ತ್ರಯೋದಶಿ. ಜಗನ್ನಾಥ ಬೆಳಿಗ್ಗೆ ಬೇಗ ಎದ್ದು ಮುಖ ತೊಳೆದು ಸ್ವೆಟರ್ ಹಾಕಿಕೊಂಡು ಹೊರಗೆ ಬಂದ. ಮಾರ್ಗರೆಟ್ ಕೊಟ್ಟ ಸ್ವೆಟರ್ ಅದೆಂದು ನೆನಪಾಗಿ ಮತ್ತೆ ಸಂಕಟವೆಲ್ಲ ಮರುಕಳಿಸಿತು. ಚಳಿ, ಗುಡ್ಡವನ್ನು ವೇಗವಾಗಿ ಹತ್ತಿದ. ಭಾರತೀಪುರವಿದ್ದ ಕಣಿವೆಯ ಒಳಗೆ ಸೂರ್ಯನಿಗೆ ಚೂರು ಚೂರೇ ಕರಗುತ್ತಿರುವ ಬೂರುಗನ ಹತ್ತಿಯಂತೆ ಹಗುರವಾದ ಮಂಜು. ಈಗ ಮಂಜು ಅಮುಕಿರುವ ಬೆಳಕು. ಕ್ರಮೇಣ ಮಂಜಿನ ತುಂಬ ತುಳುಕುವ ಬೆಳಕು. ಈಗ ಕಾಣುತ್ತಿರುವುದರ ಹಿಂದೆ ನೆನಪುಗಳೂ ಇವೆ. ಇದೇ ಚಳಿ, ಇದೇ ಮಂಜು, ಇದೇ ಬೆಳಗಿನ ಝಾವದ ಹಸುಗೂಸಿನಂಥ ಬೆಳಕು ತಾಯಿಯ ಕೈ ಹಿಡಿದು ನಡೆಯುವಾಗ, ಮತ್ತೆ ಈಗ. ಯಾತನೆಯಲ್ಲಿರುವಾಗ ಅವತ್ತು ಸ್ನಾನಕ್ಕೆ ಇಳಿದಾಗ ನದಿಯ ನೀರು ಬೆಚ್ಚಗೆ. ಅಹಹಾ ಎನ್ನುವ ಬಾಯಿಂದ ಹಬೆ, ಇದನ್ನೆಲ್ಲ ಹಿಂದೆಂದೂ ನೆನೆದಿದ್ದೇನೆ. ಪಾಚಿಗಟ್ಟಿದ ಪಾಗಾರ. ಅದರ ಮೇಲೆ ಕೋತಿ.

ಯಾವಾಗ ಯೋಚಿಸಿದ್ದು? ಈವಿಲ್‌ನಂತೆ ಕಂಡರೆ ಕಾಣಲಿ. ಪಿಳ್ಳ ಕೊಡಲಿಯ ಹರಿತವಾದ ಅಂಚು; ನಾನದರ ಕಾವು. ಅವನು ಪಡೆಯಬೇಕು; ನಾನು ಬಿಡಬೇಕು. ಪಡೆದು ಅವನು ಬಿಡುವುದನ್ನು ಕಲಿಯಬೇಕು. ಚರಿತ್ರೆ ಆಗ ಚಲಿಸುತ್ತದೆ.

ಪ್ರಾತಃಕಾಲ ದೇವರನ್ನು ಎಬ್ಬಿಸಲು ಹಾಡುತ್ತಾರೆ. ಮೈಮುರಿದು ಊರು ಎಚ್ಚರಾಗುವುದಕ್ಕೆ ನಾನು ಕಾದಿದ್ದೇನೆ. ಇವತ್ತು ಹೊಲೆಯರ ಗುಡಿಸಲಿಗೆ ಹೋಗುತ್ತೇನೆ. ಆದದ್ದಾಗಲಿ.

ಮನೆಗೆ ಬಂದು ಎಲ್ಲರ ಜೊತೆ ಕೂತು ಉಪ್ಪಿಟ್ಟು ತಿಂದು ಕಾಫಿ ಕುಡಿದ. ಊಟದ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಸಂಜೆಯ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಮತ್ತೆ ನೀಲಕಂಠಸ್ವಾಮಿ, ರಂಗರಾವ್ ಮತ್ತು ಅವರ ಗೆಳೆಯರು ಹೋದರು. ಬೆಳಗಿನಿಂದ ಚಿಕ್ಕಿ ಕಂಡಿರಲಿಲ್ಲ. ಏನು ಮಾಡುತ್ತಿರುವರೆಂದು ನೋಡಲು ಅಡಿಗೆ ಮನೆಗೆ ಹೋದ. ಭಾಗ್ಯವನ್ನು ತರಕಾರಿ ಹೆಚ್ಚುತ್ತಿದ್ದರು. ಚಿಕ್ಕಿ ಮಗ್ನರಾಗಿ ಮಣ್ಣಿನ ಒಲೆಯೊಂದನ್ನು ಕೊರೆಯುತ್ತಿದ್ದರು – ಕೋಡಲೊಲೆ. ಅವರು ಕೊರೆದ ಒಲೆ ತುಂಬ ಚೆನ್ನಾಗಿ ಉರಿಯುತ್ತದೆಂದು ಪ್ರಸಿದ್ಧಿ. ತಾನು ನಿಂತಿದ್ದು ಚಿಕ್ಕಿಗಾಗಲೀ ಭಾಗ್ಯಮ್ಮ ನಿಗಾಗಲೀ ಕಾಣಿಸಿರಲಿಲ್ಲ. ಚಿಕ್ಕಿಯ ಏಕಾಗ್ರತೆ ಕಂಡು ಆಶ್ಚರ್ಯವಾಯಿತು. ಬಂದವರಿಗೆ ಎಲ್ಲ ತಲ್ಲಣವನ್ನೂ ನುಂಗಿಕೊಂಡು ಅಡಿಗೆ ಮಾಡಿ ಬಡಿಸುತ್ತಿರುವ ಚಿಕ್ಕಿ ಬಗ್ಗೆ ಕೃತಜ್ಞನಾಗಿ ಮಾತಾಡದೆ ತನ್ನ ರೂಮಿಗೆ ಹೋಗಿ ಮಾರ್ಗರೆಟ್‌ಗೆ ಕಾಗದ ಬರೆಯಲು ಕೂತ.

Dear Margaret ಎಂದು ಪ್ರಾರಂಭಿಸಿ ಗಂಭೀರವಾದ ಬಿಗಿಯಾದ ಒಂದು ಕಾಗದ ಬರೆದ. ಕಾಗ ಸುಳ್ಳೆನಿಸಿತು. ಮೇಜಿನ ಮೇಲಿದ್ದ ಅವಳ ಫೋಟೋ ನೋಡಿ ಅವಳನ್ನು ಕಳೆದುಕೊಂಡ ಯಾತನೆ ಮರುಕಳಿಸಿತು. ಕೆನ್ನೆಮೇಲೆ ಇಳಿದ ಕೂದಲು: ಏನೋ ತುಂಟು ಮಾತಾಡಲು ಬಗ್ಗಿದ್ದಾಳೆ. ಕಣ್ಣು ನಗುತ್ತಿವೆ. ಅವಳ ಬೆನ್ನ ಹಿಂದೆ ತಮ್ಮ ಫ್ಲ್ಯಾಟಿನ ಹಿತ್ತಲಲ್ಲಿದ್ದ ಸೇಬಿನ ಮರ. ತಾನು ತೆಗೆದ ಫೋಟೋ. ಆ ಮರದ ಕೆಳಗೇ ಮಲಗಿ ತನ್ನನ್ನವಳು ತ್ಯಜಿಸಿದ್ದಳು. ಈಗ ಕ್ರಿಯೆಯಲ್ಲಿ ಮತ್ತೆ ತ್ಯಜಿಸಿದಳು.

ಮಾರ್ಗರೆಟ್‌ಗೆ ಬೇರೆಯಾಗುವ ಸ್ವಾತಂತ್ರರ್ಯವಿರಬೇಕು. ಇದ್ದೂ ತನ್ನ ವಸ್ತುವಾಗಿರಬೇಕು; ಹಾಗೆ ತನ್ನ ವಸ್ತುವಾಗಿದ್ದಾಗಲೂ ಸ್ವತಂತ್ರವಾಗಿ ಉಳಿದಿರಬೇಕು. ಇದು ತನ್ನ ಬಯಕೆ. ಅವಳು ತನ್ನ ವಸ್ತುವಾಗಿ ದಕ್ಕದೆ ಪ್ರೀತಿ ಸಫಲವಾಗಲ್ಲ; ಆದರೆ ತನ್ನಿಂದ ಪ್ರತ್ಯೇಕಳು ಅನ್ನಿಸದೆ ಪ್ರೀತಿ ಉಳಿಯಲ್ಲ. ತದ್ವಿರುದ್ಧ – ಆದಜೆ ನಿಜ. ಅದಕ್ಕೇ ಪ್ರೀತಿಸುವುದೆಂದರೆ ಯಾತನೆ.

Darling ಎಂದು ಪ್ರಾರಂಭಿಸಿ ಇನ್ನೊಂದು ಕಾಗದ ಬರೆದ. ಉದಾತ್ತವಾಗಿ ಅವಳನ್ನು ಕ್ಷಮಿಸುವ ಪ್ರೀತಿ ತುಂಬಿ. ಆದರೆ ಈ ಕಾಗದವೂ ಅವಳ ಸ್ವಾತಂತ್ರರ್ಯವನ್ನು ಅಪಹರಿಸಿ ಅವಳಲ್ಲಿ ಪಾಪಪ್ರಜ್ಞೆ ಬಿತ್ತುವ ಸೂಕ್ಷ್ಮ ಉಪಾಯವೆನ್ನಿಸಿತು. ಕಷ್ಟವೆಂದರೆ; ಯಾತನೆಯಲ್ಲಿದ್ದಾಗ ಯಾವ ತೋರಿಕೆಯೂ ಇಲ್ಲದೆ ಬಿಚ್ಚಿಕೊಳ್ಳುವುದು.

ಹರಿದು ಹಾಕಿ ಮತ್ತೆ ಬರೆದ. Dearest Margaret, ನನ್ನ ಉದಾತ್ತತೆ ಸೋತಲ್ಲಿ ಅವನ ಅಸೂಯೆ, ಕೀಳುತನ, ತೀವ್ರತೆ ಗೆದ್ದಿದೆ. ನನ್ನ ಉದಾತ್ತತೆಯನ್ನು ಮತ್ತೆ ನೀನು ಹೀಗೆ ಪರೀಕ್ಷೆಗೆ ಒಡ್ಡಿದ್ದಿ. ನನ್ನ ಸೋಲನ್ನು ಅರ್ಥಮಾಡಿಕೊಳ್ಳುತ್ತೇನೆ. ನಿನ್ನ ವ್ಯಕ್ತಿತ್ವ ನನಗೆ ಅರ್ಥಪೂರ್ಣವಾದ್ದರಿಂದ ನನ್ನನ್ನು ಬಿಟ್ಟು ಅವನು ನಿನಗೆ ಯಾಕೆ ಬೇಕೆನ್ನಿಸಿತೆಂಬುದನ್ನು ತಿಳಿಯಲು ಪ್ರಯತ್ನಿಸುತ್ತೇನೆ. ಕನಿಕರದ ಅವಶ್ಯಕತೆಯಿಲ್ಲ. ನಾನು ನಿಜವಾಗಿ ಬೇಕೆನ್ನಿಸುವ ಘಳಿಗೆ ಬಂದೀತು. ಅದಕ್ಕಾಗಿ ಗಟ್ಟಿಯಾಗಿ ಇಡಿಯಾಗೆ ಕಾದಿರುತ್ತೇನೆ – ಜಗನ್.

ಬರೆದದ್ದನ್ನು ಮತ್ತೆ ಓದಿದ. ಚಂದ್ರಶೇಖರನ ಹೆಸರನ್ನು ಕಾಗದದಲ್ಲಿ ಯಾಕೆ ತಾನು ಎಲ್ಲೂ ಎತ್ತಿರಲಿಲ್ಲ? ಹೆಸರೆತ್ತಿ ಬರೆಯುವುದು ಯಾತನೆಯಾದ್ದರಿಂದ ‘ಅವನು’ ಎಂದು ಬರೆದ. ಮಾರ್ಗರೆಟ್ ಪ್ರೀತಿಸುವವನನ್ನು ಅನಾಮಧೇಯನೆಂದು ಕಾಣುವುದು ಸಣ್ಣತನವಾದೀತು. ಮತ್ತೊಮ್ಮೆ ಕಾಗದವನ್ನು ಅಲ್ಲಲ್ಲಿ ತಿದ್ದಿ ಬರೆದ; ಮಾರ್ಗರೆಟ್ ಆಪ್ತವಾಗಿ ಕರೆಯುವ ‘ಚಂದರ್‌’ ಎನ್ನುವ ಹೆಸರನ್ನೆ ಉಪಯೋಗಿಸಿದ. ಹಾಗೆ ಬರೆಯುವಾಗ ಅವರಿಬ್ಬರೂ ಬೆತ್ತಲೆಯಾಗಿ ಒಟ್ಟಿಗಿರುವ ಸನ್ನಿವೇಶವನ್ನು ಕಂಡಂತಹ ಯಾತನೆಪಟ್ಟ. ಗೆದ್ದೆ ಎನ್ನಿಸಿ ಬರೆದದ್ದನ್ನು ಓದಿದ. ಆದರೆ ಈ ಬದಲಾವಣೆಯಿಂದಾಗಿ ಚಂದ್ರಶೇಖರನ ಬಗ್ಗೆ ತನಗೆ ಅಸೂಯೆಯಿಲ್ಲೆಂದು ತೋರಿಸಿಕೊಳ್ಳುವ ಸುಳ್ಳು ಉದಾತ್ತತೆ ಕಾಗದದಲ್ಲಿ ಇಣುಕಿತ್ತು.

ತನಗೆ ಬೇರೆ ಮಾರ್ಗವಿಲ್ಲೆನಿಸಿತು. ಕಾಗದದ ತುದಿಯಲ್ಲಿ ಇವತ್ತು ನಾನು ಹೊಲೆಯರ ಗುಡಿಗಳಿಗೇ ಹೋಗುವ ಸಾಹಸ ಮಾಡುತ್ತಿದ್ದೇನೆ ಎಂದು ಬರೆದು ಸೀದ ಪೋಸ್ಟ್‌ಬಾಕ್ಸ್ ಇದ್ದಲ್ಲಿಗೆ ನಡೆದು ಹೋಗಿ ಕಾಗದ ಪೋಸ್ಟ್ ಮಾಡಿ ಬಂದ. ಮನಸ್ಸು ಹಗುರಾಗಿತ್ತು.

ಮಧ್ಯಾಹ್ನ ಊಟಕ್ಕೆಲ್ಲರೂ ಸೇರಿದ ಹೊತ್ತಿಗೆ ‘ಇವತ್ತು ನಾನು ಭಾಷಣ ಮಾಡಲ್ಲ. ನೀವೇ ಕಾರ್ಯಕ್ರಮ ನಡೆಸಿ’ ಎಂದ. ನೀಲಕಂಠಸ್ವಾಮಿಗೆ ಶಾಕ್ ಆಗಿರಬೇಕು. ‘ಛೇ ನೀವು ಹಾಗೆ ಹಿಂದೆಗೆಯಬಾರದು’ ಎಂದ. ‘ಹಿಂದೆಗೆಯುವ ವಿಷಯವಲ್ಲ. ಬೇರೆ ಕಾರ್ಯಕ್ರಮವಿದೆ. ಮಾತಾಡಿ ಪ್ರಯೋಜನವಿಲ್ಲವೆನ್ನಿಸತ್ತೆ’ ಎಂದ. ಅದಕ್ಕೆ ಅನಂತಕೃಷ್ಣರು ‘ಹರಿಜನರ ಬಗ್ಗೆ ಸವರ್ಣೀಯರು ಪ್ರೀತಿಯಿಂದ ನಡೆದುಕೊಳ್ಳುವಂತೆ ಮಾಡಬೇಕು. ಅದೇ ಗಾಂಧೀಜಿಯ ಆದೇಶ. ನೀವು ಮಾತಾಡಿದರೆ ಜನ ಒಲಿದಾರು’ ಎಂದರು. ಜಗನ್ನಾಥ ‘ನನ್ನ ಉದ್ದೇಶ ಅದಲ್ಲ, ಹೊಲೆಯರು ಪ್ರತಿಭಟಿಸುವಂತೆ ಮಾಡೋದೇ ಮುಖ್ಯ. ಹೊಲೆಯರು ಮೊದಲು ವ್ಯಕ್ತಿಗಳಾಗಬೇಕು. ಆದ್ದರಿಂದ ಮಾತಾಡಿ ಪ್ರಯೋಜನ ಇಲ್ಲಾಂತ ನಿರ್ಧರಿಸಿದ್ದೇನೆ’ ಎಂದ. ರಾಯರು ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಊಟವಾದ ಮೇಲೆ ನೀಲಕಂಠಸ್ವಾಮಿಗೆ, ‘ನಿಮ್ಮ ಪ್ರಚಾರ ನೀವು ಮಾಡಿ. ನನ್ನನ್ನ ತಪ್ಪು ತಿಳಿಯಬೇಡಿ. ನಾನು ಬೇರೆ ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ಭಾಷಣ ಮಾಡೋಕಿಂತ ಮುಖ್ಯವಾದ್ದು’ ಎಂದು ಹೇಳಿ ಒಪ್ಪಿಸಿದ. ‘ನೀವು ಮಾತಾಡ್ತೀರಿ ಅಂದ್ರೆ ಜನ ಬರ್ತಾರೆ’ ಎಂದ ರಂಗರಾವ್.

ಎಲ್ಲರೂ ಮತ್ತೆ ಪ್ರಚಾರಕ್ಕೆ ಹೋದರು. ಜಗನ್ನಾಥ ರೂಮಿಗೆ ಹೋಗಿ ನೋಟ್‌ಬುಕ್ಕಲ್ಲಿ ಬರೆದ; ನಿಶ್ಚಯದ ಕ್ರಿಯೆಗೆ ಗಟ್ಟಿಯಾಗಬೇಕು; ನೋವಿಗೆ, ಸುಖಕ್ಕೆ ಒಳಗೆ ಮೃದುವಾಗಿಯೂ ಉಳಿಯಬೇಕು. ನಾಗಮಣಿಯ ಸಾವನ್ನ ಅರ್ಥಮಾಡಿಕೋಬೇಕು.

ಒಂದು ಧಾಸಾಳ ಭಾವನೆ ಒಳಗರಳುತ್ತಿತ್ತ. ಬರೆದ : ಚಿಕ್ಕಿಯಂಥವರಿಗೆ ಹೊಲೆಯರು ಗೊತ್ತು. ಯಾರು ಕೆಲಸದಲ್ಲಿ ಕಳ್ಳರು, ಯಾರು ಬಸುರಿ, ಯಾವಳನ್ನು ಯಾರು ಇಟ್ಟುಕೊಂಡಿದ್ದಾರೆ, ಇವಳಿಗೆಷ್ಟು ಮಕ್ಕಳು, ಎಷ್ಟು ಸತ್ತವು? ಆದರೆ ನಾನು ಬೇರೊಂದು ಸಂಬಂಧದಲ್ಲಿ ಅವರನ್ನು ಇನ್ನಷ್ಟು ಆಳವಾಗಿ ಅರಿಯಲು ಹೊರಟಿದ್ದೇನೆ. ಅದಕ್ಕಾಗಿ ಮಂಜುನಾಥ, ನನ್ನ ಪೂರ್ವಸ್ಮೃತಿ, ಒಳಗೆ ಮೊಳಗುವ ದೇವಾಲಯದ ಘಂಟೆಗಳು, ಜನರ ಅದರ – ಎಲ್ಲವನ್ನೂ ನಾಶಮಾಡುತ್ತೇನೆ. ವಿಸರ್ಜಿಸಿಕೊಳ್ಳುತ್ತೇನೆ, ಬಿಡುತ್ತ ಪಡೆಯುತ್ತೇನೆ. ಅವುಗಳೂ ಪಡೆದು ಬಿಡುವುದನ್ನು ಕಲಿಯುತ್ತಾರೆ. ಈ ಕ್ಷುದ್ರರ ಸ್ವಾತಂತ್ರ‍ರ್ಯ ಹಿಗ್ಗಿಸುವುದರಲ್ಲೆ ನನ್ನ ಸ್ವಾತಂತ್ರ‍ರ್ಯ ಹಿಗ್ಗುತ್ತದೆ. ಹೊಸ ವಾಸ್ತವದಲ್ಲಿ ಮಾರ್ಗರೆಟ್ಟನ್ನು ಮತ್ತೆ ಪಡೆಯುತ್ತೇನೆ.

ರಾಯರು ಅವಸರವಾಗಿ ಬಂದರು. ಜಗನ್ನಾಥ ಪ್ರಶ್ನಾರ್ಥಕವಾಗಿ ಅವರನ್ನು ನೋಡಿದ. ‘ಆಳುಗಳನ್ನ ಕೆಲಸದಿಂದ ಬಿಡಿಸಿದ್ದು ಯಾರೂಂತ ನಿನಗೆ ಗೊತ್ತಿ?’ ಎಂದು ಕೇಳಿ ಕೂತು ಎಲೆಯಡಿಕೆ ಹಾಕುತ್ತ ಪ್ರಭುವಿನ ಮಸಲತ್ತನ್ನೆಲ್ಲ ವರ್ಣಿಸಿದರು. ‘ನಿನಗೆ ಅವನಿಂದ ಅಪಯವಿದೆ’ ಎಂದು ಎಚ್ಚರಿಸಿ ಅನಂತಕೃಷ್ಣರ ಜೊತೆ ಹರಟಲು ಹೋದರು.

ಸಾಯಂಕಾಲವಾಗುವುದಕ್ಕಾಗಿ ಜಗನ್ನಾಥ ಕಾದ. ಯಾವ ಹೊಳೆಯನೂ ಭಾಷಣಕ್ಕೆ ಹೋಗಿರುವುದಿಲ್ಲವೆಂದು ಅವನಿಗೆ ಗೊತ್ತಿತ್ತು. ಮುಖ ತೊಳೆದು ಶುಭ್ರವಾದ ಬಟ್ಟೆ ತೊಟ್ಟು ತಲೆ ಬಾಚಿಕೊಂಡು ಪ್ರಸನ್ನ ಮನಸ್ಸಿನಿಂದ ಹೊಲೆಯರ ಗುಡಿಗಳ ಕಡೆ ನಡೆದ. ಹುಡುಗನಾಗಿದ್ದಾಗ ತಾಯಿ ಹೇಳುತ್ತಿದ್ದುದು ನೆನಪಾಯಿತು. ತಮ್ಮ ಗುಡಿಗಳೊಳಗೆ ಬ್ರಾಹ್ಮಣರು ಬಂದರೆ ಹೊಲೆಯರು ಹೊಡೆದಟ್ಟುತ್ತಾರೆ; ತಾವು  ನಾಶವಾಗುತ್ತೇವೆಂದು ಹೆದರುತ್ತಾರೆ. ಜಗನ್ನಾಥನಿಗೆ ದಿಗಿಲಾಯಿತು.

ಗುಡ್ಡದ ಮೇಲಿದ್ದ ಸೋಗೆ ಹೊದೆಸಿದ ಗುಡಿಗಳನ್ನು ನೋಡುತ್ತಾ ನಡೆದ. ತಾನು ಒಳಗೆ ಹೋಗಿ ನಿಂತ ಘಳಿಗೆ ಹೊಲೆಯರಿಗೆ ಆಗಬಹುದಾದ ದಿಗಿಲನ್ನು ನೆನೆದು ಅವನ ಮೈ ಬೆವತಿತು. ಎಲ್ಲವನ್ನೂ ಎದುರಿಸದೆ ವಿಧಿಯಿಲ್ಲವೆನ್ನಿಸಿತು. ನೆಟ್ಟಗೆ ನಡೆದ. ಯಾರೂ ಕಾಣಿಸಲಿಲ್ಲ. ಹಿತ್ತಲಲ್ಲಿ ಹೊಲತಿಯೊಬ್ಬಳು ಮೂರು ಕಲ್ಲಿನ ಮೇಲೆ ಕಲ್ಲಿನ ದೊಡ್ಡ ಮಡಿಕೆಯೊಂದನ್ನಿಟ್ಟು ಉರಿ ಹಾಕುತ್ತಿದ್ದಳು. ರಾತ್ರೆ ಮೀಯಲೆಂದಿರಬೇಕು. ಸಂಜೆಯ ಚಳಿಯಲ್ಲೂ ಮೈ ಮೇಲೆ ಒಂದು ಚೂರೂ ಬಟ್ಟೆಯಿಲ್ಲದ ಸಿಂಬಳ ಬುರುಕ ಮಕ್ಕಳು ಕೆಲವು ನೆಲದ ಮೇಲೆ ಆಡುತ್ತಿದ್ದುವು.

‘ಪಿಳ್ಳ’

ಎಂದು ಕೂಗುತ್ತ ಜಗನ್ನಾಥ ಗುಡಿಯೊಂದರ ಎದುರು ನಿಂತ. ಯಾರ ಗುಡಿಯೊ? ದೇವಸ್ಥಾನಕ್ಕೂ ಗುಡಿ ಎನ್ನುತ್ತಾರೆ; ಹೊಲೆಯರು ವಾಸ ಮಾಡುವ  ಜಾಗಕ್ಕೂ ಗುಡಿ ಎನ್ನುತ್ತಾರೆ, ವಿಚಿತ್ರ. ‘ಪಿಳ್ಳ’ ಎಂದು ಮತ್ತೆ ಕರೆದು ಹಿಂದಕ್ಕೆ ತಿರುಗಿ ನೋಡಿದ.

ಎಲ್ಲೆಲ್ಲಿಂದಲೋ ಹೊಲೆಯರು ಪ್ರತ್ಯಕ್ಷವಾಗಿ ನಿಂತಿದ್ದುವು. ತಲೆ ಕೆದರಿ ಲಂಗೋಟಿ ಮಾತ್ರ ತೊಟ್ಟ ಬರಿ ಮೈಯಲ್ಲಿ ನಿಶ್ಚೇಷ್ಟಿತರಾದಂತೆ. ಕಡೆದು ನಿಲ್ಲಿಸಿದ ಕಪ್ಪು ಶಿಲೆಯ ವಿಗ್ರಹಗಳಂತೆ. ಜಗನ್ನಾಥ ನಸುನಗಲು ಪ್ರಯತ್ನಿಸುತ್ತ ‘ಪಿಳ್ಳ ಇದಾನ?’ ಎಂದು ಕೇಳಿದ. ಉತ್ತರವಿಲ್ಲ. ಭಯವಾಯಿತು.

‘ಸ್ವಲ್ಪ ಕೆಲಸವಿತ್ತು. ನೋಡೋಣಾಂತ ಬಂದೆ.’

ತನ್ನ ನಯವಾದ ಮಾತಿನಿಂದ ಇನ್ನಷ್ಟು ಹೊಲೆಯರಿಗೆ ಗಾಬರಿಯಾಗಿರಬೇಕು. ಯಾರೂ ಚಲಿಸಲಿಲ್ಲ. ಮಕ್ಕಳು ಮಾತ್ರ ಆಡುತ್ತಲೇ ಇದ್ದವು. ಸೂರ್ಯ ಮುಳುಗುತ್ತಿದ್ದ. ಇಡೀ ಸನ್ನಿವೇಶ ಯಾವ ಸದ್ದು ಇಲ್ಲದೇ ಕೃತಕವಾಗಿತ್ತು. ಅಲ್ಲೊಬ್ಬ ಇಲ್ಲೊಬ್ಬನಂತೆ ಹೊಲೆಯರು ನಿಂತು ತನ್ನನ್ನು ದುರುಗುಟ್ಟಿ ನೋಡುತ್ತಿರುವುದು ಜಗನ್ನಾಥನಿಗೆ ಅಸಹನೀಯವಾಯಿತು ಅಧಿಕಾರವಾಣಿಯಿಂದ ಕೇಳಿದ :

‘ಯಾಕೆ ಹಾಗೆ ನನ್ನ ನೋಡ್ತ ಇದೀರಿ? ಇಲ್ಲಿದಾನೆ ಪಿಳ್ಳ ಹೇಳಿ’.

ಆಗತಾನೇ ಪಿಳ್ಳ ಬಂದಿರಬೇಕು. ಬಿಳಿ ಬಟ್ಟೆಯುಟ್ಟು ಅವಸರವಾಗಿ ಕುಂಟುತ್ತ ತನ್ನೆಡೆಗೆ ಅವನು ಬಂದ. ಅವನ ಮುಖದಲ್ಲೂ ದಿಗಿಲಿತ್ತು. ಆದರೂ ಹೇಳಿದ :

‘ಬನ್ನಿ ಒಡೆಯ ಕೂತುಕೊಳ್ಳಿ’.

ಪಿಳ್ಳ ತನ್ನ ಗುಡಿಯ ಕಡೆ ನಡೆದ. ಗೆದ್ದೆನೆಂಬ ಸಂತೋಷದಿಂದ ಜಗನ್ನಾಥನೂ ಅವನ ಜೊತೆ ನಡೆದ. ಗುಡಿಯ ತಟ್ಟಿಯ ಬಾಗಿಲನ್ನು ತೆರೆದು ‘ಬನ್ನಿ ಒಡೆಯ’ ಎಂದು ಪಿಳ್ಳ ಕರೆದ. ತಾನು ಬಯಸಿದ್ದಕ್ಕೂ ಮಿಗಿಲಾಗಿ ಸನ್ನಿವೇಶ ಬದಲಾದ್ದು ಕಂಡು ಜಗನ್ನಾಥ ಆಶ್ಚರ್ಯಪಡುತ್ತ ಒಳಗೆ ಹೋದ.

ಅಟ್ಟದಿಂದ ಇಳಿಬಿಟ್ಟ ಕೆಲವು ಬುಟ್ಟಿಗಳು, ಒಂದೆರಡು ಮಡಕೆಯಲ್ಲದೆ ಪಿಳ್ಳನ ಗುಡಿಯಲ್ಲಿ ಇನ್ನೇನೂ ಇರಲಿಲ್ಲ. ಆದರೆ ಹೊಳೆಯುವಂತೆ ಉಜ್ಜಿದ ಮಣ್ಣಿನ ನೆಲ ಸ್ವಚ್ಛವಾಗಿತ್ತು. ಜಗನ್ನಾಥನಿಗೆ ಕೂರಲು ಏನು ಕೊಡುವುದೆಂದು ತಿಳಿಯದೆ ತಬ್ಬಿಬ್ಬಾದ ಪಿಳ್ಳನಿಗೆ ‘ಏನೂ ಬೇಡ’ವೆಂದು ಜಗನ್ನಾಥ ನೆಲದ ಮೇಲೇ ಕೂತ.

ದೂರದಲ್ಲಿ ನಿಂತಿದ್ದ ಹೊಲೆಯರೆಲ್ಲ ಪಿಳ್ಳನ ಗುಡಿಯನ್ನು ಸುತ್ತುವರೆದರು. ಅವರಲ್ಲೆಲ್ಲ ಹಿರಿಯನಾಗಿದ್ದ ಒಬ್ಬ ಹೊಳೆಯ ಒಳಗೆ ಬಂದು ಒಡೇರು ಹೀಗೆಲ್ಲ ನಮ್ಮ ಗುಡಿಯೊಳಗೆ ಬರಕೂಡದೆಂದು ಹೆದರಿಕೆಯಿಂದ ನಡುಗುವ ಸ್ವರದಲ್ಲಿ ಹೇಳಿದ. ಜಗನ್ನಾಥ ಪಿಳ್ಳನನ್ನು ನೋಡಿ ನೀನೇ ಅವರಿಗೆ ವಿವರಿಸು ಎಂದ. ಪಿಳ್ಳ ಪ್ರಯತ್ನಪಟ್ಟ; ಒಡೇರು ಹೊಲೇರನ್ನೂ ಮುಟ್ಟಬಹುದು ಅಂತಾರೆ, ಇತ್ಯಾದಿ. ಯಾರಿಗೂ ಅರ್ಥವಾಗದಂತೆ ತಿಳಿಯಲಿಲ್ಲ.

‘ಉಳಿದ ಹುಡುಗರೆಲ್ಲಿ?’ ಜಗನ್ನಾಥ ಕೇಳಿದ.

‘ಈಗ ಬತ್ತಾವೆ ಒಡೇರೆ.’ ಪಿಳ್ಳ ಸಹಜವಾಗಿ ಮಾತಾಡಲು ಶುರುಮಾಡಿದ್ದು ನೋಡಿ ಜಗನ್ನಾಥನಿಗೆ ಸಂತೋಷವಾಯಿತು.

‘ಯಾರೂ ಹೆದರಕೂಡದು ಪಿಳ್ಳ. ನನ್ನ ಜೊತೆ ನೀವು ಸೀದಾ ನಡೆದುಬರಬೇಕು. ನೀವು ಸಿಟ್ಟಾಗಿ ಜಗಳಕ್ಕೆ ನಿಲ್ಲಬೇಕು. ನೀವು ಹಂದಿಗಳಲ್ಲ ಮನುಷ್ಯರು ಅಂತ ಹೇಳಬೇಕು. ತಿಳೀತ?’

ಇನ್ನೂ ಏನೇನೋ ಹೇಳಬೇಕೆಂದಿದ್ದುದನ್ನು ಜಗನ್ನಾಥ ನುಂಗಿಕೊಂಡು ಎದ್ದು ಎಲ್ಲರ ಎದುರಿನಲ್ಲಿ ಪಿಳ್ಳನ ಭುಜದ ಮೇಲೆ ಕೈ ಹಾಕಿದ.

‘ನಿನ್ನ ಅಪ್ಪ ಎಲ್ಲಿ?’

ಪಿಳ್ಳ ದೂರದಲ್ಲಿ ನಿಂತ ಅಪ್ಪನನ್ನು ತೋರಿಸಿದ.

‘ನಿನ್ನ ಮಗನಿಗೆ ಮುಂದಿನ ತಿಂಗಳು ಮದುವೆ ಮಾಡಿಸಾಣ ಕಣಯ್ಯ.’ ಜಗನ್ನಾಥ ನಗುತ್ತ ಹೇಳಿದ. ಹೊಲೆಯರೆಲ್ಲ ಮಂಕಾಗಿದ್ದಂತೆ ಕಂಡಿತು. ಇದು ಪ್ರಾರಂಭ; ಮುಂದೆಲ್ಲ ಸರಿಹೋಗುತ್ತದೆಂದುಕೊಂಡು,

‘ನಾನು ಬಂದಿದ್ದೇಂತ ಉಳಿದ ಹುಡುಗರಿಗೂ ಹೇಳು’ ಎಂದು ಪಿಳ್ಳನಿಗೆ ಹೇಳಿ ಜಗನ್ನಾಥ ಹೊರಟ. ಮನೆಯ ತನಕ ಬಿಟ್ಟುಬರಲು ಪಿಳ್ಳನೂ ಕುಂಟುತ್ತ ಬಂದ.

* * *

ಮನೆಗೆ ಬಂದಾಗ ಜಗನ್ನಾಥ ಖುಷಿಯಾಗಿದ್ದ. ಬದಲಾವಣೆಯೆಂದರೆ ದಿಗಿಲು ಸಹಜವಾದ್ದು – ಹೊಲೆಯರಿಗೆ, ನನಗೆ. ಈ ದಿಗಿಲನ್ನು ಕೋಡು ಹಿಡಿದು ನೋಡಿದ ಮೇಲೆ ಸಡಿಲವಾಗಲು ಪ್ರಾರಂಭಿಸುತ್ತೆ. ಭಾಷಣ ಮುಗಿಸಿ ಹುರುಪಿನಿಂದ ಅನಂತಕೃಷ್ಣ, ರಂಗರಾವ್, ನೀಲಕಂಠಸ್ವಾಮಿ ಬಂದಿದ್ದರು; ತಾವು ಆಡಿದ ಮಾತುಗಳನ್ನು ಚರ್ಚಿಸುತ್ತಿದ್ದರು. ರಾಯರು ಅನಂತಕೃಷ್ಣನಿಗೆ ‘ಚೆನ್ನಾಗಿ ಮಾತಾಡಿದಿ’ ಎಂದರು. ‘ಆದರೆ ಸರ್ವೋದಯದವರ ಸಮಜಾಯಿಸಿ ಮಾಡೋ ರಾಜಕೀಯ ನಾನು ಒಪ್ಪಲ್ಲ’ ಎಂದು ನೀಲಕಂಠಸ್ವಾಮಿ ಸಕಾರಣವಾಗಿ ಚೆನ್ನಾಗಿ ಚರ್ಚಿಸಿದ. ಜಗನ್ನಾಥನೂ ಚರ್ಚೆಯಲ್ಲಿ ಭಾಗವಹಿಸಿದ. ಜಾತೀಯತೆಯ ಪ್ರಶ್ನೆ ಬಂತು. ಜಗನ್ನಾಥ ಹೇಳಿದ :

‘ಲಿಂಗಾಯಿತರಿಗೆ ಜಾತೀಯವಾದಿಗಳಾಗೋ ಅಧಿಕಾರ ಶೇಕಡಾ ಐವತ್ತು ಇದೆ ಅನ್ನಬಹುದು. ಯಾಕೇಂದ್ರೆ ಇನ್ನೂ ಹಿಂದುಳಿದವು ಅವರ ಜಾತೀಲಿ ಇದಾರೆ. ಒಕ್ಕಲಿಗರಿಗೆ ಶೇಕಡಾ ಎಪ್ಪತ್ತು ಭಾಗ ಜಾತೀಯವಾದಿಗಳಾಗೋ ಅಧಿಕಾರ ಇದೆ ಅನ್ನಬಹುದೇನೋ. ಬ್ರಾಹ್ಮಣರಿಗಂತೂ ಶೇಕಡಾ ನೂರಕ್ಕೆ ನೂರು ಜಾತೀಯವಾದಿಗಳಾಗೋ ಅಧಿಕಾರ ಇಲ್ಲ. ಹಾಗೇನೇ ಶೇಕಡಾ ನೂರಕ್ಕೆ ನೂರು ಜಾತಿವಾದಿಗಳಾಗೋ ಅಧಿಕಾರ ಇರೋದೂಂದ್ರೆ ಹೊಲೆಯರಿಗೆ, ಆದರೆ ದುರಂತ ಅಂದ್ರೆ ಅವರಲ್ಲಿ ಆ ಪ್ರಜ್ಞೆ ಇಲ್ಲ. ನೌಕರಿಗಾಗಿ ಕಚ್ಚಾಡೋ ಬ್ರಾಹ್ಮಣರು, ಲಿಂಗಾಯಿತರು, ಗೌಡರು ಜಾತೀಯವಾದಿಗಳಾಗ್ತಾರೆ ಅಷ್ಟೆ’.

ನೀಲಕಂಠಸ್ವಾಮಿ ಜಗನ್ನಾಥನ ವಾದಾನ್ನ ಸಮರ್ಥಿಸಿದ. ಜಾತಿಪ್ರಜ್ಞೆಗಿಂತ ವರ್ಗಪ್ರಜ್ಞೇನೇ ಉತ್ತಮ ಅಂತ ರಂಗರಾವ್ ವಾದಿಸಿದ. ಪ್ರೇಮವಿಲ್ಲದೆ ಏನೂ ಆಗಲ್ಲ ಅಂತ ಅನಂತಕೃಷ್ಣ ಹೇಳಿದರು. ಅಡಿಗರು ಎಲ್ಲವದನ್ನೂ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತ ಕೂತಿದ್ದವರು ಪೃಷ್ಠ ಎತ್ತಿ ಹೂಸಿದರು. ‘ಹಾಳು ವಾಯು. ಆದರೆ ವಾಯು ಪದಾರ್ಥಾಂದ್ರೇ ಇಷ್ಟ ಈ ದೇಹಕ್ಕೆ’ ಎಂದು ತಮ್ಮಷ್ಟಕ್ಕೆ ಮಾತಾಡಿಕೊಂಡರು. ಸೋಷಲಿಸ್ಟ್ ಹುಡುಗರು ಮುಜುಗರದಿಂದ ಮುಖ ತಗ್ಗಿಸಿದರು.

ಊಟವಾದ ಮೇಲೆ ಎಲ್ಲರೂ ಮಲಗಿಕೊಳ್ಳಲು ಹೋದರು. ಜಗನ್ನಾಥ ಅಂಗಳದಲ್ಲಿ ಅಡ್ಡಾಡಿದ. ಆಕಾಶದಲ್ಲಿ ಮಹರ್ಷಿ ವಸಿಷ್ಠ, ಪಕ್ಕದಲ್ಲಿ ಹೊಲತಿ ಅರುಂಧತಿ. ನಗುಬಂತು. ಅಮಾವಾಸ್ಯೆಯ ಎದುರಿನ ಚಳಿ ರಾತ್ರಿಯಲ್ಲಿ ನಕ್ಷತ್ರಗಳು ಸೂಜಿಮೊನೆಯಾಗಿ ಹೊಳೆಯುತ್ತಿದ್ದವು. ಜಗನ್ನಾಥನ ಮನಸ್ಸು ಉಲ್ಲಾಸದಲ್ಲಿ ಅರಳಿತ್ತು. ಒಳಗೆ ಹೋಗಿ ಚಿಕ್ಕಿ ಮಲಗಿದ್ದ ರೂಮಿನ ಬಾಗಿಲು ತೆರೆದ. ಬರಿ ಸೀರೆಯೊಂದನ್ನು ಹೊದ್ದು ದೀಪ ಆರಿಸದೆ ಚಿಕ್ಕಿ ಮಲಗಿದ್ದರು. ‘ಹೊದ್ದುಗೊಂಡು ಮಲಗಿ ಚಿಕ್ಕಿ, ಚಳಿಯಾಗಲ್ವ?’ ಎಂದು ಬೆಂಚಿನ ಮೇಲಿದ್ದ ರಗ್ಗನ್ನು ಬಿಚ್ಚಿ ಚಿಕ್ಕಿಗೆ ಹೊದಿಸಲು ಹೋದ. ‘ಅಯ್ಯೋ ನನಗ್ಯಾಕೆ?’ ಎಂದು ಬೋಗಾರು ದುಃಖದ ಮಾತನ್ನು ಚಿಕ್ಕಿ ಆಡಿದ್ದು ಕೇಳಿ ಜಗನ್ನಾಥ ನಗುತ್ತ ಒತ್ತಾಯ ಮಾಡಿ ರಗ್ಗು ಹೊದಿಸಿದ. ಲಾಟೀನಿನ ದೀಪ ಸಣ್ಣ ಮಾಡಿದ. ಚಿಕ್ಕಿಗೆ ಖುಷಿಯಾಗಿತ್ತು. ಪ್ರಾಯಶಃ ತಾಯಿ ಬದುಕಿದ್ದರೆ, ಅಥವಾ ಮದುವೆಯಗಬೇಕಾದ ತಂಗಿಯೊಬ್ಬಳಿದ್ದರೆ ತನಗೆ ಈ ಬಂಡಾಯ ಸಾಧ್ಯವಾಗುತ್ತಿರಲಿಲ್ಲವೇನೊ? ಅಥವಾ ತಾನು ಮಧ್ಯಮ ವರ್ಗದವನಾಗಿದ್ದರೆ?

* * *

ರೂಮಿಗೆ ಹೊಗಿ ಲಾಟೀನಿನ ದೀಪವನ್ನು ಸಣ್ಣಗೆ ಮಾಡಿ ಮಲಗಿದ. ಮೈ ಬೆಚ್ಚಗಾದ್ದರಿಂದ ಶಾಲಿನ ಮೇಲೊಂದು ರಗ್ಗು ಬೇಕೆನ್ನಿಸಲಿಲ್ಲ. ಎಷ್ಟೋ ವರ್ಷಗಳ ಕೆಳಗೆ ತಾಯಿ ತಂದುಕೊಟ್ಟ ಉಣ್ಣೆಯ ಶಾಲದು. ನಶ್ಯ ಬಣ್ಣದ ಮೃದುವಾದ ಶಾಲು. ಇಪ್ಪತ್ತು ವರ್ಷಗಳಿಂದ ಹೊದ್ದದ್ದು. ಹೊದ್ದುಹೊದ್ದು ಅದು ಸವೆದು ನುಣುಪಾಗಿದೆ. ಹರಿದ ಕಡೆಯೆಲ್ಲ ಅವನದನ್ನು ಖುದ್ದು ಹೊಲಿದಿದ್ದಾನೆ. ಮಾರ್ಗರೆಟ್ ಹಾಸ್ಯಮಾಡಿ ಎರಡು ತೇಪೆ ಹಾಕಿದ್ದಾಳೆ. ಅಪ್ಪ ಸತ್ತ ಮೇಲೆ ತಾಯಿ ಹತ್ತು ತಿಂಗಳ ಕಾಲ ತೀರ್ಥಯಾತ್ರೆಗೆಂದು ಹೋದರು. ಕಾಶಿಯಲ್ಲಿ ಈ ಶಾಲುಕೊಂಡು ತಂದರು. ಜಗನ್ನಾಥ ಅದನ್ನು ಹೊದ್ದು, ಕಾಲು ಮಡಿಚಿ, ತೊಡೆಯ ಸಂದಿ ಕೈಯಿಟ್ಟು, ಬಾಲಕನಿದ್ದಾಗ ಮಲಗುತ್ತಿದ್ದಂತೆ ಈಗಲೂ ಮಲಗುತ್ತಾನೆ. ಬಹಳ ಆಪ್ತವೆನ್ನಿಸಿ ಸುಖವಾದ ನಿದ್ದೆ ಹತ್ತಲು ಹೀಗೆ ಮಲಗಬೇಕು. ಗರ್ಭದೊಳಗಿನ ಶಿಶು ಎಂದು ಮಾರ್ಗರೇಟ್ ಹಾಸ್ಯ ಮಾಡಿದ್ದುಂಟು. ಅವನ ಮಡಿಸಿದ ಮಂಡಿಯನ್ನು ತನ್ನ ಕಾಲಿನಿಂದ ಒದ್ದು ತಳ್ಳುತ್ತಿದ್ದಳು. ಹೀಗೆ ನೀನು ಮಲಗಿದರೆ ಇಬ್ಬರಿಗೆ ಹಾಸಿಗೆ ಸಾಲದಾಗುತ್ತೆ ಎಂದು ಕಿಚಾಯಿಸುತ್ತಿದ್ದಳು. ಕೈಗಳನ್ನೆಳೆದು ನೆಟ್ಟಗೆ ಮಲಗಿಸಿ ನಗುತ್ತಿದ್ದಳು. ಅವಳು ಪಾದವನ್ನು ಚಿಲಕದಂತೆ ತನ್ನ ಪಾದಗಳಿಗೆ ಸಿಕ್ಕಿಸಿ ನೆಟ್ಟಗಿರಿಸಿದ್ದರೂ ನನ್ನ ಕಾಲುಗಳು ಹಾಗೇ ನಿದ್ದೆ ಹತ್ತುತ್ತಿದ್ದಂತೆ ಮಡಿಸಲೇಬೇಕು. ಪ್ಲೀಸ್ ಎಂದು ಮಾರ್ಗರೆಟ್ಟನ್ನು ತಡವಿ ಮುದ್ದಾಡಿ ಕಾಲು ಮಡಿಸಿ ನಿದ್ದೆಗಿಳಿದುಬಿಡುತ್ತಿದ್ದೆ. ನಿದ್ದೆ ಹೋಗುವ ಪ್ರಯತ್ನದಲ್ಲಿ ಥಟ್ಟನೇ ನೋವಾಯಿತು.  ಮತ್ತೆ ಜೋಂಪು ಹತ್ತಿತು. ಗಾಢವಾದ ನಿದ್ದೆಯಲ್ಲಿ ಕಿರುಚಾಟ ಕೇಳಿ ಎದ್ದು ಕೆಳಗೋಡಿ ಬಂದ. ಅಂಗಳದಲ್ಲಿ ತನಗಿಂತ ಮುಂಚೆಯೇ ಉಳಿದವರೆಲ್ಲ ಸೇರಿದ್ದರು.