ದುರ್ಗಾ ರಾಗದ ಒಂದು ಚೀಜಿನಲ್ಲಿ ಇಂತಹುದೇ “ಕಾರೆಂಬೋ ಕತ್ತಲಿ, ಭೋರೆಂದೋ ಮಳೆಮೋಡ”ದ ಸನ್ನಿವೇಶ ಚಿತ್ರಿತವಾಗಿದೆ. ಆದರೆ ಅಂತಹುದರಲ್ಲಿ ಹೊರಗೆ ಹೊರಡಲಾರದೆ ಹೆದರಿ ನಿಂತವಳು ಒಬ್ಬಳು ನಾಯಿಕೆ, ಕೃಷ್ಣಾಭಿಸಾರಿಕೆ.

ರೈನಾ ಅಂಧೇರಿ ಕಾರೀ ಬಿಜರೀ ಚಮಕೇ
ಕೈಸೇ ಜಾವೂಂ ಪಿಯಯಾ ಪಾಸ ||
ಸಖೀ ಮೋರೀ ರೂ ಝಾಮ…

ಅಭಿಸಾರಿಕೆಯವಳಿಗೆ ಪ್ರಿಯನನ್ನು ಕಾಣಲು ಹೋಗಬೇಕಾಗಿದೆ. ಆದರೆ-ರೈನಾ ಅಂಧೇರೀ-ರಾತ್ರಿ, ದಟ್ಟವಾದ ಕತ್ತಲಿನ ರಾತ್ರಿ. ಕಪ್ಪುಮೋಡದೊಳಗಿಂದ ಕೋಲ್ಮಿಂಚು- ಬಿಜರೀ ಚಮಕೇ. ಇಂತಹ ಭೋರೆಂಭೋ ಮಳೆಮೋಡ ಕವಿದಿರುವಾಗ ಮನೆಯಿಂದ ಕದ್ದು ಹೊರಗೆ ಹೊರಡಲಾರದೆ ಹೊಸ್ತಿಲ ಮೇಲೆಯೇ ನಿಂತಿದ್ದಾಳೆ ಈ ವಿರಹಿಣಿ.

ಹುಡುಗ ಹುಡುಗೆಯರ ಪ್ರಥಮ ಮಿಲನದ ರಸಮಯ ಸನ್ನಿವೇಶಗಳನ್ನೂ ಘಟನೆಗಳನ್ನೂ ಚಿತ್ರಿಸುವ ಜಾನಪದ ತ್ರಿಪದಿಗಳು ದೊರೆಯುತ್ತವೆ. ಅದೇ ಚಿತ್ರಗಳನ್ನು ಪ್ರತಿಬಿಂಬಿಸುವ ಹಿಂದುಸ್ತಾನೀ ಖಯಾಲ ಚೀಜಗಳೂ ಠುಮರಿಗಳೂ ಸಿಗುತ್ತವೆ :

ಕೂಡಿದ ಕುಡಿಹುಬ್ಬು ತೀಡೀದ ಬೈತಲೆ
ಕಾಡೀಗಿ ಕಣ್ಣು ಮೀನ್ಹಂಗೆ ಗೆಣಿಕಾತಿ
ಹೊಲದ ಹಾದೀಲಿ ಕೂಡೋಳೇ ||

ಬಹುಶಃ ಇವನು ಗಳೇ ಹೂಡಿಕೊಂಡು ಹೊಲ ಉಳಲು ಹೋಗುವ ದಾರಿಯೂ ಅವಳು ನೀರು ತರಲು ಬಾವಿಗೋ ಕೆರೆಗೊ ಇಲ್ಲವೆ ನದಿಯ ಪಾಣೀಘಟ್ಟಕ್ಕೆ (ಹಿಂದೀಯಲ್ಲಿ ಪನಘಟ) ಹೋಗುವ ದಾರಿಯೂ ಒಂದೇ ಆಗಿರಬೇಕು. ಕಣ್ಣು ಕಣ್ಣು ಕೂಡಿ ಮೊಗದಲ್ಲಿ ನಗೆ ಮೂಡಿ ಹೃದಯಗಳ ಬೆಸುಗೆಯಾಗಿರಬೇಕು. ನಿತ್ಯ ಹೊಲದ ಹಾದಿಯಲ್ಲಿ ಕೂಡುವ ಅವಳೇ ಮುಂದೆ ಅವನ “ಗೆಣಿಕಾತಿ”ಯಾಗುತ್ತಾಳೆ. ಗೆಳೆಯ ಎಂದರೆ ಮಿಂಡ, ಉಪಪತಿ, ಗೆಣೆಕಾತಿ ಎಂಬುದು ಅದರ ಸ್ತ್ರೀಲಿಂಗ ರೂಪ. ಕೇವಲ ಜಾನಪದ ಭಾಷೆಯಲ್ಲಿ ಬಳಕೆಯಲ್ಲಿರುವ ಶಬ್ದ.

ಹೊಲದ ಹಾದಿಯಲ್ಲಿ ಹೋಗುತ್ತ ಬರುತ್ತ ಅವನಿಗೆ ಮನವನ್ನು ತೆತ್ತ ಪ್ರೇಮಿಕೆಯೊಬ್ಬಳು ತನ್ನ ಅನುಭವವನ್ನು ಅಭಿಜಾತ ದೇಶೀಸಂಗೀತದ “ದೇಶೀ” ಎಂಬ ರಾಗದ ಖಯಾಲೊಂದರಲ್ಲಿ ಹೀಗೆ ವಿವರಿಸಿದ್ದಾಳೆ :

ಮೋರಾ ಮನ ಹರಲೀನೋ
ಏ ಬಟೋಯೀಯಾ ಆತ ಜಾತ |
ಫರಕೀ ಮೋರ ಸಬ್ ಬಿಸರಗಯೀ ಹೈಂ
ನಾ ಜಾನೂ ಕಹಾ ಕೀನೋರೇ ||

ಬಟೋಯ-ಬಟ-ಎಂದರೆ ಬಟ್ಟೆ. ಉಡುವ ಬಟ್ಟೆಯಲ್ಲ. ನಡೆವ ಬಟ್ಟೆ ; ಹಾದಿ. ಏ ಬಟೋಯೀಯಾ ಆತ ಜಾತ. ಈ ಬಟ್ಟೆಯಿಂದ ಬರುವಾಗ ಹೋಗುವಾಗ ದಿನಗಳೆದಂತೆ ನನ್ನ ಮನವನ್ನು ಅಪಹರಿಸಿದ- ‘ಮೋರಾ ಮನ ಹರಲೀನೋ’ ಎನ್ನುತ್ತಾಳೆ.

ಜಾನಪದ ಕವಿ ಬಣ್ಣಿಸಿದ “ಕಾಡೀಗಿ ಕಣ್ಣು ಮೀನಹಂಗೆ ಹೊಳೆವುದನ್ನು” ಅಭಿಜಾತ ಸಂಗೀತಗಾರನೂ ಬಣ್ಣಿಸಿದ್ದಾನೆ :

(ಖಯಾಲ-ಗೌಡಸಾರಂಗ : ಅಡಚ್ ತಾಲ)
ಕಜರಾರೇ ಗೋರೀ ತೋರೇ ನೈನಾ ಸಲೋನೆ
ಮದಭರೇ ಪಿಯಾ ಪ್ಯಾರೇನೋ ಏರೀ ಅಂಜನಬಿನಾ |
ಚಂಚಲ ಚಪಲ ಚಂದ್ರ ಯಾಂ ಚಮಕತೆ
ಖಂಜೀರ ಮೀನ ಮೃಗವಾ ||

ಕಾಡಿಗೆಯನ್ನು ಹಚ್ಚಿರದಿದ್ದರೂ (ಅಂಜನ ಬಿನಾ) ಇವಳ ಕಣ್ಣು ಕಜ್ಜಲ (ಕಜರಾ) ಹಚ್ಚಿದಂತೆ ಕಪ್ಪಾಗಿವೆ. ಅವು ಹೊಳೆಯುತ್ತಿವೆ. ಕೇವಲ ಮೀನಹಂಗೆ ಅಲ್ಲ ಚಂದ್ರನಂತೆ, ಅಲಗಿನಂತೆ (ಖಂಜರ) ಅಲ್ಲದೆ ಚಿಗರೆಯ ಕಣ್ಣಿನಂತೆ (ಮೃಗವಾ).

ಇಂತಹ ಬಣ್ಣನೆಯಿಂದ ಅವರಿಬ್ಬರ ಸ್ನೇಹ ಇನ್ನಷ್ಟು ಬಲಗೊಳ್ಳುತ್ತದೆ. ಸಂಕೇತಸ್ಥಾನದಲ್ಲಿ ನಿತ್ಯ ಭೆಟ್ಟಿಯಾಗತೊಡಗುತ್ತಾರೆ. ಆ ಮುನ್ನ ಒಬ್ಬರಿಗೊಬ್ಬರಿಗೆ ನಿರಾಸೆ ಮಾಡುವುದಿಲ್ಲವೆಂಬುದಾಗಿ ಆಣೆ ಭಾಷೆಗಳನ್ನು ಮಾಡುತ್ತಾರೆ. ಅವಳೆನ್ನುತ್ತಾಳೆ :

ಬತ್ತೀನಿ ಜಾಣಾ ಬರುವ ದಾರಿಯ ಕಾಯೋ
ಬತ್ತೀದ ಬಾಯಿಗೆಳೆನೀರು | ನಿಂಬೆಹಣ್ಣು
ತತ್ತೀನಿ ಜಾಣಾ ತಡಮಾಡು ||

ಈ ಪದ್ಯ ಹಳೆಯ ಕಾಲದ ದೇವದಾಸಿಯರ ಹಾಡೊಂದನ್ನು ನೆನಪಿಗೆ ತರುತ್ತದೆ :

ಬೆಳಗಾಯಿತು ಬಿಡೊ ಎನ್ನ
ನಾಳೆ ತಡೆಯದೆ ಬರುವೆನು ಕೇಳೋ ಮೋಹನ್ನ ||

ಇತ್ತ ಇನ್ನೊಂದು ಜೊತೆ. ಈ ಜೋಡಿಯ ಪ್ರಣಯ ಅತ್ಯಂತ ರೊಮ್ಯಾಂಟಿಕ್. ಅವನದು ಈ ಊರು, ಇವಳದು ಆ ಊರು. ನಡುವೆ ನದಿ. ನಿತ್ಯವೂ ನದಿಯನ್ನು ಈಜಿಕೊಂಡು ಇವನಾಗಲಿ, ಅವಳಾಗಲಿ- ಆಚೆಯ ದಡವನ್ನು ಸೇರಿ ಸಂಕೇತ ಸ್ಥಳದಲ್ಲಿ ಭೆಟ್ಟಿಯಾಗುತ್ತಿದ್ದಾರೆ. ಸಿಂಧ ಪಂಜಾಬಗಳ ಲೋಕಕತೆಗಳಲ್ಲಿ ಸಸುಯಿಪುನ್ಹೂ ಮುಂತಾದವುಗಳಲ್ಲಿ ಇಂತಹ ಸಾಹಸ ಚಿತ್ರಿತವಾಗಿದೆ. ನದಿಗೆ ನೀರು ತರಲು ಹೋದ ನಾಯಿಕೆ ಬರಿಗೊಡವನ್ನು ನೀರಲ್ಲಿ ಡುಬ್ಬುಹಾಕಿ ಅದನ್ನೇ ಈಜುಗುಂಬಳಕಾಯಂತೆ ಬಳಸಿ ನದಿಯನ್ನು ದಾಟುತ್ತಾಳೆ. ನಮ್ಮ ನಾಡಿನ ಜಾನಪದ ಹಾಡಿನಲ್ಲಿ ಅಂತಹ ಸಾಹಸವನ್ನು ಗಂಡು ಮಾಡುತ್ತಾನೆ. ಆದರೂ ಅವನು ಅಂದು ರಾತ್ರಿ ತನ್ನನ್ನು ಕಾಣಲು ಬಂದೇ ಬರುವನೆಂಬ ನಂಬುಗೆಯಿಲ್ಲ. ಎಂದೇ ಅವಳೆನ್ನುತ್ತಾಳೆ :

ಆಚೆ ದಡದಲ್ಲಿ ನೀನು ಈಚೆ ದಡದಲಿ ನಾನು
ಭಾಷೆ ತಾರಣ್ಣಾ ಬಲಗೈಲಿ | ಎಲೆ ಹೆಣ್ಣೆ
ಭಾಷೆ ತಪ್ಪೋಂತಾ ಮಗನಲ್ಲೆ ||

ದೇಸ ರಾಗದ ಠುಮರೀಯೊಂದರಲ್ಲಿ ಇಂತಹುದೇ ಒಂದು ಸನ್ನಿವೇಶ ಮೂಡಿಬಂದಿದೆ. ಇಲ್ಲಿ ಹೊಳೆ ದಾಟುವ ಸಾಹಸಿ ಹೆಣ್ಣು. ಅವಳ ಧೈರ್ಯವೇ ಧೈರ್ಯ. ಮಧ್ಯರಾತ್ರಿಯಲ್ಲಿ ನದೀ ದಡಕ್ಕೆ ಬಂದಿದ್ದಾಳೆ. ಆದರೆ ಎಲ್ಲಿಯೋ ಮೇಲ್ಗಡೆಯಲ್ಲಿ ಮಳೆಯಾಗಿ ಪೂರ ಬಂದಿದೆ. ತುಂಬಿ ಹರಿಯುವ ಹೊಳೆಯನ್ನು ಕಂಡು ಕಂಬನಿದುಂಬಿ ಅವಳು ಹಾಡುತ್ತಾಳೆ :

ಮೋರೇ ಸಂಯಾ ಬುಲಾಯೇ ಆಧೀ ರಾತ
ನದಿಯಾ ಬೈರೀ ಭಯೀ ||

ನನ್ನನ್ನು ನಲ್ಲ ಅರ್ಧರಾತ್ರಿಗೆ ಬರ ಹೇಳಿದ್ದ. ಆದರೆ ನದಿಯು ನನ್ನ ವೈರಿಯಾಯಿತಯ್ಯೋ :

ಬೇರೊಬ್ಬ ರಸಿಕ “ಪರಕೀಯಾ” ಅಥವಾ “ಅನ್ಯಾ” ನಾಯಿಕೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಸಂಕೇತಸ್ಥಳದಲ್ಲಿ ಅವಳಿಗಾಗಿ ಕಾಯುತ್ತಾನೆ. ಆದರೆ ಅವಳು ಬರುವುದಿಲ್ಲ. ಅವಳದು ತುಂಬಿದ ಮನೆ. ಗಂಡ, ಭಾವ, ಮೈದುನರು, ಅವರ ಹೆಂಡಿರು. ಸಾಲದುದಕ್ಕೆ ಅತ್ತೆನಾದಿನಿಯರು. ಇವರೆಲ್ಲರ ಕಣ್ಣು ತಪ್ಪಿಸಿ ಕಾಂತನನ್ನು ಕಾಣಲು ಬರುವುದೆಂತು? ಅವಳು ಮನೆಯಲ್ಲಿಯೇ ಉಳಿಯುತ್ತಾಳೆ. ಸಂಜೆ ಹೋಗಿ ಕತ್ತಲಾಯಿತು. ಮನೆಯವರೆಲ್ಲ ಉಂಡು ಮಲಗಿದರು. ರಸಿಕ ನಾಯಕ ಊರ ಹೊರಗಿನ ತೋಪಿನಲ್ಲಿ ಕಾಯುತ್ತಿದ್ದವನು ರಾತ್ರಿ ಇವಳ ಮನೆಗೇ ಹೋಗುತ್ತಾನೆ. “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಅವಳ ಮನೆ ಬಾಗಿಲಿಗೆ ಸಣ್ಣ ಸಣ್ಣ ಹರಳುಗಳನ್ನು ಒಗೆಯುತ್ತಾನೆ. ಮನೆಮಂದಿಯೆಲ್ಲ ನಿದ್ರಾವಶರಾಗಿರುವಾಗ ನಾಯಿಕೆ ಮಾತ್ರ ಎಚ್ಚರವಾಗಿದ್ದಾಳೆ. ಹರಳುಗಳ ಸದ್ದು ಕೇಳಿ ಆ ಸಾಹಸ ಯಾರದೆಂದು ಅವಳಿಗೆ ಗೊತ್ತಾಗುತ್ತದೆ. ಆದರೆ ಬಾಗಿಲನ್ನು ತೆರೆದು ಹೊರ ಬಂದು ಅವನನ್ನು ಭೆಟ್ಟಿಯಾಗಲು ಸಾಧ್ಯವೆ?

ಪಂಜರದ ಗಿಣಿ ನಾನು ಬರಲಾರೆ ತಾವಿಲ್ಲ
ದನಿ ತೋರಲಾರೆ ತೆರಪಿಲ್ಲ ನನ ಗೆಣಿಯಾ
ಗಿಣಿಯಾಗಿ ಬಾರೋ ಹೊಸತಿಲಿಗೆ ||

ನನಗೆ ಹೊರಗೆ ಬರುವುದಕ್ಕೆ ಅವಕಾಶವಿಲ್ಲ-ತಾವಿಲ್ಲ-ಠಾವು ಇಲ್ಲ. ಯಾವ ತೆರದಲ್ಲಿಯೂ ಏನನ್ನೂ ಹೇಳಲಾರೆ, ನನ್ನ ಧ್ವನಿ ನಿನಗೆ ಕೇಳಿಸುವಂತೆ ಮಾಡಲಾರೆ. ಹಾಗಾದರೆ? ನೀನೊಂದು ಗಿಳಿಯಾಗಬಾರದೆ? ನಾವು ಕೇಳಿರುವ ಎಷ್ಟೋ ರಾಜಕುಮಾರರ ಕತೆಗಳಲ್ಲಿ ಹಾಗಾಗುವುದಿಲ್ಲವೆ? ನೀನೂ ಹಾಗೆಯೇ ಒಂದು ಗಿಳಿಯಾಗಿ ಮಾರ್ಪಟ್ಟು ನಾಳೆ ಬೆಳಗಿನಲ್ಲಿ ನಾನು ಹೊಸ್ತಿಲ ಪೂಜೆ ಮಾಡುವಾಗ ಬಂದು ನನ್ನ ಮುಂಗೈ ಮೇಲೆ ಕೂರಲಾರೆಯಾ? ಈ ಮನೆಯಲ್ಲಿ ನಾನೇ ಒಂದು ಪಂಜರದ ಗಿಣಿ. ನೀನೂ ಗಿಣಿಯಾಗಿ ಬಂದರೆ ನಿನ್ನನ್ನೊಂದು ಪಂಜರದಲ್ಲಿಟ್ಟು ನಿತ್ಯ ನಿನ್ನನ್ನು ನೋಡಬಹುದಲ್ಲವೆ?

ಆದರೂ ಆ ಸಾಹಸಿ ಯುವಕ ಹರಳುಗಳನ್ನೊಗೆಯುವುದನ್ನು ನಿಲ್ಲಿಸುವುದಿಲ್ಲ. ಕಿಡಕಿಯಲ್ಲಿಯಾದರೂ ಮುಖವಿಟ್ಟು ಅವನೊಂದಿಗೆ ಮಾತನಾಡಬೇಕೆಂದರೆ, ಅಯ್ಯೋ :

ದನಿ ಹೆಂಗೆ ತೋರಲಿ ಕದ ಹೆಂಗೆ ತೆರೆಯಲ್ಲಿ
ಮಗ್ಗಲಲ್ಲವನೆ ಮನೆಪುರುಷ, ನನ ಗೆಣೆಯಾ
ಮಗ್ಗ್ಯಾಗಿಬಾರೊ ತುರುಬಿಗೆ ||

ನೀನೊಂದು ಗುಲಾಬಿಯ ಇಲ್ಲವೆ ಸಂಪಿಗೆಯ ಮೊಗ್ಗಾಗಿ ಮಾರ್ಪಡಬಾರದೇನೋ ಗೆಳೆಯ? ಆಗ ಸದಾ ನನ್ನ ತುರುಬಿನಲ್ಲಿ, ಆದರೆ ಈಗ? ಕೈ ಹಿಡಿದ ಗಂಡ ಮಗ್ಗಲಲ್ಲಿ ಮಲಗಿದ್ದಾನೆ. ಹೇಗೆ ಹೊರಗೆ ಬರಲಿ, ಹೇಗೆ ಕದ ತೆಗೆಯಲಿ?

ಈ ಬಗೆಯ ಸನ್ನಿವೇಶವನ್ನು ಶ್ರೀ ಪುರಂದರದಾಸರೂ ಚಿತ್ರಿಸಿದ್ದಾರೆ. ಅವರ ಶ್ರೀಕೃಷ್ಣ ಪ್ರಚಂಡ ಧೈರ್ಯಶಾಲಿ. ಮನೆಯ ಜನವೆಲ್ಲ ಮಲಗಿರಲು ಹೇಗೋ ಸಾಹಸ ಮಾಡಿ ಒಳಗೆ ನುಸುಳಿದ್ದಾನೆ. ಅವನ ಪ್ರೇಯಸಿ ಗೋಪಿಕೆ ಗೋಗರೆಯುತ್ತಾಳೆ:

ಸದ್ದುಮಾಡಲು ಬೇಡವೋ
ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ |
ನಿದ್ದೆಗೈಯ್ಯುವರೆಲ್ಲ ಎದ್ದರೆ |
ನೀನು ಬಂದಿದ್ದದ್ದು ಕಂಡರೇನೆಂಬುವರೊ ರಂಗ ||
ನೆರಿಗೆ ಕೈ ಕೊಡದಿರೊ
ಕಾಂಚಿಯದಾಮ ಉಡಿಗಂಟು ಧ್ವನಿಗೈಯದೆ?
ಕರದುಟಿಯನು ನೀ ಸವಿದು ಚಪ್ಪರಿಸಲು
ತರವಲ್ಲ ಗಂಡ ಮತ್ಸರವ ತಾಳುವನಲ್ಲ ||

ಖಯಾಲ ನಾಯಿಕೆಯೊಬ್ಬಳು ಮಧ್ಯರಾತ್ರಿಯಲ್ಲಿ ಕಾಂತನನ್ನು ಕೂಡಲು ಶವಕಿಸುತ್ತಿದ್ದಾಳೆ. ಎದ್ದು ಹೊರಡಬೇಕೆಂದರೆ ಅವಳ ಕಾಲಂದುಗೆ ಝಣ ಝಣ ಸದ್ದು ಮಾಡುತ್ತದೆ. “ನಿದ್ದೆಗೆಯ್ಯುವರೆಲ್ಲ ಎದ್ದರೆ?” ಎಂದವಳಿಗೆ ಅಳಕು. ಯಾರೆಲ್ಲ ಆ ನಿದ್ದೆಗೆಯ್ಯುವರು? ಇತ್ತ ಅತ್ತೆ (ಸಾಸ), ಅತ್ತ ನನದಿಯಾ (ನಾದಿನಿ), ಮತ್ತೊಂದೆಡೆ ಭಾವನ ಹೆಂಡತಿ (ಜೇಠಾನಿ) ಮಗುದೊಂದೆಡೆ ಮೈದುನನ ಮಡದಿ (ದೇವದಾಸಿ). ಪೈಝಣದ ಸದ್ದಿಗೆ ಅವರೆಲ್ಲರಿಗೆ ಎಚ್ಚರವಾಗಿದೆ. ಇವಳು ಹೊರಗೆ ಹೊರಡುವಂತಿಲ್ಲ. ಆದರೆ ಆ ಸದ್ದು ಹೊರಗೆ ಕಾದಿರುವ ಸದಾರಂಗ (ಪ್ರಿಯಕರ) ಕಿವಿಗೂ ಬಿದ್ದಿದೆ; ಹಾಗಾದರೆ ಇನ್ನೇನು ಇವಳು ಬಂದು ಬಿಡುತ್ತಾಳೆಂದು ಅವನು ತವಕಿಸುತ್ತಿದ್ದಾನೆ. ಈಗೇನು ಮಾಡುವುದು?

ರಾಗ- ನಟಬಿಹಾರ ತಾಲ : ತ್ರಿಪುಟ

ಝನ ಝನ ಝನ ಪಾಯಲ ಬಾಜೇ
ಜಾಗೇ ಮೋರೀ ಸಾಸ ನನದಿಯಾ |

ಜೌರ ಜೇಠನಿಯಾ ಜೌರ ದೇವನಿಯಾ |
ಅಗರ ಸುನೇ ಮೋರೀ ಬರರ ಸುನೇಗೋ
ಜೋ ಸುನ ಪಾವೇ ಸದಾರಂಗ ||

ಗುಟ್ಟು ಹೀಗೆಯೇ ಎಷ್ಟು ದಿನ ನಡೆದೀತು? ಅದಕ್ಕಾಗಿ ಮುಂದೊಮ್ಮೆ ಏಕಾಂತಸ್ಥಳದಲ್ಲಿ ಭೆಟ್ಟಿಯಾದಾಗ ಪ್ರೇಯಸಿ ಪ್ರಿಯಕರನಿಗೆ ಎಚ್ಚರಿಕೆ ಕೊಡುತ್ತಾಳೆ :

ಆಚೆ ಕೇರಿಯೋನೆ ಚೀಟಿ ವಸ್ತ್ರಾದವನೆ
ಪಾರಿವಾಳದ್ಹಂಗೆ ಸುಳಿಯೋನೇ | ನನ ಗೆಣೆಯ
ದೂರು ಬರತಾದೆ ನಿನ ಮ್ಯಾಲೆ ||

ಚೀಟಿನ ಬಟ್ಟೆಯ ಅಂಗಿ ತೊಟ್ಟುಕೊಂಡು ಮೋಜು ಮಾಡುವ ಗ್ರಾಮೀಣ ರಸಿಕನಿಗೆ ತನ್ನ ಮೇಲೆ ಅಪವಾದ ಬಂದೀತೆಂಬ ಪರಿವೆಯಿರುವುದೂ ಅಷ್ಟಕ್ಕಷ್ಟೆ. ಪುರಂದರದಾಸರ ಶ್ರೀ ಕೃಷ್ಣನಿಗೆ ಗೋಪಿಯೊಬ್ಬಳು ಹೇಳುತ್ತಾಳೆ : “ಕಾಲಿಗೆ ಬಿದ್ದೆನೊ ಕೈಯ ಬಿಡೋ” ಅಭಿಜಾತಸಂಗೀತದ ನಾಯಿಕೆಯೊಬ್ಬಳು ಹೀಗೆ ಅನ್ನುತ್ತಾಳೆ :

ಪರತ ಹೂಂ ಪಂಯಾ
ಹಾ ಹಾ ಕರತ ತೋರೇ ಪರತ ಹೂಂ ಪಂಯಾ |
ಮೋಹನಸೇ ಝಗರಯ್ಯಾ
ಘರ ಜಾನೇ ದೇ ಛಾಂಡೋ ಮೋರೀ ಬಹಿಂಯಾ ||

ದರಬಾರೀ ಕಾನಡಾ ರಾಗದ ತೀನ್‌ತಾಲದ ಈ ಚೀಜಿನಲ್ಲಿ ಕೂಡಾ ನಾಯಿಕೆ “ದೂರು ಬರತಾದೆ ನಿನ ಮೇಲೆ” ಎಂಬುದಾಗಿ ಎಚ್ಚರಿಕೆ ಕೊಡುತ್ತಾಳೆ :

ನಗರೀ ಬಗರೀ ಕೇ ಲೋಗವಾಂ ಸುನತ ಹೈಂ
ಚರಚಾ ಕರತ ಸಬ ನಾರಿಯಾಂ
ಜಾವೋಜೀ ಜಾವೋಜಿ ತುಮ ಖಾವೋಗೇ ಗಾರಿಯಾಂ
ಮೋಹನಸೇ ಝಗರಯ್ಯಾ
ಘರ ಜಾನೇದೇ ಛಾಂಡೋ ಮೋರೀ ಬಹಿಂಯಾ ||

ನಮ್ಮ ನಗರಿಯ ಜನರೆಲ್ಲ ಸುದ್ದಿ ಕೇಳುವರು. ಊರ ಹೆಂಗಸರೆಲ್ಲ “ಚರ್ಚಾ” ಮಾಡುವರು ನಮ್ಮ ಪ್ರಕರಣದ ಬಗ್ಗೆ. ಹೋಗು ದೊರೆ, ಹೋಗು. ಇಲ್ಲವಾದರೆ ಬೈಗಳನ್ನು (ಗಾರಿಯಾಂ-ಗಾಲೀ-ಗಾಲಿಯಾಂ) ತಿನ್ನುತ್ತೀಯಾ ನೋಡು ! ಮೋಹನ, ನಿನ್ನೊಡನೆ ಜಗಳವಾದೀತು, ಎಚ್ಚರ !! (ಝಗರಯ್ಯಾ)

“ಅಡಕು ಬಂದಾವು ನಂಗೂ ನಿಂಗೂ” ಎಂದು ಮುನ್ನೆಚ್ಚರಿಕೆ ಕೊಡುತ್ತಾಳೆ ಹಳ್ಳಿಯ ಹುಡುಗೆಯೊಬ್ಬಳು. ಅತಿಥಿಯೊಬ್ಬ ಊಟ ಮಾಡಿ ಎಲೆ ಅಡಿಕೆ ಹಾಕಿಕೊಳ್ಳುತ್ತ ಅವಳ ಕಡೆಗೆ ನೋಟ ಬೀರುತ್ತಿರುತ್ತಾನೆ. ಆದರಿಂದಲೇ ಅವಳಿಗೆ ಅವನ ಇಂಗಿತ ಗೊತ್ತಾಗಿದೆ. ಮುಂದೆ ಧೈರ್ಯಮಾಡಿ ಅವನವಳ ಕೈಹಿಡಿದಾಗ :

ಕಡಗದ ನನ ಕೈಯ ಬಿಡು ನನ್ನ ಮಾರಾಯ
ಅಡಕು ಬಂದಾವು ನಂಗ ನಿಂಗೂ | ಈಳ್ಯವ
ಮಡಚಾಗ ಕಂಡೆ ನಿನ್ಮನವ |

ಎಂದು ಕೈ ಕೊಸರಿಕೊಳ್ಳುತ್ತಾಳೆ. ಕರ ಎಂಬ ಸಂಸ್ಕೃತ ಶಬ್ದ ವ್ರಜ ಭೂಮಿಯ ಎಂದರೆ ಗಂಗಾ ಯಮುನಾ ನದಿಗಳ ನಡುವಣ ಪ್ರದೇಶದ ಜಾನಪದ ಭಾಷೆಯಲ್ಲಿ “ಕಲಯ್ಯಾ” ಆಗಿದೆ. ಬಿಲಾಸಖಾನೀ ತೋಡೀ ರಾಗದ ಧ್ರುತ್ ಖಯಾಲೊಂದರಲ್ಲಿ “ನನ ಕೈ ಬಿಡು ನನ್ನ ಮಾರಾಯಾ” ಎಂಬ ಅಭಿಪ್ರಾಯವನ್ನು ತನ್ನ ಭಾಷೆಯಲ್ಲಿ ವ್ಯಕ್ತಪಡಿಸುತ್ತಾಳೆ ನಾಯಿಕೆ :

ಬಾಲಮ ಮೋರೀ ಛೋಡೋ ಕಲಯ್ಯಾ
ತರಕನ ಲಾಗೀ ಮೋರೀ ಚುರಿಯಾ |
ಪ್ರೇಮಪಿಯಾ ಮೋಸೇ ಕರೋ ನಾ ಠಿಠೋರೀ
ಜಾ ಸೌತನಿಯಾಕೇ ಲೀಹೋ ಬಲಯ್ಯಾ ||

ಎಂಬುದಾಗಿ ಅವಳದು ಕಡಗದ ಕೈಯಲ್ಲ, ಬಳೆ ತೊಟ್ಟಿರುವ (ಚೂಡಿಯಾ-ಚುರಿಯಾ) ಕೈಯಿ. ಅದನ್ನು ಕೊಸರಿಕೊಳ್ಳುತ್ತ, “ಎಲೆ ಪ್ರೇಮಪಿಯಾ” (ವಾಗ್ಗೇಯಕಾ ಉಸ್ತಾದ ಫಯ್ಯಾಜೂನಸಾಹೇಬರ ಮುದ್ರಿಕೆ) ನನ್ನೊಂದಿಗೆ ಸಲುಗೆ ತೋರಲು (ಠಿಠೋರಿ) ಬರಬೇಡ ಮುದ್ದುಮಾಡಲು ಆ ನನ್ನ ಸವತಿಯ ಬಳಿಗೇ ಹೋಗು.

ವೈಷ್ಣವ ಭಕ್ತಿಯನ್ನು ಬಿತ್ತರಿಸುತ್ತಿದ್ದ ಶ್ರೀ ಪುರಂದರದಾಸರ ಕೃತಿಗಳಲ್ಲಿ ಶ್ರೀ ಕೃಷ್ಣನ ಹಲವಾರು ಲೀಲಾವಿನೋದಗಳನ್ನು ಕಾಣಬಹುದಾದುದು ಸಹಜವಾಗಿದೆ. ಅಂತೆಯೇ ಗೋಪಾಲ ಬಾಲಕನಾಗಿದ್ದ ಕಾರಣ ಕೃಷ್ಣಲೀಲೆಗಳ ಚಿತ್ರಣವನ್ನು ಜಾನಪದ ಹಾಡುಗಳಲ್ಲಿ ಕಾಣಬಹುದಾದುದೂ ಅಷ್ಟೆ ಸಹಜವಾಗಿದೆ. ಹೊಸ ಸೀರೆಯನ್ನು ಉಟ್ಟು ಆಭರಣಗಳನ್ನಿಟ್ಟು ಗೊಲ್ಲತಿಯೊಬ್ಬಳು ಗೋಕುಲದಲ್ಲಿ ಹಾಲು ಮಾರಲು ಹೊರಟರೆ ಗೊಲ್ಲನಾದ ಕೃಷ್ಣ ಅವಳ ಸೆರಗನ್ನು ಹಿಡಿದೆಳೆದು ನಿಲ್ಲಿಸಿದ್ದಾನೆ. ಅವಳ ಸೀರೆಯ ಸೆರಗಿನಲ್ಲಿ ಕೆಂಪು ಬಿಳಿ ಮಿಶ್ರಿತವಾದ ಮೂರು ಮೂರು ಕಂಬಿಗಳನ್ನು ನೇಯಲಾಗಿದೆ.

ಪಟ್ಟೆಕಂಬಿಯ ಸೀರೆ ಪುಟ್ಟ ನೆರಿಗೆ ಉಟ್ಟುಕೊಂಡು
ತೊಟ್ಟಳು ಕೇಳ ಭಾಪುರಿ ಗೊಲ್ಲತಿ
ಅಣ್ಣ ಬಿಡು ಸೆರಗ ಅಣ್ಣಯ್ಯ ಬಿಡು ಸೆರಗ ||

ಈ ಪದ್ಯ ಹೀಗೆಯೇ ಮುಂದುವರಿಯುತ್ತದೆ. ಅವಳ ಒಂದೊಂದು ಬಿನ್ನಹಕ್ಕೂ ಒಂದೊಂದು ತುಂಟ ಉತ್ತರವನ್ನು ಕೊಡುತ್ತ ಹೋಗುತ್ತಾನೆ ಕೃಷ್ಣ. ಅವಳು ಅಣ್ಣ ಎಂದರೆ ಇವನು, ಅಣ್ಣನಲ್ಲ ಕಣೇ ನಾನು ನಿನ್ನಣ್ಣನ ಭಾವ ಎನ್ನುತ್ತಾನೆ. ಇದೇ ಬಗೆಯ ಚಾತುರ್ಯವನ್ನೂ ತುಂಟತನವನ್ನೂ ದಾಸರ ಕೃತಿಯಲ್ಲಿಯೂ ಕಾಣಬಹುದಾಗಿದೆ :

ಅಣ್ಣಯ್ಯ ಕೃಷ್ಣ ಬಿಡೊ ಸೆರಗ
ನಾ ಅಣ್ಣ ನಲ್ಲವೆ ನಿನ್ನ ಅಣ್ಣನ ಭಾವ |
ಭಾವಯ್ಯ ಕೃಷ್ಣ ಬಿಡೊ ಸೆರಗ | ನಾ
ಭಾವನಲ್ಲವೆ ನಿನ್ನ ಭಾವನ ತಮ್ಮ |
ತಮ್ಮಯ್ಯ ಕೃಷ್ಣ ಬಿಡೊ ಸೆರಗ | ನಾ
ತಮ್ಮನಲ್ಲವೆ ನಿನ್ನ ತಮ್ಮನ ಬೀಗ……||

ಕೈ ಹಿಡಿದುಕೊಂಡರೆ ಕೊಸರಿಕೊಂಡಳೊಬ್ಬಳು. ಸೆರಗು ಹಿಡಿದರೆ ಅದನ್ನು ಬಿಡೋ ಎಂದು ಬೇಡಿಕೊಂಡಳಿನ್ನೊಬ್ಬಳು. ಇದೋ ಮೂರನೆಯವಳು ಬಳಿಸಾಗಿರುವ ಮುನ್ನವೇ ಸೆರಗನ್ನು ಮುಟ್ಟಬೇಡ. ಮುಟ್ಟಲೇಬೇಡ ಎಂದು ಎಚ್ಚರಿಕೆ ಕೊಡುತ್ತಾಳೆ :

(ಖಯಾಲ ಮಲುಹಾಕೇದಾರ, ವಿಲಂಬಿತ ತೀನ್ ತಾಲ)
ಅಚರಾ ಮೋರಾ, ಹೌಂ ಬಾಮನೀ, ತೂ ಲಂಗರ ತುರಕವಾ
ಜೀ ನ ಛುವೋ |
ಅನ ಅಚಾನಕ ಬಹಿಂಯಾ ಮರೋರೀ
ಹೋ ಕಹಾ ಕೀನೋ ತುರಕವಾ
ಜೀ ನ ಛುವೋ ||

“ಎಲೈ ಪ್ರಿಯಕರನೇ, ನನ್ನ ಸೆರಗನ್ನು (ಅಂಚಲ-ಅಚರಾ) ಮುಟ್ಟಬೇಡವೋ. ಏಕೆಂದರೆ ನೀನು ತುರ್ಕ. ನಾನು ಬ್ರಾಹ್ಮಣಿ (ಹೌಂ ಬಾಮನೀ-ಜಂ ಬ್ರಾಹ್ಮಣೀ) ಸೆರಗನ್ನು ಕೂಡಾ ಮುಟ್ಟಬೇಡ ಎಂದರೆ ಆ ತುಂಟ ತುರ್ಕ ಅವಳ ಕೈಯನ್ನೇ ಹಿಡಿದು ತಿರಿಚುತ್ತಾನೆ. (ಬಹೀಂಯಾ ಮರೋರೀ) ಅಯ್ಯೋ, ಇದನ್ನೇನು ಮಾಡಿದೆ ಪ್ರಿಯಕರಾ, ಎನ್ನುತ್ತಾಳೆ ಆ ಮಡಿವಂತ ಮಹಿಳೆ !

ವಿಜಾಪುರದ ಆದಿಲಶಾಹೀ ಅರಸರಲ್ಲಿ ತಂದೆ ಶಿಯಾ ಆಗಿದ್ದರೆ ಮಗ ಸುನ್ನೀ ಪಂಥದ ಅನುಯಾಯಿಯಾಗಿರುತ್ತಿದ್ದ. ತಮ್ಮವರ ಸಂಖ್ಯೆಯನ್ನು ಕರೆಸುತ್ತಿದ್ದ. ಮತ್ತೆ ಅವನ ಮಗ ಶಿಯಾ ಪಂಥದ ಒಲವುಳ್ಳವನಾಗಿದ್ದರೆ ಪಟ್ಟಕ್ಕೆ ಬಂದ ಮೇಲೆ ಅವನು ಶಿಯಾ ಪಂಥೀಯರನ್ನು ತುಕ್ಕಸ್ತಾನದಿಂದಲೇ ಕರೆಸಿಕೊಂಡು ಅವರಿಗೆ ಸೈನ್ಯದಲ್ಲಿಯೂ ದರಬಾರಿನಲ್ಲಿಯೂ ಹುದ್ದೆಗಳನ್ನು ಕೊಡುತ್ತಿದ್ದ. ಆದಿಲಶಾಹಿ ಅರಸರ ಮೂಲಪುರುಷ, ಯುಸುಫ್ ಆದಿಲಖಾನ ತುರ್ಕ ಸ್ಥಾನದವನು. ಹೀಗಾಗಿ ವಿಜಾಪುರದಲ್ಲಿ ತುರ್ಕರ ಸಂಖ್ಯೆ ಬೆಳೆಯಿತು. ಮುಂದೆ ಮುಸಲ್ಮಾನರೆಲ್ಲರನ್ನೂ ಮೂಲತಃ ಭಾರತೀಯರಾಗಿದ್ದು ಮತಾಂತರ ಹೊಂದಿದವರನ್ನು ಸಹ-ತುರ್ಕರೆಂದು ಕರೆಯುವುದು ರೂಢಿಯಾಯಿತು. ಭಾರತೀಯ ಸಮಾಜ ಸಂಸ್ಕೃತಿಗಳ ಅಂಗವಾದ ಅವರು ನಮ್ಮ ಸಾಹಿತ್ಯ ಸಂಗೀತಗಳಲ್ಲಿ ಕಾಣಿಸಿಕೊಳ್ಳುವುದು ಸಹಜವೇ ಆಗಿದೆ.

ತುರ್ಕರು ರಸಿಕರು. ದರಬಾರೀ ಮನೋವೃತ್ತಿಯವರು. “ಮುಚ್ಚಳದಾಗ ಮೂರು ಕಾಸಿದ್ದರ ಮೂರು ಲೋಕಾ ಗೆದೀತೇನಿ ಅನ್ನೋ ಜಾತಿ” ಎಂಬುದಾಗಿ ಜಾನಪದ ಗಾದೆಯಲ್ಲಿ ಅವರ ಮನೋವೃತ್ತಿಯನ್ನು ಬಣ್ಣಿಸಿರುವುದುಂಟು. ಎಂತಹ ಬಡತನವಿದ್ದರೂ ಅದು ಅವರ ರಸಿಕತೆಯನ್ನಾಗಲಿ ಸಾಹಸಪ್ರವೃತ್ತಿಯನ್ನಾಗಲಿ ಕುಗ್ಗಿಸಲಾರದು. ಹಳ್ಳಿಯ ತುರ್ಕ ಹುಡಗನೊಬ್ಬನಿಗೆ ಕಾಲಲ್ಲಿ ಮೆಟ್ಟಲು ಸರಿಯಾದ ಚಪ್ಪಲಿಯಿಲ್ಲ. ಇಂಗ್ಲೀಷಿನಲ್ಲಿ ಕಡುಬಡತನವನ್ನು ಸೂಚಿಸಬೇಕಾದರೆ “He is at heels” ಎನ್ನುತ್ತಾರೆ. ಎಂದರೆ ಚಪ್ಪಲಿಯ ಹಿಮ್ಮಡಿ ಸವೆದು ಸವೆದು ಕೆಳಕಿಳಿದಿದ್ದಾನೆ ಎಂದು. ಜಾನಪದ ಪದ್ಯವೊಂದರಲ್ಲಿ ಹಿಟ್ಟು ಹಿಟ್ಟಾಗಿ ಹೋಗಿ ಮೆಟ್ಟಿನ ಮುಂಭಾಗ ಮಾತ್ರ ಉಳಿದಿದೆ. ಉಂಗುಷ್ಠ ಮತ್ತು ಅದರ ಅಕ್ಕಪಕ್ಕದ ಅಲ್ಪ ಜಾಗ, ಆದರೆ ತುಂಟ ಚೇಷ್ಟೆ ಸವೆಯದಲ್ಲ; ಹುಡುಗಿಯರನ್ನು ಚುಡಾಯಿಸುವುದೇ ಅವನ ಕಾಯಕ.

ತುರುಕರ ಗಂಡಿಗೆ ತುದಿಗಾಲ ಪಾಪಾಸು
ಹರಕಂಗಿ ಮ್ಯಾಲೆ ಜಾಕೀಟು | ಹಾಕ್ಕೊಂಡು
ಹರಸ್ಯಾಡುತಾನ ಹುಡುಗೇರ್ನ ||

“ತುರಕವಾ” ತರುಣನೊಬ್ಬ ತನ್ನ ಪ್ರೇಯಸಿಯನ್ನು ಹಾದಿಯಲ್ಲಿ ಸಂಧಿಸಿದ್ದಾನೆ. ಅವನನ್ನು ಹಾದಿಬಡಕ-ಬಡವಾರ-ಹಾದಿಹೊಯಿಕನೆಂದು ಬಣ್ಣಿಸಿ ದೂರುತ್ತಾಳೆ ಪ್ರೇಯಸಿ :

(ರಾಗ-ಲಾಚರೀ ತೋಡೀ; ವಿಲಂಬಿತ ಏಕತಾಲ)

ಏ ಲಂಗರ ತುರಕವಾ ಬಟಮಾರ
ಬರಜೋರೀ ಗರವಾ ಮೈಕಾ ಲಗಾತೀತ ||
ಜಿತ ಜಾವೂಂ ತೂ ಏಕ ನ ಮಾನೀ
ಕಹಾ ಸಂಗ ಕಿಸೋರೀ ದಯ್ಯಾ
ಕೈಸೇ ಕೇ ಘರಕೊಜಾವೂಂ ರಂಗೀಲೇ
ಕೈಸೇ ಸಮಝಾ ಲೇತ ||

ಅಯ್ಯಾ ತುರ್ಕ ಪ್ರಿಯಕರನೇ, ಬಲಾತ್ಕರಿಸಿ ನನ್ನನ್ನಪ್ಪಿದೆಲ್ಲವೋ ; ಎಲ್ಲಿ ಹೋಗಲಿ ನಾನು? ಹಾದಿಗಡ್ಡಗಟ್ಟಿ ನಿಂತಿರುವೆಯಲ್ಲ. ಹೇಳಿದರೆ ಒಂದನ್ನೂ ಕೇಳುವುದಿಲ್ಲ ನೀನು (ಏಕ ನ ಮಾನೀ). ನಾನೀಗ ಮನೆಗೆ ಹೇಗೆ ಹೋಗಲಿ? ಈ ರಂಗೀಲೇ ರಸಿಕನಿಗೆ ಹೇಗೆ ಸಮಜಾಯಿಶಿ ಹೇಳಲಿ?

ಹಾಲು ಮಾರಲು ಹೋದರೇ ನಿನ್ನಯ ಕೆಂದ
ಕಾಲಿಗಡ್ಡವ ಕಟ್ಟಿದ ||
ಮೆಲ್ಲಮೆಲ್ಲನೆ ಬಂದನೇ | ಗೋಪಮ್ಮ ಕೇಳೆ ||
ಮೆಲ್ಲಮೆಲ್ಲನೆ ಬಂದು ಗಲ್ಲಕೆ ಮುದ್ದು ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ ||

ದಾಸರ ಈ ಹಾಡನ್ನು ನೆನಪಿಗೆ ತರುತ್ತವೆ : “ತುರುಕರ ಗಂಡಿಗೆ ತುದಿಗಾಲ ಪಾಪಾಸು” ಎಂಬ ಜಾನಪದ ತ್ರಿಪದಿ ಮತ್ತು “ಏ ಲಂಗರ ತುರಕವಾ” ಎಂಬ ಲಾಚರೀತೋಡೀ ರಾಗದ ಚೀಜು.

ಪ್ರೇಮಕ್ಕೆ ಜಾತಿಮತಗಳ ಕಟ್ಟಿಲ್ಲ. “ಬಾಮನಿ”ಗೆ ಲಂಗರ ಅಥವಾ ಪ್ರಿಯಕರ “ತುರಕವಾ” ಆಗಿದ್ದರೆ, ಬ್ರಾಹ್ಮಣ ಜಗನ್ನಾಥ ಪಂಡಿತನಿಗೆ ಪ್ರೇಯಸಿಯಾದ ಲವಂಗಿಯಿರಲಿಲ್ಲವೆ? ಕವಿ-ಗಾಯಕ ಘನನಂದನಿಗೆ ಸುಜಾನಳಿದ್ದಂತೆ? ಮತೀಯ ಭಾವನೆಗಳನ್ನು ಮೀರಿ ನಿಂತ ರೋಮಾನ್ಸಿನದೊಂದು ಚಿತ್ರಣವನ್ನು ನಾವೀ ಠುಮರೀ ಚೀಜಿನಲ್ಲಿ ಕಾಣಬಹುದು.

ಕಂಕರ ಮಾರ ಜಗಾಯೆ
ಬಮನಾಕೆ ಛೋರ
ಸೋಹೀ ಪರೀ ಥೀ ಮೈ
ಅಪನೇ ಮಹಲ ಮೇ
ಚೊರೀ ಚೋರೀ ಆಯೀ ಕೈ
ಮೈಕೋ ಜಗಾಯೆ ನೇಹಾ ಲಗಾಯೆ || ಕಂಕರ

ದಿಟ್ಟನಾದ ಬ್ರಾಹ್ಮಣರ ಹುಡುಗ (ಬಮನಾ ಕೇ ಛೋರ) ರಾತ್ರಿ ತನ್ನ ಮಹಲಿನಲ್ಲಿ ಮಲಗಿರುವ ಅವಳ ಮೈಮೇಲೆ ಕಿಟಕಿಯಿಂದ ಹರಳುಗಳನ್ನು (ಕಂಕರ) ಎಸೆದು ಎಚ್ಚರಿಸುತ್ತಾನೆ. ಈ ರೀತಿಯಾಗಿ ಕದ್ದು ಹೋಗಿ ಅವಳ ಸ್ನೇಹ ಮಾಡುತ್ತಾನೆ, ಬಮನಾ ಛೋರ.

ಹರಳುಗಳನ್ನೆಸೆಯುವ ತಂತ್ರ ಹಳ್ಳಿಯ ಹುಡುಗರಿಗೆ ಹೊಸತಲ್ಲ. ಆದರೂ ಅದನ್ನುಪಯೋಗಿಸುವುದಕ್ಕೆ ಸಮಯ ಸಂದರ್ಭ ಸರಿಯಾಗಿರಬೇಕು : ಸ್ನೇಹದ ಬೆಸುಗೆಯನ್ನು ಸಾಧಿಸು ಕಲೆಯಲ್ಲಿ ಅಭಿಜ್ಞನಾದೊಬ್ಬ ಪಡ್ಡೆ ಹುಡುಗ ತಾನು ಬಯಸಿದ ಬಾಲೆಯ ಸಲಹೆಯನ್ನು ಕೇಳುತ್ತಾನೆ. ಅವಳು ಸೂಚಿಸುವ ಉಪಾಯವಿದು :

ನೀರೀಗೆ ಬರುತಾಳೆ ಆ ಬಾಲೆ, ಎಲೆ ಮಗನೆ
ಸಣ್ಣ ಕಲ್ಲೀಲಿ ಮಿಡಿ ಎಲೆ ಮಗನೆ |

ಜಾನಪದ ಯುವಕ ಹಾಗೆ ಮಾಡಿಯೇ ಬಿಟ್ಟನೇನೋ ; ಮತ್ತು ಅದಕ್ಕೆ ಅಭಿಜಾತ ಸಂಗೀತದ ನಾಯಿಕೆಯ ಪ್ರತಿಕ್ರಿಯೆ ತೋರಿದಳೋ ಎನ್ನುವ ಹಾಗೆ ಮೀಂಯಾ ಕೀ ತೋಡೀ ರಾಗದಲ್ಲಿ ಜಲದ ತ್ರಿತಾಲ ಚೀಜೊಂದು ಹೀಗೆ ರೂಪಿತವಾಗಿದೆ:

ಲಂಗರ ಕಾಂಕರಿಯೇ ಜೀನ ಮಾರೋ
ಮೋರೇ ಅಂಗವಾ ಲಗ ಜಾಯೇ
ಸುನ ಪಾವೇ ಮೋರೀ ಸಾಸ ನನಂದಿಯಾಂ
ದೌರ ದೌರ ಘರ ಆಯೇ ||

ಕಾಂಕರಿಯೇ ನ ಮಾರೋ-ಹರಳುಗಳನ್ನೆಸೆಯಬೇಡ. ಇದು ನನ್ನ ಅತ್ತೆನಾದಿನಿಯರಿಗೆ ಗೊತ್ತಾದರೆ ಅನಾಹುತವಾದೀತು. ಈ ಸುದ್ದಿ ಗೊತ್ತಾಗಿಯೋ ಏನೋ ಅವರು ಓಡಿ ಓಡಿ-ದೌರ ದೌರ-ಮನೆಗೆ ಬಂದಿದ್ದಾರೆ. ಆದ್ದರಿಂದ ಕಿಡಕಿಯ ಬಳಿ ನಿಲ್ಲದೆ ನೀನೂ ಮನೆಗೆ ಓಡು.

ಹಳ್ಳಿಗಾಡಿನಲ್ಲಿ ಹರಳುಗಳಿಗೆ ಬೇರೊಂದು ಬಗೆಯ ಮಹತ್ತ್ವವೂ ಇದೆ. ಅವುಗಳ ವಶೀಕರಣ ಶಕ್ತಿ. ಹರಳುಗಳನ್ನು ಮಂತ್ರಿಸಿ ಒಗೆದು ಹುಲಿಗಳನ್ನು ಇಲಿಯಂತೆ ನಿರುಪದ್ರವಿಯಾಗಿಸಬಹುದು. ಅದು ನಾಯಿಯಂತೆ ಮಾಂತ್ರಿಕನನ್ನು ಹಿಂಬಾಲಿಸುವಂತೆ ಮಾಡಬಹುದು. ಮಂತ್ರಿಸಿದ ಹರಳುಗಳನ್ನೆಸೆದು, ಇಲ್ಲವೆ ಬೂದಿಯನ್ನೂದಿ ಸ್ತ್ರೀಯರು ತಾವಾಗಿ ಬೆನ್ನು ಹತ್ತಿ ಬರುವಂತೆ ಮಾಡಬಹುದು. ಅಥವಾ ಹೀಗೂ ನಡೆಯಬಹುದು. ತಾನು ಮೆಚ್ಚಿದ ಹುಡುಗಿಯಬಳಿಸಾರುವುದಕ್ಕಾಗಿ-ಗುಟ್ಟಾಗಿ ಅವಳನ್ನು ಸಾಮೀಲುಮಾಡಿಕೊಂಡು ಪ್ರೇಮಿಯು ಮಾಂತ್ರಿಕನಂತೆ ನಟಿಸುತ್ತ ಮಂತ್ರಿಸಿದ ಬೂದಿಯನ್ನು ಅವಳ ಮುಖಕ್ಕೆ ಊದಿದಂತೆ ಮಾಡಿ ಅವಳ ತಂದೆತಾಯಿಗಳ ಕಣ್ಣಿಗೆ ಮಂಕುಬೂದಿಯನ್ನೆರಚಲೂಬಹುದು. ಅದಕ್ಕಾಗಿ ಪ್ರೇಮಿಕೆಯು ಚಳಿಜ್ವರ ಬಂದವಳಾಗಿ ಮಲಗುತ್ತಾಳೆ. ಯಾರೋ ವೈದ್ಯರು ಮದ್ದು ಕೊಟ್ಟು ವಾಸಿಮಾಡುತ್ತಾರೆ. ಆದರೆ ಅವಳಿಗೆ ಬೇಕಾಗಿರುವುದು ಮುದ್ದು ಮದ್ದು. ಅದಕ್ಕಾಗಿ ಹೀಗೆ ಹಲುಬುತ್ತಾಳೆ :