸರುಗಳಿವೆ. ಶಿಲ್ಪಕಲಾಕೃತಿಗಳಲ್ಲಿ ಹಲವಾರು ವಾದ್ಯಗಳ ಚಿತ್ರಗಳಿವೆ. ಆದರೆ ಈ ಹೆಸರು ಮತ್ತು ಚಿತ್ರಗಳನ್ನು ಸಮೀಕರಿಸುವದು ಇದುವರೆಗೂ ಸಾಧ್ಯವಾಗಿಲ್ಲ.

ತಂತಿವಾದ್ಯಗಳಲ್ಲಿ, ೧. ಬೆರಳಿನಿಂದ ತಂತಿಯನ್ನು ಮೀಟಿ ಬಾರಿಸುವ ವಾದ್ಯಗಳು, ೨. ಗಜ ಇಲ್ಲವೆ ಕಮಾನಿನಿಂದ ತಂತಿಯನ್ನು ತೀಡಿ ಬಾರಿಸುವ ವಾದ್ಯಗಳು ಎಂದು ಎರಡು ಪ್ರಕಾರಗಳಿವೆ. ತಂತಿವಾದ್ಯವು ತಾಳ ಮತ್ತು ಶ್ರುತಿ ಎರಡನ್ನೂ ಏಕಕಾಲಕ್ಕೆ ಕೊಡುವದು. ಈ ಮುಂದೆ ಒಂದೊಂದಾಗಿ ಜಾನಪದ ವಾದ್ಯಗಳ ಪರಿಚಯ ಮಾಡಿಕೊಡಲಾಗುವದು.

. ಏಕತಾರಿ :

ಇದು ಕುಂಬಳ ಬುರುಡೆಯಿಂದ ತಯಾರಿಸಿದ ಸರಳವಾದ್ಯ. ಹಸಿಯಕುಂಬಳಕಾಯಿಯನ್ನು ಚೆನ್ನಾಗಿ ಒಣಗಿಸಿ ಒಳಗಿನ ತಿರುಳು ತೆಗೆಯುತ್ತಾರೆ. ಹೀಗೆ ಪೊಳ್ಳಾಗಿ ಮಾಡಿದ ವಿಶಿಷ್ಟ ಆಕಾರದ ಬುರುಡೆಗೆ ಸುಮಾರು ಮೂರು ಅಡಿ ಉದ್ದದ ಬಿದಿರಿನಕೋಲನ್ನು ಅಳವಡಿಸಲಾಗುವದು. ಈ ಕೋಲಿನ ಮುಂದಿನ ತುದಿಯ ಹತ್ತಿರ ಇರುವ ಕಿವಿಯಿಂದ ಅದರ ಇನ್ನೊಂದು ತುದಿಯವರೆಗೆ ಒಂದು ತಂತಿಯನ್ನು ಎಳೆದು ಕಟ್ಟುತ್ತಾರೆ. ಇದು ಕುಂಬಳ ಬುರುಡೆಯ ಮೇಲೆ ಹಾಯ್ದು ಹೋಗಿರುತ್ತದೆ. ಈ ಬಿಗಿದ ತಂತಿಯನ್ನು ಬೆರಳಿನಿಂದ ಮೀಟಿದಾಗ ಟಿಂಮ್, ಟಿಂಮ್, ಟಿಂಮ್, ಟಿಂಮ್, ಎಂಬ ನಾದ ಹೊರಡುವದು. ಇದು ಒಂದು (ಏಕ) ತಂತಿಯ ವಾದ್ಯವಾದುದರಿಂದ ಇದಕ್ಕೆ ‘ಏಕತಾರಿ’-ಎಂಬ ಹೆಸರು ರೂಢವಾಗಿದೆ. ಈ ವಾದ್ಯವನ್ನು ತತ್ವಪದದವರು, ದೊಂಬಿದಾಸರು, ತೆಲುಗು ಜಂಗಮರು ಮತ್ತು ಭಜನಾಮೇಳದವರು ಬಳಸುತ್ತಾರೆ. ‘ಏಕತಾರಿ ಕಾಯಾಗ ಏನಾದ, ಗುರುನಾಮದಮೃತ ತುಂಬ್ಯಾದ’-ಎಂಬುದು ಭಜನಾಮೇಳದವರ ಪಲ್ಲವಿ. ‘ದೇಹವೇ ಏಕತಾರಿಕಾಯಿ, ಜೀವವೇ ಬಿದಿರಿನಕೋಲು, ಮಾಯದ ತಂತಿ ಬಿಗಿದು ಅಜ್ಞಾನದ ಬೆಣಕು ಜಡಿದಿದೆ’-ಎಂಬ ತತ್ವವನ್ನು ಏಕತಾರಿಗೆ ಹೊಂದಿಸುವ ಜನಪದರ ರೀತಿಗೆ ಅಚ್ಚರಿಯೆನಿಸುತ್ತದೆ. ಇದು ಹಲವು ತಂತಿಗಳ ಜನಪದ ವಾದ್ಯಗಳಿಗೆ ಮೂಲವಾಗಿದ್ದಂತೆ ತೋರುತ್ತದೆ.

. ತಂಬೂರಿ :

ತಂಬೂರಿಯು ಅತೀ ಪ್ರಾಚೀನ ಭಾರತೀಯ ಶ್ರುತಿ ವಾದ್ಯವಾಗಿದೆ. ಕಂಠಸಂಗೀತಕ್ಕೆ ಇದು ಸಹಾಯಕಾರಿಯಾದ ಮಹತ್ವದ ವಾದ್ಯವಾಗಿದ್ದು ಇದರ ಪ್ರಾಚೀನತೆ ನಾರದಮಹರ್ಷಿಗಳ ಕಾಲದವರೆಗೆ ಹೋಗುತ್ತದೆ. ತಂಬೂರಿಯ ಬಳಕೆ ಶಾಸ್ತ್ರೀಯ ಸಂಗೀತದಲ್ಲಿಯೂ ವಿಶೇಷವಾಗಿದೆ. ಆದರೆ ವಿಶಿಷ್ಟವಾದ ತಂಬೂರಿಯನ್ನು ಜನಪದಗಾಯಕರೂ ಬಳಸುತ್ತಾರೆ. ಎರಡು ಮೊಳ ಉದ್ದದ ವಿಶಿಷ್ಟ ತಂಬೂರಿಯನ್ನು ನೀಲಗಾರರೆಂಬ ವೃತ್ತಿಗಾಯಕರು ಬಳಸುವದುಂಟು. ಇದನ್ನು ಹಲಸಿನಮರದಲ್ಲಿ ಕೆತ್ತಲಾಗುವದು. ಇದರ ಒಂದು ತುದಿಯಲ್ಲಿ ನಾಗರ ಹಡೆ ಇಲ್ಲವೆ ಸಿಂಗದ ಮುಖವನ್ನು ಬಿಡಿಸುವರು. ಇದಕ್ಕೆ ‘ಸರಸ್ವತಿ’-ವಾದ್ಯವೆಂಬ ಇನ್ನೊಂದು ಹೆಸರೂ ಉಂಟು. ಕೆಲವರು ವೈಷ್ಣವ ಸಂಪ್ರದಾಯದ ವೃತ್ತಿಗಾಯಕರು ದೋತರವನ್ನುಟ್ಟು ಶರ್ಟು ಧರಿಸಿ ತಲೆಗೆ ಪೇಟಸುತ್ತಿ ಕೊರಳಲ್ಲಿ ರುದ್ರಾಕ್ಷಿಸರ, ಹಣೆಗೆ ನಾಮ ಧರಿಸಿ ಹೆಗಲಿಗೆ ಜೋಳಿಗೆ ಹಾಕಿಕೊಂಡು ಊರಾಡುತ್ತ ತಿರುಗುವರು.

ತಂಬೂರಿಯಲ್ಲಿ ವಿಶಿಷ್ಟವಾದ ಒಂದುಮೊಳದ ಚಿಕ್ಕ ತಂಬೂರಿಗೆ ‘ಬುರ್ರ‍’ ಎಂದು ಹೆಸರು. ಇದು ಆಂಧ್ರಮೂಲದ ವೃತ್ತಿಗಾಯಕರ ವಾದ್ಯವಾಗಿದ್ದು, ಇವರು ಕೋಲಾರ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಈ ಮೇಳಕ್ಕೆ ಬುರ್ರ‍ ಕಥಾಮೇಳ ಎಂಬ ಹೆಸರಿದೆ. ಈ ಮೇಳದಲ್ಲಿ ಮೂರು ಇಲ್ಲವೆ ನಾಲ್ಕು ಜನರಿರುತ್ತಾರೆ. ಶ್ರೀಶೈಲದ ಕಡೆಯಿಂದ ಬರುವ ‘ಕುರ್ರ‍ ಮಾಮಾ’ಗಳು ಇಂತಹವಾದ್ಯವನ್ನೇ ಬಳಸಿಕೊಂಡು ಭವಿಷ್ಯ ಹೇಳುತ್ತ ಸಂಚರಿಸಿ ಜೀವನಸಾಗಿಸುವರು. ಇದು ಇನ್ನಷ್ಟು ಸರಳವಾದ್ಯವಾಗಿರುತ್ತದೆ.

ಶಿಷ್ಟ ಸಂಪ್ರದಾಯದಲ್ಲಿ ಬರುವ ತಂಬೂರಿಗೆ ಇಲ್ಲಿಯವರೆಗೆ ಪರಿಚಯಿಸಲಾದ ತಂಬೂರಿಯೇ ಮೂಲವಾಗಿರುವದನ್ನು ಗುರುತಿಸಬಹುದು. ಜನಪದ ತಂಬೂರಿಗೆ ಮೂಲ ಏಕತಾರಿ ಎಂಬುದಂತೂ ಸ್ಪಷ್ಟ. ಶಿಷ್ಟಸಂಪ್ರದಾಯದ ತಂಬೂರಿಯ ಸುಧಾರಿಸಿದ ರೂಪವೇ ಸಿತಾರ. ಇದರಲ್ಲಿ ಸ್ವರದರ್ಶಕ ಪರದೆಗಳಿರುವದು ಗಮನಿಸತಕ್ಕ ಸಂಗತಿ. ಹೀಗೆ ಜನಪದ ತಂಬೂರಿಯು ಅನೇಕ ಶಿಷ್ಟತಂತಿವಾದ್ಯಗಳಿಗೆ ಮೂಲವಾಗಿದೆ.

. ಚೌಡಿಕೆ :

ಶಕ್ತಿದೇವತೆಯ ಆರಾಧನಾ ಸಂಪ್ರದಾಯದಲ್ಲಿ ದೇವಿಯ ಚರಿತ್ರೆ, ಮಹಿಮೆಗಳನ್ನು ಭಕ್ತಿಯಿಂದ ಹಾಡುವಾಗ ಹಿನ್ನೆಲೆಯಾಗಿ ಬಳಸುವ ವಾದ್ಯವೇ ಚೌಡಿಕೆ. ಮಾರ್ವ ಕಾಲದಲ್ಲಿ ಚೌಡಿಕೆಗೆ ತಂತಿಯ ಬದಲಾಗಿ ಕುರಿಯ ಕರುಳಿನ ಹುರಿಯನ್ನು ಬಳಸುತ್ತಿದ್ದರು. ಇತ್ತೀಚೆಗೆ ಸಿಂಥೆಟಿಕ್ ದಾರವನ್ನು ಬಳಸಲಾಗುವದು.

ಇದು ಒಂದು ಕೊಳಗದಾಕಾರದವಾದ್ಯ. ಸುಮಾರು ಒಂದು ಅಡಿ ಉದ್ದದ, ಎಂಟು ಅಂಗುಲ ವ್ಯಾಸದ ಮರದ ದಿಂಬನ್ನು ತಿರುಳು ತೆಗೆದು ಕೊಳವೆಯಂತೆ ಮಾಡಿಕೊಳ್ಳುವರು. ಇದಕ್ಕಾಗಿ ಹೊನ್ನೆ, ಮಾವು, ಬೇವು ಮೊದಲಾದ ಮರಗಳ ದಿಮ್ಮಿಯನ್ನು ಬಳಸುತ್ತಾರೆ. ಹೀಗೆ ತಯಾರಿಸಿದ ಕೊಳಗಕ್ಕೆ ಒಂದು ಬದಿಗೆ ಮೇಕೆಯ ಚರ್ಮವನ್ನು ಉಪಯೋಗಿಸುವರು. ಈ ಚರ್ಮದ ನಡುವೆ ಒಂದು ರಂಧ್ರವನ್ನು ಕೊರೆದು ಅದರ ಮೂಲಕ ಕರುಳಹುರಿಯನ್ನು ಎಳೆದು ತಂದು ಮುಂದಿರುವ ಒಂದು ಚಿಣಿಗೆ ಜೋಡಿಸಿ ಸುತ್ತಲಾಗುವದು. ಈ ವಾದ್ಯವನ್ನು ಕಂಕುಳಲ್ಲಿ ಹಿಡಿದು ಎಡಗೈಯಿಂದ ಚಿಣಿಯನ್ನು ಜಗ್ಗಿ ಬಲಗೈ ಬೆರಳುಗಳಿಂದ ಮೀಂಟಿದರೆ ಢಡ್ ಢಂವಕ್ ಎಂಬ ವಿಶಿಷ್ಟ ನಾದ ಹೊರಡುವದು. ಈ ನಾದಕ್ಕೆ ಚಿಣಿಗೆ ಕಟ್ಟಿದ ಕಿರಿಗೆಜ್ಜೆಗಳ ನಾದವೂ ಕೂಡಿ ಅಮಿತಾನಂದವನ್ನುಂಟುಮಾಡುವದು. ಕಲಾಕಾರರು ಇದರಲ್ಲಿ ತಮ್ಮ ಕೈಚಳಕವನ್ನು ತೋರಿಸುವರು.

ಚೌಡಿಕೆಯ ಉಗಮವನ್ನು ಕುರಿತು ಕೆಲವು ಕಥೆಗಳು ರೂಢಿಯಲ್ಲಿವೆ : ಜಮದಗ್ನಿಯ ಆಶ್ರಮದಲ್ಲಿದ್ದ ಕಾಮಧೇನುವನ್ನು ಅಪಹರಿಸುವ ದುರಾಸೆಯಿಂದ ಕಾರ್ತವೀರ್ಯನು ಆ ಋಷಿಯ್ನ ಕೊಂದು ಕಾಮಧೇನುವನ್ನು ಒಯ್ಯುತ್ತಾನೆ. ಋಷಿಪತ್ನಿಯಾದ ರೇಣುಕೆಯು ದುಃಖತಪ್ತಳಾಗುತ್ತಾಳೆ. ರೇಣುಕೆಯ ದುಃಖ ನಿವಾರಿಸಲು ತೊಡಗಿದ ಕುಮಾರ ಪರಶುರಾಮನು ಕಾರ್ತವೀರ್ಯನನ್ನು ಕೊಂದು ಕಾಮಧೇನುವನ್ನು ಮರಳಿತರುತ್ತಾನೆ. ಹೀಗೆ ಕೊಲ್ಲಲ್ಪಟ್ಟ ಕಾರ್ತವೀರ್ಯನ ಶರೀರದ ವಿವಿಧ ಭಾಗಗಳಿಂದ ಚೌಡಿಕೆ ಎಂಬ ವಾದ್ಯವನ್ನು ನಿರ್ಮಿಸಿ ಅದರ ಸಹಾಯದಿಂದ ಹಾಡಿ ಪರಶುರಾಮನು ರೇಣುಕಾಮಾತೆಯನ್ನು ಸುಪ್ರೀತಗೊಳಿಸಿದನಂತೆ. ಈ ಕಥೆಯ ಪ್ರಕಾರ ಕಾರ್ತವೀರ್ಯನ ಹೊಟ್ಟೆಯೇ ಚೌಡಿಕೆಯ ಕೊಳಗ, ಅವನ ಕೈಯೇ ಸರಿಗೋಲು, ಅವನ ಕರುಳೇ ತಂತಿ, ಅವನ ಬೆರಳೇ ನುಡಿಸುವ ಕಡ್ಡಿ!

ಇನ್ನೊಂದು ಕಥೆ ಹೀಗಿದೆ: ಜಮದಗ್ನಿಯ ಪತ್ನಿ ರೇಣುಕೆಯು ದಿನಾಲು ಪ್ರಾತಃಕಾಲದಲ್ಲಿ ನದಿಯಲ್ಲಿ ಮಿಂದು, ತಲೆಯಲ್ಲಿ ಸರ್ಪದ ಸಿಂಬೆಯನ್ನು ಮಾಡಿಟ್ಟುಕೊಂಡು ಉಸುಕಿನ ಕೊಡದಲ್ಲಿ ನೀರು ತಂದು ಪತಿಯ ಪೂಜೆಗೆ ಕೊಡುತ್ತಿದ್ದಳು. ಒಂದು ದಿನ ಹೀಗೆ ನೀರು ತರುತ್ತಿರುವಾಗ ಗಂಧರ್ವ ದಂಪತಿಗಳ ಜಲಕ್ರೀಡೆಯನ್ನು ಕಂಡು ಅವಳು ಮೋಹಪರವಶಳಾದಳು. ಇಂತಿರಲು ಕೊಡ ಒಡೆದು ಋಷಿಯ ಪೂಜೆಗೆ ಆತಂಕವುಂಟಾಯಿತು. ತ್ರಿಕಾಲಜ್ಞಾನಿಯಾದ ಋಷಿಯು ಇದರಿಂದ ಕೋಪಾವಿಷ್ಟನಾಗಿ ಅವಳಿಗೆ ‘ಮಹಾರೋಗಕ್ಕೆ ತುತ್ತಾಗು’ ಎಂದು ಶಾಪವಿತ್ತನು. ರೋಗಿಯಾಗಿ ಸಂಚರಿಸುತ್ತಿರುವ ರೇಣುಕೆಗೆ ಚಿಕ್ಕಯ್ಯ, ಜೋಗಯ್ಯ ಎಂಬ ಶರಣರು ಭೆಟ್ಟಿಯಾದರು. ಇವರ ಅನುಗ್ರಹದಿಂದ ಶಾಪವಿಮೋಚನೆಯಾಯಿತು. ಮಹಾಮಹಿಮ ಆ ತಾಯಿಯನ್ನು ಅನಂತರ ಜೋಗಯ್ಯಗಳ ಪರಂಪರೆ ಹಾಡಿ ಕೊಂಡಾಡಿತು. ಇದೇ ಚೌಡಿಕೆ ಸಂಪ್ರದಾಯ.

ಚೌಡಿಕೆ ನುಡಿಸುವವರನ್ನು ಜೋಗಿ ಅಥವಾ ಜೋಗತಿ ಎಂದು ಕರೆಯುತ್ತಾರೆ. ಇವರು ರೇಣುಕೆಯ ಸೇವೆಗಾಗಿ ದೀಕ್ಷೆಪಡೆದವರು. ನಪುಂಸಕರಾದ ಗಂಡಸರೂ ಸೀರೆಯುಟ್ಟು ಚೌಡಿಕೆ ಮೇಳದಲ್ಲಿ ಕುಣಿಯುವದುಂಟು. ಇವರೆಲ್ಲರ ಹಣೆಯಲ್ಲಿ ದೇವಿಯ ಭಂಡಾರವಿರುತ್ತದೆ. ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗ, ರಾಯಚೂರ ಜಿಲ್ಲೆಯ ಹುಲಗಿ, ಶಿವಮೊಗ್ಗಾ ಜಿಲ್ಲೆಯ ಚಂದ್ರಗುತ್ತಿ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಇವು ಕರ್ನಾಟಕದ ಶಕ್ತಿದೇವಿಯ ಪ್ರಮುಖ ಕೇಂದ್ರಗಳು. ಚೌಡಿಕೆ ವಾದ್ಯವನ್ನು ಕೆಲವು ಕಡೆಗೆ ಗೊಂದಲಿಗರೂ ಬಳಸುವುದುಂಟು.

. ತುಂತುಣಿ :

ಚೌಡಿಕೆಗೆ ಅತಿ ಸಮೀಪದ ತಂತಿವಾದ್ಯವೆ ತುಂತುಣಿ ಇಲ್ಲವೆ ತುಂತಿಣಿ. ಇದರ ತಂತಿಯನ್ನು ಕಡ್ಡಿಯಿಂದ ಮೀಂಟಿದಾಗ ತುಣ್, ತುಣ್ ಎಂಬ ನಾದ ಹೊರಡುವದರಿಂದ ಈ ಹೆಸರು ರೂಢವಾಗಿದೆ. ಚೌಡಿಕೆ ವಾದ್ಯದಲ್ಲಿರುವಂತೆ ಅದೇ ಗಾತ್ರದ ಕೊಳಗದ ಒಂದು ಮುಖಕ್ಕೆ ಹದಮಾಡಿದ ಚರ್ಮವನ್ನು ಹೊದಿಸುತ್ತಾರೆ. ಚರ್ಮದ ನಡುವೆ ಒಂದು ರಂಧ್ರಕೊರೆದು ಅದರ ಹೊರಭಾಗದಲ್ಲಿ ಒಂದು ತಗಡಿನ ಬಿಲ್ಲಿಯನ್ನು ಕೂಡಿಸುವರು. ಆ ಕೊಳಗದ ಹೊರಮೈಗೆ ಸುಮಾರು ಮೂರು ಅಡಿ ಉದ್ದದ ಬಿದಿರಿನ ಕೋಲನ್ನು ಜೋಡಿಸಿ ಅದರ ತುದಿಗೆ ಒಂದು ಕಿವಿಯನ್ನು ಅಳವಡಿಸಲಾಗುವದು. ಒಂದು ತಂತಿಯನ್ನು ರಂಧ್ರದ ಮೂಲಕ ಒಳಗೆ ಎಳೆದು ಜಗ್ಗಿ ತಂದು ಕೋಲಿನ ತುದಿಯ ಕಿವಿಗೆ ಸುತ್ತಲಾಗುವದು, ಇದೇ ತುಂತುಣಿ ಎಂಬ ತಂತುವಾದ್ಯ. ಇದಕ್ಕೆ ಶ್ರುತಿವಾದ್ಯ ಎಂದೂ ಕರೆಯುವರು. ಇದು ನಯವಾದ ನಾದವನ್ನು ನೀಡುತ್ತದೆ. ತಮಗೆ ಬೇಕಾದ ನಾದವನ್ನು ಹೊರಡಿಸಲು ಅನುಕೂಲವಾಗುವಂತೆ ತಂತಿಯನ್ನು ಬಿಗಿಗೊಳಿಸಬಹುದು. ಗೀಗೀ ಹಾಡುಗಾರರು, ಲಾವಣಿ ಮೇಳದವರು, ಗೊಂದಲಿಗರು ಈ ವಾದ್ಯವನ್ನು ಬಳಸುತ್ತಾರೆ. ‘ಜತೆ ಇಲ್ಲದ ಹೆಣ್ಣಲ್ಲ, ಶ್ರುತಿ ಇಲ್ಲದ ಹಾಡಲ್ಲ’ ಎಂಬ ಗಾದೆ ಈ ವಾದ್ಯದ ಮಹತಿಯನ್ನು ಎತ್ತಿ ತೋರಿಸುತ್ತದೆ.

. ಕಿನ್ನರಿ :

ಇದೊಂದು ಅಪೂರ್ವವಾದ ಜನಪದ ತಂತಿವಾದ್ಯವಾಗಿದ್ದು ಇದಕ್ಕೆ ಕಿಂದರಿ, ಕಿನ್ನುಡಿ ಇತ್ಯಾದಿ ಪರ್ಯಾಯ ನಾಮಗಳಿವೆ. ಇದನ್ನು ನುಡಿಸುವವರಿಗೆ ‘ಕಿಂದರಿ ಜೋಗಿಗಳು’ ಎಂದು ಕರೆಯುವರು, ‘ಬೊಮ್ಮನ ಹಳ್ಳಿಯ ಕಿಂದರಜೋಗಿ’ ಎಂಬುದು ಮಕ್ಕಳಿಗಾಗಿ ಬರೆದ ಕುವೆಂಪು ಅವರ ಜನಪ್ರಿಯ ಹಾಡು. ಕಿನ್ನರಿ ಜೋಗಿಗಳು ಕರ್ನಾಟಕದ ವೃತ್ತಿಗಾಯಕರು. ನೆರೆಯ ಮಹಾರಾಷ್ಟ್ರ ರಜ್ಯದಲ್ಲಿಯೂ ಈ ಕಲಾವಿದರು ಕಂಡುಬರುತ್ತಾರೆ. ಕಿನ್ನರಿಯೂ ಕುಂಬಳ ಬುರುಡೆಯಿಂದ ತಯಾರಿಸಿದ ವಾದ್ಯವೆ. ಸುಮಾರು ಮೂರು ಅಡಿ ಉದ್ದದ ಬಿದಿರು ಗಳಕ್ಕೆ ಮೂರು ಕುಂಬಳ ಬುರುಡೆಗಳನ್ನು ಜೋಡಿಸುತ್ತಾರೆ. ಆ ಗಳದ ಬೆನ್ನಿನಲ್ಲಿ ಹನ್ನೆರಡು ಸಾರಿಗಳಿರುತ್ತವೆ. ಈ ಸಾರಿಗಳು ಮುಳ್ಳು ಹಂದಿಯ ಜಾತಿಗೆ ಸೇರಿದ ಒಂದು ಪ್ರಾಣಿಯ ಮೈಮೇಲಿನ ಚಿಪ್ಪುಗಳು. ಇದನ್ನು ಗಳಕ್ಕೆ ಅಂಟಿಸಲು ಜೇನಿನ ಮೇಣವನ್ನು ಉಪಯೋಗಿಸುತ್ತಾರೆ. ಇವುಗಳ ಮೇಲೆ ಎರಡು ಇಲ್ಲವೆ ನಾಲ್ಕು ತಂತಿಗಳು ಹಾಯ್ದುಹೋಗಿರುತ್ತವೆ. ಈ ಗಳದ ಒಂದು ತುದಿಗೆ ಮೂಗ ಅಥವಾ ಸೂಲಂಗಿ ಮರದಲ್ಲಿ ಮಾಡಿದ ಗಿಣಿಯನ್ನು ಅಳವಡಿಸಿರುತ್ತಾರೆ. ಇನ್ನೊಂದು ತುದಿಗೆ ನವಿಲುಗರಿಯನ್ನು ಹಚ್ಚಿರುತ್ತಾರೆ. ಈ ಗಿಣಿಯ ಕಾರಣದಿಂದಾಗಿ ಈ ಹಾಡುಗಳಿಗೆ ‘ಗಿಣಿಹಾಡು’ ಎಂದು ಹೆಸರಿದೆ:

ಈ ವೃತ್ತಿಗಾಯಕರಲ್ಲಿ ಭೈರವ ಸ್ವಾಮಿಯ ಭಕ್ತರು ಕೆಲವರಿದ್ದು ಅವರು ‘ಚುಂಚನಗಿರಿ ಸಂಪ್ರದಾಯದವರು’ ಎಂದು ಹೇಳಿಕೊಳ್ಳುತ್ತಾರೆ. ಭೈರವನೇ ಕಿನ್ನರಿಯನ್ನು ನುಡಿಸುತ್ತ ಸೂಜಿಗಲ್ಲಿನ ಮೇಲೆ ಕುಳಿತಿದ್ದನೆಂದು ಇವರು ಅಭಿಮಾನದಿಂದ ಹೇಳುತ್ತಾರೆ. ಇವರ ಒಂದು ಹಾಡಿನಲ್ಲಿ ಈ ನಂಬಿಕೆ ಅಭಿವ್ಯಕ್ತವಾಗಿದೆ,

ಚುಂಚನ ಗಿರಿಯಪ್ಪನೆ ಸೂಜಿಗಲ್ಲಿನ ಮೇಲೆ
ನಿಂತು ಕಿನ್ನಡಿಯ ನುಡಿಸೋನೆ | ಗಂಗಂಧರ
ನಿನ್ನ ಸೊಲ್ಲಾದವೆಲ್ಲ ಅಪರಂಜಿ ||

ಜನಪದ ಪ್ರೇಮಗೀತೆಗಳಲ್ಲಿ ‘ಲೋಲುಕಿನ್ನಡಿ’ ನುಡಿಸುವ ಕಿನ್ನರ ಜೋಗಿಯ ಪ್ರಸ್ತಾಪವಿದೆ.
“ಚೆಲುವಯ್ಯ ಚಲುವೋ ತಾನಿ ತಂದಾನಾ
ನೀ ಮಾಯಾರಿಪೇ ಕೋಲೆನ್ನ ಕೋಲ |
ಬೆಟ್ಟದ ಮ್ಯಾಗಳ ಜಲ್ಲೆ ಬಿದಿರು
ಬೇಲಿ ಮ್ಯಾಗಳ ಸೋರೇ ಬರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯ….”

ಜೋಗಿಯ ಚೆಲುವು ಮತ್ತು ಕಿನ್ನರಿ ರಚನೆಯ ವಿಧಾನವನ್ನು ಈ ಗೀತೆ ತಿಳಿಸುತ್ತದೆ. ಮೂಲದಲ್ಲಿ ಅರ್ಜುನನೇ ಈ ವೇಷ ಧರಿಸಿ, ಕುಂತಿದೇವಿಯ ಮನೆಯ ಮುಂದೆ ಹೋಗಿ ಮಹಾಭಾರತದ ಕಥೆಯನ್ನು ಹಾಡಿದನೆಂದು ಹೇಳುತ್ತಾರೆ. ಅವನ ಸುಂದರ ರೂಪ ನೋಡಿ ಆ ಕಂಠದ ಗಾನ ಮಾಧುರ್ಯವನ್ನು ಕೇಳಿ ಆ ತಾಯಿಗೆ ಪುತ್ರವಾತ್ಸಲ್ಯ ಉಕ್ಕಿಬಂದು ಆರ್ಜುನನ ನೆನಪು ಮರುಕಳಿಸಿತಂತೆ! ಇಂದಿನ ಈ ವೃತ್ತಿ ಕಲಾವಿದರು ತಾವು ಅರ್ಜುನನ ಪರಂಪರೆಯವರೆಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಇವರಲ್ಲಿ ಹಂಡೆಜೋಗಿ, ಬಾಲಜೋಗಿ, ಎಣ್ಣಿಜೋಗಿ ಎಂದು ಮೂರು ಪಂಗಡಗಳಿವೆ. ಕಿನ್ನರಿ ಸಹಾಯದಿಂದ ಹಾಡುವವರಿಗೆ ಹರಕೆಜೋಗಿಗಳೆಂದು ಹೆಸರು. ಇವರಿಗೆ ಭೈರಜೋಗಿ, ಅರ್ಜುನ ಜೋಗಿ ಮುಂತಾದ ಪರ್ಯಾಯ ನಾಮಗಳಿವೆ. ಈ ಜೋಗಿಗಳು ಪಾಂಡವರ ವಂಶದವರೆಂದು ಹೇಳಿಕೊಳ್ಳುವರು. ಇದಕ್ಕೆ ಆಧಾರವೆಂಬಂತೆ ಇವರ ಹಾಡುಗಳಲ್ಲಿ ಅರ್ಜುನ ಜೋಗಿಯ ಹಾಡು ತುಂಬಾ ಹೆಸರಾದುದು. ಈ ಹಾಡು ಮಾತ್ರವಲ್ಲದೆ ಈ ಕಲಾವಿದರು ಅರುಣಕುಮಾರ, ಬಗಿನಿಹೂವು- ಮೊದಲಾದ ಕಥನ ಕವನಗಳನ್ನು ಹಾಡುತ್ತಾರೆ. ಬಾಲ ಜೋಗಿಗಳು ಕಾಲಜ್ಞಾನವನ್ನು ಹೇಳುವದುಂಟು. ಸಂಪೂರ್ಣ ಮಹಾಭಾರತವನ್ನು ಹಾಡುವ ಜೋಗಿಗಳೂ ಇದ್ದಾರೆ. ಕಿನ್ನರಿ ಜೋಗಿಗಳು ಕಿನ್ನರಿ ವಾದ್ಯದ ಇಂಪು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುತ್ತದೆ.

ಕಿನ್ನರಿ ಎರಡು ತಂತಿಗಳ ವಾದ್ಯವಿರುವದೂ ಉಂಟು. ಕಿನ್ನರಿಗೆ ಜನಪದ ವೀಣೆ ಎಂದು ಕೆಲವರು ಕರೆಯುತ್ತಾರೆ. ‘ನವನಾಥರು’ ತಮ್ಮ ಮೂಲ ಪುರುಷರೆಂದು ಕಿನ್ನರ ಜೋಗಿಗಳು ಹೇಳುವದುಂಟು. ಕಿನ್ನರ ಜೋಗಿಗಳು ಕಾಸೆಯಪಂಜೆ, ಕರಿಯ ನಿಲುವಂಗಿ, ತಲೆಯಲ್ಲಿ ಬಣ್ಣದ ಮುಂಡಾಸು ಧರಿಸುತ್ತಾರೆ. ಮುಂಡಾಸಿಗೆ ಮಣಿಗಳ ಸರಗಳನ್ನು ಜೋಡಿಸಿರುತ್ತಾರೆ. ಅದಕ್ಕೆ ಒಂದು ಮುತ್ತಿನ ತುರಾಯಿ ಇರುವದು. ಮೈಮೇಲೆ ಜರತಾರಿಯ ಶಲ್ಯೆ ಇರುತ್ತದೆ. ಕೊರಳಲ್ಲಿ ರುದ್ರಾಕ್ಷಿಸರ, ಹಣೆಗೆ ವಿಭೂತಿ ಹಚ್ಚಿದ್ದು, ಕಾಲಲ್ಲಿ ಗೆಜ್ಜೆಯ ಸರವನ್ನು ಕಟ್ಟಿರುವರು. ಈ ಮೇಳದಲ್ಲಿ ೩ ರಿಂದ ೫ ವರೆಗೆ ಕಲಾವಿದರಿರುವದುಂಟು. ಹಾಡು ಹೇಳುತ್ತ ಕುಣಿಯತೊಡಗಿದರೆ ಕೇಳುಗರ ಮೈನವಿರೇಳುತ್ತದೆ. ಇವರನ್ನು ಜನಪದ ಕಿನ್ನರರೆಂದು ಕರೆಯಬಹುದು. ಕಿನ್ನರಿಯು ಜನಪದ ತಂತಿವಾದ್ಯಗಳಲ್ಲಿ ಅತ್ಯಂತ ಮಧುರವಾದ್ಯ. ಅದನ್ನು ನುಡಿಸುವದು ಸುಲಭವಲ್ಲ. ಹಾಗೆಯೇ ಅದರ ನಾದಮಾಧುರ್ಯವನ್ನು ಅರಿಯಲು ಜ್ಞಾನಬೇಕು. ಅಂತೆಯೇ ‘ಕೋಣನ ಮುಂದೆ ಕಿನ್ನರಿ ನುಡಿಸಿದಂತೆ’ ಎಂಬ ಗಾದೆ ರೂಢವಾಗಿದೆ. ೧೨ ನೆಯ ಶತಮಾನದಲ್ಲಿ ಕಿನ್ನರಿ ಬೊಮ್ಮಯ್ಯನೆಂಬ ಒಬ್ಬ ಶಿವಶರಣನು ಆಗಿ ಹೋಗಿದ್ದಾನೆ. ಇದಕ್ಕೂ ಹಿಂದೆಯೇ ಈ ವಾದ್ಯ ರೂಢವಾಗಿದ್ದಂತೆ ತಿಳಿದುಬರುವದು.

. ಕಾಮಾಕ್ಷಿ :

ಇದೊಂದು ಪ್ರಾಚೀನ ಜನಪದ ತಂತಿವಾದ್ಯ. ಬಳವಲಕಾಯಿ ಚಿಪ್ಪನ್ನು ಬರಿದು ಮಾಡಿ ಅದಕ್ಕೆ ಒಂದು ಗಳವನ್ನು ಕಟ್ಟುವರು. ಇದು ೧|| ಫೂಟಿನಷ್ಟು ಉದ್ದವಾಗಿರುವದು. ಇದಕ್ಕೆ ಕುದುರೆಯ ಬಾಲದ ಜವಿ (ಕೂದಲು)ಯನ್ನು ಜಗ್ಗಿ ಕಟ್ಟುವರು. ಹೀಗೆ ತಯಾರಿಸಿದ ವಾದ್ಯವನ್ನು ಕಮಾನಿನಿಂದ ನುಡಿಸುವರು. ಈ ವಾದ್ಯವನ್ನು ಭಿಕ್ಷುಕ ವೃತ್ತಿಯ ಕಲಾವಿದರು ಹಾಡುಗಳೊಂದಿಗೆ ನುಡಿಸುತ್ತ ತಿರುಗಾಡುವರು. ಇತ್ತೀಚೆಗೆ ಈ ವಾದ್ಯ ಕಣ್ಮರೆಯಾಗುತ್ತಲಿದೆ. ಇಂತಹದೇ ವಾದ್ಯವನ್ನು ಮಹಾರಾಷ್ಟ್ರದ ಕೆಲವರು ನುಡಿಸುತ್ತ ಅನುಭಾವ ಗೀತೆಗಳನ್ನು ಮರಾಠಿಯಲ್ಲಿ ಹಾಡುತ್ತ ಸಂಚರಿಸುವರು. ಇದಕ್ಕೆ ಈ ಹೆಸರು ಬರಲು ಕಾರಣವೇನೆಂಬುದು ತಿಳಿಯದು.

ಇಲ್ಲಿಯವರೆಗೆ ಜನಪದ ತಂತಿವಾದ್ಯಗಳನ್ನು ಪರಿಚಯ ಮಾಡಿಕೊಡಲಾಯಿತು. ಶಿಷ್ಟವಾದ್ಯಗಳಿಂದ ಜನಪದ ವಾದ್ಯಗಳನ್ನು ಬೇರ್ಪಡಿಸುವ ಕಾರ್ಯವು ಸುಲಭವಾದುದಲ್ಲ. ‘ಪಿಟೀಲು’ ಭಾರತೀಯಮೂಲ ವಾದ್ಯವೋ ಪಾಶ್ಚಾತಮೂಲ ವಾದ್ಯವೋ ಹೇಳುವದು ಕಷ್ಟದ ಕೆಲಸ. ಅದು ಶಿಷ್ಟ ಹಾಗೂ ಜಾನಪದ ಎರಡೂ ಸಂಪ್ರದಾಯಗಳಲ್ಲಿ ಬಳಕೆಯಾಗುತ್ತದೆ. ಲಾವಣಿಕಾರರು, ಗೀಗೀ ಮೇಳದವರು, ಬಯಲಾಟದವರು ಇದನ್ನು ಬಳಸುತ್ತ ಬಂದಿದ್ದಾರೆ. ಆದರೂ ಅದು ಶಿಷ್ಟವಾದ್ಯವೆಂಬುದು ನಿರ್ವಿವಾದ.

ಜನಪದ ವಾದ್ಯಗಳ ಸಮಗ್ರ ಅಧ್ಯಯನವು ಇದುವರೆಗೂ ನಡೆಯದಿರುವದು ವಿಷಾದನೀಯ ಸಂಗತಿ. ನಾನು ಈ ಪ್ರಬಂಧವನ್ನು ಸಿದ್ಧಪಡಿಸುವ ಪೂರ್ವದಲ್ಲಿ ತಕ್ಕಮಟ್ಟಿಗೆ ಈ ಭಾಗದಲ್ಲಿ ಕ್ಷೇತ್ರಕಾರ್ಯ ಮಾಡಿದ್ದೇನೆ. ಇದಕ್ಕೆ ಸಂಬಂಧಿಸಿದ ಪ್ರಕಟಿತ ಕೆಲವು ಕೃತಿಗಳನ್ನು ಅವಲೋಕಿಸಿದ್ದೇನೆ. ಆದರೂ ಪ್ರಬಂಧವು ಸಮಗ್ರವಾಗಿದೆಯೆಂದು ಹೇಳುವಂತಿಲ್ಲ. ಆ ದಿಶೆಯಲ್ಲಿ ನನ್ನದೊಂದು ಪ್ರಾಮಾಣಿಕ ಪ್ರಯತ್ನವೆಂದು ಮಾತ್ರ ವಿನಮ್ರವಾಗಿ ಹೇಳಬಯಸುತ್ತೇನೆ. ನ್ಯೂನತೆಗಳನ್ನು, ಹೆಚ್ಚಿನ ಸಂಗತಿಗಳನ್ನು ನನ್ನ ಗಮನಕ್ಕೆ ತರಲು ಪಂಡಿತರನ್ನು ಪ್ರಾರ್ಥಿಸುತ್ತೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಿಗೆ ನನ್ನ ಕೃತಜ್ಞತೆಗಳು. ಪ್ರಬಂಧ ಮಂಡನೆಯಲ್ಲಿ ತಾಳ್ಮೆಯಿಂದ ಕೇಳಿದ ಜನಪದರಿಗೂ ಸೂಕ್ತ ಸಲಹೆ ಸೂಚನೆಗಳನ್ನಿತ್ತ ವಿದ್ವಾಂಸರಿಗೂ ಹತ್ತು ಬಳ್ಹಚ್ಚಿ ಶರಣೆಂದು ಲೇಖನಕ್ಕೆ ವಿರಾಮ ಕೊಡಬಯಸುತ್ತೇನೆ.

ಗ್ರಂಥಋಣ

೧. ಕರ್ನಾಟಕದ ಜನಪದ ವಾದ್ಯಗಳು-ಡಾ. ಜೀ. ಶಂ. ಪರಮಶಿವಯ್ಯ. ಐ. ಬಿ. ಎಚ್ ಪ್ರಕಾಶನ ೧೯೮೦

೨. ಕಿನ್ನರಿ ಜೋಗಿಗಳು     –        ”         ”

೩. ಮಂಟೇಸ್ವಾಮಿ ನೀಲಗಾರರು    –        ”         ”

೪. ಹಿಂದುಸ್ತಾನೀ ಸಂಗೀತ ಪದ್ಧತಿಯ ರೂಪ-ರೇಷೆಗಳು- ಪ್ರೊ. ಎ. ಯು. ಪಾಟೋಲ ಕ. ವಿ. ವಿ. ಉಪನ್ಯಾಸ ಗ್ರಂಥ ೧೯೭೦

೫. ಕನ್ನಡ ಸಾಹಿತ್ಯ ಶಾಸನಗಳಲ್ಲಿ ಸಂಗೀತ ವಿಚಾರ- ಎಂ. ಚಿದಾನಂದಮೂರ್ತಿ -ಪ್ರಸಾರಾಂಗ. ಬೆಂಗಳೂರು ವಿ. ವಿ. ೧೯೮೪

೬. ೬೪ ಕಲೆಗಳು- ಮ. ಶ್ರೀಧರ ಮೂರ್ತಿ. ಬೆಂಗಳೂರು ವಿ. ವಿ, ೧೯೭೪

೭. Musical Instruments of India (Delhi-1967) ಮತ್ತು ಕ್ಷೇತ್ರ ಕಾರ್ಯದ ಆಧಾರ.