ಸ್ಯಾಮುಯೆಲ್ ಸ್ಟೋಕ್ಸ್ ಅಮೆರಿಕದ ಫಿಲಡೆಲ್ಫಿಯ ರಾಜ್ಯದಲ್ಲಿ ಹುಟ್ಟಿದರು. 1904ರಲ್ಲಿ ಭಾರತಕ್ಕೆ ಬಂದಾಗ ಅವರಿಗೆ 20ನೇ ವಯಸ್ಸು. ಸಿಮ್ಲಾಗುಡ್ಡಗಾಡು ಪ್ರದೇಶಗಳ ಕುಷ್ಠರೋಗಿಗಳ ಪುನರ್ವಲಸೆಗಾಗಿ ಕೆಲಸ ಮಾಡಲು ಮಿಶನರಿಯಾಗಿ ಅವರು ಬಂದಿದ್ದರು.  ಮಗನಿಗೆ ಕುಷ್ಠ ತಗಲಬಹುದೆಂದು ಹೆತ್ತವರು ಹೆದರಿದರು. ಆದರೆ ಸ್ಯಾಮುಯೆಲ್‌ರಿಗೆ ಅಂಥ ಭಯ ಇರಲಿಲ್ಲ.

ಜನಜೀವನವನ್ನು ನೋಡುತ್ತಾ, ಅಧ್ಯಯನ ಮಾಡುತ್ತಾ ಅವರು ಹೆಚ್ಚು ಹೆಚ್ಚು ಕಲಿಯತೊಡಗಿದರು. ಜನರು ರೋಗವನ್ನಷ್ಟೇ ಅಲ್ಲ, ಬಡತನವನ್ನೂ ಗೆಲ್ಲಬೇಕು ಎಂಬ ಸತ್ಯ ಅವರನ್ನು ಕಾಡತೊಡಗಿತು. ಸಾಮಾನ್ಯ ಜನರಿಗೆ ಉಣ್ಣಲು ಅನ್ನ ಇರಲಿಲ್ಲ, ಉಡಲು ಸರಿಯಾದ ಬಟ್ಟೆ ಇರಲಿಲ್ಲ. ಚಹಾಕ್ಕೆ ಹಾಕಲು ಸಕ್ಕರೆ ಕೊಳ್ಳುವ ಶಕ್ತಿ ಇರಲಿಲ್ಲ. ಆದ್ದರಿಂದ ಉಪ್ಪು ಹಾಕಿ ಕುಡಿಯುತ್ತಿದ್ದರು! ಅವರ ಬಡತನವನ್ನು ನೀಗಲು ಸ್ಯಾಮುಯೆಲ್ ಮನಸ್ಸಿನಲ್ಲಿ ಮಿಂಚಿದ್ದು ಸೇಬು ಕೃಷಿ. ಆಗ ಅಲ್ಲಿ ಬೆಳೆಯುತ್ತಿದ್ದ ಒಗರು ರುಚಿಯ ಸೇಬಿನ ಬದಲು ಸಿಹಿ ರಸ ಭರಿತವಾದ ಸೇಬು ಬೆಳೆದರೆ ಜನ ಹಣ ಗಿಟ್ಟಿಸಿ ಮರ್ಯಾದೆಯ ಜೀವನ ನಡೆಸಬಹುದು ಎಂಬ ಯೋಚನೆ ಅವರಿಗೆ ಹೇಗೆ ಬಂತೋ! ಆದರೆ ಅದು ಹಿಮಾಲಯ ಪರ್ವತ ಪ್ರದೇಶದವರ ಬದುಕಿಗೆ ವರವೇ ಆಯಿತು.

1916ರಲ್ಲಿ ಸ್ಯಾಮುಯೆಲ್ ಫಿಲಡೆಲ್ಫಿಯದಿಂದ ಸೇಬುಗಿಡಗಳನ್ನೂ ಬೀಜಗಳನ್ನೂ ತಂದರು.  ಜನರಿಗೆ ಹಂಚಿ ಹೊಸತಳಿಯ ಸೇಬುಮರಗಳನ್ನು ಬೆಳೆಸಲು ಜನರನ್ನು ಪ್ರೋ ಗಿಡ ಬೆಳೆದು ಫಲ ನೀಡಲು ಆರೇಳು ವರ್ಷ ಬೇಕು. ಆ ತನಕ ನೆಲದಲ್ಲಿ ಏನಾದರೂ ಧಾನ್ಯವನ್ನೂ ಬಿತ್ತುವಂತಿಲ್ಲವಲ್ಲ? ಜನರಿಗೆ ಬೆಳೆ ಬದಲಾವಣೆಯ ಮಹತ್ವವನ್ನು ಮನವರಿಕೆ ಮಾಡಿದ್ದೇ ಸ್ಯಾಮುಯೆಲ್ ಸಾಧನೆ. ಅದರಿಂದಲೇ ಮುಂದೆ ಅಲ್ಲಿ ಆರ್ಥಿಕ ಕ್ರಾಂತಿಯಾಯಿತು.  ‘ಹಿಮಾಲಯದ ಜಾನೀ ಸೇಬು ಬೀಜ’ಎಂದರೆ ಏನು ಗೊತ್ತೆ?ಅದು ಸ್ಯಾಮುಯೆಲ್ ಇವಾನ್ಸ್ ಸ್ಟೋಕ್ಸ್‌ರನ್ನು ಹಿಮಾಲಯ ಪರ್ವತ ಪ್ರದೇಶದ ಜನ ಪ್ರೀತಿಯಿಂದ ಕರೆಯುತ್ತಿದ್ದ ರೀತಿ!

ಏಗ್ನೆಸ್ ಎಂಬ ಭಾರತೀಯ ಹುಡುಗಿಯನ್ನು ಸ್ಯಾಮುಯೆಲ್ ಮದುವೆಯಾದರು (1912), ಕೋಟ್ಗಡ್ ಎಂಬಲ್ಲಿ ನೆಲಸಿದರು. 1919ರಲ್ಲಿ ಜಾಲಿಯನ್ ವಾಲಾಬಾಗ್‌ನಲ್ಲಿ ನಡೆದ ನರಮೇಧ ಸ್ಯಾಮುಯೆಲ್‌ರ ಮನಸ್ಸನ್ನು ತೀರ ಕಲುಕಿತು.

‘ಈ ನೆಲವನ್ನಾಳುವ ಸರಕಾರ, ಜನನಿರ್ಧಾರವನ್ನು ಪ್ರತಿನಿಧಿಸುವಂತೆ ಮಾಡಬೇಕು.  ಅಂತಿಮವಾಗಿ ಪೂರ್ಣ ಸ್ವರಾಜ್ಯವೇ ಭಾರತದ ಏಕೈಕ ಗುರಿ’ ಎಂದು ಸ್ಯಾಮುಯೆಲ್ ಘೋಷಿಸಿದರು. ಲಾಲಾ ಲಜಪತ್ ರಾಯ್ ಅವರೊಂದಿಗೆ ಸ್ಯಾಮುಯೆಲ್ ಪಂಜಾಬನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಸದಸ್ಯರಾಗಿ ಪ್ರತಿನಿಧಿಸಿದರು. ಹೀಗೆ ಸದಸ್ಯರಾದ ಒಬ್ಬನೇ ಒಬ್ಬ ಅಮೆರಿಕ ಸಂಜಾತ ಅವರು. ಭಾರತದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದ ಭಾರತೀಯನಲ್ಲದ ಒಬ್ಬ ವ್ಯಕ್ತಿ ಎಂದರೂ ಅವರೇ.

ಪ್ರೀತಿಯ ತತ್ವ ಮತ್ತು ಅದ್ವೈತ -ಎರಡೂ ಸ್ಯಾಮುಯೆಲ್ ಸ್ಟೋಕ್ಸ್ ರನ್ನು ಆಕರ್ಷಿಸಿದುವು. ಹಿಂದುವಾಗಿ ಅವರು ಸತ್ಯಾನಂದ ಸ್ಟೋಕ್ಸ್ ಎಂದು ಹೆಸರಿಟ್ಟುಕೊಂಡರು.  1946ರಲ್ಲಿ ಅವರು ತೀರಿಹೋದರು.

ಮಹಾತ್ಮ ಗಾಂಧಿ ಅವರನ್ನು ‘ಮಾರ್ಗದರ್ಶಿ, ದಾರ್ಶನಿಕ ಮತ್ತು ಮಿತ್ರ’ಎಂದು ಕರೆದಿದ್ದರು.  ಆದರೆ ಇಂದಿಗೂ ಹಿಮಾಲಯ ಪ್ರದೇಶದ ಬೆಳೆಗಾರರಿಗೆ ಅವರು ಸೇಬಿನಿಂದ ಯಶೋಗಾಥೆ ಹಾಡಿದವರು ಎನ್ನುವುದು ನಿಜ.

ಆಧಾರ : ಸ್ಯಾಮುಯೆಲ್ ಸ್ಟೋಕ್ಸ್ ರ ಮೊಮ್ಮಗಳು ಆಶಾ ಶರ್ಮಾ ಅವರ ‘ಎನ್ ಅಮೆರಿಕನ್ ಇನ್ ಗಾಂಧೀಸ್ ಇಂಡಿಯ’ ಕೃತಿಯನ್ನು ಆಧರಿಸಿದ ಫೈಜ ಎಲ್ಮಾಸ್ರಿ ಯವರ ಲೇಖನ).