“ಯಾವುದು ಬೆಳಗುತ್ತಿದೆಯೋ ಅದೆಲ್ಲವೂ ಆ ಮಹಾಬೆಳಗಿನ ಛಾಯೆ ಮಾತ್ರ; ಅದು ಬೆಳಗುವುದರಿಂದ ಇದೆಲ್ಲವೂ ಬೆಳಗುತ್ತಿದೆ.”[1]

ಈ ಬೆಳಕು – ಎಲ್ಲಿಯದು ?

“ಅಲ್ಲಿ ಸೂರ್ಯ ಬೆಳಗುವುದಿಲ್ಲ; ಚಂದ್ರ ತೊಳಗುವುದಿಲ್ಲ; ನಕ್ಷತ್ರ ಮಿನುಗುವುದಿಲ್ಲ; ಮಿಂಚು ಮಿಂಚುವುದಿಲ್ಲ; ಅಗ್ನಿಯೂ ರಾಜಿಸುವುದಿಲ್ಲ.”[2]

ಅಂತಹ ಬೆಳಕು ಅದು. ಆ ಬೆಳಕಿನ ಸ್ವರೂಪವೇನು?

“ಅದು ಶುಭ್ರವಾದುದು, ಅದು ಜ್ಯೋತಿಗಳ ಜ್ಯೋತಿ; ಅದನ್ನು ಆತ್ಮವಿದರು ತಿಳಿಯುತ್ತಾರೆ.”[3]

ಪೃಥ್ವಿಯ ಅರುಣೋದಯದ ಪ್ರಶಾಂತ ಮಂಗಲ ಮುಹೂರ್ತದಲ್ಲಿ, ಅರಣ್ಯ ಮಹಾದೇಗುಲದಲ್ಲಿ ಆದಿ-ಋಷಿಕವಿಗಳ ಮಂತ್ರಘೋಷ ಹೀಗೆ ಮೊಳಗಿತು. ಆ ಅಪೂರ್ವ ಜ್ಯೋತಿರ್‌ದರ್ಶನವಾಣಿಯಲ್ಲಿ ಶಂಕೆಯ ಸುಳಿವಿಲ್ಲ; ಸಂದೇಹದ ಛಾಯೆಯಿಲ್ಲ; ಅಸ್ಪಷ್ಟತೆಯ ಮಬ್ಬಿಲ್ಲ. ಸೂರ‍್ಯಸ್ಪಷ್ಟವಾಣಿಯ ದಿವ್ಯನಿರ್ಘೋಷವೊಂದು ದಿವಿಜ ನದಿಯಂತೆ ಭೋರ್ಗರೆದು ಉರುಳಿತು, ಹರಿಯಿತು. ಪೃಥ್ವಿಯ ಪ್ರಥಮ ಸೌಂದರ್ಯದರ್ಶನ ಜ್ಯೋತಿರ್ವಾಣಿಯಾಗಿ ಮೊಳಗಿತು. ಸರ್ವಸೌಂದರ‍್ಯಗಳ ಮೂಲವಾದ ಈ ಜ್ಯೋತಿಯ ಸ್ವರೂಪವನ್ನು ಹೀಗೇ ಎಂದು ಹೇಳಲಾಗದೆ, ಅದರ ದರ್ಶನಕ್ಕೆ ಉಕ್ತಿಯನ್ನು ನೀಡಲಾರದೆ ಒಬ್ಬ ಋಷಿ ಹೀಗೆ ವಿಸ್ಮಯಗೊಳ್ಳುತ್ತಾನೆ:

“ಕಾತರಿಸಿದೆ ಕಣ್ ಕಾತರಿಸಿದೆ ಕವಿ
ಒಳ ಹೊರಗೂ ತುಂಬಿದ ಜ್ಯೋತಿಯ ದರ್ಶನಕೆ!
ಈ ಚಿಂತನೆಯೊಳೆ ಬಲುದೂರವನಲೆದಿರೆ ಬಗೆ
ಚಿಂತಿಪುದೇನನು, ನುಡಿಯುವುದೇನನು ಈ ಇದಕೆ!
[4]
(ಋಗ್ವೇದ ೬-೯-೬)

ಎಲ್ಲೆಲ್ಲೂ ವ್ಯಾಪಿಸಿದ ಈ ಜ್ಯೋತಿಯ ಪರಿಭಾವನೆಯಲ್ಲಿ ಎಲ್ಲೋ ದೂರ ದೂರ ಅಲೆಯುವ ಮನಸ್ಸು ಇದನ್ನು ಹೇಗೆ ಚಿಂತಿಸುವುದು, ಹೇಗೆ ನುಡಿಯುವುದು ಎಂಬ ಉಭಯ ಸಂಕಟದಲ್ಲಿ ಸಿಕ್ಕಿಕೊಂಡಿದೆ. ಮತ್ತೆ ಒಮ್ಮೆ ದರ್ಶಿಸುತ್ತದೆ:

ಸರ್ವ ಜಂಗಮದ ಅಂತರಂಗದಲಿ
ಅಚಂಚಲ ಧ್ರುವಜ್ಯೋತಿ
ಮನೋವೇಗವನು ಮೀರಿ ನಿಂದಿಹುದು
ದಾರಿತೋರಲೆಂದು
ಸಾಗಿ ನಡೆದಿಹುದು ಸಕಲ ದೇವಗಣ
ಕ್ರತುವ ಸೇರಲೆಂದು                     (ಋ ೬.೯-೫)

ಸರ್ವಜಂಗಮದ ಅಂತರಂಗದಲ್ಲಿ ಮನೋವೇಗವನ್ನು ಮೀರಿ ಈ ಅಚಂಚಲ ಧ್ರುವ ಜ್ಯೋತಿ ನಿಂದಿರುವ ಪವಾಡಕ್ಕೆ ಋಷಿ ಬೆರಗಾಗಿದ್ದಾನೆ. ಆದರೆ ಅದು ನಿಂತಿರುವುದು ಆ ಪರಮ ಪ್ರಕಾಶದೆಡೆ ತೋರು ಬೆರಳಾಗಿ ಮಾತ್ರ.

“ಎಲ್ಲ ಕಾಂತಿಗಳ ಮೂಲವೂ ಜ್ಯೋತಿಯೇ. ಈ ಜ್ಯೋತಿಯ ಆರಾಧನೆಯ ಸ್ತೋತ್ರವೇ ವೇದಕಾವ್ಯ. ಜ್ಯೋತಿ, ಆತ್ಮದ ಸಮಸ್ತ ಕಾಂತಿ ವೈಭವಗಳ ಪ್ರತಿಮೆ. ಈ ಜ್ಯೋತಿಯೇ ಸತ್ಯ, ಋತ, ಸ್ವಸ್ತಿ, ಶ್ರೀ, ಚಾರುತಾ, ಧೀ, ಭದ್ರ, ಅಮೃತ, ದೇವಾ, ಆರ‍್ಯ, ಇತ್ಯಾದಿ. ಈ ಜ್ಯೋತಿಯೇ ಅಗ್ನಿ ಸೂರ‍್ಯ, ಸೋಮ….’’[5]

ಈ ಜೋತಿರ್ ದರ್ಶನವಾಣಿಯೇ ವೇದೋಪನಿಷತ್ತುಗಳ ತುಂಬ. ಸೌಂದರ್ಯವೆಂದರೆ ಜ್ಯೋತಿ, ಪ್ರಕಾಶ. ದೇವದೇವತೆಗಳ ಬಹುವರ್ಣಮಯವಾದ ಮೂರ್ತಿಗಳ ಸೌಂದರ್ಯದಿಂದ ಹಿಡಿದು ನಿಷ್ಕಲ್ಮಷವಾದ ಆ ಪರಂಜ್ಯೋತಿಯ ದರ್ಶನದವರೆಗೂ ವಿವಿಧ ಸ್ತರಗಳಲ್ಲಿ ಅದೇ ಜ್ಯೋತಿರ್‌ವಾಣಿ. ಅತೀತವೂ ಅಂತರ‍್ಯಾಮಿಯೂ ಆಗಿರುವ ಈ ಜ್ಯೋತಿಯನ್ನು ದರ್ಶಿಸಿದ ಋಷಿಯ ವಾಣಿ “ಜ್ಯೋತಿರಗ್ರ”. ಅನುಭಾವದ ಪರ್ವತ ಶೃಂಗದಿಂದ ಅಭಿವ್ಯಕ್ತಿಯ ಹೊಳೆ ಸಲೀಲವಾಗಿ ಹರಿದಂತೆ.

ಧ್ಯಾನದರ್ಶಿತವಾದ ಈ ಆತ್ಮಜೋತಿಯೇ ಎಲ್ಲೆಲ್ಲೂ ಸೌಂದರ‍್ಯವಾಗಿ ಹರಿದಿದೆ. ಹೀಗೆ ಸೌಂದರ್ಯವನ್ನು ರೂಪಿಸುವ ಆ ಶಕ್ತಿಯೆ ಋತ. ಆ ಋತವೇ ನಾವು ಲೋಕದಲ್ಲಿ ಕಾಣುವ ಎಲ್ಲ ನಿರ್ದಿಷ್ಟವಾದ ಆಕಾರ-ಅಚ್ಚುಕಟ್ಟುಗಳನ್ನು ರೂಪಿಸುವುದು. ವರುಣನೇ ಈ ಋತದ ಪ್ರಭು. ಅವನನ್ನು ಕುರಿತು –

ಜೀವಜಗತ್ತಿನ ಆಲಂಬನವೀತನ್,
ಉಷಾಕಿರಣಗಳ ರಹಸ್ಯನಾಮವ ಕಂಡರಿವನ್,
ಕವಿಯೀತನ್,
ದಿವಿಯೊಲು ಕಾವ್ಯತ್ವದಿನನೇಕ ರೂಪವ ಕಂಡರಿಪನ್!  (ಋ ೮.೪೧.೫)

ಎಂದು ಹಾಡಿದ್ದಾರೆ. “ವಿಲಯದಿಂದ ಸೃಷ್ಟಿಯನ್ನು ರೂಪಿಸುವ ಶಕ್ತಿಯೇ ಋತ. ವಸ್ತುಗಳಿಗೆ ನಿರ್ದಿಷ್ಟವಾದ ಪ್ರಮಾಣವನ್ನು ಮತ್ತು ಸಾಮರಸ್ಯವನ್ನು ನೀಡಿರುವುದೇ ಅದು. ಈ ದೃಷ್ಟಿಯಿಂದ ಋತ ಸೌಂದರ್ಯದ ಮೌಲ್ಯವೂ ಹೌದು.”[6] ಈ ಋತದ ಪ್ರಭು ವರುಣನೆಂದು ನಿರೂಪಿತವಾಗಿದೆ. ಅವನು ಕವಿ, ಎಂದರೆ ಋತಪಥದಲ್ಲಿ ತನ್ನ ಕಾವ್ಯ ಶಕ್ತಿಯಿಂದ ಅನೇಕ ರೂಪಗಳನ್ನು ಸೃಷ್ಟಿಸತಕ್ಕವನು. ಅವನು ವಿಶ್ವದ ರಹಸ್ಯಗಳೆಲ್ಲವನ್ನೂ ಕಂಡವನು; ಸಮಸ್ತ ರೂಪಗಳನ್ನೂ ರೂಪಿಸುವವನು. ಅವನನ್ನು ಕುರಿತು ಮತ್ತೊಂದೆಡೆ –

ದಕ್ಷರೊಳ್ ದಕ್ಷನ್ ; ಬಲ್ಲಿದರೊಳ್ ಬಲ್ಲಿದನ್;
ಕವಿ ನೀನ್, ಕಾವ್ಯತ್ವದಿನೆಲ್ಲವನರಿತವ ನೀನ್
ಭೂ ವ್ಯೋಮದ ಸಂಪದಕೆಲ್ಲಕು ನೀನೊಡೆಯನ್  (ಋ ೧೦.೯೧.೩)

ಎಂದು ಋಷಿಗಳು ಸ್ತುತಿಸಿದ್ದಾರೆ. ಇಲ್ಲೆಲ್ಲಾ ಕಾವ್ಯಶಕ್ತಿಯೇ ಸೌಂದರ್ಯ ನಿರ್ಮಾಣ ಶಕ್ತಿ ಎನ್ನುವುದನ್ನು ಋಷಿಗಳು ಸೂಚಿಸಿದ್ದಾರೆ. “ಒಮ್ಮೆ ವರುಣನನ್ನು ಕವಿ ಎಂದಂತೆ ಮತ್ತೊಂದೆಡೆ ಇಂದ್ರನನ್ನೂ ಕವಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ ಈ ‘ಕವಿ’ ಎನ್ನುವ ಮಾತು ದೇವತೆಗಳನ್ನು ಕುರಿತು ಹೇಳುವಾಗಲೆಲ್ಲಾ ವಿಶೇಷವಾಗಿ ಬಳಸಲ್ಪಟ್ಟಿರುವ ಒಂದು ವಿಶೇಷಣ. ಎಲ್ಲಾ ದೇವತೆಗಳೂ ಕವಿಗಳೇ … ಕವಿ ಎಂದರೆ ತನ್ನ ಕಾವ್ಯಶಕ್ತಿಯಿಂದ ಸೌಂದರ್ಯ ನಿರ್ಮಾಣ ಮಾಡುವವನು. ಹೀಗೆ ದಿವ್ಯ ಸೌಂದರ್ಯವನ್ನು ರೂಪಿಸುವ ಮತ್ತು ದೀಪ್ತಗೊಳಿಸುವ ಶಕ್ತಿಯುಳ್ಳವನೇ ಕವಿ…. ಇಂದ್ರನೇ ಪರಮ ಕವಿ; ಕಲಾವಿದ. ಅವನು ಸುರೂಪಗಳನ್ನು ಸೃಷ್ಟಿಮಾಡುವವನು”[7] ಲೋಕದ ಚೆಲುವೆಲ್ಲ ಇವನದೆ-

ರೂಪರೂಪಕ್ಕೆಲ್ಲ ಮೂಲರೂಪಾದವನು
ಇವನ ರೂಪೇ ನಾವು ಕಾಣ್ಬುದೆಲ್ಲ!
ತನ್ನ ಮಾಯೆಯೊಳಿಂದ್ರ ಬಹುರೂಪ ಸಂಚಾರಿ
ಸಪ್ತಾಶ್ವಗಳ ಹೂಡಿ ಸಾವಿರ ಸಲ!              (ಋ ೬.೪೭.೧೮)

ಎಲ್ಲ ರೂಪಗಳ ಕರ್ತನಾದ ಇಂದ್ರ ತನ್ನ ಸಮ್ಮೋಹಕ ಶಕ್ತಿಯಿಂದ ಬಹುರೂಪ ಸಂಚಾರಿಯಾಗಿದ್ದಾನೆ. ಇಲ್ಲಿ ಆಗಲೇ ಸೌಂದರ್ಯದ ಮಾಯೆಯನ್ನು ಎಂದರೆ ಅದರ ಗಾರುಡಿಯನ್ನು, ಸಮ್ಮೋಹಕ ಶಕ್ತಿಯನ್ನು, ಸೌಂದರ್ಯದ ಬಹುರೂಪಗಳನ್ನು ವೇದದ ಋಷಿ ಗುರುತಿಸಿ ಹಾಡಿರುವುದನ್ನು ಗಮನಿಸಬಹುದು. ಸೌಂದರ್ಯ ನಿರ್ಮಾಪಕನಾದ ಇಂದ್ರನೆ ಇಂದ್ರಿಯ ಗೋಚರವಾದ ಎಲ್ಲ ವಸ್ತುಗಳನ್ನು ಧರ್ಮದಿಂದ, ಋತದಿಂದ ಸೃಜಿಸಿದ್ದಾನೆ. ಧರ್ಮದಿಂದ ವ್ಯಾಪ್ತವಾದ ಈ ಸೌಂದರ್ಯವೇ ಋಷಿಗಳ ಹಾಡಿನ ಸ್ಫೂರ್ತಿ-

ಹೂವು ಹಣ್ಣುಗಳ ತರು ಮರಂಗಳನು
ಹರಿವ ತೊರೆಗಳನ್ನು,
ಗಗನ ದೇಶದಲಿ ಉಪಮಿಸಲಾಗದ
ತಟಿತ್ ದೀಪ್ತಿಯನ್ನು,
ಯಾವ ಧರ್ಮದಲಿ ಹರಿಹಿ ತಬ್ಬಿಹೆಯೊ
ಸಕಲ ಭುವನಗಳನು,
ಅಂಥ ಮಹಿಮೆಯನು ಕುರಿತು ಕಟ್ಟುವೆವು
ನಮ್ಮ ಗೀತಗಳನು.                           (ಋ.೨.೧೩-೭)

ಎಂದು ಋಷಿಗಳು ಹಾಡಿದ್ದಾರೆ. ಈ ಲೋಕದಲ್ಲಿ ದೃಗ್ಗೋಚರವಾಗುವ ಈ ಎಲ್ಲ ಸೌಂದರ್ಯವೂ ಕವಿ ನಿರ್ಮಿತವಾದುದು, ಇದು ವೈವಿಧ್ಯಮಯವಾದುದು, ಮನ ಮೋಹಕವಾದುದು. ಆದರೆ ಇದೆಲ್ಲವೂ ಆ ಧರ್ಮದಿಂದ ವ್ಯಾಪ್ತವಾಗಿದೆ. ಧರ್ಮದ ಪ್ರತಿನಿಧಿಯಾಗಿ ನಿಂತ ಇಂದ್ರನಿರ್ಮಿತವಾದ ಈ ರೂಪಸೌಂದರ‍್ಯವೇ ಈ ಋಷಿಗಳ ಗೀತಕ್ಕೆ ವಸ್ತು ಹಾಗೂ ಸ್ಫೂರ್ತಿ. ಅಷ್ಟೇ ಅಲ್ಲ, ಈ ಲೋಕವೆಲ್ಲವೂ ದೇವಕವಿಗಳ ಕಾವ್ಯ. ಈ ಸೃಷ್ಟಿಕಾವ್ಯದ ಚೆಲುವಿನ ಪರಿಭಾವನೆಯಿಂದ ವೇದಕಾವ್ಯ ಮೂಡಿತು.

ಸೌಂದರ್ಯದ ನವನವೋನ್ಮೇಷತ್ವವನ್ನು ಈ ಋಷಿಗಳು ಉಷೆಯ ಸೌಂದರ್ಯ ದಲ್ಲಿ ಕಂಡು ಅದನ್ನು ಉಷಾಸೂಕ್ತಗಳಲ್ಲಿ ಬಣ್ಣಿಸಿದ್ದಾರೆ. ಉಷೆಯ ಸೌಂದರ್ಯದಲ್ಲಿ ಸರ್ವದಾ ನೂತನವಾದ ತಾರುಣ್ಯದ ಲಾವಣ್ಯವನ್ನು ಬಗೆಬಗೆಯಾಗಿ ಚಿತ್ರಿಸಿದ್ದಾರೆ. ಒಬ್ಬ ಋಷಿ ಬಹು ವರ್ಣಮಯವಾದ ಉಷಾಸೌಂದರ್ಯವನ್ನು ಕುರಿತು ಹೀಗೆ ಹಾಡಿದ್ದಾನೆ.

ಅಧ್ವರದೊಳು ಯಜ್ಞಸ್ತಂಭಗಳೊಲು ನಿಂದಿಹರೀ ಉಷೆಯರು
ಪೂರ್ವದಿಗಂತವ ಬೆಳಗಿ;
ಕಗ್ಗತ್ತಲ ಗವಿಬಾಗಿಲ ತೆರೆದಿಹರೀ ಪಾವಕ ಪಾವನೆಯರು
ಬಹುವರ್ಣದಿ ಮಿರುಗಿ!                  (ಋ೪.೫೧.೧)

ಮತ್ತೊಬ್ಬ ಕವಿಗೆ ಈ ಉಷೆ ನರ್ತಕಿಯಂತೆ ಗೋಚರಿಸುತ್ತಾಳೆ.

ಈ ಉಷೆ ನರ್ತಕಿ ಚಿತ್ರಾಂಬರಧಾರಿ
ಬಿಡುಗೆಚ್ಚಲ ಧೇನುವಿನೊಲು ಎದೆ ತೋರಿ,
ಹಸು ಬರುವಂದದಿ ತಡಿಕೆಯನೊದೆದು
ಬರುವಳು ಲೋಕಕೆ ಜ್ಯೋತಿಯನೆರೆದು !       (ಋ೧.೯೨.೪)

ಒಮ್ಮೆ ಯಜ್ಞಸ್ತಂಭಗಳಂತೆ, ಒಮ್ಮೆ ನರ್ತಕಿಯಂತೆ, ಒಮ್ಮೆ ಪಯಸ್ವಿನಿಯಾದ

ಧೇನುವಿನಂತೆ ತೋರುವ ಉಷೆ, ಮತ್ತೊಂದೆಡೆ ನವ ವಧುವಿನಂತೆ ಗೋಚರಿಸುತ್ತಾಳೆ.

ಇದೋ ಇಲ್ಲಿ ದಿವಾ ಪುತ್ರಿ ಭದ್ರ ಕನ್ಯೆಯಂದದಿ
ನಿಂದಿರುವಳು ಬೆಳಕ ತಂದು
ವರವನೀಯುವಂದದಿ.                         (ಋ ೫.೮೦.೬)

ಅಷ್ಟೇ ಅಲ್ಲ; ಇವಳು ತಮೋಹಾರಿಯಾದ ದೇವತೆ ಕೂಡಾ.

ಸ್ನಾತ ಶುಭ್ರಗಾತ್ರಾನ್ವಿತೆ ದಿವಾಪುತ್ರಿ ಈ ಉಷೆ
ನಾವೆಲ್ಲರು ನೋಡಲೆಂದು ನಿಂದಿರುವಳು ಅದಿಗೊ!
ಬಾಧಮಾನವಹ ತಮಸ್ಸನೋಡಿಸಿ
ಜ್ಯೋತಿಯ ತಂದಳಿಗೋ!                     (ಋ.೫.೮೦.೫)

ನಿರ್ಮಲ ಸೌಂದರ‍್ಯದ ಚಿರಂತನಮೂರ್ತಿಯಾದ ಉಷೆಯನ್ನು ಈ ಕವಿಗಳು ಎಷ್ಟೆಷ್ಟು ಬಗೆಯಾಗಿ ಹಾಡಿದ್ದಾರೆ! ಎಷ್ಟೊಂದು ಪ್ರತಿಮೆಗಳಲ್ಲಿ ಅವಳ ಚೆಲುವನ್ನು ಕಡೆದಿಟ್ಟಿದ್ದಾರೆ! “ಈ ಉಷಾಸೂಕ್ತಗಳು ಸರಳ ಸುಂದರ ಕಾವ್ಯದ ಅಪೂರ್ವ ಮಾದರಿಗಳು. ಉಷಾ ಉದಯವನ್ನು ಆನಂದ ಸಂಭ್ರಮಗಳಿಂದ ವೀಕ್ಷಿಸಿದ ವ್ಯಕ್ತಿಯೊಬ್ಬನು, ಯಾವ ಪ್ರಯತ್ನವನ್ನೂ ಮಾಡದೆ, ಯಾವ ಅಲಂಕಾರಗಳ ನೆರವನ್ನೂ ಕೋರದೆ, ತನ್ನ ಅನುಭವಕ್ಕೆ ಅಭಿವ್ಯಕ್ತಿಯನ್ನೀಯುವ ಉದ್ದೇಶದಿಂದ, ಒಂದು ಛಂದೋನಿಯಮದಲ್ಲಿ ನಿರರ್ಗಳವಾಗಿ ಹೊರಹೊಮ್ಮಿಸಿದ ವಾಣಿಯ ಸುಂದರ ಕಾವ್ಯವಿದು. ಪ್ರಪ್ರಥಮಬಾರಿಗೆ ಉಕ್ತಿಯನ್ನು ಪಡೆದ ಈ ಉಷಾಸೌಂದರ್ಯಕ್ಕೆ ಎಣೆಯಾದುದು ಬೇರಾವ ಸಾಹಿತ್ಯದಲ್ಲೂ ದೊರೆಯದು”[8] ಈ ಉಷೆ ಚಿರಸೌಂದರ್ಯದ ಮೂರ್ತಿಯಾಗಿ ತೋರುವುದರ ಜೊತೆಗೇ ಅವಳು ಮರ್ತ್ಯರ ನಶ್ವರತೆಯನ್ನೂ ಅರಿವು ಮಾಡಿಕೊಡುತ್ತಾಳೆ. ಅಮರ್ತ್ಯಳಾದ ಉಷೆಯ ಚೆಲುವಿನೆದುರು ತಮ್ಮ ನಶ್ವರತೆಯನ್ನರಿತ ಖೇದವೂ ಒಂದೆಡೆ ಅಭಿವ್ಯಕ್ತಿಯನ್ನು ಪಡೆದಿದೆ;

ಮತ್ತೆ ಮತ್ತುದಯಿಸುತ ಈ ಚಿರಂತನ ಕನ್ಯೆ
ಸಮಾನ ವರ್ಣದಲಿ ಶೋಭಿಸುವಳು,
ದ್ಯೂತ ಚತುರನು ಜನರ ಧನವ ಸೆಳೆವಂದದಲಿ
ಮರ್ತ್ಯರಾಯುವನಿವಳು ಸವೆಸುತಿಹಳು!

ಇಲ್ಲಿ ಸೌಂದರ್ಯದ ಹರ್ಷದೊಡನೆ ವ್ಯಾಕುಲತೆಯೂ ಮಿಶ್ರವಾಗಿದೆ. ಉಷಾ ಸೌಂದರ‍್ಯದ ಆನಂದಾನುಭವದ ಪರಿಭಾವನೆಯ ಜೊತೆಯಲ್ಲೇ, ನವ ತಾರುಣ್ಯವನ್ನು ನಿತ್ಯವೂ ಪಡೆಯುವ ಉಷಸ್ಸಿನ ಎದುರಿಗೇ ಮರ್ತ್ಯಜೀವಿಗಳ ಆಯಸ್ಸು ಕ್ಷೀಣಿಸುತ್ತಿರುವುದಲ್ಲಾ ಎಂಬ ಭಾವನೆಯಲ್ಲಿ ಕೊಂಚ ಉದ್ವೇಗವೂ ಬೆರೆತುಕೊಂಡಿದೆ. “ಈ ಉಷಾ ಉದಯ ಕೇವಲ ಸುಂದರವಾದ ನೋಟದಂತೆ ನಮಗೆ ತೋರುವುದಾದರೂ, ಪ್ರಾಚೀನ ಋಷಿಗಳ ದೃಷ್ಟಿಗೆ ಅದು ಎಲ್ಲ ಸಮಸ್ಯೆಯ ಸಮಸ್ಯೆಯಾಗಿ ತೋರಿತು. ಯಾವುದು ಬರಿಯ ಸೂರ‍್ಯೋದಯದಂತೆ ನಮಗೆ ತೋರುವುದೋ, ಅದು ಇರವಿನ ಸಮಸ್ಯೆಯನ್ನು ಆ ಋಷಿಗಳೆದುರು ಮಂಡಿಸಿತು…. ಅವರ ಬಾಲ್ಯ ತಾರುಣ್ಯ ವಾರ್ಧಕ್ಯಗಳು ಆ ನಿತ್ಯ ನೂತನ ಯೌವನವತಿಯಾದ ಉಷೆಯ ಎದುರಿಗೆ ಮತ್ತೆಂದೂ ಹಿಂದಿರುಗಿ ಬಾರದಂತೆ ಮಾಯವಾಗುತ್ತಿರುವಂತೆ ತೋರುತ್ತದೆ.”[9] ಹೀಗೆ ಮಾನವ ಜೀವಿತ ಎಷ್ಟೊಂದು ನಶ್ವರ ಎಂಬ ವಿಷಾದ ಮೂಲವಾದ ಸತ್ಯ, ಶಾಶ್ವತವಾದ ನಿತ್ಯನೂತನವಾದ ಉಷಾ ಸೌಂದರ್ಯದ ಪರಿಭಾವನೆಯಲ್ಲಿ ವ್ಯಕ್ತವಾಗಿದೆ. ಸೌಂದರ್ಯ ದಿನದಿನವೂ ಯೌವನವತಿಯಾಗಿ ನಮ್ಮೆದುರು ಸುಳಿಯುತ್ತಿದೆ, ಆದರೆ ನಾವು ಮಾತ್ರ ದಿನದಿನವೂ ಮುಪ್ಪಿಡಿದು ನಶಿಸುತ್ತಿದ್ದೇವೆ ಎನ್ನುವ ಅರಿವಿಗೂ ಉಷಾ ಸೌಂದರ್ಯ ಪ್ರೇರಣೆಯನ್ನಿತ್ತಿದೆ.

ಉಷಾ ಸೌಂದರ್ಯ ಕನ್ಯೆಯ ಸೌಂದರ್ಯವಾದರೆ, ಸರಸ್ವತಿಯದು ಮಾತೃ ಸೌಂದರ್ಯ. ‘ಸ್ವಪ್ರಕಾಶನಶೀಲಳಾದ ಈ ಸರಸ್ವತಿ ಜ್ಯೋತಿಯ ಮಹಾರ್ಣವವಾಗಿ ವಿಶ್ವದ ಧೀ ಶಕ್ತಿಯಿಂದ ರಾಜಿಸುತ್ತಾಳೆ’, – (ಋ೧-೩-೧೨) ಎಂದು ಧೀ ಸೌಂದರ್ಯದ ಮೂರ್ತಿಯಾದ ಸರಸ್ವತಿಯನ್ನು ಕುರಿತು ಋಷಿಗಳು ಹಾಡಿದ್ದಾರೆ. ಸತ್ಯವನ್ನು, ಸುಮತಿಯನ್ನು ಚೋದಿಸುವ ಸ್ಫೂರ್ತಿ ಅವಳು. ವಿಚಾರಶಕ್ತಿಯನ್ನು ಚೋದಿಸುವಳು ಮಾತ್ರವಲ್ಲ, ವಿಚಾರವನ್ನು ಶುದ್ಧಮಾಡುವವಳೂ ಹೌದು. ಎಂದರೆ ಸೌಂದರ್ಯ ಅಂತರಂಗದಲ್ಲಿ ಭಾಸವಾಗುವುದಷ್ಟೇ ಅಲ್ಲ; ಅಂತರಂಗವನ್ನು ಪರಿಶುದ್ಧವಾಗಿ ಮಾಡುವ ಶಕ್ತಿಯೂ ಹೌದು. ಹೀಗೆ ಎಲ್ಲ ಸೂಕ್ತಗಳಲ್ಲಿಯೂ, ಆತ್ಮನಿಷ್ಠವೋ, ಬುದ್ಧಿನಿಷ್ಠವೋ, ವಸ್ತುನಿಷ್ಠವೋ, ಎಲ್ಲ ಸೌಂದರ್ಯವೂ ಪ್ರಕಾಶನ ರೂಪವಾದುದು, ಜ್ಯೋತಿರೂಪವಾದುದು ಎನ್ನುವ ವಿಷಯ ಸ್ಪಷ್ಟವಾಗಿದೆ.

ವೇದ ಋಷಿಗಳು ದರ್ಶಿಸಿ ವರ್ಣಿಸಿರುವ ದೇವತೆಗಳೆಲ್ಲರೂ ಸೌಂದರ್ಯದ ಮೂರ್ತಿಗಳು. ಅವರೆಲ್ಲರೂ ಬಹುವರ್ಣೋಜ್ವಲ ರಮ್ಯರು. “ದೇವತೆಯ ದರ್ಶನ  ಎಂದರೆ, ಸೌಂದರ್ಯದ ಮತ್ತು ಕಾಂತಿಯ ದರ್ಶನವೇ. ಭಗವದ್ಗೀತೆ ಇದನ್ನೇ ವಿಭೂತಿಯೋಗ ಎನ್ನುತ್ತದೆ. ಈ ಕಾಂತಿಯ ವಿಶಿಷ್ಟಕಾರವೇ ಜ್ಯೋತಿ. ಇದನ್ನೇ ಅಮೂರ್ತಾರ್ಥದಲ್ಲಿ  ಭರ್ಗಸ್, ಮಹಸ್, ಶ್ರೀ, ವಪುಸ್, ಚಿತ್ರಾ – ಇತ್ಯಾದಿ ಹೆಸರಿನಿಂದ ನಿರ್ದೇಶಿಸಲಾಗಿದೆ. ಇಲ್ಲೆಲ್ಲಾ ‘ದೇವ’ ಎಂದರೆ ಹೊಳೆಯುವ, ತೇಜೋಮಯವಾದ ಎಂಬ ಅರ್ಥವಿದೆ.”[10] ಕಾಂತಿಯೇ ಈ ದೇವತೆಗಳ ಸಹಜ ಸ್ಥಿತಿ. ಕಂದು ಬಣ್ಣದವನೂ, ವಿವಿಧ ರೂಪನೂ, ಧಾತೃವೂ, ಯುವಕನೂ ಆದ ಇವನು ಸುವರ್ಣಾಲಂಕಾರ ಭೂಷಿತನಾದವನು – ಇವನೆ ಸೋಮ; ಪ್ರಕಾಶಮಾನ ಕುಂಡದಲ್ಲಿ ಆಡಗಿದವನು, ಮೇಧಾವಿಯಾದವನು – ಇವನು ಅಗ್ನಿ; ಪ್ರಕಾಶಮಾನನೂ ಉಗ್ರನೂ ಆದ ರುದ್ರ; ಸೂರ್ಯ ಚಕ್ಷುಸ್ಸನ್ನು ತೆರೆದು, ಹೊಂಬಣ್ಣದ ಉಡುಪನ್ನು ತೊಟ್ಟು, ಹೊನ್ನ ರಥವೇರಿ ಬರುವ ವರುಣ; ಸುವರ್ಣ ರಥಾರೂಢನಾದ ಸವಿತಾರ; ಉಷಾಪತಿಯಾದ ಅದಿತಿಪುತ್ರನಾದ ಸೂರ್ಯದೇವ; ಚಿರಯೌವನವತಿಯರಾದ ಉಷಾದೇವಿಯರು; ಕೇಸರಿ ವರ್ಣದ ರಥವನ್ನೇರಿ, ವಜ್ರಾಯುಧವನ್ನು ಹಿಡಿದು, ಸೋಮಪಾನ ಮಾಡುತ್ತಾ ಬರುವ ಇಂದ್ರ; ಬೆಂಕಿಯಂತೆ ಹೊಳೆಯುತ್ತಾ ಕೆಂಪು ಕುದುರೆಗಳನ್ನು ಹೂಡಿದ ರಥದಲ್ಲಿ ಸುವರ್ಣಾಭರಣ ಭೂಷಿತರಾಗಿ, ಸಿಂಹದಂತೆ ಆರ್ಭಟಿಸುತ್ತಾ, ಪರ್ವತಗಳನ್ನು ನಡುಗಿಸುತ್ತಾ ಬರುವ ಮರುತರು; ಕರುಗಳಂತೆ ಜಿಗಿಯುತ್ತಾ, ಬಿಡುಗೆಚ್ಚಲ ಧೇನುಗಳಂತೆ ಧಾವಿಸುತ್ತಾ, ಬೆದರಿದ ಹಾವಿನಂತೆ ಹಾರುತ್ತಾ, ರಥಕ್ಕೆ ಹೂಡಿದ ಕುದುರೆಗಳಂತೆ ನಡೆಯುವ ಅಪ್ಸರೆಯರು; ವಾಯುಕೇಶಗಳನ್ನು ಕೆದರಿ ವಿಹರಿಸುವ ಗಂಧರ್ವರು – ಇತ್ಯಾದಿ ಅನೇಕ ದೇವದೇವತೆಗಳ ಚಿತ್ರಣಗಳಲ್ಲಿ ಸೌಂದರ್ಯದ ವಿವಿಧ ವಿನ್ಯಾಸಗಳನ್ನು ನಾವು ಗುರುತಿಸಬಹುದು. ವೇದ ಋಷಿಗಳ ಧ್ಯಾನ ದರ್ಶಿತ ದೇವತೆಗಳ ಈ ವರ್ಣನೆಯೇ ಮುಂದಿನ ಶಿಲ್ಪ ಕಲಾಚಾರ‍್ಯರ ಪರಿಭಾವನೆಯ ವಸ್ತುಗಳಾಗಿ, ಭಾರತೀಯ ದೇವ ದೇವತಾ ವಿಗ್ರಹಗಳಿಗೆ ಮಾದರಿಗಳೂ ಆದುವೆನ್ನುವುದು ಗಮನಾರ್ಹವಾದ ಸಂಗತಿಯಾಗಿದೆ. ಈ ಎಲ್ಲ ವೈವಿಧ್ಯಮಯವಾದ ರೂಪಗಳೆಲ್ಲವೂ ದೃಷ್ಟಿಗ್ರಾಹ್ಯವೇ ಹೊರತು ಮುಷ್ಟಿಗ್ರಾಹ್ಯವಲ್ಲ. ಆದುದರಿಂದಲೇ ಎಲ್ಲವನ್ನೂ ಸಂಪೂರ್ಣವಾಗಿ ಮೂರ್ತರೂಪದಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಇಲ್ಲೆಲ್ಲಾ ಲಾಲಿತ್ಯದಿಂದ ಹಿಡಿದು ಭವ್ಯತೆಯವರೆಗೆ, ವಿವಿಧ ಭೂಮಿಕೆಗಳಲ್ಲಿ ವ್ಯಾಪಿಸುವ ದೇವತೆಯ ಚಿತ್ರಗಳಿವೆ. ಪುರುಷಸೂಕ್ತದ ವಿರಾಟ್ ಪುರುಷನನ್ನು ಯಾವ ಮೂರ್ತರೂಪದಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪುರುಷನ ಮೂರ್ತಿ ‘ಅತ್ಯತಿಷ್ಠದ್ದಶಾಂಗುಲ’ ವಾಗಿಯೇ ನಿಲ್ಲುತ್ತದೆ. ಆದರೆ ಈ ಎಲ್ಲ ದೇವದೇವತೆಗಳೂ ಸತ್ಯದ, ಧರ್ಮದ, ಋತದ ಪ್ರತಿಮೆಗಳು ಎಂಬುದನ್ನು ಮರೆಯಬಾರದು. “ವೇದಋಷಿಯ ದರ್ಶನಕ್ಕೆ ಜ್ಯೋತಿ ಮತ್ತುಸತ್ಯ – ಎರಡೂ ಸಮಾನಾರ್ಥಕ ಅಥವಾ ಸಮಾನವಾದ ಅರ್ಥವನ್ನು ಹೊಂದಿವೆ.”[11] ಈ ಅರ್ಥದಲ್ಲಿ ಸತ್ಯವೂ ಸೌಂದರ‍್ಯವೂ ಅವರ ದರ್ಶನದಲ್ಲಿ ಅಭಿನ್ನವಾದುವು. ಒಟ್ಟಿನಲ್ಲಿ “ಎಲ್ಲ ಋಕ್ಕುಗಳಲ್ಲಿಯೂ ಸೌಂದರ‍್ಯವೆನ್ನುವುದು ಒಂದು ಕಾಂತಿ, ನಿರಂತರವಾಗಿ ಮತ್ತು ಪ್ರಬಲವಾಗಿ ಪ್ರವಹಿಸುವ ಒಂದು ಪ್ರವಾಹ ಎಂಬಂತೆ ಭಾವಿಸಲಾಗಿದೆ. ಅದೊಂದು ಮನೋಹರವಾದ ಭಾವನೆಯಂತೆ ಅನುಭವಕ್ಕೆ ಬರುವುದಾದರೂ ವಾಸ್ತವವಾಗಿ ಈ ಎಲ್ಲ ಸೌಂದರ‍್ಯವೂ ವಸ್ತುನಿಷ್ಠವೇ. ಸೌಂದರ‍್ಯ ನಾವು ಗ್ರಹಿಸಿ ಆಸ್ವಾದಿಸಬೇಕಾದರೆ ನಮ್ಮ ಅನುಭವಕ್ಕೆ ಸಿಗುವ ವಸ್ತುವಾಗಬೇಕು. ಅದು ಏಕ ಕಾಲದಲ್ಲಿಯೇ ಪ್ರಕಾಶವೂ ಪ್ರಕಾಶನ ಮಾಧ್ಯಮವೂ ಎಂಬಂತೆ ಗ್ರಹಿಸಲ್ಪಟ್ಟಿದೆ.”[12]

“ವೇದ ಋಷಿಗಳು ಕೇವಲ ದೈವೀಕೌಶಲದ ಪ್ರಶಂಸೆಯಲ್ಲೇ ನಿಂತು ಮಾನುಷ ಸೌಂದರ‍್ಯವನ್ನು ಮರೆಯಲಿಲ್ಲ. ಮಾನವ ಮತ್ತು ನಿಸರ್ಗ ಸೌಂದರ‍್ಯವನ್ನೂ ಕುರಿತು ಅವರು ಹಾಡಿದ್ದಾರೆ. ಸೌಂದರ‍್ಯ ಭಾವದ ವಿಕಾಸಕ್ಕೆ ಸುಂದರವಾದ ಆವರಣ ಅಗತ್ಯ ಎನ್ನುವ ಅಂಶವನ್ನು ಅವರು ಗಮನಿಸಿದ್ದಾರೆ. ಅವರು ಕೊಡುವ ಉಪಮೆಗಳಲ್ಲಿ ಸುಂದರವಾದ ಯುವಕ, ಸುಂದರಳಾದ ಯುವತಿ; ಪ್ರಣಯಿ, ಪ್ರಣಯಿನಿ-ಇತ್ಯಾದಿ ಮಾತುಗಳು ಬರುತ್ತವೆ. ಉತ್ಸವಾದಿಗಳಲ್ಲಿ ನಲಿಯುವ ಸ್ತ್ರೀಯರು ಸೌಂದರ‍್ಯದ ಪರಿಪೂರ್ಣ ನಿದರ್ಶನಗಳು. ‘ನರ್ತಕಿಯರು ಉಷೆಯಂತೆ ಸಿಂಗರಿಸಿಕೊಳ್ಳುತ್ತಾರೆ’, (ಋ೧-೯೨-೪) ‘ಉತ್ಸವಕ್ಕೆ ಹೊರಟ ರಮಣಿಯರು ತಮ್ಮ ಚೆಲುವನ್ನು ಸಿಂಗರಿಸಿಕೊಂಡರು’ (೧-೧೧೨-೪) – ಇತ್ಯಾದಿ ವರ್ಣನೆಗಳಲ್ಲಿ ಸ್ತ್ರೀ ಸೌಂದರ‍್ಯವನ್ನು ವರ್ಣಿಸಿದ್ದಾರೆ…. ವಾಯು, ಸೋಮ, ಸೂರ‍್ಯ, ಉಷಸ್, ಇಲ್ಲೆಲ್ಲಾ ನಿಸರ್ಗ ಶಕ್ತಿಗಳ ಸೌಂದರ‍್ಯದ ಶಿವ-ರುದ್ರ ಮುಖಗಳನ್ನು ಹಾಡಿದ್ದಾರೆ. ಈ ನಿಸರ್ಗ ವೇದಋಷಿಗಳ ದೃಷ್ಟಿಗೆ ಸಾಂತ ಮತ್ತು ಅನಂತಗಳ ಸೋಪಾನ. ಒಟ್ಟಿನಲ್ಲಿ ಅವರು ಸಮಗ್ರ ಸೌಂದರ‍್ಯವನ್ನು ದರ್ಶಿಸಿದರು.”[13]

ವೇದಗಳಲ್ಲಿ ವರ್ಣಿತವಾಗಿರುವುದು ಬಹುವರ್ಣಮಯವಾದ, ವೈವಿಧ್ಯಪೂರ್ಣವಾದ ರೂಪಗಳಲ್ಲಿ ಗೋಚರಿಸುವ ಸೌಂದರ‍್ಯವಾದರೆ, ಉಪನಿಷತ್ತುಗಳು ಈ ರೂಪಗಳಿಗೆಲ್ಲ ಮೂಲರೂಪವಾದ ಅಥವಾ ರೂಪಾತೀತವಾದ ಅರೂಪ ಸೌಂದರ‍್ಯದ ವಿಚಾರವನ್ನು ಒತ್ತಿ ಹೇಳುತ್ತವೆ. “ಆ ಪರಮ ರೂಪ ನಮ್ಮ ದೃಷ್ಟಿವಲಯಕ್ಕೆ ಮೀರಿದ್ದು; ಈ ಕಣ್ಣುಗಳಿಂದ ಅದನ್ನೆಂದೂ ನೋಡಲು ಸಾಧ್ಯವಿಲ್ಲ. ಈ ರೂಪಲೋಕದ ಚೆಲುವಿನಂತೆ ಅದೂ ಸುಂದರವೇ. ಆ ನಿರಾಕಾರ ಸೌಂದರ‍್ಯವೇ ಎಲ್ಲದರ ಸಾರ ಸರ್ವಸ್ವ, ಅದೇ ರಸ; ಅದೇ ಸೌಂದರ‍್ಯದ ಆತ್ಮ. ಅದೇ ಉಪನಿಷದ್ ಋಷಿಯ ಕಾವ್ಯ ಸೃಷ್ಟಿಯ ಪ್ರೇರಣೆ, ಹಾಗೂ ಅನುಭವ. ಈ ರೂಪಲೋಕದಲ್ಲಿ ಬಹುರೂಪಿಯಾಗಿ ಅಭಿವ್ಯಕ್ತಗೊಂಡಿರುವ ಸಮಸ್ತ ಚೆಲುವಿನ ಮೂಲ ರಹಸ್ಯವೂ ಅದೇ; ಅಲ್ಲಿಂದಲೇ ಈ ಎಲ್ಲವೂ ಹೊರಹೊಮ್ಮಿದೆ. ಈ ಅರೂಪ ಸೌಂದರ‍್ಯ ಉಪಮಾತೀತವಾದುದು, ‘ನ ತಸ್ಯ ಪ್ರತಿಮಾ ಆಸ್ತಿ’. ಈ ಲೋಕ ಪ್ರಜ್ಞೆ ಗ್ರಹಿಸುವಂತಹ ಒಂದು ಆಕಾರಕ್ಕೆ ಅದನ್ನು ನಿರ್ದಿಷ್ಟಗೊಳಿಸಲಾಗುವುದಿಲ್ಲ. ಆದರೂ ಅದರ ಪ್ರಧಾನ ಲಕ್ಷಣವನ್ನು ಉಪನಿಷತ್ತು ‘ರವಿತುಲ್ಯರೂಪಾಃ”, ಸೂರ‍್ಯಸದೃಶರೂಪವುಳ್ಳದ್ದು ಎನ್ನುತ್ತದೆ. ‘ವಿರಜಂ ಶುಭ್ರಂ ಜ್ಯೋತಿಷಾಂ ಜ್ಯೋತಿಃ” ಎನ್ನುತ್ತದೆ. ಅದು ಶುಭ್ರವಾದ, ಸ್ಪಷ್ಟವಾದ, ಛಾಯಾರಹಿತವಾದ ಜ್ಯೋತಿಗಳ ಜ್ಯೋತಿ. ಅದರ ಮತ್ತೊಂದು ಲಕ್ಷಣ ಆನಂದ. “ಆನಂದರೂಪಂ ಯದ್ವಿಭಾತಿ”, ಯಾವುದು ಹೀಗೆ ಪ್ರಕಾಶಿಸುತ್ತದೆಯೋ ಅದು ಆನಂದ ರೂಪವಾದುದು.”[14]

ಯಾವುದನ್ನು ವೇದ ಋಷಿಗಳು ‘ಜ್ಯೋತಿ’ ಎಂದು ವರ್ಣಿಸಿದರೋ, ಯಾವ ಜ್ಯೋತಿ ಹೀಗೆ ಸಮಸ್ತ ವಸ್ತುಗಳ ಮಾಧ್ಯಮದಲ್ಲಿ ಸೌಂದರ‍್ಯವಾಗಿ ವ್ಯಕ್ತವಾಗಿದೆ ಎಂದು ಹೇಳಿದರೋ, ಅದು ಪರಮ ಆನಂದರೂಪವಾದುದು, ಅಮೃತವಾದುದು ಎಂದು ಉಪನಿಷತ್ತು ಘೋಷಿಸುತ್ತದೆ. ಆನಂದವೇ ಸಮಸ್ತ ವ್ಯಾಪಾರಗಳ ಮೂಲ ಮತ್ತು ಚೂಲ. ‘ಆನಂದದಿಂದ ಈ ಸೃಷ್ಟಿಹೊಮ್ಮಿದೆ, ಆನಂದದಲ್ಲಿಯೇ ಬಾಳುತ್ತಿದೆ, ಆನಂದದಲ್ಲಿಯೇ ಸಂಗಮಿಸುತ್ತದೆ. ಆನಂದವನ್ನೇ ಬ್ರಹ್ಮನೆಂದು ತಿಳಿ. (ತೈತ್ತಿರೀಯ; ಭೃಗುವಲ್ಲೀ ೬) ಎಂದು ಉಪನಿಷತ್ತು ಹೇಳುತ್ತದೆ. ಸತ್-ಚಿತ್-ಆನಂದ ಎನ್ನುವ ಬ್ರಹ್ಮನ ತ್ರಿತ್ವ ಮುಖಗಳಲ್ಲಿ ಸತ್ ಮತ್ತು ಚಿತ್ ಇವುಗಳ ವಿಷಯವನ್ನು ವೇದಗಳು ಒತ್ತಿ ಹೇಳಿದರೆ, ಆನಂದದ ವಿಷಯವನ್ನು ಉಪನಿಷತ್ತುಗಳು ಒತ್ತಿ ಹೇಳುತ್ತವೆ. “ಯಾವುದು ಈ ಸೃಷ್ಟಿಯಾಗಿ ಅಭಿವ್ಯಕ್ತವಾಗಿದೆಯೋ ಅದೆಲ್ಲವೂ ಸಚ್ಚಿದಾನಂದವೆ. ಅದು ಸ್ವರೂಪತಃ ಸೃಷ್ಟಿಶೀಲವಾದುದು. ಅನಂತ ನಾಮರೂಪಗಳಾಗಿ ಅದು ತನ್ನನ್ನು ತಾನೇ ಅಭಿವ್ಯಕ್ತಗೊಳಿಸಿಕೊಳ್ಳುವುದರ ಮೂಲಕ  ನಿರಂತರವಾಗಿ ಆನಂದವನ್ನು ಆಸ್ವಾದಿಸುತ್ತದೆ.”[15] ಈ ಆನಂದವೇ ಬ್ರಹ್ಮ ರೂಪಿಯಾದುದು. ಅದನ್ನೇ ‘ಸತ್ಯಂ ಜ್ಞಾನಂ ಅನಂತಂ’ ಎಂದು ಕರೆಯಲಾಗಿದೆ. ಬಹುರೂಪಿಯಾಗಿ ವ್ಯಕ್ತವಾಗಿರುವ ಅದರ ಸ್ವರೂಪವನ್ನು ಧೀರರು ಮಾತ್ರ ಅರಿತುಕೊಳ್ಳಬಲ್ಲರು. ಆ ಮೂಲ ಪುರುಷನ ಸ್ವರೂಪವನ್ನು ಕುರಿತು “ಯಾರು ಸೂರ‍್ಯ ಚಂದ್ರಾದಿಗಳಲ್ಲಿ ನೆಲಸಿದರೂ, ಯಾರನ್ನು ಸೂರ್ಯಚಂದ್ರಾದಿಗಳು ಅರಿಯರೋ, ಯಾರು ಸೂರ್ಯಚಂದ್ರ ಶರೀರಿಯಾಗಿದ್ದು ಅವುಗಳನ್ನು ನಿಯಮಿಸುವನೋ ಅವನೇ ಆತ್ಮನು; ಅಂತರ‍್ಯಾಮಿಯು; ಅಮೃತನು” (ಬೃಹದಾರಣ್ಯಕ ೩-೭-೧೧) ಎಂದು ಉಪನಿಷತ್ತು ಸಾರುತ್ತದೆ. “ಆ ಮೂಲ ಪುರುಷನೇ ಹೃದಯದಲ್ಲಿ ಸನ್ನಿವಿಷ್ಟನಾದ ವಿಶ್ವಕರ್ಮ; ಅವನ ಕರ್ಮವೇ ಈ ವಿಶ್ವ ಎಲ್ಲವೂ. ಅವನು ಮೂರ್ತ, ಅಮೂರ್ತ, ಮರ್ತ್ಯ, ಅಮೃತ, ಸ್ಥಿರ, ಚರ, ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಎಂಬ ದ್ವಿವಿಧ ಭಾವಗಳಲ್ಲಿ ವ್ಯವಹರಿಸುತ್ತಿದ್ದಾನೆ.” (ಬೃಹದಾರಣ್ಯಕ ೨-೩-೧) ಉಪನಿಷತ್ತಿನ ಋಷಿ ಕಂಡದ್ದು ಇಂಥ ಕಲ್ಯಾಣತಮವಾದ, ಹಾಗೂ ಶಿವತಮವಾದ ಆ ಮೂಲರೂಪವನ್ನು. ಅದು ರಸಮಯ ಮತ್ತು ಜ್ಯೋತಿರ‍್ಮಯ. ಪರಮ ಸತ್ಯದ ಸ್ವರೂಪ ಲಕ್ಷಣವೇ ಇದು.

ವೇದಋಷಿಗಳ ವಾಣಿಯಲ್ಲಿ ಎರಡು ರೀತಿಯನ್ನು ಗಮನಿಸಬಹುದು; ಒಂದು ಇದೆಲ್ಲವೂ ಆ ಪರಬ್ರಹ್ಮನ ಆನಂದಾಭಿವ್ಯಕ್ತಿ; ತಿಳಿಯಬೇಕಾದದ್ದು ಈ ಸತ್ಯವನ್ನೇ ಎನ್ನುವುದು. ಮತ್ತೊಂದು, ಈ ಲೋಕವೆಲ್ಲಾ ಕೇವಲ ತೋರಿಕೆ; ನಿಜವಾಗಿ ತಿಳಿಯಬೇಕಾದದ್ದು ಇದರ ಮೂಲವಾದ ಆ ಪರಮ ಸತ್ಯವನ್ನೆ – ಎನ್ನುವುದು. ಈ ಎರಡು ದೃಷ್ಟಿಗಳಲ್ಲೂ ನಾವು ಸದ್ಯಕ್ಕೆ ಗಮನಿಸಬೇಕಾದುದು, ಅವರ ದೃಷ್ಟಿಗೆ ಸೌಂದರ್ಯಕ್ಕಿಂತ ಸತ್ಯವೇ ಪ್ರಧಾನ ಎಂಬ ಅಂಶವನ್ನು. ಆದರೆ ಅವರು ಸೌಂದರ್ಯವನ್ನು ಕಡೆಗಣಿಸಿದರೆಂದು ಅರ್ಥವಲ್ಲ. “ಅವರ ಸೌಂದರ‍್ಯಾನುಭವಕ್ಕೂ, ಸೌಂದರ್ಯ ಪ್ರಿಯತೆಗೂ ನಮಗೆ ವಿಪುಲವಾದ ನಿದರ್ಶನಗಳು ದೊರೆಯುತ್ತವೆಯಾದರೂ, ಜೀವನದ ಎಲ್ಲ ನಿರ್ದುಷ್ಟ ಸಂತೋಷಗಳನ್ನು ಅವರು ಒಲಿದರೂ ಅದೆಲ್ಲದರ ಮೂಲ ಸೂತ್ರವಾದ ವಿಶ್ವರಹಸ್ಯದ ಸಾಕ್ಷಾತ್ಕಾರಕ್ಕೆ ಅವರ ಚೇತನ ಪ್ರಬಲವಾಗಿ ತುಡಿಯಿತು; ಈ ಮನಮೋಹಕವಾದ ಸೌಂದರ್ಯ ಭವ್ಯತೆಗಳೇ ಸರ್ವಸ್ವವಲ್ಲ; ಈ ಜೀವನವೇ ಪರಮವಲ್ಲ; ಸೌಂದರ್ಯವಾಗಲೀ ಜೀವನವಾಗಲೀ ವಿಶ್ವದ ರಹಸ್ಯವನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ”[16] ಎಂಬ ಅರಿವಿನಿಂದ ಕೂಡಿದ ಸತ್ಯ ಸಾಕ್ಷಾತ್ಕಾರದ ಹಂಬಲವೇ ಅವರಿಗೆ ಪ್ರಧಾನ. ಈ ಸಾಕ್ಷಾತ್ಕಾರದ ಹಂಬಲಗಳನ್ನೇ ಪ್ರತಿಮಾರೂಪದಲ್ಲಿ ಕಾವ್ಯವಾಣಿಯಲ್ಲಿ ಹಾಡಿದ್ದಾರೆ. ಹಾಗೆ ನೋಡಿದರೆ ಅವರ ಅನುಭವದಲ್ಲಿ ಸತ್ಯ ಮತ್ತು ಸೌಂದರ್ಯ ಎಂದು ನಾವೆಂದುಕೊಳ್ಳುವ ವಿಭಜನೆಗಳಿಲ್ಲ. ಋಷಿಗಳನ್ನು ಸತ್ಯದ್ರಷ್ಟಾರರೆಂದು ಹೇಳಲಾಗಿದೆಯೇ ಹೊರತು ಸೌಂದರ್ಯ ದ್ರಷ್ಟಾರರೆಂದೇನೂ ಕರೆದಿಲ್ಲವೆಂಬುದು ನಿಜ; ಆದರೆ ವಾಸ್ತವವಾಗಿ ಅಲ್ಲಿ ಸತ್ಯ ಮತ್ತು ಸೌಂದರ್ಯಕ್ಕೆ ಅಂತಹ ವ್ಯತ್ಯಾಸವೇನೂ ಇಲ್ಲ. ಅಲ್ಲಿ ಸತ್ಯವೇ ಸೌಂದರ್ಯ. ಸೌಂದರ್ಯವೇ ಸತ್ಯ.

ವೇದೋಪನಿಷತ್ತುಗಳ ಕಾವ್ಯಸೌಂದರ್ಯದ ವಿಮರ್ಶೆ ಇಲ್ಲಿ ಅಪ್ರಕೃತವಾದರೂ, ಕಲಾಸೌಂದರ್ಯವನ್ನು ಕುರಿತು ಅವರು ಏನು ಹೇಳಿದ್ದಾರೆ ಎನ್ನುವುದನ್ನು ಒಂದು ಮಾತಿನಲ್ಲಿ ಸೂಚಿಸಬಹುದು : “ಈ ಋಷಿಗಳು ಕಲೆಯನ್ನು ಮತ್ತು ಚೆಲುವನ್ನು ತಮ್ಮ ಸುತ್ತಣ ಪರಿಸರದಲ್ಲಿಯೇ ಗುರುತಿಸಿ, ದೈನಂದಿನ ವಸ್ತುಗಳನ್ನೇ ಪ್ರತಿಮೆಗಳನ್ನಾಗಿ ಬಳಸಿ ತಮ್ಮ ಅನುಭವಕ್ಕೆ ಉಕ್ತಿಯನ್ನು ನೀಡಿದರು. ಆದುದರಿಂದ ಇವರ ಉಪಮೆಗಳಾಗಲೀ, ರೂಪಕಗಳಾಗಲೀ ಸರಳ ಮತ್ತು ಸುಂದರ”[17] “ಅವರು ತಮ್ಮ ಕಾವ್ಯದ ಬಗೆಗೆ ಅವು ಗಂಭೀರ, ಮನೋಹರ, ಮಧುರ, ಪ್ರಾಮಾಣಿಕ ಸ್ಫೂರ್ತಿವಾಹಿನಿಗಳೆಂದು ಹೇಳಿಕೊಂಡಿದ್ದಾರೆ. ಅಲಂಕಾರಾದಿ ವೈಚಿತ್ರ್ಯಗಳ ಬಗೆಗೆ ಸಂಪೂರ್ಣವಾದ ಹತೋಟಿಯನ್ನು ಇಟ್ಟುಕೊಂಡಿದ್ದಾರೆ. ಅವರ ವಾಣಿ ನಯವಾಗಿ, ಸುಸಂಸ್ಕೃತವಾಗಿ, ಸೌಂದರ‍್ಯಾನುಭವಕ್ಕೆ ಸಹಜವಾದ ಸರಳತೆಯಿಂದ ಕೂಡಿದೆ. ಕಾವ್ಯ ಎಂಬುದು ಸೃಷ್ಟಿ. ಅದರಲ್ಲಿ ಆಡುವ ಉಸಿರು ದೈವೀ ಸ್ಫೂರ್ತಿ – ಎಂದು ಅವರ ನಂಬಿಕೆ. ಅವರ ಹಾಡುಗಳು ಚಿತ್ರಃ, ಶುಚಿಃ ಶುಕ್ರ; ಅವರು ಬಳಸಿರುವುದು ಬರಿಯ ಪದಗಳಲ್ಲ ‘ಜ್ಯೋತಿರಗ್ರ’ಗಳು. ಒಬ್ಬ ಕವಿ ಹೀಗೆ ಹೇಳುತ್ತಾನೆ: ‘ನನ್ನೆದೆಯೊಳಗಿನ ಇಚ್ಛೆ ಮತ್ತು ಆಲೋಚನೆಗಳು ಈ ಶಕ್ತಿಯನ್ನು ಹೊಮ್ಮಿಸುತ್ತವೆ. ಅವು ಲೋಕಾದ್ಯಂತವೂ ವ್ಯಾಪಿಸಲು ಪ್ರೀತಿಯಿಂದ ಹಾತೊರೆಯುತ್ತವೆ. ನಿನ್ನ ಹೊರತು ಮತ್ತಾರೂ ಆಶ್ರಯದಾತರಿಲ್ಲ. ನನ್ನ ಬಯಕೆಗಳೆಲ್ಲ ದೇವನಿಷ್ಠಿತವಾಗಿವೆ’ (ಋ ೧೦-೬೪-೨) ಹೀಗೆ ಸೌಂದರ್ಯವಾಗಿ ಹೊರಹೊಮ್ಮಿದ ಕವಿ ವಾಣಿ ಪಾವಕವರ್ಣ ಉಳ್ಳವು ಮತ್ತು ಶುಚಿಯಾದವು.”[18] “ಇವರೆಲ್ಲಾ ನೆಲ ಮುಗಿಲಿನ ಸೌಂದರ್ಯಗಳನ್ನು ಪರಿಭಾವಿಸಿ ಆ ಸೌಂದರ‍್ಯಾನುಭವಗಳನ್ನು ಹಾಡುಗಳಲ್ಲಿ ತೋಡಿಕೊಂಡು ಹೃದಯವನ್ನು ಹಗುರಮಾಡಿಕೊಂಡ ಕಾವ್ಯಾತ್ಮಗಳು… ನಿಸರ್ಗಪ್ರೀತಿ ಎಂದರೇನೆಂಬುದನ್ನು ಅವರು ಬಲ್ಲವರು, ಅದರ ಸೋಜಿಗಗಳಲ್ಲಿ ಕರಗಿ ತಮ್ಮ ಮತ್ತು ನಿಸರ್ಗದ ಸಾಮರಸ್ಯವನ್ನು ಕಂಡವರು”[19] ಅವರ ಸಾಮರಸ್ಯದ ಸಾಮಗಾನಕ್ಕೆ ದಿವ್ಯ ಕಾವ್ಯವಾದ ಸೃಷ್ಟಿಯೇ ಸ್ಫೂರ್ತಿ. ಈ ಚಿರಂತನ ಸೌಂದರ್ಯದಿಂದ ಹೊಮ್ಮಿದ ಗೀತೆಗಳೂ ಸುಂದರವಾಗಿ ಮೈದೋರಿದುವು. ಅವುಗಳ ಮಹತ್ವವನ್ನು ಕುರಿತು ಒಬ್ಬ ಋಷಿ,

ಮರೆಯದಿರು ಗಾಯಕನೆ ಈ ನಿನ್ನ ವಾಣಿ
ಯುಗ ಯುಗಾಂತರದಲ್ಲು ಪಡಿಮಿಡಿವುದು.       (ಋ
III.೩೩-೨)

ಎಂದು ತಮ್ಮ ಕಲಾಕೃತಿಯ ಅಮರತ್ವವನ್ನು ಘೋಷಿಸಿದ್ದಾನೆ. ಈ ಋಷಿಗಳ ವಾಣಿ ಎಲ್ಲವೂ ಅತ್ಯುತ್ತಮ ಕಲೆ. “ಕಲೆ ಅದರ ಪರಿಪೂರ್ಣ ಸ್ಥಿತಿಯಲ್ಲಿ ಸರಳತಮವೂ, ಸಂಪ್ರದಾಯಾತೀತವೂ ಆಗುತ್ತದೆ. ಯಾವುದು ಕಲೆಯಾಗುವಿಕೆಯನ್ನೆ ಗುರಿಯಾಗಿಟ್ಟುಕೊಳ್ಳದೆ ಕೃತಿಯಾಗುವುದೋ ಅದೇ ಅತ್ಯುತ್ತಮ ಕಲಾಕೃತಿ. ತಮ್ಮ ಉಕ್ತಿ ಕಲಾ ಸೌಂದರ್ಯವಾಗಬೇಕೆಂಬ ಉದ್ದೇಶ ಉಪನಿಷತ್ತುಗಳಲ್ಲಿಲ್ಲ; ಆದರೆ ಸೌಂದರ್ಯ ಪ್ರಜ್ಞೆ ಇದೆ. ಅದು ಅಂತಃಪ್ರಜ್ಞೆಯಲ್ಲಿ ಪ್ರತಿಷ್ಠಿತವಾಗಿದೆ. ಈ ಪ್ರಜ್ಞೆ ಪೂರ್ಣ ಪ್ರಜ್ಞೆಯನ್ನೆ ಅರಸುತ್ತಿದೆ; ಸತ್ಯಕ್ಕಾಗಿ ಹೊರಟಿದೆ. ಈ ಸತ್ಯದ ಅರಿವು ಆನಂದದ ಅರಿವೂ ಹೌದು. ಆ ಆನಂದವೇ ಅಮೃತತ್ವ, ವಿಶ್ವಮೂಲವಾದ ರಸ ಅಥವಾ ಅತ್ಯಗತ್ಯವಾದ ಸಾಮರಸ್ಯ ಅಥವಾ ಸೌಂದರ್ಯ.”[20] ಈ ಸೌಂದರ್ಯ ಜ್ಯೋತಿ ಮತ್ತು ಆನಂದವೆಂದು ಹೇಳಲ್ಪಟ್ಟಿದೆ. ಆ ಪರಮಾನಂದದ ಜೋತಿ ಸ್ಪಂದನದ ತರಂಗವೇ ಸೌಂದರ್ಯ ಎನ್ನುವುದನ್ನು ಋಷಿಗಳು ಗುರುತಿಸಿದ್ದಾರೆ. ಆ ಜ್ಯೋತಿ ಹೇಗೆ ಎಲ್ಲಾ ವಸ್ತುಗಳಲ್ಲಿಯೂ ಬಗೆ ಬಗೆಯಾಗಿ ವ್ಯಕ್ತವಾಗಿದೆ, ಅದರ ವಿನ್ಯಾಸಗಳೇನು ಎಂಬುದನ್ನು ಗುರುತಿಸಿದ್ದಾರೆ. ಅಂತರ‍್ಯಾಮಿಯೂ, ಅತೀತವೂ, ನಿತ್ಯನೂತನವೂ, ಕಲ್ಯಾಣತಮವೂ ಆದ ಆ ರೂಪವನ್ನು ವರ್ಣಿಸುವುದರ ಮೂಲಕ ಮಾನವಮತಿಯನ್ನು ಊಹಾತೀತವಾದ ಎತ್ತರಕ್ಕೆ ಏರಿಸಿದ್ದಾರೆ. “ಜೀವನ ಪ್ರೀತಿ ಮತ್ತು ಕ್ರಿಯಾಶಕ್ತಿಯಿಂದ ನಿರ್ಭರವಾದ, ಸ್ಫೂರ್ತಿಯ ಆಲಂಬನಕ್ಕೆ ಭಗವತ್ಪರವಾದ ಶ್ರದ್ಧೆಯನುಳ್ಳ ಒಂದು ಆನಂದದಾಯಕವಾದ ಜ್ಯೋತಿರಾತ್ಮದಿಂದ ಈ ಸೌಂದರ್ಯವಾಣಿ ಹೊಮ್ಮಿದೆ”[21] ಪರಮ ಸೌಂದರ್ಯದ ಆರಾಧಕರಾದ ಋಷಿಗಳು ಕಂಡ “ಆ ಪರಮ ಸೌಂದರ್ಯವೇ ಎಲ್ಲ ಇರವಿನ ಮೂಲ. ಆ ಪರಮ ತತ್ವ ಪ್ರಧಾನವಾಗಿ ಸೌಂದರ್ಯ ಅಥವಾ ಆನಂದರೂಪಿಯಾದುದು; ಉಳಿದ ಎಲ್ಲವೂ ಅದರ ಆವಿಷ್ಕಾರ ಎನ್ನುವ ಈ ಒಂದು ಭಾವವೇ ನಮ್ಮ ಭಾರತೀಯ ಸೌಂದರ್ಯ ಮೀಮಾಂಸೆಗೆ ಮೊದಲ ಮುನ್ನುಡಿಯಾಯಿತು.”[22]


[1] ಕಠೋಪನಿಷತ್ : ಪು 2-15

[2] ಅಲ್ಲೇ: ಪು 2-15

[3] ಮುಂಡಕ : ಪು 2-15

[4] ಶ್ರೀ A.C. Bose ಅವರ The call of the vedas ಎಂಬ ಪುಸ್ತಕದಲ್ಲಿರುವ ಇಂಗ್ಲಿಷ್ ಅನುವಾದಗಳನ್ನೆ ಉದ್ದಕ್ಕೂ ಕನ್ನಡಿಸಿ ಬಳಸಲಾಗಿದೆ.

[5] A.C. Bose: The Call of the Vedas: p. 157-158

[6] A.C. Bose: The Call of the Vedas  p 44

[7] Nalinikantha Gupta: The approach to Mysticism: p 77-78

[8] Maxmullar : History of Sanskrit Literature:  p. 557

[9] Maxmullar : Lectures on Science of Language: p 481-82

[10] A.C. Bose: The Call of the Vedas:  p 26-27

[11] Sri Aurobindo: On the Veda : p 525

[12] P.S. Sastry: The Rigvedic Philosophy of the Beautiful, (Annals of Bhandarkar Oriental Research Institute. Vol 32-1951. p.111.

[13] ಅಲ್ಲೆ : ಪು ೧೧೬-೧೧೭;೧೨೧,

[14] Nalini Kantha Gupta: The Approach to Mysticism   p 70-71

[15] Sri Aurobindo : Life Divine Vol-I   p. 139

[16] K.A. Krishnaswamy lyengar: Vedanta or The Science of Reality: p 4

[17] P.S. Sastry: The Images of Rigveda: Annals of Bhandarkar Oriental                             Research  Institute, Vol. 129-1948 p. 153.

[18] P.S. Sastry: Rigvedic Philosophy of the Beautiful.Annals of Bhandarkar, Oriental research institute, Vol  132; 1951, p 120-21

[19] S. Radhakrishnan: Indian Philosophy : p. 71 and 73

[20] Nalinikant Gupta : The approach to Mysticism : p. 76

[21] A.C. Bose; The call of the Vedas: p.2

[22] A.C. Sastry: Studies in Sanskrit Aesthetics : p. 15