ಶ್ರೀ ಮಂಜುನಾಥ ದೇವಾಲಯದ ಮುಖ್ಯ ಪೂಜಾರಿಗಳಾದ ಸೀತಾರಾಮಯ್ಯ ಅವಸರದಲ್ಲಿ ನಡೆಯುತ್ತ, ಯಾವುದೇ ಮಂತ್ರವನ್ನು ಗೊಣಗುತ್ತ, ದೇವಸ್ಥಾನದ ಹಿಂದಿನ ಓಣಿಯಲ್ಲಿದ್ದ ತಮ್ಮ ಮನೆಗೆ ಬಂದರು. ದಾಯಾದಿಯಾದ ನಾಗರಾಜ ಜೋಯಿಸ ಈಚೆಗೆ ಹೆಚ್ಚಿಕೊಂಡಿದ್ದ: ಕೋರ್ಟಿಗೆ ಹೋಗಲೂ ತಾನು ಹಿಂಜರಿಯುವುದಿಲ್ಲೆಂದು ಹೇಳಿದ್ದನಂತೆ. ಪೂಜೆ ಮುಗಿಸಿ ಬರುತ್ತಿದ್ದಾಗ ಪ್ರಭುಗಳ ಸೋದರಳಿಯ ವೆಂಕಟರಾಯ ಕಾಮತ್ ನಿಲ್ಲಿಸಿ ಕಿವಿಯಲ್ಲಿ ಈ ವಿಷಯ ತಿಳಿಸಿದಾಗ ಸೀತಾರಾಮಯ್ಯನಿಗೆ ಗಾಬರಿಯಾಗಿತ್ತು. ‘ಈವರೆಗೆ ಯಾರೂ ಯಾಕೆ ಕೋರ್ಟಿಗೆ ಹೋಗಿಲ್ಲ ಹೇಳಿ ಸೀತಾರಾಮಯ್ಯನವರೇ? ಭೂತರಾಯನ ಹೆದರಿಕೆಯಿಂದ ಹೌದೊ ಅಲ್ಲವೊ? ಆ ಹೆದರಿಕೆಯನ್ನ ಜಗನ್ನಾಥರಾಯರು ನಾಶ ಮಾಡಿದ ಮೇಲೆ ಜನರಿಗೆಲ್ಲಿ ಪಾಪ ಭೀತಿ ಉಳೀಲಿಕ್ಕೆ ಸಾಧ್ಯ ಹೇಳಿ? ಜೋಯಿಸರ ಬುದ್ಧಿ ನಿಮಗೆ ಗೊತ್ತಿಲ್ಲವೊ? ಮಗ ಬೇರೆ ಲಾಯರಲ್ಲವೊ? ‘ನಾಳೆ ಹರಿಜನ ಪ್ರವೇಶವಾಗಲಿ- ಸೀತಾರಾಮಯ್ಯನ ಪೂಜೇಲಿ ಏನು ಕಾರ್ಣಿಕ ಉಳಿದಿದೆ ನೋಡ್ತೇನಲ್ಲ. ನಾನು ಕೋರ್ಟಿಗೆ ಹೋಗೇ ಸೈ’ ಎಂದು ಜೋಯಿಸರು ಅಂಗಡಿಗೆ ಬಂದಾಗ ಹೇಳಿದರು. ಒಟಾರೆ ಮಂಗನಿಗೆ ಏಣಿ ಹಾಕಿಕೊಟ್ಟ ಹಾಗಾಯ್ತು ಅಂತ ನಾನು ಮಾವನಿಗೆ ಹೇಳಿದೆ.’

ತನಗೆ ಗಾಬರಿಯಾಗಿದೆ ಎಂದು ಕಾಮತ್‌ಗೆ ಸೀತಾರಾಮಯ್ಯ ತೋರಿಸಿಕೊಂಡಿರಲಿಲ್ಲ.

‘ಮನೇಲಿ ಒಂದು ದುರ್ಮರಣವಾಯ್ತು. ದೇವರು ನೋಡಿಕೋತಾನೆ’ ಎಂದಷ್ಟೆ ಹೇಳಿ ಮನೆಗೆ ಬಂದಿದ್ದರು.

ಸೀತಾರಾಮಯ್ಯ ನೋಡಲು ಭರ್ಜರಿ ಮನುಷ್ಯ. ಕಿವಿಗಳಲ್ಲಿ ವಜ್ರದ ಒಂಟಿ; ಬೆನ್ನಿನ ಮೇಲೆ ಇಳಿಬಿಟ್ಟ ಅರ್ಧ ನೆರೆತ ತುಂಬು ಜುಟ್ಟು; ಕುತ್ತಿಗೆಯಲ್ಲಿ ಬಂಗಾರದಲ್ಲಿ ಕಟ್ಟಿದ ರುದ್ರಾಕ್ಷಿ; ಹಣೆಯಲ್ಲಿ ಮಂಜುನಾಥನ ಸ್ಪೆಶಲ್ ಪ್ರಸಾದವಾದ ಕಸ್ತೂರಿ ಬೆರೆಸಿದ ಕುಂಕುಮ.

ಅಪ್ಪನ ಹೆಜ್ಜೆ ಸಪ್ಪಳ ಕೇಳಿದ್ದರೆ ಒಳಮನೆಯ ಮೂಲೆಯಲ್ಲಿ ಕಿಟಕಿಗೆ ಹತ್ತಿರವಾಗಿ ಕೂತು ದೇವದಾಶ ಕಾದಂಬರಿ ಓದುತ್ತಿದ್ದ ಗಣೇಶ ಖಂಡಿತ ಪುಸ್ತಕವನ್ನು ಮುಚ್ಚಿಡುತ್ತಿದ್ದ; ಬಾಳೆಲೆ ಕೊಯ್ಯುವುದರಲ್ಲೊ ದೊನ್ನೆ ಮಾಡುವುದರಲ್ಲೊ ಮಗ್ನನಾದಂತೆ ಕಾಣಿಸಿಕೊಳ್ಳುತ್ತಿದ್ದ. ಆದರೆ ಅವನು ಕಾದಂಬರಿಯಲ್ಲಿ ಎಷ್ಟು ತಲ್ಲೀನವಾಗಿದ್ದನೆಂದರೆ ಅಪ್ಪ ಒಳಗೆ ಬಂದದ್ದು ಗೊತ್ತಾಗಲಿಲ್ಲ. ಹತ್ತಿರ ನಿಂತದ್ದು ಕಾಣಿಸಲಿಲ್ಲ; ದುರುಗಟ್ಟಿ ನೋಡಿದ್ದು ತಿಳಿಯಲಿಲ್ಲ. ಅಪ್ಪ ಕಪಾಳಕ್ಕೆರಡು ಬಾರಿಸಿ, ತಲೆಯ ಮೇಲೆ ಜಜ್ಜಿ, ಪುಸ್ತಕವನ್ನು ಕಿತ್ತೆಸೆದು, ರಟ್ಟೆಹಿಡಿದು ಎಳೆದಾಗ ಗಣೇಶ ಬುಸುಗುಡುತ್ತ ಎದ್ದು ನಿಂತ. ಅಪ್ಪನನ್ನು ಚಚ್ಚಿ ಸಾಯಿಸಬೇಕೆಂಬ ರೋಷವನ್ನು ಉಗ್ಗಿನಿಂದಾಗಿ ಮಾತಿನಲ್ಲೂ ವ್ಯಕ್ತಮಾಡಲಾರದೆ, ದ್ವೇಷ ಕಾರುವ ಕಣ್ಣುಗಳಿಂದ ಹೊರಹಾಕಿದ. ದೇವದಾಸ ಕಾದಂಬರಿ ತನ್ನೊಳಗೆ ಹುಟ್ಟಿಸಿದ್ದ ಮೃದುವಾದ ಭಾವನೆಯನ್ನು ಎದುರಿಗೆ ನಿಂತ ರಾಕ್ಷಸ ಹೇಗೆ ತಿಂದು ಹಾಕಿದನಲ್ಲ; ಪುಸ್ತಕದ ಲೋಕದಲ್ಲಿನ ಪಾತ್ರಗಳ ಜೊತೆ ಒಡನಾಡುತ್ತಿದ್ದ ಸ್ವಾಭಿಮಾನಿಯಾದ ತನ್ನನ್ನು ಮತ್ತೆ ಈ ಕ್ಷುದ್ರ ವಾಸ್ತವತೆಗೆ ಎಳೆದು ತಂದು ಬಿಸಾಕಿದನಲ್ಲ ಎಂದು ಅಪ್ರಯತ್ನವಾಗಿ ಕಣ್ಣಲ್ಲಿ ನೀರಾಡಿತು.

ಅಪ್ಪನ ಸಹಸ್ರನಾಮ ಪ್ರಾರಂಭವಾಯಿತು- ಯಥಾ ಪ್ರಕಾರ ‘ಜೋಬದ್ರ ಮುಂಡೇದೆ’ ಎನ್ನುವ ಪದಗುಚ್ಛದಿಂದ. ಕತೆ ಪುಸ್ತಕ ಓತ್ತ ಸಾಯ್ತೀಯಲ್ಲ ನಾಚಿಕೆ ಮಾನ ಮರ್ಯಾದೆ ಉಂಟ ನಿನಗೆ; ಕೂಳು ತಿಂದು ಕೊಬ್ಬಿದರೆ ಸಾಕ; ಮದುವೆಯಾದ ಮೇಲೂ ನಿನಗೆ ಯಾಕೆ ವಿವೇಕ ಬರ್ಲಿಲ್ಲ-ಬೈಗಳಗಳು ಏರಿದಂತೆ ಲಿಂಗಪೂಜೆಯಲ್ಲಿ ಬಿಲ್ವಪತ್ರೆಯನ್ನೆಸೆಯುವ ಹಾಗೆ ಆಗೊಂದು ಈಗೊಂದು ಕಪಾಳಕ್ಕೆ ಏಟು ಬೀಳುತ್ತಿತ್ತು. ಗಣೇಶನ ರೋಷ ಕೂಡ ಹಾಗೆಯೇ ಏರುತ್ತ, ಈ ಬೈಗಳ ಈ ಏಟು ಕೊನೆಗೊಳ್ಳಬೇಕಾದ ಮುಹೂರ್ತ ನಿರೀಕ್ಷಿಸುತ್ತ, ತನ್ನ ಕೈಗಳೂ ಇಕೋ ಈಗಲೋ ಇನ್ನೊಂದು ಕ್ಷಣದಲ್ಲೋ ಮೇಲಕ್ಕೇರುತ್ತಾವೆ, ಬೀಸುತ್ತಾವೆ, ಬೈಯುವಾಗ ತುಟಿಗೆ ಒತ್ತಿ ಮೇಲಕ್ಕೆ ಕೆಳಕ್ಕೆ ಚಲಿಸುವ ಅಪ್ಪನ ಅಲುಗುವ ಉಬ್ಬು ಹಲ್ಲುಗಳನ್ನು ಉದುರಿಸುತ್ತಾವೆ, ಆಗೆಲ್ಲ ಶಾಂತವಾಗುತ್ತದೆ ಎಂಬ ಹವಣಿಕೆಯಲ್ಲಿ ಕಿವಿಯ ಒಳಗೆ ಅಪ್ಪನ ಧಾರಾಕಾರವಾದ ಮಾತಿನ ಕಂಪನವನ್ನು ಮಾತ್ರ ಅನುಭವಿಸುತ್ತ, ತನ್ನ ಈ ಸ್ಥಿತಿಯನ್ನು ಬಾಗಿಲಿನಿಂದ ಇಣುಕಿ ನೋಡಿ ಹಿಂದಕ್ಕೆ ಹೋದ ತನ್ನ ಹೆಂಡತಿಯ ಉದಾಸೀನದಲ್ಲಿ ತನ್ನ ರೋಷ ಗಡಿ ಮೀರಿ ಸಫಲವಾಗುತ್ತದೆ ಎಂದು ಅಪೇಕ್ಷಿಸುತ್ತ ಇರುವಾಗ ಸುಬ್ರಾಯ ಅಡಿಗರು ಒಳಗೆ ಬಂದು, ‘ಏನು ಸೀತಾರಾಮಯ್ಯನವರು ರುದ್ರಾವತಾರಿಗಳಾಗಿದ್ದಾರಲ್ಲ’ ಎಂದದ್ದರಿಂದ ಅಪ್ಪನ ಕೋಪ ಇನ್ನೊಂದು ಮಗ್ಗುಲಿಗೆ ಹೊರಳಿ ಬೋಗಾರು ದುಃಖವಾಯಿತು:

‘ನೋಡಿ ಅಡಿಗರೇ, ಎಷ್ಟು ದಿನಾಂತ ನಾನು ದುಡಿದು ಸಾಯಲಿ? ಮೂರು ಹೊತ್ತೂ ಈ ಘಟಿಂಗ ಏನೋ ಪೋಲಿ ಪುಸ್ತಕ ಹಿಡಕೊಂಡು ಕೂತಿರ್ತಾನೆ. ಮದುವೆಯಾದ ಮೇಲೂ ಜವಾಬ್ದಾರಿ ಬರಲಿಲ್ಲಾಂದ್ರೆ ಹೇಗೆ ಹೇಳಿ’.

ಇನ್ನು ಅಪ್ಪನ ಗೋಳಿನ ಕಥೆ ನಿರಂತರವಾಗಿ ಮುಂದುವರಿಯುತ್ತದೆ. ಇದೂ ಕೂಡ ಒಂದಲ್ಲ ಒಂದು ಕಾಲದಲ್ಲಿ ನಿಲ್ಲಲೇಬೇಕಾಗಿ ಬಂದು ಊಟಕ್ಕೆ ಹೊತ್ತಾಗಿ ಹಸಿವಾಗುತ್ತದೆ: ನನಗೆ ಮತ್ತೆ ಮಧ್ಯಾಹ್ನದ ಸ್ನಾನದ ಹೊತ್ತಾಗುತ್ತದೆ. ಬೆಳಿಗ್ಗೆ ಚಳಿಯಲ್ಲಿ ಹೊಳೆಸ್ನಾನ ಮಾಡಿದದು. ಮಧ್ಯಾಹ್ನ ಮನೇಲೆ ಬಿಸಿನೀರು ಹೊಯ್ದುಕೋಬಹುದು. ಅಪ್ಪನಿಲ್ಲದಿದ್ದರೆ ಬಾಗಿಲು ಹಾಕಿಕೋಬಹುದು; ಲಂಗೋಟಿ ಸಹ ಇಲ್ಲದಂತೆ ದುಂಡಗೆ ನಿಲ್ಲಬಹುದು; ಬೆತ್ತಲೆ ಮೈಗೆ ಬೇಕಾದಷ್ಟು ಬಿಸಿನೀರು ಹೊಯ್ದುಕೋಬಹುದು. ಗಣೇಶ ಕೆಂಡದ ಮೇಲಿಟ್ಟು ಬಾಡಿಸಿದ ಬಾಳೆಲೆಯನ್ನು ಕೊಯ್ದು ದೊನ್ನೆ ಮಾಡುತ್ತ ಕೂತ.

ಸುಬ್ರಾಯ ಅಡಿಗರು ಧ್ವನಿ ತಗ್ಗಿಸಿ ಹೇಳಿದರು:

‘ನೋಡಿ ನನಗೂ ಬೆಳೆದ ಹುಡುಗ. ಮಾತು ಕೇಳಲ್ಲ. ಆದರೆ ಹೊಡೆದು ಪ್ರಯೋಜನವಿಲ್ಲ. ಹೀಗೆ ನೀವು ಹೊಡೆದರೆ ಗಣೇಶನಿಗೆ ಮತ್ತೆ ಬುದ್ಧಿಭ್ರಮಣೆಯಾದೀತು ಸೀತಾರಾಮಯ್ಯ’.

‘ನಾನು ಸತ್ತ ಮೇಲೆ ಮಂಜುನಾಥನ ಪೂಜೆಗೆ ಉತ್ತರಾಧಿಕಾರಿಯಾಗಬೇಕಾದ ಇವನು ಹೀಗೆ ಮಾಡಿದರೆ ಹೇಗೆ ಹೇಳಿ. ನಾನು ಸುಮ್ಮನೇ ಹೇಳೋದೆಲ್ಲ ಅಡಿಗರೆ – ನನಗೆ ಈಚೆಗೆ ಯಾಕೋ ನಿತ್ರಾಣ, ಆದರೂ ಮದುವೆ ಮುಂಜಿ ಪೌರೋಹಿತ್ಯ ಅಂತ ಎಲ್ಲ ನಾನೇ ನೋಡಿಕೋಬೇಕು. ಈ ಘಟಿಂಗನಿಗೊ ಮಡಿಯಿಲ್ಲ, ಮೈಲಿಗೆಯಿಲ್ಲ-’

ಗಣೇಶ ದೊನ್ನೆ ಕಟ್ಟಿ, ಹಿಡಿಕಡ್ಡಿಯಿಂದ ಅದರ ಎರಡು ಪಕ್ಕಗಳನ್ನೂ ಚುಚ್ಚಿ ಭದ್ರಪಡಿಸಿ ಒಂದರಮೇಲೊಂದನ್ನು ನೀಟಾಗಿ ಇಟ್ಟು ತನ್ನ ಅವಮಾನವನ್ನು ಮರೆಯಲು ಪ್ರಯತ್ನಿಸಿದ. ಅಪ್ಪ ಆಡುವ ಎಲ್ಲ ಮಾತುಗಳಲ್ಲೂ ಈ ಉತ್ತರಾಧಿಕಾರತ್ವದ ಪ್ರಸ್ತಾಪ ಬಂದೇ ಬರಬೇಕು. ಅಮ್ಮ ಸತ್ತ ಮೇಲೆ ಅವರು ಎರಡನೇ ಮದುವೆ ಮಾಡಿಕೊಳ್ಳಲು ಕಾರಣ ಮಂಜುನಾಥನ ಪೂಜಾರಿಯಾಗಬೇಕಾದ ತನ್ನನ್ನು ನೋಡಿಕೊಳ್ಳಲು ಒಂದು ಹೆಂಗಸು ಮನೆಯಲ್ಲಿ ಬೇಡವೆ ಎಂದು! ತನಗಿಂತ ಸ್ವಲ್ಪ ಹೆಚ್ಚು ವಯಸ್ಸಿನ ಚಿಕ್ಕತಾಯಿಗೆ ಹುಟ್ಟಿದ ಎರಡು ಮಕ್ಕಳಲ್ಲಿ ಒಂದಾದರೂ ಗಂಡಾಗದಿರುವುದೂ ತನ್ನ ತಪ್ಪಾಗಬೇಕೆ? ಹೋಗಲಿ ಅಂದರೆ ತನಗೆ ಮದುವೆಯಾದ್ದೂ ಈ ಚಿಕ್ಕತಾಯಿಯ ಅಣ್ಣನ ಮಗಳು. ಕಾರಣ-ಅಪ್ಪ ಸತ್ತ ಮೇಲೆ ತಾನು ಪೂಜೆಯ ಉತ್ತರಾಧಿಕಾರಿಯಾದಾಗ ಪೌರೋಹಿತ್ಯದ ನಿತ್ಯವಿಧಿಗಳನ್ನೆಲ್ಲ ಸಾಂಗವಾಗಿ ಮಡಿಯಲ್ಲಿ ನಡೆಸಿಕೊಂಡು ಹೋಗಬಲ್ಲಂತಹ ಕುಲೀನ ಹೆಣ್ಣು ನಿನಗೆ ಬೇಕೊ, ಅಥವಾ ಕೊಂಕಣಿ ಹುಡುಗಿಯಂತೆ ವಾರೆ ಬೈತಲೆ ತೆಗೆದು ಸಿನಿಮಾ ನೋಡುವ ಹುಡುಗಿ ಬೇಕೊ ಎಂಬುದೇ ಆಗಿತ್ತು.

ಭಾರತೀಪುರದಲ್ಲಿ ಗಣೇಶ ಕದ್ದು ಬೀಡಿ ಸೇದಬಲ್ಲಂತಹ ಒಂದು ಗುಪ್ತ ಜಾಗ ಸಹ ಇರಲಿಲ್ಲ. ಒಮ್ಮೆ ಒಂದು ಬೀಡಿ ಸೇದಿದ್ದನ್ನ ಕಂಡ ಆಳೊಬ್ಬ ಗುಟ್ಟಲ್ಲಿ ಯಾರಿಗೋ ಹೇಳಿದ ಮಾತು ಇಡೀ ಊರಲ್ಲಿ ಗುಲ್ಲಾಗಿ ಅಪ್ಪನ ಕಿವಿಮುಟ್ಟಿ ಬೆನ್ನಿನ ಮೇಲೆ ಬಾಸುಂಡೆಗಳೇಳುವಂಥ ಏಟಾಗಿತ್ತು.

ಮಂಜುನಾಥನ ಪೂಜೆಗೆ ಉತ್ತರಾಧಿಕಾರಿಯಾಗಬೇಕಾದವನಿಗೆ ಇಂಗ್ಲಿಷ್ ಓದೇಕೆ? ಕಥೆ ಪುಸ್ತಕ ಯಾಕೆ? ಸಿನಿಮಾ ಯಾಕೆ? ಪ್ರೀತಿಸೋ ಹೆಂಡತಿ ಯಾಕೆ? ಕಾಲರ್ ಇರೋ ಅಂಗಿ ಯಾಕೆ? ಚಪ್ಪಲಿ ಯಾಕೆ?… ಹೆಂಡತಿ ಯಮುನ ಮಲಗೋದು ಚಿಕ್ಕಮ್ಮನ ಜೊತೆ; ತಿಥಿ ವಾರ ನೋಡಿ ತಿಂಗಳಲ್ಲಿ ಕೆಲವು ದಿನ ಮಾತ್ರ ತನ್ನ ಜೊತೆ ಮಲಗೋದು. ಆದರೆ ಹೆಂಡತಿ ಎದುರು ನಿತ್ಯ ಏಟು ತಿನ್ನೋ ತನಗೆ ಅವಳು ಪಕ್ಕದಲ್ಲಿ ಬಂದು ಮಲಗಿದಾಗ ಅಲ್ಲೇ ಸ್ವಲ್ಪ ದೂರದಲ್ಲಿ ಅಪ್ಪ ಮಲಗಿದ್ದಾನೆಂಬುದೂ, ಯಾವ ಹೊತ್ತಿಗಾದರೂ ಎದ್ದು ತನ್ನನ್ನು ಗದರಿಸಬಹುದೆಂಬುದೂ ಸದಾ ಜ್ಞಾಪಕದಲ್ಲಿರುವಾಗ ಸೆಟೆದುಕೊಂಡು ಮಲಗಿದವಳಿಗೆ ಏನು ತಾನೆ ಮಾಡಬೇಕೆನ್ನೀಸೀತು? ನಟಸಾರ್ವಭೌಮ ಕಾದಂಬರಿಯ ವರ್ಣನೆಗಳೆಲ್ಲ ಮುಷ್ಟಿ ಮೈಥುನದ ಹೊತ್ತಿನ ಕಲ್ಪನಾ ಜಗತ್ತಿನ ಉಣಿಸುಗಳಾಗಿದ್ದವು – ಅಷ್ಟೆ.

ಯಮುನ ಇನ್ನಷ್ಟು ಬಾಡಿಸಿದ ಬಾಳೆಲೆಗಳನ್ನು ತಂದಿಟ್ಟು ಹೋದಳು. ಬಾಡಿಸಿದ ಬಾಳೆಲೆಯ ವಾಸನೆ ಸದಾ ತನ್ನ ಮೂಗಲ್ಲಿರುತ್ತದೆ. ಸದ್ಯ – ಅಪ್ಪನ ಕೂಗಾಟ ತನ್ನನ್ನು ಬಿಟ್ಟು ತಾನು ಓದಿದ ಅತ್ಯುತ್ತಮ ಕಾದಂಬರಿಗಳ ಧೀರೋದಾತ್ತ ನಾಯಕನನ್ನು ಹೋಲುವ ಜಗನ್ನಾಥರಾಯರ ಮೇಲೆ ತಿರುಗಿತ್ತು.

‘ಯಾರಾದರೂ ಅಪ್ಪನಿಗೆ ಹುಟ್ಟಿದ ಮಗ ಇಂಥ ನೀಚ ಕೆಲಸಕ್ಕೆ ಮುಂದಾಗ್ತಾನೊ ಹೇಳಿ. ಎಲ್ಲ ಕಡೆಯೂ ಈಗ ಬ್ರಹ್ಮ ದ್ವೇಷವೇ. ಅಮಲ್ದಾರ ಬ್ರಹ್ಮದ್ವೇಷಿ, ಡೀಸಿ ಬ್ರಹ್ಮದ್ವೇಷಿ, ಮಂತ್ರಿ ಮಂಡಲ ಬ್ರಹ್ಮದ್ವೇಷಿ – ಕೊನೆಗೆ ದೇವಸ್ಥಾನದ ಧರ್ಮದರ್ಶಿಯಾಗಿದ್ದ ಇವನೂ ಬ್ರಹ್ಮದ್ವೇಷಿಯೆಂದರೆ…’

ಗಣೇಶ ನಿರೀಕ್ಷಿಸಿದಂತೆ ಸೀತಾರಾಮಯ್ಯ ಬ್ರಾಹ್ಮಣ ಧರ್ಮದ ಬಗ್ಗೆ ಅಸ್ಖಲಿತ ಭಾಷಣ ಶುರುಮಾಡಿದರು:

‘ವೇದಾಂತ ಏನು ಹೇಳತ್ತೆ?

ಜನ್ನನಾ ಜಾಯತೇ ಶೂದ್ರಃ! ಕರ್ಮಣಾ ಜಾಯತೇ ದ್ವಿಜಃ!
ವೇದಪಾರಾಯಣಾತ್ ವಿಪ್ರಃ-ಅಷ್ಟೇ. ಬ್ರಹ್ಮಜ್ಞಾನೇತಿ ಬ್ರಾಹ್ಮಣಃ!

ಈ ಗಣೇಶನಿಗೆ ನಾನು ಹೇಳ್ತೀನಿ: ಅಲ್ಲವೊ ಏನೆಲ್ಲ ಪೋಲಿ ಪುಸ್ತಕ ಓತ್ತಿ? ಈ ಕನ್ನಡದಲ್ಲಿ ಇವೆಲ್ಲ ಏನು ಬರೆದಾವೊ? ಲಲಿತಾ ಸಹಸ್ರನಾಮದ ಒಂದೇ ಒಂದು ಶ್ಲೋಕಕ್ಕೆ ಸಮನಾದ್ದು ನಿನಗೆ ಕಂಡಿದೆಯೇನೊ? ಯೋನಿಮುದ್ರಾ ತ್ರಿಖಂಡೇಶಿ ತ್ರಿಕೋಣಾಂತರ ದೀಪಿಕಾ! ಆಬಾಲ ಗೋಪವಿದಿತಾ – ಎಂಥ ಮಾತುಗಳು ಅಡಿಗರೇ? ಒಟ್ಟು ಕಲಿಕಾಲ. ಇಲ್ದೆ ಇದ್ರೆ ಸತ್ಕುಲ ಪ್ರಸೂತನೊಬ್ಬನಿಗೆ – ಈ ದೇವರ ಕಿರೀಟ ಅವನ ಪ್ರಾಣಾನ್ನ ಉಳಿಸಿದ್ದು ಅನ್ನೋದು ಮರೆತು – ದನಾ ತಿನ್ನೋ ಹೊಲೇರನ್ನ ದೇವಾಲಯದೊಳಗೆ ತರಬೇಕೂಂತ ಅನ್ನಿಸ್ತಲ್ಲ – ಅದು ಆಶ್ಚರ್ಯ. ಪ್ರತಿಮಾಪ್ರತಿಷ್ಠಾಪನ ವಿಧಿ ಗೊತ್ತಿರೋ ನಿಮಗೆ ನಾನು ಹೇಳಬೇಕ? ಜಗನ್ನಾಥ ಲಾಗ ಹಾಕಲಿ ಬೇಕಾದರೆ ಈ ದೇವಸ್ಥಾನದೊಳಗೆ ಚಾಂಡಾಲ ಪ್ರವೇಶ ಸಾಧ್ಯವೇ ಇಲ್ಲ. ಎಷ್ಟು ಲಕ್ಷ ವರ್ಷಗಳಿಂದ ಇರೋ ದೇವಸ್ಥಾನವಿದು; ಕಾಶಿ ಬಿಟ್ಟರೆ ಇಷ್ಟು ಕಾರ್ಣೀಕವಿರೋ ಪುಣ್ಯಸ್ಥಳವೇ ಇಲ್ಲ ಅಂತಾರೆ. ಶತಾಯ, ಸಹಸ್ರಾಯ, ಲಕ್ಷಾಯ, ಅಚಂದ್ರಾರ್ಕಾಯ ಅಂತ ದೇವರನ್ನ ಪ್ರತಿಷ್ಠಾಪಿಸುತ್ತಾರಲ್ಲ- ಪರಶುರಾಮ ಮಂಜುನಾಥನನ್ನೆ ಆಚಂದ್ರಾರ್ಕಾಯ ಸ್ಥಾಪಿಸಿದ್ದು. ಧ್ಯಾನವಾಸ, ದಧಿವಾಸ, ಕ್ಷೀರವಾಸ, ಜಲವಾಸಗಳೆಲ್ಲ ಆಗಿ ಪ್ರತಿಷ್ಠಾಪನೆ ಮಾಡಿರೋ ಮಂಜುನಾಥನನ್ನ ನಾಶಮಾಡಬಲ್ಲ ನರಮನುಷ್ಯ ಹುಟ್ಟಿಲ್ಲ…ಹುಟ್ಟಲಾರ.’

ಅಪ್ಪನ ಒಂದೊಂದು ಮಾತಿಗೂ ಉಬ್ಬುಹಲ್ಲು ತುಟಿಯನ್ನೊತ್ತಿ ಅಲ್ಲಾಡಿತು; ಕಿವಿಯ ವಜ್ರದೋಲೆಗಳು ಮಿರುಗಿದುವು. ಅಡಿಗರು ‘ಹೋಗಿ ಬರ್ತೇನೆ’ ಎಂದು ಎದ್ದು ಹೋದರು. ಗಣೇಶನಿಗೆ ಇದ್ದಕ್ಕಿದ್ದಂತೆ ಮತ್ತೆ ಹೆದರಿಕೆಯಾಯಿತು. ಯಾವುದೋ ದೊನ್ನೆ ಸೊಟ್ಟಗಾಯಿತೆಂದೊ, ತೇದ ಗಂಧ ಸಾಕಾಗಲಿಲ್ಲೆಂದೊ, ಆ ಪುಸ್ತಕಾನ್ನ ಯಾವ ಸೂಳೆಮಗ ನಿನಗೆ ಕೊಟ್ಟನೆಂದೊ ಮತ್ತೆ ಬೈಗಳ ಶುರವಾದರೆ ಏನುಗತಿ?

ಬೈರಾಸ ಉಟ್ಟು ಬೈರಾಸ ಹೊದ್ದಿದ್ದ ಗಣೇಶ ಅವಸರದಲ್ಲಿ ಎದ್ದು ಸ್ನಾನದ ಮನೆಗೆ ಹೋದ. ಮಂಜುನಾಥನ್ನ ನಾಶಮಾಡೋ ನರಮನುಷ್ಯ ಹುಟ್ಟಿಲ್ಲ-ಹುಟ್ಟಲಾರ ಎಂದು ಅಪ್ಪ ಹೇಳಿದ್ದು ಅವನ ಮನಸ್ಸಿನಲ್ಲಿ ನಾಟಿತ್ತು. ಸ್ನಾನದ ಮನೆಯ ಬಾಗಿಲು ಹಾಕುವ ಧೈರ್ಯ ಮಾಡಿ ಬಟ್ಟೆಯನ್ನೆಲ್ಲ ಬಿಚ್ಚಿ ಬೆತ್ತಲೆಯಾಗಿ ಬೆಂಕಿಯೆದುರು ನಿಂತ. ರಾತ್ರೆ ಲಂಗೋಟಿ ಕಟ್ಟದೆ ಮಲಗಿದರೂ ಅಪ್ಪ ಬೈಯುತ್ತಾನೆ. ಗಿಂಡಿಯಲ್ಲಿದ್ದ ಕೊಬ್ಬರಿ ಎಣ್ಣೆಯನ್ನು ತೊಡೆ ಸಂದಿಗಳಿಗೆ ಹಚ್ಚಿಕೊಂಡು ಮೈಗೆಲ್ಲ ಬಳಿದುಕೊಳ್ಳುತ್ತ ಬೆಂಕಿಯ ಎದುರು ಸುಖಿಸಿದ.

ಹೊರಗಿನಿಂದ ಅಪ್ಪನ ಅಬ್ಬರ ಕೇಳಿಸಿತು. ಚಿಕ್ಕಮ್ಮ ಚಾಡಿ ಹೇಳಿರಬೇಕು: ‘ಬಾಗಿಲು ಹಾಕ್ಕೊಂಡು ಏನು ಮಾಡ್ತಿದಿಯೊ ಶನಿ? ಒಳ್ಳೆ ತುರುಕರ ಹಾಗೆ ಲಂಗೋಟಿಯಿಲ್ಲದೆ ಸ್ನಾನ ಮಾಡ್ತಿದಿಯೇನೊ?’

ಹಗಲು ಲಂಗೋಟಿ ಬಿಚ್ಚುವುದು ಸಾಧ್ಯವಾಗೋದು ಕಕ್ಕಸ್ಸಿಗೆ ಹೋದಾಗ, ಬಿಟ್ಟರೆ ಸ್ನಾನ ಮಾಡುವಾಗ. ಈ ಆಪ್ತ ಘಳಿಗೆಯಲ್ಲೂ ಅಪ್ಪ ಅಬ್ಬರಿಸುತ್ತಾನೆ. ಬಚ್ಚಲಿಗೆ ಇಳಿದು ಬಿಸಿ ನೀರು ಹೊಯ್ದುಕೊಂಡ. ಎಣ್ಣೆ ಹಚ್ಚಿದ ಆಯಸ್ಥಳಗಳನ್ನು ಮೈ ಮೇಲೆ ನಿಧಾನವಾಗಿ ಹೊಯ್ದುಕೊಂಡ ಬಿಸಿನೀರು ಹುಡುಕಿದಾಗ ತುಂಬ ಸುಖವೆನ್ನಿಸಿತು. ಸುಖಪುರಷ ರಾವಣ ವರ ಬೇಡಿಕೊಂಡಿದ್ದನಂತೆ : ಸ್ನಾನದ ಹೊತ್ತಿನಲ್ಲಿ ಮೈಮೇಲೆ ತುರಿಗಜ್ಜಿಯಾಗಲಿ ಅಂತ. ಸೀಗೆಪುಡಿಯಲ್ಲಿ ಮೈಯುಜ್ಜುತ್ತ ಮಂಜುನಾಥನ ಕಿರೀಟದಿಂದ ಕದ್ದ ಬಂಗಾರದ ಉಡುದಾರವನ್ನೂ ಉಜ್ಜಿದ. ಚಿಕ್ಕಮ್ಮನ ಕಿವಿಯ ವಾಲೆ, ಇವಳ ಸರ, ಎರಡು ಹೆಣ್ಣು ಮಕ್ಕಳ ವಾಲೆಗಳು, ಅಪ್ಪನ ರುದ್ರಾಕ್ಷಿ ಪೋಣಿಸಿದ ಮಾಲಡ ಜಗನ್ನಾಥರಾಯರ ಪ್ರಾಣ ಉಳಿಸಿದ ಆ ಕಿರೀಟದ್ದೆ.

ಗಣೇಶ ತನ್ನಷ್ಟಕ್ಕೆ ನಗುತ್ತ ಚೊಂಬಿನಿಂದ ಶಬ್ದ ಮಾಡುತ್ತ ನೀರು ತುಂಬಿ ಸ್ನಾನ ಮಾಡಿದ. ಮಂಜುನಾಥನಿಗೆ ಮೈಲಿಗೆಯಾದರೆ ಊರು ಭಸ್ಮವಾಗತ್ತತೆ. ಬುರುಡೆ. ಅಪ್ಪ ಮದುವೆಗಿದುವೆ ಮಾಡಿಸಕ್ಕೆ ಹೋದಾಗ ಗರ್ಭಗುಡಿಯಲ್ಲಿ ಅವನೊಬ್ಬನೇ ಅಲ್ಲವೇ? ಬೆಳಿಗ್ಗೆ ಬೇಗ ಎದ್ದು ಹೋಗಿ ಗರ್ಭಗುಡಿಯ ಬಾಗಿಲನ್ನು ಇಷ್ಟಬಂದರೆ ಮುಚ್ಚಿಕೊಂಡು ಪೂಜೆಯ ಸಿದ್ಧತೆಯ ನೆವದಲಲಿ ಕೂತಿರಬಹುದಲ್ಲ? ಬಿಟ್ಟರೆ, ‘ಗುಡ್ಡ’ಕ್ಕೆ ಹೋದಾಗ ಮಾತ್ರ ಹೀಗೆ ಒಬ್ಬನೇ ಇರೋದು ಸಾಧ್ಯ. ಮಂಜುನಾಥನನ್ನು ಎಷ್ಟೊಂದು ವಿವಿಧ ರೀತಿಯಲ್ಲಿ ಮೈಲಿಗೆ ಮಾಡಬಹುದೆಂಬುದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಅಪ್ಪನ ಮೇಲಿನ ಸಿಟ್ಟನ್ನೆಲ್ಲಲ ತೀರಿಸಿಕೊಂಡಿದ್ದ ಗಣೇಶನಿಗೆ ಒಂದು ಪ್ರಸಂಗ ನೆನಪಾಗಿ ಮೈಜುಮ್ಮೆಂದಿತು. ನಂದಾದೀಪದ ಅರೆಗತ್ತಲಲ್ಲಿ ಮಂಜುನಾಥನ ಮೂಕಲಿಂಗ ಮಾತ್ರ ಕಂಡ ಘಟನೆಯದು. ಬೋಳಿಮಗ ಎಂದು ಹಿಗ್ಗುತ್ತ ಸರಸರನೆ ನೀರು ಹೊಯ್ದುಕೊಂಡು ಮೈಯೊರೆಸುತ್ತ ಬೆಂಕಿ ಎದುರು ನಿಂತ. ತೆಂಗಿನಕಾಯಿ ಕರಟಕ್ಕೆ ಹತ್ತಿಕೊಂಡ ಬೆಂಕಿ ಬಣ್ಣ ಬಣ್ಣದ ಜ್ವಾಲೆಗಳಾದ ಚೆಂದದಿಂದ ಖುಷಿಪಟ್ಟ.

‘ಇನ್ನೂ ಸ್ನಾನ ಮುಗಿಲಿಲ್ಲೇನೊ’ ಮತ್ತೆ ಅಪ್ಪನ ಕೂಗು, ಚಿಕ್ಕಮ್ಮ ಕಾಯಿ ತುರಿಯುವ ಶಬ್ದ, ಯಮುನ ಕೆಮ್ಮುತ್ತ ಒಗ್ಗರಣೆ ಕರಿಯುವ ವಾಸನೆ-ಅವಸರವಿಲ್ಲದೆ ಮೈಯೊರಸಿಕೊಂಡು ಗಣೇಶ ಹೊರಗೆ ಬಂದ.

ಚಿಕ್ಕಮ್ಮ ಕಾಯಿ ತುರಿಯುವುದು ನಿಲ್ಲಿಸಿ ತಾನು ಬೆತ್ತಲೆ ಸ್ನಾನ ಮಾಡುವುದುರ ಬಗ್ಗೆ  ಅಪ್ಪನಿಗೆ ಇನ್ನೂ ಏನೇನೋ ಹೇಳುತ್ತಿದ್ದಿರಬೇಕು. ಅಪ್ಪನ ಕಿರುಚಾಟ ಮತ್ತೆ ಪ್ರಾರಂಭವಾಗಿತ್ತು. ಜಗನ್ನಾಥನ ಹೆಸರು ಬರೆದಿದ್ದ ‘ದೇವದಾಸ’ ಕಾದಂಬರಿ ನಿನ್ನ ಕೈಗೆ ಹೇಗೆ ಬಂತೆಂಬ ತನಿಖೆ ಶುರವಾಯಿತು. ಗಣೇಶ ಮಾತಾಡದೆ ಸುಮ್ಮನಿದ್ದನೆಂದು ಹೊಡೆಯಲು ಬಂದ ಅಪ್ಪ. ಅವನು ಮಡಿಯಲ್ಲಿದ್ದಾನೆಂದು ಸುಮ್ಮನಾದ. ತಾನು ಮಡಿಯಾಗಿ ಬರಲು ಸ್ನಾದ ಮನೆಗೆ ಹೋದ.

* * *

ಗಣೇಶ ರಾತ್ರೆ ಮಲಗಿ ಬಹಳ ಹೊತ್ತು ಯೋಚಿಸಿದ. ಎಲ್ಲಿ ಹೋದರೂ ಮಂಜುನಾಥ ಬಿಡ. ಅವನ ಪ್ರಸಾದದಲ್ಲಿ ತಾನು ಮುಳುಗಿದ್ದೇನೆ. ಗರ್ಭಗುಡಿಯಲ್ಲಿ ಎಣ್ಣೆಯ ಕಮಟು ವಾಸನೆ ಬೆರೆತ ಊದುಬತ್ತಿ ಕರ್ಪೂರಗಳ ವಾಸನೆ, ಕುಂಕುಮದ ವಾಸನೆ. ಮನೆಗೆ ಬಂದರೆ ಮತ್ತದೇ ಅರ್ಚನೆಗೆಂದು ತೆಗೆದಿಟ್ಟ ಕುಂಕುಮದ ವಾಸನೆ. ನೀರಿನಲ್ಲಿ ಊದಿದ ದೇವರ ನೈವೇದ್ಯದ ಕಡಲೆ ವಾಸನೆ. ಹಸಿವಾದಾಗ್ಲೆಲ್ಲಾ ಅದನ್ನೆ ತಿನ್ನುವುದು. ಮತ್ತೆ ತೆಂಗಿನಕಾಯಿ. ನಿತ್ಯ ರಾಶಿ ರಾಶಿ ಹೋಳುಗಳು. ಹೀಗೆ ಬಿಟ್ಟಿಗೆ ಸಿಕ್ಕ ತೆಂಗಿನಕಾಯನ್ನು ಯಥೇಚ್ಛವಾಗಿ ಹಾಕಿ ಮಾಡದ ಅಡುಗೆಯಿಲ್ಲ. ಹುಳಿಯಲ್ಲಿ ಅದೇ, ಸೌತೇ ಪಲ್ಯದಲ್ಲಿ ಅದೇ, ಚಟ್ನಿಯಲ್ಲಿ ಅದೇ, ಕೋಸುಂಬರಿಯಲ್ಲಿ ಅದೇ – ಗಣೇಶನಿಗೆ ಇಡೀ ಜನ್ಮದಲ್ಲಿ ಈರುಳ್ಳಿ ಆಲೂಗಡ್ಡೆ ಹುಳಿಯನ್ನಾಗಲೀ, ಆಲೂಗೆಡ್ಡೆ ಬೋಂಡವನ್ನಾಗಲೀ, ಮಸಾಲೆ ದೋಸೆಯನ್ನಾಗಲೀ ತಿಂದು ತಿಳಿಯದು. ಇವುಗಳ ಸುಖವನ್ನೆಲ್ಲ ಅವನು ಪಡೆದದ್ದು ಅನಕೃ ಕಾದಂಬರಿಗಳನ್ನು ಓದುವಾಗ ಮಾತ್ರ.

ಜಗನ್ನಾಥರಾಯರು ಸೋತರೆ? ಹೊಲೆಯರು ಒಳಗೆ ಬರದೇ ಹೋದರೆ? ಅಪ್ಪನಿಗೆ ಜಯವಾಗುತ್ತದೆ. ಅವನು ಸತ್ತಮೇಲೆ ಮಂಜುನಾಥ ಗಾಣದ ಹಾಗೆ ನನ್ನ ಅರೆಯುತ್ತಾನೆ. ನನ್ನ ಪಾಡು ಸಾಯೋ ತನಕ ಹೀಗೇ ಇರತ್ತೆ. ಯಮುನಾಗೆ ಗಂಡು ಮಗುವಾಗಿಲ್ಲವೆಂದು ಮಲತಾಯಿ ಜರಿಯುತ್ತಲೇ ಇರುತ್ತಾಳೆ. ಅದೇ ಕಡಲೆ, ಅದೇ ಕಾಯಿ, ಅದೇ ಕುಂಕುಮ, ಅದೇ ಆರತಿ-ಹೇಸಿಗೆಯಿಂದ ಗಣೇಶ ಕಾಲು ಮಡಿಸಿ ಕಂಬಳಿಯ ಒಳಗೆ ವಾಂತಿ ಬಂದವನಂತೆ ನಡುಗಿದ.

ಬಹಳ ಗುಪ್ತವಾಗಿ ಉಸಿರು ಬಿಗಿ ಹಿಡಿದು ಲಂಗೋಟಿ ಬಿಚ್ಚಿದ. ಆ ತುದಿಯಲ್ಲಿ ಅಪ್ಪ ಮಲಗಿದ್ದಾನೆ. ನಾನೇನು ಮಾಡುತ್ತಿದ್ದೇನೆಮದು ಪ್ರಾಯಶಃ ಊಹಿಸುತ್ತಾನೆ. ಊಟದ ಮನೆಯಲ್ಲಿ ಮಲತಾಯಿ, ಯಮುನಾ, ಮಕ್ಕಳು ಮಲಗಿದ್ದಾವೆ. ನಾಳೆ ಮತ್ತೆ ಬೈಗಳ ಶುರುವಾಗತ್ತೆ; ಹೊಡೆತ ಶುರುವಾಗತ್ತೆ. ಯಮುನ, ಮಕ್ಕಳು ಮಲಗಿದ್ದಾವೆ. ನಾಳೆ ಮತ್ತೆ ಬೈಗಳ ಶುರುವಾಗತ್ತೆ; ಹೊಡೆತ ಶುರುವಾಗತ್ತೆ. ಯಮುನ ಎಲ್ಲವನ್ನೂ ನೋಡುತ್ತ ತನ್ನ ಕೆಲಸದಲ್ಲಿ ಮಗ್ನಳಾಗಿರುತ್ತಾಳೆ. ಒಳ್ಳೆ ನಕ್ಷತ್ರ ತಿಥಿ ನೋಡಿ ಪಕ್ಕದಲ್ಲಿ ಬಂದು ಮಲಗುತ್ತಾಳೆ. ಆದರೆ ಅಪ್ಪ ಅಲ್ಲೆ ಗೊರಕೆ ಹೊಡೆಯುತ್ತ ಮಲಗಿರುತ್ತಾನೆ. ದೇವದಾಸದ ಮುಂದಿನ ಪುಟಗಳನ್ನು ಓದಬೇಕೆನ್ನಿಸುವ ಉತ್ಕಟತೆಯನ್ನು ಅಪ್ಪ ಕಣ್ಣೆದುರಿಗಿಲ್ಲದ ಸಮಯ ಸಿಗುವ ತನಕ ತಡೆಹಿಡಿದುಕೊಂಡಿರುತ್ತೇನೆ. ಎಲ್ ಹೀಗೆ ನಡೆಯುತ್ತಿರುತ್ತದೆ.

‘ಇಲ್ಲ ನಾನು ಬಿಡೋದಿಲ್ಲ’- ಎಂದು ಕೊಂಡು ಗಣೇಶ ಇದ್ದಕ್ಕಿದ್ದಂತೆ ಎದ್ದು ಕೂತ. ಬೋಳಿಮಗ ಬೋಳಿಮಗ ಎಂದು ಜಪಿಸಿದ. ಪಾಣಿ ಪಂಚೆಯುಟ್ಟು ಕಂಬಳಿ ಹೊದ್ದು ನಿಂತ. ಹೊರಗೆ ಚಳಿ. ಗರ್ಭಗುಡಿಯ ಬೀಗದ ಕೈ ಅಪ್ಪನ ತಲೆದೆಸೆಯಲ್ಲಿದೆ. ದಿಂಬಿನ ಕೆಳಗೋ? ಹೊರಗೋ? ಪತ್ತೆಯಾಗಿ ಕೊಂದರೆ ಕೊಲ್ಲಲಿ. ಮೆತ್ತಗೆ ಬಳಚುತ್ತ ಹುಡುಕಿದ. ದೇವರ ದಯ-ಬೀಗದ ಕೈ ತಲೆದೆಸೆಯಲ್ಲೆ ಇತ್ತು, ದಿಂಬಿನಡಿ ಇರಲಿಲ್ಲ. ತಡವರಿಸುತ್ತ ನಡೆದು ಅಡಿಗೆ ಮನೆಗೆ ಹೋದ. ನಿದ್ದೆ ಬರದ ಶನಿ ಚಿಕ್ಕಮ್ಮ ‘ಏನು’ ಎಂದರೆ, ‘ನೀರು ಕುಡೀಬೇಕು’ ಎನ್ನುವುದೆಂದು ಕೊಂಡ. ಸುಮ್ಮನೇ ಯಾಕೆ ಅನುಮಾನವಾಗಬೇಕೆಂದು ಪಾತ್ರೆಯಿಮದ ನೀರು ತೆಗೆದು ಕುಡಿದ. ಒರಳು ಕಲ್ಲಿನ ಬಳಿ ಇದ್ದ ಹಾರೆಗೋಲನ್ನು ಸದ್ದಾಗದಂತೆ ಎತ್ತಿಕೊಂಡ. ಹಿತ್ತಲಿನ ಬಾಗಿಲು ತೆರೆದ. ದರಿದ್ರ ಬಾಗಿಲು  -ಡರ್ರೋ ಎಂದು ಶಬ್ದ ಮಾಡಿತು. ಅಪ್ಪ ಅರ್ಧ ನಿದ್ರೆಯಲ್ಲೆ ಶಾಪ ಹಾಕಿದ್ದು ಕೇಳಿಸಿತು. ‘ದರಿದ್ರ ಶನಿ’ ಎಂದಿರಬೇಕು. ತಾನು ಕಕ್ಕಸಿಗೆ ಹೋಗುತ್ತಿದ್ದೇನೆಂದು ತಿಳಿಯಲಿ ಎಂದು ಗಣೇಶ ಉಪಾಯ ಮಾಡಿದ. ಸದ್ದಾಗುವಂತೆ ಚೊಂಬನ್ನು ಹಂಡಗೆ ಅದ್ದಿದ. ಸದ್ದಾಗುವಂತೆ ಬಕೀಟಿಗೆ ನೀರುನ್ನು ಹೊಯ್ದು ತಾನು ಕಕ್ಕಸ್ಸಿಗೆ ಹೋಗುತ್ತಿರುವುದೆಂದು ಅಪ್ಪನಿಗೆ ಖಾತ್ರಿಯಾಗಲೆಂದು ಸದ್ದಾಗುವಂತೆ ಬಕೀಟನ್ನೂ ಎತ್ತಿದ. ಹಿತ್ತಲಿನ ಬಾಗಿಲನ್ನೂ ಹಾಕಿ ಹಾರೆಗೋಲು ಹಿಡಿದು ದೇವಸ್ಥಾನಕ್ಕೆ ನಡೆದ.

ದೇವಸ್ಥಾನದ ಪಾಗಾರದ ಸುತ್ತ ಇನ್ನೂ ಎಚ್ಚರಾಗಿದ್ದ ಭಿಕ್ಷುಕರು. ಈ ಅಪರಾತ್ರಿಯಲ್ಲಿ ಮಾರನೇ ದಿನದ ರಥೋತ್ಸವಕ್ಕೆಂದು ಸ್ಪೆಶಲ್ ಬಸ್ಸುಗಳಲ್ಲಿ ಬಂದಿಳಿಯುತ್ತಿದ್ದ ಯಾತ್ರಿಕರನ್ನು ಕಂಡು ಎಂಥ ಮೂರ್ಖರು ಎನ್ನಿಸಿತು. ಕಂಬಳಿ ಹೊದ್ದು ದೇವಸ್ಥಾನದೊಳಕ್ಕೆ ಹೋದರೆ ಯಾರಿಗಾದರೂ ಅನುಮಾನವಾದೀತೆಂದು ಮರದ ಕೆಳಗೆ ಕೂತಿದ್ದ ಭಿಕ್ಷುಕನೊಬ್ಬನಿಗೆ ಕಂಬಳಿಯನ್ನು ಎಸೆದು ಗಣೇಶ ನಡೆದ. ಪೂಜಾರಿಗಳ ಮಗ ತಾನಾದ್ದರಿಂದ ಪರಿಚಯದವರು ಏನೋ ಕೆಲಸವಿರಬೇಕೆಂದುಕೊಳ್ಳುತ್ತಾರೆ. ಯಾಕೆ ಹಾರೆಗೋಲೆಂದು ಕೇಳಿದರೆ ಹಣತೆಗಳನ್ನು ಹಚ್ಚಿಡುವ ಕಂಬಗಳನ್ನು ಹೂಳಲು ಬೇಕಾಗಿತ್ತು ಎಂದರಾಯಿತು.

ಗಣೇಶ ದೇವಸ್ಥಾನದ ದೊಡ್ಡ ಬಾಗಿಲನ್ನು ತೆಗೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡ. ಯಾರೂ ಇಲ್ಲ. ಕತ್ತಲು, ನಿಶ್ಯಬ್ದ. ಬೀಗ ತೆಗೆದು ಗರ್ಭಗುಡಿಯ ಒಳಗೆ ಹೋದ. ಬಾಗಿಲು ಹಾಕಿಕೊಂಡು ಅಗಳಿ ಹಾಕಿದೆ. ಉರಿಯುತ್ತಿರುವ ಎರಡು ನಂದಾದೀಪ. ಪುಟ್ಟ ಮಂಜುನಾಥ ಲಿಂಗದ ಮೇಲೆ ದೊಡ್ಡ ಮುಖವಾಡ – ಸೌಮ್ಯವಾಗಿ ನಗುವಂತಿದ್ದ ಮುಖವಾಡ. ತಲೆಯ ಮೇಲೆ ಬಂಗಾರದ ಕಿರೀಟ. ಉಪನಯನವಾದ ದಿನದಿಂದ ತಾನು ಕಳೆದಿದ್ದ ಹೆಚ್ಚು ಕಾಲವೆಲ್ಲ ಇಲ್ಲೆ. ಎಲ್ಲ ಎಷ್ಟು ಸುಲಭ ಎನ್ನಿಸಿತು.

ಆಚಂದ್ರಾರ್ಕಾಯವಂತೆ; ಹದಿನೆಂಟು ಅಡಿ ಆಳದಲ್ಲಿ ಭೂಪ್ರಸ್ತಾರ ಚಕ್ರವಂತೆ. ಹೊಂಡದಲ್ಲಿ ನವರತ್ನಗಳನ್ನೂ ನಾಣ್ಯಗಳನ್ನೂ ತುಂಬಿರುತ್ತಾರಂತೆ. ಅಷ್ಟದಿಗ್ಭಂಧನ ಮಾಡಿರುತ್ತಾರಂತೆ. ಅಪ್ಪನ ಪುರಾಣ, ಎಲ್ಲ ನಾಶವಾಗೇಕು. ಬೇರು ಸಹಿತ. ಇಲ್ಲದಿದ್ದರೆ ನಾನು ನಾಶವಾಗುತ್ತೇನೆ. ಅನ್ಯಥಾ ಮಾರ್ಗವಿಲ್ಲ. ಜಗನ್ನಾಥರಾಯರು ಹೊಲೆಯರನ್ನು ಒಳಗೆ ಕರೆದುಕೊಂಡು ಬಂದಾಗ ನಾನು ಕೂಗಿ ಹೇಳುತ್ತೇನೆ: ಕೇಳಿ, ಎಲ್ಲ ನಾಶವಾಯಿತು. ಇನ್ನು ನಾವೆಲ್ಲ ಸ್ವತಂತ್ರರು.

ಹಾರೆಗೋಲಿನಿಂದ ಲಿಂಗದ ಸುತ್ತಲೂ ಅಗೆದ. ಮೈಬೆವರಿತು. ನಂದಾದೀಪವನ್ನು ದೊಡ್ಡದು ಮಾಡಿದ. ಲಿಂಗದ ಬುಡದಲ್ಲಿ ಅದಷ್ಟು ಜಾಗ ಬಿರುಕು ಬಿಟ್ಟಿದೆಯೆಂದು ಗೊತ್ತಿದ್ದದ್ದು ತನಗೆ ಮತ್ತು ಅಪ್ಪನಿಗೆ. ಆದರೆ ನಾಗರಾಜ ಜೋಯಿಸರಿಗೂ ಹೇಗೋ ಗೊತ್ತಾಗಿತ್ತು. ಇಲ್ಲೇ ಇಲ್ಲ ಎಂದು ಅಪ್ಪ ಸಾಧಿಸಿದ್ದ.

ಹಾರೆಗೋಲಿನ ಶಬ್ದ ಎದೆಯ ಮೇಲೆ ಕುಟ್ಟಿದಂತೆ ಭಾಸವಾಯ್ತು. ಅಪ್ಪ ಎದ್ದು ಬಂದು ನೋಡಿದರೆ ಈಗ ಇಲ್ಲೇ ನಾನು ಸಾಯುತ್ತೇನೆ ಅಥವಾ ಅವನನ್ನು ಸಾಯಿಸುತ್ತೇನೆ. ಹಾರೆಗೋಲಿನ ಹೊಡೆತಕ್ಕೆ ಲಿಂಗ ಮುಕ್ಕಾಯ್ತು. ಇನ್ನೇನು? ಯಾರೇ ಬರಲಿ, ಯಾರೇ ನೋಡಲಿ ಪರವಾಗಿಲ್ಲೆಂದು ಹಾರೆಗೋಲಿಂದ ಲಿಂಗದ ಸುತ್ತ ಅಗೆಯುತ್ತ ಹೋದ.

ಕಾಲಿನ ಮೆಲೆ ಇಲಿಯೊಂದು ಹರಿದು ಹೆದರಿಕೆಯಾಯಿತು. ಅದನ್ನು ಕೊಲ್ಲಲೆಂದು ಹುಡುಕಿದರೆ ಅಭಿಷೇಕದ ನೀರು ಹೋಗುವ ತೂತಿನಿಂದ ಅದು ಮಾಯಾವಾಗಿತ್ತು. ಸಾಯಲಿ, ಸಾಯಲಿ, ಎನ್ನುತ್ತ ಗಣೇಶ ಮೈಮೇಲೆ ಆವೇಶ ಬಂದವನಂತೆ ಅಗೆದ. ಲಿಂಗ ಪೀಠದಿಂದ ಹೊರಗೆ ಬಂತು. ಅಪ್ಪ ಹರವಿದ್ದ ಮಡಿಯಲ್ಲಿ ಅದನ್ನು ಸುತ್ತಿ ಎತ್ತಿಕೊಂಡ. ಅಷ್ಟೇನೂ ಭಾರವಿಲ್ಲದಿದ್ದರಿಂದ ಹಾರೆಗೋಲಿನ ಸಮೇತ ಹೊರಗೆ ಬಂದು ಗರ್ಭಗುಡಿಯ ಬಾಗಿಲು ಹಾಕಿ ಸೀದ ಹೊಳೆಗೆ ಹೋದ. ಹೊಳೆ ದಂಡೆಯ ಮೇಲೂ ಜನ; ಆದರೆ ಯಾರೂ ತನ್ನ ಗುರ್ತ ಹಿಡಿಯಲಿಲ್ಲ. ಪಾಪನಾಶಿನಿ ಹೊಂಡದಲ್ಲಿ ಲಿಂಗವನ್ನು ಹಾಕಿ ಅಪ್ಪನ ಮಡಿವಸ್ತ್ರವನ್ನೂ ಅಲ್ಲೇ ಎಸೆದು ಹಿಂದಕ್ಕೆ ನಡೆದ.

ಮೈ ಬೆವರಿತ್ತು. ಹಿತ್ತಲಿಂದ ಮನೆಯನ್ನು ಪ್ರವೇಶಿಸುವ ತನಕ ಗಣೇಶನಿಗೆ ಮೈಯಲ್ಲಿ ಪ್ರಜ್ಞೆಯಿರಲಿಲ್ಲ. ಹಿತ್ತಲು ಬಾಗಿಲನ್ನು ನೂಕಿ ಒಳಗೆ ಹೋಗಬೇಕೆಂದು ಹೆಜ್ಜೆಯಿಡುವಷ್ಟರಲ್ಲೆ ಎದುರೊಂದು ವ್ಯಕ್ತಿ ನಿಂತಿದೆಯೆಂದು ಕತ್ತಲಲ್ಲಿ ಅನ್ನಿಸಿ ಎದೆ ಧಸಕ್ಕೆಂದಿತು.

‘ಎಲ್ಲಿ ಹೋಗಿದ್ಯೋ ಇಷ್ಟು ಹೊತ್ತು ದರಿದ್ರದ ಶನಿ?’ ಎಂದು ಅಪ್ಪ ಬೀಸಿದ ಕೈ ಉರಿಯುತ್ತಿದ್ದ ತನ್ನ ಮುಖದ ಮೇಲೆ ಬಿದ್ದು ತಲೆ ತಿರುಗಿತು. ಉಚ್ಚೆಗೆಂದು ಎದ್ದ ಅಪ್ಪ ಬಹಳ ಹೊತ್ತಿನಿಂದ ತಾನಿಲ್ಲದಿರುವುದನ್ನು ಪತ್ತೆ ಮಾಡಿರಬೇಕು. ಗಣೇಶನಿಗೆ ತಾನೇನು ಮಾಡುತ್ತಿದ್ದೇನೆಂದು ಹೊಳೆಯಲಿಲ್ಲ. ಹಾರೆಗೋಲನ್ನು ಎತ್ತಿ ಎಸೆದ. ಅಪ್ಪನ ದೇಹದ ಯಾವ ಭಾಗದ ಮೇಲೆ ಬಿತ್ತೊ! ಅಯ್ಯೋ ಎಂದು ಅವರು ಕಿರುಚಿಕೊಂಡದ್ದು ಕೇಳಿ ಗಣೇಶ ಓಡಿದ. ಎಲ್ಲಿಗೆ ಹೋಗುತ್ತಿದ್ದೇನೆಂದು ತಿಳಿಯದೆ, ಜಗನ್ನಾಥರಾಯರ ಮನೆಯ ಬಹಳ ದೂರವೆನ್ನೆಸಿದ್ದರಿಂದ ಸೀದಾ ದೇವಸ್ಥಾನಕ್ಕೆ ಓಡಿಹೋಗಿ ಗರ್ಭಗುಡಿ ಹೊಕ್ಕು ಬಾಗಿಲನ್ನು ಭದ್ರಪಡಿಸಿ ನೆಲದ ಮೇಲೆ ಕುಸಿದ. ತನ್ನ ಎದೆ ಹೊಡೆದುಕೊಳ್ಳುವುದು ಕೇಳಿಸುವಂಥ ನಿಶ್ಯಬ್ದ. ಅಪ್ಪ ತನ್ನನ್ನು ಹಿಂಬಾಲಿಸಿರಲಿಲ್ಲ. ಪ್ರಾಯಶಃ ಸತ್ತಿರಲೂಬಹುದು. ‘ಅಮ್ಮ’ ಎಂದು ದೀರ್ಘ ನಿಟ್ಟುಸಿರೆಳೆದು ಕಣ್ಣು ಮುಚ್ಚಿ ಕಾಲು ಚಾಚಿದ. ನಾಳೆ ಜಗನ್ನಾಥರಾಯರು ಹೊಲೆಯರ ಜೊತೆ ಬರುವ ತನಕ ಇಲ್ಲೆ ಅಡಗಿರುತ್ತೇನೆ ಎಂದು ಬಾಯಿಂದ ಉಸಿರಾಡುತ್ತ ಕಲ್ಲಿನ ನೆಲದ ಮೇಲೆ ಮಲಗಿದ.