ಬಾಗಿಲು ಹಾಕಿಕೊಂಡು ಮಂಚದ ಮೇಲೊರಗಿ ಬಹಳ ಆತುರದಿಂದ ಜಗನ್ನಾಥ ಮಾರ್ಗರೆಟ್ಟಿನ ಕಾಗದ ಓದಿದ.

ಮೊದಲು ಇಂಟರ್‌ನ್ಯಾಷನಲ್ ಸ್ಕೂಲ್ ವಿಷಯ. ದೇಸಾಯರ ಪತ್ರ ಬಂದಿದೆ. ಮುಂದಿನ ವರ್ಷ ಬರುತ್ತಿದ್ದೇನೆ, ಚಂದರ್‌ಕೂಡ ಬೆಂಗಳೂರಲ್ಲೆ ಕೆಲಸ ಮಾಡ್ತಾನಂತೆ – ಇತ್ಯಾದಿ. ಆಮೇಲೆ ವೆದರ್‌. ಮೂರು ದಿನಗಳಿಂದ ಸತತವಾಗಿ ಸ್ನೋ ಬೀಳ್ತ ಇದೆ. ಬೆಂಕಿ ಎದುರು ಕೂತೇ ಇರೋಣ ಎನ್ನಿಸುತ್ತೆ. ಬಿಯರ್‌‌ಕುಡಿದು ಕುಡಿದು ಮೈ ಬಂದಿದೆ. ಮತ್ತೆ ತಂದೆಯಲ್ಲಾದ ಅದ್ಭುತ ಬದಲಾವಣೆಯ ಬಗ್ಗೆ. ನಿವೃತ್ತರಾದ ಮೇಲೆ ತುಂಬ ಲವಲವಿಕೆಯಿಂದ ಇದ್ದಾರೆ. ತಾಯಿಯ ನ್ಯಾಗಿಂಗನ್ನ ಕೇರ್‌ಮಾಡಲ್ಲ. ಒಂದು ಅಂಗಡಿ ತೆರೆದಿದ್ದಾರೆ. ಕರಿ ಪೌಡರ್‌, ಮ್ಯಾಂಗೋ ಪಿಕಲ್ಸ್, ಪಪ್ಪಡಂಸ್ ಹೀಗೆ ಎಲ್ಲ ಇಂಡಿಯನ್ ಸಾಮಾನುಗಳನ್ನು ಮಾರುವ ಅಂಗಡಿ. ವಿಚಿತ್ರವಾದ ರೀತೀಲೆ ತನ್ನ ಐಡೆಂಟಿಟಿಯನ್ನ ಕಂಡುಕೋತಿದಾರೆ. ಬೆಳಿಗ್ಗೆ ಬೇಗ ಎದ್ದು ತಿರುಪತಿಯ ದೇವರಿಗೆ ಊದುಕಡ್ಡಿ ಹಚ್ಚಿ ಪೂಜೆ ಮಾಡ್ತಾರೆ; ನಿತ್ಯ ಸಂಜೆ ಥಿಯಸಾಫಿಕಲ್ ಸೊಸೈಟಿಗೆ ಹೋಗಿ ಲೆಕ್ಚರ್ ಕೇಳ್ಸಿಕೋತಾರೆ. ಭಾರತದಿಂದ ಹರಿಕಥೆ ಮಾಡುವವರನ್ನು, ಸಿತಾರ್ ಸರೋದ್ ವಾದಕರನ್ನು ಕರೆಸುವ ವ್ಯವಸ್ಥೆ ಮಾಡುವ ಆರ್ಗನೈಸೇಶನ್ ಕಟ್ಟುತ್ತಿದ್ದಾರೆ.

ನೀನು ಯಾಕೆ ದೇವರ ಮೇಲೆ ಬಂಡಾಯ ಹೂಡಿದಿ ನನಗೆ ಅರ್ಥವಾಗತ್ತೆ. ಆದರೆ ಡ್ಯಾಡಿಗೆ ಯಾಕೆ ದೇವರು ಬೇಕಾಯ್ತು ಅನ್ನೋದನ್ನೂ ನೀನು ಅರ್ಥಮಾಡಿಕೋಬೇಕು. ಚಂದರ್ ಜೊತೆ ಅದನ್ನ ಚರ್ಚಿಸಿದ. ಅವನು ನಿನ್ನ ರೊಮ್ಯಾಂಟಿಕ್ ಎನ್ನುತ್ತಾನೆ; ನೆಹರೂ ಯುಗದ ಪ್ರಾಡಕ್ಟ್ ಅನ್ನುತ್ತಾನೆ. ಕ್ರೇಸಿ ಫೆಲೋ. ಅವನು ಹೇಳಿದ್ದನ್ನೆಲ್ಲ ನಾನು ಒಪ್ಪಲ್ಲ. ಆದರೆ ಇನ್‌ಸೈಟ್ ಇದೆ.

ಕಾಗದದ ಕೊನೆಯ ಪ್ಯಾರ ಓದುತ್ತ ಜಗನ್ನಾಥನ ಮುಖ ಬಿಳುಚಿಕೊಂಡಿತು.

ಡಾರ‍್ಲಿಂಗ್‌ಜಗನ್, ನಾನೂ ನೀನೂ ಒಬ್ಬರಿಗೊಬ್ಬರು ಲ್ಯೂಸಿಡ್ಡಾಗಿ ಬದುಕಬೇಕೂಂತ ನಿಶ್ಚಯ ಮಾಡಿದ್ದೀವಲ್ಲವ? ಈಗ ನಾನು ಹೇಳೋ ವಿಷಯದಿಂದ ನೀನು ನೊಂದಕೋಬಾರದು. ನೀನು ಹೋದ ಮೇಲಿಂದ ಚಂದ್ರಶೇಖರ್‌ನನ್ನ ಪ್ರೀತಿಗಾಗಿ ಕಾಡುತ್ತಿದ್ದಾನೆ. ಅವನ ಅಸೂಯೆ, ಅವನ ಇಂಟೆನ್ಸಿಟಿಯಿಂದ ನನಗೆ ಯಾವತ್ತೂ ಆಗದ ಹೊಸ ಅನುಭವವಾಗಿದೆ. ಇದ್ದಕ್ಕಿದ್ದಂತೆ ಯಾಕೊ ಏನೊ ನಾನು ಅವನಿಗೆ ಮನಸೋತು ನನ್ನನ್ನು ಕೊಟ್ಟುಕೊಂಡಿದ್ದೇನೆ. ಇದರಿಂದ ನಿನಗೆ ವ್ಯಥೆಯಾಗುತ್ತೆಂದು ನನಗೆ ಗೊತ್ತು. ಆದರೆ ನನ್ನ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳೋದು ಕ್ಷಮಿಸೋದು ನಿನಗೆ ಮಾತ್ರ ಸಾಧ್ಯ – ಮಾರ್ಗರೆಟ್.

ಜಗನ್ನಾಥನ ಕೈ ಬೆವತಿತ್ತು. ಕೊನೆಯ ಪ್ಯಾರಾವನ್ನು ಮತ್ತೆ ಮತ್ತೆ ಓದಿದ. ಇರಿದ ಜಾಗದಲ್ಲೆ ಮತ್ತೆ ಮತ್ತೆ ಇರಿಸಿಕೊಂಡು ನೋವಿಗೆ ಅತೀತನಾಗಲು ಪ್ರಯತ್ನಿಸಿದ. ಎದ್ದು ಕೆಳಗಿಳಿದು ಬಂದ. ನೀಲಕಂಠಸ್ವಾಮಿ ಕಾರಿಗೆ ಪೋಸ್ಟರ್‌ಕಟ್ಟಿಸುತ್ತ ನಿಂತಿದ್ದ. ನಾಳೆ ಸಾಯಂಕಾಲ ಇಷ್ಟು ಘಂಟೆಗೆ ಭಾಷಣ, ಇಂಥಲ್ಲಿ ಇಂಥಿಂಥವರಿಂದ. ಬ್ಯಾಟರಿಂದ ನಡೆಯುವ ಮೈಕನ್ನು ಕಾರೊಳಗಿಟ್ಟುಕೊಂಡು ರಂಗರಾವ್ ಹೆಲೋ ಹೆಲೋ ಎಂದು ಟೆಸ್ಟ್ ಮಾಡುತ್ತಿದ್ದ. ಸರ್ವೋದಯದ ಅನಂತಕೃಷ್ಣರು ಸೋಷಲಿಸ್ಟ್ ಹುಡುಗರ ಜೊತೆ ಲೋಹಿಯಾ ಮತ್ತು ಗಾಂಧಿ ಬಗ್ಗೆ ಚರ್ಚಿಸುತ್ತಿದ್ದರು. ಶಾನುಭೋಗ ಶಾಸ್ತ್ರಿ ಆಫೀಸಿನಿಂದ ಇಣುಕಿ ನೋಡಿ ಹೊರಗೆ ಬಂದು ‘ಮಧ್ಯಾಹ್ನದ ಬಸ್ಸಿಗೆ ಕನ್ನಡಾ ಜಿಲ್ಲೆಗೆ ಹೋಗ್ತಿದೀನಿ – ಆಳುಗಳನ್ನು ಕರ್ಕೊಂಬರಕ್ಕೆ’ ಎಂದು ತನ್ನ ನಿಷ್ಠೆ ಪ್ರದರ್ಶಿಸಿ ಒಳಗೆ ಹೋದ. ‘ಜನ ಸೇರೋಕೆ ಶುರುವಾಗಿದಾರೆ. ಒಳ್ಳೇ ಅಪರ್ಚುನಿಟಿ. ಇಡೀ ಸ್ಟೇಟಿಂದ, ನಾರ್ತ್ ಇಂಡಿಯಾದಿಂದಲೂ ಜನ ಬಂದಿರ್ತಾರೆ. ನಾಳೆ ಸರಿಯಾಗಿ ಪ್ರಚಾರ ಮಾಡಬೇಕು’ – ನೀಲಕಂಠಸ್ವಾಮಿ ಖುಷಿಯಾಗಿ ಹೇಳಿದ. ಭಾಷಣ ಮಾಡುವ ಅವಕಾಶ ನಿರೀಕ್ಷಿಸುತ್ತ ಅನಂತಕೃಷ್ಣರ ಮುಖ ಅರಳಿತು. ‘ಚೆನ್ನಾಗಿಲ್ಲ ಮೈಕ್ ಸೆಟ್ಟು’ ಎಂದು ರಂಗರಾವ್ ಗೊಣಗಿದ. ಶ್ರೀಪತಿರಾಯರು ‘ಹೋದ ಸಾರಿ ಗುರಪ್ಪಗೌಡರ ಎಲೆಕ್ಷನ್ನಿಗೇಂತ ಪ್ರಭು ಕೊಂಡು ತಂದದ್ದು’ ಎಂದರು.

ಜಗನ್ನಾಥನಿಗೆ ಎಲ್ಲರಿಂದ ದೂರವಿರಬೇಕೆನ್ನಿಸಿ ಗೇರುಗುಡ್ಡ ಹತ್ತಿ ನಡೆದ. ಇದ್ದಕ್ಕಿದ್ದಂತೆ ಎಲ್ಲವೂ ನಿಸ್ಸಾರವಾಗಿತ್ತು. ತನಗೆ ತಾನೇ ಮಾತಾಡಿಕೊಂಡ. ಇನ್ನು ನಾಲ್ಕು ದಿನ ಅಷ್ಟೆ. ಹೊಲೆಯರು ದೇವರ ಗುಡಿಯೊಳಗೆ ಕಾಲಿಡುತ್ತಾರೆ. ಹೆಜ್ಜೆ ಮುಂದಿಟ್ಟು ಶತಮಾನಗಳನ್ನು ಬದಲಿಸುತ್ತಾರೆ. ಅದಕ್ಕಾಗಿ ಹುರಿಯಾಗಿ ಕಾದಿರೋ ನನಗೆ ಎಂಥ ಆಘಾತ ಮಾಡಿದೆ ಮಾರ್ಗರೆಟ್.

ಇಷ್ಟರ ತನಕ ಅವಳ ಮೇಲೆ ತನಗೆಷ್ಟು ಪ್ರೀತಿಯಿತ್ತೆಂದು ತಾನು ತಿಳಿದಿರಲಿಲ್ಲ. ಭಯಂಕರ ಸಂಕಟವೆಂದರೆ ಈ ದೇಹಕ್ಕೆ ಪರಿಚಯವಿದ್ದ ಬೆತ್ತಲೆ ದೇಹವೊಂದು ಈ ಘಳಿಗೆಯಲ್ಲೆ ಇನ್ನೊಬ್ಬನ ತೆಕ್ಕೆಯಲ್ಲಿದ್ದ ಎಂಬುದನ್ನು ಯೋಚಿಸೋದು. ಅತ್ಯಂತ ಆಪ್ತವಾಗಿ ಮಾತಾಡುತ್ತಾಳೆ. ಅವನಿಗೆ ತೆರೆದುಕೊಳ್ಳುತ್ತಾಳೆ. ಸುಖದಲ್ಲಿ ನರಳುತ್ತಾಳೆ. ನಾನು ವರ್ಜ್ಯನಾಗಿಬಿಟ್ಟೆ. ಈ ಆಕಾಶದಿಂದ, ಈ ಹೊತ್ತಿನಿಂದ. ಎಸೆದುಬಿಟ್ಟ ವಸ್ತುವಿನ ಹಾಗೆ.

ಇನ್ನು ಅನಿವಾರ್ಯಗಳು ಮಾತ್ರ. ಮಾಡಬೇಕು. ವಿಧಿಯಿಲ್ಲ, ಮಾಡುತ್ತೇನೆ. ಕ್ರೂರವಾಗಿ ನೋಡುವ ಕಣ್ಣುಗಳಿಂದ ವರ್ಜ್ಯವಾಗಿ ಹೊಲೆಯರ ಜೊತೆ ನಡೆಯುತ್ತೇನೆ. ಅವರು ಯಾರೊ, ನಾನು ಯಾರೊ, ಯಾವ ದೇವರೊ, ಭರವಸೆಗಳಿಲ್ಲ. ನಾನು ಮುಟ್ಟಿ ತಡವಿದ್ದೆಲ್ಲವನ್ನೂ ಇನ್ನು ಯಾರೋ ಮುಟ್ಟಿ ತಡವುತ್ತಾನೆ. ನನ್ನನ್ನು ಕೊಂದು ಹಿಗ್ಗುತ್ತಿದ್ದಾನೆ.

ಗುಡ್ಡದ ನೆತ್ತಿಯ ಮೇಲೆ ನಿಂತ ಶೂನ್ಯ ದೃಷ್ಟಿಯಿಂದ ದೇವಸ್ಥಾನದ ಶಿಖರ ನೋಡಿದ. ನೀಲಕಂಠಸ್ವಾಮಿ ಅಬ್ಬರಿಸಿ ಮಾರನೇ ದಿನದ ಸಾಯಂಕಾಲದ ಮೀಟಿಂಗಿಗೆ ಜನರನ್ನು ಕರೆಯುತ್ತಿರುವುದು ಕೇಳಿಸಿತು.

‘ಮಹಾಜನರಲ್ಲಿ ವಿನಂತಿ.

ಈ ದೇಶದ ಧುರೀಣರಲ್ಲಿ ಒಬ್ಬರಾದ,
ಸರ್ವಸ್ವವನ್ನೂ ತ್ಯಾಗಮಾಡಿ ಹರಿಜನ ಸೇವೆಗೆ ಬದ್ಧಕಂಕಣರಾದ
ಶ್ರೀ ಜಗನ್ನಾಥರಾಯರು ಪ್ರಾರಂಭಿಸಿದ ಚಳುವಳಿಗೆ ಬೆಂಬಲವನ್ನು ಸೂಚಿಸಿ
ಸೋಷಲಿಸ್ಟ್ ನಾಯಕ ಶ್ರೀ ನೀಲಕಂಠಸ್ವಾಮಿ,
ಸಹ ಕಾರ್ಯದರ್ಶಿ ಶ್ರೀ ರಂಗರಾವ್,
ಗಾಂಧೀಜಿಯವರ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದ ಸರ್ವೋದಯ ನಾಯಕ
ಶ್ರೀ ಅನಂತಕೃಷ್ಣ…. ಕೇಳಿರಿ. ಕೇಳಿರಿ.
ನಾಳೆ ಸಂಜೆ ಐದು ಘಂಟೆಗೆ,
ದೇವಸ್ಥಾನದ ಹೊರಾಂಗಣದಲ್ಲಿ,
ಭಾಷಣ ಮಾಡಲಿದ್ದಾರೆ.’

ಭಾರತೀಪುರದ ಮೌನವನ್ನು ಕಲುಕುತ್ತಿದ್ದ ಮಾತುಗಳು ಜಗನ್ನಾಥನಿಗೆ ಅಸಹ್ಯವಾದುವು. ಈಗ ತಾನು ತನ್ನ ಮನಸ್ಸನ್ನು ಸ್ವಾಧೀನಕ್ಕೆ ತಂದುಕೊಳ್ಳದೇ ಹೋದರೆ ಇಷ್ಟು ದಿನದ ಪ್ರಯತ್ನವೆಲ್ಲ ಕುಸಿದುಹೋದೀತು. ನಾನು ಯಾತರ ಮನುಷ್ಯ? ಆದರೆ ಸಂಕಟ ನಿಜ. ಕ್ರಿಯೆಯಲ್ಲಿ ಮೈಮರೆಯೋದೊಂದೇ ಮಾರ್ಗ. ಅಂದರೆ ಜಡ್ಡಾಗೋದು. ವೈಯಕ್ತಿಕ ಜೀವನವನ್ನು ಬಿಟ್ಟುಕೊಡೋದು.

ಹೆಜ್ಜೆ ಸಪ್ಪಳ ಕೇಳಿ ಜಗನ್ನಾಥ ಬೆಚ್ಚಿದ. ಪಕ್ಕದಲ್ಲಿ ಸುಬ್ರಾಯ ಅಡಿಗರು ಬಂದು ನಿಂತಿದ್ದರು.

‘ನಿನ್ನ ಮುಖ ನೋಡಿದೆ. ಬಹಳ ನೋವಿನಲ್ಲಿದ್ದಿ ಅಂತ ಅನ್ನಿಸ್ತು. ಅದಕ್ಕೇ ಬಂದೆ’

ಅಡಿಗರು ಇಷ್ಟು ಹೇಳಿ ಮೌನವಾಗಿಬಿಟ್ಟರು. ಅವರ ಜೊತೆ ಗುಡ್ಡ ಇಳಿಯುವಾಗ ಏನು ಯೋಚಿಸ್ತಿದಿ ಅಂತ ವಿಚಾರಿಸಲಿಲ್ಲ. ತನ್ನನ್ನು ಕೆದಕಲಿಲ್ಲ. ಎಲ್ಲಿ ಮೌನ ಸರಿ, ಎಲ್ಲಿ ಮಾತು ಸರಿ ಅಂತ ತಿಳಿದ ಅವರ ಹೃದಯವಂತಿಕೆಗೆ ಜಗನ್ನಾಥ ತುಂಬ ಕೃತಜ್ಞನಾದ.

* * *

ಮಧ್ಯಾಹ್ನದ ಊಟಕ್ಕೆ ಅಡಿಗರು ಇದ್ದರೆಂದು ಚಿಕ್ಕಿ ಜಿಲೇಬಿ ಮಾಡಿದ್ದರು. ನರಸಿಂಹ ಶಾಲಿಗ್ರಾಮವನ್ನು ಶುದ್ಧಮಾಡಿ ಅಡಿಗರು ಪೂಜಿಸಿದ್ದರೆಂದು ಚಿಕ್ಕಿಗೆ ಸಂತೋಷವಾಗಿರಬೇಕು. ಅಲ್ಲದೆ ಗೋಪಾಲ ಮೈಸೂರಿನಿಂದ ಬಂದಿದ್ದ. ಕಾಲೇಜಿನಲ್ಲಿ ಸ್ಟ್ರೈಕಂತೆ. ಒಕ್ಕಲಿಗ ಹುಡುಗರಿಗೂ ಲಿಂಗಾಯಿತರಿಗೂ ಹಣಾಹಣೆ. ಪ್ರಿನ್ಸಿಪಲ್ ಒಕ್ಕಲಿಗರ ಪರವಾಗಿದ್ದಾನೆ ಎಂದು ಉಳಿದ ಕೋಮಿನ ವಿದ್ಯಾರ್ಥಿಗಳಿಂದ ಅವನ ರಾಜೀನಾಮೆಗೆ ಒತ್ತಾಯ – ಗಬ್ಬು ಜನ ಎಂದು ಗೋಪಾಲ ಎಲ್ಲರನ್ನೂ ಹಳಿದ. ನೀಲಕಂಠಸ್ವಾಮಿ, ರಂಗರಾವ್ ಈ ಸುದ್ದಿ ಕೇಳಿ ತಾವು ಮೈಸೂರಿನಲ್ಲಿಲ್ಲೆಂದು ಚಡಪಡಿಸಿದರು. ತಾನು ಜಾತೀಯವಾದಿಯಲ್ಲವೆಂದು ಪ್ರೂವ್‌ಮಾಡಲು ನೀಲಕಂಠಸ್ವಾಮಿ ಸಂಬಂಧಪಟ್ಟವರಲ್ಲಿ ಒಬ್ಬ ಲಿಂಗಾಯತನನ್ನು ಬೈದ; ಇನ್ನೊಬ್ಬನ್ನ ಹೊಗಳಿದ. ಹಾಗೆಯೇ ರಂಗರಾವ್ ಒಕ್ಕಲಿಗ ಪ್ರಿನ್ಸಿಪಾಲ್‌ನನ್ನು ಬೈದ; ಒಕ್ಕಲಿಗ ರಿಜಿಸ್ಟ್ರಾರ್‌ರನ್ನು ಹೊಗಳಿದ. ಅವರಿಬ್ಬರ ನಡುವೆ ಶೀತಯುದ್ದವನ್ನು ಜಗನ್ನಾಥ ಗಮನಿಸಿದ.

ಅಡಿಗರು ಒಳಗೆ ಕೂತು ಊಟ ಮಾಡಿದರು. ಅನಂತಕೃಷ್ಣ ಬಹಳ ಖುಷಿಯಿಂದ ಅಡಿಗೆ ಹೊಗಳಿದರು, ‘ಇವತ್ತು ಸಂಜೆ ಹೊಲೆಯರ ಯುವಕರ ಹತ್ತಿರ ನೀವು ಮಾತಾಡಬೇಕು’ ಎಂದು ಜಗನ್ನಾಥ ಕೇಳಿದ್ದಕ್ಕೆ ಅನಂತಕೃಷ್ಣ ಒಪ್ಪಿ, ‘ನಿಮ್ಮ ಬಗ್ಗೆ ವಿನೋಬಾರಿಗೆ ಬರೆದಿದ್ದೇನೆ. ಅವರಿಂದ ಆಶೀರ್ವಾದ ಬಂದರೆ ನಮ್ಮ ಚಳುವಳಿಗೆ ದೊಡ್ಡ ಕುಮ್ಮಕ್ಕು ಸಿಕ್ಕಿದಂತೆ’ ಎಂದರು. ಜಗನ್ನಾಥನಿಗೆ ಮಾತು ಬೇಡಿತ್ತು. ಊಟ ಮುಗಿಸಿದವನೇ ಎದ್ದು ರೂಮಿಗೆ ಹೋಗಿ ಮಲಗಿದ.

ನೀಲಕಂಠಸ್ವಾಮಿ ಊಟ ಮುಗಿದದ್ದೆ ಮತ್ತೆ ಪ್ರಚಾರ ಮಾಡಲು ಕಾರು ತೆಗೆದುಕೊಂಡು ಹೋಗಿದ್ದ. ತನ್ನನ್ನೂ, ಅವನನ್ನೂ ಅನಂತಕೃಷ್ಣರನ್ನೂ ಹೊಗಳುತ್ತ ಅವನು ಮಾಡುತ್ತಿದ್ದ ಘೋಷಣೆಗಳಿಂದ ಜಗನ್ನಾಥನಿಗೆ ವಾಕರಿಕೆಯಾಯಿತು.

ಬಿಸಿಲಿಳಿಯುತ್ತಿದ್ದಂತೆ ಎದ್ದು ಹೊರಟ – ಪುರಾಣಿಕರ ಮನೆಗೆ. ನಿರ್ಜನವಾದ ಬೀದಿಗಳನ್ನು ಹುಡುಕಿ ಕಳ್ಳನಂತೆ ನಡೆದುಹೋದ. ಮೈಕಿನಿಂದ ಬರುತ್ತಿದ್ದ ಘೋಷಣೆ ಕೇಳಿ ತನ್ನ ಮುಖವನ್ನೆಲ್ಲ ಜನ ನೋಡುವರೊ ಎಂದು ಅವನಿಗೆ ನಾಚಿಕೆಯಾಗಿತ್ತು. ಒಳದಾರಿಗಳಿಂದ ವೇಗವಾಗಿ ನಡೆದು ಪುರಾಣಿಕರ ಮನೆಗೆ ಹೋಗಿಬೆಲ್ ಒತ್ತಿದ. ಯಥಾಪ್ರಕಾರ ಘೂರ್ಕ ಬಂದು ಚೀಟಿಯಲ್ಲಿ ಹೆಸರು ಬರೆಸಿಕೊಂಡು ಹೋದ. ಪುರಾಣಿಕರು ಇಳಿದು ಬಂದು ಕೈಕುಲುಕಿದರು. ಟೈ ಕಟ್ಟಿದ ಅಂಗಿಯ ಕಾಲರ್‌ಹರಿದಿತ್ತು. ಆದರೆ ಇಸ್ತ್ರೀ ಮಾಡಿದ  ಸೂಟು ಅವರ ಮೈ ಮೇಲೆ ನೀಟಾಗಿ ಕೂತಿತ್ತು. ಸ್ವಲ್ಪವೂ ಬೊಜ್ಜು ಬೆಳೆಯದ ಪುರಾಣಿಕರ ದೇಹ ಕಂಡು ಜಗನ್ನಾಥನಿಗೆ ಆಶ್ಚರ್ಯವಾಯಿತು.

‘I was feeling terribly lonely. Thanks for coming. My friend Avdhani is terribly ill, you see’ ಎಂದು ಮಹಡಿ ಮೇಲೆ ಕರೆದುಕೊಂಡು ಹೋದರು. ಜಗನ್ನಾಥ ಬೇಡವೆಂದರು ಎರಡು ಗ್ಲಾಸ್‌ಗಳಲ್ಲಿ ವ್ಹಿಸ್ಕಿ ಸುರಿದು ಸೋಡಾ ಬೆರೆಸಿದರು.

‘For the success of your intended revolution’ ಎಂದು ಗಾಜಿಗೆ ಗಾಜು ತಾಕಿಸಿದರು.

ಜಗನ್ನಾಥ ವ್ಹಿಸ್ಕಿಯನ್ನು ಸವಿಯುತ್ತ ಎಲ್ಲವನ್ನೂ ಮರೆಯಲು ಪ್ರಯತ್ನಿಸಿದ. ಆದರೆ ಪುರಾಣಿಕರ ಮಹಡಿಯ ರೂಮೊಳಗೂ ನೀಲಕಂಠಸ್ವಾಮಿಯ ಅಬ್ಬರ ಕ್ಷೀಣವಾಗಿ ಕೇಳಿಸುತ್ತಿತ್ತು. ಪುರಾಣಿಕರು ಮತ್ತೆ ತನ್ನ ಗ್ಲಾಸನ್ನು ತುಂಬಲು ಬಂದಾಗ ಜಗನ್ನಾಥ ಬೇಡೆನ್ನಲಿಲ್ಲ. ಕಾಲು ಚಾಚಿ ಕೂತು ಕಣ್ಣು ಮುಚ್ಚಿದ, ಆದರೂ ಮನಸ್ಸಿಗೆ ಶಾಂತಿಯಿರಲಿಲ್ಲ. ಮಾರ್ಗರೆಟ್ ಕಾಗದದ ಕೊನೆಯ ಪ್ಯಾರಾದ ಮಾತುಗಳನ್ನು ಮತ್ತೆ ಮತ್ತೆ ಮನಸ್ಸು ತಿರುವಿಹಾಕುತ್ತಿತ್ತು. ಪುರಾಣಿಕರು ರೇಡಿಯೋ ಹಾಕಿದರು. ಎಲ್ಲಿಂದಲೋ ಪಿಯಾನೊ ಸಂಗೀತ ತೇಲಿಬಂತು. ಪುರಾಣಿಕರು ಕೊಟ್ಟ ಚುಟ್ಟವನ್ನು ಜಗನ್ನಾಥ ಹಚ್ಚಿದ. ಪುರಾಣಿಕರೆ ಮಾತಿಗೆ ಶುರುಮಾಡಿದರು.

‘I have kept ready for you the material I once gathered on Bhootha Raya. There is a curious folk song in it with two or three differenet versions. You know, only those women who have passed their menopause can go up the hill of Bhootharaya? The belief is that if a girl menstruates on the hill she can’t come down; she becomes the possession of Bhootharaya. This song describes the deluge and how it happens. A headstrong brahmin girl goes up the hill and menstruates. Thus she becomes the possession of Bhootharaya. She isn’t satisfied and sleeps with a paraiah. Bhootharaya is enraged. He comes down the hill and destroys the town in a furious dance. Not even his Lord Manjunatha is able to control him. Evil is let loose. In another version, which is more interesting, the Bhootharaya enjoys her in different forms as a bull, as horse, as a wild bear and then as a shudra and finally as a paraiah. The girl refuses him in the form of a paraiah and so the Bhootharaya is enraged and destroys the town. A very curious story. You must read it’.

ಜಗನ್ನಾಥ ಪುರಾಣಿಕರಿಂದ ದಾರದಲ್ಲಿ ಕಟ್ಟಿದ್ದ ಕಾಗದದ ಕಂತೆಯನ್ನು ತೆಗೆದುಕೊಂಡು ಹೊರಟ. ಮನೆಗೆ ಬಂದಾಗ ನೀಲಕಂಠಸ್ವಾಮಿ, ರಂಗರಾವ್ ಮತ್ತು ಅವರ ಅನುಯಾಯಿಗಳು ಅಂಗಳದಲ್ಲಿ ಕೂತು ಮಾತಾಡುತ್ತಿದ್ದರು. ಅಂಗಳದಾಚೆ ಅನಂತಕೃಷ್ಣರು ಹೊಲೆಯರ ಯುವಕರಿಗೊಂದು ಭಾಷಣ ಬಿಗಿಯುತ್ತಿದ್ದರು. ನೀಲಕಂಠಸ್ವಾಮಿಯನ್ನು ನೋಡಿದ ಕೂಡಲೆ ಜಗನ್ನಾಥನಿಗೆ ರೇಗಿತು:

‘ರೀ ಮಿಸ್ಟರ್ ನೀಲಕಂಠಸ್ವಾಮಿ, ನನ್ನನ್ನ ಹೊಗಳ್ತ ನಮ್ಮೂರಲ್ಲೆ ನೀವು ಪ್ರಚಾರ ಮಾಡಿದ್ದು ನನಗೆ ಹಿಡಿಸ್ಲಿಲ್ಲ. It was a very vulgar thing to do. ನಿಮ್ಮ ರಾಜಕೀಯಾನ ದಯವಿಟ್ಟು ಇಲ್ಲಿ ತರಬೇಡಿ’.

ಆಡಿಬಿಟ್ಟ ಮೇಲೆ ತನ್ನ ಮಾತು ಅನಾವಶ್ಯಕವಾಗಿ ಕ್ರೂರವಾಯಿತು ಎನ್ನಿಸಿತು. ಆದರೆ ಅವನ ಮುಖ ಕೆಂಪಾಗಿ ಮೈಕೈಯೆಲ್ಲ ನಡುಗುತ್ತಿತ್ತು. ನೀಲಕಂಠಸ್ವಾಮಿ ನಿರ್ಲಜ್ಜೆಯಿಂದ ಹೇಳಿದ:

‘ರಾಜಕೀಯ ನಿಮಗೆ ಹೊಸದು ಸಾರ್. ಅದಕ್ಕೇ ಹೀಗೆ ಮಾತಾಡ್ತೀರಿ. ಗ್ಲೌಸ್ ಹಾಕಿದ ಕೈಯಿಂದ ಕ್ರಾಂತಿ ಮಾಡೋಕೆ ಸಾಧ್ಯವಿಲ್ಲ. ಕೈ ಕೊಳೆ ಮಾಡಿಕೊಳ್ಳೋಕೆ ಹೇಸಿಗೆ ಪಡಬಾರ್ದು.’

‘I am sorry. ನಿಮ್ಮ ರಾಜಕೀಯಕ್ಕೆ ಈ ಸಿಚುಯೇಶನ್ನನ್ನ ದಯಮಾಡಿ ಎಕ್ಸ್‌ಪ್ಲಾಯಿಟ್ ಮಾಡಿಕೋಬೇಡಿ.’

ನೀಲಕಂಠಸ್ವಾಮಿ ತನ್ನ ಕೋಪವನ್ನ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಲಿಲ್ಲ. ಆದರೂ ತಾನು ಕೋಪಗೊಂಡೆನೆಂದು ಜಗನ್ನಾಥನ ಮನಸ್ಸಿಗೆ ಸಮಾಧಾನವಾಯಿತು. ತಾನು ಈ ಕುಹಕ ರಾಜಕಾರಣಿಗಳ ಕೈಗೊಂಬೆಯಾಗಬಾರದೆಂದು ನಿಶ್ಚಯಮಾಡಿ ಸೀದ ರೂಮಿಗೆ ಹೋದ. ಆದರೆ ತನ್ನ ಕೋಪಕ್ಕೆ ಬರೇ ನೀಲಕಂಠಸ್ವಾಮಿ ಕಾರಣನೆ? ಜಗನ್ನಾಥನ ಮೈ ಬಿಸಿಯಾಗಿತ್ತು. ಮಲಗಿಕೊಂಡು ಕಣ್ಣುಮುಚ್ಚಿದ.