ಭಾರತಕ್ಕೆ ೧೯೪೭ ಆಗಸ್ಟ ೧೫ರಂದು ಸ್ವಾತಂತ್ರ್ಯ ಲಭಿಸಿತು. ಸುಮಾರು ಎರಡು ಶತಮಾನಗಳಷ್ಟು ಕಾಲ ನಮ್ಮನ್ನು ಆಳಿದ ಬ್ರಿಟಿಷರು ನಮ್ಮ ಪ್ರತಿಭಟನೆಗಳಿಗೆ ಮಣಿದು ನಮ್ಮ ದೇಶವನ್ನು ನಮಗೆ ಒಪ್ಪಿಸಿದರು. ಈ ಸಂತಸದಲ್ಲಿ ದೇಶವೇ ಸಂಭ್ರಮಿಸಿತು. ಆದರೆ ಈ ಸಂತೋಷವನ್ನು ಅಂಚೆಚೀಟಿಯೊಂದರ ಮೂಲಕ ಹಂಚಿಕೊಳ್ಳುವ ಭಾಗ್ಯ ನಮಗಿರಲಿಲ್ಲ. ಯಾಕೆಂದರೆ ಅಂಚೆಚೀಟಿ, ನಾಣ್ಯ-ನೋಟು ಮೊದಲಾದವುಗಳನ್ನು ಬಿಡುಗಡೆ ಮಾಡಲು ಸಂವಿಧಾನಾತ್ಮಕ ಒಪ್ಪಿಗೆಯ ಜೊತೆಗೆ ಸಂಸತ್ತಿನ ಅನುಮೋದನೆಯ ಅವಶ್ಯಕತೆಯಿದೆ. ಹೀಗಾಗಿ ದೇಶವು ಸ್ವಾತಂತ್ರ್ಯ ಪಡೆದಾಗ ಮತ್ತು ನಂತರದ ಕೆಲವು ದಿನಗಳ ಕಾಲ ನಾವು ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ಅಂಚೆಚೀಟಿಗಳನ್ನೇ ಬಳಸಬೇಕಾಯಿತು. ಆದರೆ ಸ್ವಾತಂತ್ರ್ಯ ಬಂದ ಗುರುತಿಗಾಗಿ ಪತ್ರಗಳ ಮೇಲೆ ಅಚಿಟಿಸಿದ ಅಂಚೆಚೀಟಿಗಳನ್ನು ರದ್ದುಗೊಳಿಸುವುದಕ್ಕಾಗಿ ಬಳಸುವ

[cancellation]  ಮುದ್ರೆಗಳನ್ನು ವಿಶೇಷವಾಗಿ ತಯಾರಿಸಲಾಯಿತು.

ಹಾರಾಡುತ್ತಿರುವ ತ್ರಿವರ್ಣ ಧ್ವಜ. ಸ್ವತಂತ್ರ ಭಾರತದ ಮೊದಲ ಅಂಚೆ ಚೀಟಿ

ಹಾರಾಡುತ್ತಿರುವ ತ್ರಿವರ್ಣ ಧ್ವಜ. ಸ್ವತಂತ್ರ ಭಾರತದ ಮೊದಲ ಅಂಚೆ ಚೀಟಿ

ಇಂತಹ “ವಿರೂಪಣ ಮುದ್ರೆ”ಗಳಲ್ಲಿ ಮುಖ್ಯವಾಗಿ ಎರಡು ಭಾಗಗಳಿದ್ದವು. ಮೊದಲ ಭಾಗದಲ್ಲಿ “ಜೈ ಹಿಂದ್” ಎಂಬ ಘೋಷಣೆಯು ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿತ್ತು. ಎರಡನೆಯ ಭಾಗದಲ್ಲಿ ಮುದ್ರೆಯನ್ನು ಬಳಸಿದ ಊರು ಹಾಗೂ ದಿನಾಂಕವನ್ನು ನಮೂದಿಸುವ ವ್ಯವಸ್ಥೆ ಇತ್ತು. ಇಂತಹ ವಿಶೇಷ ಮುದ್ರೆಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಬಳಸಲಾಗಿತ್ತು. ಈ ಮುದ್ರೆಗಳು ಸುಮಾರು ೫೦ರಿಂದ ೬೦ ನಗರಗಳಲ್ಲಿ ಬಳಸಲ್ಪಟ್ಟ ಬಗ್ಗೆ ದಾಖಲೆಗಳು ಸಿಗುತ್ತವೆ. ಇವುಗಳನ್ನು ಸ್ಥಳೀಯವಾಗಿಯೇ ತಯಾರಿಸಿದ ಕಾರಣಕ್ಕಾಗಿ ಇವುಗಳಲ್ಲಿ ಬಳಸಲಾದ ಅಕ್ಷರಗಳು, ವಿನ್ಯಾಸಗಳಲ್ಲಿ ಕೊಂಚ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.

ಸ್ವತಂತ್ರ ಭಾರತದ ಮೊದಲ ನಿರೂಪಣಾ ಮುದ್ರೆ. ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು, ‘ಜೈ ಹಿಂದ’ ಘೋಷಣೆಯನ್ನು ಗಮನಿಸಬಹುದು

ಸ್ವಾತಂತ್ರ್ಯಾನಂತರ ಶಾಸನಸಭೆಗಳಲ್ಲಿ ಅಂಗೀಕರಿಸಿದ ನಿರ್ಣಯಗಳ ಪ್ರಕಾರ ನಮ್ಮದೇ ಅಂಚೆಚೀಟಿಗಳನ್ನು ಮುದ್ರಿಸಲು ಅನುಮತಿ ನೀಡಲಾಯಿತು. ಈ ಪ್ರಕಾರ ಸ್ವತಂತ್ರ ಭಾರತದ ಮೊಟ್ಟಮೊದಲ ಅಂಚೆಚೀಟಿಯು ೧೯೪೭ರ ನವಂಬರ ೨೧ರಂದು ಬಿಡುಗಡೆಯಾಯಿತು. ಇದರಲ್ಲಿ ನಮ್ಮ ನೆಚ್ಚಿನ ತ್ರಿವರ್ಣ ಧ್ವಜವು ಸುಂದರವಾಗಿ ಮೂಡಿಬಂದಿದೆ. ಎಡದಿಂದ ಬಲಕ್ಕೆ ಹಾರುತ್ತಿರುವಂತೆ ಚಿತ್ರಿಸಲಾದ ಧ್ವಜದ ಮೇಲ್ಭಾಗದಲ್ಲಿ “ಜ ಹಿಂದ್” ಎಂದು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. ಧ್ವಜದ ಕೆಳಭಾಗದಲ್ಲಿ “ಅಂಚೆಹಾಸಲು” [postage]  ಎಂದು ಮುದ್ರಿತವಾಗಿದೆ. ಎಡಭಾಗದಲ್ಲಿ ಭಾರತವು ಸ್ವತಂತ್ರವಾದ ದಿನವನ್ನು ೧೫ ಆಗಸ್ಟ ೧೯೪೭ ಎಂದು ನಮೂದಿಸಲಾಗಿದೆ. ಅಂಚೆಚೀಟಿಯ ಕೆಳಭಾಗದಲ್ಲಿ ಇಂಗ್ಲೀಷಿನಲ್ಲಿ INDIA ಎಂದಿದೆ. ಈ ಅಂಚೆಚೀಟಿಯ ಮುಖಬೆಲೆಯು ಮೂರೂವರೆ ಆಣೆಯೆಂದು ಅಂಚೆಚೀಟಿಯ ಕೆಳಭಾಗದಲ್ಲಿ ನಮೂದಿಸಲಾಗಿದೆ. ಈ ಅಂಚೆಚೀಟಿಯು 13 ½ x 14 ಅಳತೆಯ ಸಾಲುರಂಧ್ರಗಳನ್ನು ಹೊಂದಿದೆ. ಈ ಅಂಚೆಚೀಟಿಯು ನಾಸಿಕದ ಭಾರತ ಪ್ರತಿಭೂತಿ ಮುದ್ರಣಾಲಯದಲ್ಲಿ [India Security Press]  ಆಫ್-ಸೆಟ್ ಲಿಥೋ ತಂತ್ರಜ್ಞಾನದಿಂದ ಮುದ್ರಿತವಾಗಿದೆ. ಈ ಅಂಚೆಚೀಟಿಗೆ ಬಳಸಿದ ಕಾಗದವು ಬಹುಸಂಖ್ಯೆಯಲ್ಲಿ ನಕ್ಷತ್ರ ಗುರುತುಗಳನ್ನು ಜಲಚಿಹ್ನೆಯಾಗಿ [watermark] ಹೊಂದಿದ್ದ ವಿಶೇಷ ಕಾಗದವಾಗಿತ್ತು. ೨೩ ಲಕ್ಷ ಅಂಚೆಚೀಟಿಗಳನ್ನು ಬಹುವರ್ಣದಲ್ಲಿ ಮುದ್ರಿಸಲಾಗಿದೆ. ಇವುಗಳ ಮುದ್ರಣ ವಿನ್ಯಾಸದ ಪ್ರಕಾರ ಒಂದು ಹಾಳೆಗೆ ೯೬ ಅಂಚೆಚೀಟಿಗಳು ಮುದ್ರಿತವಾಗಿದ್ದವು. ಈ ಅಂಚೆಚೀಟಿಗಳ ಇನ್ನೊಂದು ವಿಶೇಷತೆ ಎಂದರೆ, ಇವು ವಿದೇಶೀ ಪತ್ರವ್ಯವಹಾರಗಳಿಗೆ ಮಾತ್ರ ಸೀಮಿತವಾಗಿತ್ತು!

ಒಟ್ಟಿನಲ್ಲಿ ಸ್ವತಂತ್ರ ಭಾರತದ ಮೊದಲ ಅಂಚೆಚೀಟಿಯಾಗಿ ಬಂದ ನಮ್ಮ ತ್ರಿವರ್ಣ ಧ್ವಜ ನಮಗೆಲ್ಲರಿಗೂ ಅಚ್ಚುಮೆಚ್ಚು.

.