ಕೋಡಲೊಲೆ ಒಣಗಿರಬೇಕು. ಅದನ್ನು ಕರಿಬೆರೆಸಿದ ಸಗಣಿಯಲ್ಲಿ ಸಾರಿಸಿ, ಅದರ ಮೇಲೆ ನಾಜೂಕಾಗಿ ಚಿಕ್ಕಿ ರಂಗೋಲೆ ಬಿಡುಸುತ್ತ ಕೂತಿದ್ದರು.

ಅಂಗಳದ ಒಂದು ಮೂಲೆಯಲ್ಲಿ ನೀಲಕಂಠಸ್ವಾಮಿ ತನ್ನ ಗೆಳೆಯರ ಜೊತೆ ಪ್ಲಕಾರ್ಡುಗಳನ್ನು ತಯಾರಿಸುತ್ತಿದ್ದ. ‘ಅಸ್ಪೃಶ್ಯತೆ ಈಗಿಂದೀಗಲೆ ತೊಲಗಲಿ’; ‘ಮೈಸೋಪಕ್ಕೆ ಜಯವಾಗಲಿ’; ‘ಇಂಕ್ವಿಲಾಬ್ ಜಿಂಆಬಾದ್’; ‘ರೈತರ ಶೋಷಕ ಭೂತರಾಯ, ಭೂತರಾಯನ ಶೋಷಕ ಮಂಜುನಾಥ’ – ಇತ್ಯಾದಿ ಕೆಂಪಕ್ಷರಗಳ ಪ್ಲಕಾರ್ಡುಗಳನ್ನು ಸಾಲಾಗಿ ಒಣಗಲು ರಂಗರಾವ್ ಇಡುತ್ತಿದ್ದ. ಶ್ರೀಪತಿರಾಯರು ಹೊಲೆಯರ ಗುಡಿಗಳನ್ನು ಕಟ್ಟಿಸುವ ವ್ಯವಸ್ಥೆಯಲ್ಲಿದ್ದರು.

ಯಾವನೊ ಹೊಲೆಯ ದೂರದಲ್ಲಿ ನಿಂತು ಒಡೇರೇ ಎಂದು ಕರೆದ. ಜಗನ್ನಾಥ ಕಡೆ ಹೊಲೆಯನಲ್ಲ. ಕೈ ಮುಗಿದು ಬೇಡಿಕೊಂಡ: ‘ನಿಮ್ಮ ಹೊಲೇರು ಗುಡಿಗೆ ಹೋಗ್ತಾರೇಂತ ನಮ್ಮ ಒಡೇರು ಸಿಟ್ಟಾಗಿ ನಮ್ಮನ್ನೆಲ್ಲ ಓಡಿಸಿಬಿಡ್ತೀನಿ ಅಂತಿದಾರೆ. ಧಣೇರು ಕಾಪಾಡಬೇಕು.’ ಜಗನ್ನಾಥ ಏನು ಹೇಳಬೇಕೆಂದು ಯೋಚಿಸುತ್ತಿದ್ದಂತೆ ಶ್ರೀಪತಿರಾಯರು ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಹೇಳಿದರು :

‘ಏ ಕೊಗ್ಗ ಸುಮ್ಮನೇ ಹೋಗಯ್ಯ, ನಿಮ್ಮನ್ನ ಓಡ್ಸಿದ್ರೆ ಕುಕ್ಕೇಲಿ ಪಾಯ್ಕಾನೆ ಹೊತ್ತು ಕೊಂಡು ಸಾಗಿಸೋರು ಯಾರು ಹೇಳು? ಅದೂ ಈಗ ಜಾತ್ರೆ ಸಮಯದಲ್ಲಿ . ಗುಡೀಗೆ ಬೆಂಕಿ ಗಿಂಕಿ ಹಾಕ್ಯಾರು – ಅಷ್ಟೆ. ಸರದಿ ಮೇಲೆ ಕಾದುಕೊಂಡಿರಿ’.

ರಾಯರು ಮಾತು ಜಗನ್ನಾಥನಿಗೆ ಇಷ್ಟವಾಯಿತು. ಹೊಲೆಯರಿಗೆ ಹೇಳಬೇಕು. ನಿಮ್ಮ ಹೀನತೆಯೇ ನಿಮ್ಮ ಶಕ್ತಿ. ನಿಮ್ಮ ಹೀನತೆಯಲ್ಲೆ ಈ ಸಮಾಜಕ್ಕೆ ನಿಮ್ಮ ಅನಿವಾರ್ಯತೆ ಇದೆ. ಹೇಳು ಬಾಚಲ್ಲ ಅನ್ನಿ, ಆಗ ಮಂಜುನಾಥನನ್ನು ನಿತ್ಯ ಆವರಿಸುವ ಊದುಬತ್ತಿ ಲೋಭಾನಗಳ ಸುಗಂಧವನ್ನು ಊರಲೆಲ್ಲ ದಟ್ಟ ಹರಡುವ ಹೇಲಿನ ದುರ್ವಾಸನೆಯಿಂದ ನಾಶ ಮಾಡುವ ಶಕ್ತಿ ನಿಮ್ಮಲ್ಲಿದೆ. ಜಗನ್ನಾಥನ ಮೈ ನಡುಗಿತು. ಕಿಟಕಿಯಿಂದ ಹೂ ಬಿಟ್ಟ ಮಾವಿನ ಮರ ನೋಡಿದ. ಮಾರ್ಗರೆಟ್, ಮೇಜಿನ ಮೇಲೆ ನೊರೆಗೆರೆಯುವ ಬಿಯರ್, ನಿರಾತಂಕ ಚರ್ಚೆಯಲ್ಲಿ ಯಾವ ಜೀವನ ಸಾಧ್ಯತೆಯನ್ನಾದರೂ ಅರಳಿಸಬಲ್ಲ ಮತ್ತೇರಿದ ಮಾತಿನ ಆಟ – ಇನ್ನು ಮುಂದೆ ವರ್ಜ್ಯ. ಈ ಕ್ರೌರ್ಯ, ಈ ಕನಸು, ಒಣಗಿಸುವ ಈ ತಪಸ್ಸು – ಎಲ್ಲವನ್ನೂ ಉಪಯೋಗಿಸಿ ಭಾರತೀಪುರದ ವಾಸ್ತವದ ಆಯಸ್ಥಳಗಳನ್ನು ಪತ್ತೆ ಹಚ್ಚಿ ನುರಿಯಬೇಕು. ಹೊಲೆಯನಿಲ್ಲದಿದ್ದರೆ ಅನುಭಾವಿಯ ಹೇಲೂ ನಾರುತ್ತದೆ ಎಂಬ ಪ್ರಜ್ಞೆ ಹುಟ್ಟಿದರೆ ಕಾಲ ಚಲಿಸುತ್ತದೆ. ಚಲಿಸುತ್ತ ಕಬ್ಬಿಣದ ಉತ್ಪಾದನೆ ಹೆಚ್ಚುತ್ತದೆ. ಹೆಚ್ಚುತ್ತ ಉಕ್ಕಿನ ಕೊಳಾಯಿಗಳಾಗುತ್ತವೆ. ದೇಶಾದ್ಯಂತ ಪ್ಲಶ್ ಕಕ್ಕಸುಗಳಾಗುತ್ತವೆ. ಕುಕ್ಕೆಯಲ್ಲಿ ಹೇಲು ತಲೆಯನ್ನೇರುವ ಅಗತ್ಯ ಮಾಯವಾಗುತ್ತದೆ. ಗಾಂಧಿ ಬಸವಣ್ಣರ ಕನಸು ಅರಳುತ್ತದೆ. ಈ ಕಪ್ಪು ಹೊಲತಿಯರು ಹೇಲಿನ ಬದಲಾಗಿ ಬಿಳಿ ಮಲ್ಲಿಗೆಯನ್ನು ತಲೆಯಲ್ಲಿ ಮುಡಿದು ಗಂಧ ತೊಟ್ಟ ಬ್ರಾಹ್ಮಣರಿಗೆ ಅಪ್ಯಾಯಮಾನವಾಗುತ್ತಾರೆ. ಬ್ರಾಹ್ಮಣ ಹುಡುಗಿಯರು ವಿಶಾಲವಾದ ಕಪ್ಪು ಎದೆಯ ಪಿಳ್ಳನಂಥವರಿಗೆ ಒಲಿಯುತ್ತಾರೆ.

ಕಲ್ಪನೆಯಲ್ಲಿ ಹಿಗ್ಗುತ್ತ, ಹೀಗೆ ಹಿಗ್ಗುತ್ತಿದ್ದೇನಲ್ಲ ಎಂದು ಜಗನ್ನಾಥನಿಗೆ ನಾಚಿಕೆಯಾಯಿತು. ಮುಖ್ಯವಾಗಿ ಅರಿಯಬೇಕಾದ್ದು ನನಗಿರುವ ವಿಸರ್ಜನೆಯ ಅವಸರ. ಇಲ್ಲವೆ ನಿಜವಾಗಲಾರೆ, ನಿಶ್ಚಯದ ಕ್ರಿಯೆ ಮಾಡಲಾರೆ. ಲೋಳೆಯಾಗುತ್ತೇನೆ. ಇನ್ನೂ ಅಂತರಪಿಶಾಚಿಯಾದ್ದರಿಂದ ಕ್ರೌರ್ಯದ ಕನಸುಗಳ ಈ ತೀಟೆ. ಕ್ರಿಯೆಯಲ್ಲಿ ಸಂಪೂರ್ಣ ಒಳಪಟ್ಟಾಗ ಸರ್ಜನ್ನಿನ ಹರಿತವಾದ ಚೂರಿಯಂತೆ : ಪ್ರೇಮವಿಲ್ಲದ, ದ್ವೇಷವಿಲ್ಲದ ಉದ್ದೇಶದ ಗೆರೆಗಳ ಒಳಗೆ ಕೊಯ್ಯುವ ಸಾಧನ ಮಾತ್ರ.

ಹಾಗಾದರೆ ವಿಸರ್ಜಿಸಿಕೊಳ್ಳುತ್ತ? ಎಲ್ಲಿಯತನಕ? ಜಗನ್ನಾಥ ಇನ್ನೊಂದು ವಿಚಾರದ ಬೆನ್ನು ಹತ್ತಿದ. ಕಾಪಾಲಿಕರು, ಶಾಕ್ತರು, ಸಿದ್ಧಿಗಾಗಿ ಹೆಣದ ಜೊತೆ ಸಂಭೋಗ ಮಾಡುತ್ತಾರಂತೆ. ಹೂಳಿದ ಹೆಣವನ್ನು ಅಗೆದು ತೆಗೆದು ತಿನ್ನುತ್ತಾರಂತೆ. ಈ ಮೂಲಕ ಅವಧೂತರಾಗುತ್ತಾರಂತೆ. ಅವಧೂತರು ಪರಿಪೂರ್ಣ ಕ್ರಾಂತಿಕಾರರು. ಒಂದು ಬಗೆಯಲ್ಲಿ ಅವರ ರೀತಿಯಲ್ಲಿ ವಿಸರ್ಜನೆಯ ಮಾರ್ಗವನ್ನು ನಾನೂ ಹಿಡಿಯಬೇಕಾಗಿ ಬರುತ್ತದೊ? ಅಡಿಗರು ಹೇಳುವಂತೆ ಸಾಮಾಜಿಕನಾಗಿದ್ದೂ ಕ್ರಾಂತಿಕಾರನಾಗುವುದು ಅಸಾಧ್ಯವೆ? ವಿಪರ್ಯಾಸವೆಂದರೆ ದೇವರ ಮಹಿಮೆಯನ್ನು ನಾಶಮಾಡಲು ದೇವಸ್ಥಾನದೊಳಕ್ಕೇ ಹೋಗಬೇಕಾಗಿ ಬಂದಿರೋದು.

ರಂಗಣ್ಣ ಟಪಾಲು ಕೊಟ್ಟು ಹೋದ.

* * *

ಲೋಕಲ್ ಡೆಲಿವರಿಯ ಉದ್ದ ಲಕೋಟೆಯನ್ನು ಬಿಚ್ಚಿದ. ಫುಲ್‌ಸ್ಕೇಪ್ ಕಾಗದದ ಎರಡು ಮಗ್ಗುಲಲ್ಲೂ ಮೋಡಿ ಅಕ್ಷರದಲ್ಲಿ  ಬರೆದ ಒಂದು ಪತ್ರ ಅದರೊಳಗೆ. ಮೂಲೆಯಲ್ಲಿ ‘ಕ್ಷೇಮ’, ಮಧ್ಯೆ ‘ಶ್ರೀ ಮಂಜುನಾಥ ಪ್ರಸನ್ನ’ ಎಂದು ಬರೆದ ಈ ಪತ್ರ ಯಾರದಿರಬಹುದೆಂದು ತಿರುಗಿಸಿ ನೋಡಿದರೆ ಸಹಿ ಇರಲಿಲ್ಲ. ಕುತೂಹಲದಿಂದ ಕಾಗದವನ್ನೋದಲು ಪ್ರಾರಂಭಿಸಿದ. ರೈಟರ್ ಕೃಷ್ಣಯ್ಯನ ಮೋಡಿಯಕ್ಷರ ಓದಿ ಅಭ್ಯಾಸವಿದ್ದುದರಿಂದ ಓದುವುದು ಅಷ್ಟೇನೂ ಕಷ್ಟವಾಗಲಿಲ್ಲ.

‘ಊರಿನ ಭಾರಿ ಜಮೀಂದಾರರೂ, ಒಂದು ಕಾಲದಲ್ಲಿ ಶ್ರೀ ದೇವಸ್ಥಾನದ ಧರ್ಮ ದರ್ಶಿಗಳೂ, ತಮ್ಮ ಪ್ರಾಣರಕ್ಷಣೆಯ ಸ್ವರ್ಣಕಿರೀಟವನ್ನು ಮಂಜುನಾಥ ಸ್ವಾಮಿ ತಲೆಯ ಮೇಲಿರಿಸಲು ಕಾರಣಭೂತರೂ, ಭಾರತೀಪುರದ ಪ್ರಜೆಗಳನ್ನು ತೀರ್ಥ ರೂಪರಂತೆ ಕಾಪಾಡಬೇಕಾದ ಹೊಣೆ ಹೊತ್ತವರೂ ಆದ ಶ್ರೀ ಜಗನ್ನಾಥರಾಯರಲ್ಲಿ ಅವರ ಪೂಜ್ಯ ತೀರ್ಥರೂಪರ ಕಾಲದಿಂದಲೂ ಹಿತೈಷಿಯಾಗಿರುವ ಬಡವನೊಬ್ಬನ ನಮ್ರ ವಿನಂತಿಯೇನೆಂದರೆ…’

ಜಗನ್ನಾಥ ಬೇಸರದಿಂದ ಕಾಗದ ಮಡಿಸಿದ. ಹರಿಯಲು ಹೋದವನು ಹಳೆಯ ಕಾಲದ ಒಕ್ಕಣಿಕೆಯಿಂದ ಆಕರ್ಷಿತನಾಗಿ ಮುಂದಕ್ಕೆ ಓದಿದ :

‘ಜಗನ್ನಾಥರಾಯರೆ ನೀವು ನಿಮ್ಮ ತೀರ್ಥರೂಪರ ಮಕ್ಕಳಿರಲಿಕ್ಕಿಲ್ಲೆಂದು ಬರೆಯಲು ಈ ಬಡಪಾಯಿಗೆ ಅತೀವ ದುಃಖವಾಗಿದೆ. ನಿಮ್ಮ ತೀರ್ಥರೂಪರು ಭಗವದ್ಭಕ್ತರು. ಅವರನ್ನು ಮದುವೆಯಾದ ನಿಮ್ಮ ಮಾತೋಶ್ರೀಯವರು ಅವರ ಜೊತೆ ಯಾವ ಸಂಬಂಧವನ್ನೂ ಹೊಂದಿರಲಿಲ್ಲ. ನಿಮ್ಮ ತೀರ್ಥರೂಪರು ಅದನ್ನೆಂತು ಸಹಿಸಿ ಬಾಳಿದರೋ ನಮಗೆ ತಿಳಿಯದು. ಅದೇನೆ ಇರಲಿ, ನೀವು ನಿಮ್ಮ ತೀರ್ಥರೂಪರ ಮಗನಾಗಿದ್ದ ಪಕ್ಷದಲ್ಲಿ ಕುಲೀನ ಬ್ರಾಹ್ಮಣ ಕುಲಕ್ಕೆ ಸೇರಿದ ನೀವು ಇಂತಹ ಹೇಯಕಾರ್ಯಕ್ಕೆ ಮುಂದಾಗುತ್ತಿರಲಿಲ್ಲವೆನ್ನುವುದಂತೂ ಖಂಡಿತ. ನೀವು ಹಾಗಾದರೆ ಯಾರ ಮಗನೆಂದು ಕೇಳುವಿರೊ? ನೀವು ನಿಮ್ಮ ಮನೆಯಲ್ಲಿ ರೈಟರ್ ಆಗಿದ್ದ ಕೃಷ್ಣಯ್ಯನವರ ಮಗ. ಕೃಷ್ಣಯ್ಯನವರು ಅತ್ಯಂತ ಕೀಳುಜಾತಿಯ ಬ್ರಾಹ್ಮಣರಾಗಿದ್ದರೂ ಸಹ ನಿಮ್ಮ ತಾಯಿಗವರು ಕೇವಲವಾಗಿದ್ದುದು ಆಶ್ಚರ್ಯವಲ್ಲ. ಏನಕೇನ ಅದು ಕಾಮುಕ ಸ್ತ್ರೀಯೊಬ್ಬಳ ರುಚಿಯ ಪ್ರಶ್ನೆಯಾದ್ದರಿಂದ ನಮಗೆ ಅಪ್ರಸ್ತುತವಾದ ವಿಚಾರ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಆದರೆ ವಿಧಿಯಿಲ್ಲದೆ ಆಡಬೇಕಾಗಿದೆ. ನಿಮ್ಮ ಮನೆಯಲ್ಲಿರುವ ಗೋಪಾಲನೂ ನಿಮ್ಮ ಮಾತೋಶ್ರೀಯವರಿಗೆ ರೈಟರ್ ಕೃಷ್ಣಯ್ಯನಿಂದ ಹುಟ್ಟಿದ ಮಗನೆಂಬುದಕ್ಕೆ ನಾನೇ ಕಣ್ಣಾರೆ ಸಾಕ್ಷಿಯಾಗಿದ್ದೇನೆ. ನೀವು ಚಿಕ್ಕವರಾಗಿದ್ದಾಗ ನಿಮ್ಮ ಮಾತೋಶ್ರೀ ರೈಟರ್ ಮತ್ತು ಅವರ ಕುಟುಂಬದ ಜೊತೆ ತೀರ್ಥಯಾತ್ರೆಯ ನೆವದಲ್ಲಿ ಊರು ಬಿಟ್ಟಿದ್ದು ಸರಿಯಷ್ಟೆ. ಆಗ ನಾನು ಒಮ್ಮೆ ಯಾವುದೋ ಕಾರ್ಯಕ್ಕಾಗಿ ಮದ್ರಾಸಿಗೆ ಹೋದಾಗ ಗರ್ಭವತಿಯಾದ ನಿಮ್ಮ ಮಾತೋಶ್ರೀಯವರನ್ನು ನೋಡಿದೆ. ಅಲ್ಲೇ ಹೆರಿಗೆ ಮಾಡಿಸಿಕೊಂಡು ಹುಟ್ಟಿದ ಮಗುವಿಗೆ ಗೋಪಾಲನೆಂದು ನಾಮಕರಣ ಮಾಡಿ ಈ ಕೂಸು ಕೃಷ್ಣಯ್ಯ ರೋಗಗ್ರಸ್ತ ಪತ್ನಿಗೆ ಯಾತ್ರೆಯ ಕಾಲದಲ್ಲಿ ಹುಟ್ಟಿದವನೆಂದು ಸಾರಿ ಅವರು ಹಿಂದಕ್ಕೆ ಬಂದರು. ರೈಟರಿನ ಕುಟುಂಬ ತನಗೆ ಮಕ್ಕಳಿಲ್ಲದ್ದರಿಂದ ಗೋಪಾಲನನ್ನು ಬಾಯಿಮುಚ್ಚಿಕೊಂಡು ಮಗನೆಂದು ಸಲಹಿ ಒಂದೆರಡು ವರ್ಷದಲ್ಲೆ ಕಣ್ಣುಮುಚ್ಚಿದ ಮೇಲಂತೂ ನಿಮ್ಮ ಮಾತೋಶ್ರೀಯವರು ನಿರಾತಂಕವಾಗಿ ಕೃಷ್ಣಯ್ಯನವರ ಜೊತೆ ತಮ್ಮ ಪಾಪ ಜೀವನವನ್ನು ಸವೆಸಿದರು.

ನಾನು ಈ ವಿಷಯಗಳನ್ನು ಎತ್ತಲು ಕಾರಣ ನಿಮ್ಮ ಕೊಳಕನ್ನು ನೀವು ಮೊದಲು ತಿದ್ದಿಕೊಂಡು ನಂತರ ಊರನ್ನು ತಿದ್ದಲು ಮುಂದಾಗಿ ಎಂದು ಹೇಳುವುದೇ ಶಿವಾಯಿ ನಿಮ್ಮ ದಿವಂಗತ ತೀರ್ಥರೂಪರ ಪುಣ್ಯ ನೆನಪಿಗೆ ಮಸಿ ಬಳೆಯುವುದಲ್ಲ. ಊರಿಗಾಗಿ ಒಬ್ಬ ವ್ಯಕ್ತಿಯನ್ನು ಬಲಿಕೊಡು ಎಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ನಿಮ್ಮ ಪ್ರಭಾವವನ್ನು ಏನಕೇನ ತಪ್ಪಿಸಲು ನಾವು ಈ ವಿಷಯವನ್ನು ಬಹಿರಂಗಗೊಳಿಸ ಬೇಕಾದಲ್ಲಿ ಶ್ರೀ ಮಂಜುನಾಥಸ್ವಾಮಿ ನಮ್ಮನ್ನು ಕ್ಷಮಿಸುತ್ತಾನೆಂಬ ಧೈರ್ಯ ನಮಗಿದೆ. ಕುಲೀನರಾದ ತಂದೆಗೆ ಹುಟ್ಡಿದ ಮಗ ನೀವಾಗಿದ್ದರೆ ಹೀಗೆ ಊರು ಹಾಳು ಮಾಡುವ ಕಾರ್ಯಕ್ಕೆ ಮುಂದಾಗುತ್ತಿರಲಿಲ್ಲವೆನ್ನುವುದನ್ನು ಇನ್ನೊಮ್ಮೆ ಹೇಳಿ ತುಂಬ ದುಃಖದಿಂದ ಈ ಕಾಗದ ಮುಗಿಸುತ್ತಿದ್ದೇನೆ.

ಸದಾ ತಮ್ಮ ಹಿತೈಷಿ,
ಭಾರತೀಪುರ ನಿವಾಸಿ.’

ಜಗನ್ನಾಥ ಕೆಳಗಿಳಿದು ಅಂಗಳಕ್ಕೆ ಹೋದ. ಯಾಕೆ ತಾನಿಲ್ಲಿ ಬರುತ್ತಿದ್ದೇನೆಂದು ಅವನಿಗೆ ಗೊತ್ತಿರಲಿಲ್ಲ. ನೀಲಕಂಠಸ್ವಾಮಿ ಪೋಸ್ಟರ್ ಬರೆಸುತ್ತ ಕೂತಿದ್ದ. ರಾಯರು ಗಳ, ನಾಟ, ಹಗ್ಗಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಜಗನ್ನಾತ ಸುಮ್ಮನೇ ನಿಂತ. ಅವನು ನಿಂತಿರುವುದನ್ನು ನೋಡಿದ ರಂಗರಾವ್,

‘ಏನು ಸಾರ್. ಹುಷಾರಿಲ್ಲವ?’ ಎಂದು ಹತ್ತಿರ ಬಂದು ಆತಂಕದಿಂದ ಮುಖ ನೋಡಿದ. ರಾಯರೂ ಗಾಬರಿಯಾಗಿ ‘ಒಳಗೆ ಹೋಗಿ ಮಲಗಿಕೊ’ ಎಂದರು. ‘ಏನಿಲ್ಲ’ ಎಂದು ಜಗನ್ನಾಥ ಗಂಭೀರವಾಗಿ ಅವನರನ್ನು ನೋಡಲು ಪ್ರಯತ್ನಿಸಿ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿ ಕಣ್ಣು ಮುಚ್ಚಿದ. ಟೇಬಲ್ಲಿನ ಮೇಲೆ ಕಾಗದ ಬಿದ್ದಿತ್ತು. ಯಾರಾದರೂ ಅದನ್ನೋದಿಬಿಟ್ಟಾರೆಂದು ಹರಿದು ಬುಟ್ಟಿಗೆಸೆದ.

ಎಲ್ಲಿ ಪಿಳ್ಳ? ನಾಳೆಯ ಬಗ್ಗೆ ಅವನಿಗೇನು ಹೇಳಬೇಕು? ಬಟ್ಟೆಗಳೆಲ್ಲ ಸುಟ್ಟಿವೆ. ಹೊಸ ಬಟ್ಟೆ ತರಬೇಕು. ಹೇಳಲಿಕ್ಕೆ ಮರೆತೇಬಿಟ್ಟೆ ಎಂದು ಮತ್ತೆ ಕೆಳಗಿಳಿದು ಬಂದು ರಾಯರ ಹತ್ತಿರ ಹೊಲೆಯರಿಗೆ ಬಟ್ಟೆ ಕೊಂಡು ತರಬೇಕೆಂದು ಹೇಳಿದ. ಬಿಳಿ ಅಂಗಿ, ಬಿಳಿ ಪಂಚೆ ಎಂದು ಒತ್ತಿ ಹೇಳಿದ. ‘ನಿನಗೆ ಹುಷಾರಿದ್ದಂತೆ ಕಾಣಲ್ಲ. ನಿನ್ನೆಯೆಲ್ಲ ನಿದ್ದೆ ಕೆಟ್ಟಿದೀಯ, ಸ್ವಲ್ಪ ಮಲಕ್ಕೊ’ ಎಂದರು ರಾಯರು.

ಜಗನ್ನಾಥ ಚಾವಡಿಯ ಮೇಲೆ ಹೋಗಿ ಕೂತ. ಕಾಲು ನಿರ್ಬಲವಾಗಿತ್ತು. ಅವನು ಕೂತಿದ್ದು ಕಂಡು ನೀಲಕಂಠಸ್ವಾಮಿಯೂ ಬಂದು ಕೂತು.

‘ರಂಗರಾವ್ ಪೇಟೆಗೆ ಹೋಗಿದ್ದ. ನೋಡಿ ಮಿಸ್ಟರ್ ಜಗನ್ನಾಥ್, ಪೇಟೇಲಿ ಯಾರೂ ನಾಳೆ ಹರಿಜನ ಪ್ರವೇಶ ಆಗತ್ತೇಂತ ನಂಬಲ್ವಂತೆ. ಭೂತರಾಯ ಬಂದು ಹೊಲೇರ ಕಾಲೆಳೆದು ಬಿಡ್ತಾನಂತೆ’ ಎಂದು ನೀಲಕಂಠಸ್ವಾಮಿ ನಕ್ಕು ಸಿಗರೇಟು ಹಚ್ಚಿದ. ಜಗನ್ನಾಥ ಅವನಿಂದ ಒಂದು ಸಿಗರೇಟು ತೆಗೆದುಕೊಂಡು ಹಚ್ಚಿ ಕಣ್ಣು ಮುಚ್ಚಿ ಕೂತ. ನೀಲಕಂಠಸ್ವಾಮಿ ಹೇಳಿದ್ದಕ್ಕೆ ಉತ್ತರವಾಗಿ ನಗಲು ಪ್ರಯತ್ನಿಸಿದ; ‘ಸ್ವಲ್ಪ ಕೆಲಸವಿದೆ’ ಎಂದು ಎದ್ದ. ‘ಹುಷಾರಿದ್ದಂಗೆ ಕಾಣಲ್ಲ, ನಿದ್ದೆ ಕೆಟ್ಟಿದೀರಿ. ಮಲಕೊಳ್ಳಿ‘ ಎಂದು ನೀಲಕಂಠಸ್ವಾಮಿ ಮತ್ತೆ ಪೋಸ್ಟರ್ ಬರೆಸಲು ಹೋದ. ಹೋಗುವಾಗ ‘ಬದಲಾವಣೆಯೇ ಬದುಕಿನ ಧರ್ಮ – ಎಂದು ಒಂದು ದೊಡ್ಡ ಪೋಸ್ಟರ್ ಬರಸ್ತ ಇದೀನಿ’ ಎಂದು ಹೇಳಿದ.

ಅಲ್ಲ – ಯಾವನೋ ವಿಷಜಂತು ಬರೆದ ಕಾಗದದಿಂದ ಹೀಗೆ ಒದ್ದಾಡ್ತ ಇದೇನಲ್ಲ – ಥತ್ ಎಂದು ತನ್ನ ಪೆದ್ದುತನವನ್ನು ಬೈದುಕೊಂಡ. ನಡುಮನೆಯಲ್ಲಿದ್ದ ಕನ್ನಡಿಯ ಎದುರು ಗೋಪಾಲ ತಲೆ ಬಾಚಿಕೊಳ್ಳುತ್ತ ನಿಂತಿದ್ದ. ಗೋಪಾಲ ತಿರುಗಿ ನೋಡಿ ಪ್ರೀತಿಯಿಂದ ನಕ್ಕ. ತನ್ನನ್ನೆ ದುರುಗುಟ್ಟಿ ನೋಡುತ್ತಿದ್ದ ಜಗನ್ನಾಥನಿಗೆ ‘ಏನು ಬೇಕಾಗಿತ್ತು ಅಣ್ಣ?’ ಎಂದು ಕೇಳಿದ. ಜಗನ್ನಾಥ ಬೆಚ್ಚಿದ. ನಿಜವಿದ್ದರೆ? ಅಥವಾ ಸುಳ್ಳೆ? ಸುಳ್ಳೋ ನಿಜವೋ ಹೇಳೋವ್ರು ಯಾರೂ ಇಲ್ಲ. ಪ್ರಾಯಶಃ ರಾಯರೂ ಸುಳ್ಳೂಂತ ಅಂತಾರೆ; ಚಿಕ್ಕಿ ಸುಳ್ಳೂಂತ ಅಂತಾರೆ. ಆದರೆ ಹೇಗಿ ಅವರನ್ನ ನಂಬಲಿ? ಅಥವಾ ಈ ವಿಷಜಂತು ಬರೆದು ಪತ್ರಾನ್ನ ಹೇಗೆ ನಂಬಲಿ ? ನಿಜವೋ ಸುಳ್ಳೋ ಅನ್ನೊ ಪ್ರಶ್ನೆಗೆ ಎಲ್ಲೂ ಎಂದೂ ನನಗೆ ಪರಿಹಾರವಿಲ್ಲ.

ಗೋಪಾಲನಿಗೆ ಏನೂ ಉತ್ತರ ಕೊಡದೆ ಜಗನ್ನಾಥ ಮೆಟ್ಟಿಲು ಹತ್ತಿ ಮೇಲೆ ಹೋದ. ಪಿಳ್ಳನಿಗೆ ನಾಳೆ ವಿಷಯ ಹೇಳಬೇಕು. ಏನು? ಅಲ್ಲ ಅರ್ಥಹೀನ. ಸಂಕಟವಾಗ್ತಿದೆ ಅನ್ನೋದು ನಿಜ. ಈ ತಳಮಳಾನ್ನ ಕಣ್ಣಿಟ್ಟು ನೋಡದೆ ವಿಧಿಯಿಲ್ಲಾನ್ನೊಂದು ನಿಜ. ಪರಿಹಾರವೇ ಇಲ್ಲದ ಪ್ರಶ್ನೇನ್ನ ನನ್ನ ಅಂತರಂಗದಲ್ಲಿ ಸುತ್ತಿಸೀ ಸುತ್ತಿಸೀ, ಅದರ ಸುತ್ತ ಸುತ್ತಾಡಿ, ಸುತ್ತಾಡೋ ನನ್ನನ್ನೆ ನೋಡಿಕೋತ ಸಾಯೋ ತನಕ ಬದುಕ್ತೀನಿ ಅನ್ನೋದು ನಿಜ.

ಅನುಮಾನಕ್ಕೆ ಅವಕಾಶಾನೇ ಇಲ್ದೆ ಇದ್ರೆ ತಾನು ಹೀಗೆ ಯೋಚಿಸೋದು ಸಾಧ್ಯವಿತ್ತೆ? ತಾಯಿ ಜೊತೆ ನಾನು ನಿತ್ಯ ಮಲಗ್ತ ಇದ್ದದ್ದು. ಮಿಡ್ಲ್‌ಸ್ಕೂಲಲ್ಲಿ ಓತ್ತ ಇದ್ದೆ. ನಿದ್ದೆ ಬಂದಿರ್ಲಿಲ್ಲ. ಅಮ್ಮ ಎದ್ದು ಎಲೆಯಡಿಕೆ ಹಾಕ್ಕೊಂಡರು. ಅಪ್ಪ ಸತ್ತ ಮೇಲೆ ಎಲೆಯಡಿಕೆ ಹಾಕ್ಕೊಬಾರ್ದು. ಆದರೂ ಅಮ್ಮ ಹಾಕ್ಕೊಳ್ತ ಇದ್ದರು. ಎಲೆ ಹಾಕ್ಕೊಂಡು ಎದ್ದು ಹೋದರು. ನಾನು ಎಚ್ಚರವಾಗೇ ಇದ್ದೆ. ಯಾಕೆ ಎಲೆಯಡಿಕೆ ಹಾಕ್ಕೊಂಡು ಅಮ್ಮ ಎದ್ದು ಹೋದ್ರು ಅಂತ ನಾನು ಆವಾಗ ಯೋಚನೆ ಮಾಡಿದೆನೆ? ನೆನಪಾಗಲ್ಲ. ಎಚ್ಚರವಾಗೇ ಇದ್ದೆ ಅಂತ, ಹಾಗಾದ್ರೆ ಯಾಕೆ ಈಗಲೂ ನೆನಪು? ಬಹಳ ಹೊತ್ತಿನ ಮೇಲೆ ಮತ್ತೆ ಬಂದು ಮಗ್ಗುಲಲ್ಲಿ ಮಲಗಿದರು. ಎಲ್ಲಿಗೆ ಹೋಗಿದ್ರು? ಆಫೀಸು ರೂಮಿನ ಪಕ್ಕದಲ್ಲಿದ್ದ ಕೃಷ್ಣಯ್ಯನ ಕೋಣೆಗೊ ಅಥವಾ ಬಚ್ಚಲಿಗೊ? ಕೃಷ್ಣಯ್ಯನ ಹೆಂಡತಿ ಸಾಕಮ್ಮ ಮಲಗ್ತ ಇದ್ದದ್ದು ಅಡಿಗೆ ಮನೆ ಪಕ್ಕದ ಕೋಣೇಲಿ. ಹಾಲು ತುಪ್ಪದ ವಹಿವಾಟು ಅವರದ್ದು. ಕೃಷ್ಣಯ್ಯನ ಸ್ವಂತ ಅಕ್ಕನ ಮಗಳು ಆಕೆ. ಸಣ್ಣ ಸಣ್ಣ ಕಣ್ಣು, ಸೊಟ್ಟ ಮೂತಿ. ಆಗ ಚಿಕ್ಕಿ ಮನೇಲಿದ್ದರೆ? ಹೌದು. ಮಹಡಿ ಮೇಲೆ ಇನ್ನೊಂದು ರೂಮಲ್ಲಿ, ಈಗ ಅವರು ಮಲಗೊ ರೂಮಲ್ಲೆ. ಚಿಕ್ಕಿಗೆ ಸಂಶಯಾನೇ ಹುಟ್ಟಿರಲಿಲ್ಲ ಅಂದ್ರೆ ಕಾಗದದಲ್ಲಿ ಬರ್ದದೆಲ್ಲ ಸುಳ್ಳು. ಹುಟ್ಟಿದ್ರೆ ಅವರು ಅಮ್ಮನ್ನ ಇಷ್ಟು ಗೌರವಿಸ್ತ ಇರಲಿಲ್ಲ. ರಾಯರಿಗೂ ಅಮ್ಮ ಅಂದ್ರೆ ಎಷ್ಟು ಗೌರವ? ಅಮ್ಮ ಹಾಗಾದ್ರೆ ಬಚ್ಚಲಿಗೇ ಹೋಗಿ ಬಂದದ್ದು. ಆದರೆ ಬಚ್ಚಲಿಗೆ ಹೋಗೋವಾಗ ಅಮ್ಮ ಖಂಡಿತ ಎಲೆಯಡಿಕೆ ಹಾಕ್ಕೊಳ್ತಿರಲಿಲ್ಲ. ಅಮ್ಮ ನನ್ನ ಪಕ್ಕದಲ್ಲಿ ಮತ್ತೆ ಬಂದು ಮಲಗಿದ್ದಾಗ ಬೆವರಿದ್ದರ? ಅವರ ಕೂದಲು ಕೆದರಿತ್ತ?

ತನ್ನ ಮನಸ್ಸು ಸಂಕಟದಲ್ಲಿ ಕೆದರ್ತ್ ಇದ್ದದ್ದನ್ನು ನಿಲ್ಲಿಸಲು ಪ್ರಯತ್ನಿಸುತ್ತ ಜಗನ್ನಾಥ ಕಿಟಕಿಯಿಂದ ನೋಡಿದ. ಕೆಲಸದಲ್ಲಿ ಮಗ್ನರಾದ ರಾಯರು, ನೀಲಕಂಠಸ್ವಾಮಿ, ರಂಗರಾವ್, ನಗುತ್ತ ಓಡಾಡುತ್ತಿದ್ದ ಹುಡುಗರು; ಕುಂಟುತ್ತ ರಾಯರ ಹತ್ತಿರ ಪಿಳ್ಳ ಬಂದ. ಇಲ್ಲ. ತಳವೇ ಇರದ ಕೂಪದಲ್ಲಿ ಅನಂತಕಾಲದವರೆಗೆ ಕಂತುತ್ತಲೇ ಇರುವಂತೆ. ಇದು ನಿಜವಾದ ಸಂಕಟ ಯಾಕೇಂದ್ರೆ ಇದನ್ನ ಬಗೆಹರಿಸಿಕೊಳ್ಳೋ ಕ್ರಮಾನೆ ಇಲ್ಲ.

ಅಮ್ಮ ರೈಟರ್ ಕೃಷ್ಣಯ್ಯಾನ ಜೊತೆ ಕೂತು ಪಗಡೆಯಾಡ್ತಾ ಇದ್ದರು. ಆಗ ಚಿಕ್ಕಿ ಜೊತೆಗಿರ್ತಿದ್ರು. ಸಾಕಮ್ಮನೂ ಇರ್ತಿದ್ರು. ಪ್ರೈಮರಿ ಸ್ಕೂಲಲ್ಲಿ ಇದ್ದಾಗ್ಲೇ ಅಪ್ಪ ಸತ್ತರು. ಪಗಡೆಯಾಡೋವಾಗ ಅಪ್ಪನೂ ಇರ್ತಿದ್ರು. ಅಪ್ಪ ಆಡಿದ್ದಾಗಲೀ ಹಾಡಿದ್ದಾಗಲೀ ನೆನಪಿಲ್ಲ. ಕೃಷ್ಣಯ್ಯ ಕುಮಾರವ್ಯಾಸ ಭಾರತಾನ್ನ ಸೊಗಸಾಗ ಓದಿ ಅರ್ಥ ಹೇಳ್ತಿದ್ರು. ಅಪ್ಪನಿಗೆ ಕೃಷ್ಣಯ್ಯಾಂದ್ರೆ ತುಂಬ ನಂಬಿಕೇಂತ ಚಿಕ್ಕಿ ಹೇಳ್ತಾರೆ. ನಾನು ಮಿಡ್ಲ್ ಸ್ಕೂಲಲ್ಲಿದ್ದಾಗ ಕೃಷ್ಣಯ್ಯ,ಸಾಕಮ್ಮ, ಅಮ್ಮ ಸುಮಾರು ಎಂಟು ಹತ್ತು ತಿಂಗಳು ಇಂಡಿಯಾನ್ನೆಲ್ಲ ಸುತ್ತಿ ಬಂದ್ರು. ಆಗ ನನ್ನ ಜೊತೆ ಚಿಕ್ಕಿ ಇದ್ರು. ಹಿಂದಕ್ಕೆ ಬಂದಾಗ ಗೋಪಾಲ ಚಿಕ್ಕ ಮಗು. ಸಾಕಮ್ಮ ಅವನನ್ನ ಮುದ್ದು ಮಾಡ್ತಿದ್ರು. ಅಮ್ಮನೂ. ಆದ್ರಿಂದ ಎಲ್ಲ ಖಂಡಿತ ಸುಳ್ಳು. ಅಮ್ಮನಿಗೆ ಹಿಂದಿ ಬರ್ತಿತ್ತು. ಕಾಶೀಂದ ನನಗೆ ಶಾಲು ತಂದು ಕೊಟ್ಟರು. ಅವರು ಮದ್ರಾಸಲ್ಲಿದ್ದದ್ದು ಖಂಡಿತ ಸುಳ್ಳು. ಅಲ್ಲಿ ಬಸುರಾಗಿದ್ದನ್ನ ನೋಡಿದೆ ಅಂತ ಬರದೋನು ಕ್ಷುದ್ರಜಂತು.

ಜಗನ್ನಾಥ ದೊಡ್ಡದಾಗಿ ನಿಟ್ಟುಸಿರಿಟ್ಟು ಹಾಸಿಗೆಯಲ್ಲಿ ಕಾಲು ಚಾಚಿದ. ತುಂಬ ಸಂತೋಷವಾಗಿ ಹೊರಳಬೇಕೆನ್ನಿಸಿತು. ಅಪ್ಪನಿಗಿಂತ ಅಮ್ಮನೇ ಶ್ರೀಮಂತಳು. ಈಗಿರೋ ಆಸ್ತೀಲಿ ಮುಕ್ಕಾಲು ಪಾಲು ಅವಳದ್ದೆ. ಅಪ್ಪ ಒಳ್ಳೆ ಕೃಷಿಗಾರ. ಮೊಣಕಾಲಿನ ತನಕ ಪಂಚೆಯುಟ್ಟು ಆಳುಗಳೂ ಹತ್ತಿರ ಕೆಲಸ ಮಾಡಿಸ್ತ ಇದ್ದ ಅಪ್ಪ ಸಾಹುಕಾರ್ರೋ, ಅಥವಾ ಫಿನ್ಲೆ ಪಂಚೆಯುಟ್ಟು ಸಿಲ್ಕ್ ಜುಬ್ಬ ಹಾಕಿ ಕೋರ್ಟು ಕಛೇರಿ ಅಂತ ಅಲೀತಿದ್ದ ರೈಟರ್ ಕೃಷ್ಣಯ್ಯ ಸಾಹುಕಾರ್ರೋ ಅಂತ ಅನುಮಾನ ಆಗ್ತಿತ್ತು ಅಂತ ರಾಯರು ಹೇಳಿದ್ದು ಕೇಳಿದೇನೆ.

ಗಂಡು ಹೆಣ್ಣಿನ ಸಂಬಂಧದಲ್ಲಿ ಬೇರೆ ಬೇರೆ ಸಾಧ್ಯತೆಗಳನ್ನ ಇಂಗ್ಲೇಂಡಲ್ಲಿ ನೋಡಿರೋ ನಾನು ಹೀಗೆ ಸಂಶಯಪಡೋದೇ ಆಶ್ಚರ್ಯ. ಕೃಷ್ಣಯ್ಯ ಅಂದ್ರೆ ಉಳಿದವರಿಗೆ ಅಸೂಯೆ ಆಗಿರಬಹುದು. ಎಷ್ಟು ಸಹಜ ಅದು. ಸಂಶಯನೂ ಎಷ್ಟು ಸಹಜ.

ಜಗನ್ನಾಥ ಉಲ್ಲಾಸದಿಂದ ಎದ್ದು ಮತ್ತೆ ಕೆಳಗೆ ಬಂದ. ನೀಲಕಂಠಸ್ವಾಮಿಯ ಹತ್ತಿರ ಇನ್ನೊಂದು ಸಿಗರೇಟು ತಗೊಂಡು ಹಚ್ಚಿದ. ‘ಙou hಚಿve giveಟಿ ಚಿ ಟಿeತಿ ಜimeಟಿsioಟಿ ಣo ಣhe movemeಟಿಣ. I ಚಿm veಡಿಥಿ gಡಿಚಿಣe ಣo ಥಿou’ ಎಂದ. ನೀಲಕಂಠಸ್ವಾಮಿ ಇದರಿಂದ ಹಿಗ್ಗಿದನೆಂದು ಸಂತೋಷವಾಯ್ತು. ಹೊಲೆಯರಿಗೆ ಬಟ್ಟೆ ತರಲು ರಂಗರಾವ್‌ಗೆ ದುಡ್ಡುಕೊಟ್ಟ. ‘ಬೇಗ ಬಂದು ಬಿಡಿ’ ಎಂದು ಸಿಗರೇಟ್ ಸೇದುತ್ತ, ಪೋಸ್ಟರುಗಳನ್ನು ನೋಡುತ್ತ ಅಂಗಳದಲ್ಲಿ ಅಡ್ಡಾಡಿದ.

ಇದ್ದಕ್ಕಿದ್ದಂತೆ ಸಂಕಟ ಮರುಕಳಿಸಿತು. ನೀಲಕಂಠಸ್ವಾಮಿ ಕೂದಲು ಕಿತ್ತುಕೊಳ್ಳುವುದು ನೋಡಿ ರಗಳೆಯಾಯಿತು. ಅವತ್ತು ರಾತ್ರೆ ಅಮ್ಮ ಎಲೆಯಡಿಕೆ ಹಾಕ್ಕೊಂಡು ಬಚ್ಚಲಿಗೆ ಹೋಗಲಿಲ್ಲ. ಬಾಯಲ್ಲೇನಾದ್ರೂ ಇಟ್ಟಕೊಂಡು ಅಮ್ಮ ಕಕ್ಕಸಿಗೆ ಖಂಡಿತ ಹೋಗೋವ್ರಲ್ಲ. ಇದು ತೀರ್ಥಯಾತ್ರೆಗೆಂದು ಅಮ್ಮ ಹೋಗಿದ್ದರೆ ಮೊದಲೆ? ನಂತರವೆ? ಯಾವ ಬಣ್ಣದ ಸೀರೆ ಉಟ್ಟಿದ್ದರು? ಇಡೀ ಸಂದರ್ಭದ ಎಲ್ಲ ಅಂಶಗಳನ್ನೂ ನೆನಪಿನಿಂದ ಕಟ್ಟಿಕೊಳ್ಳುತ್ತ ಜಗನ್ನಾಥ ಹಲಸಿನ ಮರ ಒಂದರ ಬುಡ ನಿಂತ.

ಅಮ್ಮ ಎದ್ದು ಕೂತುರು. ನನ್ನನ್ನು ಮುಟ್ಟಿದರು. ಯಾಕೆ ಮುಟ್ಟಿದರು? ನಿದ್ದೆ ಮಾಡ್ತಿದೀನಿ ಎಂದು ಗಟ್ಟಿಮಾಡಿಕೊಳ್ಳಲು ಮುಟ್ಟಿದರೆ? ಆಮೇಲೆ ಎಲಹಾಕ್ಕೊಂಡರು. ತಲೆದೆಸೆಯಲ್ಲೆ ಹರಿವಾಣವಿತ್ತು. ಈಗಲೂ ಉಪಯೋಗಿಸೋ ಹರಿವಾಣ. ಇಲ್ಲ-ಎದ್ದು ಹೋಗಿಬಂದ ಮೇಲೆ ಮಲಗೋಕೆ ಮುಂಚೆ ಅಮ್ಮ ಎಲೆ ಹಾಕ್ಕೊಂಡರು. ಅಮ್ಮ ಎಲೆಯಡಿಕೆ ಜಗಿಯುವಾಗ ಅವರ ಬಾಯಿವಾಸನೆ ನನಗೆ ಇಷ್ಟ. ಏಲಕ್ಕಿ, ಲವಂಗ, ಸುಣ್ಣ, ಚಿಗುರೆಲೆ ಬಾಯಲ್ಲಿ ರಸವಾಗೋ ವಾಸನೆ. ಇಲ್ಲ-ಬಚ್ಚಲಿಗೆ ಹೋಗಿ ಬಂದ ಮೇಲೆ ಅವರು ಎಲೆ ಹಾಕ್ಕೊಂಡದ್ದು. ಮುಂಚೆ ಅಲ್ಲ. ಆದರೆ ಅಮ್ಮ ಏನನ್ನಾದರೂ ಜಗೀತ ಮಲಗೋವ ಅಲ್ಲ. ಮಲಕ್ಕೊಂಡು ತಿನ್ನೋಕೆ ಅಮ್ಮ ನನಗೆ ಬಿಡ್ತಿರ್ಲಿಲ್ಲ. ಚಟ್ಟಿ ಜೇಬಲ್ಲಿ ಕೋಡುಬಳೆ ತುಂಬಿಕೊಂಡು ಮಲಕ್ಕೊಂಡು ತಿನ್ನೋದೂಂದ್ರೆ ನನಗೆ ಇಷ್ಟ. ಆದರೆ ಅಮ್ಮ ಬೈತ ಇದ್ದರು. ಕೃಷ್ಣಯ್ಯ ಮಲಗೋ ರೂಮಿಗೆ ನಿತ್ಯ ಅಮ್ಮ ಹೋಗ್ತಿದ್ದರು. ಚಿಕ್ಕಿಗೆ ಗೊತ್ತಾಗದೇ ಇದ್ದ ಹಾಗೆ ನಿತ್ಯ ಹೋಗ್ತಿದ್ದರು.

ಅಡಿಗರು ಸ್ನಾನ ಪೂಜೆ ಮುಗಿಸಿ ಹಿಂದಕ್ಕೆ ಬಂದರು. ‘ಏನು ಕಾರುಬಾರು ನಡೆದಿದೆ’? ಎಂದು ಉಲ್ಲಾಸದಿಂದ ತನ್ನನ್ನು ಕೇಳಿ, ಪ್ರಾಯಶಃ ತನ್ನ ಮುಖ ನೋಡಿ ಸುಮ್ಮನಾದರು. ಸೀದ ಒಳಗೆ ಹೋದರು. ಈಗ ಶಾಲಿಗ್ರಾಮಕ್ಕೆ ಪೂಜೆ ಮಾಡ್ತಾರೆ. ನನ್ನ ಪ್ರಯತ್ನವೆಲ್ಲ ಹೀಗೆ ನೀರಲ್ಲಿ ಮಾಡಿದ ಹೋಮ ಆಗ್ತ ಹೋಗತ್ತೆ.

ಹಸಿರು ಹಾವುಗಳು ಮೈಮೇಲೆಲ್ಲ ಹರಿದಂತಾಯ್ತು. ರಾಯರನ್ನು ಕೇಳೋದು. ನೋವು ಕಡಿಮೆಯಾದೀತು. ಇದೆಲ್ಲ ಶುದ್ಧ ಸುಳ್ಳೂಂತ ಅವರು ನಗ್ತಾರೆ. ಆಗ ನನಗೆ ತುಂಬ ಖುಷಿಯಾಗತ್ತೆ. ಎಲ್ಲ ಪುಳಕ್ಕಂತ ಮನಸ್ಸಿಂದ ಜಾರಿ ಹೋಗಿಬಿಡತ್ತೆ.

ರಾಯರಿದ್ದಲ್ಲಿಗೆ ಹೋಗೊದೂಂತ ಹೆಜ್ಜೆಯಿಡಲು ಪ್ರಯತ್ನಿಸಿದ. ಆದ್ರೆ ರಾಯರ ಮನಸ್ಸಲ್ಲೂ ಅನುಮಾನ ಬಿತ್ತಿದಂತಾಗುತ್ತೆ. ಸುಳ್ಳೂಂತ ಅಂತಾರೆ. ಆದ್ರೆ ಅವ್ರೂ ನನ್ನ ಹಾಗೇ ನಿಜವಿರಬಹುದೇನೋ ಅಂತ ಯೋಚಿಸೋಕೆ ಶುರುಮಾಡ್ತಾರೆ. ಅಮ್ಮನಿಗೆ ನಾನು ಆಗ ಅನ್ಯಾಯ ಮಾಡಿದ ಹಾಗಾಗತ್ತೆ.

ಹಲಸಿನ ಮರವನ್ನು ಶೂನ್ಯ ದೃಷ್ಟಿಯಿಂದ ನೋಡುತ್ತ ನಿಂತ. ಯಾರೋ ಅಳಿರಬೇಕು ಕತ್ತಿಯಿಂದ ಮರವನ್ನು ಗಾಯ ಮಾಡಿದಲ್ಲಿ ಹಾಲು ಒಸರಿ ಅಂಟಾಗಿತ್ತು. ಮುದಿಯಾದರೂ ಹಣ್ಣು ಬಿಡತ್ತೆ. ಕೆಂಪು ತೊಳೆ. ಜೇನುತುಪ್ಪದಷ್ಟು ಸಿಹಿ. ಅಪ್ಪನಿಗೆ ಕೃಷಿಯೆಂದರೆ ಪ್ರಾಣ. ಶ್ರೀ ಕೃಷ್ಣರಾಜ ಒಡೆಯರು ಮಂಜುನಾತ ದರ್ಶನಕ್ಕೇಂತ ಬಂದಾಗ ಈ ಮರದ ಹಣ್ಣಿನ ತೊಳೆ ತಿಂದು ಖುಷಿಯಾಗಿ ಮೆಡಲ್ ಕೊಟ್ಟಿದ್ರಂತೆ. ಅಪ್ಪ ನೋಡೋಕೆ ಹೇಗಿದ್ರೂಂತ ನೆನಪಾಗೋದೋ ಇಲ್ಲ.

ಅಪ್ಪ ಎಂದು ಯೋಚಿಸ್ತೇನೆ. ಯಾರು ನನ್ ಅಪ್ಪ? ಅವರು ಸತ್ತಾಗ ಅಮ್ಮ ಅತ್ತರು, ಕೃಷ್ಣಯ್ಯ ಅತ್ತರು. ಯಾಕೆ ಅತ್ತರು? ಇಲ್ಲ -ಯಾವತ್ತೂ ನನಗೆ ಇದು ನಿಜವೊ ಸುಳ್ಳೊ ಬಗೆಹರಿಯೋದೇ ಇಲ್ಲ ಸಾಕಮ್ಮನಿಗೆ ಅಮ್ಮ ಅವಲಕ್ಕಿ ಸರ ಮಾಡಿಸಿ ಕೊಟ್ಟಿದ್ರು. ಲಾಸ್ಟ್ ಬಸ್ಸಿಗೆ ಕೃಷ್ಣಯ್ಯ ಶಿವಮೊಗ್ಗದಿಂದ ಬರೋದನ್ನೆ ಅಮ್ಮ ಕಾಯ್ತ ನಿಂತಿರ್ತಿದ್ರು. ಸಾಕ್ಮಮ್ಮನೂ ನಿಂತಿರ‍್ತ ಇದ್ರು.

ಜಗನ್ನಾಥನಿಗೆ ತನ್ನ ಅಂತರಂಗದ ತೀವ್ರ ತಳಮಳದಿಂದ ಇದ್ದಕ್ಕಿದಂತೆ ಹರಳಿನಷ್ಟು ಸ್ಪಷ್ಟವಾದ ಸ್ಫುಟವಾದ ಒಂದು ವಿಚಾರ ಹುಟ್ಟಿತು. ಸೀದಾ ರೂಮಿಗೆ ಹೋಗಿ ಕೂತು ನೋಟ್ ಬುಕ್ಕಲ್ಲಿ ಬರೆದ :

ಮುಖ್ಯವಾಗಿ ಇದನ್ನು ನೋಡು. ಮಂಜುನಾಥನ ಮಹಿಮೇನ್ನ ನಾಶ ಆಡಿ. ಜನರನ್ನ ತೀವ್ರ ಸಂಕಟಕ್ಕೆ ಒಳಪಡಿಸೋದರ ಮೂಲಕ ಅವರನ್ನ ತಮ್ಮ ಜೀವನಕ್ಕೆ ಜವಾಬ್ದಾರರನ್ನಾಗಿ ಮಾಡಲು ಹೊರಟ ನನ್ನಂಥವನಿಗೂ ನನ್ನ ತಾಯಿ ಹಾದರ ಮಾಡಿರಬಹುದೆಂಬ ಸಂಶಯ ಇಷ್ಟು ದಾರುಣವದ ನೋವನ್ನು ಯಾಕೆ ಉಂಟುಮಾಡಿದೆಯೆಂಬುದೇ ಅತ್ಯಮತ ಮುಖ್ಯ ಪ್ರಶ್ನೆ. ನನ್ನ ಒಳಗೂ ಈ ಸಂಶಯಕ್ಕೆ ಪರಿಹಾರವಿಲ್ಲ; ಹೊರಗೂ ಪರಿಹಾರ ಸಿಕ್ಕಲ್ಲ ಎಂದು ಗೊತ್ತಿದ್ದರೂ ನಿಜವೋ, ಸುಳ್ಳೋ ಅಂತ ಯಾಕೆ ಒದ್ದಾಡ್ತ ಇದೀನಿ? ಪಿಳ್ಲ ಕಾವೇರಿಗೆ ಕೈಯೊಡ್ಡಿದಾಗ ಇದು ಸರಿ ಎಂದೆ. ಶಾಲಿಗ್ರಾಮನ್ನ ಹೊಲೇರಿಗೆ ಒಡ್ಡಿದೆ. ಇಡೀ ಸಮಾಜಕ್ಕೆ ನಮ್ಮ ಮನೆತನಾನ್ನ ದೂರ ಮಾಡೋ ಧೈರ್ಯ ಮಾಡಿದೆ, ಆದರೂ ಕುಲ, ಜಾತಿ, ಕುಟುಂಬ ಎನ್ನೋ ಭಾವನೆಗಳು ನನಗೆ ಮುಖ್ಯವಾಗಿಯೇ ಉಳಿದಿವೆಯೆಂದು ಇದರ ಅರ್ಥ. ಇಲ್ಲವಾದಲ್ಲಿ ನಾನು ಔರಸ ಪುತ್ರನಲ್ಲ, ಗುಢೋತ್ಪನ್ನನಿರಬಹುದು ಅನ್ನೋದು ನನ್ನನ್ನು ಬಾಧಿಸ್ತ ಇರಲಿಲ್ಲ.

ಗರ್ಭಗುಡಿಯಲ್ಲಿ ಹೊಲೆಯರು ಪ್ರವೇಶಿಸಿ ಜನರ ಮೇಲೆ ಆಘಾತವಾಗಬೇಕೆಂದು ಬಯಸುವ ನಾನು ನನ್ನ ತಾಯಿಯ ಯೋನಿಯಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದಾತನಿಗೆ ಮಾತ್ರ ಪ್ರವೇಶದ ಅರ್ಹತೆಯಿರಬೇಕೆಂದು ಯಾಕೆ ಇಚ್ಫಿಸುತ್ತೇನೆ? ತಾಯಿ ಯೋನಿಯಲ್ಲಿ ಅನ್ಯನ ಪ್ರವೇಶದ ಸಾಧ್ಯತೆಗೇ ಇಷ್ಟು ಸಂಕಟಪಡುವ ನನಗೆ ಗರ್ಭಗುಡಿಯ ಕಾರ್ಣಿಕವನ್ನು ನಾಶಮಮಾಡುವ ಅಧಿಕಾರವಿದೇಯೇ? ಇದು ಸುಳ್ಳೋ ನಿಜವೊ ಎಂದು ಅಂತರಂಗಕ್ಕೆ ಬೆಂಕಿ ಬಿದ್ದವನಂತೆ ನಾನು ಹುಡುಕುತ್ತಿದ್ದೇನಲ್ಲ, ಇಷ್ಟೇ ತೀವ್ರವಾಗಿ ನಾನು ಕ್ರಾಂತಿಯನ್ನು ಅಪೇಕ್ಷಿಸುತ್ತೆನೆಯೆ? ಮಾರ್ಗರೆಟ್ಟಿನ ಅಂಡಿನ ಮೇಲಿನ ಕಲೆಯನ್ನು ಇನ್ನು ಯಾರೋ ಸವರುತ್ತಿದ್ದಾರೆಂದು ಊಹಿಸುತ್ತಿದ್ದಂತೆ ನರಗಳಲ್ಲಿ ಬೆಂಕಿ ಹರಿದಾಡಿದಂತೆ ನನಗಾಗುವಾಗ ಸಮಾಜದ ಜನ ಆಪ್ತವಾಗಿ ರಕ್ಷಿಸಿಕೊಂಡು ಬಂದ ಭಾವನೆಗಳನ್ನು ಗೊಂದಲಕ್ಕೊಳಪಡಿಸಲು ನನಗೆ ಅಧಿಕಾರವಿದೆಯೆ?

ಆದರೆ ಹೀಗೆ ಸ್ಪಷ್ಟವಾಗಿ ವಿಚಾರ ಮಾಡುತ್ತಿರುವಾಗಲೂ ನನಗೆ ದುಃಖವಾಗುತ್ತಿದೆಯೆಂಬುದೂ ನಿಜ. ಅನ್ನಿಸುತ್ತಿರುವುದನ್ನು ವಿಚಾರ ತಪ್ಪೆನ್ನುತ್ತದೆ. ವಿಚಾರವನ್ನು ಮೆಟ್ಟಿಭಾವನೆ ನಿಲ್ಲುತ್ತದೆ. ಈಗ ನಾನು ಇಬ್ಬಂದಿ.

ಇಷ್ಟು ಬರೆದು ಜಗನ್ನಾಥ ಎದ್ದು ನಿಂತ. ಮನಸ್ಸು ಹಗುರಾಗಿ ಯೋಚಿಸಿದ: ಚೌಡ ಕದ್ದು ತಿನ್ನುತ್ತಿದ್ದ ಬಾಳೆಹಣ್ಣು ನಿಮ್ಮ ತೋಟದ್ದಲ್ಲವೆಂದು ಗೋಗರೆದ ಹೊಲತಿಯನನು ನಾನು ಪ್ರೀತಿಸಲಾರೆ. ಈ ಹೊಲೆಯರೆಲ್ಲ ವಿದ್ಯಾವಂತರಾಗಿ, ಕೆಲವರು ಸತ್ಯಪ್ರಕಾಶರಂತಾಗಿ, ಯುವಕರು ಟೈಟ್‌ಪ್ಯಾಂಟ್ ತೊಟ್ಟು, ಕುಕ್ಕೆಯಲ್ಲಿ ಹೇಲು ಹೊರುವ ಅಗತ್ಯ ಮಾಯವಾಗಿ, ಮಂಜುನಾಥನ ಬದಲು ಎಲ್.ಎಸ್.ಡಿ.ಬಂದು- ಹೀಗೆ ಯೋಚಿಸಿದಾಗ ಎಲ್ಲ ಬದಲಾಣೆಯೂ ಅರ್ಥಹೀನವೆನಿಸುತ್ತೆ. ಮಂಜುನಾಥನ ಕರುಣೆಯ ಹಿತವಾದ ಕತ್ತಲು ಅಮ್ಮನಿಗೆ ಸಾಂತ್ವನ ಕೊಟ್ಟಿರಬಹುದು. ಅಮ್ಮನ ಹಾಡಿನ ಮಧುರವಾದ ಬಳಕುಗಳಲ್ಲಿ, ಜೀವನದ ನೋವೆಲ್ಲ ತುಂಬಿದ್ದಿರಬಹುದು. ಕಾಲದ ಬದಲಾವಣೆಯಲ್ಲೆ ಜೀವನದ ಸಾರ್ಥಕ್ಕೆ ಪಡೆಯ ಹೊರಟ ನನಗೆ ನಿತ್ಯ ಫಲಿಸುವ ಸುಖ ದುಃಖ ಕ್ಷುಲ್ಲಕವಾಗಬೇಕಾಗುತ್ತೆ. ಯೋನಿಯಲ್ಲಿ ಬೆರಳು ಹಾಕಿದಾಗಲೂ ವಿಭೂತಿಯನ್ನು ಪಡೆದವರಂತೆ ನಾನು ಕ್ರಮೇಣ ಒಂದೇ ಉದ್ದೇಶಕ್ಕೆ ಬದ್ಧನಾದ ರಾಕ್ಷಸನಾಗಬೇಕಾಗುತ್ತೆ.

ಎಲ್ಲರ ಜೊತೆ ಊಟಕ್ಕೆ ಕೂತಾಗಲೂ ಅದೇ ಯೋಚನೆ. ಈ ತನಕ ಶ್ರೀಮಂತಿಕೆ, ಮನೆತನದ ಘನತೆ ರಕ್ಷೆಯಾಗಿತ್ತು. ಈ ವ್ಯವಸ್ಥೆಯನ್ನು ನಾಶಮಾಡಲು ಕೈಯೊಡ್ಡಿದೆ, ಆದ್ದರಿಂದ ಈಗ ಈ ಕಿವಿಗಳು ಏನನ್ನಾದರೂ ಕೇಳಲು ತಯ್ಯಾರಾಗಬೇಕು. ಅಮ್ಮ ಕೊಟ್ಟ ಶಾಲಿನೊಳಗೆ ಕಾಲು ಮುದುಡಿ ಮಲಗಿದ್ದಾಗ ರೋದನ ಕೇಳಿ ಎದ್ದೇಳಬೇಕು. ಅವಧೂತನಾಗದೆ ಕ್ರಾಂತಿ ಮಾಡೋದು ಅಸಾಧ್ಯಾಂತ ಅಡಿಗರು ಹೇಳಿದ್ದು ಕೊನೆಗೂ ನಿಜವೇನೊ!

ಊಟ ಮಾಡುವಾಗ ರಂಗರಾವ್ ಹೇಳಿದ:

‘ಬ್ರಾಹ್ಮಣರನ್ನ ಮನೇಗ ಊಟಕ್ಕೆ ಕರೆದರೆ ನಮ್ಮ ತಾಯಿ ರೇಗ್ತಾರೆ ಗೊತ್ತ? ನಮ್ಮನೇಲಿ ಊಟ ಮಾಡಿಸಿ ಯಾಕೆ ಪಾಪ ಅವರ ಜಾತಿ ಕಳೀಬೇಕೂಂತ?’

ಅಡಿಗೆ ಮನೆಯಲ್ಲಿ ಊಟಕ್ಕೆ ಕೂತ ಅಡಿಗರು ಅಂದರು:

‘ಬ್ರಾಹ್ಮಣಾರ್ಥಕ್ಕೆ ಸಂಚಕಾರವಾದೀತೂಂತ ಇಲ್ಲಿ ಊಟ ಮಾಡ್ತಿದೀನಿ ಅಷ್ಟೆ. ಹೃಷಿಕೇಶಕ್ಕೆ ಹೋಗೋವಾಗ ಸಿಕ್ಕಿದಲ್ಲೆಲ್ಲ ನಾನು ಊಟ ಮಾಡಿದೀನಿ. ಹೇಳ್ತಾರಲ್ಲ? ಃe ಚಿ ಖomಚಿಟಿ ತಿhiಟe ಥಿou ಚಿಡಿe iಟಿ ಖome’.

ಎಲ್ಲರೂ ನಗುತ್ತ ಊಟ ಮಾಡಿದರು. ಕೈ ತೊಳೆದು ಹಿತ್ತಲಿಲ್ಲ ಓಡಾಡುತ್ತ ಜಗನ್ನಾಥ ತನ್ನ ವಿಚಾರವನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಿಸಿದ. ನಾನು ಈಗ ತೊಡಗಿರುವ ಕ್ರಿಯೆಯಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆಯ ಅಂತ ಯೋಚಿಸ್ತ ಹೋಗೋದರಲ್ಲಿ ಅರ್ಥವಿಲ್ಲ. ಯಾಕೇಂದ್ರೆ ತೊಡಗೋದರ ಮೂಲಕವೇ, ಆಳವಾಗುತ್ತ ಹೋಗಬೇಕಾದ ನಂಬಿಕೆ ಇದು. ನಾನು ಯಾರ ಮಗ ಎನ್ನೋದೂ ಅಮುಖ್ಯವಾಗುವಂಥ ಮಾನವೀಯ ಸಮಾಜದ ಸೃಷ್ಟಿಗಾಗಿ ಈ ಎಲ್ಲ ಆತಂಕಗಳನ್ನೂ ಅನುಭವಿಸಲೇಬೇಕು. ನನ್ನ ತಾಯಿ, ನನ್ನ ಮಗ, ನನ್ನ ಹೆಂಡತಿ ಎನ್ನೊ ಭಾವನೆಗಳು ಈಗಿರೋ ಸ್ವರೂಪದಲ್ಲಿ ಇರೋ ತನಕ ಜಾತಿ ಇರುತ್ತೆ, ಆಸ್ತಿ ಇರತ್ತೆ. ಅಥವಾ ಆಸ್ತಿ, ಜಾತಿ ಇರೋ ತನಕ ಅಂಥ ಭಾವನೆ ಇರತ್ತೆ. ಈ ಭಾವನೆಗಳ ರೂಪಾನ್ನೂ ಬದಲಾಯಿಸೋ ಪ್ರಯತ್ನವೇ ಕ್ರಾಂತಿ, ಪ್ರಜ್ಞಾ ಪೂರ್ವಕವಾದ ತೊಳಲಾಟಕ್ಕಾಗಿ ಇನ್ನು ಮುಂದೆ ನಾನು ಬದ್ಧ. ಎಲ್ಲವುದನ್ನೂ ನೋಡಲು, ಎಲ್ಲವುದನ್ನೂ ಅನುಭವಿಸಲು ತೆರವಾಗಿ ನಾನು ನಿಲ್ಲುತ್ತೇನೆ.

ಒಂದು ಕಣ್ಣಿನಲ್ಲಿ ಮೃದುವಾಗಿ ವಾಸ್ತವತೇನ್ನ ಅರ್ಥಮಾಡಿಕೊಳ್ಳುತ್ತ, ಇನ್ನೊಂದು ಕಣ್ಣಿನಲ್ಲಿ ವಾಸ್ತವತೇನ್ನ ನಿಷ್ಠುರವಾಗಿ ತಿವಿಯುತ್ತ, ಬದಲಿಸಲು ಹವಣಿಸುತ್ತ, ಈಗ ಕಾಮಿಸುತ್ತ, ಮತ್ತೆ ನಿರ್ಲಪ್ತನಾಗುತ್ತ, ಯಾಕೆ ಜಾತಿ ಇದೆ-ನನ್ನೊಳಗೂ-ಅನ್ನೋದನ್ನ ತಿಳಿಯುತ್ತ, ಆದರೆ ಕ್ರಿಯೆ ಮೂಲಕ ಇದನ್ನ ಮೀರುತ್ತ, ತಲೆಯೆತ್ತಿ ನಡೆಯೋ ಹೊಸ ಮನುಷ್ಯನಿಗಾಗಿ ಕಾಯುತ್ತೇನೆ. ವಿಸರ್ಜಿಸಿಕೊಳ್ಳುತ್ತ ಅವಾಹಿಸಿಕೊಳ್ಳುತ್ತ, ಕ್ರಮೇಣ ಆಕಾರವಾಗುತ್ತ, ಕ್ರೌರ್ಯ ಹಿಂಸೆ ದುರಾಸೆಗಳ ದಾರೀಲಿ ನಡೆಯುತ್ತ, ಮಂಜುನಾಥನ್ನ ಕರಗಿಸುತ್ತ ಹೇಲಿನ ಕುಕ್ಕೆಯನ್ನ ತಲೆಯಿಂದ ಕೆಳಗಿಳಿಯೊ ಹಾಗೆ ಮಾಡ್ತೇನೆ. ಹೆರಳಿನಲ್ಲಿ ಹೂ ಮುಡಿದು ನಡೆಯುವ ಕಪ್ಪು ಹೊಲತಿ ಬ್ರಾಹ್ಮಣನಿಗೆ ಬೇಕೆನ್ನಿಸಲಿ; ಒರಟು ಕೂದಲಿನ ಕಪ್ಪು ಹೊಲೆಯನ ಅಪ್ಪುಗೆ ಬ್ರಾಹ್ಮಣ ಹುಡುಗಿಗೆ ಬೇಕೆನ್ನಿಸಲಿ. ಆ ತನಕ ಭಾರತೀಯನಿಗೆ ನಿಜವಾದ ಗಾಂಭೀರ್ಯವಿಲ್ಲ. ಹೊಲೆಯರ ಭೂತ ಮೆಟ್ಟಿ ಶೂಧ್ರರ ಭೂತ ನಿಂತ. ಶೂದ್ರರ ಭೂತ ಮೆಟ್ಟಿ ಮಂಜುನಾಥ ನಿಂತ. ಅವನ ತಲೆ ಮೇಲೆ ನನ್ನ ಕಿರೀಟ. ಅಡಿಗರ ಕಣ್ಣಲ್ಲಿ ಅವನ ಹೊಳಪು. ಅವನ ಆರಾಧನೆಯಲ್ಲಿ ಅಮ್ಮನ ಒದ್ದೆ ಕೂದಲು, ಅವನ ರಕ್ಷೆಯಲ್ಲಿ ಹಾದರ, ಹುಟ್ಟು, ಸಾವು, ಸಂಭೋಗ, ಮಕ್ಕಳು, ತಲೆಯೇರಿದ ಹೇಲಿನ ಕುಕ್ಕೆ, ಎಲ್ಲದನ್ನೂ ವಹಿಸಿಕೊಂಡವನಿಂದ ಮತ್ತೆ ಕಸಿದುಕೊಳ್ಳಬೇಕು. ಅವನನ್ನು ಪೈರಾಗಿ, ತಾಮ್ರವಾಗಿ, ಹಾಲು ತುಂಬಿದ ಮೊಲೆಯಾಗಿ, ತೊಡೆಯ ಬಿಸಿಯಾಗಿ ಪಡೆಯಬೇಕು. ಬಲ್ಬುಗಳಲ್ಲಿ ಹರಿಸಬೇಕು.

ಅಮ್ಮನ ಯೋನಿಯಲ್ಲಿ ನನ್ನನ್ನು ಯಾರು ಪಡೆದರೆಂಬ ಸಂಕಟವನ್ನು ಹೀಗೆ ನಾನು ಗೆಲ್ಲುತ್ತೇನೆ, ಇನ್ನೂ ನಿಜವಾಗಿರದ ಹೊಸ ಸತ್ಯವನ್ನು ಕಾಲದ ತೊಡೆಗಳ ನಡುವೆ ನಾಳೆ ಹೊಲೆಯರ ಜೊತೆ ಬಿತ್ತಿ ಕಾಯುತ್ತೇನೆ.

ಹೊಗೆಸೊಪ್ಪಿನ ಸುಣ್ಣ ಹಚ್ಚುತ್ತ ಅಂಗಳದಲ್ಲಿ ನಿಂತಿದ್ದ ರಾಯರು ಪಿಳ್ಳನನ್ನು ನೋಡ ಹೊರಟ ಜಗನ್ನಾಥನನ್ನು ತಡೆದರು :

‘ನಾನು ಇವತ್ತು ಹೊಲೇರ ಹುಡುಗರನ್ನ ನೋಡಿ ಮಾತಾಡ್ತೇನೆ. ನೀನು ಹೋಗಿ ಮಲಕ್ಕೊ. ಮೈಯಲ್ಲಿ ಹುಷಾರಿರೋ ಹಾಗೆ ಕಾಣಲ್ಲ’.

‘ರಾಯರ’, ಜಗನ್ನಾಥ ತನ್ನ ಯೋಚನೆಯಲ್ಲಿ ತಲ್ಲೀನನಾಗಿ ಮಾತು ಹುಡುಕುತ್ತ ನಿಂತ. ‘ನಾಳೆ ದೇವಾಲಯದ ಪ್ರವೇಶದಿಂದ ನಾನು ಊಹಿಸಿದ್ದೆಲ್ಲ ಆಗ್ದೇ ಹೋಗಬಹುದು. ಆದರೆ ಹೋರಾಟ ಪ್ರಾರಂಭವಾಗಿದೇಂತ ಅನ್ನಿಸತ್ತೆ. ಕಾಲ ಚಲಿಸೋಕ್ಕೆ ಶುರುವಾಗಿದೆ. ನಾನೇನು ನಿರ್ಧರಿಸಿದೀನಿ ನಿಮಗೆ ಹೇಳಬೇಕು. ಈ ಆಸ್ತಿ ವೈವಾಟನ್ನ ಕ್ರಮೇಣ ಗೋಪಾಲನಿಗೆ ವಹಿಸಿಕೊಡ್ತೀನಿ. ಇದೊಂದು ಹೊರೆ. ನನ್ನನ್ನ ಒಡೆರೆ ಅಂತ ಇವತ್ತಿಗೂ ಹೊಲೇರು ಕರೀತಾರೆ. ನಾನು ಸಂಘಟನೆ ಮಾಡಬೇಕೂಂತ ಇದೀನಿ. ರೈತರನ್ನು ಸಂಘಟಿಸಬೇಕು. ಅವರು ಭೂತರಾಯನಿಗೆ ಹೆದರಿ ಜಮೀಂದಾರ್ರು ಕೇಳಿದ ಗೇಣೀನ್ನ ಕೊಡ್ದೆ ಇದ್ದಂಗೆ ಮಾಡಬೇಕು. ಹೊಲೇರನ್ನೂ ಸಂಘಟಿಸಬೇಕು. ಯಾವದೂ ನಾಟಕೀಯವಾಗಿ ಆಗಲ್ಲ ಅಂತ ತಿಳ್ಕೊಂಡು ಕಾಯೋದನ್ನ ಕಲೀಬೇಕು.’

ರಾಯರು ಹೊಗೆಸೊಪ್ಪನ್ನು ಬಾಯಲ್ಲಿಟ್ಟು ನಸುಗನಗುತ್ತ ಹೇಳಿದರು :

‘ನಿಂಗೊಂದು ವಿಷಯ ಹೇಳಬೇಕೂಂತಿದ್ದೆ. ಏನು ಮಾಡಿಯೂ ಏನೂ ಆಗ್ದೆ ಹೋಗಬಹುದು-ಈ ನೆಲದ ಗುಣಾನೇ ಅಂಥದ್ದು. ಆದ್ರೂ ನಾಳೆ ನಾನು ಹೊಲೇರ ಜೊತೆ ಮೆರವಣಿಗೇಲಿ ಬರೋದೂಂತ ನಿಶ್ಚಯ ಮಾಡಿದೀನಿ’.

ಜಗನ್ನಾಥನ ಕಣ್ಣುಗಳಲ್ಲಿ ಕೃತಜ್ಞತೆಯ ನೀರಾಡಿದ್ದು ಕಂಡು ರಾಯರು ತಮಾಷೆ ಮಾಡಿದರು :

‘ಮಹರಾಯ ನೀನು ಹೇಳೋದನ್ನೆಲ್ಲ ನಾನು ಒಪ್ತೀನಿ ಅಂತ ಇದರ ಅರ್ಥವಲ್ಲ. ಆದರೆ ನೀನು ಹೀಗೆ ಸೊಂಟ ಕಟ್ಟಿ ನಿಂತಾಗ ನಾನು ಹೆದರಿದ್ರೆ ಸಾಯೋತನಕ ನಾನು ನಾಚಿಕೋ ಬೇಕಾದೀತು. ಮಾನ ಉಳಿಸಿಕೊಳ್ಳೋ ಉಪಾಯ-ಅಷ್ಟೆ’.

ತುಂಬ ಆಯಾಸವಾಗಿತ್ತು, ಜಗನ್ನಾಥ ಮಲಗಿ ನಿದ್ರೆ ಮಾಡಿದೆ.