04ಭಾರತದಲ್ಲಿ ಎಟಿಎಂಗಳ  ಬಳಕೆ ಹೆಚ್ಚಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಮಾಹಿತಿಯ ಪ್ರಕಾರ ಜುಲೈ 2016ರಲ್ಲಿ ನಮ್ಮ ದೇಶದಲ್ಲಿ 56 ಬ್ಯಾಂಕುಗಳಿಗೆ ಸೇರಿದ ಒಟ್ಟು 2,01,861 ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಈ ಎಟಿಎಂಗಳನ್ನು ಬಳಸಿ  ಡೆಬಿಟ್‍ ಕಾರ್ಡ ಗ್ರಾಹಕರು ಒಟ್ಟು 2191650.70 ದಶಲಕ್ಷ ರೂಪಾಯಿಗಳ ವ್ಯವಹಾರ ನೆಡೆಸಿದ್ದಾರೆ. ಇದೇ ರೀತಿ ಕ್ರೆಡಿಟ್ ಕಾರ್ಡ್ ಗ್ರಾಹಕರು, ಈ ಎಟಿಎಂಗಳನ್ನು ಬಳಸಿ ಒಟ್ಟು 2922.41 ದಶಲಕ್ಷ ರೂಪಾಯಿಗಳ ವ್ಯವಹಾರ ನೆಡೆಸಿದ್ದಾರೆ.

ಜುಲೈ 2011ರಲ್ಲಿ ನಮ್ಮ ದೇಶದಲ್ಲಿ 80,117 ಎಟಿಎಂಗಳು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದರೆ, ಕಳೆದ 5 ವರ್ಷಗಳಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಟಿಎಂಗಳ  ಸಂಖ್ಯೆ ಹೇಗೆ ಹೆಚ್ಚಾಗಿದೆ ಎಂದು ಗೊತ್ತಾಗುತ್ತದೆ. ಈ ವರ್ಷದ ಆಯವ್ಯಯ ಪತ್ರ ಮಂಡಿಸುತ್ತಾ, ವಿತ್ತ ಸಚಿವರು, ಈ ಆರ್ಥಿಕ ವರ್ಷದಲ್ಲಿ 1000 ಅಂಚೆಕಚೇರಿಗಳಲ್ಲಿ ಎಟಿಎಂಗಳು ಕಾರ್ಯನಿರ್ವಹಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಎಟಿಎಂಗಳ ಸೌಲಭ್ಯ ದೊರೆಯುವಂತೆ ಮಾಡಲು, ಹೆಚ್ಚು ಸಾಂಪ್ರದಾಯಿಕ ಎಟಿಎಂಗಳನ್ನು ಸ್ಥಾಪಿಸುವ ಬದಲಾಗಿ ಮೈಕ್ರೋ ಎಟಿಎಂಗಳ  ಬಳಕೆಯನ್ನು ಹೆಚ್ಚು ಜನಪ್ರಿಯಗೊಳಿಸಬೇಕು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ನಮ್ಮ ದೇಶದಲ್ಲಿ, ವೈಟ್ ಲೇಬಲ್ ಎಟಿಎಂ, ಬ್ರೌನ್ ಲೇಬಲ್ ಎಟಿಎಂ, ಆನ್ ಸೈಟ್ ಎಟಿಎಂ, ಆಫ್ ಸೈಟ್ ಎಟಿಎಂ, ಮೈಕ್ರೋ ಎಟಿಎಂ – ಹೀಗೆ ವಿವಿಧ ರೀತಿಯಲ್ಲಿ ಎಟಿಎಂಗಳನ್ನು ಗುರುತಿಸಲಾಗುತ್ತದೆ. ವೈಟ್ ಲೇಬಲ್ ಎಟಿಎಂಗಳು ಎಂದರೆ ಬ್ಯಾಂಕೇತರ ಸಂಸ್ಥೆಗಳು ಸ್ಥಾಪಿಸಿ, ನಿರ್ವಹಿಸುತ್ತಿರುವ ಎಟಿಎಂಗಳಾಗಿವೆ. ಈ ಎಟಿಎಂ ಕೇಂದ್ರಗಳಲ್ಲಿ ಯಾವುದೇ ಬ್ಯಾಂಕಿನ ಹೆಸರು ಮತ್ತು ಲಾಂಛನವನ್ನು ಬಳಸುವುದಿಲ್ಲ. ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗ್ರಾಹಕರು, ಈ ವೈಟ್ ಲೇಬಲ್ ಎಟಿಎಂಗಳನ್ನು ಬಳಸಬಹುದು. ಆದರೆ ಇಂತಹ ಎಟಿಎಂ ಬಳಸಿದಾಗ ಗ್ರಾಹಕರಿಗೆ ಹೆಚ್ಚಿನ ಸೇವಾ ಶುಲ್ಕ ನೀಡಬೇಕಾಗಬಹುದು.

ಬ್ರೌನ್ ಲೇಬಲ್ ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕಿನ ಹೆಸರು ಮತ್ತು ಲಾಂಛನವನ್ನು ಸ್ವಷ್ಟವಾಗಿ ಬಳಸುತ್ತಾರೆ. ಇದಲ್ಲದೆ, ಇಂತಹ ಎಟಿಎಂ ಸೌಲಭ್ಯದ ಜೊತೆ ಬ್ಯಾಂಕಿನ ಉಳಿತಾಯ ಖಾತೆಗೆ, ಕ್ರೆಡಿಟ್ ಕಾರ್ಡ್‌ ಖಾತೆಗೆ ಚೆಕ್ ಮೂಲಕ ಹಣ ಪಾವತಿಸುವ ಸೌಲಭ್ಯ, ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯ  ಜೊತೆ ನೇರವಾಗಿ ಮಾತನಾಡಲು ದೂರವಾಣಿ ಸೌಲಭ್ಯವನ್ನು ಹಲವು ಬ್ಯಾಂಕುಗಳು ನೀಡುತ್ತವೆ.

ಬ್ಯಾಂಕಿನ ಕಚೇರಿಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಟಿಎಂಗಳಿಗೆ ಆನ್ ಸೈಟ್ ಎಟಿಎಂಗಳೆಂದು, ಬ್ಯಾಂಕಿನ ಕಚೇರಿಯಿಂದ ದೂರದ (ಉದಾಹರಣೆಗೆ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಶಾಪಿಂಗ್ ಮಾಲ್, ಇತ್ಯಾದಿ) ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಟಿಎಂಗಳನ್ನು ಆಫ್ ಸೈಟ್ ಎಟಿಎಂಗಳೆಂದು ಕರೆಯಲಾಗುತ್ತದೆ.

ಅಂಗಡಿ, ಮಾಲ್ ಮೊದಲಾದ ವಾಣಿಜ್ಯ ಕೇಂದ್ರಗಳಲ್ಲಿ ನಾವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸಲು, ಫಾಯಿಂಟ್ ಆಫ್ ಸೇಲೇ ( ಪಿ.ಓ.ಎಸ್) ಮೆಷಿನ್ ಬಳಸುತ್ತೇವೆ. ಇಂತಹ ಪಿ.ಓ.ಎಸ್ ಮೆಷಿನ್ನ ಮುಂದುವರೆದ ಆವೃತ್ತಿ ಮೈಕ್ರೋ ಎಟಿಎಂಗಳಾಗಿವೆ. ಮೈಕ್ರೋ ಎಟಿಎಂಗಳಲ್ಲಿ ಬಯೋಮೆಟ್ರಿಕ್ ( ಕೈಬೆರಳಿನ ಗುರುತು) ರೀಡರ್, ಜಿ.ಪಿ.ಆರ್.ಎಸ್ ಸಂಪರ್ಕ ಸಾಧನ ಅಳವಡಿಸಲಾಗಿರುತ್ತದೆ. ಸಾಧಾರಣವಾಗಿ, ಆಧಾರ್ ಕಾರ್ಡ ಮಾಹಿತಿ ನೀಡಿರುವ ಬ್ಯಾಂಕ್ ಗ್ರಾಹಕರಿಗೆ ಮೈಕ್ರೋ ಎಟಿಎಂ ಬಳಸುವ ಮೈಕ್ರೋ ಎಟಿಎಂ ಕಾರ್ಡಗಳನ್ನು ನೀಡಲಾಗುತ್ತಿದೆ. ಗ್ರಾಹಕನ ಮೈಕ್ರೋ ಎಟಿಎಂ ಕಾರ್ಡನ್ನು ಮೈಕ್ರೋ ಎಟಿಎಂನಲ್ಲಿ ಬಳಸಿದಾಗ, ಈ ಕಾರ್ಡಿನ ಪಿನ್ ನಂಬರ್ ಅಥವಾ ಗ್ರಾಹಕನ ಕೈಬೆರಳಿನ ಗುರುತು ( ಬಯೋಮೆಟ್ರಿಕ್ಸ್) ಬಳಸಿ ದೃಢಿಕರಿಸಬೇಕು. ಆಗ ಜಿ.ಪಿ.ಆರ್. ತಂತ್ರಜ್ಞಾನ ಬಳಸಿ, ಬ್ಯಾಂಕಿನ ನೆಟ್‌ವರ್ಕ್‌ ಮತ್ತು ಮೈಕ್ರೋ ಎಟಿಎಂ ನಡುವೆ ಸಂಪರ್ಕ ಸಾಧಿಸಲಾಗುತ್ತದೆ. ಬ್ಯಾಂಕಿನ ನಿಯಮದಂತೆ ಪ್ರತಿದಿನ ಮೈಕ್ರೋ ಎಟಿಎಂ ಗ್ರಾಹಕ ಗರಿಷ್ಠ ನಗದು ಪಡೆಯುವಿಕೆ ಅಥವಾ ನಗದು ಪಾವತಿ ಮಾಡಲು ಸಾಧ್ಯವಿದೆ.

ಆದರೆ ಸಾಂಪ್ರದಾಯಿಕ ಎಟಿಎಂಗಳಲ್ಲಿ ಬ್ಯಾಂಕಿನ ಗ್ರಾಹಕ ನೇರವಾಗಿ ಎಟಿಎಂ ಬಳಸಬಹುದಾದರೆ, ಮೈಕ್ರೋ ಎಟಿಎಂ ಬಳಸಲು ಬ್ಯಾಂಕ್ನ ಅಧಿಕೃತ ಪ್ರತಿನಿಧಿಯ ಸಹಾಯ ಬೇಕಾಗುತ್ತದೆ. ಬ್ಯಾಂಕಿನ ಅಧಿಕೃತ ಪ್ರತಿನಿಧಿ ವಾರಕ್ಕೊಂದು ದಿನ, ಅಥವಾ ವಾರಕ್ಕೆ 2 ದಿನದಂತೆ, ಹತ್ತಿರದ ಹಳ್ಳಿಗಳಿಗೆ ಭೇಟಿ ನೀಡಿದರೆ, ಆ ಹಳ್ಳಿಯ ಜನರಿಗೂ ಎಟಿಎಂ ಸೌಲಭ್ಯವನ್ನು ನೀಡಿದಂತಾಗುತ್ತದೆ. ಬ್ಯಾಂಕಿನ ಅಧಿಕೃತ ಪ್ರತಿನಿಧಿಯಾಗಿ ಅಂಚೆ ವಿತರಿಸುವ ನೌಕರರು ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಅಂಚೆ ಕಚೇರಿಗಳನ್ನು ಕೂಡಾ ಬಳಸಬಹುದು ಎಂದು ಹಲವರ ಅಭಿಪ್ರಾಯವಾಗಿದೆ.

ನಗದು ಹಣ ಸ್ವೀಕರಿಸುವ ಮತ್ತು ಪಾವತಿ ಮಾಡುವ ಹೊಣೆ ಇರುವ ಬ್ಯಾಂಕಿನ ಅಧಿಕೃತ ಪ್ರತಿನಿಧಿ ಹಳ್ಳಿಯಿಂದ ಹಳ್ಳಿಗೆ ಸಂಚರಿಸುವಾಗ, ಅವನ / ಅವಳ ಸುರಕ್ಷತೆ ಕುರಿತು ಯೋಚಿಸಬೇಕಾಗುತ್ತದೆ. ಜಿ.ಪಿ.ಆರ್.ಎಸ್ ಸಂಪರ್ಕ ಮಾತ್ರ ಅವಲಂಭಿಸದೆ, ಮೊಬೈಲ್ ದೂರವಾಣಿ ಕರೆಗಳಿಗಾಗಿ ಬಳಸುವ ಜಿ.ಎಸ್.ಎಂ ತಂತ್ರಜ್ಞಾನವನ್ನು ಮೈಕ್ರೋ ಎಟಿಎಂಗಳಲ್ಲಿ ಬಳಸುವ ಪ್ರಯತ್ನಗಳು ಕೂಡಾ ನೆಡೆದಿವೆ. ಮೈಕ್ರೋ ಎಟಿಎಂಗಳನ್ನು ಬಳಸಲು ಬ್ಯಾಂಕಿನ ಅಧಿಕೃತ ಪ್ರತಿನಿಧಿಯನ್ನು ಅವಲಂಬಿಸಬೇಕು. ಸಾಂಪ್ರದಾಯಿಕ ಎಟಿಎಂಗಳಂತೆ ದಿನದ 24 ಗಂಟೆ ಸೌಲಭ್ಯ ನೀಡಲು ಈ ಪ್ರತಿನಿಧಿಯಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಮೈಕ್ರೋ ಎಟಿಎಂಗಳಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂಬ ವಾದವೂ ಇದೆ.

ಎಟಿಎಂಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸಬೇಕು ಎನ್ನುವ ಹಕ್ಕೋತ್ತಾಯ, ಭಾರತದಲ್ಲಿ ಎಟಿಎಂಗಳ  ಬಳಕೆ ಪ್ರಾರಂಭವಾದಾಗಿನಿಂದ ಕೇಳಿಬರುತ್ತಿದೆ. ನನ್ನ ನಿರಂತರ ಪ್ರಯತ್ನದ ಫಲವಾಗಿ ಖಾಸಗಿ ಕ್ಷೇತ್ರದ ಪ್ರಮುಖ ಬ್ಯಾಂಕ್ ಬೆಂಗಳೂರಿನಲ್ಲಿರುವ ತನ್ನ ಎಟಿಎಂಗಳಲ್ಲಿ ಕನ್ನಡ ಭಾಷೆಯನ್ನು ಬಳಸಲಾರಂಭಿಸಿತು. ನಂತರ ಹಲವಾರು ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಎಟಿಎಂಗಳಲ್ಲಿ ಕನ್ನಡ ಭಾಷೆಯ ಸೌಲಭ್ಯವನ್ನು ನೀಡಲಾಗುತ್ತಿದೆ. ಮೈಕ್ರೋ ಎಟಿಎಂಗಳ  ಬಳಕೆಯ ಮೊದಲು, ಸಂಚಾರಿ ಎಟಿಎಂ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಎಟಿಎಂ ಸೌಲಭ್ಯ ನೀಡುವ ಪ್ರಯತ್ನ ಭಾರತದಲ್ಲಿ 2002ರಿಂದ ನೆಡೆದಿದೆ. ವರ್ಷ 2012ರಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ಬಳಸಲು ಸೂಕ್ತವಾದ ಮಾತನಾಡುವ ಎಟಿಎಂನ್ನು ಭಾರತದಲ್ಲಿ ಮೊದಲ ಬಾರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ನಲ್ಲಿ ಪ್ರಾರಂಭಿಸಿತು.

ಬದಲಾಗುತ್ತಿರುವ ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಎಟಿಎಂ ತಂತ್ರಜ್ಞಾನ 1950 ರ ದಶಕದಿಂದ 2016ರವರೆಗೆ ಬದಲಾಗುತ್ತಾ ಬಂದಿದೆ. ವಿಶೇ಼ಷ ಟೋಕನ್‌ಗಳನ್ನು ಸ್ವೀಕರಿಸಿ ಹಣ ಪಾವತಿ ಮಾಡುತ್ತಿದ್ದ 1950-60ರ ದಶಕದ ಎಟಿಎಂಗಳಿಂದ 2016ರಲ್ಲಿ ಸ್ಮಾರ್ಟ ಫೋನ್ ಬಳಸಿ ಉಪಯೋಗಿಸಬಹುದಾದ ಕಾರ್ಡ್ ಲೆಸ್ ಸ್ಮಾರ್ಟ ಎಟಿಎಂಗಳವರೆಗೆ ಎಟಿಎಂ ತಂತ್ರಜ್ಞಾನ ಮತ್ತು ಬಳಕೆಯಲ್ಲಿ ಅನೇಕ ಮಹತ್ವದ ಬದಲಾವಣೆಗಳಾಗುತ್ತಿವೆ. ಅದರಂತೆ ಮೈಕ್ರೋ ಎಟಿಎಂಗಳು ಕೂಡಾ ಮುಂಬರುವ ದಿನಗಳಲ್ಲಿ ಹೆಚ್ಚು ಗ್ರಾಹಕ ಸ್ನೇಹಿಯಾಗುವ ಮತ್ತು ಜನಪ್ರಿಯವಾಗುವ ಸಾಧ್ಯತೆಗಳಿವೆ. ಹಿಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಿಗ್ಮಿ ಯೋಜನೆ ಮಾಡಿದ ಕ್ರಾಂತಿಯನ್ನು ಮೈಕ್ರೋ ಎಟಿಎಂಗಳು ಮಾಡುವ ನಿರೀಕ್ಷೆ ಇದೆ.

ಬ್ಯಾಂಕುಗಳು ಮತ್ತು ಎಟಿಎಂ ಸೇವಾ ಸಂಸ್ಥೆಗಳು ಉತ್ತಮ ಗ್ರಾಹಕ ಸೇವೆ ನೀಡಲು ಮಾರ್ಗದರ್ಶಿ ಸೂತ್ರಗಳನ್ನು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ನೀಡಿದೆ. ಉದಾಹರಣೆಗೆ, ಎಟಿಎಂಗಳಲ್ಲಿ ತಾಂತ್ರಿಕ ತೊಂದರೆಯುಂಟಾಗಿ, ಎಟಿಎಂನ್ನು ಗ್ರಾಹಕ ಬಳಸಲು ಸಾಧ್ಯವಾಗದಿದ್ದರೆ ತಗೆದುಕೊಳ್ಳಬೇಕಾದ ಅಗತ್ಯಕ್ರಮಗಳು, ಎಟಿಎಂಗಳಲ್ಲಿ ದೊರೆಯುವ ಕರೆನ್ಸಿ ನೋಟುಗಳ ಗುಣಮಟ್ಟ ಹೇಗಿರಬೇಕು, ಎಟಿಎಂಗಳು ವಿತರಿಸುವ ನಗದಿನಲ್ಲಿ ಕಡಿಮೆ ಅಥವಾ ಹೆಚ್ಚು ನಗದು ವಿತರಣೆಯಾದರೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು, ಎಟಿಎಂಗಳಲ್ಲಿರುವ ನಗದು ಖಾಲಿಯಾಗಿ ಗ್ರಾಹಕರಿಗೆ ಹಣ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ, ಗ್ರಾಹಕರ ದೂರು ನಿರ್ವಹಣೆ ವ್ಯವಸ್ಥೆ, ಎಟಿಎಂ ಕೇಂದ್ರದಲ್ಲಿ ಗ್ರಾಹಕರಿಗೆ ಅಗತ್ಯ ಸುರಕ್ಷತೆ, ಇತ್ಯಾದಿ ವಿಷಯಗಳನ್ನು ಕುರಿತು ಈ ಮಾರ್ಗದರ್ಶಿ ಸೂತ್ರಗಳಲ್ಲಿ ವಿವರಿಸಲಾಗಿದೆ.

ಎಟಿಎಂ ಬಳಕೆಯಲ್ಲಿ ವಂಚನೆಗೊಳಗಾಗದಂತೆ ಗ್ರಾಹಕರು ಕೂಡಾ ಕೆಲವು ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಎಟಿಎಂ ಕಾರ್ಡ, ಅದರ ಸಂಖ್ಯೆ, ಚಾಲ್ತಿ ಅವಧಿ ಮತ್ತು ಪಿನ್ ನಂಬರ್ ನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಗ್ರಾಹಕರ ಕರ್ತವ್ಯವಾಗಿದೆ. ಬೇರೆಯವರಿಗೆ ಈ ಕಾರ್ಡ ಮಾಹಿತಿ ಮತ್ತು ಪಿನ್ ನಂಬರ್ ನೀಡುವುದು ಸರಿಯಲ್ಲ. ಬ್ಯಾಂಕಿನ ಸಿಬ್ಬಂದಿ ಕೂಡಾ ಈ ಮಾಹಿತಿಯನ್ನು ಗ್ರಾಹಕರಿಂದ ಕೇಳುವುದಿಲ್ಲ.  ಅಂಗಡಿ, ಹೋಟಲ್ ಮೊದಲಾದ ಕಡೆ ಹಣ ಪಾವತಿಸಲು ಕಾರ್ಡ್ ಬಳಸಿದಾಗ, ಅದು ಗ್ರಾಹಕನ ಎದುರಿನಲ್ಲಿ ನೆಡೆಯಬೇಕು. ಕೆಲವು ದೇಶಗಳಲ್ಲಿ ‍ಪ್ರವಾಸಿಗರ ಕಾರ್ಡಿನ ಮಾಹಿತಿಯನ್ನು ನಕಲು ಮಾಡಿ, ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ದುರ್ಬಳಕೆ ಮಾಡುತ್ತಿರವ ಪ್ರಸಂಗಗಳು ದೇಶ ವಿದೇಶಗಳ ಮಾಧ್ಯಮಗಳಲ್ಲಿ ವರದಿಯಾಗಿವೆ. ಕಾರ್ಡ ಸ್ಕಿಮ್ಮಿಂಗ್ ಎಂದು ಕರೆಯಲಾಗುವ ಈ ಅಪರಾಧವನ್ನು ತಡೆಗಟ್ಟಲು ಎಟಿಎಂ ತಯಾರಿಕಾ ಸಂಸ್ಥೆಗಳು ಮತ್ತು ಬ್ಯಾಂಕುಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ.  ಎಟಿಎಂ ಕಾರ್ಡ್ ಬಳಸಿದಾಗ ಅದು ಎಟಿಎಂ ಒಳಗೆ ಸಿಕ್ಕಿಕೊಂಡು ಹೊರಬಾರದಿರುವಂತೆ ಮಾಡುವುದು ಮತ್ತು ಅದನ್ನು ಪಡೆಯಲು ವಿಫಲನಾದ ಗ್ರಾಹಕ, ಎಟಿಎಂ ಕೇಂದ್ರದಿಂದ ಹೊರಗೆ ಹೋದಾಗ, ಈ ಕಾರ್ಡನ್ನು ಪಡೆದುಕೊಂಡು ದುರ್ಬಳಕೆ ಮಾಡುವುದು  ಅಪರಾಧಿಗಳ ಮತ್ತೊಂದು ತಂತ್ರವಾಗಿದೆ. ಎಟಿಎಂ ಬಳಸಿ ಹಣ ಪಡೆಯುವಾಗ, ತಾಂತ್ರಿಕ ಸಮಸ್ಯೆಯಿಂದ ನಿಮ್ಮ ವಹಿವಾಟನ್ನು ರದ್ದು ಮಾಡಿ, ನಿಮ್ಮ ಹಣವನ್ನು ನಿಮ್ಮ ಖಾತೆಗೆ ಮರುಪಾವತಿ ಮಾಡಲಾಗಿದೆ ಎನ್ನುವ ಸುಳ್ಳು ಸಂದೇಶವನ್ನು ಗ್ರಾಹಕರಿಗೆ ನೀಡುವುದು. ಅದನ್ನು ನಂಬಿದ ಗ್ರಾಹಕ ಹೊರಟು ಹೋದ ನಂತರ, ಆ ಹಣವನ್ನು ಪಡೆದು ವಂಚಿಸುವುದು, ಇದು ಎಟಿಎಂ ತಂತ್ರಾಂಶದ ದುರ್ಬಳಕೆ ಮಾಡಿಕೊಂಡು ವಂಚಿಸುವ ಅಪರಾಧಿಗಳ ಒಂದು ತಂತ್ರವಾಗಿದೆ.

ಆನ್ ಲೈನ್ ವ್ಯವಹಾರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಅಧಿಕೃತ ವೆಬ್‍ಗಳಲ್ಲಿ ಮಾತ್ರ ಕಾರ್ಡ ಬಳಸಬೇಕು. ಅನುಮಾನ ಬಂದರೆ ತಕ್ಷಣ ಬ್ಯಾಂಕಿಗೆ ದೂರು ನೀಡಿ. ಕಾರ್ಡ್ ಕಳುವಾದರೆ ತಕ್ಷಣ ಬ್ಯಾಂಕಿಗೆ ದೂರು ನೀಡಿ. ಕಳುವಾದ ಕಾರ್ಡಿನ ದುರ್ಬಳಕೆ ನೆಡೆಯದಂತೆ ತಡೆಯಲು ಇದರಿಂದ ಸಾಧ್ಯವಾಗಬಹುದು.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]