ಸಾವಿರಾರು ವರ್ಷಗಳಿಂದ ಒಂದೇ ಸಮನೆ ಬೆಳೆದುಬಂದ ನವೋದಯಪೂರ್ವದ ಕನ್ನಡ ಕಾವ್ಯಪರಂಪರೆ ವಿಪುಲವಾದ ಕಾವ್ಯಸೃಷ್ಟಿಗೆ ಕಾರಣವಾದರೂ ವೈವಿಧ್ಯತೆಯ ದೃಷ್ಟಿಯಿಂದ ಓದುಗನನ್ನು ಅಷ್ಟಾಗಿ ತೃಪ್ತಿಗೊಳಿಸುವುದಿಲ್ಲ. ಕಾಲದಿಂದ ಕಾಲಕ್ಕೆ ನಿಧಾನವಾಗಿ, ರೀತಿಯಲ್ಲಿ ವಸ್ತುವಿನಲ್ಲಿ ದೃಷ್ಟಿಯಲ್ಲಿ ಗಮನಾರ್ಹವಾದ ಬದಲಾವಣೆಗಳಾಗಿರುವುದಾದರೂ ಒಳಗಿನ ತಿರುಳು ಮಾತ್ರ ಒಂದೇ. ಈ ಕಾವ್ಯ ಸಮುದಾಯದಲ್ಲಿ, ನಾವು ಈ ಕವಿಗಳು ಸೌಂದರ್ಯವನ್ನು ಕುರಿತು ವಿಶೇಷವಾದ ಏನನ್ನಾದರೂ ಹೇಳಿದ್ದಾರೆಯೆ, ಸೌಂದರ್ಯದ ವಿವಿಧ ಮುಖಗಳ ಅನುಭವವನ್ನು ಪಡೆದಿದ್ದಾರೆಯೆ, ಎಂದು ಹೊರಟರೆ ಮೊದಲ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯದಿದ್ದರೂ, ಎರಡನೆಯ ಪ್ರಶ್ನೆಗೆ ಸುಮಾರಾದ ಉತ್ತರ ದೊರೆಯುತ್ತದೆ. ಸೌಂದರ್ಯವನ್ನು ಕುರಿತು, ಅದರ ಪರಿಗಳನ್ನು ಕುರಿತು ಯಾವ ಸಿದ್ಧಾಂತರೂಪವಾದ ಸೂತ್ರಗಳು ದೊರೆಯದಿದ್ದರೂ, ಸಂಸ್ಕೃತ ಕವಿಗಳಂತೆ ನಮ್ಮವರು ಚೆಲುವಿನ ಹಲವು ಮುಖಗಳನ್ನು ಕಂಡು ಹಾಡಿದ್ದಾರೆ. ಸೌಂದರ‍್ಯವನ್ನು ಕುರಿತು ಸಂಸ್ಕೃತ ಕವಿಗಳು ಬಳಸಿರುವ ಪದಗಳ ಜೊತೆಗೆ ‘ಸೊಗಸು’ ‘ರಮ್ಯ’ ‘ವಿಳಾಸ’ ‘ದೇಸೆ’ ‘ಗಾಡಿ’ ‘ಪುರುಳ್’ ‘ಮೆಯ್ಸಿರಿ’ ‘ಕೊಂಕು’ ‘ಅಲಂಪು’ ‘ಪೆಂಪು’ ಇತ್ಯಾದಿ ಪದಗಳಿಂದ ಚೆಲುವಿನ ಪರಿಗಳನ್ನು ಹೆಸರಿಸಿದ್ದಾರೆ. ಈ ಕವಿಗಳ ದೃಷ್ಟಿ ಮತ್ತು ಸೃಷ್ಟಿ ಬಹುಮಟ್ಟಿಗೆ ಸಂಸ್ಕೃತಕಾವ್ಯ ಮಾರ್ಗದಲ್ಲಿ ಹರಿದು ಬಂದರೂ, ಅವರಲ್ಲಿಯೂ ಸ್ವತಂತ್ರವಾದ ಪ್ರತಿಭೆಯ ವಿಶಿಷ್ಟ ದೃಷ್ಟಿಯ ಮತ್ತು ಸೃಷ್ಟಿಯ ಕೆಲವು ಮಂದಿ ಕವಿಗಳು ಕಂಡು ಬರುತ್ತಾರೆ. ಪಂಪ, ಹರಿಹರ, ಲಕ್ಷ್ಮೀಶ, ನಾರಣಪ್ಪ, ನೇಮಿಚಂದ್ರ, ರತ್ನಾಕರ – ಈ ಕೆಲವರು ಕವಿಗಳಲ್ಲಿ ಕಂಡುಬರುವ ಸೌಂದರ್ಯಪ್ರಿಯತೆ, ವೈಯಕ್ತಿಕವಾದ ಹಂಬಲ ಉಳಿದವರಲ್ಲಿ ಅತಿ ವಿರಳ. ಪಂಪನ ಮಾರ್ಗವನ್ನು ಜೈನ ಕವಿಗಳೂ, ಹರಿಹರನ ಮಾರ್ಗವನ್ನು ವೀರಶೈವ ಕವಿಗಳೂ, ನಾರಣಪ್ಪನ ಮಾರ್ಗವನ್ನು ವೈಷ್ಣವ ಕವಿಗಳೂ ಅನುಕರಿಸುವುದರ ಮತ್ತು ಅನುಸರಿಸುವುದರ ಮೂಲಕ ತಮ್ಮ ಆಚಾರ‍್ಯರನ್ನು ಪುನರಾವರ್ತಿಸಿದ್ದಾರೆ. ನೇಮಿಚಂದ್ರನಲ್ಲಿ ಕಾಣುವ ಶೃಂಗಾರ ಸಂಬಂಧಿಯಾದ ಸೌಂದರ‍್ಯ ವರ್ಣಪ್ರಖರತೆ, ರತ್ನಾಕರನಲ್ಲಿ ಕಂಡು ಬರುವ ಚಿತ್ರಕತೆ, ನಾರಣಪ್ಪನಲ್ಲಿ ಕಂಡುಬರುವ ರೂಪಕ ನಿರ್ಮಾಣ ಸಾಮರ್ಥ್ಯ ಉಳಿದವರಲ್ಲಿ ಅಪೂರ್ವ. ಪಂಪನ ಸೌಂದರ‍್ಯ ದೃಷ್ಟಿಯಲ್ಲಿ ಕಾಣುವ ಆ ವಿಶಿಷ್ಟತೆ, ವೈಯಕ್ತಿಕವಾದ ಹಂಬಲ ಮತ್ತಾರಲ್ಲಿಯೂ ಕಾಣಬಾರದು. ಪಂಪನ ಕಣ್ಣು ಈ ಲೋಕದ ಚೆಲುವಿನ ಬಗೆಗೆ ತೆರೆದಷ್ಟು ಬೇರೆಯಾರದೂ ತೆರೆದಿಲ್ಲವೆನಿಸಿಬಿಡುತ್ತದೆ ಅವನ ಭಾವಗೀತಾತ್ಮಕವಾದವರ್ಣನೆಗಳನ್ನೋದಿದರೆ. ಪಂಪ ಸ್ವತಃ ರಸಿಕ. ಜೀವನದ ಚೆಲುವು ಒಲವುಗಳ ಪರಿಚಯ ಅವನಿಗಿದೆ. ಯಾವ ಯಾವ ಋತುವಿಗೆ ಯಾವ ಯಾವ ಬಟ್ಟೆಯನ್ನು ತೊಡಬೇಕೆಂಬುದನ್ನು ಬಲ್ಲವನು ಅವನು. ಪ್ರತಿಯೊಂದು ಋತುವಿನ ಸೊಗಸನ್ನೂ ಸೂಕ್ಷ್ಮವಾಗಿ ಕಂಡುಬಲ್ಲುದು ಅವನ ಕಣ್ಣು. ಅರಿಕೇಸರಿಯ ಅರಮನೆಯ ಬಂಗಾರದ ರಂಗಿನಲ್ಲೂ ದೂರದ ಬನವಾಸಿಯನ್ನು ನೆನೆದು ಹಂಬಲಿಸಿದವನು. ಈ ಹಂಬಲದ ಹಾಡುಗಳಲ್ಲಿ, ಅವನು ಚಿತ್ರಿಸಿರುವ ಸೊಗಸಾದ ಪ್ರಕೃತಿ ಚಿತ್ರಣಗಳಲ್ಲಿ ಅವನ ಸೌಂದರ್ಯದೃಷ್ಟಿಯ ವಿಶಿಷ್ಟತೆಯನ್ನು ಕಾಣಬಹುದು. ಹರಿಹರ ಪ್ರಧಾನವಾಗಿ ಭಕ್ತಕವಿ. ಅವನೂ ಮಳೆ ಗಾಳಿ ಬಿಸಿಲುಗಳಲ್ಲಿ ಬೆಳೆದವನು. ಸುತ್ತಣ ಲೋಕದ ಚೆಲುವನ್ನು ಅವನು ಗುರುತಿಸಿದ್ದಾನೆ. ಆದರೆ ಅವನ ಸೌಂದರ‍್ಯೋಪಾಸನೆಯೇನಿದ್ದರೂ ಪಂಪಾವಿರೂಪಾಕ್ಷನ ಮಂದಿರಕ್ಕೆ ಸೋಪಾನ ಮಾತ್ರ. ರತ್ನಾಕರನ ಭರತ ಚಕ್ರಿಯೂ ಅಷ್ಟೆ. ಈ ಲೋಕದ ಹೊರಗಿನ ಚೆಲುವನ್ನು ನೋಡನೋಡುತ್ತಲೇ ಅಂತರಂಗದ ಸೌಂದರ‍್ಯದ ಬೆಳಕಿನ ಕಡೆಗೆ ಅವನದೃಷ್ಟಿ ಹೊರಳುತ್ತದೆ. ಪಂಪನಿಗಾಗಲಿ, ರತ್ನಾಕರನಿಗಾಗಲಿ ಈ ಲೋಕದ ಚೆಲುವನ್ನು ಬಣ್ಣಿಸುವ ಹಂಬಲವಿದ್ದರೂ ಅದೇ ನಿಲುಗಡೆಯಲ್ಲ ಎನ್ನುವುದು ಗೊತ್ತಿದೆ. ಇಂದ್ರಿಯಾರಾಮತೆಯ ಭೋಗ ಸೌಂದರ‍್ಯವೇನಿದ್ದರೂ ‘ಇನಿಯವು ಮೊದಲೊಳ್ ನಂಜಿನ ಪನಿವೊಲ್ ಬಳಿಕ್ಕೆಯ್ದೆ ಮುಳಿದು ಕೊಂದಿಕ್ಕುವುವು’ ಎನ್ನುವುದನ್ನು ತಿಳಿಯಬೇಕು ಎನ್ನುತ್ತಾನೆ ಪಂಪ. ಕೇವಲ ಮನೋಹರವಾದ, ಈ ಲೋಕದಲ್ಲಿ ನಮ್ಮ ಸುಖವನ್ನು ಪೋಷಿಸುವ ಚೆಲುವೇನಿದ್ದರೂ ವಜ್ರಬಾಹು ಮಹಾರಾಜನು ಕಂಡ ಮೋಡದಂತೆ ನೋಡನೋಡುತ್ತಲೇ ಕರಗಿಹೋಗುತ್ತದೆ.[1] ವಜ್ರದಂತ ಮಹಾರಾಜನಿಗೆ ಪ್ರತೀಹಾರಿಯೊಬ್ಬ ತಂದು ಒಪ್ಪಿಸಿದ ಸುಂದರವಾದ ಕಮಲದ ಹೂವು ಕೂಡಾ ಒಂದು ದುಂಬಿಯ ಸಾವಿನ ಪಂಜರವಾಗಿತ್ತು.[2] ಸೌಂದರ್ಯವೂ ಸಾವಾಗಬಹುದು ಭೋಗಿಯಾದವನಿಗೆ. ಶ್ರೀಮತಿ ವಜ್ರಜಂಘರ ಕತೆಯಲ್ಲೂ ಇದೇ ವಿಷಯ. ಇದ್ದಕ್ಕಿದ್ದ ಹಾಗೆಯೇ ಕಾಳಾಗರುಧೂಮವೇ ಕಾಳಾಹಿಯಾಗಿ ದಂಪತಿಗಳಿಬ್ಬರನ್ನೂ ಬಲಿ ತೆಗೆದುಕೊಂಡಿತು. ಬೆಳಗುವ ಸೊಡರ ಕುಡಿ ಆರಿದಾಗ ಮನೆಯಲ್ಲಿ ತಮವು ಹಬ್ಬುವಂತೆ ಜೀವ ತನುವಿನಿಂದ ತೊಲಗಿದೊಡನೆಯೇ ಅವರ ಸುಂದರ ಶರೀರಗಳೂ ರೂಪಳಿದು ಹೋದುವು.[3] ಆದುದರಿಂದ ದೇಹದ ಸೌಂದರ‍್ಯವಾಗಲೀ ಸುಖಸಂಬಂಧಿಯಾದ ಸೌಂದರ‍್ಯದ ಸಾಮಗ್ರಿಗಳಾಗಲೀ, ಮನೋಹರವಾದರೂ ನಶ್ವರ; ಅವುಗಳಲ್ಲಿ ರಮಿಸಿ ವಿರಮಿಸಿದರೆ ಆತ್ಮಘಾತಕ. ಈ ಕಾರಣದಿಂದ ಜೀವಕ್ಕೆ ‘ಜಿನೇಂದ್ರ ಚರಣಂ ಶರಣಂ. ‘ಏಕೆಂದರೆ ಕಿಡುವ ಈ ಎಲ್ಲ ಚೆಲುವನ್ನೂ ಮೀರಿದುದು ಆ ಜಿನನ ಚಿರಂತನ ಸೌಂದರ‍್ಯ. ಜಿನನ ಸೌಂದರ್ಯವೇ ಈ ಎಲ್ಲ ಸೌಂದರ‍್ಯಗಳ ಗುರಿ. ‘ನಿನಗೆ ರಸಮೊಂದೆ ಶಾಂತಮೆ ಜಿನೇಂದ್ರ’ ಎಂದು ಜೈನ ಕವಿಗಳು ಆ ಶಾಂತ ಶಿವ ಸುಂದರವಾದ ಜಿನಮೂರ್ತಿಯ ಚೆಲುವನ್ನು ಸ್ತುತಿಸಿದ್ದಾರೆ. ಅದನ್ನು ಕುರಿತು-

ಏಕರೂಪಮೆ ಜಗಕ್ಕಾಶ್ಚರ್ಯಮಂ ಪುಟ್ಟಿಸುತ್ತಿದೆ
ಮಾಣಿಕ್ಯ ಜಿನೇಂದ್ರಬಿಂಬಮೆ ಜಯಂ ಭದ್ರಂ ಶುಭಂ ಮಂಗಳಂ
(ಆದಿಪುರಾಣ : ೧೬-೫)

ಎಂದು ಪಂಪನು ಆ ಸೌಂದರ‍್ಯವನ್ನು ಹಾಡಿ, ಗತರಾಗನಾದ ವೀತರಾಗನ ಚೆಲುವು-

ಪಳುಕಿನ ಪಾಪೆಯನಮರ್ದಿಂ ತೊಳೆದಂತೊರ್ಮೊೞದ ದಿವ್ಯವಪು
ಮಣಿಮಯ ಕುಂಡಲ ಮಕುಟ ಕಟಕ ಭೂಷಣ ವಿಲಾಸದಿಂದೇಂ
ವಿಲಾಸಮಂ ತಾಳ್ದಿದುದೋ        (ಆದಿಪುರಾಣ ೬-೩೯)

ಎಂದು ವರ್ಣಿಸುತ್ತಾನೆ. ರತ್ನಾಕರನೂ ಇದೇ ಮಾತನ್ನು ಹೇಳುತ್ತಾನೆ. ಜೀವಕ್ಕೆ ಒಂದರ ಅನುಭವ ಮುಗಿದ ನಂತರ ಮತ್ತೊಂದರ ಅನುಭವ ಬರುತ್ತದೆ ಎಂದಲ್ಲ. ಈ ಲೋಕದ ಚೆಲುವಿನ ನಡುವೆ ಬಾಳುತ್ತಲೇ ಪರಮಾತ್ಮದ ಚೆಲುವಿನಲ್ಲಿ ಚಿತ್ತವನ್ನಿಡುವ ಚಾತುರ‍್ಯವೇ ಯೋಗ ಎಂಬ ಮತವನ್ನು ಮಂಡಿಸಿದ್ದಾನೆ. ಅವನು ಹೇಳುವ ಪರಮವಾದ ಆ ರೂಪು-

ರೂಪೆಲ್ಲ ಬೆಳಗು ರೂಪೆಲ್ಲ ಸುಜ್ಞಾನವಾ
ರೂಪೆಲ್ಲ ದರ್ಶನಶಕ್ತಿ.
(ಭರತೇಶ ವೈಭವ – ಪರ್ವಯೋಗ ಸಂಧಿ ೨೬)

ಎಂದು ‘ಭರತೇಶ ವೈಭವದಲ್ಲಿ’ ವರ್ಣಿಸಿದ್ದಾನೆ. ಹರಿಹರನ ದೃಷ್ಟಿಗೆ ಕಾಣುವ ಚೆಲುವೆಲ್ಲವೂ ಶಿವಾರ್ಪಿತವಾದುದು. ಅವನ ಪುಷ್ಪ ರಗಳೆಯಲ್ಲಿ ನಮಗೆ ಅವನು ಹೂವಿನ ಸೊಗಸನ್ನು ಒಲಿಯುವಂತೆ ಕಂಡರೂ, ಆ ಒಲವು ಹೂವಿನ ಸೌಂದರ‍್ಯದ ಬಗೆಗೆ ತಾಳಿದ ಮನೋಭಾವ ಎನ್ನುವುದಕ್ಕಿಂತ, ಆ ಹೂವುಗಳೇನಿದ್ದರೂ ಶಿವಪೂಜೆಯ ಸಾಮಗ್ರಿ ಎನ್ನುವ ಭಾವವನ್ನು ಪೋಷಿಸುವಂತೆ ತೋರುತ್ತದೆ. ‘ಗಿರಿಜಾಕಲ್ಯಾಣ’ದಲ್ಲಿ ಪಾರ್ವತಿಯ ತಪೋಭೂಮಿಯ ಸುತ್ತ ಎಂಥ ಮನೋಹರವಾದ ಋತು ವರ್ಣನೆಯ ರಾಸಲೀಲೆ ನಡೆದಿದೆ; ಪಾರ್ವತಿ ತಪಸ್ಸಿಗೆ ಕುಳಿತೊಡನೆಯೇ ಕವಿ ನಮ್ಮ ಎದುರಿಗೆ ಮಳೆಗಾಲದ, ಛಳಿಗಾಲದ, ಶರತ್ಕಾಲದ ದಿಬ್ಬಣವನ್ನು ತೆರೆಯುತ್ತಾನೆ. ಈ ಎಲ್ಲ ಋತುಗಳೂ ಪಾರ್ವತಿಯ ಸುತ್ತಲೂ, ತಾಯಿಯ ಸುತ್ತ ಆಡುವ ಸುಂದರವಾದ ಮಕ್ಕಳಂತೆ ತೋರುತ್ತವೆ. ಸೃಷ್ಟಿಯ ಸಮಸ್ತ ಸೌಂದರ‍್ಯದ ಸಾರವನ್ನೇ ಹರಿಹರ ಜಗನ್ಮಾತೆಯಾದ ಪಾರ್ವತಿಯ ಪಾತ್ರದಲ್ಲೆಂತೋ ಅಂತೆ ‘ಹರನ ಪರತತ್ವಮಯ ಸೌಂದರ್ಯರೂಪ’ದಲ್ಲಿಯೂ ಕಂಡರಿಸಿದ್ದಾನೆ. ನೇಮಿಚಂದ್ರನಾದರೋ ತನ್ನ ಕಾವ್ಯವಾದ ‘ಲೀಲಾವತಿ’ಯನ್ನು ‘ಶೃಂಗಾರ ಕಾರಾಗೃಹ’ವೆಂದು ಕರೆದಿದ್ದಾನೆ. ‘ಸ್ತ್ರೀರೂಪಮೇ ರೂಪಂ ಶೃಂಗಾರಮೆ ರಸಂ’ ಎಂದು ಸಾರಿದ ಈ ಕವಿ ತನ್ನ ಕಾವ್ಯದಲ್ಲಿ ಶೃಂಗಾರ ಸಂಬಂಧಿಯಾದ ಇಂದ್ರಿಯಸೌಂದರ್ಯವನ್ನು ಸೆರೆಗೈದಿದ್ದಾನೆ. ಕವಿಕುಲ ಗುರುವಾದ ನಾರಣಪ್ಪ ಪಾತ್ರಪಾತ್ರಗಳ ಅಂತರಂಗದ ಭಾವ ತುಮುಲಗಳ ಸೌಂದರ‍್ಯವನ್ನು ಎಂತೋ ಅಂತೆ, ತಾನು ಕಂಡುಂಡ ಹಲವು ಬಗೆಯ ಚೆಲುವುಗಳನ್ನು ಶಕ್ತಿ ಪೂರ್ಣವಾದ ರೂಪಕಗಳಲ್ಲಿ ಹಿಡಿದಿರಿಸಿ ‘ರೂಪಕ ಸಾಮ್ರಾಜ್ಯದ ಚಕ್ರವರ್ತಿ’ ಎನಿಸಿಕೊಂಡಿದ್ದಾನೆ. ಲಕ್ಷ್ಮೀಶ ತನ್ನ ಕಾವ್ಯವನ್ನು ‘ಕೃಷ್ಣಚರಿತಾಮೃತ’ವೆಂದು ಹೇಳಿಕೊಂಡರೂ, ಯೂಲಿಸಿಸ್ಸಿನ ಹಡಗಿನಂತೆ ಅವನ ಯಜ್ಞದ ಕುದುರೆ ಕಥೆಯ ರಥದಲ್ಲಿ ನಮ್ಮನ್ನು ಕೂರಿಸಿಕೊಂಡು ಚಿತ್ರವಿಚಿತ್ರವಾದ ನೋಟಗಳ ಮತ್ತು ಘಟನೆಗಳ ನಡುವೆ ನಮ್ಮನ್ನು ಸುತ್ತಿಸುತ್ತದೆ. ಈ ಪರ‍್ಯಟನದಲ್ಲಿ ಅಲ್ಲಲ್ಲಿ ಸುಂದರವಾದ ನೋಟಗಳ ಚಿತ್ರಪಟಗಳನ್ನು ತೆರೆಯುತ್ತಾ ಹೋಗುತ್ತದೆ ಲಕ್ಷ್ಮೀಶನ ಬಣ್ಣದ ಕುಂಚ. ಇನ್ನುಳಿದ ಕವಿಗಳಲ್ಲಿ ಅಲ್ಲೊಂದು ಇಲ್ಲೊಂದು ವಿಶಿಷ್ಟವಾದ ಸೌಂದರ್ಯದ ಹೊಳಹು ಕಂಡರೂ ಎಲ್ಲವೂ ಬಹುಮಟ್ಟಿಗೆ ಅಲ್ಲಿಂದ ಇಲ್ಲಿಂದ ಒಂದೊಂದು ಎಳೆಯನ್ನು ತಂದು ನೆಯ್ದ ವಸ್ತ್ರಗಳು. ಮಾತೆತ್ತಿದರೆ ಕವಿಸಮಯ ಭಂಡಾರದ ಮುದ್ರೆಯನ್ನೊಡೆದು ಅಳಿಗಿಳಿ ಕೋಗಿಲೆ ಚಾತಕಾದಿಗಳನ್ನೂ, ಕಮಲ ಚಂಪಕ ಚೂತಾದಿಗಳನ್ನೂ ಲಗ್ಗೆ ನುಗ್ಗಿಸುತ್ತಾರೆ ಕಾವ್ಯದ ತುಂಬ. ಒಂದೇ ಕಮಲವನ್ನು ಕಾಲಿಗೆ, ಕಣ್ಣಿಗೆ, ಕೈಗೆ, ಮುಖಕ್ಕೆ ಹೋಲಿಸಿ ಹೋಲಿಸಿ ಸಾಕುಮಾಡಿಬಿಡುತ್ತಾರೆ. ಹತ್ತನೆಯ ಶತಮಾನದಿಂದ ಹಿಡಿದು ಹದಿನೆಂಟನೆಯ ಶತಮಾನದ ಕವಿಯವರೆಗೂ ಅದೇ ನೂಲು, ಅದೇ ಮಗ್ಗ. ಚಂಪುವೋ, ಷಟ್ಪದಿಯೋ, ರಗಳೆಯೋ ಅದೇ ರಾಗ, ಅದೇ ತಾಳ. ಹೀಗಾಗಿ ಹಿಂದಿನ ಕಾವ್ಯಗಳನ್ನು ಓದುವ ಸಹೃದಯ ಕಾವ್ಯದ ಉದ್ದಕ್ಕೂ ಪ್ರತಿಯೊಂದು ಹಂತದಲ್ಲಿಯೂ ಕಾವ್ಯಸೌಂದರ‍್ಯಾನುಭವವನ್ನು ಪಡೆಯುವೆನೆಂದು ಹೊರಟರೆ ನಿರಾಶನಾಗಬೇಕಾಗುತ್ತದೆ. ವಸ್ತುವೊಂದನ್ನು ಕಾವ್ಯಕ್ಕೆ ಆರಿಸಿಕೊಂಡ ಕವಿ ಸುದೀರ್ಘವಾಗಿ ಅಷ್ಟಾದಶವರ್ಣನೆಗಳ ಪಟ್ಟಿಯೊಂದನ್ನಿಟ್ಟುಕೊಂಡು ಬರೆಯುವಾಗ ಎಷ್ಟೋ ಕಡೆ ಪಂಡಿತರನ್ನು ಮೆಚ್ಚಿಸುವ, ಮತ ವಿಚಾರಗಳನ್ನು ಪ್ರತಿಪಾದಿಸುವ ಪ್ರಯತ್ನದಲ್ಲಿ ತೊಡಗಬೇಕಾದುದರಿಂದ ಅವನು ಇಡೀ ಕಾವ್ಯವನ್ನು ರಸಾವೇಶದಿಂದಲೇ ಬರೆದಿರುವನೆಂದು ಹೇಳಲಾಗುವುದಿಲ್ಲ. ಇದರಿಂದಾಗಿ ರಸಾನುಭವವೆಂಬುದು ಕಾವ್ಯದ ಅಂಶ ಅಂಶಗಳಲ್ಲಿ ಅನುಭೂತವಾಗುವುದಕ್ಕಿಂತ ಅದು ಇಡೀ ಕಾವ್ಯವನ್ನು ಓದಿ ಮುಗಿಸಿದನಂತರ ಸಹೃದಯರಲ್ಲಿ ಆಗುವ ಅನುಭವದ ಪರಿಣಾಮ – ಎಂದು ಸಂಸ್ಕೃತ ಆಲಂಕಾರಿಕರು ಹೇಳಿದ ಅಭಿಪ್ರಾಯವನ್ನು ಸಂಸ್ಕೃತ ಕಾವ್ಯಗಳಂತೆ ಅವುಗಳನ್ನು ಅನುಸರಿಸಿದ ಕನ್ನಡ ಕಾವ್ಯಗಳೂ ಸಮರ್ಥಿಸುತ್ತವೆ. ಆದರೆ ಸಮರ್ಥರಾದ ಕವಿಗಳು, ಸಾಮಾನ್ಯ ಕವಿಗಳು ಎಲ್ಲೆಲ್ಲಿ ಕೇವಲ ನಿಯಮಪಾಲನೆಯಿಂದ ಕಾವ್ಯದ ಹಲವು ಭಾಗಗಳನ್ನು ಶುಷ್ಕವಾದ ಮರುಭೂಮಿಯನ್ನಾಗಿ ಮಾಡುವರೋ, ಅಲ್ಲೆಲ್ಲಾ ನಗುವ ನಂದನವನ್ನು ಸೃಜಿಸಬಲ್ಲರು ಎನ್ನುವುದಕ್ಕೆ ಪಂಪ ನಾರಣಪ್ಪರಂಥವರು ಚಿತ್ರಿಸಿರುವ ಹಲವು ಸಂದರ್ಭಗಳೇ ಸಾಕ್ಷಿ.ಅದೂ ಅಲ್ಲದೆ ಕವಿಗಳ ಸೌಂದರ್ಯಾಭಿರುಚಿ ಮತ್ತು ಸೌಂದರ್ಯಾನುಭವ ಅವರು ಆರಿಸಿಕೊಂಡಿರುವ ವಸ್ತುವಿನಮೇಲೆ ಮತ್ತು ಅವರು ನಿರ್ವಹಿಸಿರುವ ರೀತಿಯ ಮೇಲೂ ನಿಂತಿದೆ. ಇದನ್ನು ವಸ್ತು ಸೌಂದರ್ಯ ಮತ್ತು ಕಥನ ಸೌಂದರ್ಯ ಎಂದು ಕರೆಯಬಹುದು. ಜಿನಕಥೆಯನ್ನು ವಸ್ತುವನ್ನಾಗಿ ತೆಗೆದುಕೊಂಡ ಎಷ್ಟು ಜನ ಜೈನ ಕವಿಗಳು ಪಂಪನಂತೆ, ರತ್ನಾಕರನಂತೆ ಸುಂದರವಾಗಿ ಚಿತ್ರಿಸಿದ್ದಾರೆ? ಪಂಪ, ರನ್ನ, ಕುಮಾರವ್ಯಾಸರು ವ್ಯಾಸಭಾರತದ ಕಥೆಯನ್ನೇ ಕಾವ್ಯಕ್ಕೆ ತೆಗೆದುಕೊಂಡರೂ ಅವು ಮೂಲದಿಂದ ಎಷ್ಟರಮಟ್ಟಿಗೆ ಭಿನ್ನವಾಗಿವೆ, ವಿಶಿಷ್ಟವಾಗಿವೆ, ಸುಂದರವಾಗಿವೆ ಎಂಬುದನ್ನು ತಾರತಮ್ಯದೃಷ್ಟಿಯಿಂದ ನೋಡಿದರೆ ವೇದ್ಯವಾಗದಿರದು. ರಾಮಾಯಣದ ಕತೆಯನ್ನು ತೆಗೆದುಕೊಂಡ ನಾಗಚಂದ್ರ ರಾವಣನ ಪಾತ್ರವನ್ನು ನಿಜವಾಗಿಯೂ ತುಂಬ ಸುಂದರವಾಗಿ ಕಂಡಿದ್ದಾನೆ, ಕಂಡರಿಸಿದ್ದಾನೆ ಎನಿಸುವುದಿಲ್ಲವೇ? ಹರಿಶ್ಚಂದ್ರನ ಕತೆಯನ್ನು ತೆಗೆದುಕೊಂಡ ರಾಘವಾಂಕ ಅದನ್ನೊಂದು ಶ್ರೇಷ್ಠವಾದ ರಸವತ್ ಕೃತಿಯನ್ನಾಗಿ ಮಾಡಿಕೊಂಡಿಲ್ಲವೆ? ಆದರೆ ಈ ಎಲ್ಲ ಕತೆಗಳಲ್ಲಿ ಜನಜೀವನ ಮತ್ತು ಅದರ ಸೌಂದರ್ಯ ಎಲ್ಲಿದೆ? ಎಲ್ಲ ಕವಿಗಳೂ ರಾಜಮಹಾರಾಜರ ಕತೆಗಳನ್ನು ಕಾವ್ಯಕ್ಕೆ ವಸ್ತುವನ್ನಾಗಿ ಮಾಡಿಕೊಂಡದ್ದರಿಂದ ಕವಿಯ ಕಣ್ಣು ಸದಾ ರಾಜಮಹಾರಾಜರ ಪಥಗಳಲ್ಲಿಯೇ ಸಂಚಾರ ಹೊರಟಿದೆಯೇ ಹೊರತು ಜನಸಾಮಾನ್ಯರ ಸೌಂದರ್ಯದ ಕಡೆ ಹೋಗಿಲ್ಲ ಎನ್ನಿಸುತ್ತದೆ. ಹೀಗಾಗಿ ನಮಗೆ ಕಾವ್ಯಗಳಲ್ಲಿ ಅಂದಂದಿನ ಸಮಕಾಲೀನ ಜೀವನದ ನೈಜವಾದ ಪರಿಚಯವಾಗಲೀ, ಅದರ ಸೌಂದರ್ಯವಾಗಲೀ ವಿಶೇಷವಾಗಿ ಕಾಣದು. ಪಂಪನಲ್ಲಿ ಅಲ್ಲಲ್ಲಿ, ನಯಸೇನನು ಕೊಡುವ ತೆರೆತೆರೆಯಾದ ಮಾಲೋಪಮೆಗಳಲ್ಲಿ, ಬ್ರಹ್ಮಶಿವನ ‘ಸಮಯ ಪರೀಕ್ಷೆ’ಯಲ್ಲಿ, ಹರಿಹರನ ರಗಳೆಗಳಲ್ಲಿ ಜನಸಾಮಾನ್ಯ ಜೀವನದ ಹೊಳಹುಗಳನ್ನು ಕಾಣಬಹುದು. ತನ್ನ ಸಹಸ್ರಾರು ರಮಣೀಮಣಿಯರೊಂದಿಗೆ ವಸಂತ ವಿಹಾರಕ್ಕೆ ಬಿಜಯಂಗೈದು ಮಾವಿನ ಮರಕ್ಕೂ ಮಲ್ಲಿಗೆ ಬಳ್ಳಿಗೂ ಮದುವೆಯನ್ನು ಮಾಡಿಸುವ ಕಥಾನಾಯಕನಾದ ಮಹಾರಾಜನ ಆಮೋದ ಪ್ರಮೋದಗಳಲ್ಲಿ, ರಣರಂಗದ ವೀರರಸೋದ್ದೀಪಕ ಪ್ರಸಂಗಗಳಲ್ಲಿ, ನಮಗೆ ಆ ರಾಜರ ನಿಜವಾದ ಜೀವನ ಸೌಂದರ‍್ಯವಾದರೂ ಕಾಣಸಿಗುವುದೆ? ಇನ್ನು ಜನಜೀವನದ ಮಾತೆಲ್ಲಿ ಬಂತು? ಜನಸಾಮಾನ್ಯದ ಸೌಂದರ‍್ಯವನ್ನು ಕಾಣಬೇಕಾದರೆ ನಾವು ಜನಪದ ಕಾವ್ಯಕ್ಕೇ ಹೋಗಬೇಕು. ಹಳೆಯ ಕಾವ್ಯಗಳಲ್ಲಿ ಹುಡುಕಿದರೆ ಕಂಡುಬರುವ ಜನಸಾಮಾನ್ಯರೋ ಅಂಥ ಗೌರವಸ್ಥರೇನಲ್ಲ. ಚಂದ್ರಿಕಾ ವಿಹಾರದಲ್ಲಿ ಕಾಣುವ ‘ಭೋಗಸಹಾಯಕರಪ್ಪ’ ವಿಟವೀಟೀ ಜನ ಮತ್ತು ಅವರ ಪ್ರಣಯ ಸಲ್ಲಾಪಗಳು; ಹೊಲಗಳಲ್ಲಿ ನಿಂತು ಗಿಳಿಗಳನ್ನು ಓಡಿಸುವ ಅಬಲಾಜನರು; ದಾರಿದಾರಿಗಳಲ್ಲಿ ಅರವಟ್ಟಿಗೆಗಳಲ್ಲಿ ನಿಂತು ತೃಷಿತರಾದ ಪಾಂಥರಲ್ಲಿ ಬೇಟವನ್ನಗ್ಗಲಿಸುತ್ತಾ ನೀರೆರೆವ ನೀರೆಯರು. ಅವರಾರೂ ಈ ನೆಲದ ಮಣ್ಣಿನಿಂದ ಬಂದವರೆನ್ನಿಸುವುದಿಲ್ಲ. ಇನ್ನು ಈ ಕಾವ್ಯಗಳ ರೀತಿ ಪಂಡಿತಪ್ರಿಯವಾದ ರೀತಿ. ಪುತ್ರದೋಹಳಕ್ಕೆ ಐವತ್ತು ಪದ್ಯಗಳು. ಪುತ್ರದೋಹಳದಿಂದ ಪರಿತಪಿಸುವ ಮಹಾರಾಣಿಯನ್ನು ಮಹಾರಾಜನು ‘ತಮಗೆ ಏನಾಗಿದೆ’ ಎಂದು ಪ್ರಶ್ನಿಸುವುದೂ ನೂರು ಪದ್ಯಗಳ ಆಲಂಕಾರಿಕ ಶೈಲಿಯಲ್ಲಿ. ಸಾವಿರ ವರುಷಗಳ ಕಾಲ ಕವಿಗಳಿಗೆ ಹೇಳಿದ್ದೇ ಹೇಳುವುದರಲ್ಲಿ ಬೇಸರವಿಲ್ಲ; ಸಹೃದಯರಿಗೂ ಕೇಳಿದ್ದೆ ಕೇಳುವುದರಲ್ಲಿ ಬೇಸರವಿಲ್ಲ. ಅವರು ಕೊಟ್ಟಿದ್ದೇ ಪಂಚಾಮೃತ, ಇವರು ಉಂಡದ್ದೇ ರಸಾಯನ ಎಂಬಂತಿದೆ ಅವುಗಳ ರೀತಿ!. ಕಾವ್ಯವನ್ನು ಬರೆಯಲೂ, ಕಾವ್ಯವನ್ನು ಕೇಳಲೂ ಕವಿಗೂ ಸಹೃದಯರಿಗೂ ಸಾಕಷ್ಟು ವಿರಾಮವಿತ್ತೋ ಏನೋ. ಸಂಪ್ರದಾಯವನ್ನು ಪಾಲಿಸುವ, ತನ್ಮೂಲಕ ಪಂಡಿತರನ್ನೂ ವಿವಿಧ ಕಳಾಮಂಡಿತರನ್ನೂ ತೃಪ್ತಿಗೊಳಿಸುವುದೇ ಕಾವ್ಯ ರಚನೆಯ ಉದ್ದೇಶವಿದ್ದಿತೇನೋ ಎನಿಸುತ್ತದೆ. ಕವಿಗಳ ಚಮತ್ಕಾರ ಶ್ಲೇಷಾದಿ ಅಲಂಕಾರಗಳ ಗರುಡಿಯಲ್ಲಿ ಸುತ್ತಲು ಪಂಡಿತರಿಗೂ ಓದುಗರಿಗೂ ಆಸಕ್ತಿ.[4] ಆದರೂ ಈ ಸಂಪ್ರದಾಯದ ಕಣ್ಣಪಟ್ಟಿಯನ್ನು ತೂರಿಯೂ ಪ್ರತಿಭಾವಂತ ಕವಿಗಳ ಕಣ್ಣು ಸೌಂದರ‍್ಯದ ನೂರು ಪರಿಗಳನ್ನು ಕಂಡದ್ದುಟು; ಎಲ್ಲ ಕಾಲಕ್ಕೂ ನಿಲ್ಲುವಂಥ ಚೆಲುವಿನ ಚಿತ್ರಗಳನ್ನು ಕಂಡರಿಸಿದ್ದುಂಟು. ಹೀಗಾಗಿ ಸಾವಿರ ವರುಷ ಒಂದೇ ಜಾಡಿನಲ್ಲಿ ಕಾವ್ಯರಚನೆ ಸಾಗಿದೆ. ಕವಿಗಳೂ ಅವರ ಗ್ರಂಥಗಳೂ ಬಿದ್ದಿವೆ ರಾಶಿರಾಶಿಯಾಗಿ – ಸಾನುಪ್ರದೇಶವಾಗಿ, ಎದ್ದಿವೆ ನಾಲ್ಕಾರು ಶಿಖರಗಳು ಅಲ್ಲೊಂದು ಇಲ್ಲೊಂದು ಎತ್ತರವಾಗಿ.

* * *

 


[1] ಆದಿಪುರಾಣ : ೪-೬೩, ೬೪.

[2] ಅಲ್ಲೇ ೪-೭೧, ೭೨.

[3] ಅಲ್ಲೇ ೫- ೧೫

 

[4] ಅಂದಿನ ಕವಿಗಳ ಕಾವ್ಯರಚನೆಗೆ ಹಿನ್ನೆಲೆಯಾದ ಜನಜೀವನದ ದೃಷ್ಟಿ, ಅಭಿರುಚಿ, ಇವುಗಳನ್ನು ಇಂದು, ಹಿಂದಿನ ಕೃತಿಗಳನ್ನು ಬೆಲೆ ಕಟ್ಟುವ ನಾವು ಮರೆಯಬಾರದು. ಸಂಪ್ರದಾಯಬದ್ಧವಾದ ರೀತಿಯಲ್ಲೇ ಕಾವ್ಯರಚನೆಯನ್ನು ಮಾಡಿದರೂ ಅದರಲ್ಲೂ ಸಾಧ್ಯವಾದಷ್ಟು ವೈವಿಧ್ಯವನ್ನೂ ನಾವೀನ್ಯತೆಯನ್ನೂ ತರಲು ಅವರು ಶ್ರಮಿಸಿದ್ದಾರೆ ಎಂಬ ವಿಚಾರವನ್ನು ಮುಂದಿನ ಅಧ್ಯಾಯಗಳಲ್ಲಿ ತೋರಿಸಲಾಗಿದೆ.