ದಾವಣಗೆರೆಯಲ್ಲಿ ಹದಿನಾಲ್ಕನೆಯ ಅಖಿಲ ಕರ್ನಾಟಕದ ಜನಪದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಔಚಿತ್ಯಪೂರ್ಣವಾಗಿದೆ. ನಿಜವಾಗಿಯೂ ದಾವಣಗೆರೆ ಕರ್ನಾಟಕದ ಕೇಂದ್ರಬಿಂದು; ಜನಪದದ ಹೃದಯವಾಗಿದೆ. ಸುತ್ತ ಮುತ್ತಲೂ ಹಳ್ಳಿಗಳಿಂದ ಕೂಡಿದ ನಗರ ದಾವಣಗೆರೆ. ಈ ನಗರದಲ್ಲಿರುವ ಜನರೂ ಸುತ್ತಮುತ್ತಲ ಹಳ್ಳಿಗಳಿಂದಲೇ ವಲಸೆ ಬಂದು ಇಲ್ಲಿ ನೆಲೆಸಿದ್ದಾರೆ.

ನನಗೆ ‘ಯಕ್ಷಗಾನ ಸಂಗೀತ’ ಎಂಬ ವಿಷಯವನ್ನು ಕೊಟ್ಟಿದ್ದಾರೆ. ಕುಣಿತ, ವಾದ್ಯ, ಸಂಗೀತ ಇವು ಮೂರೂ ವಾಸ್ತವವಾಗಿ ಸಂಗೀತವನ್ನೇ ಹೇಳುತ್ತವೆ. ‘ನೃತ್ಯಂ ಗೀತಂ ತಥಾ ವಾದ್ಯಂ ತ್ಯಯಂ ಸಂಗೀತಮುಚ್ಯತೇ’ – ಕುಣಿತ, ಹಾಡುವಿಕೆ, ಬಾರಿಸುವಿಕೆ ಇವು ಮೂರೂ ಸೇರಿ ಸಂಗೀತ ಎಂದು ಶಾಸ್ತ್ರ ಹೇಳುತ್ತದೆ. ಆದುದರಿಂದ ಈ ಸಮ್ಮೇಳನದಲ್ಲಿ ಹಮ್ಮಿಕೊಂಡ ‘ಜನಪದ ಕುಣಿತ, ವಾದ್ಯ, ಸಂಗೀತ’ ಗೋಷ್ಠಿಗಳೆಲ್ಲವೂ ನನ್ನ ಗೋಷ್ಠಿಯಲ್ಲಿ ಒಂದು ಅರ್ಥದಲ್ಲಿ ಅಂತರ್ಗತವಾಗುತ್ತವೆ. ಕುಣಿತ, ವಾದ್ಯಗಳ ಬಗೆಗೂ ನಾನು ಮಾತನಾಡಬಹುದು. ಆದರೆ ಅವುಗಳಿಗೆ ಪ್ರತ್ಯೇಕ ವ್ಯಕ್ತಿಗಳು ಇರುವುದರಿಂದ ನಾನು ಯಕ್ಷಗಾನ ಭಾಗವತಿಕೆ ಅಥವಾ ಹಾಡುವಿಕೆಯನ್ನು ಕುರಿತು ಮಾತ್ರ ಇಲ್ಲಿ ಪ್ರಸ್ತುತಪಡಿಸುತ್ತೇನೆ. ‘ಯಕ್ಷಗಾನ ಸಂಗೀತ’ ಎಂಬ ನನಗೆ ಕೊಟ್ಟ ವಿಷಯದ ಶಿರೋನಾಮೆಯಲ್ಲಿ ‘ಯಕ್ಷಗಾನ’ ಎಂಬುದರಲ್ಲಿ ‘ಗಾನ’ ಎಂಬ ಹಾಡುವಿಕೆ ಉಂಟು ! ಮತ್ತೆ ಸಂಗೀತವೆಂಬುದೇಕೆ ಎಂದು ಯಾರಾದರೂ ಕೇಳಿಯಾರು. ಗಂಧರ್ವರು ದೇವಲೋಕದ ಸಂಗೀತಗಾರರಾಗಿದ್ದರಂತೆ. ಯಕ್ಷರು ದೇವಲೋಕದ ನರ್ತಕರು ಎಂಬುದು ಪ್ರಸಿದ್ಧವಾದುದು. ಯಕ್ಷಗಾನ ಎಂಬ ಮಾತಿಗೆ ಏನು ಅರ್ಥ ಎಂಬುದಕ್ಕೆ ಇಷ್ಟರವರೆಗೆ ವಿದ್ವಾಂಸರು ಇದ್ದ ತಲೆಯನ್ನೆಲ್ಲ ಖರ್ಚುಮಾಡಿ, ‘ಪೂಜಾಗಾನ’ ‘ನೃತ್ಯಗಾನ’ ‘ಪೂಜಾಪ್ರಬಂಧ’ – ಎಂಬೆಲ್ಲ ಬೇರೆ ಬೇರೆ ಅರ್ಥಗಳನ್ನು ಮಾಡಿದವರಿದ್ದರೂ ಯಾವುದೂ ಸಮರ್ಪಕವಾಗಿಲ್ಲ. ‘ಯಕ್ಷಗಾನ’ ಎಂಬುದಕ್ಕೆ ‘ಯಕ್ಷರಗಾನ’ ಎಂಬ ಸಹಜ, ಸರಳ, ಸುಂದರ ಅರ್ಥವೇ ಔಚಿತ್ಯಪೂರ್ಣವಾದುದು. ‘ಗಂಧರ್ವಗಾನ’ ಎಂಬುದು ಮಾರ್ಗ ಸಂಗೀತವಾದರೆ ‘ಯಕ್ಷಗಾನ’ ಎಂಬುದು ದೇಸಿಸಂಗೀತ. ಜನಪದ ಸಂಗೀತ ಎಂಬುದು ನೇರವಾದ ಅರ್ಥ. ಯಕ್ಷಗಾನವೆಂಬುದು ಮಾರ್ಗ ಸಂಗೀತವಾಗಿದ್ದರೆ ನನ್ನನ್ನಿಲ್ಲಿ ಕರೆಯುತ್ತಿರಲಿಲ್ಲ. ಡಾ. ಬಾಲಮುರಳಿ ಕೃಷ್ಣರನ್ನೋ, ಡಾ. ದೊರೆಸ್ವಾಮಿ ಅಯ್ಯಂಗಾರರನ್ನೋ, ಡಾ. ಎಂ.ಎಸ್. ಸುಬ್ಬಲಕ್ಷ್ಮಿಯವರನ್ನೋ ಕರೆಯುತ್ತಿದ್ದರು. ಅದು ಜನಪದಕ್ಕೆ ಸಂಬಂಧಿಸಿದುದರಿಂದಲೇ ಯಕ್ಷಗಾನದಲ್ಲೂ ಜನಪದದಲ್ಲೂ ಕೆಲಸ ಮಾಡಿದ ನನ್ನನ್ನು ಕರೆದಿರುವುದು ಎಂದು ನಾನು ತಿಳಿದುಕೊಂಡಿದ್ದೇನೆ. ಜನಸಾಮಾನ್ಯರೇ ಸಂಸ್ಕೃತದ ‘ಯಕ್ಷಗಾನ’ ಎಂಬುದಕ್ಕೆ ‘ಬಯಲಾಟ’ ಎಂಬ ಕನ್ನಡದ ಸಂವಾದಿ ಶಬ್ದವನ್ನು ಸೃಷ್ಟಿಮಾಡಿ ಅದರ ಸರಿಯಾದ ಅರ್ಥವನ್ನು ಹೇಳುತ್ತಿರಲು ವಿದ್ವಾಂಸರು ಯಾಕೆ ಅನಾವಶ್ಯಕವಾಗಿ ಸಾಕಷ್ಟು ಬಿಳಿಕಾಗದವನ್ನು ಕರಿದುಗೊಳಿಸಿದರೋ ಎಂಬುದು ಅರ್ಥವಾಗುವುದಿಲ್ಲ !
ಶಾಸನದಲ್ಲಿ ಪ್ರಸ್ತಾವಿತವಾದ ‘ತಾಳಮದ್ದಲೆ ಸೇವೆ’ ಎಂಬುದನ್ನು ವಿದ್ವಾಂಸರು ಉದ್ದಕ್ಕೂ ಯಕ್ಷಗಾನದ ತಾಳಮದ್ದಲೆ ಸೇವೆ ಎಂದು ಅರ್ಥ ಮಾಡಿದ್ದಾರೆ. ದೇವಾಲಯಗಳಲ್ಲಿ ಉತ್ಸವಾದಿ ಸಂದರ್ಭಗಳಲ್ಲಿ ನಡೆಸುವ ಸೇವೆಗಳಲ್ಲಿ ಅಷ್ಟಾವಧಾನವೂ ಒಂದು. ವೇದ, ಪುರಾಣ, ಸಂಗೀತ- ಮೊದಲಾದ ಸೇವೆಗಳ ಜತೆಯಲ್ಲಿ ತಾಳಮದ್ದಲೆಯ ಸೇವೆಯೂ ಸೇರಿರಬಹುದು. ಇದು ಯಕ್ಷಗಾನಕ್ಕೆ ಸಂಬಂಧಪಟ್ಟ ‘ತಾಳಮದ್ದಲೆ’ ಎಂದು ಆ ಶಾಸನದಲ್ಲಿ ಹೇಳಿಲ್ಲ. ಇದು ತಾಳ ಮದ್ದಲೆಗಳನ್ನು ನುಡಿಸಿ ಮಾಡುವ ವಾದ್ಯಸೇವೆಯೇ ಹೊರತು ಯಕ್ಷಗಾನರ ತಾಳಮದ್ದಲೆಯಲ್ಲ. ವಿದ್ವಾಂಸರು ಉದ್ದಕ್ಕೂ ಇಲ್ಲಿ ಯಕ್ಷಗಾನದ ತಾಳಮದ್ದಳೆ ಎಂದು ಭ್ರಮಿಸಿ ಯಕ್ಷಗಾನದ ಕಾಲವನ್ನು ಹೇಳುವಾಗ ಈ ಶಾಸನವನ್ನು ಉಲ್ಲೇಖಿಸಿರುವುದು ಕಂಡುಬರುತ್ತದೆ.

ಹಾಡುಗಾರಿಕೆ ಅಥವಾ ಭಾಗವತಿಕೆ, ನೃತ್ಯ ಅಥವಾ ಕುಣಿತ, ವೇಷಗಾರಿಕೆ, ಸಾಹಿತ್ಯ, ಅಭಿನಯ- ಇವಿಷ್ಟೂ ಯಕ್ಷಗಾನದ ಪಂಚ ಅಂಗಗಳು. ಇವುಗಳನ್ನು ಯಕ್ಷಗಾನದ ‘ಪಂಚಾಂಗ’ ಎಂದು ನಾನು ಬೇರೊಂದೆಡೆಯಲ್ಲಿ ಕರೆದಿದ್ದೇನೆ. ‘ಪಂಚಾಂಗ’ ಎಂದರೆ ತಳಹದಿ (Foundation) ಎಂಬ ಅರ್ಥವೂ ಉಂಟು. ಈ ‘ಪಂಚಾಂಗ’ಕ್ಕೆ ಯಾವೊಂದು ಪಂಚ ಅಂಗಗಳಲ್ಲಿ ಧಕ್ಕೆ ಬಂದರೂ ಯಕ್ಷಗಾನದ ತಳಹದಿ ಕುಸಿದು ಕಲೆಯ ಸೌಧ ಕಳಚಿ ಬೀಳುವುದು. ಈ ಐದು ಅಂಗಗಳೂ ಯಕ್ಷಗಾನದಲ್ಲಿ ಸಮತೋಲನದಲ್ಲಿಲ್ಲದಿದ್ದರೆ ಯಾವುದಾದರೂ ಕೆಲವೇ ಅಂಗಗಳು ಬಲಿತು, ಬೆಳೆದು ರಾಮಾಯಣದ ಕಬಂಧನೋ, ಭಾರತದ ಬಕಾಸುರನೋ ಆದೀತು ! ಪಂಚ ಅಂಗಗಳೂ ಸಮತೋಲನದಲ್ಲಿದ್ದರೆ ಮಾತ್ರ ಯಕ್ಷಗಾನದ ಪಂಚಾಂಗ ಭದ್ರವಾಗಿ ಎಲ್ಲ ಅಂಗಗಳೂ ಹೃಷ್ಟಪುಷ್ಟವಾಗಿ ಬೆಳೆದ ವ್ಯಕ್ತಿಯ ಹಾಗೆ ಸುಂದರವಾಗಿ ಕಲೆಯ ಹೂವು ಅಲ್ಲಿ ಅರಳೀತು. ಇಲ್ಲದಿದ್ದರೆ ಬಯಲಾಟ ಹೋಗಿ ಬರಿಯ ಡೊಂಬರಾಟವಾದೀತು.

ಯಕ್ಷಗಾನ ಪ್ರಸಂಗಗಳಲ್ಲಿ ರಾಗತಾಳ ನಿರ್ದೇಶನ ಇತ್ತೀಚಿನದೇ ಹೊರತು ಪ್ರಾಚೀನವಲ್ಲ. ಯಕ್ಷಗಾನ ಭಾಗವಂತಿಕೆಯಲ್ಲಿ ಅಥವಾ ಹಾಡುಗಾರಿಕೆಯಲ್ಲಿ ಧಾಟಿ, ಮಟ್ಟುಗಳು ಪ್ರಧಾನವೇ ಹೊರತು. ಪರಂಪರೆಯಿಂದ ಬಂದ ಹಾಡುವ ಕ್ರಮವೇ ಹೊರತು ಪ್ರಸಂಗ ಪುಸ್ತಕಗಳಲ್ಲಿ ಹಾಕಿದ ರಾಗತಾಳ ನಿರ್ದೇಶನ ದಾಸಸಾಹಿತ್ಯದ ಪ್ರಭಾವದಿಂದ ಬಂದುದಾಗಿದೆ. ಇದರಿಂದ ಒಂದು ಅಮೌಲ್ಯ ಸತ್ಯ ತಿಳಿಯುತ್ತದೆ. ಯಕ್ಷಗಾನ ಪ್ರಸಂಗಗಳು ದಾಸಸಾಹಿತ್ಯ ಸೃಷ್ಟಿಗಿಂತ ಈಚಿನವು ಎಂಬುದು. ಆದುದರಿಂದ ಯಕ್ಷಗಾನ ಪ್ರಸಂಗಗಳ ಕಾಲವನ್ನು ಆದಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ವಿದ್ವಾಂಸರ ಪ್ರಯತ್ನ ವ್ಯರ್ಥ. ಅಲ್ಲದೆ ಯಕ್ಷಗಾನ ಪ್ರಸಂಗಗಳೆಲ್ಲವೂ ನಡುಗನ್ನಡದಲ್ಲಿವೆ ಎಂಬುದು ಈ ವಿಚಾರಕ್ಕೆ ಪೋಷಕ. ದಾಸ ಸಾಹಿತ್ಯದ ಧಾಟಿಗಳನ್ನು ಅನುಸರಿಸಿ, ಅನುಕರಿಸಿ ಬಯಲಾಟದವರು ತಮ್ಮ ಪ್ರಸಂಗಗಳ ‘ಪದ’ಗಳನ್ನು ತಮ್ಮ ಸ್ವಂತ ಧಾಟಿಗಳಲ್ಲಿ. ಮಟ್ಟುಗಳಲ್ಲಿ ಸೃಷ್ಟಿಸಿಕೊಂಡರು. ಪರಂಪರೆಯ ಹಳೆಯ ಭಾಗವತರನ್ನು ಕೇಳಿದರೆ ಅವರಿಗೆ ಇಂಥ ರಾಗತಾಳಗಳಲ್ಲಿ ಒಂದು ಯಕ್ಷಗಾನದ ‘ಪದ’ವನ್ನು ಹಾಡಿ ಎಂದರೆ ಅವರಿಗೆ ಗೊತ್ತಾಗುವುದಿಲ್ಲ. ನವರಸಗಳಲ್ಲಿ ಇಂಥ ರಸದ ‘ಪದ’ವನ್ನು ಹಾಡಿ ಎಂದರೆ ಕೂಡಲೇ ಹಾಡುತ್ತಾರೆ ! ಇಂದು ಯಕ್ಷಗಾನದ ‘ಪದ’ಗಳಲ್ಲಿ ರಾಗತಾಳಗಳ ನಿರ್ದೇಶನ ಸರ್ವಸಾಮಾನ್ಯ. ಇದು ಮೂಲತಃ ಇರಲಿಲ್ಲ. ರಸಪ್ರತಿಪಾದನೆಯೇ ಯಕ್ಷಗಾನ ‘ಪದ’ಗಳ, ಧಾಟಿಗಳ ಉದ್ದೇಶ. ಶೃಂಗಾರಕ್ಕೆ ಇಂಥ ಮಟ್ಟು, ಹಾಸ್ಯಕ್ಕೆ ಇಂಥ ಧಾಟಿ, ಕರುಣಕ್ಕೆ ಈ ಮಟ್ಟು ಎಂಬುದು ನಿರ್ದಿಷ್ಟವಾಗಿದೆ. ವೀರ, ರೌದ್ರರಸಗಳಿಗೂ ಹೀಗೆಯೇ ಇಂಥಿಂಥ ಮಟ್ಟುಗಳು ಎಂಬುದು ನಿರ್ದಿಷ್ಟವಾಗಿದೆ. ಈ ಮಟ್ಟುಗಳ ಗುಟ್ಟು ಹಿರಿಯ ಭಾಗವತರಿಗೆ ಮಾತ್ರ ಇಂದು ಗೊತ್ತು. ಹಳೆಯ ಯಕ್ಷಗಾನ ಪ್ರಸಂಗಗಳಲ್ಲಿ ಅವುಗಳಿಗಿಂತ ಪ್ರಾಚೀನ ಯಕ್ಷಗಾನ ಪ್ರಸಂಗಗಳ ‘ಪದ’ಗಳನ್ನು ಉಲ್ಲೇಖಿಸಿ ಎಂಬಂತೆ ಎಂದು ಯಕ್ಷಗಾನ ‘ಪದ’ಗಳ ಧಾಟಿಗಳನ್ನು ನಿರ್ದೇಶಿಸಿದ್ದುಂಟು. ಹಾಗೆ ನಿರ್ದೇಶಿಸುವಾಗ ಪಾರ್ತಿಸುಬ್ಬನ ಪದಗಳನ್ನೋ, ಒಡ್ಡೋಲಗದ ಪದಗಳನ್ನೋ, ಜೋಜೋ ಪದಗಳನ್ನೋ, ಕೋಲಾಟದ ಪದಗಳನ್ನೋ ಹೇಳಿರುವುದುಂಟು. ಕೆಲವು ನಿದರ್ಶನಗಳನ್ನು ಇಲ್ಲಿ ಕೊಡಬಹುದು.

ಇದು ೧೯೦೮ ರಲ್ಲಿ ಅಚ್ಚಾದ ‘ರಾವಣೇಶ್ವರ ಕಾಳಗ’ ಎಂಬ ಕೃತಿಯದು :

೧. ಹಾ ಕುಮಾರಕ ಎಂಬಂತೆ

೨. ಮಂತ್ರಿಗಳಿರ ಕೇಳಿರೀಗ ಎಂಬಂತೆ

೩. ಎಲ ಎಲಾ ಛೀ ರಕ್ಕಸಕುನ್ನಿ ಎಂಬಂತೆ

೪. ವಾರಿಜ ಗಂಧಿನಿ ಎಂಬಂತೆ

೫. ಇಂದ್ರಜಾತ ಕೇಳೋ ಎಂಬಂತೆ

೬. ಹೀಗೆ ಪೇಳುವರೆ ತಂಗೆ ಎಂಬಂತೆ

೭. ಸೈರಿಸಾ ರಾಧೆ ಯಾಕೆ ಎಂಬಂತೆ

೮. ಮರೆಯಲಿನ್ನೆಂತವನಾ ಎಂಬಂತೆ

೯. ತಲೆಯ ಮೆಟ್ಟಿ ತಾಂಡವವಾಡಿದ ಎಂಬಂತೆ.

ಇದು ೧೯೩೧ರಲ್ಲಿ ಅಚ್ಚಾದ ‘ರುಕ್ಮವತೀ ಕಲ್ಯಾಣ’ ಎಂಬ ಕೃತಿಯದು.

೧. ಬಂದನು ದೇವರದೇವ ಎಂಬಂತೆ (ಶ್ರೀಕೃಷ್ಣನ ಒಡ್ಡೋಲಗದ ಪದ)

೨. ಲಾಲಿಸಿ ಕೇಳಿಂದ್ರ ಸಂಜಾತ ಎಂಬಂತೆ

೩. ಲೇಸನಡಿದಿರವ್ವಾ ಎಂಬಂತೆ

೪. ಕೇಳೋ ದಾನವ ಕುಲ ಎಂಬಂತೆ

೫. ಸತಿ ಶಿರೋಮಣಿ ಪ್ರಭಾವತಿ ಎಂಬಂತೆ

೬. ಮಂಡೆ ಮಂಡೆಯ ಹೊಡಕೊಳ್ಳುತ್ತ ಎಂಬಂತೆ

೭. ಕಂತುಪಿತನ ಕರೆಲೋ ಎಂಬಂತೆ

೮. ಏನಿದೂ ಛಲ ಮುದ್ದುಬಾಲೆ ಸುಶೀಲೆ ಎಂಬಂತೆ

೯. ಕೇಳೊ ತಮ್ಮಾ ಬಾಲರೀರ್ವರೂ ಎಂಬಂತೆ

೧೦. ಪುರುಷರತ್ನವೇ ಲಾಲಿಸು ಎಂಬಂತೆ

೧೧. ಭ್ರಷ್ಟಮೂಳೀ ಎಂದು ಹನುಮ ಎಂಬಂತೆ

೧೨. ಇಕ್ಷುಚಾಪ ಎಂಬಂತೆ

೧೩. ಹರಿಯೇ ಲಾಲಿಸು ನಿನ್ನಾ ಎಂಬಂತೆ

೧೪. ಚಿತ್ತವಿಸೆಲೆ ತಾಯೇ ಎಂಬಂತೆ

೧೫. ಏನಿದೂ ನಿಮ್ಮಲ್ಲಿ ಸಂವಾದ ಎಂಬಂತೆ

೧೬. ಸಾರಸಭವಾ ಎಂಬಂತೆ

೧೭. ಏಸುದಿನ ಬೇಕೆನ್ನ ಪ್ರಾಣಕಾಂತನ ಕಾಂಬುವುದಕ್ಕೆ ಎಂಬಂತೆ

೧೮. ಕಡೂ ಕಮಲಸಖ ಕಿರಣ ಎಂಬಂತೆ.

ಇದು ೧೯೩೧ ರಲ್ಲಿ ಅಚ್ಚಾದ ‘ಪುಂಡರೀಕ ಚರಿತ್ರೆ’ ಎಂಬ ಕೃತಿಯದು :

೧. ಕಂಡರತಿ ಚೆಲುವೆ ನೀನು ಎಂಬಂತೆ

೨. ಕಿಚ್ಚಿಗಿರುವೆ ಮುತ್ತಲುಂಟೆ ಎಂಬಂತೆ

೩. ತಾಳಿ ಪರ್ವತ ಕಲ್ಮರಂಗಳನೆಲ್ಲ ಎಂಬಂತೆ

೪. ನಡೆಯೆಲೋ ಮುರಾರಿ ಎಂಬಂತೆ

೫. ಅತಿ ಕುಲವತಿ ನಾನು ಎಂಬಂತೆ.

ಇದು ೧೯೩೧ ರಲ್ಲಿ ಅಚ್ಚಾದ ‘ಭೀಷ್ಮೋತ್ಪತ್ತಿ’ ಎಂಬ ಕೃತಿಯದು :

೧. ಕೋಮಲಾಂಗಿ ಕೇಳೇ ಮದಗಜ ಭಾಮಿನಿ ಪಾಂಚಾಲೆ ಎಂಬಂತೆ

೨. ಯಾಕೋ ನಿನಗೀ ಭ್ರಷ್ಟ ಮಾತೊ ಎಂಬಂತೆ

೩. ಯಾತಕಿಷ್ಟುಪಚಾರವೈ ಎಂಬಂತೆ

೪. ಕೇಳು ಧರ್ಮಾನುಜಾತಾ ಎಂಬಂತೆ

೫. ವರಪತಿವ್ರತೆ ಕೇಳಮ್ಮಾ ಎಂಬಂತೆ

೬. ಬೆದರಲ್ಯಾತಕೆ ನಾರೀ ಎಂಬಂತೆ

೭. ತೆಗಿ ತೆಗಿ ನಿನ್ನ ರಮಣರ್ ಗಿಮಣರ್ ಎಂಬಂತೆ

೮. ಅಹುದೇ ಎನ್ನಯ ರಮಣ ಎಂಬಂತೆ

೯. ಧೀರನಹುದಹುದೋ ಎಂಬಂತೆ

ಇದು ೧೯೩೧ ರಲ್ಲಿ ಅಚ್ಚಾದ ‘ಕೌಶಿಕ ಚರಿತ್ರೆ’ ಎಂಬ ಕೃತಿಯದು :

೧.       ಮುಂದೆ ರಾಮ ನಡುವೆ ಸೀತೆ ಎಂಬಂತೆ
ಅಲ್ಲದೆ ಮೇಲೆ ಉಲ್ಲೇಖಿಸಿದ ಕೆಲವು ಉದಾಹರಣೆಗಳೂ ಇವೆ.

ಇದು ೧೯೩೧ ರಲ್ಲಿ ಅಚ್ಚಾದ ‘ಕುಮುದ್ವತೀ ಕಲ್ಯಾಣ’ ಎಂಬ ಕೃತಿಯದು :

೧.       ಧರ್ಮಕ್ಕೆ ಕೈಬಾರದೀ ಕಾಲ ಎಂಬಂತೆ

೨.       ಆರೆಲೆ ಹುಡುಗಿ ನೀನು ಎಂಬಂತೆ
ತೋರುವೆ ಯಮನಪುರದ ಭೂರೀ ನರಕದೊಳಗೆ
ಸಾರೀ ಮುಳುಗಿಹ ಜನರ | ನೋಡಿ ನೋಡಿ ಬನ್ನಿ |
ಸಾರೀ ಮುಳುಗಿಹ ಜನರ ||
೩.       ವಹವ್ವಾರೆ ನೋಡಿರೊ ಈ ಕಡೆಯಾ ಎಂಬಂತೆ

೪.       ಶಿವ ಶಿವ ಸಮರದೊಳು ಎಂಬಂತೆ
ಅಲ್ಲದೆ, ಮೇಲೆ ಉಲ್ಲೇಖಿಸಿದ ಕೆಲವು ಉದಾಹರಣೆಗಳೂ ಇವೆ.

ಇದು ೧೯೩೧ ರಲ್ಲಿ ಅಚ್ಚಾದ ‘ದೇವಯಾನೆ ಕಲ್ಯಾಣ’ ಎಂಬ ಕೃತಿಯದು :

೧.       ರಂಗನ್ಯಾತಕ ಬಾರನೆ ಎಂಬಂತೆ
ಅಲ್ಲದೆ, ಮೇಲೆ ಉಲ್ಲೇಖಿಸಿದ ಕೆಲವು ಉದಾಹರಣೆಗಳೂ ಇವೆ.

ಇದು ೧೯೩೧ ರಲ್ಲಿ ಅಚ್ಚಾದ ‘ವಾಮನ ಚರಿತ್ರೆ’ ಎಂಬ ಕೃತಿಯದು :

೧.       ಪಾಲಿಸೆನ್ನಮ್ಮ ಮುದ್ದು ಶಾರದೆ ಎನ್ನ
ನಾಲಿಗೆಯೊಳು ನಿಲ್ಲಬಾರದೆ ಎಂಬಂತೆ
ಇದು ಪುರಂದರದಾಸರ ಕೀರ್ತನೆ ಎಂಬುದು ಸ್ಪಷ್ಟ.
೨.       ಮರುಳಾದೆಯೇನೊ ಬಾಲ ಎಂಬಂತೆ

೩.       ಶ್ರೀರಮಣ ಸರಸೀರುಹಾಕ್ಷಿಯ ಎಂಬಂತೆ

೪.       ಯಾದವೋತ್ತಮ ನೀನು ಲಾಲಿಸಿ ಕೇಳು ಎಂಬಂತೆ

೫.       ದೇವ ದೇವರ ದೇವ ಎಂಬಂತೆ

೬.       ಕೈಯ ತೋರೊ ಕರುಣಿಗಳರಸನೆ ಎಂಬಂತೆ.

ಅಲ್ಲದೆ, ಮೇಲೆ ಉಲ್ಲೇಖಿಸಿದ ಕೆಲವು ಉದಾಹರಣೆಗಳೂ ಇವೆ.

ಇದು ೧೯೩೧ ರಲ್ಲಿ ಅಚ್ಚಾದ ‘ಶಲ್ಯಪರ್ವ’ ಎಂಬ ಕೃತಿಯದು :

೧.       ಹೆಟ್ಟೊ ಭೀಮನ ಕುಟ್ಟೊ ಪಾರ್ಥನ ಎಂಬಂತೆ

೨.       ಅರರೆ ಬಲು ಮೋಸವಾಯಿತು ಎಂಬಂತೆ.

ಅಲ್ಲದೆ, ಮೇಲೆ ಉಲ್ಲೇಖಿಸಿದ ಕೆಲವು ಉದಾಹರಣೆಗಳೂ ಇವೆ.

ಇದು ೧೯೩೫ ರಲ್ಲಿ ಅಚ್ಚಾದ ‘ವೀರಮಣಿ ಕಾಳಗ’ ಎಂಬ ಕೃತಿಯದು. ಇದರಲ್ಲಿಯೂ ಮೇಲೆ ಹೇಳಿದ ಕೆಲವು ಉದಾಹರಣೆಗಳಿವೆ. ಅಲ್ಲದೆ ಲಾವಣಿ. ದುಡುಕು ಎಂಬ ಧಾಟಿಗಳೂ ಇವೆ. ಇವು ಮಾರ್ಗಸಂಗೀತ ಅಥವಾ ಶಾಸ್ತ್ರೀಯ ಸಂಗೀತದ ಮುಟ್ಟುಗಳಲ್ಲ. ಶಾಸ್ತ್ರೀಯ ಸಂಗೀತ ವಿದ್ವಾಂಸರು ಹೇಳಿದ ಒಂದು ಮುಖ್ಯ ವಿಚಾರವನ್ನಿಲ್ಲಿ ಮರೆಯಬಾರದು : ಯಕ್ಷಗಾನ ‘ಪದ’ಗಳನ್ನು ಶುದ್ಧ ಶಾಸ್ತ್ರೀಯ ಸಂಗೀತದ ರಾಗ ತಾಳಗಳಲ್ಲಿ ಹಾಡಲು ಬರುವುದಿಲ್ಲ ಎಂಬುದು ಆ ಮಾತು. ನಮ್ಮಲ್ಲಿ ಕರ್ನಾಟಕಸಂಗೀತ ವಿದ್ವಾಂಸರಾದ ಒಬ್ಬಿಬ್ಬರು ಭಾಗವತರು ಇದ್ದಿದ್ದರು. ಅವರು ಯಕ್ಷಗಾನ ‘ಪದ’ಗಳನ್ನು ಹಾಡಿದರೆ ಕರ್ನಾಟಕ ಸಂಗೀತದ ಪ್ರಭಾವ ಅಚ್ಚೊತ್ತಿರುವುದು ಕೇಳಿಸುತ್ತಿತ್ತು. ಅಲ್ಲದೆ ಒಂದೇ ರಾಗ ನಿರ್ದೇಶನ ಮಾಡಿದ ಪದವನ್ನು ತೆಂಕು, ಬಡಕು ತಿಟ್ಟುಗಳಲ್ಲಿ ಬೇರೆ ಬೇರೆ ಧಾಟಿಗಳಲ್ಲಿ ಹಾಡುತ್ತಾರೆ. ಆದುದರಿಂದ ಯಕ್ಷಗಾನ ಸಂಗೀತದ ಮಟ್ಟುಗಳೂ, ಧಾಟಿಗಳೂ ಸ್ವತಂತ್ರವಾದುವು. ಅವುಗಳ ಮೇಲೆ ದಾಸಸಾಹಿತ್ಯದ ಕೀರ್ತನೆಗಳ ಪ್ರಭಾವವೂ ಸಂಗೀತದ ಪ್ರಭಾವವೂ ಸ್ವಲ್ಪ ಮಟ್ಟಿಗೆ ಆಗಿರುವುದು ಸತ್ಯ. ಯಕ್ಷಗಾನ ಸಂಗೀತ ಅದರ ಪರಂಪರೆಯಲ್ಲೇ ಉಳಿಯಬೇಕು ವಿನಾ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗೆ ಖುಷಿಕಂಡ ರೀತಿಯಲ್ಲಿ ಒರಲುವುದಲ್ಲ.

ಯಕ್ಷಗಾನದ ಹಾಡುಗಾರಿಕೆ ಅಥವಾ ಭಾಗವತಿಕೆ ಹಿಂದೆ ಹೇಗಿತ್ತು ಎಂಬುದು ತುಂಬ ಕುತೂಹಲದಾಯಕ. ಭಾಗವತಿಕೆಯನ್ನು ಮಾಡುವ ಭಾಗವತ ಹೇಗಿರಬೇಕು ಎಂಬುದನ್ನು ಸಭಾ ಲಕ್ಷಣ ಹೀಗೆ ಹೇಳಿದೆ :

ಭಕಾರೋ ಭಗವದ್ಭಕ್ತಃ ಗಕಾರೋ ಗರ್ವವರ್ಜಿತಃ
ವಕಾರೋ ವಾಕ್ಯಪಾಠೀ ಚ ತಕಾರೋ ತತ್ತ್ವ ನಿರ್ಣಯಃ

ಭಾಗವತನೆಂಬವನು ಭಗವದ್ಭಕ್ತನೂ, ನಿರಹಂಕಾರಿಯೂ, ಅರ್ಥಜ್ಞನೂ, ತತ್ತ್ವ ನಿರ್ಣಯ ಮಾಡಬಲ್ಲವನೂ ಆಗಿರಬೇಕು ಎಂದು ಹೇಳಿದೆ. ಈಗಿನ ಹಾಗೆ ಹೇಗೆಂದರೆ ಹಾಗೆ ಇರುವುದಲ್ಲ. ಭಗವಂತನ ಲೀಲಾಪರವಾದ ದಶಾವತಾರದ ಕಥೆಗಳನ್ನು ಮಾತ್ರ ಹಿಂದೆ ಭಾಗವತ ಆಡಿಸುತ್ತಿದ್ದನು. ಅವನು ಪ್ರಧಾನ ವೇಷಧಾರಿಯಾದುದರಿಂದ ಎಲ್ಲ ವೇಷಧಾರಿಗಳ ಹಾಗೆ ಒಂದು ಷರಾಯಿಯನ್ನು ಧರಿಸುತ್ತಿದ್ದನಂತೆ. ಅದರ ಮೇಲೆ ಒಂದು ನಿಲುವಂಗಿಯನ್ನು ಹಾಕಿ ತಲೆಗೆ ರುಮಾಲನ್ನು ಸುತ್ತಿಕೊಳ್ಳುತ್ತಿದ್ದ. ರುಮಾಲೆ ದೇವರ ಮಡಿಪಟ್ಟೆಯಾಗಿರುತ್ತಿತ್ತು. ಕೊರಳಿಗೆ ಚಿನ್ನದ ಗುಂಡುಮಣಿಸರ; ಎರಡೂ ಕೈಗಳಿಗೆ ಚಿನ್ನದ ಕಂಕಣ. ಇವೆಲ್ಲ ಆ ಮೇಳವು ಯಾವ ದೇವಸ್ಥಾನದ ಆಶ್ರಯದಲ್ಲಿ ನಡೆಯುತ್ತಿತ್ತೋ ಆ ದೇವರ ಪ್ರಸಾದ ರೂಪವಾಗಿ ಭಾಗವತನಿಗೆ ಮಾತ್ರ ಧರಿಸುವ ಅಧಿಕಾರವಿತ್ತು. ಭಾಗವತನೇ ಯಕ್ಷಗಾನದ ಯಜಮಾನ, ಸೂತ್ರಧಾರಿ, ನಿರ್ದೇಶಕ. ಪ್ರಧಾನ ಪಾತ್ರಧಾರಿ ಎಂಬ ಅರ್ಥವಿತ್ತು. ಅವನು ಬಯಲಾಟವನ್ನು ನಡೆಯಿಸುವವನು.

ನನ್ನ ಬಾಲ್ಯದಲ್ಲಿದ್ದ ಕೀರ್ತಿಶೇಷ ಶೇಷಗಿರಿ ಕಾಮತರೆಂಬ ಭಾಗವತರು ಹಾಡಿದರೆ ಎರಡು ಮೈಲಿ ದೂರದವರೆಗೆ ನಿಶ್ಶಬ್ದ ರಾತ್ರಿಯಲ್ಲಿ ಅವರ ಪದ ಕೇಳಿಸುತ್ತಿತ್ತು ! ಆಗ ಈಗಿನಂತೆ ಧ್ವನಿವರ್ಧಕಗಳಿರಲಿಲ್ಲ. ರಾಕ್ಷಸ ವೇಷಧಾರಿಗಳು ಕೇಕೆ ಹಾಕಿ ರಂಗಸ್ಥಳ ಪ್ರವೇಶಿಸಿದರೆಂದರೆ ಅವರ ಕೂಗು ಎರಡು ಮೈಲಿ ದೂರದ ವರೆಗೆ ಕೇಳಿಸುತ್ತಿತ್ತು ! ನಮ್ಮ ಹಿರಿಯರ ದೇಹತ್ರಾಣ ಹಾಗಿತ್ತು. ಅವರೆಲ್ಲ ಹೆಸರು, ರಾಗಿ ಅರೆದು ಕುಡಿದವರು; ಚಾ, ಕಾಫೀ ಕಂಡವರಲ್ಲ. ಅವರು ಎಲ್ಲರೂ ಭೀಮರೇ. ಕಂಠತ್ರಾಣವೂ ಹಾಗೇ, ದೇಹದಾರ್ಢ್ಯವೂ ಹಾಗೇ. ಹಿಮ್ಮೇಳದವರೆಲ್ಲ ನಿಂತೇ ಇರಬೇಕಾಗಿತ್ತು. ಭಾಗವತರೂ, ಮೃದಂಗವಾದಕರೂ, ಶ್ರುತಿಹಿಡಿಯುವವನೂ ಎಲ್ಲರೂ ಹಾಡಿನ ಲಯಕ್ಕೆ ಸರಿಯಾಗಿ ಹೆಜ್ಜೆ ಹಾಕಬೇಕಾಗಿತ್ತು. ಬೆಳಗ್ಗೆ ನೋಡಿದರೆ ಭಾಗವತರು ಹೆಜ್ಜೆ ಇಟ್ಟ ಸ್ಥಳದಲ್ಲಿ ಒಂದು ಗೇಣು ಹೊಂಡವಾಗುತ್ತಿತ್ತಂತೆ. ಅಲ್ಲಿಗೆ ಶಾಸ್ತ್ರಕಾರರು ಹೇಳಿದಂತೆ ‘ನೃತ್ಯಂ ಗೀತಂ ತಥಾ ವಾದ್ಯಂ ತ್ರಯಂ ಸಂಗೀತ ಮುಚ್ಯತೇ’ ಎಂಬ ಮಾತು ಸತ್ಯವಾಯಿತು, ತಾನೇ? ಇಂದಿನ ರಾಕ್ ಎನ್ ರೋಲ್ ಸಂಗೀತದಲ್ಲಿ ಕುಣಿತ, ವಾದ್ಯ, ಗೀತ ಮೂರೂ ಇರುವುದನ್ನು ಕಾಣಬಹುದು ! ಅಂದು ರಂಗಸ್ಥಳವನ್ನು ಪೂಜಾ ಸ್ಥಳವೆಂಬಂತೆ ಭಕ್ತಿಯಿಂದ ತಳಿರುತೋರಣಗಳಿಂದಲೂ, ಹೂ ಹಂಪಲುಗಳಿಂದಲೂ ಸಿಂಗರಿಸುತ್ತಿದ್ದರು. ಪ್ರೇಕ್ಷಕರು ಅಲ್ಲಿ ಹಾದುಹೋಗುವ ಹಾಗಿರಲಿಲ್ಲ. ಭಾಗವತನೂ ಬೀಡಿ, ಸಿಗರೇಟು, ವಗೈರೆ ಸೇದುವ ಹಾಗಿರಲಿಲ್ಲ ; ಕಾಫಿ ಚಾ ಅಲ್ಲಿ ಸೇವಿಸುವ ಹಾಗಿರಲಿಲ್ಲ. ವೀಳೆಯವನ್ನು ಹಾಕಿ ಅಲ್ಲಿಯೇ ಉಗುಳುವ ಹಾಗಿರಲಿಲ್ಲ. ರಂಗಸ್ಥಳ ಎಂಬುದು ಭಗವಂತನ ಪೂಜಾಸ್ಥಳವೆಂದೂ, ಭಾಗವತನೆಂದರೆ ಅವನ ಭಕ್ತನೆಂದೂ, ಅರ್ಚಕನೆಂದೂ ಭಾವನೆಯಿತ್ತು.

ಹಿಂದೆ ಭಾಗವತರಿಗೆ ಶ್ರುತಿಯಾಗಿ ‘ಶ್ರುತಿ ಬುರುಡೆ’ ಎಂಬ ಸಾಧನವಿತ್ತು. ಅದನ್ನು ನುಡಿಸುವವನಿಗೆ ‘ಶ್ರುತಿ ಹಿಡಿಯುವವನು’ ಎಂದೇ ಕರೆಯುತ್ತಿದ್ದರು. ಈಗ ನಾಗನನ್ನು ಆಡಿಸುವವರು ಊದುವ ‘ಪುಂಗಿ’ಯ ಹಾಗೆ ಅದರ ಆಕಾರವಿತ್ತು. ಅದರಲ್ಲಿ ಮೂರು ರಂಧ್ರಗಳಿದ್ದು ಹಾಡುವವರು ತಮಗೆ ಅನುಕೂಲವಾದ ತಾರವೋ ಮಧ್ಯಮವೋ ಮಂದ್ರವೋ ಬೇಕಾದ ಶ್ರುತಿಯನ್ನು ಇಟ್ಟುಕೊಳ್ಳುತ್ತಿದ್ದರು. ಬೇಡದ ರಂಧ್ರಗಳನ್ನು ಮುಚ್ಚಲು ಮೇಣದ ಉಂಡೆಗಳನ್ನು ಬಳಸುತ್ತಿದ್ದರು. ಇದರ ಶ್ರುತಿ ತುಂಬ ಇಂಪು ಹಾಗೂ ಯಕ್ಷಗಾನಕ್ಕೆ ಹೊಂದುವಂತೆ ಇದ್ದಿತ್ತು.

ಇಂದು ಯಕ್ಷಗಾನದ ಸಂಗೀತದಲ್ಲಿ ಏನಾಗಿದೆ? ಇಂದು ಯಕ್ಷಗಾನದ ಪಂಚಾಂಗಗಳೇ ಹಾಳಾಗಿವೆ. ಇದಕ್ಕೆ ನಾನಾ ಕಾರಣಗಳಿವೆ. ನಾಟಕ, ಸಿನೆಮಾ, ವೈಯಕ್ತಿಕ ಪ್ರಯೋಗಗಳು, ವೃತ್ತಿನಿರತ ಮೇಳಗಳು, ಪ್ರೇಕ್ಷಕರು- ಇವರೆಲ್ಲರೂ ಇದಕ್ಕೆ ಬಾಧ್ಯರು. ನಾಟಕ, ಸಿನೆಮಾಗಳಿಂದ ಅಲ್ಲಿಯ ಧಾಟಿಗಳು ಯಕ್ಷಗಾನದ ಹಾಡುಗಾರರನ್ನು ಆಕ್ರಮಿಸಿದುವು. ವೈಯಕ್ತಿಕ ಪ್ರಯೋಗಗಳನ್ನು ಮಾಡಿದವರು ತಮಗೆ ಗೊತ್ತಿರುವ ಸಂಗೀತವನ್ನು ಯಕ್ಷಗಾನದ ಗಂಟಲಿಗೆ ತುರುಕಿದರು. ಉದಾಹರಣೆಗೆ ಡಾ. ಕಾರಂತರು ಯಕ್ಷಗಾನ ನೃತ್ಯ ನಾಟಕ ಎಂಬ ಹೊಸ ಪ್ರಯೋಗವನ್ನು ಮಾಡಿ ಅದರಲ್ಲಿರುವ ಮಾತನ್ನು ಮೂಕಗೊಳಿಸಿ, ನೃತ್ಯವನ್ನು ಭರತ ನಾಟ್ಯವಾಗಿ ವಿಕೃತಗೊಳಿಸಿ, ವಾದ್ಯಕ್ಕೆ ಪಿಟೀಲು, ಸ್ಯಾಕ್ಸೋಫೋನುಗಳನ್ನು ಅಳವಡಿಸಿ, ಹಾಡುವಿಕೆಗೆ ಹಿಂದೂಸ್ತಾನೀ ಗಾಯನವನ್ನು ಕಸಿಕಟ್ಟಿ, ಯಕ್ಷಗಾನವನ್ನು ಕಾರಂತ ಗಾನವಾಗಿ ಪರಿವರ್ತಿಸಿ ಕಲೆಯನ್ನು ಕೊಲೆಮಾಡಿದರು. ಇದನ್ನು ವಿದೇಶಗಳಿಗೆ ತೆಗೆದುಕೊಂಡುಹೋಗಿ ‘ಯಕ್ಷಗಾನ’ ಎಂದು ತೋರಿಸಿದರು. ಕಾರಂತರು ಕಲಿತುದು ಹಿಂದೂಸ್ತಾನೀ ಗಾಯನವನ್ನು, ಭರತನಾಟ್ಯವನ್ನು. ಅವನ್ನೇ ಯಕ್ಷಗಾನಕ್ಕೆ ಬಲವಂತವಾಗಿ ತುರುಕಿದರು. ಹಾಡುಗಾರಿಕೆಯಲ್ಲಿ ಯಕ್ಷಗಾನದ ಮಟ್ಟು, ಧಾಟಿಗಳಿಗೆ ಬದಲು ಹಿಂದೂಸ್ತಾನಿಯ ವಿಕೃತ ರಾಗಗಳನ್ನು ಹಚ್ಚಿದರು. ಇನ್ನು ಕೆಲವರು ಭಾಗವತರು ಯಕ್ಷಗಾನದ ಮಟ್ಟು, ಧಾಟಿಗಳನ್ನು ಇಟ್ಟುಕೊಳ್ಳದೆ ತಾವು ಕಲಿತ ಕರ್ನಾಟಕ ಸಂಗೀತದ ವಿದ್ವತ್ತನ್ನು ತೋರಿಸಿ ಮೆರೆದರು. ಇನ್ನು ಕೆಲವರು ಭಾಗವತರು ಎರಡನ್ನು ಮಿಶ್ರಮಾಡಿ ಅತ್ತ ಅದು ಯಕ್ಷಗಾನದ ಧಾಟಿಯೂ ಆಗದೆ, ಇತ್ತ ಕರ್ನಾಟಕ ಸಂಗೀತವೂ ಆಗದೆ ಏನೋ ಒಂದು ರಾಗದ ರೋಗವಾಗಿ ಪರಿಣಮಿಸಿತು. ಇನ್ನು ಕೆಲವರು ಭಾಗವತರು ಭಜನೆಯ ಧಾಟಿಯಲ್ಲಿ ಹಾಡುವವರೂ ಇದ್ದಾರೆ. ಇವೆಲ್ಲ ಸಾಲದೆಂದು ಜನರನ್ನು ಆಕರ್ಷಿಸಲು ನಾಟಕ, ಸಿನೆಮಾಗಳ ಧಾಟಿಗಳನ್ನೂ ಬೆರೆಸಿ ಆಧುನಿಕ ಅಧಿಕಪ್ರಸಂಗಗಳನ್ನು ಆಡಿ, ಹಾಡಿ, ಪ್ರೇಕ್ಷಕರನ್ನು ಮುಗ್ಧಗೊಳಿಸಿ, ಚಪ್ಪಾಳೆ ಗಿಟ್ಟಿಸಿಕೊಂಡ ಭಾಗವತರೂ ಇದ್ದಾರೆ. ಇವರನ್ನು ಪ್ರೋತ್ಸಾಹಿಸಲೆಂಬಂತೆ ಅಂಥ ಭಾಗವತರಿಗೆ ಹೇಳಿದಷ್ಟು ಸಂಬಳ ತೆತ್ತು ಇಟ್ಟುಕೊಂಡು ಕಲೆಯ ಹಾದರ ಮಾಡುವ ವೃತ್ತಿಮೇಳದ ಯಜಮಾನರೂ ಇದ್ದಾರೆ. ಹೀಗೆ ಭಾಗವತ ತನಗೆ ಇರುವ ಪ್ರಾಧಾನ್ಯವನ್ನು ದುರುಪಯೋಗಪಡಿಸಿಕೊಂಡು ಸರ್ವತಂತ್ರ ಸ್ವತಂತ್ರನಾಗಿ ಭಾಗವತನೇ ಭಗವತನೆಂದೆನಿಸಿಕೊಂಡು ಭಗವಂತ ಅವನ ಕೈಯಲ್ಲಿ ಚಿತ್ರಹಿಂಸೆಯನ್ನು ಅನುಭವಿಸುತ್ತಿರುವ ಕುರಿ ಆಗಿದ್ದಾನೆ.

ಯಕ್ಷಗಾನದ ಪರಂಪರೆಯಲ್ಲಿ ಯಕ್ಷಗಾನ ಪ್ರಸಂಗಗಳು, ದಶಾವತಾರದ ಕಥೆಗಳನ್ನೂ ಪುರಾಣ ಪ್ರವಚನವನ್ನೂ ಕುರಿತಿವೆಯೇ ಹೊರತು ಇಂದಿನ ಚಂದಮಾಮದ ಕಥೆಗಳ ಅಧಿಕ ಪ್ರಸಂಗಗಳಲ್ಲ. ಇಂದಿನ ಭಾಗವತರನೇಕರು ಹೀಗೆ ಅಧಿಕಪ್ರಸಂಗಗಳ ಕರ್ತೃಗಳಾಗಿದ್ದಾರೆ ಎಂಬುದು ಕಲೆಯ ದೃಷ್ಟಿಯಿಂದ ತುಂಬ ವಿಷಾಧಕರ. ಕೇಳಿದರೆ, ಪ್ರೇಕ್ಷಕರನ್ನು ಸಂತೃಪ್ತಿಪಡಿಸಲು ಈ ದಾರಿ ಎಂದು ಹೇಳಿ ಜಾರಿಕೊಳ್ಳುತ್ತಾರೆ. ವೃತ್ತಿಮೇಳದವರೂ ತಮ್ಮ ಭಂಡಾರ ತುಂಬಲು ಇದಕ್ಕೆ ಗಾಳಿ ಹಾಕುತ್ತಿದ್ದಾರೆ. ಹಾಗಾಗಿ ಇಂದು ಪರಂಪರೆಯ ಯಕ್ಷಗಾನ ಕಲೆ ನಿಜವಾಗಿ ಸತ್ತಿದೆ. ಭಾಗವತ ತಾನು ಹೇಗಿರಬೇಕೋ ಹಾಗಿಲ್ಲ. ನಿಂತಿರಬೇಕಾದವನು ಮಂಚವನ್ನೇರಿದ್ದಾನೆ. ದೇವರ ಪ್ರಸಾದ ರೂಪವಾದ ಗುಂಡುಮಣಿಸರ, ಕಂಕಣಗಳು ಮಾಯ ಆಗಿವೆ. ರುಮಾಲು ಎಲ್ಲೋ ಹಾರಿಹೋಗಿದೆ. ಬಾಯಲ್ಲಿ ತಾಂಬೂಲ ಪಿಂಡ, ಅದನ್ನು ತುಂಬಿಕೊಂಡು ಹಾಡಿದುದು ಏನು ಎಂಬುದೇ ತಿಳಿಯುವುದಿಲ್ಲ. ಬೀಡಿ ಸಿಗರೇಟು, ಚಾ ಕಾಫಿಗಳ ಸೇವನೆ ಅಲ್ಲೇ ಮಾಡಿ ಭಾಗವತರ ಸ್ಥಾನಮಾನವನ್ನು ಉಳಿಸಿಕೊಂಡಿಲ್ಲ. ಕೆಲವರು ಭಾಗವತರು ರಂಗಸ್ಥಳದಲ್ಲೇ ತಾಂಬೂಲವನ್ನೂ ಎಂಜಲು ಕಫಗಳನ್ನೂ ಉಗುಳುತ್ತಾರೆ. ಶ್ರುತಿ ಬುರುಡೆಯ ಸ್ಥಾನವನ್ನು ಹಾರ್ಮೋನಿಯಂ ಆಕ್ರಮಿಸಿದೆ. ಹಾರ್ಮೋನಿಯಂ ಸ್ವರ ಯಕ್ಷಗಾನಕ್ಕೆ ಹೊಂದಿಕೊಳ್ಳುವುದಿಲ್ಲ. ಎಮ್ಮೆ ಕೂಗಿದ ಹಾಗಾಗುತ್ತದೆಯೇ ಹೊರತು ಪುಂಗಿಯ ಇಂಪಾದ ನಾದ ಅದರಿಂದ ಹೊರಡದು. ಹಾರ್ಮೋನಿಯಂ, ಪಿಟೀಲು, ಸ್ಯಾಕ್ಸೋಫೋನ್-ಮೊದಲಾದ ವಾದ್ಯಗಳೆಲ್ಲ ನಮ್ಮವಲ್ಲ ಎಂದು ಅವುಗಳ ಹೆಸರೇ ಹೇಳುತ್ತವೆ. ಅವು ನಮ್ಮ ಯಕ್ಷಗಾನಕ್ಕೂ ಸಂಗೀತಕ್ಕೂ ಹೊಂದಿಕೊಳ್ಳುವುದಿಲ್ಲ. ಎಂದರೆ ಅನೇಕ ಸಂಗೀತಗಾರರಿಗೆ ನಿಷ್ಠುರ ಸತ್ಯವಾಗಬಹುದು. ವೇಣುಗೋಪಾಲನ ಪರವಾದ ಕೀರ್ತನೆಯನ್ನು ಹಾಡುವಾಗ ಕೊಳಲನ್ನು ಹಿನ್ನೆಲೆಯಾಗಿ ನುಡಿಸುವ ಬದಲು ಪಿಟೀಲು ಕೊಯ್ಯುವ ಸಂಗೀತ ಗೋಷ್ಠಿಯನ್ನು ನಾನು ಕೇಳಿದ್ದೇನೆ! ಸಂಗೀತ ವಿದ್ವಾಂಸರಿಗೆ ಇಷ್ಟೂ ಔಚಿತ್ಯಜ್ಞಾನವಿಲ್ಲವಲ್ಲ ಎಂದು ನಾನು ಮರುಗಿದ್ದೇನೆ. ಇನ್ನು ರಂಗಸ್ಥಳದ ಮರ್ಯಾದೆಯನ್ನು ಕಾಪಾಡದೆ ಇರುವ ಪ್ರೇಕ್ಷಕರೂ ನೆಲಗಡಲೆಯನ್ನು ತಿಂದು ಅಲ್ಲಲ್ಲೇ ಹಾಕುವ, ಮೂತ್ರ ಮಾಡುವುದಕ್ಕೂ, ತಿಂಡಿ-ತೀರ್ಥ ತೆಗೆದುಕೊಳ್ಳುವುದಕ್ಕೂ ರಂಗಸ್ಥಳದ ಮೂಲಕವೇ ಓಡಾಡುವ ಪ್ರವೃತ್ತಿ ಕಲೆಗೆ ಮರ್ಯಾದೆ ತರುವಂಥದಲ್ಲ.

ಇಂದು ಯಕ್ಷಗಾನವನ್ನು ಪರಂಪರೆಯ ರೀತಿಯಲ್ಲಿ ಆಡುವವರೂ, ಹಾಡುವವರೂ ಕೇವಲ ಬೆರಳೆಣಿಕೆಯಲ್ಲಿ ಮಾತ್ರ ಇದ್ದಾರೆ; ಅವರೂ ಒಬ್ಬೊಬ್ಬರಾಗಿ ರಂಗಸ್ಥಳದಿಂದ ನಿರ್ಗಮಿಸುತ್ತಿದ್ದಾರೆ. ಇಂದು ಯಕ್ಷಗಾನದ ಪರಂಪರೆಯನ್ನು ಕಷ್ಟಪಟ್ಟು ಉಳಿಸಿಕೊಂಡರೆ ಮಾತ್ರ ನಮಗೂ, ನಮ್ಮ ಮುಂದಿನ ಪೀಳಿಗೆಗೂ ನಿಜವಾದ ಯಕ್ಷಗಾನ ಉಳಿದೀತು. ಇಲ್ಲದಿದ್ದರೆ ನಾವು ಆಡಿದ್ದೇ ಹಾಡಿದ್ದೇ ಯಕ್ಷಗಾನ ಎಂದು ಮೆರೆದೀತು! – ಈಗ ಮೆರೆಯುತ್ತಿರುವ ಹಾಗೆ! ಇದಕ್ಕೆ, ನಮ ಯಕ್ಷಗಾನಕ್ಕೆ ಕಾಯಕಲ್ಪವಾಗಬೇಕು. ಅಳಿದು ಹೋದ, ಹೋಗುತ್ತಿರುವ ಪರಂಪರೆಯನ್ನು ಉಳಿಸಿ ಕಾಪಾಡುವ ‘ಯಕ್ಷಗಾನ ಅಕಾಡೆಮಿ’ಯೊಂದು ಸ್ಥಾಪನೆ ಆಗಬೇಕು. ಜನಪದ ಅಕಾಡೆಮಿಯೊಂದು ಸಾಗರ. ಅದರಲ್ಲಿ ‘ಯಕ್ಷಗಾನ’ ಎಂಬ ಸಾಗರವನ್ನು ತುರುಕಿ ಅದಕ್ಕೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಅದನ್ನು ಪ್ರತ್ಯೇಕಿಸಿ ‘ಯಕ್ಷಗಾನ ಅಕಾಡೆಮಿ’ ಎಂದು ಅದನ್ನು ಹೆಸರಿಸಿ, ಅದೂ ಎಲ್ಲ ಅಕಾಡೆಮಿಗಳಂತಾಗದೆ ಕಲೆಯ ಉದ್ಧಾರಕ್ಕಾಗಿಯೂ, ಕಲಾವಿದರ ಪ್ರೋತ್ಸಾಹಕ್ಕಾಗಿಯೂ ತಲೆಯೆತ್ತಿ ಬಾಳುವಂತೆ ಅದನ್ನು ಸರಿಯಾದ ಪ್ರಾಮಾಣಿಕರ ಕೈಯಲ್ಲಿ ಕೊಟ್ಟು ನಮ್ಮ ಸರಕಾರ ನಡೆಸಬೇಕು.

ಪರಂಪರೆಯ ಯಕ್ಷಗಾನವನ್ನು ಪ್ರದರ್ಶಿಸುವ ಮೇಳಗಳಿಗೂ, ಹವ್ಯಾಸಿಗಳಿಗೂ ಅದು ಸಹಾಯಧನವನ್ನಿತ್ತು ಪ್ರೋತ್ಸಾಹಿಸುವುದರ ಮೂಲಕ ಯಕ್ಷಗಾನದ ಪರಂಪರೆಯ ಕಲೆಯನ್ನು ಉಳಿಸಿ ಬೆಳೆಸಬಹುದು. ಯಕ್ಷಗಾನದ ಪರಂಪರೆಯ ಕಲಾವಿದರನ್ನು ಸಂಮಾನಿಸಿ ಗೌರವಿಸಬಹುದು. ಯಕ್ಷಗಾನ ಪರಂಪರೆಯನ್ನು ಉಳಿಸಲು ಶ್ರಮಿಸಿದ ಯಕ್ಷಗಾನ ಸಾಹಿತಿಗಳನ್ನು ಗುರುತಿಸಿ ಸಂಮಾನಿಸಬಹುದು. ಅಂಥವರು ಬರೆದ ಉತ್ತಮ ಗ್ರಂಥಗಳಿಗೆ ಪ್ರಶಸ್ತಿ ನೀಡಬಹುದು. ಪರಂಪರೆಯ ಯಕ್ಷಗಾನ ಪ್ರದರ್ಶನಗಳನ್ನು ಆಗಾಗ ಅಲ್ಲಲ್ಲಿ ಏರ್ಪಡಿಸಿ ಜನರಲ್ಲಿ ನಿಜವಾದ ಯಕ್ಷಗಾನ ಕಲೆಯ ಪ್ರಜ್ಞೆಯನ್ನು ಮೂಡಿಸಬಹುದು. ಇತ್ತೀಚೆಗೆ ಬಂದ ಮಂಡಲ ಪಂಚಾಯತಿಗೊಂದು ಯಕ್ಷಗಾನ ರಂಗಸ್ಥಳ ಏರ್ಪಡಿಸಿ ಅಲ್ಲಿ ಪಂಚಾಯತಿಯ ಖರ್ಚಿನಿಂದ ಬಯಲಾಟವನ್ನು ಆಡಿಸಿ ತೋರಿಸಬಹುದು.

ಇಂದು ಭಾಗವತನ ಕಂಠಕ್ಕೆ ತ್ರಾಣವಿಲ್ಲ. ಧ್ವನಿವರ್ಧಕವಿಲ್ಲದೆ ಅವನು ಎಲ್ಲರಿಗೂ ಕೇಳಿಸುವಂತೆ ಹಾಡಲಾರ. ರಾತ್ರಿಯಿಡೀ ಬೊಬ್ಬೆ ಹಾಕಿ ಅವನ ಕಂಠದ ಮಾಧುರ್ಯವನ್ನೂ ಅವನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ‘ಯಕ್ಷಗಾನ’ವನ್ನು ಸಿನೆಮಾದಂತೆ ಮೂರು ಗಂಟೆಯ ಪ್ರದರ್ಶನಕ್ಕೆ ಇಳಿಸಿದಲ್ಲಿ ಭಾಗವತ ಹಲವು ಕಾಲ ತನ್ನ ಕಂಠಶ್ರೀಯನ್ನು ಉಳಿಸಿಕೊಂಡು ತನ್ನ ಪ್ರೇಕ್ಷಕರಿಗೂ, ಶ್ರೋತೃಗಳಿಗೂ ತನ್ನ ಹಾಡುಗಾರಿಕೆಯ ರಸಾಮೃತವನ್ನು ಉಣಿಸಬಲ್ಲ. ಹಾಗೆ ನಮ್ಮ ಸರಕಾರಕ್ಕೆ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸುವ ಸದ್ಭುದ್ಧಿಯನ್ನು ಯಕ್ಷಗಾನ ಕಲಾದೇವತೆ ನೀಡಿ ಅದು ಕಾರ್ಯಗತವಾಗುವಂತೆ ಅನುಗ್ರಹಿಸಿ, ಅಲ್ಲಿ ಒಳ್ಳೆಯ ಕೆಲಸವಾಗುವಂತೆ ತನ್ನ ಕೃಪಾಕಟಾಕ್ಷವನ್ನು ಬೀರಲಿ ಎಂದು ನಾನು ಪ್ರಾರ್ಥಿಸುತ್ತೇನೆ.