ಭಾರತೀಕೃಷ್ಣತೀರ್ಥರುಅಸಾಧಾರಣ ಮೇಧಾವಿಗಳು ದ್ವಾರಕಾ ಮತ್ತು ಪುರೀ ಮಠಾಧಿಪತಿಗಳು. ಸ್ವಾತಂತ್ರ  ಹೋರಾಟಕ್ಕೆ ಪ್ರಚೋದಿಸಿದರೆಂದು ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿತ್ತು. ಜ್ಞಾನ, ಪ್ರಗತಿಶೀಲತೆ, ಕರುಣೆಗಳ ಸಂಗಮ ಇವರು.

ಭಾರತೀಕೃಷ್ಣ ತೀರ್ಥರು

ದೇಶ ಸೇವಕರಲ್ಲಿ ಮೂರು ಬಗೆಯ ಜನ ಇರುತ್ತಾರೆ. ಮೊದಲ ವರ್ಗದ ಜನ ರಾಜಕೀಯ ಸಂಘ. ಸಂಸ್ಥೆಗಳಲ್ಲಿ ಇದ್ದು ಕೆಲಸ ಮಾಡುವವರು. ಇವರು ಪದೇ ಪದೇ ಜನಗಳ ಕಣ್ಣಿಗೆ ಕಾಣುತ್ತಾ ಇರುವವರು. ಎರಡನೆಯ ವರ್ಗದ ಜನ ದೇಶದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದುಡಿಯುತ್ತಾರೆ. ಇವರೂ ಸಹ ಜನಗಳ ದೃಷ್ಟಿಗೆ ಆಗಾಗ ಗೋಚರಿಸುತ್ತ ಇರುತ್ತಾರೆ. ಮೂರನೆಯ ವರ್ಗದ ಜನ ದೇಶದ ನೈತಿಕ ಮತ್ತು ಧಾರ್ಮಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುತ್ತಾರೆ. ಇವರು ಜನರ ದೃಷ್ಟಿಗೆ ಅಷ್ಟಾಗಿ ಬೀಳುವುದಿಲ್ಲ. ಇವರು ಧರ್ಮ, ಸತ್ಯ, ಅಹಿಂಸೆ ಇವುಗಳನ್ನು ನಂಬಿ ಪಾಲಿಸುತ್ತಾರೆ. ಇತರರಿಗೆ ಉಪಕಾರ ಮಾಡುವುದು, ಜನಗಳಲ್ಲಿ ಪರಸ್ಪರ ಸ್ನೇಹವನ್ನು ಉಂಟು ಮಾಡುವುದು, ಕಷ್ಟದಲ್ಲಿರುವವರಿಗೆ ನೆರವಾಗುವುದು ಇವೇ ಇವರ ಜೀವನದ ಗುರಿ. ಎಲ್ಲ ಜನರಿಗೂ ಒಳ್ಳೆಯದಾಗಬೇಕು ಸುಖಸಂತೋಷ ದೊರಕಬೇಕು ಎಂಬುದೇ ಇವರ ಆಶಯ. ಇವರಿಗೆ ಕೀರ್ತಿಯ ಆಸೆಯಿಲ್ಲ, ಪ್ರಸಿದ್ಧಿಯ ಅಪೇಕ್ಷೆಯಿಲ್ಲ.

ಸ್ವಾಮಿ ಶ್ರೀ ಭಾರತೀಕೃಷ್ಣ ತೀರ್ಥರು ಇಂತಹ ಒಬ್ಬ ಮಹಾಪುರುಷರು.

ಬಾಲ್ಯ

ಭಾರತೀಕೃಷ್ಣ ತೀರ್ಥರು ಹುಟ್ಟಿದುದು ೧೮೮೩ರಲ್ಲಿ. ಅವರ ಜನ್ಮಸ್ಥಳ ತಮಿಳುನಾಡಿನ ತಿರುನೆಲ್ವೇಲಿ. ತಾಯಿ ತಂದೆ, ದೇವರಲ್ಲಿ, ಗುರುಗಳಲ್ಲಿ ಭಕ್ತಿಯುಳ್ಳವರು, ಮೃದು ಸ್ವಭಾವದ ಸಜ್ಜನರು, ಪರೋಪಕಾರಿಗಳು. ತಂದೆಯವರ ಹೆಸರು ಪಿ. ನರಸಿಂಹ ಶಾಸ್ತ್ರಿ. ಅವರು ತಕ್ಕಮಟ್ಟಿಗೆ ವೇದಶಾಸ್ತ್ರಗಳನ್ನು ಓದಿದ್ದವರು. ಇಂಗ್ಲಿಷ್ ವಿದ್ಯಾಭ್ಯಾಸವನ್ನು ಮಾಡಿ ಆಗಿನ ಮದರಾಸ್ ಸರ್ಕಾರದ ಸೇವೆಗೆ ಸೇರಿ ತಹಶೀಲ್ದಾರರಾಗಿದ್ದರು. ಮುಂದೆ ಡೆಪ್ಯುಟಿಕಲೆಕ್ಟರ್ ಹುದ್ದೆಯವರೆಗೆ ಏರಿದ್ದರು.

ನರಸಿಂಹಶಾಸ್ತ್ರಿಗಳು ತಿರುನೆಲ್ವೇಲಿಯಲ್ಲಿ ತಹಶೀಲ್ದಾರರಾಗಿದ್ದಾಗ ಭಾರತೀಕೃಷ್ಣ ತೀರ್ಥರು ಜನಿಸಿದುದು. ಹುಟ್ಟಿದಾಗ ಅವರಿಗೆ ಇಟ್ಟ ಹೆಸರು ವೆಂಕಟರಮಣ.

ವೆಂಕಟರಮಣನ ತಾಯಿ ಆತನು ಮಗುವಾಗಿದ್ದಾಗಲೇ ತೀರಿಕೊಂಡರು. ಚಿಕ್ಕಮ್ಮನೇ ಮಗುವನ್ನು ತಮ್ಮ ಸ್ವಂತ ಶಿಶುವಿನಂತೆ ಸಾಕಿ ಸಲಹಿದರು.

ಪ್ರತಿಭಾವಂತ ವಿದ್ಯಾರ್ಥಿ

ವೆಂಕಟರಮಣನು ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿವಂತನೆಂದು ಹೆಸರು ಪಡೆದಿದ್ದ. ಮಕ್ಕಳಿಗೆ ಮೊದಲ ಶಾಲೆಯೇ ಮನೆ. ತಾಯಿ ತಂದೆಯರೇ ಗುರುಗಳು. ವೆಂಕಟರಮಣನಿಗೆ ಮನೆಯಲ್ಲಿಯೇ ಅಕ್ಷರಾಭ್ಯಾಸ ನಡೆಯಿತು. ಸಂಸ್ಕೃತದ ಅಮರ ಕೋಶ, ಶಬ್ದಮಂಜರಿಗಳ ಪಾಠವೂ ಪ್ರಾರಂಭವಾಯಿತು. ಊರಿನ ಶಾಲೆಗೆ ಸೇರಿಸಿದರು. ಅಲ್ಲಿಯೂ ಚೂಟಿಯಾದ ಹುಡುಗ, ಜಾಣ ಎಂದು ಹೊಗಳಿಸಿಕೊಂಡಿದ್ದ. ಅವನಿಗೆ ಎಷ್ಟು ಓದಿದರೂ ತೃಪ್ತಿಯಿಲ್ಲ. ಒಳ್ಳೆಯ ಜ್ಞಾಪಕಶಕ್ತಿ, ಓದಿದ್ದೆಲ್ಲಾ ನೆನಪಿನಲ್ಲೆ ಇರುತ್ತಿತ್ತು. ಅವನು ಓದುತ್ತಿದ್ದುದು ಮಾತ್ರವಲ್ಲ. ತಾನೇ ಯೋಚನೆ ಮಾಡುತ್ತಿದ್ದ. ಅವನಿಗೆ ತುಂಬಾ ಕುತೂಹಲ. ಹೊಸ ವಿಷಯಗಳನ್ನು ತಿಳಿಯುವ ಆಸೆ. ಆದುದರಿಂದ ಮನೆಯಲ್ಲಿ ದೊಡ್ಡವರನ್ನು ಶಾಲೆಯಲ್ಲಿ ಉಪಾಧ್ಯಾಯರನ್ನು ಮತ್ತೆ ಮತ್ತೆ ಪ್ರಶ್ನೆ ಕೇಳುವನು.

ಇಂಗ್ಲಿಷ್, ಸಂಸ್ಕೃತ, ಅಂಕಗಣಿತ, ವಿಜ್ಞಾನ, ಚರಿತ್ರೆ, ಭೂಗೋಳ ಈ ಎಲ್ಲ ವಿಷಯಗಳಲ್ಲಿಯೂ ವೆಂಕಟರಮಣನಿಗೆ ಪ್ರಥಮ ಸ್ಥಾನ. ೧೮೯೯ರಲ್ಲಿ ಪ್ರಥಮ ದರ್ಜೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ.

ವೆಂಕಟರಮಣನಿಗೆ ಆ ವಯಸ್ಸಿನಲ್ಲಾಗಲೆ ಸಂಸ್ಕೃತದಲ್ಲಿ ತುಂಬಾ ಪಾಂಡಿತ್ಯವಿತ್ತು. ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಆತನು ಸಂಸ್ಕೃತದಲ್ಲಿ ಕವಿತೆಗಳನ್ನು ರಚಿಸುತ್ತಿದ್ದನು. ಆತನ ಸಂಸ್ಕೃತ ಪಾಂಡಿತ್ಯವನ್ನು ಮೆಚ್ಚಿಕೊಂಡು ಮತ್ತು ಆತನು ರಚಿಸಿದ ಪದ್ಯಗಳನ್ನು ಮೆಚ್ಚಿಕೊಂಡು ಮದರಾಸಿನ ಸಂಸ್ಕೃತ ಸಭಾದವರು ಆತನಿಗೆ ‘‘ಸರಸ್ವತೀ’’ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದ್ದರು. ಅಂದಿನಿಂದ ಆತನ ಹೆಸರು ‘ವೆಂಕಟರಮಣ ಸರಸ್ವತೀ’ ಎಂದಾಯಿತು.

ಅನಂತರ ಕಾಲೇಜು ವಿದ್ಯಾಭ್ಯಾಸ ಆರಂಭವಾಯಿತು. ತಿರುಚಿರಪಳ್ಳಿಯ ನ್ಯಾಷನಲ್ ಕಾಲೇಜು, ತಿರುನೇಲ್ವೆಲಿಯ ಚರ್ಚ್ ಮಿಷನರಿ ಸೊಸೈಟಿ ಕಾಲೇಜು ಮತ್ತು ಹಿಂದೂ ಕಾಲೇಜುಗಳಲ್ಲಿ ವೆಂಕಟರಮಣನ ವಿದ್ಯಾಭ್ಯಾಸ ಮುಂದುವರೆಯಿತು. ಎಲ್ಲ ವಿಷಯಗಳಲ್ಲಿಯೂ ಆತನದು ಮೊದಲನೆಯ ಸ್ಥಾನವೇ. ಬಿ.ಎ. ಪರೀಕ್ಷೆಯಲ್ಲಿಯೂ ಮೊದಲ ದರ್ಜೆಯಲ್ಲಿ ಪಾಸಾದ.

ಏಳು ವಿಷಯಗಳಲ್ಲಿ ಫಸ್ಟ್ ಕ್ಲಾಸ್

ಬಿ.ಎ. ಪರೀಕ್ಷೆಯಾದ ನಂತರ ವೆಂಕಟರಮಣನ್ ಎಂ.ಎ. ಪರೀಕ್ಷೆಯಲ್ಲಿ ಉತ್ತಮದರ್ಜೆಯಲ್ಲಿ ತೇರ್ಗಡೆ ಹೊಂದಿದರು.

ಅನಂತರ ೧೯೦೪ರಲ್ಲಿ ವೆಂಕಟರಮಣನ್ ಏಳು ಹೊಸ ವಿಷಯಗಳನ್ನು (ಸಂಸ್ಕೃತ, ತತ್ವಜ್ಞಾನ, ಇಂಗ್ಲಿಷ್, ಗಣಿತ, ಶಾಸ್ತ್ರೀಯ ವಿಷಯ, ಇತಿಹಾಸ, ರಾಜನೀತಿ) ಆರಿಸಿಕೊಂಡು ಅದೇ ಸಂಸ್ಥೆಯ ಎಂ.ಎ. ಪರೀಕ್ಷೆಗಳಿಗೆ ಕುಳಿತುಕೊಂಡರು. ಎಲ್ಲ ವಿಷಯಗಳಲ್ಲಿಯೂ ಅತ್ಯಂತ ಹೆಚ್ಚಿನ ಅಂಕಗಳನ್ನು ಗಳಿಸಿದರು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಹೊಸ ದಾಖಲೆಯನ್ನೆ ಸ್ಥಾಪಿಸಿದರು.

ವೆಂಕಟರಮಣನ್ ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಚರಿತ್ರೆ ಮತ್ತು ವೈಜ್ಞಾನಿಕ ವಿಷಯಗಳನ್ನು ಕುರಿತು ಪ್ರೌಢಲೇಖನಗಳನ್ನು ಬರೆಯುತ್ತಿದ್ದರು. ಪ್ರಸಿದ್ಧವಾದ ಪತ್ರಿಕೆಗಳು ಅವರ ಲೇಖನಗಳನ್ನು ಪ್ರಕಟಿಸುತ್ತಿದ್ದವು.

ಗೋಖಲೆ ಅವರ ಮಾರ್ಗದರ್ಶನ

ಆಗ ನಮ್ಮ ದೇಶದ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಇಂಗ್ಲೆಂಡಿನ ಜನಸಂಖ್ಯೆ ಆಗ ಸುಮಾರು ನಾಲ್ಕು ಕೋಟಿ, ಭಾರತೀಯರು ಮೂವತ್ತು ಮೂರು ಕೋಟಿ. ಭಾರತೀಯರಲ್ಲಿ ಒಗ್ಗಟ್ಟಿಲ್ಲದೆ ಇದ್ದುದರಿಂದ ಭಾರತ ದಾಸ್ಯಕ್ಕೆ ಒಳಗಾಗಬೇಕಾಯಿತು. ಬ್ರಿಟಿಷರ ಆಡಳಿತದಿಂದ ಜನಕ್ಕೆ ಕಷ್ಟಕಾರ್ಪಣ್ಯಗಳು ಬಂದಿದ್ದವು. ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಜನ ತುಂಬಾ ಹಿಂದುಳಿದಿದ್ದರು.

ಜನಗಳಲ್ಲಿ ದೇಶಭಕ್ತಿಯನ್ನೂ, ಸ್ವಾಭಿಮಾನವನ್ನೂ ಮೂಡಿಸಬೇಕಾಗಿತ್ತು. ಧೈರ್ಯವನ್ನು ಸಾಹಸವನ್ನು ತುಂಬಬೇಕಾಗಿತ್ತು. ಕೆಲವು ಮುಂದಾಳುಗಳು ಈ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಅಂತಹವರಲ್ಲಿ ಗೋಪಾಲಕೃಷ್ಣ ಗೋಖಲೆಯವರು ಅಗ್ರಗಣ್ಯರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ವೆಂಕಟರಮಣನ್ ದೇಶಸೇವೆಯಲ್ಲಿ ತೊಡಗಿದರು. ಅವರು ಸ್ವಲ್ಪಕಾಲ ಬರೋಡಾದಲ್ಲಿ ಕಾಲೇಜು ಅಧ್ಯಾಪಕರಾಗಿಯೂ ಕೆಲಸ ಮಾಡಿದರು.

ಶೃಂಗೇರಿಗೆ

ವೆಂಕಟರಮಣನ್ನರಿಗೆ ವೇದಾಂತವನ್ನು ಓದಬೇಕೆಂಬ ಅಪೇಕ್ಷೆಯು ತುಂಬಾ ಇತ್ತು. ಆಧ್ಯಾತ್ಮಿಕ ಸಾಧನೆ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ದೇಶಸೇವೆಯಲ್ಲಿ ಮಗ್ನರಾಗಿದ್ದಾಗಲೂ ಅವರು ಅನೇಕ ತತ್ವಶಾಸ್ತ್ರ ಗ್ರಂಥಗಳನ್ನು ಓದುತ್ತಿದ್ದರು. ಅವರ ಮನಸ್ಸು ದೇವರು ಮತ್ತು ಧರ್ಮ ಇವುಗಳ ಕಡೆಗೆ ತಿರುಗಿತು. ೧೯೦೮ರಲ್ಲಿ ಅವರು ತಮ್ಮ ವೃತ್ತಿಯನ್ನು ತ್ಯಜಿಸಿ ಶೃಂಗೇರಿಗೆ ಹೊರಟುಬಿಟ್ಟರು. ಆಗ ಅವರಿಗೆ ಇನ್ನೂ ಇಪ್ಪತ್ತಾರು ವರ್ಷ ವಯಸ್ಸು.

ಆಗ ಶೃಂಗೇರಿಯಲ್ಲಿ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀಸ್ವಾಮಿಗಳವರು ಜಗದ್ಗುರುಗಳಾಗಿದ್ದರು.   ಅವರು ದೊಡ್ಡ ತಪಸ್ವಿಗಳೆಂದೂ, ಮಹಾಜ್ಞಾನಿಗಳೆಂದೂ ಹೆಸರು ಪಡೆದಿದ್ದರು.

ವೆಂಕಟರಮಣ ಸರಸ್ವತಿಯು ಅವರಲ್ಲಿ ವ್ಯಾಸಂಗ ಮಾಡಲು ೧೯೦೮ರಲ್ಲಿ ಬಂದರು. ಈ ತರುಣನ ಪ್ರತಿಭೆಯನ್ನೂ, ವಿದ್ಯಾರ್ಜನೆಯಲ್ಲಿ ಈತನಿಗಿದ್ದ ಆಕಾಂಕ್ಷೆಯನ್ನು ಕಂಡು ಗುರುಗಳು ತುಂಬಾ ಮೆಚ್ಚಿಕೊಂಡರು. ಉಪನಿಷತ್ತು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತೆಗೆ ಶ್ರೀ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಕ್ರಮವಾಗಿ ಈತನಿಗೆ ಪಾಠ ಹೇಳಿದರು. ಯೋಗಶಾಸ್ತ್ರವನ್ನು ಬೋಧಿಸಿದರು. ಶೃಂಗೇರಿಯ ಶಾಂತ ವಾತಾವರಣದಲ್ಲಿ ವೆಂಕಟರಮಣ ಸರಸ್ವತಿ ವೇದಾಂತದ ಗಹನ ತತ್ವಗಳನ್ನು ಅಭ್ಯಾಸಮಾಡಲು ತೊಡಗಿದರು.

ಆಗ ದೇಶದಲ್ಲಿ ವಿದ್ಯಾಭ್ಯಾಸ ಪದ್ಧತಿಯು ಸಮರ್ಪಕವಾಗಿರಲಿಲ್ಲ. ಜನ ಅಭಿವೃದ್ಧಿ ಹೊಂದಲು ಸಹಾಯಕವಾಗಿರಲಿಲ್ಲ. ಜನರಲ್ಲಿ ತಮ್ಮ ದೇಶದ ಬಗ್ಗೆ ಅಭಿಮಾನವನ್ನು ಬೆಳೆಸುವಂತಿರಲಿಲ್ಲ. ದೇಶವನ್ನು ಆಳುತ್ತಿದ್ದ ಬ್ರಿಟಿಷರ ಸೇವೆಮಾಡಲು ಅಗತ್ಯವೆನಿಸಿದ್ದ ವಿದ್ಯಾಭ್ಯಾಸ ಪದ್ಧತಿ ರೂಢಿಯಲ್ಲಿತ್ತು. ಇದನ್ನು ಮನಗಂಡಿದ್ದ ಜನ ನಾಯಕರು ದೇಶದ ಅನೇಕ ಕಡೆಗಳಲ್ಲಿ ತಾವೇ ರಾಷ್ಟ್ರೀಯ ಶಾಲೆಗಳನ್ನೂ, ಕಾಲೇಜುಗಳನ್ನು ಆರಂಭಿಸಿದರು.

ನ್ಯಾಷನಲ್ ಕಾಲೇಜು ಪ್ರಿನ್ಸಿಪಾಲರು

ರಾಜಮಹೇಂದ್ರಿಯಲ್ಲಿದ್ದ ನ್ಯಾಷನಲ್ ಕಾಲೇಜು ಅಂತಹ ರಾಷ್ಟ್ರೀಯ ವಿದ್ಯಾಸಂಸ್ಥೆಗಳಲ್ಲೊಂದಾಗಿತ್ತು. ಆ ಕಾಲೇಜಿನ ಪ್ರಿನ್ಸಿಪಾಲರಾಗಿ ಕೆಲಸಮಾಡಬೇಕೆಂದು ವೆಂಕಟರಮಣ ಸರಸ್ವತಿಯವರಿಗೆ ಕರೆಬಂದಿತು. ಶೃಂಗೇರಿಯನ್ನು ಬಿಟ್ಟು ಹೊರಡಲು ಅವರಿಗೆ ಮನಸ್ಸು ಬರಲಿಲ್ಲ. ಒತ್ತಾಯದ ಮೇಲೆ ಒತ್ತಾಯ ಬರುತ್ತಿತ್ತು. ಕೊನೆಗೆ ಗುರುಗಳನ್ನು ಕೇಳಿದರು. ಅವರು ಅನುಮತಿ ಕೊಟ್ಟ ಬಳಿಕ ವೆಂಕಟರಮಣ ಸರಸ್ವತೀ ರಾಜಮಹೇಂದ್ರಿಗೆ ಹೋದರು.

ಆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರೂ ದೇಶಪ್ರೇಮಿಗಳಾಗಿದ್ದ ತರುಣರು. ಅವರೆಲ್ಲರೂ ಅತ್ಯಂತ ಕಡಿಮೆ ಸಂಬಳ ತೆಗೆದುಕೊಂಡು ದುಡಿಯುತ್ತಿದ್ದರು. ವಿದ್ಯಾರ್ಥಿಗಳಿಗೆ ಶಿಸ್ತನ್ನೂ ಸ್ವಾವಲಂಬನವನ್ನೂ ಕಲಿಸುತ್ತಿದ್ದರು. ನೀತಿನಿಯಮಗಳನ್ನು ಬೋಧಿಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುತ್ತಿದ್ದರು.

ವೆಂಕಟರಮಣನ್ ಆ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರೂ ಒಬ್ಬ ಸಾಧಾರಣ ಉಪಾಧ್ಯಾಯರಂತೆ ಕೆಲಸ ಮಾಡುತ್ತಿದ್ದರು. ಅವರಿಗೆ ಸ್ವಲ್ಪವೂ ಜಂಬವಿರಲಿಲ್ಲ. ಸರಳವಾದ ಖಾದಿಯ ಉಡುಪು, ಸಹೋದ್ಯೋಗಿಗಳೊಡನೆ ಸೌಜನ್ಯ ವಿದ್ಯಾರ್ಥಿಗಳಲ್ಲಿ ಪ್ರೀತಿ ಇವು ಅವರ ವೈಶಿಷ್ಟ ಗಳಾಗಿದ್ದವು.

ಮತ್ತೆ ಆಧ್ಯಾತ್ಮಿಕದತ್ತ

ಹೀಗೆ ಸ್ವಲ್ಪದಿನ ಕಳೆಯಿತು. ವೆಂಕಟರಮಣನ್ನರಿಗೆ ಮತ್ತೆ ಆಧ್ಯಾತ್ಮಿಕ ವಿದ್ಯೆಯ ಕಡೆ ಮನಸ್ಸು ಒಲಿಯಿತು. ದಿನದಿನಕ್ಕೂ ಶೃಂಗೇರಿಗೆ ಹೋಗುವ ಹಂಬಲ ಹೆಚ್ಚಾಯಿತು. ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಮತ್ತೆ ಶೃಂಗೇರಿಗೆ ಬಂದರು. ಅಲ್ಲಿ ಶ್ರೀ ಶಿವಾಭಿನವ ನರಸಿಂಹ ಭಾರತೀಯವರ ಬಳಿ ವೇದಾಂತವನ್ನು ಅಭ್ಯಾಸ ಮಾಡಲು ಆರಂಭಿಸಿದರು.

ವೆಂಕಟರಮಣನ್ ಸುಮಾರು ಎಂಟು ವರ್ಷಗಳ ಕಾಲ ಶೃಂಗೇರಿಯಲ್ಲಿಯೇ ಇದ್ದರು. ಶ್ರೀ ನರಸಿಂಹ ಭಾರತೀಯವರ ನಂತರ ಶ್ರೀ ಚಂದ್ರಶೇಖರ ಭಾರತೀಯವರಲ್ಲಿಯೂ ಸ್ವಲ್ಪಕಾಲ ಶಾಸ್ತ್ರಾಭ್ಯಾಸ ಮಾಡಿದರು. ಅನೇಕ ಜನ ವಿದ್ಯಾರ್ಥಿಗಳಿಗೆ ತಾವೇ ಪಾಠ ಹೇಳಿದರು. ಶೃಂಗೇರಿಯ ಹತ್ತಿರವಿದ್ದ ಬೆಟ್ಟಗುಡ್ಡಗಳಲ್ಲಿ ಆಗಾಗ ಧ್ಯಾನ ಮಾಡಲು ಹೋಗುತ್ತಿದ್ದರು. ಇದರಿಂದ ಅವರಿಗೆ ಓದಿದುದನ್ನು ಅಭ್ಯಾಸ ಮಾಡಲು ತುಂಬಾ ಸಹಾಯವಾಗುತ್ತಿತ್ತು.

ಕ್ರಾಂತಿಕಾರಿಗಳ ಸ್ನೇಹ

ವೆಂಕಟರಮಣನ್ ಅವರ ಮನಸ್ಸು ಎರಡು ದಿಕ್ಕುಗಳಲ್ಲಿ ಹರಿಯುತ್ತಿತ್ತು. ಒಂದನೆಯದು ಆಧ್ಯಾತ್ಮಿಕ ಸಾಧನೆಗಾಗಿ ವಿದ್ಯೆಯ ಕಡೆಗೆ. ಬಾಳಿನ ಅರ್ಥವನ್ನು, ಈ ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕು, ಜಗತ್ತಿನ ಸ್ವರೂಪ ಏನು ಇಂತಹ ಗಹನವಾದ ವಿಷಯಗಳನ್ನು ಕುರಿತು ಶಾಸ್ತ್ರಗಳಲ್ಲಿ ಏನು ಹೇಳಿದೆ, ಹಿರಿಯರು ಏನು ಹೇಳಿದ್ದಾರೆ ಎಂದೆಲ್ಲಾ ಅಭ್ಯಾಸಮಾಡಿ ಚಿಂತನೆ ಮಾಡುವ ಬಯಕೆ. ಇನ್ನೊಂದು ದೇಶದ ದಾಸ್ಯದ ವಿಮೋಚನೆಗಾಗಿ, ರಾಜಕೀಯ ಚಳವಳಿಯ ಕಡೆಗೆ. ಪರಕೀಯರ ಹಿಡಿತದಿಂದ ದೇಶವು ಹೇಗೆ ಬಿಡಿಸಿಕೊಳ್ಳಬೇಕು ಎಂದು ಅವರು ಯೋಚನೆ ಮಾಡತೊಡಗಿದರು. ಅನೇಕ ಜನ ನಾಯಕರೊಡನೆ ಪತ್ರ ವ್ಯವಹಾರ ಮಾಡುತ್ತಿದ್ದರು. ವೆಂಕಟರಮಣನ್‌ರವರ ಸ್ನೇಹಿತರಲ್ಲಿ ಅರವಿಂದ ಘೋಷ್, ಬಾರೀಂದ್ರ ಘೋಷ್ ಮೊದಲಾದ ಕ್ರಾಂತಿಕಾರಿಗಳು ಇದ್ದರು.

ಕ್ರಾಂತಿಕಾರಿಗಳು ದೇಶವು ಸ್ವಾತಂತ್ರ ವನ್ನು ಹೊಂದಬೇಕಾದರೆ ಅಹಿಂಸೆಯಿಂದ ಸಾಧ್ಯವಿಲ್ಲ, ಇದನ್ನೊಂದು ಯುದ್ಧ ಎಂದೇ ಭಾವಿಸಬೇಕು, ಸಶಸ್ತ್ರ ಕ್ರಾಂತಿಯು ಅಗತ್ಯ ಎಂದು ನಂಬಿದ್ದರು. ಅವರು ದೇಶದ ಕೆಲವು ಕಡೆಗಳಲ್ಲಿ ಗುಪ್ತವಾಗಿ ಮದ್ದು-ಗುಂಡುಗಳನ್ನು ಸಂಗ್ರಹಿಸುತ್ತಿದ್ದರು. ಆಗಾಗ ಬ್ರಿಟಿಷ್ ಅಧಿಕಾರಿಗಳ ಮೇಲೆ ಕೈಬಾಂಬುಗಳನ್ನೂ ಮದ್ದುಗುಂಡುಗಳನ್ನೂ ಎಸೆಯುತ್ತಿದ್ದರು. ವೆಂಕಟರಮಣನ್ ಸಹ ದೇಶದ ಸ್ವಾತಂತ್ರ ಕ್ಕೆ ಅಹಿಂಸಾತ್ಮಕ ಚಳವಳಿಯೊಡನೆ ಸಶಸ್ತ್ರ ಕ್ರಾಂತಿಯೂ ಅಗತ್ಯ ಎಂದು ನಂಬಿದ್ದರು. ಕ್ರಾಂತಿವಾದಿಗಳೊಡನೆ ಅವರ ಸಂಬಂಧವಿರುವುದು ಸರ್ಕಾರಕ್ಕೆ ಗೊತ್ತಿತ್ತು.

ಅಪಾಯದ ಮನುಷ್ಯ

ಆಗಿನ ಮೈಸೂರು ಸರ್ಕಾರಕ್ಕೆ ಬ್ರಿಟಿಷ್ ಸರ್ಕಾರದಿಂದ ಗುಪ್ತ-ಪತ್ರವೊಂದು ಬಂದಿತು. ಅದು ವೆಂಕಟರಮಣನ್ ಅವರನ್ನು ಕುರಿತ ಪತ್ರ. ಅದರಲ್ಲಿ ಅವರು ಸರ್ಕಾರದ ವಿರುದ್ಧ ಬಂಡಾಯವೇಳುವ ದುಷ್ಟರ ಗುಂಪಿಗೆ ಸೇರಿದವರೆಂದೂ, ಅವರು ಅಪಾಯಕಾರಿ ವ್ಯಕ್ತಿಯೆಂದೂ, ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿರಬೇಕೆಂದೂ ಬರೆದಿತ್ತು. ವೆಂಕಟರಮಣನ್‌ರವರನ್ನು ನೋಡಲು ಯಾರು ಯಾರು ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಮುಂತಾದುವನ್ನು ಕುರಿತು ಆಗಾಗ ವರದಿಮಾಡಬೇಕೆಂದು ಆಜ್ಞೆ ಹೊರಡಿಸಿತ್ತು.

ಆ ಗುಪ್ತಪತ್ರ ಶೃಂಗೇರಿಯ ಪೋಲೀಸು ಅಧಿಕಾರಿಯ ಕೈಗೆ ಬಂದಿತು. ಆಗ ಅಲ್ಲಿದ್ದ ಅತ್ಯುನ್ನತ ಪೋಲಿಸ್ ಅಧಿಕಾರಿಯೆಂದರೆ ದಫೇದಾರ್- ಹೆಡ್‌ಕಾನ್‌ಸ್ಟೇಬಲ್ ದರ್ಜೆಯವನು. ಆತನಿಗೆ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ಕಾಗದದ ಮೇಲಿದ್ದ ಚಿಹ್ನೆಯಿಂದ ಅದು ಗುಪ್ತಪತ್ರವೆಂದು ಅವನಿಗೆ ಗೊತ್ತಾಗಿತ್ತು. ಅದರಲ್ಲಿರುವ ವಿಷಯಗಳನ್ನು ಆತ ಯಾರಿಂದಲಾದರೂ ಓದಿಸಿ ತಿಳಿದುಕೊಳ್ಳಬೇಕಾಗಿತ್ತು. ಆದರೆ ಆ ಊರಿನ ಜನಗಳಿಂದ ಅದನ್ನು ಓದಿಸುವಂತಿರಲಿಲ್ಲ.

ದಫೇದಾರನು ಆ ಕಾಗದವನ್ನು ಕಿಸೆಯಲ್ಲಿಟ್ಟುಕೊಂಡು ಮಠದ ಅತಿಥಿ ಗೃಹಕ್ಕೆ ಬಂದನು. ಅಲ್ಲಿದ್ದ ಕೆಲವು ಜನಗಳನ್ನು ನೋಡಿದನು. ಅವರಲ್ಲಿ ಯಾರೂ ಇಂಗ್ಲಿಷ್ ಬಲ್ಲವರಂತೆ ಆತನಿಗೆ ಕಾಣಿಸಲಿಲ್ಲ.

ವೆಂಕಟರಮಣನ್ ಆಗ ಯಾವುದೋ ಪುಸ್ತಕವನ್ನೋದುತ್ತ ಕುಳಿತಿದ್ದರು. ದಫೇದಾರನು ಅವರನ್ನು ಆಗಾಗ್ಗೆ ಕಂಡಿದ್ದು ಅವರ ಪರಿಚಯ ಆತನಿಗೆ ಇತ್ತು. ಆತನು ಅವರಲ್ಲಿಗೆ ಬಂದು ‘‘ಸ್ವಾಮೀ, ತಮ್ಮಿಂದ ಒಂದು ಕೆಲಸವಾಗಬೇಕು’’ ಎಂದು ಹೇಳಿದನು.

ಅವರು ‘‘ಹೇಳಿ ಏನಾಗಬೇಕು?’’ ಎಂದರು.

ಆತನು ‘‘ಇದೊಂದು ಗುಪ್ತಪತ್ರ. ಸರ್ಕಾರದಿಂದ ಬಂದಿದೆ. ಈ ಪತ್ರವನ್ನು ಓದಿ ನನಗೆ ಅರ್ಥ ಹೇಳಬೇಕು. ಆದರೆ ನೀವು ಇದರಲ್ಲಿರುವ ಸಂಗತಿಯನ್ನು ಯಾರಿಗೂ ಹೇಳಕೂಡದು’’ ಎಂದನು.

ವೆಂಕಟರಮಣನ್ ನಕ್ಕು ‘‘ಆಗಲಿ ಪತ್ರವನ್ನು ಕೊಡಿ’’ ಎಂದು ಹೇಳಿ ಆ ಕಾಗದವನ್ನು ತೆಗೆದುಕೊಂಡು ಓದಿದರು. ಆ ಕಾಗದ ತಮ್ಮನ್ನು ಕುರಿತದ್ದೇ! ತಮ್ಮ ಮೇಲೆ ಕಣ್ಣಿಟ್ಟಿರಬೇಕೆಂದು ಪೋಲೀಸರಿಗೆ ಆಜ್ಞೆ! ಅವರು ಪ್ರತಿಯೊಂದು ವಾಕ್ಯಕ್ಕೂ ಪೋಲೀಸರವನಿಗೆ ಅರ್ಥ ಹೇಳಿದರು.

ಅನಂತರ ಆ ದಫೇದಾರನಿಗೆ ‘‘ಅಪ್ಪಾ, ಈ ಕಾಗದದಲ್ಲಿ ಹೇಳಿರುವ ಅಪಾಯಕಾರಿ ವ್ಯಕ್ತಿ ನಾನೇ’’ ಎಂದರು.

ದಫೇದಾರನು ವೆಂಕಟರಮಣನ್ ಅವರನ್ನು ಚೆನ್ನಾಗಿ ನೋಡಿದ್ದವನು. ಅವರು ಎಷ್ಟು ಓದುತ್ತಾರೆ, ಎಷ್ಟು ಶಿಸ್ತಿನ ಜೀವನ ಅವರದು, ಧರ್ಮಶಾಸ್ತ್ರ ಗ್ರಂಥಗಳು ಎಲ್ಲವನ್ನೂ ಓದಿ ಇತರರಿಗೂ ಹೇಳಿಕೊಡುತ್ತಾರೆ ಎಂದು ಅವನಿಗೆ ಗೊತ್ತಿತ್ತು. ಅವರ ಮಾತನ್ನು ನಂಬಲಿಲ್ಲ.  ‘‘ನಿಮ್ಮಂತಹ ಸತ್ಪುರುಷರು ಇಂತಹ ಕ್ರೂರಿಯಾದ ಮನುಷ್ಯ ಎಂದು ನಂಬಲು ಸಾಧ್ಯವಿಲ್ಲ. ಈ ಕಾಗದ ಬೇರೆ ಯಾರನ್ನೋ ಕುರಿತು ಇರಬೇಕು’’ ಎಂದು ಹೇಳಿ ಹೊರಟು ಹೋದನು.

ವೆಂಕಟರಮಣನ್ ಆ ಗುಪ್ತ ಪತ್ರ ಬಂದುದರಿಂದ ಸ್ವಲ್ಪವೂ ಹೆದರಲಿಲ್ಲ. ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದರು.

ದ್ವಾರಕಾಪೀಠದ ಜಗದ್ಗುರುಗಳು

ವೆಂಕಟರಮಣನ್ ಬಹಳ ಸರಳವಾದ ಜೀವನವನ್ನು ನಡೆಸುತ್ತಿದ್ದರು. ಮಿತವಾದ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾದ ಉಡುಪನ್ನು ಧರಿಸುತ್ತಿದ್ದರು. ತ್ಯಾಗ ವೈರಾಗ್ಯಗಳು ಇವರಿಗೆ ಸಹಜಗುಣಗಳಾಗಿದ್ದವು. ಶೃಂಗೇರಿಯಲ್ಲಿ ಇದ್ದಾಗಲೇ ಅವರ ಪತ್ನಿ ಮೃತರಾಗಿದ್ದರು. ಅವರ ಆಧ್ಯಾತ್ಮಿಕ ಸಾಧನೆ ಮುಂದುವರಿದಂತೆಲ್ಲ ಅವರಿಗೆ ಸನ್ಯಾಸ ತೆಗೆದುಕೊಳ್ಳಬೇಕೆಂಬ ಅಪೇಕ್ಷೆ ಉಂಟಾಯಿತು.

ಅವರು ಶೃಂಗೇರಿಯಿಂದ ಹೊರಟು ಕಾಶಿಗೆ ಬಂದರು. ಅಲ್ಲಿ ಸ್ವಲ್ಪಕಾಲ ಗಂಗಾತೀರದಲ್ಲಿ ಜಪಧ್ಯಾನಗಳನ್ನು ಮಾಡಿಕೊಂಡಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ದ್ವಾರಕಾಪೀಠದ ಜಗದ್ಗುರುಗಳಾದ ಶ್ರೀ ತ್ರಿವಿಕ್ರಮ ತೀರ್ಥ ಸ್ವಾಮಿಗಳು ಆಗಮಿಸಿದರು. ವೆಂಕಟರಮಣರು ಸ್ವಾಮಿಗಳ ದರ್ಶನ ಮಾಡಿದರು. ಪರಸ್ಪರ ಪರಿಚಯವಾಯಿತು. ವೆಂಕಟರಮಣರ ವಿನಯ, ಸೌಜನ್ಯ, ವಿದ್ವತ್ತು, ಸರಳಸ್ವಭಾವ ವೈರಾಗ್ಯ ಇವುಗಳನ್ನು ಸ್ವಾಮಿಗಳು ಮೆಚ್ಚಿಕೊಂಡರು. ೧೯೧೯ ರ ಜುಲೈ ಹದಿನಾರರಂದು ವೆಂಕಟರಮಣರಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟರು. ಅಂದಿನಿಂದ ವೆಂಕಟರಮಣರವರ ಹೆಸರು ಶ್ರೀ ಭಾರತೀಕೃಷ್ಣ ತೀರ್ಥ ಎಂದಾಯಿತು.

ಶ್ರೀ ಭಾರತೀಕೃಷ್ಣತೀರ್ಥರು ಎರಡು ವರ್ಷಕಾಲ ಕಾಶಿಯಲ್ಲಿಯೇ ಇದ್ದರು. ಹಲವಾರು ಜನ ವಿದ್ಯಾರ್ಥಿಗಳಿಗೆ ವೇದಾಂತ ಪಾಠವನ್ನು ಹೇಳುತ್ತಿದ್ದರು. ಆ ವೇಳೆಗೆ ಶ್ರೀ ತ್ರಿವಿಕ್ರಮತೀರ್ಥರು ದೇಹತ್ಯಾಗ ಮಾಡಿದರು. ಅದರಿಂದ ತೆರವಾದ ದ್ವಾರಕಾಪೀಠಕ್ಕೆ ಶ್ರೀ ಭಾರತೀಕೃಷ್ಣತೀರ್ಥರೇ ಜಗದ್ಗುರುಗಳಾಗಬೇಕೆಂದು ಅನೇಕ ಜನ ಒತ್ತಾಯ ಮಾಡಿದರು. ಶ್ರೀ ತ್ರಿವಿಕ್ರಮತೀರ್ಥರೂ ಬದುಕಿದ್ದಾಗ ಭಾರತೀಕೃಷ್ಣತೀರ್ಥರೇ ತಮ್ಮ ಉತ್ತರಾಧಿಕಾರಿಯಾಗ ಬೇಕೆಂದು ಅಪೇಕ್ಷೆಪಟ್ಟಿದ್ದರು.

೧೯೨೧ ರಲ್ಲಿ ಶ್ರೀ ಭಾರತೀಕೃಷ್ಣತೀರ್ಥರು ದ್ವಾರಕಾಪೀಠದ ಜಗದ್ಗುರು ಸ್ಥಾನವನ್ನು ವಹಿಸಿಕೊಂಡರು. ಅನಂತರ ದೇಶಸಂಚಾರವನ್ನು ಕೈಗೊಂಡರು. ಸನಾತನ ಧರ್ಮವನ್ನು ಕುರಿತು ನೂರಾರು ಕಡೆಗಳಲ್ಲಿ ಉಪನ್ಯಾಸಗಳನ್ನು ಮಾಡಿದರು. ಒಂದು ಹಿರಿಯ ಮಠದ ಸ್ವಾಮಿಗಳೆಂದರೆ ದೇವರಪೂಜೆ, ಧ್ಯಾನ, ಧರ್ಮಶಾಸ್ತ್ರಗಳನ್ನು ಓದಿ ಇತರರಿಗೂ ತಿಳಿಯ ಹೇಳುವುದು, ಧರ್ಮಕ್ಕೆ ಅನುಗುಣವಾಗಿ ಬಾಳುವಂತೆ ಉಪದೇಶಿಸುವುದು, ಸ್ವತಃ ಶುದ್ಧವಾದ ಜೀವನ ನಡೆಸಿ ಮೇಲ್ಪಂಕ್ತಿಯಾಗುವುದು-ಇವನ್ನು ಮಾಡುತ್ತಾರೆ ಎಂದು ನಮ್ಮ ನಿರೀಕ್ಷಣೆ ಅಲ್ಲವೆ? ಸಾಮಾನ್ಯವಾಗಿ ಅವರು ಮಾಡಬೇಕಾದದ್ದು ಇದನ್ನೆ. ಶ್ರೀ ಭಾರತೀಕೃಷ್ಣತೀರ್ಥರು ಇದನ್ನೆಲ್ಲ ಮಾಡುತ್ತಿದ್ದರು. ಆದರೆ ಸ್ವಾಮಿಗಳಾದವರು ಸನ್ಯಾಸವನ್ನು ತೆಗೆದುಕೊಂಡು ತಮ್ಮದೊಂದು ಸಂಸಾರವಿಲ್ಲ ಎಂದು ವೈರಾಗ್ಯದಿಂದ ಬಾಳಬೇಕು. ಸರಿಯೇ, ಆದರೆ ಇಡೀ ದೇಶ ಕಷ್ಟದಲ್ಲಿದ್ದಾಗ ಸ್ವಾಮಿಗಳು ವೈರಾಗ್ಯ ಎಂದು ದೇಶದ ಕಷ್ಟ ದುಃಖಗಳಿಗೆ ಬೆನ್ನು ತಿರುಗಿಸಬಾರದು ಎಂದು ಅವರ ನಂಬಿಕೆ. ‘‘ದೇಶವು ಪರರ ಮುಷ್ಟಿಯಲ್ಲಿ ಸಿಕ್ಕಿಕೊಂಡಿರುವಾಗ ಅದರ ಪ್ರಗತಿ ಸಾಧ್ಯವಿಲ್ಲ. ದೇಶದ ಬಿಡುಗಡೆಗಾಗಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಶ್ರಮಿಸಬೇಕು’’ ಎಂದು ಘೋಷಿಸಿದರು.

ಸರ್ಕಾರದ ಅನ್ಯಾಯಕ್ಕೆ ತಲೆಬಾಗಬೇಡಿ

ಮೊದಲ ಮಹಾಯುದ್ಧವಾದ ಮೇಲೆ ತಮ್ಮ ಧರ್ಮಪೀಠದ ಖಲೀಫರಿಗೆ ಬ್ರಿಟಿಷರು ಮೋಸ ಮಾಡಿದರು ಎಂದು ದೇಶಾದ್ಯಂತ ಬ್ರಿಟಿಷರ ವಿರುದ್ಧ ಚಳವಳಿಯನ್ನು ಮುಸ್ಲಿಮರು ಆರಂಭಿಸಿದರು. ಇದಕ್ಕೆ ‘ಖಿಲಾಫತ್ ಚಳವಳಿ’ ಎಂದು ಹೆಸರಾಯಿತು. ಈ ಚಳವಳಿಯಲ್ಲಿ ದೇಶದ ಸ್ವಾತಂತ್ರ ಕ್ಕಾಗಿ ಹೋರಾಡುತ್ತಿದ್ದ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯೂ ಸಹಾನುಭೂತಿ ತೋರಿಸಿತು.

ಭಾರತೀಕೃಷ್ಣತೀರ್ಥರು ಈ ಚಳವಳಿಯಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಆದರೆ ಆ ಸಮಯದಲ್ಲಿ ಅವರು ಮಾಡುತ್ತಿದ್ದ ಭಾಷಣಗಳು ಚಳವಳಿಕಾರರಿಗೆ ಸ್ಫೂರ್ತಿದಾಯಕವಾಗಿದ್ದವು. ಸ್ವಾಮಿಗಳ ಭಾಷಣಗಳು ತುಂಬಾ ಖಾರವಾಗಿದ್ದವು. ಸರ್ಕಾರದ ವಿರುದ್ಧ ಚಳವಳಿಯನ್ನು ಮಾಡುವಂತೆ ಜನಗಳನ್ನು ಪ್ರಚೋದಿಸುತ್ತಿದ್ದರು. ಅವರ ಉಪನ್ಯಾಸಗಳನ್ನು ಕೇಳಲು ಸಾವಿರಗಟ್ಟಲೆ ಜನ ಸೇರುತ್ತಿದ್ದರು. ಸ್ವಾಮಿಗಳು ‘‘ಪರಕೀಯರ ಮುಷ್ಟಿಯಲ್ಲಿರುವ ದೇಶದ ಬಿಡುಗಡೆಗಾಗಿ ಚಳವಳಿ ಮಾಡುವುದೂ ಧರ್ಮವೇ’’ ಎಂದು ಪದೇ ಪದೇ ಸಾರುತ್ತಿದ್ದರು.

ಜಗದ್ಗುರುಗಳ ಬಂಧನ

ಕರಾಚಿಯಲ್ಲಿ ನಡೆದ ಒಂದು ದೊಡ್ಡ ಸಾರ್ವಜನಿಕ ಸಭೆಯಲ್ಲಿ ಸ್ವಾಮಿಗಳು ಉಜ್ಜಲವಾದ ಉಪನ್ಯಾಸ ಮಾಡಿದರು. ‘‘ಬ್ರಿಟಿಷರಿಗೆ ನಮ್ಮ ದೇಶದಲ್ಲಿ ಇರಲು ಹಕ್ಕಿಲ್ಲ. ಅವರು ಕೊಡುವ ಅಪ್ಪಣೆಗಳನ್ನೆಲ್ಲ ಸರ್ಕಾರಿ ನೌಕರರು ಪಾಲಿಸಬೇಕಾಗಿಲ್ಲ. ಸರ್ಕಾರಿ ನೌಕರರೇ ನೀವು ಈ ದೇಶದ ಮಕ್ಕಳು ಯೋಚಿಸಿ, ಸರ್ಕಾರ ಬ್ರಿಟಿಷರಿಗೆ ಲಾಭವಾಗುವಂತಹ ಅಪ್ಪಣೆಗಳನ್ನು ಕೊಟ್ಟರೆ ಪಾಲಿಸಬೇಡಿ. ನಿಮ್ಮ ಅಣ್ಣತಮ್ಮಂದಿರು, ಅಕ್ಕತಂಗಿಯರ ಮೇಲೆ ಲಾಠಿ ಪ್ರಹಾರ ಮಾಡಿ ಎಂದರೆ ಪಾಲಿಸಬೇಡಿ, ಗುಂಡು ಹಾರಿಸಿ ಎಂದರೆ ವಿಧೇಯರಾಗಿ ಗುಂಡು ಹಾರಿಸಬೇಡಿ’’ ಎಂದರು. ಸರ್ಕಾರಕ್ಕೆ ವರದಿ ಹೋಯಿತು. ಬ್ರಿಟಿಷ್ ಅಧಿಕಾರಿಗಳು ಕುಪಿತರಾದರು. ಸ್ವಾಮಿಗಳ ಮೇಲೆ ದೇಶ ವಿರೋಧಿ ಚಟುವಟಿಕೆಯ ಆಪಾದನೆ ಹೊರಿಸಿ ಬಂಧಿಸಿದರು ಜೈಲಿನಲ್ಲಿಟ್ಟರು.

ದ್ವಾರಕಾಪೀಠದ ಶಂಕರಾಚಾರ‍್ಯರಾಗಿದ್ದ ಅವರನ್ನು ಮೊದಲು ಸಾಮಾನ್ಯ ಕೈದಿಯಂತೆಯೇ ನಡೆಸಿಕೊಂಡರು. ಖಿಲಾಫತ್ ಚಳವಳಿಯ ನಾಯಕರಾಗಿದ್ದ ಆಲಿ ಸೋದರರೊಡನೆ ಇವರನ್ನು ಬಂಧಿಸಿಟ್ಟರು. ಸ್ವಾಮಿಗಳು ಬೆಳಗಿನಿಂದ ಕಟ್ಟುನಿಟ್ಟಾಗಿ ಸ್ನಾನ, ಪೂಜೆ ಎಲ್ಲ ನಡೆಸಬೇಕಲ್ಲ! ಯಾವುದಕ್ಕೂ ಅವಕಾಶವಿಲ್ಲ.

ಶ್ರೀ ಶಂಕರಾಚಾರ‍್ಯರ ಬಂಧನದ ಸುದ್ದಿ ದೇಶಾದ್ಯಂತ ಹರಡಿತು. ಒಂದು ಹಿರಿಯ ಧರ್ಮಪೀಠದ ಸ್ವಾಮಿಗಳು. ಲಕ್ಷಾಂತರ ಮಂದಿಯ ಗೌರವ ಸಂಪಾದಿಸಿದವರು. ದೇಶದಲ್ಲಿ ಪ್ರತಿಭಟನೆಯ ಸಭೆಗಳಾದವು. ಆಗ ಸರ್ಕಾರ ಕಣ್ಣು ತೆರೆಯಿತು. ಭಾರತೀಕೃಷ್ಣ ತೀರ್ಥರನ್ನು ಪ್ರತ್ಯೇಕವಾದ ಸೆರೆಮನೆಯಲ್ಲಿ ಇಟ್ಟರು. ಸ್ನಾನ, ಪೂಜೆ ಜಪತಪಗಳಿಗೆಲ್ಲ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದರು.

ಸ್ವಾಮಿಗಳ ಬಂಧನದ ವಾರ್ತೆ ಕೇಳಿ ಬಿಹಾರದಲ್ಲಿದ್ದ ಹಿರಿಯ ದೇಶನಾಯಕರಾದ ಡಾಕ್ಟರ್ ರಾಜೇಂದ್ರ ಪ್ರಸಾದರು ಕರಾಚಿಗೆ ಧಾವಿಸಿಬಂದರು. ಅನೇಕ ಜನ ಪ್ರಸಿದ್ಧರಾದ ನ್ಯಾಯವಾದಿಗಳೂ ಕರಾಚಿಗೆ ಬಂದರು. ವಿಶೇಷವಾದ ನ್ಯಾಯಾಲಯದಲ್ಲಿ ಸ್ವಾಮಿಗಳ ವಿಚಾರಣೆ ನಡೆಯಿತು.

ಒಂದು ದೊಡ್ಡಮಠದ ಸ್ವಾಮಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವುದೇ ವಿರಳ. ಅದೂ ದೇಶಕ್ಕೆ ಕೆಡಕು ಮಾಡಲು ಪ್ರಯತ್ನಿಸಿದರೆಂಬ ಅಪಾದನೆ! ಆಪಾದಿತರಾದ ಸ್ವಾಮಿಗಳಲ್ಲಿ ಜನರಿಗೆ ಅಪಾರ ಗೌರವ ಪ್ರೀತಿ. ಸಹಜವಾಗಿ ನ್ಯಾಯಾಲಯ ಜನರಿಂದ ತುಂಬಿ ಹೋಗಿತ್ತು. ಹೊರಗೆ ಸಾವಿರಾರು ಜನ ಸೇರಿದ್ದರು. ಸ್ವಾಮಿಗಳು ನ್ಯಾಯಾಲಯಕ್ಕೆ ಆಗಮಿಸಿದಾಗ ಎಲ್ಲರೂ ಎದ್ದು ನಿಂತು ಪ್ರಣಾಮ ಮಾಡಿದರು. ರಾಜೇಂದ್ರಪ್ರಸಾದರು ಕೋರ್ಟಿನಲ್ಲಿಯೇ ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು. ನ್ಯಾಯಾಧಿಪತಿಯೂ ಸಹ ಎದ್ದು ನಿಂತು ಗೌರವ ಸೂಚಿಸಿದರು.

ಧರ್ಮವನ್ನು ಆಚರಿಸಿ ಎಂದು ಹೇಳುವುದು ನನ್ನ ಕರ್ತವ್ಯ

ಕೋರ್ಟಿನ ಕಾರ್ಯಕಲಾಪ ಆರಂಭವಾಯಿತು. ಸ್ವಾಮಿಗಳ ಮೇಲೆ ಹೊರಿಸಿದ್ದ ಆರೋಪವನ್ನು ಅವರಿಗೆ ತಿಳಿಸಲಾಯಿತು. ಸ್ವಾಮಿಗಳು ‘‘ನಾನು ಸನ್ಯಾಸಿ. ನನ್ನ ಆಶ್ರಮ ಎಲ್ಲ ಆಶ್ರಮಗಳಿಗಿಂತ ಶ್ರೇಷ್ಠವಾದುದು. ಒಂದು ಪ್ರಸಿದ್ಧವಾದ ಮಠದ ಜಗದ್ಗುರು ನಾನು. ನನಗೆ ಲಕ್ಷಾಂತರ ಜನ ಶಿಷ್ಯರಿದ್ದಾರೆ. ಅವರಿಗೆಲ್ಲ ಧರ್ಮವನ್ನು ಬೋಧಿಸುವುದು ನನ್ನ ಕೆಲಸ. ನಮ್ಮ ದೇಶವನ್ನು ಆಳುತ್ತಿರುವವರು ಪರಕೀಯರು. ಅವರು ಪ್ರಜೆಗಳ ಹಿತಕ್ಕೆ ವಿರೋಧವಾಗಿ ನಡೆಯುತ್ತಿದ್ದಾರೆ. ಜನಕ್ಕೆ ಧರ್ಮವನ್ನು ಆಚರಿಸಿ, ಧರ್ಮಕ್ಕೆ ವಿರೋಧವಾದುದನ್ನು ತಿರಸ್ಕರಿಸಿ ಎಂದು ಹೇಳಬೇಕಾದುದೂ ನನ್ನ ಕರ್ತವ್ಯ ಅದನ್ನು ನಾನು ಮಾಡಿದ್ದೇನೆ’’ ಎಂದು ಹೇಳಿದರು.

ನ್ಯಾಯಾಧೀಶರು ಭಾರತೀಕೃಷ್ಣರ ವಾದವನ್ನು ಒಪ್ಪಿಕೊಂಡರು. ಸ್ವಾಮಿಗಳ ಬಿಡುಗಡೆಯಾಯಿತು.

ಭಾರತೀಕೃಷ್ಣ ತೀರ್ಥರು ನೂರಾರು ಊರುಗಳಿಗೆ ಹೋಗಿ ಉಪನ್ಯಾಸಗಳನ್ನು ಮಾಡಿದರು. ಜನಗಳಲ್ಲಿ ದೇಶ ಪ್ರೇಮವನ್ನೂ, ಧರ್ಮಪ್ರೇಮವನ್ನೂ ಮೂಡಿಸಿದರು. ದೇಶದ ಬಿಡುಗಡೆಗೆ ರಾಜಕೀಯ ಚಳವಳಿಯಷ್ಟೇ ಸಾಲದು, ಅದಕ್ಕೆ ಬೆಂಬಲವಾಗಿ ಆಧ್ಯಾತ್ಮಿಕ ಚಳವಳಿಯೂ ನಡೆಯಬೇಕು ಎಂದು ಸ್ವಾಮಿಗಳು ಹೋದಲ್ಲೆಲ್ಲಾ ಹೇಳುತ್ತಿದ್ದರು.

ಪುರಿ ಪೀಠದ ಜಗದ್ಗುರು

೧೯೨೫ ರಲ್ಲಿ ಪುರೀ ಶ್ರೀ ಗೋವರ್ಧನ ಪೀಠದ ಶಂಕರಾಚಾರ್ಯರಾಗಿದ್ದ ಶ್ರೀ ಮಧುಸೂದನ ತೀರ್ಥ ಸ್ವಾಮಿಗಳು ಅಸ್ವಸ್ಥರಾದರು. ಅವರು ಭಾರತೀಕೃಷ್ಣ ತೀರ್ಥರನ್ನು ಕರೆದು ಪೀಠಕ್ಕೆ ಮುಂದೆ ಜಗದ್ಗುರುವಾಗಬೇಕೆಂದು ಕೇಳಿಕೊಂಡರು. ಭಾರತೀಕೃಷ್ಣ ತೀರ್ಥರು ಸ್ವತಂತ್ರವಾಗಿ ಪಕ್ಷಿಯಂತೆ ಇದ್ದುಕೊಂಡು ಧರ್ಮಪ್ರಚಾರ ಮಾಡಬೇಕೆಂದು ಇಷ್ಟಪಟ್ಟಿದ್ದರು. ಅವರಿಗೆ ಬಲವಂತವಾಗಿ ದ್ವಾರಕಾಪೀಠದ ಜಗದ್ಗುರು ಸ್ಥಾನಕೊಡಲ್ಪಟ್ಟಿತು. ಈಗ ಪುರೀ ಪೀಠದ ಸ್ಥಾನಕ್ಕೂ ಅವರಿಗೆ ಆಹ್ವಾನ ಬಂದಿತು.

ಭಾರತೀಕೃಷ್ಣತೀರ್ಥರು ಪುರೀ ಪೀಠಕ್ಕೆ ಬರಲು ಒಪ್ಪಲಿಲ್ಲ. ಮಧುಸೂದನ ತೀರ್ಥರು ಬಿಡಲಿಲ್ಲ. ಬಲವಂತ ಮಾಡಿದರು. ಪುರೀ ಪೀಠದ ಶಿಷ್ಯರು ಒತ್ತಾಯಮಾಡಿದರು. ಆಗ ಭಾರತೀಕೃಷ್ಣತೀರ್ಥರು ಶ್ರೀ ಸ್ವರೂಪಾನಂದ ತೀರ್ಥರನ್ನು ದ್ವಾರಕಾಪೀಠದ ಜಗದ್ಗುರುಗಳನ್ನಾಗಿ ನೇಮಕ ಮಾಡಿದರು. ಅನಂತರ ತಾವು ಪುರೀ ಪೀಠದ ಸ್ಥಾನವನ್ನು ಅಲಂಕರಿಸಿದರು.

ಶ್ರೀ ಶಂಕರಾಚಾರ‍್ಯರು ನಮ್ಮ ದೇಶದ ಮಹಾಪುರುಷರಲ್ಲಿ ಅಗ್ರಗಣ್ಯರು. ಅವರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು.

ಈ ಪೀಠಗಳಿಗೆ ಬಂದ ಜಗದ್ಗುರುಗಳು ಜನಕ್ಕೆ ಕಷ್ಟ ಬಂದಾಗ ಅದರ ನಿವಾರಣೆಗಾಗಿ ಕೆಲಸ ಮಾಡಿದರು. ಹಿಂದೂ ಧರ್ಮದ ತತ್ವಗಳನ್ನು ಪದೇಪದೇ ಪ್ರಸಾರ ಮಾಡಿದರು. ರಾಷ್ಟ್ರಕ್ಕೆ ವಿಪತ್ತು ಬಂದಾಗ ಸನ್ಯಾಸಿಗಳೂ ರಾಜಕೀಯರಂಗವನ್ನು ಪ್ರವೇಶಿಸಬಹುದು ಎಂಬುದನ್ನು ತೋರಿಸಿಕೊಟ್ಟರು. ಅಂತಹವರಲ್ಲಿ ಶೃಂಗೇರಿಯ ಶಾರದಾಪೀಠದ ಶ್ರೀ ವಿದ್ಯಾರಣ್ಯರು ಅಗ್ರಗಣ್ಯರು. ಅವರ ಮಾರ್ಗದರ್ಶನವನ್ನು ಅನುಸರಿಸಿ ಭಾರತೀಕೃಷ್ಣತೀರ್ಥರೂ ಸಹ ರಾಜಕೀಯರಂಗವನ್ನೂ ಪ್ರವೇಶಿಸಿದರು.

ಜ್ಞಾನ ಸಂಪತ್ತು

ಸ್ವಾಮಿಗಳು ಜಗದ್ಗುರುಗಳಾಗಿದ್ದರೂ ಜಗದ್ಗುರು ಪೀಠದ ಬಿರುದುಬಾವಲಿಗಳನ್ನೆಲ್ಲಾ ತ್ಯಜಿಸಿದ್ದರು. ಮಿತ ಪರಿವಾರ ದೊಡನೆ ಸಂಚರಿಸುತ್ತಿದ್ದರು. ತಮ್ಮ ಅಗತ್ಯಗಳನ್ನೂ ಕಡಿಮೆ ಮಾಡಿಕೊಂಡಿದ್ದರು. ಸಾಮಾನ್ಯವಾದ ವಸ್ತ್ರಗಳನ್ನು ಧರಿಸುತ್ತಿದ್ದರು. ಲಘುವಾದ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಎಲ್ಲ ರೀತಿಯಿಂದಲೂ ಅವರ ಜೀವನ ಸರಳವಾಗಿತ್ತು. ಆದರೆ ಸನ್ಯಾಸಿಗಳಿಗೆ, ಮಠಾಧಿಪತಿಗಳಿಗೆ ಅಗತ್ಯವಾದ ಜಪ, ತಪ, ಪೂಜೆ ಮುಂತಾದುವುಗಳನ್ನು ಅವರು ತಪ್ಪದೇ ಆಚರಿಸುತ್ತಿದ್ದರು.

ಸ್ವಾಮಿಗಳು ಹೋದೆಡೆಯಲ್ಲೆಲ್ಲಾ ಜನ ಅವರನ್ನು ಭಕ್ತಿಯಿಂದ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ವಿದ್ವಾಂಸರೂ, ಪಂಡಿತರೂ, ಸಾಮಾನ್ಯಜನರೂ ಅವರನ್ನು ಗೌರವಿಸುತ್ತಿದ್ದರು. ಸ್ವಾಮಿಗಳಿಗೆ ಇಂಗ್ಲಿಷ್ ಸಂಸ್ಕೃತ ಭಾಷೆಗಳಲ್ಲಿ ತುಂಬಾ ಪಾಂಡಿತ್ಯವಿತ್ತು. ಪಂಡಿತರ ಸಭೆಗಳಲ್ಲಿ ಸಂಸ್ಕೃತದಲ್ಲಿಯೇ ಚರ್ಚೆ ಮಾಡುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್‌ನಲ್ಲಿ ಉಪನ್ಯಾಸ ಮಾಡುತ್ತಿದ್ದರು. ಅವರಿಗೆ ಹಿಂದಿ, ಗುಜರಾಥಿ, ಮರಾಠಿ, ತಮಿಳು, ತೆಲುಗು, ಕನ್ನಡ ಮುಂತಾದ ಭಾಷೆಗಳು ಚೆನ್ನಾಗಿ ಪರಿಚಯವಿತ್ತು. ಆ ಭಾಷೆಗಳಲ್ಲಿ ಅವರು ಉಪನ್ಯಾಸಗಳನ್ನು ಮಾಡುತ್ತಿದ್ದರು.

ಸ್ವಾಮಿಗಳು ವೇದಾಂತ, ಪಾಶ್ಚಾತ್ಯ ತತ್ವಶಾಸ್ತ್ರ, ತರ್ಕ, ಮೀಮಾಂಸ, ಅಲಂಕಾರಶಾಸ್ತ್ರ, ಆಯುರ್ವೇದ ಶಾಸ್ತ್ರ, ಜೋತಿಷ್ಯ ಮುಂತಾದ ವಿವಿಧವಿಷಯಗಳಲ್ಲಿ ಪರಿಣತರಾಗಿದ್ದರು. ಗಣಿತ ಶಾಸ್ತ್ರದಲ್ಲಿಯೂ, ವಿಜ್ಞಾನ ಶಾಸ್ತ್ರದಲ್ಲಿಯೂ ಸಮಾಜ ಶಾಸ್ತ್ರದಲ್ಲಿಯೂ ಅವರು ದೊಡ್ಡ ವಿದ್ವಾಂಸರಾಗಿದ್ದರು. ಯೂರೋಪ್, ಅಮೇರಿಕ ದೇಶಗಳ ಆನೇಕ ಜನ ವಿಜ್ಞಾನಿಗಳು ಸ್ವಾಮಿಗಳ ಸ್ನೇಹಿತರಾಗಿದ್ದರು. ಅವರು ಸ್ವಾಮಿಗಳೊಡನೆ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಸ್ವಾಮಿಗಳು ವೇದಗಳಲ್ಲಿ ವಿಶೇಷವಾಗಿ ಸಂಶೋಧನೆ ಮಾಡಿದ್ದರು. ಅಥರ್ವಣ ವೇದದಲ್ಲಿ ಹತ್ತುವರ್ಷಕ್ಕೂ ಹೆಚ್ಚು ಕಾಲ ಸಂಶೋಧನೆ ಮಾಡಿ, ಗಣಿತಶಾಸ್ತ್ರದ ಹಲವಾರು ಸೂತ್ರಗಳನ್ನು ಕಂಡುಹಿಡಿದಿದ್ದರು. ಆ ಸೂತ್ರಗಳನ್ನು ವಿವರಿಸಿ ಅವುಗಳ ಸಹಾಯದಿಂದ ಗಣಿತಶಾಸ್ತ್ರದ ಅನೇಕ ಸಮಸ್ಯೆಗಳನ್ನು ಬಿಡಿಸಿದ್ದರು. ಅವರು ಈ ವಿಷಯದಲ್ಲಿ ಸಂಶೋಧನೆಗೆ ತೊಡಗಿದ್ದಾಗ ಅನ್ನ ನೀರನ್ನಾಗಲೀ, ವಿಶ್ರಾಂತಿಯನ್ನಾಗಲೀ ಅಪೇಕ್ಷಿಸುತ್ತಿರಲಿಲ್ಲ. ಅವರ ಸಂಶೋಧನೆಯ ಫಲಿತಾಂಶಗಳನ್ನು ಕಂಡು ದೊಡ್ಡ ದೊಡ್ಡ ಪ್ರಾಧ್ಯಾಪಕರೆಲ್ಲ ವಿಸ್ಮಿತರಾಗುತ್ತಿದ್ದರು.

‘‘ಏಕಾಧಿಕೇನ ಪೂರ್ವೇಣ’’  ಎಂಬ ಒಂದು ಸೂತ್ರದ ಸಹಾಯದಿಂದ ಸ್ವಾಮಿಗಳು ನೂರು ಅಂಕಿಗಳ ಒಂದು ಸಂಖ್ಯೆಯನ್ನು ಅಷ್ಟೇ ದೊಡ್ಡದಾದ ಇನ್ನೊಂದು ಸಂಖ್ಯೆಯಿಂದ ಸುಲಭವಾಗಿ ಗುಣಿಸುತ್ತಿದ್ದರು. ಲೆಕ್ಕವನ್ನು ಕಪ್ಪುಹಲಗೆಯ ಮೇಲೆ ಬರೆಯುತ್ತಿದ್ದಂತೆಯೇ ಅದರ ಉತ್ತರವನ್ನು ಬರೆದುಬಿಡುತ್ತಿದ್ದರು. ಸ್ವಾಮಿಗಳು ಬರೆದ ಉತ್ತರ ಸರಿಯೋ ತಪ್ಪೋ ಎಂದು ತಿಳಿಯಲು, ಇತರರು ಗಂಟೆಗಳ ಕಾಲ ಹೆಣಗಾಡಬೇಕಾಗುತ್ತಿತ್ತು. ಇದೇ ರೀತಿಯಲ್ಲಿ ಕೂಡುವುದನ್ನೂ, ಕಳೆಯುವುದನ್ನೂ, ಭಾಗಿಸುವುದನ್ನೂ ಸುಲಭವಾಗಿ ಮಾಡಬಹುದೆಂದು ಸ್ವಾಮಿಗಳು ಹೇಳುತ್ತಿದ್ದರು. ಉದಾಹರಣೆಗಳ ಮೂಲಕ ಮಾಡಿ ತೋರಿಸುತ್ತಿದ್ದರು.

ಈ ಸೂತ್ರಗಳ ಸಹಾಯದಿಂದ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರವನ್ನು ಸುಲಭವಾಗಿ ಬೋಧಿಸಬಹುದೆಂದು ಸ್ವಾಮಿಗಳು ಹೇಳುತ್ತಿದ್ದರು. ಕುತೂಹಲದಿಂದ ಬಂದ ಹಲವು ವಿದ್ಯಾರ್ಥಿಗಳಿಗೆ ಈ ಹೊಸರೀತಿಯ ಬೋಧನಾ ಕ್ರಮವನ್ನು ಅನುಸರಿಸಿ ಪಾಠವನ್ನು ಹೇಳಿಯೂ ಇದ್ದರು. ಅನೇಕ ಜನ ಪ್ರಾಧ್ಯಾಪಕರು ಸ್ವಾಮಿಗಳಲ್ಲಿಗೆ ಹೋಗಿ ಗಣಿತಶಾಸ್ತ್ರದ ಜಟಿಲವಾದ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಕಠಿಣವಾದ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಸ್ವಾಮಿಗಳ ಸಹಾಯವನ್ನು ಪಡೆಯುತ್ತಿದ್ದರು. ಪ್ರಾಚೀನ ಖಗೋಳ ವಿಜ್ಞಾನವನ್ನು ಆಳವಾಗಿ ಅಭ್ಯಾಸ ಮಾಡಿದ್ದರು.

ಸ್ವಾಮಿಗಳು ಹತ್ತಾರು ವರ್ಷಗಳ ಕಾಲ ಸಂಶೋಧನೆ ನಡೆಸಿ ಬರೆದಿದ್ದ ಗಣಿತಶಾಸ್ತ್ರದ ಪುಸ್ತಕಗಳು ಐದುಸಾವಿರ ಪುಟಗಳಷ್ಟಿವೆ. ಅವುಗಳಲ್ಲಿ ಒಂದು ಪುಸ್ತಕ ಮಾತ್ರ ಅಚ್ಚಾಗಿದೆ. ಉಳಿದ ಪುಸ್ತಕಗಳು ಇನ್ನೂ ಅಚ್ಚಾಗಬೇಕು. ಅಚ್ಚಾಗಿರುವ ಪುಸ್ತಕವೂ ಸಹ ಗಣಿತಶಾಸ್ತ್ರಜ್ಞರಿಗೆ ಕಬ್ಬಿಣದ ಕಡಲೆಯಂತಿದೆ.

ಸ್ವಾಮಿಗಳು ಆಯುರ್ವೇದದಲ್ಲಿ ಸಂಶೋಧನೆ ನಡೆಸಿದ್ದರು. ರೋಗಿಗಳ ನಾಡಿಯ ಮಿಡಿತವನ್ನು ಸೂಕ್ಷ ವಾಗಿ ಪರೀಕ್ಷಿಸಿ ಕಾಯಿಲೆಯ ಕಾರಣವನ್ನು ಕಂಡುಹಿಡಿಯುತ್ತಿದ್ದರು. ಅನಂತರ ಸುಲಭವಾದ ಚಿಕಿತ್ಸೆಗಳನ್ನು ಹೇಳುತ್ತಿದ್ದರು. ಔಷಧಿಯನ್ನೂ, ಪಥ್ಯವನ್ನೂ, ಹೇಳುತ್ತಿದ್ದರು. ಸ್ವಾಮಿಗಳು ವಾರದಲ್ಲಿ ಹಲವು ದಿನಗಳನ್ನು ರೋಗಿಗಳನ್ನು ಪರೀಕ್ಷಿಸುವುದಕ್ಕೆಂದು ಮೀಸಲಾಗಿಟ್ಟಿದ್ದರು. ಆಯುರ್ವೇದವನ್ನು ಕುರಿತು ಸ್ವಾಮಿಗಳು ಪುಸ್ತಕವನ್ನು ಬರೆದಿರುವರು. ಅದು ಇನ್ನೂ ಅಚ್ಚಾಗಿಲ್ಲ.

ಲೇಖಕರು

ಸ್ವಾಮಿಗಳು ಬರೆದ ಅನೇಕ ಲೇಖನಗಳು ಇಂಗ್ಲಿಷಿನಲ್ಲಿಯೂ, ಇತರ ಭಾಷೆಗಳಲ್ಲಿಯೂ ಪ್ರಕಟವಾಗಿವೆ. ‘ಸನಾತನ ಧರ್ಮ’ ಎಂಬ ಅವರ ಪುಸ್ತಕವು ಇಂಗ್ಲಿಷಿನಲ್ಲಿ ಪ್ರಕಟವಾಗಿದೆ. ಅವರು ಹಿಂದೂಧರ್ಮದ ರೂಪರೇಷೆಗಳನ್ನು ಅದರಲ್ಲಿ ವಿವರಿಸಿದ್ದಾರೆ. ನಮ್ಮ ಧರ್ಮದಲ್ಲಿರುವ ಆಚಾರಗಳನ್ನು ವೈಜ್ಞಾನಿಕ ದೃಷ್ಟಿಯಿಂದ ವಿಮರ್ಶಿಸಿದ್ದಾರೆ. ‘ವೇದಿಕ್ ಮ್ಯಾಥ್‌ಮ್ಯಾಟಿಕ್ಸ್’ ಎಂಬ ಅವರ ಪುಸ್ತಕ ಗಣಿತಶಾಸ್ತ್ರದ ಉದ್ಗ ಂಥವಾಗಿದೆ. ಅವರ ಅನೇಕ ಪುಸ್ತಕಗಳು ಇನ್ನೂ ಪ್ರಕಟವಾಗಬೇಕಾಗಿದೆ. ಹಲವಾರು ಪುಸ್ತಕಗಳು ಹಿಂದಿ, ಗುಜರಾಥಿ, ಮರಾಠಿ ಭಾಷೆಗಳಲ್ಲಿ ಪ್ರಕಟವಾಗಿವೆ.

ಸ್ವಾಮಿಗಳ ಭಾಷಣಗಳೂ, ಸಂಭಾಷಣೆಗಳೂ ಕನ್ನಡದಲ್ಲಿಯೂ ಪ್ರಕಟವಾಗಿವೆ. ಅವರು ಆಗಿಂದಾಗ್ಗೆ ಸಂಸ್ಕೃತದಲ್ಲಿ  ರಚಿಸಿದ ಸ್ತೋತ್ರಗಳೆಲ್ಲವೂ ‘‘ಭಾರತೀ ಕಂಠಹಾರ‘‘ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.

ಸ್ವಾಮಿಗಳು ಬರೆದ ಕೊನೆಯ ಪುಸ್ತಕವೇ ‘ಎಕ್ಲೀಸಿ ಯಾಸ್ಟಿಕಲ್ ಎಡಿಕ್ಟ್’ ಎಂಬ ಪುಟ್ಟ ಪುಸ್ತಕ.

‘ಹಿಂದುವಾಗಿ ಹುಟ್ಟದಿರುವವರು ಹಿಂದೂಧರ್ಮಕ್ಕೆ ಸೇರಲು ಅವಕಾಶ ಉಂಟೆ, ಇಲ್ಲವೆ?’ ಎಂಬ ಸಮಸ್ಯೆ ಬಹಳ ಕಾಲದಿಂದ ಚರ್ಚಿಸಲ್ಪಡುತ್ತಿದೆ. ಭಾರತೀಕೃಷ್ಣ ತೀರ್ಥರು ಈ ವಿಚಾರವನ್ನು ವಿಮರ್ಶಿಸಿ ಈ ಪುಸ್ತಕದಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಕೊಟ್ಟಿದ್ದಾರೆ.

ವಿಶಾಲದೃಷ್ಟಿ

ವೇದಧರ್ಮಕ್ಕೆ – ಹಿಂದು ಮತಕ್ಕೆ – ಸೇರಲು ಅಪೇಕ್ಷೆಯುಳ್ಳವರನ್ನು ಅದರಲ್ಲಿ ಪ್ರವೇಶಿಸಲು ಸ್ವಾಗತಿಸುವಂತೆ ಮಾಡುವುದೇ ಈ ಧಾರ್ಮಿಕ ಅನುಶಾಸನದ ಗುರಿ. ವೇದ, ಉಪನಿಷತ್ತು, ಸ್ಮೃತಿಗಳು ಮತ್ತು ಪುರಾಣಗಳನ್ನು ಸ್ವಾಮಿಗಳು ಆಧಾರವಾಗಿಟ್ಟುಕೊಂಡು ಮತಪರಿವರ್ತನಕ್ಕೆ ಅವಕಾಶ ಉಂಟು ಎಂದು ತೋರಿಸಿಕೊಟ್ಟಿದ್ದಾರೆ. ವೈದಿಕ ಧರ್ಮವು ವಿಶ್ವಧರ್ಮವೆಂದೂ ಅದರಲ್ಲಿ ಸೇರಲು ಎಲ್ಲರಿಗೂ ಅವಕಾಶವುಂಟೆಂದೂ ದೃಷ್ಟಾಂತಪೂರ್ವಕವಾಗಿ ವಿವರಿಸಿದ್ದಾರೆ ಇದು ತುಂಬಾ ಮಹತ್ವಪೂರ್ಣವಾದ ಘೋಷಣೆ.

ಪುರಿಯ ಶ್ರೀ ಜಗನ್ನಾಥಸ್ವಾಮಿಯ ದೇವಾಲಯದ ಪ್ರವೇಶದ ವಿಚಾರದಲ್ಲಿಯೂ ಸ್ವಾಮಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹಿಂದೂ ಧರ್ಮದಲ್ಲಿ ಶ್ರದ್ಧೆ ಗೌರವ ಮತ್ತು ನಂಬಿಕೆ ಇರುವ ಯಾರೇ ಆಗಲಿ ಶ್ರೀ ಜಗನ್ನಾಥ ದೇವಾಲಯವನ್ನು ಪ್ರವೇಶ ಮಾಡಬಹುದು, ದೇವರದರ್ಶನ ಮಾಡಬಹುದು ಎಂದು ಸ್ವಾಮಿಗಳು ಅಪ್ಪಣೆ ಮಾಡಿದ್ದಾರೆ. ಇದು ಹಿಂದೂ ಜನಾಂಗದ ಎಲ್ಲರಿಗೂ ಅನ್ವಯಿಸುತ್ತದೆ. ಪಾಶ್ಚಾತ್ಯ ಪ್ರವಾಸಿಗಳು ಭಕ್ತಿಯಿಂದ ಬಂದಲ್ಲಿ ಅವರಿಗೂ ದೇವಾಲಯ ಪ್ರವೇಶಕೊಡಬೇಕೆಂದು  ಸ್ವಾಮಿಗಳು ಬರೆದಿದ್ದಾರೆ.

ಅಮೆರಿಕದಲ್ಲಿ

ಸ್ವಾಮಿ ವಿವೇಕಾನಂದರು ಮತ್ತು ಸ್ವಾಮಿ ರಾಮತೀರ್ಥರು ಅಮೆರಿಕ ದೇಶದಲ್ಲಿ ಭಾರತದ ಧರ್ಮವನ್ನು ಪ್ರಚಾರ ಮಾಡಿದ್ದರಷ್ಟೆ. ಅವರ ನಂತರ ಭಾರತದಿಂದ ಹಲವಾರು ಮಹಾಪುರುಷರು ಅಮೆರಿಕಕ್ಕೆ ಹೋಗಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿದರು. ಅಂತಹವರಲ್ಲಿ

ಶ್ರೀ ಪರಮಹಂಸ ಯೋಗಾನಂದರು ಅಗ್ರಗಣ್ಯರು. ಅವರು  ಭಾರತೀಯ ಯೋಗ ಮತ್ತು ವೇದಾಂತಗಳನ್ನು ಪ್ರಸಾರ ಮಾಡಲು ಲಾಸ್‌ಏಂಜಲೀಸ್‌ನಲ್ಲಿ ‘ಸೆಲ್ಫ್ ರಿಯಲೈಜೇಷನ್ ಫೆಲೋಷಿಪ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸಾವಿರಾರು ಜನ ಅಮೆರಿಕದ ಪ್ರಜೆಗಳಿಗೆ ಯೋಗ ವೇದಾಂತಗಳಲ್ಲಿ ಶಿಕ್ಷಣ ಕೊಡುತ್ತಿದ್ದರು. ಪರಮಹಂಸ ಯೋಗಾನಂದರು ಪುರೀ ಶಂಕರಮಠದ ಸಂಪ್ರದಾಯಕ್ಕೆ ಸೇರಿದ್ದ ಸಂನ್ಯಾಸಿ. ಅವರ ಶಿಷ್ಯರು ಭಾರತೀಕೃಷ್ಣ ತೀರ್ಥರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನಿಸಿದರು. ಸನಾತನಧರ್ಮ, ಭಾರತೀಯ ಸಂಸ್ಕೃತಿ ಮತ್ತು ವೇದಾಂತವನ್ನು ಕುರಿತು ಉಪನ್ಯಾಸಗಳನ್ನು ಕೊಡಬೇಕೆಂದು ಕೇಳಿಕೊಂಡರು. ಆಗ ಸ್ವಾಮಿಗಳ ಆರೋಗ್ಯ ಅಷ್ಟು ತೃಪ್ತಿಕರವಾಗಿರಲಿಲ್ಲ; ಆದರೂ ಈ ಆಹ್ವಾನಕ್ಕೆ ಒಪ್ಪಿಕೊಂಡರು.

೧೯೫೮ ರಲ್ಲಿ ಸ್ವಾಮಿಗಳು ಮಿತಪರಿವಾರದೊಡನೆ ಅಮೆರಿಕಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಶ್ರೀ ಶಂಕರಾಚಾರ‍್ಯರು ಸ್ಥಾಪಿಸಿದ ನಾಲ್ಕು ಪೀಠದ ಜಗದ್ಗುರುಗಳಲ್ಲಿ ಹಿಂದೆ ಯಾರೂ ವಿಮಾನದಲ್ಲಿ ಪಾಶ್ಚಾತ್ಯ ದೇಶಗಳಿಗೆ ಪ್ರವಾಸ ಮಾಡಿರಲಿಲ್ಲ.

ಸ್ವಾಮಿಗಳು ಮೂರುತಿಂಗಳ ಕಾಲ ಅಮೆರಿಕದಲ್ಲಿ ಸಂಚರಿಸಿದರು. ಅನೇಕ ಕಾಲೇಜುಗಳು, ವಿಶ್ವವಿದ್ಯಾ ಲಯಗಳು, ಚರ್ಚುಗಳಲ್ಲಿ ಭಾಷಣ ಮಾಡಿದರು. ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರಗಳನ್ನು ಕುರಿತು ಸಭಿಕರು ಕೇಳಿದ ಪ್ರಶ್ನೆಗಳಿಗೆಲ್ಲ ವಿವರಣೆಯನ್ನು ಕೊಟ್ಟರು. ಭಾರತೀಕೃಷ್ಣತೀರ್ಥರು ಗಣಿತಶಾಸ್ತ್ರವನ್ನು ಕುರಿತೂ ಉಪನ್ಯಾಸಗಳನ್ನು ಮಾಡಿದರು. ಆರ್ನಲ್ಡ್ ಟಾಯನ್‌ಬಿ ಎಂಬಾತ ಕಳೆದ ಐವತ್ತು ವರ್ಷಗಳಲ್ಲಿ ಪಾಶ್ಚಾತ್ಯ ದೇಶಗಳ ಒಬ್ಬ ಬಹುಪ್ರಸಿದ್ಧ ಚರಿತ್ರಕಾರ. ಚರಿತ್ರೆಯನ್ನು ಅಭ್ಯಾಸ ಮಾಡುವುದರಲ್ಲಿಯೇ ಹೊಸದೊಂದು ಮಾರ್ಗವನ್ನು ಈತ ತೋರಿಸಿದ ಎಂದು ಇವನ ಖ್ಯಾತಿ. ಅಮೆರಿಕದಲ್ಲಿ ‘ವಿಶ್ವಶಾಂತಿ’  ಎಂಬ ವಿಷಯದ ಮೇಲೆ ಒಂದು ವಿಚಾರ ಸಂಕಿರಣ ನಡೆಯಿತು. ಟಾಯನ್‌ಬಿ ಮತ್ತು ಭಾರತೀಕೃಷ್ಣತೀರ್ಥರು ಇಬ್ಬರೂ ಭಾಗವಹಿಸಿ ಮಾತನಾಡಿದರು. ಅಮೆರಿಕದಿಂದ ಹಿಂದಿರುಗುವ ದಾರಿಯಲ್ಲಿ  ಸ್ವಾಮಿಗಳು ಇಂಗ್ಲೆಂಡಿಗೂ ಭೇಟಿ ಕೊಟ್ಟಿದ್ದರು. ಅಲ್ಲಿಯೂ ಹಲವಾರು ಉಪನ್ಯಾಸಗಳನ್ನು ಕೊಟ್ಟರು. ಸ್ವಾಮಿಗಳ ಈ ಭಾಷಣಗಳು ಪಾಶ್ಚಾತ್ಯರಲ್ಲಿ ನಮ್ಮ ಸಂಸ್ಕೃತಿ ನಾಗರಿಕತೆಗಳ ಬಗೆಗೆ ಸದ್ಭಾವನೆಯನ್ನು ಮೂಡಿಸಿತು.

ವಿಶ್ವಪುನರ್ನಿರ್ಮಾಣ ಸಂಘ

ಸ್ವಾಮಿಗಳವರಿಗೂ ಅರವಿಂದ ಮಹರ್ಷಿಗಳಿಗೂ ತುಂಬಾಸ್ನೇಹವಿತ್ತು. ಹಿಂದೆ ಬರೋಡಾದಲ್ಲಿ ಇದ್ದಾಗ ಸ್ವಾಮಿಗಳು ಅವರೊಡನೆ ಸ್ವಲ್ಪಕಾಲ ಕೆಲಸ ಮಾಡಿಯೂ ಇದ್ದರು. ಸ್ವಾಮಿಗಳ ಪಾಂಡಿತ್ಯವನ್ನೂ, ಪ್ರತಿಭೆಯನ್ನೂ ಅರವಿಂದರು ತುಂಬಾ ಮೆಚ್ಚಿಕೊಂಡಿದ್ದರು. ಆಧ್ಯಾತ್ಮಿಕ ವಿಷಯಗಳಲ್ಲಿ, ರಾಷ್ಟ್ರೀಯ ವಿಷಯಗಳಲ್ಲಿ, ಸಾಮಾಜಿಕ  ವಿಷಯಗಳಲ್ಲಿ ಜನಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅದಕ್ಕಾಗಿ, ಒಂದು ಸಂಸ್ಥೆಯನ್ನು ಸ್ಥಾಪಿಸಬೇಕು. ಎಂಬುದಾಗಿ ಅರವಿಂದರು ಸ್ವಾಮಿಗಳಿಗೆ ಒಂದು ಸೂಚನೆ ನೀಡಿದ್ದರು. ಸ್ವಾಮಿಗಳ ಶಿಷ್ಯರೂ ಈ ವಿಷಯವಾಗಿ ತಮ್ಮ ಕೋರಿಕೆಯನ್ನು ಸ್ವಾಮಿಗಳಲ್ಲಿ ಹೇಳಿಕೊಂಡಿದ್ದರು.

ಅದರಂತೆ ಸ್ವಾಮಿಗಳು ೧೯೫೫ರಲ್ಲಿ ನಾಗಪುರದಲ್ಲಿ ‘ವಿಶ್ವಪುನರ್ನಿರ್ಮಾಣ ಸಂಘ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಘಕ್ಕೆ ಸ್ವಾಮಿಗಳ ಅನೇಕ ಜನ ಶಿಷ್ಯರು ಸದಸ್ಯರಾದರು. ಪ್ರತಿಯೊಬ್ಬ ವ್ಯಕ್ತಿಯೂ ತಾನೊಬ್ಬ ಪ್ರಗತಿ ಹೊಂದಿದರೆ ಸಾಲದು, ತನ್ನ ಜನವೂ ಪ್ರಗತಿ ಹೊಂದಬೇಕು, ತನ್ನ ಸಮಾಜವೂ ಪ್ರಗತಿ ಹೊಂದಬೇಕು, ತನ್ನ ದೇಶವೂ ಪ್ರಗತಿಹೊಂದಬೇಕು ಎಂಬುದನ್ನು ತಿಳಿದುಕೊಳ್ಳಬೇಕು, ಅದಕ್ಕಾಗಿ ಶ್ರಮಿಸಬೇಕು ಎಂದು ಸ್ವಾಮಿಗಳು ಆ ಸಂಸ್ಥೆಯ ಸದಸ್ಯರಿಗೆ ಸೂಚನೆಯನ್ನು ಕೊಟ್ಟಿದ್ದರು.

ಸ್ವಾಮಿಗಳು ಎಡೆಬಿಡದೆ ಕೆಲಸಮಾಡುತ್ತಿದ್ದರು. ಅವರು ಜಗದ್ಗುರುಗಳಾಗಿದ್ದುದರಿಂದ ನಾನಾ ರೀತಿಯ ಜನ ಅವರ ಬಳಿಗೆ ಬರುತ್ತಿದ್ದರು. ಕಷ್ಟ ಸಂಕಟ ತೊಂದರೆಗಳಿಂದ ಬಳಲುತ್ತಿದ್ದ ಜನ ಅವರ ಸಹಾಯಕ್ಕಾಗಿ ಬರುತ್ತಿದ್ದರು. ಔಷಧಿಗಳಿಗಾಗಿ ಬೇಡುತ್ತಿದ್ದರು. ಸ್ವಾಮಿಗಳದು ವಿಶ್ವಕುಟುಂಬವಾಗಿತ್ತು. ಅವರ ಕಾಲವೆಲ್ಲ ಜಪತಪ, ಓದುಬರಹ, ಶಿಷ್ಯರ ಸಮಸ್ಯೆಗಳ ಪರಿಹಾರ ಇವುಗಳಿಗೆ ವ್ಯಯವಾಗುತ್ತಿತ್ತು. ದಿನಕ್ಕೆ  ನಾಲ್ಕೆ ದು ಗಂಟೆಗಳ ಕಾಲ ವಿರಾಮವೂ ಅವರಿಗೆ ಸಿಕ್ಕುತ್ತಿರಲಿಲ್ಲ.

ಮಹಾಸಮಾದಿ

ಅಮೆರಿಕದಿಂದ ಹಿಂತಿರುಗಿದನಂತರ ಸ್ವಾಮಿಗಳ ಅನಾರೋಗ್ಯ ಹೆಚ್ಚುತ್ತಾ ಬಂದಿತು. ಅವರು ಔಷಧಿ ಚಿಕಿತ್ಸೆಗಳಿಗೆ ಗಮನಕೊಡಲಿಲ್ಲ. ತಮ್ಮನ್ನು ಕಾಣಲು ಬಂದವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಅವರ ದುಃಖಸಂಕಟಗಳಿಗೆ ಪರಿಹಾರ ಹುಡುಕುತ್ತಿದ್ದರು. ಆರೋಗ್ಯ ದಿನದಿನಕ್ಕೆ ಹಾಳಾಗುತ್ತ ಬಂದಿತು. ಶಿಷ್ಯರಿಗೆಲ್ಲ ಚಿಂತೆಯಾಯಿತು. ಜನ ಸಂಪರ್ಕದಿಂದ ಸ್ವಾಮಿಗಳನ್ನು ದೂರವಿಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಒತ್ತಾಯದಿಂದ ಸ್ವಾಮಿಗಳನ್ನು ಮುಂಬಯಿಗೆ ಕರೆದುಕೊಂಡು ಬಂದರು. ಪ್ರಸಿದ್ಧ ವೈದ್ಯರಿಂದ ಚಿಕಿತ್ಸೆ ಆರಂಭವಾಯಿತು. ಸ್ವಾಮಿಗಳು ಶಿಷ್ಯರ ಒತ್ತಾಯದಿಂದ ಔಷಧಿಯನ್ನು ಸ್ವೀಕರಿಸುತ್ತಿದ್ದರು. ಅವರಿಗೆ ತಮ್ಮ ಅಂತ್ಯಕಾಲ ಸಮೀಪಿಸುತ್ತಿದೆಯೆಂದು ಗೊತ್ತಾಗಿತ್ತು.

ಸ್ವಲ್ಪಕಾಲ ಚಿಕಿತ್ಸೆ ಮುಂದುವರೆಯಿತು. ಯಾವ ಪರಿಣಾಮವೂ ಕಾಣಲಿಲ್ಲ. ೧೯೬೦ನೆಯ ಫೆಬ್ರವರಿಯಲ್ಲಿ ಶ್ರೀ ಭಾರತೀಕೃಷ್ಣತೀರ್ಥ ಸ್ವಾಮಿಗಳು ಶಾಂತವಾಗಿ, ಸಮಾಧಾನ ಚಿತ್ತದಿಂದ ಮಹಾಸಮಾಧಿ ಹೊಂದಿದರು.

ದೇವರು, ದೇಶ, ಗುರು, ರಾಷ್ಟ್ರ ಇವೆಲ್ಲವೂ ಅವರಿಗೆ ಸಮಾನವಾಗಿದ್ದವು. ದೇಶ ಸೇವೆಯೇ ಈಶ ಸೇವೆಯೆಂದು ಅವರು ನಂಬಿದ್ದರು. ನಿಸ್ವಾರ್ಥಿಗಳೂ ಪ್ರಾಮಾಣಿಕರೂ ಸತ್ಯವಂತರೂ ಆದವರು ಮಾತ್ರವೇ ದೇಶಸೇವೆ ಮಾಡಲು ಅರ್ಹರೆಂದು ಸ್ವಾಮಿಗಳು ನುಡಿದಿದ್ದರು.

ಜ್ಞಾನ, ಪ್ರಗತಿಶೀಲತೆ, ಅನುಕಂಪ

ಭಾರತೀಕೃಷ್ಣತೀರ್ಥರು ಹಿಂದೂ ಧರ್ಮ ಗ್ರಂಥಗಳನ್ನು ಪ್ರಾಚೀನ ಗಣಿತ, ಖಗೋಳ ಶಾಸ್ತ್ರ ಮೊದಲಾದ ಶಾಸ್ತ್ರಗಳನ್ನೂ ಅಭ್ಯಾಸ ಮಾಡಿದ್ದರು. ಹಾಗೆಯೇ ತಮ್ಮ ಜೀವನದ ಕೊನೆವರೆಗೂ ಭೌತಶಾಸ್ತ್ರ ಮೊದಲಾದ ಜ್ಞಾನ ವಿಭಾಗಗಳಲ್ಲಿ ಇತ್ತೀಚೆಗಿನ ಸಂಶೋಧನೆಗಳ ವಿಷಯಗಳನ್ನು ಓದುತ್ತಿದ್ದರು. ತಾರುಣ್ಯದ ಪ್ರಾರಂಭದಲ್ಲಿ ಇಂಗ್ಲಿಷ್, ಚರಿತ್ರೆ, ಸಂಸ್ಕೃತ, ಗಣಿತ ಹೀಗೆ ವಿಜ್ಞಾನವೂ ಸೇರಿದಂತೆ ಏಳು ವಿಷಯಗಳಲ್ಲಿ ಮೊದಲ ತರಗತಿಯಲ್ಲಿ ಎಂ.ಎ. ಮಾಡಿದ ಭಾರತೀಕೃಷ್ಣತೀರ್ಥರು ಕಡೆಯವರೆಗೆ ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತಿ ಇಟ್ಟುಕೊಂಡೇ ಇದ್ದರು. ಸಂನ್ಯಾಸ ತಮ್ಮ ಸುಖದ ಮಟ್ಟಿಗೆ, ಆದರೆ ಇತರರ ಕಷ್ಟಸುಖಗಳಲ್ಲಿ ಅಂತಃಕರಣದಿಂದ ಪಾಲುಗೊಂಡವರು. ಧರ್ಮದ ರೀತಿ, ಮೋಕ್ಷದ ದಾರಿ ಹೇಳಿಕೊಟ್ಟ ಮಠಾಧಿಪತಿಗಳು ಮಾತ್ರವೇ ಆಗಿರಲಿಲ್ಲ; ದೇಶದ ಸ್ವಾತಂತ್ರ ದ ದಾರಿ ತೋರಿಸಿಕೊಟ್ಟವರು. ರೋಗಿಗಳಿಗೆ ಔಷಧ ಕೊಟ್ಟು ಗುಣಪಡಿಸಿದವರು. ಭಾರತದ ಇತಿಹಾಸ, ಧರ್ಮಶಾಸ್ತ್ರಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದವರು. ಸಮುದ್ರ ಪ್ರಯಾಣ ಮಾಡಿದರೆ ಜಾತಿ ಕೆಡುತ್ತದೆ ಎಂಬ ಮೂಢನಂಬಿಕೆಯನ್ನು ಅಲ್ಲಗಳೆದು ತಾವೇ ಬೇರೆ ದೇಶಗಳಿಗೆ ಹೋದರು. ಹಿಂದುಗಳಲ್ಲಿ ಕೆಲವರು ಅಸ್ಪೃಶ್ಯರು (ಮುಟ್ಟಬಾರದವರು), ಅವರು ದೇವಾಲಯಗಳನ್ನು ಪ್ರವೇಶಿಸಬಾರದು ಎಂಬ ತಪ್ಪು ನಂಬಿಕೆಯನ್ನು ತಳ್ಳಿ ಹಾಕಿದರು.

ಸ್ವಾಮಿಗಳ ಶಿಷ್ಯವರ್ಗದಲ್ಲಿ ಹಿಂದುಗಳು, ಕ್ರೆ ಸ್ತರು, ಮುಸ್ಲಿಮರು ಎಲ್ಲರೂ ಇದ್ದರು. ಸ್ವಾಮಿಗಳು ಹಿಂದೂ ಧರ್ಮದ ವೇದಶಾಸ್ತ್ರಗಳನ್ನು ವ್ಯಾಸಂಗ ಮಾಡಿದಂತೆಯೇ ಇತರ ಮತಗಳ ಬೈಬಲ್, ಖುರಾನ್‌ಗಳನ್ನು ಓದಿದ್ದರು ಜನಗಳಲ್ಲಿ ಉಚ್ಚನೀಚ ಭೇದವಿಲ್ಲದೆ ಎಲ್ಲರಲ್ಲಿಯೂ ಅವರು ಸಮಾನವಾದ ಪ್ರೀತಿವಿಶ್ವಾಸವನ್ನು ತೋರುತ್ತಿದ್ದರು. ಅವರ ಗುರುಭಕ್ತಿ, ದೈವಭಕ್ತಿ ಇವು ಶ್ರೇಷ್ಠವಾಗಿದ್ದವು. ಅವರ ಲೋಕ ಕಾರುಣ್ಯ, ಅನುಗ್ರಹ ಇವು ಅನುಪಮವಾಗಿದ್ದವು