ಚಳಿಜ್ವರ ಬಿಟ್ಟವು ಒಳಜ್ವರ ಬಿಡಲಿಲ್ಲ
ಜಾಜಿ ಮಂಟಪದ ಮನೆಯನ್ನೆ ಅತ್ತೀ ಮಗನೆ
ಮಂತ್ರಿಸಿ ಹೋಗು ತಲೆನೋವು ||

ಭೈರವೀ ಠುಮರೀ ಚೀಜೊಂದರಲ್ಲಿ ರೂಪಿಸಲ್ಪಟ್ಟ ಅಭಿಜಾತ ನಾಯಿಕೆ ತನ್ನ ನಲ್ಲನ ಜಾದೂಗಾರಿಕೆಯನ್ನು ಬಣ್ಣಿಸುತ್ತಾಳೆ, ವಿವರಿಸುತ್ತಾಳೆ. ಅವನು ಮಾಡಿದ ಜಾದೂ ಎಂತಹುದು? ಅವಳ ತೋಳಬಂದಿಯನ್ನು ರಟ್ಟೆಯಿಂದ ಕೆಳಕ್ಕೆ ಜಾರಿಸಿ ಮುಂಗೈಗೆ ಬರಿಸಿದನಂತೆ; ಅರ್ಥಾತ್ ಅವನ ವಿರಹದಲ್ಲಿ ಕರಗಿ ಕೊರಗಿ ಅವಳ ತೋಳು ಸಣ್ಣಾಗಿ ಮೊಳಕೈಯ ಮೇಲಿನ ಬಂದಿ ಮುಂಗೈಗಿಳಿದಿದೆ. ಅದನ್ನು ಕಾವ್ಯಮಯವಾಗಿ ಅವಳಿಂತು ವಿವರಿಸುತ್ತಾಳೆ :

ಬಾಜೂ ಬಂದ ಖುಲ ಖುಲ ಖುಲ ಜಾಯ
ಸಾಂವರಿಯಾನೇ ಜಾದೂ ಡಾರಾ |
ಜಾದೂಕೀ ಪುಡಿಯಾ ಅಂಗಪರ ಡಾರೀ ಡಾರೀ
ಕ್ಯಾ ಕರೇಗಾ ಬೈದ ಬೆಚಾರಾ
ಸಾಂವರೀಯಾನೇ ಜಾದೂ ಡಾರಾ ||

ಅವಳು ಇಷ್ಟು ಸೊರಗಿದ್ದಾಳೆ, ಸರಿಯಾಗಿ ಊಟ ಮಾಡುತ್ತಿಲ್ಲ. ಯಾವಾಗಲೂ ಅನ್ಯಮನಸ್ಕಳಾಗಿ ಎತ್ತಲೋ ನೋಡುತ್ತ ಕುಳಿತುಬಿಡುತ್ತಾಳೆ. ಏನಾಗಿದೆ ಇವಳಿಗೆ? ಏನು ಕಾಯಿಲೇ ಭೂತ ಪಿಶಾಚಿ ಬಾಧೆಯೇನಾದರೂ ಇರಲಿಕ್ಕಿಲ್ಲವಷ್ಟೇ? ಯಾರಿಗೆ ಗೊತ್ತು? ಇದ್ದರೂ ಇರಬಹುದು. ಅದಕ್ಕಾಗಿ ಮಂತ್ರವಾದಿ ವೈದ್ಯನೊಬ್ಬನನ್ನು ಕರೆಸುತ್ತಾರೆ. ಅವನು ಭೂತೋಚ್ಚಾಟನೆಯ ಮಂತ್ರಗಳನ್ನು ಉಚ್ಚರಿಸುತ್ತ ಬೂದಿಯನ್ನೂಡುತ್ತಾನೆ. ಅದನ್ನು ಕಂಡು ಇವಳಿಗೆ ಒಳಗೊಳಗೇ ನಗು, ವಿಷಣ್ಣಳಾಗಿ ನಗುತ್ತಾಳೆ. ಜಾದುವಿನ ಪುಡಿಯನ್ನು ನನ್ನ ಮೇಲೆರಚಿ-ಜಾದೂಕೀ ಪುಡಿಯಾ ಅಂಗಪರ ಡಾರಿ ಡಾರಿ- ಕ್ಯಾ ಕರೇಗಾ ಬೈದ ಬೇಚಾರಾ? ಪಾಪದ ವೈದ್ಯನಿವ ಏನು ಮಾಡಬಲ್ಲ? ಇಂಥ ಯಾವ ಮಂತ್ರಕ್ಕೂ ಮಣಿಯದ ಜಾದುವನ್ನು ಪ್ರಿಯಕರ-ಸಾಂವರಿಯಾ- ನನ್ನ ಮೇಲೆ ಪ್ರಯೋಗಿಸಿದ್ದಾನೆ !

ಸಾಂವರಿಯಾಗೋರೀ

ಹಿಂದುಸ್ತಾನೀ ಸಂಗೀತಕೃತಿಗಳಲ್ಲಿ ಗೋರೀ ಮತ್ತು ಸಾಂವರಿಯಾ ಎಂಬ ಪದಗಳ ಪ್ರಯೋಗ ಆಗಾಗ ಆಗುತ್ತಲೇ ಇರುತ್ತದೆ. ಸಾಂವರಿಯಾ ಎಂದರೆ ಪ್ರೇಮಿ-ಪ್ರಿಯಕರ. ಅದರ ಮೂಲ ರೂಪ ಶ್ಯಾಮಲ. ಎಂದರೆ ಕಪ್ಪು ಮೈಯವ. ಕೃಷ್ಣ ಕಪ್ಪಾಗಿದ್ದನೆಂಬ ಕಾರಣಕ್ಕಾಗಿ ಪ್ರಿಯತಮರೆಲ್ಲ ಕರಿಯ ಎಂದು ಕರೆಯಲ್ಪಡುತ್ತಾರೆ. ಶ್ಯಾಮಲ-ಸಾಂವಲ-ಸಾಂವರ. ಅವನ ಪ್ರೇಯಸಿ ರಾಧೆ ಬೆಳ್ಳಗಿದ್ದಳು ಎಂದರೆ ಗೌರವಣ್ಣದವಳು-ಗೌರಿ ಎಂಬ ಕಾರಣಕ್ಕಾಗಿ ಪ್ರಿಯತಮರೆಲ್ಲ ಗೌರಿ-ಗೋರೀ ಎಂದೆನಿಸಿದರು. ನಮ್ಮ ಸಂಸ್ಕೃತಿಯಲ್ಲಿ ದಂಪತಿಯನ್ನು ಲಕ್ಷ್ಮೀನಾರಾಯಣ ಇಲ್ಲವೆ ಗಿರಿಜಾಶಂಕರರ ರೂಪದಲ್ಲಿ ಕಂಡ ಪ್ರೇಯಸೀ ಪ್ರಿಯಕರರನ್ನು ರಾಧಾಕೃಷ್ಣರ ರೂಪದಲ್ಲಿ ಕಾಣುವುದು ಪರಿಪಾಠವಾಗಿ ಬಂದಿದೆ.

ರಾಧಾಕೃಷ್ಣರ ಪ್ರೇಮವೂ ಜೀವಾತ್ಮ-ಪರಮಾತ್ಮ ಮಿಲನದ ಸಂಕೇತ. ವೀರಶೈವ ತತ್ವಪ್ರಣಾಲಿಕೆಯಲ್ಲಿ ಇದೇ ಲಿಂಗಾಂಗ ಸಾಮರಸ್ಯ. ವಿರಹದಲ್ಲಿ ಬೇಯುತ್ತಿರುವ ಪ್ರೇಯಸಿಯೆಂದರೆ ಮೋಕ್ಷಕ್ಕಾಗಿ ಚಡಪಡಿಸುತ್ತಿರುವ ಜೀವಾತ್ಮ ಎಂಬ ಅರ್ಥ. ಗೋಪಿಯರನ್ನಗಲಿ ಶ್ರೀ ಕೃಷ್ಣ ಮಧುರೆಗೆ ಹೋದುದು ಈ ಬಗೆಯ ವಿರಹವನ್ನು ಚಿತ್ರಿಸುತ್ತದೆ. ಅನುಭಾವಸಾಹಿತ್ಯದಲ್ಲಿ-ವಚನ ಹಾಗೂ ದಾಸರ ಪದಗಳಲ್ಲಿ- ಸಾಂಕೇತಿಕ ಅರ್ಥವನ್ನು ಪಡೆದರೂ ಜಾನಪದ ಹಾಡುಗಳಲ್ಲಿ ಅದು ಐಹಿಕ ಜೀವನದ ವಾಸ್ತವ ಚಿತ್ರಣವನ್ನು ಕೊಡುವುದೇ ಹೆಚ್ಚು. “ವಾಸಕ್ಕೆ ಯೋಗ್ಯವಲ್ಲ ಗೋಕುಲವಿನ್ನು ಬೇಸರವಾಯಿತಲ್ಲ!” ಎಂದು ದಾಸರ ಕೃತಿಯಲ್ಲಿ ಗೋಪಿಯರು ಗೋಳಾಡಿದರೆ ಅದೇ ವಿರಹವನ್ನು ಜಾನಪದ ಕವಿ ಹೀಗೆ ನಿರೂಪಿಸುತ್ತಾನೆ :

ಗೋಕುಲದ ಒಳಗೆ ಏಕಾಂತವೇನಿದೆ
ಶ್ರೀಕಾಂತ ಹೋದ ಮಧುರೆಗೆ | ಗೋಪೇರು
ವ್ಯಾಕೂಲ ಇದ್ದರಿರುಳೆಲ್ಲ ||

ಪ್ರಿಯನು ದೂರದೇಶಕ್ಕೆ ಹೋಗಿ ಹಲವಾರು ಮಾಸಗಳು, ವರ್ಷಗಳೇ ಸಂದರೂ ಹಿಂದಿರುಗದಿದ್ದಾಗ ಅವನಿಗಾಗಿ ಹಲುಬುತ್ತಿರುವ ನಾಯಿಕೆ “ಪ್ರೋಷಿತ-ಭರ್ತೃಕಾ” ಎಂದು ನಾಟ್ಯಶಾಸ್ತ್ರದಲ್ಲಿ ಹೇಳಿದೆ. ಪ್ರ+ಉಷಿತ ಎಂದರೆ ಹೊರ ನಾಡಿನಲ್ಲಿ ಸುದೀರ್ಘವಾಗಿ ವಾಸಿಸಿರುವ ಭರ್ತಾ. “ಇರುಳೆಲ್ಲ ವ್ಯಾಕೂಲ ಇದ್ದ” ಗೋಪೇರು ಜಾನಪದದರಾದರೂ ಅಭಿಜಾತ ಸಾಹಿತ್ಯದ ಪ್ರೋಷಿತಭರ್ತೃಕೆಯರೇ ಅವರು. ಅವರಿಗೆ ಹಗಲು ನೆಮ್ಮದಿಯಿಲ್ಲ, ರಾತ್ರಿ ನಿದ್ರೆಯಿಲ್ಲ. ವಿಪ್ರಲಂಭ ಶೃಂಗಾರವೆಂದರೆ ಇದೇ. ನಲ್ಲನಿಂದಗಲಿದ ನಾಯಿಕೆಯನ್ನು “ವಿಪ್ರಲಬ್ಧಾ” ಎಂಬುದಾಗಿ ನಾಟ್ಯಶಾಸ್ತ್ರದಲ್ಲಿ ಕರೆಯಲಾಗಿದೆ.

ಇದೊಂದು ಹಾಡಿನಲ್ಲಿ ವಿಪ್ರಲಬ್ಧಾ ನಾಯಿಕೆಯ ಚಿತ್ರಣವಿದೆ :
ಹಾಸಿಗೆ ಹಾಸಿವ್ನಿ ಬಾರನಾ ನಲ್ಲರ ಜಾಣ
ಜ್ಯೋತಿ ತಂದ್ಹಚ್ಚಿವ್ನಿ ಬಾರನಾ ನಲ್ಲರ ಜಾಣ
ಹಾಸಿಗೀಗೆ ತಕ್ಕ ಪುರುಷನಿಲ್ಲದ ಮ್ಯಾಲೆ
ನಾ ಪರದೇಶಿಯೊಬ್ಬಳೆ ಬಾರನಾ ||

ಇವಳು ಸಹ ಗೋಕುಲದ ಗೋಪಿಯರಂತೆ ಇರುಳೆಲ್ಲ ವ್ಯಾಕುಲವಾಗಿಯೇ ಇದ್ದವಳು. ಅವಳಿಲ್ಲಿ ತನ್ನನ್ನು ಪರದೇಶಿಯೆಂದುಕೊಂಡಿದ್ದಾಳೆ. ಹಾಗಾದರೆ ದಿಕ್ಕಿಲ್ಲದವಳು ಎಂದಷ್ಟೆ ಅರ್ಥ. ನಿಜವಾಗಿ ಪರದೇಶಿಯಾಗಿರುವವನು ಅವಳ ಪುರುಷ. ವ್ಯಾಪಾರಕ್ಕಾಗಿಯೇ ಇಲ್ಲವೆ ಇನ್ನಾವುದೋ ಕಾರ್ಯನಿಮಿತ್ತನಾಗಿ ಅವನು ಪರದೇಶಕ್ಕೆ ಹೋಗಿದ್ದಾನೆ. ಅವನ ಸಹವಾಸವಿಲ್ಲದೆ ಏಕಾಕಿನಿಯಾಗಿ ರಾತ್ರಿಯನ್ನು ಕಳೆಯಬೇಕಾಗಿರುವ ಅಭಿಜಾತಸಂಗೀತದ ವಿರಹಿಣಿಯೊಬ್ಬಳು ಹೀಗೆ ಗೋಳಿಡುತ್ತಾಳೆ :

ಜಬಸೇ ಪಿಯಾ ಪರದೇಸ ಗವನ ಕೀನೋ
ರತಿಯಾಂ ಕಟತ ಮೋರೀ ತಾರೇ ಗಿನ ಗಿನ |
ಏರೀ ಅಲೀ ಪಿಯಾ ಬಿನ
ಕಲನ ಪರತ ಮೈಕೋ ಘರಿ ಪಲ ದಿನ ದಿನ ||

“ಯಮನ”ರಾಗದ ಧ್ರುತ್ ತ್ರಿತಾಲದ ಈ ಚೀಜಿನಲ್ಲಿ ನಿರೂಪಿತಳಾದ ಲಲನೆ ತನ್ನ ಪ್ರಿಯನು ಪರದೇಶ ಗಮನಗೈದಂದಿನಿಂದ ರಾತ್ರಿಗಳನ್ನು ನಕ್ಷತ್ರಗಳನ್ನೆಣಿಸುತ್ತ-ತಾರೇ ಗಿನ ಗಿನ-ಕಳೆಯುತ್ತಲಿದ್ದಾಳೆ.

ಇದೇ ಬಗೆಯ ಕರುಣಾಜನಕಸ್ಥಿತಿಯಲ್ಲಿ ಮಹಾದೇವಿಯಕ್ಕ ಹಾಡಿದ್ದಾಳೆ :

ಬಂದಹೆನೆಂದು ಬಟ್ಟೆಯ ನೋಡಿ
ಬಾರದಿದ್ದಡೆ ಕರಗಿ ಕೊರಗಿದೆನವ್ವಾ.
ತಡವಾದಡೆ ಬಡವಾದೆ ತಾಯೇ,
ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ
ತೆಕ್ಕೆ ಸಡಲಿದ ಜಕ್ಕವಕ್ಕಿಯಂತಾದೆನವ್ವಾ.

ಜಕ್ಕವಕ್ಕಿ ಎಂದರೆ ಚಕ್ರವಾಕಪಕ್ಷಿ. ಅವು ಹೆಣ್ಣು-ಗಂಡು ಹಗಲಿನಲ್ಲಿ ಅಗಲುವುದೇ ಇಲ್ಲವಂತೆ. ನೀರಲ್ಲಿ ಜೊತೆಜೊತೆಯಾಗಿ ತೇಲುತ್ತಿರುತ್ತವೆ. ಸಂಜೆಯಾಗುತ್ತಲೇ ಒಂದಕ್ಕೊಂದು ದೂರವಾಗುತ್ತವೆ. ರಾತ್ರಿಯಿಡೀ ವಿರಹದಲ್ಲಿ ಬೆಂದು ಬೆಳಗಿನಲ್ಲಿ ಮತ್ತೆ ಕೂಡುತ್ತವೆ. ಅಭಿಜಾತ ಕಾವ್ಯದ ಕವಿಸಮಯವನ್ನು ಇಲ್ಲಿ ಅಕ್ಕ ಉಪಯೋಗಿಸಿದ್ದಾಳೆ.

“ಹಾಸಿಗೆಗೆ ತಕ್ಕಾದ ಪುರುಷನಿಲ್ಲದೆ” ಪರದೇಶಿಯಾದ ಜಾನಪದ ವಿರಹಿಣಿಯಂತೆ ಅಕ್ಕಮಹಾದೇವಿಯೂ ಹಲುಬುತ್ತಾಳೆ.

ಪುರುಷ ಬಾರಾ, ಪುರುಷರತ್ನವೆ ಬಾರಾ.
ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟಿನೆಲೆ ಪುರುಷ, ಬಾರಾ
ಬಾರಯ್ಯಾ ಚೆನ್ನಮಲ್ಲಿಕಾರ್ಜುನಾ
ನೀನು ಬಂದಹಯೆಂದು ಬಟ್ಟೆಯ ನೋಡಿ
ಬಾಯಾರುತಿರ್ದೆನು.

ಎವೆಯಿಕ್ಕದೆ ಬಟ್ಟೆಯನ್ನೇ ದಿಟ್ಟಿಸುತ್ತ ಕುಳಿತ ಶಿಷ್ಟ ಸಂಗೀತದ ವಿರಹಿಣಿಯೊಬ್ಬಳು “ಕಣ್ಣ ರೆಪ್ಪೆಗಳಿಂದಲೇ ಅಂಗಳವನ್ನು ಗುಡಿಸಿದ್ದೇನೆ” ಎನ್ನುತ್ತಾಳೆ-ಪಲಕನ ಡಗರ ಬುಹಾರೂಂ- ಶ್ಯಾಮ ಅರ್ಥಾತ್ ಕೃಷ್ಣ ಬರುವ. ಹಾದಿಯನ್ನು ಸ್ವಚ್ಛಗೊಳಿಸಿದ್ದಾಳೆ. ಆದರೂ ಅವನು ಇನ್ನೂ ಬರಲಿಲ್ಲ ಅಜಹೂ ನ ಆಯೆ ಶ್ಯಾಮ : ನಂದರಾಗದ ಕೃತಿಯಿದು :

ಅಜಹೂ ನ ಆಯೆ ಶ್ಯಾಮ
ಬಹುತ ದಿನ ಬೀತೇ
ಪಲಕನ ಡಗರ ಬುಹಾರೊಂ
ಚೌರ ಮಗಝಾರೂ ಜೋ ಆವೇ ಧಾಮ ||

ಹಳ್ಳಿಯ ಪ್ರೌಢೆಯೊಬ್ಬಳಿಗೆ ಒಂದೇ ಒಂದು ರಾತ್ರಿಯನ್ನು ಕಳೆಯುವುದೂ ಕಷ್ಟವಾಗಿದೆ. ಅವಳೂ ತೆಕ್ಕೆ ಸಡಲಿದ-ಅಪ್ಪುಗೆ ಕಳಚಿದ ಜಕ್ಕವಕ್ಕಿಯಂತಾಗಿದ್ದಾಳೆ. ಊಟವಾದ ಮೇಲೆ ಅವಳಿಗೆ ವೀಳ್ಯದೆಲೆ ಬೇಡವಾಗಿದೆ. ತನ್ನ ಅವಸ್ಥೆಯನ್ನಾಕೆ ಹೀಗೆ ಬಣ್ಣಿಸುತ್ತಾಳೆ :

ಯಾಕವ್ವ ನನ ಜೀವ ಚಾಚೇಲಿ ಒಲ್ಲದು
ಜಾತ್ರಿಗ್ಹೋದವನು ಬರಲಿಲ್ಲ ಇಂದಿನ
ರಾತ್ರಿ ಹ್ಯಾಗಾರೆ ಕಳೆಯಲಿ ||

ಮತ್ತೊಬ್ಬಳ ನಲ್ಲ ಕಾರ್ಯನಿಮಿತ್ತ ಹಳ್ಳಿಯಿಂದ ಪಟ್ಟಣಕ್ಕೆ ಹೋದವನು ತಿರುಗಿ ಬರುವುದೇ ಇಲ್ಲ. ರಾಜಧಾನಿಗೆ ಹೋದಮೇಲೆ ದುಷ್ಯಂತನು ಶಕುಂತಲೆಯನ್ನು ಮರೆತಂತೆ ಈತನೂ ಈ ಮನದನ್ನೆಯನ್ನು ಮರೆತುಬಿಟ್ಟನೇನೊ :

ಅರಗಿನಂಥಾ ನಲ್ಲ ತಿರುಗಿ ಬಾರದೆ ಹ್ವಾದಾ
ಅರಗಿಣಿ ಹೋಗಿ ಕರೆತಾರ ನಗರದ
ದರಬಾರದಾಗ ಇರತಾರ ||

ಅರಗಿನಂತೆ ಹಿಡಿದ ಬೆಸುಗೆ ಬಿಡಲಾರದಂಥವನು : ಅಂಥವನು ನಗರಕ್ಕೆ ಹೋದವನು ಹಿಂತಿರುಗಿ ಬರಲಿಲ್ಲ. ಅದಕ್ಕಾಗಿ ಇವಳು ಅವನನ್ನು ಕರೆದುಕೊಂಡುಬಾರೆಂದು ಒಂದು ಅರಗಿಣಿಗೆ ಹೇಳುತ್ತಾಳೆ. ಅವನೆಲ್ಲಿ ಸಿಗುವನೆಂಬ ಸ್ಥಳವನ್ನೂ ಸೂಚಿಸುತ್ತಾಳೆ : ನಗರದ ದರಬಾರಿನಲ್ಲಿ ಎಂಬುದಾಗಿ. ಅವನೊಬ್ಬ ಸರದಾರನಿರಬಹುದು. ಅರಗಿಣಿ ಕಾಲಿಗೆ ಇವಳು ಪತ್ರ ಬರೆದು ತುಂಬಿಸಿದ ತಾಯಿತವನ್ನು ಕಟ್ಟಿರುವಳೇನೋ ; ಅದು ಇಂತಹ ಕಾರ್ಯದಲ್ಲಿ, ದೌತ್ಯ ವಹಿಸುವ ಕಲೆಯಲ್ಲಿ ಪಳಗಿಸಲ್ಪಟ್ಟಿದ್ದೀತೋ ಏನೋ !

ಅವಳು “ಪ್ರೇಕ್ಷಿತದೂತಿಕಾ” ಎಂಬ ನಾಯಿಕೆ. ನಲ್ಲನನ್ನು ಕರೆತರಲು ದೂತಿಯನ್ನು ಕಳಿಸಿದವಳು ಎಂದರ್ಥ. ಆದರೆ ಆ ದೂತಿಯೂ ಸಹ ಸುಂದರಿಯೂ ತರುಣಿಯೂ ಆಗಿದ್ದರೆ ಅಪಾಯ. ಆ ಭಯವನ್ನು ಅಕ್ಕಮಹಾದೇವಿ ಹೊಂದಿದ್ದು ತಾನೆಣಿಸಿದಂತೆ ಆದದ್ದನ್ನೂ ನಿವೇದಿಸಿದ್ದಾಳೆ.

ಉರಿಯ ಘಳಿಯನೆ ಉಡಿಸಿ ಊರಿಂದ ಹೊರಗಿರಿಸಿ
ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವಾ!

ಈ ಗೊಂದಲ, ಘೋಟಾಳಿ ಬೇಡವೆಂದು ಅಭಿಜಾತ ಸಂಗೀತದ ನಾಯಿಕೆಯೊಬ್ಬಳು ಪಕ್ಷಿಯೊಂದನ್ನು-ಅಂಚೆಯನ್ನೇ -ಪ್ರಿಯನ ಬಳಿಗೆ ಸಂದೇಶವನ್ನೊಯ್ಯಲು ಅಟ್ಟುತ್ತಾಳೆ;

ರಾಗ ದತಿಯಾ ಬೈರವ-ಏಕತಾಲ
ಜಾರೇ ಖಗವಾ ಮೋರೀ ಪತಿಯಾಂ
ಪಢಾಯಿಯಾ ಲೇತ ||

(ಎಲೈ ಖಗವೇ, ನನ್ನ ಪತ್ರವನ್ನು ಓದಿ ಕೊಂಡೊಯ್ಯು ಪ್ರಿಯನಲ್ಲಿಗೆ).

ಮಹಾಭಾರತರ ದಮಯಂತಿ ಹಂಸದೊಂದಿಗೆ, ಇಲ್ಲವೆ ಕಾಲಿದಾಸನ ಯಕ್ಷ ಮೇಘದೊಂದಿಗೆ ಸಂದೇಶವನ್ನು ಕಳಿಸಿದಂತೆ ಇನ್ನೊಬ್ಬ ಅಭಿಜಾತನಾಯಿಕೆ “ಪಾತರಗಿತ್ತಿಯ ಪಕ್ಕದ” ಮೇಲೆ ತನ್ನ “ಸಂದೇಶ”ವನ್ನು ಹೊರಿಸಿ ಕಳಿಸುತ್ತಾಳೆ.

(ಖಯಾಲ ನಾಗರಂಜಿನೀ -ತೀನತಾಲ)
ಜಾ ಜಾ ಜಾ ಜಾರೇ ಪತಂಗ ಪಿಯಾ ಪಾಸ
ಮೋರೀ ಇತನೀ ಸಂದೇಸವಾ ಲೇತ
ಉನ ಬಿನಾ ಜಿಯಾ ತರತರಪಗಯೀ
ತಾಪನ ಕಾಂಪನ ಲಾಗೀ ಅಂಗ ಅಂಗ ||

ಅವನಿಲ್ಲದೆ ನನ್ನ ಜೀವ ಚಡಪಡಿಸುತ್ತಿದೆ. ನನ್ನ ದೇಹದ ಅಂಗ ಅಂಗವೂ ಜ್ವರದಿಂದ ಕಾದಿದೆ, ನಡುಗುತ್ತಿದೆ. ಇದನ್ನವನಿಗೆ ತಿಳಿಸುವ ಈಯೊಂದು ಸಣ್ಣ ಸಂದೇಶವನ್ನು ಕೊಂಡು ನನ್ನ ಪ್ರಿಯನ ಬಳಿಗೆ ಹೋಗೆಲೆ ಪತಂಗವೆ.

(ಈ ಕೃತಿ ಪಂ. ರಾಮರಾವ ನಾಯಕರದು. ಕರ್ನಾಟಕೀ ಸಂಗೀತದ ಕಲ್ಯಾಣವಸಂತ ಎಂಬ ರಾಗವನ್ನು ಹಿಂದುಸ್ತಾನೀಗೆ ಅಳವಡಿಸಿ ನಾಗರಂಜನೀ ಎಂಬ ಹೆಸರಿಟ್ಟವರೂ ಅವರೆಯೆ).

ತನ್ನ ಸಂದೇಶವನ್ನು ಕಾದಲನನ್ನು ಬಿಟ್ಟು ಇನ್ನಾರಿಗೋ ತಲುಪಿಸಿಬಿಟ್ಟರೆ ಗೊಂದಲವಾದೀತು. ಈ ಅನಾಹುತವನ್ನು ತಪ್ಪಿಸಲು ನಲ್ಲನ ಕುರುಹನ್ನು ಸರಿಯಾಗಿ ತಿಳಿಸಬೇಕು. ದೂತಿಗೆ ಮಹಾದೇವಿ ಹೀಗೆ ತಿಳಿಸುತ್ತಾಳೆ ತಾನಟ್ಟುವ ದೂತಿಗೆ:

ಹೊಳೆವ ಕೆಂಜೆಡೆಯ ಮೇಲೆ ಎಳೆವೆಳುದಿಂಗಳು
ಫಣಿಮಣಿ ಕರ್ಣಕುಂಡಲ ನೋಡವ್ವಾ.
ರುಂಡಮಾಲೆಯ ಕೊರಳವನ ಕಂಡರೆ ಒಮ್ಮೆ ಬರಹೇಳವ್ವಾ :
ಗೋವಿಂದನ ನಯನ ಉಂಗುಟದ ಮೆಲಿಪ್ಪುದು
ಚೆನ್ನಮಲ್ಲಿಕಾರ್ಜು ದೇವನ ಕುರುಹವ್ವಾ.

ಪ್ರಿಯನು ದೂರ ಹೋಗುವುದಕ್ಕೂ ತಿರುಗಿ ಬಂದಿರುವುದಕ್ಕೂ ಅನೇಕ ಕಾರಣಗಳಿರಬಹುದು. ಇವಳೇ ಬಿರುನುಡಿಗಳನ್ನಾಡಿರಬಹುದು. ಈಗ ಪಶ್ಚಾತ್ತಾಪ ಪಡುತ್ತಿರಬಹುದು. ಇಂತಹವಳು “ಕಲಹಾಂತರಿತಾ” ನಾಯಿಕೆ. ನಲ್ಲನ ಬಳಿ ಕ್ಷಮೆ ಯಾಚಿಸಲು ಅವಳ ಅಭಿಮಾನ ಅಡ್ಡಬರುತ್ತದೆ. ಅಂತೆಯೇ ಪ್ರಿಯನನ್ನು ಕರೆತರಲು ಹೊರಡುವ ದೂತಿಗೆ ತನ್ನದೇನೂ ತಪ್ಪಿಲ್ಲವೆಂದೂ ಅವನೇ ಜಗಳವಾಡಿ ಹೋದನೆಂದೂ ಅರುಹುತ್ತಾಳೆ ಜಾನಪದದ ನಾಯಿಕೆಯೊಬ್ಬಳು :

ನಮ್ಮನಲ್ಲ ಬರವೊಲ್ಲ
ಹ್ಯಾಂಗ ಮಾಡಲೆವ್ವಾ ಎದೀಯ ಕಲ್ಲ |
ಏಕಾ ಏಕಿ ಮಾತನಾಡಿ ಹ್ವಾದನವ್ವಾ ಕಡದಾಡಿ
ಹ್ವಾದನವ್ವಾ ಕಡದಾಡಿ | ನಮ್ಮ ನಲ್ಲ.

ಅವನೇನೋ ನಿಷ್ಠುರ. ಇದ್ದಕ್ಕಿದ್ದ ಹಾಗೇ ಏನೋ ಮಾತುಬಂದು ನನ್ನೊಡನೆ ಜಗಳ ಮಾಡಿ – (ಬೆಕ್ಕು ಮಂಗಗಳಂತೆ ಕಡಿದಾಡಿ ಲಡಾಯಿಮಾಡಿ) ಹೊರಟುಹೋದ. ಇನ್ನೂ ಈಗಲೂ ಬರಲೊಲ್ಲ. ನನ್ನ ಮನಸ್ಸನ್ನು ಹೇಗವ್ವಾ ಕಲ್ಲು ಮಾಡಿಕೊಳ್ಳಲಿ?

ಅಭಿಜಾತ ಸಂಗೀತದ ನಾಯಿಕೆ ಹೇಳುವುದೂ ಇದನ್ನೇ. ಅವನೇ ಲಡಾಯಿ (ಲರಾಯಿ) ಮಾಡಿಕೊಂಡು ಹೋದ ಎಂದು.

ಜಯಜಯವಂತೀ – ಏಕತಾಲ (ವಿಲಂಬಿತ)
ಲರಾ ಮಾಯೀ ಸಜನೀ ಉನಕೇ ಬಿನಾ
ಕಹೋ ಕೈಸೇ ಕಟೀ ದಿನ ರತಿಯಾಂ | ಲರಾ |
ಕೌನ ಸುನೇ ಕಹೋ ಕೈಸೇ ಆಲೀ
ದುಃಹಕೀ ಬತಿಯಾಂ || ಲರಾ…

ಎಲೆ ಸಖೀ-ಸಜನೀ-ಅವನು ಜಗಳವಾಡಿ ಹೋದ. ಅವನಿಲ್ಲದೆ ಹಗಲುಗಳು ರಾತ್ರಿಗಳು ಹೇಗೆ ಕಳೆದುವೊ ! ಈ ನನ್ನ ವ್ಯಥೆಯ ಕಥೆಯನ್ನು ಕೇಳುವವರಾರು ಹೇಳು?

ಶ್ರೀ ಪುರಂದರರ ಗೋಪಿಯು ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಆದರೂ ದೂತಿಯನ್ನು ಕಳಿಸದೆ ಇರುವುದಿಲ್ಲ.

ಧೀರ ರಂಗನು ಬಾರದೆ ಇಹನೇನೆ
ಮಾರನಯ್ಯನೆ ಮಾಡಿದ ತಪ್ಪು ಏನೆ?
ಮಂದಯಾನೆ ಮುಕುಂದನ ಮಂದಿರಕೆ
ಇಂದು ಪೋಗಿ ನೀ ವಿನಯದಿಂದಲಿ ಸಾರೆ
ಒಂದೆ ಮಾತಲಿ ಒಳನು ತಿಳಿದು ಬಾರೆ
ವೃಂದಾವನದಿ ಗೋವಿಂದನ ಕರೆತಾರೆ ||

ಇಂತಹ ಪೇಷಿತದೂತಿಕಾ ನಾಯಿಕೆಯ ಚಿತ್ರಣವನ್ನು ಷಣ್ಮುಖ ಶಿವಯೋಗಿಗಳ ವಚನವೊಂದರಲ್ಲಿಯೂ ಕಾಣಬಹುದು :

ನಾನೇನೆಂದನೆ? ತಾನೇತಕೆ ಬಾರನೆ?
ಮಾನಿನಿ ಪೋಗಿ ನೀ ಮನ್ನಿಸಿ ಕರೆತಾರೆ
ಅಖಂಡೇಶ್ವರನೆಂಬ ಪ್ರಿಯನ.

ಮುನಿಸುಗೊಂಡುಹೋದ ಪ್ರಿಯ ಬೇಕಾದರೆ ದೂತಿಯ ಮಾತನ್ನು ಕೇಳಿ ಹಿಂದಿರುಗಿ ಬಂದಾನು. ಆದರೆ ವ್ಯಾಪಾರಕ್ಕಾಗಿ ಪರದೇಶಕ್ಕೆ ಹೋದ ಪತಿ? ಅನುಕೂಲವಾಗಿ ಗಾಳಿಯ ದಿಕ್ಕು ಬದಲಾಗುವವರೆಗೂ ಅವನು ಹಡಗನ್ನೇರಲಾರ, ಸ್ವದೇಶಕ್ಕೆ ಮರಳಲಾರ. ಆಗ ಇವಳ ಗತಿ? ಅವನನ್ನು ನೆನೆದು ಇವಳು ಕಣ್ಣೀರಿಡಲೂ ಸ್ವತಂತ್ರಳಲ್ಲ. ಅತ್ತೆ ನಾದಿನಿ ಕಂಡರೆ ಕೆಂಡವಾದಾರು. ತುಂಬಿದ ಮನೆಯಲ್ಲಿ ಕಣ್ಣೀರು ಸುರಿಸುವುದೆ? ಸಾಲದುದಕ್ಕೆ ಹಾಳಾದ ಆ ಪಪೀಹ ಪಕ್ಷಿ ಬೇರೆ. ಮನೆಯ ಬಳಿಯ ಮರದ ರೆಂಬೆಯಲ್ಲಿ ಕುಳಿತು “ಪೀ ಪೀ, ಪಿಯು ಪಿಯು” ಎಂದು ಹಾಡುತ್ತದೆ. ಅದನ್ನು ಕೇಳಿ ಇವಳಿಗೆ ಪ್ರಿಯನ ನೆನಪಾಗುತ್ತದೆ. (ಪಪೀಹಾ ಎಂಬುದು ಉತ್ತರ ಭಾರತದ ಒಂದು ಹಾಡುಹಕ್ಕಿ. ಪೀಪೀ ಎಂಬ ಅದರ ಧ್ವನಿಯನುಕರಣದಿಂದ ಅದಕ್ಕೆ ಆ ಹೆಸರು ಬಂದಿದೆ. ಪೀ, ಪೀವ ಮತ್ತು ಪಿಯು ಎಂಬ ಬ್ರಿಜ ಭಾಷೆಯ ಶಬ್ದಗಳಿಗೆ “ಪ್ರಿಯನು” ಎಂದರ್ಥ. ಪ್ರಿಯ ಶಬ್ದದ ತದ್ಭವವೇ ಪಿಯಾ, ಪಿಯೂ-ಇತ್ಯಾದಿ) ಅದಕ್ಕಾಗಿ ಅವಳಿಗೆ ಅತಿಯಾದ ಕೋಪ ಆ ಪಾಪಿ ಪಪೀಹಾ ಪಕ್ಷಿಯ ಮೇಲೆ :

(ರಾಗ-ಗೌಡಮಲ್ಹಾರ; ತೀನ ತಾಳ)
ಪಾಪಿ ಪಪೀಹಾ ಪಿಯೂ ಪಿಯೂ ಕರೇ
ರೂಂ ಝೂಂ ಬದರಿಯೂ ಬರಸೇರೇ
ದಾಮನೀ ದಮಕೇ ಪವನ ಚಲೇರೇ ||
ಮಹಮದಸಾ ಪಿಯಾ ಸದಾರಂಗಿಲೀ
ಉನ ಬಿನಾ ಜಿಯರಾ ತರಸೇ
ನನ್ಹೀ ನನ್ಹೀ ಬೂಂದನ ಮೇಹಾ ಬರಸೇ
ಭೀಗಗಯೇ ಸಬ ತನ ಸರಸೇ ||

ಜಿಟಿ ಜಿಟಿ ಮಳೆ, ಬಿರುಗಾಳಿ, ಕೋಲ್ಮಿಂಚು. ಇಂತಹ ವೇಳೆಯಲ್ಲಿ ಪ್ರಕ್ಷುಬ್ಧ ಸಾಗರದಲ್ಲಿ ಪ್ರಿಯನ ಹಡಗು ಪರದೇಶದಿಂದ ಹೊರಟೀತೆ? ಹೊರಟರೂ ಸ್ವದೇಶವನ್ನು ಮುಟ್ಟೀತೆ? ಸದಾರಂಗನಾದ ಪ್ರಿಯಕರ ಮಹಮ್ಮದ ಶಾಹನಿಗಾಗಿ ಹೃದಯ ಹಂಬಲಿಸಿದೆ. (ಸದಾರಂಗ-ಕವಿ; ಮಹಮ್ಮದ ಶಾಹ-ಆಶ್ರಯದಾತಾ) ಅವಳ ಸರಸವಾದ ದೇಹವು ತಣ್ಣನೆಯ ತಂತುರು ಮಳೆಯಲ್ಲಿ ನೆನೆಯುತ್ತಿದೆ. ಆದರೆ ವಿರಹಾಗ್ನಿ ಶಾಂತವಾಗುವುದೆ?

ಗಾಯದ ಮೇಲೆ ಬರೆ ಎಳೆದಂತೆ ಗಂಡನಿಲ್ಲದವಳ ಮೇಲೆ ಅಲ್ಲಸಲ್ಲದ ಅಪವಾದಗಳು ಬೇರೆ. ಅವಳ ಅಣ್ಣ ನುಡಿದಿದ್ದ ಎಚ್ಚರಿಕೆಯ ಮಾತುಗಳು ಈಗ ಅವಳಿಗೆ ನೆನಪಾಗುತ್ತವೆ :

ಸರದಾರ ನನ್ನಣ್ಣ ಕರೆದು ತಾ ಹೇಳ್ಯಾನ
ನೆರಿಹೊರಿ ಮನಿಯಾ ಹೊಗುಬ್ಯಾಡ | ನನ ತಂಗಿ
ಬರಬಾರದ ಮಾತು ಬರತಾವ ||

ಇವಳಾದರೋ ಅಕ್ಕ ಪಕ್ಕ ಆಸುಪಾಸಿನ ಮನೆಗೆ ಹೋದವಳೇ ಅಲ್ಲ. ಆದರೂ ಜನ ಅವಳಿಗೆ ಹೆಸರಿಟ್ಟಿದ್ದಾರೆ : (ಧರತ ಮೈಕೋ ನಾಂವ !)

(ರಾಗ- ಶ್ರೀ ; ವಿಲಂಬಿತ ತೀನತಾಲ)
ಏರೀ ಹೂಂ ತೋ ಆಸ ನಾ ಗಯೀರೀ
ಲೋಗವಾಂ ಧರತ ಮೈಕೋ ನಾಂವ |
ಜಬಸೇ ಪಿಯಾ ಪರದೇಸ ಗವನ ಕೀನೋ
ದೇಹರೀ ಧರೋ ನಾ ಪಾಂವ ||

ಸಖೀ, ನನ್ನ ಪ್ರಿಯನು ಪರದೇಶಕ್ಕೆ ಹೋದಂದಿನಿಂದ ನಾನು ಹೊಸತಿಲನ್ನು (ಚೇಹಲೀ-ದೇಹರೀ) ಕೂಡಾ ದಾಟಿಲ್ಲ. ಆದರೂ ಜನರು ನನಗೆ ಹೆಸರಿಡುತ್ತಿದ್ದಾರೆ ನೋಡೇ !

ಕಂಸಮಹಾರಾಜ ಕರೆಸಿಕೊಂಡ ಕಾರಣ ಕೃಷ್ಣ ಮಧುರೆಗೆ ಹೋದ. ಗೋಕುಲದ ಗೋಪಿಯರಿಗೆ ಅದು ಪರದೇಶವೇ. ಅಲ್ಲದೆ ಪಟ್ಟಣವನ್ನು ಸೇರಿ ಅಲ್ಲಿಯ ಬೆಡಗಿನ ಹೆಣ್ಣುಗಳ ಸಂಗ ದೊರೆತ ಮೇಲೆ “ಗಾರು ಪಳ್ಳಿಯಲಿಪ್ಪ ಗೋಪಿಯರ ವಿಚಾರಂಗಳ ಸ್ಮರಿಪನೆ?” (ಜಾನಪದ ಮಹಿಳೆಯರು ಗಂಡನ ಹೆಸರು ಹೇಳುವಾಗ ಉಗ್ಗಡಿಸುವ ಒಗಟೊಂದನ್ನು ಇಲ್ಲಿ ನೆನೆಯಬಹುದು : “ಬದನೀಕಾಯಿ ಬರತ ಉಳ್ಳಾಗಡ್ಡೀ ಕೊರೆತ ಹಳ್ಳೀ ಹುಡುಗೀ ಮರತ ಪ್ಯಾಟೀ ಹುಡುಗಿ ಬೆರತ”) ಶ್ರೀಪಾದರಾಜರ ಕೃತಿಯೊಂದರಲ್ಲಿ ಕೃಷ್ಣ ಮಧುರೆಗೆ ಹೋಗುವುದಕ್ಕೆ ಬಿಲ್ಲಹಬ್ಬವೆಂಬುದೊಂದು ಕುಂಟು ನೆವ ಎನ್ನುತ್ತಾರೆ ಗೋವಳತಿಯರು :

ಬಿಲ್ಲ ಹಬ್ಬವೆ ಸುಳ್ಳು
ಬಿಸರುಹಾಕ್ಷಿಯರಿಕ್ಷುಬಿಲ್ಲೆ ಸುತ್ತವೆಲೆ ನಿನ್ನ
ರುಲ್ಲು ಅಕ್ರೂರನನು ಕಳುಹಿ ಕರೆಸಿದರು.
ಅಲ್ಲಿ ವಲ್ಲಭೆಯರನು ನೆರೆವೆ
ನಮ್ಮೆಲ್ಲರನು ಮರೆವೆ.

ನಗರದ ನಾರಿಯರ ಹುಬ್ಬುಗಳೆಂಬ ಕಾಮನಬಿಲ್ಲಿನ ಹಬ್ಬಕ್ಕೆ ಹೋಗುತ್ತಿರುವೆ ನೀನು ಕೃಷ್ಣ!

ಏನೇನೋ ಸಾಂತ್ವನ ಹೇಳಿ ಕೃಷ್ಣ ಹೊರಟುಹೋದ. ಆಮೇಲೆ ಗೋಪಿಯರ ಗತಿಯೇನು? ಅವನಿಲ್ಲಿ ಇರುವಾಗಲೇ ಅವರಿಗೆ ಜಾರೆಯರೆಂಬ ಅಪವಾದ ಬಂದಿದೆ.

ಇಂದಿರಾವತಿ ನಮ್ಮ ಮಂದಿರದೊಳು
ಬಂದು ಪೋಗುತಿರಲು
ಸಂದೇಹದ ಇವನ ಪೊಂದಿದರಿವರೆಂದು
ಮಂದಿಯೊಳಗೆ ಅಪನಿಂದೆ ಪೊತ್ತೆವಮ್ಮ |
ಬೆರೆವುದಿನ್ನೆಂತು ನಾವು ; ಶ್ರೀಹರಿ ಸಂಗ
ದೊರೆವುದಿನ್ನೆಂದಿಗಮ್ಮ.
ಕರುಣಾಕರ ನಮ್ಮ ಪುರಂದರ ವಿಠಲನು
ಕರೆದುಕೊಳ್ಳದೆ ನಮ್ಮ
ತೊರೆದು ಪೋದ ಮೇಲೆ
ವಾಸಕ್ಕೆ ಯೋಗ್ಯವಲ್ಲ ಗೋಕುಲವಿನ್ನು
ಬೇಸರವಾಯಿತಲ್ಲ ||

ಮಧುರೆಗೆ ಹೋದ ಕೆಲವು ಕಾಲದ ಅನಂತರ ಶ್ರೀಕೃಷ್ಣ ಗೋಕುಲಕ್ಕೆ ಉದ್ಧವನೆಂಬ ತನ್ನ ಸಖನನ್ನು ಕಳಿಸುತ್ತಾನೆ, ತಂದೆತಾಯಿಯಾದ ನಂದ ಯಶೋಧೆಯರನ್ನೂ ಸಖಿಯರಾಗಿದ್ದ ಗೋಪಿಯರನ್ನೂ ಕಂಡು ಯೋಗಕ್ಷೇಮ ವಿಚಾರಿಸಿ ಬಂದು ತಿಳಿಸಲೆಂದು, ಅವನನ್ನು ಕಂಡೊಡನೆ ಗೋವಳಿತಿಯರ ಗೋಳು ಉಮ್ಮಳಿಸತ್ತದೆ; ಉದ್ಧವ ಏಕಾದರೂ ಬಂದನೋ! ನಮಗೆಯೆ ವೃಂದಾವನವಾಸ ಸಾಕಾಗಿರುವಾಗ!

ಏಕೆ ವೃಂದಾವನ ಗೋಕುಲವಾಸ
ಏಕೆ ಬಂದೆಯೋ ಉದ್ಧವಾ |
ಕರುಣಾನಿಧಿಯೆಂಬೋರು ಕಪಟ ನಾಟಕದರಸು
ಸರಸವಿರಸವ ಮಾಡಿದ.
ಪರಮಭಕ್ತರ ಪ್ರಿಯ ಪುರಂದರವಿಠಲನ
ಒಡಗೂಡಿಸೈ ಕೋವಿದ ಉದ್ಧದ ||

ಈ ಉದ್ಧವ ಎಂಬ ಶಬ್ದವು ತದ್ಭವ ಹೊಂದಿ “ಉಧೋ” ಎಂದಾಗುತ್ತದೆ- ಬ್ರಿಜ ಭಾಷೆಯಲ್ಲಿ. ಅವನನ್ನು ಸಂಬೋಧಿಸಿ “ಬಿಂದರಾಬನದ” ಗೋಪಿಯೊಬ್ಬಳು ಹೀಗೆನ್ನುತ್ತಾಳೆ :

(ಶುಕ್ಲ ಬಿಲಾವಲ-ಧ್ರುತ ತೀನ ತಾಲ)
ಉಧೋ ಉಧೋ ಏ ದೋ ಬೋಲೀ ಶ್ಯಾಮಕೋ ಕಹಿಯೋ
ಕೌನ ದಿನ ಘರ ಆವೇಂಗೇ
ಜೋಬನ ಜಾತ ಬಾ ನಹೀಂ ಲಾಗತ
ಫಿರ ಪಛತಾ ಹೋಂಗೇ || ಉಧೋ …

ಎಲೈ ಉದ್ಧವಾ, ನನ್ನೆರಡು ನುಡಿಗಳನ್ನು ಶ್ಯಾಮನ ಕಿವಿಗೆ ಹಾಕುವೆಯಾ? ನನ್ನ ಮನೆಗೆ ಎಂದು ಬರುವನಂತೆ? ಯೌವನ ಹಿಂಗಿ ಹೋಗಲು ಹೆಚ್ಚು ಕಾಲ ಹಿಡಿಯುವುದಿಲ್ಲ. (ಆದ್ದರಿಂದ ಬೇಗ ಬಳಲುಹೇಳಣ್ಣಾ) ಅಥವಾ ನನ್ನ ಸ್ನೇಹ ಮಾಡಿದ್ದವನು ಈಗಲೇನಾದರೂ ಪಶ್ಚಾತ್ತಾಪ ಪಡುತ್ತಿರಬಹುದೆ? (ಪಛತಾ ಹೋಂಗೆ?) ಕೇಳು ಹೋಗು ಉದ್ಧವಾ, ಉದ್ಧವಾ !!

ಉದ್ಧವನನ್ನುದ್ದೇಶಿಸಿ ಗೋಪಿಯರು ಮಾತನಾಡುತ್ತಿರುವಾಗ ಅಲ್ಲಿ ಒಂದು ಭ್ರಮರವು ಬಂದು ಕುಳ್ಳಿರುತ್ತದೆ. ಅದನ್ನು ಶ್ರೀಕೃಷ್ಣನ ದೂತನೆಂದೇ ಭಾವಿಸಿ ಗೋಪಿಯರು ‘ಕಿತವಬಂಧೋ’ (ಮೋಸಗಾರನ ತಮ್ಮನೇ) ಎಂದು ಸಂಬೋಧಿಸಿ ಮಾತನಾಡುತ್ತಾರೆ. ಈ ವಿಷಯವನ್ನಳವಡಿಸಿಕೊಂಡು ಹಿಂದೀ ಕವಿ ಸೂರದಾಸರು ಬರೆದ “ಭ್ರಮರಗೀತ” ಎಂಬ ಕಾವ್ಯ ಪ್ರಸಿದ್ಧವಾಗಿದೆ, ಆದರೆ ಅವರಿಗಿಂತ ಒಂದು ನೂರುವರ್ಷ ಮುಂಚೆಯೇ ಕನ್ನಡದಲ್ಲಿ ಶ್ರೀಪಾದರಾಜರು ಭ್ರಮರಗೀತವನ್ನು ಬರೆದಿದ್ದಾರೆ. ಹಿಂದೀ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯಗಳ ನಡುವಣ ನಂಟನ್ನು ವೈಷ್ಣವ ಭಕ್ತಿಪಂಥವು ಹೇಗೆ ಸಾಧಿಸಿರುವುದೆಂಬುದನ್ನು ಇದು ಎತ್ತಿತೋರಿಸುತ್ತಿದೆ. ತನ್ಮೂಲಕವಾಗಿ ಕನ್ನಡ ಜಾನಪದದೊಂದಿಗಿರುವ ಸಂಬಂಧವನ್ನು ಸೂಚಿಸಬಹುದಾಗಿದೆ. ಶ್ರೀಪಾದರಾಜರ ಕೃತಿಯಲ್ಲಿ ಕೃಷ್ಣ ಹೇಗೆ ತನ್ನ ಕೊಳಲಿನ ನಾದದಿಂದ ಗೋಪಿಯರನ್ನು ಮರಳುಮಾಡಿದನೆಂಬ ವರ್ಣನೆಯಿದೆ. ಅವರ ಭ್ರಮರ ಗೀತವು ಶಿಷ್ಟಕಾವ್ಯದ ಸಾಲಿಗೆ ಸೇರುವುದಾದರೂ ಅಲ್ಲಲ್ಲಿ ದಾಸರು ಜಾನಪದ ಭಾಷೆಯನ್ನು ಬಳಸಿದ್ದಾರೆ :

ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯ…
ಮಧುಕುಂಜವನದಲ್ಲಿ ಮಧುವೈರಿ ಕೊಳಲನೂದಲು
ಮಧುರ ನಿನಾದ ಕೇಳಿ ಮದಿರಾಕ್ಷಿಯರೆಲ್ಲ
ಮೃದುವಾಕ್ಯದೊಳೆಮ್ಮನಪ್ಪಿ ಅಧರಾಮೃತಭೋಜನಗೈದನೋ |

ಮಾಧವನ ಮುರಲಿಯ ಮೋಡಿ ಕೊಳಲಿನ ಬಗೆಗೆ ಜಾನಪದ ಹಾಡಿನಲ್ಲಿಯೂ ಉಲ್ಲೇಖವಿದೆ. ಒಂದು ತ್ರಿಪದಿಯಲ್ಲಿ ಬಿದಿರಿನ ಜನ್ಮ ಸಾಫಲ್ಯವನ್ನು ನೆನೆದು ಗ್ರಾಮೀಣ ಗರತಿಯೊಬ್ಬಳು ಉದ್ಗರಿಸುತ್ತಾಳೆ :

ಬೆಟ್ಟಾದ ಬಿದಿರೇ ಹಟ್ಟೀಗೆ ನೆರಳಾದಿ
ಜಾಣ ರಂಗೈಗೆ ಕೊಳಲಾದಿ ಸಿರಿಬಿದಿರೆ
ಮುತ್ತು ಕೇರೋಕೆ ಮೊರನಾದಿ ||

ಬಿದಿರು ಎಂಬುದಕ್ಕೆ ಸಂಸ್ಕೃತ ಪದ “ವಂಶ”. ಆ ವಂಶದಿಂದ ಮಾಡಿದುದು ವಂಶೀ-ಬನ್ಸೀ-ಬನ್ಸರೀ-ಬಾಂಸುರೀ. ಎಂದರೆ ಕೊಳಲು. ಕೃಷ್ಣನ ಕೊಳಲು ಜಾಣ ರಂಗಯ್ಯನ ಕೈಗೆ ಕೊಳಲಾದ ಸಿರಿಬಿದಿರು ಮುತ್ತಿನಂತಹ ಜೋಳವನ್ನು ಕೇರುವ ಮೊರವೂ ಆಗುತ್ತದೆ. ರಂಗನ ಕೈಯಲ್ಲಿದ್ದುದಲ್ಲದೆ ಅವನ ತುಟಿಗೆ ಆಗಾಗ ಸೋಕುವ ಭಾಗ್ಯಪಡೆದುದಕ್ಕಾಗಿ ಕೊಳಲಿಗೆ ಗರ್ವ ಬಾರದಿರುತ್ತದೆಯೆ? ಮುರಲಿ ಬಿಂಕದಿಂದ ಬೀಗದಿರುತ್ತದೆಯೆ? ಓ ಅದರ ಬಿಗುಮಾನವೊ |

ಏನು ಸೋಜಿಗ; ಬಿಗುಮಾನ ಎಂಬುದಕ್ಕೆ ಹಿಂದೀ ಶಬ್ದ “ಗುಮಾನ”; ಸೂರದಾಸರು ಮುರಲಿಯ ಬಿಂಕವನ್ನು ಗೇಲಿಮಾಡಿ ಒಂದು ಕೃತಿಯನ್ನು ರಚಿಸಿದ್ದಾರೆ :

ಅರೆ ಮುರಲಿಯೂ ಕಾಹೇ ಗುಮಾನ ಕರೇ
ಸೋನೇಕೀ ನಾಹೀಂ ರೂಪೇಕೀ ನಾಹೀಂ
ನಾಹೀಂ ರತನ ಝಡೀ
ಜಾತ ಛಿಪತ ತೇರೀ ಸಬ ಕೋವೂ ಜಾನತ
ಮಧಬನ ಕೀ ಲಕಡೀ
ಅರೇ ಮುರಲೀ ತೂ ಮಧುಬನ ಕೂ ಲಕಡೀ ||

ಯಾಕಿಷ್ಟು ಗರ್ವ ನಿನಗೆ ಮುರಲಿಯೆ? ನೀನೇನು ಚಿನ್ನದಿಂದ ಮಾಡಿದ್ದಲ್ಲ, ಬೆಳ್ಳಿಯದೂ ಅಲ್ಲ. ರತ್ನಖಚಿತವಂತೂ ಅಲ್ಲವೇ ಅಲ್ಲ. ನಿನ್ನ ಜಾತಿಯನ್ನು ಮರೆಮಾಡುವಿಯಾ? ಯಾರಿಗೆ ಗೊತ್ತಿಲ್ಲ? ವೃಂದಾವನದ ಒಂದು ಕಟ್ಟಿಗೆಯ ತುಂಡು, ತಿಳಿಯಿತೆ?