ಜಾನಪದ ಕವಿ ಹೊಗಳಿದ “ಜಾಣ ರಂಗೈನ ಕೈಯ” ಕೊಳಲು ಹಿಂದೀ ಕವಿಯ ಮುಖದಿಂದ ಈ ನಿಂದಾಸ್ತುತಿಯನ್ನು ಹೊರಡಿಸಿದೆ.

ಅಣ್ಣ ಬಸವಣ್ಣನವರೂ ಬಿದಿರಿನ ಮಹತ್ವವನ್ನು ಸಾರಿದ್ದಾರೆ. ಅವರ ವಚನದಲ್ಲಿ ಕೊಳಲಿನ ಪ್ರಸ್ತಾಪವಿಲ್ಲ.

ಬಿದಿರೆ ಅಂದಣವಕ್ಕು ಬಿದಿರೆ ಸತ್ತಿಗೆಯಕ್ಕು
ಬಿದಿರದಿರ ಮೆಚ್ಚ ಕೂಡಲಸಂಗಮದೇವ !

ಪಲ್ಲಕ್ಕಿಯನ್ನು ಮಾಡುವುದೂ ಬಿದಿರಿನಿಂದಲೆ, ರಾಜರ ತಲೆಯ ಮೇಲೆ ಹಿಡಿದ ಮುತ್ತಿನ ಶ್ವೇತಛತ್ರವನ್ನೂ ಬಿದಿರಿನಿಂದಲೇ ಮಾಡುತ್ತಾರೆ. ಇದು “ವಂಶದ” ಮಹತ್ವ. ಆದರೆ ಇಲ್ಲಿ ಬಿದಿರೆ ಎಂಬುದು ಧಾತು. ಕವಿ ಬಸವಣ್ಣನವರು ಒಂದು ಸುಂದರವಾದ ಶ್ಲೇಷೆಯನ್ನು ಸಾಧಿಸಿದ್ದಾರೆ. ಇಲ್ಲಿ ಬಿದಿರೆ ಬಿದಿರು-ಎಂದರೆ ಮಣಿ, ಬಾಗು ಎಂದರ್ಥ. ಬಾಗಿದರೆ, ನಯವಿನಯಗಳನ್ನು ಮೆರೆದರೆ-ದೇವರ ಮುಂದೆ ದೀನನಾಗಿ ತಲೆ “ಬಾಗಿ” ಬೇಡಿದರೆ ಅವನಿಗೆ ಪಲ್ಲಕ್ಕಿಯೂ ದೊರೆತೀತು. ಅರಸೊತ್ತಿಗೆಯ ಸತ್ತಿಗೆ ಬೆಳ್ಗೊಡೆ ಕೂಡಾ ಸಿಕ್ಕೀತು. ಬಿದಿರದರ-ಎಂದರೆ ಸದುವಿನಯದಿಂದ ಸದಾಶಿವನ ಮುಂದೆ ಬಾಗದವನನ್ನು ಕೂಡಲಸಂಗ ಮೆಚ್ಚಲಾರ!

ಗ್ರಾಮೀಣ ಜೀವನದಲ್ಲಿ ಪಲ್ಲಕ್ಕಿಗೆ ವಿಶೇಷವಾದ ಪ್ರಾಮುಖ್ಯ. ಊರ ದೇವರಿಗೆ ಪಲ್ಲಕ್ಕಿಯ ಸೇವೆಯಾಗಬೇಕು. ಸ್ವಾಮಿಗಳಿಗೆ ಅಡ್ಡಪಲ್ಲಕ್ಕಿಯ ಉತ್ಸವ. ಊರಿಗೆ ಕೀರ್ತಿ ತಂದವನನ್ನು ಕುಸ್ತಿ ಮುಂತಾದ ಪಂದ್ಯಗಳಲ್ಲಿ ಗೆದ್ದುಬಂದವರನ್ನ-ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿಸಬೇಕು. ಅದಕ್ಕೆಂದೇ “ಈ ಮನೆಗೆ ಪಲ್ಲಕ್ಕಿ ಮೇಲೆ ಮಗ ಬರಲಿ” ಎಂದು ಹರಸುವುದು. ಹಳ್ಳಿಯಲ್ಲಿ ಬಡವರು ಕೂಲಿಕುಂಬಳಿ ಮಾಡಿ ಜೋಳವನ್ನು ಸಂಪಾದಿಸುತ್ತಾರೆ. ಆದರೆ ಮನೆಯಲ್ಲಿ- ಅಲ್ಲ, ಗುಡಿಸಲಿನಲ್ಲಿ ಒಂದು ಬೀಸುಕಲ್ಲನ್ನೂ ಇಟ್ಟುಕೊಳ್ಳಲಾರದಂತಹ ಬಡತನ. ಯಾರೋ ಶ್ರೀಮಂತರ ಮನೆಗೆ ಹೋಗಿ ತಮ್ಮ ಧಾನ್ಯ ಬೀಸಿಕೊಳ್ಳಲು ಅನುಮತಿ ಕೇಳುತ್ತಾರೆ. ಗಂಟೆಗಳ ಕಾಲ ಬೀಸುಕಲ್ಲಿನ ಹಾಡುಗಳನ್ನೋ ಜಾನಪದ ಕಥನ ಕವನಗಳನ್ನೋ ಹಾಡಿ, ಬೀಸಿ, ಹಿಟ್ಟನ್ನು ಬುಟ್ಟಿಗೆ ತುಂಬಿಕೊಂಡು ಕೊನೆಯಲ್ಲಿ ಈ ಬಗೆಯಾಗಿ ಹಾಡಿ ಹರಸುತ್ತಾರೆ :

ಕಲ್ಲು ಕೊಟ್ಟಮ್ಮಗ ಎಲ್ಲಾ ಭಾಗ್ಯವು ಬರಲಿ
ಪಲ್ಲಕ್ಕಿ ಮ್ಯಾಲೆ ಮಗ ಬರಲಿ ಈ ಮನೆಗೆ
ಮಲ್ಲೀಗಿ ಮುಡಿಯೋ ಸೊಸೆ ಬರಲಿ ||

ಬಿದಿರಿನ ಪಲ್ಲಕ್ಕಿಯ ಮಹತ್ವ ದಕ್ಷಿಣದಲ್ಲಿ ಈ ಬಗೆಯಾದರೆ ಉತ್ತರ ಭಾರತದಲ್ಲಿ ಮೇಣೆಯದು. ಮಧ್ಯಮ ವರ್ಗೀಯರು ಕೂಡಾ ಮಗಳನ್ನು ಕಳಿಸುವಾಗ ಇಲ್ಲವೆ ತವರುಮನೆಗೆ ಕರೆಸುವಾಗ ಮೇಣೆಯಲ್ಲಿ ಕುಳ್ಳಿರಿಸಿ ಕರೆಸುತ್ತಾರೆ. “ಜಾರ ಕಹಾರ ಮಿಲ ಮೋರೀ ಡುಲಿಯಾ ಸಜಾಯಿರೇ” ಎಂಬುದಾಗಿ ತವರನ್ನು ತೊರೆದು ಗಂಡನ ಮನೆಗೆ ಹೊರಟ ನವವಧುವೊಬ್ಬಳು ಉದ್ಗರಿಸುತ್ತಾಳೆ ಗದ್ಗದಿಸುತ್ತ. ನಾಲ್ಕು ಜನ ಬೋವಿಗಳು ನನ್ನ ಡೋಲಿಯನ್ನು – ಮೇನೆಯನ್ನು ಸಜ್ಜಾಗಿರಿಸಿದ್ದಾರೆ- ಎನ್ನುತ್ತಾಳವಳು. ಇದರ ಕರುಣಾಜನಕ ಹಿನ್ನೆಲೆಯನ್ನು ವಿವರಿಸುವ ಮುನ್ನ ಇದೇ ಸ್ವರೂಪದ ಕನ್ನಡ ಜಾನಪದ ಹಾಡೊಂದನ್ನು ನೋಡೋಣ :

ಹೋಗ್ತೀನಿ ಹೊಸ್ತಿಲೇ ಹೋಗ್ತೀನಿ ಬಾಗೀಲೇ
ಹೋಗ್ತೀನಿ ಹೊನ್ನ ನಡುಮನೆಯ ತಾಯಿಲ್ದ
ತವರೀಗೆ ನಾವು ಬರಬಾರ್ದು ||

ತಾಯಿ ತೀರಿದ ಮೇಲೆ ತವರು ಮನೆಗೆ ಬಂದು ಅಣ್ಣ-ಅತ್ತಿಗೆಯರಿಂದ ಮನ್ನಣೆ ಸಿಗದೆ ಅಳುತ್ತ ಹಿಂದಿರುಗಿ ತನ್ನ ಮನೆಗೆ ಹೊರಟ ಹೆಣ್ಣಿನ ಸಂಕಟವನ್ನು ಹೊಮ್ಮಿಸಿದ ಹಾಡಿದು. ‘ಹೋಗಿಬರುತ್ತೇನೆ’ ಎಂಬ ಉಪಚಾರದ ಮಾತನ್ನೂ ಆಡಲಾರದ ಸ್ಥಿತಿಯವಳದು. ಅದಕ್ಕಾಗಿ “ಹೋಗ್ತೀನಿ” ಎಂದಷ್ಟೇ ಹೇಳುತ್ತಾಳೆ. ಅದೂ ಹೊಸ್ತಿಲಿಗೆ, ಬಾಗಿಲಿಗೆ, ನಡುಮನೆಗೆ.

ಭೈರವೀ ಠುಮರಿಯೊಂದರಲ್ಲಿ ಇಂತಹುದೇ ಹೃದಯಸ್ಪರ್ಶಿ ಚಿತ್ರಣವಾಗಿದೆ. ಅವಳು ತಾಯ ಮನೆಗೆ ಎಂದೆಂದಿಗೂ ಎರವಾಗಿದ್ದಾಳೆ. ಸಂಬಂಧವೇ ಕಡಿದು ಹೋಯಿತು. (ನೈಹರ ಛೂಟೋ ಹಿ ಜಾಯ) ಗಂಡನ ಮನೆಗೆ ಹೊರಟ ಅವಳು ಹಿಂದಿರುಗಿ ನೋಡಿದರೆ ಹೊಸ್ತಿಲು ಕಾಣುವುದಿಲ್ಲ. ಏಕೆಂದರೆ ಮನೆಯ ಮುಂದಿನ ಅಂಗಳ ಬೆಟ್ಟದಂತೆ ಬೆಳೆದಿದೆ. (ಅಂಗನಾ ಪರಪತ ಭಯೋ) ಆದುದುರಿಂದ ಅದರ ಆಚೆಗಿನ ಹೊಸ್ತಿಲು ಇನ್ನು ಪರದೇಶವಾದಂತೆಯೇ (ದೇಹರೀ ಭಯೀ ಬಿದೇಸ):

ಬಾಬುಲ ಮೋರಾ ನೈಹರ ಛೂಟೋ ಹೀ ಜಾಯ
ಚಾರ ಕಹಾರ ಮಿಲ ಮೋರೀ ಡುಲಿಯಾ ಸಜಾಯೀ
ಮೋರಾ ಅಪನಾ ಬೇಗಾನಾ
ಬಾಬುಲ ಮೋರಾ |
ಅಂಗನಾ ಪರಬತ ಭಯೋ
ಚಾರ ದೇಹರೀ ಭಯೀ ಬಿದೇಸ
ಲೇ ಬಾಬುಲ ಘರ ಆಪಸೋ
ಮೈ ತೋ ಚಲೀ ಪಿಯಾ ಕೇ ದೇಸ ||

ತೆಗೆದುಕೊಳ್ಳಿ ನನ್ನ ತವರನ್ನು. ನಾನು ನನ್ನ ಪ್ರಿಯನ ದೇಶಕ್ಕೆ ಹೊರಟೆನಿದೊ !

ತವರನ್ನು ತೊರೆದುಹೋಗುತ್ತಿರುವ ತರುಣಿಯ ವ್ಯಥೆಯಿದು ಕರುಣಾಜನಕ. ಆದರೆ ಇದರ ಹಿಂದಣ ಕಥೆ, ಹೃದಯವಿದಾರಕೆ. ಔಂಧ ಸಂಸ್ಥಾನದ ನವಾಬ ವಾಜಿದ ಅಲೀ ಶಹನ ರಚನೆಯಿದು ಈ ಭೈರವೀ ಠುಮರೀ. ದೇಶೀ ಸಂಸ್ಥಾನಗಳನ್ನು ಒಂದೊಂದಾಗಿ ಕಬಳಿಸಿದ ಬ್ರಿಟಿಶರು ಔಂಧವನ್ನು ಕಸಿದುಕೊಂಡರು. ಕವಿ-ಗಾಯಕನಾಗಿದ್ದ ನವಾಬ ವಾಜಿದ ಅಲೀ ಶಾಹನನ್ನು ಕಲಕತ್ತೆಗೆ ಕಳಿಸಿ ಅಲ್ಲೊಂದು ಅರಮನೆಯಲ್ಲಿ ಆಯುಷ್ಯವಿಡೀ ಬಂಧಿಯಾಗಿರುವಂತೆ ಏರ್ಪಡಿಸಿದರು. ವಿದೇಶೀಯರ ಕೈಗೆ ತನ್ನ ಅರಮನೆಯನ್ನೊಪ್ಪಿಸಿ ಹೊರಡುತ್ತ ಈ ಹಾಡನ್ನು ರಚಿಸಿ ಹಾಡುತ್ತ ಕಣ್ಣೀರಿಡುತ್ತ ಕಲಕತ್ತೆಗೆ ತೆರಳುತ್ತಾನೆ ವಾಜಿದ ಅಲಿ.

ಇದನ್ನು ನೋಡಿದರೆ ಹಾಡು ತಾನಾಗಿ ರೂಪುಗೊಂಡು ನೇರವಾಗಿ ಎದೆಯೊಳಗಿಂದ ಹೊರಬಂದಿತೆಂಬುದು ಗೊತ್ತಾಗುತ್ತದೆ. ಅಭಿಜಾತಸಂಗೀತದ ಹಾಡುಗಳು ಬಹುಮಟ್ಟಿಗೆ ಹೀಗೆಯೆ. ಅದಕ್ಕಾಗಿಯೇ ಇರಬೇಕು. ಜಾನಪದ ಹಾಡುಗಳಿಗೂ ಇವುಗಳಿಗೂ ಇಂತಹ ಸಾಮ್ಯ ಸಾಮೀಪ್ಯಗಳಿರುವುದು.

ಅಲ್ಲದೆ ಇನ್ನೊಂದು ವಿಶೇಷವಿದೆ. ಹಿಂದುಸ್ತಾನೀ ಸಂಗೀತದ ಕೃತಿಗಳಲ್ಲಿ ಬಹುಮಟ್ಟಿನವು ಖಯಾಲಾಗಲಿ, ಠುಮರೀ ದಾದರಗಳಾಗಲಿ, ಧ್ರುಪದ ಧಮಾರಗಳಾಗಲಿ-ಜಾನಪದ ಭಾಷೆಯಲ್ಲಿರುತ್ತವೆ. ಎಂತಹ ಮಹಾ ಮಹಾ ಉಸ್ತಾದರು ಪಂಡಿತರು ಎಷ್ಟೊಂದು ವಿದ್ವತ್ಪೂರ್ಣವಾಗಿ ರಾಗವಿಸ್ತಾರ ಮಾಡಲಿ, ತಾನಬೋಲ ತಾಲಗಳನ್ನು ಹಾಡಲಿ, ಅವರ ಚೀಜುಗಳ “ಬೋಲ” ಮಾತ್ರ ಜಾನಪದ ಭಾಷೆಯದಾಗಿರುತ್ತದೆ, ಹಿಂದೀ ಖಡೀಬೋಲೀ-ಎಂದರೆ ಪಟ್ಟಣಗಳು, ಸುರಕ್ಷಿತರು ಮಾತನಾಡುವ ಭಾಷೆ ಶಾಸ್ತ್ರೀಯ ಸಂಗೀತಕ್ಕೆ ಸಲ್ಲದು. ಅದು ಬಳಸುವುದು ಗಂಗಾ ಯಮುನಾ ನದಿಗಳ ನಡುವಣ ಪ್ರದೇಶವಾದ ವ್ರಜಭೂಮಿಯ “ಬ್ರಿಜ” ಭಾಷೆಯನ್ನು. ಅಪರೂಪವಾಗಿ ಭೋಜಪುರೀ, ಅವಧೀ, ಮಾರವಾಡೀ ಮುಂತಾದ ಹಿಂದಿಯ ಉಪಭಾಷೆಗಳನ್ನು, ಕ್ವಚಿತ್ತಾಗಿ ಪಂಜಾಬಿಯನ್ನು, ಜಾನಪದ ಭಾಷೆಯಿಂದಾಗಿಯೇ ಜನಸಾಮಾನ್ಯರ ಭಾವನೆಗಳ ಅಭಿವ್ಯಕ್ತಿಗೆ ಅನುಕೂಲವಾಗಿದೆ. ಅಲ್ಲಿ ವ್ಯಕ್ತವಾದ “ಅನುರಾಗ”ದಿಂದಾಗಿಯೇ “ರಾಗವಿಸ್ತಾರ” ಸಾಧ್ಯವಾಗುವುದು ಸಂಗೀತಗಾರರಿಗೆ. ಟೆನಿಸನ್ನನ “ಗ್ಯುನಿವಿಯರ” ಎಂಬ ಖಂಡಕಾವ್ಯದಲ್ಲಿ ಅರ್ಥ ರಾಜನ ರಾಣಿ ಹೇಳುತ್ತಾಳೆ: “ದೇವಮಾನವನಂತಹ ಪತಿ ನನಗೆ ಸುಖ ಕೊಡಲಾರ. ನನ್ನನ್ನು ಪ್ರೀತಿಸುವವ ನೆಲಕ್ಕೆ ಹತ್ತಿರವಾದವನಾಗಬೇಕು. ಕೆಳಗಿಳಿದ ಸೂರ್ಯನಿಂದ ಬಣ್ಣಗಳು-ರಾಗಗಳು ಹೊಮ್ಮುವವೇ ಹೊರೆತು ನಡುನೆತ್ತಿಯ ಸೂರ್ಯನಿಂದಲ್ಲ” !

ಆದುದರಿಂದಲೇ “ರಾಗದಾರೀ” ಅರ್ಥಾತ್ ಅಭಿಜಾತಸಂಗೀತಕ್ಕೆ ನೆಲಕ್ಕೆ ಹತ್ತಿರವಾದ, ಮಣ್ಣಿನಮಕ್ಕಳ ಭಾಷೆಯೇ ಯೋಗ್ಯವಾದುದು. ತಾನಸೇನನ ಧ್ರುಪದಗಳು, ಸದಾರಂಗನ ಖಯಾಲಚೀಜುಗಳು ಜಾನಪದ ಭಾಷೆಯಾದ ಬ್ರಿಜ ಭಾಷೆಯಲ್ಲಿವೆ. ವ್ರಜಭೂಮಿ ಶ್ರೀ ಕೃಷ್ಣ ತುರುಗಳನ್ನು ಕಾಯ್ದ ಭೂಮಿ. ಗೋವಳಿತಿಯರೊಂದಿಗೆ ರಾಸಕ್ರೀಡೆಯಾಡಿದ ಭೂಮಿ. ಎಂತಲೇ ಆ ವ್ರಜಭೂಮಿಯಲ್ಲಿ ಹುಟ್ಟಿದ ಬ್ರಿಜ ಭಾಷೆಯಲ್ಲಿ ಕೃಷ್ಣನ ಕೊಳಲಿನ ನಾದವಿದೆ; ಗೋಪಿಯರ ಕಾಲ್ಗೆಜ್ಜೆಗಳ ಝಣತ್ಕಾರವಿದೆ. ಏಳು ನೂರುವರ್ಷಗಳ ಹಿಂದೆಯೇ ಖಯಾಲಿನ ಆವಿಷ್ಕಾರನಾದ ಅಮೀರ ಖುಸರೋ ಈ ಜಾನಪದವಾದ ಬ್ರಿಜಭಾಷೆಯೇ ತನ್ನ ಮಾತೃಭಾಷೆಯೆಂದು ಹೇಳಿಕೊಂಡಿದ್ದಾನೆ. ಅದನ್ನವನು ಹಿಂದವೀ ಅಥವಾ ಹಿಂದೂಯೀ-ಎಂದರೆ ಹಿಂದೂಗಳ ಭಾಷೆ-ಎಂದು ಕರೆದಿದ್ದಾನೆ. ಕೆಲವು ಚೌಪದಿಗಳಲ್ಲಿ ಖುಸರೋ ಎರಡು ಸಾಲನ್ನು ಪರ್ಶಿಯನ್ನಿನಲ್ಲಿ ಬರೆದರೆ ಇನ್ನೆರಡನ್ನು ಬ್ರಿಜ ಭಾಷೆಯಲ್ಲಿ ಬರೆದು ಪೂರ್ಣಗೊಳಿಸಿದ್ದಾನೆ.

ಪರ್ಶಿಯನ್ :

ಶಬಾನೇ ಹೀಜರಾ ಜರಾಜೆ ಚೂ ಜುಲ
ವೋ ರೋಜೇ ವಸಲತ ತೋ ಉಮ್ರೆ ಕೋತಾ ||

ಬ್ರಿಜ :

ಸಖೀ ಪಿಯಾಕೋ ಜೋ ಮೈ ನ ದೇಖೂಂ
ತೋ ಕೈ ಸೇ ಕಾಮಾಂ ಅಂಧೇರೀ ರತಿಯಾಂ ||

ಜಾನಪದ ಭಾಷೆ ಹಾಗೂ ನಾಟಕೀಯ ಸನ್ನಿವೇಶಗಳುಳ್ಳ, ನಾಯಕ ನಾಯಿಕಾಭಾವ ತುಂಬಿರುವ “ವಸ್ತುಕವಿ”ಗಳಿಂದ ರಚಿತವಾದ ಕೃತಿಗಳು ಹಿಂದುಸ್ತಾನೀ ಗಾಯಕರಿಗೆ ಅಪಾರವಾದ ಕಲ್ಪನಾವಿಲಾಸಕ್ಕೂ, ರಾಗವಿಸ್ತಾರಕ್ಕೂ ಅವಕಾಶವನ್ನೊದಗಿಸುತ್ತವೆ. “ವರೋ ವಸ್ತುಕವಿಃ ವರ್ಣಕವಿರ್ಮಧ್ಯಮ ಉಚ್ಯತೇ” ಎಂಬುದಾಗಿ ಶಾರ್ಙ್ಗದೇವ “ಸಂಗೀತರತ್ನಾಕರ”ದಲ್ಲಿ ಹೇಳಿದ್ದಾನೆ. ವಸ್ತು-ಎಂದರೆ ಕಥೆ. ನಾಟಕೀಯ ಸನ್ನಿವೇಶ ಇರುವ ಹಾಡುಗಳನ್ನು ರಚನೆ ಮಾಡುವ ಕವಿ, ವಾಗ್ಗೇಯಕಾರ ಶ್ರೇಷ್ಠ. ಬರಿ ವರ್ಣನಾತ್ಮಕ ಕೃತಿಗಳನ್ನು ರಚಿಸುವ ಕವಿಯು ಎರಡನೆಯ ದರ್ಜೆಯವನು. ಹಿಂದೀಯಲ್ಲಿ  “ಚೀಜ” ಎಂದರೆ ವಸ್ತು ಎಂಬರ್ಥವೂ ಇದೆ. ವರ್ಣಕವಿಗಳಿಂದ ರಚಿತವಾದ ಸಂಸ್ಕೃತ ಕೃತಿಗಳು ಜಡವಾಗಿದ್ದು ಸಂಗೀತವನ್ನು ನೆಲಬಿಟ್ಟು ಮೇಲೇಳಗೊಡುವುದೇ ಇಲ್ಲ. ಗೆಜ್ಜೆ ಹಗುರವಾಗಿದ್ದಷ್ಟೂ ಝಣತ್ಕಾರ ಹೆಚ್ಚು, ಕುಣಿಯುವ ಕಾಲಿನ ಚಾಪಲ್ಯವೂ ಹೆಚ್ಚು, ಚಮತ್ಕಾರವೂ ಹೆಚ್ಚು. ತಾನಸೇನನ ಗುರುವಾದ ಸ್ವಾಮಿ ಹರಿದಾಸರ ಕೃತಿಗಳು ಕೂಡಾ ಬ್ರಿಜ ಭಾಷೆಯಲ್ಲಿವೆ.

ಕನ್ನಡದ ಚಂಪೂ ಕಾವ್ಯಗಳು ಗಮಕಕ್ಕೆ-ಕಾವ್ಯಗಾಯನಕ್ಕೆ ಅಷ್ಟೊಂದು ಸುಲಭವೆನಿಸಲಾರವು. ಅದಕ್ಕಾಗಿ ಷಟ್ಪದೀ ಕಾವ್ಯಗಳೇ ಆಗಬೇಕು. ಸಾಂಗತ್ಯವೂ ಅನುಕೂಲ. ಆದರೆ ಹೆಚ್ಚು ಸಂಗೀತಪ್ರಧಾನವಾಗಬೇಕಾದರೆ ಹಾಡಿನ ಭಾಷೆ ಜನರಾಡುವ ಭಾಷೆಗೆ ಹತ್ತಿರವಾದುದಾಗಿರಬೇಕು : ವಚನಗಳಲ್ಲಿರುವಂತೆ, ದಾಸರ ಪದಗಳಲ್ಲಿರುವಂತೆ.

ಆದಿ ಪಂಪನು “ಆರಂಕುಶಮಿಟ್ಟೊಡಂ” ನೆನೆದುಕೊಳ್ಳುವ ಬನವಾಸಿದೇಶದ “ಇಂಪನಾಳ್ದ ಗೇಯ” ಬಹುಶಃ ಜಾನಪದ ಭಾಷೆಯಲ್ಲಿಯೇ ಇದ್ದಿರಬೇಕು !