ಪುರಾತನ ಮಾನವನ ಅನ್ಯೋನ್ಯ ನೈಸರ್ಗಿಕ ಸಹಚರ್ಯ ನಾದದ ಕಲ್ಪನೆಗೆ ಇಂಬುಕೊಟ್ಟಿದೆ. ಸಡಿಲವಾಗಿ ತೆಕ್ಕೆ ಹಾಕಿಕೊಂಡು ನಿಂತ ಬಿದಿರು ಪರಸ್ಪರ ಉಜ್ಜಿ ಹೊರಡಿಸಿದ ನಾದ, ವೃಕ್ಷ-ಶಿಲೆಗಳ ಇಕ್ಕಟ್ಟಿನಲ್ಲಿ ವೇಗವಾಗಿ ನುಸುಳಿದ ಗಾಳಿ ಉಂಟುಮಾಡಿದ ಶಬ್ದ, ಹಕ್ಕಿ ಪಕ್ಷಿಗಳ ಇಂಚರ-ಶಿಳ್ಳು, ಭೃಂಗದ ಝೇಂಕಾರ, ಜಲಪಾತದ ಭೋರ್ಗರೆತ, ಹರಿವ ನೀರಿನ ಜುಳು ಜುಳು, ಒಣಗಿ ಬೀಜ ಬಿಟ್ಟುಕೊಂಡು ಗಿಲಿಕೆಯಾದ ಮರ-ಗಿಡಗಳ ಕಾಯಿ ವಿಭಿನ್ನ ನಾದದ ಅನ್ವೇಷಣೆಗೆ ಪ್ರೇರಣೆ ನೀಡಿವೆ. ಜೊತೆಗೆ ದೈಹಿಕವಾಗಿ ನಡೆಯುವ ಉಸಿರಾಟದಂಥ ನೈಸರ್ಗಿಕ ಕ್ರಿಯೆಯಲ್ಲಿ. ಬೇಟೆಗಾರನ ಬಿಲ್ಲಿನ ಹೆದೆಯ ಠೇಂಕಾರದಲ್ಲಿ, ಕೈಯಿಂದ ಎದೆ, ಹೊಟ್ಟೆ ಪಕ್ಕೆಗೆ ತಮಗೆ ತಿಳಿದಂತೆ ತಟ್ಟಿಕೊಂಡು ಕುಣಿವ ಆದಿವಾಸಿ ನರ್ತನದಲ್ಲಿ ನಾದದ ಹೊಳಪುಗಳು ಕಾಣಿಸುತ್ತವೆ. ಈ ತತ್ವವನ್ನಾಧರಿಸಿಯೆ ಪ್ರಾಯಶಃ ನಾದ ಪರಿಣತರು ಅದನ್ನು (೧) ಅನಾಹತನಾದ (೨) ಆಹತನಾದ ಎಂದು ವಿಭಜನೆ ಮಾಡಿದ್ದಾರೆ. ನಿಸರ್ಗದತ್ತ ನಾದಲೀಲೆ ‘ಅನಾಹತ’ ವಾದದ್ದಾದರೆ, ಮನುಷ್ಯ ತನ್ನ ಪ್ರತಿಭೆ, ನಿರ್ಮಾಣಕುಶಲತೆಯಿಂದ ನಿರ್ಮಿಸಿದ್ದು ‘ಅಹತನಾದ’ವೆನಿಸುತ್ತದೆ.

ನೈಸರ್ಗಿಕ ಹಾಗೂ ಭೌತಿಕ ಸಂಸ್ಕೃತಿಯ ಉತ್ಪನ್ನವಾಗಿ ಹೊರಬಿದ್ದ ನಾದ ಕಾಲಕ್ರಮದಲ್ಲಿ ಮಾನವನ ಪ್ರಯೋಗಶೀಲತೆಯಿಂದಾಗಿ ಹಲವು ವಾದ್ಯಗಳ ಹುಟ್ಟಿಗೆ ಪ್ರೇರಣೆಯೊದಗಿಸಿತು. ಅವುಗಳಲ್ಲಿ ಕೆಲವು ಅಯತ್ನಿತವಾಗಿ ರೂಪುಪಡೆದಿದ್ದರೆ ಇನ್ನು ಹಲವು ಪ್ರಜ್ಞಾಪೂರ್ವಕ ದೃಷ್ಟಿಯ ಫಲವಾಗಿ ಬಂದಿವೆ. ಇವೆಲ್ಲಾ ಜನಪದದ ಭದ್ರಬುನಾದಿಯ ಮೇಲೆ ನಿಂತು ಜೀವನ ಒಡನಾಡಿಗಳಾಗಿ ವಿಕಾಸ ಹೊಂದಿವೆ.

ಪ್ರಾಚೀನ ಲಾಕ್ಷಣಿಕರು ವಾದ್ಯಗಳನ್ನು ತತ, ಸುಷಿರ, ಆನದ್ಧ ಮತ್ತು ಘನವಾದ್ಯಗಳೆಂದು ನಾಲ್ಕು ಗುಂಪು ಮಾಡುತ್ತಾರೆ.

[1] ತಂಬೂರಿ, ವೀಣೆ, ಸಿತಾರ್ ಮುಂತಾದ ತಂತಿವಾದ್ಯಗಳು ತತ ಗುಂಪಿಗೆ ಸೇರಿದರೆ; ಸಾರಂಗಿ, ಪಿಟೀಲು, ಇಸ್ರಾಜ್, ದಿಲ್‌ರುಬಾ ವಿತತ ಗುಂಪಿಗೆ ಸೇರುತ್ತವೆ. ಮೊದಲ ಗುಂಪಿನವು ಬೆರಳಿನಿಂದ ಮಿಡಿದು ನುಡಿಸುವ ವಾದ್ಯಗಳಾದರೆ, ಎರಡನೆಯ ಗುಂಪಿನವು ಜವೆ ಹಾಕಿದ ಬಿಲ್ಲಿನಿಂದ ತೀಡಿ ನುಡಿಸುವಂಥವು. ಕೆಲವನ್ನು ಜನಪದ ವಾದ್ಯಗಳಂತೆ ಚಿಬುಕು ಮತ್ತು ದಂತಗಳಿಂದ ನುಡಿಸಲಾಗುತ್ತದೆ.

ರಂಧ್ರದ ಮೂಲಕ ಉಸಿರು ಸಂಚಾರವಾಗುವಂತೆ ಮಾಡಿ ಧ್ವನಿ ಹೊರಡಿಸುವ ವಾದ್ಯಗಳನ್ನು ಸುಷಿರ ವಾದ್ಯಗಳೆಂದು ಕರೆಯಲಾಗಿದೆ. ಇವು ಗಾಳಿ ವಾದ್ಯಗಳು. ಕಹಳೆ, ಕೊಂಬು, ಓಲಗ, ಕೊಳಲು ಮುಂತಾದ ಜನಪದ ವಾದ್ಯಗಳಲ್ಲದೆ ಆಧುನಿಕ ಅನ್ವೇಷಣೆಗಳಾದ ನಾಗಸ್ವರ, ಶಹನಾಯಿ, ಕ್ಲಾರಿಯೊನೆಟ್ ಮೌತ ಆರ್ಗನ್ ಇತ್ಯಾದಿ ಈ ಗುಂಪಿಗೆ ಬರುತ್ತವೆ.

ಮರ ಅಥವಾ ಲೋಹದಿಂದ ಮಾಡಿದ ಹೊರಳಿದ (ಹೋಳು) ಬಾಯಿಗೆ ಚರ್ಮ ಬಿಗಿದು ಬಡಿಯುವುದರಿಂದ ನಾದ ಹೊಮ್ಮಿಸುವ ವಾದ್ಯಗಳೆ ಆನದ್ಧ ವಾದ್ಯಗಳು. ಮೃದಂಗ, (ಮೃತ್+ಅಂಗ) ನಗಾರಿ ಡೋಲು ಮದ್ದಳೆ ತಬಲಾಗಳು ಇವಾಗಿದ್ದು, ಇವನ್ನು ಬೆರಳು ಅಥವಾ ಮರದ ಛಡಿಗಳಿಂದ ನುಡಿಸುತ್ತಾರೆ. ಇವು ತಟ್ಟುವಾದ್ಯಗಳು.

ಲೋಹಪದಾರ್ಥಗಳಿಂದ ಮಾಡಿದ ಘನವಸ್ತುಗಳನ್ನು ಬಡಿದು ನಾದ ಸೃಷ್ಟಿಸುವ ವಾದ್ಯಗಳೇ ಘನವಾದ್ಯಗಳು. ಕಂಚು, ಹಿತ್ತಾಳೆ, ಬೆಳ್ಳಿ, ತಾಮ್ರ ಇತ್ಯಾದಿ ಲೋಹಗಳಿಂದ ಮಾಡಿದ ತಾಳ, ಗಂಟೆ, ಜಾಗಟೆ, ಕಂಸಾಳೆ ಇಂಥವು.

ಭಾರತೀಯ ಸಂಸ್ಕೃತಿಯಲ್ಲಿ ಪಂಚಮಹಾವಾದ್ಯಗಳಿಗೆ ಹೆಚ್ಚಿನ ಮಹತ್ವ ಸಂದಾಯವಾಗಿದೆ. ಕನ್ನಡ ಕಾವ್ಯ ಮತ್ತು ಶಾಸನಗಳಲ್ಲೂ ಇವುಗಳ ಹೆಸರು ಬರುತ್ತವೆ. ಕೊಂಬು, ಹಲಗೆ, ಶಂಖ, ಭೇರಿ, ಜಾಗಟೆ ಇವುಗಳನ್ನು ಪಂಚಮಹಾವಾದ್ಯಗಳೆಂದು ಹೆಸರಿಸಲಾಗಿದೆ. ಕ್ರಿ. ಶ. ೧೫೦೦ ರಲ್ಲಿದ್ದ ನಿಜಗುಣ ಶಿವಯೋಗಿ ‘ವಿವೇಕ ಚಿಂತಾಮಣಿ’ ಯಲ್ಲಿ ವಾದ್ಯಗಳನ್ನು, ಪಂಚಮಹಾವಾದ್ಯಗಳು ಮತ್ತು ದಶವಾದ್ಯಗಳು ಎಂಬುದಾಗಿ ವಿಂಗಡಿಸಿದ್ದಾರೆ. ಆತನ ಪ್ರಕಾರ ಕೊಂಬು, ಜಯಘಂಟೆಗಳಂಥ ಲೋಹವಾದ್ಯ ಪಂಚಮಹಾವಾದ್ಯಗಳ ಗುಂಪಿನಲ್ಲೂ, ಗೌರಿಕಾಳೆ ಗಂಟೆಗಳು ದಶವಾದ್ಯಗಳ ಗುಂಪಿನಲ್ಲೂ ಬರುತ್ತವೆ. ನಿಜಗುಣ ಶಿವಯೋಗಿ ಉಳಿದ ವಾದ್ಯ ಭೇದಗಳನ್ನೂ ಅಲ್ಲಿ ಪ್ರಸ್ತಾಪಿಸಿದ್ದಾನೆ.[2]

ಪ್ರಾಚೀನ ಕಾಲದಿಂದಲೂ ವಾದ್ಯಸಂಗೀತ ಮತ್ತು ಹಾಡುಗಾರಿಕೆ ಅವಳಿ-ಜವಳಿಯಾಗಿ ಬೆಳೆದುಬಂದಿವೆ. ವಾದ್ಯ ಸಂಗೀತದ ಮುಖ್ಯ ಅಂಗ. ವಾದ್ಯದ ಹಿನ್ನೆಲೆಯಿಲ್ಲದ ಸಂಗೀತ ವಿರಳ. ಹೆಚ್ಚಿನ ಜನಪದ ಹಾಡುಗಾರಿಕೆ ವಾದ್ಯವನ್ನು ಅವಲಂಬಿಸಿದೆ. ಪೌರಾಣಿಕ ಪ್ರಪಂಚಕ್ಕೂ ಈ ಕಲ್ಪನೆ ವಿಸ್ತರಿಸಿದೆ. ಪ್ರತಿ ದೇವತೆಗೂ ಒಂದೊಂದು ವಾದ್ಯವನ್ನು ಆರೋಪಿಸಲಾಗಿದೆ. ದೇವಗಾಯಕರಾದ ನಾರದ ತುಂಬುರರು ವಾದ್ಯ ಹಿಡಿದು ಪರಮಾತ್ಮನ ಸಂತೃಪ್ತಿಗಾಗಿ ಹಾಡುತ್ತಾರೆ. ಸರಸ್ವತಿಗೆ ವೀಣೆ, ಬ್ರಹ್ಮನಿಗೆ ಮೃದಂಗ, ಶಿವನಿಗೆ ಡಮರುಗ, ಕೃಷ್ಣನಿಗೆ ಕೊಳಲು, ವಿಷ್ಣುವಿಗೆ ಶಂಖವನ್ನು ಆರೋಪಿಸಿರುವುದನ್ನು ನೋಡಿದರೆ ನಮ್ಮ ಜನತೆಯ ವಾದ್ಯಪ್ರೀತಿ ಅರಿವಾಗುತ್ತದೆ.

ಸಂಗೀತ ವಾದ್ಯಗಳನ್ನು ೧. ಜನಪದ ಸಂಪ್ರದಾಯದ ವಾದ್ಯಗಳು ಮತ್ತು ೨. ಪ್ರೌಢ ಸಂಪ್ರದಾಯದ ವಾದ್ಯಗಳು ಎಂದು ಎರಡು ಗುಂಪಾಗಿ ಮಾಡಬಹುದು. ವೈವಿಧ್ಯತೆ ಮತ್ತು ಪ್ರಾಚೀನತೆಗಳಲ್ಲಿ ಜನಪದ ವಾದ್ಯಗಳದ್ದೇ ಮೇಲುಗೈ. ಹೆಚ್ಚಿನ ಶಿಷ್ಟವಾದ್ಯಗಳಿಗೆ ಜನಪದವಾದ್ಯಗಳ ಪ್ರೇರಣೆ ಇದೆ. ಅವು ಕಾಲಕ್ರಮದಲ್ಲಿ ಸುಧಾರಣೆಗೊಂಡು ಬೆಳೆದಿದೆ. ಈಗ ಸಂಪ್ರದಾಯದಲ್ಲಿ ಕಾಣಸಿಗುವ ಕೊಳಲು, ಹಲವು ತಂತಿವಾದ್ಯಗಳು, ತಾಳ, ಗೆಜ್ಜೆ, ಶಹನಾಯಿ ಜನಪದ ವಾದ್ಯಗಳೆ ಆಗಿರುವುದನ್ನು ಲಕ್ಷಿಸಬೇಕು.

ಕರ್ನಾಟಕದಲ್ಲಿ ಜನಪದವಾದ್ಯಗಳು ಶ್ರೀಮಂತವಾಗಿವೆ. ಅವು ಹಲವು ಬಗೆಯ ನಾದವೈವಿಧ್ಯ ಉದ್ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹುಟ್ಟಿಕೊಂಡಿವೆ. ಜನಪದ ವೃತ್ತಿಗಾಯಕರು ತಮ್ಮ ತಮ್ಮ ಸಂಪ್ರದಾಯದ ವೈವಿಧ್ಯಮಯ ಹಾಡುಗಾರಿಕೆಗೆ ಇವನ್ನು ಬಳಸಿಕೊಳ್ಳುತ್ತಾರೆ. ಜನರಂಜನೆಗೆ, ಹಾಡುಗಳ ಪರಿಣಾಮಕಾರಿ ನಿವೇದನೆಗೆ ಇವು ಪೂರಕವಾಗುತ್ತವೆ. ಇವನ್ನು ವೃತ್ತಿಗಾಯಕ ಸಂಪ್ರದಾಯದ ವಾದ್ಯಗಳೆಂದು ಗುರುತಿಸಬಹುದು. ಮಂಗಳಕಾರ್ಯ, ದೇವತಾರಾಧನೆ, ಧಾರ್ಮಿಕವಿಧಿ ಇತ್ಯಾದಿ ಸಂದರ್ಭಗಳಲ್ಲಿ ಕೆಲವು ವಾದ್ಯಗಳು ಬಳಸಲ್ಪಡುತ್ತವೆ. ಇವನ್ನು ಧಾರ್ಮಿಕ ಸಂದರ್ಭದಲ್ಲಿ ಬಳಸುವ ವಾದ್ಯಗಳೆಂದು ಕರೆಯಬಹುದು. ಇನ್ನು ಕೆಲವು ವಾದ್ಯಗಳನ್ನು ಜನತೆಯಲ್ಲಿ ಕೆಚ್ಚು, ಉತ್ಸಾಹವನ್ನು ತುಂಬಲು ಬಳಸಲಾಗುತ್ತದೆ. ಇಂಥ ವೀರರಸ ಪ್ರಧಾನ ವಾದ್ಯಗಳನ್ನು ರಣವಾದ್ಯಗಳು ಎಂದು ಹೆಸರಿಸಬಹುದು.

ಕರ್ನಾಟಕದ ಜನಪದ ಲೋಹವಾದ್ಯಗಳು ಮೇಲಿನ ಈ ಮೂರು ಗುಂಪುಗಳಲ್ಲೂ ಕಾಣಸಿಗುತ್ತವೆ. ಚಾರಿತ್ರಿಕವಾಗಿ ನೋಡಿದರೆ ಲೋಹವಾದ್ಯಗಳು ವಾದ್ಯ ಸಂಸ್ಕೃತಿಯ ಕೊನೆಯಘಟ್ಟದಲ್ಲಿ ವಿಕಾಸಗೊಂಡವು. ಉಸಿರು, ಚರ್ಮ, ಕಾಷ್ಠ ಮತ್ತು ತಂತಿವಾದ್ಯಗಳು ಮೊದಲು ಬಂದವು. ಪ್ರಕೃತಿದತ್ತ ಸಾಮಾನ್ಯವಸ್ತು ಮತ್ತು ನೈಸರ್ಗಿಕ ಸರಳಸಿದ್ಧಾಂತದ ಹಿನ್ನೆಲೆಯಲ್ಲಿ ಇವು ಹುಟ್ಟಿದ್ದರೆ, ಲೋಹವಾದ್ಯಗಳು ಲೋಹಸಂಸ್ಕೃತಿ ಮನುಷ್ಯ ನಾಗರಿಕತೆಯನ್ನು ಪ್ರವೇಶಿಸಿದ ನಂತರ ಹುಟ್ಟಿವೆ. 

ತಾಳವಾದ್ಯಗಳು

. ತಾಳ :

ಜನಪದ ವಾದ್ಯಗಳಲ್ಲಿ ತಾಳ ಜನಪ್ರಿಯವೂ ಬಹುತೇಕ ಕಲೆಗಳಲ್ಲಿ ಬಳಕೆಯಾಗುವಂಥದ್ದೂ ಆಗಿದೆ. ಯಕ್ಷಗಾನ ಬಯಲಾಟ, ಕರಪಾಲಮೇಳ, ಭಾಗವಂತಿಕೆ ಮೇಳ, ಭಜನೆಮೇಳ, ಗೊಂಬೆಯಾಟ, ತಾಳಮದ್ದಲೆ, ಉಮ್ಮತ್ತಾಟ ಮತ್ತು ಹರಿಕಥೆಗಳಲ್ಲಿ ತಾಳವೊಂದು ಮೂಲವಾದ್ಯ. ಸಂಗೀತ ಪ್ರಧಾನವಾಗಿರುವ ಈ ಮೇಳಗಳಲ್ಲಿ ಮುಖ್ಯಕಲಾವಿದ ಇದನ್ನು ಹಿಡಿದಿರುತ್ತಾನೆ. ಶಿಷ್ಟಸಂಪ್ರದಾಯದಲ್ಲೂ ಇದು ಜನಪ್ರಿಯ.

ಇದು ಕಂಚು, ಹಿತ್ತಾಳೆ ಇಲ್ಲವೆ ಮಿಶ್ರಲೋಹದಿಂದ ಮಾಡಲ್ಪಡುತ್ತದೆ. ಆರೇಳು ಅಂಗುಲ ಸುತ್ತಳತೆ ಇದ್ದು ಗುಂಡಗಿರುತ್ತದೆ. ಎರಡು ಭಾಗಗಳು ಮುಖಾಮುಖಿ ಆಗಿ ಕೂಡಲು ಅನುಕೂಲವಾಗುವಂತಿದ್ದು ಮಧ್ಯೆ ಎತ್ತರವಾದ ಉಬ್ಬನ್ನು ಹೊಂದಿರುತ್ತದೆ. ಅಲ್ಲಿ ರಂಧ್ರಗಳಿದ್ದು ಒಳಭಾಗದಿಂದ ಹೊರಕ್ಕೆ ದಾರ ಹಾದುಬರುವಂತಿರುತ್ತದೆ. ಹೀಗೆ ದಾರಕಟ್ಟಿದ ಎರಡು ತಾಳಗಳನ್ನು ಎಡಗೈ ಮತ್ತು ಬಲಗೈಯಲ್ಲಿ ಹಿಡಿದು ಬಾರಿಸಲು, ಮೃದುವಾಗಿ ಸ್ಪರ್ಶಿಸಲು ಆಗುತ್ತದೆ. ತಾಳದ ಅಂಚುಗಳು ಪರಸ್ಪರತಾಗಿದಾಗ, ಒಂದನ್ನೊಂದು ಸಮಾನಾಂತರವಾಗಿ ಕವುಚಿಕೊಂಡಾಗ, ಹೊರಕಂಠದಿಂದ ಒಂದರಮೇಲೆ ಮತ್ತೊಂದನ್ನು ಬಡಿದಾಗ ಬಗೆಬಗೆಯ ಸ್ವರ ವಿನ್ಯಾಸಗಳು ಹುಟ್ಟಿಕೊಳ್ಳುತ್ತವೆ. ಹಾಡು ಸಂಭಾಷಣೆಗಳಲ್ಲಿ ಸಮಯಾನುಸಾರಿಯಾಗಿ ಮಧ್ಯಮ, ತೀವ್ರಗತಿಗಳಲ್ಲಿ ಬಳಸಲ್ಪಡುತ್ತದೆ. ‘ತಾಳಮದ್ದಲೆ’ಯಲ್ಲಂತೂ ಮದ್ದಲೆಯಂತೆ ತಾಳದ್ದೂ ಮೇಲುಗೈ. ಭಾಗವತನ ಮಾತು ಹಿಂದೆ ಸರಿದು ಮಧ್ಯೆ ಶೂನ್ಯಸೃಷ್ಟಿಯಾದಾಗ ಮಾತು ರಸಭಾವಗಳ ಏರಿಳಿವಿನಲ್ಲಿ ಸಾಗಹತ್ತಿದಾಗ ತಾಳ ಸಾಮೂಯಿಕ ಪರಿಣಾಮವನ್ನುಂಟುಮಾಡುತ್ತದೆ. ಅಂತಲೇ ತಾಳಮದ್ದಲೆಯಲ್ಲಿ ಈ ವಾದ್ಯದ ಹೆಸರೇ ಪ್ರಧಾನ. ಅದು ಬಳಸಲ್ಪಡುವ ಇತರ ಜನಪದ ಕಲೆಗಳಲ್ಲೂ ಅದರ ಭೌತಿಕ ಇರವು ಗೌಣವಾಗಿ ಕಂಡರೂ, ತನ್ನ ನಾದದ ಮೂಲಕ ಅಸ್ತಿತ್ವವನ್ನು ನೆನಪಿಸುತ್ತಿರುತ್ತದೆ. ‘ತಾಳಮೇಳ ಕೂಡಿದರೆ ಆಟ’ ಎಂಬ ಜನಪದಗಾದೆಯಾಗಲಿ, “ತಾಳಲಯಮಂ ನಿಱು ನೀ| ಳಾಳಕದ ಹಾರವ ಹೊದವ್ದಿ ಮುತ್ತೆಂಬಿವುಮುಂ” ಎಂಬ ಪಂಪನ ಮಾತಾಗಲಿ ತಾಳದ ಮಹತ್ವವನ್ನು ಎತ್ತಿ ಹೇಳುವಂತಿವೆ.

. ಝಲ್ಲರಿ :

ಸಣ್ಣ ತಾಳದ ವಿಸ್ತೃತ ರೂಪ, ಇದು ತೆಳ್ಳನೆಯ ಹಿತ್ತಾಳೆಯ ಸಾಧನ. ಡೊಳ್ಳುಕುಣಿತ, ಚಿಟ್‌ಮೇಳ, ಹಲಗೆಮೇಳ, ಕರಡಿ ಮಜುಲುಗಳಲ್ಲಿ ಇದು ಬಳಕೆಗೆ ಬರುತ್ತದೆ. ಓಲಗ ಮತ್ತು ಇತರ ವಾದ್ಯಗಳಲ್ಲಿ ಗತ್ತಿನಲ್ಲಿ ಕುಣಿಯುವಾಗ ಅವುಗಳೊಂದಿಗೆ ಝಲ್ಲರಿ ಆಪ್ಯಾಯಮಾನವಾಗಿ ಹೊಂದಿಕೊಂಡು ‘ಝಲ್, ಝಲ್’ ಶಬ್ದ ಹೊಮ್ಮಿಸುತ್ತದೆ. ಬ್ಯಾಂಡ್‌ಸೆಟ್‌ಗಳಂಥ ಆಧುನಿಕ ವಾದ್ಯ ಸಮೂಹದಲ್ಲಿ ದೊಡ್ಡಗಾತ್ರದ ಝಲ್ಲರಿಗಳಿ‌ದ್ದು ಅವು ಇನ್ನಷ್ಟು ಅಗಲ ಅಂಚನ್ನುಳ್ಳವಾಗಿರುತ್ತವೆ. ಆದ್ದರಿಂದ ಕಂಪನ ದ್ವಿಗುಣಗೊಂಡು ಧ್ವನಿ ತರಂಗಗಳು ಹೆಚ್ಚಾಗುತ್ತವೆ.

. ಕಂಸಾಳೆ :

ಕಂಸಾಳೆಗೆ ತಾಳವಾದ್ಯಗಳಲ್ಲಿ ವಿಶಿಷ್ಟ ಸ್ಥಾನವಿದೆ. ಸಾಮಾನ್ಯವಾಗಿ ತಾಳದ ರಚನೆಯ ತತ್ವ ಇದರ ಹಿಂದಿದ್ದರೂ ಉದ್ದೇಶ ಮತ್ತು ಸ್ವರೂಪದಲ್ಲಿ ಭಿನ್ನವಾದುದು. ಕಂಸಾಳೆ ಗಾತ್ರದಲ್ಲಿ ದೊಡ್ಡದು. ಕಂಸಾಳೆ ಎಂಬ ಹೆಸರು ಸಂಸ್ಕೃತದ ‘ಕಾಂಸ್ಯತಾಳ’ ದಿಂದ ಬಂದಿದೆ. ಇದನ್ನು ‘ಕೈಸಾಳೆ’ ‘ಕವುಸಾಳೆ’ ಎಂದೂ ಕರೆಯಲಾಗುತ್ತದೆ. ಕಂಚು ಅಥವಾ ಹಿತ್ತಾಳೆಯಿಂದ ತಯಾರಿಸುತ್ತಾರೆ. ತಾಳದಲ್ಲಿ ಒಂದು ಅಂಗೈ ಅಗಲದ ಬಟ್ಟಲು ಮತ್ತೊಂದು ಅದಕ್ಕಿಂತ ವಿಸ್ತಾರವಾದ ಮುಚ್ಚಳವಿರುತ್ತದೆ. ಬಟ್ಟಲಿಗೆ ಅರ್ಧ ಅಂಗುಲದ ಕಂಟವಿದ್ದು ತಳ ಅಗಲವಾಗಿರುತ್ತದೆ. ಎರಡೂ ವೃತ್ತಾಕಾರದ ಸಾಧನಗಳೇ. ಕಂಸಾಳೆ ಕಲಾವಿದರು ಮಾಹೇಶ್ವರನ ಭಕ್ತರು ಧಾರ್ಮಿಕ ವೃತ್ತಿಗಾಯಕರು. ಇವರನ್ನು ದೇವರ ಗುಡ್ಡರು ಎಂದೂ ಕರೆಯುತ್ತಾರೆ. ಗಾಯಕರು ಬಟ್ಟಲನ್ನು ಎಡಗೈಯಲ್ಲೂ ಕಂಸಾಳೆಯ ಮುಚ್ಚಳದ ಭಾಗವನ್ನು ಬಲಗೈಯಲ್ಲೂ ಹಿಡಿಯುತ್ತಾರೆ. ಇದನ್ನು ‘ಗರಿ’ ಎನ್ನುತ್ತಾರೆ. ಈ ಗರಿಯ ಉಬ್ಬಿದ ಬೆನ್ನಿನ ಮೇಲೆ ಒಂದು ರಂಧ್ರವಿದ್ದು ಗೊಂಡೇವು ಅಥವಾ ಸಣ್ಣಗಗ್ಗರ ಕಟ್ಟಿದ ಹುರಿಯನ್ನು ಅದರಲ್ಲಿ ಹಾಯಿಸಿ ಹಿಡಿಮಾಡಿಕೊಂಡಿರುತ್ತಾರೆ. ಹಿಡಿ ಸುಮಾರು ಅರ್ಧಮಾರು ಉದ್ದವಿರುತ್ತದೆ. ಅದನ್ನು ಬಲಗೈನಲ್ಲಿ ಹಿಡಿದುಕೊಂಡು ಎಡಗೈನಲ್ಲಿ ಮೇಲ್ಮುಖವಾಗಿ ನಿಂತಿರುವ ಬಟ್ಟಲಿನ ಮೇಲೆ ಹೊಡೆಯಲಾಗುತ್ತದೆ. ಆಗ ಹುಟ್ಟುವ ಕಣಿ ಕಣಿ ತರಂಗಿತ ನಾದ ಬಹುದೂರದವರೆಗೆ ಕೇಳಿಸುವಂತಿರುತ್ತದೆ. ಕಂಸಾಳೆಯ ಗತ್ತು ಮತ್ತು ತಾಳಕ್ಕನುಸಾರವಾಗಿ ಗುಡ್ಡರು ಅನೇಕ ಧಾರ್ಮಿಕ-ಲೌಕಿಕ ಕಥೆಗಳನ್ನು ಹಾಡುತ್ತಾರೆ.

ಮಲೆಯ ಮಾದೇಶ್ವರನ ಕ್ಷೇತ್ರಕ್ಕೆ ಕಾಡುಮೋಡುಗಳಲ್ಲಿ ದಾಟಿ ಯಾತ್ರೆ ಹೋಗುವಾಗ ಇದನ್ನು ಬಳಸಲಾಗುತ್ತಿತ್ತು. ಇದರಿಂದ ಕಾಡುಪ್ರಾಣಿಗಳನ್ನು ಚದುರಿಸಲು ಸಹಾಯವಾಗುತ್ತಿತ್ತು. ಕಂಸಾಳೆ ವಾದ್ಯದ ಹಿನ್ನೆಲೆಯಲ್ಲಿ ಈ ವೃತ್ತಿ ಗಾಯಕರು ಏಳುಕವಲು (ಸಾಲು)ಗಳಲ್ಲಿ ವಿಸ್ತರಿಸಿಕೊಂಡಿರುವ ಮಲೆಯ ಮಾದೇಶ್ವರ ಧಾರ್ಮಿಕ ಕಾವ್ಯವನ್ನೂ, ಪಿರಿಯಾಪಟ್ಟಣದ ಕಾಳಗ, ಲಿಂಗರಾಜಮ್ಮನ ಕಥೆ, ನಂಜುಂಡ ಚಾಮುಂಡಿ, ಬಿಳಿಗಿರಿರಂಗ, ಚೆಲುವರಾಯ ವರನಂದಿ, ಚನ್ನಬಸವಣ್ಣ, ಮೈದುನರಾಮಣ್ಣ, ಅಕ್ಕನಾಗಮ್ಮ ಮುಂತಾದವರ ಕಥೆಗಳನ್ನೂ/ಸಾರಂಗಧರ, ಚೆನ್ನಿಗರಾಮ, ಬಾಲನಾಗಮ್ಮ ಮುಂತಾದ ಲೌಕಿಕ ಕಥೆಗಳನ್ನೂ ಹಾಡುತ್ತಾರೆ. ಬಿಡಿಹಾಡುಗಳನ್ನು ಹಾಡಿಕೊಂಡು ‘ಬೀಸುಕಂಸಾಳೆ ನೃತ್ಯ’ ಮಾಡುವಾಗಲೂ ಈ ವಾದ್ಯ ಬಳಕೆಯಾಗುತ್ತದೆ. ನಾಲ್ಕಾರು ಗುಡ್ಡರು ಕೂಡಿಕೊಂಡು ತಾಳಕ್ಕೆ ತಕ್ಕಂತೆ ನಿಂತು ಕುಳಿತು, ಬಾಗಿ-ಬಳುಕಿ ನೃತ್ಯಮಾಡುವಾಗ ಮಿಂಚಿನಂತೆ ಓಡಾಡುವ ಕಂಸಾಳೆಯ ನೋಟ ರೋಮಾಂಚನಗೊಳಿಸುತ್ತದೆ.

ದೇವರ ಗುಡ್ಡರಿಗೆ ಕಂಸಾಳೆ ಬಟ್ಟಲಿನ ಮೇಲೆ ವಿಶೇಷ ಗೌರವ. ಭಕ್ತಾದಿಗಳು ಕೊಡುವ ಭಿಕ್ಷೆಯನ್ನು ಮೊದಲು ಬಟ್ಟಲಿಗೆ ಹಾಕಿಸಿಕೊಂಡು ಅನಂತರ ಜೋಳಿಗೆಗೆ ಸುರಿದುಕೊಳ್ಳುತ್ತಾರೆ. ಕಂಸಾಳೆ ಅವರಿಗೆ ದೈವಿಕ ಸಂಕೇತ. ಅದನ್ನು ಕೈಗೆತ್ತಿಕೊಳ್ಳುವಾಗಲೂ ಕೆಳಗಿರಿಸುವಾಗಲೂ ಭಕ್ತಿಯಿಂದ ನಮಸ್ಕರಿಸುವುದು ರೂಢಿ.

ಕಂಸಾಳೆ ವಾದ್ಯಕ್ಕೆ ೭೦೦ ವರ್ಷಗಳ ಪ್ರಾಚೀನತೆ ಇದೆಯೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈ ಪರಂಪರೆಯ ಮೂಲ ಪುರುಷ ಮಾದೇಶ್ವರರೇ ಇದನ್ನು ಬಳಸುತ್ತಿದ್ದುದಾಗಿ ತಿಳಿದುಬರುತ್ತದೆ.

ವಾಸ ಕಂಸಾಳೆಯ ನುಡಿಸಿಕೊಂಡು ಮಾ
ದೇಶನಂಘ್ರಿಗೆ ನಮೋ ಎಂದು
ಭಾಷೆಪಾಲಕ ದುರಿತವ ಪೊರೆಯೆಂದು ವೀ
ರೇಶನ ಕೊಂಡಾಡಿದರು.

ಎಂದು ಪಿಣ್ಯದ ಗುರುಸಿದ್ಧಕವಿಯ (ಸು. ೧೭೫೦) ‘ಮಾದೇಶ್ವರ ಸಾಂಗತ್ಯ’ (ಜಾತ್ರೆಯಸಂಧಿ)ದಲ್ಲಿ ಬರುತ್ತದೆ.

. ಗಂಟೆ :

ಜಾಗತಿಕ ಸಂಸ್ಕೃತಿಯಲ್ಲಿ ಗಂಟೆ ಸಾವಿರಾರು ವರ್ಷಗಳಿಂದ ಅನಿಷ್ಟ ನಿವಾರಣೆಯ ಸಾಧನವಾಗಿ, ಫಲಶಕ್ತಿಯ ಸಂಕೇತವಾಗಿ, ದೇವರನ್ನು ಆಹ್ವಾನಿಸುವ ಪ್ರವಾದಿಯ ದನಿಯಾಗಿ, ಸಂಗೀತವಾದ್ಯವಾಗಿ ಬಳಸಲ್ಪಡುತ್ತಿದೆ. ಇದನ್ನು ಬಾರಿಸಿದಾಗ ಓಂಕಾರ ನಾದ ಸ್ಫುರಿಸುತ್ತದೆಂಬ ನಂಬಿಕೆ ಭಾರತೀಯರಿಗೆ ಇದೆ. ಹಾಗಾಗಿ ಗಂಟೆಯನ್ನು ಪೂಜಾ ಕಾಲದಲ್ಲಿ ‘ಶೋಭನವಾದ್ಯ’ವಾಗಿ ಬಳಸುವ ಪರಿಪಾಠ ಬಂದಿದೆ.

ಗಂಟೆ ಸಂಸ್ಕೃತದ ಘಂಟಾ ಶಬ್ದದ ತದ್ಭವರೂಪ. ಆಗಮ ಪುರಾಣಗಳಲ್ಲಿ ಅದರ ಸುತ್ತ ಒಂದು ಧಾರ್ಮಿಕ ಭಾವಪ್ರಪಂಚವೇ ಬೆಳೆದುನಿಂತಿದೆ. ಗಂಟೆಯ ನಾಲಗೆಯಲ್ಲಿ ಸರಸ್ವತಿಯೂ, ಮುಖದಲ್ಲಿ ಬ್ರಹ್ಮನೂ, ಹೊಟ್ಟೆಯಲ್ಲಿ ರುದ್ರನೂ, ದಂಡದಲ್ಲಿ ವಾಸುಕಿಯೂ, ತುದಿಯಲ್ಲಿ ಚಕ್ರಿಯೂ ಅಧಿದೇವತೆಗಳಾಗಿ ನೆಲಸಿದ್ದಾರೆಂದು ನಂಬಲಾಗುತ್ತದೆ. ಘಂಟಾಸ್ವನ ‘ನಾದಬ್ರಹ್ಮ’. ಆದ್ದರಿಂದ ಅದನ್ನು ಮೊದಲು ಪೂಜಿಸಿ ನಂತರ ಬಾರಿಸಬೇಕು. ಗಂಟೆಬಾರಿಸುವಾತ ನಾಭಿಯ ಕೆಳಗೆ ಬರುವಂತೆ ಅದನ್ನು ಹಿಡಿದು ಹೊಡೆಯುವುದಾಗಲಿ, ಅಪಸ್ವರ ಬರಿಸುವುದಾಗಲಿ ನಿಷಿದ್ಧ. ಘಂಟಾನಾದ ಮಾಡುವುದೆಂದರೆ ಇಷ್ಟದೇವತೆಗಳನ್ನು ಎಬ್ಬಿಸಿ ಆಹ್ವಾನಿಸುವುದರ ಸಂಕೇತವೆನಿಸಿದೆ. ಆದ್ದರಿಂದ ಗಂಟೆಯನ್ನು ‘ಮಂತ್ರ ಮಾತಾ’ ಎಂದು ಕರೆಯಲಾಗಿದೆ. ಗಂಟೆ ಬಾರಿಸುವುದಕ್ಕೆ ಮೊದಲು “ಆಗಮಾರ್ಥಂತು ದೇವಾನಾಂ, ಗಮನಾರ್ಥಂತು ರಾಕ್ಷಸಾಂ, ಕುರ್ವೇ ಘಂಟಾರವಂ, ತತ್ರ ದೇವತಾಹ್ವಾನ ಲಾಂಛನಂ” (ದೇವರ ಆಗಮನಕ್ಕಾಗಿ ರಕ್ಕಸರ ನಿರ್ಗಮನಕ್ಕಾಗಿ ದೇವಲಾಂಛನವಾದ ಘಂಟಾಧ್ವನಿ ಮಾಡುತ್ತೇನೆ) ಎಂದು ಹೇಳುತ್ತಾರೆ. ವೈಷ್ಣವ ದೇವಾಲಯಗಳಲ್ಲಿ ಮಹಾನಿವೇದನ ಕಾಲಕ್ಕೆ ಬಾರಿಸಲು ಪ್ರತ್ಯೇಕವಾಗಿ ದೊಡ್ಡ ಗಂಟೆಯನ್ನು ಕಟ್ಟುವುದಾಗಲಿ, ಬಾಗಿಲಿಗೆ ಚಿಕ್ಕ ಚಿಕ್ಕ ಗಂಟೆಗಳನ್ನು ಜೋಡಿಸಿ ಅಲಂಕರಿಸುವುದಾಗಲಿ ಅಥವಾ ಗಂಟೆಯ ಮೇಲೆ ಹನುಮಂತ, ಕಮಲ, ಚಕ್ರ, ಗರುಡ, ವೃಷಭ, ಶೂಲ ಇತ್ಯಾದಿ ಚಿಹ್ನೆಗಳನ್ನು ಕೆತ್ತುವುದಾಗಲಿ ಇಂಥ ಧಾರ್ಮಿಕ ಪೂಜ್ಯತೆಯ ಫಲವೇ ಆಗಿದೆ. ಭಾರತ, ಜಾವಾ ಪ್ರದೇಶಗಳಲ್ಲಿ ಹಿಂದೂ ಪುರೋಹಿತರು ತ್ರಿಶೂಲ, ಗರುಡ ಮುಂತಾದ ಧಾರ್ಮಿಕ ಸಂಕೇತಗಳಿಂದ ಅಲಂಕೃತವಾದ ಕೈಗಂಟೆಗಳನ್ನು ಪೂಜಾ ಸಮಯದಲ್ಲಿ ಬಳಸುತ್ತಾರೆ.

ಪಾಶ್ಚಾತ್ಯ ದೇಶಗಳಲ್ಲಿ ಗಂಟೆ ಕ್ರೈಸ್ತಚರ್ಚ ಮತ್ತು ಅಲ್ಲಿನ ಆಚರಣೆಗಳೊಂದಿಗೆ ಸಂಬಂಧ ಹೊಂದಿದೆ. ಹಿರಿಯ ಪಾದ್ರಿ ತನ್ನ ಉಡುಪಿಗೆ ಚಿನ್ನದ ಗಂಟೆ ಕಟ್ಟಿಕೊಳ್ಳುವ ವಿಧಿ ಇರ್ಸೇಲ್‌ನಲ್ಲಿದೆ. ರಾಷ್ಟ್ರೀಯ ಆಪತ್ಕಾಲದಲ್ಲಿ ಚರ್ಚಿನ ಗಂಟೆಗಳು ತಮ್ಮಷ್ಟಕ್ಕೆ ತಾವೇ ಬಡಿದುಕೊಳ್ಳುತ್ತವೆಂಬ, ದೈತಾನನಿಂದ, ಸಿಡಿಲು ಬಿರುಗಾಳಿಗಳಿಂದ ರಕ್ಷಿಸುತ್ತವೆಂಬ ನಂಬಿಕೆ ಇದೆ. ನಮ್ಮಲ್ಲಿಯೂ ದನಕರುಗಳಿಗೆ ಗಂಟೆ ಕಟ್ಟುವ ಪರಿಪಾಠ ಇಂಥ ಅನಿಷ್ಟ ನಿವಾರಣೆಯ ಹಿನ್ನೆಲೆಯಲ್ಲಿಯೇ ಬಂದಿರಬೇಕು.

ಗಂಟೆಗಳ ಉಗಮ ಹೇಗಾಯಿತೆಂದು ಖಚಿತವಾಗಿ ತಿಳಿದುಬಂದಿಲ್ಲ. ಸುಮಾರು ೪ ಭಾಗ ತಾಮ್ರ ಅಥವಾ ಹಿತ್ತಾಳೆಗೆ ಒಂದು ಭಾಗ ತವರ ಸೇರಿಸಿ ಗಂಟೆ ತಯಾರಿಸುತ್ತಾರೆ. ಕೆಲವೊಮ್ಮೆ ಸತು, ಸೀಸ ಮತ್ತು ಬೆಳ್ಳಿಯನ್ನು ಉಪಯೋಗಿಸುವುದುಂಟು. ಬೆಳ್ಳಿ ಬಳಸುವುದರಿಂದ ಧ್ವನಿ ಮಧುರವಾಗುತ್ತದೆಂಬ ನಂಬಿಕೆ ಇದ್ದರೂ ಶಾಸ್ತ್ರವಿದರು ಒಪ್ಪುವುದಿಲ್ಲ. ಗಂಟೆಯ ಉಬ್ಬಿರುವ ತೆರೆದ ಭಾಗದಲ್ಲಿನ ಹೊರ ಮತ್ತು ಒಳಮುಖಗಳ ವಕ್ರತೆ ಪರಸ್ಪರ ವಿರುದ್ಧವಾಗಿರುತ್ತದೆ. ಇದನ್ನು ಶಬ್ದಧನು (ಸೌಂಡ್‌ಬೊ) ಎಂದು ಕರೆಯುತ್ತಾರೆ. ಶೈವಾಗಮದಲ್ಲಿ ಸಾಮಾನ್ಯ ಗಂಟೆಯ ಎತ್ತರ 5″. ಎತ್ತರದಷ್ಟೇ ವಿಸ್ತಾರ. ಓಷ್ಠ ನಾಲ್ಕು ಗೋಧಿಯ ದಪ್ಪ. ಶಿಖರ 1″ ಕತ್ತು ½” ನಾಲಗೆ 1″. ಮಹಾಘಂಟೆಯಾದರೆ ಎತ್ತರ 7″ ವಿಸ್ತಾರ 8″ ಶಿಖರ 2″ ಎಂದಿದ್ದರೂ ಗಂಟೆಯ ಆಕೃತಿ, ತಿರುವುಗಳು, ಉದ್ದ, ಗಾತ್ರ, ಅಡ್ಡಳತೆ ವಿವಿಧ ಭಾಗಗಳಲ್ಲಿನ ದಪ್ಪ ಇವನ್ನು ಕಲಾವಿದರು ಅನುಭವದಿಂದ ನಿರ್ಧರಿಸುತ್ತಾರೆ. ಗಂಟೆಗಳ ಆಕೃತಿ, ಗಾತ್ರದಲ್ಲಿ ವೈವಿಧ್ಯವಿರುವಂತೆ ತೂಕದಲ್ಲೂ ಭಾರಿಪ್ರಮಾಣದ ವೈವಿಧ್ಯಗಳು ಕಂಡುಬರುತ್ತವೆ. ಹಲವಾರು ಟನ್‌ಗಳಿಂದ ಹಿಡಿದು (1773 ರಲ್ಲಿ ಎರಕ ಹೊಯ್ದ ರಷಿಯಾದ ‘ಸಾರ್ ಕೊಲೊ ಕೊಲ್’ ಗಂಟೆ ಪ್ರಪಂಚಲದಲ್ಲೆ ದೊಡ್ಡದಾಗಿದ್ದು ಗಂಟೆಗಳ ರಾಜ ಎನ್ನಿಸಿದೆ. 19 ಅಡಿ ಎತ್ತರ 22½ ಅಡಿ ವ್ಯಾಸವಿರುವ ಇದರ ತೂಕ 193 ಟನ್ನುಗಳು) ಕೆಲವೇ ಔನ್ಸ್ ಹಗುರ ತೂಕದ ಗಂಟೆಗಳಿವೆ. ಗಂಟೆಯನ್ನು ಸರಿಯಾದ ಕ್ರಮದಲ್ಲಿ ಬಾರಿಸಿದಾಗ ಅದರಲ್ಲಿ ೧) ಪ್ರಹಾರ ಧ್ವನಿ ೨) ಗುಂಜರ ಸ್ವರ (ಹಂನೋಟ್) ಹೊರಹೊಮ್ಮುತ್ತದೆ. ಪ್ರಹಾರ ಧ್ವನಿಯನ್ನು ಬಿಟ್ಟು ೫ ಮುಖ್ಯ ಅಂಶಸ್ವರಗಳನ್ನು- ನಾಮಿನಲ್, ಪಂಚಮ, ಟರ್ಸ್, ಮೂಲನಾದ ಮತ್ತು ಗುಂಜಸ್ವರ – ಗುರುತಿಸಬಹುದೆಂದು ಹೇಳಲಾಗುತ್ತದೆ.

ಗಂಟೆಯನ್ನು ಶುದ್ಧ ಸಂಗೀತವಾದ್ಯವನ್ನಾಗಿಯೂ ಬಳಸಿರುವ ನಿದರ್ಶನಗಳು ಜಗತ್ತಿನಾದ್ಯಂತ ಕಾಣಬರುತ್ತವೆ. ಕರ್ನಾಟಕದಲ್ಲಿ ಲೌಕಿಕ ಜನಪದ ವೃತ್ತಿ ಗಾಯಕರಾದ ಹೆಳವರು ಗಂಟೆಯನ್ನು ವಾದ್ಯವನ್ನಾಗಿ ಬಳಸುತ್ತಾರೆ. ಹೆಳವರ ಗಂಟೆ ದೊಡ್ಡ ತೆಂಗಿನಕಾಯಿ ಗಾತ್ರದ ಲೋಹದ ಸಾಧನ. ಇದನ್ನು ತಾಳವಾಗಿ ಮಾಡಿಕೊಂಡು ಗೀತೆ, ಕಾವ್ಯಗಳನ್ನು ಹಾಡುತ್ತಾರೆ. ಹೆಗಲಿಗೆ ಜೋಳಿಗೆ ಹಾಕಿ ‘ಕುಳ’ಗಳ ಮೇಲೆ ವಂಶಾವಳಿ ಹೇಳಿಕೊಂಡು ತಿರುಗುವುದು ಇವರ ಕಸಬು. ಹಾಡುಗಾರಿಕೆಯಲ್ಲಿ ಗಂಟೆಯ ಭಾಗವನ್ನು ಕೈಯಿಂದ ಮುಟ್ಟುವುದಿಲ್ಲ. ಗಂಟೆಯ ಕೊಂಡಿಗೆ ಹೊಂದಿಸಿದ ಬಟ್ಟೆಯಂಥ ಸಾಧನವನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಗಂಟೆಯ ನಾಲಗೆಯನ್ನು ಕಂಟಕ್ಕೆ ಬಡಿಯುತ್ತಾ ಹಾಡುತ್ತಾರೆ. ಹಾಡಿನ ಗತ್ತಿಗೆ ಗಂಟೆ ತಾಳವಾದ್ಯವಾಗಿ ಕೆಲಸ ನಿರ್ವಹಿಸುತ್ತದೆ. ಪುಣ್ಯ ಸಂಪಾದನೆಯ ನಂಬಿಕೆಯಿಂದ ಕೆಲವರು ತಮ್ಮ ಹೆಸರನ್ನು ಗಂಟೆಯ ಮೇಲೆ ಕೆತ್ತಿಸಿ ಉಡುಗೊರೆ ಕೊಡುತ್ತಾರೆ. ಇಬ್ಬರು ಕಲಾವಿದರು ಜೋಡಿ ಗಂಟೆ ನುಡಿಸುತ್ತಾ ಮೇಳ ನಡೆಸುವುದು ವಾಡಿಕೆ. ಗಂಟೆ ಪ್ರಧಾನವಾದ್ಯವಾದ್ದರಿಂದ ಇವರನ್ನು ಗಂಟೆ ಹೆಳವರೆಂದೇ ಕರೆಯಲಾಗುತ್ತದೆ. ದಕ್ಷಿಣ ಕನ್ನಡದ ಭೂತಾರಾಧನೆಯಲ್ಲಿ ಭೂತ ನೃತ್ಯದ ಕಲಾವಿದ ಸಾಂಪ್ರದಾಯಕ ಉಡುಪಿನೊಂದಿಗೆ ಒಂದು ಕೈಯಲ್ಲಿ ಕತ್ತಿ, ಮತ್ತೊಂದರಲ್ಲಿ (ಎಡಗೈಯಲ್ಲಿ) ಗಂಟೆ ಹಿಡಿದು ನೃತ್ಯ ಮಾಡುವುದನ್ನು ಕಾಣಬಹುದು. ‘ಗಳಗಂಟೆ’ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದೆ.

“ಗಂಟೆಗೆ ಒಂದೇ ಸ್ವರ” ಎಂಬ ಗಾದೆ ; “ಪೂಜೆಯ ಭಟ್ಟ | ಜುಟ್ಟು ಹಿಡಿಯುವ ತನಕ | ಮಾತನಾಡುವುದಿಲ್ಲ” ಎಂಬ ಒಗಟು ಜನಪದದಲ್ಲಿ ರೂಢಿಯಲ್ಲಿ ಇದೆ. ಮಾಲಿಕನೊಬ್ಬ ಹೊಟ್ಟೆಗೆ ಸರಿಯಾಗಿ ಮೇವು ಹಾಕದಿದ್ದಾಗ ‘ನ್ಯಾಯದ ಗಂಟೆ’ ಬಡಿದು ರಾಜನಿಗೆ ದೂರುಕೊಟ್ಟ ಕುದುರೆಯೊಂದರ ಕಥೆ ಜನಪದ ಕಥೆಯಲ್ಲಿ ಬರುತ್ತದೆ. ವಿಷ್ಣುವಿನ ಹೆಸರನ್ನು ಕೇಳಲಿಚ್ಚಿಸದ ರಾಕ್ಷಸನೊಬ್ಬ ತನ್ನ ಕಿವಿಗಳಿಗೆ ಗಂಟೆ ಕಟ್ಟಿಸಿಕೊಳ್ಳುತ್ತಿದ್ದನೆಂಬ ಸಂಗತಿ ಮಹಾಭಾರತದಲ್ಲಿದ್ದು, ಅವನನ್ನು ‘ಘಂಟಾಕರ್ಣ’ನೆಂದು ಗುರುತಿಸಲಾಗಿದೆ. ರಸಿಕರು, ವೇಶ್ಯೆಯರ ಮನೆಯ ಬಾಗಿಲಿಗೆ ಕಿರುಗಂಟೆಗಳನ್ನು ಕಟ್ಟಿಕೊಳ್ಳುತ್ತಿದ್ದುದಕ್ಕೆ ಆಧಾರಗಳಿವೆ. “ಕುರುಳ್ಗಳೊಳ್ ಸುೞಿ, ಮುಂದೊಂದಿರ್ದ ಸೌಭಾಗ್ಯ ಘಂಟೆಗಳೊಂದಿಂಚರದೊಳ್ ಪಳಂಚಿ ಸುೞಿದತ್ತದೊಂದು ಮಂದಾನಿಳಂ” ಎಂದು ಪಂಪ ವೇಶ್ಯೆಯರು ಮನೆಯ ಮುಂದಿನ ಗಂಟೆಯ ಮೇಲೆ ಸುಳಿದ ತಂಪಾದ ಗಾಳಿಯನ್ನು ವರ್ಣಿಸಿದ್ದಾನೆ. ವೇಶ್ಯೆಯರು ಮನೆಯ ಮುಂದೆ ಘಂಟೆ ಕಟ್ಟುತ್ತಿದ್ದ ಪ್ರಾಚೀನ ಪದ್ಧತಿಯ ಮೇಲೆ ಇದು ಬೆಳಕುಚೆಲ್ಲುತ್ತದೆ.

. ಕಿರುಗೆಜ್ಜೆ (ಜಿಂಗಲ್ಸ್) :

ಕಂಚನ್ನು ಎರಕ ಹೊಯ್ದು ಮಾಡಿದ, ಕಿರಿದು ಬಾಯನುಳ್ಳ ಗೆಜ್ಜೆಗಳು ಇವು. ಎರಕದ ಸಣ್ಣ ಸಣ್ಣ ಗುಂಡುಗಳನ್ನು ಅವುಗಳ ಒಳಗೆ ಸೇರಿಸಲಾಗಿರುತ್ತದೆ. ನೋಡಲು ಕಾಣುವಂತಿದ್ದರೂ ಹೊರಬೀಳದೆ ನಿರಾಳವಾಗಿ ಓಡಾಡುತ್ತಿರುತ್ತವೆ. ಸಾಮೂಹಿಕವಾಗಿ ಗೊಂಚಲು ಕಟ್ಟಿ ಅಲುಗಿಸಿದರೆ ‘ಘಲ್ ಘಲ್’ ನಾದ ಹೊರಡಿಸುತ್ತವೆ. ವೀರಗಾಸೆ, ಕೋಲಾಟ, ಪಟಕುಣಿತ, ಪುರವಂತಿಕೆ, ಡೊಳ್ಳು, ಚೌಡಿಕೆ, ಯಕ್ಷಗಾನ ಬಯಲಾಟದ ಕಲಾವಿದರು ಇವನ್ನು ಕಾಲಿಗೆ ಕಟ್ಟುತ್ತಾರೆ. ಜನಪದ ಕಲೆಗಳೊಂದಿಗೆ ಕಿರುಗೆಜ್ಜೆ ನಿರಂತರ ಸಂಬಂಧ ಉಳಿಸಿಕೊಂಡು ಬಂದಿದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಹುರಿಗೆಜ್ಜೆ, ಚಿಟಗೆಜ್ಜೆ ಮುಂತಾದ ನಾನಾ ಬಗೆಗಳು ಪ್ರಚಲಿತವಿವೆ.

. ಗಗ್ಗರ :

ಘನವಾದ್ಯಗಳ ಗುಂಪಿಗೆ ಸೇರುವ ಕಿರುವಾದ್ಯ. ದೊಡ್ಡ ದೊಡ್ಡ ಲೋಹವಾದ್ಯಗಳ ಅಬ್ಬರದಲ್ಲಿ ಗಗ್ಗರದ ಅಸ್ತಿತ್ವ ಪರಿಗಣನೆಗೆ ಬಾರದಷ್ಟು ನಿರ್ಲಕ್ಷ್ಯಕ್ಕೆ ಒಳಪಟ್ಟಿರುವಂತಿದೆ. ಒಂದೂವರೆ ಎರಡು ಅಂಗುಲ ವ್ಯಾಸವುಳ್ಳ ಟೊಳ್ಳು ಕಡಗವನ್ನು ಹೋಲುವ ಕಂಚಿನ ಉಂಗುರದಂತಿರುತ್ತದೆ. ಟೊಳ್ಳಾಗಿರುವ ಅದರ ಒಳಭಾಗಕ್ಕೆ ಎರಕದ ಸಣ್ಣ ಸಣ್ಣ ಗುಂಡುಗಳನ್ನು ತುಂಬಿರುತ್ತಾರೆ. ಎಡಗೈ ಹೆಬ್ಬೆರಳು, ತೋರುಬೆರಳುಗಳಿಗೆ ಸಿಕ್ಕಿಸಿಕೊಂಡು ಕುಲುಕುವುದರಿಂದ ಮಧುರ ನಾದ ಹೊರಡುತ್ತದೆ. ನೀಲಗಾರರು ಹೆಬ್ಬೆರಳಿಗೆ ಧರಿಸಿ ತಂಬೂರಿ ನುಡಿಸಿದರೆ, ಭೂತಾರಾಧನೆಯಲ್ಲಿ ಭೂತ ಪಾತ್ರಧಾರಿ ಕಾಲಿಗೆ ಇದನ್ನು ಧರಿಸುತ್ತಾನೆ. ನಂದಿಕೋಲು ದನಗಳ ಕೊಂಬು, ಎತ್ತು ಹಿಡಿಯುವ ದಾರಗಳಿಗೂ ಇದನ್ನು ಅಲಂಕಾರ ಮತ್ತು ನಾದಕ್ಕಾಗಿ ಸೇರಿಸುವುದುಂಟು.

. ಜಾಗಟೆ :

ಪಂಚ ಮಹಾವಾದ್ಯಗಳಲ್ಲಿ ಒಂದು. ಇದು ತಣಿಗೆಯಾಕಾರದ ಲೋಹವಾದ್ಯ. ಧಾರ್ಮಿಕ ಭಿಕ್ಷೆ ಮಾಡುವ ದಾಸಯ್ಯಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಜೇಗಂಟೆ. ಜೇಗಟೆ ಎಂದೂ ಇದನ್ನು ಕರೆಯಲಾಗುತ್ತದೆ. ಹಿಂದೆ ಯುದ್ಧಗಳಲ್ಲಿ ಜಯ ಸೂಚಕವಾಗಿ ಬಳಸುತ್ತಿದ್ದ ‘ಜಯಘಂಟೆ’ಯೇ ಕಾಲಕ್ರಮದಲ್ಲಿ ಜಾಗಟೆಯಾಗಿರಬೇಕೆಂದು ಭಾವಿಸಲಾಗುತ್ತದೆ. ಸಾಮಾನ್ಯ ಜಾಗಟೆಗಳನ್ನು ಕಂಚಿನಲ್ಲಿ, ವಿರಳವಾಗಿ ಬೆಳ್ಳಿಯಲ್ಲಿ ತಯಾರಿಸಲಾಗುತ್ತದೆ.

ದಾಸ ಸಂಪ್ರದಾಯದ ಜಾಗಟೆಗಳಲ್ಲಿ ಎರಡು ವಿಧ : ೧. ಸಾದಾಜಾಗಟೆ ೨. ಜಗನ್ನಾಥ ಜಾಗಟೆ. ತಿರುಪತಿ ವೆಂಕಟರಮಣನ ಭಕ್ತರಾದ ದಾಸಯ್ಯಗಳು ಸಾದಾಜಾಗಟೆಯನ್ನು ಭಿಕ್ಷಾಟಣೆಯಲ್ಲಿ ಬಳಸುತ್ತಾರೆ. ಇದಕ್ಕೆ ಅಂಚು ಇರುವುದಿಲ್ಲ. ಜಾಗಟೆಯನ್ನು ಕೈಯಲ್ಲಿ ಹಿಡಿದು, ಹೆಗಲಿಗೆ ಶಂಖವನ್ನು ನೇತು ಹಾಕಿಕೊಂಡು ಮನೆ ಮನೆಗೆ ಬರುತ್ತಾರೆ. ಭಿಕ್ಷೆಗೆ ತಾವು ಬಂದಿರುವ ಸೂಚನೆಯನ್ನು ಜಾಗಟೆಯನ್ನು ಮರದ ಕೋಲಿನಿಂದ ಬಡಿಯುವುದರ ಮೂಲಕ ಕೊಡುತ್ತಾರೆ, ‘ಢಣ್ ಢಣ್’ ನಾದ ಭಕ್ತರ ಗಮನ ಸೆಳೆಯಲು ಸಹಾಯಕವಾಗುತ್ತದೆ. ಜಗನ್ನಾಥ ಜಾಗಟೆಯನ್ನು ದೇವರ ಪೂಜೆಯ ಸಮಯದಲ್ಲಿ ಬಳಸಲಾಗುತ್ತದೆ. ಶಂಖ, ತುತ್ತೂರಿ ಇದರ ಸಹವಾದ್ಯಗಳು. ಇದು ಆಕಾರದಲ್ಲಿ ಗುಂಡಗಿದ್ದು ಅಂಚನ್ನು ಹೊಂದಿರುತ್ತದೆ. ಅದರಲ್ಲಿನ ಎರಡು ರಂಧ್ರಗಳಿಗೆ ದಾರಕಟ್ಟಿ ಎಡಗೈಲಿ ಹಿಡಿದು ದಾಂಡೊಂದರಿಂದ ಬಡಿಯುವುದು ವಾಡಿಕೆ. ಸಾದಾ ಜಾಗಡೆಗಿಂತ ಇದು ತೆಳ್ಳಗೆ, ಅಗಲವಾಗಿದ್ದು ಒಳ್ಳೆಯ ನಾದ ಹೊರಹೊಮ್ಮಿಸುತ್ತದೆ. ನಾದ ಅನುಕರಣನಗೊಳ್ಳುವಂತಿರುತ್ತದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತ್ರಿಕೋನಾಕೃತಿಯ ಜಾಗಟೆಗಳು ಕಾಣಬರುತ್ತವೆ.

ದಾಸಯ್ಯಗಳು ಜಾಗಟೆಯನ್ನು ದೇವರೆಂದೇ ಭಾವಿಸಿ ಪೂಜಿಸುತ್ತಾರೆ. ಪ್ರತಿ ಶನಿವಾರ ಹೀಗೆ ಮಾಡಿ ವಾರ ತಿರುಗುವ ಪರಿಪಾಠ ಇಟ್ಟುಕೊಂಡಿರುತ್ತಾರೆ. ಅದು ದುಷ್ಟಶಕ್ತಿಯನ್ನು ಓಡಿಸುವ, ಖಾಯಿಲೆ ನಿವಾರಿಸುವ ಅತೀಂದ್ರಿಯ ಗುಣವನ್ನು ಹೊಂದಿದೆಯೆಂದು ಹಲವು ಸಂಸ್ಕೃತಿಗಳಲ್ಲಿ ಭಾವಿಸಲಾಗಿದೆ. ಬಹು ಹಿಂದೆ ಆಕಾಶ ಕೈಗೆಟುಕುವಷ್ಟು ಹತ್ತಿರವಿತ್ತು. ಗೃಹಿಣಿಯೊಬ್ಬಳಿಗೆ ಭತ್ತವನ್ನು ಒನಕೆಯಿಂದ ಕುಟ್ಟಲು ತೊಂದರೆಯಾಯಿತಂತೆ. ಸಿಟ್ಟಿನಿಂದ ಆಕೆ ಆಕಾಶವನ್ನು ಬೈಯ್ದಳಂತೆ. ಆಕಾಶ ಮೇಲುಮೇಲಕ್ಕೆ ಹೋಗತೊಡಗಿದಾಗ ದಾಸಯ್ಯನೊಬ್ಬ ಜಾಗಟೆ ಬಡಿದು ನಿಲ್ಲಿಸಿದನೆಂಬ ವಿವರಣಾತ್ಮಕ ಕಥೆ ಜನಪದದಲ್ಲಿದೆ. ಇದು ಜಾಗಟೆಯ ಬಗೆಗಿನ ಜನತೆಯ ಅತೀಂದ್ರಿಯ ನಂಬಿಕೆಯನ್ನು ಸ್ಪಷ್ಟಪಡಿಸುವಂತಿದೆ.

ಜಾವಾ, ಬಾಲಿ ದ್ವೀಪಗಳಲ್ಲಿ ನೃತ್ಯ-ನಾಟಕಾಭಿನಯ, ಹಾಡುಗಾರಿಕೆಯಲ್ಲಿ ಜಾಗಟೆಯನ್ನು ನುಡಿಸಲಾಗುತ್ತದೆ. ಕರ್ನಾಟಕದ ಪಡುವಲಪಾಯ ಯಕ್ಷಗಾನದ ತೆಂಕುತಿಟ್ಟು ಸಂಪ್ರದಾಯದಲ್ಲಿ ತಾಳಕ್ಕೆ ಬದಲು ಜಾಗಟೆಯನ್ನೇ ವಾದ್ಯವಾಗಿ ಬಳಸುವುದನ್ನು ಗಮನಿಸಬಹುದು.

ಕೈಯಲ್ಲಿ ಜಾಗಟೆ ತಾಮ್ರದ ಬೋನಾಸಿ
ಅತ್ತಲ ಕೇರೀಲಿ ಅರಕೆಯ | ಅಯ್ಕೊಂಡ
ಬತ್ತಾರೆ ನಮ್ಮ ಕುಲಸ್ವಾಮಿ ||

ಎಂದು ಜನಪದ ತ್ರಿಪದಿಯೊಂದರಲ್ಲಿ ಜಾಗಟೆಯ ಪ್ರಾಸ್ತಾಪ ಬರುತ್ತದೆ. ಜಾಗಟೆಯೊಂದಿಗೆ ಕಹಳೆ ಮೃದಂಗ ಬಾರಿಸುತ್ತಿರುವ ಚಿತ್ರವೊಂದು ಕರ್ನಾಟಕದ ವೀರಗಲ್ಲಿನ ಮೇಲೆ ಇದೆ.

ಕಂಚಿನಿಂದ ವಾದ್ಯಗಳನ್ನು ತಯಾರಿಸುವ ರೀತಿ :

ತಾಳ, ಗಂಟೆ, ಜಾಗಟೆ, ಕಂಸಾಳೆ ಮುಂತಾದ ಲೋಹವಾದ್ಯಗಳನ್ನು ತಯಾರಿಸಲು ಅನುಸರಿಸುವ ತತ್ವ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಕುಶಲಕರ್ಮಿಗಳು ಯಾವ ವಸ್ತುವನ್ನು ತಯಾರಿಸಬೇಕೆಂದು ಬಯಸುತ್ತಾರೊ ಅಂಥ ವಸ್ತುವಿನ ಅಥವಾ ವಾದ್ಯದ ಪಡಿಯಚ್ಚನ್ನು ಶುದ್ಧ ಜೇನು ಮೇಣದಲ್ಲಿ ಕುಶಲತೆಯಿಂದ ತಯಾರಿಸಿಕೊಳ್ಳುತ್ತಾರೆ. ಕಲ್ಲು ಮರಳು ತೆಗೆದು ಶುದ್ಧ ಮಾಡಿದ ಜೇಡಿಮಣ್ಣನ್ನು ಅಲ್ಪಪ್ರಮಾಣದ ಸೆಗಣಿ (ಅದಿರು)ಯೊಂದಿಗೆ ಬೆರಸಿ ಪಡಿಯಚ್ಚೆಗೆ ನಾಜೂಕಾಗಿ ಬಳಿಯುತ್ತಾರೆ, ಅದನ್ನು ನಾಲ್ಕಾರು ದಿನ ನೆರಳಿನಲ್ಲಿ ಒಣಗಿಸಿ ಅನಂತರ ಹದವಾದ ಬೆಂಕಿಯಲ್ಲಿ ಕಾಯಿಸುತ್ತಾರೆ. ಇದೇ ಕಾಲಕ್ಕೆ ಒಂದು ಕೆ.ಜಿ. ಹಿತ್ತಾಳೆಗೆ ಸುಮಾರು ೨೦೦ ಗ್ರಾಂ ತವರ ಸೇರಿಸಿ ಕರಗಿಸುತ್ತಾರೆ. ಈಗ ಕಂಚಿನ ದ್ರವರೂಪ ಸಿದ್ಧವಾಗುತ್ತದೆ. ಜೇನುಮೇಣದ ಪಡಿಯಚ್ಚಿಗೆ ಬಳಿದ ಜೇಡಿಮಣ್ಣನ್ನು ಕಾಯಿಸಿದಾಗ ಒಳಗಿನ ಮೇಣ ಕರಗಿ ಮೊದಲೆ ಸಿದ್ಧಮಾಡಿದ ರಂಧ್ರದಲ್ಲಿ ಹೊರಬರುತ್ತದೆ. ಅದು ಪೂರ್ಣ ಹೊರ ಸುರಿದ ನಂತರ ಸಿದ್ಧವಾಗಿಟ್ಟುಕೊಂಡ ಲೋಹದ್ರವವನ್ನು ಅಚ್ಚಿನ ಒಳಕ್ಕೆ ನಿಧಾನವಾಗಿ ಸುರಿಯುತ್ತಾರೆ. ಅದು ಅಚ್ಚಿನ ಮೂಲೆ ಮೂಲೆಗೆ ಸರಿದು ನಿಲ್ಲುತ್ತದೆ. ಒಂದೆರಡು ಗಂಟೆ ಬಿಟ್ಟು ಮಣ್ಣಿನ ಕವಚವನ್ನು ಒಡೆದರೆ ಬೇಕಾದ ವಾದ್ಯದ ಆಕಾರ ಸಿದ್ಧವಾಗಿರುತ್ತದೆ. ಅನಂತರ ಅದನ್ನು ಅರದಿಂದ ಉಜ್ಜಿ ನಯಗೊಳಿಸಿ ಹೊಳಪು ನೀಡುತ್ತಾರೆ. ಬೇರೆ ಬೇರೆ ವಾದ್ಯಗಳಿಗೆ, ಬೇರೆ ಬೇರೆ ಸ್ವರ ಸಂಯೋಜನೆಗೆ ಲೋಹ ಮಿಶ್ರಣದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಹಿತ್ತಾಳೆ ತವರದ ಪ್ರಮಾಣದ ವ್ಯತ್ಯಾಸದಲ್ಲಿಯೆ ನಾದದ ವ್ಯತ್ಯಾಸವೂ ಇರುವುದಾಗಿ ಅನುಭವಿ ಕೆಲಸಗಾರರು ಅಭಿಪ್ರಾಯಪಡುತ್ತಾರೆ. ಗೆಜ್ಜೆ ಗಗ್ಗರದಂಥ ವಸ್ತುವಿನ ರಚನೆಯಲ್ಲಿ ತವರದ ಮಿಶ್ರಣ ಕಡಿಮೆ ಇರುತ್ತದೆ. ಇಲ್ಲಿ ೧ ಕಿಲೋ ಗ್ರಾಂ ಹಿತ್ತಾಳೆಗೆ ೫೦ ಗ್ರಾಂ ತವರವನ್ನು ಸೇರಿಸಲಾಗುತ್ತದೆ. ಇದರಿಂದ ಲೋಹ ಬಿರುಸಾಗದೆ ಪಡುಗವನ್ನು ಹಿಗ್ಗಲಿಸಿ, ಗುಂಡುಗಳನ್ನು ಸೇರಿಸಲು ಸಾಧ್ಯವಾಗುತ್ತದೆ.

. ಭೋಂಕಿ :

ದಾಸಸಂಪ್ರದಾಯದ ಒಂದು ಮುಖ್ಯ ವಾದ್ಯ. ಇದು ಕಹಳೆಯ ಇನ್ನೊಂದು ರೂಪದಂತೆ ಕಾಣಿಸುತ್ತದೆ. ಮಾಡಲ್ಪಟ್ಟ ಇದರ ಊದುವ ಭಾಗ ಕಿರಿದಾಗಿದ್ದು ಬರುಬರುತ್ತಾ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಮಧ್ಯಂತರದಲ್ಲಿ ಸುರುಳಿಯಾಕಾರದಲ್ಲಿ ಸುತ್ತಿಕೊಂಡು ಬಾಯಿ ಅಗಲವಾಗಿ ಹೊರಚಾಚುತ್ತದೆ. ನೇರ ಮತ್ತು ಬಾಗಿದ ಹಿತ್ತಾಳೆ ಕೊಳವೆ ತುಂಡುಗಳು ಇವಾಗಿದ್ದು ಅದನ್ನು ಸಾವಯವವಾಗಿ ಸೇರಿಸಿರುತ್ತಾರೆ. ಸಂದುಗಳನ್ನು ರಿವಿಟ್‌ಮಾಡಿ ಅದು ಕಾಣದಂತೆ ಉಬ್ಬಿದ ಬಳೆಯಾಕಾರದ ತಗಡುಗಳಿಂದ ಅಲಂಕಾರಿಕವಾಗಿ ಮುಚ್ಚಿರುತ್ತಾರೆ. ತಿರುಪತಿ ಬೆಟ್ಟಕ್ಕೆ ಯಾತ್ರೆ ಹೋಗುತ್ತಿದ್ದ ದಾಸಯ್ಯಗಳು ಭೋಂಕಿ ಮತ್ತು ಶಂಖವನ್ನು ಊದುತ್ತಾ ಭಕ್ತರ ತಂಡಗಳನ್ನು ಕರೆದೊಯ್ಯುತ್ತಿದ್ದರು. ಈಗಲೂ ಶನಿವಾರ ಭಿಕ್ಷೆಮಾಡುವ ದಾಸಯ್ಯಗಳು ದೇವರ ಹೆಸರಿನಲ್ಲಿ ಇದನ್ನು ಬಳಸುತ್ತಾರೆ.

. ಸಿಂಗನಾದ :

ಆದಿಚುಂಚನಗಿರಿ ಭೈರವ ಜೋಗಿಗಳು ಬಳಸುವ ವಾದ್ಯ ಇದು. ಇದನ್ನು ಅವರು ಕೊರಳಿಗೆ ನೇತುಹಾಕಿಕೊಂಡು ಹೋಗಿ ಭಾನುವಾರದ ದಿನ ಭಕ್ತರ ಮನೆಯಲ್ಲಿ ಭಿಕ್ಷೆಮಾಡುವುದು ಪದ್ಧತಿ. ಸಿಂಗನಾದ ಜಿಂಕೆ ಕೊಂಬಿನಿಂದ ಅಥವಾ ಬೆಳ್ಳಿ ತಗಡಿನಿಂದ ಮಾಡಿದ ಸರಳ ಹಾಗೂ ಪುಟ್ಟವಾದ್ಯ. ಬೆಳ್ಳಿಯ ಸಿಂಗನಾದ ಬೆರಳುದ್ದದ ಪೀಪಿಯಂತಿರುತ್ತದೆ. ಊದುವ ಜಾಗದಲ್ಲಿ ಕಿರಿದಾಗಿದ್ದು ನಾದ ಹೊಮ್ಮುವ ಭಾಗ ತುಸು ಅಗಲವಾಗಿರುತ್ತದೆ. ಮಧ್ಯಂತರದಲ್ಲಿ ಬೆಳ್ಳಿಯ ಗೊಣಸೊಂದಿದ್ದು ನೇತುಹಾಕಿಕೊಳ್ಳಲು ಅನುಕೂಲವಾಗಿರುತ್ತದೆ. ಭಕ್ತರ ಮನೆಯಲ್ಲಿ ಭಿಕ್ಷೆ ಸ್ವೀಕರಿಸುವ ಮುನ್ನ ಮತ್ತು ಅನಂತರ ಇದನ್ನು ಊದುತ್ತಾರೆ. 

ರಣವಾದ್ಯಗಳು

೧೦. ಕಹಳೆ ಮತ್ತು ಕೊಂಬು :

ಮಂಗಳ ಸಮಯ, ಯುದ್ಧಕಾಲ ಮತ್ತು ಉತ್ಸವಗಳಲ್ಲಿ ದೂರದ ಜನರನ್ನು ಆಕರ್ಷಿಸಲು ಅನುಕೂಲವಾಗುವಂತೆ ರೂಪಿಸಿಕೊಂಡ ಲೋಹವಾದ್ಯಗಳು ಇವು, ಕಹಳೆಯನ್ನು ಹಿತ್ತಾಳೆ ಮತ್ತು ಕಂಚಿನಿಂದ ತಯಾರಿಸುತ್ತಾರೆ. ಇಂಗ್ಲಿಷ್‌ನ ‘S’ ಅಕ್ಷರದಂತೆ ಇದರ ಆಕಾರವಿರುತ್ತದೆ. ಮಂದ್ರ ತಾರಕ ಸ್ವರದಲ್ಲಿ ಏರಿಳಿಯುವ ಇದರ ಸ್ವರಸಂಯೋಜನೆ ವಿಶಿಷ್ಟ. ಬಹುದೂರದವರೆಗೆ ಇದರ ನಾದ ಕೇಳಿಸುತ್ತದೆ, ಸುಮಾರ   ಅಡಿಗಳಷ್ಟು ಉದ್ದವಾಗಿರುತ್ತದೆ. ಒಂದು ಕಡೆ ಚೂಪಾಗಿ ಮತ್ತೊಂದು ಕಡೆ ಅಗಲವಾಗಿ ತೆರೆದುಕೊಂಡಿರುತ್ತದೆ. ಇದು ಎರಡು ಭಾಗಗಳಲ್ಲಿ ಇದ್ದು ಕೂಡಿಸಿ ಊದುವಂತಿರುತ್ತದೆ. ಕೊಂಬು-ಕಹಳೆ ಎರಡೂ ಒಂದೇ ಉದ್ದೇಶಕ್ಕೆ ಬಳಕೆಯಾಗುತ್ತವೆ. ಕೊಂಬಿನಂತೆ ಬಾಗಿರುವುದರಿಂದ ಅದಕ್ಕೆ ಆ ಹೆಸರು ಬಂದಿದೆ. ಕಹಳೆ ನೇರವಾಗಿದ್ದರೆ ಅದನ್ನು ‘ರಣಕಹಳೆ’ಯೆಂದು ಕರೆಯಲಾಗುತ್ತದೆ. ಅರಮನೆಯ ಕಾವಲುಗಾರರು ಊದುವ ಕಹಳೆಯನ್ನು ‘ಜಾವಕಹಳೆ’ ಎಂದೂ, ಒಬ್ಬನೆ ಊದುವ ಸಣ್ಣ ಜೋಡು ಕಹಳೆಯನ್ನು ‘ಜಿನಗಾಳೆ’ (ಚಿನಗಾಳೆ, ಚಿನಿಕಹಳೆ) ಎಂದೂ ಕರೆಯುತ್ತಾರೆ. ‘ದಮ್ಮಗಹಳೆ’ (ಧರ್ಮಗಹಳೆ) ಗೆದ್ದವರು ದಯೆಯಿಂದ ಯುದ್ಧ ನಿಲುಗಡೆಯ ಸಂಕೇತವಾಗಿ ಊದುವ ಕಹಳೆಯಾಗಿದೆ.

“ನಾಭಿಮೂಲದೊಳ್ ಕಹಳೆಯಪಾಂಗಿನವೊಲ್ ಶಬ್ದದ್ರವ್ಯಂ ಜನಿಯಿಸುಗುಂ” ಎಂಬ ಕೇಶಿರಾಜನ ಪ್ರಯೋಗ ಕಹಳೆಯ ಸ್ವರೂಪವನ್ನು ನಿರ್ದೇಶಿಸುವಂತಿದೆ. “ಬೊಗ್ಗಿನ ಹರೆ ಚಿನಗಹಳೆ ಹೆಗ್ಗಾಳೆ ಬುರುಗು ಮದ್ದಳೆ ನಾಗಸರಗಳ | ಮೊಗ್ಗರವು ಹತ್ತು ಹತ್ತು” ಎಂಬ ನಂಜುಂಡ ಕವಿಯ ರಾಮನಾಥ ಚರಿತೆಯ ವರ್ಣನೆ ಕಹಳೆಯ ವೈವಿಧ್ಯವನ್ನು ಸೂಚಿಸುತ್ತದೆ. “ಹೊಳೆವ ಸಿಂಧದ ಜಡಿವ ಕಹಳಾವಳಿಯ ಲಗ್ಗೆಯ ವಿವಿಧ ವಾದ್ಯದ ಕಳಕಳದ,” “ಚೀರುವ ಕಹಳೆ ಕೊಂಬಿನೊಳಿದ್ದರೈವತ್ತಾರು ದೇಶದ ಧರಣಿಪರು” ಎಂಬ ಕುಮಾರವ್ಯಾಸನ ಪ್ರಯೋಗ ರಣಭೂಮಿಯಲ್ಲಿ ಕಹಳೆಯ ಮಹತ್ವವನ್ನು ಸಾರುತ್ತದೆ. “ಕಹಳೆ ಹಚ್ಚಿ ಕರಿಹರಿದು ಮೆರಸೋಣ,” “ಕೊಂಬು ಕಾಳೆಗಳಿಂದ ರಂಭೇರ ಒಡಗೂಡಿ ಛಂದದಲಿ ಮದುವೆ ಮಾಡಿದರು.” ಮತ್ತು “ಕೊಂಬುಗಳು ಕರೆದಾವ ಕಾಳಿಗಳು ಊದ್ಯಾವ | ದಿಮ್ಮಿ ಕರಡೆಲ್ಲ ಕಣಕಣಸಿ-ನಿಬ್ಬಣದ | ಅಬ್ಬರದ ಸಂಭ್ರಮ ಕೇಳ್ಯಾವ ||” ಎಂಬುವು ಮಂಗಳ ಸಮಯದಲ್ಲೂ ಕೊಂಬು ಕಹಳೆಗಳು ಬಳಕೆಗೊಳ್ಳುತ್ತಿದ್ದುದಕ್ಕೆ ಉದಾಹರಣೆಗಳು.

ಯುದ್ಧದಲ್ಲಿ ಕಹಳೆ ಊದುತ್ತಿರುವ ಚಿತ್ರ ಬೇಲೂರಿನ ವೀರಗಲ್ಲಿನ ಮೇಲಿದೆ. ಜಾತ್ರೆ ಉತ್ಸವಗಳಲ್ಲಿ ಕಹಳೆ-ಕೊಂಬು ಊದುವುದು ಕರ್ನಾಟಕದಲ್ಲಿ ಸಾಮಾನ್ಯವಾದುದು. ದಕ್ಷಿಣ ಕನ್ನಡದ ಕಂಬಳ, ಭೂತಕೋಲಗಳಲ್ಲಿ ಕಲಾವಿದರಾದ ‘ನಲಿಕೆ’ಯವರು ಇದನ್ನು ಊದುವುದು ಕಂಡುಬರುತ್ತದೆ.

ತಯಾರಿಸುವ ವಿಧಾನ :

ಕೊಂಬು ಕಹಳೆಗಳನ್ನು ಹಿತ್ತಾಳೆಯಿಂದ ಮಾಡುತ್ತಾರೆ. ತಗಡನ್ನು ಕೊಳವೆಯಾಕಾರದಲ್ಲಿ ಸುತ್ತಿ ಅದನ್ನು ಬಾಗಿಸಲು ಬರುವಂತೆ ಅನೇಕ ತುಂಡುಗಳಾಗಿ ವಿಂಗಡಿಸಿಕೊಳ್ಳುತ್ತಾರೆ. ರಾಳ, ಹರಳೆಣ್ಣೆ ಮತ್ತು ನಯವಾದ ಇಟ್ಟಿಗೆಯ ಮಣ್ಣಿನಿಂದ ಮಾಡಿದ ಮಿಶ್ರಣವನ್ನು ಅದರೊಳಕ್ಕೆ ತುಂಬುತ್ತಾರೆ. ಹದವಾಗಿ ಕೊಳವೆಗಳನ್ನು ತಟ್ಟಿ ಅಗತ್ಯರೂಪು ಪಡೆಯುತ್ತಾರೆ. ಅನಂತರ ಕೊಳವೆಯ ತುಂಡುಗಳನ್ನು ರಿವಿಟ್ ಮಾಡುತ್ತಾರೆ. ಆ ಸ್ಥಳ ಕಾಣಿಸದಂತೆ ಹಿತ್ತಾಳೆಯ ಕಲಾತ್ಮಕ ಉಬ್ಬು ಬಳೆಯಿಂದ ಅಲಂಕರಿಸುತ್ತಾರೆ. ಊದುವ ಕಿರಿದಾದ ಭಾಗಕ್ಕೆ ಹಿತ್ತಾಳೆಯ ಕಿರಿದಾದ ಉದ್ದಪಟ್ಟಿಯನ್ನು ಜೋಡಿಸಿರುತ್ತಾರೆ. ಇದೇ “ಜೀವಾಳ”. ಇದು ನಾದಜನಕ. ಉಸಿರು ಇದರ ಮೂಲಕ ಹಾದುಹೋಗುವಾಗ ಧ್ವನಿತರಂಗಗಳನ್ನು ಎಬ್ಬಿಸುತ್ತದೆ. ಅದು ಕೊಳವೆಯ ಮುಂದಿನ ಆಕಾರದಲ್ಲಿ ವೈವಿಧ್ಯಮಯ ವಿನ್ಯಾಸ ಹೊಂದುತ್ತದೆ. ನಾಗರಿಕವಾಗಿರುವ ಬ್ಯಾಂಡ್ ವಾದ್ಯಗಳ ಮೇಲೆ ಲೋಹ-ಚರ್ಮವಾದ್ಯಗಳ ಪ್ರಭಾವವಿರುವುದನ್ನು ಹೆಚ್ಚಿನ ಅಧ್ಯಯನದಿಂದ ಗುರುತಿಸಿಕೊಳ್ಳಬಹುದು. 

ಅರೆಲೋಹವಾದ್ಯಗಳು

ಚಿಟಿಗಿ : ಅಂಗುಲ ಉದ್ದದ ಮರದ ಎರಡು ಚಪ್ಪಟೆ ತುಂಡುಗಳನ್ನುಳ್ಳ ಮರದ ತಾಳ ಇದು. ಹೆಬ್ಬೆರಳು ಮತ್ತು ತೋರುಬೆರಳುಗಳಿಗೆ ಹೊಂದಿಕೊಳ್ಳುವಂತೆ ಅವುಗಳ ಹೊರಮೈ ಮೇಲೆ ಕೊಂಡಿಗಳನ್ನು ಅಳವಡಿಸಲಾಗಿರುತ್ತದೆ. ಚಿಟಗಿಯ ಒಂದೊಂದು ತುದಿಗೂ ಎರಡೆರಡು ಲೋಹದ ವಸ್ತುಗಳನ್ನು ಅಳ್ಳಕವಾಗಿ ಹೊಂದಿಸಿ ಅವು ಪರಸ್ಪರ ತಾಗಿದಾಗ ನಾದ ಹೊಮ್ಮಿಸುವಂತೆ ರಚಿಸಲಾಗಿರುತ್ತದೆ. ಇದು ಮರ-ಲೋಹಗಳಿಂದ ಕಸಿಮಾಡಿದ ಹೊಸತಳಿ ಎನ್ನಬಹುದು.

ಕಂಚಿನ ಹರೆ :

ಇದು ಚರ್ಮವಾದ್ಯವೂ ಹೌದು. ಹರೆ, ಕಹಳೆ, ಕೊಂಬುಗಳಂತೆ ರಣವಾದ್ಯವಾಗಿದ್ದು ಹೋಳನ್ನು ಮರ ಅಥವಾ ಕಂಚಿನಿಂದ ಮಾಡಿರುತ್ತಾರೆ. ಹೊದಿಸುವ ಚರ್ಮ ಮೇಕೆಯದು. ಕಂಚಿನಿಂದ ಮಾಡಲ್ಪಟ್ಟಿದ್ದರೆ ಇದನ್ನು ‘ಕಂಚಿನಹರೆ’ (ಉ. ಕರ್ನಾಟಕದಲ್ಲಿ ತಾಸೆ) ಎನ್ನುತ್ತಾರೆ. ಗ್ರಾಮದೇವಾಲಯಗಳಲ್ಲಿ ಇವು ಹೆಚ್ಚಾಗಿರುತ್ತವೆ. ಗ್ರಾಮದೇವತೆಯ ಸೇವಕರಾದ ಸೋಮಗಳು ಉತ್ಸವ ಹೊರಟಾಗ ಹರೆಯ ನಾದಕ್ಕೆ ತಕ್ಕಂತೆ ವೈಯಾರದಿಂದ ಕುಣಿಯುತ್ತಾರೆ. ಓಲಗ ತಮ್ಮಟೆ ಡೋಲು ತಾಳಗಳಿದ್ದರೂ ಇಲ್ಲಿ ಹರೆಯೇ ಮುಖ್ಯ ವಾದ್ಯ. ಇದು ಲೋಹಚರ್ಮದಿಂದಾದ ಸಂಕರ ವಾದ್ಯ.

ತಣಿಗೆ ವಾದ್ಯ :

ಕಾಷ್ಠ ಮತ್ತು ಲೋಹದ ಸಂಲಗ್ನತೆಯಲ್ಲಿ ಹುಟ್ಟಿದ ವಾದ್ಯ ಇದು. ಕೀಳ್ಳಿಕ್ಯಾತರು ಗೊಂಬೆಯಾಡಿಸುವಾಗ ಹಿನ್ನೆಲೆಗೆ ಈ ವಾದ್ಯ ಬಳಸುತ್ತಾರೆ, ಒಂದು ಹಿತ್ತಾಳೆ ತಣಿಗೆಯನ್ನು ಬೋರಲಾಗಿಟ್ಟು ಅದರ ನಡುವೆ ತುಸು ಮೇಣ ಇಡುತ್ತಾರೆ. ಒಂದು ಹಂಚಿಕಡ್ಡಿಯನ್ನು ಅದರ ಮೇಲೆ ನಿಲ್ಲಿಸಿ ಬೆರಳಿನಿಂದ ಮೇಲಿಂದ ಕೆಳಕ್ಕೆ ನಿಧಾನವಾಗಿ ಉಜ್ಜುವುದರಿಂದ ಒಳ್ಳೆಯ ನಾದ ಹೊಮ್ಮುತ್ತದೆ.

ಒಟ್ಟಾರೆ ಕ್ರಿಯಾಶೀಲ ಜನಪದ ಸಂಸ್ಕೃತಿ ತನ್ನ ಪ್ರತಿಭೆಯನ್ನು ವೈವಿಧ್ಯಮಯವಾಗಿ ಪ್ರಕಟಗೊಳಿಸಿಕೊಂಡಿರುವ ರೀತಿ ಮೇಲಿನ ವಾದ್ಯಗಳ ಪರಿಶೀಲನೆಯಿಂದ ತಿಳಿಯುತ್ತದೆ. ತನ್ನ ಬೌದ್ಧಿಕ ಪರಿಮಿತಿಯಲ್ಲೆ ಅದು ಮೆರೆವ ಸೃಜನಶೀಲತೆಯಲ್ಲದೆ, ಒಂದು ನಿರ್ದಿಷ್ಟ ಸಂಸ್ಕೃತಿ ತನ್ನ ಧಾರ್ಮಿಕ ಆಚರಣೆಗೆ, ಸಾಹಿತ್ಯಕ ಮನೋಲ್ಲಾಸಕ್ಕೆ ರೂಪುಕೊಟ್ಟುಕೊಂಡ ಬಗೆ ಇದರಿಂದ ವ್ಯಕ್ತವಾಗುತ್ತದೆ. ಹೊಸ ಹೊಸ ಆವಿಷ್ಕಾರಕ್ಕೆ ಇಂಬು ಕೊಡಬಲ್ಲ ಜನಪದ ವಾದ್ಯಗಳ ತಾಂತ್ರಿಕ ಸಂಗತಿಗಳ ಸಂಶೋಧನೆಯ ಕಡೆಗೆ ಪರಿಣತರು ಇನ್ನಷ್ಟು ಗಮನ ಹರಿಸಬೇಕಾದ ಅಗತ್ಯ ಕಾಣಿಸುತ್ತದೆ.


[1]        ಪಾಶ್ಚಾತ್ಯ ದೇಶಗಳಲ್ಲಿ ವಾದ್ಯಗಳನ್ನು ‘Kely Board Instruments (ಬಡಿದು ಅಥವಾ ಒತ್ತಿ ನುಡಿಸುವ ವಾದ್ಯಗಳು) Brass and Wood Instruments (ಗಾಳಿಕಂಪನದಿಂದ ನಾದ ಹುಟ್ಟಿಸುವ ವಾದ್ಯಗಳು) Percussion Instruments (ತಟ್ಟಿ ಅಥವಾ ಬಾರಿಸಿ ಧ್ವನಿ ಹುಟ್ಟಿಸುವ ವಾದ್ಯಗಳು) ಎಂದು ಮೂರೆ ಬಗೆಯಲ್ಲಿ ವಿಂಗಡಿಸುತ್ತಾರೆ. ಅವರ ವರ್ಗೀಕರಣದ ಪ್ರಕಾರ ಘನವಾದ್ಯಗಳು ಈ ಮೂರನೆಯ ಗುಂಪಿನಲ್ಲೇ ಬರುತ್ತವೆ.

[2]        “ತಂತಿಯನ್ನು ಕಟ್ಟಿ ನುಡಿಸುವ ವೀಣಾಕವೇ ತತವೆನಿಸುವುದು; ಚರ್ಮವಂ ಕಟ್ಟಿ ನುಡಿಸುವ ಮುರಜಾದಿಕವೇ ಆನದ್ಧವೆನಿಸುವುದು; ಕಂಚಿನ ತಳಾಧಕವೇ ಘನವೆನಿಸುವುದು, ಊದಿ ಬಾರಿಸುವ ನುಡಿಮೇಳ ಮೊದಲಾದುವೇ ಸುಷಿರವೆನಿಸುವುದು, ಇಂತು ಚತುರ್ವಿಧ ವಾದ್ಯಗಳು ಅವಾಂತರ ಭೇದಗಳಾದ ಶೃಂಗವಾದ್ಯಗಳೆಂಬ ಕೊಂಬು, ತಮ್ಮಟವೆಂಬ ಹಲಿಗೆ, ಶಂಖವೆಂಬ ಧವಳ, ಭೇರಿಯೆಂಬ ಭಾಜಾ, ಜಯಘಂಟೆಯೆಂಬ ಜಾಗಟೆ ಇತ್ತರದ ಪಂಚಮಹಾವಾದ್ಯಂಗಳಂ ; ಭದ್ರವೆಂಬ ಕರಾಡಿ, ಶಾಸಕವೆಂಬ ಡೋಲು, ಝರ್ಝರ ಎಂಬ ಝಾಯಿ, ಕಾಹಳವೆಂಬ ಗೌರಿಕಾಳೆ, ದುಂದುಭಿಯೆಂಬ ಧೋರ, ಘಂಟಿಕೆಯೆಂಬ ಘಂಟೆ ಇತ್ತೆರದ ದಶವಾದ್ಯಗಳಂ ಬಾರಿಸಲುಳ್ಳ ವಿಚಕ್ಷಣರಿಂ…”
– ವಿವೇಕ ಚಿಂತಾಮಣಿ, ನಿಜಗುಣ ಶಿವಯೋಗಿ (ಕ್ರಿ. ಶ. 1500)