ಮಾನಸಿಂಗ ತೋಮರ :

ಹದಿನೈದನೆಯ ಶತಮಾನದ ವರೆಗೂ ಭಾರತೀಯ ಸಂಗೀತದ ರಾಗಗಳು ಜಾನಪದ ಧಾಟಿಗಳಿಂದ ಪುಷ್ಟಿಗೊಂಡು ಅನಿಶ್ಚಿತ ಕ್ರಮದಲ್ಲಿ ರೂಪುಗೊಳ್ಳುತ್ತಿದ್ದುವು. ಆ ವೇಳೆಗೆ ಗ್ವಾಲಿಯರದ ಮಹಾರಾಜ ಮಾನಸಿಂಗ ತೋಮರನು ತನ್ನ ಆಸ್ಥಾನದಲ್ಲಿ ಸಂಗೀತಗಾರರ ಸಮ್ಮೇಲನವೊಂದನ್ನು ಕರೆದು ರಾಗಸ್ವರೂಪವನ್ನು ಚರ್ಚೆಗೊಳಪಡಿಸಿ ಅವುಗಳಿಗೆ ನಿಶ್ಚಿತವಾದ ಆರೋಹಣ, ಅವರೋಹಣಗಳನ್ನೂ ಅಲಾಪನಾ ಸಂಚಾರ ಕ್ರಮಗಳನ್ನೂ ನಿಗದಿತಪಡಿಸಿದ. ಸಭೆಯಲ್ಲಿ ಚರ್ಚಿಸಲ್ಪಟ್ಟ ಸಂಗತಿಗಳನ್ನೂ ಕೈಕೊಂಡ ನಿರ್ಣಯಗಳನ್ನೂ ಗ್ರಂಥರೂಪದಲ್ಲಿ ಸಂಗ್ರಹಿಸಿದ. ಮಾನಸಿಂಗನ ಆ ಗ್ರಂಥಕ್ಕೆ “ಮಾನಕುತೂಹಲ” ಎಂಬ ಹೆಸರಾಯಿತು. ಜಾನಪದ ಮಟ್ಟದಲ್ಲಿದ್ದ ಧ್ರುವಾಪದಗಳನ್ನು ಪರಿಷ್ಕಾರಗೊಳಿಸಿ “ಧ್ರುಪದ” ಎಂಬ ಅಭಿಜಾತ ಸಂಗೀತ ಪರಂಪರೆಯನ್ನು ಆರಂಭಿಸಿದವ ಈ ಮಾನಸಿಂಗ ತೋಮರನೆ ಎಂದು ಹೇಳುತ್ತಾರೆ. ಸಂಗೀತಗಾರರಿಗೆ ರಾಜಾಶ್ರಯ ದೊರೆಯತೊಡಗಿತು. ರಾಜರುಗಳ ಹಾಗೂ ಸುಲತಾನರುಗಳ ರಾಜ್ಯದಾಹ ಹಾಗೂ ಚೈತ್ರಯಾತ್ರೆಗಳ ಫಲವಾಗಿ ಸಂಗೀತವು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಭೇದವಿಲ್ಲದೆ ಪಸರಿಸಿ ರಾಗಗಳೂ ರಾಜ್ಯಗಳ ಗಡಿಗಳನ್ನು ದಾಟಿ ಪ್ರಯಾಣ ಮಾಡಿದುವು. ಏಕೆಂದರೆ ರಾಜರ ಹಾಗೂ ಸೈನಿಕರ ಮನರಂಜನೆಗಾಗಿ ಸೇನೆಯೊಂದಿಗೆ ಗಾಯಕಿ-ನರ್ತಕಿಯರೂ ಹೊರಡುತ್ತಿದ್ದರು.

ಶ್ರೀ ಪುರಂದರದಾಸರ ಒಂದು ಕೃತಿಯಲ್ಲಿ “ಪಾಡಿ ಮಲ್ಲಾರಿ ಗುರ್ಜರಿ…… ಮುಂತಾಗಿ ರಾಗಗಳ ಹೆಸರುಗಳು ಹೇಳಲ್ಪಟ್ಟಿವೆ. ಆ ರಾಗಗಳನ್ನು ಹಾಡುತ್ತ ಗೋಪಿಯರು ಚಪ್ಪಾಳೆಯಿಕ್ಕುತ್ತ ರಂಗವನ್ನು ಕುಣಿಸಿದರಂತೆ. ಇಲ್ಲಿ ಪಾಡಿ ಎಂಬುದಕ್ಕೆ ಹಾಡಿ-ಹಾಡುತ್ತ ಎಂದೂ ಅರ್ಥವಿಸಬಹುದು; ಇಲ್ಲವೆ ಮಲ್ಲಾರಿ ಗುರ್ಜರಿಗಳೊಂದಿಗೆ ಪಾಡಿ ಎಂಬುದೂ ಒಂದು ರಾಗದ ಹೆಸರೆಂದೂ ಗ್ರಹಿಸಬಹುದು. ಪಹಾಡೀ ಎಂಬುದರ ತದ್ಭವ ಪಾಡೀ. ಕಾಶ್ಮೀರದ ಬೆಟ್ಟ ಕಣಿವೆಗಳಲ್ಲಿ ಕುರಿಗಳನ್ನು ಮೇಯಿಸುತ್ತ ಅಲ್ಲಿಯ ಹಳ್ಳಿಗರು ಹಾಡುವ “ಪಹಾಡೀಧುನ್” ಹೀಗಿದೆ : (ಹಾಡಿ ತೋರಿಸಲಾಗುವುದು).

ಮೋರೇ ಬಾಗೋಂ ಮೇಂ ಫೂಲ ಖಿಲೇ ಹೈ.
ತುಮ ನ ಆಯೇ
ತುಮನೇ ಹಮಕೋ ಭೂಲಗಯೇ
ನಾ ಹಮ ತುಮಕೋ ಭೂಲಸಕೇ | ಹೋಯ |

ಈ ಪಹಾಡೀ ರಾಗದಲ್ಲಿ ದೇವದಾಸಿಯರು ಹಾಡುತ್ತಿದ್ದ ಹಳೆಯ ಸಂಪ್ರದಾಯದ ಗೀತವೊಂದು ಹೀಗಿದೆ :

ಬೆಳಗಾಯಿತು ಬಿಡೋ ಎನ್ನ
ನಾಳೆ ತಡೆಯದೆ ಬರುವೆನು ಕೇಳೋ ಮೋಹನ್ನ |

ಶರೀಫ ಸಾಹೇಬರ ಪದವೊಂದು ಇದೇ ಧಾಟಿಯಲ್ಲಿದೆ :

ನಡಿಯೋ ದೇವರ ಚಾಕರಿಗೆ ಮುಕ್ತಿ
ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ |

(ಮೈಲಾರ ಲಿಂಗದೇವರನ್ನು ಶರೀಫರು ಇಲ್ಲಿ ಖಾದರಲಿಂಗ ಎಂದು ಸ್ತುತಿಸಿದ್ದಾರೆ). ಕಾಸ್ಮೀರದ ಶೈವಸಿದ್ಧಾಂತಾಗಮಗಳು ಕರ್ನಾಟಕಕ್ಕೆ ಬಂದಾಗಲೇ ಅವುಗಳೊಡನೆ ಪಹಾಡೀ ರಾಗವೂ ಬಂದಿರಬಹುದು. ಉತ್ತರದಲ್ಲಾಗಲೀ, ಇಲ್ಲಿಯಾಗಲಿ ಅದು ಅಭಿಜಾತದ ಮಟ್ಟಕ್ಕೆ ಏರಲಿಲ್ಲವಾದರೂ ಉಪಶಾಸ್ತ್ರೀಯ, ಅರ್ಥಾತ್ ಸೆಮಿಕ್ಲಾಸಿಕಲ್ ಎನಿಸಿಕೊಂಡ ಠುಮರೀ ದಾದರಾಗಳು ಈ ರಾಗದಲ್ಲಿ ಹಲವಿದೆ. ಇದೊಂದು ಠುಮರೀ :

ಸಂಯಾ ಚಲೇ ಪರದೇಸ
ಆವನ ಕಹಿಗಯೇ ಅಜಹೂ ನ ಅಯೆ ಸಂಯಾ |

ಆನಂದ ಭೈರವಿ :

ಉತ್ತರ ಕರ್ನಾಟಕದ ದೊಡ್ಡಾಟಗಳಲ್ಲಿ-ಅದರಲ್ಲಿಯೂ ವಿಶೇಷತಃ “ಸುಧನ್ವಾರ್ಜುನ ಕಾಳಗ” ಎಂಬ ಅಖ್ಯಾನದಲ್ಲಿ ಒಂದೇ ಧಾಟಿಯನ್ನು ಬೇರೆ ಬೇರೆ ರಸನಿಷ್ಪತ್ತಿಗಾಗಿ ಬಳಸುವ ಕೌಶಲ್ಯವನ್ನು ಜಾನಪದ ಕಲಾವಿದರು ತೋರುತ್ತಾರೆ.

ಅರ್ಜುನನ ಯಜ್ಞಾಶ್ವವನ್ನು ಸ್ತ್ರೀ ಮಲಯಾಳ ದೇಶದಲ್ಲಿ ಪ್ರಮೀಲೆ ಎಂಬ ರಾಣಿ ಕಟ್ಟಿಹಾಕಿದ್ದಾಳೆ. ಬಿಡಿಸಿಕೊಂಡು ಹೋಗಲು ಬಂದ ಅರ್ಜುನನ್ನು ಕಂಡು ಅವನಲ್ಲಿ ಅನುರಕ್ತಳಾಗುತ್ತಾಳೆ. ಯುದ್ಧ ಬೇಡ, ನೀನು ನನ್ನನ್ನು ಗೆಲ್ಲಲಾರೆ ಎಂದು ಅವನಿಗೆ ಬೋಧಿಸುತ್ತಾಳೆ; ಈ ರೀತಿಯಾಗಿ ಮಾತನಾಡಿ :

“ಮಂಗ್ಯಾನ ಕೈಯಲ್ಲಿ ಮಾಣಿಕ್ಯವನ್ನು ಕೊಟ್ಟರೆ ಹ್ಯಾಂಗೆ ಛಂಗಾಪಿಂಗಿಯಾಗುವುದೋ ಹಾಂಗೆ ನಿನ್ನ ದಂಡಾಳುಗಳ ಅಂಗಾಂಗಗಳೆಲ್ಲ ಭಂಗವಾಗಿ ಕಂಗಾಲಾದೀಯೆ. ಹೇ ಮಂಗ ಮಾನವಾ, ಈ ಅಂಗನೆಯರ ಇಂಗಿತವು ನಿನಗೆ ಹ್ಯಾಂಗೆ ತಿಳಿದೀತು: ಹೀಂಗೆ ಬಾ ಹೇಳುತ್ತೇನೆ ………ಭಲೆ ಹಲಲಲಲ ಶಾಹಬ್ಬಾ…ಸ”

ಹಾಡು : ಸಮರ ಮಾಡಲೀ ಬ್ಯಾಡಾ | ರಮಣನೆ ಎನ್ನ ಕೂಡ
ನಡೆಯುವಳಲ್ಲ ನಾನು ಸಮರದಿ ನಿನಗೆ ||

ಆನಂತರ ಆಟದ ಕತೆಗಾರ(ಭಾಗವತ)ನು ಹಾಡಿನ ಲಯವನ್ನು ಹೆಚ್ಚಿಸಿ ಹಾಡಲು ಹಿಮ್ಮೇಳದವರು “ಕೋಚು” ಹೊಡೆಯುತ್ತಾರೆ. ಕೋಚು ಎಂದರೆ ಅದೊಂದು ಬಗೆಯ ತಾನ. (ಹಾಡಿ ತೋರಿಸಲಾಗುವುದು) ಇಲ್ಲಿ ವೀರರಸ ನಿಷ್ಟನ್ನವಾಗುತ್ತದೆ.

ಪ್ರಮೀಲೆಗೆ ಪ್ರೇಮಭಿಕ್ಷೆಯನ್ನು ನೀಡದೆ ಅರ್ಜುನ ಕಾಳಗವನ್ನೇ ತೊಡುವೆ ನೆನ್ನಲು ಪ್ರಮೀಲೆ ಸರ್ವತಃ ಶರಣಾಗುತ್ತಾಳೆ.

ಈ ತನುವು ಈ ಮನವು
ಈ ಧನವು ನಿನ್ನದೋ ಪ್ರಿಯಾ… ಹಾ ಹಾ ಹಾ ಹಾ ಹ ||

ರೂಪಕದಲ್ಲಿರುವ ತಾಳವನ್ನು ಚತುರಶ್ರ ಗತಿಗೆ ತಂದು ಮುನ್ನಿನಂತೆ ಮತ್ತೆ ಕೋಚು ಹೊಡೆಯುವರು.

ಇಲ್ಲಿ ಶೃಂಗಾರರಸ, ಶರಣಾಗತಿ.

ಇದೇ ಆಟದಲ್ಲಿ ಅರ್ಜುನನ ಬಾಣಕ್ಕೆ ಬಲಿಯಾಗಿ ರಾಜಕುಮಾರ ಸುರಥನು ಸತ್ತಾಗ ಅವನ ತಂದೆ ಹಂಸಧ್ವಜರಾಜ ಶೋಕಿಸುತ್ತಾನೆ- ಇದೇ ರಾಗದಲ್ಲಿ :

ಹತವಾದೆಯಾ ಎನ್ನ ಸುತನೆ |
ಮತಿಗೆಟ್ಟು ಕಳಿಸುತ ಖತಿಗೊಂಡೆನಯ್ಯಾ ||

ಇಲ್ಲಿ ಶೋಕ, ಕರುಣರಸ.

ಜಾನಪದ ಈ ಧಾಟಿಯನ್ನೇ ಕರ್ನಾಟಕ ಸಂಗೀತದಲ್ಲಿ ತೆಗೆದುಕೊಂಡು ಆನಂದಭೈರವಿ ಎಂಬ ರಾಗವನ್ನು ರಚಿಸಿಕೊಂಡಿದ್ದಾರೆ :

(ಶ್ರೀ ಪುರಂದರರ ಕೃತಿ)
ಮಧುಕರ ವೃತ್ತಿ ಎನ್ನದು | ಅದು ಬಲು ಚೆನ್ನದು
ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣದ ಗುಣ ಅಲಾಪಿಸುತ್ತ
ಬಲು ಓಲಗ ಮಾಡುವಂಥ | ಮಧುಕರ |

ರಾಗಭೂಪ :

‘ಸಂಗ್ಯಾ ಬಾಳ್ಯಾ’ ಸಣ್ಣಾಟದಲ್ಲಿ ಅಭಿಜಾತಸಂಗೀತದ ಭೂಪಾಲೀ ರಾಗವನ್ನು ಜಾನಪದ ಶೈಲಿಗೆ ಅಳವಡಿಸಿಕೊಂಡು ಬಳಸಲಾಗಿದೆ. ವೆಂಕಟಮುಖಿಯ “ಚತುರ್ವಂದೇ ಪ್ರಕಾಶಿಕೆ” ಯಲ್ಲಿ ಭೂಪಾಲ ಎಂದು ಹೆಸರಿದ್ದರೂ ಕರ್ನಾಟಕ ಸಂಗೀತದಲ್ಲಿ ಈ ರಾಗವನ್ನು ಮೋಹನ ಎಂದು ಕರೆಯುತ್ತಿದ್ದಾರೆ. ಹಿಂದೂಸ್ತಾನಿಯಲ್ಲಿ ಭೂಪಾಲೀ ಅಥವಾ ಭೂಪ ಎನ್ನುತ್ತಾರೆ. “ಸಂಗ್ಯಾ ಬಾಳ್ಯಾ”ದಲ್ಲಿ ಈ ರಾಗವನ್ನು ಉಪಯೋಗಿಸುವಾಗ ಕೆಲವು ಸಲ ದೇಸಕಾರ ರಾಗದ ಛಾಯೆ ಕಂಡುಬರುವುದೂ ಉಂಟು.

ಇದು ಆಟದ ಆರಂಭದ ಗಣಪತಿಸ್ತುತಿ :

ಶ್ರೀ ಗಜಾನನ ತಾಳಸ್ವರದಿಂದ
ಭಜಿಸುವೆ ನಾನ ಗಜವದನ ||

ನಾಯಿಕೆಯಾದ ಗಂಗೆಯ ಬಳಿ ಪ್ರೇಮ ಯಾಚಿಸುವ ಹಾಡಿದು :

ಯಾಕಲೆ ಗಂಗೀ ಏನಂತೀ ನಿನಮ್ಯಾಗ ನನ ಪ್ರೀತಿ
ನಾವು ಬಾಯಿ ತೆರೆದು ಕೇಳಿದರ
ಮೂಗ ಮುರದು ಹೊಂಟೀ ||

ಈ ಹಾಡುಗಳಲ್ಲಿ ಅಡಕವಾಗಿರುವ ಭೂಪರಾಗವನ್ನು ಗುರುತಿಸಬೇಕಾದರೆ ಲಯವನ್ನು ವಿಲಂಬಗೊಳಿಸಬೇಕು. (ಹಾಡಿ ತೋರಿಸಲಾಗುವುದು).

ಬಂಗಾಲದ ಜತ್ರಾ :

ನಮ್ಮ ನಾಡಿನಲ್ಲಿ ಜಾತಿಗೇರು ಎಂಬ ಅಲೆಮಾರಿ ನಾಟ್ಯಕಲಾವಿದರ ತಂಡಗಳನ್ನು ಆಗಾಗ ಕಾಣಬಹುದು. ಇವರು ಹಗಲುವೇಷಧಾರಿಗಳು. ಊರ ಹೊರಗೆ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದು ಪೌರಾಣಿಕ ಪಾತ್ರಗಳ ವೇಷಭೂಷಣಗಳನ್ನು ಧರಿಸಿ ಹೊರಟು ಊರಿನ ಶ್ರೀಮಂತರ ಮನೆಯಮುಂದಿನ ಅಂಗಳದಲ್ಲಿ ನಾಟಕದ ದೃಶ್ಯವನ್ನು-ಹಾಡು ಕುಣಿತಗಳ ಸಮೇತ ಅಭಿನಯಿಸಿ ಧಾನ್ಯವನ್ನೂ ಹಣವನ್ನೂ ಸಂಭಾವನೆಯಾಗಿ ಪಡೆದು ಹೋಗುತ್ತಾರೆ. ಬಸವಣ್ಣನವರ ಸಮಕಾಲೀನನಾಗಿದ್ದ ಬಹುರೂಪಿ ಚೌಡಯ್ಯನೆಂಬ ಶರಣ ಇಂತಹ ಜಾತಿಗೇರ ಕಾಯಕದವನು.

ಇದೇ ಬಗೆಯ ಬೀದಿ ನಾಟಕಗಳಿಗೆ ಬಂಗಾಲದಲ್ಲಿ ಜತ್ರಾ ಎನ್ನುತ್ತಾರೆ. ಅವುಗಳನ್ನಾಡುವವರು ಜಾತ್ರಿಕರು. ಆ ಶಬ್ದದ ತದ್ಭವವೇ “ಜಾತಿಗ” ಜಾತಿಗೇರವ. ಹನ್ನೊಂದು ಹನ್ನೆರಡನೆಯ ಶತಮಾನಗಳಲ್ಲಿ ಉತ್ಕಲ, ಗೌಡ (ಬಂಗಾಲ), ಮಿಥಿಲಾ (ಬಿಹಾರ), ನೇಪಾಳಗಳನ್ನು ಕರ್ನಾಟಕದ ಬ್ರಹ್ಮಕ್ಷತ್ರಿಯ ಅರಸರು ಆಳುತ್ತಿದ್ದುದು ಇತಿಹಾಸ ವಿದಿತ ಸಂಗತಿ. ಅದರಿಂದಾಗಿ ಜತ್ರಾ ನಾಟಕಗಳ ಮೂಲಕ ಕನ್ನಡ ನಾಡಿಗೂ ಆ ದೇಶಗಳಿಗೂ ಜಾನಪದಸಂಸ್ಕೃತಿಯ ಸಂಬಂಧವುಂಟಾಗಿತ್ತು. ಉದಾಹರಣೆಗೆ, ಬಿಹಾರದ ಹಳ್ಳಿಯ ಹಾಡುಗಳ ಧಾಟಿಯೊಂದು ಸಂಸ್ಕಾರ ಹೊಂದಿ ಅಭಿಜಾತಸಂಗೀತದ ರಾಗಸ್ವರೂಪವನ್ನು ಪಡೆದಿದೆ. ಅದರ ಹೆಸರು ಬಿಹಾರೀ.

ಈ ರಾಗದ ಈ ಛಾಯೆಯನ್ನು “ಸಂಗ್ಯಾ ಬಾಳ್ಯಾ” ಹಾಡೊಂದರಲ್ಲಿ ಕಾಣಬಹುದಾಗಿದೆ :

ಕುಂತೀರಿ ಜನಾ ನಮಸ್ಕಾರ ಮಾಡಲೇನು ನಾನಾ
ಮುತ್ತಿನ ತುರಾಯ ಮುತ್ತಿನ ತುರಾಯ ಕೂಡೇತಿ
ಒಳ್ಳೆ ಭರತಿ ||

ಈ ಧಾಟಿಯನ್ನು ಹಿಂಜಿದರೆ ರಾಗವಾಗುತ್ತದೆ. ಆ ರಾಗದಲ್ಲಿ ಇದೊಂದು ಖಯಾಲ ಚೀಜು :

ಏ ಹೋ ನೀದಂನ ಆಯೀ ನೈನನ ಮೇಂ
ಪಿಯಾಕೇ ಮುಖ ದೇಖನೇಕೋ
ಉಮರ ಸಾರೀ ಬೀತ ಗಯೀ ತುಮ್ಹರೇ ಸೋಚ ಮೇ
ಸಜೀಲೀ, ಅಬತೋ ಆವೋ
ತಬ್ ಹೀ ಹೋವೇ ಸುಖ || ಎಹೋ ನೀಂದ ನ ಆಯೀ ||

ವಾದ್ಯಪರಿಕರ :

ದೊಡ್ಡಾಟದಲ್ಲಿ ಕತೆಗಾರ ಕೈಯಲ್ಲಿ ಕಂಚು-ಹಿತ್ತಾಳೆಗಳ ತಾಳಗಳನ್ನು ಹಿಡಿದ್ದ ಹಾಡುತ್ತಾನೆ. ನಾಲ್ಕಾರುಜನ ಅವನೊಂದಿಗೆ “ಹಿಮ್ಮ್ಯಾಳದ ಹುಡುಗರು” ಇರುತ್ತಾರೆ. ಪಲ್ಲವಿಯನ್ನು ಪುನರುಚ್ಚರಿಸಿ ಸಂದರ್ಭವರಿತು ಕೋಚು ಹೊಡೆಯುತ್ತಾರೆ. ಪಕ್ಕದಲ್ಲಿ ಮದ್ದಲೆ ಬಾರಿಸುವವನಿರುತ್ತಾನೆ. ಶ್ರುತಿಪೆಟ್ಟಿಗೆ ಆಧಾರ ಷಡ್ಜ ಹಾಗೂ ಪಂಚಮಗಳನ್ನು ಸಾರುತ್ತಿರುತ್ತದೆ. ಗಾಯಕನ ಧ್ವನಿಯೊಂದಿಗೆ ಸಹಕರಿಸಿ ಮುಖವೀಣೆಯವ ಹಾಡನ್ನೂ ತಾಳಗಳನ್ನೂ ಬಾರಿಸುತ್ತಾನೆ. ಅಪರೂಪಕ್ಕೆ ಸಾರಂಗಿ ಪಿಟೀಲೂಗಳೂ ಪಕ್ಕವಾದ್ಯವಾಗಿ ಸೇರಿರುತ್ತವೆ. ಶಾಸ್ತ್ರದಲ್ಲಿ ನಾಲ್ಕು ಬಗೆಯ ವಾದ್ಯಗಳನ್ನು ಹೇಳಲಾಗಿದೆ. ತತ, (ತಂತೀವಾದ್ಯ- ಪಿಟೀಲು, ಸಾರಂಗೀ), ಅವನದ್ಧ (ಮೃದಂಗ, ಮದ್ದಲೆ), ಘನ (ಕಂಚಿನ ತಾಳ) ಮತ್ತು ಸುಷಿರ (ರಂಧ್ರಗಳ ವಾದ್ಯ-ಕೊಳಲು, ಮುಖವೀಣೆ) ಎಂಬುದಾಗಿ. ಬಯಲಾಟದಲ್ಲಿ ಶಾಸ್ತ್ರೋಕ್ತವಾದ ಈ ನಾಲ್ಕೂ ಬಗೆಯ ವಾದ್ಯಗಳಿರುತ್ತವೆ; ಆದರೆ ಅವುಗಳನ್ನು ನುಡಿಸುವುದು ಮಾತ್ರ ಜಾನಪದ ಶೈಲಿಯಲ್ಲಿ.

ಲಾವಣಿಕಾರರು ಹಲಗೆಯಾಕಾರದ ಡಫ್ ನುಡಿಸಿಕೊಂಡು ಅದರ ಲಯಕ್ಕೆ ಹಾಡುತ್ತಾರೆ. ಕಥನಕವನಗಳನ್ನು ಹಾಡುವಾಗ ಅದರೊಂದಿಗೆ ಏಕತಾರೀ, ತುಂತುಣೀ, ದುಂದುಮಿ, ಕಾಮಾಕ್ಷಿ ಮುಂತಾದ ತಂತೀವಾದ್ಯಗಳನ್ನು ನುಡಿಸಿಕೊಂಡು ಹಾಡುವ ಕಲಾವಿದರೂ ದನಿಗೂಡಿಸುತ್ತಾರೆ. ನಾಲ್ಕು ತಂತಿಯ ತಂಬೂರಿ ಇರುವುದೂ ಇದೆ.

ಕೃಷ್ಣಪಾರಿಜಾತದ ಕತೆಗಾರನ ಕೈಯಲ್ಲಿಯ ಕಂಚಿನ ತಾಳ, ಯಕ್ಷಗಾನದ ಚಂಡೆ, ಯಲ್ಲವ್ವನ ಭಕ್ತನ ಚೌಡಿಕೆಯ ನುಡಿಕಾರ, ಕಣಿ ಹಾಗೂ ಕರಡೀ ಮಜಲಿನ ಲಯದ ಚಮತ್ಕಾರಗಳು ಅಭಿಜಾತ ಸಂಗೀತದ ತಬಲಾ ಉಸ್ತಾದರಿಂದ ಕೂಡಾ “ವಾಹವಾ” ಎಂಬ ಉದ್ಗಾರ ಹೊರಡಿಸುವಷ್ಟರ ಮಟ್ಟಿಗೆ ಪ್ರೌಢವೂ ವಿದ್ವತ್ಪೂರ್ಣವೂ ಆಗಿರುತ್ತವೆ. ಅದಕ್ಕೆ “ಲೆಹರಾ” ಹಿಡಿಯಲು ಸನಾದಿ (ಶಹನಾಯಿ) ವಾದ್ಯಗಾರರಿರುತ್ತಾರೆ.

ಗೀಗೀ ಪದ :

“ಶಹನಾಯಿ ನವಾಜ” ಉಸ್ತಾದ ಬಿಸಮಿಲ್ಲಾ ಖಾನರು ರಾಗಾಲಾಪನೆ ಆರಂಭಿಸುವಾಗ ಷಡ್ಜ ಹಿಡಿಯುವ ಒಂದು ವಿಶಿಷ್ಟ ಕ್ರಮವನ್ನನುಸರಿಸುತ್ತಾರೆ. ರೀ-ನೀ-ಸ- ಎಂಬ ಸಂಚಾರ ಅವರದು, ಸಾಮಾನ್ಯವಾಗಿ ಈ ಚಲನೆಯನ್ನು ನಾವು ನಮ್ಮ ಗೀಗೀಪದಗಳಲ್ಲಿ ಸರ್ವೇ ಸಾಮಾನ್ಯವಾಗಿರುವುದನ್ನು ಗುರುತಿಸಬಹುದಾಗಿದೆ, “ಗೀಯಗ, ಗೀಯಗ, ಗಹಗೀಯಗ, ಗೀಯಗ” ಎಂಬುದಾಗಿ. ಇದರ ಸ್ವರಗಳು ಬಿಸಮಿಲ್ಲಾರ ಶಹನಾಯಿಯ ಸ್ವರಗಳೇ ಆಗಿವೆ. ಹೀಗೆ : ನೀನಿಸಾ-ನೀನಿಸಾ-ರಿಸರೀಸಸ-ನೀನಿಸಾ…… (ಹಾಡಿ ತೋರಿಸಲಾಗುವುದು).

“ನಡೀ ಹೋಗೋಣ ಎಲ್ಲವ್ವನ ಜಾತರಿಗೆ-ಗೀಯಗ ಗೀಯಗ” ಈ “ಗೀಂಕೃತಿಯ” ಗಾಂಧಾರವನ್ನು ಕೋಮಲಗೊಳಿಸಿದರೆ ಪುಂಗೀ ನಾದದ ಸ್ವರಗಳು ಕೇಳಿಬರುತ್ತವೆ. ಹಾವಾಡಿಗರ ಈ ಪುಂಗಿಯೇ ನಾಗರದ ಹೆಡೆಯಂತೆ ವಿಕಸನಗೊಂಡು ಉದ್ದಗಲಗಳನ್ನು ಪಡೆಯಿತು. ಆಗ ಅದಕ್ಕೆ “ನಾಗಸ್ವರ” ಎಂಬ ಹೆಸರಾಯಿತು. ಅದರ ಮೂಲಸ್ವರೂಪ ಜಾನಪದ ಪುಂಗಿಯೆಂಬುದನ್ನರಿಯದೆ ಕೆಲವರು ಅದನ್ನು ನಾದಸ್ವರ ಎಂದು ತಪ್ಪಾಗಿ ಉಚ್ಚರಿಸುತ್ತಾರೆ. ನಾಗಸ್ವರವೀಗ ಅಭಿಜಾತಸಂಗೀತದ ಪಟ್ಟವನ್ನೇರಿದೆಯೆಂಬುದು ಸರ್ವವಿದಿತ.

ಪೂರಿಯಾ ಧನಶ್ರೀ :

“ಎಲ್ಲವ್ವನ ಗುಡ್ಡದಲ್ಲಿ ಮುಲ್ಲಾನಿಗೇನು ಕೆಲಸ?” ಎಂಬುದೊಂದು ಹಳೆಯ ಗಾದೆ. ಆದರೆ ಶಿಶುನಾಳ ಶರೀಫ ಸಾಹೇಬರು ಸವದತ್ತಿಯ ಯಲ್ಲವ್ವನ ಮೇಲೆ ರಚಿಸಿದ ಹಾಡನ್ನು ನಾವೀಗಾಗಲೇ ಕೇಳಿದ್ದೇವೆ. ಅವರದೇ ಇನ್ನೊಂದು ಹಾಡು-“ಎಲ್ಲರಂಥವನಲ್ಲ ನನ ಗಂಡ”. ಇಲ್ಲಿ ಅವರು ಪರ್ಯಾಯವಾಗಿ ತಮ್ಮ ಗುರುಗಳಾದ ಕಳಸದ ಗೋವಿಂದಭಟ್ಟರನ್ನು ಸ್ತುತಿಸಿದ್ದಾರೆ.

“ಎಲ್ಲರಂಥವನಲ್ಲ ನನಗಂಡ ಬಲ್ಲಿದನೆ ಪುಂಡ |
ಎಲ್ಲರಂಥವನಲ್ಲ ಕೇಳೆ
ಸೊಲ್ಲು ಸೊಲ್ಲಿಗೆ ಬೈದು ಎನ್ನ
ಎಲ್ಲಿಗ್ಹೋಗದಾಂಗ ಮಾಡಿಟ್ಟ | ಕಾಲ್ಮುರಿದು ಬಿಟ್ಟ | ಎಲ್ಲರಂಥವ …

ಈ ಧಾಟಿಯನ್ನು ಹೀಚಿದರೆ ಅಭಿಜಾತಸಂಗೀತದ “ಪೂರಯಾ ಧನಶ್ರೀ” ಎಂಬ ರಾಗ ಹೊಮ್ಮುತ್ತದೆ. ಕರ್ನಾಟಕೀಯಲ್ಲಿ ಇದಕ್ಕೆ ಪಂತುವರಾಳಿ ಎಂಬ ಹೆಸರು. ಇದನ್ನು “ಕಾಮವರ್ಧಿನೀ” ಎಂತಲೂ ಕರೆಯುತ್ತಾರೆ. ದೀಪಕ ರಾಗ ಹಾಡಿದರೆ ದೀಪಗಳು ಹತ್ತುತ್ತವೆಂತಲೂ ಮೇಘಮಲ್ಹಾರ ಹಾಡಿದರೆ ಮಳೆ ಬರುವುದೆಂತಲೂ ಜಾನಪದ ನಂಬುಗೆಯಿದೆ. ಆದುದರಿಂದ ನಾನೀಗ ಕರ್ನಾಟಕೀ ಕಾಮವರ್ಧಿನೀಯನ್ನು ಹಾಡದೆ ಹಿಂದುಸ್ತಾನೀ ಪೂರಿಯಾ ಧನಶ್ರೀ ಹಾಡುತ್ತೇನೆ. ಧ್ರುತ ತೀನತಾನದಲ್ಲಿರುವ ಖಯಾಲ ಚೀಜಿದು :

ಪಾಯಲಿಯಾ ಝನಕಾರ
ಝನನ ಝನನ ಬಾಜೇ ಝನಕಾನ |
ಪಿಯಾ ಸಮಝಾವೂ ಸಮಝತ ನಾಹೀಂ
ಸಾಸ ನನಂದ ಮೋರೀ ದೇಂಗೀ ಗಾರೀ ||

ಶರೀಫರು ಚಿತ್ರಿಸಿದ ನಲ್ಲ ಎಲ್ಲ ರಂಥವನಲ್ಲ; ಗಟ್ಟುಳ್ಳ ಗಂಡ; ಆ ನಲ್ಲ ಸುಭಾನಲ್ಲಾ; ನಲ್ಲೆ ತನ್ನನ್ನು ಬಿಟ್ಟು ಎಲ್ಲಿಗೂ ಹೋಗದಂತೆ ಕಟ್ಟುನಿಟ್ಟು ಮಾಡಿದ್ದಾನೆ. ಆದರೆ ಖಯಾಲ ಚೀಜಿನಲ್ಲಿರುವ ಪ್ರಮದೆ ಮಧ್ಯರಾತ್ರಿಯಲ್ಲಿ ಕದ್ದು ಕಾಂತನನ್ನು ಕೂಡಲು ಹೊರಟಿದ್ದಾಳೆ. ಅವಳ ಕಾಲಿನ ಪೈಜಣ ಝಣ ಝಣ ಸದ್ದು ಮಾಡುತ್ತವೆ. ಅದನ್ನು ಕೇಳಿ ಅತ್ತೆನಾದಿನಿಯರಿಗೆಲ್ಲಿ ಎಚ್ಚರವಾದೀತೋ ಎಂಬ ಭಯ ಅವಳಿಗೆ.

ಅಭಿಸಾರಿಕಾ :

ನಲ್ಲನನ್ನು ಕಾಣಲು ಹೊರಡುವ ನಾಯಿಕೆಯನ್ನು ಅಭಿಸಾರಿಕಾ ಎಂದು ನಾಟ್ಯಶಾಸ್ತ್ರದಲ್ಲಿ ಕರೆಯಲಾಗಿದೆ. ರಾತ್ರಿಯಲ್ಲಿ ಕಗ್ಗತ್ತಲಿನಲ್ಲಿ ಹೊರಟರೆ ಅವಳು ಕೃಷ್ಣಾಭಿಸಾರಿಕಾ. ಬೆಳುಂದಿಗಳಿನಲ್ಲೂ ಹೊರಡುವ ಧೈರ್ಯವಂತೆ ಶುಕ್ಲಾಭಿಸಾರಿಕಾ. ಹಾಗೂ ಹಗಲಲ್ಲಿ ಹೊರಡುವವಳು ದಿವಸಾಭಿಸಾರಿಕೆ. ಅವಳನ್ನು ಜಾನಪದ ತ್ರಿಪದಿಯೊಂದರಲ್ಲಿ ಕಾಣಬಹುದಾಗಿದೆ :

ಗಂಡನು ಕರೆದರೆ ಮಂಡಿ ನೋವೆಂಬಳು
ಮಿಂಡ ಬಲರಾಮ ಕರೆದರೆ ಎಲೆ ನಾರಿ
ಚೆಂಡಾಡ್ವ ವನಕೆ ನಡೆವಳು |

ಶುಕ್ಲಾಭಿಸಾರಿಕೆ, ಎಂದರೆ ಬೆಳುದಿಂಗಳಲ್ಲಿ ಹೊರಡುವವಳನ್ನು ಅಕ್ಕ ಮಹಾದೇವಿಯ ವಚನದಲ್ಲಿ ನೋಡುತ್ತೇವೆ :

ಅಳಿಸಂಕುಳವೇ ಮಾಮರವೆ ಬೆಳುದಿಂಗುಳೇ
ಕೋಗಿಲೆಯೇ ನಿಮ್ಮನೆಲ್ಲರನು
ಬಂದು ಬೇಡುವೆ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡರೆ
ಕರೆದು ತೋರಿರೇ ||

ಶರಣಸತಿ-ಲಿಂಗಪತಿ ಎಂಬುದು ವೀರಶೈವ ತತ್ತ್ವಪ್ರಣಾಲಿಯಲ್ಲಿ ಮಧುರಭಕ್ತಿಯ ಸಂಕೇತ, ಅದನ್ನು ಇನ್ನೂ ಒರೆದು ನೋಡಿದರೆ ನಮ್ಮ ಅಲೌಕಿಕ ಜೀವನವು ಸತಿಯೆಂದೂ ಪಾರಲೌಕಿಕ ಜೀವನ ಪ್ರಿಯಕರನೆಂದೂ ಹೇಳಬಹುದು. ಪತಿಯನ್ನು ತೊರೆದು ಪ್ರಿಯನನ್ನು ಕುಡುಕಿಕೊಂಡು ಹೋಗಿ ಅವನನ್ನು ನೆರೆಯುವುದೇ ಜೀವಾತ್ಮ ಪರಮಾತ್ಮ ಸಂಯೋಗ. ಅದುವೇ ಮೋಕ್ಷ. ಮಾನವ ಜೀವನದ ಗುರಿ ಅದೊಂದೇ. ಅದನ್ನು ಮಹಾದೇವಿಯಕ್ಕ ಇನ್ನೊಂದು ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ :

ಒಳಗಳ ಗಂಡನವ್ವಾ ಹೊರಗಣ ಮಿಂಡನವ್ವಾ
ಎರಡನೂ ನಡೆಸಲು ಬಾರದವ್ವಾ
ಲೌಕಿಕ ಪರಮಾರ್ಥವೆಂಬೆರಡನೂ ನಡೆಸಲು ಬಾರದವ್ವಾ
ಚೆನ್ನಮಲ್ಲಿಕಾರ್ಜುನಯ್ಯ
ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಲು
ಬಾರದಯ್ಯಾ.

ಮಾದೇವಿ-ಮಲ್ಲಿಕಾರ್ಜುನರ ಪ್ರೇಮದಂತೆಯೇ ರಾಧಾ ಕೃಷ್ಣರ ಪ್ರೇಮ : ಹಿಂದುಸ್ತಾನೀ ಅಭಿಜಾತಸಂಗೀತದಲ್ಲಿ ಅದಕ್ಕೆಯೆ ಪ್ರಾಶಸ್ತ್ಯ. ಮೇಲುನೋಟಕ್ಕೆ ಮಾನವ ಸಮಾಜದ ಹುಡುಗ ಹುಡುಗಿಯ ಪ್ರೇಮದಂತೆ ತೋರಿದರೂ ಜೀವಾತ್ಮ ಪರಮಾತ್ಮ ಐಕ್ಯದ ಸಂಕೇತ ರಾಧಾ-ಮಾಧವ ಸಂಬಂಧ. ಜಾನಪದದಲ್ಲಿಯಾದರೆ ಅದು ಬಹುಮಟ್ಟಿಗೆ ಸಾಮಾಜಿಕ ಜೀವನದ ವಾಸ್ತವ ಚಿತ್ರಣದ ಮಟ್ಟದಲ್ಲಿಯೇ ಇರುತ್ತದೆ. ಅದರಲ್ಲಿ ಸಾಂಕೇತಿಕ ಉಂಟೆಂದರೆ ಉಂಟು, ಇಲ್ಲವೆಂದರೆ ಇಲ್ಲ. ಕಲಾತ್ಮಕವಾಗಿರುವುದೆಂಬುದರಲ್ಲಿ ಮಾತ್ರ ಸಂಶಯವಿಲ್ಲ.

ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ದರ್ಶನ ಬಯಸಿ ಹೊರಟುದು ಸಾಂಕೇತಿಕವಾದರೆ ಜನಸಾಮಾನ್ಯರು ದೇವದರ್ಶನಕ್ಕಾಗಿ ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದುದನ್ನು ನೇರವಾಗಿ ನಿರೂಪಿಸುವ ಜಾನಪದ ಹಾಡೊಂದು ಹೀಗಿದೆ :

ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೋಡಲಾಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗಲಾಕ
ಧೂಪಾ ದೀಪಾ ಹಾಕತಾರಂತ……

ಈ ಹಾಡಿನ ಚಲನೆಯ ಸ್ವರಪ್ರಸ್ತಾರ ಹಾಕಿದರೆ ಹೀಗಾಗುವುದು :

ಸಸ ಸರೀರಿ ಗಿಗಾಗ ಮಪಾಪ | ಪಮಗರಿ ರೀಗಮಗರಿರಿಸ |
ಧೂಪಾದೀಪಾ ಹಾಕತಾರಂತ ಸಸಸರೀ ರೀಗಮಗರಿರಿಸಿ ||

ಚಾಚೂ ತಪ್ಪದೆ ಇದು ಛಾಯಾನಟ್ ಎಂಬ ರಾಗವಾಗುವುದು.

ಇದರಲ್ಲಿ ಒಂದು ದ್ರುತ್ ಚೀಜನ್ನು ಹೀಗೆ ಹಾಡುತ್ತಾರೆ :

ಝನನ ಝನನನ ಝನನನ ನನನ ಬಾಜೆ ಬಿಛವಾ
ಪಿಯಾ ಕೇ ಮಿಲನಕೋ ಚಲೀಜಾತ ಅಪನೆ
ಮಂದಿರಸೋ ಮಾಯಿ |
ಪೂಜಾ ಕರನಕೋ ನಿಕಲೀ ಫರಸೋ ಅಲಬೇಲೀ ನಾರ
ಚೂಮತೇ ಇನಾಯತ ಬಾರ ಬಾರ ||

ಇಲ್ಲಿನ ಚಿತ್ರಣ ದಿವಸಾಭಿಸಾರಿಕೆಯದು. ಪೂಜೆಗೆಂದು ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಮನೆಯಲ್ಲಿ ಹೇಳಿ ಕಾಂತನನ್ನು ಕಾಣಲು ಸಂಕೇತಸ್ಥಾನಕ್ಕೆ ಹೋಗುತ್ತಾಳೆ. “ಮಿಂಡ ಬಲರಾಮ ಕರೆದರ ಚೆಂಡಾಡ್ವ ವನಕೆ ನಡೆವಳು” ಎಂದು ಜಾನಪದ ಹಾಡಿನಲ್ಲಿ ಚಿತ್ರಿಸಿರುವುದು ಸಹ ಇಂತಹ ದಿವಸಾಭಿಸಾರಿಕೆಯನ್ನೇಯೆ. ಸಂಗೀತದಲ್ಲಿ ಸಾಮಾನ್ಯವಾಗಿ ಬರುವ “ಮಿಂಡ” ಶ್ರೀ ಕೃಷ್ಣ : ಶ್ಯಾಮಲ-ಸಾಂವರೋ-ಸಾಂವರಿಯಾ : ಪ್ರಿಯಕರ. ಇಲ್ಲಿ ಯಾಕೋ, ಪಾಪ, ಅವನಣ್ಣ ಬಲರಾಮನಿಗೆ ಆ ಪಟ್ಟ ದೊರೆತಿದೆ. ಇಂಗ್ಲೀಷಿನಲ್ಲಿ ಹೇಳುವ “ವೈನ ಆಂಡ ವುಮೆನ್” ಎಂದರೆ, ಮದಿರೆ ಮತ್ತು ಮದಿರಾಕ್ಷಿ- ಈ ಎರಡರಲ್ಲಿ ಬಲರಾಮನಿಗಿರುವ ದೌರ್ಬಲ್ಯ ಮದಿರೆ.

ಆಧುನಿಕ ಸಮಾಜದ ರಸಿಕ ಬಲರಾಮನೊಬ್ಬ ರಾತ್ರಿಯೆಲ್ಲ ಎಲ್ಲಿಯೋ ಕುಡಿದು ಮಜಾ ಮಾಡಿ ಬೆಳಗಿಗೆ ಮನೆಗೆ ಬರುತ್ತಾನೆ. ಅವನ ಹೆಂಡತಿ ಇರುಳೆಲ್ಲ ಎಚ್ಚರವಿದ್ದು ಅಳುತ್ತಾ ಕಾದು ಕುಳಿತಿದ್ದಾಳೆ. ಅವಳ ಕಣ್ಣು ಕೆಂಪಾಗಿದೆ. ಕಾರಣವೇನೆಂದು ಕೇಳುತ್ತಾನೆ ಈ ರಸಿಕ. ಧ್ರುಪದ ಚೀಜೊಂದರಲ್ಲಿ ಅವಳು ಹೀಗೆಂದು ಉತ್ತರಿಸುತ್ತಾಳೆ :

“ಶರಾಬ ಆಪನೇ ಪೀ, ಆಂಖೇ ಮೇರೀ
ಲಾಲ ಹೋಗಯೀ”

ರಸಿಕರಂಗ :

ಅಭಿಸಾರಿಕೆ- ಹೆಂಗಳು ನಲ್ಲನನ್ನರಿಸಿಕೊಂಡು ಹೋದರೆ ಅದಕ್ಕೆ ಜೀವಾತ್ಮ-ಪರಮಾತ್ಮ ಮಿಲನದ ಸಂಕೇತವೆಂಬ ಆಧ್ಯಾತ್ಮಿಕ ಅಭಿವ್ಯಕ್ತಿ ಬರುತ್ತದೆ. ಅದೇ ರಸಿಕ ವ್ಯಕ್ತಿಯೊಬ್ಬ- ಗಂಡಸು ಪರಕೀಯಳಲ್ಲಿ ಅನುರಕ್ತನಾದರೆ ಅದು ವೈಯಕ್ತಿಕ ಅನುರಕ್ತಿ ಮಾತ್ರವೆನಿಸುತ್ತದೆ. ಆ ರಸಿಕತೆಗೆ ಅನೈತಿಕತೆಯ ಸೋಂಕು ಕೂಡಾ ತಟ್ಟದಿರದು. ಈ ಮಾಯೆ ಬಿಟ್ಟೆನೆಂದರೆ ದೇವತೆಗಳನ್ನೂ ಬಿಡದು. ಜಾನಪದ ಕವಿಯೊಬ್ಬ ಕಂಚಿಯ ವರದರಾಜಸ್ವಾಮಿಯ ಗುಟ್ಟನ್ನು ಹೀಗೆ ಬಯಲು ಮಾಡಿದ್ದಾನೆ :

ಇಬ್ಬರ್ಹೆಂಡಿರ ಮೇಲೆ ಕದ್ದು ಸೂಳೆ ನೋಡಿದ
ಕಬ್ಬಿಣದ ಕದವ ಮುರಕೊಂಡು ವರದಯ್ಯ
ಎದ್ದಾನೆ ಸೂಳಿ ಮನೆಯಾಗೆ ||

ಶ್ರೀದೇವಿ ಭೂದೇವಿಯರೆಂಬ ಇಬ್ಬರು ಹೆಂಡಿರಿದ್ದರೂ. ದೇವಸ್ಥಾನದ ಕಬ್ಬಿಣದ ಬಾಗಿಲನ್ನು ಮುಚ್ಚಿ ಪೂಜಾರಿ ಬೀಗ ಜಡಿದು ಹೋಗಿದ್ದರೂ, ರಾತ್ರಿಯಲ್ಲಿ ಕಂಚಿಯ ವರದಯ್ಯ ಸಾಹಸ ಮಾಡಿ ಸೂಳೆಯ ಮನೆಗೆ ಹೋದನಂತೆ. ಇನ್ನು ಪುರಂದರಗಡದ ಶ್ರೀಮಂತ ಚಿನಿವಾರ ವರದಪ್ಪನಾಯಕನ ಮಗ ಸೀನಪ್ಪನಾಯಕ ಅರ್ಥಾತ ಪುರಂದರದಾಸರು ಶ್ರೀಕೃಷ್ಣನನ್ನು ಹೀಗೆ ಪ್ರಶ್ನಿಸುತ್ತಾರೆ :

ನೀನಿರುಳೆಲ್ಲದ್ದೆ ಪೇಳಯ್ಯಾ?
ಶ್ರೀನಿವಾಸ ಮಾರುತಿ ಗೋವಳರಾಯಾ |
ಅರಸಿ ರುಕ್ಮಿಣಿ ಜಾಂಬವತಿಯರಲ್ಲಿ | ಅರಸಿ ನೋಡಿದರಿಲ್ಲ
ಜಗದೇಕ ಪುರಂದರ ವಿಠಲರಾಯಾ || ನೀನಿರುಳೆಲ್ಲಿದ್ದೆ?

ಅಭಿಜಾತಸಂಗೀತದಲ್ಲಿ ಸೂಳೆ ಎಂಬ ಪದವನ್ನು ನೇರವಾಗಿ ಉಪಯೋಗಿಸುವುದಿಲ್ಲ.

ಸಾಮಾನ್ಯವಾಗಿ ನಾಟಕದಲ್ಲಿ – ಅತ ಏವ ವಸ್ತು,- ಸಂಗೀತದಲ್ಲಿ ನಾಯಿಕೆಯನ್ನು ಸ್ವೀಯಾ, ಅನ್ಯಾ ಮತ್ತು ಸಾಮಾನ್ಯಾ ಎಂದು ವಿಂಗಡಿಸಲಾಗಿದೆ. ತನ್ನ ಹೆಂಡತಿ ಸ್ವೀಯಾ ನಾಯಿಕೆ, ಪರನಾರಿಯಲ್ಲಿ ಒಬ್ಬನು ಅನುರಕ್ತನಾಗಿದ್ದರೆ ಅವಳು ಅನ್ಯಾ ಅಥವಾ ಪರಕೀಯಾ. ಸೂಳೆ ಸಾಮಾನ್ಯಾ ಎಂಬ ನಾಯಿಕೆ. ಸ್ವೀಯಾ ನಾಯಿಕೆ ತನ್ನ ಪತಿ ಅನ್ಯಾ ಅಥವಾ ಸಾಮಾನ್ಯಾಳಲ್ಲಿ ಅನುರಕ್ತನಾಗಿದ್ದರೆ ಅವಳನ್ನು “ಸವತಿ” (ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಸೌತನ್ ಎಂದು) ನಮೂದಿಸುತ್ತಾಳೆ. ಪತಿಯ ರಸಿಕತನವನ್ನು ಅವಳು ಒಮ್ಮೊಮ್ಮೆ ಊಹಿಸುತ್ತಾಳೆ. ಒಮ್ಮೊಮ್ಮೆ ಬೇರೆಯವರಿಂದ ತಿಳಿದುಕೊಳ್ಳುತ್ತಾಳೆ. ಬೇಡವಾದ ಸಂಗತಿಯನ್ನು ಅವಳ ಕಿವಿಯವರೆಗೆ ತಂದು ಮುಟ್ಟಿಸುವುದರಲ್ಲಿ ಕೆಲ ಹೆಂಗಸರಿಗೆ ಆನಂದವಿರುತ್ತದೆ. ಅಂತಹ ಹೆಂಗಸೊಬ್ಬಳು ಗೃಹಿಣಿಯ ಮನೆಗೆ ಬಂದು ವರದಿಯನ್ನೊಪ್ಪಿಸುತ್ತಾಳೆ :

ಚಿಂತಾಕು ಇಟುಗೊಂಡು ಚಿಪ್ಪಾಡಿ ಬಳಿಯೋಳೆ
ಚಿಂತಿಲ್ಲಯೇನ ನಿನಗಟು | ನಿನರಾಯ
ಅಲ್ಲೊಬ್ಬಳ ಕೂಡ ನಗತಿದ್ದ ||

ಗರತಿಯೊಬ್ಬಳು ಚಿಂತಾಕು ಎಂಬ ಕೊರಳ ಆಭರಣವನ್ನು ಧರಿಸಿ ಹಕ್ಕಿಯಲ್ಲಿಯೋ ಕಣದಲ್ಲಿಯೋ ಉರುವಲಿಗೆ ಬೇಕಾಗುವ ಚಿಪ್ಪಾಡಿಗಳನ್ನು ಬರಲಿನಿಂದ ಬಳಿದು ಒಟ್ಟು ಮಾಡುತ್ತಿದ್ದಾಳೆ. ಅತ್ತ ಅವಳ ಗಂಡ ಯಾರೋ ಒಬ್ಬಳ ಜೊತೆಯಲ್ಲಿ ಚಕ್ಕಂದವಾಡುತ್ತಿರುವುದನ್ನು ಹೊಟ್ಟೆಕಿಚ್ಚಿನವರು ಬಂದು ತಿಳಿಸಿದಾಗ ಅವಳು ವ್ಯಗ್ರಳಾಗದೆ ಉತ್ತಿರುಸುತ್ತಾಳೆ :

ನಕ್ಕಾರೆ ನಗಲವ್ವ ನಗಿಮುಖದ ಕ್ಯಾದೀಗಿ
ನಾ ಮುಚ್ಚಿ ಮುಡಿದ ಪರಿಮಳದ ಮಲ್ಲೀಗಿ
ಅವಳೊಂದು ಗಳಿಗಿ ಮುಡಿಯಾಲಿ ||

ಎಂದು ಸವತಿಮತ್ಸರವನ್ನು ಹತ್ತಿಕ್ಕಿಕೊಂಡು ಗಂಡನಿಗೆ ಅಲ್ಪಸ್ವಲ್ಪ ಸ್ವಾತಂತ್ರ್ಯವನ್ನು ದಯಪಾಲಿಸುತ್ತಾಳೆ.

ಇಂತಹ ಸತಿಯೊಬ್ಬಳು ಅಭಿಜಾತಸಂಗೀತದಲ್ಲಿ ಹೀಗೆ ನುಡಿಯುತ್ತಾಳೆ :

(ರಾಗ- ಮಾರವಾ, ತೀನತಾಲ)

ಜೋ ಲಾಖ ಕಹೇ ತೋ ಏಕ ನಾ ಗಿನೂಂಗೀ
ಏರೀ ಹೂಂ ತೋ ದೇಖ ರಿಝಗ ಯೀ
ಸದಾರಂಗ ಉನಕೋ ಸ್ವಭಾವ ||

(ಎಂದರೆ, ಯಾರು ಏನೇ ಹೇಳಲಿ, ನಾನು ಒಂದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಾ ಬಲ್ಲೆ ; ನನ್ನ ನಲ್ಲ ಮಹಾ ರಸಿಕ, ಸ್ವಭಾವತ ; ಅವನು ಸದಾ – ರಂಗ ; ರಂಗೀಲಾ. ವರ್ಣರಂಜಿತ ವ್ಯಕ್ತಿತ್ವ ಅವನದು).

ಬೇರೆಯವರೆದುರು ಅವನನ್ನು ಬಿಟ್ಟುಕೊಡುವುದಿಲ್ಲ. ಆದರೆ ಆ ರಸಿಕರಂಗ ಮನೆಗೆ ಬಂದಾಗ ಅವಳು ತರಾಟೆಗೆ ತೆಗೆದುಕೊಳ್ಳದೆ ಬಿಡುವುದಿಲ್ಲ. ಅವನು ಹೊದ್ದುಕೊಂಡಿದ್ದ ಸೆಲ್ಯಾ ಮಾಸಿದೆ. “ಸಾಯಂಕಾಲೇ ವನಾಂತೇ ಕುಸುಮಿತ ಸಮಯೇ ಸೈಕಲೇ ಚಂದ್ರಿಕಾಯಾಂ ….” ಮರಳ ಮೇಲೆ – ಸೈಕಲೇ – ತನ್ನ ಸೆಲ್ಯವನ್ನೆ ಹಾಸಿದ್ದನೋ ಏನೋ ! ಅದನ್ನು ಕಂಡು ಅವಳು ಮಾತಿನ ಶಲ್ಯದಿಂದ ತಿವಿಯುತ್ತಾಳೆ :

ಎಲ್ಲೀಗಿ ಹೋಗಿದ್ದಿ ರಾಯಾ ಸೆಲ್ಲ್ಯಾಕ ಮಾಸೇದ
ಅಲ್ಲೊಬ್ಬಳ ಕೂಡ ಸಲಗೀಯ ನೀನ್ ಮಾಡಿ
ಇಲ್ಲೆಂಬುದೇನ ನನ ಮುಂದ ||

ಅಭಿಜಾತ ಸಂಗೀತದ ನಾಯಿಕಿಯೊಬ್ಬಳು ಹೀಗೆ ಪ್ರಶ್ನಿಸುತ್ತಾಳೆ :

(ರಾಗ – ಛಾಯನಟ, ವಿಲಂಬಿತ ಝುಮರಾ ತಾಲ)
‘ಏ ಕರತ ಹೋ ತುಮನೇ ಹಾಂಕೀ ಝೂಟೀ ಬತೀಯಾ ಬನಾಯೀ
ಏಕ ಹಮ ಹೌಂ ಜಾನತ ತುಮ ಹೋ ಜಾನತ
ಸಬ ಜಗ ಜಾನತ ಹೈ ಹಿಯರಾ ಸೋ ಹಿಯರಾ ಮಿಲಾಯೆ ||

(ಸುಮ್ಮನೆ ಬರಿದೆ ಸ್ನೇಹ ಯಾರದೊ ಜೊತೆಗೆ ಎಂದು ಸುಳ್ಳು ಹೇಳಬೇಡ- ಝೂಟೀ ಬತೀಯಾ- ನಾ ಬಲ್ಲೆ, ನೀ ಬಲ್ಲೆ. : ಜಗವೆಲ್ಲ ಬಲ್ಲುದು ; ನಿಮ್ಮಿಬ್ಬರ ಹೃದಯಗಳ ಬೆಸುಗೆಯಾಗಿದೆ.)

ಕುಪಿತಳಾದ ಅವಳನ್ನು ಸಮಾಧಾನಗೊಳಿಸಲು ನಾಯಕ ಮುಂದೆ ಬರುತ್ತಾನೆ. ಅವಳಿಗಿನ್ನೂ ಹೆಚ್ಚಿನ ನೋವಾಗುತ್ತದೆ. ಏಕೆಂದರೆ ಅವನ ಹೆಗಲ ಮೇಲಿರುವ ಸೆಲ್ಲ್ಯದಿಂದ ಒಳ್ಳೆಯ ಅತ್ತರಿನ ವಾಸನೆ ಬರುತ್ತದೆ. ಕೇಳುತ್ತಾಳೆ :
ಎಲ್ಲಿಗೆ ಹೋಗಿದ್ದಿ ಯಾವ ಯಾವ ಹೂವ ಮುಡಿದಿದ್ದಿ
ಯಾರ ತೋಳಲ್ಲಿ ಒರಗಿದ್ದಿ ನನ ರಾಮಾ
ವಲ್ಲಿ ಸೆರಗೆಲ್ಲ ಪರಿಮಳ ||

ಅವನು ಹೊದೆದಿದ್ದ ವಲ್ಲಿಯ ಸೆರಗಿನಿಂದ ಸೂಸುವ ಸುವಾಸನೆ ಅವನ ವಿಷಯ ವಾಸನೆಯ ಸಾಕ್ಷ್ಯ ನುಡಿಯುತ್ತದೆ. ಅಭಿಜಾತಸಂಗೀತದ ನಾಯಿಕೆಯು ಅದನ್ನು ಸವತಿಯ ಸುಗಂಧ- ಸೌತನಕೇ ಸುಗಂಧ ಎಂದು ಗುರುತಿಸುತ್ತಾಳೆ ಬಹು ಬೇಗ :

(ರಾಗ – ಪಂಚಮ; ವಿಲಂಬಿತ ತೀನ ತಾಲ)
‘ಏ ಮಂದ ಮಂದ ಮುಸಕಾಯೇ ಆಯೆ ಹೋ
ಸೌತನ ಕೇ ಸಿಕಲಾಯೆ ಹೋ
ನಯೀರೀ ಲಗನ ಲಾಗೀ ದರಸ ಸರಸ ಅಂಗಮೇ ತೇಹಾರೀ
ಛಾಯೀ ಸೌತನಕೇ ಸುಗಂಧ ||

(ಎಲೈ ಸರಸಿಯಾದ ದರಸನೇ-(ದರಸ ಎಂಬುದು ಕವಿಯ ಮುದ್ರಿಕೆ-ದರಸಪಿಯಾ- ಎಂದರೆ ಪ್ರಿಯದರ್ಶನ-ಸುದರ್ಶನ) ಬೆಳಗಿನಲ್ಲಿ ನನ್ನ ಬಳಿಗೆ ಬಂದಿರುವೆ ಮುಗುಳ್ನಗುತ್ತ- ಆ ನನ್ನ ಸವತಿ ಕಲಿಸಿ ಕಳಿಸಿದಳೋ? ಹೊಸದಾಗಿ ಮದುವೆಯಾಗಿರುವ ನೀನು ಹೀಗೆ ನಡೆದುಕೊಳ್ಳುವುದೇ? ಅದೋ, ನಿನ್ನ ಮೈಯಿಂದ ಸವತಿಯ ಅತ್ತರಿನ ವಾಸನೆ ಸೂಸುತ್ತಿದೆ.)
“ಪರಿಮಳದರಸು ಪರನಾರಿಗ್ಹೋದರ” ಮುಂದೆ ತನ್ನ ಸಂಸಾರದ ಗತಿಯೇನು? ಕೇಳಿಯೇ ಬಿಡುತ್ತಾಳೆ :

ಅಂಗೀ ಮ್ಯಾಲಂಗೀ ತರವೇನೋ ನನ ರಾಯಾ?
ಸಣ್ಣವಳ ಮ್ಯಾಲೆ ಸವತ್ಯಾಕ?

ಅವಳಿಗೇನು ವಯಸ್ಸಾಗಿದೆಯೇ ಅವನು ಬೇರೆಯವಳ ಬಳಿ ಹೋಗಲು? ಇನ್ನು, ಅಭಿಜಾತಸಂಗೀತದ ನಾಯಿಕೆಯೊಬ್ಬಳು “ಛೋಟೀ-ಲಾಡೀ” – ಚಿಕ್ಕವಳು, ಮೇಲಾಗಿ ಪ್ರಿಯಳು, ಅವಳು ಅವನ ಮನವೊಲಿಸಲು ಕೈಯಾರೆ ಕೊಡಲು ಬರುವ ಮಧುವನ್ನು ಅವನೇಕೆ ಸೇವಿಸದಿರುವೆ?

(ರಾಗ- ಪರಜ; ವಿಲಂಬಿತ ಏಕತಾಲ)
ಛೋಟೀ ಲಾಡೀ ದೇಶಾ ತಾನೇ ದಾರೂರಾ
ಹೇ ಮಾರೂ ರಾ ರಾಜಾ ಪೀಯೋ ||

ಜಾನಪದ ಗೃಹಿಣಿಯೊಬ್ಬಳು ತನ್ನ ಪತಿಯ ವಿಷಯದಲ್ಲಿ ಸಾಕಷ್ಟು ನಿರಾಶಳಾಗಿದ್ದಾಳೆ. ಅವನನ್ನು ತಿದ್ದುವುದೂ ತನ್ನ ವಶದಲ್ಲಿಟ್ಟುಕೊಳ್ಳುವುದೂ ಇನ್ನು ಅಸಾಧ್ಯವೆಂದೇ ಬಗೆದಿದ್ದಾಳೆ. ತನ್ನ ಕಣ್ಣೀರನ್ನು ಕಂಡು ಅವನೇನೂ ಕರಗುವುದಿಲ್ಲ. ಅಂದ ಮೇಲೆ ಅತ್ತು ಪ್ರಯೋಜನವೇನು? ಅಲ್ಲದೆ ಸೂಳೆಯ ಮನೆಯಲ್ಲಿ ಅವನಿಗೆ ಚಿನ್ನದ ವರೇಖನ್ನು ಹಚ್ಚಿದ ವೀಳ್ಯ ಸಿಗುತ್ತಿರುತ್ತದೆ. ಅದು ಮನೆಯಲ್ಲಿ ಸಿಗಲಾರದು. ಅದಕ್ಕಾಗಿ ಅವಳವನಿಗೆ ಹೇಳುತ್ತಾಳೆ :

ಕಣ್ಣೀರು ನಮಗಿಲ್ಲ ಕಡುದುಕ್ಕ ನಮಗಿಲ್ಲ
ಹೊನ್ನಿನ ವಿಳ್ಯಾ ನಮಗಿಲ್ಲ ರಾಯರೆ
ಹೋಗಿರಿ ನಿಮ್ಮ ಸೂಳೆಯ ಮನಿಗೆ ||

“ಯಾಹಿ ಮಾಧವ ಯಾಹಿ ಕೇಶವ” ಎಂಬುದಾಗಿ ಜಯದೇವನ “ಗೀತ ಗೋವಿಂದ”ದ ಅಷ್ಟಪದಿಗಳನ್ನು ಕರ್ನಾಟಕೀಸಂಗೀತಗಾರರು ಕೆಲವರು ಹಾಡುವುದುಂಟು. ಅವುಗಳಲ್ಲಿ ಚಿತ್ರಿತವಾದ ಸಂದರ್ಭವೆಂದರೆ, ಇತರ ಗೋಪಿಯರೊಡನೆ ಚಕ್ಕಂದವಾಡಿ ಕೃಷ್ಣ ರಾಧೆಯ ಬಳಿಗೆ ಬಂದಾಗ ಕುಪಿತಳಾಗಿರುವ ಅವಳು ಅವನನ್ನು ದೂರೀಕರಿಸುತ್ತಾಳೆ. ಹೊರಟುಹೋಗೆಂದು ಹೇಳುತ್ತಾಳೆ- “ಯಾಹಿ ಮಾಧವ” ಎಂದು. ಖಯಾಲಿನಲ್ಲಿ ಚಿತ್ರಿತಳಾಗಿರುವ ಕಲಹಾಂತರಿತಾ ನಾಯಿಕೆ “ವಹೀಂ ಜಾವೋ ಜಿನಕೇ ಮನ ಭಾಯೇ ಹೋ” ಎಂದರೆ, ಯಾವಳ ಮನಸ್ಸಂತೋಷಪಡಿಸಿರುವೆಯೋ ಅವಳಲ್ಲಿಗೇ ಹೋಗು ಎನ್ನುತ್ತಾಳೆ :

(ರಾಗ – ಲಲಿತ : ದ್ರುತ್ ತೀನತಾಲ)
ಕಾಹೇ ಸೌತವಿಯಾ ಧಿಂಗ ಬಿರಮಾಯೇ ಹೋ
ವಹೀಂ ಜಾವೋ ಜಿನಕೇ ಮನ ಭಾಯೇ ಹೋ
ಅಜೀಜ ಪಿಯಾ ತುಮ ಅಪನೇ ಮತಕೇ
ಬೋರ ಭಯೀ ತಬ ಆಯೇ ಹೋ ||

(ನನ್ನ ಸವತಿಯ ಸಹವಾಸದಲ್ಲಿ ಇರುಳನ್ನು ಕಳೆದು ಬೆಳಗಿಗೆ ನನ್ನ ಮನೆಗೆ ಬಂದಿರುವೆಯಲ್ಲವೆ ಅಜೀಜಪಿಯಾ? ಹೋಗು, ಹೋಗು, ಅವಳ ಬಳಿಗೇ ಹೋಗೂ.)

ಹೀಗೆ, “ಹೋಗಿರಿ ನಿಮ್ಮ ಸೂಳೆಯ ಮನೆಗೆ” ಎಂದು ಜಾನಪದ ನಾಯಿಕೆ ಹೇಳಿದ್ದರೆ ನಾಗರಿಕ ನಾಯಿಕೆ “ಹೋಗು ಆ ನನ್ನ ಸವತಿಯ ಕಡೆಗೆ” ಎಂದು ಮೂದಲಿಸುತ್ತಾಳೆ. “ಸೋಹನಿ” ರಾಗದಲ್ಲಿ ಒಬ್ಬಳು ಕಲಹಾಂತರಿಕ ನಾಯಿಕೆ ಹೀಗೆನ್ನುತ್ತಾಳೆ :

ಕಾಹೇ ಅಬ ತುಮ ಆಯೇ ಹೋ ಮೋರೇ ದ್ವಾರೆ
ಸೌತನ ಸಂಗ ಜಾಗೆ ರಸ ಪಾಗೇ ಅನುರಾಗೇ ಧಾಗೇ ||
ಮೀಠೀ ಮೀಠೀ ಬತಿಂಯಾ ಕರೋನಾ ತುಮ ಹಮ ಸಂಗ
ವಹೀ ಜಾವೋ ಜಿನ ಸೌತನ ಸಂಗ ಜಾಗೇ ||

(ಸವತಿಯ ಸಂಗದಲ್ಲಿ ಇರುಳೆಲ್ಲ ಎಚ್ಚರವಿದ್ದು ರಸನಿಮಿಷಗಳನ್ನು ಸವಿದು ಬೆಳಗಿಗೆ ನನ್ನ ಬಾಗಿಲಿಗೆ ಬಂದಿರುವೆಯಲ್ಲ; ಸಾಕು ಸಾಕು, ಸಕ್ಕರೆಯಂತಹ ಮಾತುಗಳನ್ನಾಡಲು ಬರಬೇಡ; ಯಾವಳ ಜೊತೆಗೆ ಜಾಗರಣೆ ಮಾಡಿದೆಯೋ ಅವಳಲ್ಲಿಗೆ ಹೋಗು).

ಮನೆಗೆ ಬಂದವನನ್ನು ಹೆಂಡತಿ ಹೀಗೆ ನಿರಾಕರಿಸಿದರೆ ಅವನಾದರೂ ಏನು ಮಾಡಬೇಕು? ಮಧ್ಯಾಹ್ನವಾಗುವುದು, ಸಂಜೆಯಾಗಿ ರಾತ್ರಿಯೂ ಆದೀತು. ಅವಳ ಮನವೊಲಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. “ಗಂಡ ಹೆಂಡಿರ ಜಗಳ ಉಂಡು ಮನವೊಲಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. “ಗಂಡ ಹೆಂಡಿರ ಜಗಳ ಉಂಡು ಮಲಗುವತನಕ” ಎಂಬ ಮಾತು ಸುಳ್ಳಾಗುತ್ತದೆ. ವ್ಯಗ್ರನಾಗಿ ಮನೆಯಿಂದ ಹೊರಡುತ್ತಾನೆ. ಕಾರಿರುಳು; ಜಡಿಮಳೆ ಬೇರೆ. ಅದರಲಿಯೇ ನಡೆದು ಪ್ರೇಯಸಿಯ ಮನೆಯನ್ನು ತಲುಪುತ್ತಾನೆ. ಅವಳಿಗೂ ಆಶ್ಚರ್ಯ : ಕೇಳಿಯೇ ಬಿಡುತ್ತಾಳೆ :

ಕಾರೆಂಬೊ ಕತ್ತಲಿ ಭೋರೆಂಬೋ ಮಳಿಮೋಡ
ಏನು ಹಿಡಿದಿತ್ತು ಬರುವೋಕೆ ನನ್ನ ಗೆಣಿಯಾ
ರಾಣಿಲ್ಲವೇನೋ ಮನಿಯಲ್ಲಿ?

ಮನೆಯಲ್ಲಿ ರಾಣಿಯಿದ್ದರೇನು, ನೀನೆನ್ನ ಅರಗಿಣಿ, ನಿನ್ನನ್ನು ಬಿಟ್ಟು ಇರಲಾರೆ. ಅದಕ್ಕಾಗಿ ಬಂದ ಎಂದು ಹೇಳಬೇಕಾಗುತ್ತದೆ ಅವನು. ಇಲ್ಲವಾದರೆ ಇಲ್ಲಿಯೂ ಅರ್ಧಚಂದ್ರವಾದೀತಲ್ಲ |