ಸುಮಾರು ನೂರುಕೋಟಿಯಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಸಾವಿರಾರು ಭಾಷೆ ಉಪಭಾಷೆಗಳು ಬಳಕೆಯಲ್ಲಿವೆ. ಕೆಲವು ಲಿಪಿಸಹಿತ ಮತ್ತೆ ಕೆಲವು ಲಿಪಿರಹಿತವಾಗಿವೆ. ಇಷ್ಟೊಂದು ಭಾಷೆಗಳನ್ನು ಕುಟುಂಬವಾರು ವರ್ಗೀಕರಿಸಲು ಸಾಕಷ್ಟು ವಿದ್ವಾಂಸರು ಕೆಲಸ ಮಾಡಿದ್ದಾರೆ. 1886ರ ಸುಮಾರಿಗೆ ಗ್ರಿಯರ‌್ಸನ್‌ರವವರು ಭಾರತೀಯ ಭಾಷೆಗಳ ಸರ್ವೇಕ್ಷಣೆಯನ್ನಾರಂಭಿಸಿದರು. ಅಲ್ಲದೆ ಸುನೀತಿಕುಮಾರ ಚಟರ್ಜಿ, ಸುಕುಮಾರಸೇನ್, ತಾರಾಪುರವಾಲ, ಸಿದ್ದೇಶ್ವರ ಶರ್ಮ, ಸೀತಾರಾಮ ಚತುರ್ವೇದಿ ಮುಂತಾದವರು ಈ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದಾರೆ. ಇವರಲ್ಲದೆ ಜಗತ್ತಿನ ಬೇರೆ ಬೇರೆ ದೇಶಗಳ ವಿದ್ವಾಂಸರು ಭಾರತೀಯ ಭಾಷೆಗಳನ್ನು ಕುಟುಂಬವಾರು ವಿಂಗಡಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ.

ಇವರೆಲ್ಲರ ಪ್ರಯತ್ನದಿಂದ ಭಾರತೀಯ ಭಾಷೆಗಳನ್ನು ಈ ಕೆಳಗಿನಂತೆ ಸ್ಥೂಲವಾಗಿ ವಿವಿಧ ಕುಟುಂಬಗಳಾಗಿ ವರ್ಗೀಕರಿಸಿಕೊಳ್ಳಲಾಗಿದೆ.

1. ಇಂಡೋ ಆರ್ಯನ್ ಭಾಷಾ ಪರಿವಾರ

2. ದ್ರಾವಿಡ ಭಾಷಾ ಪರಿವಾರ

3. ಆಸ್ಟ್ರಿಕ್ ಅಥವಾ ಆಸ್ಟ್ರೊ ಏಷಿಯಾಟಿಕ್ ಪರಿವಾರ

4. ಟೆಬೆಟೋ ಬರ್ಮನ್ ಭಾಷಾ ಪರಿವಾರ

5. ಅವರ್ಗೀಕೃತ ಭಾಷಾ ಪರಿವಾರ

ಇಂಡೋ ಆರ್ಯನ್ ಭಾಷಾ ಪರಿವಾರ

ಈ ಭಾಷಾ ಪರಿವಾರಕ್ಕೆ ಸೇರಿದ ಭಾಷೆ ಉಪಭಾಷೆಗಳು ಭಾರತದಲ್ಲಿ ಅಧಿಕವಾಗಿವೆ. ಇವುಗಳನ್ನು ಪ್ರಾಚೀನ ಇಂಡೋ ಆರ್ಯನ್ ಭಾಷೆಗಳು, ಮಧ್ಯಕಾಲೀನ ಇಂಡೋ ಆರ್ಯನ್ ಭಾಷೆಗಳು, ಮತ್ತು ಆಧುನಿಕ ಇಂಡೋ ಆರ್ಯನ್ ಭಾಷೆಗಳು ಎಂದು ವರ್ಗೀಕರಿಸಿಕೊಳ್ಳಬಹುದಾಗಿದೆ.

. ಪ್ರಾಚೀನ ಇಂಡೋ ಆರ್ಯನ್ ಭಾಷೆಗಳು : ಇವುಗಳಲ್ಲಿ ವೇದಗಳ ಸಂಸ್ಕೃತ ಮತ್ತು ಲೌಕಿಕ ಸಂಸ್ಕೃತ ಪ್ರಮುಖವಾದವು. ಪ್ರಾಚೀನ ಭಾರತದ ಎಲ್ಲ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಜೀವಾಳವಾಗಿದ್ದ ವೇದಗಳ ಸಂಸ್ಕೃತ ಬಳಕೆಯಲ್ಲಿ ಉಳಿದಿಲ್ಲ. ಇದರಿಂದ ವಿಕಾಸಗೊಂಡ ಭಾಷೆ ಲೌಕಿಕ ಸಂಸ್ಕೃತ. ವೇದಗಳ ಸಂಸ್ಕೃತದಿಂದ ಲೌಕಿಕ ಸಂಸ್ಕೃತ ಬೆಳೆದು ಬಂದಿದ್ದನ್ನು ಪಾಣಿನಿಯು ವಿವರವಾಗಿ ಅಷ್ಟಾಧ್ಯಾಯಿಯಲ್ಲಿ ಚರ್ಚಿಸಿದ್ದಾನೆ. ಕ್ರಿ.ಪೂ. 5 ನೇ ಶತಮಾನದ ವೇಳೆಗೆ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿದ್ದುದಾಗಿಯೂ ತಿಳಿಸಿದ್ದಾನೆ. ಗ್ರಿಯರ‌್ಸನ್, ವೇಬರ್, ಗಾರ್ನೆಲ್ ಮುಂತಾದವರು ಸಂಸ್ಕೃತವು ಸಾಹಿತ್ಯಿಕ ಭಾಷೆಯಾಗಿ ಮಾತ್ರ ಬಳಕೆಯಲ್ಲಿದ್ದಿತು ಎಂದರೆ ಭಂಡಾರಕರ ಮುಂತಾದ ವಿದ್ವಾಂಸರು ಇದು ಜನಸಾಮಾನ್ಯರ ಭಾಷೆಯಾಗಿಯೂ ಬಳಕೆಯಲ್ಲಿತ್ತು ಎಂದು ಅಭಿಪ್ರಾಯಪಡುತ್ತಾರೆ.

. ಮಧ್ಯಕಾಲೀನ ಆರ್ಯರ ಭಾಷೆಗಳು : ಪಾಳಿ, ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳು ಮಧ್ಯಕಾಲೀನ ಆರ್ಯನ್ ಭಾಷೆಗಳು ಎನಿಸಿಕೊಂಡಿವೆ. ಇವು ವೇದ ಸಂಸ್ಕೃತ ಅಥವಾ ಲೌಕಿಕ ಸಂಸ್ಕೃತಗಳಿಂದ ಹುಟ್ಟಿ ವಿಕಾಸವಾದವು ಗಳಾಗಿವೆ. ಸಂಸ್ಕೃತದಿಂದ ಮೊದಲು ವಿಕಾಸಗೊಂಡಿದ್ದನ್ನು ಪಾಳಿ ಎಂದೂ ನಂತರ ವಿಕಾಸವಾದುದನ್ನು ಪ್ರಾಕೃತ ಎಂದೂ ನಂತರ ವಿಕಾಸಗೊಂಡುದುದನ್ನು ಅಪಭ್ರಂಶ ಭಾಷೆಗಳು ಎಂದು ಕರೆಯಲಾಯಿತು. ಸಂಸ್ಕೃತವನ್ನು ಹಿಂದೂ ಧರ್ಮದ ಪ್ರಚಾರಕ್ಕೆ ಬಳಸಿಕೊಂಡರೆ ಪಾಳಿಯನ್ನು ಬೌದ್ಧಮತ ಪ್ರಚಾರಕ್ಕೂ ಪ್ರಾಕೃತವನ್ನು ಜೈನಮತ ಪ್ರಚಾರಕ್ಕೂ ಬಳಸಿಕೊಳ್ಳಲಾಯಿತು. ಇದರಿಂದ ಇವು ಹೆಚ್ಚು ಮನ್ನಣೆ ಪಡೆದು ಸಾಹಿತ್ಯಿಕ ಗ್ರಂಥಗಳ ರಚನೆಯೂ ಸಾಧ್ಯವಾಯಿತು. ಕ್ರಿ.ಪೂ. 100 ರಿಂದ 500 ದವರೆಗಿನ ಎಲ್ಲ ಸಂಸ್ಕೃತ ರೂಪಗಳು ಪ್ರಾಕೃತಗಳು ಎಂದೂ ಅಭಿಪ್ರಾಯಪಡಲಾಗಿದೆ. ಪ್ರಾಕೃತ ರೂಪಗಳು ಸಾಮಾನ್ಯವಾಗಿ ಗ್ರಾಮ್ಯ ರೂಪವಾಗಿದ್ದು ಸಂಸ್ಕೃತಿಯಿಂದ ಬೇರೆ ಬೇರೆ ಕಾಲದಲ್ಲಿ ವಿಕಾಸಗೊಂಡಿವೆ. ಇವುಗಳಲ್ಲಿ ಯಾವುದು ಪಾಳಿ, ಎಂದು ಕರೆಯಬೇಕೆಂದು ಖಚಿತ ಅಭಿಪ್ರಾಯಗಳಿಲ್ಲ. ಮ್ಯಾಕ್ಸ್‌ಮುಲ್ಲರ್ ಪಾಳಿಯು ಪಾಟಲಿಪುತ್ರದ ವ್ಯವಹಾರಿಕ ಭಾಷೆಯಾಗಿದ್ದರಿಂದ ಇದಕ್ಕೆ ಪಾಳಿ ಎಂದು ಹೆಸರು ಬಂದಿದೆ ಎಂದು ಅಭಿಪ್ರಾಯಪಡುತ್ತಾನೆ. ಇವುಗಳಲ್ಲಿ ಪ್ರಥಮ ಪ್ರಾಕೃತ ಭಾಷೆಗಳನ್ನು ದ್ವಿತೀಯ ಪ್ರಾಕೃತ ಭಾಷೆಗಳು, ತೃತೀಯ ಪ್ರಾಕೃತ ಭಾಷೆಗಳು ಎಂದೂ ಸಹ ವರ್ಗೀಕರಿಸಿಕೊಳ್ಳಲಾಗಿದೆ.

. ಆಧುನಿಕ ಇಂಡೋ ಆರ್ಯನ್ ಭಾಷೆಗಳು : ಇಂದು ಭಾರತದ ಬಹುಭಾಗದಲ್ಲಿ ಹೆಚ್ಚು ಜನರು ಬಳಸುವ ಭಾಷೆಗಳೇ ಆಧುನಿಕ ಇಂಡೋ ಆರ್ಯನ್ ಭಾಷೆಗಳು. ಇವುಗಳನ್ನು ಪರಸ್ಪರ ಹೋಲಿಸಿದಾಗ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಮೂಲತಃ ಇವು ಪ್ರಾಕೃತ ಮತ್ತು ಅಪಭ್ರಂಶ ಪ್ರಾಕೃತ ಭಾಷೆಗಳಿಂದ ಹುಟ್ಟಿ ಬಂದವುಗಳಾಗಿವೆ. ಈ ಭಾಷೆಗಳನ್ನು ಆಧುನಿಕ ಭಾಷಾ ವಿಜ್ಞಾನಿಗಳು ವಿವಿಧ ರೀತಿಯಲ್ಲಿ ವರ್ಗೀಕರಿಸಿಕೊಂಡಿದ್ದಾರೆ.

ಹಾರ್ನೆಲ್ ಎಂಬ ವಿದ್ವಾಂಸ, ಭೌಗೋಳಿಕವಾಗಿ ವರ್ಗೀಕರಿಸಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಗೌಡಿಯನ್ ಭಾಷೆಗಳು ಎಂದು ವರ್ಗೀಕರಿಸಿ ಕೊಂಡನು. ಪೂರ್ವೀ ಹಿಂದಿ, ರಾಜಸ್ಥಾನೀ, ಗುಜರಾತಿ, ಸಿಂಧಿ, ಪಂಜಾಬಿಗಳು ಪಶ್ಚಿಮ ಗೌಡಿಯನ್‌ಗೂ ಗಢವಾಲೀ, ನೇಪಾಳೀ ಪಹಾಡಿ ಮುಂತಾದವು ಉತ್ತರ ಗೌಡಿಯನ್‌ಗೂ ಮರಾಠೀ ಮುಂತಾದುವನ್ನು ದಕ್ಷಿಣ ಗೌಡಿಯನ್ ಭಾಷಾ ವರ್ಗಕ್ಕೂ ಸೇರಿಸಿದ್ದಾನೆ. ನಂತರ ಸುನೀತಿಕುಮಾರ ಚಟರ್ಜಿಯವರು ಆಧುನಿಕ ಆರ್ಯಭಾಷೆಗಳ ಧ್ವನಿ, ಪದ, ವಾಕ್ಯ, ವ್ಯಾಕರಣಗಳನ್ನು ಗಮನಿಸಿ ವ್ಯಾಕರಣ ರೀತಿಯಾಗಿ ಉದೀಚ್ಯ, ಪ್ರತೀಚ್ಯ, ಪ್ರಾಚ್ಯ, ಮಧ್ಯದೇಶೀಯ ಮತ್ತು ದಕ್ಷಿಣಾತ್ಯ ಎಂದು ಐದು ವರ್ಗಗಳಲ್ಲಿ ವಿಂಗಡಿಸಿದರು. ಇದು ಭೌಗೋಲಿಕ ಮತ್ತು ವ್ಯಾಕರಣಿಕ ವರ್ಗೀಕರಣವಾಗಿ ಕಂಡು ಬಂದರೂ ಭಾಷೆಗಳ ರಾಚನಿಕ ಅಂಶಗಳನ್ನು ಗಮನಿಸಲಾಗಿದೆ. ಇದರಲ್ಲಿ ಸಿಂಧಿ, ಪಂಜಾಬಿ ಲಹಂದ ಉದೀಚ್ಯವರ್ಗಕ್ಕೂ ರಾಜಸ್ಥಾನಿ ಪೂರ್ವಿಹಿಂದಿ ಬಿಹಾರಿ ಮಧ್ಯದೇಶೀಯಕ್ಕೂ ಒರಿಯ, ಅಸ್ಸಾಮಿ, ಬಂಗಾಳಿ ಪ್ರಾಚ್ಯವರ್ಗಕ್ಕೂ ಮರಾಠೀ ಮುಂತಾದವನ್ನು ದಾಕ್ಷಿಣಾತ್ಯಕ್ಕೂ ಸೇರಿಸಿದ್ದಾರೆ.

ಹೀಗೆ ಇನ್ನೂ ಹಲವು ಬಗೆಯಲ್ಲಿ ಆಧುನಿಕ ಇಂಡೋ ಆರ್ಯನ್ ಭಾಷೆಗಳನ್ನು ವರ್ಗೀಕರಿಸಿಕೊಳ್ಳಲಾಗಿದೆ. ಈ ವರ್ಗೀಕರಣಗಳು ಏನೇ ಇದ್ದರೂ ಆಧುನಿಕ ಇಂಡೋ ಆರ್ಯನ್ ಭಾಷೆಗಳನ್ನು ಐತಿಹಾಸಿಕವಾಗಿ, ಭೌಗೋಳಿಕವಾಗಿ, ವಾಂಶಿಕವಾಗಿ, ರಾಚನಿಕವಾಗಿ ವರ್ಗೀಕರಿಸಬಹುದಾಗಿದೆ. ಇವು ಹುಟ್ಟಿ ಬೆಳೆದು ಬಂದು ಅವುಗಳ ಮೂಲ ಭಾಷೆಗಳನ್ನು ಆಧರಿಸಿ ಐತಿಹಾಸಿಕವಾಗಿ ಶೌರಸೇನಿ ಭಾಷಾವರ್ಗ, ಮಾಗಧೀ ಭಾಷಾ ವರ್ಗ, ಅರ್ಧ ಮಾಗಧೀ ಭಾಷಾವರ್ಗ, ಮಹಾರಾಷ್ಟ್ರೀ ಭಾಷಾವರ್ಗ, ಬ್ರಾಚಡ್ ಪೈಶಾಚೀ ಭಾಷಾವರ್ಗ ಎಂದು ವರ್ಗೀಕರಿಸಿಕೊಳ್ಳಬಹುದು.

ಆಧುನಿಕ ಇಂಡೋ ಆರ್ಯನ್ ಭಾಷೆಗಳಲ್ಲಿ ಸಿಂಧಿ, ಲಹಂದ, ಪಂಜಾಬಿ, ಗುಜರಾತಿ, ಪಶ್ಚಿಮೀ, ಹಿಂದೀ, ಪೂರ್ವೀಹಿಂದಿ, ರಾಜಸ್ಥಾನೀ, ಬಿಹಾರಿ, ಒರಿಯ, ಅಸ್ಸಾಮಿ, ಬಂಗಾಳಿ, ಮರಾಠಿ ಮುಂತಾದವು ಮುಖ್ಯವಾಗಿವೆ.

ಸಿಂಧಿ : ಭಾರತ ಮತ್ತು ಪಾಕಿಸ್ತಾನ್ ನಡುವಿನ ಸಿಂಧ್ ಪ್ರಾಂತ್ಯದಲ್ಲಿ ಬಳಕೆಯಲ್ಲಿದೆ. ಭಾರತದ ಪಂಜಾಬ್, ಜಮ್ಮು, ಕಾಶ್ಮೀರ, ದೆಹಲಿ, ಅಜ್ಮೀರ್, ಕಚ್ಛ್ ಮುಂತಾದೆಡೆ ಬಳಕೆಯಲ್ಲಿದೆ. ಇದನ್ನು ಕೆಲವರು ಬ್ರಾಚಡ್ ಅಪಭ್ರಂಶ ಇಲ್ಲವೇ ಪೈಶಾಚಿ ಪ್ರಾಕೃತದಿಂದ ಹುಟ್ಟಿದೆ ಎಂದರೆ ಕೆಲವರು ಮಾಗಧಿ ಪ್ರಾಕೃತ ಇದರ ಮೂಲವೆಂದು ಅಭಿಪ್ರಾಯಪಡುತ್ತಾರೆ.

ಇದನ್ನು ಬರೆಯಲು ಲಂಡ, ಗುರುಮುಖಿ ಅಥವಾ ಅರಬ್ಬಿ ಲಿಪಿ ಬಳಕೆಯಾಗುತ್ತದೆ. ಬಿಚೋಲಿ, ಸಿರೈಕಿ, ಲಾರಿ, ಥಿಲೇರಿ ಮುಂತಾದ ಉಪಭಾಷೆಗಳು ಇದಕ್ಕಿವೆ.

ಲಹಂದ : ಭಾರತದ ಪಶ್ಚಿಮ ಭಾಗ ಮತ್ತು ಪಾಕಿಸ್ತಾನ್‌ದಲ್ಲಿ ಬಳಕೆಯಲ್ಲಿದೆ. ಇದನ್ನು ಕೆಲವರು ಪೈಶಾಚೀ ಪ್ರಾಕೃತದಿಂದ ವಿಕಾಸ ಹೊಂದಿರುವುದೆಂದೂ ಮತ್ತೆ ಕೆಲವರು ಕೈಕ್ಯ ಅಪಭ್ರಂಶ ಅಥವಾ ಬ್ರಾಚಡ್ ಅಪಭ್ರಂಶದಿಂದ ಹುಟ್ಟಿರಬಹುದೆಂದು ಊಹಿಸುತ್ತಾರೆ. ಲಂಡ ಲಿಪಿಯನ್ನು ಬರೆಯಲು ಬಳಸಲಾಗುತ್ತದೆ. ಮುಲ್ತಾನಿ, ಪೊತ್ವಾರಿ, ಧನ್ನಿ ಮುಂತಾದ ಉಪಭಾಷೆಗಳಿವೆ.

ಪಂಜಾಬಿ : ಪಂಜಾಬ್‌ನ ಸುತ್ತಮುತ್ತ ಬಳಕೆಯಲ್ಲಿರುವ ಭಾಷೆ. ಇವು ಪೈಶಾಚಿ ಪ್ರಾಕೃತದಿಂದ ವಿಕಾಸಗೊಂಡ ರೂಪಗಳಿರಬಹುದೆಂದು ಊಹಿಸ ಲಾಗಿದೆ. ಪಂಜಾಬ್, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ, ಗುಜರಾತ್, ರಾಜಸ್ತಾನ ಮುಂತಾದ ಕಡೆಗಳಲ್ಲಿ ಈ ಭಾಷೆಗಳನ್ನಾಡುವ ಜನರಿದ್ದಾರೆ.

ಗುರುಮುಖಿ ಮತ್ತು ಲಂಡ ಲಿಪಿ ಬಳಕೆಯಿಲ್ಲಿದೆ. ಪಂಜಾಬಿಗೆ ಡೋಗ್ರಿ ಉಪಭಾಷೆ ಮುಖ್ಯವಾದುದಾಗಿದ್ದು ಇದನ್ನು ಟಾಕರಿ ಲಿಪಿಯಲ್ಲಿ ಬರೆಯುತ್ತಾರೆ.

ಪಹಾಡೀ : ಇದು ಉತ್ತರ ಭಾರತದಲ್ಲಿ ಬಳಕೆಯಲ್ಲಿದೆ. ಖಸ್ ಅಪಭ್ರಂಶ ಅಥವಾ ಶೌರಸೇನಿ ಪ್ರಾಕೃತದಿಂದ ಹುಟ್ಟಿರಬಹುದೆಂದು ಊಹಿಸುತ್ತಾರೆ. ಇದನ್ನು ಬರೆಯಲು ನಾಗರಿ ಲಿಪಿ ಬಳಸುತ್ತಾರೆ. ಇದರಿಂದ ವಿಕಾಸಗೊಂಡ ಭಾಷೆಗಳನ್ನು ಪೂರ್ವ, ಮಧ್ಯ, ಪಶ್ಚಿಮ ಪಹಾಡೀ ಎಂದು ಮೂರು ವರ್ಗಗಳಲ್ಲಿ ವಿಂಗಡಿಸಿದ್ದಾರೆ. ಪೂರ್ವಿ ಪಹಾಡಿಯಿಂದ ಗಢವಾಲೀ, ಕುಮಾಯೂನಿ ಉಪಭಾಷೆಗಳೂ, ಪಶ್ಚಿಮೀ ಪಹಾಡೀಯಿಂದ ನೇಪಾಳೀ, ಮುಂತಾದವೂ ಮಧ್ಯ ಪಹಾಡಿಯಿಂದ ಹತ್ತಕ್ಕೂ ಹೆಚ್ಚು ಉಪಭಾಷೆಗಳೂ ಹುಟ್ಟಿಕೊಂಡಿರುವುದು ಕಂಡುಬರುತ್ತದೆ. ನೇಪಾಳಿಯನ್ನರ ಕೆಲವರು ಖಸ್‌ಖುರ, ಗರ‌್ವಾಲಿ ಎಂದು ಕರೆಯುವರು. ಎಲ್ಲಾ ಪಹಾಚೀ ಮತ್ತು ಉಪಭಾಷೆಗಳಲ್ಲಿ ರಾಜಸ್ಥಾನೀ ಪ್ರಭಾವವು ಕಂಡುಬರುವುದು. ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ಕಡೆಗಳಲ್ಲಿ. ಚಂಬಾಲಿ, ಜಾನ್‌ಸಿರಿ ಸಿರಮೌರಿ ಮುಂತಾದ ಪಹಾಡಿ ಉಪಭಾಷೆಗಳು ಬಳಕೆಯಲ್ಲಿವೆ.

ಗುಜರಾತಿ : ಈ ಭಾಷೆಯನ್ನು ಗುಜರಾತ್ ರಾಜಸ್ಥಾನ ಮುಂತಾದ ಕಡೆಗಳಲ್ಲಿ ಜನರಾಡುತ್ತಾರೆ. ಶೌರಸೇನಿ ಅಪಭ್ರಂಶದ ನಾಗರೀ ಎಂಬುದರ ಪಶ್ಚಿಮದ ರೂಪದಿಂದ ವಿಕಾಸಗೊಂಡಿರಬಹುದೆಂದು ಕೆಲವರು ಊಹಿಸುತ್ತಾರೆ. ಪ್ರಾಚೀನ ನಾಗರೀ ಲಿಪಿಯಿಂದ ವಿಕಾಸಗೊಂಡ ಲಿಪಿಯೊಂದು ಬಳಕೆಯಲ್ಲಿದೆ.

ಭೀಲಿ : ಗುಜರಾತಿ ಮತ್ತು ರಾಜಸ್ಥಾನೀಗಳ ಪ್ರಭಾವವಿರುವ ಭಾಷೆ. ಇದನ್ನು ಈ ಎರಡೂ ಭಾಷೆಗಳ ಮಿಶ್ರಣವಿರಬಹುದೆಂದು ಕೆಲವರ ಅಭಿಪ್ರಾಯ. ರಾಜಸ್ಥಾನ ಮತ್ತು ಗುಜರಾತ್‌ನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಆಡುವವರಿದ್ದಾರೆ.

ಹಿಂದಿ : ಹಿಂದಿ ಭಾಷೆಯನ್ನು ಭಾರತದಲ್ಲಿ ಬಹುಸಂಖ್ಯೆ ಜನರು ಮಾತನಾಡುತ್ತಾರೆ. ಇದರಲ್ಲಿ ಪೂರ್ವೀ ಹಿಂದಿ ಮತ್ತು ಪಶ್ಚಿಮೀ ಹಿಂದಿ ಎಂಬ ಎರಡು ಬಗೆಗಳಿವೆ. ಪಶ್ಚಿಮ ಹಿಂದಿಗೆ ಶೌರಸೇನಿಯ ಅಪಭ್ರಂಶ, ಮೂಲವೆಂದೂ ಅರ್ಧಮಾಗಧಿಯ ಅಪಭ್ರಂಶದಿಂದ ಪೂರ್ವೀ ಹಿಂದಿ ಹುಟ್ಟಿರಬಹುದೆಂದು ಊಹಿಸಲಾಗುತ್ತಿದೆ. ಪೂರ್ವೀ ಹಿಂದಿಗೆ ಛತ್ತೀಸ್‌ಘಡಿ, ಬಘೇಲಿ, ಅವಧಿ ಉಪಭಾಷೆಗಳಾದರೆ ಪಶ್ಚಿಮೀ ಹಿಂದಿಗೆ ಕನೂಜಿ, ಬಾಂಗರು ಬುಂಡೇದೇಲಿ ಖಡಿಬೋಲಿ ಮುಂತಾದವು ಉಪಭಾಷೆಗಳಾಗಿವೆ. ಈ ಭಾಷೆಯನ್ನು ದೇವನಾಗರೀ ಲಿಪಿಯಲ್ಲಿ ಬರೆಯಲಾಗುತ್ತದೆ. ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾದ್ದರಿಂದ ಭಾರತದ ರಾಷ್ಟ್ರಭಾಷೆಯಾಗಿಸ ಬೇಕೆಂಬ ಪ್ರಯತ್ನಗಳಿವೆ.

ಉರ್ದು : ಈ ಭಾಷೆಯು ಶೌರಸೇನಿ ಪ್ರಾಕೃತದಿಂದ ವಿಕಾಸಗೊಂಡಿರಬಹು ದೆಂದು ಕೆಲವರು, ಹಳೆಯ ಪರ್ಷಿಯನ್ ಅದರಲ್ಲೂ ಮಧ್ಯಕಾಲೀನ ಪರ್ಷಿಯನ್ ಭಾಷೆಯಿಂದ ವಿಕಾಸಗೊಂಡಿರಬಹುದೆಂದು ಕೆಲವರು ಊಹಿಸಿದ್ದಾರೆ. ಇದು ಪಾಕಿಸ್ತಾನದ ಆಡಳಿತ ಭಾಷೆಯಾಗಿದ್ದು ಬರೆಯಲೂ ಆರಾಬಿಕ್ ಲಿಪಿಯನ್ನು ಬಳಸುತ್ತಾರೆ. ಉರ್ದು ಮತ್ತು ಖಡಿಬೋಲಿಯ ಉರ್ದು ಮಿಶ್ರಿತ ರೂಪವನ್ನೇ ಹಿಂದೂಸ್ತಾನಿ ಎನ್ನುವರು. ಇದನ್ನು ದಖ್ಖನಿ ಎಂತಲೂ ಕರೆಯುವರು.

ರಾಜಸ್ಥಾನಿ : ಶೌರಸೇನಿ ಅಥವಾ ಪ್ರಾಕೃತದಿಂದ ಅಧಿನಾಗರ ಅಪಭ್ರಂಶ ದಿಂದ ವಿಕಾಸಗೊಂಡಿರಬಹುದು ಎನ್ನುವುದು ಕೆಲವರ ಅಭಿಪ್ರಾಯ. ರಾಜಸ್ತಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಭಾಷೆ ಬಳಕೆಯಲ್ಲಿದೆ. ಮಾರವಾಡಿ, ಜಯಪುರಿ, ಮೊಲವಿ, ಮೇವಾತಿ ಮುಂತಾದ ಪ್ರಭೇದಗಳಿವೆ. ಇದನ್ನು ನಾಗರಿ ಲಿಪಿಯಲ್ಲಿ ಬರೆಯುತ್ತಾರೆ.

ಬಿಹಾರಿ : ಇದರಲ್ಲಿ ಮಘಹಿ, ಮೈಥಿಲಿ, ಭೋಜಪುರಿ ಮೂರು ಪ್ರಭೇದಗಳಿದ್ದು ಇವುಗಳ ಒಟ್ಟು ರೂಪವನ್ನೇ ಬಿಹಾರಿ ಎನ್ನುವರು. ಇವು ಬಿಹಾರದಲ್ಲಿ ಬಳಕೆಯಲ್ಲಿದ್ದು ಮಾಗಧಿ ಅಪಭ್ರಂಶದ ಪಶ್ಚಿಮೀ ರೂಪದಿಂದ ವಿಕಾಸಗೊಂಡಿರಬಹುದು ಎನ್ನಲಾಗುತ್ತಿದೆ. ಮಘಹಿ ಭೋಜಪುರಿಯನ್ನು ನಾಗರಿ ಲಿಪಿಯಲ್ಲಿಯೂ, ಮೈಥಿಲಿ ಬರೆಯಲು ಮಹಾಜನಿ ಲಿಪಿಯನ್ನು ಬಳಸುವರು.

ಬಂಗಾಳಿ : ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದ ಗಡಿಭಾಗಗಳ ಭಾಷೆ ಯಾಗಿದೆ. ಮಾಗಧೀ ಅಪಭ್ರಂಶದ ಪೂರ್ವಿ ರೂಪದಿಂದ ವಿಕಾಸ ಗೊಂಡಿರಬಹುದೆಂದು ಕೆಲವರು ಊಹಿಸಿದ್ದಾರೆ.

ಒರಿಯ : ಒರಿಸ್ಸಾದಲ್ಲಿ ಬಳಕೆಯಲ್ಲಿರುವ ಭಾಷೆ. ಮಾಗಧೀ ಅಪಭ್ರಂಶದ ಬೇರೊಂದು ರೂಪದಿಂದ ಪ್ರಭಾವಗೊಂಡಿರಬಹುದೆಂದು ಊಹೆ. ಇದರ ಮೇಲೆ ದ್ರಾವಿಡ  ಭಾಷೆಗಳ ಪ್ರಭಾವವೂ ಇದೆ. ಪ್ರಾಚೀನ ನಾಗರೀ ಲಿಪಿಯಿಂದ ವಿಕಾಸಗೊಂಡ ಬೇರೊಂದು ಲಿಪಿ ಬಳಕೆಯಲ್ಲಿದೆ.

ಅಸ್ಸಾಮೀ : ಮಾಗಧೀ ಅಪಭ್ರಂಶದ ಪೂರ್ವೋತ್ತರ ರೂಪದಿಂದ ವಿಕಾಸಗೊಂಡಿರಬಹುದೆಂದು ಕೆಲವರ ಊಹೆ. ಅಸ್ಸಾಮಿನ ಸುತ್ತಮುತ್ತ ಈ  ಭಾಷೆಯನ್ನಾಡುತ್ತಾರೆ.

ಮರಾಠೀ : ಮಹಾರಾಷ್ಟ್ರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನರಾಡುವ ಭಾಷೆಯಾಗಿದ್ದು ನಾಗರೀ ಲಿಪಿಯನ್ನೇ ಬಳಸುತ್ತಾರೆ. ಕೊಂಕಣಿ, ಕೋಳಿ, ಕುನಾಡಿ, ಕುಡಾಳಿ ಮುಂತಾದ ಉಪಭಾಷೆಗಳಿವೆ.

ಭಾರತದಾದ್ಯಂತ ಇರುವ ಆಧುನಿಕ ಇಂಡೋ ಆರ್ಯನ್ ಭಾಷೆಗಳನ್ನು ಪೂರ್ವೀ, ಪಶ್ಚಿಮೀ, ಮಧ್ಯ, ಉತ್ತರೀ, ದಕ್ಷಿಣೀ ಎಂದು ಭೌಗೋಳಿಕ ಆಧಾರದಿಂದಲೂ ವರ್ಗೀಕರಿಸಿಕೊಂಡಿದ್ದಾರೆ.

ದ್ರಾವಿಡ ಭಾಷಾ ಕುಟುಂಬ (ನೋಡಿ ಲೇಖನ 49)

ಆಸ್ಟ್ರಿಕ್ ಭಾಷಾ ಪರಿವಾರ

ಭಾರತದ ಅಸ್ಸಾಮ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸ, ಆಂಧ್ರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಈ ಪರಿವಾರಕ್ಕೆ ಸೇರಿದ ಭಾಷೆಗಳನ್ನಾಡುವ ಜನರಿದ್ದಾರೆ. ಇದನ್ನು ಕೆಲವರು ಆಸ್ಟ್ರೊ ಏಷಿಯಾಟಿಕ್ ಭಾಷಾ ಪರಿವಾರ ಎಂತಲೂ ಕರೆಯುವರು. ಭಾರತದಲ್ಲಿ ಆಸ್ಟ್ರಿಕ್ ಭಾಷಾ ವರ್ಗಕ್ಕೆ ಸೇರಿದ ಮುಂಡ, ಸಂತಾಲಿ, ಖಾಸಿ, ಹೋ, ನಿಕೋಬಾರಿ ಮುಂತಾದ ಭಾಷೆಗಳು ಮಾತ್ರ ಬಳಕೆಯಲ್ಲಿವೆ. ಈ ಭಾಷೆಗಳಲ್ಲಿ ಆಂತರಿಕ ಸಂಬಂಧಗಳನ್ನು ಆಧರಿಸಿ, ಮುಂಡಭಾಷಾವರ್ಗ, ನಿಕೋಬಾರೀ ಭಾಷಾವರ್ಗ ಹೋ ಭಾಷಾವರ್ಗ, ಖಾಸಿ ಭಾಷಾವರ್ಗ ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಿಕೊಳ್ಳಬಹುದು.

ಮುಂಡ ಭಾಷಾವರ್ಗ : ಮ್ಯಾಕ್ಸ್‌ಮುಲ್ಲರ್ 1954ರಲ್ಲಿ ಮೊದಲು ಮುಂಡಭಾಷೆಗಳು ಎಂದು ಕರೆದನು. ಗ್ರಿಯರ್ಸ್‌ನ್ ಮುಂಡಭಾಷೆಗಳನ್ನಾಡುವವ ರನ್ನು ಮುಂಡಾರಿಗಳು ಎಂದೇ ಕರೆದನು. ಮುಂಡ, ಖರಿಯ, ಕುರ್ಕ್, ಜುಅಂಗ್, ಸವಾರ, ಗದಬ, ಕೊರವ, ಕೋತ, ಸಂತಾಲಿ ಭೂಮಿಜ್, ಖಾಸಿ, ತುರಿ, ಅಸುರೀ, ಹೋ, ಅಗರಿಯ ಭಿರ್ಜಿಯ ಮುಂತಾದವನ್ನು ಮುಂಡ ಭಾಷೆಗಳು ಎಂದು ಕರೆದಿದ್ದಾನೆ.

ಮುಂಡಾರಿಗಳು ಅಥವಾ ಕೋಲರು ಯಾವಾಗ ಯಾವ ದೇಶದಿಂದ ಭಾರತಕ್ಕೆ ಬಂದರು ಎಂದು ಹೇಳುವುದು ಕಷ್ಟ. ಭಾರತದಲ್ಲಿ ಆರ್ಯರಿಗಿಂತ ಮೊದಲೇ ನೆಲೆಸಿದ್ದ ಇವರು ಆರ್ಯರ ಆಗಮನದ ನಂತರ ಚದುರಿ ಹೋದರು. ಈ ಭಾಷೆಗಳ ಪ್ರಭಾವವು ದ್ರಾವಿಡ ಭಾಷಾವರ್ಗದ ಮೇಲೂ ಇದೆ. ಕುರುಖ್, ಕೋತ, ಕೊರಗ, ಗದಬ, ಸವಾರ ಎಂಬ ಹೆಸರಿನ  ಭಾಷೆಗಳು ಮುಂಡಭಾಷಾ ವರ್ಗದಲ್ಲೂ ದ್ರಾವಿಡ ಭಾಷಾವರ್ಗದಲ್ಲೂ ಇದ್ದರೂ ಅವು ಬೇರೆ ಬೇರೆಯಾಗಿವೆ.

ಮುಂಡ ಭಾಷೆಗಳನ್ನು ಬೇರೆ ಬೇರೆ ಉಪವರ್ಗಗಳಲ್ಲಿ ಹೀಗೆ ವಿಂಗಡಿಸಬಹುದು.

ಪಶ್ಚಿಮ ಮುಂಡ ವರ್ಗ : ಭಿರ್ಜಿಯ, ಭೂಮಿಜ್, ಜುಅಂಗ್, ಕಿಸಾನ್‌ಭೂಮಿಕ್, ಕೊರಬು, ಮುಂಡಾರಿ, ಸಂತಾಲಿ ತುರಿ ಮುಂತಾದವು ಈ ಭಾಷಾವರ್ಗದ ಮುಖ್ಯಭಾಷೆಗಳಾಗಿದ್ದು ಬಿಹಾರ, ಒರಿಸ್ಸಾ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಅಸ್ಸಾಮ್‌ಗಳಲ್ಲಿ ಈ ಭಾಷೆಗಳನ್ನಾಡುತ್ತಾರೆ.

ಪೂರ್ವ ಮುಂಡ ವರ್ಗ : ಕರ್ಮಲಿ ಮಹಿಲಿ, ಮಂಜಿಲಿ ಮುಂತಾದವು ಮುಖ್ಯ ಭಾಷೆಗಳು. ಬಿಹಾರ, ಒರಿಸ್ಸ, ಪಶ್ಚಿಮ ಬಂಗಾಳ, ಅಸ್ಸಾಮ್ ಮುಂತಾದ ಕಡೆಗಳಲ್ಲಿ ಈ ಭಾಷೆಯನ್ನಾಡುವ ಜನರಿದ್ದಾರೆ.

ಉತ್ತರ ಮುಂಡ ವರ್ಗ : ಅಸುರಿ, ಕೊರ್ವ, ಖೆರ‌್ವಾರಿ, ಮಂಕರಿ, ಮುಖ್ಯ ಭಾಷೆಗಳಾಗಿದ್ದು, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ ಗಳಲ್ಲಿ ಈ ಭಾಷೆಯನ್ನಾಡುವ ಜನರಿದ್ದಾರೆ.

ದಕ್ಷಿಣ ಮುಂಡ ವರ್ಗ : ಗರಬ, ಸವಾರ, ವಾಖಡಿಯಾ ಭಾಷೆಗಳು ಮುಖ್ಯವಾಗಿದ್ದು ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶಗಳಲ್ಲಿ ಈ ಭಾಷೆಯನ್ನಾಡುವವರಿದ್ದಾರೆ.

ಮಧ್ಯಮುಂಡ ವರ್ಗ : ಬಿರ್‌ಹೋರ್, ಮಿರ್ಧಾ ಭಾಷೆಗಳು ಮುಖ್ಯ ವಾಗಿದ್ದು ಆಂಧ್ರಪ್ರದೇಶ, ಒರಿಸ್ಸಾ, ಬಿಹಾರ, ಮಧ್ಯಪ್ರದೇಶಗಳಲ್ಲಿ ಈ ಭಾಷೆಯನ್ನಾಡುವವರಿದ್ದಾರೆ.

ಖಾಸೀ ಭಾಷಾವರ್ಗ : ನನ್‌ತೆಂಗ್, ಸೆಯ್‌ತೆಂಗ್, ಜಯಂತಿಯ ಖಾಸಿ ಈ ಭಾಷೆಗಳು ಮುಖ್ಯವಾದವುಗಳು. ತ್ರಿಪುರ ನಾಗಾಲ್ಯಾಂಡ್ ಮತ್ತು ಅಸ್ಸಾಮ್‌ಗಳಲ್ಲಿ ಹೆಚ್ಚಾಗಿಯೂ, ಅಸ್ಸಾಮ್, ಪಶ್ಚಿಮ ಬಂಗಾಳ, ಬಿಹಾರಗಳಲ್ಲಿ ಕಡಿಮೆ ಸಂಖ್ಯೆಯಲ್ಲೂ ಈ ಭಾಷೆಯನ್ನಾಡುವವರಿದ್ದಾರೆ. ಸಿ.ಡಬ್ಲ್ಯು. ಸ್ಕಿಮಿಡ್ತ್ ಎಂಬ ವಿದ್ವಾಂಸ ಈ ಭಾಷಾವರ್ಗವನ್ನು ಬೆಳಕಿಗೆ ತಂದನು.

ಹೋ ಭಾಷಾವರ್ಗ : ಹೋ, ಕೊಡ, ಥಾರ್ ಭಾಷೆಗಳು ಮುಖ್ಯ ವಾದವುಗಳು. ಖೇರ‌್ವಾರಿ ಭಾಷಾವರ್ಗ ಎಂತಲೂ ಕರೆಯಲ್ಪಡುವ ಈ ಭಾಷೆಗಳನ್ನು ಬಿಹಾರ, ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಮ್ ಮುಂತಾದ ಕಡೆಗಳಲ್ಲಿ ಬಹಳಷ್ಟು ಜನರು ಮಾತನಾಡುತ್ತಾರೆ.

ನಿಕೋಬಾರಿ ಭಾಷಾವರ್ಗ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾತನಾಡುವ ಈ ವರ್ಗದ ಮುಖ್ಯ ಭಾಷೆ ನಿಕೋಬಾರಿಯಾಗಿದೆ.

ಟಿಬೆಟೋ ಬರ್ಮನ್ ಭಾಷಾ ಪರಿವಾರ

ಸಿನೊಟಿಬೆಟೊನ್ ಭಾಷಾ ವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಟಿಬೆಟೋ ಬರ್ಮನ್ ಮತ್ತು ಟಿಬೆಟೋ ಚೈನೀಸ್ ಭಾಷೆಗಳೆಂದು ಎರಡು ವರ್ಗಗಳಿವೆ. ಆದರೆ ಟಿಬೆಟೋ ಚೈನೀಸ್ ಭಾಷೆಗಳು ಭಾರತದಲ್ಲಿ ಹೆಚ್ಚು ಬಳಕೆಯಲ್ಲಿಲ್ಲ.

ಟಿಬೆಟೋ ಬರ್ಮನ್ ಭಾಷೆಗಳು ಟಿಬೆಟ್, ಬರ್ಮಾ, ಥಾಯ್, ಲಾವೋಸಿ ಚೀನಾದ ಕೆಲವು ಭಾಗಗಳಲ್ಲಿ ಬಳಕೆಯಲ್ಲಿದ್ದರೂ ಭಾರತದ ಉತ್ತರ ಭಾಗದಲ್ಲಿ ಅಸ್ಸಾಮ್, ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಸಿಕ್ಕಿಂ ಮುಂತಾದ ಕಡೆಗಳ ಬೆಟ್ಟಗುಡ್ಡಗಳಲ್ಲಿ ಕಂಡು ಬರುವ ಗಾರೋ, ಬೋಡೋ, ನಾಗಾ, ಕುಕಿಚಿನ್ ಭಾಷೆಗಳು ಮುಖ್ಯವಾದುದಾಗಿವೆ. ಈ ಭಾಷೆಗಳ ಲಿಪಿಗಳು ಬ್ರಾಹ್ಮಿ ಲಿಪಿ ಮತ್ತು ಖರೋಷ್ಠಿ ಲಿಪಿಗಳಿಂದ ವಿಕಾಸಗೊಂಡಂತೆ ಗೋಚರಿಸುತ್ತದೆ. ಭಾರತದಲಿರುವ ಈ ಭಾಷಾ ವರ್ಗಕ್ಕೆ ಸೇರಿದ ಭಾಷೆಗಳನ್ನು ಈ ಕೆಳಕಂಡಂತೆ ಉಪವರ್ಗಗಳಲ್ಲಿ ವಿಂಗಡಿಸಬಹುದು.

. ಹಿಮಾಲಯನ್ ಭಾಷಾವರ್ಗ : ಹಿಮಾಚಲ  ಪ್ರದೇಶ, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ ಮುಂತಾದ ಕಡೆಗಳ ಬಳಕೆಯಲ್ಲಿರುವ ಕಸೌರಿ, ಲಹುಲಿ, ಲಿಂಬು, ಲೆಪ್ಚ, ರಾಜ್, ಮಂಗರಿ, ಸುನ್ವರ್, ಮೋಫ್, ಕಿರಂತಿ, ಧೀಮಲ್ ಎಂಬ ಹೆಸರಿನ ಭಾಷೆಗಳು ಈ ವರ್ಗದಲ್ಲಿ ಮುಖ್ಯವಾದ ಭಾಷೆಗಳಾಗಿವೆ ಎನ್ನಬಹುದು.

. ಅಸ್ಸಾಮಿ ಬರ್ಮಿ ಭಾಷಾವರ್ಗ : ಬರ್ಮಿ ಮತ್ತು ಥಾಯ್ ಭಾಷೆಗಳನ್ನು ಹೆಚ್ಚು ಹೋಲುವ ಈ ಭಾಷೆಗಳು ಹೆಚ್ಚಾಗಿ ಅಸ್ಸಾಮ್‌ನಲ್ಲಿಯೆ ಕಂಡುಬರುತ್ತವೆ. ಅಸ್ಸಾಮ್‌ನ ಉತ್ತರಭಾಗದಲ್ಲಿ ಅಕ, ದಫ್ಲ, ಅಬೋರ್ ಮಿರಿ ಭಾಷೆಗಳನ್ನು, ಅಸ್ಸಾಮ್‌ನ ದಕ್ಷಿಣ ಭಾಗದಲ್ಲಿ ಈ ವರ್ಗದ ಕುಕಿಚಿನ್ ಮುಂತಾದ ಭಾಷೆಗಳನ್ನಾಡುವ ಜನರಿದ್ದಾರೆ.

. ಕುಕಿಚಿನ್ ಭಾಷಾವರ್ಗ : ಈ ಭಾಷಾವರ್ಗಕ್ಕೆ ಸೇರಿದ ಭಾಷೆಗಳನ್ನಾಡು ವವರು ಭಾರತದಲ್ಲಿ ಕಡಿಮೆ. ಮಣಿಪುರದಲ್ಲಿ ಈ ವರ್ಗಕ್ಕೆ ಸೇರಿದ ಹಮರ್, ಅನಲ್, ನಂಗ್ತೆ ಭಾಷೆಗಳನ್ನಾಡುವವರಿದ್ದಾರೆ. ಲಖೇರ್ ಎಂಬ ಭಾಷೆಯನ್ನು ಅಸ್ಸಾಮ್, ಮಣಿಪುರ, ತ್ರಿಪುರಾಗಳಲ್ಲೂ ಮಾತನಾಡು ತ್ತಾರೆ. ಮಣಿಪುರಿ, ಲುಶಾಯಿ ಮರಸುಮ್ ಭಾಷೆಗಳೂ ಇವೆ. ಅಲ್ಲದೆ ತಂಗ್‌ಖುಲ್, ವೈಪೈ, ಪೈತೆ, ಜೋವ್ ಎಂಬ ಭಾಷೆಗಳನ್ನು ಮಣಿಪುರ ಮತ್ತು ಅಸ್ಸಾಮ್‌ನ ಬೇರೆ ಬೇರೆ ಭಾಗಗಳಲ್ಲಿ ಮಾತನಾಡುತ್ತಾರೆ. ಇವುಗಳಲ್ಲಿ ಅಸ್ಸಾಮಿ ಮತ್ತು ಬರ್ಮಿ ಭಾಷೆಗಳ ಪ್ರಭಾವ ಹೆಚ್ಚು.

. ನಾಗಾ ಭಾಷಾ ವರ್ಗ : ನಾಗಾಲ್ಯಾಂಡ್. ಅಸ್ಸಾಮ್, ಮಣಿಪುರ, ತ್ರಿಪುರ, ನೀಫಾಗಳಲ್ಲಿ ಹರಡಿರುವ ಈ ಭಾಷಾ ವರ್ಗದ ಅಂಗಾಮಿ, ಆವೊ, ಚೆಕ್ರು, ಚೆಕ್‌ಸಂಗ್ ಚೆಂಗ್‌ನಾಗಾ, ಕಬುಯಿ, ಕಚ್ಛಾನಾಗಾ, ಖೆಜ್,  ಕೊನ್ಯಕ್, ಲೆಮೈ, ಲೋಥ, ಮಾಓ, ಪೂಚರಿ, ಪೂಮ್, ರೆಂಗ್ಮ, ತಿಹಕರ್, ವಾಂಚೊ, ಜೆಲಿಂಗ್ ಭಾಷೆಗಳು ಮುಖ್ಯವಾದಂತಹವುಗಳಾಗಿವೆ.

. ಭಾಟಿಯಾ ಭಾಷಾ ವರ್ಗ : ಟಿಬೆಟೋ ಚೈನೀಸ್ ಭಾಷೆಗಳ ಪ್ರಭಾವ ಹೆಚ್ಚಾಗಿರುವ ಈ ಭಾಷಾ ವರ್ಗದಲ್ಲಿ ಭಾಟಿಯ ಭಾಷೆಯೆ ಮುಖ್ಯವಾದದ್ದು.

ಭಾಟಿಯಾ, ಬಾಲ್ತಿ, ಭೂತಾನಿ, ಬುದ್ಲಿ, ಯುಕ್ಷ, ಖಂಬು, ಲಡಾಕಿ, ಮೆಂಬ, ಮೊಂಗ್, ಶಿರ್ಷ, ಸಿಕ್ಕಿಂ, ಟಿಬೆಟ್ಟಿ ಭಾಷೆಗಳು ಮುಖ್ಯವಾದವು. ಜಮ್ಮು ಕಾಶ್ಮೀರ, ಸಿಕ್ಕಿಂ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ, ಪಂಜಾಬ್, ಹಿಮಾಚಲ ಪ್ರದೇಶದ ಇಳಿಜಾರುಗಳಲ್ಲಿ ಈ ಭಾಷೆಯನ್ನಾಡು ವವರಿದ್ದಾರೆ.

. ನೀಫಾ ಭಾಷಾವರ್ಗ : ಅಪತನಿ, ಅಕ, ಬಂಗ್ನಿ, ಬೊಕೆರ್, ಚುಲಿಕತ, ಗೆಲ್ಲೊಂಗ್, ಮಿಲುಂಗ್, ಮಿನ್ಯೊಂಗ್, ಮಿರಿ, ಮಿಶಿಂಗ್ ಭಾಷೆಗಳು ಈ ವರ್ಗದ ಮುಖ್ಯಭಾಷೆಗಳು. ಬೆಟ್ಟೆಗುಡ್ಡಗಳಲ್ಲಿ ನೀಫಾ, ನಾಗಾಲ್ಯಾಂಡ್ ಮತ್ತು ಅಸ್ಸಾಮ್‌ನ ಭಾಷೆಯನ್ನಾಡುವವರಿದ್ದಾರೆ.

. ಬೋಡೋ ಭಾಷಾವರ್ಗ : ಬೋಡೋ, ದಯೋರಿ, ದಿಮಾಸ, ಗಾರೋ, ಚುಮಲಿಯ, ಕಛಾರಿ, ಕೊಂಚ್, ಲುಲಾಂಗ್ ಮಚ್, ಮಿಕಿರ್, ನ್ಯಾಟಿಯ, ರಾಭಾ, ರೆಯಂಗ್, ತ್ರಿಪುರಿ ಮುಂತಾದವುಗಳು ಈ ವರ್ಗಕ್ಕೆ ಸೇರಿದ ಭಾಷೆಗಳು. ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಮ್‌ಗಳಲ್ಲಿ ಈ ಭಾಷೆಯನ್ನು ಮಾತನಾಡುವವರಿದ್ದಾರೆ.

ಅವರ್ಗೀಕೃತ ಭಾಷಾ ಪರಿವಾರ

ಭಾರತದ ಯಾವ ಭಾಷಾ ಪರಿವಾರಕ್ಕೂ ಸೇರದ ಯಾವ ಭಾಷೆಗಳನ್ನೂ ಹೆಚ್ಚು ಹೋಲದ ಅನೇಕ ಭಾಷೆ ಉಪಭಾಷೆಗಳು ಭಾರತದಾದ್ಯಂತ ಬಳಕೆಯಲ್ಲಿವೆ. ಗ್ರಿಯರ‌್ಸನ್ ಇವುಗಳನ್ನು ಅವರ್ಗೀಕೃತ ಭಾಷೆಗಳೆಂದು ಕರೆದುಕೊಂಡಿದ್ದಾನೆ. ಅವುಗಳಲ್ಲಿ ಕಾಶ್ಮೀರಿ, ಬುರುವಿಸ್ಕಿ, ಕರೆಣ್, ಎನ್, ಮಾನ್, ಅಂಡಮಾನಿ ಮುಂತಾದವು ಮುಖ್ಯವಾದುದಾಗಿವೆ. ಆಧುನಿಕ ಭಾಷಾ ವಿಜ್ಞಾನಿಗಳ ಪ್ರಕಾರ ಭಾರತದಾದ್ಯಂತ 600 ಕ್ಕೂ ಹೆಚ್ಚು ಭಾಷೆಗಳು ಅವರ್ಗೀಕೃತಪಟ್ಟಿಯಲ್ಲಿವೆ.

ಆದಿ, ರಹಿಯಾ ಅಹಿರಿ, ಬರ್ಗಂಡಿ, ಗುಜರಿ, ಕಲಬೋಲಿ, ಮಿಜುಯಿ, ಮುರಿಯ, ಬಕೇರ್ವಾಲಿ, ದೇಸ್‌ಬಂದಿ, ದೇಸ್ವಾಲಿ, ಖಾಸಲ್‌ಸರೋದಿ, ಬಂಗ್ರೆ ಸುಲುಂಗ್, ಬಲೇದಿ, ಚೌ, ಸಿಂಹಳಿ, ಗವಾರಿ. ಸುಮರಿಯ, ಗುರುಮುಖಿ, ಗೊರ್ಬೊಲಿ, ರಜಪುಟಾಣಿ, ಲಂಡ, ತಿರುಗಲಿ, ಲಜೋವಿ ಮಲ್ಗರಿ ಮಿರ್ಧಾ ಮುಂತಾದವುಗಳು ಮುಖ್ಯವಾಗಿವೆ. ಇವುಗಳಲ್ಲಿ ಕೆಲವು ಸ್ವತಂತ್ರ ಭಾಷೆಗಳಾಗಿ ಕಂಡುಬಂದರೆ ಕೆಲವು ಬೇರೆ ಬೇರೆ ಭಾಷೆಗಳ ಮಿಶ್ರಣವಾಗಿ ಕಂಡುಬರುತ್ತವೆ.

ಪ್ರಾಚೀನ ಭಾರತದ ಶಿಲಾಶಾಸನಗಳಲ್ಲಿ, ಸುಮೇರಿಯನ್, ಎರೂಸ್ಕನ್, ಮಿತಾನಿ ಮುಂತಾದ ಭಾಷೆಗಳ ಹೆಸರುಗಳು ದೊರೆತರೂ ಈಗ ಈ ಯಾವ ಭಾಷೆಯೂ ಬಳಕೆಯಲಿಲ್ಲ ಎಂದು ಹೇಳಬಹುದಾಗಿದೆ.