ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ನಾವು ಎದುರಿಸುತ್ತಿರುವ ಸಮಸ್ಯೆಯೆಂದರೆ ಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಡುವ ಸಂಗತಿಯಾಗಿದೆ. ಪ್ರತಿಯೊಂದು ಮಗುವಿಗೆ ೧೦ ವರ್ಷಗಳ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಮತ್ತು ಉಚಿತವಾಗಿ ಒದಗಿಸುವ ಜವಾಬುದಾರಿಗೆ ಸಮಾಜವು ಬದ್ಧವಾಗಿದೆ. ಆದರೆ ೧೦ ವರ್ಷಗಳ ಶಾಲಾಶಿಕ್ಷಣವನ್ನು ಪಡೆಯುವ ಭಾಗ್ಯ ಅನೇಕ ಮಕ್ಕಳಿಗಿರುವುದಿಲ್ಲ. ಇದಕ್ಕೆ ಬಡತನವನ್ನು ಮುಖ್ಯ ಕಾರಣವನ್ನಾಗಿ ನೀಡುತ್ತಾ ಬರಲಾಗಿದೆ. ಆದರೆ ಮಕ್ಕಳು ಶಾಲೆಯನ್ನು ಬಿಡಲು ಅನೇಕ ಕಾರಣಗಳು ಸಾಧ್ಯ. ಅದಕ್ಕೆ ಬಡತನವನ್ನು ಮಾತ್ರವೇ ಕಾರಣ ಮಾಡುವುದು ಸೂಕ್ತವೆನಿಸುವುದಿಲ್ಲ.

[1]

ಅನೇಕ ಸಾಮಾಜಿಕ-ರಾಜಕೀಯ-ಚಾರಿತ್ರಿಕ ಕಾರಣಗಳು ಇದರ ಹಿಂದಿರಲು ಸಾಧ್ಯ. ಮೊದಲ ತಲೆಮಾರಿನ ಅಕ್ಷರಸ್ಥ ಮಕ್ಕಳ ಸಮಸ್ಯೆ ಒಂದು ಬಗೆಯದ್ದಾದರೆ ವಲಸೆ ಹೋಗುವ ಕುಟುಂಬಗಳಲ್ಲಿನ ಮಕ್ಕಳ ಸಮಸ್ಯೆ ಇದಕ್ಕಿಂತ ಭಿನ್ನವಾಗಿದೆ. ಈಚಿನ ಅಧ್ಯಯನಗಳು ತೋರಿಸಿರುವಂತೆ ಶಾಲೆಯೊಳಗಿನ ವಾತಾವರಣವೂ ಬಹಳ ಮುಖ್ಯ. ಮಕ್ಕಳಿಗೆ ಶಾಲೆ-ಪಾಠ ಆಕರ್ಷಣೀಯವಾಗುವಂತೆ ಮಾಡುವುದು, ಉಚಿತ ಊಟ, ಪಠ್ಯಪುಸ್ತಕ, ಸಮವಸ್ತ್ರ ಮುಂತಾದವುಗಳನ್ನು ಒದಗಿಸುವುದು ಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಡುವುದನ್ನು ಕಡಿಮೆ ಮಾಡಬಲ್ಲವು. ಆವರ್ತನ ರೀತಿಯ ವಲಸೆಯು ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಉದ್ಯೋಗ ಭದ್ರತೆಯ ಪಾತ್ರ ತುಂಬಾ ಮುಖ್ಯವಾಗುತ್ತದೆ. ಈ ಸಮಸ್ಯೆಯು ದಲಿತ ಮಕ್ಕಳಲ್ಲಿ ಅಧಿಕವಾಗಿರುವುದು ಅಚ್ಚರಿಯ ಸಂಗತಿಯೇನಲ್ಲ. ಹಾಗೆಯೇ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಡುವುದು ಅಧಿಕ. ಹೀಗೆ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗೆ ಅನೇಕ ಮುಖಗಳಿವೆ.

ಇದನ್ನು ತಡೆಗಟ್ಟುವ ಕಾರ್ಯಯೋಜನೆಯೂ ಕೂಡ ಬಹುರೂಪಿಯಾಗಿರ ಬೇಕಾಗುತ್ತದೆ. ಆದರೆ ಸರ್ಕಾರವು ಶಾಲಾ ಸೌಲಭ್ಯಗಳನ್ನು ಅಧಿಕಗೊಳಿಸುವುದರ ಮತ್ತು ಅದನ್ನು ಉತ್ತಮಪಡಿಸುವುದರ ಮೂಲಕ ಸಮಸ್ಯೆಯನ್ನು ತಡೆಗಟ್ಟಬಹುದೆಂದು ತಿಳಿದಿರುವಂತಿದೆ. ಆದರೆ ಅವಕಾಶಗಳನ್ನು ಒಂದು ಕಡೆ ವಿಸ್ತರಿಸಿದಂತೆ ಇನ್ನೊಂದು ಕಡೆ ಅವುಗಳನ್ನು ಧಾರಣೆ ಮಾಡಿಕೊಳ್ಳಲು ಅವಶ್ಯವಾದ ಜನರ ಸಾಮರ್ಥ್ಯವನ್ನು ಉತ್ತಮ ಪಡಿಸಬೇಕಾಗುತ್ತದೆ. ದಲಿತರು ಹಾಗೂ ಹಿಂದುಳಿದ ವರ್ಗಗಳ ವಿಷಯದಲ್ಲಿ ಇದು ಬಹಳ ಮುಖ್ಯವಾಗಿದೆ.

ಕೋಷ್ಟಕ-೯ರಲ್ಲಿ ೧ರಿಂದ ೭ನೆಯ ತರಗತಿಗೆ ಸಂಬಂಧಿಸಿದ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳ ಪ್ರಮಾಣವನ್ನು ಜಿಲ್ಲಾವಾರು ನೀಡಲಾಗಿದೆ. ಅದನ್ನು ನಕ್ಷೆಯ ಮೂಲಕವೂ ತೋರಿಸಲಾಗಿದೆ. ಈ ಕೋಷ್ಟಕ ಹಾಗೂ ನಕ್ಷೆಗಳು ಸಮಸ್ಯೆಯ ಪ್ರಮಾಣ ಹಾಗೂ ಅದರ ಪ್ರಾದೇಶಿಕ ಸ್ವರೂಪವನ್ನು ತೋರಿಸುತ್ತವೆ. ರಾಜ್ಯಮಟ್ಟದಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳ ಪ್ರಮಾಣವು ಶೇ. ೧೪.೪೭ರಷ್ಟಿದೆ. ಆದರೆ ಬೆಂಗಳೂರು ನಗರ ಜಿಲ್ಲೆ                     (ಶೇ. ೧೫.೯೩) ದಾವಣಗೆರೆ (ಶೇ. ೧೪.೪೦) ಮತ್ತು ಕೋಲಾರ (ಶೇ. ೧೧.೮೮)ಗಳನ್ನು ಬಿಟ್ಟರೆ ಉಳಿದಂತೆ ದಕ್ಷಿಣ ಕರ್ನಾಟಕದಲ್ಲಿ ಇದರ ಪ್ರಮಾಣವು ಶೇ. ೧೦ ಮತ್ತು ೧೦ಕ್ಕಿಂತ ಕಡಿಮೆಯಿದೆ. ಆದರೆ ರಾಜ್ಯದ ಬೆಳಗಾವಿ ವಿಭಾಗ ಹಾಗೂ ಗುಲಬರ್ಗಾ ವಿಭಾಗಗಳಲ್ಲಿ ಸಮಸ್ಯೆಯ ಪ್ರಮಾಣ ತೀವ್ರವಾಗಿದೆ. ಬೆಳಗಾವಿ ವಿಭಾಗದ ಮೂರು ಜಿಲ್ಲೆಗಳಲ್ಲಿ ಅದು ಶೇ. ೨೦ಕ್ಕಿಂತ ಅಧಿಕವಿದೆ. ಈ ಸಮಸ್ಯೆಯು ಅತ್ಯಂತ ಗಂಭೀರ ಸ್ವರೂಪದಲ್ಲಿರುವುದು ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಎಂಬುದು ಗಮನಿಸಬೇಕಾದ ಸಂಗತಿ. ಈ ವಿಭಾಗದ ೫ ಜಿಲ್ಲೆಗಳ ಪೈಕಿ ಮೂರರಲ್ಲಿ ಅದು ಶೇ. ೩೦ಕ್ಕಿಂತ ಅಧಿಕವಿದೆ. ಅಭಿವೃದ್ದಿಗೆ ಸಂಬಂಧಿಸಿ ದಂತೆ ಪ್ರಾದೇಶಿಕ ಅಸಮಾನತೆಯು ರಾಜ್ಯದ ಯಾವ ವಿಭಾಗದಲ್ಲಿ ಮತ್ತು ಯಾವ ಜಿಲ್ಲೆಗಳಲ್ಲಿ ಮಡುಗಟ್ಟಿಕೊಂಡಿದೆ ಎಂಬುದು ಕೋಷ್ಟಕ-೭ರಿಂದ ಸ್ಪಷ್ಟವಾಗುತ್ತದೆ.

ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ: ೨೦೦೫
(೧೯೯೭೯೮ರಲ್ಲಿ ದಾಖಲಾದ ಮಕ್ಕಳು)

ಕೋಷ್ಟಕ

ಸಂ.

ಜಿಲ್ಲೆಗಳು

೧ ರಿಂದ ೭ನೆಯ ತರಗತಿ (ಶೇಕಡ)

ಗಂಡು

ಹೆಣ್ಣು

ಒಟ್ಟು

೧. ಬೆಂಗಳೂರು (ನಗರ) ೧೬.೫೮ ೧೫.೨೪ ೧೫.೯೩
೨. ದಾವಣಗೆರೆ ೧೫.೪೫ ೧೩.೩೮ ೧೪.೪೦
೩. ಕೋಲಾರ ೧೨.೫೩ ೧೧.೧೭ ೧೧.೮೮
೪. ಶಿವಮೊಗ್ಗ ೧೦.೪೦ ೯.೩೬ ೯.೯೦
೫. ಚಿತ್ರದುರ್ಗ ೯.೫೩ ೯.೭೪ ೯.೬೩
೬. ಬೆಂಗಳೂರು (ಗ್ರಾಮಾಂತರ) ೭.೧೦ ೬.೪೧ ೬.೭೭
೭. ತುಮಕೂರು ೬.೦೧ ೫.೯೦ ೫.೯೬
(ಬೆಂಗಳೂರು ವಿಭಾಗ)
೮. ಮಂಡ್ಯ ೧೧.೦೭ ೧೦.೨೭ ೧೦.೬೯
೯. ಚಾಮರಾಜ ನಗರ ೧೦.೪೨ ೧೦.೫೧ ೧೦.೪೬
೧೦. ಮೈಸೂರು ೮.೨೯ ೯.೧೦ ೮.೬೮
೧೧. ಹಾಸನ ೮.೮೩ ೭.೮೬ ೮.೩೫
೧೨. ಕೊಡಗು ೭.೬೧ ೭.೬೫ ೭.೬೩
೧೩. ಚಿಕ್ಕಮಗಳೂರು ೫.೫೪ ೫.೧೯ ೫.೩೬
೧೪. ದಕ್ಷಿಣ ಕನ್ನಡ ೩.೯೫ ೩.೭೦ ೩.೮೩
೧೫. ಉಡುಪಿ ೩.೨೭ ೩.೫೮ ೩.೪೨
(ಮೈಸೂರು ವಿಭಾಗ)
೧೬. ಬಿಜಾಪುರ ೨೪.೬೬ ೨೭.೨೭ ೨೫.೮೧
೧೭. ಬಾಗಲಕೋಟೆ ೨೦.೨೯ ೨೦.೭೪ ೨೦.೫೦
೧೮. ಗದಗ ೨೦.೩೭ ೧೯.೮೫ ೨೦.೧೨
೧೯. ಹಾವೇರಿ ೧೫.೦೪ ೧೪.೬೯ ೧೪.೮೭
೨೦. ಉತ್ತರ ಕನ್ನಡ ೮.೮೯ ೮.೫೨ ೮.೭೧
೨೧. ಬೆಳಗಾವಿ ೭.೮೪ ೯.೧೨ ೮.೪೪
೨೨. ಧಾರವಾಡ ೬.೪೦ ೬.೯೧ ೬.೬೪
(ಬೆಳಗಾವಿ ವಿಭಾಗ)
೨೩. ಗುಲಬರ್ಗಾ ೩೬.೫೪ ೩೯.೦೭ ೩೭.೬೫
೨೪. ರಾಯಚೂರು ೩೨.೧೭ ೩೭.೦೪ ೩೪.೨೪
೨೫. ಕೊಪ್ಪಳ ೩೧.೨೪ ೩೪.೫೬ ೩೨.೭೮
೨೬. ಬೀದರ್ ೨೧.೫೦ ೨೦.೫೮ ೨೧.೦೭
೨೭. ಬಳ್ಳಾರಿ ೧೭.೯೧ ೧೯.೭೬ ೧೮.೭೬
(ಗುಲಬರ್ಗಾ ವಿಭಾಗ)
ಕರ್ನಾಟಕ ರಾಜ್ಯ ೧೪.೫೯ ೧೪.೩೪ ೧೪.೪೭

ಟಿಪ್ಪಣಿ:ಪ್ರತಿ ವಿಭಾಗದಲ್ಲೂ ಜಿಲ್ಲೆಗಳನ್ನು ಅವರೋಹಣ ಕ್ರಮದಲ್ಲಿ ಜೋಡಿಸಿದೆ.

ಮೂಲ:ಕರ್ನಾಟಕ ಸರ್ಕಾರ ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ, ೨೦೦೫, ಸರ್ವ ಶಿಕ್ಷ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ : ೨೦೦೫೦೬ ರಿಂದ ೨೦೦೬೦೭

ಪ್ರಾಥಮಿಕ ಹಂತದ ಏಳನೆಯ ತರಗತಿಯಿಂದ ಪ್ರೌಢಹಂತದ ಎಂಟನೆಯ ತರಗತಿಗೆ ಮಕ್ಕಳು ಸಾಗುವ ಪ್ರಕ್ರಿಯೆಯನ್ನು ಇಲ್ಲಿ ಶೈಕ್ಷಣಿಕ ಪರಿವರ್ತನಾ ಪ್ರಕ್ರಿಯೆಯೆಂದು ಕರೆಯಲಾಗಿದೆ. ಶೈಕ್ಷಣಿಕ ಪ್ರಗತಿಯ ಮಾಪನದ ದೃಷ್ಟಿಯಿಂದ ಇದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಏಕೆಂದರೆ ಪರಿವರ್ತನಾ ಪ್ರಕ್ರಿಯೆಯನ್ನು ಶಿಕ್ಷಣದ ಸಾರ್ವತ್ರೀಕರಣ ಸೂಚಿಯನ್ನಾಗಿ ಬಳಸಬಹುದಾಗಿದೆ. ಈ ದಿಶೆಯಲ್ಲಿ ಕರ್ನಾಟಕವು ರಾಜ್ಯ ಮಟ್ಟದಲ್ಲಿ ಸಾಧಿಸಿಕೊಂಡಿರುವ ಸಾಧನೆ ನಿಜಕ್ಕೂ ಅದ್ಭುತವಾಗಿದೆ. ಕರ್ನಾಟಕ ರಾಜ್ಯ ಮಟ್ಟದಲ್ಲಿನ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ೦.೮೯೯. ಶಿಕ್ಷಣದ ಸಾರ್ವತ್ರೀಕರಣದ ಸನಿಹ ಅದು ಸಾಗಿದೆ. ಆದರೆ ಆತಂಕಕಾರಿ ಸಂಗತಿಯೆಂದರೆ ಶಿಕ್ಷಣದ ಸಾರ್ವತ್ರೀಕರಣದ ಸ್ವರೂಪವು ರಾಜ್ಯಾದ್ಯಂತ ಏಕರೂಪವಾಗಿಲ್ಲ. ಶೈಕ್ಷಣಿಕ ಸಾರ್ವತ್ರೀಕರಣ ಸಾಧನೆಯ ದೃಷ್ಟಿಯಿಂದ ರಾಜ್ಯದ ಗುಲಬರ್ಗಾ ವಿಭಾಗವು ಬಹಳ ದೂರದಲ್ಲಿದೆ. ಬೆಳಗಾವಿ ವಿಭಾಗವೂ ಸಾಕಷ್ಟು ದೂರದಲ್ಲಿದೆ. ರಾಜ್ಯ ಮಟ್ಟದ ಹಾಗೂ ದಕ್ಷಿಣ ಕರ್ನಾಟಕ ಪ್ರದೇಶದ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಸಾಧನೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ನಮಗೆ ರಾಜ್ಯದಲ್ಲಿನ ಶಿಕ್ಷಣ ಪ್ರಗತಿಯ ಪೂರ್ಣ ರೂಪದ ದರ್ಶನವಾಗುವುದಿಲ್ಲ. ಇದನ್ನು ಕೋಷ್ಟಕದಲ್ಲಿ ತೋರಿಸಲಾಗಿದೆ.

ಕೋಷ್ಟಕ-೧೦ರಲ್ಲಿ ಸ್ಪಷ್ಟವಾಗಿ ತೋರಿಸಿರುವಂತೆ ದ.ಕ. ಪ್ರದೇಶದಲ್ಲಿ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ೦.೯೭೩ರಷ್ಟಿದ್ದರೆ ಉ.ಕ. ಪ್ರದೇಶದಲ್ಲಿ ಅದು ೦.೮೦೯ರಷ್ಟಿದೆ. ಆದರೆ ಗುಲಬರ್ಗಾ ವಿಭಾಗದಲ್ಲಿ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ಕೇವಲ ೦.೭೭೯ರಷ್ಟಿದೆ. ಶಿಕ್ಷಣದ ಸಾರ್ವತ್ರೀಕರಣದ ದೃಷ್ಟಿಯಿಂದ ದ.ಕ. ಪ್ರದೇಶ ಎಷ್ಟು ಹತ್ತಿರದಲ್ಲಿದೆ ಮತ್ತು ಉ.ಕ. ಪ್ರದೇಶ ಎಷ್ಟು ದೂರದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಪರಿವರ್ತನಾ ಪ್ರಕ್ರಿಯೆಯಲ್ಲಿ ಶೈಕ್ಷಣಿಕ ಪರಿಧಿಯಿಂದ ಹೊರಹೋದ ೧.೦೧ ಲಕ್ಷ ಮಕ್ಕಳಲ್ಲಿ ದ.ಕ. ಪ್ರದೇಶದ ಪಾಲು ಕೇವಲ ಶೇ. ೧೪.೪೧ರಷ್ಟಾದರೆ ಉ.ಕ. ಪ್ರದೇಶದ ಪಾಲು ಶೇ. ೮೫.೫೯. ಅಂದರೆ ಶೈಕ್ಷಣಿಕ ಪರಿಧಿಯಿಂದ ಹೊರ ನಡೆದ ೧.೦೧ ಲಕ್ಷದಲ್ಲಿ ದ.ಕ. ಪ್ರದೇಶಕ್ಕೆ ಸೇರಿದವರು ಕೇವಲ ೦.೧೫ ಲಕ್ಷವಾದರೆ ಉ.ಕ. ಪ್ರದೇಶದ ಮಕ್ಕಳ ಸಂಖ್ಯೆ ೦.೮೬ ಲಕ್ಷ. ರಾಜ್ಯದ ಜನಸಂಖ್ಯೆಯಲ್ಲಿ ಉ.ಕ. ಪ್ರದೇಶದ ಪಾಲು ಕೇವಲ ಶೇ. ೪೨.೭. ಆದರೆ ಪರಿವರ್ತನಾ ಪ್ರಕ್ರಿಯೆಯಲ್ಲಿ ಶೈಕ್ಷಣಿಕ ಪರಿಧಿಯಿಂದ ಹೊರ ನಡೆದ ಮಕ್ಕಳ ಪ್ರಮಾಣವು ಶೇ. ೮೫.೫೮.

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ : ೨೦೦೫೦೬ ರಿಂದ ೨೦೦೬೦೭ (ವಿಭಾಗವಾರು)

ಕೋಷ್ಟಕ೧೦

ರಾಜ್ಯ

ಪ್ರದೇಶ

ವಿಭಾಗಗಳು

೨೦೦೫-೦೬ರಲ್ಲಿ

೭ನೆಯ ತರಗತಿ

ದಾಖಲಾತಿ

೨೦೦೬-೦೭ರಲ್ಲಿ

೮ನೆಯ ತರಗತಿ

ದಾಖಲಾತಿ

ವ್ಯತ್ಯಾಸ

ಪರಿವರ್ತನಾ

ಸೂಚ್ಯಂಕ

ಬೆಂಗಳೂರು ವಿಭಾಗ ೩೩೩,೯೦೩ ೩೨೪,೯೪೬ -೮೯೫೭ ೦.೯೭೩
(೩೩.೫೩) (೩೬.೩೦) (೮.೯೦)
ಮೈಸೂರು ವಿಭಾಗ ೨೧೧,೫೪೯ ೨೦೬,೦೦೦ -೫೫೪೯ ೦.೯೭೪
(೨೧.೨೪) (೨೩.೦೧) (೫.೫೧)
ದ.ಕ. ಪ್ರದೇಶ ೫೪೫,೪೫೨ ೫೩೦,೯೪೬ -೧೪೫೦೬ ೦.೯೭೩
(೫೪.೭೭) (೫೯.೩೧) (೧೪.೪೧)
ಬೆಳಗಾವಿ ವಿಭಾಗ ೨೭೯,೫೮೮ ೨೩೧,೨೧೨ -೪೮೩೭೬ ೦.೮೨೭
(೨೮.೦೮) (೨೫.೮೩) (೪೮.೦೮)
ಗುಲಬರ್ಗಾ ವಿಭಾಗ ೧೭೦,೭೯೦ ೧೩೩,೦೪೬ -೩೭೭೪೪ ೦.೭೭೯
(೧೭.೧೫) (೧೪.೮೬) (೩೭.೫೧)
ಉ.ಕ. ಪ್ರದೇಶ ೪೫೦,೩೭೮ ೩೬೪,೨೫೮ -೮೬೧೨೦ ೦.೮೦೯
(೪೫.೨೩) (೪೦.೬೯) (೮೫.೫೯)
ಕರ್ನಾಟಕ ರಾಜ್ಯ ೯೯೫,೮೩೦ ೮೯೫,೨೦೪ -೧೦೦೬೨೬ ೦.೮೯೯
(೧೦೦.೦೦) (೧೦೦.೦೦) (೧೦೦.೦೦)

ಟಿಪ್ಪಣಿ :ಆವರಣದಲ್ಲಿನ ಅಂಕಿಗಳು ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ತೋರಿಸುತ್ತವೆ.

ಮೂಲ:ಕರ್ನಾಟಕ ಸರ್ಕಾರ, ೨೦೦೭, ಶೈಕ್ಷಣಿಕ ಮಾಹಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷ ಅಭಿಯಾನ, ಬೆಂಗಳೂರು

ಈ ಪ್ರಾದೇಶಿಕ ಅಸಮಾನತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ವಶಿಕ್ಷ ಅಭಿಯಾನದ ನೇತೃತ್ವ ವಹಿಸಿರುವವರು ಸಮಸ್ಯೆಯ ಪ್ರಾದೇಶಿಕ ಸ್ವರೂಪಕ್ಕೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ದುರದೃಷ್ಟದ ಸಂಗತಿಯೆಂದರೆ ಸದ್ಯ ಅಂತಹ ದೃಷ್ಟಿಕೋನ ಅಲ್ಲಿ ಗೈರುಹಾಜರಾಗಿದೆ. ಈಗಲೂ ಕಾಲ ಮಿಂಚಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ತೀವ್ರ ಪ್ರಾದೇಶಿಕ ಅಸಮಾನತೆಗಳಿವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಈಗ ಸರ್ವಶಿಕ್ಷ ಅಭಿಯಾನವು ಪೂರ್ಣವಾಗಿ ರಾಜ್ಯ ಕೇಂದ್ರಿತ ಕಾರ್ಯಕ್ರಮವಾಗಿದೆ. ಇದನ್ನು ಸರಿಪಡಿಸುವುದು ತುಂಬಾ ಅಗತ್ಯವಾಗಿದೆ.

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಪರಿವರ್ತನಾ ಪ್ರಕ್ರಿಯೆ : ತರಗತಿವಾರು

ಕೋಷ್ಟಕ೧೧

ತರಗತಿಗಳು

೨೦೦೪-೦೫ರಲ್ಲಿ

ದಾಖಲಾತಿ

೨೦೦೫-೦೬ರಲ್ಲಿ

ದಾಖಲಾತಿ

ವ್ಯತ್ಯಾಸ

ಶೇಕಡ

ವ್ಯತ್ಯಾಸ

ಒಂದನೆಯ ತರಗತಿ ೧೧೫೭೮೭೮ ೧೨೧೯೬೫೨   __   __
ಎರಡನೆಯ ತರಗತಿ ೧೧೬೬೦೮೫ ೧೦೯೮೦೧೭ -೫೯೮೬೧ -೫.೧೭
ಮೂರನೆಯ ತರಗತಿ ೧೧೬೩೭೪೯ ೧೧೩೯೫೧೧ -೨೬೫೭೪ -೨.೨೮
ನಾಲ್ಕನೆಯ ತರಗತಿ ೧೧೯೫೨೮೫ ೧೧೩೩೧೯೧ -೩೦೫೫೮ -೨.೬೩
ಐದನೆಯ ತರಗತಿ ೧೧೩೭೨೮೭ ೧೧೬೭೪೦೮ -೨೭೮೭೭ -೨.೩೩
ಆರನೆಯ ತರಗತಿ ೧೦೬೫೩೮೯ ೧೦೪೯೩೯೯ -೮೭೮೮೮ -೭.೭೩
ಏಳನೆಯ ತರಗತಿ ೧೦೧೫೦೬೦ ೯೯೫೮೩೦ -೬೯೫೫೯ -೬.೫೩
ಎಂಟನೆಯ ತರಗತಿ ೮೦೨೯೫೬ ೮೪೧೦೫೯ -೧೭೪೦೦೧ -೧೭.೧೪
ಒಂಬತ್ತನೆಯ ತರಗತಿ ೬೭೫೧೬೭ ೭೦೦೨೨೦ -೧೦೨೭೩೬ -೧೨.೭೯
ಹತ್ತನೆಯ ತರಗತಿ ೫೫೭೭೫೫ ೬೧೫೬೫೫ -೫೯೫೧೨ -೮.೮೧
ಒಟ್ಟು ದಾಖಲಾತಿ ೯೯೩೬೬೧೧ ೯೯೫೯೯೪೪ __   __

ಮೂಲ:೧. ಕರ್ನಾಟಕ ಸರ್ಕಾರ :೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ, ೨೦೦೫,                      ಸರ್ವ ಶಿಕ್ಷ ಅಭಿಯಾನ, ಬೆಂಗಳೂರು

೨. ಕರ್ನಾಟಕ ಸರ್ಕಾರ :೨೦೦೬, ಸಮಗ್ರ ಶೈಕ್ಷಣಿಕ ಅಂಕಿ-ಅಂಶ, ೨೦೦೬, ಸರ್ವಶಿಕ್ಷ ಅಭಿಯಾನ, ಬೆಂಗಳೂರು

ಕೋಷ್ಟಕ-೧೧ರಲ್ಲಿ ೨೦೦೪-೦೫ರಿಂದ ೨೦೦೫-೦೬ರ ನಡುವೆ ಒಂದನೆಯ ತರಗತಿ ಯಿಂದ ಹತ್ತನೆಯ ತರಗತಿವರೆಗಿನ ದಾಖಲಾತಿಯಲ್ಲಿನ ವ್ಯತ್ಯಾಸವನ್ನು ತೋರಿಸಿದೆ. ಒಂದನೆಯ ತರಗತಿಗೆ ೨೦೦೪-೦೫ರಲ್ಲಿ ದಾಖಲಾದ ಮಕ್ಕಳ ಸಂಖ್ಯೆ ೧೧.೫೮ ಲಕ್ಷ. ಈ ಮಕ್ಕಳೆಲ್ಲ ೨೦೦೫-೦೬ರಲ್ಲಿ ಎರಡನೆಯ ತರಗತಿ ಪ್ರವೇಶಿಸಬೇಕು. ಆದರೆ ವಾಸ್ತವಿಕವಾಗಿ ೨೦೦೫-೦೬ರಲ್ಲಿ ಎರಡನೆಯ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ ೧೦.೯೮ ಲಕ್ಷ. ಇಲ್ಲಿ ಉಂಟಾಗಿರುವ ಕಡಿತದ ಸಂಖ್ಯೆ ೫೯೮೬೧. ಅದೇ ರೀತಿ ಮೂರನೆಯ ತರಗತಿಯಲ್ಲಿ ಉಂಟಾದ ಕಡಿತದ ಸಂಖ್ಯೆ ೨೬೫೭೪. ಇದು ಹೀಗೆ ಮುಂದುವರಿದು ಏಳನೆಯ ತರಗತಿಯಿಂದ ಎಂಟನೆಯ ತರಗತಿ ನಡುವೆ ಉಂಟಾದ ಕಡಿತದ ಸಂಖ್ಯೆ ೧.೭೪ ಲಕ್ಷ.

ಈ ವಿವರಗಳಿಂದ ತಿಳಿಯುವ ಸಂಗತಿಯೆಂದರ ೧ರಿಂದ ೧೦ನೆಯ ತರಗತಿವರೆಗಿನ ಶಿಕ್ಷಣದಲ್ಲಿ ಏಳನೆಯ ತರಗತಿಯಿಂದ ಎಂಟನೆಯ ತರಗತಿಗೆ ನಡೆಯುವ ಪರಿವರ್ತನೆಯ ತುಂಬಾ ನಿರ್ಣಾಯಕವಾದ ಹಂತವಾಗಿದೆ. ಈ ಹಂತದಲ್ಲಿ ಕಡಿತದ ಪ್ರಮಾಣ ಶೇ. ೧೭.೧೪. ಅದೇ ರೀತಿ ಎಂಟರಿಂದ ಒಂಬತ್ತನೆಯ ತರಗತಿವರೆಗೆ ನಡೆದ ಪರಿವರ್ತನೆಯಲ್ಲಿ ಕಡಿತದ ಪ್ರಮಾಣ ಶೇ. ೧೨.೭೯. ಒಂಬತ್ತನೆಯ ತರಗತಿಯಿಂದ ಹತ್ತನೆಯ ತರಗತಿಗೆ ನಡೆಯುವ ಪರಿವರ್ತನೆಯಲ್ಲಿನ ಕಡಿತದ ಪ್ರಮಾಣ ಶೇ. ೮.೮೧.

ಇಲ್ಲಿ ಬಹಳ ಮುಖ್ಯವಾಗಿ ಪರಿಗಣಿಸಬೇಕಾದ ಸೂಕ್ಷ್ಮ ಸಂಗತಿಯೊಂದಿದೆ. ಕೋಷ್ಟಕ-೮ರಲ್ಲಿ ತೋರಿಸಿರುವಂತೆ ೨೦೦೪-೦೫ರಿಂದ ೨೦೦೫-೦೬ರ ನಡುವಿನ ಏಳನೆಯ ತರಗತಿಯಿಂದ ಎಂಟನೆಯ ತರಗತಿವರೆಗಿನ ಪರಿವರ್ತನೆಯಲ್ಲಿ ಕಡಿತದ ಸಂಖ್ಯೆ ೧.೭೪ ಲಕ್ಷ. ಆದರೆ ಕೋಷ್ಟಕ-೯ರಲ್ಲಿ ತೋರಿಸಿರುವಂತೆ ಕಡಿತದ ಸಂಖ್ಯೆ ೨೦೦೫-೦೬ರಿಂದ ೨೦೦೬-೦೭ರ ಅವಧಿಯಲ್ಲಿ ೧.೭೪ ಲಕ್ಷದಿಂದ ೧.೦೧ ಲಕ್ಷಕ್ಕೆ ಇಳಿದಿದೆ. ಇದೊಂದು ಆಶಾದಾಯಕ ಸೂಚನೆ ಹಾಗೂ ಸಾಧನೆಯಾಗಿದೆ.

ಶೈಕ್ಷಣಿಕ ದುಸ್ಥಿತಿಯ ಕೂಪ

ಈಗಾಗಲೆ ತಿಳಿದುಬಂದಿರುವಂತೆ ಶಾಲೆ ಬಿಟ್ಟ ಮಕ್ಕಳ ಪ್ರಮಾಣವು ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಅತ್ಯಧಿಕ ಮಟ್ಟದಲ್ಲಿದೆ. ಈ ವಿಭಾಗದ ಕೆಲವು ತಾಲ್ಲೂಕು ಗಳಲ್ಲಿ ಸಮಸ್ಯೆಯು ಅತ್ಯಂತ ಗಂಭೀರ ಸ್ವರೂಪ ತಳೆದಿದೆ. ಇದೊಂದು ಆತಂಕಕಾರಿ ಸಂಗತಿಯಾಗಿದೆ. ಶೈಕ್ಷಣಿಕ ದುಸ್ಥಿತಿಯ ಕೂಪದಂತಿರುವ ತಾಲ್ಲೂಕುಗಳ ವಿವರವನ್ನು ಕೋಷ್ಟಕ-೧೨ರಲ್ಲಿ ನೀಡಿದೆ.

ಒಟ್ಟು ೧೪ ತಾಲ್ಲೂಕುಗಳಲ್ಲಿ ಸಮಸ್ಯೆ ಗಂಭೀರ ಸ್ವರೂಪ ತಳೆದಿದೆ. ಈ ೧೪ರ ಪೈಕಿ ೮ ತಾಲ್ಲೂಕುಗಳು ಗುಲಬರ್ಗಾ ಜಿಲ್ಲೆಗೆ ಸೇರಿವೆ. ಪ್ರದೇಶವಾರು ನೋಡಿದಾಗ ಎಲ್ಲ ೧೪ ತಾಲ್ಲೂಕುಗಳು ಉತ್ತರ ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಈ ಕೂಪದ ಪಟ್ಟಿಯಲ್ಲಿ ದಕ್ಷಿಣ ಕರ್ನಾಟಕ ಪ್ರದೇಶದ ಒಂದು ತಾಲ್ಲೂಕೂ ಇಲ್ಲ. ಒಟ್ಟು ೧೪ ತಾಲ್ಲೂಕುಗಳಲ್ಲಿ ೧೨ ಗುಲಬರ್ಗಾ ವಿಭಾಗಕ್ಕೆ ಸೇರಿದ್ದರೆ, ಎರಡು ಬೆಳಗಾವಿ ವಿಭಾಗದ ತಾಲ್ಲೂಕುಗಳಾಗಿವೆ. ಈ ೧೪ ತಾಲ್ಲೂಕುಗಳು ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳೂ ಆಗಿವೆ.[2]

ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ೧೪ ತಾಲ್ಲೂಕುಗಳ ಅಭಿವೃದ್ದಿ ಸ್ಥಾನಗಳು ೧೦೦ರ ಮೇಲಿವೆ. ಗುಲಬರ್ಗಾ, ಸವಣೂರು, ಮತ್ತು ಗಂಗಾವತಿ ತಾಲ್ಲೂಕುಗಳನ್ನು ಬಿಟ್ಟರೆ ಉಳಿದ ೧೧ ತಾಲ್ಲೂಕುಗಳ ಅಭಿವೃದ್ದಿ ಸ್ಥಾನವು ೧೫೦ಕ್ಕಿಂತ ಮೇಲಿವೆ. ಆರ್ಥಿಕವಾಗಿ ಅಥವಾ ವರಮಾನದ ದೃಷ್ಟಿಯಿಂದ ಉನ್ನತ ಸ್ಥಾನವನ್ನು ಸಾಧಿಸಿಕೊಂಡ ತಾಲ್ಲೂಕುಗಳೆಲ್ಲವೂ ಶೈಕ್ಷಣಿಕವಾಗಿಯೂ ಉತ್ತಮವಾಗಿರುತ್ತವೆಂದು ಹೇಳಲು ಸಾಧ್ಯವಿಲ್ಲ. ಶೋರಾಪುರ ತಾಲ್ಲೂಕು ಪಟ್ಟಿಯಲ್ಲಿನ ೧೪ರ ಪೈಕಿ ಅಭಿವೃದ್ದಿಯಲ್ಲಿ ೬ನೆಯ ಸ್ಥಾನದಲ್ಲಿದೆ. ಆದರೆ ಸಾಕ್ಷರತೆಯಲ್ಲಿ ಅದರ ಸ್ಥಾನ ೧೦ ಮತ್ತು ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಿಗೆ ಸಂಬಂಧಿಸಿದಂತೆ ಇದರ ಸ್ಥಾನ ೧೨. ಸಿಂದಗಿಯು ಅಭಿವೃದ್ದಿಯಲ್ಲಿ ೯ನೆಯ ಸ್ಥಾನದಲ್ಲಿದ್ದರೂ ಸಾಕ್ಷರತೆಯಲ್ಲಿ ಅದು ಉನ್ನತ ಸಾಧನೆ ಸಾಧಿಸಿಕೊಂಡಿದೆ.

ಶೈಕ್ಷಣಿಕ ದುಸ್ಥಿತಿಯ ಕೂಪಗಳು ಮತ್ತು ಅಭಿವೃದ್ದಿ ಮಟ್ಟ

ಕೋಷ್ಟಕ೧೨

ತಾಲ್ಲೂಕುಗಳು

ಸಾಕ್ಷರತೆ (ಶೇ.)

ಸ್ಥಾನ

ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕ ೨೦೦೧-೦೨

ಸ್ಥಾನ

ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳ ಪ್ರಮಾಣ ೧೯೯೭-೯೮ ರ ದಾಖಲಾತಿ (ಶೇ.) ೨೦೦೫ (೧-೭ನೆಯ ತರಗತಿ)

ಗುಲಬರ್ಗಾ

೬೭.೪೦

೦.೮೯

೪೧.೮೫

ಸವಣೂರು

೫೯.೮೮

೦.೮೭

೩೫.೨೨

ಗಂಗಾವತಿ

೫೩.೯೩

೦.೯೩

೩೫.೦೩

ಸಿಂದಗಿ

೫೨.೪೮

೦.೬೪

೩೬.೨೨

ಅಫಜಲಪುರ

೫೧.೬೭

೦.೬೨

೧೦

೪೨.೯೦

ಸಿಂಧನೂರು

೫೭.೬೬

೦.೭೮

೩೬.೭೫

ಚಿಂಚೋಳಿ

೪೯.೩೮

೦.೫೭

೧೨

೩೮.೬೫

ಸೇಡಂ

೪೩.೨೩

೦.೭೨

೩೮.೮೨

ಜೇವರ್ಗಿ

೪೪.೨೬

೦.೫೭

೧೩

೪೮.೨೦

ಶೋರಾಪುರ

೪೩.೮೪

೧೦

೦.೭೦

೪೮.೩೩

ಮಾನವಿ

೪೨.೭೮

೧೧

೦.೬೯

೪೧.೬೯

ದೇವದುರ್ಗ

೩೯.೫೬

೧೨

೦.೫೩

೧೪

೪೧.೪೯

ಶಹಾಪುರ

೩೮.೫೩

೧೩

೦.೬೨

೧೧

೫೩.೬೪

ಯಾದಗೀರ್

೩೭.೪೩

೧೪

೦.೬೭

೪೯.೯೫

ಟಿಪ್ಪಣಿ :೧. ಸಾಕ್ಷರತೆ ಪ್ರಮಾಣವನ್ನು ಅವರೋಹಣ ಕ್ರಮದಲ್ಲಿ ಜೋಡಿಸಲಾಗಿದೆ. ಅಭಿವೃದ್ದಿ ಮಟ್ಟವನ್ನು ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಸೂಚ್ಯಂಕದ ಆಧಾರದ ಮೇಲೆ ಸ್ಥಾನ ನೀಡಲಾಗಿದೆ. ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳ ಪ್ರಮಾಣಕ್ಕೆ ಸಂಬಂಧಿಸಿದಂತೆ, ಯಾವ ತಾಲ್ಲೂಕುಗಳ ಪ್ರಮಾಣ ಶೇ. ೩೫ಕ್ಕಿಂತ ಅಧಿಕವಿದೆಯೋ ಅವುಗಳನ್ನು ಶೈಕ್ಷಣಿಕ ದುಸ್ಥಿತಿ ಕೂಪಗಳೆಂದು ಕರೆಯಲಾಗಿದೆ.

೨. ಇಲ್ಲಿ ಪಟ್ಟಿ ಮಾಡಿರುವ ೧೪ ತಾಲ್ಲೂಕುಗಳಿಗೆ ಶ್ರೇಣಿಯನ್ನು ನೀಡಲಾಗಿದೆ.

ಮೂಲ :ಕರ್ನಾಟಕ ಸರ್ಕಾರ ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ, ೨೦೦೫ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಾ ಅಭಿಮಾನ, ೨೦೦೫, ಪು. ೩೩೯

ಲಿಂಗ ಸಂಬಂಧಿ ಸ್ವರೂಪ

ಅತ್ಯಂತ ಕುತೂಹಲದ ಸಂಗತಿಯೆಂದರೆ ಶಾಲೆ ಬಿಟ್ಟ ಮಕ್ಕಳ ಲಿಂಗ ಸ್ವರೂಪವನ್ನು ಪರಿಶೀಲಿಸಿದಾಗ ಹೆಣ್ಣು ಮಕ್ಕಳ ಪ್ರಮಾಣವು ಗಂಡುಮಕ್ಕಳ ಪ್ರಮಾಣಕ್ಕೆ ಸರಿಸುಮಾರು ಸಮನಾಗಿರುವುದು ಕಂಡುಬರುತ್ತದೆ. ರಾಜ್ಯಮಟ್ಟದಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಗಂಡುಮಕ್ಕಳ ಪ್ರಮಾಣ ಶೇ. ೧೪.೫೯ ಮತ್ತು ಹೆಣ್ಣುಮಕ್ಕಳ ಪ್ರಮಾಣ ಶೇ. ೧೪.೩೪. ಇದೇ ಸ್ಥಿತಿ ಸರಿಸುಮಾರು ಎಲ್ಲ ಜಿಲ್ಲೆಗಳಲ್ಲೂ ಕಂಡುಬರುತ್ತದೆ.

ಪ್ರಚಲಿತದಲ್ಲಿರುವ ಸಂಗತಿಯೆಂದರೆ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಅಧಿಕ ಎಂಬುದಾಗಿದೆ. ಈ ನಂಬಿಕೆ ವ್ಯಾಪಕವಾಗಿ ಹರಡಿದೆ. ಇದು ಎಲ್ಲ ಸಂದರ್ಭದಲ್ಲೂ ನಿಜವಾಗಿರಲು ಸಾಧ್ಯವಿಲ್ಲ. ಇಂದು ಪರಿಸ್ಥಿತಿ ಬದಲಾಗುತ್ತಿದೆ. ಕೋಷ್ಟಕ-೭ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣವನ್ನು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ನೀಡಲಾಗಿದೆ. ಇಲ್ಲಿ ಹೆಣ್ಣು-ಗಂಡುಗಳ ನಡುವೆ ತೀವ್ರ ಅಂತರಗಳೇನಿಲ್ಲ. ಇದೇ ಮಾತನ್ನು ಪ್ರೌಢ ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿದಂತೆ ನಮಗೆ ಮಾಹಿತಿ ಇಲ್ಲದಿರುವುದರಿಂದ ಅದನ್ನು ಕುರಿತಂತೆ ಇಲ್ಲಿ ಚರ್ಚಿಸಿಲ್ಲ. ಆದರೆ ಉನ್ನತ ಹಂತಕ್ಕೆ ಸಾಗಿದಂತೆ ಹೆಣ್ಣುಮಕ್ಕಳ ಪ್ರಮಾಣವು ಕಡಿಮೆಯಾಗುವುದನ್ನು ಇನ್ನೊಂದು ರೂಪದಲ್ಲಿ ತೋರಿಸಬಹುದು. ಕೋಷ್ಟಕ-೯ರಲ್ಲಿ ೧ನೆಯ ತರಗತಿ, ೭ನೆಯ ತರಗತಿ ಹಾಗೂ ೧೦ನೆಯ ತರಗತಿಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣವನ್ನು ವಿಭಾಗವಾರು ತೋರಿಸಿದೆ. ಲಿಂಗ ಸಂಬಂಧಿ ತಾರತಮ್ಯದ ಸೂಕ್ಷ್ಮ ಎಳೆಗಳನ್ನು ಇಲ್ಲಿ ಗುರುತಿಸಬಹುದಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂರು ಹಂತಗಳಲ್ಲಿನ ದಾಖಲಾತಿಯಲ್ಲಿ ಲಿಂಗ ಸಮಾನತಾ ಸೂಚಿ

ಕೋಷ್ಟಕ೧೩

ವಿಭಾಗಗಳು ಒಂದನೆಯ ಏಳನೆಯ ಹತ್ತನೆಯ ಒಟ್ಟು
ಪ್ರದೇಶ ತರಗತಿ ತರಗತಿ ತರಗತಿ (೧-೧೦)
ಬೆಂಗಳೂರು ವಿಭಾಗ ೯೪.೦೭ ೯೫.೦೫ ೯೫.೮೭ ೯೩.೭೫
ಮೈಸೂರು ವಿಭಾಗ ೯೪.೪೮ ೯೩.೭೪ ೧೦೧.೮೯ ೯೪.೬೦
ದ.ಕ. ಪ್ರದೇಶ ೯೪.೨೨ ೯೪.೫೩ ೯೮.೨೪ ೯೪.೦೮
ಬೆಳಗಾವಿ ವಿಭಾಗ ೯೨.೯೨ ೯೦.೪೨ ೭೭.೫೫ ೮೯.೮೭
ಗುಲಬರ್ಗಾ ವಿಭಾಗ ೮೯.೭೬ ೮೨.೪೩ ೭೪.೭೧ ೮೭.೬೮
ಉ.ಕ. ಪ್ರದೇಶ ೯೧.೪೧ ೮೭.೨೮ ೭೬.೫೬ ೮೮.೯೩
ಕರ್ನಾಟಕ ರಾಜ್ಯ ೯೨.೭೯ ೯೧.೩೨ ೮೯.೧೭ ೯೧.೬೫

ಮೂಲ:ಕರ್ನಾಟಕ ಸರ್ಕಾರ, ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ:೨೦೦೫

ಕೋಷ್ಟಕ-೧೩ಕ್ಕೆ ಸಂಬಂಧಿಸಿದಂತೆ ಕೆಳಕಂಡ ಸಂಗತಿಗಳನ್ನು ಗುರುತಿಸಬಹುದಾಗಿದೆ.

ಅ.   ಲಿಂಗ ಸಮಾನತಾ ಸೂಚಿಯು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಉತ್ತಮವಾಗಿದೆ. ಅಲ್ಲಿ ಸೂಚಿಯು ರಾಜ್ಯ ಸರಾಸರಿಗಿಂತ ಅಧಿಕ ಮಟ್ಟದಲ್ಲಿದೆ.

ಆ.   ಉತ್ತರ ಕರ್ನಾಟಕ ಪ್ರದೇಶದಲ್ಲಿ ಸೂಚಿಯ ಪ್ರಮಾಣವು ಸಾಪೇಕ್ಷವಾಗಿ ಕೆಳಮಟ್ಟ ದಲ್ಲಿದೆ.

ಇ.   ಅತ್ಯಂತ ಕನಿಷ್ಟತಮ ಸೂಚಿಯು (೭೪.೭೧) ಗುಲಬರ್ಗಾ ವಿಭಾಗದಲ್ಲಿದೆ.

ಈ.  ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಸೂಚಿಯ ಪ್ರಮಾಣ ಮೂರು ಹಂತಗಳಲ್ಲೂ ಸರಿ ಸುಮಾರು ಒಂದೇ ಮಟ್ಟದಲ್ಲಿದೆ. ತೀವ್ರ ಏರುಪೇರುಗಳು ಅಲ್ಲಿ ಕಂಡು ಬರುವುದಿಲ್ಲ. ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಒಂದನೆಯ ತರಗತಿ ಮಟ್ಟದಲ್ಲಿ ಸೂಚಿಯು ಅಧಿಕವಾಗಿದ್ದು ೧೦ನೆಯ ತರಗತಿಯಲ್ಲಿ ಅದು ಕಡಿಮೆ ಯಾಗಿದೆ.

ಪ್ರಾದೇಶಿಕ ಅಸಮಾನತೆಯ ತೀವ್ರತೆಯು ಉತ್ತರ ಕರ್ನಾಟಕ ಭಾಗದಲ್ಲಿ, ಅದರಲ್ಲೂ ಗುಲಬರ್ಗಾ ವಿಭಾಗದಲ್ಲಿ ಮಡುಗಟ್ಟಿಕೊಂಡಿರುವುದನ್ನು ಕೋಷ್ಟಕ-೧೩ ಸ್ಪಷ್ಟವಾಗಿ ತೋರಿಸುತ್ತದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಲಿಂಗ ಸಮಾನತಾ ಸೂಚಿಯು ಸರಿಸುಮಾರು ಮೂರು ಹಂತದಲ್ಲಿ ಸಮನಾಗಿದೆ. ವಾಸ್ತವವಾಗಿ ಹತ್ತನೆಯ ತರಗತಿಯಲ್ಲಿ ಸೂಚಿಯ ಪ್ರಮಾಣವು ಒಂದನೆಯ ಮತ್ತು ಏಳನೆಯ ತರಗತಿಯಲ್ಲಿ ರುವುದಕ್ಕಿಂತ ಅಧಿಕವಾಗಿದೆ. ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಒಂದನೆಯ ತರಗತಿ ಮಟ್ಟದಿಂದ ಹತ್ತನೆಯ ತರಗತಿಗೆ ಸಾಗುವ ಪ್ರಕ್ರಿಯೆಯಲ್ಲಿ ಬಾಲಕಿಯರು ಶಾಲಾ ವಾಹಿನಿಯಿಂದ ದೂರ ಸರಿಯುವ ಪ್ರಮಾಣ ಅಧಿಕವಾಗಿದೆ. ಗುಲಬರ್ಗಾ ವಿಭಾಗದಲ್ಲಿ ಲಿಂಗ ಸಮಾನತಾ ಸೂಚಿ ಒಂದನೆಯ ತರಗತಿಯಲ್ಲಿ ೮೯.೭೬ರಷ್ಟಿದ್ದರೆ ಏಳನೆಯ ತರಗತಿಯಲ್ಲಿ ಅದು ೮೨.೪೩ರಷ್ಟಾಗಿದೆ. ಹತ್ತನೆಯ ತರಗತಿಯಲ್ಲಿ ಅದು ೭೪.೭೧ರಷ್ಟಾಗಿದೆ. ಇದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಈ ಸಂಗತಿಯ ಕಡೆಗೆ ನೀತಿ-ನಿರೂಪಕರು ಹೆಚ್ಚು ಗಮನ ನೀಡುವ ಅಗತ್ಯವಿದೆ.

ಲಿಂಗ ಸಮಾನತೆಯು ಪ್ರಾಥಮಿಕ ಶಾಲೆಯ ಪ್ರವೇಶದ ಹಂತದಲ್ಲಿ ಉತ್ತಮಗೊಂಡಿದೆ. ಅದು ಉನ್ನತ ಹಂತದಲ್ಲೂ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬುದಾರಿಯಾಗಿದೆ.

ಅಧ್ಯಯನದ ತಥ್ಯಗಳು

ಪ್ರಸ್ತುತ ಅಧ್ಯಯನದ ಮೂಲಕ ಕರ್ನಾಟಕದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕುರಿತಂತೆ ಕೆಲವು ಸೂಕ್ಷ್ಮ ಸಂಗತಿಗಳನ್ನು ಗುರುತಿಸಲಾಗಿದೆ. ಶಿಕ್ಷಣ ನೀತಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ದೃಷ್ಟಿಯಿಂದ ಇವು ಮಹತ್ವದ ತಥ್ಯಗಳಾಗಿವೆ. ಇಲ್ಲಿ ರೂಪಿಸಿರುವ ತಥ್ಯಗಳ ಆಧಾರದ ಮೇಲೆ ಶಿಕ್ಷಣ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗುತ್ತದೆ. ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದ ಮೂಲ ಉದ್ದೇಶವೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಸಾಮಾಜಿಕ ಹಾಗೂ ಲಿಂಗಸಂಬಂಧಿ ಕಂದರಗಳನ್ನು ೨೦೧೦ರೊಳಗೆ ನಿವಾರಿಸುವುದಾಗಿದೆ.[3] ಈ ಗುರಿಯನ್ನು ಸಂಪೂರ್ಣವಾಗಿ ಸಾಧಿಸುವುದು ಸಾಧ್ಯವಿಲ್ಲವೆಂಬುದು ಸ್ಪಷ್ಟವಾಗಿದೆ. ಆದರೆ ಕಂದರಗಳನ್ನು ನಿವಾರಿಸುವ ದಿಶೆಯಲ್ಲಿ ಕರ್ನಾಟಕವು ದಿಟ್ಟ ಹೆಜ್ಜೆಗಳನಿಟ್ಟು ಮುಂದೆ ಸಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಗುರಿಯನ್ನು ಈಡೇರಿಸಿಕೊಳ್ಳಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಾರ್ಯಕ್ರಮದಲ್ಲಿ ಯಾವ ರೀತಿಯ ಬದಲಾವಣೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಪ್ರಸ್ತುತ ಅಧ್ಯಯನದಲ್ಲಿ ಅಂಕಿ-ಅಂಶಗಳ ಆಧಾರದ ಮೇಲೆ ಮಂಡಿಸಿದೆ. ಪ್ರಸ್ತುತ ಅಧ್ಯಯನದಿಂದ ಕಂಡುಕೊಂಡ ಮುಖ್ಯ ತಥ್ಯಗಳನ್ನು ಸಂಗ್ರಹ ರೂಪದಲ್ಲಿ ಇಲ್ಲಿ ನೀಡಲಾಗಿದೆ.

೧.   ಸಾಕ್ಷರತೆಗೆ ಸಂಬಂಧಿಸಿದಂತೆ ದಲಿತರು ಮತ್ತು ದಲಿತೇತರರ ನಡುವೆ ಕಂದರವಿದೆ. ಈ ಕಂದರವು ತೀವ್ರಗತಿಯಲ್ಲಿ ಕಡಿಮೆಯಾಗುತ್ತಾ ನಡೆದಿದೆ. ಸಾಕ್ಷರತಾ ಪ್ರಮಾಣವು ಉನ್ನತ ಮಟ್ಟವನ್ನು ತಲುಪಿದಂತೆ ಅದರ ಬೆಳವಣಿಗೆ ಗತಿಯು ಮಂದವಾಗಿ ಬಿಡುತ್ತದೆ. ಈ ದೃಷ್ಟಿಯಿಂದ ಸರ್ಕಾರವು ದಲಿತರ ಸಾಕ್ಷರತಾ ಪ್ರಮಾಣವನ್ನು ಉತ್ತಮಪಡಿಸಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

೨.   ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಅಸಮಾನತೆಗಳು ತೀವ್ರವಾಗಿವೆ. ಇದನ್ನು ಎರಡು ಬಗೆಗಳಲ್ಲಿ ಗುರುತಿಸಬೇಕಾಗುತ್ತದೆ.

ಅ.   ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ದಲಿತೇತರರೊಳಗೆ ಮತ್ತು ದಲಿತರೊಳಗೆ ಲಿಂಗ ಸಂಬಂಧಿ ಅಂತರಗಳಿವೆ. ದಲಿತರಲ್ಲಿನ ಲಿಂಗ ಸಮಾನತಾ ಸೂಚಿಯ ಪ್ರಮಾಣವು ದಲಿತೇತರದಲ್ಲಿನ ಲಿಂಗ ಸಮಾನತಾ ಸೂಚಿಗಿಂತ ಕೆಳಮಟ್ಟ ದಲ್ಲಿದೆ.

ಆ.   ದಲಿತ ಮಹಿಳೆ ಮತ್ತು ದಲಿತೇತರ ಮಹಿಳೆಯರ ನಡುವೆಯೂ ಸಾಕ್ಷರತೆಗೆ ಸಂಬಂಧಿಸಿದಂತೆ ಅಂತರಗಳಿವೆ. ದಲಿತ ಮಹಿಳೆಯರ ಸಾಕ್ಷರತೆಯು ೨೦೦೧ರಲ್ಲಿ ಶೇ. ೪೦.೨೩ರಷ್ಟಿದ್ದರೆ ದಲಿತೇತರ ಮಹಿಳೆಯರ ಸಾಕ್ಷರತೆಯು ಶೇ. ೬೩.೩೯ರಷ್ಟಿದೆ. ಅಲ್ಲಿ ಅಂತರ ಶೇ. ೨೩.೧೬ ಅಂಶಗಳಷ್ಟಿದೆ. ಮಹಿಳೆ ಮತ್ತು ಪುರುಷರ ನಡುವಿನ ಸಾಕ್ಷರತೆಗೆ ಸಂಬಂಧಿಸಿದ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ದಲಿತ ಮಹಿಳೆ ಮತ್ತು ದಲಿತೇತರ ಮಹಿಳೆಯರ ನಡುವಿನ ಸಾಕ್ಷರತೆಗೆ ಸಂಬಂಧಿಸಿದ ಅಸಮಾನತೆಯನ್ನು ನಿವಾರಿಸುವ ಕಡೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ.

೩    ಈ ಅಧ್ಯಯನದಿಂದ ಒಡಮೂಡಿದ ಒಂದು ಮಹತ್ವದ ಒಳನೋಟವೆಂದರೆ ಶಾಲಾ (೧-೧೦) ದಾಖಲಾತಿಗೆ ಸಂಬಂಧಿಸಿದ ಪ್ರಾದೇಶಿಕ ಹಂಚಿಕೆಯಲ್ಲಿನ ವಿಶಿಷ್ಟತೆ. ರಾಜ್ಯದ ಜನಸಂಖ್ಯೆಯಲ್ಲಿ ದಕ್ಷಿಣ ಕರ್ನಾಟಕ ಪ್ರದೇಶವು ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಕಡಿಮೆ ಪಾಲನ್ನು ೧-೧೦ನೆಯ ತರಗತಿವರೆಗಿನ ದಾಖಲಾತಿಯಲ್ಲಿ ಪಡೆದಿದೆ. ಇದಕ್ಕೆ ಪ್ರತಿಯಾಗಿ ರಾಜ್ಯದ ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಪ್ರದೇಶವು ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಅಧಿಕ ಪಾಲನ್ನು ಮಕ್ಕಳ ದಾಖಲಾತಿಯಲ್ಲಿ ಪಡೆದಿದೆ. ಈ ತಥ್ಯದ ಇಂಗಿತಾರ್ಥವೇನು?

ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಒತ್ತಡವನ್ನು ಗುರುತಿಸಬಹುದಾಗಿದೆ. ಏಕೆಂದರೆ ೦-೬ ವಯೋಮಾನದ ಮಕ್ಕಳ ಪ್ರಮಾಣವು ದಕ್ಷಿಣ ಕರ್ನಾಟಕ ಪ್ರದೇಶಕ್ಕಿಂತ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅಧಿಕವಿದೆ. ಇದು ಇನ್ನೊಂದು ಬಗೆಯಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದ ಒತ್ತಡವನ್ನು ಸೂಚಿಸುತ್ತದೆ.[4] ಆದ್ದರಿಂದ ಸರ್ಕಾರವು ಜನಸಂಖ್ಯೆಯ ಬೆಳವಣಿಗೆಯ ಪ್ರಾದೇಶಿಕ ವಿಶಿಷ್ಟತೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸಂಬಂಧಿಸಿದ ನೀತಿ ಗಳನ್ನು ರೂಪಿಸಬೇಕಾಗುತ್ತದೆ.

೪.   ಶಾಲಾ (೧-೧೦) ದಾಖಲಾತಿಯು ಕರ್ನಾಟಕದಲ್ಲಿ ದಲಿತೀಕರಣ ಪ್ರಕ್ರಿಯೆಗೆ ಒಳಗಾಗಿರುವುದನ್ನು ಅಧ್ಯಯನವು ಗುರುತಿಸಿದೆ. ರಾಜ್ಯಮಟ್ಟದಲ್ಲಿ ಒಟ್ಟು ಜನಸಂಖ್ಯೆ ಯಲ್ಲಿ ದಲಿತರ (ಪ.ಜಾ.+ಪ.ಪಂ.) ಪ್ರಮಾಣವು ೨೦೦೧ರಲ್ಲಿ ಶೇ. ೨೨.೯೬ರಷ್ಟಿದೆ. ಆದರೆ ೧-೭ನೆಯ ತರಗತಿವರೆಗಿನ ಒಟ್ಟು ಶಾಲಾ ದಾಖಲಾತಿಯಲ್ಲಿ ದಲಿತ ಮಕ್ಕಳ ಪ್ರಮಾಣವು ಶೇ. ೨೭.೩೯ರಷ್ಟಿದ್ದರೆ, ೮ರಿಂದ ೧೦ನೆಯ ತರಗತಿಗಳಿಗೆ ಸಂಬಂಧಿಸಿದ ಒಟ್ಟು ದಾಖಲಾತಿಯಲ್ಲಿ ದಲಿತರ ಪ್ರಮಾಣವು ಶೇ. ೨೨.೧೦ರಷ್ಟಿದೆ. ಒಟ್ಟು ೧-೧೦ನೆಯ ತರಗತಿಗಳನ್ನು ಗಣನೆಗೆ ತೆಗೆದುಕೊಂಡರೆ ದಲಿತರ ಪ್ರಮಾಣ                     ಶೇ. ೨೬.೨೯ರಷ್ಟಾಗುತ್ತದೆ. ಇದೊಂದು ಕುತೂಹಲದ ಹಾಗೂ ಸ್ವಾಗರ್ತಾಹವಾದ ಸಂಗತಿಯಾಗಿದೆ. ಆದರೆ ಶಾಲಾ ರಚನೆಯಲ್ಲಿ ಉನ್ನತ ಹಂತಕ್ಕೆ ಸಾಗಿದಂತೆ ದಲಿತ ಮಕ್ಕಳ ಪ್ರಮಾಣವು ಕಡಿಮೆಯಾಗುತ್ತಾ ನಡೆಯುವುದನ್ನು ಅಧ್ಯಯನವು ಗುರುತಿಸಿದೆ. ದಲಿತೀಕರಣ ಹಾಗೂ ದಲಿತೀಕರಣದ ಅವರೋಹಣ ಗತಿ ಎರಡನ್ನು ಗಮನದಲ್ಲಿಟ್ಟು ಕೊಂಡು ಸರ್ಕಾರವು ಪ್ರಾಥಮಿಕ ಶಿಕ್ಷಣ-ಪ್ರೌಢ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಬೇಕಾಗುತ್ತದೆ.

೫.   ಲಿಂಗ ಸಮಾನತಾ ಸೂಚಿಯು ರಾಜ್ಯಮಟ್ಟದಲ್ಲಿ ಉತ್ತಮವಾಗಿದೆ. ದಕ್ಷಿಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲೂ ಇದು ತೃಪ್ತಿಕರವಾಗಿದೆ. ಆದರೆ ರಾಜ್ಯದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಮತ್ತು ಮುಖ್ಯವಾಗಿ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಇದರ ಮಟ್ಟವು ತುಂಬಾ ಕಡಿಮೆಯಿದೆ. ಲಿಂಗಸಂಬಂಧಿ ಕಂದರವನ್ನು ನಿವಾರಿಸುವ ದಿಶೆಯಲ್ಲಿ ಮೇಲಿನ ಅಂಶವನ್ನು ಗಮನಿಸಬೇಕಾಗುತ್ತದೆ.

೬.   ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಸಮಸ್ಯೆ ತುಂಬಾ ಮುಖ್ಯವಾದುದು. ಇದಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಅಧ್ಯಯನ ದಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಮುಂಚೂಣಿಗೆ ತರಲಾಗಿದೆ. ರಾಜ್ಯಮಟ್ಟದಲ್ಲಿ ಅದು ಕೇವಲ ಶೇ. ೧೪.೪೭ರಷ್ಟಿದೆ. ಆದರೆ ಬಹಳ ಮುಖ್ಯವಾದ ಸಂಗತಿಯೆಂದರೆ ದಕ್ಷಿಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಇದು ಕೆಳಮಟ್ಟದಲ್ಲಿದೆ. ಆದರೆ ಸಮಸ್ಯೆ ಉತ್ತರ ಕರ್ನಾಟಕ ಪ್ರದೇಶದಲ್ಲಿ, ಅದರಲ್ಲೂ ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ವ್ಯಾಪಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಯು ರಾಜ್ಯದ ಕೆಲವು ತಾಲ್ಲೂಕುಗಳಲ್ಲಿ ತುಂಬಾ ಗಂಭೀರ ಸ್ವರೂಪದಲ್ಲಿದೆ. ಸರ್ಕಾರವು ಸಮಸ್ಯೆ ತೀವ್ರವಾಗಿರುವ ತಾಲ್ಲೂಕುಗಳ ಬಗ್ಗೆ ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ.

ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಅಧಿಕ ವಾಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿ ಹರಡಿದೆ. ಆದರೆ ೧-೭ನೆಯ ತರಗತಿಗಳಲ್ಲಿ ಶಾಲೆ ಬಿಟ್ಟ ಮಕ್ಕಳಲ್ಲಿ ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳ ನಡುವೆ ತೀವ್ರ ಅಂತರಗಳೇನಿಲ್ಲ. ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಲಿಂಗಸಂಬಂಧಿ ಅಸಮಾನತೆ ತೀವ್ರವಾಗಿರುವುದು ಮಾತ್ರ ಕಂಡುಬರುತ್ತದೆ.

ಒಟ್ಟಂದದಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ಅನೇಕ ಸ್ವಾಗತಾರ್ಹ ಸಂಗತಿಗಳು ಕಂಡುಬರುತ್ತವೆ. ಆದರೆ ಸಾಮಾಜಿಕ ಮತ್ತು ಲಿಂಗ ಸಂಬಂಧಿ ಅಂತರ-ಕಂದರಗಳನ್ನು ನಿವಾರಿಸುವ ದಿಶೆಯಲ್ಲಿ ರಾಜ್ಯವು ಸಾಗಬೇಕಾದ ದಾರಿ ತುಂಬಾ ದೂರವಿದೆ. ಅತ್ಯಂತ ಗಂಭೀರವಾದ ಸಮಸ್ಯೆಯೆಂದರೆ ಅದರ ಪ್ರಾದೇಶಿಕ ಅಸಮಾನತೆಯ ಸ್ವರೂಪ. ರಾಜ್ಯದ ಹಿಂದುಳಿದ ಜಿಲ್ಲೆಗಳಿಂದ ಕೂಡಿರುವ ಹೈದರಾಬಾದ್-ಕರ್ನಾಟಕ (ಗುಲಬರ್ಗಾ ವಿಭಾಗ) ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ಕಾರ್ಯ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಇದು ಕೇವಲ ವಿಶೇಷ ನಿರ್ದೇಶನಾಲಯ ವನ್ನು ತೆರೆದುಬಿಟ್ಟರೆ ಸಾಕಾಗುವುದಿಲ್ಲ[5] ಅಥವಾ ಡಿ.ಎಂ. ನಂಜುಂಡಪ್ಪ ವರದಿ ಕುರಿತಂತೆ ಜಪ ಮಾಡಿದರೆ ಸಾಕಾಗುವುದಿಲ್ಲ. ನಿದಿಷ್ಟವಾಗಿ ಕಾರ್ಯರೂಪಕ್ಕೆ ಇಳಿಸು ವಂತಹ ಕ್ರಮಗಳನ್ನು ಯೋಜಿಸಬೇಕಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಒಟ್ಟಾರೆ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.

ಈ ಅಧ್ಯಯನದಲ್ಲಿ ವಿಶೇಷವಾಗಿ ಗುರುತಿಸಿರುವ ಸಂಗತಿಯೆಂದರೆ ಪ್ರಾಥಮಿಕ ಹಂತದಿಂದ ಪ್ರೌಢಹಂತಕ್ಕೆ ನಡೆಯುವ ಪರಿವರ್ತನೆಯ ಸಂದಿಕಾಲದಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ತೀವ್ರ ಕಡಿತ. ಇದನ್ನು ವಿಭಾಗವಾರು ಹಾಗೂ ತರಗತಿವಾರು ಗುರುತಿಸಲಾಗಿದೆ. ವಿಭಾಗವಾರು ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ (ಕೋಷ್ಟಕ-೮) ತೋರಿಸುವಂತೆ ರಾಜ್ಯ ಮಟ್ಟದಲ್ಲಿ ಪರಿವರ್ತನಾ ಸೂಚ್ಯಂಕ ೦.೮೯೯. ಆದರೆ ದ.ಕ. ಪ್ರದೇಶದಲ್ಲಿ ಇದರ ಪ್ರಮಾಣ ಅಧಿಕವಾಗಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅತ್ಯಂತ ಕಡಿಮೆಯಿದೆ. ಎಂಟನೆಯ ಮತ್ತು ಒಂಬತ್ತನೆಯ ತರಗತಿ ಗಳಲ್ಲಿ ಮಕ್ಕಳು ಶಾಲಾ ಪ್ರಕ್ರಿಯೆಯಿಂದ ಹೊರ ಹೋಗುವುದು ಅಧಿಕವೆಂಬುದನ್ನು ಇಲ್ಲಿ ತೋರಿಸಲಾಗಿದೆ (ಕೋಷ್ಟಕ-೧೧). ಈ ಸಂಗತಿಯ ಕಡೆಗೆ ಸರ್ವ ಶಿಕ್ಷಣ ಅಭಿಯಾನದ ಪ್ರಭೃತಿಗಳು ಗಮನ ನೀಡಬೇಕು. ರಾಜ್ಯದಲ್ಲಿ ೨೦೦೫-೦೬ರಿಂದ ೨೦೦೬-೦೭ರ ಪರಿವರ್ತನಾ ಪ್ರಕ್ರಿಯೆಯಲ್ಲಿ ಒಟ್ಟು ಕಡಿತವಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಉ.ಕ. ಪ್ರದೇಶದ ಪಾಲು ಶೇ. ೮೫.೫೯. ಸಮಸ್ಯೆಯ ಮೂಲ ಎಲ್ಲಿದೆಯೆಂಬುದು ಇದರಿಂದ ಅರ್ಥವಾಗುತ್ತದೆ (ಕೋಷ್ಟಕ-೧೦). ಇಂತಹ ಸೂಕ್ಷ್ಮ ಸಂಗತಿಗಳ ಕಡೆ ಗಮನ ನೀಡಬೇಕಾದ ಅಗತ್ಯವಿದೆ.

೭.   ಈ ಅಧ್ಯಯನದಲ್ಲಿ ಪ್ರಧಾನವಾಗಿ ಕರ್ನಾಟಕದಲ್ಲಿನ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿ ಯನ್ನು ಪ್ರಾದೇಶಿಕ ನೆಲೆಯಿಂದ ಪೃಥಕ್ಕರಿಸಲು ಪ್ರಯತ್ನಿಸಲಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾದೇಶಿಕ ನೆಲೆಗಳನ್ನು ಪರಿಗಣಿಸದೆ ಶಿಕ್ಷಣದ ಸಾರ್ವತ್ರೀ ಕರಣವು ಸಾಧ್ಯವಿಲ್ಲ. ಈ ಅಧ್ಯಯನದಲ್ಲಿ ತೋರಿಸಿರುವಂತೆ ದಕ್ಷಿಣ ಕರ್ನಾಟಕ ಪ್ರದೇಶವು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾರ್ವತ್ರೀಕರಣದ ಸನಿಹಕ್ಕೆ ಸಾಗಿಬಿಟ್ಟಿದೆ. ಈಗ ಸಮಸ್ಯೆಯೆಂದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ, ಅದರಲ್ಲೂ ಮುಖ್ಯವಾಗಿ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಶಿಕ್ಷಣದ ಸಾರ್ವತ್ರೀಕರಣವನ್ನು ಹೇಗೆ ಸಾಧಿಸಿಕೊಳ್ಳುವುದು ಎಂಬುದಾಗಿದೆ. ರಾಜ್ಯ ಸರ್ಕಾರವು ತನ್ನ ನೀತಿ ನಿರೂಪಣೆ ಗಳಲ್ಲಿ, ಯೋಜನೆ-ಕಾರ್ಯಕ್ರಮಗಳಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಾದೇಶಿಕತೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ  ಸಾರ್ವತ್ರೀಕರಣವು ಕೇವಲ ದಕ್ಷಿಣ ಕರ್ನಾಟಕ ಸಂಗತಿಯಾಗಿ ಬಿಡುತ್ತದೆ. ಇದನ್ನು ಸರಿಪಡಿಸುವ ದಿಶೆಯಲ್ಲಿ ಮೂಲಭೂತವಾದ ಬದಲಾವಣೆಯನ್ನು ಸರ್ಕಾರವು ತನ್ನ ಅಭಿವೃದ್ದಿ ನೀತಿಯಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಸಂಗತಿಯತ್ತ ಗಮನ ಸೆಳೆಯಲು ಪ್ರಸ್ತುತ ಅಧ್ಯಯನ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ.

೮.   ಈ ಅಧ್ಯಯನದಲ್ಲಿ ಕಂಡುಕೊಂಡ ಮತ್ತೊಂದು ಮಹತ್ವವಾದ ತಥ್ಯವೆಂದರೆ ಲಿಂಗ ಸಮಾನತಾ ಸೂಚಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆ. ಶಾಲಾ ದಾಖಲಾತಿಯ ಕೆಳಹಂತದಲ್ಲಿ ಲಿಂಗ ಸಮಾನತಾ ಸೂಚಿಯು ಉತ್ತಮವಾಗಿರುತ್ತದೆ. ಅದು ಉನ್ನತ ಹಂತಕ್ಕೆ ಸಾಗಿದಂತೆ ಕಡಿಮೆಯಾಗುತ್ತಿರುವುದು ತುಂಬಾ ಕುತೂಹಲಕಾರಿಯಾಗಿದೆ. ಈ ಸಂಗತಿಯು ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ದೃಷ್ಟಿಯಿಂದ ತುಂಬಾ ಮುಖ್ಯವಾದುದಾಗಿದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ದಾಖಲಾತಿಗೆ ಸಂಬಂಧಿಸಿದ ಲಿಂಗ ಸಮಾನತಾ ಸೂಚಿಯು ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಒಂದು ನೆಲೆಯಲ್ಲಿ ಉತ್ತಮವಾಗಿರುವುದು ಕಂಡುಬರುತ್ತದೆ. ಆದರೆ ಉತ್ತರ ಕರ್ನಾಟಕದ ಪ್ರದೇಶದಲ್ಲಿ ದಾಖಲಾತಿಗೆ ಸಂಬಂಧಿಸಿದ ಲಿಂಗ ಸಮಾನತಾ ಸೂಚಿಯು ಕೆಳಹಂತದಲ್ಲಿ ಉತ್ತಮವಾಗಿದ್ದು ಉನ್ನತ ಹಂತದಲ್ಲಿ ತೀವ್ರ ಕಡಿಮೆಯಾಗಿರುವುದನ್ನು ಕೋಷ್ಟಕ-೧೩ರಲ್ಲಿ ತೋರಿಸಲಾಗಿದೆ. ಕೋಷ್ಟಕ-೮ ಮತ್ತು ಕೋಷ್ಟಕ-೧೩ ಎರಡೂ ಒಂದೇ ವಿಷಯಕ್ಕೆ ಸಂಬಂಧಿಸಿದ್ದರೂ ಅವುಗಳ ನಡುವಣ ಭಿನ್ನತೆಯನ್ನು ನಾವು ಅಗತ್ಯ ಗುರುತಿಸಿಕೊಳ್ಳಬೇಕು. ಪ್ರಸ್ತುತ ಅಧ್ಯಯನದ ಪ್ರಮುಖ ತಥ್ಯ ಇದಾಗಿದೆ. 


[1]      ಉಚಿತ ಶಿಕ್ಷಣವನ್ನು ಸರ್ಕಾರಿ ಶಾಲೆಗಳ ಮೂಲಕ ಒದಗಿಸಲಾಗುತ್ತಿದೆ. ಆದರೆ ಶಾಲೆಗೆ ಮಕ್ಕಳನ್ನು ಕಳುಹಿಸಲು ಅದು ಮಾತ್ರ ಸಾಕಾಗುವುದಿಲ್ಲ. ಮತ್ತೊಂದು ಸಂಗತಿಯೆಂದರೆ ಸರ್ಕಾರಿ ಶಾಲೆಗಳ ಶಿಕ್ಷಕರ ಔದಾಸೀನ್ಯ ಮನೋಭಾವ. ಬಡಮಕ್ಕಳ ಸಮಸ್ಯೆ ಬಗ್ಗೆ ಶಿಕ್ಷಕರು ಪ್ರೋಸ್ಪಂದಿಸುತ್ತಿಲ್ಲ (ವಿವರಗಳಿಗೆ ನೋಡಿ:ವಿಮಲಾ ರಾಮಚಂದ್ರನ್, ೨೦೦೪).

[2]      ಅಭಿವೃದ್ದಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆ ಕುರಿತಂತೆ ಅಧ್ಯಯನ ನಡೆಸಲು ಸರ್ಕಾರವು ಡಾ. ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ೨೦೦೦ದಲ್ಲಿ ನೇಮಿಸಿತ್ತು. ಸಮಿತಿಯು ಸಾವಿರ ಪುಟಗಳನ್ನು ಮೀರಿದ ಬೃಹತ್ ವರದಿಯನ್ನು ಸರ್ಕಾರಕ್ಕೆ ೨೦೦೨ರಲ್ಲಿ ಸಲ್ಲಿಸಿದೆ. ರಾಜ್ಯದ ತಾಲ್ಲೂಕುಗಳನ್ನು ಅಭಿವೃದ್ದಿ ಘಟಕಗಳನ್ನಾಗಿ ಪರಿಗಣಿಸಿದ ಸಮಿತಿಯು ಅವುಗಳ ಅಭಿವೃದಿ ಮಟ್ಟವನ್ನು ಗುರುತಿಸಲು ೩೫ ಸೂಚಿಗಳಿಂದ ಕೂಡಿದ ‘ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕ’ವೆಂಬ ಮಾಪನವನ್ನು ರೂಪಿಸಿದೆ. ಈ ಸೂಚಿಯ ಆಧಾರದ ಮೇಲೆ ರಾಜ್ಯದ ೧೭೫ ತಾಲ್ಲೂಕುಗಳಿಗೂ ಶ್ರೇಣಿಯನ್ನು ನೀಡಿದೆ. ಈ ಸೂಚ್ಯಂಕವು ಅತ್ಯಧಿಕ ಮಡಿಕೇರಿ ತಾಲ್ಲೂಕಿನಲ್ಲಿದ್ದರೆ ಕನಿಷ್ಟ ದೇವದುರ್ಗ ತಾಲ್ಲೂಕಿನಲ್ಲಿದೆ (ವಿವರಗಳಿಗೆ ನೋಡಿ:ಕರ್ನಾಟಕ ಸರ್ಕಾರ (೨೦೦೦), ಪ್ರಾದೇಶಿಕ ಅಸಮಾನತೆ ನಿವಾರಣಾ ಅಧ್ಯಯನ ಸಮಿತಿ ವರದಿ).

[3]      ಸರ್ವಶಿಕ್ಷಣ ಅಭಿಯಾನ ಮಿಷನ್‌ನ ಉದ್ದೇಶಗಳು ಹೀಗಿವೆ.

ಅ. ಎಲ್ಲ ಮಕ್ಕಳು ೨೦೦೫ರೊಳಗೆ ಶಾಲೆಯಲ್ಲಿ ದಾಖಲಾಗಿರಬೇಕು.

ಆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿನ ಎಲ್ಲ ಲಿಂಗ ಸಂಬಂಧಿ ಹಾಗೂ ಸಾಮಾಜಿಕ ಅಂತರವನ್ನು ೨೦೦೭ರೊಳಗೆ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿ ೨೦೧೦ರೊಳಗೆ ಕಡಿಮೆ ಮಾಡುವುದು.

ಇ. ೨೦೧೦ರೊಳಗೆ ಶಾಲೆಯಲ್ಲಿ ಉಳಿಯುವಿಕೆಯನ್ನು ಸಾರ್ವತ್ರಿಕಗೊಳಿಸುವುದು.

ಈ. ತೃಪ್ತಿಕರ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸುವುದು.

(ವಿವರಗಳಿಗೆ ನೋಡಿ:ಕರ್ನಾಟಕ ಸರ್ಕಾರ ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ ೨೦೦೫)

[4]      ೨೦೦೧ರ ಜನಗಣತಿ ಪ್ರಕಾರ ೧೯೯೧-೨೦೦೧ರ ದಶಕದಲ್ಲಿ ಕರ್ನಾಟಕದಲ್ಲಿ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ. ೧.೭೩. ಆದರೆ ರಾಜ್ಯದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅದರ ಪ್ರಮಾಣ ಶೇ. ೨ಕ್ಕಿಂತ ಅಧಿಕವಿದೆ. ರಾಜ್ಯದ ೧೮ ಜಿಲ್ಲೆಗಳಲ್ಲಿ ಅದು ರಾಜ್ಯ ಸರಾಸರಿಗಿಂತ ಕಡಿಮೆಯಿದೆ. ಅಂದಮೇಲೆ ಜನಸಂಖ್ಯೆಯ ಬೆಳವಣಿಗೆ ಒತ್ತಡವು ರಾಜ್ಯದ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಅಧಿಕವಿದೆ.

[5]      ಈ ಮಾತು ಬಹಳ ಮುಖ್ಯ. ಗುಲಬರ್ಗಾ ವಿಭಾಗಕ್ಕೆ ಸಂಬಂಧಿಸಿದಂತೆ ಸರ್ಕಾರವು ೨೦೦೧ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶೇಷ ನಿರ್ದೇಶನಾಲಯವನ್ನು ತೆರೆಯಿತು. ಅದರ ಪರಿಸ್ಥಿತಿ ಬಗ್ಗೆ ಇತ್ತೀಚಿನ ಪತ್ರಿಕಾ ವರದಿಯ ಕೆಲವು ಭಾಗ ಹೀಗಿದೆ.

“ಹೈದರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಗುಲಬರ್ಗಾದಲ್ಲಿ ಪ್ರತ್ಯೇಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲ ಯವನ್ನು ಪ್ರಾರಂಭಿಸಲಾಗಿದೆಯಾದರೂ ಆರಂಭದಿಂದ ಆಯುಕ್ತರ ಹುದ್ದೆಯೇ ಖಾಲಿ ಇರುವುದರಿಂದ ಒಂದು ರೀತಿಯಲ್ಲಿ ನಾಮಕಾವಸ್ಥೆಗೆ ಮಾತ್ರ ಇಲ್ಲಿ ಆಯುಕ್ತಾಲಯ ಇರುವಂತಾಗಿದೆ.”

“ಇಲ್ಲಿ ಆಯುಕ್ತರು ಇಲ್ಲದ ಕಾರಣ ಪ್ರಮುಖ ಕಡತಗಳು ವಿಲೇವಾರಿಗಾಗಿ ಈಗಲೂ ಬೆಂಗಳೂರಿಗೆ ಹೋಗುತ್ತವೆ. ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಂ. ಮದನಗೋಪಾಲ್ ಅವರು ಪ್ರಭಾರಿಯಾಗಿ ಗುಲಬರ್ಗಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಹೊಣೆಯನ್ನು ಹೊತ್ತಿದ್ದರೂ, ಒಂದೆರಡು ಬಾರಿ ಬಂದಿದ್ದು ಬಿಟ್ಟರೆ ಮತ್ತೆ ಅವರು ಇತ್ತ ಕಡೆ ತಲೆ ಹಾಕಿಲ್ಲ”(ಪ್ರಜಾವಾಣಿ ೧೯.೦೭.೨೦೦೬).

ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಸರ್ಕಾರವು ಎಷ್ಟರಮಟ್ಟಿಗೆ ಜಾಗೃತವಾಗಿದೆ ಎಂಬುದುಕ್ಕೆ ಮೇಲಿನ ಪತ್ರಿಕಾ ವರದಿಯೇ ಸಾಕ್ಷಿ.