Mr. Jagannath, may I ask you another question? ನೀವು ಎಕ್ಷಿಸ್ಟನ್ಸಿಯಲ್ಲಿಸ್ಟರೆ? ಯಾಕೆಂದರೆ ಸಾರ್ತ್ರ್ ಬೋಧಿಸುವ ಕಮಿಟ್‌ಮೆಂಟ್ ಥರ ನಿಮ್ಮ ವಿಚಾರ ಇದೆ ಅನ್ನಿಸುತ್ತೆ.?

ಬೆಂಗಳೂರಿನಿಂದ ಬಂದ ಪತ್ರಿಕಾ ಪ್ರತಿನಿಧಿ ಪಿಆರ‍್ಟಿ ಕೇಳಿದ. ನೀಲಕಂಠಸ್ವಾಮಿಯ ಟ್ರಂಕ್‌ಕಾಲ್ ಕೆಲಸ ಮಾಡಿತ್ತು. ಅವನ ಜೊತೆಗೆ ಬಂದಿದ್ದ ಅತ್ಯಂತ ಚುರುಕಾಗಿ ಓಡಾಡುವ, ಗಹಗಹಿಸಿ ನಗುವ ಕುಳ್ಳ ವ್ಯಕ್ತಿಯೊಬ್ಬ – ನೋಡಲು ಪಕ್‌ನಂತೆ ಕಾಣುತ್ತಿದ್ದವ – ಬೇರೆ ಬೇರೆ ಆಂಗಲ್‌ಗಳಲ್ಲಿ ನಿಂತು ಜಗನ್ನಾಥನ ಫೋಟೋ ತೆಗೆದ. ಪಿಆರ‍್ಟಿ ನೋಟ್ ಬುಕ್‌ನಲ್ಲಿ ಉತ್ತರ ಬರೆದುಕೊಳ್ಳುತ್ತ ಜಗನ್ನಾಥನ ಎದುರು ಕೂತಿದ್ದ. ನೀಲಕಂಠಸ್ವಾಮಿ ಜಗನ್ನಾಥನ ಉತ್ತರವನ್ನು ಅತ್ಯಾತುರದಿಂದ ಕೇಳಿಸಿಕೊಳ್ಳುತ್ತ ಚಿತ್ರದಲ್ಲಿ ತಾನೂ ಒಳಪಡಲೆಂದು ಸ್ವಲ್ಪ ಸ್ವಲ್ಪವೇ ಜಗನ್ನಾಥ ಕೂತ ದಿಕ್ಕಿಗೆ ತನ್ನ ಕುರ್ಚಿಯನ್ನು ಸರಿಸಿಕೊಂಡ. ಜಗನ್ನಾಥ ಉತ್ಸಾಹವಿಲ್ಲದೆ ಹೇಳಿದ :

‘ನೀವು ಉಪಯೋಗಿಸೋ ಶಬ್ದಗಳಲ್ಲಿ ನನ್ನ ಕ್ರಿಯೇನ್ನ ವಿವರಿಸೋದು ನನಗೆ ಇಷ್ಟವಿಲ್ಲ.’

‘ಹಾಗಾದರೆ ನೀವು ಮಾರ್ಕ್ಸಿಸ್ಟ್ ಎನ್ನೋಣವೆ?’ ಮಂತ್ರಿಗಳನ್ನು ಬಾಯಿ ಬಿಡಿಸುವುದರಲ್ಲಿ ಚತುರನೆಂದು ಪಿಆರ‍್ಟಿ ಪ್ರಖ್ಯಾತ.

‘ಭಾರತೀಯ ಪರಿಸರದಲ್ಲಿ ಬೇರೂರಿ ನಮ್ಮ ಕಮ್ಯೂನಿಸ್ಟರು ಯೋಚಿಸಿದ್ದೇ ಇಲ್ಲ. ಒಂದೋ ರಷ್ಯದ ಕಡೆ, ಅಥವಾ ಚೀನದ ಕಡೆ ನೋಡ್ತಾ ಇರ್ತಾರೆ.’

‘ಹಾಗಾದರೆ ನೀವು ಲೋಹಿಯಾ ಸಮಾಜವಾದಿಯೊ?

‘ಜಗನ್ನಾಥರ ಯೋಚನಾ ಕ್ರಮ ಲೋಹಿಯಾಗೆ ಬಹಳ ಹತ್ತಿರಾಂತ ನನಗೆ ಅನ್ನಿಸುತ್ತೆ.’

ಲೋಹಿಯಾ ಹೆಸರಲ್ಲಿ ಸಮಾಜವಾದೀ ಪಕ್ಷದಿಂದ ಒಡೆದುಕೊಂಡಿದ್ದ ನೀಲಕಂಠ ಸ್ವಾಮಿಗೆ ಹಾಗೆ ಹೇಳುವುದರಲ್ಲಿ ಲಾಭವಿತ್ತು. ಜಗನ್ನಾಥ ಹೇಳಿದ:

‘ಲೋಹಿಯಾ ವಿಚಾರ ನನಗೆ ತುಂಬ ಹಿಡಿಸತ್ತೆ ಅನ್ನೋದು ನಿಜ. ಆದರೆ ಪಾರ್ಲಿಮೆಂಟರಿ ರಾಜಕೀಯದಲ್ಲಿ ನನಗಷ್ಟು ಆಸಕ್ತಿಯಿಲ್ಲದೇ ಇರೋದರಿಂದ ನೀಲಕಂಠಸ್ವಾಮಿಗಳ ಪಾರ್ಟಿಗೆ ನಾನು ಸೇರಿಲ್ಲ. ಯಾರರ್ಯಾರು ಈ ಚಳುವಳೀಲಿ ನಂಬ್ತಾರೋ ಅವರೆಲ್ಲರ ಸಹಾಯ ನನಗೆ ಬೇಕು.’

ಪಿಆರ‍್ಟಿ ಅಷ್ಟಕ್ಕೇ ಬಿಡಲಿಲ್ಲ. ಒಳಗಿನಿಂದ ಬಂದ ಕಾಫಿಯನ್ನು ಕುಡಿಯುತ್ತ ಫೋಟೋಗ್ರಾಫರ್ ಪಕ್‌ನಿಂದ ಒಂದು ಎಕ್ಸ್‌ಪೋರ‍್ಟ್ ಚಾರ್ಮಿನಾರ್ ಸಿಗರೇಟ್ ತೆಗೆದುಕೊಂಡು ಹಚ್ಚಿದ. ಜಗನ್ನಾಥನಿಗೆ ಸಿಗರೇಟು ಒಡ್ಡಿದ. ‘I don’t smoke much, but all right’ ಎಂದು ಜಗನ್ನಾಥನೂ ಸಿಗರೇಟು ಹಚ್ಚಿದ.

‘ನಾಳೆ ರಥೋತ್ಸವಕ್ಕೆ ಮುಂಚೆ ಹರಿಜನ ದೇವಾಲಯ ಪ್ರವೇಶ ಅಂತ ಇಟ್ಕೊಂಡಿದೀರಿ. ಇದರಿಂದ ದೊಡ್ಡದೊಂದು ಕ್ರಾಂತಿಯಾಗುತ್ತೇಂತ ತಿಳ್ದಿದೀರ?’

‘ತಿಳ್ದಿದ್ದೆ. But not now. ಯಾವ ಕ್ರಾಂತಿಗೂ ಪೂರ್ವವಾಗಿ ಈ ಮಧ್ಯಯುಗದ ನಂಬಿಕೇನ್ನ ಸೀಳಬೇಕೂಂತ ನನ್ನ ಉದ್ದೇಶ. ಅದು ಸಫಲವಾದರೆ ಮೊದಲನೇ ಹೆಜ್ಜೆ ಇಟ್ಟಂತೆ. ಒಂದು ವೇಳೆ ಹೊಲೆಯರು ಹೆದರಿ ದೇವಸ್ಥಾನದೊಳಕ್ಕೆ ಬರ‍್ದೇ ಹೋಗಬಹುದು. ಅಲ್ಲವೆ? ಅವರು ಸ್ವಂತ ಇಚ್ಛೇಂದ್ಲೆ ಪ್ರತಿಭಟಿಸಬೇಕು ಅನ್ನೋದು ನನ್ನ ಗುರಿ. ನಾವು ನಾಳೆ ಸೋಲಲಿ ಗೆಲ್ಲಲ್ಲಿ ಹೋರಾಟಾಂತೂ ಪ್ರಾರಂಭವಾಗಿದೇಂತ ನಾನು ತಿಳ್ದಿದೀನಿ.’

‘That is correct’

ನೀಲಕಂಠಸ್ವಾಮಿ ಮೆಚ್ಚಿಗೆಯಿಂದ ಜಗನ್ನಾಥನನ್ನು ಹೊಗಳಿದ.

‘Another question, ನಾವು ನೋಡೋ ಎಲ್ಲ ಮಂಜುನಾಥನ ಚಿತ್ರದಲ್ಲೂ ಇರೋ ಬಂಗಾರದ ಕಿರೀಟ ನಿಮ್ಮ ಪ್ರಾಣ ಉಳಿಸಿದ್ದು ಅಂತಾರೆ. Any comment?’

ಜಗನ್ನಾಥ ‘No’ ಎಂದ.

‘ಹೊಲೇರ ಗುಡಿಗಳಿಗೆ ಬೆಂಕಿ ಬಿದ್ದದ್ದಕ್ಕೆ ಕಾರಣ: ಅವರು ಶಾಲಿಗ್ರಾಮ ಮುಟ್ಟಿದ್ರಿಂದ ಅಂತ ಕೆಲವರು ಅನ್ತಾರೆ; ನಿಮ್ಮ ಅನುಯಾಯಿಯೊಬ್ಬ ಬಂಟರ ಹುಡುಗೀನ್ನ ರೇಪ್ ಮಾಡಕ್ಕೆ ಪ್ರಯತ್ನಿಸಿದ್ರಿಂದ ಅಂತ್ಲೂ ಕೆಲವರು ಅನ್ತಾರೆ. Any comment?’

‘ಯಾರೂ ಅಪರಾಧಿ ಅಂತ ಪತ್ತೆ ಹಚ್ಚೋದು ಪೋಲೀಸರಿಗೆ ಸೇರಿದ್ದು.’

‘ಈ ಊರಿನ ವರ್ತಕರೊಬ್ಬರ ಕೈವಾಡ ಇದೆ ಅಂತ್ಲೂ ಗುಮಾನಿ ಇದೆ.’

ರಂಗರಾವ್ ಪಿಆರ‍್ಟಿಯ ಗಮನಕ್ಕದು ಬರಲಿ ಎಂದು ಒತ್ತಾಯಪೂರ್ವಕವಾಗಿ ಹೇಳಿದ. ಪಿಆರ‍್ಟಿ ಸಿಗರೇಟನ್ನು ಬೂಡ್ಸಿನಿಂದ ಉಜ್ಜಿ ಕೇಳಿದ:

‘ನೀವೊಬ್ಬರೂ ಆದರ್ಶವಾದಿ ಅಂತ ಕೆಲವರು ಹೇಳಿದರೆ, ಹಲವರಿಗೆ ನೀವು ಈ ಕ್ಷೇತ್ರದಿಂದ ಮುಂದಿನ ಸಾರಿ ಚುನಾವಣೆಗೆ ನಿಲ್ತಿದೀರಿ ಅನ್ನೊ ಅಭಿಪ್ರಾಯವಿದೆ. ಆ ಕಾರಣಕ್ಕಾಗಿ ಇದೆಲ್ಲ ನಿಮ್ಮ ತಯಾರಿ ಅಂತಾರೆ’.

ಜಗನ್ನಾಥ ನಗುತ್ತ ಇಲ್ಲವೆಂದು ತಲೆಯಲ್ಲಾಡಿಸಿದ.

‘ಈ ಸಂಘಟನೆ ಕೆಲಸಾನ್ನ ಮುಂದುವರಿಸಿಕೊಂಡು ಹೋಗ್ತೇನೆ ಅಷ್ಟೆ. ಹೊಲೆಯರು ಆಮೇಲೆ ರೈತರು…’

‘ಈಗಿರೋ ಮಂತ್ರಿಮಂಡಳದ ಬಗ್ಗೆ ನಿಮ್ಮ ಅಭಿಪ್ರಾಯವೇನು? Socialistic Pattern of Society ನ ತರಬಹುದು ಅಂತ ಅನ್ನಿಸತ್ತ?’

‘ಇಲ್ಲ. ನಮ್ಮ ರಾಷ್ಟ್ರಪತಿಗಳು ಕಾಶೀಲಿ ಬ್ರಾಹ್ಮಣರ ಪಾದ ತೊಳೆದು ತೀರ್ಥ ಕುಡಿದರು. ಶೃಂಗೇರಿ ಸ್ವಾಮಿಗಳು ಕಾಲಿಗೆ ಬಿದ್ರು. ಅವರು ಸಕೇಶಿಗಳಿಗೆ ತೀರ್ಥ ಕೊಡಲ್ಲಾಂತ ಕೇಳಿದೀನಿ. ಈ ಮಂಜುನಾಥ ದೇವರಿಗೂ ಅವರು ಪರಮಭಕ್ತರು. ಈ ದೇಶದಲ್ಲಿ ಜನರನ್ನ ಮೊದಲು ದೇವ್ರ ಹಿಡಿತದಿಂದ ತಪ್ಪಿಸಬೇಕೂಂತ ನನ್ನ  ಅಭಿಪ್ರಾಯ.’

‘Thank You’

ಪಿಆರ‍್ಟಿ ಫೋಟೋಗ್ರಾಫರ್ ಜೊತೆ ಊರು ಸುತ್ತಿ ಬರಲು ಎದ್ದುನಿಂತ, ಇಬ್ಬರ ಜೇಬಲ್ಲೂ ಮಂಜುನಾಥನ ಪ್ರಸಾದದ ಪುಟ್ಟಣಗಳಿದ್ದುದನ್ನು ಗಮನಿಸಿ ಜಗನ್ನಾಥ,

‘ನೀವು ಇಲ್ಲಿ ಬರೋಕೆ ಮುಂಚೆ ದೇವಸ್ಥಾನಕ್ಕೆ ಹೋಗಿ ಬಂದ್ರ?’

ಎಂದು ಕೇಳಿದ.

‘Yes. A beautiful place. ಅದೆಂಥಾ ಟ್ರೆಮೆಂಡಸ್ ಗಂಟೆ ಇದೇರಿ ಅಲ್ಲಿ ನಿಮ್ಮ ಮನೆತನದವರು ಮಾಡಿಸಿಕೊಟ್ಟದ್ದಂತೆ’ ಎಂದು ಪಿಆರ‍್ಟಿ ಹೇಳಿದ. ಫೋಟೋಗ್ರಾಫರ್ ಕೈ ಜೋಡಿಸಿ ಬಗ್ಗಿ ನಮಸ್ಕರಿಸಿ ಪರಮಾಪ್ತನಂತೆ ನಕ್ಕು, ಕೈ ಕುಲುಕಿ, ಲಗುಬಗೆಯಿಂದ ಪಿಆರ‍್ಟಿ ಜೊತೆ ನಡೆದ.

* * *

ಪಿಆರ‍್ಟಿ ಚಿತ್ರಗಳ ಸಹಿತ ಸ್ಟೋರಿ ಮಾಡಿ ಬೆಂಗಳೂರಿಗೆ ರವಾನಿಸಿದ. ಅವನ ಸ್ಟೋರಿಯಲ್ಲಿ ಜಗನ್ನಾಥನ ಪ್ರಾಣ ಉಳಿಸಿದ ಬಂಗಾರದ ಕಿರೀಟಕ್ಕೆ ವಿಶೇಷವಾದ ಮಹತ್ವವಿತ್ತು. ಆದಾದ ಮೇಲೆ ಜಗನ್ನಾಥನ ಇಂಗ್ಲೆಂಡ್ ವಿದ್ಯಾಭ್ಯಾಸ: ಫಾರ್‌ಸ್ಟರ್ ಪರಿಚಯ; ನ್ಯೂಲೆಫ್ಟಿನವರ ಜೊತೆ ಸಹವಾಸ; ಉದ್ದ ಕೂದಲು ಸಾದಾ ಡ್ರೆಸ್ಸು ನೀಳ ಮೂಗು ಎತ್ತರ ನಿಲುವು; ಶಾಲಿಗ್ರಾಮ ಸ್ಪರ್ಶ, ಅತ್ಯಾಚಾರ ಪ್ರಯತ್ನ; ಶತಮಾನಗಳ ವಾಸ್ತವ ಬದಲಿಸುವ ಮೊದಲ ಹೆಜ್ಜೆಯ ಆಸ್ತತ್ವವಾದೀ ಥಿಯರಿ; ಮನೆಗೆ ಬಹಿಷ್ಕಾರ; ಭಾರತೀಪುರದ ಆರ್ಥಿಕ ವ್ಯವಸ್ಥೆ ಮುರಿದು ಬಿದ್ದೀತೆಂಬ ವರ್ತಕ ಪ್ರಭುಗಳ ಆತಂಕ; ಮಂಜುನಾಥನ ಭಂಟ ಭೂತರಾಯನ ಸರ್ವವ್ಯಾಜ್ಯ – ಸರ್ವರೋಗ ಪರಿಹಾರ ಶಕ್ತಿ, ಹುಟ್ಟು ಬಂಜೆಯರಿಗೆ ಮಕ್ಕಳು ಕೊಡುವ ಶಕ್ತಿ; ಜಗನ್ನಾಥ ಮುಂದಿನ ಚುನಾವಣೆಗೆ ನಿಲ್ಲುವರೆ? ಊಹಾಪೋಹ; ಹಾಲಿ ಅಸೆಂಬ್ಲಿ ಮೆಂಬರ್ ಗುರಪ್ಪ ಗೌಡರ ಮೌನ ; ಗುಡಿಗೆ ಬೆಂಕಿ; ಹುತಾತ್ಮ ಚೌಡ; ಅನುಯಾಯಿ ಪಿಳ್ಳ; ತಮಗೆ ಒಪ್ಪಿಗೆಯಿಲ್ಲದಿದ್ದರೂ ಎಲ್ಲರನ್ನೂ ಸತ್ಕರಿಸುವ ಜಗನ್ನಾಥನ ಚಿಕ್ಕಮ್ಮ; ಇತ್ಯಾದಿಗಳ ಕೊನೆಯಲ್ಲಿ ಹೀಗೆ ಬರೆದ:

‘ಬೆಟ್ಟಗಳ ನಡುವೆ ಅಂತರ್ಮುಖಿಯಾಗಿ ಮಲಗಿ ಸಹಸ್ರಾರು ವರ್ಷಗಳಿಂದ ನಿದ್ರಿಸುತ್ತಿರುವ ಮನೋಹರ ಊರು ಭಾರತೀಪುರ. ಭಾರತೀಯ ಸಂಸ್ಕೃತಿಯ ಸಾರವನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಈ ಪುರಾತನ ಪಟ್ಟಣ ಈಗ ಕ್ಷುಬ್ಧವಾಗಿದೆ ಎಂದು ಭಾವಿಸುವುದೂ ತಪ್ಪಾದೀತು. ಈ ಬೀದಿಗಳಲ್ಲಿ ನಡೆಯುವಾಗ ಮಂಜುನಾಥನ ಪ್ರಸಾದವಾದ ಕುಂಕುಮವನ್ನು ಹೊತ್ತ ಸಹಸ್ರಾರು ಹಣೆಗಳು ಎದುರಾಗುತ್ತವೆ. ರಥೋತ್ಸವದ ದಿನ ಗುಡಿಯ ಹೊಸಲನ್ನು ಹೊಲೆಯರು ದಾಟಬಲ್ಲರೆ ಎಂದು ಇವರನ್ನು ಕೇಳೀ ನೋಡಿ. ನಿರಾತಂಕವಾಗಿ ನಗುತ್ತ ಇವರು ತಲೆಯಲ್ಲಾಡಿಸುತ್ತಾರೆ. ಭೂತರಾಯ ಕಾಲು ಎಳೆಯುತ್ತಾನೆ, ಹೊಲೆಯರು ರಕ್ತಕಾರಿ ಸಾಯುತ್ತಾರೆಂಬುದು ಇವರ ದೃಢ ನಂಬಿಕೆ. ಯುವಕ ಬ್ರಾಹ್ಮಣ ಸಂಘದ ತರುಣರೊಬ್ಬರು ಹೇಳಿದರು : ಜಗನ್ನಾಥರು ನಿಜವಾದ ಕ್ರಾಂತಿಕಾರಿಗಳಾದರೆ ದೇವಸ್ಥಾನವನ್ನೆ ಧಿಕ್ಕರಿಸಬೇಕು. ನಿರೀಶ್ವರವಾಗಿಯೊಬ್ಬ ಹೊಲೆಯರಿಗೆ ದೇವಸ್ಥಾನ ಬೇಕೆಂಬುದರಲ್ಲಿ ಅರ್ಥವಿಲ್ಲ.

ಏನೇ ಇರಲಿ, ಭಾರತದ ರಾಷ್ಟ್ರಪತಿಗಳನ್ನೂ ಭಕ್ತನನ್ನಾಗಿ ಪಡೆದ ಈ ದೇವಸ್ಥಾನ ಸಾಮಾನ್ಯರ ನಂಬಿಕೆಯ ಮೇಲೆ ಬೆಳೆದು ನಿಂತಿದೆಯೆಂದರೆ ತಪ್ಪಲ್ಲ. ಎಲ್ಲ ವರ್ಗಭೇದಗಳನ್ನೂ ಭಾರತದಲ್ಲಿ ಸೀಳುವುದೆಂದರೆ ದೇವರು ಮತ್ತು ಸಂತರು. ಹೊಲೆಯರಿಗೂ ಈ ದೇವರು ಪ್ರಾಪ್ತವಾಗುವಂತಾಗಬೇಕೆಂಬುದು ಜಗನ್ನಾಥರ ಉದ್ದೇಶವಲ್ಲ; ಆದರೂ ಅವರ ಉದ್ದೇಶ ಮೀರಿ ಹಾಗಾಗಬಹುದೆಂಬುದಕ್ಕೆ ಈ ದೇಶದಲ್ಲಿ ಉದಾಹರಣೆಗಳಿವೆ. ಶಿವಮೊಗ್ಗೆಯ ಡಿ.ಸಿ. ಸ್ವತಃ ಹರಿಜನರು. ಅವರು ನನಗೆ ಹೀಗೆ ಹೇಳಿದರು: ‘ನಮ್ಮ ಸಮಾಜ ಗಾಂಧೀಜಿಯವರು ನಂಬಿದ ಅಹಿಂಸೆಯ ಮೂಲಕ ಪರಿವರ್ತನೆಯಾಗಬೆಕು. ನಮ್ಮ ಪ್ರಧಾನಿಗಳ ನೇತೃತ್ವದಲ್ಲಿ ಈಗಾಗಲೇ ಸಮಾಜವಾದದ ಪ್ರಗತಿಶೀಲ ಹಾದಿಯನ್ನು ದೇಶ ಶಾಂತರೀತಿಯಲ್ಲಿ ತುಳಿಯುತ್ತಿದೆ. ಇಂದಲ್ಲ ನಾಳೆ ಮಂಜುನಾಥನ ದೇವಾಲಯದ ಬಾಗಿಲು ಹರಿಜನರಿಗೆ ತೆರೆಯುತ್ತದೆಂಬ ನಂಬಿಕೆ ನನಗಿದೆ. ಪಂಡಿತಾಃ ಸಮದರ್ಶಿನಃ ಎಂದು ವೇದಾಂತ ಸಾರಿಲ್ಲವೆ? ದೇವಸ್ಥಾನದ ಕಮಿಟಿಯವರು ನಾನು ಅಧಿಕಾರ ಸ್ವೀಕರಿಸಿದಾಗ ನನಗೆ ಪ್ರಸಾದ ಕಳಿಸಿದರೆಂಬುದನ್ನು ನಾನಿಲ್ಲ ಕೃತಜ್ಞತಾಪೂರ್ವಕವಾಗಿ ನೆನೆಯದಿದ್ದರೆ ತಪ್ಪಾದೀತು. ಆಕ್ರೋಶ ತಪ್ಪು. ಜನಾಂಗಗಳು ನೆಮ್ಮದಿಯಿಂದ ಒಟ್ಟಿಗೆ ಬಾಳಬೇಕು. ಹರಿಜನರು ವಿದ್ಯಾವಂತರಾಗಿ ತಮ್ಮೊಳಗಿರುವ ಭೇದ ಭಾವಗಳನ್ನು ತೊರೆದು ನಮ್ಮ ಪ್ರಧಾನಿಯ ನೇತೃತ್ವದಲ್ಲಿ ಭವ್ಯ ಸಮಾಜ ನಿರ್ಮಾಣ ಮಾಡಬೇಕು.’

ಪಿಆರ‍್ಟಿಯ ಕೊನೆಯ ಮಾತುಗಳು ಹೀಗಿದ್ದುವು: ‘ಸತ್ಯ ಪ್ರಕಾಶರನ್ನು ಅವರ ಮನೆಯಲ್ಲಿ ಭೇಟಿ ಮಾಡಿದಾಗ ಪ್ರಾತಃಕಾಲ. ಅವರ ಹಣೆಯಲ್ಲಿ ಕುಂಕುಮವಿತ್ತು. ಅದು ಮಂಜುನಾಥನ ಪ್ರಸಾದವಿರಬಹುದೇ ಎಂದು ಅನುಮಾನಿಸುತ್ತ, ಭಾರತೀಪುರದ ನನ್ನ ಅನುಭವಗಳನ್ನೆಲ್ಲ ಮತ್ತೆ ಮೆಲುಕುಹಾಕಿದೆ.’