ಮಾನವಶಾಸ್ತ್ರಜ್ಞರು ಆಕಾಶಕ್ಕೆ ಸಂಬಂದಪಟ್ಟ ಜಾನಪದವನ್ನು ‘ಸ್ಕೈಲೋರ್’ ಮತ್ತು ಆಕಾಶ ಜಗತ್ತಿನ ಕಲ್ಪನೆ”ಗಳ ಅಡಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಉಳಿದ ಶಾಸ್ತ್ರಜ್ಞರಿಗೆ ಈ ವಿಷಯ “ಕಾಸ್ಮಾಲಜಿ” – ಅಂದರೆ ಬಾಯ್ಯಾಕಾಶಕ್ಕೆ ಸಂಬಂದಪಟ್ಟ ಅಭ್ಯಾಸ. ಒಟ್ಟಿನಲ್ಲಿ ಆಕಾಶಕ್ಕೆ ಸಂಬಂದಪಟ್ಟ ವಿಚಾರವೆಂದರೆ ಆಯಾ ಬುಡಕಟ್ಟುಗಳಲ್ಲಿನ ಜನರಲ್ಲಿ ಆಕಾಶ, ಅಲ್ಲಿನ ಗ್ರಹಗಳು ಮುಖ್ಯವಾಗಿ ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಣಗಳು, ಹಗಲು ರಾತ್ರಿಗಳು, ಗಾಳಿ, ಬೆಳಕು, ಇವುಗಳ ಹುಟ್ಟು ಒಂದು ಮತ್ತೊಂದರೊಡನೆ ಹೊಂದಿರುವ ಸಂಬಂಧ, ಈ ಗ್ರಹಗಳು ಮಾವನ ಮೇಲೆ ಬೀರುವ ಪ್ರಭಾವ ಮತ್ತು ಸಂಬಂಧಗಳ ಬಗ್ಗೆ, ನಂಬಿಕೆಗಳ ಬಗ್ಗೆ ಅಭ್ಯಾಸ ಮಾಡುವ ಒಂದು ಪಠ್ಯಕ್ರಮ. ಇದು ಸಾಮಾನ್ಯವಾಗಿ ಆ ಜನರು ವಾಸವಾಗಿರುವ ಸನ್ನಿವೇಶಕ್ಕೆ ಅನುಗುಣವಾಗಿರುತ್ತದೆ. ಅಂದರೆ ಭೂಮಧ್ಯ ರೇಖಾವಲಯದಲ್ಲಿರುವ ಆಫ್ರಿಕಾದ ಜನರು ಸೂರ್ಯನ ಬಗ್ಗೆ, ಹಗಲು ರಾತ್ರಿಗಳ ಬಗ್ಗೆ ಹೊಂದಿರುವ ನಂಬಿಕೆ, ಶೀತವಲಯವಾದ ಉತ್ತರ ದೃವ ಪ್ರದೇಶವಾಸಿಗರಾದ ಎಸ್ಕಿಮೋ ಜನರ ನಂಬಿಕೆಯಿಂದ ಭಿನ್ನವಾಗಿರುತ್ತದೆ. ಏಕೆಂದರೆ ಈ ಎರಡು ಗುಂಪುಗಳು ಸೂರ್ಯನಿಂದ ಪಡೆಯುವ ಉಪಯೋಗ, ಕಷ್ಟ ನಷ್ಟಗಳು ಅವರಲ್ಲಿ ಈ ಕಲ್ಪನೆಗಳನ್ನು ತಂದಿರುತ್ತದೆ.

ತನ್ನದೇ ಆದ ನಿರ್ಧಿಷ್ಟ ನೆಲ ಮತ್ತು ಸಂಸ್ಕೃತಿಯನ್ನೊಂದಿದ, ಜೀವನಕ್ಕೆ ವಿಶೇಷವಾಗಿ ಪರಿಸರವನ್ನೇ ಅವಲಂಬಿಸಿ, ಹೊರಜಗತ್ತಿನೊಂದಿಗೆ ಸ್ವಲ್ಪವೇ ಸಂಬಂಧ ಹೊಂದಿದ ಒಂದು ಗುಂಪಿಗೆ ಬುಡಕಟ್ಟು ಜನಾಂಗವೆನ್ನಲಾಗಿದೆ. ಚರಿತ್ರೆಯ ಯಾವದೋ ಹಿನ್ನೆಲೆಯಿಂದಾಗಿ ದಟ್ಟ ಕಾಡಿನ ನಡುವೆ, ದೊಡ್ಡ ನದಿಗಳ, ಬೆಟ್ಟಗಳ ಆಚೆ, ಹೊರಜಗತ್ತಿನಿಂದ ದೂರ ಉಳಿದವರು ಈ ಬುಡಕಟ್ಟಿನ ಜನ. ಇವರನ್ನು ಆದಿವಾಸಿಗಳು, ಗುಡ್ಡ ಗಾಡುಜನ, ಮೂಲ ನಿವಾಸಿಗಳು, ಸ್ಥಳೀಯರು ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗಿದೆ. ಇದಕ್ಕೆ ಅವರ ನಿವಾಸದ, ಸಾಂಸ್ಕೃತಿಕ ಹಿನ್ನೆಲೆ ಮುಂತಾದವೇ ಕಾರಣವಿದೆ. ಹೊರಗಿಂದ ದಂಡೆತ್ತಿ ಅಥವಾ ವಲಸೆ ಬಂದ ಜನ ತಮ್ಮ ಉತ್ತಮ ಯುದ್ಧ ತಂತ್ರ, ಆಯುಧಗಳಿಂದ ಇವರನ್ನು ಸೋಲಿಸಿ ಹಿಂದೆ ತಳ್ಳಿದ್ದರಿಂದ ಇವರು ಜನರಹಿತ ನೆಲ ಹುಡುಕುತ್ತಾ ಕೊನೆಗೆ ದಟ್ಟ ಅರಣ್ಯ ಕಣಿವೆಗಳಿಗೆ, ಗಾರಿಗಳಿಗೆ ಹೋಗಿ ನೆಲಸಬೇಕಾಯಿತು. ಈ ದೆಸೆಯಿಂದಾಗಿ ಹಿಂದೆ ಒಂದು ಕಾಲಕ್ಕೆ ತಮ್ಮದೇ ನೆಲದ ಮಾಲೀಕರಾಗಿ, ತಮ್ಮದೇ ಸಂಸ್ಕರತಿ ಹೊಂದಿ, ಉತ್ತಮ ರೀತಿಯ ಜೀವನವನ್ನು ಮಾಡಿಕೊಂಡು ಶಾಂತಿಯಿಂದ, ಗೌರವದಿಂದ ಸುಖವಾಗಿದ್ದ ಈಜನ, ತದನಂತರ ತೊಂದರೆಗೀಡಾಗಿ ಇಂದು ಇರಲು ಉತ್ತಮ ನೆಲ ಸಿಗದೆ, ಬಡತನ, ರೋಗಗಳು, ಶೋಷಣೆ ಮುಂತಾದವುಗಳಿಂದ ತತ್ತರಿಸಿದ್ದಾರೆ. ಆದರೂ ತಮ್ಮ ಮೂಲ ಆಚಾರ ವಿಚಾರಗಳನ್ನು, ಉತ್ಸವಗಳನ್ನು, ಕಲೆಗಳನ್ನು ಬಿಡದೆ, ಇಂದಿಗೂ ತಮ್ಮ ರಂಗುರಂಗಿನ ವೇಷ ಭೂಷಣಗಳಿಂದ, ಕಲೆಯಿಂದ ಹೆಸರಾಗಿದ್ದಾರೆ.

ಭಾರತ ಅನೇಕ ಪರ್ವತಶ್ರೇಣಿಗಳಿಂದ, ದೊಡ್ಡ ಹಾಗೂ ಆಳವಾದ ನದಿಗಳಿಂದ, ದಟ್ಟ ಹಾಗೂ ವಿಶಾಲವಾದ ಕಾಡುಗಳಿಂದ, ಮರುಭೂಮಿಗಳಿಂದ ಕೂಡಿದ ಅತೀ ದೊಡ್ಡ ಭೂ ಭಾಗ. ಇಲ್ಲಿ ಅನೇಕ ಸಾವಿರ ಬುಡಕಟ್ಟಿಗೆ ಸೇರಿದ ಜನರಿದ್ದಾರೆ. ಇಂದು ಜಾತಿಗಳಾಗಿರುವ ಅನೇಕ ಗುಂಪುಗಳು ಹಿಂದೆ ಬುಡಕಟ್ಟು ಜನರೇ ಆಗಿದ್ದರೆಂಬುದು ಸತ್ಯ ಈ ಬುಡಕಟ್ಟು ಜನರನ್ನು ಅವರು ವಾಸವಾಗಿರುವ ಪ್ರದೇಶ, ಆಡುವ ಭಾಷೆ ಹಾಗೂ ಜನಾಂಗೀಯ ಆಧಾರದ ಮೇಲೆ ಅನೇಕ ಗುಂಪುಗಳನ್ನಾಗಿ ಮಾಡಬಹುದಾದರೂ ಅವರಲ್ಲಿನ ವಿವಿಧತೆಗಳು ಅನೇಕ ಸಾಮಾನ್ಯವಾಗಿ ಉತ್ತರ ಭಾರತದ, ದಕ್ಷಿಣ ಭಾರತದ, ಮಧ್ಯ ಭಾರತದ, ಪೂರ್ವ ಹಾಗೂ ಪಶ್ಚಿಮ ಭಾರತದ ಆದಿವಾಸಿಗಳೆಂದು ಭೌಗೋಳಿಕವಾಗಿ ಗುಂಪು ಮಾಡಿರುವುದು ಕಂಡುಬರುತ್ತದೆ. ಇವರಲ್ಲಿ ನೇಫಾ, ಅಂದರೆ ನಾರ್ಥ್‌ಈಸ್ಟ್‌ಪ್ರಾಂಟಿಯರ ಭಾಗದ, ಅಂದರೆ ಭಾರತ ಹಾಗೂ ನೇಪಾಳ, ಟಿಬೇಟ, ಬಾಂಗ್ಲಾ, ದೇಶ, ಬರ್ಮಗಡಿನಾಡಿನ ಆದಿವಾಸಿಗಳಾದ ನಾಗಾ, ಮಿಜೋ, ಖಾಸೀ ಮುಂತಾದ ಗುಂಪುಗಳು ಇತ್ತೀಚೆಗೆ ನಮ್ಮ ದೇಶದ ರಾಜಕೀಯ ದೃಷ್ಟಿಯಿಂದ ಪ್ರಸಿದ್ಧರಾಗಿದ್ದಾರೆ.

ಬುಡಕಟ್ಟು ಜನ ಆಡುವ ಭಾಷಾಪ್ರಕಾರದಿಂದ ಭಾರತದ ಬುಡಕಟ್ಟು ಜನರನ್ನು ಇಂಡೋ-ಇರೋಪಿಯನ್, ಇಂಡೋ-ಟಿಬೇಟಿನ್, ದ್ರಾವಿಡ ಹಾಗೂ ಆಫ್ರಿಕನ್ ಭಾಷಾಗುಂಪಿಗೆ ಸೇರಿದವರೆಂದು ಭಾಗಮಾಡಬಹುದು. ಜನಾಂಗೀಯ ಆಧಾರದ ಮೇಲೆ ಭಾರತದ ಬುಡಕಟ್ಟು ಜನರನ್ನು ಕಾಸಾಯ್ಡಿ, ಮಲಯೋ-ಪಲನೇಷಿಯನ್, ಮಂಗೋಲಾಯ್ಡಿ, ಆಫ್ರಿಕನ್ ಮುಂತಾಗಿ ವಿಂಗಡಿಸಬಹುದು. ಸಾಮಾಜಿಕ-ಆಥಿಕ ಆಧಾರದ ಮೇಲೂ ಇವರನ್ನು ಹಿಂದುಳಿದವರು, ಪರಿಶಿಷ್ಠ ಗುಂಪಿಗೆ ಸೇರಿದವರು, ಮುಂತಾಗಿ ಭಾಗಮಾಡ ಬಹುದು. ಇದೇ ರೀತಿಯಲ್ಲಿ ಧಾರ್ಮಿಕ ರೀತಿಯಲ್ಲೂ ಇವರನ್ನು ಹಿಂದು ಧರ್ಮಿಗಳು, ಕ್ರೈಸ್ಥರು, ಮುಸಲ್ಮಾನರು ಹಾಗೂ ಬುಡಕಟ್ಟು ಧರ್ಮಕ್ಕೆ ಸೇರಿದವರೆಂದು ಭಾಗಮಾಡಬಹುದು. ಇಂದು ಭಾರತ ದೇಶದಲ್ಲಿ ಆಗುತ್ತಿರುವ, ಆಗಿರುವ ಬದಲಾವಣೆಗಳಿಂದಾಗಿ ಯಾವ ಬುಡಕಟ್ಟಿನ ಜನರೂ ಹೊರ ಜಗತ್ತಿನಿಂದ ದೂರವಿಲ್ಲ. ದೇಶದಾಧ್ಯಂತ ಹರಡಿರುವ ಹೆದ್ದಾರಿಗಳು, ಸರಕಾರೀ ಸೇವಾ ಹಾಗೂ ಕಲ್ಯಾಣ ಸಂಸ್ಥೆಗಳು, ಸೈನ್ಯ, ಗಣೀ ಕೆಲಸ, ಅರಣ್ಯ ಕೆಲಸ – ಮುಂತಾದ ಕಾರ್ಯಗಳು ಈ ಬುಡಕಟ್ಟು ಜನರಲ್ಲಿ ಹೆಚ್ಚಿನ ಬದಲಾವಣೆ, ಪರಿವರ್ತನೆ ತಂದಿವೆ. ಈ ಬದಲಾವಣೆ ಕೆಲವರಿಗೆ ವರದಾನವಾಗಿದ್ದರೆ, ಹೆಚ್ಚಿನವರಿಗೆ ಶಾಪವಾಗಿದೆ.

ಯಾವುದೇ ಬುಡಕಟ್ಟಿನ ಅಥವಾ ಜನಾಂಗದ ಜಾನಪದವನ್ನು ಅಭ್ಯಾಸ ಮಾಡುವ ಪೂರ್ವದಲ್ಲಿ ಈ ಜನರ ಕುಲ ವಿವರಣೆಯನ್ನು (೧) (Ethnology) ಕುಲವಿವರಣಾ ಭೂ ಭಾಗವನ್ನು (೨) (Ethnogeography) ಸಂಸ್ಕೃತಿಕ ವಲಯವನ್ನು (೩) (Cultural Region) ಅಭ್ಯಾಸ ಮಾಡುವುದು ಅತ್ಯಾವಶ್ಯಕ. ಇಂತಃ ಅಭ್ಯಾಸದಿಂದ ಅನೇಕ ಅನುಕೂಲತೆಗಳಿವೆ. ಮೊದಲಿಗೆ ನಾವು ಅಭ್ಯಾಸ ಮಾಡ ಹೊರಟಿರುವ ಈ ಜನ ಯಾವ ದೊಡ್ಡ ಅಥವಾ ವಿಶಾಲ ಗುಂಪಿಗೆ, ಸಂಸ್ಕೃತಿಗೆ ಸೇರಿದವರು, ಎಲ್ಲಿಮದ ವಲಸೆ ಬಂದರು, ಇವರ ಮೂಲ ಸಂಸ್ಕೃತಿ, ನೆಲ, ಭಾಷೆ, ಯಾವುದು ಎಂದು ತಿಳಿಯುತ್ತದೆ. ಇದರಿಂದ ಈ ಜನರಲ್ಲಿ ಇತ್ತೀಚೆಗೆ ಬಂದಿರಬಹುದಾದ ಬದಲಾವಣೆಗಳು, ವಿಚಾರಗಳು, ಯಾವು, ಇವು ಅವರಲ್ಲಿ ಹೇಗೆ ಬಂದವು ಎಂದು ತಿಳಿಯಲೂ ಅನುಕೂಲವಾಗುತ್ತದೆ. ಈ ವಿಷಯಗಳನ್ನು ನಾವು ಮೊದಲೇ ಮನಗಂಡಲ್ಲಿ ನಮ್ಮ ಅಭ್ಯಾಸದ ಗತಿ ದಾರಿತಪ್ಪುವುದೂ ಇಲ್ಲ.

ಜಗತ್ತಿನಲ್ಲಿನ ಇಂದಿನ ಎಲ್ಲಾ ಜನರು, ಗುಂಪುಗಳು, ಸಂಸ್ಕೃತಿಗಳು, ಭಾಷೆಗಳು ಒಂದೇ ಮೂಲಕ್ಕೆ ಸೇರಿದವು ಎಂಬುದು ಮಾನವಶಾಸ್ತ್ರಜ್ಞರಲ್ಲಿ ಉತೃಪಿವಾದಿಗಳವಾದ ಇವರನ್ನು ಮತ್ತೆ ಏಕ ಮಾರ್ಗ ನಾದಿಗಳು (೪) (Uniliniations) ಅನೇಕ ಮಾರ್ಗ (೫)  (multilinialitis) ವಾದಿಗಳೆಂದು ಎರಡು ಭಾಗ ಮಾಡಬಹುದು. ಅಂದರೆ ಮಾನವ ಹಾಗೂ ಅವನ ಸಂಸ್ಕೃತಿ ಮೂಲದಲ್ಲಿ ಒಂದು ಅಥವಾ ಕೆಲವೇ ತಾಣಗಳಲ್ಲಿ ಹುಟ್ಟಿ, ತದನಂತರ ಇತರೆಡೆಗೆ ಪರಿಸರಿಸಿತು. ಈ ಪ್ರಸರಣ ಅಥವಾ ಪ್ರಯಾಣ ಈ ಜನರು ವಲಸೆ ಹೋದ ಕಾರಣದಿಂದ ಬರದಿದ್ದು. ನಾವೆಗಳ ದುರಂತದಿಂದ, ಭೂಮಿ ಭಾಗವಾದ್ದರಿಂದ, ದೊಡ್ಡ ದೊಡ್ಡ ನದಿಗಳು, ಕಾಡುಗಳು, ಮರು ಭೂಮಿಗಳು ಬಂದಿದ್ದರಿಂದ ಸಂಭವಿಸಿರಬಹುದು. ಹೀಗೆ ಮೂಲ ಗುಂಪಿನಿಂದ ಭಾಗವಾದ ಗುಂಪೊಂದು ತನ್ನ ಹೊಸ ನಿವಾಸಸ್ಥಾನದ ಪರಿಸರಕ್ಕೆ ಹೊಂದಿಕೊಳ್ಳಲು ನಂಬಿಕೆಗಳಲ್ಲಿ ವೃತ್ತಿಯಲ್ಲಿ, ಭಾಷೆ, ಸಾಮಾಜಿಕ ಸಂಬಂಧಗಳಲ್ಲಿ ಹೀಗೆ ನಾನಾ ರಂಗಗಳಲ್ಲಿ ಬಂದವು. ಈ ಬದಲಾವಣೆ ಎಷ್ಟರ ಮಟ್ಟಿಗೆ ಬಂದಿತೆಂದರೆ ಈ ಗುಂಪುಗಳು  ಮೂಲದಲ್ಲಿ ಒಂದೇ ಆದರೂ, ತದನಂತರ ಗುರುತಿಸಲಾರದಷ್ಟು ಭಿನ್ನವಾದವು. ಮಾನವಶಾಸ್ತ್ರಜ್ಞರು, ಅವರಲ್ಲಿ ಮುಖ್ಯವಾಗಿ, ಕುಲವಿವರಣಾಶಾಸ್ತ್ರಜ್ಞರು ಈ ಗುಂಪುಗಳನ್ನು ಅವು ವಾಸವಗಿರುವ ಭಾಗಕ್ಕೆ ಸೇರಿದ ಭಿನ್ನ ಭಿನ್ನವಾದ ಗುಂಪುಗಳೆಂದು ಅಭ್ಯಾಸ ಮಾಡಿದರೆ ತಮ್ಮ ಅಭ್ಯಾಸದಿಂದ ಅವರು ತಂದ ಈ ಗುಂಪುಗಳ ಬಗೆಗಿನ ವಿವರಗಳು ಮೊದಲಿಗೆ ಇವರನ್ನು ಬೇರೆ ಗುಂಪುಗಳೆಂದೇ ಚಿತ್ರಿಸಿದರು. ಕಾಲಕ್ರಮೇಣ ಇಂತಃ ಅಭ್ಯಾಸಗಳು ಜಗತ್ತಿನಾದ್ಯಂತ ನಡೆದು, ಈ ಅಭ್ಯಾಸಗಳು ಇತರರಿಗೆ ಓದಲು, ಅರ್ಥೈಸಲು ಸಿಕ್ಕಾಗ ಅವರಲ್ಲಿ ತಜ್ಞರು, ಈ ಗುಂಪುಗಳು ಇಂದು ಭಿನ್ನವಾಗಿದ್ದರೂ ಮೂಲದಲ್ಲಿ, ಆ ಭಾಗಕ್ಕೆ ಸೇರಿದ ಇತರೆ ಗುಂಪುಗಳಲ್ಲಿ ಹೆಚ್ಚಿನ ಸಾಮೀಪ್ಯ ಹೊಂದಿರುವುದನ್ನು ಕಂಡುಕೊಂಡರು. ಮಾನವಶಾಸ್ತ್ರಜ್ಞರಲ್ಲಿ ಮುಖ್ಯವಾಗಿ ಸಂಸ್ಕೃತಿಯನ್ನು ವಲಯಗಳಾಗಿ ಅಭ್ಯಾಸ ಮಾಡಿದವರು ಈ ಬಗ್ಗೆ ಹೆಚ್ಚಿನ ಚಿಂತನ ಪ್ರಾರಂಭಿಸಿದರು. ಈ ವೇಳೆಗೆ ಬೇರೆ ಬೇರೆ ಕಡೆಗಳಲ್ಲಿ ಮಾಡಲಾದ ಅನೇಕ ಬುಡಕಟ್ಟಿನ ಜನರ ಕುಲ ವಿವರಣಾ ಮಾಹಿತಿಯೂ ಸಿಕ್ಕಿತು. ಇದರಿಂದಾಗಿ ಅವರು ಹೊರನೋಟಕ್ಕೆ ಭಿನ್ನವಾಗಿ ಕಂಡರೂ ಮೂಲದಲ್ಲ, ಆಳದಲ್ಲಿ ಒಂದೇ ಆಗಿದ್ದಾರೆಂದು ಕಂಡು ಕೊಳ್ಳಲು ಅನುಕೂಲವಾಯಿತು. ಇದರಿಂದಾಗಿ ಮುಂದೆ ಸಂಸ್ಕೃತಿಗಳ ವಲಯಗಳು (೭) (Cultural Zones) ಸಂಸ್ಕೃತಿಗಳ ವಲಯಗಳು (೮) (Cultural Regions) ಅಭ್ಯಾಸವೆಂಬ ಹೊಸ ಅಭ್ಯಾಸ ಕ್ರಮ ಪ್ರಾರಂಭವಾಯಿತು.

ಸಂಸ್ಕೃತಿ ವಲಯ ಮತ್ತು ಪ್ರದೇಶಗಳ ಅಭ್ಯಾಸವೆಂದರೆ ಒಂದು ಭೂಭಾಗಕ್ಕೆ ಪ್ರದೇಶಕ್ಕೆ ಸೇರಿದ ಜನರ ಅಥವಾ ಗುಂಪುಗಳ ಸಂಸ್ಕೃತಿಗಳ ಮೂಲ ಹುಡುಕುವ ಅಭ್ಯಾಸ. ವಿವಿಧತೆಯಲ್ಲಿ ಏಕತೆ ಹುಡುಕುವ ಒಂದು ಅಭ್ಯಾಸ ಕ್ರಮವನ್ನೆಲೂಬಹುದು. ಇಂತಃ ಅಭ್ಯಾಸಕ್ಕೆ ಪೂರಕವಾದ ಈ ಗುಂಪುಗಳು ವಾಸವಾಗಿರುವ ಭೂಪ್ರದೇಶ, ಅವರ ಜನಾಂಗೀಯ ಹಿನ್ನೆಲೆ, ಅವರಾಡುವ ಮೂಲ ಭಾಷೆ, ಅವರ ಮೂಲ  ಆಚಾರ-ವಿಚಾರಗಳು, ಸಾಮಾಜಿಕ ಸಂಸ್ಥೆಗಳ ಹಿನ್ನೆಲೆ, ಇವನ್ನು ನಡೆಸಿಕೊಂಡು ಬಂದ ನಿಯಮಗಳು ಮುಂತಾದವು. ಈ ಗುಂಪುಗಳಲ್ಲಿ ಮೇಲಿನ ಈ ವಿಷಯಗಳನ್ನು ಬೇರೆ ಬೇರೆಯಾಗಿ ಆಳವಾಗಿ ಅಭ್ಯಾಸಮಾಡಿ, ಈ ವಿಚಾರಗಳ ಪ್ರೇರಣೆಗಳು, ಮೂಲಗಳನ್ನು ತಿಳಿಯುತ್ತಾರೆ. ತದನಂತರ ಇಂತಃ ವಿಚಾರಗಳ ಪಕ್ಕದ ಮತ್ತಾವ ಗುಂಪಿನಲ್ಲಿವೆ ಎಂದು ಹುಡುಕುತ್ತಾರೆ. ಸಿಕ್ಕಲ್ಲಿ ಇವು ಹೇಗೆ ಬಂದವು ಎಂಬುದನ್ನು ತಿಳಿಯುತ್ತಾರೆ. ಈ ವಿಚಾರಗಳು ಸಾಮಾನ್ಯವಾಗಿ ವಲಸೆಯ ಮೂಲಕ, ಗುಂಪು ವಿಭಾಗಾವಾದ ಕಾರಣದಿಂದ ಬಂದವೆಂದು ಅರ್ಥೈಸುತ್ತಾರೆ. ಹೀಗೆ ಎಲ್ಲಾ ಅಲ್ಲದಿದ್ದರೂ, ಅನೇಕ ವಿಚಾರಗಳಲ್ಲಿ ಸಾಮ್ಯತೆ ಕಂಡು ಬಂದ ಗುಂಪುಗಳನ್ನು ಇವು ಮೂಲತಃ ಒಂದು ಸಂಸ್ಕೃತಿಗೆ ಸೇರಿದವು ಎಂದು ಗುಂಪು ಮಾಡಿ, ಈ ಗುಂಪುಗಳು ವಾಸವಾಗಿರುವ ಭೂ ಭಾಗವನ್ನು ಇಂತದ್ದು ಎಂದು ಗುರುತಿಸಿ ಅದಕ್ಕೆ ಒಂದು ಹೆಸರು ಕೊಡುತ್ತಾರೆ.

ಈ ಆಧಾರದಿಂದ ಇಂದು ಜಗತ್ತಿನಲ್ಲಿ ವಾಸವಾಗಿರುವ ಅನೇಕ ಸಂಸ್ಕೃತಿಕ ಗುಂಪುಗಳನ್ನು ಕುಲವಿವರಣಾ ವಲಯಗಳನ್ನಾಗಿ ಮಾಡಲಾಗಿದೆ. ಕೆಲವು ತಜ್ಞರು ಇಂತಹ ವಲಯಗಳು ಐದು ಎಂದರೆ ಉಳಿದವರು ಏಳು ಎನ್ನುತ್ತಾರೆ. ರಾಲ್ಭಲಿಂಟನ್ ಎನ್ನುವ ತಜ್ಞರು ನೀಡಿದ ಏಳು ಕುಲ ವಿವರಣಾ ವಲಯಗಳು ಹೀಗಿವೆ.

೧) ಸೌತ್-ಈಸ್ಟ್ ಏಶಿಯಾ

೨) ಓಸಿಯಾನಿಯಾ ಮತ್ತು ಮಡಗಾಸ್ಕರ

೩) ಸೌತ್-ವೆಸ್ಟ್ ಏಶಿಯಾ ಮತ್ತು ಯರೋಪ

೪) ನಿಯರ ಈಸ್ಟ್ ಮತ್ತು ಮೆಡಟರೇನಿಯನ್

೫) ಆಫ್ರಿಕಾ

೬) ಓರಿಯಂಟ್ ಮತ್ತು

೭) ಹೊಸ ಜಗತ್ತು ಹೊಸ ಜಗತ್ತಿಗೆ ಎಸ್ಕಿಮೋಗಳು ಇರಾಕ್ಟಿಗಳು, ಟೆನೆಸ್ಸಿಗಳು, ಹೊಸಮೆಕ್ಸಿಕೋ, ಅಮೇರಿಕೆಯ ಇಂಡಿಯನರು ಹಾಗೂ ಮಾಯಾಸಂಸ್ಕೃತಿ ಸೇರಿವೆ. ಇವುಗಳಲ್ಲಿ ಭಾರತಖಂಡ ಓರಿಯಂಟ್ ಕುಲವಿವರಣಾ ಭಾಗಕ್ಕೆ ಸೇರಿದ್ದು.

ಈ ವಿಚಾರಧಾರೆಯ ಹಿನ್ನೆಲೆಯಲ್ಲಿ ನಾವು ಇಂದು ಆಫ್ರಿಕಾದಿಂದ ನೂ ಆರ್ ಜನಾಂಗದ, ಹೊಸ ಪ್ರಪಂಚದಿಂದ ಅಮೇರಿಕನ್ ಇಂಡಿಯನರ ಹಾಗೂ ಓರಿಯಟ್‌ದಿಂದ ಭಾರತದ ಸವೋರಾ ಜನರಲ್ಲಿ ಇರುವ ಆಕಾಶಕ್ಕೆ ಸಂಬಂಧಪಟ್ಟ ಜಾನಪದವನ್ನು ಅಭ್ಯಾಸ ಮಾಡಿ ಇಲ್ಲಿ ಸಾದರ ಪಡಿಸುತ್ತಿದ್ದೇವೆ.

ಇಂದಿನ ಆಂದ್ರ, ಓರಿಸ್ಸಾ ಹಾಗೂ ಮಧ್ಯಪ್ರದೇಶಗಳ ಕಾಡುಗಳಲ್ಲಿ ವಾಸವಾಗಿರುವ ಅನೇಕ ಬುಡಕಟ್ಟು ಜನರಲ್ಲಿ “ಸವೋರಾ” ಮುಕ್ಯರಾದವರು. ಇವರು ಗುಡ್ಡಗಳ ಇಳಕಲಿನಲ್ಲಿ ಬಯಲಿನಲ್ಲಿ ವಾಸಮಾಡುತ್ತಾರೆ. ಓರಿಸ್ಸಾದ ಗಾಂಜಂ ಜಿಲ್ಲೆಗೆ ಸೇರಿದ ಗುಂಪುಗಳಿಂದ ನನ್ನ ಅಭ್ಯಾಸಕ್ಕೆ ಬೇಕಾದ ಮಾಹಿತಿಯನ್ನು ಪಡೆಯಲಾಗಿದೆ. ಈ ಗುಂಪನ್ನು ಮೊದಲಿಗೆ ಅಭ್ಯಾಸ ಮಾಡಿದವರು ಭಾರತದ ಬುಡಕಟ್ಟು ಜನರ ಅಭ್ಯಾಸದ ಪಿತಾಮಹಾ ಎಂದು ಹೆಸರಾದ ದಿವಂಗತ ಡಾ. ವೆರಿಯಲ್ ಎಲ್‌ವಿನ್‌-ರವರು. ನನಗೆ ಬೇಕಾದ ವಿಷಯಗಳನ್ನು ಇವರ ಅಭ್ಯಾಸದಿಂದ ಪಡೆಯಲಾಗಿದೆ. ನಾವಿಲ್ಲಿ ಅಭ್ಯಾಸಕ್ಕೆ ತೆಗೆದುಒಂಡಿರುವ ಸಪೋರಾಗಗಳು ಗುಡ್ಡಗಾಡಿನ ನಿವಾಸಿಗಳು. ಇವರು ಗುಡ್ಡದ ಇಳಿಜಾರಿನಲ್ಲಿ, ಹಳ್ಳಿಗಳಲ್ಲಿ, ವಾಸಿಸುವವರು. ಇವರ ಮೂಲಕ ಕಸುಬು ವ್ಯವಸಾಯ. ತೋಟಗಾರಿಕೆ, ಪಶುಪಾಲನೆ, ಕಾಡಿನಿಂದ ಆಯ್ದು ಗಡ್ಡೆ, ಗೆಣಸು, ಹಣ್ಣು, ಎಲೆ ಮುಂತಾದವು ಉಪ ಆದಾಯತರುತ್ತವೆ. ಹೊಲದಲ್ಲಿ ಮುಖ್ಯವಾಗಿ ಬತ್ತ ಬೆಳೆದರೆ, ತೋಟದಲ್ಲಿ ತಂಬಾಕು, ಮೆಕ್ಕೆಜೋಳ, ತರಕಾರಿ, ಶುಂಠಿ, ಬೆಳೆಯುತ್ತಾರೆ. ತೋಟ ಹಾಗೂ ಕಣಕ್ಕೆ, ನದಿಗಳ ದಂಡೆಗೆ ಸುಂದರವಾಗಿ ಕಲ್ಲಿನ ಗೋಡೆ ಕಟ್ಟಿರುತ್ತಾರೆ.

ಹಳ್ಳಿಗಳು ಸಾಮಾನ್ಯವಾಗಿ ಗುಡ್ಡದ ಇಳಿಜಾರಿನಲ್ಲಿ ಸಾಲು ಮನೆಗಳ ರೂಪದಲ್ಲಿರುತ್ತವೆ. ಹಳ್ಳಿಗಳಿರುವ ತಾಣ ಬಹು ಸುಂದರವಿದ್ದರೂ ಹಳ್ಳಿಗಳು ಮಹಾ ಹೊಸಲು ತುಂಬಿದ ಜಾಗಗಳು. ಸಗಣಿ, ಮಲ-ಮೂತ್ರಗಳಿಂದ ನಾರುತ್ತಿರುತ್ತವೆ. ಆದರೆ ಮನೆ ಅಂಗಣ, ಅದರ ಒಳಗೆ ಓರಣ ಒಪ್ಪ, ಶುಚಿ ಎದ್ದು ಕಾಣುತ್ತದೆ. ಗೋಡೆಗಳ ಮೇಲೆ, ದೇವ ದೇವತೆಗಳ ಚಿತ್ರಗಳನ್ನು ಸುಣ್ಣ ಬಳಸಿ ಸುಂದರವಾಗಿ ಬರೆದಿರುತ್ತಾರೆ. ಹಳ್ಳಿಮನೆಗಳ ಸಾಲುಗಳ ನಡುವೆ ಒಂದುದೊಡ್ಡ ಮನೆ ಇವರ ದೇವತಾತಾಣ. ಮನೆ ಎಂದರೆ ಮರ, ಬಿದಿರು ಹಾಗೂ ಹುಲ್ಲು, ಚಾಪೆಗಳಿಂದ ಕಟ್ಟಿದ ಒಂದು ದುಂಡನೆಯ, ಒಂದೇ ಕೋಣೆಯ ಗುಡಿಸಲು. ಇದರಲ್ಲಿ ಮಕ್ಕಳಿಗೆ ಮಲಗಲು ಬೇರೆ ಜಾಗ. ಅಡಿಗೆ ಮನೆ ಒಲೆಯಲ್ಲದೆ ಆಹಾರ ತುಂಬಿದ ಬುಟ್ಟಿಗಳು, ಮಡಕೆಗಳ ಚೀಲಗಳು ಹೀಗೆ ಅನೇಕ ಗೃಹ ಉಪಯೋಗಿ ವಸ್ತುಗಳಿಂದ ತುಂಬಿದ್ದು, ಇದು ಗಂಡ ಹೆಂಡಿರು ಮಲಗುವ ತಾಣಕೂಡ. ಮನೆಯಲ್ಲಿ ಪೂಜಾ ಗೃಹವೆಂಬುದು ಪ್ರತ್ಯೇಕ ಇಲ್ಲವಾದರೂ ಸಹೋರಾ ಜನರ ಇಡೀ ಮನೆ ಬಂದು ಪೂಜಾಸ್ಥಳ. ಮನೆಯ ಸುತ್ತ ವ್ಯವಸಾಯಕ್ಕೆ, ಹಾಲಿಗೆ ಬೇಕಾದ ದನಕರುಗಳನ್ನು ಕಟ್ಟಿರುತ್ತಾರೆ. ಗುಂಪಿನ ಮುಖ್ಯಸ್ಥ ಯಾವುದಾದರೂ ಒಂದು ಹಳ್ಳಿಯಲ್ಲಿ ವಾಸವಾಗಿರುತ್ತಾನೆ. ಅವನ ಮನೆ ಅನೇಕ ಕೊಠಡಿಗಳ ಒಂದು ದೊಡ್ಡ ಗುಡಿಸಲು. ಅವರ ಪೂಜಾವಿದಿಗಳನ್ನು ಸ್ತ್ರೀ ಹಾಗೂ ಪುರುಷ ಪೂಜಾರಿಗಳು ನಿರ್ವಹಿಸುತ್ತಾರೆ. ಸವೋರಾ ಹೆಣ್ಣುಗಂಡು ಸೊಂಟದಿಂದ ಕೆಳಗೆ ಒಂದು ತುಂಡು ಬಟ್ಟೆ ಮಾತ್ರ ಧರಿಸುತ್ತಾರೆ. ನೃತ್ಯಕ್ಕೆ ಹೋಗುವಾಗ ಪುರುಷರು ಒಂದು ಉದ್ದನೆಯ ಬಟ್ಟೆಯನ್ನು ಪೇಟನಾಗಿ ಕಟ್ಟಿಕೊಂಡು, ಅದರಲ್ಲಿ ಹಕ್ಕಿಗಳ ಬಣ್ಣ ಬಣ್ಣದ ಗರಿಗಳನ್ನು ಸಿಕ್ಕಿಸಿ ಕೊಳ್ಳುತ್ತಾರೆ. ಸ್ತ್ರೀಯರು ಆಭರಣ ಪ್ರೀಯರು. ಕಿವಿಯ ಎಲೆಯಲ್ಲಿ ದೊಡ್ಡ ರಂದ್ರ ಮಾಡಿ, ಅನೇಕ ಆಭರಣ ತೊಡುತ್ತಾರೆ. ಕೊರಳಲ್ಲಿ ಹವಳ ಹಾಗೂ ಕಪ್ಪೆ ಚಿಪ್ಪಿನ ಅನೇಕ ಸರಗಳ ಮಾಲೆಗಳು. ತಲೆಗೂ ದಲನ್ನು ಓರಣವಾಗಿ, ಎಣ್ಣೆ ಹಚ್ಚಿ ಬಾಚಿ, ಬೊಂಬಿನಿಂದ ಮಾಡಿದ ಚೂಪಾದ ಅಲಂಕಾರ ವಸ್ತುಗಳಿಂದ ದಿಂಡುಕಟ್ಟಿರುತ್ತಾರೆ. ಮುಂದಲೆಯ ಮೇಲೆ ಅಚ್ಚೆಯ ಬೊಟ್ಟು ಸಾಮಾನ್ಯ.

ಮನೆಯ ಸುತ್ತ, ಕಣದಲ್ಲಿ ಅನೇಕ ಬಗೆಯ ಉಳುವ, ಕೊಯ್ಯುವ, ಹರಿಯುವ ಸಾಧನಗಳು, ಧಾನ್ಯ ಶೇಖರಣೆಗೆ ಬೇಕಾದ ದೊಡ್ಡ ಕಣಜಗಳು. ಧಾನ್ಯ ಹಾಗೂ ಗೃಹ ಕೃತ್ಯಕ್ಕೆ ಬೇಕಾಗುವ ಸಾಮಾನುಗಳನ್ನು ಇಡಲು, ಸಾಗಿಸಲು ಬಿದಿರಿನಿಂದ, ತಾಳೆಮರದ ಎಲೆಗಳಿಂದ ಮಾಡಿದ ನಾನಾ ನಮೂನೆಯ, ಚಿತ್ರಮಯವಾದ ಬುಟ್ಟಿಗಳು, ಕೇರಲು ತೂರಲು ಬೇಕಾದ ಸಾಧನಗಳು, ಮಲಗಲು, ಹಾಸಲು ಬೇಕಾಗುವ ಚಾಪೆಗಳು ಕಸಬರಿಕೆಗಳೂ ಇರುತ್ತವೆ. ಇವರಲ್ಲಿ ಕಮ್ಮಾರರು ಕಬ್ಬಿಣ ಹಾಗೂ ಕಂಚಿನ ಲೋಹಗಳನ್ನು ಬಳಸಿ ಪಾತ್ರೆ, ಆಯುಧಗಳನ್ನು ಮಾಡುತ್ತಾರೆ.

ಸವೋರ ಸಮಾಜ ಪಿತೃಪ್ರಧಾನವಾದದ್ದು. ತಂದೆ ಅಥವಾ ಗಂಡ ಕುಟುಂಬದ ಯಜಮಾನ, ಪ್ರತಿನಿಧಿ, ಅನ್ನದಾತ. ವಿವಾಹಪದ್ಧತಿ ಒಳವಿವಾಹ ಪದ್ಧತಿ. ಏಕ ಪತ್ನಿತ್ವ ಸಾಮಾನ್ಯವಿದ್ದರೂ, ಬಹುಪತ್ನಿತ್ವ ಇಲ್ಲವೆಂದಲ್ಲ. ಇವರಿಗೆ ಮಕ್ಕಳೆಂದರೆ ಇಲ್ಲದ ಮಮತೆ. ಹೊಲ, ಮನೆ, ಕಣಗಳಲ್ಲಿ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ ಮನೆಯಲ್ಲಿ, ಹೊಲದಲ್ಲಿ, ಕಣದಲ್ಲಿ ಸ್ತ್ರೀಯರ ಪಾತ್ರ ಹಿರಿದು.

ಸವೋರಾ ಅವರ ದೇವತಾ ಗುಂಪಿನಲ್ಲಿ ಅನೇಕ ದೇವ ದೇವತೆಯರು, ಪಿತೃಗಳು, ಯಕ್ಷರು, ಯಕ್ಷಿಯರಿದ್ದಾರೆ. ಜೊತೆಗೆ ಪ್ರೇತಗಳು, ಆತ್ಮಗಳು, ದುಷ್ಟಶಕ್ತಿಗಳನ್ನು ಗುರಿತಿಸುತ್ತಾರೆ. ಇವರಲ್ಲಿ ಸರ್ವೋತ್ತಮ ದೇವರೆಂಬುದಿಲ್ಲ. ಇದ್ದರೆ ಅವನು ಸೂರ್ಯ. ಇವರಲ್ಲಿ ಮೇಲಿನ ಲೋಕ, ಭೂಲೋಕ ಹಾಗೂ ಕೆಳಗಿನ ಲೋಕಗಳೆಂಬ ಮೂರು ಲೋಕಗಳ ಕಲ್ಪನೆ ಇದ್ದು ಈ ಎಲ್ಲಾ ದೈವಗಳು, ಶಕ್ತಿಗಳು ಈ ಮೂರೂ ಲೋಕದಲ್ಲಿ ವಾಸಮಾಡುತ್ತಾರೆ, ಮತ್ತು ಎಲ್ಲೆಂದಲ್ಲಿಗೆ ಸದಾ ಸಂಚರಿಸುತ್ತಾರೆ. ಈ ದೈವಗಳು ಎಷ್ಟರ ಮಟ್ಟಿಗೆ ಸಂಚಾರಿಗಳೆಂದರೆ ಯಾವುದಾದರೂ ತೊಂದರೆ ಬಂದಾಗ ಆಹುತಿ ನೀಡಲು ಪೂಜಾರಿಗಳಿಗೆ ಇವರನ್ನು ಹುಡುಕುವುದೇ ಕಷ್ಟವಾಗುತ್ತದೆ. ದೈವಗಳ ಈ ಜಂಗಮತ್ವಕ್ಕೆ ಕಾರಣ-ಯಾರಾದರೂ ಆಹ್ವಾನಿಸಿದರೆ ಕರೆದಲ್ಲಿಗೆ ಹೋಗಿರುತ್ತಾರೆ. ಕೆಲವೊಮ್ಮೆ ತಮ್ಮ ಅನ್ನ ಹುಡುಕಿಕೊಂಡು ಹೋಗಿರುತ್ತಾರೆ. ಹೀಗಾಗಿ ಅವರು ಭೂಮಿಯ ಮೇಲೆ ಬಂದಾಗ  ಮರದಲ್ಲಿ ಮನೆಯ ಚಾವಣಿಯಲ್ಲಿ, ಬಂಡೆಗಳಲ್ಲಿ, ದಾರಿಯ ಮಗ್ಗಲಲ್ಲಿ ಹೀಗೆ ಎಲ್ಲೆಂದರಲ್ಲಿ ಅವರು ವಾಸ ಮಾಡುತ್ತಾರೆ ಮತ್ತು ಇದರಿಂದಾಗಿ ಮನುಷ್ಯರಿಗೆ ತೊಂದರೆ ತರುತ್ತಾರೆ. ಮಾನವರು ಯಾವುದೇ ಕಾರ್ಯ ಮಾಡುವ ಮುನ್ನ ಈ ದೈವಗಳಿಗೆ ಪೂಜೆ, ಆಹುತಿ ನೀಡಬೇಕು, ಅವರ ಕೃಪೆ, ಪರವಾನಿಗೆ ಪಡೆಯಬೇಕು. ಇಲ್ಲದಿದ್ದರೆ ಕೆಲಸ ಕೆಡುವುದರ ಜೊತೆಗೆ ದೈವಗಳ ಕೋಪ ಬೇರೆ. ಉದಾ ಹರಣೆಗೆ ಮನೆ ಕಟ್ಟಲು ನೆಲ ಶುಚಿ ಮಾಡುವ ಮುನ್ನ ಅಲ್ಲಿರಬಹುದಾದ ದೈವಗಳಿಗೆ ಪೂಜೆ, ನಂತರ ಕಂಬವೊಂದಕ್ಕೆ ಅನ್ನ ಹಾಗೂ ಮದ್ಯಗಳ ನೈವೇದ್ಯ. ಚಾವಣಿಯ ಜಂತಿಗೆ ಪೂಜೆ, ಆಹುತಿ. ಕಾರಣ ಕಂಬಗೆದ್ದ ಲಿಡಿಯದಿರಲೆಂದು ನೆಲ ದೇವತೆಯಾದ “ಲಬೋಸಂ”ಗೆ ಪೂಜೆ, ಚಾವಣಿಗೆ ಬೆಂಕಿ ಹತ್ತದಿರಲೆಂದು ಸೂರ್ಯದೇವನಿಗೆ ಪೂಜೆ, ಆಹುತಿ. ಹೀಗೆ ಹತ್ತಾರು ದೈವಗಳು, ಒಂದೊಂದಕ್ಕೆ ಒಂದೊಂದು ನಮೂನೆಯ ಪೂಜೆ, ಆಹುತಿ.

ಆಕಾಶ ದೈವಗಳಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು, ಮಳೆರಾಯ, ಗಾಳಿದೇವರು ಮುಖ್ಯರಾದವರು. ಆದರೆ ಸೂರ್ಯ ಎಲ್ಲರಿಗಿಂತ ದೊಡ್ಡವ, ಪ್ರಭಾವಶಾಲಿ, ಸೂರ್ಯನಿಗೆ ಅನೇಕ ರೂಪಗಳಿವೆ. ಬೆಳಗಿನ ಸೂರ್ಯ, ಮಧ್ಯಾನ್ಹದ ಸೂರ್ಯ. ಸಾಯಂಕಾಲದ ಸೂರ್ಯ ಎಂದು ಪರಿಗಣಿಸುವರು ಮತ್ತು ಮೂವರು ಮಾನವರಿಗೆ ಸಹಾಯಕರು. ಪ್ರತಿ ರೂಪವೂ ಪೂಜಾರ್ಹ, ಬಲಿಗೆ ಅರ್ಹ. ಸೂರ್ಯ ಬೆಳಕು ಶಾಖ ಕೊಡುವುದಲ್ಲದೆ ಸ್ತ್ರೀಯರು ಗರ್ಭದರಿಸುವಲ್ಲಿ, ಭ್ರೂಣ ಬೆಳೆಯುವಲ್ಲಿ ಅವನು ಸಹಾಯ ಮಾಡುತ್ತಾನೆ. ಆಕಾಶದಿಂದ ಸದಾ ಮಾನವರ ಚಲನವನಗಳನ್ನು ನೋಡುತ್ತಾನಾದ್ದರಿಂದ ಅವರ ಒಳಿತು ಕೆಡುಕಗಳನ್ನು ಅವನು ನಿಯಂತ್ರಿಸುತ್ತಾನೆ. ಅಲ್ಲದೆ ಉಳಿದ ಸಣ್ಣ ದೈವಗಳ ಮೇಲೆ, ಶಕ್ತಿಗಳ ಮೇಲೆ ನಿಯಂತ್ರಣ ಹೊಂದಿರುತ್ತಾನೆ. ಸವೋರಾ ಜಗತ್ತಿನಲ್ಲಿ ಏನು ಸಂಬಂಧಿಸಿದರೂ ಇದು ಸೂರ್ಯನಿಂದಾದದು. ನೇರವಾಗಿ ಸೂರ್ಯನಿಗೆ ಸಲ್ಲಿಸಿದ ಆಹುತ ಜೊತೆಗೆ, ಉಳಿದ ದೈವಗಳಿಗೆ ಸಲ್ಲಿಸಿದ ಆಹುತಿಗಳು ಸೂರ್ಯನಿಗೆ ಮುಟ್ಟಿಸಲೆಂದು ನೀಡಿದ ಆಹುತಿಗಳು.

ಸೂರ್ಯ ಅತ್ಯಂತ ಅನುಕಂಪವುಳ್ಳ ದೇವರು. ಸದಾ ಒಲತನ್ನೇ ಮಾಡುವವ. ಮಾನವರು ತಪ್ಪು ಮಾಡಿದಾಗ ಅವರನ್ನು ಎಚ್ಚರಿಸಲು ಅವರಿಗೆ ತರುವ ತೊಂದರೆಗಳೂ ಅತೀ ಸಣ್ಣವು – ತಲೆ ನೋವು ಜ್ವರ ಹೀಗೆ. ಇದರಿಂದ ಎಚ್ಚೆತ್ತ ಮಾನವ ಸೂಕ್ತ ಆಹುತಿ, ಪೂಜೆ ಮಾಡಿದರೆ ತೊಂದರೆ ಪರಿಯಾರವಾಯಿತು. ಆದ್ದರಿಂದ ಅನಾವಶ್ಯಕವಾಗಿ ಸೂರ್ಯನ ಹೆಸರು ತೆಗೆದುಕೊಳ್ಳುವುದಿಲ್ಲ. ತೆಗೆದು ಕೊಂಡರೆ ಇದು ಅತೀಮುಖ್ಯ ಕೆಲಸಕ್ಕೆ, ಅದು ಬಹು  ಭಕ್ತಿಪೂರಕವಾಗಿ. ಉದಾಹರಣೆಗೆ ಕೊಡು ಕೊಳ್ಳುವಲ್ಲಿ ಜಗಳವಾಗಿ ಯಾರು ನ್ಯಾಯಸ್ಥರೆಂದು ಪ್ರಶ್ನೆ ಬಂದಾಗ “ಮೇಲಿನ ಅವನೇ ಸಾಕ್ಷಿ” ಎಂದರೆ ಮುಗಿಯಿತು. ಇವರಿಗೆ ಸೂರ್ಯನಲ್ಲಿ ಅಷ್ಟು ಭಕ್ತಿ-ಭಯ ತಮ್ಮ ಎಲ್ಲಾ ಕಾರ್ಯದಲ್ಲಿ ಸೂರ್ಯ ಪ್ರಥಮ. ಅದು ಆಹುತಿಯೇ ಇರಲಿ, ಪ್ರಾರ್ಥನೆಯೇ ಇರಲಿ, ಉದಾಹರಣೆಗೆ ಯಾರಾದರೂ ರೋಗಿಗೆ ಔಷಧ ಅಥವಾ ಮಾಟದ ವಸ್ತುವನ್ನು ನೀಡುವುದಿದ್ದರೆ ಅದರ ಮೊದಲು ಭಾಗವನ್ನು ಸೂರ್ಯನ ಕಡೆ ಎಸೆಯುತ್ತಾರೆ.

ಚಂದ್ರ ಸೂರ್ಯನ ಹೆಂಡತಿ, ನಕ್ಷತ್ರಗಳು ಅವರ ಮಕ್ಕಳು. ಸೂರ್ಯ ಹೂ ಮುಡಿದಾಗ ಸೂರ್ಯಕಾಂತಿ ಹೂವಿನಂತೆ, ಕೆಂಪಗೆ ಕಾಣುವನು. ಇದು ಅವನು ಬೆದೆಗೆ ಬಂದ ಸಂಕೇತ. ಈ ಹೂ ಮುಡಿದು ಚಂದ್ರನಲ್ಲಿಗೆ ಹೋಗುವನು ಎಂಬುದು ಸವೋರ ಜನರು ನಂಬಿಗೆ. ಆಗ ಜಗತ್ತು ಬಿಸಿಯಾಗುತ್ತದೆ. ಶಾಖದಿಂದ ಸೂರ್ಯನಲ್ಲೂ ಬೆವರು ಸುರಿಯುತ್ತದೆ. ಆಗ ಅವರು ಗಾಳಿ ಹಾಕಿಕೊಳ್ಳುತ್ತಾನೆ. ಇದೇ ನಮಗೆ ಗಾಳಿಯಾಗಿ ಬರುತ್ತದೆ. ಇದರಿಂದ ಅವನು ತಣ್ಣಗಾಗುತ್ತಾನೆ. ಜಗತ್ತು ಕೂಡ ಸೂರ್ಯ ಹಸಿದಾಗ ಶಾಖ ಬರುತ್ತದೆ. ಅವನು ತನ್ನ ಆಹಾರಕ್ಕೆ ದೂರ, ದೂರದವರೆಗೆ ದೃಷ್ಟಿ ಹರಿಸುವುದೇ ಇದಕ್ಕೆ ಕಾರಣ. ಮಧ್ಯಾನ್ಹವಾದಂತೆ ಅವನಿಗೆ ಹಸಿವು ಹೆಚ್ಚು. ಆಗ ಜಗತ್ತು ಶಾಖದಿಂದ ಬಿಸಿಯಾಗುತ್ತದೆ. ಸಂಜೆಯಾದಂತೆ ಅವನ ಹೊಟ್ಟೆ ತುಂಬುತ್ತದೆ. ಶಾಂತನಾಗುತ್ತಾನೆ. ಜಗತ್ತೂ ತಣ್ಣಗಾಗುತ್ತದೆ.

ಚಂದ್ರ-ಸೂರ್ಯರು ಗಂಡ-ಹೆಂಡತಿಯರಾದರೂ ಒಟ್ಟಿಗೆ ಇರದೆ ಇಬ್ಬರು ಆಕಾಶದಲ್ಲಿ ತಮ್ಮದೇ ಆದ ಬೇರೆ ಬೇರೆ ತಾಣಗಳಲ್ಲಿರುತ್ತಾರೆ. ಅವರು ಕೊಡುವುದು ಅಪರೂಪ. ಕೆಲವೊಮ್ಮೆ ಕೂಡಿದಾಗ ಚಂದ್ರ ಮೇಲಿದ್ದರೆ ಸೂರ್ಯಗ್ರಹಣ, ಕೆಳಗಿದ್ದರೆ ಚಂದ್ರ ಗ್ರಹಣವಾಗುತ್ತದೆ. ನಕ್ಷತ್ರಗಳೇ ಇವರ ಮಕ್ಕಳು. ಈ ನಕ್ಷತ್ರ ಮಕ್ಕಳ ಸಂಖ್ಯೆ ವರ್ಷ ವರ್ಷಕ್ಕೆ ಹೆಚ್ಚುತ್ತದೆ ಎಂದು ಸವೋರಾ ನಂಬಿಕೆ. ಚಂದ್ರ ಗ್ರಹಣಕ್ಕೆ ಸಂಬಂದಪಟ್ಟ ಸವೋರಾ ನಂಬಿಗೆ ಹೀಗಿದೆ. ಒಮ್ಮೆ ಸೂರ್ಯನ ಶಾಖ ಜಗತ್ತನ್ನು ಸುಡುತ್ತಾ ಬಂದು ನಕ್ಷತ್ರಗಳನ್ನು ನುಂಗಿ ಹೀಗಿದೆ. ಒಮ್ಮೆ ಸೂರ್ಯನ ಶಾಖ ಜಗತ್ತನ್ನು ಸುಡುತ್ತಾ ಬಂದು  ನಕ್ಷತ್ರಗಳನ್ನು ನುಂಗಿ ಹಾಕಿತು. ತನ್ನ ಮಕ್ಕಳನ್ನು ರಕ್ಷಿಸಲು ಚಂದ್ರ ಅವರನ್ನು ಪೆಟ್ಟಿಗೆಯೊಂದರಲ್ಲಿಟ್ಟು, ತಾನು ಅವರನ್ನು ಪೆಟ್ಟಿಗೆಯೊಂದರಲ್ಲಿಟ್ಟು, ತಾನು ಅವರನ್ನು ತಿಂದುದಾಗಿಯೂ, ಅವರು ರುಚಿಯಾಇಗದ್ದುದೆಂದೂ ಸುಳ್ಳು ಹೇಳಿದಳು. ಆಗ ಸೂರ್ಯ ತಾನೂ ಒಂದು ತಿಂದ. ತದನಂತರ ಸತ್ಯ ತಿಳಿದು ಈ ತಾನು ತಿಂದ ಮಗನ ಪ್ರೇತ ನಿನ್ನನ್ನು ಸದಾ ಕಾಡಲಿ ಎಂದು ಶಾಪಕೊಟ್ಟ. ಇದರಿಂದ ಚಂದ್ರ ಗ್ರಹಣವಾಗುತ್ತದೆ ಎಂದು ನಂಬುತ್ತಾರೆ. ಗ್ರಹಣಕ್ಕೆ ಸಂಬಂದಪಟ್ಟ ಇನ್ನೊಂದು ನಂಬಿಕೆ ಇದೆ. ಒಂದು ಬಹು ದೊಡ್ಡ ಮುದಿ ಹಾವು ಮತ್ತು ದೇವನೊಬ್ಬರಲ್ಲಿ ಯಾರು ದೊಡ್ಡವರೆಂದು ವಾದಪ್ರಾರಂಭವಾಗಿ, ತನ್ನ ಹಿರಿಮೆಯನ್ನು ತೋರಿಸಲು ಹಾವು ಜಗತ್ತಿನಲ್ಲಿನ ಸಕಲ ವಸ್ತುಗಳನ್ನು ನುಂಗುತ್ತ ಬಂದು ಕೊನೆಗೆ ಸೂರ್ಯ-ಚಂದ್ರರತ್ತ ಸಾಗಿದಾಗ, ಈ ದೇವರು ಒಂದು ಕಾದ ಕಬ್ಬಿಣದ ಸಲಾಕೆಯಿಂದ ಅದರ ಹೆಡೆಗೆ ಹೊಡೆದನು. ಈ ಕಾದ ಸಲಾಕೆಯ ಚಲನೆಯಿಂದಾದ ಬೆಳಕೇ ಮಿಮಚು. ಸಾಯುವ ಮುನ್ನ ಈ ಸರ್ಪ ತನ್ನ ಪ್ರೇತ ಸೂರ್ಯ ಚಂದ್ರರನ್ನು ಕಾಡಲಿ ಎಂದು ಶಾಪ ಕೊಟ್ಟಿದ್ದರಿಂದ ಅದು ಆಗಾಗ ಸೂರ್ಯಚಂದ್ರರನ್ನು ಬೆನ್ನಟ್ಟಿನುಂಗಲು ಪ್ರಯತ್ನಿಸುವುದು. ಇದರಿಂದ ಭಯಗ್ರಸ್ತರಾದ ಜನರು ಗದ್ದಲ ಮಾಡಿ ಹಾವನ್ನು ಹೆದರಿಸುವರು. ಇದರಿಂದ ಗ್ರಹಣ ಮುಕ್ತವಾಗುವುದೆಂಬ ನಂಬಿಕೆ ಇದೆ.

ಸವೋರ ಕಲ್ಪನೆಯಂತೆ ಭೂಮಿಯ ಹುಡುಗಿಯೊಬ್ಬಳು ಒಲ್ಲದ ಮನಸ್ಸಿನಿಂದ ಆಕಾಶ ದೇವನೊಬ್ಬನನ್ನು ಮದುವೆಯಾಗಿ ಅವನೊಡನೆ ಬಾಳುವಾಗಿನ ದುಃಖದಿಂದ ಆಕೆ ಅತ್ತಾಗ ಉದುರುವ ಕಣ್ಣೀರೇ ಮಳೆ. ಈ ಮಳೆ ದೇವತೆಯನ್ನು ಆರಾಧಿಸಿ, ಆಹುತಿ ನೀಡಿ ಮಳೆಯನ್ನು ಹೆಚ್ಚು ಕಡಿಮೆ ಮಾಡಲು ಬರುತ್ತದೆ ಎಂದು ಸವೋರಾ ಜನರು ನಂಬುತ್ತಾರೆ. ಬರಗಾಲ ಬಂದಾಗ ಮಳೆಯನ್ನು ಬೇಡಿ ಈ ಆಕಾಶವಾಣಿ ಮಳೆ ದೇವತೆಗೆ ಕೋಣ ಒಂದನ್ನು ಬಲಿ ಕೊಡುವುದೂ ವಾಡಿಕೆ.

ಗುಡುಗು ಕೂಡ ಆಕಾಶದಿಂದ ಬಂದದ್ದು. ಆಕಾಶವೆಂಬ ತಾಳೆಮರದ ಕೊಡೆ ಅಲುಗಾಡಿದಾಗ, ಕೂಗಿದಾಗ ಆಗುವ ಗದ್ದಲವೇ ಗುಡುಗು. ಇದು ಆಶುಭದ ಸಂಕೇತ. ಆದಕಾರಣ ಗುಡುಗು ಹೆಚ್ಚಾದರೆ ಸವೋರಾ ಜನರು ಆಹುತಿ ನೀಡುತ್ತಾರೆ.

ಇದೇ ರೀತಿ ಸವೋರಾ ಜನರಲ್ಲಿ ಹಗಲು ರಾತ್ರಿಗಳ ಕಲ್ಪನೆಯೂ ಇದೆ. “ಕಿಟ್ಟನ್” ಎನ್ನುವ ದೇವರು ಆಕಾಶದಲ್ಲಿ ದೈವಗಳಿಗಾಗಿ ಒಲೆ ಕೆಚ್ಚು ಅಡಿಗೆ ಮಾಡುತ್ತಿರುತ್ತದೆ. ಅದರ ಬೆಂಕಿಯಿಂದ ಬರುವ ಬೆಳಕೇ ಸೂರ್ಯನ ಬೆಳಕು. ಇದರಿಂದ ಹಗಲಾಗುತ್ತದೆ. ಈ ದೈವ ನಿದ್ರೆ ಹೋದಂತೆ ಒಲೆ ಕೆಚ್ಚು ಬೆಂಕಿ ನಂದುತ್ತದೆ. ಆಗ ರಾತ್ರಿಯಾಗುತ್ತದೆ. ಮರುದಿನ ಅದು ಮತ್ತೆ ಒಲೆ ಹಚ್ಚಿದಾಗ ಹಗಲಾಗುತ್ತದೆ. ಇದೇ ರಾತ್ರಿ ಸೂರ್ಯ ಚಂದ್ರರು ಒಂದು ಪಥದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಆಕಾಶದಲ್ಲಿ ಚಲಿಸುತ್ತಾರೆಂದು ನಂಬುತ್ತಾರೆ. ಈ ದಾರಿಯಲ್ಲಿ ಯಾರೂ ಬರಬಾರದು. ಅವರ ನಂಬಿಕೆಯಂತೆ ಮಳೆ ಸದಾ ಉತ್ತರದಿಂದ ದಕ್ಷಿಣಕ್ಕೆ ಬರುತ್ತದೆ. ಇದು ಮುಂಗಾರು ಮಳಗೆ ಸವೋರಾ ನೀಡುವ ಕಲ್ಪನೆ.

ಸವೋರಾ ಜನರ ನಂಬಿಕೆಯಂತೆ “ಇಲಿಂಗ್‌ಬೊಂಗ್” ಎಂಬುದು ಕಾಮನ ಬಿಲ್ಲಿನ ದೇವತೆ. ಈಕೆ ಕೂಡ ಗಾಳಿ, ಮಳೆಗಳ ದೇವತೆಗಳಂತೆ ಆಕಾಶವಾಸಿ. ಕಾಮನಬಿಲ್ಲು ಮೂಡುವುದು ಸಂತಸತರುವ ಸಂಕೇತವೆಂದು ನಂಬುತ್ತಾರೆ. ಅದರಲ್ಲೂ ಯಾವುದಾದರೂ ಸಾಂಕ್ರಾಮಿಕ ರೋಗ ಬಂದಾಗ ಕಾಮನ ಬಿಲ್ಲು ಮೂಡಿದರೆ ಇದು ಈ ರೋಗ ಮುಗಿದುದರ ಸಂಕೇತವೆಂದು ನಂಬುತ್ತಾರೆ.

ಸವೋರಾ ಜಗತ್ತಿನಲ್ಲಾಗುವ ಎಲ್ಲಾ ಕಾರ್ಯಗಳ ಹಿಂದೆ ಸೂರ್ಯದೇವನ ಪ್ರೇರೇಪನೆ ಇದೆ ಎಂದು ನಂಬುವ ಈ ಜನರಲ್ಲಿ ಅಪಘಾತ, ಕೊಲೆ, ಆತ್ಮಹತ್ಯೆಗಳೂ ಸೂರ್ಯನಿಂದ ಆಗುತ್ತವೆ. ಸೂರ್ಯ ಹಸಿದಾಗ, ಕೋಪಗೊಂಡಾಗ ತನ್ನ ಕಿಂಕರರಲ್ಲಿ ಒಬ್ಬನನ್ನು ಕರೆದು, ಭೂಮಿಗೆ ಹೋಗಿ ಅಲ್ಲಿ ಇಂತವರಿಗೆ ಇಂತಿಂತಃ ತೊಂದರೆ ಕೊಟ್ಟು ಎಚ್ಚರಿಸು ಎಂದು ಹೇಳುತ್ತಾನೆ. ಈ ಕಿಂಕರರು ಕೆಲವರನ್ನು ಅಪಘಾತಕ್ಕೆ ಸಿಲುಕಿಸಲು ಮರದಿಂದ ಬೀಳುವಂತೆ ಮಾಡುತ್ತಾರೆ. ಜನರನ್ನು ಪ್ರೇರೇಪಿಸಿ ಕೊಲೆ ಮಾಡಲು ಹಚ್ಚುತ್ತವೆ. ಕೆಲವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತವೆ. ಹೀಗೆ ಸತ್ತ ಜನರ ಆತ್ಮವನ್ನು ಸೂರ್ಯದೇವ ಒಯ್ದು ತನ್ನಲ್ಲಿ ಕಂಬಕ್ಕೆ ಕಟ್ಟಿಹಾಕಿ ಅವಕ್ಕೆ ಅನ್ನ, ನೀರು ನೀಡದೆ ತೊಂದರೆ ಕೊಡುತ್ತಾನೆ. ಆಗ ಮೃತನ ಸಂಬಂದಿಕರು, ಪೂಜಾರಿಗಳ ಸಹಾಯದಿಂದ ಈ ಆತ್ಮವನ್ನು ಹುಡುಕಿ, ಅದಕ್ಕೆ ಸೂಕ್ತ ವಿಧಿಕ್ರಿಯೆ ಮಾಡಿ, ಸೀರ್ಯನಿಗೆ ಆಹುತಿ ನೀಡಿ, ಅದನ್ನೇ ಕೆಳ ಜಗತ್ತಿಗೆ ತಂದು, ಪಿತೃಗಳ ನಡುವೆ ಬಿಡಬೇಕಾಗುತ್ತದೆ. ಇದೇ ರೀತಿಯಲ್ಲಿ ಬೀಳುವ ನಕ್ಷತ್ರ ಮತ್ತು ಅದರ ಬಾಲ ಮನುಷ್ಯರಲ್ಲಿ ನೇಣು ಹಾಕಿ ಕೊಂಡು ಸಾಯಲು ಪ್ರೇರೇಪಿಸುತ್ತವೆ ಎಂದು ನಂಬುತ್ತಾರೆ.

“ಮಡಿಯಸುಂ” ಎಂಬ ದುಷ್ಟಶಕ್ತಿ, ಮಳೆಬರದಂತೆ ಮಾಡಿ, ಭೂಮಿಯ ಮೇಲೆ ದುರ್ಭಿಕ್ಷೆ ಮಾಡುವಂತೆ ಮಾಡುತ್ತದೆ. ಇದು ಮೂಲತಃ ಕುಷ್ಟ ರೋಗ ತರುವ ದೇವರು. ಇದು ಭೂಮಿಯ ಮೇಲೆ ಇರುವಷ್ಟು ಕಾಲ ಮಳೆಬಾರದು. ಮಳೆ ಬೇಕೆಂದರೆ, ಮಾನವರು ಅದಕ್ಕೆ ಪೂಜೆ, ಆಹುತಿ ನೀಡಬೇಕು. ಈ ದೇವರು ಮಳೆಯನ್ನು ಹೆಚ್ಚು ಹಾಗೂ ಕಡಿಮೆ ಮಾಡುವ ಶಕ್ತಿ ಕೂಡಾ ಸೂರ್ಯನೆಂದು ನಂಬುತ್ತಾರೆ.

“ರಿಂಗೇ ಸುಂ” ಅಥವಾ “ರಿಂಗಬಿ” ಗಾಳಿಯ ದೇವರು ಈ ಗಾಳಿದೇವ ಅನೇಕ ರೂಪತಾಳಬಲ್ಲನು-ಬಿರುಗಾಳಿ, ಸುಂಟರಗಾಳಿ, ಸುಳಿಗಾಳಿ, ಹೀಗೆ ಬಿರುಗಾಳಿ ಮನೆ, ಪೈರು, ಬಣವೆಗಳನ್ನು ಕೆಡಿಸಬಲ್ಲದು. ಹೀಗೆ ಗಾಳಿ ಎದ್ದಾಗ ಅಪಾಯದಿಂದ ಪಾರಾಗಲು ಸವೋರಾ ಜನರು ಆಹುತಿನೀಡಿ ಅದನ್ನೇ ಶಾಂತಮಾಡುತ್ತಾರೆ. ಇದೇ ರೀತಿ ಆತ ಬಿಸಿಗಾಳಿಯಾಗಿ ಬೀಸಿದಾಗ ಕಾಲರಾ ಮುಂತಾದ ರೋಗಗಳನ್ನು ತರುತ್ತಾನೆ. ಇಂತಃ ಕೆಟ್ಟಗಾಳಿಗಳು ಮಕ್ಕಳಿಗೆ ಧನಕರುಗಳಲ್ಲಿ ರೋಗತರಬಲ್ಲವು. ಆಗ ಜನರು ಪೂಜೆ, ಆಹುತಿ ನೀಡಬೇಕಾಗುತ್ತದೆ. “ರುಗಬೊಯಾ” ಸೂರ್ಯನ ಅಕ್ಕ. ಆಕೆ ಮೈಲಿ ಬೇನೆಯ ಅಧಿದೇವತೆ. ಮೈಲಿ ಬೇನೆ ಬಂದಾಗ ಜನರು ಸೂರ್ಯನಿಗೆ ಪೂಜೆ, ಆಹುತಿ ನೀಡಿ ಈ ತೊಂದರೆಯಿಂದ ದೂರವಾಗುತ್ತಾರೆ. ಈಕೆ ಮತ್ತೆ ಬಿಸಿಗಾಳಿ ಸೇರಿದರೆ ಕೆಡುಕು ಬರುತ್ತದೆ ಎಂದು ಸವೋರಾ ಜನರ ನಂಬಿಕೆ.

ಹೀಗೆ ಸವೋರಾ ಜನರಲ್ಲಿ ಆಕಾಶಕ್ಕೆ ಸಂಬಂದಪಟ್ಟ ನಂಬಿಕೆಗಳಿವೆ. ಈ ನಂಬಿಕೆಗಳನ್ನು ವಿಶಾಲ ನಂಬಿಕೆಗೆ ಹೋಲಿಸಿದಾಗ ಈ ಜನರು ಇತರೆ ಸಂಸ್ಕೃತಿಗಳೊಂದಿಗೆ. ಜನರೊಂದಿಗೆ ಹೊಂದಿರಬಹುದಾದ ಸಂಬಂಧಗಳು ತಿಳಿಯುತ್ತವೆ. ಈ ಸಂಬಂಧಗಳೆ ರಕ್ತ ಅಥವಾ ಜನಾಂಗೀಯ ಸಂಬಂಧಗಳಾಗಿರಬಹುದು. ಭೌಗೋಳಿಕವಾಗಿರಬಹುದು. ಸಾಮಾಜಿಕ ಸಾಂಸ್ಕೃತಿಕವಾಗಿರಬಹುದು. ಉದಾಹರಣೆಗೆ ಸೂರ್ಯ ಹಿಂದೂ ಧರ್ಮದಲ್ಲಿ ಸೂರ್ಯೋಪಾಸಕರಿಗೆ ಅಧಿದೇವರು, ತದನಂತರ ಹಿಂದೂ ಧರ್ಮದ ತ್ರಿಮೂರ್ತಿಗಳ ರೂಪದಲ್ಲಿ ಅವನನ್ನು ಕಂಡುಕೊಂಡು ಅವನನ್ನು ಪೂಜಿಸಲಾಯಿತು. ಪ್ರತಿ ಬಾಹ್ಯ ಕ್ರಿಯೆಗಳಾದ ಗಾಳಿ, ಮಳೆ, ರೋಗ ಮುಂತಾದವಕ್ಕೆ ಒಂದೊಂದು ದೈವ ಹೊಂದಿರುವುದು ಹಿಂದೂ ನಂಬಿಕೆ. ಸವೋರಾ ಜನರಲ್ಲಿಯೂ ಇಂತಹ ನಂಬಿಕೆ ಇರುವುದು. ಇವರು ಹಿಂದೂ ಧರ್ಮದಿಂದ ಅನೆಕ ಮೂಲ ವಿಚಾರಗಳನ್ನು ಪಡೆದಿರುವುದು ಕಂಡು ಬರುತ್ತದೆ. ಅದೇ ರೀತಿಯಲ್ಲಿ ಅವರ ವಿಚಾರಗಳು ವಿಕೃತವಾಗಿರುವುದು ತಿಳಿಯುತ್ತದೆ. ಉದಾಹರಣೆಗೆ ಸೂರ್ಯ-ಚಂದ್ರರು ಗಂಡ -ಹೆಂಡಿರು. ನಕ್ಷತ್ರಗಳು ಅವರ ಮಕ್ಕಳು. ಗ್ರಹಣ ಕೂಡ ಸೂರ್ಯ ಚಂದ್ರರ ಸಂಬಂದದಿಂದಾಗು ಕ್ರಿಯೆ. ಮತ್ತು ಮುದಿ ಸರ್ಪವೊಂದು, ಆತ್ಮವೊಂದು ನುಂಗುವ ನಂಬಿಕೆ- ಇವೆಲ್ಲವು ಹೊರಗಿಂದ ಬಂದ ವಿವಿಧ ಮೂಲಗಳ ಸಂಬಂಧವನ್ನು ತೋರಿಸುತ್ತವೆ. ಹೀಗೆ ಯಾವುದೇ ಬುಡಕಟ್ಟಿನ ಜನರ ಆಕಾರ ಅಥವಾ ಮತ್ತಾವುದಾದರೂ ಕಲ್ಪನೆಗಳನ್ನು ಸೂಕ್ತವಾಗಿ ಅಭ್ಯಾಸ ಮಾಡಿ ಅವರು ಯಾವ ಸಂಸ್ಕೃತಿ ವಲಯಕ್ಕೆ ಸೇರಿದವರೆಂದು ತಿಳಿಯಲು ಸಹಾಯವಾಗುತ್ತದೆ.