ಜಾತ್ರೆಯ ಮಾರನೇ ದಿನ ಮಧ್ಯಾಹ್ನ ಜಗನ್ನಾಥ ‘ಜಾಗೃತಿ’ ಪತ್ರಿಕೆಯ ವಿಶೇಷಾಂಕವನ್ನು ನೋಡುತ್ತ ಕೂತಿದ್ದ :

ವಿಫಲವಾದ ಕ್ರಾಂತಿ.
ಆದರೂ
ಧೃಡವಾಗಿ ಉಳಿದ ಜಗನ್ನಾಥರ ಸಂಕಲ್ಪ ಶಕ್ತಿ.

ಮುಂದೆ ಓದುವ ವ್ಯವಧಾನವಿರಲಿಲ್ಲ. ಮನೆಯನ್ನು ಮುತ್ತಿಗೆ ಹಾಕಿದ ಜನ ಕೂಗುತ್ತಲೇ ಇದ್ದರು. ಪೋಲೀಸರಿಗೂ ತಳ್ಳಿ ತಡೆದು ಸೀಟಿ ಊದಿ ಸುಸ್ತಾಗಿರಬೇಕು. ಎಷ್ಟು ಅಸಂಬದ್ಧವಾದ ಘೋಷಣೆಗಳು! ‘ಗಣೇಶಭಟ್ಟರಿಗೆ ಜಯವಾಗಲಿ!’ ‘ನಿರೀಶ್ವರವಾದಿಗೆ ಧಿಕ್ಕಾರ’. ಭಜನೆ ಬೇರೆ –

ಜಯ ಮಂಜುನಾಥ! ಜಯ ಭೂತರಾಯ!
ಜಯ ಗಣೇಶಭಟ್ಟ! ಜಯ ದೇವ ದೇವ!

ಜಗನ್ನಾಥ ಕಿಟಕಿಯಿಂದ ನೋಡಿದ. ಹೊಸ ಮುಖಗಳೇ ಹೆಚ್ಚು. ತಮಾಷೆಯೆಂದರೆ ನಿನ್ನೆ ತಾವು ಉಪಯೋಗಿಸಿದ್ದ ಪೋಸ್ಟರುಗಳನ್ನೆ ಬದಲಾಯಿಸಿ ಬರೆದು ಕೆಲವು ತರುಣರು ಹಿಡಿದು ನಿಂತಿದ್ದರು : ‘ದೇವರ ಪಾವಿತ್ರ್ಯ ಕಾಪಾಡಿದ ಗಣೇಶ ಭಟ್ಟರನ್ನು ಹೊರಗೆ ಬಿಡಿ.’ ನಗು ಬಂತು. ಪಾಪ – ಅನಂತಕೃಷ್ಣರಿಗೆ ಮಾತಾಡಿ ಮಾತಾಡಿ ಗಂಟಲು ಕಟ್ಟಿತ್ತು. ಈಗ ಶ್ರೀಪತಿರಾಯ ರೊಬ್ಬರೇ ಜನರನ್ನು ಸಮಾಧಾನಪಡಿಸಲು ಹೆಣಗುತ್ತಿದ್ದಾರೆ. ತಾನು ಕೆಳಗಿಳಿದು ಹೋಗುವುದೇ ಸರಿಯೆಂದು ಹೊರಡುತ್ತಿದ್ದಂತೆ ನೀಲಕಂಠಸ್ವಾಮಿ ಆತುರದಿಂದ ಬಂದ:

‘ಗಣೇಶನ್ನ ಮನೆಗೆ ಕಳಿಸೋದೇ ಸರಿ ಅನ್ನಿಸತ್ತೆ’.

ನೀಲಕಂಠಸ್ವಾಮಿ ಕೂದಲು ಕಿತ್ತುಕೊಳ್ಳುವುದನ್ನು ನೋಡಿ ಕಷ್ಟವಾಗಿ ‘ಕೂತುಕೊಳ್ಳಿ’ ಎಂದು ಜಗನ್ನಾಥ ಒತ್ತಾಯ ಮಾಡಿದ. ಅವನು ಕೂತ ಮೇಲೆ ಸಮಾಧಾನದಿಂದ ಹೇಳಿದ :

‘ಅದು ಸಾಧ್ಯವೇ ಇಲ್ಲ’.

‘ಪ್ರಭು ಏನೋ ಮಸಲತ್ತು ಮಾಡ್ತಿದಾನಂತೆ ಗೊತ್ತ? ಈಗ ಗಣೇಶನ್ನ ಭೂತರಾಯನ ಅವತಾರಾಂತ ಜನ ತಿಳಿದಿರಬಹುದು. ಅದರೆ ಆಮೇಲೆ ಗಣೇಶ ಬುದ್ಧಿ ತಿಳಿದು ಹೇಳಿಕೆ ಕೊಟ್ಟರೆ ಹೇಗೇಂತ ಅವನಿಗೆ ವರಿ ಆಗಿದೆ. ನ್ಯಾಚುರಲಿ. ಅದಕ್ಕೇನೇ ನಮ್ಮ ಪ್ರೇರಣೇಂದ ಅವ ದೇವಸ್ಥಾನದ ಮೇಲೆ ಹಲ್ಲೆ ಮಾಡ್ದ, ಬಂಗಾರ ಕದ್ದ ಅಂತ ಕಂಪ್ಲೆಂಟ್ ಕೊಡಬೇಕೂಂತ ಇದಾನಂತೆ.’

ರಂಗರಾವ್ ಮತ್ತು ಅನಂತಕೃಷ್ಣರೂ ಮೇಲೆ ಬಂದರು. ಕತ್ತಿಗೆ ಸುತ್ತಿದ ಖಾದಿ ಶಲ್ಯವನ್ನು ಜಗ್ಗಿ ಹಿಡಿದ ಅನಂತಕೃಷ್ಣ ಹೇಳಿದರು :

‘ನೀವೊಂದು ಹೇಳಿಕೆ ಕೊಟ್ಟುಬಿಡಿ. ಪ್ರಭು ಹೇಳಿಕೆಗಿಂತ ಮುಂಚೆ ನಿಮ್ದು ಬರೋದು ಕ್ಷೇಮ. ಮಂಜುನಾಥನ ಲಿಂಗಾನ್ನ ಪೂಜಾರಿಗಳ ಮಗ ದ್ವೇಷದಲ್ಲಿ ಕಿತ್ತೆಸೆದದ್ದಕ್ಕೂ ನಮ್ಮ ಅಹಿಂಸಾತ್ಮಕ ಚಳುವಳಿಗು ಸಂಬಂಧ ಇಲ್ಲಾಂತ ಹೇಳಿ. ಆಮೇಲೆ ಬೇಕಾದರೆ…’

‘ಇಲ್ಲ ಗಣೇಶ ಮಾಡಿದ್ದಕ್ಕೆ ಪರೋಕ್ಷವಾಗಿ ನಾನೇ ಜವಾಬ್ದಾರ’.

ಗಣೇಶನನ್ನು ಭೂತರಾಯನ ಅವತಾರವೆಂದು ತಿಳಿದ ಜನರನ್ನು ಕಿಟಕಿಯಿಂದ ನೋಡುತ್ತ ಜಗನ್ನಾಥ ಹೇಳಿದ. ಈ ಹೊಸ ಆವೇಶಕ್ಕೆ ಯಾರು ಜವಾಬ್ದಾರಿ? ರಂಗರಾವ್ ಒಲಿಸಿಕೊಳ್ಳುವ ಧಾಟಿಯಲ್ಲಿ ಜಗನ್ನಾಥನ ಪಕ್ಕ ಬಂದು ನಿಂತು ಕೇಳಿಕೊಂಡ :

‘ಹಾಗಲ್ಲ ಸಾರ್. ಈಗ ಎಲ್ಲ ಹಿಂದೂಗಳನ್ನು ಎದುರು ಹಾಕ್ಕೊಳೋದು ಸರಿಯಾದ ಟ್ಯಾಕ್ಟಿಕ್ ಅಲ್ಲ. ಏನೂ ಬೇಡ – ಹೀಗೆ ಹೇಳಿಕೆ ಕೊಡಿ. ಗಣೇಶಭಟ್ಟರಿಗೆ ಬುದ್ಧಿಭ್ರಮಣೆಯಾಗಿ ಹೀಗೆ ಮಾಡಿರಬೇಕು ಅಂತ. ಆಗ ಅವರು ಮಾಡಿದ್ದು ತಪ್ಪೂಂತ ನಾವು ಹೇಳಿದ ಹಾಗೂ ಆಗಲ್ಲ; ಸರೀಂತ ಹೇಳಿ ಎಲ್ಲ ಜಾತಿಯವರನ್ನು ಸುಮ್ಮನೇ ಮೈಮೇಲೆ ಹಾಕ್ಕೊಂಡ್ಹಾಗೂ ಆಗಲ್ಲ’.

ಅನಂತಕೃಷ್ಣ ಒಪ್ಪಿದರು:

‘ಅಲ್ದೇನೆ ಗಣೇಶನ್ನ ಭೂತರಾಯನ ಅವತಾರ ಅಂತ ತಿಳ್ದಿರೋ ಈ ಮೂಢನಂಬಿಕೆಯ ಜನಕ್ಕೂ ಉತ್ತರ ಹೇಳಿದ ಹಾಗೆ ಆಗತ್ತೆ. ಏನೂ ಇಲ್ಲ – ಬುದ್ಧಿ ಭ್ರಮಣೆಯಾಗಿ ಈತ ಹಾಗೆ ಮಾಡ್ದ ಅಂತ.’

ನೀಲಕಂಠಸ್ವಾಮಿ ವಾದವನ್ನು ಇನ್ನಷ್ಟು ಸೂಕ್ಷ್ಮಗೊಳಿಸಿದ :

‘ಗಣೇಶನಿಗೆ ಇದ್ದದ್ದು ದೇವರ ಮೇಲೆ ವೈಯಕ್ತಿಕ ದ್ವೇಷ ; ನಮ್ಮ ಥರದ ಐಡಿಯಾಲಾಜಿಕಲ್ ರೆಬಿಲಿಯನ್ ಅಲ್ಲ. ಆದ್ರಿಂದ ನಾವು ಆತನ ನ್ಯೂರೋಟಿಕ್ ಆಕ್ಷನ್ ಜೊತೆ ಐಡೆಂಟಿಫೈ ಮಾಡಿಕೊಳ್ಳೊಲ್ಲ ಅನ್ನೋದರಲ್ಲಿ ತಪ್ಪಿಲ್ಲ.’

ಅನಂತಕೃಷ್ಣ ಈ ವಾದ ಒಪ್ಪಿ ತಮ್ಮ ಮಾತು ಕೂಡಿಸಿದರು :

‘ಆದದ್ದು ಕೂಡಾ ಹಾಗೆ ಅಲ್ವೆ? ನೀವು ಹೇಳಿದ ಮೇಲೆ ಗಣೇಶ ಬಾಗಿಲು ತೆಗ್ದ. ಅವ ನಿಮಗೆ ಏನು ಹೇಳಿದ್ನೋ, ಜನರಿಗೆ ಏನು ಕೇಳಿಸ್ತೊ – ಅಂತೂ ಭೂತರಾಯನೇ ಗಣೇಶನ ಮೈಮೇಲೆ ಬಂದು ಹೀಗೆ ಮಾಡಿಸ್ದ ಅಂತ ಸುದ್ದಿ ಹಬ್ಬಿಬಿಡ್ತು. ಹರಿಜನರು ದೇವಾಲಯ ಪ್ರವೇಶ ಮಾಡಿದಾಗ, ದೇವರು ಒಳಗಿರಲಿಲ್ಲವಾದ್ರಿಂದ, ದೇವರಿಗೆ ಮೈಲಿಗೇನೆ ಆಗ್ಲಿಲ್ಲ ಅಂತ ಹುಚ್ಚು ಜನ ಕುಣಿದಾಡಿಬಿಟ್ರು. ಎಲ್ಲ ನಮ್ಮ ಕೈಮೀರಿಹೋಯ್ತು. ಏನು ಮಾಡಕ್ಕಾಗತ್ತೆ? – ಈ ನೆಲದ ಗುಣಾನೇ ಅಂಥದ್ದು.’

ಜಗನ್ನಾಥ ಸಂಕಟಪಡುತ್ತ ಕಲ್ಪಿಸಿಕೊಂಡ : ದೇವಾಲಯದ ಕಟ್ಟೆಯ ಮೇಲೆ ಒಂದು ರಾಶಿ ಕುಂಕುಮದ ಎದುರು ಮಂಕು ಹಿಡಿದು ಕೂತ ಗಣೇಶ. ಅವನ ರೆಪ್ಪೆಗಳು ಮುಚ್ಚಿ ತೆರೆಯುತ್ತಿರುತ್ತವೆ. ತುಟಿಯ ಮೇಲೆ ಓಡಾಡುತ್ತಿರುವ ನೊಣವನ್ನು ಓಡಿಸಲೂ ಅವರು ಕೈ ಎತ್ತುವುದಿಲ್ಲ. ಮಂಜುನಾಥನನ್ನು ಪೂಜಿಸಿ ಬಂದವರು ಅವನಿಗೆ ಕೈ ಮುಗಿದು ಚಿಟಿಕೆ ಕುಂಕುಮ ತಗೊಂಡು ಹೋಗುತ್ತಾರೆ. ಕಾಲಾನುಕ್ರಮೇಣ ಪಿಳ್ಳನೋ ಅವನ ಮಗನೋ ಮಂತ್ರಿಯಾಗುತ್ತಾನೆ. ಭಾರತೀಪುರದಲ್ಲಿ ತನ್ನ ಫೋಟೋ ಅನಾವರಣ ಮಾಡುತ್ತಾನೆ. ಕ್ರಾಂತಿಯ ಬಗ್ಗೆ ಬರಕೊಂಡು ನಾನೆಲ್ಲೋ ಇರುತ್ತೇನೆ. ದೆಹಲಿಯಲ್ಲಿ, ಪ್ರಾಯಶಃ ಮಾರ್ಗರೆಟ್ ಜೊತೆ. ಮುದಿಯಾದ ಗಣೇಶ ಕಟ್ಟೆಯ ಮೇಲೇ ಕೂತಿರುತ್ತಾನೆ. ಅಥವಾ ಅವನು ಸತ್ತರೆ ಅವನು ಕೂತಿದ್ದ ಮಣೆಗೇ ಪೂಜೆ ಸಲ್ಲುತ್ತದೆ. ನನ್ನ ಹೆಸರಿನಲ್ಲಿ ಬಾಲಿಕಾ ಪಾಠಶಾಲೆ ಕಟ್ಟುತ್ತಾರೆ. ಪ್ರಗತಿಯಾಗುತ್ತ ಆಗುತ್ತ ಗರ್ಭಗುಡಿಯೊಳಗೆ ವಿದ್ಯುದ್ದೀಪಗಳು ಬೆಳಗುತ್ತವೆ. ಪ್ರಭು ನನ್ನನ್ನು ಹೊಗಳಿ ಭಾಷಣ ಮಾಡುತ್ತಾನೆ. ಈಗ ಕೂಗುವ ಜನ ಆಗ ಚಪ್ಪಾಳೆ ತಟ್ಟುತ್ತಾರೆ.

* * *

ರಾಯರು ಎಷ್ಟು ಹೊತ್ತು ಜನರನ್ನು ತಡೆಹಿಡಿದಾರೆಂದು ಆತಂಕವಾಗಿ ಎದ್ದು ನಿಂತ. ನೀಲಕಂಠಸ್ವಾಮಿ ‘ಜನ ನಿಮ್ಮನ್ನು ನೋಡಿ ರೊಚ್ಚಿಗೆದ್ದಾರು ಬೇಡ’ ಎಂದ. ‘ಈ ಜನಕ್ಕೆ ತೀವ್ರವಾದ ರೊಚ್ಚೂ ಸಾಧ್ಯವಿಲ್ಲ’ ಎಂದು ಜಗನ್ನಾಥ ಮಹಡಿ ಇಳಿಯುತ್ತಿದ್ದಾಗ ಪೋಲೀಸ್ ಇನ್ಸ್‌ಪೆಕ್ಟರ್ ಬಂದ. ಅವನ ಕೈಯಲ್ಲಿ ಗಣೇಶನ ಅರೆಸ್ಟ್ ವಾರೆಂಟ್ ಇತ್ತು. ದೇವಸ್ಥಾನದ ಮೇಲೆ ಹಲ್ಲೆ ಮಾಡಿ ದೇವರ ಸ್ವತ್ತಾದ ಬಂಗಾರವನ್ನು ಗಣೇಶ ಕದ್ದಿದ್ದಾನೆಂದು ಪ್ರಭು ಕಂಪ್ಲೆಂಟ್ ಕೊಟ್ಟಿದ್ದ. ಪ್ರಭು ನಿಜವಾಗಿಯೂ ಎಷ್ಟು ಘಾಟಿ ಮನುಷ್ಯ – ಮುಖ್ಯವಾಗಿ ಅವನಿಗೆ ಅರ್ಚಕರ ಮಗ ತಮ್ಮ ಬಳಿ ಇರೋದು ಅಪಾಯವೆನ್ನಿಸಿತ್ತು. ಇನ್ಸ್‌ಪೆಕ್ಟರ್‌ಗೌರವದಿಂದ ಗಣೇಶನನ್ನು ಬಿಟ್ಟುಕೊಡುವಂತೆ ಬೇಡಿಕೊಂಡ. ಜಗನ್ನಾಥ ಅವನಿಗೆ ಕೂರಲು ಹೇಳಿ.

‘ಗಣೇಶನಿಗೆ ಬುದ್ಧಿಭ್ರಮಣೆಯಾಗಿದೆ’ ಎಂದ.

‘ಗೊತ್ತು ಸಾರ್‌. ಆದರೆ ಜನರನ್ನ ಕಂಟ್ರೋಲ್ ಮಾಡೋಕೆ ಆಗ್ತ ಇಲ್ಲ. ನಿಮ್ಮ ಮನೇ ಬಿಟ್ಟು ಅವರು ಕದಲ್ತ ಇಲ್ಲ. ಆಮೇಲಿಂದ ಮುಚ್ಚಳಿಕೆ ಕೊಟ್ಟು ಅವನನ್ನು ಬಿಡಿಸ್ಕೋಬಹುದು. ಆಸ್ಪತ್ರೆಗೆ ಸೇರಿಸಬಹುದು. ಡಿ.ಸಿ.ಸಾಹೇಬ್ರೇ ಖುದ್ದು ಹೀಗೇ ನಿಮಗೆ ತಿಳಿಸಿ ಅಂದಿದಾರೆ.’

ಜಗನ್ನಾಥ ಸುಮ್ಮನಿದ್ದ. ಮಂಕಾಗಿದ್ದ ಗಣೇಶನನ್ನು ಇಬ್ಬರು ಪೊಲೀಸರು ನಡೆಸಿಕೊಂಡು ಬಂದರು. ಅವನಿಗೆ ಮೈಮೇಲೆ ಧ್ಯಾಸವಿದ್ದಂತೆ ಕಾಣಲಿಲ್ಲ. ಪೆಚ್ಚಾಗಿ ನೋಡಿದ್ದನ್ನೆ ನೋಡುತ್ತ ನಡೆದ. ಗಣೇಶ ಕಂಡ ಕೂಡಲೇ ಅವನಿಗೆ ಜಯಕಾರ ಹಾಕುತ್ತ ಜನ ವ್ಯಾನನ್ನು ಸುತ್ತುಗಟ್ಟಿದರು. ಪೊಲೀಸರು ಜನರನ್ನು ತಳ್ಳುತ್ತ ವ್ಯಾನಿಗೆ ದಾರಿ ಮಾಡಿದರು. ವ್ಯಾನು ಹೊರಟದ್ದೇ ಜನರೂ ಅದರ ಹಿಂದೆ ಓಡಿದರು.

ಜಗನ್ನಾಥ ನಿಟ್ಟುಸಿರೆಳೆದು ಒಳಗೆ ಬಂದ. ಜೊತೆಯಲ್ಲೆ ರಾಯರು, ನೀಲಕಂಠಸ್ವಾಮಿ, ಅನಂತಕೃಷ್ಣ ಮೇಲೆ ಬಂದರು. ರಂಗರಾವ್ ಸೋಷಲಿಸ್ಟ್ ಹುಡುಗರ ಜೊತೆ ಓಡಾಡಿ ಅಲ್ಲೊಬ್ಬ ಇಲ್ಲೊಬ್ಬನಂತೆ ಮರಗಳ ಕೆಳಗೆ ನಿಂತವರನ್ನು ಅಟ್ಟಿದ. ಜಾತ್ರೆಗೆಂದು ಬಂದ ಊರ ಹೊರಗಿನವರನ್ನು ಹಿಡಿತದಲ್ಲಿಡುವುದೇ ಹೆಚ್ಚು ಕಷ್ಟವಾಗಿತ್ತು. ಕಾವಲಿದ್ದ ಪೋಲೀಸರಿಗೆ ‘ಇಲ್ಲೇ ಇರಿ’ ಎಂದು ಹೇಳಿ ರಂಗರಾವ್ ಮೇಲೆ ಬಂದ.

* * *

ಯಾವತ್ತು ನೀನು ಮೈಸೂರಿಗೆ ಹೋಗಬೇಕೆಂದು ಗೋಪಾಲನನ್ನು ಕೇಳಿ ಜಗನ್ನಾಥ ಪಡಸಾಲೆಯಲ್ಲಿ ಅಡ್ಡಾಡಿದ – ಹೊಲೆಯರ ಜೊತೆ ತಾನು ಹಿಂದಿನ ದಿನ ಹೊರಟ ಕ್ಷಣದಿಂದ ಪ್ರತಿಯೊಂದು ಘಳಿಗೆಯನ್ನೂ ನೆನೆದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತ. ಬೆಳಗಿನ ಝಾವ ಪಿಳ್ಳನ ನೇತೃತ್ವದಲ್ಲಿ ಹತ್ತು ಜನ ಹೊಲೆಯರೂ ಶುಭ್ರವಾದ ಬಿಳಿ ಬಟ್ಟೆ ತೊಟ್ಟು ಅಂಗಳದಲ್ಲಿ ಸೇರಿದ್ದರು. ಅವರನ್ನು ಮಾತಾಡಿಸಲು ಜಗನ್ನಾಥ ಹತ್ತಿರ ಹೋದ ಕೂಡಲೇ ವಾಸನೆ ಬಂತು. ಧೈರ್ಯಕ್ಕಾಗಿ ಹೊಲೆಯರು ಮೂಗಿನ ತನಕ ಹೆಂಡ ಹೀರಿ ಬಂದಿದ್ದರು. ‘ಹೆದರಕೂಡದು’ ಎಂದು ಜಗನ್ನಾಥ ಹೇಳಹೋದಾಗ ಪಿಳ್ಳ ಸಹ ವಿಕಾರವಾಗಿ ನಗುತ್ತ ‘ಓಹೋ’ ಎಂದು ಉಡಾಫೆಯಲ್ಲಿ ಮಾತಾಡಿದ್ದ. ಈ ಸ್ಥಿತಿಯಲ್ಲಿ ಅವರು ಗುಡಿ ಪ್ರವೇಶ ಮಾಡುವುದು ಪ್ರಜ್ಞಾಪೂರ್ವಕವಾದ ಪ್ರತಿಭಟನೆಯಲ್ಲ ಎಂದು ಅನ್ನಿಸಿದರೂ ಇಟ್ಟ ಹೆಜ್ಜೆಯನ್ನು ಹಿಂದಿಡುವುದು ಸಾಧ್ಯವಿಲ್ಲ ಎಂದು ತಾನು ಆಗ ನಿಸ್ಸಹಾಯಕನಾಗಿ ನಿಂತಿದ್ದ. ಬರೀ ಪ್ರೇಕ್ಷಕನಾಗಿಬಿಟ್ಟೆ. ಆಗ ನಾನು ಭಯಪಟ್ಟೆನೆ? ಸಾಮೂಹಿಕ ಕ್ರಿಯೆಯನ್ನು ಪರಿಶುದ್ಧವಾಗಿಡಿವುದು ಅಸಾಧ್ಯವೆಂದು ಒಪ್ಪಿಕೊಂಡನೆ? – ಹೀಗೆ ಕೆದಕಿಯೂ ಇನ್ನು ಮುಂದೆ ಪ್ರಯೋಜನವಿಲ್ಲವೆನಿಸಿ ಮಹಡಿ ಹತ್ತಿ ಹೋದ.

ರಾಯರು, ನೀಲಕಂಠಸ್ವಾಮಿ, ಅನಂತಕೃಷ್ಣ, ರಂಗರಾವ್ ಚಾಪೆಯ ಮೇಲೆ ಕೂತು ಗಾಢವಾಗಿ ಚರ್ಚಿಸುತ್ತಿದ್ದರು. ಚಿಕ್ಕ ತಟ್ಟೆಯ ಮೇಲೆ ಲೋಟಗಳಲ್ಲಿ ಕಾಫಿ, ಕೋಡುಬಾಳೆ ತಂದಿಟ್ಟು ಹೋದರು. ಹಿಂದಿನ ದಿನದ ಘಟನೆಗಳನ್ನೆಲ್ಲ ಕೂಲಂಕಷವಾಗಿ ವಿಶ್ಲೇಷಿಸುತ್ತಿದ್ದವರು, ಟಪಾಲು ಬಸ್ಸಿನಲ್ಲಿ ಬೆಂಗಳೂರಿನ ದಿನಪತ್ರಿಕೆ ಬಂದದ್ದನ್ನು ಕಂಡವರೇ ಸುಮ್ಮನಾದರು. ಮೊದಲಿನ ಪೇಜಿನ ಸುದಿಯಾಯಿತೆಂದು ಖುಷಿಗೊಂಡ ನೀಲಕಂಠಸ್ವಾಮಿ ಆತುರದಿಂದ ಶೀರ್ಷಿಕೆ ಓದುತ್ತ ‘ಆ ಪಿಆರ್ಟಿ ರಾಸ್ಕರ್ ರಿಯಾಕ್ಷನರಿ. ಸುದ್ದಿನ ಟ್ವಿಸ್ಟ್ ಮಾಡ್ತಾನೆ. ಜಾಗೃತೀಲಿ ಇರೋ ವರದೀನೆ ಚೆನ್ನಾಗಿರತ್ತೆ’ ಎಂದು ಗಟ್ಟಿಯಾಗಿ ಓದಲು ಪ್ರಾರಂಭಿಸಿದ :

ಭಾರತೀಪುರದಲ್ಲಿ ವಿಫಲವಾದ ಕ್ರಾಂತಿ
ದೇವರಿಲ್ಲದ ಗುಡಿಗೆ ಹರಿಜನ ಪ್ರವೇಶ
ಹೋರಾಟದಿಂದ ಹಿಮ್ಮೆಟ್ಟುವುದಿಲ್ಲ
-ಜಗನ್ನಾಥ

ದೇವರು ಮಲಿನವಾಗುವುದನ್ನು ಅಂತೂ ಭೂತರಾಯ ತಪ್ಪಿಸಿದ
-ಭಕ್ತವೃಂದ

ಅನಂತಕೃಷ್ಣ ಆತುರದಿಂದ ಪೇಪರ್ ನೋಡಲು ಕತ್ತು ಚಾಚಿ ‘ಮುಂದೆ ಓದಿ’ ಎಂದರು. ರಾಯರು ಎಲೆಯಡಿಕೆ ಚೀಲ ಬಿಚ್ಚಿ ಕವಳ ಸಿದ್ಧಪಡಿಸುತ್ತ ಆಲಿಸಿದರು. ಜಗನ್ನಾಥನಿಗೆ ಇದ್ದಕ್ಕಿದ್ದಂತೆ ನೆನಪಾಯ್ತು.

‘ಹೊಲೇರನ್ನ ಪೊಲೀಸರು ಕಾಯ್ತ ಇದಾರೆ ತಾನೆ?’

‘ಹತ್ತು ಹನ್ನೆರಡು ಪೊಲೀಸರು ಕಾವಲಾಗಿದಾರೆ. ಪಿಳ್ಳನ್ನ ನೋಡಿ ಬಂದೆ. ಸಾಯಂಕಾಲ ಮೀಟಿಂಗ್‌ಗೆ ಬರೋಕೆ ಹೇಳಿದೆ.’

ರಂಗರಾವ್ ಉತ್ಸಾಹದಲ್ಲಿ ಹೇಳಿದ. ಈ ಯಾರಿಗೂ ತನ್ನ ಯಾತನೆ ಅರ್ಥವಾಗದು. ಅವಶ್ಯವೂ ಇಲ್ಲ. ಅವರಿಗೆ ಕ್ರಿಯೆಯಲ್ಲಿ ತೊಡಗಿರೋದೇ ಸುಲಭ. ನೀಲಕಂಠಸ್ವಾಮಿ ಓದುತ್ತಿರೋದನ್ನ ಎಷ್ಟು ತನ್ಮಯರಾಗಿ ಎಲ್ಲರೂ ಆಲಿಸುತ್ತಿದ್ದಾರೆ. ಪೇಪರಿನ ವರದಿಯ ಮೂಲಕ ಮಾತ್ರ ಇವರಿಗೆ ತಾವು ಮಾಡಿದ್ದು ನಿಜವಾಯಿತೆಂಬ ಭ್ರಮೆಯಿರಬಹುದು. ನೀಲಕಂಠಸ್ವಾಮಿ ಖುಷಿಯಾಗಿ ಓದಿದ:

‘ಬಿಸಿಲಿನ ಪೊರಕೆ ಹಿಮವನ್ನು ಗುಡಿಸುವ ಹೊತ್ತು ಭಾರತೀಪುರದಲ್ಲಿ ಬಲು ಸುಂದರ. ನಾನಾ ದೇಶಗಳಿಂದ ಬಂದ ಜನ ರಥೋತ್ಸವಕ್ಕಾಗಿ ಚಳಿಯಲ್ಲಿ ಕಾದು ನಿಂತಿರುವಾಗ ಈ ನಾಟಕ. ರಾಷ್ಟ್ರಪತಿಯನ್ನೆ ಭಕ್ತನನ್ನಾಗಿ ಪಡೆದ ಶ್ರೀ ಮಂಜುನಾಥನಿಗೆ ಭಂಟ ಭೂತರಾಯ. ಇವನ ಅಂಕೆಯ ಲಕ್ಷ್ಮಣ ಗೆರೆಯನ್ನು ಮೀರುವುದು ಹರಿಜನರಿಗೆ ಶಕ್ಯವೋ ಎಂದು ಹೊಳೆಯುವ ಕಣ್ಣುಗಳಲ್ಲಿ ಕಾತರ. ಕಾತರಕ್ಕೂ ಮೀರಿದ ಕುತೂಹಲ.’

ಜಗನ್ನಾಥನಿಗೆ ಕಿರಿಕಿರಿಯಾಯಿತು. ‘ಒಳ್ಳೆಭಾಷೆ’ ಎಂದು ರಂಗರಾವ್ ಮೆಚ್ಚಿದ.

‘It is immoral to write like that’ ಎಂದು ಜಗನ್ನಾಥ ಸಿಗರೇಟ್ ಹಚ್ಚಿ ಕೇಳುತ್ತ ಕೂತ :

‘ಮಂಜುನಾಥ ಮಹಿಮೆಯ ನಾಶಕ್ಕಾಗಿ ಜಗನ್ನಾಥರ ನೇತೃತ್ವದಲ್ಲಿ ಬೆಳಗಿನ ಝಾವ ಹೊರಟ ಶುಭ್ರ ವಸನಧಾರಿ ಹರಿಜನ ಯುವಕರ ಮೆರವಣಿಗೆ ರಥಬೀದಿ ತಲ್ಪಿದಾಗ ಏಳು ಘಂಟೆ. ಹಿಂದಿನಿಂದ ಕಾರು. ಮೈಕಿನಲ್ಲಿ ಜಯಘೋಷ. ‘ಇಂಕ್ವಿಲಾಬ್ ಜಿಂದಾಬಾದ್’; ಜಗನ್ನಾಥ ರಾಯರಿಗೆ ಜಯವಾಗಲಿ’ ; ‘ಭೂತರಾಯನ ರೈತಶೋಷಣೆಗೆ ಧಿಕ್ಕಾರ’; ‘ಮೈಸೋಪಕ್ಕೆ ಜಯವಾಗಲಿ’- ವೇದಘೋಷ ಶತಮಾನಗಳಿಂದ ಮೊಳಗಿದ ಭಾರತೀಪುರದಲ್ಲಿ ಈ ಕ್ರಾಂತಿಘೋಷ’.

ಓದುವಾಗ ನೀಲಕಂಠಸ್ವಾಮಿಯ ಮುಖ ಸಣ್ಣಗಾಗಿ ಧ್ವನಿ ಕುಗ್ಗಿತ್ತು. ತನ್ನ ಹೆಸರಿಗೆ ಜಯಘೋಷ ಕೂಗಿದೊಡನೆಯೇ ನಿನ್ನ ಜಗನ್ನಾಥನಿಗೆ ಎಷ್ಟು ಹೇಸಿಗೆಯಾಗಿತ್ತೆಂದರೆ ಸಾಲು ಬಿಟ್ಟು ಹಿಂದೆ ನಡೆದು ಬಂದು ಕಾರಿನಲ್ಲಿ ಕೂತು ಕೂಗುತ್ತಿದ್ದ ನೀಲಕಂಠಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಮೌನವಾಗಿ ಮೆರವಣಿಗೆಯಾಗಬೇಕೆಂದು ಕಟ್ಟಪ್ಪಣೆ ಮಾಡಿದ್ದ. ಇದರಿಂದ ನೀಲಕಂಠಸ್ವಾಮಿಗಾದ ಅಸಮಾಧಾನ ಈಗಲೂ ಉರಿಯುತ್ತಿದೆಯೆಂಬುದನ್ನು ಗಮನಿಸಿ ಜಗನ್ನಾಥ ಅದನ್ನು ತಾನು ಮರೆತಿದ್ದೇನೆಂದು ಸೂಚಿಸಲು ತಲೆ ತಗ್ಗಿಸಿ ಕೂತ. ನೀಲಕಂಠಸ್ವಾಮಿ ತಡವರಿಸಿದ್ದು ಕ್ಷಣಮಾತ್ರ. ಮುಂದೆ ಓದಿ:

‘ಇಕ್ಕೆಲದಲ್ಲೂ ಪೋಲೀಸರು. ಮೆರವಣಿಗೆಯ ಮಂಚೂಣಿಯಲ್ಲಿ ಎತ್ತರದ ನಿಲುವಿನ, ಲಂಡನ್ನಿನಲ್ಲಿ ಓದಿ ಬಂದ, ಧರ್ಮದರ್ಶಿ ಮನೆತನದ ಜಗನ್ನಾಥರು. ಅವರ ಹಿಂದೆ ಹತ್ತು ಯುವಕ ಹರಿಜನರು. ಅವರ ಹಿಂದೆ ಹಳೆ ಕಾಂಗ್ರೆಸ್ ನಾಯಕ ಶ್ರೀಪತಿರಾಯರು. ಹಿಂದೆ ಸರ್ವೋದಯ ನಾಯಕ ಅನಂತಕೃಷ್ಣರು. ಮೈಸೋಪದ ನಾಯಕ ನೀಲಕಂಠಸ್ವಾಮಿ ಮತ್ತು ಅನುಯಾಯಿಗಳು.’

ರಂಗರಾವ್ ಹೊರತಾಗಿ ಎಲ್ಲರ ಮುಖಗಳೂ ಅರಳಿದುವು. ‘ಕ್ರಿಯಾಪದವೇ ಇಲ್ಲದೆ ಈ ಗದ್ಯ ತುಂಬ ಇರಿಟೇಟ್ ಮಾಡತ್ತೆ’ ಎಂದು ಜಗನ್ನಾಥನನ್ನುದ್ದೇಶಿಸಿ ರಂಗರಾವ್ ಹೇಳಿದ್ದನ್ನ ಅನಂತಕೃಷ್ಣ ಒಪ್ಪಿದರು. ‘ಸಿದ್ಧವನಹಳ್ಳಿಯವರ ಶೈಲೀನ್ನ ಈಗ ಎಲ್ಲರೂ ದುರುಪಯೋಗ ಮಾಡ್ತಿದರೆ’ ಎಂದರು.

‘ಹೊಲೆಯರಿಗೆ ಮೈತಾಕಿದರೆ ರಥ ಎಳೆಯುವುದು ಸಾಧ್ಯವಿಲ್ಲವಾದ್ದರಿಂದ ರೋಡಿನ ಮಧ್ಯೆ ಜನರಿಂದಲೇ ಜಾಗ. ಸಿಂಗರಿಸಿದ ರಥ ದಾಟಿ ದೇವಸ್ಥಾನದ ಮೆಟ್ಟಲೇರಿದ ಮೆರವಣಿಗೆ. ಎಲ್ಲೆಡೆಯೂ ಗುಜುಗುಜು. ಪೋಲೀಸರು ಜನರನ್ನು ತಳ್ಳುವ ಕೋಲಾಹಲ.

ಹಳ್ಳಿ ಹೆಂಗಸೊಬ್ಬಳು ಆವೇಶದಿಂದ ಕೂಗಿದಳು : ‘ಹೊಲೇರು ಒಳಗೆ ಹೋಗೋದು ಸಾಧ್ಯಾನೇ ಇಲ್ಲ. ಭೂತರಾಯ ಕಾಲು ಹಿಡಿದು ಎಳೀತಾನೆ. ರಕ್ತ ಕಕ್ಕಿಸ್ತಾನೆ.’

ಅಂತೂ ಕ್ರಿಯಾಪದ ಬಂತು ಎಂದು ನಿಟ್ಟುಸಿರೆಳೆದು ಜಗನ್ನಾಥ ಎದ್ದು ತನ್ನ ರೂಮಿಗೆ ಹೋದ. ನೀಲಕಂಠಸ್ವಾಮಿ ಓದುತ್ತಲೇ ಇದ್ದ. ಜಗನ್ನಾಥ ಕಿಟಕಿಯಾಚೆ ನೋಡಿದ. ಹೂಬಿಟ್ಟ ಮಾವಿನಮರ. ನಿರೀಶ್ವರವಾದಿಯನ್ನು ನೋಡುವ ಕುತೂಹಲದಿಂದ ಗುಡ್ಡ ಹತ್ತಿ ಬರುತ್ತಿರುವ ಕೆಲವು ಜನ. ಅವರನ್ನು ಅಟ್ಟುವ ಪೊಲೀಸರು. ಹೀಗೆ ತಾನು ನೋಡುತ್ತ ಈಗ ನಿಂತಿರುವ ಘಳಿಗೆಯನ್ನು ಅವನು ಹಿಂದೆ ನಿರೀಕ್ಷಿಸಿರಲಿಲ್ಲ; ತನ್ನ ಕೈತಪ್ಪಿ ಬೆಳಿದೀತೆಂದು ಊಹಿಸಿದ್ದರೂ ಹೀಗಾಗಬಹುದು ಎಂದಲ್ಲ.

ದೇವಸ್ಥಾನದ ಹೊಸಿಲಿನ ಹತ್ತಿರ ಪಿಳ್ಳ ನಿಂತಿದ್ದ. ಶತಮಾನಗಳನ್ನು ಬದಲಿಸುವ ಹೆಜ್ಜೆಗಾಗಿ ನಾನು ಕಾದೆ. ಹೊರಗಿದ್ದವನು ಒಳಗಗುವ ಒಂದು ಹೆಜ್ಜೆ. ಬೆನ್ನಿನ ಹಿಂದೆ ಸಹಸ್ರಾರು ಕಣ್ಣುಗಳು ಪಿಳ್ಳನನ್ನು ಜಗ್ಗುತ್ತಿದ್ದಾವೆಂಬ ಅರಿವು ತನಗಿತ್ತು. ಆ ಕಣ್ಣುಗಳ ಕ್ರೌರ್ಯ, ಮೌಢ್ಯಗಳನ್ನೆಲ್ಲ ಅಲ್ಲಗಳೆಯುವಂತೆ ನಾನು ಪಿಳ್ಳನನ್ನು ನೋಡಿದೆ. ನೀನೇ ಇಡಬೇಕಾದ ಹೆಜ್ಜೆಯಿದು ಎನ್ನುವುದ ತಿಳಿಸುವಂತೆ ನೋಡಿದೆ. ಆ ಕ್ಷಣದಲ್ಲಿ ವಿಚಿತ್ರವೆಂದರೆ ನನಗೆ ಎಷ್ಟು ಆತಂಕವಿತ್ತೊ, ಅಷ್ಟೇ ಕುತೂಹಲ ಇತ್ತು. ಪಿಳ್ಳ ಸಿದ್ಧನಾಗಿದ್ದಾನೊ ಎಂಬ ಕುತೂಹಲ. ಹೆಂಡದ ಅಮಲು ಇಳಿದಿರಬಹುದು. ಇಷ್ಟು ಕಣ್ಣುಗಳ ಸಾಕ್ಷಿಯಲ್ಲಿ ಈಗ ಪಿಳ್ಳ ಒಂದೇ ಒಂದು ಹೆಜ್ಜೆಯಿಟ್ಟರೆ ಭಾರತೀಪುರ ಹೊಸದೊಂದು ವಾಸ್ತವಕ್ಕೆ ಹೊರಳಿಕೊಂಡೀತು ಎಂದು ಆರ್ತನಾಗಿ ಪಿಳ್ಳನನ್ನು ನೋಡುತ್ತಲೇ ನಿಂತೆ. ನೀನು ಗಟ್ಟಿಯಾಗದೇ ನಾನು ಗಟ್ಟಿಯಾಗಲಾರೆ ಎಂದು ಹೇಳಲು ಪ್ರಯತ್ನಿಸಿದ. ಸಾಕ್ಷಿಯಾಗಿ, ಪಾಲುಗಾರನಾಗಿ, ಸಾಧನವಾಗಿ ಪಿಳ್ಳನ ಕಣ್ಣು ಹುಡುಕುತ್ತ ನಿಂತೆ. ಆದರೆ ಪಿಳ್ಳ ಮುಖ ತಿರುಗಿಸಿ ತನ್ನ ಜೊತೆಗಾರರನ್ನು ನೋಡಿದ. ತನ್ನನ್ನೇ ನೋಡುತ್ತಿದ್ದ ಸಹಸ್ರಾರು ಜನರನ್ನು ನೋಡಿದ. ಹಿಂದೆ ನಿಂತವನಿಗೆ ನೀನು ಮೊದಲು ಒಳಗೆ ಹೋಗು ಎಂದ. ಅವನು ತನ್ನ ಹಿಂದಿದ್ದವನಿಗೆ ಹಾಗೇ ಹೇಳಿದ. ಹೀಗೇ ಒಬ್ಬ ಇನ್ನೊಬ್ಬನಿಗೆ ಹೇಳುತ್ತ ಸಾಲಾಗಿ ನಿಂತಿದ್ದವರು ಗುಂಪಾದರು. ಒಬ್ಬರನ್ನೊಬ್ಬರು ಪುಸಲಾಯಿಸಿಕೊಂಡರು; ಜಗಳ ಪ್ರಾರಂಭಿಸಿದರು.

ಆಗ ತಾನು ಏನು ಮಾಡಬೇಕೆಂದುಕೊಂಡೆ, ಗರಬಡಿದವನಂತೆ ಯಾಕೆ ಸುಮ್ಮನೆ ನಿಂತಿದ್ದೆ?

ಪಿಆರ‍್ಟಿಯ ವರದಿಯನ್ನು ನೀಲಕಂಠಸ್ವಾಮಿ ಕಟುವಾಗಿ ಟೀಕಿಸಿದ : ‘ಹೇಗೆ ಸಟಲ್ಲಾಗಿ ಎಕ್ಸಾಜರೇಟ್ ಮಾಡ್ತಿದಾನೆ ಈ ಸನಾತನಿ ನೋಡಿ – “ಮಿಂಚಿನ ವೇಗದಲ್ಲಿ ಜನಸ್ತೋಮದಲ್ಲಿ ಮಹತ್ತರ ಬದಲಾವಣೆ. ಯಾರೋ ಕೂಗಿದರು : ಮಂಜುನಾಥನಿಗೆ ಜಯವಾಗಲಿ. ಗೋವಿಂದಾನುಗೋವಿಂದ ಗೋವಿಂದ, ಇನ್ನೊಂದು ಕೂಗು; ನುಗ್ಗಿ ಎಳೀರಿ.

“ಹರಿಜನರ ತಲ್ಲಣ ತಿಳಿದು ಕೆಲವರು ಕುಣಿದರು. ಹಲವರು ಅತ್ತರು. ಕೆಲವರು ಭೂತರಾಯ ‘ಮೈಮೇಲೆ’ ಬಂದಂತೆ ಥತ್ತರ ನಡುಗಿದರು. ಭೂತರಾಯ ಹೊಲೆಯರ ಕಾಲು ಎಳೆದನೆಂದು ಎಲ್ಲೆಡೆಯೂ ಸುದ್ದಿ ಹಬ್ಬಿತ್ತು. ಜನರ ಆನಂದ ಮೇರೆ ಮೀರಿ ಪೋಲೀಸ್ ಪಹರೆಯ ಕಟ್ಟೆಯೊಡೆದು ನುಗ್ಗಿತು.”

ಜಗನ್ನಾಥ ವರದಿ ಕೇಳುತ್ತ ನಿಂತ. ನಿಜ – ಆಗ ತಾನು ಕೈಕಟ್ಟಿ ನಿಂತಿದ್ದೆ. ನಾನು ಮಾಡಲಾರದ್ದನ್ನು ನೀಲಕಂಠಸ್ವಾಮಿ ಮಾಡಿದ. ಬುಸುಗುಡುತ್ತ ಪಿಳ್ಳನ ಹತ್ತಿರ ಹೋಗಿ ಅವನ ಕೈ ಹಿಡಿದು ಎಳೆದುಕೊಂಡು ದೇವಸ್ಥಾನದ ಒಳಗೆ ಹೋದ. ಉಳಿದವರು ಹಿಂಬಾಲಿಸಿದರು, ಪ್ರವೇಶ ಶಾಸ್ತ್ರ ಆಗಿಹೋಯ್ತು.

ನೀಲಕಂಠಸ್ವಾಮಿ ಸಿಟ್ಟಿನಿಂದ ಓದುತ್ತಿದ್ದ :

‘ಈ ಬಲಾತ್ಕಾರದ ಪ್ರವೇಶವನ್ನು ನೀವು ಒಪ್ಪುತ್ತೀರೋ ಎಂದು ಕೇಳಿದ್ದಕ್ಕೆ, ಸರ್ವೋದಯ ನಾಯಕ ಅನಂತಕೃಷ್ಣರಿಂದ ‘ಕೊನೆಯಲ್ಲಿ ಅವರನ್ನು ಬಲಾತ್ಕರಿಸಲಾಯಿತೆ ಎನ್ನುವುದು ಅಭಿಪ್ರಾಯದ ಪ್ರಶ್ನೆ’ ಎಂಬ ಉತ್ತರ. ‘GOOD’. ಆದರೆ ಎಲ್ಲವನ್ನೂ ನೋಡುತ್ತ ನಿಂತಿದ್ದ ಜಗನ್ನಾಥರಿಂದ ಮಾತ್ರ ನನ್ನ ಪ್ರಶ್ನೆಗೆ ವಿಷಾದಪೂರ್ಣ ಮೌನದ ಪ್ರತಿಕ್ರಿಯೆ. No ಮಿಸ್ಟರ್ ಜಗನ್ನಾಥ್. ಇದನ್ನ ಡಿನೈ ಮಾಡಿ ನೀವೊಂದು ಸ್ಟೇಟ್‌ಮೆಂಟ್ ಕೊಡಬೇಕು.’

‘ನನಗೇನು ನಿಜವಾಗಿ ಅನ್ನಿಸುತ್ತದೆ ಎನ್ನೋದು ಮುಖ್ಯವೊ, ನಾನು ನಂಬಿದ ಉದ್ದೇಶದ ಸಾಧನೆ ಹೇಗಾರೂ ಆಗೋದು ಮುಖ್ಯವೋ ಅನ್ನೋದೆ ಈಗ ನನ್ನ ಪ್ರಶ್ನೆ. ಈ ಗೊಂದಲ ತೀರೋ ತನಕ ಏನೂ ಹೇಳಲಾರೆ. ಆದ್ರೆ ಈ ಗೊಂದಲ ತೀರೋದು ಕೂಡ ಆಕ್ಶನ್ ಮುಖಾಂತರವೇ ಹೊರ್ತು ಯೋಚಿಸ್ತ ಕೂರೋದ್ರಿಂದ ಅಲ್ಲ ಅಂತ ನಂಗೆ ಗೊತ್ತಾಗಿದೆ.’

ಜಗನ್ನಾಥ ರೂಮೊಳಗೆ ಹೋಗಿ ಮತ್ತೆ ಕಿಟಕಿಯ ಹತ್ತಿರ ನಿಂತ. ದೂರದಿಂದ ಸುಬ್ರಾಯ ಅಡಿಗರು ಬರುತ್ತಿರುವುದು ಕಾಣಿಸಿತು. ವೇಷ ನೋಡಿ ಅನುಮಾನದಿಂದ ಪೊಲೀಸರು ಅವರನ್ನು ತಡೆದಾರೆಂದು ಜಗನ್ನಾಥ ಕೆಳಗಿಳಿದು ಹೋದ.

ಇಲ್ಲ – ನೀಲಕಂಠಸ್ವಾಮಿ ಮಾಡಿದ್ದನ್ನು ತಾನೂ ಮಾಡುತ್ತಿದ್ದೆನೋ ಏನೊ? ಹಾಗೆ ನೋಡಿದರೆ ತಾನು ಮೊದಲಿನಿಂದ ಮಾಡಿದ್ದಾದರೂ ಇನ್ನೇನು? ತನ್ನ ಕ್ರಿಯೆಯ ಪರಿಣಾಮ ಎಷ್ಟು ಅಸಂಗತವಾದೀತೆಮದು ಊಹಿಸದೇ ಇದ್ದದ್ದೆ ತನ್ನ ಆಲೋಚನಾ ಕ್ರಮದ ಮುಖ್ಯ ದೋಷ.

ಹೊಲೆಯರ ಜೊತೆ ಒಳಗೆ ಹೋದಾಗ ಕಾದಿದ್ದ ದೃಶ್ಯ ವಿಚಿತ್ರವಾಗಿತ್ತು. ಗರ್ಭಗುಡಿಯ ಎದುರು ಪ್ರಭು ಮತ್ತು ಸೀತಾರಾಮಯ್ಯ ಇದ್ದರು. ಸೀತಾರಾಮಯ್ಯನ ತಲೆಗೆ ಬ್ಯಾಂಡೇಜ್ ಹಾಕಿತ್ತು. ಇಬ್ಬರ ಮುಖದ ಮೇಲೆ ಕಂಡ ಉದ್ವೇಗದಿಂದ ಈಗ ತನಗೆ ಹೊಳೆಯುವುದೇನೆಂದರೆ ಬೆಳಗಿನಿಂದ ಅವರು ಗಣೇಶನನ್ನ ಬಾಗಿಲು ತೆಗೆಯಲು ಬೇಡಿ, ಒದ್ದಾಡಿ ಸೋತಿರಬೇಕು. ಗಣೇಶ ಏನನ್ನೂ ಸ್ಪಷ್ಟವಾಗಿ ಹೇಳಬಲ್ಲ ಸ್ಥಿತಿಯಲ್ಲಿರಲಿಲ್ಲ. ‘ಹೊಲೇರು ಒಳಗೆ ಬಂದಿದಾವೆ, ಬಾಗಿಲು ತೆಗೀಬೇಡ’ ಎಂದು ಸೀತಾರಾಮಯ್ಯ ರೇಗಿ ಕಿರುಚಿದಾಗ ಏನೋ ನಡೆದಿದೆ ಎಂದು ನನಗೆ ಗುಮಾನಿಯಾಯ್ತು. ‘ನಾವೇನು ಮಾಡೋಣ? ದೇವರ ಪ್ರೇರಣೇಂದ ಇವರ ಮಗ ಬಾಗಿಲು ಹಾಕ್ಕೊಂಡು ಕೂತಿದಾನೆ. ನಾವು ಕರೆದ್ರೂ ಬಾಗಿಲು ತೆಗೀತ ಇಲ್ಲ’ ಎಂದು ಪ್ರಭು ನಾಟಕವಾಡಿದ.

ಜಗನ್ನಾಥ ಸೀದ ಗರ್ಭಗುಡಿಗೆ ಹೋಗಿ ಬಾಗಿಲನ್ನು ಕುಟ್ಟಿದ. ‘ಗಣೇಶ ನಾನು ಜಗನ್ನಾಥ ಬಂದಿರೋದು. ಬಾಗಿಲು ತೆಗಿ ಹೆದರಬೇಡ’ ಎಂದ. ಬಾಗಿಲು ತೆರಿಯಿತು. ಗಣೇಶ ಓಲಾಡುತ್ತಾ ಬಂದು ತನ್ನ ಕಾಲಿನ ಕೆಳಗೆ ಕುಸಿದ…

ಸುಬ್ರಾಯ ಅಡಿಗರು ಮುಖದ ಮೇಲೆ ಯಾವ ಭಾವನೆಯೂ ಇಲ್ಲದೆ ‘ಚಿಕ್ಕಿಯನ್ನು ನೋಡಲು ಬಂದೆ’ ಎಂದರು. ‘ಒಳಗಿದ್ದಾರೆ’ ಎಂದು ಅವರನ್ನು ಕಳಿಸಿ ಜಗನ್ನಾಥ ಮೇಲೆ ಹತ್ತಿಹೋದ, ಬಿರುಸಿನಿಂದ ಚರ್ಚೆ ನಡೆಯುತ್ತಿತ್ತು. ನೀಲಕಂಠಸ್ವಾಮಿ ಜೋರಾಗಿ ಮಾತಾಡುತ್ತಿದ್ದ.

‘ನೋಡಿ, ಹೇಗೆ ಮಾಡಿದಾನೇಂತ? ‘ಹರಿಜನರು ಒಳಗೆ ಬರುತ್ತಾರೆಂದು ಮಂಜುನಾಥ ಅಂತರ್ಧಾನನಾಗಿಬಿಟ್ಟ – ಹೀಗೆ ಜನರಲ್ಲೆಲ್ಲ ಸುದ್ದಿ ಹಬ್ಬಿತು. ಲಿಂಗವನ್ನು ಕಿತ್ತೆಸೆದವರು ಪೂಜಾರಿಗಳ ಮಗ ಗಣೇಶಭಟ್ಟರು ಎಂದು ಶ್ರೀ ನೀಲಕಂಠಸ್ವಾಮಿ ಮೈಕಿನಿಂದ ಘೋಷಿಸಿದರು. ಆದರೆ ಭೂತರಾಯ ಶ್ರೀ ಗಣೇಶಭಟ್ಟರಮೈಮೇಲೆ ಅವಾಹಿತನಾಗಿ ಹೊಲೆಯರ ಪ್ರವೇಶದಿಂದ ದೇವಸ್ಥಾನ ಮಲಿನವಾಗದಿರಲೆಂದು ಹಿಂದಿನ ರಾತ್ರೆಯೇ ಮಂಜುನಾಥನನ್ನು ಜಲವಾಸಕ್ಕೆ ಒಯ್ದನೆಂದು ಜನ ಭಾವಿಸಿ ಕುಣಿದಾಡಿದರು. ಭಾರತೀಯನ ದೈವಭಕ್ತಿ ಎಷ್ಟು ಗಾಢವಾದ್ದೆಂದರೆ…’ ದೈವಭಕ್ತಿ ಅಂತ ಮಾತ್ರ ಮಾತಾಡ್ತಾನೆ ರಾಸ್ಕಲ್, ಆಗ ನಾನೇನು ಹೇಳ್ದೆ ಅನ್ನೋದನ್ನ ವರದಿ ಮಾಡಿದಾನೇನು? ನಾನು ಹೇಳ್ದೆ : ಗೊಡ್ಡು ಪುರಾಣಕ್ಕೆ ಬಲಿಯಾಗಬೇಡಿ. ಜಗನ್ನಾಥರಾಯರು ಮತ್ತು ಗಣೇಶಭಟ್ಟರು – ಇಬ್ಬರೂ ಬಂಡಾಯಗಾರರು. ಈ ಬಂಡಾಯಾನ್ನ ಪುರಾಣ ಮಾಡಿಬಿಡುವ ಅರ್ಚಕ ಮತ್ತು ವರ್ತಕ ವರ್ಗದವರ ಮೋಸ ಒಂದಲ್ಲ ಒಂದು ದಿನ ವ್ಯರ್ಥವಾಗತ್ತೆ. ಭೂತರಾಯ ಮಾಡ್ತಿರೋ ರೈತ ಶೋಷಣೆ ನಿಲ್ಲಲೇಬೇಕಾಗತ್ತೆ. ಇದು ಕ್ರಾಂತಿಯ ಪ್ರಾರಂಭ ಅಷ್ಟೆ – ಅಂತ. ಒಂದಾದರೂ ನನ್ನ ಮಾತನ್ನ ಇವ ವರದಿ ಮಾಡಿದಾನ? ಗುಂಪಲ್ಲಿದ್ದ ಕೆಲವರು ನನ್ನ ಮಾತನ್ನು ಒಪ್ಪಿದರು ಅನ್ನೋಕೆ ಈ ರಂಗರಾವ್ ಸಾಕ್ಷಿ.’

* * *

ಜಗನ್ನಾಥ ಕೆಳಗಿಳಿದು ಬಂದು ಅಂಗಳದಲ್ಲಿ ಅಡ್ಡಾಡಿದ. ಇನ್ನೇನು ಸ್ವಲ್ಪ ಹೊತ್ತಿಗೇ ಮೀಟಿಂಗಿತ್ತು. ಪಿಳ್ಳ, ಅವನ ಸಂಗಡಿಗರು, ಪ್ರಾಯಶಃ ಉಳಿದ ಹೊಲೆಯರೂ ಬಂದಾರು. ಶೋಷಿತ ವರ್ಗದವರೆಲ್ಲರ ಮೀಟಿಂಗಿದೆ ಎಂದು ರಂಗರಾವ್ ಪೇಪರಿಗೆ ಬರೆದು ಕಳಿಸಿದ್ದ. ಹೊಲೆಯರು ಬರುವ ಮೀಟಿಂಗಿಗೆ ರೈತರೂ ಬರಲು ಇನ್ನೆಷ್ಟೋ ಹೆಣಗಬೇಕು.

ಮೇಲೆ ಸ್ನೇಹಿತರು ಬಿರುಸಾಗಿ ಚರ್ಚಿಸುತ್ತಲೇ ಇದ್ದರು. ಇವತ್ತು ಮೀಟಿಂಗಿನಲ್ಲಿ ಸಂಘಟನೆಯ ಬಗ್ಗೆ ಏನೇನು ತೀರ್ಮಾನಿಸಬೇಕೆಂದು ಚಿಂತಿಸುತ್ತ ಜಗನ್ನಾಥ ಮುಖ ತೊಳೆದು ಬರಲು ಬಚ್ಚಲಿಗೆ ಹೋದ. ಮತ್ತೆ ಮಂಜುನಾಥನನ್ನು ಪ್ರತಿಷ್ಠಾಪಿಸಲು ನಡೆಯುತ್ತಿದ್ದ ಸಿದ್ಧತೆಗಳನ್ನು ಅಡಿಗರು ಚಿಕ್ಕಿಗೆ ವಿವರಿಸುತ್ತಿದ್ದರು.

* * *