“ಸೂರ್ಯನ ಬೆಳಕೇ ಬೀಳದ ಲಾಹೋರಿನ ಒಂದು ಓಣಿಯಲ್ಲಿ ಭಾಗ ಸುಧೀಜಿಯವರು ಒಂದು ಕೋಣಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಈ ಕತ್ತಲೆ ಕೋಣಿಯಲ್ಲಿ ತನ್ನ ಇಬ್ಬರು ಮಕ್ಕಳೊಡನೆ ವಾಸವಾಗಿದ್ದರು. ಮಕ್ಕಳ ಮುಖ ನಿಸ್ತೆಜವಾಗಿತ್ತು.”

ಹೀಗೆಂದು ದೀನಬಂಧು ಸಿ.ಎಫ್.ಆಂಡ್ರೂಸರು “ಟ್ರಿಬ್ಯುನ್”  ಎಂಬ ಪತ್ರಿಕೆಗೆ ೧೯೨೦ ರಲ್ಲಿ ಬರೆದರು.

ಗಂಡ ಸೆರೆಮನೆಯಲ್ಲಿ ಸಂಸಾರ ದುಃಖದಲ್ಲಿ

ಅವರು ಹೆಸರಿಸಿದ ಭಾಗ ಸುಧೀಜಿ ಆಗ ಒಂದು ಪಾಠಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದರು. ಸಂಬಳ ತಿಂಗಳಿಗೆ ಹದಿನೇಳು ರೂಪಾಯಿ! ಮನೆ ಬಾಡಿಗೆ ಕಳೆದು ಅವರ ಇಬ್ಬರ ಜೀವನ ಸಾಗಬೇಕಾಗಿತ್ತು. ಸಂಬಳ ಸಾಲುತ್ತಿರಲಿಲ್ಲ. ಅವರಿವರಿಂದ ಹೊಲಿಗೆಯ ಕೆಲಸ ಪಡೆದು ರಾತ್ರಿ ಎಲ್ಲ ಹೊಲಿಯುತ್ತಿದ್ದರು-ಅದೂ ಸಣ್ಣ ದೀಪದ ಬೆಳಕಿನಲ್ಲಿ.

ಈಕೆಯ ಗಂಡ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದು ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದರು. ಅನಂತರ ಲಂಡನ ವಿಶ್ವವಿದ್ಯಾನಿಲಯದಲ್ಲಿ, ಆಮೇಲೆ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದವರು. ಹಿಂದೂಧರ್ಮವನ್ನು ವಿವರಿಸಲು ದಕ್ಷಿಣ ಆಪ್ರಿಕಕ್ಕೆ ಹೋದ ಮೂದಲನೆಯ ಹಿಂದೂಧರ್ಮ ಭೋಧಕರು. ಬರ್ಮದಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು.

ಹೆಂಡತಿ ಮಕ್ಕಳು ಹೀಗೆ ಬವಣೆ ಪಡುತ್ತಿದ್ದಾಗ ಅವರಿದ್ದುದೆಲ್ಲಿ?

ದೂರದ ಅಂಡಮಾನಿನಲ್ಲಿ ಕೂಲೆ ಮಾಡಿದವರು, ದರೋಡೆಕಾರರು ಇಂತಹವರ ಮದ್ಯೆ ಸೆರೆಯಲ್ಲಿದ್ದರು. ತಿನ್ನಲಾಗದ ಹುಳ ತುಂಬಿದ ಆಹಾರ, ಕುಡಿಯಲಾಗದ ಕೊಳಕು ನೀರು, ಬೆಳಗಿನಿಂದ ರಾತ್ರಿಯವರೆಗೆ ಮೈ ಮುರಿಯ ದುಡಿತ, ಸರಿಯಾಗಿ ಕಾಲು ಚಾಚಿ ಮಲಗಲು ಸಾಧ್ಯವಾಗದ ಕತ್ತಲೆ ಕೋಣೆಯ ವಾಸ.

ಭಾರತದ ವಿಶ್ವವಿದ್ಯಾನಿಲಯದಲ್ಲಿ, ಹೂರ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸ ಮಾಡಿ ಪ್ರಶಸ್ತಿ ಗಳಿಸಿ ದೇಶ-ದೇಶಗಳಲ್ಲಿ ಕೀರ್ತಿ ಅವರಿಗೆ, ಅವರಿಗೆ ಹೆಂಡತಿ ಮಕ್ಕಳಿಗೆ ಈ ಯಾತನೆ ಏಕೆ? ಪ್ರೋಫೆಸರರಾಗಿ ಕೈತುಂಬ ಸಂಬಳ ಪಡೆದು ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಾಗಿ ಸುಖವಾಗಿ ಇರದೆ ಈ ನರಕವೇಕೆ?

ಎಲ್ಲ ಭಾರತಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ.

ಈ ಪ್ರೋಫೆಸರ್, ಸ್ವಾತಂತ್ರ್ಯವೀರ ಭಾಯಿ ಪರಮಾನಂದ.

ವೀರರ ವಂಶ

ಪರಮಾನಂದರು ವೀರರ ವಂಶದಲ್ಲಿ ಹುಟ್ಟಿದವರು. ಪರಮಾನಂದರ ಪೂರ್ವಿಕರಾದ ಭಾಯಿ ಮತಿದಾಸ್ ಎಂಬುವರು ತೀರ ಹೀಂಸೆಯನ್ನು ಅನುಭವಿಸಿ ಪ್ರಾಣ ಕೊಟ್ಟರಲ್ಲದೆ ತಮ್ಮ ಧರ್ಮವನ್ನು ಬಿಡಲಿಲ್ಲ. ಬಾಬಾ ಪರಗ ಎಂಬುವರು ಸಿಖ್ ಮತ ಸ್ಥಾಪಕ ಗುರುನಾನಕ ಜೊತೆ ಕೆಲಸ ಮಾಡಿದವರು. ಮೊಗಲ್ ದೊರೆ ಷಹಜಹಾನನ ವಿರುದ್ದದ ಹೋರಾಟದಲ್ಲಿ ಬಾಬಾ ಪರಗ ಅವರು ಗುರುನಾನಕ ಏಳು ಜನದಂಡನಾಯಕರಲ್ಲಿ  ಒಬ್ಬರಾಗಿದ್ದರು.

ಭಾಯಿ ಪರಮಾನಂದರಿಗೆ ತಮ್ಮ ಪೂರ್ವಿಕರ ತ್ಯಾಗ-ಬಲಿದಾನಗಳ ವಿಷಯ ತಿಳಿದಾಗ ತವೊ ಅದೇ ರೀತಿ ಧರ್ಮಕ್ಕಾಗಿ ಹೋರಾಡಬೇಕು, ದೇಶದ, ಮನೆತನದ ಕೀರ್ತಿಪತಾಕೆಯನ್ನು ಹಾರಿಸಬೇಕು ಎನ್ನುವ ಆಸೆ ಅವರ ಮನಸ್ಸಿನಲ್ಲಿ ಅಂಕುರಿಸಿಥಿ

ಒಂದು ಮುಖ್ಯ ಪ್ರಭಾವ.

ಪರಮಾನಂದರ ತಂದೆತಾಯಿಗಳು ಪಂಜಾಬ್ ಪ್ರಾಂತದಲ್ಲಿ, ಲಾಹೋರಿಗೆ ಸಮೀಪದ ಚೆಕವಾಲಾ ಎಂಬ ಗ್ರಾಮದಲ್ಲಿ ವಾಸವಾಗಿದ್ದರು. ಇಲ್ಲಿ ಪರಮಾನಂದರು ೧೮೭೪ ರಲ್ಲಿ ಹುಟ್ಟಿದರು.

ಈ ಗ್ರಾಮದಲ್ಲಿಯೇ ಹುಡುಗ ಪರಮಾನಂದನಿಗೆ ಪ್ರಾಥಮಿಕ ವಿದ್ಯಾಭ್ಯಾಸವಾಯಿತು. ಶಾಲೆಯಲ್ಲಿ ಅತ್ಯಂತ ಬುದ್ದಿವಂತ ವಿದ್ಯಾರ್ಥಿ ಎಂದು ಅವನು ಹೆಸರು ಪಡೆದಿದ್ದ.

ಪರಮಾನಂದನಿಗೆ ಕೇವಲ ಹದಿನಾಲ್ಕು ವರ್ಷ ವಯಸ್ಸಾಗಿದ್ದಾಗ ಅವನ ತಾಯಿ ತೀರಿಕೊಂಡರು. ಮಾತೃ ವಿಯೋಗದಿಂದ ಅವನಿಗೆ ವ್ಯಥೆಯಾಯಿತು.

ದಯಾನಂದ ಸರಸ್ವತಿ ಎಂಬುವರು ನಮ್ಮ ದೇಶದ ಹಿರಿಯರಲ್ಲಿ ಒಬ್ಬರು. ಹಿಂದೂ ಧರ್ಮದಲ್ಲಿ ತುಂಬಾ ಗೌರವವಿದ್ದವರು. ಆದರೆ ಹಿಂದೂಗಳ ಆಚರಣೆಯಲ್ಲಿ ಅನೇಕ ತಪ್ಪು ಪದ್ದತಿಗಳು ಸೇರಿಕೊಂಡಿವೆ ಎಂದು ಅವನು ತೊಡೆದು ಹಾಕಲು ಆರ್ಯಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಪರಮಾನಂದರ ತಾಯಿ ತೀರಿಕೊಂಡ ಹೊಸದರಲ್ಲಿ ಯಾರೋ ಒಬ್ಬರು, ಹುಡುಗನಿಗೆ ಸ್ವಾಮಿ ದಯಾನಂದ ಸರಸ್ವತಿಯವರು ಬರೆದಿದ್ದ “ಸತ್ಯಾರ್ಥ ಪ್ರಕಾಶ” ಎಂಬ ಪುಸ್ತಕವನ್ನು ಓದಲು ಕೊಟ್ಟರು. ಈ ಗ್ರಂಥದಲ್ಲಿ ನಮ್ಮ ವೇದಗಳು, ಪುರಾಣಗಳು ಇವುಗಳ ಬಗ್ಗೆ ವಿಚಾರ ವಿಮರ್ಶೆ ಇದೆ. ಇದನ್ನು ಓದುತ್ತಿದ್ದಂತೆ, ಬಾಲಕ ಪರಮಾನಂದರಿಗೆ ಹಿಂದೂಧರ್ಮರಾದ ದರ್ಶನವಾಯಿತು. ಸ್ವಾಮಿ ದಯಾನಂದರ ಬಗ್ಗೆ, ಅವರು ಸ್ಥಾಪಿಸಿದ ಆರ್ಯಸಮಾಜದ ಬಗ್ಗೆ ಅಪಾರ ಒಲವುಂಟಾಯಿತು. ತಾನೂ ಆರ್ಯಸಮಾಜದ ಮೂಲಕ ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂದು ಆ ಎಳೆ ವಯಸ್ಸಿನಲ್ಲೇ ನಿರ್ಧರಿಸಿದ.

ಲಾಲಾ ಹಂಸರಾಜ ಎಂಬುವರು ಆಯ್ಯಾಸಮಾಜದ ಧುರೀಣರು ಎಂಬ ವಿಷಯ ಪರಮಾನಂದರು ಲಾಲಾಜಿಯವರಿಗೆ ತಿಳಿಯಿತು. ಬಾಲಕ ಪರಮನಂದರು ಲಾಲಾಜಿಯವರಿಗೆ ಪತ್ರ ಬರೆದ : “ನಮ್ಮ ಊರಿನಲ್ಲೂ ಆರ್ಯ ಸಮಾಜದ ಕೆಲಸ ಪ್ರಾರಂಬಿಸಿ, ನಾನು ಮುಂದಾಳಾಗಿ ಕೆಲಸ ಮಾಡುತ್ತೇನೆ”. ಬಾಲಕನ ಪತ್ರ ನೋಡಿ ಲಾಲಾಜಿಯವರಿಗೆ ತುಂಬಾ ಸಂತೋಷವಯಿತು. ಹುಡುಗ ಬರೆದ ಪತ್ರ ಎಂದು ಅಸಡ್ಡೆ ಮಾಡಲಿಲ್ಲ. ಕೊಡಲೇ ಸಮಾಜದ ಪ್ರಚಾರಕರೂಬ್ಬರನ್ನು ಚೆಕ್ ವಾಲಾಗೆ ಕಳುಹಿಸಿದರು. ಪ್ರಚಾರಕರ ಆಗಮನದಿಂದ ಪರಮನಂದರಿಗೆ ಅಪಾರ ಆನಂದ. ತಾನೇ ಮುಂದಾಗಿ ನಿಂತು, ತನ್ನ ಶಾಲೆಯ ಬಾಲಕರನ್ನು ಸಂಘಟಿಸಿದರು.

ವಿದ್ಯಾಭ್ಯಾಸ, ವಿವಾಹ

ಚೆಕ್ವಾಲಾನಲ್ಲಿ ಶಿಕ್ಷಣ  ಮುಗಿದನಂತರ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಪರಮಾನಂದರು ಲಾಹೋರಿಗೆ ಹೋದರು. ಅಲ್ಲಿ ಆರ್ಯ ಸಮಾಜದವರು ನಡೆಸುತ್ತಿದ್ದ ಡಿ.ಎ.ವಿ. ಶಾಲೆಗೆ ಸೇರಿದರು. ಆರ್ಯಸಮಾಜದವರು ಸಂಸ್ಕೃತ ತರಗತಿಗೆ ಸೇರಿ, ಸಂಸ್ಕ್ರತದಲ್ಲಿ ಪರಿಣತನಾದರು.

ಎಫ್.ಎ ಪರೀಕ್ಷೇಯಲ್ಲಿ ಪಾಸ್ ಮಾಡಿದರು. ಆರ್ಯ ಸಮಾಜದ ಮುಲಕ ದೀನದಲಿತರ ಸೇವೆ ಸಲ್ಲಿಸಲು, ಡಾಕ್ಟರ್ ಆಗಬೇಕೆಂಬ ಹಂಬಲ ಅವರಲ್ಲಿತ್ತು. ಅದಕ್ಕಾಗಿ ಮೆಡಿಕಲ್ ಕಾಲೇಜಿಗೆ ಸೇರಲು ಯೋಚಿಸಿದರು. ಅಷ್ಟರಲ್ಲಿ ಲಾಲಾಜಿಯವರು ಪರಮಾನಂದರನ್ನು ಕರೆಸಿ, ಸಮಾಜದ ಕಾರ್ಯಕ್ಕಾಗಿ ಜೋಧಪುರಕ್ಕೆ ಹೊಗಲು ತಿಳಿಸಿದರು. ಅವರ ಆಜ್ಞೇಯಂತೆ  ಜೋಧಪುರಕ್ಕೆ ತೆರಳಿದರು. “ರಜಪೂತ್ ಶಾಲೆ”ಯನ್ನು ತೆರೆದ ಈ ಮಧ್ಯೆ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಅನಂತರ ಸೌಭಾಗ್ಯವತಿ ಭಾಗ ಸುಧೀಜಿ ಅವರೊಂದಿಗೆ ಪರಮಾನಂದರ ವಿವಾಹವಾಯಿತು. ಪತಿ ಪರಾಯಣೆಯಾದ ಭಾಗ ಸುಧಿಜಿಯವರು ಜೀವನ ಪಯಂತ ಪರಮಾನಂದರ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಬೆನ್ನೆಲುಬಾಗಿ ನಿಂತು ಆದರ್ಶ ಸತಿ ಎನಿಸಿಕೊಂಡರು.

ಪರಮಾನಂದರು ಎಂ.ಎ ಪರೀಕ್ಷೆಯಲ್ಲೂ ತೇರ್ಗಡೆ ಆದರು. ಆನಂತರ ದಯಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಬಿಡುವಿನ ವೇಳೆಯಲ್ಲಿ ಹಾಗೂ ರಜಾದಿನಗಳಲ್ಲಿ ಅವರು ಪಂಜಾಬಿನ ಹಳ್ಳಿಹಳ್ಳಿಗಳಿಗೆ ಹೋಗಿ ಸಾಮಾಜಿಕ ಕೆಲಸ ಮಾಡುತ್ತಿದ್ದರು.

ದಕ್ಷಿಣ ಆಫ್ರಿಕಾದಲ್ಲಿ

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಹಿಂದುಗಳು ಆರ್ಯಸಮಾಜದ ಧುರೀಣರಾದ ಲಾಲಾ ಹಂಸರಾಜರಿಗೆ ಪತ್ರವೊಂದನ್ನು ಬರೆದರು; ದಕ್ಷಿಣ ಆಫ್ರಿಕಾದ ಹಿಂದೂಗಳಿಗೆ ತಮ್ಮ ಧರ್ಮ-ಸಂಸ್ಕೃತಿಗಳ ಬಗೆ ತಿಳಿವಳಿಕೆ ಮೂಡಿಸಲು, ಆರ್ಯಸಮಾಜದಿಂದ ಧರ್ಮ ಪ್ರಚಾರಕರೊಬ್ಬರನ್ನು ಕಳುಹಿಸಬೇಕೆಂದು ಕೇಳಿಕೊಂಡರು. ಪರಮಾನಂದರ ವಿವ್ದ್ವತ್ತು, ವಾಕ್ಪಟುತ್ವ, ಕಾರ್ಯನಿಷ್ಟೆ- ಇವುಗಳನ್ನು ಗಮನಿಸಿದ್ದ ಲಾಲಾಜಿಯವರಿಗೆ, ಪರಮಾನಂದರೇ ಈ ಕೆಲಸಕ್ಕೆ ಯೋಗ್ಯರು ಎನ್ನಿಸಿತು. ಅವರನ್ನು ಕರೆಸಿ ಈ ಬಗ್ಗೆ ಕೇಳಿದರು. ಪರಮಾನಂದರು ಅತ್ಯಂತ ಸಂತೋಷದಿಂದ ಈ ಜವಾಬ್ದಾರಿ ನಿರ್ವಹಿಸಲು ಒಪ್ಪಿದರು. ಆಗ ಅವರಿಗೆ ಮೂವತ್ತೊಂದು ವರ್ಷ.

ಆಫ್ರಿಕಾ ತಲುಪಿದೊಡನೆಯೇ ಪರಮಾನಂದರು ಕಾರ್ಯೋನ್ಮುಖರಾದರು. ಆಪ್ರೀಕದಲ್ಲಿ ಹಿಂದುಗಳ ಸ್ಥಿತಿ ತುಂಬ ಹೀನಾಯವಾಗಿತ್ತು. ಭಾರತದಿಂದ ಬಹುದೂರ ಇದ್ದ ಅವರಿಗೆ ಹಿಂದೂಧರ್ಮದ ತತ್ವಗಳೇ ಮರೆಯುತ್ತ ಬಂದಿದ್ದವು. ಮದುವೆಗಳನ್ನು ಅವರು ಚರ್ಚಗಳಲ್ಲಾಗಲಿ, ಮಸೀದಿಗಳಲ್ಲಾಗಲಿ ಮಾಡಬೇಕಾಗಿತ್ತು! ಪರಮಾನಂದರು ಮೊಂಬಾಸಾ. ನೈರೋಬಿ ಮುಂತಾದ ಪಟ್ಟಣಗಳಲ್ಲಿ ಹಿಂದೂಗಳ ಸಂರ್ಪರ್ಕ ಬೆಳೆಸಿ, ಅಲ್ಲಿನ ಸಭೆಗಳಲ್ಲಿ ಹಿಂದೂಧರ್ಮ ಮತ್ತು ಸಂಸ್ಕ್ರತಿಯ ಬಗ್ಗೆ ಉದ್ಬೋಧಕ ಉಪನ್ಯಾಸಗಳನ್ನಿತ್ತರು. ಹಿಂದೂಗಳಿಗೆ ತಾವೆಲ್ಲಾ ಒಂದು ನಾಡಿನವರು ಎನ್ನಿಸುವಂತಾಯಿತು: ತಮ್ಮ ಧರ್ಮದ ವಿಷಯದಲ್ಲಿ ನಾಚಿಕೆ ಪಡಬೇಕಾಗಿಲ್ಲ, ಅಭಿಮಾನ ಪಡಬೇಕು ಎನ್ನಿಸಿತು.

ಪರಮಾನಂದರು ದಕ್ಷಿಣ ಆಪ್ರಿಕವನ್ನು ಬಿಟ್ಟು ಹದಿನೈದು ವರ್ಷಗಳ ನಂತರ, ಅವರ ಕೆಲಸವನ್ನು ಅಲ್ಲಿ ಕಂಡು ಮೆಚ್ಚಿದ್ದ ಯೋರೊಪಿಯನ್ ಒಬ್ಬರು ಅವರಿಗೆ ಬರೆದರು: “ನಿಮ್ಮನ್ನು ಕಾಣುವ ಭಾಗ್ಯ ನನಗೆ ಒದಗಿದ್ದು ೧೯೦೫ ರಲ್ಲಿ”. ಮತ್ತೇ ನಿಮ್ಮನ್ನು ಕಂಡು ನನ್ನ ಗೌರವ ಸಲ್ಲಿಸಲು ಭಾರತಕ್ಕೆ ಬರಬೇಕು ಎಂದು ನನಗೆ ತುಂಬ ಆಸೆ. ನಾವು ಬೇರೆಯಾಗಿ ಹದಿನೈದು ವರ್ಷಗಳು ಕಳೆದಿವೆ. ನನ್ನ ಬಾಳಿನಲ್ಲೂ ನಿಮ್ಮ ಬಾಳಿನಲ್ಲೂ ಏರಿಳಿತಗಳಾಗಿವೆ. ಆದರೆ ನೀವು ನನ್ನ ಗುರು. ನೀವು ತೋರಿಸಿದ ಮಾರ್ಗದಲ್ಲಿಯೆ ನಾನು ನಡೆಯುತ್ತಿದ್ದೇನೆ. ನಾನು ಈ ಕಾಗದ ಬರೆಯುವಾಗ ೧೯೦೫ ರಲ್ಲಿ ತೆಗೆದ ನಿಮ್ಮ ಭಾವಚಿತ್ರ ನನ್ನ ಮುಂದಿದೆ”.

ಭಾಯಿ ಪರಮಾನಂದರು-ಮಹಾತ್ಮ ಗಾಂಧಿ.

ಅವರ ಧರ್ಮದವನೂ ಅಲ್ಲದ, ಅವರ ದೇಶವನ್ನಾಳುತ್ತಿದ್ದ ದೇಶದವನಾದ ವ್ಯಕ್ತಿಯೊಬ್ಬನ ಮನಸ್ಸಿನ ಮೇಲೆ ಹದಿನೈದು ವರ್ಷಗಳ ನಂತರವೂ ಇಂತಹ ಪ್ರಭಾವ ಉಳಿದಿರಬೇಕಾದರೆ, ಮೂವತ್ತೊಂದು ವರ್ಷದ ಈ ತರುಣ ಎಂತಹ ವಿಶಿಷ್ಟ ಕೆಲಸ ಮಾಡಿರಬೇಕು!

ಡರ್ಬಾನಿನಲ್ಲಿ ಭಾಯಿ ಪರಮಾನಂದರು ಭಾರತೀಯರ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಭೆಯ ಅಧ್ಯಕ್ಷತೆಯನ್ನು, ಅಲ್ಲಿಯೇ ಇದ್ದ ಮಹಾತ್ಮಾ ಗಾಂಧಿಯವರು ವಹಿಸಿದ್ದರು. ಪರಮಾನಂದರ ವಿದ್ವತ್ಪೂರ್ಣ ಭಾಷಣ ಕೇಳಿ ಮಹಾತ್ಮಾಜಿಯವರು ಸಂತೋಷಪಟ್ಟು, ಸಭೆಯು ಮುಗಿದ ನಂತರ, ತಮ್ಮ ಮನೆಯಲ್ಲಿಯೇ ಸ್ವಲ್ಪ ಕಾಲವಿರಲು ಪರಮಾನಂದರನ್ನು ಆಹ್ವಾನಿಸಿದರು. ಅಂತೆಯೇ ಪರಮಾನಂದರು ಜೊಹಾನ್ಸಬರ್ಗನಲ್ಲಿ ಮಹಾತ್ಮಜಿಯವರೊಡನೆ ಸುಮಾರು ಒಂದು ತಿಂಗಳ ಕಾಲ ಇದ್ದರು. ಮಹತ್ಮಜಿಯವರ ಸರಳ, ಸಾತ್ವಿಕ ಜೀವನ ಭಯಿ ಪರಮಾನಂಡರ ಮೇಲೆ ಗಾಢವಾದ ಪರಿಣಾಮವುಂಟುಮಾಡಿತು.

ಇಂಗ್ಲೆಂಡಿನಲ್ಲಿ

ಆಪ್ರಿಕದಿಂದ ನೇರವಾಗಿ ಇಂಗ್ಲೆಂಡಿಗೆ ಹೋಗಲು ಪರಮಾನಂದರು ನಿರ್ಧರಿಸಿದರು.

ಭಾರತೀಯ ಕ್ರಾಂತಿಕಾರಿಗಳ ಪೈಕಿ ಲಾಲಾ ಹರದಯಾಳರ ಹೆಸರು ಚಿರಸ್ಠಾಯಿಯಾದುದು. ಅವರು ಆಕ್ಸ್‌ಫರ್ಡ್ ಓದುತ್ತಿದ್ದರು. ಅವರಿಗೆ ವಿಧ್ಯಾಭ್ಯಾಸಕ್ಕಿಂತ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಕೇವಲ ಶಾಂತಿಮಾರ್ಗದಿಂದ ಸ್ವಾತಂತ್ರ್ಯ ಮರಳಿ ಪಡೆಯುವದು ಅಸಾಧ್ಯವೆಂದು ಅವರಿಗೆ ಅನಿಸಿತ್ತು. ಅದಕ್ಕಾಗಿ ಅವರು ಕ್ರಾಂತಿಕಾರಿ ಮಾರ್ಗವನ್ನು ಹಿಡಿದಿದ್ದರು.

ಆಕ್ಸ್‌ಫರ್ಡ್‌ನಲ್ಲಿ ಪರಮಾನಂದರು ಹರದಯಾಳರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಪರಮಾನಂದರು ಮತ್ತು ಹರದಯಾಳರಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಫ್ರಾಯವಿದ್ದರೂ ಸ್ವಾತಂತ್ರ್ಯ­­ವನ್ನು ಹೇಗಾದರೂ ಮಾಡಿ ಗಳಿಸಲೇಬೇಕು ಎನ್ನುವ ಮೂಲಭೂತ ವಿಚಾರದಲ್ಲಿ ಸಂಫೂರ್ಣ ಸಹಮತವಿತ್ತು.

ಭಾರತದ ಚರಿತ್ರೆಯ ಅಧ್ಯಯನ

ಪರಮಾನಂದರು ಲಂಡನ್ನಿಗೆ ಬಂದರು. ಲಂಡನ್ನಿನ ಬ್ರಿಟಿಷ ಮ್ಯೊಸಿಯಂನಲ್ಲಿ ಭಾರತೀಯ ಇತಿಹಾಸಕ್ಕೆ ಸಂಬಂಧಪಟ್ಟ ಅಪೂರ್ವ ದಾಖಲೆಗಳು ಇವೆ ಎಂಬ ವಿಷಯ ಅವರಿಗೆ ಮೊದಲೇ ಗೊತ್ತಿತ್ತು. ಅವನ್ನು ನೋಡಬೇಕೆಂದು ಬಯಸಿ, ಪ್ರತಿದಿನವೂ ಮ್ಯೂಸಿಯಂಗೆ ಭೇಟಿಕೊಡಲು ಪ್ರಾರಂಭಿಸಿದರು. ಅಲ್ಲಿದ್ದ ದಖಲೆಗಳನ್ನು ಒಂದೊಂದಾಗಿ ತಿರುವಿಹಾಕುತ್ತಿದ್ದಂತೆ, ಅವರಿಗೆ ಬೆರಗಾಯಿತು, ನೋವಾಯಿತು. ಭಾರತದ ಮಕ್ಕಳಿಗೆ ಕಲಿಸಲಾಗುತ್ತಿರುವ ಇತಿಹಾಸ ಎಷ್ಟು ಅಸತ್ಯಪೂರ್ಣವಾದುದು ಎಂಬುದು ಅವರಿಗೆ ಅರಿವಾಯಿತು. ಭಾರತೀಯರು ಅನಾಗರಿಕರು, ಹೇಡಿಗಳು ಎಂಬುದೇ ಬ್ರಿಟಿಷರು ಕಲಿಸುತ್ತಿದ್ದ ಇತಿಹಾಸದ ತಿರುಳಾಗಿತ್ತು. ಈ ವಿಕೃತ ಅಭಿಪ್ರಾಯವನ್ನು ಬದಲಿಸಿ, ಸರಿಯಾದ ಸಂಗತಿಗಳನ್ನುಳ್ಳ ಇತಿಹಾಸವನ್ನು ಭಾರತದ ಮಕ್ಕಳಿಗೆ ನೀಡಬೇಕೆಂದು ನಿರ್ಧರಿಸಿ, ಹೂಸ ಇತಿಹಾಸದ ರಚನೆಗೆ ತೊಡಗಿದರು.ಅಲ್ಲದೆ, ’ಭಾರತದಲ್ಲಿ ಆಂಗ್ಲ ಪ್ರಭುತ್ವದ ಉದಯ’ ಎಂಬ ಪ್ರೌಢ ಪ್ರಬಂಧವನ್ನು ಬರೆದು ಲಂಡನ ವಿಶ್ವವಿದ್ಯಾನಿಲಯದ ಎಂ.ಎ ಪದವಿಗಾಗಿ ಸಲ್ಲಿಸಿದರು. ಪ್ರಬಂಧದಲ್ಲಿ ಅವರು ಬ್ರಿಟಿಷರ ಕುತಂತ್ರ, ಕಾರಾಸ್ಠಾನಗಳ ಬಗ್ಗೆ ಬೆಳಕು ಚೆಲ್ಲಿದ್ದರು: ಆ ಪ್ರಬಂಧವನ್ನು ಲಂಡನ್ ವಿಶ್ವವಿದ್ಯಾನಿಲಯ ಹೇಗೆ ತಾನೇ ಒಪ್ಪಿಕೊಂಡೀತು? ನಿರೀಕ್ಷೆಯಂತೆ ಅದು ತಿರಸ್ಕೃತವಾಯಿತು.

ಮಾತೃಭಾಷೆಯಲ್ಲಿ ಶಿಕ್ಷಣ

ಆಗ ವಿಧ್ಯಾಭ್ಯಾಸದ ಪದ್ದತಿ ಇಂಗ್ಲಿಷರ ಕೈಯಲ್ಲಿತ್ತು. ಅವರು ಗೊತ್ತು ಮಾಡುತ್ತಿದ್ದ ವಿಷಯಗಳು, ಆರಿಸುತ್ತಿದ್ದ ಪುಸ್ತಕಗಳು ಎಲ್ಲ ಅವರನ್ನೂ ಅವರ ದೇಶವನ್ನೂ, ಅವರ ಸಂಸ್ಕೃತ-ರೀತಿ ನೀತಿಗಳನ್ನೂ, ಹೂಗಳುವಂತವು. ಇದರಿಂದ ಭಾರತೀಯ ಮಕ್ಕಳಿಗೆ ಇಂಗ್ಲಿಷ ವ್ಯಾಮೋಹ ಬೆಳೆಯುತ್ತಿತ್ತು. ಅವರು ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದರು. ಇಂಗ್ಲಿಷರನ್ನು ಅನುಕರಿಸಿದರೆ ಅವರಿಗೆ ಸಂತೋಷ, ಹೆಮ್ಮೆ. ಇದರಿಂದ ಪರಮಾನಂದರಿಗೆ ಅತ್ಯಂತ ನೋವಾಯಿತು. ಭಾರತದ ಮಕ್ಕಳಿಗೆ ಇಂಗ್ಲಿಷಿನಲ್ಲೇ ಎಲ್ಲ ವಿಷಯಗಳನ್ನು ಹೇಳಿಕೊಟ್ಟರೆ ಅವರಿಗೆ ತಮ್ಮ ಭಾಷೆಯಲ್ಲಿ ಅಭಿಮಾನವಿರುವುದಿಲ್ಲ. ಜೊತೆಗೆ ಬೇರೆ ಭಾಷೆಯಲ್ಲಿ ವಿಷಯಗಳನ್ನು ಕಲಿಯುವುದು ತಮ್ಮ ಭಾಷೆಯಲ್ಲಿ ಕಲಿತಷ್ಟು ಸುಲಭವಲ್ಲ. ಮಕ್ಕಳಿಗೆ ಅವರ ತಾಯಿ ಭಾಷೆಯಲ್ಲೇ ಶಿಕ್ಷಣ ನೀಡಬೇಕೆಂದು ಪರಮಾನಂದರು ವಾದಿಸುತ್ತಿದ್ದರು. ಇಂಗ್ಲಂಡಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಅವರು ಪುನಃ ದಯಾನಂದ ಕಾಲೇಜಿನಲ್ಲಿ ಪ್ರೋಫೆಸರರಾಗಿ ಸೇರಿದರು. ಮತ್ತು ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಕ್ರಮ ಕೈಗೊಂಡರು.

ಕಾಲೇಜಿನ ರಜಾ ದಿನಗಳಲ್ಲಿ ಪರಮಾನಂದರು ಬರ್ಮಾಕ್ಕೆ ಹೋದರು. ಅಲ್ಲಿ ಅವರು ಆರ್ಯ ಸಮಾಜದ ಕೆಲಸವನ್ನು ಪ್ರಾರಂಭಿಸಿದರಲ್ಲದೆ, ಸಂಸ್ಠೆಗೆ ನಿಧಿಯನ್ನು ಕೊಡಿಸಿದರು.

ಸೋಲರಿಯದ ಕೆಲಸಗಾರ

ಬರ್ಮದಿಂದ ಅವರು ಹಿಂದಿರುಗಿದಾಗ ದಿಗ್ಬ್ರಮೆಗೊಳಿಸುವ ಸಂಗತಿ ನಡೆದಿತ್ತು.

ಲಂಡನ್ನಿನಲ್ಲಿದ್ದಾಗ ಅವರು ಬ್ರಿಟಿಷ ಮ್ಯೊಸಿಯಂನ ಗ್ರಂಥಭಂಡಾರದಲ್ಲಿ ಅನೇಕ ಪುಸ್ತಕಗಳನ್ನೊ, ದಾಖಲೆಗಳನ್ನೂ ಅಭ್ಯಾಸ ಮಾಡಿ ಟಿಪ್ಪಣೆ ಮಾಡಿಕೊಂಡರು.

ಅವರು ಭಾರತಕ್ಕೆ ಬರುವ ಹೊತ್ತಿಗೆ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಅವರು ಬರೆದಿಟ್ಟಿದ್ದ ಹಸ್ತಪ್ರತಿ ಇರಲಿಲ್ಲ!

ಎಷ್ಟೋ ಶ್ರಮದಿಂದ ದೂರ ದೇಶದಲ್ಲಿ ಸಾಮಗ್ರಿಯನ್ನು ಕಲೆಹಾಕಿ, ಶ್ರದ್ಧೆಯಿಂದ, ಆಳವಾದ ವಿಚಾರದಿಂದ ಸಿದ್ಧ ಮಾಡಿದ ಪುಸ್ತಕ ಮಾಯಾವಾದದ್ದು ಪರಮಾನಂದರಿಗೆ ತುಂಬ ದುಃಖವಾಯಿತು.

ತಮ್ಮ ಜ್ಞಾಪಕಶಕ್ತಿಯ ಆಧಾರದಿಂದಲೇ ಮತ್ತೆ ಪುಸ್ತಕ ಬರೆಯುವ ನಿರ್ಧಾರ ಮಾಡಿದರು. ಬರೆದೂ ಬರೆದರು.

ಪುಸ್ತಕದಲ್ಲಿ ಬ್ರಿಟಿಷ ಚರಿತ್ರಕಾರರು ಎಷ್ಟು ಸುಳ್ಳು ಬರೆದಿದ್ದರು ಎಂದು ತೋರಿಸಿಕೊಟ್ಟರು.

ಪರಮಾನಂದರ ಪುಸ್ತಕ ಪ್ರಕಟವಾದದ್ದೇ ತಡ, ಅದನ್ನು ಯಾರೊ ಓದಕೂಡದು, ಅದನ್ನು ಇಟ್ಟುಕೊಂಡರೆ ಶಿಕ್ಷೆ ವಿಧಿಸಲಾಗುವುದು ಎಂದು ಆಜ್ಞೆ ಹೊರಡಿಸಿತು ಸರ್ಕಾರ.

ಬಂಧನ

೧೯೦೭ರಲ್ಲಿ ಭಾರತದಲ್ಲಿ ಸಶಸ್ತ್ರ ಹೋರಟ ಪ್ರಾರಂಭವಾಗಬಹುದೆಂಬ ಭೀತಿ ಬ್ರಿಟಿಷರಲ್ಲಿತ್ತು. ಇದಕ್ಕೆ ಕಾರಣವು ಇತ್ತು. ಮುಖ್ಯವಾಗಿ ಪಂಜಾಬ ಮತ್ತು ಬಂಗಾಳಗಳಲ್ಲಿ ರಹಸ್ಯ ಕೂಟಗಳು ರಚನೆಯಾಗಿದ್ದವು. ಬಾಂಬ್ ತಯಾರಿಸುವಲ್ಲಿ ಪರಿಣತಿ ಪಡೆಯಲು ಈ ರಹಸ್ಯಕೊಟದ ಸದಸ್ಯರು ಲಂಡನ್ವರೆಗೊ ಹೋಗಿದ್ದರು. ಅಲ್ಲಿ ಅವರು ಭಾಯಿ ಪರಮಾನಂದರನ್ನು ಆಗಾಗ್ಗೆ ಭೇಟಿಯಾತ್ತಿದ್ದುದು ಬ್ರಿಟಿಷ್ ಗೂಢಚಾರರಿಗೆ ಗೊತ್ತಿತ್ತು.

ಕ್ರಾಂತಿಕಾರಿದ್ವಯರಾದ ಲಾಲಾ ಹರದಯಾಳರು ಮತ್ತು ಭಾಯಿ ಪರಮಾನಂದರು ಭಾರತಕ್ಕೆ ಮರಳಿದರು. ರಹಸ್ಯಕೂಟದ ಸದಸ್ಯರು ಈ ಇಬ್ಬರು ನಾಯಕರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದುದರಿಂದ ಪೋಲೀಸರಿಗೆ ಇವರ ಮೇಲೆ ಕಣ್ಣು ಬಿತ್ತು.

 

ಅಂಡಮಾನಿನಲ್ಲಿ ಪರಮಾನಂದರು

೧೯೦೮ ರಲ್ಲಿ ಮೂದಲ ಬಾರಿಗೆ ಕಲ್ಕತ್ತಾದಲ್ಲಿ ಬಾಂಬ್ ಅಸ್ಪೋಟನೆಯಾಯಿತು. ಇದರಿಂದ ಬ್ರಿಟಿಷರು ತಬ್ಬಿಬ್ಬಾದರು. ಕಂಡಕಂಡವರನ್ನು ಬಂಧಿಸಿದರು. ಹರದಯಾಳರು ಯುರೋಪಿಗೆ ತಪ್ಪಿಸಿಕೊಂಡು ಹೋದರು.

ಭಾಯಿ ಪರಮಾನಂದರನ್ನು ಸರ್ಕಾರ ಬಂಧಿಸಿತು. ಸರ್ಕಾರದ ವಿರುದ್ಧ  ಸ್ವದೇಶದಲ್ಲೇ ಅಲ್ಲದೆ ಆಫ್ರಿಕ, ಬರ್ಮ ಹಾಗೂ ಇಂಗ್ಲಂಡಗಳಲ್ಲಿ ಚಟುವಟಿಕೆ ನಡೆಸಿದ್ದಾರೆಂದು ಪರಮಾನಂದರ ಮೇಲೆ ಆರೋಪ ಹೊರಿಸಲಾಯಿತು. ಮತ್ತು ಕಠಿಣ  ಶಿಕ್ಷೆಯನ್ನೂ ವಿಧಿಸಲಾಯಿತು. ಅದರೆ ಕೆಲವು ಸ್ನೇಹಿತರ ಪ್ರಯತ್ನದಿಂದಾಗಿ ಅವರನ್ನು ಸರ್ಕಾರ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.

ಅಮೆರಿಕ

ವೈದ್ಯಕೀಯ ಶಾಸ್ತ್ರದಲ್ಲಿ ಪರಿಣತಿ ಪಡೆಯಬೇಕೆಂಬ ಆಸೆ ಪರಮಾನಂದರಿಗೆ ಮೂದಲಿನಿಂದಲೂ ಇತ್ತು. ಅದು ಸಾಧ್ಯವಾಗಿರಲಿಲ್ಲ. ಈಗ ಅವರು ಈ ಉದ್ದೇಶಕ್ಕಾಗಿ ಅಮೇರಿಕಕ್ಕೆ ಹೊರಡಲು ನಿರ್ಧರಿಸಿದರು. ಆದರೆ ಅವರು ಅಮೇರಿಕ ತಲಪುವ ವೇಳೆಗೆ ಅಲ್ಲಿನ ವಿಶ್ವವಿಧ್ಯಾನಿಲಯಗಳಲ್ಲಿ ಪ್ರವೇಶ ಮುಗದಿತ್ತು. ಇದರಿಂದಾಗಿ ಪರಮಾನಂದರಿಗೆ ಅತೀವ ನಿರಾಶೆಯಾಯಿತು. ಮುಂದೇನು ಮಾಡುವುದು ಎಂದು ಯೋಚಿಸಿದರು. ಬ್ರಿಟಿಷ ಗಯಾನಾದಲ್ಲಿ ಭಾರತೀಯರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದರು. ಅಲ್ಲಿಗೆ ಹೋಗಿ ಹಿಂದುಗಳ ಸಂಘಟನೆ ಮಾಡಬೇಕೆಂದು ನಿರ್ಧರಿಸಿ ಹಡಗು ಹತ್ತಿದರು.

ಪೋರ್ಟ್-ಡಿ.ಫ್ರಾನ್ಸ ದ್ವೀಪದಲ್ಲಿ ಸಂನ್ಯಾಸಿಯಂತೆ ಜೀವನ ನಡೆಸುತ್ತಿದ್ದ ಹರದಯಾಳರೊಡನೆ ಸುಮಾರು ಒಂದು ತಿಂಗಳು ಕಾಲ ಇದ್ದು, ಪರಮಾನಂದರು ಬ್ರಿಟಿಷ ಗಯಾನಕ್ಕೆ ತಮ್ಮ ಪ್ರಯಾಣ ಮುಂದುವರಿಸಿದರು.

ಬ್ರಿಟಿಷ್ ಗಯಾನಾದಲ್ಲಿ

ಬ್ರಿಟಿಷ್ ಗಯಾನಾದಲ್ಲಿನ ಜಾರ್ಜಟೌನಿಗೆ ಬಂದಿಳಿದಾಗ ಪರಮಾನಂದರಿಗೆ ಪರಿಚಯಸ್ಠರಾರೂ ಇರಲಿಲ್ಲ. ಅಲ್ಲಿಯೇ ಇದ್ದ ನೀಗ್ರೋ ಒಬ್ಬನನ್ನು ಪರಿಚಯ ಮಾಡಿಕೊಂಡು, ಜಾರ್ಜಟೌನಿನಲ್ಲಿ ಭಾರತೀಯ ಕಾರ್ಮಿಕರು ನೆಲೆಸಿದ್ದ ಪ್ರದೇಷವನ್ನು ಪತ್ತೆ ಹಚ್ಚಿದರು. ಆಗ ರಾತ್ರಿಯಾಗಿತ್ತು. ಹೊಟ್ಟೆ ಹಸಿದಿತ್ತು. ಆ ಪ್ರದೇಷದಲ್ಲಿದ್ದ ಹಿಂದೂ ದೇವಾಲಯವನ್ನು ಕಂಡು ಅವರಿಗೆ ತುಂಬಾ ಸಂತೋಷವಾಯಿತು. ಆ ದೇವಸ್ಠಾನದಲ್ಲೇ ರಾತ್ರಿ ಕಳೆದರು. ಮರುದಿನ ಭಾರತೀಯ ಕಾರ್ಮಿಕರಲ್ಲಿ ಕೆಲವರನ್ನು ಪರಿಚಯ ಮಾಡಿಕೊಂಡರು. ಅಲ್ಲಿನ ಪ್ರಮುಖ ವಾಣಿಜ್ಯೋದ್ಯಮಿ ಬಿಹಾರಿ ಷಾ ಎಂಬುವರ ಪರಿಚಯವಾಯಿತು. ಅವರ ಸಹಕಾರದಿಂದ ಅಲ್ಲಿನ ಪುರಸಭಾ ಭವನದಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ ಭಾಷಣ ಮಾಡಿದರು. ಈ ಸಭೆಗೆ ಜಾರ್ಜಟೌನ್ ಸುತ್ತಮುತ್ತ ವಾಸಿಸುತ್ತಿದ್ದ ಭಾರತೀಯ ಕಾರ್ಮಿಕರು ಸಹಸ್ರ ಸಂಖ್ಯೆಯಲ್ಲಿ ಬಂದಿದ್ದರು

ಪರಮಾನಂದರ ಭಾಷಣ ಕೇಳಿದ ಭಾರತೀಯರಲ್ಲಿ ಹೊಸ ಚೇತನ ಮೂಡಿತು.ಭಾಯಿ ಪರಮಾನಂದರ ಮಾರ್ಗದರ್ಶನದಲ್ಲೇ ತಮ್ಮ ಪರಿಸ್ಠಿತಿಯನ್ನು ಉತ್ತಮಗೊಳಿಸಲು ನಿಶ್ಚಯಿಸಿದರು. ಪರಮಾನಂದರು ಒಂದು “ಹಿಂದೂ ಸ್ಕೂಲ್ ” ಎಂಬ ಶಾಲೆಯನ್ನು ಪ್ರಾರಂಭಿಸಿದರು..

ಅಮೆರಿಕದಲ್ಲಿ ಶಿಕ್ಷಣ

ಈ ವೇಳೆಗೆ ಲಾಲಾ ಹರದಯಾಳರು ಅಮೇರಿಕಕ್ಕೆ ಬಂದಿದ್ದರು.ಭಾಯಿ ಪರಮಾನಂದರು ಅಮೇರಿಕಕ್ಕೆ ಹೋಗಲು ನಿರ್ಧರಿಸಿದರು.

ಆದರೆ ಬ್ರಿಟಿಷ ಗಯಾನಾದ ಭಾರತೀಯರು ಅವರನ್ನು ಬಿಟ್ಟುಕೂಡಲು ಸಿದ್ಧವಿರಲಿಲ್ಲ. ಒಬ್ಬರ ಪರಿಚಯವೂ ಇಲ್ಲದೆ ಬಂದಿಳಿದು ರಾತ್ರಿಯನ್ನು ದೇವಾಲಯವೂಂದರಲ್ಲಿ ಕಳೆದ ಪರಮಾನಂದರು ಕೆಲವೆ ತಿಂಗಳಲ್ಲಿ ಜನರ ಪ್ರೀತ್ಯಾದರಗಳನ್ನು ಅಷ್ಟರಮಟ್ಟಿಗೆ ಸಂಪಾದಿಸಿದ್ದರು. ಕೊನೆಗೆ ’ಹಿಂದೂ ಸ್ಕೂಲ್’ ನಡೆಸುವ ಬಗ್ಗೆ ಸರಿಯಾದ ವ್ಯವ್ಯಸ್ಥೆ ಮಾಡಿ ಅವರು ಅಮೇರಿಕಕ್ಕೆ ಹೂರಟರು. ಮಧ್ಯೆ ಟ್ರೆನಿಡಾಡನಲ್ಲಿ ಭಾರತೀಯರ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿದರು. ಅಮೇರಿಕಕ್ಕೆ ಬಂದೂಡನೆ, ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಔಷಧಗಳ ಸಿದ್ಧತೆಯ ಶಿಕ್ಷಣವಿದೆ ಎಂಬುದನ್ನು ತಿಳಿದು, ಅದಕ್ಕೆ ಸೇರಲು ನಿರ್ಧರಿಸಿದರು.

ಪರಮಾನಂದರು ವಿದ್ಯಾರ್ಜನೆಗಾಗಿ ದೂರ ದೇಶಕ್ಕೆ ಹೋಗಿ ವಿಶ್ವವಿದ್ಯಾನಿಲಯವನ್ನೇನ್ನೋ ಸೇರಿದರು. ಆದರೆ ಹಣ? ಅವರಿಗೆ ಹಣ ಒದಗಿಸಿ ಕೊಡುವವರು ಯಾರೊ ಇರಲಿಲ್ಲವಲ್ಲ!

ಕ್ಯಾಲಿಪೋರ್ನಿಯಾ ಪ್ರದೇಶದ ತೋಟಗಳಲ್ಲಿಯೂ ಕಾರ್ಖಾನೆಗಳಲ್ಲಿಯೂ ಸಾವಿರಾರು ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದರು. ಭಾಯಿ ಪರಮಾನಂದರೂ ಅಲ್ಲಿನ ಹೂತೋಟವೋಂದರಲ್ಲಿ ಕೆಲಸಕ್ಕೆ ಸೇರಿದ್ದರು. ದಿನಕ್ಕೆ ಎರಡೂವರೆ ಡಾಲರ್ ಕೂಲಿ.

೧೯೧೩ ರಲ್ಲಿ ಅವರು ಪದವಿಯನ್ನು ಪಡೆದು ಭಾರತಕ್ಕೆ ಮರಳಿದರು.

ಹರದಯಾಳರು ಕೆಲಸಕ್ಕೆ ರಾಜಿನಾಮೆ ನೀಡಿದರು. ದೇಶ ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಜನಾಭಿಪ್ರಾಯ ಮೂಡಿಸುವ ಉದ್ದೇಶದಿಂದ ಅವರು “ಗದರ್” ಎಂಬ ಪತ್ರಿಕೆಯನ್ನು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಾರಂಭಿಸಿದರು.

ಹುತಾತ್ಮ ಬಂಧುಗಳು

ಬ್ರಿಟಿಷರ ದಮನಕಾರಿ ನೀತಿಯ ಪ್ರತಿಕ್ರಿಯೆಯಾಗಿ ದೇಶದಲ್ಲಿ ಅಲ್ಲಲ್ಲಿ ತೀವ್ರಗಾಮಿ ಚಟುವಟಿಕೆಗಳು ಪ್ರಾರಂಭವದವು. ಲಾರ್ಡ ಹಾರ್ಡಿಂಜ್ ಎಂಬಾತ ಭಾರತದಲ್ಲಿ ವೈಸರಾಯ್ ಆಗಿದ್ದ. ಬ್ರಿಟಿಷ ಸರ್ಕಾರದ ಪ್ರತಿನಿಧಿಯಾಗಿ ಭಾರತವನ್ನು ಆಳುತ್ತಿದ್ದ. ೧೯೧೨ ರಲ್ಲಿ ಆತ ದೆಹಲಿಯನ್ನು ಪ್ರವೇಶಿಸಲು ಭಾರತ ಸರ್ಕಾರ ಬಹು ವೈಭವದಿಂದ ಸಿದ್ಧತೆ ಮಾಡುತ್ತಿತ್ತು.

ಕೆಲವರು ಕ್ರಾಂತಿಕಾರಿಗಳಿಗೆ ಎನ್ನಿಸಿತು-ಅದ್ದೂರಿಯ ಮೆರವಣಿಗೆಯ ಮಧ್ಯೆ ಆತನ ಮೇಲೆ ಬಾಂಬ್ ಹಾಕಿದರೆ!

ರಾಸ್ ಬಿಹಾರಿ ಬೋಸ ಮತ್ತು ವಸಂತ ಕುಮಾರ್ ಎಂಬುವರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ ಕೆಲವರುನ್ನು ತಮ್ಮವರೂಡನೆ ಸೇರಿಸಿಕೊಂಡರು.

ದೆಹಲಿಯಲ್ಲಿ ಲಾರ್ಡ್ ಹಾರ್ಡಿಂಜನ ಮೇಲೆ ಬಾಂಬ್  ಎಸೆಯಲಾಯಿತು. ರಾಸ್ ಬಿಹಾರಿ ಬೋಸ್ ಮತ್ತು ವಸಂತ ಕುಮಾರ್ ಇವರೇ ಬಾಂಬ್ ಎಸೆದವರೆಂದು ಪೋಲಿಸರಿಗೆ ಗೋತ್ತಾಯಿತು. ರಾಸ್ ಬಿಹಾರಿ ಬೋಸ್‌ರು ಪೋಲಿಸರ ಕೈಗೆ ಸಿಕ್ಕದೆ ತಪ್ಪಿಸಿಕೊಂಡರು. ಈ ಸಂಬಂಧದಲ್ಲಿ ಪೋಲಿಸರು ವಸಂತ ಕುಮಾರ, ಭಾಯಿ ಬಾಲಮುಕುಂದ್, ಬಲರಾಜ್, ಮಾಸ್ಟರ ಅಮೀರಚಂದ್, ಅವದ್ ಬಿಹಾರಿ ಮತ್ತು ನೇವಂತ ಸಹಾಯ್ ಅವರನ್ನು ಬಂಧಿಸಿತು. ವಸಂತ ಕುಮಾರ, ಭಾಯಿ ಬಾಲಮುಕುಂದ್, ಅಮೀರಚಂದ್, ಅವಧ್ ಬಿಹಾರಿ ಮೊದಲಾದವರಿಗೆಲ್ಲ ಮರಣ ದಂಡನೆಯನ್ನು ವಿಧಿಸಲಾಯಿತು. ಬಲರಾಜ್ ಮತ್ತು ಸಹಾಯ್ ಅವರಿಗೆ ಏಳು ವರ್ಷ ಕಠಿಣ ಶಿಕ್ಷೆಯಾಯಿತು. ಗಲ್ಲಿಗೇರಿದ ಬಾಲಮುಕುಂದ್, ಭಾಯಿ ಪರಮಾನಂದರ ಸೋದರ ಸಂಬಂಧಿ. ಅವನಿಗೆ ಮಧುವೆಯಾಗಿ ಕೇವಲ ಒಂದು ವರ್ಷವಾಗಿತ್ತು. ಅವನ ಹೆಂಡತಿ ರಾಮರಾಖಿಯು, ತನ್ನ ಪತಿಗೆ ಗಲ್ಲು ಶಿಕ್ಷೆಯಾಗಿದೆಯೆಂದು ತಿಳಿದ ಕೊಡಲೇ ತನ್ನ ಸುಖಗಳೆಲ್ಲವನ್ನೂ ತ್ಯಜಿಸಿದಳು. ಸೆರೆಮನೆಯಲ್ಲಿ ಅವನಿಗೆ ಕೊಡುತ್ತಿದ್ದ ರೊಟ್ಟಿಯಂತಹ ರೊಟ್ಟಿಯನ್ನೇ ತಾನು ತಿನ್ನುವಳು, ಅವನಂತೆ ನೆಲದ ಮೇಲೆ ಒಂದು ದುಪ್ಪಟ ಹಾಸಿಕೊಂಡು ಮಲಗುವಳು. ದಿನವನ್ನೆಲ್ಲ ದೇವರ ದ್ಯಾನದಲ್ಲೇ ಕಳೆಯುವಳು. ಗಂಡ ಗಲ್ಲಿಗೇರಿದ ಹದಿನೆಂಟನೆಯ ದಿನ ಅವಳೂ ಪ್ರಾಣತ್ಯಾಗ ಮಾಡಿದಳು.

ಹೀಗೆ ಪರಮಾನಂದರ ನೆಂಟನೂ ಅವನ ಹೆಂಡತಿಯೂ ದೇಶಕ್ಕಾಗಿ ಪ್ರಾಣಕೊಟ್ಟಳು.

೧೯೧೪ ರಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾಯಿತು. ಭಾರತಕ್ಕೂ ಈ ಯುದ್ಧಕ್ಕೂ ಸಂಬಂಧವಿಲ್ಲದಿದ್ದರೂ ಇಂಗ್ಲಂಡ್ ಭಾರತವನ್ನು ಯುದ್ಧಕ್ಕೆ ಎಳೆಯಿತು. ಭಾರತೀಯ ಸೈನಿಕರನ್ನು ಬಲಿ ಕೊಟ್ಟಿತು. ಸ್ವಾತಂತ್ರ್ಯ ಹೋರಾಟಗಾರರು ಇದನ್ನು ವಿರೋಧಿಸಿದರು.

ಮರಣದಂಡಣೆ

ಇದೇ ಸಮಯದಲ್ಲಿ ತೀವ್ರಗಾಮಿಗಳು ಪಂಜಾಬಿನಲ್ಲಿ ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದರು. ಅನೇಕ ಸೈನ್ಯ ನೆಲೆಗಳ ಮೇಲೆ ದಾಳಿಯಾಯಿತು. ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡುವ ಪ್ರಯತ್ನ ನಡೆಯಿತು. ಅಮೇರಿಕದಿಂದ ಆಗ ತಾನೇ ಹಿಂತಿರುಗಿದ್ದ ಮಹರಾಷ್ಟ್ರದ ಪಿಂಗಳೆ ಎಂಬ ಕ್ರಾಂತಿಕಾರಿ ಯುವಕನು ಪಂಜಾಬನ್ನು ತನ್ನ ಕಾರ್ಯ ಸ್ಥಾನವನ್ನಾಗಿ ಮಾಡಿಕೊಂಡಿದ್ದನು. ಕೇವಲ ೧೯ ವರ್ಷ ವಯಸ್ಸಿನ ಕರ್ತಾರ್ ಸಿಂಗ್ ಎಂಬ ತರುಣ ಸಾಹಸಿಯು ಮಿಯಾನ್ ಮಿಯರ್ ಸೈನ್ಯ ನೆಲೆಯ ಮೇಲೆ ದಾಳಿ ಮಾಡಿದನು. ದಾಳಿ ವಿಫಲವಾದರೂ ಬ್ರಿಟಿಷ್ ರಾಜಸತ್ತೆಯ ಅಡಿಪಾಯ ಬಿರುಕು ಬಿಟ್ಟಿತು.

ಕರ್ತಾರ್ ಸಿಂಗನು ತನ್ನೆಲ್ಲ ಚಟುವಟಿಕೆಗಳಿಗೆ, ಭಾಯಿ ಪರಮಾನಂದರೆ “ಪ್ರೇರಕ ಶಕ್ತಿ” ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದನು.

"ಪ್ರಾಣತ್ಯಾಗಕ್ಕೆ ಜನ ಸಿದ್ಧವಾದ ರಾಷ್ಟ್ರ ಅಮರ"

ಕರ್ತಾರ್ ಸಿಂಗ್ ಹದಿನೈದನೆಯ ವಯಸ್ಸಿಗೇ ಅಮೇರಿಕಕ್ಕೆ ಹೋದ. ಅಲ್ಲಿ ಕೇಲಸಕ್ಕೆ ಸೇರಿ, ತನ್ನ ವಿಧ್ಯಾಭ್ಯಾಸನ್ನೂ ಮುಂದುವರಿಸಿದನು. ಮಹಾಯುದ್ಧ ಪ್ರಾರಂಭವಾದ ಕೊಡಲೇ ಭಾರತಕ್ಕೆ ಮರಳಿದ. ತನ್ನ ಶಾಲಾ ಸ್ನೇಹಿತರನ್ನು ಮೂದಲು ಭೇಟಿಮಾಡಿ ಸಂಘಟಿಸಿ, ಅವರನ್ನು ಚಳುವಳಿಗೆ ಅನುಗೊಳಿಸಿದ. ಅಮೇರಿಕದಲ್ಲಿದ್ದಾಗ ಒಮ್ಮೆ ಅವನ ಭಾಯಿ ಪರಮಾನಂದರ ಭೇಟಿ ಮಾಡಿದ್ದನಂತೆ. ಅವರ ಜೊತೆಯಲ್ಲಿ ಒಂದು ರಾತ್ರಿ ತಂಗಿದ್ದ. ಈ ಉತ್ಸಾಹಿ ತರುಣನೊಂದಿಗೆ ಪರಮಾನಂದರು ಆತ್ಮೀಯವಾಗಿ  ಮಾತನಾಡುತ್ತಾ “ಈ ದೇಶದ ಚರಿತ್ರೆಯು ವಿಚಿತ್ರವಾಗಿದೆ. ನಮ್ಮ ದೇಶದ ಮೇಲೆ ಪರಕೀಯರ ದಾಳಿ ಮೇಲಿಂದ ಮೇಲೆ ನಡೆದಿದೆ. ಇಂತಹ ಒಂದು ರಾಷ್ಟ್ರ ಇತ್ತೀಚಿನ ವರ್ಷಗಳಲ್ಲಿ ಪುನಃ ಸೆಟೆದು ನಿಂತು ಎಲ್ಲ ದಬ್ಬಾಳಿಕೆಗಳನ್ನು ಎದುರಿಸುತ್ತಿದೆ. ಪರಕೀಯರಿಗೆ ಮಣ್ಣು ಮುಕ್ಕಿಸುತ್ತಿದೆ. ಇದಕ್ಕೆ ಕಾರಣವೇನು?” ಎಂದು ಕರ್ತಾರ ಸಿಂಗನನ್ನು ಕೇಳಿದರು. ಈ ಪ್ರಶ್ನೆ ಕರ್ತಾರ ಸಿಂಗನನ್ನು ಗಢವಾದ ಚಿಂತನೆಯಲ್ಲಿ ಮುಳುಗಿಸಿತು. ಅದಕ್ಕೆ ಪರಮಾನಂದರೇ ಉತ್ತರ ಕೊಟ್ಟರು:” ಪ್ರಾಣ ತ್ಯಾಗಕ್ಕೆ ಜನ ಸಿದ್ಧವಾದ ರಾಷ್ಟ್ರಕ್ಕೆ ಯಾವತ್ತೂ ಚ್ಯುತಿಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅನೇಕ ದೇಶ ಭಕ್ತರ ಪ್ರಾಣತ್ಯಾಗದಿಂದ ದೇಶ ಶಕ್ತಿಯುತವಾಗಿದೆ, ದೈರ್ಯಶಾಲಿಯಾಗಿದೆ. ಇಂತಹ ರಾಷ್ಟ್ರ ಅಮರ.” ಈ ಮಾತು ಕರ್ತಾರ ಸಿಂಗನ ಜೀವನವನ್ನೇ ಬದಲಾಯಿಸಿತು. ಅಂದೇ ತನ್ನ ಪ್ರಾಣಪುಷ್ಪವನ್ನು ಭಾರತಮಾತೆಯ ಅಡಿಯಲ್ಲಿ ಅರ್ಪಿಸಲು ನಿರ್ಧರಿಸಿದ.

ಭಾಯಿ ಪರಮಾನಂದರು ಅಮೇರಿಕದಿಂದ ಹಿಂತಿರುಗಿದ ಮೇಲೆ, ಔಷಧಿಯನ್ನು ತಯಾರಿಸುವ ಕಾರ್ಖಾನೆಯನ್ನು ತೆರೆದಿದ್ದರು. ಆದರೆ ಕ್ರಾಂತಿಕಾರಿಗಳೊಂದಿಗೆ ಅವರಿಗೆ ನಿಕಟ ಸಂಬಂಧವಿತ್ತು. ಆಗ ಪಂಜಾಬಿನಲ್ಲಿ ಮೈಕೆಲಾ ಒಡ್ವೆಯರ್ ಎಂಬಾತ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಅವನು “ಭಾಯಿ ಪರಮಾನಂದರು ಔಷಧಿ ತಯಾರಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಎನು ತಯರಿಸುತ್ತಿದ್ದಾರೋ ದೇವರಿಗೇ ಗೋತ್ತು!” ಎಂದು ಹೇಳುತ್ತಿದ್ದನಂತೆ.

ಅಮೆರಿಕದಿಂದ “ಗದರ್‌” ಪತ್ರಿಕೆ ಮತ್ತು ಪಕ್ಷಗಳ ಕ್ರಾಂತಿಕಾರಿಗಳು ಪಂಜಾಬಿನಲ್ಲಿ ಒಂದುಗೂಡಿದರು. ಕರ್ತಾರ್ ಸಿಂಗ್, ಬಾಯಿ ಪರಮಾನಂದ ಇವರಲ್ಲಿ ಪ್ರಮುಖರು. ಇವರೊಡನೆ ಜತ್ತೀನ್ ಮುಖರ್ಜಿ, ಶಂಚಂದ್ರ ಸನ್ಯಾಲ್, ರಾಸ್ ಬಿಹಾರಿ ಮುಂತಾದವರೂ ಸೇರಿದರು. ೧೯೧೫, ಫೆಬ್ರವರಿ ೨೧ ರಂದು ಲಾಹೋರಿನಿಂದ ಢಾಕಾವರೆಗೆ ಎಲ್ಲೆಲ್ಲೂ ದಂಗೆ ಏಳಬೇಕೆಂದು ನಿಶ್ಚಯವಾಯಿತು.

ಆದರೆ ಕ್ರಾಂತಿಕಾರಿಗಳ ಗುಂಪಿನಲ್ಲಿ ಗೊತ್ತಾಗದ ಹಾಗೆ ದ್ರೋಹಿಯೊಬ್ಬ ಸೇರಿಕೊಂಡಿದ್ದ. ಅವನಿಂದ ಸರ್ಕಾರಕ್ಕೆ ಸುದ್ದಿ ಮುಟ್ಟಿತು. ತಕ್ಷಣ ಸರ್ಕಾರ ಬಿಗಿಯಾದ ಕ್ರಮಗಳನ್ನು ಕೈಗೊಂಡತು. ಅಸಹನೆಯ ಹೊಗೆ ಎಲ್ಲೇ ಕಂಡು ಬಂದರೂ ಮೆಟ್ಟಿ ಹಾಕಿತು.

ಭಾಯಿ ಪರಮಾನಂದ, ಕರ್ತಾರ್ ಸಿಂಗ್ ಮುಂತಾದವರ ಬಂಧನವಾಯಿತು.

ಭಾಯಿ ಪರಮಾನಂದ, ಪಿಂಗಳೆ, ಕರ್ತಾರ ಸಿಂಗ್, ಹರನಾಮ್ ಸಿಂಗ್, ಜಗತ್ ಸಿಂಗ್ ಮುಂತಾದ ಇಪ್ಪತ್ತನಾಲ್ಕು ಜನರಿಗೆ ಮರಣದಂಡಣೆ ವಿಧಿಸಲಯಿತು!

ಆದರೆ ಭಾಯಿ ಪರಮಾನಂದ ಮತ್ತು ಇನ್ನೂ ಕೆಲವರಿಗೆ ಮರಣದಂಡಣೆ ವಿಧಿಸುವ ಬಗ್ಗೆ ನ್ಯಾಯಾಧೀಶರುಗಳಲ್ಲೇ ಭಿನ್ನಾಭಿಪ್ರಾಯವಿದ್ದುದರಿಂದ ಸರ್ಕಾರ ಅವರುಗಳ ಶಿಕ್ಷೆಯನ್ನು ಪುನರ್ ವಿಮರ್ಶಿಸಿ, ಮರಣದಂಡನೆಯಿಂದ ಗಡೀಪಾರು ಶಿಕ್ಷೆಗೆ ಬದಲಾಯಿಸಿತು. ಪಿಂಗಳೆ, ಕರ್ತಾರ್ ಸಿಂಗ್, ಹರನಾಮ ಸಿಂಗ್, ಜಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳನ್ನು ಸರ್ಕಾರ ಗಲ್ಲಿಗೇರಿಸಿತು.

ಅಂಡಮಾನಿನಲ್ಲಿ

ಅಂಡಮಾನಿನಲ್ಲಿ ದ್ವೀಪ ಇರುವುದು ಮದರಾಸಿನಿಮ್ದ ಸುಮಾರು ಏಳುನೂರು ಮೈಲಿ ದೂರದಲ್ಲಿ. ದರೋಡೆ ಮಾಡಿದವರು, ಕೊಲೆ ಮಾಡಿದವರು ಇವರಲ್ಲಿಯೂ ತೀರ ಭಯಂಕರ ಅಪರಾಧಿಗಳು ಎನ್ನಿಸಿಕೊಂಡವರನ್ನು ಅಲ್ಲಿ ಸೆರೆಯಲ್ಲಿಡುತ್ತಿದ್ದರು. ಅಲ್ಲಿಯ ಸೆರೆಮನೆಯೋ ಭಯಂಕರ! ಸಣ್ಣ ಸಣ್ಣ ಕೋಣೆಗಳೂ, ನಾಲ್ಕು ಹೆಜ್ಜೆ ಇಡಲೂ ಸಾಧ್ಯವಿಲ್ಲ. ಕತ್ತಲೋ ಕತ್ತಲುಮ್ ಹುಳ ಹುಪ್ಪಟೆಗಳು, ಬೆಲದಿನಿಮ್ದ ರಾತ್ರಿಯವರೆಗೆ ಖೈದಿಗಳು ಮೈಮುರಿದು ಕೆಲಸ ಮಾಡಬೇಕು. ಸ್ವಲ್ಪ ತಪ್ಪಿದರೆ, ಸ್ವಲ್ಪ ಆಯಾಸ ತೋರಿಸಿದರೆ ಚಾಟಿ ಏಟು, ಉಪವಾಸ.

ಇಂಗ್ಲಿಷರು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಇಂತಹ ಸೆರೆಮನೆಯಲ್ಲಿ ನೂಕುತ್ತಿದ್ದರು. ಪರಮಾನಂದರನ್ನು ಇಲ್ಲಿ ಸೇರಿಸಿದರು.

ಭಾಯಿ ಪರಮನಂದರು ಅಂಡಮಾನಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ, ಇತ್ತ ಅವರ್ ಪತ್ನಿ ಭಾಗ ಸುಧೀಜಿಯವರು ತಮ್ಮ ಇಬ್ಬರು ಮಕ್ಕಳೊಂದಿಗೆ ಲಹೋರಿಗೆ ಬಂದು ಜೀವನ ನಿರ್ವಹಣೆಗಾಗಿ, “ಆರ್ಯ ಕನ್ಯಾ” ಪಾಠಶಾಲೆಯಲ್ಲಿ ಕೇವಲ ಹದಿನೇಳು ರೂಪಾಯಿ ಸಂಬಳದ ಕೆಲಸಕ್ಕೆ ಸೇರಿದರು. ಬರುವ ಸಂಬಳ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಅವರು ರಾತ್ರಿ ಹೊತ್ತು ಹೂಲಿಗೆ ಕೆಲಸ ಮಾಡುತ್ತಿದ್ದರು.

ಪರಮಾನಂದರಿಗೂ ಸೆರೆಮನೆಯ ಜೀವನ ಬೇಸರ ಎನಿಸಿತು. ಹೀಗೆ ಬದುಕುವುದಕ್ಕಿಂತ ಸಾಯುವುದೇ ಲೇಸು ಎಂದು ಉಪವಾಸ ಮುಷ್ಕರ ಪ್ರಾರಂಭಿಸಿದರು. ಎರಡು ತಿಂಗಳ ಕಾಲ್ ಆಹಾರ ಮುಟ್ಟಲಿಲ್ಲ. ಅವರ ದೇಹಸ್ಥಿತಿ ದಿನೇ ದಿನೇ ಕ್ಷೀಣಿಸಿ ಸಾವಿನ ಅಂಚಿನಲ್ಲಿದ್ದರು.

“ದೀನ ಬಂಧು” ಎಂದು ಹೆಸರಾಗಿದ್ದ ಬ್ರಿಟಿಷ್ ಪ್ರಜೆ ಸಿ.ಎಫ್. ಆಂಡ್ರೂಸ್ ಅವರು ಭಾಗ ಸುದೀಜಿಯವರ ಮನಗೆ ಭೇಟಿಕೊಟ್ಟು ಅಲ್ಲಿನ ಕರುಣಾಜನಕ ಪರಿಸ್ಥಿತಿಯನ್ನು ಕಂಡು ಮನಕರಗಿ “ಟ್ರಿಬ್ಯುನ್” ಪತ್ರಿಕೆಗೆ ಅನೇಕ ಲೇಖನಗಳನ್ನು ಬರೆದರು. ಭಾಗ ಸುದೀಜಿ ಮತ್ತು ಅವರ್ ಮಕ್ಕಳ ಕಷ್ಟಗಳನ್ನು ವರ್ಣಿಸಿ, ಭಾಯಿ ಪರಮಾನಂದರ ಬಿಡುಗಡೆಗೆ ಒತ್ತಾಯ ಮಾಡಿದರು.

೧೯೨೦ ರಲ್ಲಿ ಸರ್ಕಾರ ಭಾಯಿ ಪರಮಾನಂದರ ಬಿಡಿಗಡೆಗೆ ಆಜ್ಞೆ ಮಾಡಿತು.

‘ಕುಲಪತಿ’

ಈ ಹೊತ್ತಿಗೆ ಗಾಂದೀಜಿಯವರು ದೇಶದ ನಾಯಕರಾಗಿದ್ದರು. “ಬ್ರಿಟಿಷ್ ಸರ್ಕಾರದ ಜೊತೆಗೆ ಯಾವ ರೀತಿಯಲ್ಲಿಯೂ ಸಹಕರಿಸಬೇಡಿ” ಎಂದು ಜನಕ್ಕೆ ಕರೆ ಕೊಟ್ಟಿದ್ದರು.

ಅಂಡಮಾನಿನಿಂದ ಬಿಡುಗಡೆಯಾಗಿ ಬಂದೊಡನೆ ಪರಮಾನಂದರು ಈ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು.

ಅನೇಕ ಮಂದಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಬಿಟ್ಟಿದ್ದರು. ಇವರ ಮುಂದಿನ ವಿದ್ಯಾಭ್ಯಾಸ ಹೇಗೆ? ಲಾಹೋರಿನಲ್ಲಿ “ನ್ಯಾಷನಲ್ ಕಾಲೇಜ್” ಎಂಬ ವಿದ್ಯಾ ಸಂಸ್ಥೆಯನ್ನು ಪ್ರಾರಂಬಿಸಬೇಕೆಂದು ಪಂಜಾಬ ಪ್ರಾಂತದ ಕಾಂಗ್ರೆಸ್ ಸಮಿತಿ ನಿರ್ಧರಿಸಿತು. ಇದರ “ಕುಲಪತಿ” ಯಾಗಬೇಕೇಂದು ಸಮಿತಿ ಪರಮನಂದರನ್ನು ಪ್ರಾರ್ಥಿಸಿತು. ಐದು ವರ್ಷಗಳ ಕಾಲ ಪರಮಾನಂದರು ಈ ಸ್ಥಾನದಲ್ಲಿದ್ದರು. ಭಾರತದ ಚರಿತ್ರೆಯನ್ನು ಕುರಿತು ಉಪನ್ಯಾಸಗಳನ್ನು ನೀಡಿದರು. ಭಾರತೀಯ ವಿದ್ಯಾರ್ಥಿಗಳಿಗೆ ದೇಶ-ಸಂಸ್ಕೃತಿಗಳ ಕುರಿತು ಬೋಧಿಸಲು ಈ ಸಂಸ್ಥೆಯಲ್ಲಿ ಹೊಸ ರೀತಿಯ ಶಿಕ್ಷಣ ಕ್ರಮವನ್ನು ರೂಪಿಸಿದರು. ಕಾಂಗ್ರೆಸ್ ಸಂಸ್ಥೆಯೂ ಇದಕ್ಕೆ ಬೆಂಬಲ್ ನೀಡಿತು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಿದರು.

ತಮ್ಮ ಕೆಲಸಕ್ಕೆ ಪರಮಾನಂದರು ಸಂಬಳ ತೆಗೆದುಕೊಳ್ಳಲಿಲ್ಲ.

ಹಿಂದೂ ಮಹಾಸಭಾಧ್ಯಕ್ಷ

ದೇಶದ ವಿದ್ಯಮಾನಗಳನ್ನು ಗಮನವಿಟ್ಟು ನೋಡುತ್ತಿದ್ದ ಪರಮಾನಂದರಿಗೆ ಒಂದು ವಿಚಾರ ಬಂದಿತು. ಹಿಂದೂಗಳಲ್ಲಿ ಒಗ್ಗಟ್ಟು ಸಾಲದು. ಇದರ್ ಪರಿಣಾಮವಾಗಿ ಅವರು ತಮ್ಮ ಅಭಿವೃದ್ಧಿಗೆ ಸಾಕಷ್ಟು ದುಡಿಯುತ್ತಿಲ್ಲ ಎನ್ನಿಸಿತು.

ಹಿಂದೂಗಳನ್ನು ಒಂದುಗೂಡಿಸಲು ಅವರು ತಮ್ಮ ಎಲ್ಲ ಕಾಲವನ್ನೂ ವಿನಿಯೋಗಿಸಿದರು. ಪುಸ್ತಕಗಳನ್ನು ಬರೆದರು. ಆಗ ಸ್ಥಾಪನೆಯಾದ ಹಿಂದೂ ಮಹಾಸಭೆಗೆ ಬೆಂಬಲ್ ಕೊಟ್ಟರು.

೧೯೩೪ ರಲ್ಲಿ ಪರಮಾನಂದರು ಅಜ್ಮೀರದಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನಕ್ಕೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅನಂತರ ನಾಲ್ಕು ವರ್ಷಗಳ ಕಾಲ ಅವರು ಅದರ ಕಾರ್ಯಾಧ್ಯಕ್ಷರಾಗಿದ್ದರು.

ಹಿಂದೂಗಳಲ್ಲಿ ಸೇವಮನೋಭಾವವನ್ನು ಬೆಳೆಸಬೇಕು, ಸಮಾಜಕ್ಕೆ ಉಪಯುಕ್ತವಾಗುವಂತೆ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕು ಎಂದು ತಿಳಿದ ಭಾಯೀಜಿಯವರು “ಹಿಂದೂ ಸೇವಶ್ರಮ” ಎಂಬ ಸೇವಾ ಸಂಘವನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಲು ಅನೇಕ ಹಿಂದೂ ಯುವಕರು ಮುಂದಾದರು. “ಹಿಂದೂ” ಎಂಬ ಹಿಂದೀ ಪತ್ರಿಕೆಯನ್ನು “ಹಿಂದೂ ಔಟಲುಕ್” ಎಂಬ ಇಂಗ್ಲಿಷ ವಾರಪತ್ರಿಕೆಯನ್ನೂ ಅವರು ಪ್ರಾರಂಭಿಸಿದರು. “ಹಿಂದೂ ಮಹಾಸಭೆ” ಮತ್ತು “ಹಿಂದೂ ಸೇವಾಶ್ರಮ” ಸಂಸ್ಥೆಗಳಿಗೆ ಸ್ವತಂತ್ರ ಕಾರ್ಯಾಲಯವಿಲ್ಲದಿರುವುದನ್ನು ನೋಡಿದ ಪರಮಾನಂದರು, ಲಾಲಾ ಲಜಪತರಾಯ್ ಸ್ಮಾರಕ ನಿಧಿ ಹಾಗೂ ಸಾರ್ವಜನಿಕ ವಂತಿಕೆಗಳನ್ನುಪಯೋಗಿಸಿ, ದೆಹಲಿಯ ರೀಡಿಂಗ್ ರೋಡಿನಲ್ಲಿ ಭವ್ಯವಾದ ಹಿಂದೂ ಮಹಾಸಭಾ ಭವನ ಮತ್ತು ಹಿಂದೂ ಸೇವಾಶ್ರಮ ಕಟ್ಟಡಗಳನ್ನು ಕಲ್ಪಿಸಿದರು. ಹಿಂದೂ ಸೇವಾಶ್ರಮದ ಕಟ್ಟಡವನ್ನು ಕಟ್ಟಲು ಪರಮಾನಂದರು ಮೂವತೈದು ಸಾವಿರ ರೂಪಯಿಗಳ ಸ್ವಂತ ಆಸ್ತಿಯನ್ನು ಕೊಟ್ಟರು.

೧೯೩೨ರಲ್ಲಿ ಬ್ರಿಟಿಷ ಸರ್ಕಾರ ಭಾರತಕ್ಕೆ ಮತ್ತೋಂದು ಆಘಾತವನ್ನು ಮಾಡಿತು. ಹರಿಜನರಿಗೆ ಪ್ರತ್ಯೇಕ ಹಕ್ಕುಗಳನ್ನು ಕೊಡುವ ನೆಪದಿಂದ ಸರ್ಕಾರವು, ಹರಿಜನರು ಹಿಂದೂಗಳಿಂದ ಬೇರೆಯವರು ಎಂಬ ಭವನೆ ಬರುವಂತೆ ಮಾಡಿತು. ಗಂಧೀಜಿಯವರು ಇದನ್ನು ವಿರೋಧಿಸಿದರು.

ಜಾತಿಯ ಒಡಂಬಡಿಕೆಗೆ ಪರಮಾನಂದರು ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶದಲ್ಲೆಲ್ಲಾ ಪ್ರವಾಸ ಮಾಡಿ ಈ ಒಪ್ಪಂದವನ್ನು ಖಂಡಿಸಿದರು. ಮತ್ತು ಪ್ರಾಂತೀಯ ಶಾಸನ ಸಭೆಗಳ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಭೇಟಿ ಮಾಡಿ, ಈ ಜಾತೀಯ ಒಪ್ಪಣ್ದದ ವಿರುದ್ಧ ಅವರ್ ಸಹಿಯನ್ನು ಸಂಗ್ರಹಿಸಿ ಬ್ರಿಟಿಷ್ ಸರ್ಕ್ಕಾರಕ್ಕೆ ಕಳುಹಿಸಿದರು. ತಮ್ಮ ಸ್ವಂತ ಖರ್ಚಿನಲ್ಲೇ ಲಂಡನ್ನಿಗೆ ಹೋಗಿ ಅಲ್ಲಿನ “ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ” ಯಲ್ಲಿ ವಾದಿಸಿದರು. ಮರ್ರು ಲಂಡನ್ನಿನಲ್ಲಿ “ಸೆಂಟ್ರಲ್ ಹಿಂದೂ ಸೊಸೈಟಿ” ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿದರು.

ಸಾಮಾಜಿಕ ಸುಧಾರಣೆಗಳು

ಭಾಯಿ ಪರಮನಂದರು ಹಿಂದೂಧರ್ಮದ ಹಿರಿಮೆಯನ್ನು ವಿವರಿಸಿದರು, ಹಿಂದೂಗಳನ್ನು ಒಟ್ಟು ಕೊಡಿಸಿದರು: ಆದರೆ ಇತರ ಧರ್ಮಗಳನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ ಎಂದಗಲಿ, ಹಿಂದೂಸಮಾಜದಲ್ಲಿ ದೋಷವೇ ಇರಲಿಲ್ಲ ಎಂದು ನಂಬಿದ್ದರು ಎಂದು ಅರ್ಥವಲ್ಲ. ಬಾಲ್ಯದಿಂದಲೂ ಆರ್ಯಸಮಾಜದಲ್ಲಿ ಅವರಿಗೆ ಮೆಚ್ಚಿಕೆ. ಹಿಂದೂಸಮಾಜದ ಕೊಳೆಯನ್ನು ತೊಳೆಯಲು ಅವರು ತುಂಬಾ ಶ್ರಮಿಸಿದರು.

ದುಂದು ವೆಚ್ಚದ ಮದುವೆ ಸಮಾರಂಭಗಳಿಗೆ ಅವರ್ ವಿರೋಧವಿತ್ತು. ಅವರು ಯಾವ ಮದುವೆಗಳ ಮೆರವಣಿಗೆಗಳಲ್ಲಿಯೂ ಭಾಗವಹಿಸುತ್ತಿರಲಿಲ್ಲ. ವರದಕ್ಷಿಣೆ ಕೊಡುವುದನ್ನು-ತೆಗೆದುಕೊಳ್ಳುವುದನ್ನು ಉಗ್ರವಾಗಿ ವಿರೋಧಿಸಿದರು. ಇದನ್ನು ಇತರರಿಗೆ ಉದದೇಶಿಸುವುದರಲ್ಲೇ ಅವರು ತೃಪ್ತಿಪಡಲಿಲ್ಲ. ತಮ್ಮ ಇಬ್ಬರು ಹೆಣ್ಣು ಮಕ್ಕಳ ವಿವಾಹವನ್ನು ಆರ್ಯಸಮಾಜ ಮಂದಿರದಲ್ಲಿ ಅತ್ಯಂತ ಸರಳವಾಗಿ ನಡೆಸಿ ಇತರರಿಗೆ ಮಾದರಿಯಾದರು. ಇಡೀ ಮದುವೆ ಎರಡೇ ಗಂಟೆಗಳಲ್ಲಿ ಮುಗಿಯಿತು. ಒಬ್ಬ ಮಗಳನ್ನು ಅನ್ಯ ಜಾತಿಯ ವರನಿಗೆ ಕೊಟ್ಟು ಮದುವೆ ಮಾಡಿ ಅಂತರ್ಜಾತೀಯ ವಿವಾಹಕ್ಕೆ ಬೆಂಬಲ ನೀಡಿದರು.

ಹಿಂದೂಗಳಲ್ಲಿ ಮೇಲು ಜಾತಿ-ಕೀಳು ಜಾತಿ ಎಂಬ ಭೇದಭಾವ ಹೊಗಬೇಕೆಂದು ಕಾರ್ಯಶೀಲರಾಗಿ ಕೆಲಸ ಮಾಡಿದವರು ಪರಮಾನಂದರು.

ಧೀರ ದೇಶಸೇವಕ

ಭಾಯಿ ಪರಮಾನಂದರು ಭಾರತಕ್ಕೆ ಸ್ವಾತಂತ್ರ್ಯ ಬಂದ ಕೆಲವೇ ದಿನಗಲ್ಲಿ, ೧೯೪೭ ರ ಡಿಸೆಂಬರ್ ೧೮ ರಂದು ತೀರಿಕೊಂಡರು.

ದೇಶಕ್ಕಾಗಿ ಅಸಾಧಾರಣ್ ತ್ಯಾಗ ಮಾಡಿದ ಧೀರರು ಪರಮಾನಂದರು. ಅವರಾಗಲಿ ಅವರ್ ಸಂಸಾರದವರಾಗಲಿ ಒಂದಿಷ್ಟು ಸುಖ, ನೆಮ್ಮದಿ ಕಾಣಲಿಲ್ಲ. ಅವರು ೧೯೩೨ ರ ಮಾರ್ಚ ೩೦ ರಂದು ತುಂಬಾ ಕಯಿಲೆ ಇದ್ದ ತಮ್ಮ ಹೆಂಡತಿಗೆ ಬರೆದ ಕಡೆಯ ಪತ್ರದಲ್ಲಿ ಹೀಗೆ ತಿಳಿಸಿದರು:

“ಮೂವತ್ತೈದು ವರ್ಷಗಳಿಂದ ನನ್ನ-ನಿನ್ನ ಬಾಳುಗಳು-ಭಾಗ್ಯಗಳು ಹೆಣೆದುಕೊಂಡಿವೆ. ನೀನು ನನಗೆ ಪ್ರಾಮಾಣಿಕ, ನಿಷ್ಠ ಸಂಗಾತಿಯಾದೆ. ನಿನ್ನಂತಹ ಸಂಗತಿಯನ್ನು ಪಡೆಯುವ ಭಾಗ್ಯ ಪ್ರಾಯಶಃ ಪ್ರಪಂಚದಲ್ಲಿ ಬೇರಾರಿಗೂ ದೊರೆತಿಲ್ಲ. ನನ್ನ ಕೊರತೆತಳು, ದೌರ್ಬಲ್ಯಗಳು ನನಗೆ ತಿಳಿಯದೆ ಇಲ್ಲ. ಎಷ್ಟೋ ಬಾರಿ ನಾನು ತಾಳ್ಮೆ ಕಳೆದುಕೊಂಡು ಕೋಪ ಮಾಡಿಕೊಂಡಿದ್ದೇನೆ, ಆದರೆ ಮೇರೆಯರಿಯದ ಪ್ರೇಮದಿಂದ, ತಾಳ್ಮೆಯಿಂದ ನೀನು ಎಲ್ಲವನ್ನೂ ಸಹಿಸಿದ್ದೀಯೆ, ಕರ್ತವ್ಯದ ಮಾರ್ಗದಿಂದ ಒಂದೇ ಅಂಗುಲವೂ ಅತ್ತ ಹೋಗಿಲ್ಲ…..ನೀನು ಆದರ್ಶ ತಾಯಿ, ಆದರ್ಶ ಸತಿ.”

ಪರಮಾನಂದರ ಸಂಸಾರ ಅನುಭವಿಸಿದ ಕೋಟಲೆಗಳನ್ನು ಅರ್ಥಮಾಡಿಕೊಳ್ಳಲು ಇಡೀ ಪತ್ರವನ್ನು ಓದಬೇಕು.

ದೇಶದ ಎಳೆಯರಿಗೆ ಸರಿಯಾದ ಶಿಕ್ಷಣ ಕೊಡುವ ಅಗತ್ಯವನ್ನು ಕಂಡು ಅದಕ್ಕಾಗಿ ಶ್ರಮಿಸಿದ ವಿವೇಕವಂತರು ಅವರು. ಐದು ವರ್ಷಕ್ಕೊ ಹೆಚ್ಚು ಕಾಲ ಒಂದು ರೂಪಾಯಿಯೂ ಸಂಬಳವಿಲ್ಲದೆ ಶಿಕ್ಷಣ ಸಂಸ್ಥೆಗಾಗಿ ದುಡಿದರು. ಹಿಂದೂಗಳಲ್ಲಿ ಒಗ್ಗಟ್ಟನ್ನು ಮೂಡಿಸಲು ಶ್ರಮಿಸಿದರು. ಹಿಂದೂ ಸಮಾಜದ ದೋಷಗಳನ್ನು ನಿರ್ಭಯವಾಗಿ ತೋರಿಸಿಕೊಟ್ಟರು. ಅವುಗಳನ್ನು ತೊಡೆದು ಹಾಕಲು ಶ್ರಮಿಸಿದರು.