ಬಯಲಾಟಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಹಳ್ಳಿಗರ ಸಂಗೀತ ಜನಪದಸಂಗೀತ. ಹಾಗಂತ ಬಯಲಾಟಗಳ ಸಂಗೀತವನ್ನು ಜನಪದ ಸಂಗೀತವೆಂದು ಸರಳವಾಗಿ ಹೆಸರಿಸುವುದು ಸೂಕ್ತವಲ್ಲ. ಜನಪದಸಂಗೀತದಲ್ಲಿ ಬೇರೆ ಬೇರೆ ಸ್ಥರಗಳಿವೆ. ಗರತಿಯ ಹಾಡು, ಹಂತಿಪದ, ಕೋಲಾಟದ ಪದ ಮುಂತಾದವುಗಳು ಅಚ್ಚ ಜನಾಪದ ಧಾಟಿಗಳಾಗಿವೆ. ಭಜನೆ, ಲಾವಣಿ ಮೊದಲಾದವುಗಳು ಅಚ್ಚ ಜಾನಪದದಿಂದ ಶಿಷ್ಟದ ಕಡೆಗೆ ಮುಖಮಾಡಿರುವಂಥವು. ಬಯಲಾಟಗಳ ಸಂಗೀತ ಜಾನಪದ ಮತ್ತು ಶಿಷ್ಟಗಳ ಸಮ್ಮಿಶ್ರಣವಾಗಿದೆ. ಕೆಲವೊಮ್ಮೆ ಶಿಷ್ಟದ ತದ್ಭವವಾಗಿದೆ.

ಉತ್ತರ ಕರ್ನಾಟಕದ ಬಯಲಾಟಗಳಲ್ಲಿ ಮೂಡಲಪಾಯ (ದೊಡ್ಡಾಟ), ಸಣ್ಣಾಟ (ದಪ್ಪಿನಾಟ) ಮತ್ತು ಶ್ರೀಕೃಷ್ಣಪಾರಿಜಾತ ಇವು ಮೂರು ಪ್ರಕಾರಗಳು. ಇವುಗಳ ಸ್ವಂತಿಕೆಯನ್ನು ಗುರುತಿಸುವಾಗ ಸಂಗೀತವೇ ಪ್ರಮುಖ ಅಂಶವಾಗಿರುತ್ತದೆ.

ಮೂಡಲಪಾಯಕ್ಕೆ ದೊಡ್ಡಾಟ, ಬಯಲಾಟ ಇತ್ಯಾದಿ ಹೆಸರುಗಳಿವೆ. ಮೂಡಲಪಾಯ ಹೆಸರಿನ ವೈಶಿಷ್ಟ್ಯ ಗಮನಾರ್ಹವಾದುದು. ಮೂಡಲ ಅಂದರೆ ಪೂರ್ವ, ಪಾಯ ಅಂದರೆ ಪದ್ಧತಿ, ಶೈಲಿ ಎಂದರ್ಥ. ಈ ರಂಗಪ್ರಕಾರ ಕರ್ನಾಟಕದ ಪೂರ್ವ ಭಾಗದಿಂದ ಬಂದದ್ದಾಗಿರಬೇಕು. ಹೀಗೆ ಮೂಡಲಪಾಯ ಒಟ್ಟಾರೆ ಒಂದು ರಂಗಪ್ರಕಾರವನ್ನು ಸೂಚಿಸುತ್ತಿದ್ದರೂ ಪ್ರಮುಖವಾಗಿ ಸಂಗೀತ ಶೈಲಿಗೆ ಸಂಬಂಧಿಸಿದೆ. ದೊಡ್ಡಾಟದ ಹಾಡುಗಳನ್ನು ಮೂಡಲಪಾಯಶೈಲಿ ಮತ್ತು ಯಕ್ಷಗಾನಶೈಲಿ ಎಂದು ವಿಂಗಡಿಸಿ ಗುರುತಿಸುವ ರೂಢಿ ರಾಣೆಬೆನ್ನೂರು, ಹಾವೇರಿ, ಹಾನಗಲ್ಲ ಈ ಕಡೆಗಿದೆ. ಅಂದರೆ ಮೂಡಲಪಾಯ ಅನ್ನುವದು ಮೂಲತಃ ಸಂಗೀತ ಶೈಲಿಗೆ ಸಂಬಂಧಿಸಿದ್ದೆಂಬುದರಲ್ಲಿ ಸಂಶಯವಿಲ್ಲ. ಇಂಥ ಒಂದು ವಿಶಿಷ್ಟ ಸಂಗೀತ ಶೈಲಿಯನ್ನೊಳಗೊಂಡ ಇಡೀ ರಂಗಪ್ರಕಾರಕ್ಕೆ ಆ ಸಂಗೀತ ಶೈಲಿಯ ಹೆಸರು-ಮೂಡಲಪಾಯ-ಅನ್ವಯಿಸಲ್ಪಟ್ಟಿತು.

ಮೂಡಲಪಾಯ ಒಂದು ಸ್ವತಂತ್ರ ಸಂಗೀತಶೈಲಿಯಾಗಿದ್ದರೂ ಇದು ದಕ್ಷಿಣಾದಿ ಸಂಗೀತದ ಪ್ರಾದೇಶಿಕ ವೈಶಿಷ್ಟ್ಯವೆಂದು ಹೇಳಬಹುದು. ದಕ್ಷಿಣ ಭಾರತದ ತುಂಬ ನೆಲೆಗೊಂಡಿರುವ ದಕ್ಷಿಣಾದಿ ಸಂಗೀತವೇ ಮೂಡಲಪಾಯದ ಮೂಲ ದ್ರವ್ಯ. ಪರಿಪೂರ್ಣ ಶಿಷ್ಟ ಅವಸ್ಥೆಗೆ ತಲುಪಿರುವ ದಕ್ಷಿಣಾದಿ ಸಂಗೀತ ಮೂಡಲಪಾಯದಂಥ ಪ್ರಾದೇಶಿಕ ಪ್ರಕಾರವೊಂದಕ್ಕೆ ಮೂಲ ಪ್ರೇರಣೆ ನೀಡಿರುವುದು ಸಹಜವಾಗಿದೆ. ಮಾರ್ಗಸಾಹಿತ್ಯದ ಕಥಾವಸ್ತು, ಸಂಸ್ಕೃತಭೂಯಿಷ್ಠ ಗಡಸು ಸಂಭಾಷಣೆಗಳನ್ನೊಳಗೊಂಡ ದೊಡ್ಡಾಟ ದಕ್ಷಿಣಾದಿಯಂಥ ಶಿಷ್ಟ ಸಂಗೀತವನ್ನು ಅಪೇಕ್ಷಿಸಿದ್ದರಲ್ಲಿ ಆಶ್ಚರ್ಯವಿಲ್ಲ. ದೊಡ್ಡಾಟದ ಕೃತಿಗಳು ಸಾಹಿತ್ಯಿಕವಾಗಿ ದ್ವಿತೀಯ ದರ್ಜೆಯ ಸ್ಥಾನ ಪಡೆದಿರುವಂತೆ ಸಂಗೀತವೂ ಮೂಲದ ಶಿಷ್ಟಸಂಗೀತಕ್ಕೆ ಗುಣಮಟ್ಟದಲ್ಲಿ ದ್ವಿತೀಯವಾಗಿಯೇ ಉಳಿಯಿತು. ತದ್ಭವದ ಸ್ವರೂಪ ಪಡೆದುಕೊಂಡಿತು.

ದಕ್ಷಿಣಾದಿ ರಾಗಗಳಾದ ನಾಟಿ, ಕಾಂಬೋದಿ, ನೀಲಾಂಬರಿ, ಆನಂದಭೈರವಿ, ದುರ್ಗಾ, ಮೋಹನ, ಮಾಯಾಮಾಳವಗೌಳ, ಭೈರವಿ, ಭೀಮಪಲಾಸಿ, ರೇಗುಪ್ತಿ, ಹಿಂಡೋಲ ಈ ಮುಂತಾದ ರಾಗಗಳಲ್ಲಿ ಮೂಡಲಪಾಯದ ಹಾಡುಗಳಿರುತ್ತವೆ. ಆದಿ, ಅಟ್ಟ, ರೂಪಕ ಇವು ಪ್ರಮುಖ ತಾಳಗಳು. ಆದರೆ ಈ ರಾಗತಾಳಗಳಲ್ಲಿ ದಕ್ಷಿಣಾದಿ ಶಾಸ್ತ್ರೀಯ ಹಾಡುಗಾರ ಹಾಡುವುದಕ್ಕೂ ಮೂಡಲಪಾಯದ ಭಾಗವತ ಹಾಡುವುದಕ್ಕೂ ವ್ಯತ್ಯಾಸವಿದೆ. ಮೂಡಲಪಾಯದಲ್ಲಿ ಶಾಸ್ತ್ರೀಯತೆಯ ಬಿಗಿ ಇರುವುದಿಲ್ಲ. ರಂಜನೀಯ ಅಂಶಗಳು ಹೆಚ್ಚು. ಇಂದಿನ ಭಾಗವತರು ಮೂಲದ ಧಾಟಿಗಳನ್ನು ಅನುಕರಿಸಬಲ್ಲವರಾಗಿದ್ದಾರೆ. ರಾಗತಾಳಗಳ ಪರಿಜ್ಞಾನ ಇರುವವರು ತೀರಾ ಕಡಿಮೆ. ಹೀಗಾಗಿ ನಿರ್ದಿಷ್ಟ ರಾಗಗಳಲ್ಲಿ ಸಂಯೋಜಿಸಲ್ಪಟ್ಟ ಮೊದಲಿನ ರಚನೆಗಳು ಇಂದು ಕೇವಲ ಧಾಟಿಗಳಾಗಿವೆ.

ಮೂಡಲಪಾಯದ ಬಹಳಷ್ಟು ಹಾಡುಗಳು ವಿಲಂಬಿತ ಲಯದಲ್ಲಿರುತ್ತವೆ. ಸಮರ್ಥ ಭಾಗವತರು ತೂಗಿ ಹಿಗ್ಗಿಸಿ ಹಾಡಿದಾಗ ತುಂಬಾ ಆಕರ್ಷಣೀಯವಾಗಿ ಕೇಳುತ್ತವೆ. ಯುದ್ಧ, ಪ್ರಯಾಣ ಮುಂತಾದ ಸನ್ನಿವೇಶಗಳಲ್ಲಿನ ಪುರುಷ ವೇಷದ ಹಾಡುಗಳು ದ್ರುತ್ ಗತಿಯಲ್ಲಿರುತ್ತವೆ. ಕೆಲವುಕಡೆ ಸ್ತ್ರೀಪಾತ್ರದ ಹಾಡುಗಳನ್ನು ಪಾತ್ರಧಾರಿಯೊಬ್ಬನೇ ಹಾಡುವುದು ರೂಢಿಯಲ್ಲಿದೆ.

ಮೂಡಲಪಾಯದ ಸಂಗೀತಕ್ಕೆ ದೇಸೀಯ ಮೆರಗು ಕೊಟ್ಟಿದ್ದು ಹಿಮ್ಮೇಳ. ಹಿಮ್ಮೇಳದವರು ಭಾಗವತನು ಅಂದು ಬಿಟ್ಟ ಸಾಲುಗಳನ್ನು ಪುನರುಚ್ಚರಿಸುತ್ತಾರೆ. ಹಾಡು ದ್ರುತ್ ಲಯದಲ್ಲಿದ್ದಾಗ ತಾರ ಸ್ವರದಲ್ಲಿ ಕೋಚ್ ಎತ್ತಿಕೊಳ್ಳುತ್ತಾರೆ. ಮೂಡಲಪಾಯಕ್ಕೇ ವಿಶಿಷ್ಟವಾಗಿರುವ ಈ ಕೋಚ್ ಇಡೀ ರಂಗಪ್ರಯೋಗಕ್ಕೆ ಒಂದು ರೀತಿಯ ಬೆಡಗನ್ನು ತಂದುಕೊಡುತ್ತದೆ. ಹೆಚ್ಚಾಗಿ ಯುದ್ಧದ ಕಥಾವಸ್ತುವನ್ನೊಳಗೊಂಡಿರುವ ದೊಡ್ಡಾಟಗಳಿಗೆ ಇಂಥ ಹಿಮ್ಮೇಳದ ಜೋಡಣೆ ಚೆನ್ನಾಗಿ ಹೊಂದಿಕೊಂಡಿದೆ. ಹಿಮ್ಮೇಳದಲ್ಲಿ ಇಂತಿಷ್ಟೇ ಜನ ಇರಬೇಕೆಂಬ ನಿರ್ಬಂಧವಿಲ್ಲ. ಸಣ್ಣ ಸಣ್ಣ ಪಾತ್ರಧಾರಿಗಳು ತಮ್ಮ ಪಾತ್ರ ಮುಗಿಸಿಬಂದು ಹಿಮ್ಮೇಳ ಸೇರಿಕೊಳ್ಳುವುದರಿಂದ ಈ ಸಂಖ್ಯೆ ಏರುತ್ತಲೇ ಸಾಗುವುದು. ಹೀಗಾಗಿ ಎಷ್ಟೋ ಸಲ ಹಾಡು ಅರಚಾಟವಾಗುವುದೂ ಸಾಧ್ಯ.

ಮೂಡಲಪಾಯದ ಸಂಗೀತದ ಮೇಲೆ ಉತ್ತರಾದಿಸಂಗೀತ ಪ್ರಭಾವ ಬೀರಿದ್ದು ಸ್ಪಷ್ಟವಿದೆ. ಉತ್ತರದ ಗಡಿ ಜಿಲ್ಲೆಗಳಲ್ಲಿ ಈ ಪ್ರಭಾವ ಹೆಚ್ಚು ನಿಚ್ಚಳವಾಗಿ ಇದೆ. ಹಾಡುಗಾರಿಕೆಯಲ್ಲಿ ಉತ್ತರಾದಿಯ ವಾಸನೆ ಬೆರೆತಿದೆ, ಮದ್ದಳೆಯ ಬದಲಾಗಿ ಉತ್ತರಾದಿಯ ತಬಲಾ ಉಪಯೋಗಿಸಲಾಗುತ್ತದೆ. ಕೆಲವು ಕಡೆ ಉತ್ತರಾದಿಯ ಚೀಜುಗಳ ಮಾದರಿಯ ಹಾಡುಗಳು ನೇರವಾಗಿ ಪ್ರವೇಶಿಸಿವೆ.

ಡಪ್ಪಿನಾಟಗಳಿಗೆ ಸಣ್ಣಾಟ ಎಂದೂ ಹೆಸರು. ‘ಡಪ್ಪಿನಾಟ’ ಪದ ಹೆಚ್ಚು ವ್ಯಾಪಕಸೂಕ್ತವಾಗಿದೆ. ಈ ಆಟದಲ್ಲಿ ಡಪ್ಪಿಗೇ ಪ್ರಾಧಾನ್ಯತೆ. ಈ ಡಪ್ಪು ಚಿಕ್ಕ ಹಲಗೆ (ತಮ್ಮಟೆ) ಯಾಗಿದೆ. ಈ ವಾದ್ಯ ನಮ್ಮದಾಗಿದ್ದರೂ ಇದನ್ನು ಬಾರಿಸುವ ವಿಧಾನ ಪಕ್ಕದ ಮಹಾರಾಷ್ಟ್ರದ್ದು. ಮಹಾರಾಷ್ಟ್ರದ ತಮಾಶಾದಲ್ಲಿ ಈ ಡಪ್ಪನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಇಂಥ ಡಪ್ಪಿನ ವಾದ್ಯದೊಂದಿಗೆ ಹಾಡುತ್ತ ಪ್ರಯೋಗಿಸುವ ಆಟ ಡಪ್ಪಿನಾಟವಾಗಿದೆ. ಡಪ್ಪಿನ ವಾದನ ದ್ರುತ್ ಗತಿಯ ಚಲನೆಗೆ ಹೇಳಿಮಾಡಿಸಿದಂಥದು. ಡಪ್ಪಿನಾಟದ ಹಾಡುಗಳೆಲ್ಲ ಸಾಮಾನ್ಯವಾಗಿ ವೇಗದ ದ್ರುತ್‌ಗತಿಯಲ್ಲಿರುತ್ತವೆ ಮತ್ತು ಇಲ್ಲಿ ಹಾಡುಗಳು ಮಾತಿಗಿಂತ ಮುಖ್ಯ. ಒಂದು ದೃಷ್ಟಿಯಿಂದ ಡಪ್ಪಿನಾಟಗಳೆಲ್ಲ ಗೀತರೂಪಕಗಳು.

ಡಪ್ಪಿನಾಟಕ್ಕೆ ಎರಡು ಘಟ್ಟಗಳಿವೆ. ಮೊದಲನೆಯ ಘಟ್ಟ ಕಳೆದ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿಕೊಂಡು ಸುಮಾರು ೧೯೨೦ ರವರೆಗೆ ಮುಂದುವರೆದುಕೊಂಡು ಬಂದಿತು. ಸಂಗ್ಯಾ ಬಾಳ್ಯಾ, ರೂಪಸೇನ, ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ್, ಬಸವಂತ ಬಲವಂತ, ರಾಧಾನಾಟ ಇವು ಈ ಘಟ್ಟದ ರಚನೆಗಳು. ಇವು ಅಚ್ಚ ಜಾನಪದ ಸೃಷ್ಟಿಗಳಾಗಿವೆ. ಇವುಗಳ ಸಾಹಿತ್ಯ ಮತ್ತು ಸಂಗೀತ ಎರಡೂ ದೇಸಿ. ಇಲ್ಲಿಯ ಸಂಗೀತ ಸ್ವಲ್ಪ ಶಿಸ್ತಿಗೊಳಪಟ್ಟ ಜಾನಪದ ಸಂಗೀತ. ರಾಗತಾಳಗಳ ಜಂಜಾಟವಿಲ್ಲ. ಸರಳವಾದ ಧಾಟಿಗಳು. ಒಂದೊಂದು ಆಟಕ್ಕೆ ಸಾಮಾನ್ಯವಾಗಿ ೮-೧೦ ಧಾಟಿಗಳಿರುತ್ತವೆ. ಅವೇ ಪುನರಾವರ್ತನೆಗೊಳ್ಳುತ್ತವೆ. ಧಾಟಿಗಳಲ್ಲಿ ಪ್ರಾದೇಶಿಕವಾಗಿ ಸಾಕಷ್ಟು ವ್ಯತ್ಯಾಸಗಳಿದ್ದರೂ ಅವುಗಳ ಚಲನೆ ಮಾತ್ರ ಒಂದೇ ತೆರನಾಗಿದೆ.

ರಾಧಾನಾಟ ಇನ್ನುಳಿದವುಗಳಿಗಿಂತ ಸ್ವಲ್ಪ ಭಿನ್ನವಾದ ಧಾಟಿಗಳನ್ನು ಒಳಗೊಂಡಿದೆ. ಇದರ ಕತೆ ನೇರವಾಗಿ ತಮಾಶಾದಿಂದ ಬಂದದ್ದು. ರಾಧಾನಾಟದ ಮುಖ್ಯ ಪಾತ್ರಗಳಾದ ಸಖಾರಾಮ ತಾತ್ಯಾ, ಗಲಪೋಜಿ, ಚಿಮಣಾ ಈ ಹೆಸರುಗಳೇ ಇದು ಮಹಾರಾಷ್ಟ್ರ ಮೂಲದ ಕತೆಯೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಕತೆಯೊಂದಿಗೆ ಮಹಾರಾಷ್ಟ್ರದ ತಮಾಶಾದ ಧಾಟಿಗಗಳೂ ರಾಧಾನಾಟದ ನಿರ್ಮಿತಿಗೆ ಕಾರಣವಾದವು. ಇನ್ನುಳಿದ ಡಪ್ಪಿನಾಟಗಳ ಧಾಟಿಗಳಿಗಿಂತ ಸ್ವಲ್ಪ ಬೇರೆಯಾಗಿರುವ ರಾಧಾನಾಟದ ಹಾಡುಗಳಲ್ಲಿ ತಮಾಶಾದ ಧಾಟಿಗಳ ವಾಸನೆಯಿದೆ. ಅಲ್ಲದೆ ಲಾವಣಿ ಮುಂತಾದ ಇತರ ಮರಾಠಿ ಗೀತಪ್ರಕಾರಗಳ ಪ್ರಭಾವವೂ ಇರುವುದನ್ನು ಗುರುತಿಸಬಹುದಾಗಿದೆ.

ಈ ಮೊದಲ ಘಟ್ಟದ ಡಪ್ಪಿನಾಟಗಳ ಹಾಡುಗಳು ಕೇಳಲಿಕ್ಕೆ ಒಂದೇ ತರ ಅನಿಸಿದರೂ ಹಾಡಿನ ಆರಂಭ ಮತ್ತು ಅಂತ್ಯಗಳಲ್ಲಿ ಬರುವ ಮುಕ್ತಾಯಗಳಿಂದಾಗಿ ಆಕರ್ಷಕವೆನಿಸಿವೆ. ಒಂದರೊಳಗೊಂದು ಪೋಣಿಸಿದಂತೆ ಹಾಡಿನುದ್ದಕ್ಕೂ ಸಾಗುವ ಈ ಮುಕ್ತಾಯಗಳ ಸೊಗಸೇ ಬೇರೆ.

೧೯೨೦ ರಷ್ಟೊತ್ತಿಗೆ ವೃತ್ತಿರಂಗಭೂಮಿ ನಮ್ಮ ಹಳ್ಳಿಗರಿಗೆ ಪರಿಚಿತವಾಗಿತ್ತು. ಅದರ ಪ್ರಭಾವದಿಂದ ಡಪ್ಪಿನಾಟದ ಎರಡನೇ ಘಟ್ಟ ಉದಿಸಿತು. ಕಾದ್ರೊಳ್ಳಿ ನೀಲಕಂಠಪ್ಪನು ಈ ಹೊಸ ಅಲೆಯ ಕರ್ತೃ. ಮೊದಲಿನ ಧಾಟಿಗಳಿಗೆ ನಾಟ್ಯ ಸಂಗೀತದ ಅಲಂಕಾರಮಾಡಿ ಹೊಸ ನಮೂನೆಯ ಧಾಟಿಗಳನ್ನು ಸೃಷ್ಟಿಸಲಾಯಿತು. ಹಾಡುಗಳ ಬಂಧ ಬಿಗಿಯಾಯಿತು. ಗ್ರಾಂಥಿಕ ಭಾಷೆ ತಲೆದೋರಿತು. ಈ ಘಟ್ಟದಲ್ಲಿ ಕೃತಿ ರಚಿಸಿದ ಇನ್ನೊಬ್ಬ ಸುಪ್ರಸಿದ್ಧ ಕವಿ ಶಿವಾನಂದ ಕವಿಯ ರಚನೆಗಳಲ್ಲಿ ಈ ಎಲ್ಲ ಅಂಶಗಳು ಸ್ಪಷ್ಟವಾಗಿವೆ. ಬದಲಾದ ಧಾಟಿಗಳಿಗೆ ಹೊಂದುವಂತೆ ಡಪ್ಪಿನ ಬದಲಾಗಿ ತಬಲಾ ಉಪಯೋಗಿಸುವ ರೂಢಿ ಪ್ರಾರಂಭವಾಯ್ತು. ಮೊದಲು ಹಾಡಿನ ತುಂಬ ಹರಿದಾಡುತ್ತಿದ್ದ ಮುಕ್ತಾಯಗಳು ನಿರ್ದಿಷ್ಟವಾಗಿ ಒಂದು ಶಿಸ್ತಿಗೆ ಒಳಪಟ್ಟವು.

ಶ್ರೀಕೃಷ್ಣಪಾರಿಜಾತದ ಸಂಗೀತ ದೊಡ್ಡಾಟ ಮತ್ತು ಡಪ್ಪಿನಾಟಗಳ ಸಂಗೀತಕ್ಕಿಂತ ತೀರಾ ಭಿನ್ನವಾಗಿದೆ. ಮೂಲತಃ ಒಂದು ಹಾಡುಗಬ್ರವಾದ ಶ್ರೀಕೃಷ್ಣಪಾರಿಜಾತ ೧೮೬೦ ರ ಸುಮಾರಿಗೆ ರಂಗಪ್ರಯೋಗಕ್ಕೆ ಸಿದ್ಧವಾಯಿತು. ಅಂದು ಪ್ರಚಾರದಲ್ಲಿದ್ದ ಕರ್ನಾಟಕಸಂಗೀತಶೈಲಿಯಲ್ಲಿಯೇ ಪಾರಿಜಾತದ ಹಾಡುಗಳಿದ್ದವು. ಜೊತೆವಾದ್ಯವಾಗಿ ಮದ್ದಳೆ ಬಾರಿಸುತ್ತಿದ್ದರು. ಕಳೆದ ಶತಮಾನದ ಕೊನೆಯಲ್ಲಿ ಪಾರಿಜಾತದ ಹಾಡುಗಳು ಎಷ್ಟೊಂದು ರಂಜನೀಯವಾಗಿದ್ದವೆಂದರೆ ಪಕ್ಕದ ಮಹಾರಾಷ್ಟ್ರದ ನಾಟ್ಯಗೀತೆಗಳು ಈ ಪಾರಿಜಾತದ ಧಾಟಿಗಳನ್ನು ಅನುಕರಿಸುತ್ತಿದ್ದವು.

ಈ ಶತಮಾನದ ಆರಂಭದಿಂದ ಉತ್ತರಾದಿ ಸಂಗೀತ ತನ್ನ ಪ್ರಭಾವವನ್ನು ಇಲ್ಲಿ ಬೀರಲಾರಂಭಿಸಿತು. ಜನರು ಅತ್ತಕಡೆಗೆ ಆಕರ್ಷಿಸಲ್ಪಟ್ಟರು. ಇದರ ಪರಿಣಾಮವಾಗಿ ಪಾರಿಜಾತದ ಹಾಡುಗಾರಿಕೆಯೂ ಬದಲಾವಣೆ ಹೊಂದಿತು. ಮೊದಲಿನ ಕರ್ನಾಟಕಿ ಸಂಗೀತದ ಸ್ಥಾನವನ್ನು ಉತ್ತರಾದಿ ಸಂಗೀತ ಆಕ್ರಮಿಸಿತು. ಉತ್ತರಾದಿ ಸಂಗೀತದಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದ ಮಹಾಲಿಂಗಪೂರ ರಾಜಾಸಾಬ, ನನದಿ ಗೋಂದಳಿ, ಶಿರಗುಪ್ಪಿ ಕಾಡಗೌಡ ಮುಂತಾದವರು ಪಾರಿಜಾತದ ಸಂಗೀತಕ್ಕೆ ಹೊಸ ಶಕ್ತಿ ನೀಡಿದರು. ತಮ್ಮ ಬಂಧುರ ಹಾಡುಗಾರಿಕೆಯ ಮೂಲಕ ಜನರಲ್ಲಿ ಉತ್ತರಾದಿ ಸಂಗೀತದ ಅಭಿರುಚಿ ಬೆಳೆಸಿದರು.

ಪಾರಿಜಾತದ ಮೇಲೆ ಉತ್ತರಾದಿಸಂಗೀತ ತನ್ನ ಪ್ರಭಾವದ ಗಾಳಿಯನ್ನು ಎಷ್ಟೇ ಜೋರಾಗಿ ಬೀಸಿದರೂ ಮೊದಲಿನ ಕರ್ನಾಟಕಿಸಂಗೀತದ ಬೇರು ಅಲ್ಲಾಡಲಿಲ್ಲ. ಕರ್ನಾಟಕಿ ರಾಗತಾಳಗಳು ಹಾಗೇ ಉಳಿದುಕೊಂಡು ಬಂದವು. ಆದರೆ ಅವುಗಳ ಅಭಿವ್ಯಕ್ತಿ ಮಾತ್ರ ಉತ್ತರಾದಿ ಶೈಲಿಯಲ್ಲಿರುತ್ತದೆ. ಇಂದಿನ ಪಾರಿಜಾತ ಕಲಾವಿದರು ತಾವು ಕರ್ನಾಟಕಿಯ ಮೋಹನ ರಾಗದಲ್ಲಿ ಹಾಡುತ್ತೇವೆಂದು ಹೇಳಿದರೂ ಅದು ಸ್ವರೂಪದಲ್ಲಿ ಉತ್ತರಾದಿಯ ಭೂಪ ಆಗಿರುತ್ತದೆ. ಕರ್ನಾಟಕಿಯ ಆದಿ ತಾಳವನ್ನು ಹೆಸರಿಸುತ್ತಿದ್ದರೂ ಅದು ಉತ್ತರಾದಿಯ ತ್ರಿತಾಲ ಆಗಿರುತ್ತದೆ.

ಇಂದಿನ ಪಾರಿಜಾತದ ಸಂಗೀತ ವಿಚಿತ್ರ ಸ್ಥಿತಿಗೆ ಬಂದು ತಲುಪಿದೆ. ಮೊದಲಿನ ಕಲಾವಿದರಿಗೆ ತಕ್ಕಮಟ್ಟಿಗಾದರೂ ಸಂಗೀತದ ಜ್ಞಾನವಿತ್ತು. ತಾವು ಹಾಡುವ ಹಾಡಿನ ರಾಗ ತಾಳಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ವಿಲಂಬಿತ ಲಯದಲ್ಲಿ ಖ್ಯಾಲ ಗಾಯಕಿಯಂತೆ ರಾಗ ವಿಸ್ತರಿಸಿ ತೂಗಿ ಹಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಇಂದಿನವರಲ್ಲಿ ಇದನ್ನು ಕಾಣುವುದು ಅಪರೂಪ. ಕೇವಲ ಅಂಧಾನುಕರಣೆಯಿಂದ ಹಿಂದಿನ ಹಾಡುಗಳನ್ನು ಕಲಿತುಕೊಂಡು ಯಾಂತ್ರಿಕವಾಗಿ ಒಪ್ಪಿಸುವುದು ಸಾಮಾನ್ಯ.. ಪಾರಿಜಾತ ಒಂದು ವ್ಯವಸಾಯಿ ಕಲೆಯಾಗಿ ಬೆಳೆದುದರಿಂದ ಕಾಲಕಾಲಕ್ಕೆ ಬಾಹ್ಯ ಆಕರ್ಷಣೆಗಳನ್ನು ಸ್ವೀಕರಿಸುವುದು ಸಹಜವಾಯಿತು. ಒಂದು ಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದ ಮರಾಠಿ ನಾಟಕದ ಹಾಡುಗಳ ಧಾಟಿಗಳು ಪಾರಿಜಾತಕ್ಕೆ ಸೇರ್ಪಡೆಯಾದವು. ಈಗೀಗ ಸಿನೆಮಾ ಧಾಟಿಗಳೂ ರೂಢಿಗೆ ಬರುತ್ತಿವೆ.

ಪಾರಿಜಾತ ಸಂಗೀತವನ್ನು ಬೆಳೆಸಿದ ಕೀರ್ತಿ ಅದರ ಕಲಾವಿದರಿಗೆ ಸಲ್ಲುತ್ತದೆ. ಇನ್ನುಳಿದ ಬಯಲಾಟಗಳಲ್ಲಿ ಹಾಡುಗಳನ್ನು ಭಾಗವತ ಹಾಡುತ್ತಾನೆ. ಪಾರಿಜಾತದಲ್ಲಿ ಪಾತ್ರಧಾರಿಯೇ ತನ್ನ ಹಾಡು ಹಾಡುವ ರೂಢಿಯಿದೆ. ಬಿಳಿ ಒಂದರ ತಾರಸಪ್ತಕದ ಷಡ್ಜ್‌ವನ್ನು ಆಧಾರ ಸ್ವರವಾಗಿಟ್ಟುಕೊಂಡು ಉಚ್ಛಕಂಠದಲ್ಲಿ ಸೊಗಸಾಗಿ ಹಾಡುವ ಪಾರಿಜಾತ ಕಲಾವಿದರ ಶಕ್ತಿ-ಸಾಮರ್ಥ್ಯ-ಪ್ರತಿಭೆ ಅಗಾಧವಾದವುಗಳೆಂಬುದರಲ್ಲಿ ಸಂಶಯವಿಲ್ಲ.

ತಾಳ, ಡಪ್ಪು, ಹಾರ್ಮೋನಿಯಂ, ಮದ್ದಳೆ, ತಬಲಾ ಇವು ಉತ್ತರ ಕರ್ನಾಟಕದ ಬಯಲಾಟಗಳ ಮುಖ್ಯ ವಾದ್ಯಗಳು. ಕಂಚಿನ, ಕಬ್ಬಿಣದ ದುಂಡಾಗಿರುವ ತಾಳಗಳನ್ನು ಭಾಗವತ ಮತ್ತು ಹಿಮ್ಮೇಳದವರು ಬಾರಿಸುತ್ತಾರೆ. ದೊಡ್ಡಾಟ ಮತ್ತು ಡಪ್ಪಿನಾಟಗಳಲ್ಲಿ ತಾಳಗಳನ್ನು ಲಯ ನಿರ್ದೇಶನಕ್ಕಾಗಿ ಮಾತ್ರ ಬಾರಿಸುತ್ತಾರೆ. ಪಾರಿಜಾತದಲ್ಲಿ ತಾಳಬಾರಿಸುವವರ ಕೈಚಳಕ ಅದ್ಭುತವಾದುದು. ವಿಲಂಬಿತದಲ್ಲಿ ಲಯದ ಪ್ರವಾಹದೊಂದಿಗೇ ಸೂಕ್ಷ್ಮಾತಿಸೂಕ್ಷ್ಮ ಒಳ ಅಕ್ಕರಗಳನ್ನು ತಬಲಾ ಅಥವಾ ಕರಡಿಯ ಡೋಲ್‌ಗಳ ಮಾದರಿಯಲ್ಲಿ ನುಡಿಸುವ ಕಲೆ ವಿಶಿಷ್ಟವಾದುದು. ಚಲ್ತಿಯಲ್ಲಿ ಎದುರುಬದುರಾಗಿ ದ್ರುತ್‌ಗತಿಯಲ್ಲಿ ತಾಳ ನುಡಿಸುವುದು ತುಂಬಾ ಆಕರ್ಷಕವಾಗಿರುತ್ತದೆ.

ಮೊದಲು ಆಧಾರಸ್ವರಕ್ಕಾಗಿ ಪುಂಗಿ ಮುಂತಾದವುಗಳನ್ನು ಬಾರಿಸುತ್ತಿದ್ದರು. ಹಾರ್ಮೋನಿಯಂ ಪರಿಚಯವಾದ ಮೇಲೆ ಅದನ್ನು ಬಳಸಲಾರಂಭಿಸಿದರು. ಮೊದಮೊದಲು ಕೇವಲ ಆಧಾರ ಸ್ವರಕ್ಕಾಗಿ ಉಪಯೋಗವಾಗುತ್ತಿದ್ದ ಹಾರ್ಮೋನಿಯಂ ಬರುಬರುತ್ತ ಪಕ್ಕವಾದ್ಯವಾಯಿತು. ಪಾರಿಜಾತದಲ್ಲಿ ಹಾರ್ಮೋನಿಯಂ ವಾದಕನಿಗೆ ತನ್ನ ಕಲೆಯನ್ನು ವ್ಯಕ್ತಪಡಿಸಲು ಬಹಳಷ್ಟು ಅವಕಾಶಗಳಿವೆ. ದೊಡ್ಡಾಟಗಳಿಗೆ ಮದ್ದಳೆ ಬಾರಿಸುತ್ತಾರೆ. ಮೊದಲು ತಾಳಗಳ ಅಕ್ಷರಗಳನ್ನು ಕರಾರುವಾಕ್ಕಾಗಿ ಬಾರಿಸುತ್ತಿದ್ದರು. ಇಂದಿನ ಮದ್ದಳೆಕಾರರು ಹಾಡನ್ನು ಅನುಸರಿಸಿಕೊಂಡು ಹೋಗುತ್ತಾರೆ ಅಷ್ಟೇ. ಕೆಲವೆಡೆ ಮದ್ದಳೆಯ ಬದಲಾಗಿ ತಬಲಾ ರೂಢಿಗೆ ಬಂದಿದೆ. ತಬಲಾ ವಾದ್ಯಕ್ಕೆ ಪ್ರಾಶಸ್ತ್ಯವಿರುವುದು ಪಾರಿಜಾತದಲ್ಲಿ. ಇಲ್ಲಿಯ ತಬಲಾವಾದನದ ವೈಶಿಷ್ಟ್ಯವೇ ಬೇರೆ. ಈ ಕಲಾವಿದರು ತಮ್ಮವೇ ಆದ ಬೋಲ್‌ಗಳನ್ನು ರೂಢಿಸಿಕೊಂಡು ಅದನ್ನೇ ಒಂದು ಪರಂಪರೆಯಾಗಿ ಬೆಳೆಸಿಕೊಂಡು ಬಂದಿದ್ದಾರೆ. ದೊಡ್ಡಾಟಕ್ಕೆ ಪೀಟಿಲು ಉಪಯೋಗಿಸುತ್ತಿದ್ದ ಕಾಲವೊಂದಿತ್ತು. ಕೆಲವು ಕಡೆ ಹಿಮ್ಮೇಳಕ್ಕೆ ಶಹನಾಯಿ (ಮುಖವೀಣೆ) ಉಪಯೋಗಿಸುತ್ತಾರೆ.