ತನ್ನನ್ನು ಕವಿದಿದ್ದ ಮಂಕನ್ನು ಹರಿದುಕೊಳ್ಳಲು ಬೆಳಿಗ್ಗೆ ಎದ್ದವನೇ ಜಗನ್ನಾಥ ಗೇರುಗುಡ್ಡ ಹತ್ತಿಹೋದ. ಮಾರ್ಗರೆಟ್‌ಗೆ ಬರೆಯಬೇಕೆಂದಿದ್ದ ಕಾಗದದ ಮಾತಿನ ತುಣುಕುಗಳು ಮನಸ್ಸಿಗೆ ಬರತೊಡಗಿದವು; ಡೆಸ್ಪರೇಟ್ ಆಗಿ ನಾನು ಕ್ರಿಯೆಗೆ ತೊಡಗಿದ್ದೇನೆ. ಹೊಲೆಯರ ಜೊತೆ ಸಾಧ್ಯವಾಗುವ ಮಾತುಗಳಲ್ಲಿ ಮತ್ತೆ ನಾನು ಕುಡಿಯೊಡೆದು ಚಿಗುರಿಯೇನು, ಊರು ಚಿಗುರೀತು. ಚಾವಡಿಯ ಮೇಲೆ ಪಟ್ಟಂಗೆ ಹರಟುತ್ತಿದಾಗ ನಾಗಮಣಿ ತನ್ನ ಪಾಡಿಗೆ ತಾನು ನಿಶ್ಚಯಿಸಿಬಿಟ್ಟಿದ್ದು ನೋಡಿದರೆ –

ಆದರೆ ನಾಗಮಣಿಯ ಕ್ರಿಯೆಯ ಅರ್ಥ ಜಗನ್ನಾಥನಿಗೆ ಸಂಪೂರ್ಣ ಹೊಳೆಯುವುದಿಲ್ಲ. ತುಂಬ ಆರ್ತನಾಗಿ ತಾನು ಒಡ್ಡಿಕೊಂಡು ನಿಂತಂತೆ, ಈ ಒಡ್ಡಿ ಕೊಂಡಿರುವ ದಿಕ್ಕಿನಲ್ಲಿ ಪ್ರಾಯಶಃ ಏನೂ ಇಲ್ಲವೆನ್ನಿಸಿ ಹಾಸ್ಯಾಸ್ಪದವಾದಂತೆ. ಅದೂ ಅಲ್ಲ. ಮತ್ತೆ? ನಿಂತಳು. ಬಗ್ಗಿದಳು. ಬಡಿಸಿದಳು. ಹತ್ತಿದಲು. ಹಗ್ಗಕ್ಕೆ ಕುಣಿಕೆ ಹಾಕಿ ಏಣಿಯನ್ನೊದ್ದಳು. ಸತ್ತಳು. ಯಾರಿಗೂ ತಿಳಿಯದಂತೆ ಉರಿಯುತ್ತಿದ್ದಳು. ಹಾಗೆಯೇ ನಂದಿಬಿಟ್ಟಳು. ಉರಿಯುತ್ತಿದ್ದವಳು ನಂದಿಬಿಡುವ ನಿಶ್ಚಯ ಮಾಡಿದ್ದು ನೋಡಿದರೆ ನಾನು ಯೋಜಿಸಿರುವ ಕ್ರಿಯೆ ಅಸಂಗತ ಅನ್ನಿಸತ್ತೆ, ನನ್ನ ಒಡ್ಡಿ ಕೊಂಡಿರುವ ಈ ಆರ್ತತೆ ಹಾಸ್ಯಾಸ್ಪದ ಅನ್ನಿಸತ್ತೆ, ನಾನು ವಿಫಲನಾಗುವ ಸಾಧ್ಯತೆ ಕಂಡ ಮಾರ್ಗರೆಟ್ ನೀನು ಹೇಳು. ಈ ಮಂಜುನಾಥ ಲೋಳೆ, ಜೋಯಿಸರು ಲೋಳೆ, ಶಾಸ್ತ್ರಿ ಲೋಳೆ; ಕಾವೇರಿ ನಾಗಮಣಿ ನೀವು ಕೀರಿದಿರಿ, ಹೊಲೆಯರು ಪ್ರಾಯಶಃ ಕೀರುವರು. ಬಿಸಿಲು, ಒಡ್ಡಿದ ಬೆನ್ನು, ಸೇಬಿನ ಮರ, ಬೇಸಿಗೆಯ ಪ್ರಶಾಂತ ಭಾನುವಾರ ನನ್ನನ್ನು ತಿರಸ್ಕರಿಸಿದಾಗ, ಮತ್ತೆ ನಾಗಮಣಿ ನಿನ್ನೆ ನನ್ನನ್ನು ತಿರಸ್ಕರಿಸಿದಾಗ – ನಡೆಯುತ್ತಿದ್ದ ಜಗನ್ನಾಥ ನಿಂತ. ನೆತ್ತಿಯ ಹತ್ತಿರ ಗುಡ್ಡ ಕಡಿದಾಗಿತ್ತು. ಭಾವವಶನಾಗಿ ಮಾಡು ಹುಡುಕುತ್ತ ಯೋಚಿಸುವಾಗ ಮತ್ತೆ ನಾನು ಲೋಳೆ ಲೋಳೆಯಾಗುತ್ತೇನೆ. ಲೋಳೆಯಾದ್ದು ಕೊಕ್ಕು ಪುಕ್ಕ ಗರಿ ಉಗುರುಗಳಾಗುತ್ತವೆಂದು ಆಶಿಸುತ್ತ ಕಾದು ಕೂರುತ್ತೇನೆ. ಬೇನೆಯಾದ್ದು ಮತ್ತೆ ಮತ್ತೆ ಮುಕ್ಕುತ್ತೇನೆ. ನಾನು ಮುಕ್ಕುತ್ತಿದ್ದಾಗ ನಾಗಮಣಿ ಮಹಡಿ ಹತ್ತಿದಳು. ಏಣಿಯನ್ನೊದ್ದು ಸತ್ತಳು. ಬೆಚ್ಚಗಿನ ಸಂದಿಗಳಲ್ಲಿ ಕೂದಲಾಗಿ ಒಡೆಯ ಸುಖ ನಿರೀಕ್ಷಿಸುವ ಯೌವನವನ್ನು ಉಪದ್ರವೆಂದು ನಂದಿಸಿದಳು. ಮಧ್ಯಾಹ್ನ ಮತ್ತೆ ನಾನು ತಿರಸ್ಕೃತನಾದೆ. ಹೀಗೆ ಆರ್ತತೆಯಲ್ಲಿ ಜಿನುಗುತ್ತಿದ್ದರೂ ಲೋಳೆಯಾಗುತ್ತೇನೆ. ಮಂಜುನಾಥನನ್ನು ಎದುರು ಹಾಕಿಕೊಂಡು ನಿಲ್ಲದ ಹೊರ್ತು. ಚರಿತ್ರೆಯಲ್ಲಿ ಇನ್ನೂ ಪದಾರ್ಪಣ ಮಾಡದಿರುವ ಹೊಲೆಯರ ಮನಸ್ಸಿನಲ್ಲಿ ಈ ಜಿನುಗುವ ಮಾತುಗಳು ಬೀಜಗಳಾಗದ ಹೊರ್ತು.

ಜಗನ್ನಾಥ ಗುಡ್ಡದ ನೆತ್ತಿಯ ಮೇಲೆ ನಿಂತು ಭಾರತೀಪುರವನ್ನು ನೋಡಿದ. ಅರ್ಧ ಸ್ವಪ್ನದಲ್ಲಿರುವಂತೆ ಹಿಮವನ್ನು ಹೊದ್ದಿರುವ ಪೇಟೆ. ಈ ಪೇಟೆಯ ಮೇಲೆ ಕಾವು ಕೂತಿರುವ ನನ್ನ ಆರ್ತತೆ ಅರ್ಥಹೀನವಾದ್ದು ಎಂದು ಅನ್ನಿಸತ್ತೆ ಮಾರ್ಗರೆಟ್. ಲೋಳೆಯಾದ ನನ್ನಲ್ಲಿ ನೀನು ಉಗುರು ಕೊಕ್ಕುಗಳನ್ನು ಅಪೇಕ್ಷಿಸಿದ್ದರಿಂದ ನಿನಗೆಲ್ಲ ಹೇಳುತ್ತೇನೆ ಮಾರ್ಗರೆಟ್, ನೀನೂ ಪ್ರಾಯಶಃ ಅರಳುವವಳಲ್ಲ. ಕೂದಲನ್ನು ಕೆನ್ನೆಯಿಂದ ತಳ್ಳಿ ಯಾವುದೋ ಭಯಂಕರ ಸತ್ಯಕ್ಕೆ ಸನ್ನದ್ಧಳಾಗುವಂತೆ ನೀನು ಕೂರುತ್ತೀಯಲ್ಲ, ವಾದದಲ್ಲಿ ಬಿಲ್ವವೃಕ್ಷದಂತೆ ಮುಳ್ಳು ಮುಳ್ಳಾಗುತ್ತೀಯಲ್ಲ – ಇವೆಲ್ಲ ಒಂದು ದಿನ ನಿನಗೂ ಸುಳ್ಳೆನಿಸುತ್ತೆ. ಹೆದರಿಕೆಯಾಗುತ್ತೆ. ಸೂರ್ಯ ನಿನ್ನನ್ನು ತಿರಸ್ಕರಿಸುತ್ತಾನೆ.

ಜಗನ್ನಾಥ ಗುಡ್ಡವಿಳಿದು ಬಂದ. ಮುಖ ತೊಳೆದು ಕಾಫಿ ಕುಡಿದು ಮತ್ತೆ ಮಲಗಿದ. ಯಾರೋ ಬಂದರೆಂದು ಕೆಳಗಿಳಿದು ಹೋದ. ರಾಯರ ಮಗ ರಂಗಣ್ಣ ಬಂದಿದ್ದ. ಅವನ ಕೈಯಲ್ಲಿ ಇನ್ನೂರು ರೂಪಾಯಿ ಕೊಟ್ಟು ‘ಅಮ್ಮನಿಗೆ ಕೊಡು. ಇವತ್ತನಿಂದಲೇ ಕೆಲಸಕ್ಕೆ ಬಾ’ ಎಂದ. ಇನ್ನೊಬ್ಬರು ಕಾದಿದ್ದರು. ಯಾರೋ ರಾಮಕೃಷ್ಣಯ್ಯ, ಬಡಕಲು ಮನುಷ್ಯ. ಎಂಟು ಮಕ್ಕಳಂತೆ. ದೇವಸ್ಥಾನದವರು ಗೇಣಿ ಕೊಡಲಿಲ್ಲವೆಂದು ತೋಟ ಬಿಡಿಸಿದರಂತೆ. ಮನೆ ಜಫ್ತಿ ಮಾಡಿದರಂತೆ. ಜಗನ್ನಾಥ ಕೋರ್ಟಿಗೆ ಹೋಗಿ ಎಂದ. ರಾಮಕೃಷ್ಣಯ್ಯ ನರಪೇತಲನಂತೆ ಮಾತಾಡದೆ ಕೂತ. ನಾನೇನು ಮಾಡಬಲ್ಲೆ ಎಂದ ಜಗನ್ನಾಥ. ಪ್ರಭುಗಳಿಗೆ ಹೇಳಿ ಎಂದು ರಾಮಕೃಷ್ಣಯ್ಯ ಅಂಗಲಾಚಿದ. ಸುಕ್ಕುಬಿದ್ದ ಮುಖ, ಒಂಟಿ, ಕೆದರಿದ ಕ್ರಾಪು, ಗೊಗ್ಗರು ಧ್ವನಿ – ಜಗನ್ನಾಥನಿಗೆ ರಗಳೆಯಾಯಿತು. ಕೇಸು ಹಾಕುವುದಾದರೆ ದುಡ್ಡು ಕೊಡುತ್ತೇನೆ ಎಂದ. ರಾಮಕೃಷ್ಣಯ್ಯ ಉತ್ತರಕೊಡಲಿಲ್ಲ. ‘ಮಕ್ಕಳೊಂದಿಗೆ, ಕೈಬಿಡಬಾರದು’ ಎಂದ. ‘ತಾಕತ್ತಿದ್ದರೆ ಕೋರ್ಟಿಗೆ ಹೋಗಬೇಕು ರಾಮಕೃಷ್ಣಯ್ಯ’ ಎಂದು ಜಗನ್ನಾಥ ರೇಗಿದ. ದೇವಸ್ಥಾನದಲ್ಲಿ ನಿತ್ಯ ಸಿಗುವ ಅನ್ನವೂ ತಪ್ಪೀತೆಂದು ರಾಮಕೃಷ್ಣಯ್ಯ ನಿಟ್ಟುಸಿರಿಟ್ಟ. ಜಗನ್ನಾಥ ತಬ್ಬಿಬ್ಬಾದ. ‘ನನ್ನ ಹತ್ತಿರ ಗೇಣಿಗೆ ಕೊಡುವ ತೋಟವಿಲ್ಲ, ಸಾಗುವಳಿಯಾಗದ ಗದ್ದೆಯಿದೆ. ಕೊಡುತ್ತೇನೆ. ಅಲ್ಪ ಸ್ವಲ್ಪ ಸಹಾಯಮಾಡಬಲ್ಲೆ. ನಾಳೆಯೋ ನಾಡಿದ್ದೋ ಬನ್ನಿ. ನನ್ನದೊಂದು ಕಾಗದ ಪೇಪರಲ್ಲಿ ಬರತ್ತೆ. ಅದನ್ನು ಓದಿ ಬನ್ನಿ’ ಎಂದ. ರಾಮಕೃಷ್ಣಯ್ಯ ಆಗಲಿ ಎಂದು ಕೈಮುಗಿದು ಹೊರಟ. ‘ಊಟ ಮಾಡಿಕೊಂಡು ಹೋಗಿ’ ಎಂದ. ‘ಆಗಬಹುದು’ ಎಂದು ರಾಮಕೃಷ್ಣಯ್ಯ ನಿಂತ. ಜಗನ್ನಾಥ ಮಹಡಿ ಹತ್ತಿ ಯೋಚಿಸಿದ. ಪೇಪರಿನ ವಿಷಯ ರಾಮಕೃಷ್ಣಯ್ಯನಿಗೆ ಯಾಕೆ ಹೇಳಿದೆ? ಅವನಿಗೆ ಸಿಟ್ಟು ಬರುವಂತೆ ನಾನು ಮಾಡಬಲ್ಲೆನೆ? We live in apathy margaret. ನಮ್ಮ ಕನಸುಗಳೆಲ್ಲ ಗೋಟಡಕೆಯ ರಾಶಿಗಳಾಗುತ್ತವೆ. ಚೀಲದಲ್ಲಿ ತುಂಬಿ ಮಂಡಿ ಸೇರುತ್ತವೆ. ಕೆಲವೊಮ್ಮೆ ಅಡಿಕೆಗೆ ಕೊಳೆ ಹಿಡಿದು ಕನಸು ವಿಫಲವಾಗುತ್ತದೆ. ಮುದಿಮರಗಳ ತೋಟಕ್ಕಾದರೂ ರಾಮಕೃಷ್ಣಯ್ಯ ಹಾತೊರೆಯುತ್ತಾನೆ.

ರಾಮಕೃಷ್ಣಯ್ಯನನ್ನು ನೋಯಿಸುವುದಾಗಲೀ ರೇಗಿಸುವುದಾಗಲೀ ಸಾಧ್ಯವೇ ಇಲ್ಲವೆನ್ನಿಸಿತು. ಈ ಪ್ರದೇಶದಲ್ಲಿ ಅಡಿಕೆತೋಟ ಮಾಡುವ ಕನಸನ್ನು ಯಾವತ್ತೂ ಕಾಣದವರೆಂದರೆ ಹೊಲೆಯರು ಮಾತ್ರ. ಈ ನೆಲದಲ್ಲಿ ತಮಗಾಗಿ ಯಾವುದನ್ನೂ ನೆಟ್ಟುಕೊಳ್ಳದೆ, ಸಗಣಿ ಬಾಚಿ ಹೇಲೆತ್ತುವ ಹೊಲೆಯರು ಮಾತ್ರ ಮಂಜುನಾಥನನ್ನು ತಿರಸ್ಕರಿಸಬಲ್ಲರೆನ್ನಿಸಿ ಜಗನ್ನಾಥನಿಗೆ ಮತ್ತೆ ಉತ್ಸಾಹ ಹುಟ್ಟಿತು.

ಮೇಜಿನ ಎದುರು ಜಗನ್ನಾಥ ಬರೆಯಲೆಂದು ಕೂತ.

* * *

ಮಧ್ಯಾಹ್ನ ಯಾತ್ರಿಕರು, ಔಷಧಿಗೆಂದು ಬಂದವರು, ರಾಮಕೃಷ್ಣಯ್ಯ ಇತ್ಯಾದಿ ಜನರ ಜೊತೆ ಕೂತು ಊಟ ಮಾಡಿದ. ಮಹಡಿ ಹತ್ತಿ ತನ್ನ ರೂಮಿಗೆ ಹೋದ. ಹಾಸಿಗೆಯಡಿಯಲ್ಲಿ ಹೊಸ ಸಿಂಗಾರ, ಭೂತರಾಯನ ತಾಯಿತ, ಪೊಟ್ಟಣದಲ್ಲಿ ಮಂಜುನಾಥನ ಕುಂಕುಮ. ನಿತ್ಯ ತಾನು ಹೊಲೆಯರ ಯುವಕರಿಗೆ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡಿಸುವುದನ್ನು ನೋಡಿ ದಿಗಿಲಾದ ಚಿಕ್ಕಿಯ ಮಸಲತ್ತಿಗೆ ನಗು ಬಂತು. ದೇವರು ತನ್ನ ಮೇಲೆ ಪರಿಣಾಮವನ್ನು ಮಾಡಲಾರ ಎಂಬುದನ್ನು ಚಿಕ್ಕಿಗೆ ಮನದಟ್ಟು ಮಾಡಲೆಂದು ಪ್ರಸಾದ ತಾಯಿತಗಳನ್ನು ಹಾಸಿಗೆಯಡಿಯಲ್ಲೇ ಬಿಟ್ಟ. ಹೊಲೆಯರಿಗಿನ್ನೂ ಜಗನ್ನಾಥ ದೇವಸ್ಥಾನದ ಪ್ರವೇಶದ ಬಗ್ಗೆ ಹೇಳಿಲ್ಲ. ಅವರಿನ್ನೂ ತನಗೆ ನಿಜವಾಗಿಲ್ಲ. ಆತ್ಮೀಯವಾಗಿ ಅದೂ ಇದೂ ಮಾತಾಡಲು ಪ್ರಯತ್ನಿಸುತ್ತ ಅವರಿಗೆ ಅಕ್ಷರ ಕಲಿಸುತ್ತಿದ್ದಾನೆ ಅಷ್ಟೆ. ಮರಳಿನ ಮೇಲೆ ಬೆರಳಿನಲ್ಲಿ ತಿದ್ದುತ್ತಾರೆ. ಧಣಿಯ ಅಪ್ಪಣೆ ನಡೆಸುತ್ತಾರೆ. ಬೆಚ್ಚಿ ಕಂಗಾಲಾಗಿ. ಅಷ್ಟೆ. ಇಷ್ಟಕ್ಕೇ ಚಿಕ್ಕಿ ಹೆದರಿದ್ದಾರೆ. ತನ್ನ ಮನೋಗತ ಸಂಪೂರ್ಣ ತಿಳಿದ ಮೇಲೆ? ಜಗನ್ನಾಥನಿಗೆ ದಿಗಿಲಾಯಿತು.

ಮಧ್ಯಾಹ್ನದ ಮೇಲೆ ಹೊಲೆಯರ ಯುವಕರು ಬಂದವು. ಇವುಗಳ ಹೆಸರುಗಳೇ ಮರೆತುಹೋಗುತ್ತವೆ. ಯಾರು ಪಿಳ್ಳ, ಯಾರು ಕರಿಯ, ಯಾರು ಮುದ್ದ. ಚ, ಜ, ಟ ಅಕ್ಷರಗಳು ಬರುವ ಶಬ್ದಗಳನ್ನು ಮರಳಲ್ಲಿ ಬರೆದುಕೊಟ್ಟು ತಿದ್ದುವಂತೆ ಹೇಳಿದ. ಎಷ್ಟೊಂದು ಸರಾಗವಾಗಿ ಸೌದೆ ಒಡೆಯಬಲ್ಲ ಹುಡುಗರು ಮರಳಿನ ಎದುರು ಬಗ್ಗಿ ಕೂತು ಅಕ್ಷರ ತಿದ್ದುವಾಗ ಹೇಗೆ ಮುಕ್ಕುತ್ತಾವೆ. ಬಾಯಲ್ಲಿ ಅಕ್ಷರವನ್ನು ಉಚ್ಚರಿಸುತ್ತ ಅವುಗಳ ಬೆರಳು ಅಕ್ಷರದ ಮೈಮೇಲೆ ಆಡುವಾಗ ಬರಿ ಮೈಯ ಮಾಂಸಖಂಡಗಳೆಲ್ಲವೂ ಯಾತನೆಯಲ್ಲಿ ತಿರುಪಿಕೊಂಡಂತೆ ಕಾಣುತ್ತವೆ. ಕತ್ತಿನ ನರಗಳು ಉಬ್ಬಿಕೊಳ್ಳುತ್ತವೆ. ಸ್ವಲ್ಪ ಹೊತ್ತಿಗೇ ಕಾಲುಗಳು ಜುಂಗುಟ್ಟಿ, ಎದ್ದಮೇಲೆ ಮರಳಿನ ಚೀಲಗಳನ್ನು ಕಾಲಿಗೆ ಕಟ್ಟಿಕೊಂಡವರಂತೆ ನಡೆಯುತ್ತಾವೆ. ಅಕ್ಷರ ತಿದ್ದುವಾಗ ಅವುಗಳ ಕಣ್ಣುಗಳಲ್ಲಿ ಮೂಡುತ್ತಿದ್ದ ದಿಗಿಲು ಕಂಡು ಜಗನ್ನಾಥನಿಗೆ ಕೆಲವೊಮ್ಮೆ ತೀವ್ರ ನಿರಾಶೆಯಾಗುತ್ತಿತ್ತು. ಕೆಲಸದ ಆಳುಗಳು ದೂರ ದೂರ ನಿಂತು ತನ್ನ ಈ ಕ್ರಿಯೆಯನ್ನು ಕೌತುಕದಿಂದ ನೋಡುವಾಗಲಂತೂ ಜಗನ್ನಾಥನಿಗೆ ಮುಜುಗರವಾಗುತ್ತಿತ್ತು. ಮಾಟ ಮಂತ್ರದಂತಹ ನಿಷಿದ್ಧವಾದ ವಿಧ್ಯುಕ್ತ ಕ್ರಿಯೆಯೊಂದರಲ್ಲಿ ತಾನು ತೊಡಗಿರುವಂತೆ ಅವನಿಗೆ ಅನ್ನಿಸುತ್ತಿತ್ತು.

ಒಂದು ಗಂಟೆ ಒಂದು ಯುಗವಾಗಿ ಹೊಲೆಯರಿಗೆ ಕಂಡಿರಬೇಕು. ನಾಳೆಯಿಂದ ಇವರಿಗೆ ತನ್ನ ಮನಸ್ಸಿನಲ್ಲಿರುವುದನ್ನು ಮೆಲ್ಲ ಮೆಲ್ಲನೆ ಹೇಳಬೇಕೆಂದುಕೊಂಡ. ಅವು ಕಾಲಿನ ಮೇಲೆ ದೊಡ್ಡ ಭಾರ ಹೊತ್ತವರಂತೆ ಎದ್ದು ನಿಂತವು. ಜಗನ್ನಾಥ ತಮ್ಮ ನಡುವೆ ಏನೋ ಹುಟ್ಟೀತೆಂದು ಆಶಿಸುತ್ತ ನಿಂತಿದ್ದ. ಸೊಪ್ಪು ಹೊತ್ತ ಕಾವೇರಿ ವಾರೆಗಣ್ಣು ಮಾಡಿ ಮುಗುಳ್ನಗುತ್ತ ಅಂಡುಗಳನ್ನು ಆಡಿಸುತ್ತ ನಡೆದುಹೋದಳು. ‘ಬಾಯಿಗೆ ಕೊಡಿ ಒಡೆಯಾ’ ಎಂದು ಒಬ್ಬ ಹೊಲೆಯಕೇಳಿದ. ಜಗನ್ನಾಥ ಚೀಲದಲ್ಲಿ ತಂದಿಟ್ಟಿದ್ದ ಅಡಿಕೆ ಹೊಗೆಸೊಪ್ಪನ್ನು ಅವಕ್ಕೆ ಹಂಚಿದ. ನಾಳೆಯಿಂದ ಅಕ್ಷರ ತಿದ್ದಲು ಕೂತಾಗಲೇ ಅವಕ್ಕೆ ಬಾಯಿಗೆ ಕೊಟ್ಟರೆ ಒಳ್ಳೆಯದೆನ್ನಿಸಿತು. ಆರಾಮವಾಗಿ ತಿದ್ದಿಯಾವು. ಬಿಗು ಕಳೆದು ಕಲಿಯಲು ಪ್ರಾರಂಭಿಸಿಯಾವು. ಮೆಲ್ಲಮೆಲ್ಲನೆ ತೆರೆದುಕೊಂಡಾವು. ಹೊಲೆಯರು ಹೋದ ಮೇಲೆ ಅಂಗಳ ದಾಟಿ ಒಳಗೆ ಬರುವಾಗ ದನ ಕರುಗಳು ಕೊಟ್ಟಿಗೆ ಸೇರುವುದನ್ನು ನಿರೀಕ್ಷಿಸುತ್ತ ಚಿಕ್ಕಿ ನಿಂತದ್ದು ಕಾಣಿಸಿತು. ತನ್ನನ್ನು ಆಪಾದಿಸುವಂತೆ ನೋಡಿ ಮತ್ತೆ ಕಟ್ಟು ಬಾಯ್‌ಕಟ್ಟು ಬಾಯ್‌ಎಂದು ದನವನ್ನು ಕರೆದರು. ಶಾಸ್ತ್ರಿ ಆಫೀಸಿನ ಹೊರಗೆ ನಿಂತು ರಂಗಣ್ಣನ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ. ರಂಗಣ್ಣ ಆಫೀಸಿಗೆ ಬಂದಿರುವುದು ಅವನಿಗೆ ಇಷ್ಟವಾಗಿಲ್ಲವೆಂದು ಜಗನ್ನಾಥ ಊಹಿಸಿದ.

ಆಳುಗಳು ದೀಪ ಹತ್ತಿಸುತ್ತಿದ್ದರು. ಒಳಗೆ ಹೋಗಬೇಕೆನ್ನಿಸುವಷ್ಟರಲ್ಲೆ ರಾಯರು ಬರುತ್ತಿರುವುದನ್ನು ಕಂಡು ಜಗನ್ನಾಥ ನಿಂತ. ಶಿವಮೊಗ್ಗದಿಂದ ಬಂದ ರಾಯರು ಸೀದಾ ಜಗನ್ನಾಥನ ಮನೆಗೆ ಬಂದಿದ್ದರು. ಒಳಗೆ ಬಂದು ಕೂತವರೆ ಹೇಳಿದರು:

‘ಜಗಣ್ಣ ನಮ್ಮ ರಂಗನಿಗೆ ಏನೂ ವ್ಯವಹಾರ ಜ್ಞಾನವಿಲ್ಲ. ಅವನ್ನ ಯಾಕೆ ಕೆಲಸಕ್ಕೆ ಇಟ್ಟುಕೊಂಡಿದಿ?’

‘ಕಲ್ತಕೋತಾನೆ. ನಂಗೊಂದು ನಂಬಿಕಸ್ತ ಜನ ಬೇಕಿತ್ತು.’

‘ಅದೆಲ್ಲ ಸುಳ್ಳು, ನನ್ನ ಹೆಂಡತಿ ಹತ್ರ ಜಗಳವಾಡಿ ಬಂದೆ – ಅವಳು ನಿನ್ನನ್ನ ಪೀಡಿಸಿರಬೇಕು.’

‘ಇಲ್ಲ ರಾಯರೆ, ನಿಮ್ಮ ಮಗನಿಂದ ಕೆಲಸ ತಗಳ್ಳೋದನ್ನ ನನಗೆ ಬಿಡಿ. ನೀವು ಸುಮ್ಮನಿರಿ. ನಿಮಗೊಂದು ವಿಷಯ ಹೇಳ್ಬೇಕೂಂತಿದೀನಿ.’

ಕತ್ತಲಾಗಿತ್ತು. ರಾಯರನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡ. ಗ್ಯಾಸ್‌ಲೈಟ್ ಬೆಳಕಲ್ಲಿ ಎದುರು ಬದುರಾಗಿ ಇಬ್ಬರೂ ಕೂತರು. ಬೆತ್ತದ ಕುರ್ಚಿಯ ಮೇಲೆ ಕಾಲು ಮಡಿಸಿ ಕೂತ ರಾಯರು ಎಲೆಯಡಿಕೆ ಚೀಲವನ್ನು ಬಿಚ್ಚಿ ‘ಏನು?’ ಅಂದರು.

ಜಗನ್ನಾಥನಿಗೆ ದಿಗಿಲಾಯಿತು. ಆದರೂ ಒರಟು ಒರಟಾಗಿ ಹೇಳಿಬಿಟ್ಟ :

‘ಅಮಾವಾಸ್ಯೆ ಜಾತ್ರೆದಿನ ದೇವಸ್ಥಾನದೊಳಗೆ ಹೊಲೆಯರನ್ನು ಕರ್ಕೊಂಡು ಹೋಗಬೇಕಂತ ಇದೀನಿ. ಹಾಗೇಂತ ಪೇಪರುಗಳಿಗೂ ಬರ್ದಿದೀನಿ, ನಾಳೆ ಬರಬಹುದು.’

ಅವನ ಗಂಟಲು ಒಣಗಿತ್ತು. ರಾಯ ಮುಖ ಭಯದಲ್ಲಿ ಬಿಳುಚಿಕೊಂಡಿತು. ದಂಗು ಬಡಿದಂತೆ ಮಾತನಾಡಲಾರದೆ ಕೂತ ರಾಯರನ್ನು ಕಂಡು ಜಗನ್ನಾಥನಿಗೆ ಸಂತೋಷವಾಯಿತು. ಹಾಗಾದರೆ ನನ್ನ ಕ್ರಿಯೆಗೆ ಅರ್ಥವಿದೆ. ಇಂತಹ ರಾಯರೇ ಬೆಚ್ಚಿದ ಮೇಲೆ? ರಾಯರು ಮಾತು ಹುಡುಕುತ್ತಿದ್ದರು : ಭಯವನ್ನು ಕೃತಕವಾದ ನಗುಮುಖದಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಜಗನ್ನಾಥ ಮಾತಿಗೆ ಸನ್ನದ್ಧನಾಗಿ ಕೂತ.

‘ಪ್ರಯೋಜನವಾಗಲ್ಲ ಜಗನ್ನಾಥ. ನಮ್ಮ ಆರೋಗ್ಯಮಂತ್ರಿ ಹರಿಜನರವನು, ಶಿವಮೊಗ್ಗದಲ್ಲಿ ಡಿ.ಸಿ. ಹರಿಜನರವನು. ಏನು ಪ್ರಯೋಜನ ಆಯ್ತು ಹೇಳು?’

ಜಗನ್ನಾಥ ಇನ್ನಷ್ಟು ಒರಟಾಗಿ ಕೇಳಿದ :

‘ಈಗ ನಿಮಗ್ಯಾಕೆ ಭಯವಾಗ್ತಿದೆ ಹೇಳಿ. ನನಗೆ ಯಾಕೆ ಭಯವಾಗ್ತಿದೆ ಹೇಳಿ.’

‘ಭಯದ ಪ್ರಶ್ನೆಯಲ್ಲ ಜಗನ್ನಾಥ. ಜನ ನಂಬಿ ಬದುಕಿದಾರೆ. ಅವರ ನಂಬಿಕೇನ್ನ ನಾಶಮಾಡಕ್ಕೆ ನಮಗೇನು ಅಧಿಕಾರ ಅಂತ. ದೇವರಲ್ಲಿರೊ ನಂಬಿಕೆ ಕಳಕೊಂಡು ಈ ಮಂತ್ರಿ ಮಂಡಲಾನ್ನ ನಂಬಿ ಬದುಕಿ ಅಂತ ಹೇಳಕ್ಕಾಗತ್ತ?’

‘ನೀವು ಸೋತಿದೀರಿ. ಅದಕ್ಕೆ ಹೀಗೆ ಲಿಬರಲ್‌ನಂತೆ ಮಾತಾಡ್ತ ಇದೀರಿ. ಮಂಜುನಾಥನ ಮಹಿಮೇನ್ನ ನಾಶಮಾಡದ ಹೊರ್ತು ಈ ಊರು creative ಆಗಲ್ಲ. ಹೊಲೆರಿಗೆ ಮಾತ್ರ ಅದು ಸಾಧ್ಯ. ನೋಡಿ ನೀವೇ ಎಷ್ಟು ಭಯಪಡ್ತ ಇದೀರಿ.’

ಜಗನ್ನಾಥನಿಗೆ ಇನ್ನೂ ಇನ್ನೂ ಕ್ರೂರವಾಗಿ ಮಾತಾಡಬೇಕೆನ್ನಿಸಿತು. ರಾಯರು ಪಡುತ್ತಿದ್ದ ದಿಗಿಲಿನಲ್ಲಿಯೆ ತನ್ನ ಕ್ರಿಯೆ ಸಫಲವಾಗಬಹುದಾದ ಸಾಧ್ಯತೆ ಕಂಡಿದ್ದರಿಂದ ಅವನು ಉತ್ತೇಜಿತನಾಗಿ ತನ್ನ ಯೋಜನೆಗಳನ್ನೆಲ್ಲ ರೋಷದಿಂದ ಹೇಳಿಕೊಂಡ. ರಾಯರು ಸುಸ್ತಾದ ಧ್ವನಿಯಲ್ಲಿ ಮಾತಾಡಿದರು :

‘ಮನಸ್ಸಲ್ಲಿ ದ್ವೇಷವಿರಕೂಡದು, ಪರಿಶುದ್ಧವಾಗಿರಬೇಕು ಅಂತ ಗಾಂಧೀಜಿ ಹೇಳ್ತಿದ್ದರು. ಕ್ರಾಂತಿ ಮಾಡಲು ಹೊರಟಾಗ ಯಾವ ಸ್ವಾರ್ಥ ಚಿಂತನೆಯೂ ಇರಕೂಡದು.’

ರಾಯರಿಗೆ ತನಗಾದ ಭಯವನ್ನು ಎದುರಿಸುವುದು ಕಷ್ಟವಾಗಿದೆಯೆಂದು ಜಗನ್ನಾಥನಿಗೆ ಅನ್ನಿಸಿತು. ಪಶ್ಚಾತ್ತಾಪದಿಂದ ಹೇಳಿದ :

‘ನಮಗೆ ಐತಿಹಾಸಿಕ ಪ್ರಜ್ಞೆಯಿಲ್ಲ ರಾಯರೆ. ನೀವು ಸುಸ್ತಾದವರಂತೆ ಮಾತಾಡ್ತ ಇದೀರಿ. ಆದರೆ ನೀವು ಹಿಂದೆ ಜವಳಿ ಅಂಗಡಿಗೆ ಬೆಂಕಿ ಹಾಕಿ ತಾಲ್ಲೂ ಕಛೇರಿ ಎದುರು ಮುಷ್ಕರ ಮಾಡಿದ್ರಲ್ಲ – ಅದರಿಂದಾಗಿ ನನಗಿವತ್ತು ಈ ಕೆಲಸ ಮಾಡಬೇಕಂತ ಅನ್ನಿಸಿದೆ. ನನ್ನನ್ನು ಸೃಷ್ಟಿಸೋಕೆ ನೀವು ಕಾರಣರು. ನೀವು ಈಗ ಸರಿದು ನಿಂತ ಹಾಗೆ ನಾನೂ ನಾಳೆ ಹೆದರಬಹುದು. ಸರಿದುನಿಲ್ಲಬಹುದು. ಆದರೆ ಚರಿತ್ರೆ ನಮ್ಮನ್ನೆಲ್ಲ ದುಡಿಸಿಕೊಳ್ಳುತ್ತೆ, ನಿರ್ದಯವಾಗಿ ದುಡಿಸಿಕೊಳ್ಳುತ್ತೆ.’

ರಾಯರು ಎಲೆಗೆ ಸುಣ್ಣ ಹಚ್ಚುತ್ತ ಚೇತರಿಸಿಕೊಂಡು ಹೇಳಿದರು. ಉಡಾಫೆ ಮಾತಲ್ಲಿ ಅವರು ಸಣ್ಣಗಾಗುತ್ತ ತಾನೂ ಸಣ್ಣಗಾಗುತ್ತಿದ್ದೇನೆ ಎನ್ನಿಸಿತು ಜಗನ್ನಾಥನಿಗೆ :

‘ಈ ಹೊಲೇರಿಗೆ ಬೇಕಾಗಿರೋದು ಹೆಂಡ. ದೇವರ ದರ್ಶನವಲ್ಲ. ನಿನ್ನ ಗುಲಾಮರು ಅವರು. ಆದ್ರಿಂದ ನೀನು ಹೇಳಿದ ಹಾಗೆ ಕೇಳಿಯಾರು. ನೀನು ಸುಮ್ಮನೇ ಅವರನ್ನ ಸತಾಯಿಸ್ತ ಇದೀಯ ಅಷ್ಟೆ.’

ಜಗನ್ನಾಥ ಮಾತಾಡಲಿಲ್ಲ. ರಾಯರು ಏನೇನೋ ಮಾತಾಡಲು ಪ್ರಾರಂಭಿಸಿದ್ದು ಕಂಡು ಅವನಿಗೆ ಬೇಸರವಾಯಿತು.

‘ಊರಿಗೆ ಕಳಂಕ ತರ್ತಿದಾನೆ ಅಂತ ಅಪವಾದಕ್ಕೆ ಯಾಕೆ ಗುರಿಯಾಗ್ತೀಯ? ರಾಜಕೀಯ ತುಂಬ ಹೊಲಸಾಗಿದೆ. ನೀನು ಯಾಕೆ ನಿನ್ನ ಕೈಯನ್ನ ಕೊಳೆ ಮಾಡಿಕೋಬೇಕು ಹೇಳು. ಈ ದೇಶದಲ್ಲಿ ಏನು ಮಾಡಿಯೂ ಏನೂ ಪ್ರಯೋಜನವಿಲ್ಲ. ಅಲ್ಲದೆ ನೀನು ಬ್ರಾಹ್ಮಣನಾಗಿ ಹುಟ್ಟೋ ತಪ್ಪು ಬೇರೆ ಮಾಡಿದಿ. ಒಂದೊಂದು ಸಾರಿ ಮಿಲಿಟರಿ ಡಿಕ್ಟೇಟರ್‌ಶಿಪ್ಪಿಗೇ ಈ ಜನ ಬಗ್ಗೋದು ಅನ್ನಿಸುತ್ತೆ.’

ಜಗನ್ನಾಥ ಥಟ್ಟನೇ ಕೇಳಿದ :

‘ನಾಗಮಣಿ ಸತ್ತದ್ದು ಗೊತ್ತಾಯ್ತ?’

ರಾಯರು ಉತ್ತರ ಕೊಡುವುದರೊಳಗೇ ಎದ್ದುನಿಂತು ಕಿಟಕಿಯ ಹತ್ತಿರ ಹೋದ. ಅವರಿಗೆ ಬೆನ್ನು ಹಾಕಿ ಹೇಳಿದ :

‘ಸೋಲ್ತೀನೋ ಗೆಲ್ತೀನೋ ಮುಖ್ಯವಲ್ಲ ರಾಯರೆ. ಏನಾದರೂ ಮೂಲಭೂತವಾಗಿ ಮಾಡೋದು ಸಾಧ್ಯವಾಗದೇ ಹೋದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ – ಅಷ್ಟೆ.’

ಆಡಿದ ಮೇಲೆ ತಾನು ನಾಟಕೀಯವಾಗಿ ವರ್ತಿಸಿದೆನೋ ಎಂದು ಜಗನ್ನಾಥನಿಗೆ ಮುಜುಗರವಾಯಿತು. ತಿರುಗಿ ಕುರ್ಚಿಯ ಮೇಲೆ ಬಂದು ಕೂತ. ರಾಯರ ಮುಖ ಗಂಭೀರವಾದ್ದು ಕಂಡು ಸಮಾಧಾನವಾಯಿತು. ತನ್ನ ತೀವ್ರತೆಯನ್ನು ಅವರು ಒಪ್ಪಿಕೊಳ್ಳುವುದರ ಮೂಲಕ ನಿಜಮಾಡಿದರೆಂದು ಕೃತಜ್ಞನಾದ. ರಾಯರು ಹೇಳಿದರು :

‘ಎಷ್ಟೋ ದೇವಸ್ಥಾನಗಳಲ್ಲಿ ಹರಿಜನ ಪ್ರವೇಶವಾದ್ರೂ ಏನೂ ಪ್ರಯೋಜನ ಆಗ್ಲಿಲ್ಲಾಂತ ನಿನಗೂ ಗೊತ್ತಿದೆ. ಆದ್ರೆ ನಿನ್ನ ಉದ್ದೇಶ ಬೇರೆ. ಅರ್ಥವಾಯ್ತು. ನನ್ನ ಭಯ ಅಂದ್ರೆ ಹೊಲೇರು ಒಳಗೆ ಹೋಗ್ತಾರೆ, ಪೇಪರಲ್ಲಿ ಸುದ್ದಿ ಬರತ್ತೆ, ಮತ್ತೆಲ್ಲ ತಣ್ಣಗಾಗುತ್ತೆ.’

ಜಗನ್ನಾಥನಿಗೆ ಮತ್ತೆ ಕಸಿವಿಸಿಯಾಯಿತು. ರಾಯರು ತನ್ನ ಅಂತರಂಗದಲ್ಲಿರುವುದನ್ನು ಕಣ್ಣುಬಿಟ್ಟು ನೋಡುತ್ತಿಲ್ಲವೆನ್ನಿಸಿತು. ಭಯಪಟ್ಟಾಗ ಅವರು ನಿಜವಾಗಿದ್ದಷ್ಟು ವಾದದಲ್ಲಿ ಅವರು ನಿಜವಾಗಿರಲಿಲ್ಲ. ಜಗನ್ನಾಥ ಸುಮ್ಮನೇ ಕೂತ. ನೀವು ಲೋಳೆಯಾಗಿದ್ದೀರಿ ರಾಯರೇ ಎಂದು ಹೇಳಬೇಕೆನ್ನಿಸಿತು. ರಾಯರು ಎದ್ದು ನಿಂತು ಹೇಳಿದರು:

‘ನೈತಿಕ ಬಲಕ್ಕೂ ತಾಕತ್ತಿರಬೇಕು ಜಗನ್ನಾಥ. ನನ್ನ ಹಾಗೆ ಸೋತವನು ನೀತಿವಂತ ಕೂಡ ಆಗಿರಲಾರ.’

ಜಗನ್ನಾಥ ಅವರ ಮಾತಿನಿಂದ ಬೆಚ್ಚಿದ. ಏನೋ ಅರಳಬಹುದೆಂಬ ಭರವಸೆ ಮತ್ತೆ ಅವನಲ್ಲಿ ಮೂಡಿತು. ರಾಯರ ಜೊತೆ ಗುಡ್ಡವಿಳಿದು ರಸ್ತೆಯ ತನಕ ನಡೆದು ಹಿಂದಕ್ಕೆ ಬಂದ. ನಾಳೆ ಪೇಪರಿನಲ್ಲಿ ತನ್ನ ಕಾಗದ ಬರುವುದನ್ನು ನಿರೀಕ್ಷಿಸುತ್ತ ರಾತ್ರೆಯನ್ನು ಕಳೆದ.