ಪದಗಳು ಜನಮನದ ಟಂಕಸಾಲೆಯಲ್ಲಿ ಭಾವದ ಮುದ್ರೆಯನ್ನು ತಳೆದು ಚಲಾವಣೆಗೆ ಬರುವ ನಾಣ್ಯಗಳಿದ್ದಂತೆ. ಒಂದು ಕಾಲದಲ್ಲಿ ವ್ಯವಹಾರದಲ್ಲಿದ್ದ ಹಲವು ಪದಗಳು ಒಂದು ನಿರ್ದಿಷ್ಟವಾದ ಅರ್ಥವನ್ನು ಹೊತ್ತು ಸಂಚರಿಸುತ್ತಾ, ಕಾಲಕ್ರಮೇಣ ನಾಣ್ಯಗಳಂತೆ ಸವಕಲಾಗಿ ತಮ್ಮ ಅರ್ಥವನ್ನು ಪರಿಮಿತಗೊಳಿಸಿಕೊಳ್ಳಬಹುದು. ಮತ್ತೆ ಹಲವು ಪದಗಳು ಬಳಕೆಯಾಗುತ್ತಿದ್ದ ಅರ್ಥವನ್ನು ಕ್ರಮೇಣ ಹಿಗ್ಗಿಸಿಕೊಂಡು ವಿಶಾಲಾರ್ಥವನ್ನು ಪಡೆಯಬಹುದು. ಈ ಪದನಾಣ್ಯಗಳ ಚಲಾವಣೆಯ ಪರಿಯನ್ನು ಭಾಷಾಶಾಸ್ತ್ರ ಗುರುತಿಸುತ್ತದೆ.

ಇಂದು ನಾವು ವಿಶೇಷವಾಗಿ ಮನಸ್ಸಿಗೆ ಆಹ್ಲಾದವನ್ನುಂಟುಮಾಡತಕ್ಕ ವಸ್ತುಗಳನ್ನು ನಿರ್ದೇಶಿಸಲು ‘ಸುಂದರ’ ಎಂಬ ಪದವನ್ನೂ, ಹಾಗೆ ಆಹ್ಲಾದವನ್ನುಂಟುಮಾಡುವ ಗುಣವನ್ನು ‘ಸೌಂದರ‍್ಯ’ ಎಂದೂ ಕರೆಯುತ್ತಿದ್ದೇವೆ. ಈ ಪದ ದಿನಬಳಕೆಯ ವ್ಯವಹಾರಗಳಲ್ಲಿ ಒಂದು ರೀತಿಯ ಅರ್ಥವನ್ನು ಪಡೆದರೆ, ಸೌಂದರ‍್ಯ ಮೀಮಾಂಸೆಯಲ್ಲಿ ಬೇರೊಂದು ಅರ್ಥವನ್ನು ಪಡೆಯುತ್ತದೆ. ಒಂದು ಭೂಮಿಕೆಯಲ್ಲಿ ‘ಸುಂದರ’ ಎಂದರೆ ಆಹ್ಲಾದಕರವಾದುದು ಎಂದು ಅರ್ಥವಾದರೆ, ಮತ್ತೊಂದು ಭೂಮಿಕೆಯಲ್ಲಿ ರಸಾನುಭವಕಾರಿಯಾದುದು ಎಂದು ಅರ್ಥವಾಗುತ್ತದೆ. ಹೀಗೆ ಲೋಕಸಂಬಂಧಿಯಾದ ಮತ್ತು ಕಲಾಸಂಬಂಧಿಯಾದ ಅರ್ಥಗಳಲ್ಲಿ ನಾವು ವಿಶೇಷವಾಗಿ ಬಳಸುವ ‘ಸುಂದರ’, ‘ಸೌಂದರ‍್ಯ’ ಎಂಬ ಪದಗಳು ಬಹು ಪ್ರಾಚೀನಕಾಲದಿಂದ ಬಳಕೆಯಲ್ಲಿದ್ದಿರಬಹುದೆಂದು ಭಾವಿಸಿ ಅವುಗಳ ಇತಿಹಾಸವನ್ನು ಗಮನಿಸತೊಡಗಿದರೆ, ಈ ಪದ ಪ್ರಾಚೀನವೆಂದು ಭಾವಿಸಲಾದ ವೇದೋಪನಿಷತ್ತುಗಳಲ್ಲಿ ಕಾಣಸಿಗುವುದಿಲ್ಲ; ಇದೇನಿದ್ದರೂ ಆಧುನಿಕ[1] – ಎಂಬ ವಿಷಯ ತಿಳಿದು ಸೋಜಿಗವಾಗುತ್ತದೆ. ಇದರಿಂದಲೇ ಏನೋ ಹಲವು ಪಾಶ್ಚಾತ್ಯ ವಿದ್ವಾಂಸರು ಪ್ರಾಚೀನ ಭಾರತೀಯರಲ್ಲಿ ಸೌಂದರ‍್ಯವನ್ನು ಕುರಿತ ಭಾವನೆಯೇ ಇರಲಿಲ್ಲ ಎನ್ನುವ ತಪ್ಪುಕಲ್ಪನೆಗೊಳಗಾಗಿದ್ದಾರೆ.

ಆದರೆ ವೇದೋಪನಿಷತ್ತುಗಳಲ್ಲಿ ‘ಸುಂದರ’ ‘ಸೌಂದರ‍್ಯ’ ಎಂಬ ಪದಗಳಿರಲಿಲ್ಲವೇ ಹೊರತು, ಸೌಂದರ‍್ಯವನ್ನು ಕುರಿತ ಭಾವನೆಯೇ ಇರಲಿಲ್ಲವೆನ್ನುವುದು ಅಸಂಗತ. ಋಗ್ವೇದದಲ್ಲಿ

‘ಸೌಂದರ‍್ಯ’ದ ಅರ್ಥವನ್ನು ವಿವಿಧವಾಗಿ ಪ್ರಕಟಪಡಿಸುವ ಅನೇಕ ಪದಗಳಿವೆ. ಅವುಗಳು ಇಪ್ಪತ್ತೆರಡು ಎಂದು ಶ್ರೀ ಪಿ.ಎಸ್.ಶಾಸ್ತ್ರಿಯವರು ಪಟ್ಟಿಮಾಡಿ ಅವುಗಳ ಅರ್ಥವನ್ನು ವಿವರಿಸಿದ್ದಾರೆ. ಆ ಪದಗಳು ಇವು;

ಪ್ಸರಸ್, ಪೆಶಸ್, ಅಪ್ಸಸ್, ದೃಶ್, ಶ್ರೀ, ವಪುಸ್,
ವಲ್ಗು, ಶ್ರೇಯಸ್, ಭದ್ರ, ಭಾಂಡ್, ಚಾರು,
ಪ್ರಿಯ, ರೂಪ, ಕಲ್ಯಾಣ, ಶುಭ, ಚಿತ್ರ, ದರ್ಶತಾ,
ಸ್ವಾದು, ರನ್ವ, ವಾಮ, ಯಕ್ಷ, ಅದ್ಭುತ.
[2]

ಈ ಪದಗಳಲ್ಲಿ ಶ್ರೀ ಎಂಬ ಪದ ಸೌಂದರ‍್ಯವೆಂಬ ಅರ್ಥದಲ್ಲಿ, ವಿಶೇಷವಾಗಿ ಪರಿಗಣಿತವಾಗಿದೆ. ಶ್ರೀ ಎಂದರೆ ಸೌಂದರ‍್ಯವೆಂಬ ಅರ್ಥವಿರುವಂತೆ ಅಶ್ರೀ ಎಂದರೆ ವಿಕೃತವೆಂದೂ ಅರ್ಥವಿದೆ ವೇದಗಳಲ್ಲಿ. ಪ್ರಾಚೀನ ಸಾಹಿತ್ಯದಲ್ಲಿ ಶ್ರೀ ಎಂದರೆ ಶುಭವಾದುದು, ಪೂಜ್ಯವಾದುದು ಎಂಬ ಅರ್ಥವಿದೆ.

ಅಷ್ಟೇ ಅಲ್ಲ. “ಬಹುಕಾಲದಿಂದಲೂ ಶ್ರೀ ಎಂಬ ಪದಕ್ಕೆ ದಿವ್ಯಾನುಭೂತಿ ಮತ್ತು ಆನಂದ ಎಂಬ ಅರ್ಥ ಉಳಿದುಬಂದಿದೆ.”[3] “ಶತಪಥ ಬ್ರಾಹ್ಮಣಗಳಲ್ಲಿ ಶ್ರೀ ಮತ್ತು ಲಕ್ಷ್ಮಿ ಎಂಬ ಎರಡು ಪದಗಳೂ ಸೌಂದರ‍್ಯವೆಂಬ ಅರ್ಥದಲ್ಲೇ ಬಳಸಲ್ಪಟ್ಟಿವೆ. ತೈತ್ತರೀಯ ಆರಣ್ಯಕದಲ್ಲಿ ಶ್ರೀ ಮತ್ತು ಲಕ್ಷ್ಮಿಯರು ಬೇರೆಬೇರೆ ದೇವಕನ್ಯೆಯರೆಂದು ಅರ್ಥವಿದೆ. ಶತಪಥ ಬ್ರಾಹ್ಮಣಗಳ ಕಾಲದಲ್ಲೇ ಶ್ರೀಯನ್ನು ಸ್ತ್ರೀರೂಪದ ದೇವಿ ಎಂದು ಸೌಂದರ‍್ಯಕ್ಕೆ ವ್ಯಕ್ತಿ ರೂಪವನ್ನು ನೀಡಲಾಯಿತು. ಅವಳು ಕಮಲಾಸನೆ ಎಂಬ ವಿಶೇಷತೆ ಬಂದದ್ದು ಈಚೆಗೆ. ಮಹಾಭಾರತದಲ್ಲಿ ಶ್ರೀ ಎಂದರೆ ಸಂಪತ್ತು, ವಿಜಯ, ಚಾಂಚಲ್ಯ ಇತ್ಯಾದಿ ಅರ್ಥವಿದೆ. ಒಂದು ಬುದ್ಧ ಜಾತಕದಲ್ಲಿ ಶ್ರೀ ಎಂಬ ದೇವತೆಯ ಹೆಸರು ಬರುವುದಾದರೂ ಅವಳಿಗೂ ಸೌಂದರ‍್ಯಕ್ಕೂ ಸಂಬಂಧವಿರುವಂತೆ ತೋರುವುದಿಲ್ಲ.”[4] ಶ್ರೀ ಎಂದರೆ ಲಕ್ಷ್ಮಿ, ಅವಳು ಸೌಂದರ‍್ಯದ ಅಧಿದೇವತೆ. “ಸಂಸ್ಕೃತ ಕಾವ್ಯಗಳಲ್ಲಿ ಲಕ್ಷ್ಮಿ ಮತ್ತು ಶ್ರೀ ಎಂಬ ಎರಡು ಪದಗಳೂ ಸೌಂದರ‍್ಯವೆಂಬ ಅರ್ಥದಲ್ಲಿ ಪ್ರಯೋಗದಲ್ಲಿವೆ.”[5] ಭಾರವಿಯ ಕಾವ್ಯಗಳಲ್ಲಿ ಪ್ರತಿ ಸರ್ಗಾಂತ್ಯದಲ್ಲಿಯೂ ಬರುವ ಲಕ್ಷ್ಮೀ ಮತ್ತು ಶ್ರೀ ಶಬ್ದಗಳನ್ನು ಕುರಿತು ಟೀಕಾಕಾರನಾದ ಮಲ್ಲಿನಾಥನು – “ಚಮತ್ಕಾರಕಾರಿತಯಾ ಮಂಗಲಾಚರಣರೂಪತಯಾ ಚ ಸರ್ಗಾಂತ್ಯಶ್ಲೋಕೇಷು ಲಕ್ಷ್ಮೀ ಶಬ್ದ ಪ್ರಯೋಗಃ” ಎಂದೂ “ಚಮತ್ಕಾರಕಾರಿತಯಾ ಮಂಗಲಾಚರಣ ರೂಪತಯಾ ಚ ಸರ್ಗಾಂತ್ಯಶ್ಲೋಕೇಷು ಶ್ರೀ ಶಬ್ದಪ್ರಯೋಗಃ”[6] ಎಂದೂ ಕಿರಾತಾರ್ಜುನೀಯ ಮತ್ತು ಶಿಶುಪಾಲವಧ ಕಾವ್ಯಗಳ ಟೀಕೆಯಲ್ಲಿ ಬರೆದಿದ್ದಾನೆ. ಇಲ್ಲಿ ಲಕ್ಷ್ಮೀ ಮತ್ತು ಶ್ರೀ ಎಂಬ ಪದಗಳು ಶುಭ ಮತ್ತು ಸೌಂದರ‍್ಯ ಎಂಬ ಅರ್ಥದಲ್ಲಿ ಬಳಕೆಯಾಗಿವೆ.

ಈ ಪರಿಶೀಲನೆಯಿಂದ, ಸುಂದರ, ಸೌಂದರ‍್ಯ ಎಂಬ ನಿರ್ದಿಷ್ಟ ಪದಗಳು ವೇದೋಪನಿಷತ್ತುಗಳಲ್ಲಿ ದೊರೆಯುವುದಿಲ್ಲವೆಂಬುದು ಸ್ಪಷ್ಟ. ಅಲ್ಲಿ ಸೌಂದರ‍್ಯವೆಂಬ ಪದವಿಲ್ಲವೇ ಹೊರತು ಸೌಂದರ‍್ಯಭಾವದ ಮಹತ್ತಿಗೆ ಅಭಾವವಿಲ್ಲ ಎನ್ನುವುದಕ್ಕೆ ಸೌಂದರ‍್ಯ ಸೂಚಕವಾಗಿ ಅವರು ಬಳಸಿರುವ ಬಗೆಬಗೆಯಾದ ಪದಗಳೂ, ಆ ಒಂದೊಂದು ಪದವೂ ಸೂಚಿಸುವ ಸೌಂದರ‍್ಯದ ವಿಶಿಷ್ಟಭಂಗಿಗಳೂ ಸಾಕ್ಷಿಯಾಗಿವೆ. ವೇದೋಪನಿಷತ್ತುಗಳನ್ನು ಬಿಟ್ಟರೆ ನಮಗೆ ಆದಿಕಾವ್ಯವಾದ ರಾಮಾಯಣದಲ್ಲಿ ‘ಸುಂದರ’ ಎಂಬ ಪದ ‘ಸುಂದರಕಾಂಡ’ ಎಂಬ ಅಧ್ಯಾಯದ ಹೆಸರಿನಲ್ಲೇ ದೊರೆಯುತ್ತದೆ. ಅನಂತರ ಈ ಪದ ಅನೇಕ ಬೌದ್ಧ ಗ್ರಂಥಗಳಲ್ಲಿ, ಎಂದರೆ ಸುತ್ತನಿಪಾತ, ಅಂಗುತ್ತರಾ ಮೊದಲಾದ ಗ್ರಂಥಗಳಲ್ಲಿ ‘ಸುಂದರೋ’ ಎಂಬ ರೂಪದಲ್ಲಿ ದೊರೆಯುತ್ತದೆ.[7] ಮಹಾಭಾರತ, ಕಥಾಸರಿತ್ಸಾಗರ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ಸುಂದರ ಎಂಬ ಪದ ಇಂದು ಬಳಕೆಯಾಗುತ್ತಿರುವ ಅರ್ಥದಲ್ಲಿ ದೊರೆಯುತ್ತದೆ.

ಅಮರಸಿಂಹನ ಅಮರಕೋಶದಲ್ಲಿ

ಸುಂದರಂ ರುಚಿರಂ ಚಾರು ಸುಷುಮಮ್ ಸಾಧು ಶೋಭನಂ
ಕಾಂತಂ ಮನೋರಮಂ ರುಚ್ಯಂ ಮನೋಜ್ಞಂ ಮಂಜು ಮಂಜುಳಂ
– ಅಮರಕೋಶ ೩-೫೭

ಎಂದು ಸುಂದರ ಪದಕ್ಕಿರುವ ವಿವಿಧ ಪರ‍್ಯಾಯ ಪದಗಳು ಸೂಚಿತವಾಗಿವೆ. ಇಲ್ಲಿ ಸುಂದರ ಶಬ್ದಕ್ಕೆ ಇರುವ ವಿಶಾಲಾರ್ಥವನ್ನು ಗಮನಿಸಬಹುದು. ಇನ್ನು ಸಂಸ್ಕೃತ ಕವಿಗಳು ಕಾವ್ಯಗಳಲ್ಲಿ ಮತ್ತು ಆಲಂಕಾರಿಕ ಗ್ರಂಥಗಳಲ್ಲಿ ಲಾಲಿತ್ಯ ರಮಣೀಯತೆ ಇತ್ಯಾದಿ ಪದಗಳೇ ವಿಶೇಷವಾಗಿ ಕಾಣಿಸುತ್ತವೆ. ಆದರೆ ಸೌಂದರ‍್ಯ ಎಂಬ ಪದ ಬಹು ಕ್ವಚಿತ್ತಾಗಿ ಪ್ರಯೋಗದಲ್ಲಿದೆ. ಅಲ್ಲಿ ಸೌಂದರ‍್ಯವನ್ನು ಕುರಿತು ಅವರು ಬಳಸುವ ಪದಗಳು – ಅಲಂಕಾರ, ರಮಣೀಯತಾ, ವಕ್ರತಾ, ಕಾಂತಿ, ಲಾಲಿತ್ಯ, ಚಾರುತ್ವ ಇತ್ಯಾದಿ.

ಹಾಗಾದರೆ ಸುಂದರ ಎಂಬ ಪದವನ್ನು ಬಳಸದೆ ಅದರ ಬದಲು ಅನೇಕ ಪರ‍್ಯಾಯ ಪದಗಳನ್ನು ನಮ್ಮವರು ಬಳಸಿರುವುದರ ಕಾರಣ ಏನಿರಬಹುದು? ಸುಂದರ ಎಂಬ ಪದಕ್ಕೆ ಸೌಂದರ‍್ಯಾನುಭವವನ್ನು ಸೂಚಿಸುವ ಸಾಮರ್ಥ್ಯ ಸಾಲದೆಂದು ಅದನ್ನು ಕೈಬಿಟ್ಟರೆ ಎನ್ನುವ ಪ್ರಶ್ನೆ ಏಳುತ್ತದೆ. ವಾಸ್ತವವಾಗಿ ಸುಂದರ ಎಂಬ ಪದದ ಅರ್ಥವ್ಯಾಪ್ತಿ ಏನಿರಬಹುದು?

ಸುಂದರ ಎಂಬ ಪದ ‘ಸುಂದ್’ ಎಂಬುದರಿಂದ ಬಂದಿದೆ ಎಂದು ಹೇಳಲಾಗಿದೆ. ಸುಂದ್ ಎಂದರೆ ಪ್ರಕಾಶಿಸುವುದು ಎಂದು ಅರ್ಥ. ಸೌಂದರ‍್ಯದ ಲಕ್ಷಣವೇ ಅದು. ಸೌಂದರ‍್ಯವೆಂದರೆ ವಸ್ತುಗಳ ಮಾಧ್ಯಮದಲ್ಲಿ ಮೈದೋರುವ ತೇಜಸ್ಸು. ಸುಂದರ ಎಂಬ ಪದ ಬಹುಶಃ ಸೂ + ನರ = ಸೂನರ ಎಂದೂ, ಇಲ್ಲಿಯೂ ಗ್ರೀಕ್‌ನಲ್ಲಿಯಂತೆ ‘ದ’ ಬಂದು ‘ಸುಂದರ’ ಆಗಿರಬಹುದೆಂದು ಮೋನಿಯರ್ ವಿಲಿಯಮ್ಸ್ ಅವರ ಅಭಿಪ್ರಾಯ.[8] ವೇದಗಳಲ್ಲಿ ಪ್ರತ್ಯಯಗಳಾಗಿ ಬರುವ ‘ಸು’ ಎಂಬುದೇ ಶೋಭನ ಎಂಬ ಅರ್ಥದಲ್ಲಿ ಬಳಸಲ್ಪಟ್ಟಿದೆ. ಸುಕರ್ಮ, ಸುವರ್ಣ ಎಂಬ ಪದಗಳಲ್ಲಿ ‘ಸು’ ಎಂದರೆ ಚೆನ್ನಾದ, ಶುಭವಾದ ಎಂದು ಅರ್ಥವಾಗುತ್ತದೆ. ‘ಸು’ ಎಂದರೆ ಐಶ್ವರ‍್ಯ ಎಂದೂ ಅರ್ಥವಿದೆ.[9] ಭಟ್ಟೊಜೀದೀಕ್ಷಿತನ ಮಗನಾದ ಭಾನುದೀಕ್ಷಿತನ ಅಮರಕೋಶದ ಸುಧಾವ್ಯಾಖ್ಯಾನದಲ್ಲಿ ವಿಶೇಷಷ್ಯನಿಘ್ನವರ್ಗದ ಶ್ಲೋಕ ೫೨ರಲಿ, ‘ಸುಂದರ’ ಪದವನ್ನು ಕುರಿತು ದೊರೆಯುವ ವಿವರಣೆಯಿಂದ ಈ ಬಗ್ಗೆ ಕೊಂಚ ಬೆಳಕು ಬೀಳುತ್ತದೆ; ‘ಸು’ ಎಂಬುದು ಪದ. ಇದು ‘ಶೋಭನಾ’ ಎಂಬ ಅರ್ಥದಲ್ಲಿ ಪ್ರಯೋಗದಲ್ಲಿದೆ. ದರ (‘ದೃ’ ಧಾತು) ಎಂಬುದು ಸೇರಿ ‘ಸುದರ’ ಆಗಿರಬೇಕು. ‘ದರ’ ಎಂದರೆ ಆದರ, ಹೃತೂರ್ವಕ ಎಂದು ಅರ್ಥ. ‘ಸುದರ’ ಹೃತೂರ್ವಕವಾಗಿ ಆದರಿಸಲ್ಪಡತಕ್ಕದ್ದು ಎಂದಾಗುತ್ತದೆ. ಇದಕ್ಕೆ ‘ನ್’ ಎಂಬ ನಿಪಾತ ಸೇರಿ ‘ಸುಂದರ’ ಎಂದು ಆಗಿದೆ. ಆದುದರಿಂದ ಸುಂದರ ಎಂದರೆ ಯಾವುದು ಮನಸ್ಸಿನಲ್ಲಿ ಒಂದು ರೀತಿಯ ಆದರವನ್ನು ಉಂಟುಮಾಡುವುದೋ ಅದು. ಈ ಪದವನ್ನು ಕುರಿತು ಅಲ್ಲೇ ದೊರೆಯುವ ಮತ್ತೊಂದು ವಿವರಣೆ ಸು+ಉನ್ದ್+ ಅರ  ಎನ್ನುವುದು. ‘ಉನ್ದ್’ ಎಂಬುದು ಧಾತು. ಉನತ್ತೀ ಎಂಬುದು ರೂಪ. ‘ಉಂದೀ’ ಎಂದರೆ ಕ್ಲೇದನೆ; ಎಂದರೆ ಮನಸ್ಸನ್ನು ಕರಗಿಸತಕ್ಕದ್ದು. ಎಂದರೆ ಯಾವುದು ನಮ್ಮ ಮನಸ್ಸನ್ನು ಚೆನ್ನಾಗಿ ಕರಗಿಸುತ್ತದೆಯೋ ಅದು ಸುಂದರ ಎಂದಾಯಿತು.[10]

ಸುಂದರ ಎಂಬ ಪದವನ್ನು ಕುರಿತು ಸಾಧ್ಯವಾದ ಈ ವಿವರಣೆಗಳಿಂದ ‘ಸುಂದರ’ ಎಂಬ ಪದ ಎಷ್ಟೊಂದು ಉಚಿತವೂ ಅರ್ಥಪೂರ್ಣವೂ ಆಗಿದೆ ಎನ್ನುವುದನ್ನು ಗಮನಿಸಬಹುದು. ಮೊದಲನೆಯದಾಗಿ ‘ಸುಂದ್’ ಎನ್ನುವುದರಿಂದ ಸುಂದರವಾದ ವಸ್ತುವಿನ ಪ್ರಧಾನ ಲಕ್ಷಣವಾದ ತೇಜಸ್ಸು, ಕಾಂತಿ ಇವು ಸೂಚಿತವಾಗುತ್ತವೆ. ಯಾವ ವಸ್ತುವಾದರೂ ನಮ್ಮ ಗಮನವನ್ನು ಸೆಳೆಯುವುದು ತನ್ನ ಕಾಂತಿಯಿಂದಲೇ. ನಿಸ್ತೇಜವಾದ ಯಾವ ವಸ್ತುವೂ ನಮ್ಮನ್ನು ಆಕರ್ಷಿಸಲಾರದು. ಎರಡನೆಯದಾಗಿ ಯಾವುದು ಮೊದಲು ತನ್ನ ಈ ಕಾಂತಿಯಿಂದ, ನಮ್ಮ ಅಂತರಂಗದಲ್ಲಿ ಆ ವಸ್ತುವಿನ ಬಗೆಗೆ ಒಂದು ರೀತಿಯ ಆದರವನ್ನುಂಟುಮಾಡಿ ಅನಂತರ ನಮ್ಮ ಮನಸ್ಸನ್ನು ದ್ರವೀಕರಿಸುತ್ತದೆಯೋ ಮತ್ತು ತನ್ಮೂಲಕ ಮನಸ್ಸನ್ನು ಆನಂದಪಡಿಸುತ್ತದೆಯೋ ಅದು ‘ಸುಂದರ’.[11] ಒಂದು ವಸ್ತು ಸುಂದರವಾಗಿರುವ ಪಕ್ಷದಲ್ಲಿ ಮೊದಲು ಅದರ ಬಗೆಗೆ ನಮ್ಮ ಹೃದಯದಲ್ಲಿ ಆದರ ಉಂಟಾಗುತ್ತದೆ. ಹಾಗಿಲ್ಲದಿದ್ದರೆ ಅದು ಆನಾದರವನ್ನು ಹುಟ್ಟಿಸಬಹುದು. ಹೀಗೆ ಅಂತರಂಗದ ಆದರಕ್ಕೆ ಪಾತ್ರವಾದ ವಸ್ತು ನಮ್ಮ ಸೌಂದರ‍್ಯಾನುಭವದ ವಸ್ತುವಾಗಿ ಮನಸ್ಸನ್ನು  ಆರ್ದ್ರೀಕರಿಸುತ್ತದೆ. ಈ ಮನೋಹಾರಿತ್ವದಿಂದ ಮೊದಲಾಗಿ ಮನೋರಮತ್ವದಲ್ಲಿ ನಮ್ಮ ಚಿತ್ತವನ್ನು ದ್ರವೀಕರಿಸಿದಾಗ ಅದು ಒಂದು ರೀತಿಯ ವಿಶೇಷವಾದ ಅನಂದವನ್ನುಂಟುಮಾಡುತ್ತದೆ. ಈ ವಿಶೇಷವಾದ ಆನಂದವೇ ಸೌಂದರ‍್ಯಾನುಭವದ ಲಕ್ಷಣ. ಹೀಗೆ ಸುಂದರ ಎಂಬ ಪದ, ವಸ್ತುಗಳು ನಮ್ಮಲ್ಲಿ ಉಂಟು ಮಾಡುವ ಆದರ, ಆರ್ದ್ರತೆ, ಆನಂದ – ಎಂಬ ಸೌಂದರ‍್ಯಾನುಭವದ ಪರಿಣಾಮಗಳನ್ನು ಸೂಚಿಸಲು  ಸಮರ್ಥವಾದ ಪದವಾಗಿದೆ.

ಸುಂದರ ಪದದ ಪರ‍್ಯಾಯಗಳನ್ನು ಹೇಳುವ ಅಮರಸಿಂಹನ ಶ್ಲೋಕವೇ, ಸೌಂದರ‍್ಯದ ವಿವಿಧ ಲಕ್ಷಣಗಳನ್ನು ಸೂಚಿಸುತ್ತದೆ ಎಂಬುದನ್ನು ಗಮನಿಸಿದರೆ, ‘ಸುಂದರ’ ‘ಸೌಂದರ‍್ಯ’ ಎಂಬ ಪದಗಳ ಅರ್ಥವ್ಯಾಪ್ತಿಯ ಅರಿವು ಆಗುತ್ತದೆ.

ಸುಂದರಂ ರುಚಿರಂ ಚಾರು ಸುಷುಮಮ್ ಸಾಧು ಶೋಭನಂ
ಕಾಂತಂ ಮನೋರಮಂ ರುಚ್ಯಂ ಮನೋಜ್ಞಂ ಮಂಜು ಮಂಜುಳಂ

ಎಂಬ ಈ ಶ್ಲೋಕವನ್ನು ಪರಿಶೀಲಿಸೋಣ : ಯಾವ ವಸ್ತು ಸುಂದರವಾಗಿದೆಯೋ ಅದರ ಮೊದಲ ಗುಣ ರುಚಿರತೆ. ‘ರುಚಿರಂ’ ಎಂದರೆ ಪ್ರಕಾಶಿಸುವುದು; (ರೋಚತೇ ಪ್ರಕಾಶಿಸುವುದು) ಎಂದರೆ ಅದು ತನ್ನ ವರ್ಣಗಾತ್ರಾದಿಗಳಿಂದ ಪ್ರಕಾಶಿಸಿ ನಮ್ಮ ಕಣ್ಣನ್ನು ಸೆಳೆಯುತ್ತದೆ. ಅನಂತರ ಅದು ನಮ್ಮ ಅಂತಂಗದಲ್ಲಿ ಚರಿಸುತ್ತದೆ. (ಚಾರು ಚರತಿ ಮಾನಸೈಃ) ಹೀಗೆ ಅದು ನಮ್ಮ ಪರಿಭಾವನೆಯ ವಸ್ತುವಾಗಿ, ಸಂಪೂರ್ಣ ಸಮಾನವಾಗಿ (ಸುಸಮನ್, ಸುಷುಮಮ್) ಬೆರೆಯುತ್ತದೆ. ಹೀಗೆ ಮನಸ್ಸಿನಲ್ಲಿ ಒಂದಾಗಿ ಅದು ನಮ್ಮಲ್ಲಿ ರೂಪಸಿದ್ಧಿಯನ್ನೋ, ಭಾವಸಿದ್ಧಿಯನ್ನೋ ಪಡೆದು ನಮ್ಮ ಚೆಲುವಿನ ಬಯಕೆಯನ್ನು ತಣಿಸುತ್ತದೆ. (ಸಾಧು, ಸಾಧನೋತಿ); ಎಂದರೆ ಪರಿಣಾಮಕಾರಿಯಾಗುತ್ತದೆ. ಹೀಗೆ ಅದು ‘ಶೋಭನ’ (ಕಾಂತಿಯುಕ್ತ)ವಾಗುತ್ತದೆ. ಇಂತಹ ವಸ್ತು ನಮಗೆ ಪ್ರಿಯ (ಕಾಂತಂ)ವಾಗುತ್ತದೆ; ಆದುದರಿಂದಲೇ ಅದು ಕಾಂತಂ ಮತ್ತು ಪ್ರಿಯವಾಗುವುದರ ಮೂಲಕ ಮನಸ್ಸನ್ನು ರಮಿಸುತ್ತದೆ. (ಮನೋರಮಮ್). ಅಂತೆಯೇ ಅದು ನಮ್ಮ ರುಚಿಗೆ ಯೋಗ್ಯ (ರುಚ್ಯಂ) ವಾದುದಾಗುತ್ತದೆ. ಆದರೆ ಈ ಎಲ್ಲ ಅನುಭವವೂ ‘ಮನೋಜ್ಞ’ವಾದುದು; ಎಂದರೆ ಮನೋವೇದ್ಯವಾದುದು. ಈ ಎಲ್ಲ ಮನೋವೇದ್ಯವಾದುದು ಎಂದರೆ, ಆ ಬಗೆಯ ಅನುಭವವನ್ನು ಪಡೆದವರೆಲ್ಲರಿಗೂ ಇದೇ ಸಮಾನ ಧರ್ಮ. ಇದು ಎಲ್ಲರಿಂದಲೂ ತಿಳಿಯಲ್ಪಡತಕ್ಕದು. (ಮಂಜು-ಮಂಜುಳಮ್)[12] ಸೌಂದರ‍್ಯಾನುಭವದ ಪರಿಯನ್ನೇ ಇದು ಎಷ್ಟೋ ಸೊಗಸಾಗಿ ‘ಮನಸ್ ಶಾಸ್ತ್ರೀಯವಾಗಿ’ ನಿರೂಪಿಸಿದೆ!

ಈ ವಿವರಣೆಯೂ, ‘ಸುಂದರ’ ‘ಸೌಂದರ‍್ಯ’ ಎಂಬ ಪದಗಳು ನಮ್ಮ ಸೌಂದರ‍್ಯಾನುಭವವನ್ನು ಸೂಚಿಸಲು ಅತ್ಯಂತ ಸಮರ್ಥವೂ, ವಿಶಾಲವೂ ಆಗಿವೆ – ಎನ್ನುವುದನ್ನು ವಿಶದಪಡಿಸುತ್ತದೆ. ಈ ಪದ ವೇದೋಪನಿಷತ್ತುಗಳಲ್ಲಿ ಇಲ್ಲದೇ ಇರುವುದನ್ನೂ ಆಲಂಕಾರಿಕರ ಗ್ರಂಥಗಳಲ್ಲಿ ಕ್ವಚಿತ್ ಪ್ರಯೋಗದಲ್ಲಿರುವುದನ್ನೂ ನೋಡಿದರೆ ಸೋಜಿಗವಾಗುತ್ತದೆ. ಇದಕ್ಕೆ ಕಾರಣವನ್ನು ಹೀಗೆ ಅನುಮಾನಿಸಬಹುದು: ಸೌಂದರ‍್ಯ ಎಂಬ ಪದದ ಅರ್ಥ, ಅದರ ಪರ‍್ಯಾಯಪದಗಳಲ್ಲಿ ಸೂಚಿತವಾಗುವ, ಚಾರುತ್ವ, ಲಾವಣ್ಯ, ಲಾಲಿತ್ಯ ಇತ್ಯಾದಿ ಪದಗಳಿಗಿರುವ ಅರ್ಥಕ್ಕೆ ಮೀರಿದುದು. ಸೌಂದರ‍್ಯ ಎನ್ನುವುದು ಎಲ್ಲಕ್ಕೂ ಮೂಲಭೂತವಾದ, ಎಲ್ಲೆಲ್ಲಿಯೂ ತಾನೇ ತಾನಾಗಿ ಪ್ರಕಾಶಿಸುವ ಒಂದು ಶಕ್ತಿ.[13] ಅದು ಲಾವಣ್ಯವಾಗಿ, ಮಂಜುಳವಾಗಿ, ಲಲಿತವಾಗಿ, ಚಾರುವಾಗಿ ನಮ್ಮ ಅನುಭವಕ್ಕೆ ಬರುತ್ತದೆ.  ಈ ಹಲವಾರು ಪರ‍್ಯಾಯ ಪದಗಳೂ ಆ ಒಂದೊಂದು ಕಾಲದಲ್ಲಿ ಸೌಂದರ‍್ಯ ಅನುಭವಕ್ಕೆ ಬಂದ ಪರಿಗಳನ್ನು, ಸೌಂದರ‍್ಯ ಪ್ರಕಾಶನದ ವಿಧಾನಗಳನ್ನು ಸೂಚಿಸುತ್ತವೆ. ಅಷ್ಟೇ ಅಲ್ಲ, ನಾವು ಎಷ್ಟೇ ಪರ‍್ಯಾಯಪದಗಳನ್ನು ಬಳಸಿ ಹೇಳಿದರೂ, ಅವೆಲ್ಲವೂ ‘ಸೌಂದರ‍್ಯ’ದ ಒಂದೊಂದು ಮುಖವನ್ನು ಕುರಿತ ವಿವರಣೆಯಾಗುವುದರಿಂದ, ನಮಗೆ ಆಗ ಗೋಚರಿಸಿದ ಚೆಲುವಿನ ಅಂಶವನ್ನು ‘ಸುಂದರ’ ಎಂಬ ವಿಶಾಲಾರ್ಥದ ಪದದಿಂದ ನಿರ್ದೇಶಿಸಲಾಗುವುದಿಲ್ಲ. ಏಕೆಂದರೆ ಸೌಂದರ‍್ಯ ಎನ್ನುವುದು ಸೂತ್ರಾತೀತವಾದ, ಅಮಿತಾರ್ಥ ಪೂರ್ಣವಾದ ಒಂದು ಶಕ್ತಿ. ಅದು ಅನೇಕ ರೀತಿಯಲ್ಲಿ ಅನುಭವಕ್ಕೆ ಬರುವ ಪರಿಗಳನ್ನು ಗುರುತಿಸಬಹುದು; ಹೆಸರಿಸಬಹುದು. ಹಾಗೆ ವಿವರಿಸುವಲ್ಲಿ, ಆಗ ಅನುಭವಕ್ಕೆ ಬರುವ ಸೌಂದರ‍್ಯದ ಒಂದೊಂದು ಮುಖವನ್ನು ಸೂಚಿಸಲು ‘ಮನೋಹರ,’ ‘ರುಚಿರ’, ‘ಲಲಿತ’, ‘ರುದ್ರ’ ಇತ್ಯಾದಿ ಪದಗಳನ್ನು ಬಳಸುತ್ತೇವೆ.

ಆದರೆ ನಾವು ಇಂದು ಮನಸ್ಸಿಗೆ ಆಹ್ಲಾದಕಾರಿಯಾದ ಎಲ್ಲ ವಸ್ತುಗಳನ್ನೂ ‘ಸುಂದರ’ ಎಂಬ ಪದದಿಂದ ಕರೆದುಬಿಡುತ್ತೇವೆ. ಕಲಾಕೃತಿಯನ್ನೋ, ಲೋಕದ ವಸ್ತುವನ್ನೋ – ಸುಮ್ಮನೆ ಸುಂದರವಾಗಿದೆ ಎನ್ನುತ್ತೇವೆ. ಈ ಮನೆ ಸುಂದರವಾಗಿದೆ; ಹೂವು ಸುಂದರವಾಗಿದೆ, ದೇವಸ್ಥಾನ ಸುಂದರವಾಗಿದೆ; ಕವಿತೆ ಸುಂದರವಾಗಿದೆ – ಎಂದು ಹೇಳುವಲ್ಲೆಲ್ಲಾ ‘ಸುಂದರ’ ಎಂಬ ಪದವನ್ನು ಬಳಸಿದರೂ, ಎಲ್ಲ ಕಡೆಯಲ್ಲೂ ಪದ ಒಂದೇ ಆದರೂ ನಮಗಾದ ಅನುಭವ ಒಂದೇ ಅಲ್ಲ ಎನ್ನುವುದನ್ನು ಗಮನಿಸಬೇಕು. ಹೀಗೆ ಆವರಣ ಮತ್ತು ಅನುಭವಗಳಲ್ಲಿ ವ್ಯತ್ಯಾಸವಿರುವಾಗ ಎಲ್ಲ ಸಂದರ್ಭಗಳಲ್ಲೂ ‘ಸುಂದರ’ ಎಂಬ ಒಂದೇ ಪದವನ್ನು ಬಳಸುವುದು ಸಾಧುವೆ ಎಂಬ ಪ್ರಶ್ನೆ ಏಳುತ್ತದೆ. ಈ ಸಮಸ್ಯೆ ಏಳುವುದು ಸೌಂದರ‍್ಯ ಮೀಮಾಂಸೆಗೆ ತೊಡಗಿದಾಗ.

ಸೌಂದರ‍್ಯವೆಂದರೇನು ಎನ್ನುವುದನ್ನು ಕುರಿತು ಚರ್ಚಿಸುವಾಗ ಅನೇಕ ರೀತಿಯ ಸೂತ್ರಗಳು ಏರ್ಪಡುವುದಕ್ಕೆ ಈ ಪದದ ಬಳಕೆಯ ರೀತಿಯೂ ಒಂದು ಕಾರಣವಾಗಿರಬಹುದು. ಒಬ್ಬನು ಒಂದು ಮನೆಯನ್ನು ಕುರಿತು ಸುಂದರವಾಗಿದೆ ಎನ್ನುತ್ತಾನೆಂದು ಭಾವಿಸೋಣ. ಅವನು ಆ ಮನೆಯ ಅಚ್ಚುಕಟ್ಟನ್ನೋ, ಕಟ್ಟಡದ ಹದವರಿತ ಪ್ರಮಾಣವನ್ನೋ, ಆ ಕಟ್ಟಡ ವಾಸಮಾಡಲು ತುಂಬ ಅನುಕೂಲ ಎನ್ನಿಸಿದ್ದರಿಂದಲೋ, ಅಲ್ಲಿ ಆ ಮನೆಯನ್ನು ಕುರಿತು ತನಗೆ ಆದ ಅನುಭವವನ್ನು ಸೂಚಿಸಲು ‘ಸುಂದರ’ ಎಂಬ ಪದವನ್ನು ಬಳಸುತ್ತಾನೆ. ಅವನ ದೃಷ್ಟಿಗೆ ಸೌಂದರ‍್ಯವೆಂದರೆ ಯಾವುದು ಮನೋಹರವಾಗಿದೆಯೋ ಅದು; ಯಾವುದು ಕ್ರಮಬದ್ಧವಾದ ರಚನೆಯಿಂದ ಕೂಡಿದೆಯೋ ಅದು; ಯಾವುದು ಉಪಯೋಗದ ವಸ್ತುವೋ ಅದು – ಎಂದು ಮೂರು ಸೂತ್ರಗಳನ್ನು ಮಾಡಬಹುದು. ಇದೇ ದೃಷ್ಟಿಯಿಂದ ಕಲಾಕೃತಿಯನ್ನು ಕುರಿತು ಹೇಳಿದರೂ ಹೇಳಬಹುದು. ಸೌಂದರ‍್ಯವನ್ನು ಕುರಿತ ಅನೇಕ ಸೂತ್ರಗಳಲ್ಲಿ ಈ ಅನೇಕ ಬಗೆಯ ದೃಷ್ಟಿಗಳಿವೆ. ಆದರೆ ವಾಸ್ತವವಾಗಿ ಒಬ್ಬನು ಒಂದು ವಸ್ತುವನ್ನು ಕುರಿತು ಅದು ಸುಂದರವಾಗಿದೆ ಎಂದಾಗ ಅಲ್ಲಿ ಅವನಿಗಾದುದು ನಿಜವಾದ ಸೌಂದರ‍್ಯಾನುಭವವವೋ ಅಥವಾ ಸಾಧಾರಣ ಅನುಭವವೋ – ಎನ್ನುವುದನ್ನು ನಾವು ಹೇಗೆ ಹೇಳುವುದು ? ಆದರೆ ಕಲಾನುಭವಕ್ಕೂ ಉಳಿದ ಅನುಭವಕ್ಕೂ ಒಂದೇ ಪದವಾದ Beauty ಎನ್ನುವುದನ್ನು ಬಳಸುವ ಪಾಶ್ಚಾತ್ಯರಲ್ಲಿ, ಈ ಬಗ್ಗೆ ಉಂಟಾದಷ್ಟು ಸಮಸ್ಯೆ ನಮ್ಮಲ್ಲಿ ಆಗಲಿಲ್ಲ. ಏಕೆಂದರೆ ಕಲಾನುಭವವನ್ನು ಸೂಚಿಸಲು ನಮ್ಮವರು ‘ರಸ’ ಎಂಬ ಬೇರೆಯೆ ಆದ ಮಾತನ್ನು ಬಳಸುತ್ತಾರೆ.[14] ಕಲಾಕೃತಿಯನ್ನು ಕುರಿತು, ಅದರ ಪರಿಣಾಮವನ್ನು ಕುರಿತು ರಸಾನುಭವಕಾರಿಯಾಗಿದೆ ಎಂದೊ ರಸವತ್ತಾಗಿದೆ ಎಂದೋ ಹೇಳುತ್ತೇವೆ; ಲೋಕ ವಸ್ತುಗಳನ್ನು ಕುರಿತಾಗ ಅಲ್ಲ.

ಪಾಶ್ಚಾತ್ಯ ಸೌಂದರ‍್ಯ ಮೀಮಾಂಸೆಯಲ್ಲಿ ಹದಿನಾರನೆಯ ಶತಮಾನದಿಂದಲೂ Beauty ಮತ್ತು  Beautiful ಎಂಬ ಪದಗಳು ಬಳಕೆಯಲ್ಲಿವೆ. Beauty ಎಂದರೆ ಅದಕ್ಕಿರುವ ಅರ್ಥದ ಪ್ರಕಾರ “ಇಂದ್ರಿಯಾನುಭವಕ್ಕೆ, ಅದರಲ್ಲೂ ಕಣ್ಣುಗಳಿಗೆ ಗೋಚರಿಸಿ ಮನಸ್ಸನ್ನು ಮೋಹಗೊಳಿಸುವ ಒಂದು ಗುಣ, ಅಥವಾ ಗುಣ ಸಮೂಹ.”[15]

“ನಾವು ದಿನ ಬಳಕೆಯ ಭಾಷೆಯಲ್ಲಿ ಯಾವ ಯಾವುದು ಚೆನ್ನಾಗಿದೆಯೋ, ವಿಶಿಷ್ಟವಾಗಿದೆಯೋ, ಅಂಥ ಎಲ್ಲ ವಸ್ತುಗಳನ್ನೂ Beautiful ಎಂಬ ಪದದಿಂದ ನಿರ್ದೇಶಿಸುತ್ತೇವೆ. ಆದರೆ ಆಧುನಿಕ ಸೌಂದರ‍್ಯಮೀಮಾಂಸೆಯಲ್ಲಿ ವಿಶೇಷವಾದ ಅರ್ಥದಲ್ಲಿ ಬಳಸುವ Beauty  ಎಂಬ ಪದ, ದೈನಂದಿನ ವ್ಯವಹಾರದಲ್ಲಿರುವ Beauty ಎಂಬ ಪದಕ್ಕಿರುವ ಅರ್ಥದಿಂದ ಬೇರೆ ಎಂಬುದಾಗಿ ವಿದ್ವಾಂಸರು ಅಂಗೀಕರಿಸಿದ್ದಾರೆ.”[16] ಏಕೆಂದರೆ “ಜನರು ಒಂದು ವಸ್ತುವನ್ನು ಸುಂದರವಾಗಿದೆ ಎಂದಾಗ ಅಲ್ಲಿ ಅವರಿಗೆ ಅನಿಸಿದ್ದು ‘ರಮ್ಯ’ವೆನ್ನುವುದನ್ನು ಒಪ್ಪದೆ ಸೌಂದರ‍್ಯಾನುಭವವಾಯಿತೆಂದೇ ಭಾವಿಸುತ್ತಾರೆ. ಅವರು ವಸ್ತುವೊಂದನ್ನು ಕುರಿತು ಸುಂದರವಾಗಿದೆ ಎಂದ ಮಾತ್ರಕ್ಕೆ ಅವರಿಗೆ ಸೌಂದರ‍್ಯಾನುಭವವಾಗಿದೆ. ಎಂದು ಅರ್ಥವಲ್ಲ. ಅವರು ಹಾಗೆ ಭಾವಿಸಿದರೆ ಅದು ತಪ್ಪು[17]’’ ಎಂದು ರೂಪರ್ಟ ಬ್ರೂಕ್ ಅವರೂ, “ಹಲವು ಸಲ ಎಲ್ಲರೂ Beauty ಎಂಬ ಪದವನ್ನು ಸೌಂದರ‍್ಯಾನುಭವದಿಂದ ಹೊರತಾದ ಅನುಭವಗಳಿಗೂ ಬಳಸುತ್ತಾರೆ. ಬಹುಜನ ಹಾಗೆ ಆ ಮಾತನ್ನು ಎಲ್ಲೆಡೆಯಲ್ಲಿಯೂ ಬಳಸುವುದು ಅಭ್ಯಾಸವಾಗಿಬಿಟ್ಟಿದೆ. ಒಮ್ಮೊಮ್ಮೆ ಅವರು ಸೌಂದರ‍್ಯಾನುಭವವನ್ನು ಕುರಿತು Beauty ಎಂಬುದನ್ನೆ ಬಳಸಿದರೂ ಸರ್ವಸಾಮಾನ್ಯವಾಗಿ ಅವರಲ್ಲಿ ಆ ಪದ ಸೌಂದರ್ಯಾನುಭವ ದೂರವಾದುದು,”[18] ಎಂದು ಕ್ಲೈವ್ ಬೆಲ್ ಅವರೂ ಅಭಿಪ್ರಾಯಪಡುತ್ತಾರೆ. ಈ ಬಗ್ಗೆ ಕಾಲಿಂಗ್ ಉಡ್ ಎಂಬ ವಿದ್ವಾಂಸರ ಅಭಿಪ್ರಾಯವೂ ಗಣನೀಯವಾಗಿದೆ. ಅವರ ಅಭಿಪ್ರಾಯವನ್ನು ಹೀಗೆ ಸಂಗ್ರಹಿಸಬಹುದು: ಯಾವ ಒಂದು ವಸ್ತುನಿಷ್ಠವಾದ ಗುಣ ನಮ್ಮ ಮಾನಸಿಕ ಪರಿಭಾವನೆಗೆ ಒಳಗಾಗಿ ಒಂದು ಬಗೆಯ ಆನಂದವನ್ನು ನೀಡುವುದೋ, ಯಾವ ಅನುಭವವನ್ನು “Aesthetic pleasure” ಎಂದು ಕರೆಯತ್ತೇವೆಯೋ, ಆ ಅನುಭವವನ್ನು ಸೂಚಿಸಲು ಆಧುನಿಕ ಸೌಂದರ‍್ಯ ಮೀಮಾಂಸಕರು Beauty ಎಂಬ ಪದವನ್ನು ಬಳಸುತ್ತಿದ್ದಾರೆ. ಆದರೆ ಆ ಪದದಿಂದ ಅಂಥ ಯಾವ ಗುಣವೂ ಸೂಚಿತವಾಗುವುದಿಲ್ಲ …. Beauty ಮತ್ತು Beautiful ಎಂಬ ಪದಗಳಿಗೆ ವಾಸ್ತವವಾಗಿ ಕಲೆಗೆ ಸಂಬಂಧಿಸಿದ ಯಾವ ಅರ್ಥವೂ ಇಲ್ಲ. ಸುಂದರವಾದ (Beautiful)ಪ್ರತಿಮೆ ಎಂದಾಗ, ಪ್ರಶಂಸೆಗೆ ಮೆಚ್ಚುಗೆಗೆ ಅರ್ಹವಾದುದು, ಅದ್ಭುತವಾದುದು ಎಂದು ಮಾತ್ರ ಅರ್ಥವಾಗುತ್ತದೆಯೇ ಹೊರತು ಬೇರೆ ಅಲ್ಲ… ನಾವು ವಸ್ತುಗಳನ್ನು ಕುರಿತು Beautiful ಎಂದಾಗ ಅನೇಕವೇಳೆ ಆ ವಸ್ತು ನಮ್ಮ ಇಂದ್ರಿಯಾನುಭವಕ್ಕೆ ಸಂದ ಪರಿಯನ್ನೋ, ಅದರ ರಚನಾನೈಪುಣ್ಯವನ್ನೋ, ಯಾವುದೋ ಒಂದು ಉದ್ದೇಶಕ್ಕೆ ನೆರವಾಗುವ ಗುಣವನ್ನೋ ಕುರಿತು ಆ ಮಾತನ್ನು ಬಳಸಿರುತ್ತೇವೆ… ಆದರೆ ಆಧುನಿಕ ಸೌಂದರ‍್ಯ ಮೀಮಾಂಸಕರು ಸೌಂದರ‍್ಯಾನುಭವವನ್ನು ನಿರ್ದೇಶಿಸಲು Beauty ಎಂಬ ಪದವನ್ನು ಒಪ್ಪಿಕೊಂಡು ಈ ಪದ ಸೌಂದರ‍್ಯಾನುಭವದ ಮತ್ತು ಸೌಂದರ‍್ಯಾನುಭವವಲ್ಲದ ಎರಡು ಸಂದರ್ಭಗಳಲ್ಲಿಯೂ ಹಲವು ವೇಳೆ ತಪ್ಪಾಗಿಯೂ, ಹಲವು ವೇಳೆ ಖಚಿತವಾಗಿಯೂ ಮತ್ತೆ ಹಲವು ವೇಳೆ ಅನಿಶ್ಚಯಾತ್ಮಕವಾಗಿಯೂ ಬಳಸಲ್ಪಡುತ್ತದೆ[19] ಎನ್ನುತ್ತಾರೆ. ಆದರೆ ಇದಾವುದನ್ನೂ ‘ಅಸ್ತು’ ಎನ್ನಲಾಗುವುದಿಲ್ಲ. Beauty ಎಂಬ ಪದ ಯಾವಾಗ ಎಲ್ಲೇ ಬಳಸಲ್ಪಟ್ಟಿದರೂ, ನಾವು ವಸ್ತುವಿನಲ್ಲಿ ಮೆಚ್ಚುವ, ಪ್ರೀತಿಸುವ, ಬಯಸುವ ಒಂದು ಗುಣವಿಶೇಷವೆಂದೇ ಅರ್ಥವಾಗುತ್ತದೆ.

ಪಾಶ್ಚಾತ್ಯ ಸೌಂದರ‍್ಯ ಮೀಮಾಂಸೆಯಲ್ಲಿ Beauty ಎಂಬ ಪದದ ಪ್ರಯೋಗದ ಔಚಿತ್ಯವನ್ನು ಕುರಿತ ಚರ್ಚೆಯ ಸ್ವರೂಪ ಇದು ! ಆದರೆ Beauty ಎಂಬ ಪದ ಸೌಂದರ‍್ಯಾನುಭವಸೂಚಕವಾಗಿ ಬಳಸಲ್ಪಟ್ಟಾಗಲೇ ಅದು ಅರ್ಥಪೂರ್ಣವಾಗುತ್ತದೆ. ಆದರೆ ಜನಬಳಕೆಯಲ್ಲಿ ಸರ್ವಸಾಧಾರಣವಾಗಿ ಈ ಪದವನ್ನು ಇಂಥಲ್ಲಿಯೇ ನೀವು ಬಳಸಬೇಕು ಎಂದು ಹೇಳುವುದಾದರೂ ಹೇಗೆ ಸಾಧ್ಯ? ಒಬ್ಬ ಒಂದು ಮರವನ್ನು ‘ಸುಂದರವಾಗಿದೆ’ (Beautiful) ಎಂದು ಹೇಳಿದಾಗ, ಅದು ರಮ್ಯವಾಗಿದೆ, ಮನೋಹರವಾಗಿದೆ ಎಂದು ಹೇಳುವುದರ ಬದಲು ‘ಸುಂದರವಾಗಿದೆ’ ಎಂಬ ಮಾತನ್ನೇ ಅಲ್ಲಿ ಬಳಸಿದರೂ, ಸುಂದರ ಎಂಬ ವಿಶಾಲಾರ್ಥದ ಪದವನ್ನೇ ಆಗ ವಿಶಿಷ್ಟಾರ್ಥದಲ್ಲಿ ಬಳಸಿದಂತಾಗುತ್ತದೆ. ಸೌಂದರ‍್ಯಾನುಭವವನ್ನು ಪಡೆದವನು ‘ರಮ್ಯವಾಗಿದೆ’, ‘ಮನೋಹರವಾಗಿದೆ’ ಎಂಬ ಪರ‍್ಯಾಯಪದಗಳನ್ನು ಬಳಸಿದರೂ ಅದು ಅವನ ಸೌಂದರ‍್ಯಾನುಭವವನ್ನು ಹೆಸರಿಸುವ ರೀತಿಯಾಗುತ್ತದೆ. “ಆದುದರಿಂದ ಸೌಂದರ‍್ಯಾನುಭವಸೂಚಕವಾದ `Beauty’ ಎಂಬ ಪದವನ್ನು Grace (ಲಾವಣ್ಯ), Loveliness (ಮನೋಹರತ್ವ), Prettiness (ಲಾಲಿತ್ಯ), Sublimity (ಭವ್ಯತೆ) ಇತ್ಯಾದಿ ಪದಗಳೊಂದಿಗೆ ಸಾಮಾನ್ಯವಾಗಿ ಬಳಸಿದರೂ, ಸೌಂದರ‍್ಯದ ವಿವರಣಾತ್ಮಕವಾದ ಈ ಪದಗಳಿಗಿರುವ ಸೂಕ್ಷ್ಮವಾದ ವ್ಯತ್ಯಾಸವನ್ನು ನಾವು ವಿಶೇಷತೆಯನ್ನು ಹೆಸರಿಸಿದಂತಾಯಿತೆಂಬುದು ನಿಸ್ಸಂದೇಹವಾದ ವಿಚಾರ. `Beauty’ ಎನ್ನುವದರ ಬದಲು ಬೇರೆಯ ವಿವರಣಾತ್ಮಕವಾದ ಪದಗಳನ್ನು ಕಲಾಸೌಂದರ‍್ಯವನ್ನು ಕುರಿತ ಅರ್ಥದಲ್ಲಿ ಬಳಸಿದರೂ, ಅಲ್ಲಿ ವಿಶಿಷ್ಟವಾದ ಸೌಂದರ‍್ಯಾನುಭವವಾಯಿತೆಂಬುದನ್ನೇ ಅವು ಸೂಚಿಸುತ್ತವೆ’’[20] ಎನ್ನುವ ವಿಚಾರ ಗಮನಾರ್ಹವಾದುದು.

“ಈ ಎಲ್ಲ ಸಮಸ್ಯೆ ಉದ್ಭವವಾಗುವುದು ಸೌಂದರ‍್ಯಾನುಭವವನ್ನು ಸೂಚಿಸಲು ನಾವು ಬಳಸುವ Beauty ಎಂಬ ಪದ ಸಂಪೂರ್ಣ ನಿರ್ವಚನೀಯವಲ್ಲ ಎಂಬುದನ್ನು ತಿಳಿಯದಿದ್ದಾಗ ಮಾತ್ರ; Beauty ಎಂಬ ಪದದ ಬದಲು, ಆ ಅನುಭವವನ್ನು ಸೂಚಿಸಲು ಸಮರ್ಪಕವಾದ ಮತ್ತು ಸಮರ್ಥವಾದ ಬೇರೆಯದೊಂದು ಪದವಿಲ್ಲ ಎನ್ನುವುದನ್ನು ಗಮನಿಸದಿದ್ದಾಗ ಮಾತ್ರ”[21] ಎನ್ನುವ ತೀರ್ಮಾನಕ್ಕೆ ಪಾಶ್ಚಾತ್ಯ ವಿದ್ವಾಂಸರು ಬಂದಿದ್ದಾರೆ.

ಈ ಎಲ್ಲ ಚರ್ಚೆ ಏಳುವುದು, ಸುಶಿಕ್ಷಿತನಾದ ರಸಿಕನ, ಉತ್ತಮ ಕಲಾವಿದನ ಅನುಭವವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ, ಯಾವ ಎಲ್ಲರ ಅನುಭವದ ಸಾಮಾನ್ಯದೃಷ್ಟಿಯನ್ನೂ ಪ್ರಮಾಣವಾಗಿರಿಸಿಕೊಂಡಾಗ ಮಾತ್ರ. ಏಕೆಂದರೆ ನಿಜವಾದ ಕಲೆಗಾರ ತನಗಾದ ಅನುಭವವನ್ನು ಲೋಕಭೂಮಿಕೆಯಲ್ಲಾಗಲೀ, ಕಲಾ ಭೂಮಿಕೆಯಲ್ಲಾಗಲೀ  ಯಾವ ಪದವನ್ನು ಬಳಸಿ ಹೇಳಿದರೂ ಅದು ಸೌಂದರ‍್ಯಾನುಭವವನ್ನೇ ಸೂಚಿಸುತ್ತದೆ. ಸಾಮಾನ್ಯನಾದವನು ಲೋಕವಸ್ತುವನ್ನು ಕುರಿತು ತನಗೆ ಸೌಂದರ‍್ಯಾನುಭವವಾಗದಿದ್ದರೂ ‘ಸುಂದರವಾಗಿದೆ’ ಎಂಬ ಪದವನ್ನು ಬಳಸಿದ ಮಾತ್ರಕ್ಕೆ, ಅದು ಅವನಿಗೆ ತತ್ಕಾಲದಲ್ಲಿ ಹೊಳೆದ ಭಾವವನ್ನು ವ್ಯಕ್ತಪಡಿಸಲು ಉಪಯೋಗಿಸಿದ ಒಂದು ಪದವಾಯಿತೆಂದೂ, ಅಥವಾ ಯಾವ ಆಹ್ಲಾದಕಾರಿಯಾದ ವಸ್ತುವನ್ನೂ ‘ಸುಂದರ’ ಎಂದು ಕರೆಯುವುದು ಅವನಿಗೆ ಅಭ್ಯಾಸವಾಗಿದೆ ಎಂದೂ ಭಾವಿಸಬಹುದೇ ಹೊರತು ಅವನಿಗೆ ‘ಸೌಂದರ‍್ಯಾನುಭವ’ವಾಯಿತೆಂಬ ಅರ್ಥವನ್ನು ಅವನು ಬಳಸಿದ ‘ಸುಂದರ’ ಎಂಬ ಪದ ಸೂಚಿಸುವುದಿಲ್ಲ ಎಂದು ತಿಳಿಯಬೇಕು.

ನಮ್ಮಲ್ಲಿ ‘ಸುಂದರ’ ಎಂಬ ಪದವನ್ನು ಕುರಿತು ಆ ಪದ ಹೇಗೆ ವಿವರಣೆಗೆ ದೂರವಾದುದು ಎಂಬುದನ್ನು ಸೂಚಿಸಿರುವರೋ, ಅಂತೆಯೇ ಪಾಶ್ಚಾತ್ಯರಲ್ಲಿಯೂ Beauty ಎನ್ನುವ ಪದವನ್ನು ಎಲ್ಲ ಅನುಭವಗಳಲ್ಲಿಯೂ ಬಳಸುವುದರಿಂದ ಉಂಟಾದ ಗೊಂದಲವನ್ನು ಪರಿಶೀಲಿಸಿ, ಕಡೆಗೆ ಅದು ಸೂತ್ರಾತೀತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಪಾಶ್ಚಾತ್ಯರಲ್ಲಿ ಸೌಂದರ‍್ಯಾನುಭವವನ್ನು ಸೂಚಿಸಲು Beauty  ಎಂಬ ಪದದ ಬದಲು ಸಮರ್ಥವಾದ ಮತ್ತು ಸಮರ್ಪಕವಾದ ಬೇರೊಂದು ಪದವಿಲ್ಲದಿದ್ದುದರಿಂದ ಅವರಲ್ಲಿ ಇಷ್ಟೆಲ್ಲಾ ಚರ್ಚೆ ನಡೆಯಬೇಕಾಯಿತು. ನಮ್ಮಲ್ಲಿ ಕಲಾ ಅನುಭವವನ್ನು ವಿಶಿಷ್ಟವಾಗಿ ಹೇಳಲು ‘ರಸಾನುಭವ’ವೆಂಬ ಪದವಿರುವುದರಿಂದ, ‘ಸೌಂದರ‍್ಯ’ ‘ಸೌಂದರ್ಯಾನುಭವ’ ಎಂಬ ಪದಗಳನ್ನು ಬಳಸಬೇಕೇ, ಬೇಡವೇ ಎನ್ನುವಬಗ್ಗೆ ಯಾವ ಚರ್ಚೆಯೂ ನಡೆದಂತೆ ತೋರುವುದಿಲ್ಲ.


[1] A.C. Bose : The Call of the Vedas : p. 162.

[2] Annals of the Bhandarkar Oriental Research Institute : Vo. XXXII – 1951. ‘The Rigvedic Philosophy of the Beautiful’ by P.S. Shastry : P. 88-89.

ಪ್ಸರಸ್ ಎನ್ನುವುದು ಆಕೃತಿಗಳಲ್ಲಿ ವ್ಯಕ್ತವಾಗುವ ಸೌಂದರ‍್ಯವನ್ನು ಸೂಚಿಸುತ್ತದೆ. ಅಪ್ಸರಾ ಎಂದರೆ ಇದಕ್ಕೆ ವಿರುದ್ಧವಾದ ಅರ್ಥವನ್ನು ಕೊಡುವುದೆಂದಲ್ಲ; ಅಪ್ಸರಾ ಎಂದರೆ ವಸ್ತುನಿಷ್ಠ ಸೌಂದರ‍್ಯದ ಮೂರ್ತಿ ಎಂದೂ,ಪ್ಸರಸ್ ಎಂದರೆ ಲೀಲೆಯಲ್ಲಿ ವ್ಯಕ್ತವಾಗುವ ನಿತ್ಯ ಸೌಂದರ‍್ಯವೆಂದೂ ಅರ್ಥವಾಗುತ್ತದೆ. ‘ಪೆಶಸ್’ ಎಂದರೂ ವಸ್ತು ನಿಷ್ಠ ಸೌಂದರ‍್ಯ. ಅದು ಸೌಂದರ‍್ಯ ಪ್ರಕಾರವಾದ ಅಲಂಕಾರವೆಂದೂ ಕರೆದಿದ್ದಾರೆ. ‘ಅಪ್ಸಸ್’ ಎಂದರೂ ವಸ್ತುನಿಷ್ಠ ಸೌಂದರ‍್ಯ. ಅದು ಸೌಂದರ‍್ಯ ಪ್ರಕಾರವಾದ ಅಲಂಕಾರವೆಂದೂ ಕರೆದಿದ್ದಾರೆ. ‘ಅಪ್ಸಸ್’ ಎಂದರೆ ಆಕಾರ, ರೂಪ ಎಂದು ಅರ್ಥವಾಗುತ್ತದೆ. ಸಾಯಣರೂ ಇದಕ್ಕೆ ‘ರೂಪ’ ಎಂದು ಅರ್ಥ ಹೇಳುತ್ತಾರೆ. ಉಷೆಯ ವರ್ಣನೆಯಲ್ಲಿ ‘ಉಷಾಹಸ್ರೇವ ನಿರಿಣೀತೇ ಅಪ್ಸಃ’ (೧.೧೨೪.೭) ಸಿಂಗರಗೊಂಡ ಪ್ರಣಯಿನಿಯಂತೆ ಉಷೆ ತನ್ನ ಚೆಲುವನ್ನು (ಅಪ್ಸಃ) ತೆರೆದಳು, ಎನ್ನುವ ಮಾತಿನಲ್ಲಿ ಇದನ್ನು ಕಾಣಬಹುದು. ಮತ್ತೊಂದೆಡೆ, “ಏಷಾ ಪ್ರತೀಚೀದುಹಿತಾ ದಿವೋನ್ಮನ್ | ಯೂಷೇವ ಭದ್ರಾನಿರಿಣೀತೇ ಅಪ್ಸಃ” (೫.೮೦.೬) ಈ ಅಮರ್ತ್ಯಕನ್ಯೆಯು ಮರ್ತ್ಯರೆದುರಿಗೆ ಭದ್ರೆಯಂತೆ ತನ್ನ ಚೆಲುವಿನ (ಅಪ್ಸಃ) ತೆರೆಯನ್ನು ಓಸರಿಸಿ ನಿಂತಿದ್ದಾಳೆ ಎನ್ನುವಲ್ಲಿ ಅಪ್ಸಃ ಎನ್ನುವುದು ಮೈಗೊಂಡ ಸೌಂದರ‍್ಯ ಎಂದು ಅರ್ಥವಾಗುತ್ತದೆ. ‘ದೃಶ್’ ಎಂದರೆ ನಯನ ಮನೋಹರ. ‘ಶ್ರೀ’ ಸೌಂದರ‍್ಯವೆಂಬ ಅರ್ಥದಲ್ಲಿ ವಿಶೇಷವಾಗಿ ಬಳಕೆಯಾಗಿದೆ. ‘ವಪುಸ್’, ‘ಯಕ್ಷ’, ಅದ್ಭುತ’, ಇವು ಭವ್ಯಸೌಂದರ‍್ಯವನ್ನು ಸೂಚಿಸುತ್ತವೆ. ‘ವಲ್ಗು’ ಎಂದರೆ ಚಟುಲ ಚಂಚಲ ತರಂಗಗತಿ. ಇದು ಸೌಂದರ‍್ಯದ ಮುಖ್ಯ ಲಕ್ಷಣವನ್ನು ಸೂಚಿಸುತ್ತದೆ. ಶ್ರೇಯಸ್, ಭದ್ರ, ಶುಭ ಕಲ್ಯಾಣ ಇವು ಬಹುಮಟ್ಟಿಗೆ ಸೌಂದರ‍್ಯದ ಪರಿಣಾಮವನ್ನು ಸೂಚಿಸುತ್ತವೆ. ‘ಭಾಂಡ್’ ಎಂದರೆ ಪ್ರಕಾಶಿಸುವುದು. ಸೌಂದರ‍್ಯ ನಿತ್ಯ ಪ್ರಕಾಶನ ಶೀಲವಾದುದು, ‘ಚಾರು’ ಮತ್ತು ‘ಪ್ರಿಯ’ ಸುಂದರ ವಸ್ತುವಿನಿಂದಾಗುವ ಮನೋಲ್ಲಾಸವನ್ನು ಸೂಚಿಸುತ್ತವೆ. ಹವಿಸ್ಸು ದೇವತೆಗಳಿಗೆ ಚಾರು ಮತ್ತು ಪ್ರಿಯತಮ (೬.೮.೧) ಎಂದು ಹೇಳಲಾಗಿದೆ. ಚಿತ್ರ, ದರ್ಶತಾ, ರೂಪ ಇವು ದೃಗ್ಗೋಚರ ಸೌಂದರ್ಯವನ್ನು ಸೂಚಿಸುತ್ತವೆ. ‘ರೂಪ’ವೆಂದರೆ ಐಶ್ವರ‍್ಯವೆಂದೂ ಅರ್ಥವಾಗುತ್ತದೆ. ‘ವಾಮ’ ಎಂದರೆ ಸುಂದರ ವಸ್ತು, ‘ರನ್ವ’ ಸೌಂದರ‍್ಯಾನುಭವದ ಆನಂದ ಸೂಚಕ. ‘ಸ್ವಾದು’ ಸೌಂದರ‍್ಯದ ಗುಣವಾದ ಮಾಧುರ‍್ಯವನ್ನು ಸೂಚಿಸುತ್ತದೆ.

[3] A.C. Bose : Call of the Vedas : p. 176.

[4] Rupam : October, 1927: Words for Beautiful and Beauty and Vedic Sense of Beautiful : by Oldenburg.

[5] A.C. Sastry : Studies in Sanskrit Aesthetics; p. 129.

[6] ಅಲ್ಲೆ ಪು. ೧೩೦.

[7] Robert Ceasar Childens : Dictionary of Pali Language: p. 489.

[8] Monier Williams: Sanskrit Dictionary: p. 1253.

[9] Rajawade : Words in Rigveda : p. 257.

[10] ಸುಂದರ ಎಂಬ ಪದವು ‘ಉನ್ದ’ ಎಂಬ ಧಾತುವಿನಿಂದ ಬಂದದ್ದು. (ಸು+ಉನ್ದೀ=ಕ್ಲೇದನೆ+ಅರಃ) ‘ಉನ್ದ’ ಎಂದರೆ ಆರ್ದ್ರಮಾಡುವುದು; ಒದ್ದೆ ಮಾಡುವುದು; ತೋಯಿಸುವುದು. ‘ಯಾ ಪೃಥಿವೀಂ ಪಯಸೋದಂತಿ’; ಯಾವುದು ಮನಸ್ಸನ್ನು ಚೆನ್ನಾಗಿ ತೋಯಿಸಬಲ್ಲದೋ, ‘ಸರಸ’ ಮಾಡಬಲ್ಲದೋ ಅದು ಸುಂದರ- ಜೀವನ ಸೌಂದರ‍್ಯ ಮತ್ತು ಸಾಹಿತ್ಯ ಡಿ.ವಿ.ಜಿ. ಪು. ೨೮

[11] “ಸೃಷ್ಟಂ ನಂದಯತಿ ಇತಿ ಸುಂದರಂ’ ಎನ್ನುತ್ತಾರೆ ನೈರುಕ್ತಕಾರರು.

[12] Amarakosha III. 52 and the commentary on it by Bhanu Dixita
ಅಮರಸಿಂಹನ ಅಮರಕೋಶ : ಟೀಕೆ. ಪು. ೧೭೩.

[13] ‘ಇದು ಕೇವಲ ಸೌಂದರ‍್ಯವನ್ನು ಕುರಿತ ಮಾತು : ಕಲಾವಿದನ ದೃಷ್ಟಿಯಿಂದ ರಸಾನುಭವಕಾರಿಯಾದುದೆಲ್ಲ ಸುಂದರ. ಸೌಂದರ್ಯ ಎಂದರೆ ರಸಾನುಭವದ ವಸ್ತು.

[14] ಸೌಂದರ‍್ಯ ಎನ್ನುವ ಸಾಮಾನ್ಯ ಪದಕ್ಕೆ ಕಾವ್ಯಮೀಮಾಂಸೆಯ ಪರಿಭಾಷೆ ‘ಅಲಂಕಾರ’ ಎನ್ನುವುದು. ಈ ವಿಚಾರವನ್ನು ‘ಆಲಂಕಾರಿಕರ ದೃಷ್ಟಿಯಲ್ಲಿ ಸೌಂದರ‍್ಯ’ ಎಂಬ ಅಧ್ಯಾಯದಲ್ಲಿ ಚರ್ಚಿಸಿದೆ.

[15] The Short Oxford English Dictionary, on Historical Principles, Vol. II: p.160.

[16] Osborne: The Theory of Beauty: p.15.

[17] Rupert Brook : John Webster and the Elizabethan Drama : p. 1 to 7.

[18] Clive Bell : Art: p. 14.

[19] Colling Wood : Principles of Art: p. 38 to 41.

[20] H. Osborne : The Theory of Beauty : p. 13.

[21] I.A. Richards and C.K. Ogden: The Meaning of Meaning: Chapter VII p. 147.