ಚಂದ್ರಶೇಖರನ ಕಾಗದ, ಅನಂತಕೃಷ್ಣನ ಕಥೆ, ಇನ್ನೂ ತನಗೆ ಹತ್ತಿರವಾಗಲಾರದೇ ಹೋದ ಹೊಲೆಯರು. ತನ್ನ ಪಾಡಿಗೆ ತಾನಿರುವ ಭಾರತೀಪುರ, ಯಾವ ಮೂಲಭೂತ ಬದಲಾವಣೆಯೂ ಸಾಧ್ಯವಿಲ್ಲವೆನ್ನುವ ರಾಯರ ವಿವೇಕ – ಈ ಎಲ್ಲವೂ ಕೂಡಿ ಜಗನ್ನಾಥ ಮಂಕಾಗಿದ್ದ.

ಗುಡ್ಡ ಹತ್ತುತ್ತ ರಾಯರಿಗೆ ಹೇಳಿದ : ‘ರಾಯರೇ ನೋಡಿ, ನಮ್ಮ awareness ಇದ್ದ ಹಾಗೆ ನಮ್ಮ being ಇಲ್ಲ. ಇದನ್ನ ಬೇಕಾದರೆ ಹಿಪೊಕ್ರಸಿ ಅನ್ನಬಹುದು. ಹೊಲೇರನ್ನ ಪ್ರೀತಿಸೋದು ನನಗಿನ್ನೂ ಸಾಧ್ಯವಾಗಿಲ್ಲ; ಆದರೆ ಈಗ ಸಾಧ್ಯವಾಗದೇ ಇರೋದೆಷ್ಟನ್ನೋ ಚರಿತ್ರೆ ಸಾಧ್ಯವಾಗಿಸತ್ತೆ ಅನ್ನೊ ‘ಅರಿವು’ ನನಗಿದೆ. ಆದರೂ ನನ್ನ being ನನ್ನ ‘ಇರುವು’ ಸತ್ಯಪ್ರಕಾಶನ್ನ ಕಂಡರೆ ಹೇಸತ್ತೆ; ಹೊಲೇರ ಹುಡುಗರ ಜೊತೆ ಕೃತಕವಾಗಿ ವರ್ತಿಸತ್ತೆ. ನಿಜ – ಇದನ್ನೆ ನಾನು ಯಾತನೆ ಅನ್ನೋದು. ಅರಿವಿಗೂ ಇರವಿಗೂ ಬಿರುಕಿರೋದು ಮನುಷ್ಯನಲ್ಲಿ ಅನಿವಾರ್ಯ. ಪ್ರಾಣಿಗೆ ಈ ಸಮಸ್ಯೇನೇ ಇಲ್ಲ. ಚರಿತ್ರೆ ನನ್ನನ್ನ ಹೀಗೆ ಸೃಷ್ಟಿಸಿ, ಇನ್ನೊಂದು ಬೇರೆ ವಾಸ್ತವಾನ್ನ ಸೃಷ್ಟಿಸೋಕೂ ಹೊಂಚು ಹಾಕ್ತ ಇರತ್ತೆ – ಈ ನನ್ನ ಮೂಲಕಾನೂ. ಆದರೆ ಅದರ ಕಾರ್ಯಕ್ಷೇತ್ರ ಇರೋದು ನನ್ನ ಅರಿವಿನಲ್ಲಿ ಎಷ್ಟೋ, ಅಷ್ಟೇ ಈ ಭಾರತೀಪುರದಲ್ಲಿ ಕೂಡ. ಚರಿತ್ರೇಲಿ ಬಿದ್ದಿರೋ ಬೀಜಗಳೆಲ್ಲ ಮೊಳಕೆ ಬಿಡೋಕೆ ಏನೇನೊ ಅವಶ್ಯವಾಗತ್ತೆ – ನಾವು ನಮ್ಮ ಸಂಕುಚಿತ ದೃಷ್ಟೀಲಿ ತಿಳಿದಿರೋ ಈ ವಿಲ್ ಕೂಡ. ನೋಡಿ ರಾಯರೆ – ಕನ್ಸರ‍್ವೇಟಿವ್‌ಗೆ ಈ ಯಾತನೆ ತಿಳಿಯಲ್ಲ – ಮನುಷ್ಯ ಸ್ವಭಾವದಲ್ಲಿ ಈಗಿರೋ ನಿಜಾನ್ನ ಮಾತ್ರ ಅವ ನೋಡ್ತಾನೆ. ಆದರೆ reality ಮತ್ತು possibility – ಈ ಎರಡು ದೃಶ್ಯಾನೂ ಒಟ್ಟಿಗೇ ಕಾಣಿಸೊ ನನ್ನಂಥವರಿಗೆ ಯಾತನೆ ತಪ್ಪಿದ್ದಲ್ಲ.’

ಮಾತಾಡಲು ಪ್ರಾರಂಭಿಸಿದಾಗ ಇದ್ದ ಉತ್ಸಾಹ ಕೊನೇಲಿ ಇರಲಿಲ್ಲ. ರಾಯರಿಗೆ ಅರ್ಥವಾದರೂ ನಿಜಾಂತ ಅನ್ನಿಸಿದ ಹಾಗೆ ಕಾಣಲಿಲ್ಲ. ಈ ಮಾತುಗಳನ್ನೆಲ್ಲ ಎಷ್ಟೋ ಸಾರಿ ಆಡಿಯಾಗಿದೆ. ಭಾರತೀಪುರದ ವಾಸ್ತವ ಬದಲಾಗ್ದ ಹೊರತು, ಹೊಲೆಯರು ಸಿದ್ಧವಾಗದ ಹೊರತು, ಪಿಳ್ಳನಲ್ಲಿ ಮೊಳೀತಿರುವಂತೆ ಕಂಡದ್ದು ಭದ್ರವಾಗಿ ಊರಿಕೊಳ್ಳದ ಹೊರತು ನನ್ನ ವಿಚಾರಗಳೆಲ್ಲ ಪ್ರೇತವಾಗಿ ಉಳೀತಾವೆ.

ಊಟಕ್ಕೆ ಕೂತಾಗ ಜಗನ್ನಾಥ ಮಂಕಾಗಿದ್ದ. ಈಗ ಈ ಸಾಲಲ್ಲಿ ಊಟಕ್ಕೆ ಕೂತಿರುವ ಒಬ್ಬನನ್ನೂ ತಾನು ಪ್ರೀತಿಸಲಾರ. ನನ್ನನ್ನು ಪ್ರೀತಿಸುವ ಚಿಕ್ಕಿಯನ್ನ ಗೋಳಿಗೆ ಒಳಪಡಿಸಿದ್ದೇನೆ. ಈ ಊಟದ ಮನೆಯಲ್ಲಿ ತಾನು ಒಗ್ಗಿರುವ ಯಾರೂ ಇನ್ನು ಮುಂದೆ ಊಟ ಮಾಡರು. ಪಕ್ಕದಲ್ಲಿ ಕೂತಿದ್ದ ರಂಗರಾವ್ ಗಟ್ಟಿಯಾಗಿ ಹುಳಿಯನ್ನ ಕಲಸಿಕೊಂಡು ಇಡೀ ಕೈಯಿಂದ ಉರುಟುರುಟಾದ ಉಂಡೆ ಕಟ್ಟುತ್ತ ಬಾಯಿಗದನ್ನು ಎಸೆಯುತ್ತಿದ್ದ. ಅನ್ನದ ರಾಶಿಯನ್ನು ಬೇರ್ಪಡಿಸದೆ ಹೊಂಡ ಮಾಡಿ ಅದಕ್ಕೆ ಒಂದೇ ಒಂದು ಸೌಟು ಹುಳಿಯನ್ನು ಹಾಕಿಸಿಕೊಂಡು ಪುಡಿಪುಡಿಯಾಗಿ ಅವನು ಕಲಸಿಕೊಳ್ಳುವ ಕ್ರಮವನ್ನು, ಅನ್ನವನ್ನೆತ್ತಿ ಪಿಂಡಕ್ಕೆಂಬಂತೆ ಉಂಡೆಕಟ್ಟುವ ವಿಧಾನವನ್ನು ಜುಗುಪ್ಸೆಯಿಂದ ಚಿಕ್ಕಿ ನೋಡಿದ್ದರು. ಹೊರಗಡೆ ಕೂತು ಶೂದ್ರ ಹೀಗೆ ಊಟ ಮಾಡೋದು ಅವರಿಗೆ ಹೊಸದಲ್ಲ. ಆದರೆ ತಮ್ಮ ಊಟದ ಮನೆಯಲ್ಲೆ ಕೂತು ಶೂದ್ರನೊಬ್ಬ ಊಟ ಮಾಡುವ ಈ ಕ್ರಮದಿಂದ ಅವರಿಗಾಗುತ್ತಿದ್ದ ಹೇಸಿಗೆ ಜಗನ್ನಾಥನನ್ನೂ ತಿಳಿಯದಂತೆ ಆಕ್ರಮಿಸಿತ್ತು. I must become insensitive. ಶೌಚಕರ್ಮದಿಂದ ಹಿಡಿದು ಊಟ ಮಾಡುವ ಕ್ರಮದ ತನಕವೂ ಬೇರೆ ಬೇರೆ ಲೋಕಗಳನ್ನು ಸೃಷ್ಟಿಸಿ ತನ್ನ ಮಾನವೀಯತೆಯನ್ನೆ ಹೀಗೆ ಮುಕ್ಕಾಗಿಸುತ್ತಿರುವ ಜಾತಿಪದ್ಧತಿಯನ್ನು ನಾಶಮಾಡುವ ಕ್ರಮ ತಿಳಿಯದು. ಷಂಡ ರೋಷದಿಂದ ತನ್ನನ್ನೆ ಹಳಿದುಕೊಳ್ಳದೆ ಬೇರೆ ಮಾರ್ಗವಿಲ್ಲ. ಈ ಸಮಾಜದಲ್ಲಿ ಅಂತರ ಪಿಶಾಚಿಯಾಗದೇ ವಿಧಿಯಿಲ್ಲ. ಎಷ್ಟು ಕೃತಕವೆನ್ನಿಸಿದರೂ ನನ್ನ ಭಾವನೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಹೋಗುವುದೇ ಪ್ರಾಯಶಃ ಸರಿ; ಅಥವಾ ಅನಿವಾರ್ಯ. ಈ ರಂಗರಾವ್‌ನನ್ನ, ಸತ್ಯಪ್ರಕಾಶನ್ನ ಪ್ರೀತಿಸೋದಕ್ಕೆ ಕಲೀಬೇಕು ಅಥವಾ ಅರ್ಥ ಮಾಡಿಕೊಳ್ಳೋದಕ್ಕೆ. ನೀಲಕಂಠಸ್ವಾಮಿ ಹೇಳಿದ :

‘ಮಿಸ್ಟರ್ ಜಗನ್ನಾಥ್‌, ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಬಗ್ಗೆ ನಾನೊಂದು ಪುಸ್ತಕ ಬರ್ದಿದೀನಿ’.

‘ಹೌದೇನು?’

‘ಅದನ್ನ ಪಬ್ಲಿಷ್ ಮಾಡಿಸ್ತ ಇದೀನಿ. ಮಹಾರಾಜರ ಹತ್ತಿರ ಅದಕ್ಕೊಂದು ಮುನ್ನುಡಿ ಬರೆದು ಕೊಡೋಕೆ ಕೇಳ್ತ ಇದೀನಿ.’

‘ಅಲ್ಲ. ನೀವು ಸೋಷಲಿಸ್ಟ್ ಆಗಿ…’ ಜಗನ್ನಾಥ ತಮಾಷೆಯಾಗಿ ಪ್ರಶ್ನಿಸಿದ. ನೀಲಕಂಠಸ್ವಾಮಿಯೂ ನಗುತ್ತ ಹೇಳಿದ:

‘Strategy ಅಷ್ಟೆ. ಇಲ್ದೆ ಹೋದ್ರೆ ಯಾರು ನನ್ನ ಬುಕ್ಕನ್ನ ಪಬ್ಲಿಶ್‌ಮಾಡ್ತಾರೆ ಹೇಳಿ? ಕನ್ನಡ ಪಬ್ಲಿಕೇಶನ್ ತುಂಬ ಜಾತೀಯತೆ ಇದೆ.’

‘ನಿಜವೆ?’

‘Of Course ಈಗ ನನ್ನ ಬುಕ್ಕು ಇಂಗ್ಲಿಷ್‌ಕನ್ನಡ ಎರಡರಲ್ಲೂ ಪಬ್ಲಿಶ್‌ಆಗ್ತ ಇದೆ. ಟೆಕ್ಸ್ಟ್‌ಬುಕ್ಕೂ ಆಗಬಹುದು. ಆಗ ನಾನು ಹೇಳಿದ್ದಕ್ಕೆ ಬೆಲೆ ಇರ‍್ತದೆ. ಪಾರ್ಟಿಗೂ ಆದ್ರಿಂದ ಲಾಭ ಆಗ್ತದೆ.’

ನೀಲಕಂಠಸ್ವಾಮಿ ನಾಚಿಕೆಯಿಲ್ಲದೆ ಮಾತಾಡಿದ್ದ. ಜಗನ್ನಾಥನಿಗೆ ಅವನ ಆಶಾವಾದ. ಅವನ ಎನರ್ಜಿ ಕಂಡು ಆಶ್ಚರ್ಯವಾಯ್ತು. ಕೊಳಕ. ಆದರೆ ಇವನೇ ಪ್ರಾಯಶಃ ಭವಿಷ್ಯವನ್ನು ರೂಪಿಸೋ ವ್ಯಕ್ತಿ. ಪಿಳ್ಳನಂಥೋರು ಈ ಖದೀಮರನ್ನ ಮೆಟ್ಟಿ ನಿಲ್ಲೋ ತನಕ. ಬ್ರಾಹ್ಮಣನಲ್ಲಿ ನಯ ನಾಜೂಕಿದೆ; ಒಳಗನ್ನಿಸಿದ್ದನ್ನ ಮಾಡಲಾರ‍್ದೆ ಇರೋ ಪುಕ್ಕಲಿದೆ; ಕರುಬುವ ಹಿಪಾಕ್ರಸಿಯಿದೆ. ಆದರೆ ಈ ಗೌಡರಲ್ಲಿ ಲಿಂಗಾಯತರಲ್ಲಿ ಮಾನಗೆಟ್ಟಿ ಧೈರ್ಯವಿದೆ; ಎನರ್ಜಿಯಿದೆ; ಯೌವನವಿದೆ. ಬದಲಾಗ್ತಿರೋ ಸಮಾಜದಲ್ಲಿ ಇವರೆಲ್ಲರೂ ಅಂತರಪಿಶಾಚಿಗಳಾಗ್ತಾರೆ; ದೋಚಿಕೊಳ್ಳೋದಕ್ಕೆ ಹಾತೊರೀತಾರೆ. ಆಸೆಯಲ್ಲಿ ಬಾಯಿ ಕಿಸಿದ ಈ ನವಬ್ರಾಹ್ಮಣರನ್ನ ನಾಳೆ ಪಿಳ್ಳ ಒದೀತಾನೆ. ಆಮೇಲೆ ಪ್ರಾಯಶಃ ಅವನೂ ಸತ್ಯಪ್ರಕಾಶನ ಹಾಗೆ ಬಾಯಿ ಕಿಸೀತಾನೆ. ಚರಿತ್ರೇಲಿರೋ ಬೀಜಗಳಲ್ಲಿ ಕೆಲವು ಮುಗ್ಗಲಾಗುತಾವೆ, ಕೆಲವು ಕೊಳೀತಾವೆ, ಕೆಲವು ಮೊಳೀತಾವೆ, ನನ್ನಂಥೋರು ಗೊಬ್ಬರವಾಗಬೇಕು. ನೊಂದರೂ ಪರವಾಗಿಲ್ಲೆಂದು ಹೇಳಿದ :

‘ನೋಡಿ, ನೀವು ಮಹಾರಾಜರ ಹತ್ರ ಮುನ್ನುಡಿ ಬರೆಸಿಕೊಳ್ಳೋಕ್ಕೆ ನೋಡೋದು, ಎಲ್ಲದನ್ನೂ ಸ್ಟ್ರಾಟೆಜಿ ಅಂತ ಸಮರ್ಥಿಸಿಕೊಳ್ಳೋದು ಅಪಾಯ ಅಂತ ನನಗನ್ನಿಸತ್ತೆ. ವಲ್ಗರ್ ಕೂಡ, ರಂಗರಾವ್ ಬಂದವ್ರೆ ದೇವಸ್ಥಾನಕ್ಕೆ ಹೋಗಿ ಪ್ರಸಾದ ತಂದ್ರಂತೆ. ನನ್ನ ಜೊತೆ ಈ ಕಾರ್ಯದಲ್ಲಿ ಸೇರೋ ನೀವು ಪ್ಯೂರ್‌ಆಗಿ ವರ್ತಿಸಬೇಕೂಂತ ನನ್ನ ಇಷ್ಟ.’

ನೀಲಕಂಠಸ್ವಾಮಿಯಾಗಲೀ ರಂಗರಾವ್ ಆಗಲೀ ಬೇಸರಪಟ್ಟಂತೆ ಕಾಣಲಿಲ್ಲ. ನೀಲಕಂಠಸ್ವಾಮಿ,

‘I see what you mean’ ಎಂದು ಊಟ ಮುಂದುವರಿಸಿದ. ಯಶಸ್ಸೇ ಮುಖ್ಯವಾದ ಸಮಾಜದಲ್ಲಿ ಯಾವುದು ಕ್ಷಣಿಕ ಯಾವುದು ಶಾಶ್ವತ ಎನ್ನುವ ಮೌಲ್ಯ ಗೋಚರಿಸಲ್ಲ; ನೀಲಕಂಠಸ್ವಾಮಿಗೆ ಗೆಲ್ಲೋದು ಮುಖ್ಯ. ಹಿಂದೆ ಬ್ರಾಹ್ಮಣರು ಮುಕ್ಕಿದ್ರು; ಈಗ ಇವ ಮುಕ್ಕುತಾನೆ. ಧರ್ಮದ ಕಲ್ಪನೆಯಿದ್ದೂ ಸಾವಿರಾರು ವರ್ಷ ಈ ದೇಶದಲ್ಲಿ ಹೊಲೇರು ಹೀಗಿದಾರಲ್ಲ ಎಂದು ಯಾರೂ ನಿದ್ದೆ ಕೆಟ್ಟು ಯೋಚಿಸಿದ್ದಿಲ್ಲ.

ರಾಯರು ಮಾತಾಡದೆ ಊಟ ಮಾಡಿದ್ದರು. ತಾನು ಆಡಿದ ಮಾತಿನಿಂದ ಅವರಿಗೆ ಸಂತೋಷವಾಗಿತ್ತು. ಬ್ರಾಹ್ಮಣೇತರರೇ ಹೀಗೆ – ಎಂದು ನಿಶ್ಚಯಕ್ಕೆ ಬಂದಿದ್ದ ಅವರ ಮನಸ್ಸನ್ನು ಕಲಕುವುದು ತನ್ನಿಂದ ಸಾಧ್ಯವಿಲ್ಲವಲ್ಲ ಎಂದು ಜಗನ್ನಾಥನಿಗೆ ಸಿಟ್ಟು ಬಂತು. ಅವರನ್ನು ನೋಯಿಸಬಲ್ಲ ಮಾತು ಹುಡುಕುತ್ತ ಕೈ ತೊಳೆದ. ನೀಲಕಂಠಸ್ವಾಮಿಯ ಅನುಯಾಯಿಗಳು ಕೈತೊಳೆದು ಹಿತ್ತಲಿನಲ್ಲಿದ್ದ ಪೇರಳೆಹಣ್ಣನ್ನು ಕೀಳುತ್ತಿದ್ದರು. ಕೀಳಬಹುದೇ ಎಂದವರು ತನ್ನನ್ನಾಗಲೀ ಚಿಕ್ಕಿಯನ್ನಾಗಲೀ ಕೇಳಿರಲಿಲ್ಲ.

ಜಗನ್ನಾಥ ಸ್ವಲ್ಪ ರೆಸ್ಟ್ ಮಾಡುತ್ತೇನೆಂದು ಮೇಲೆ ಹೋದ. ಸೋಷಲಿಸ್ಟರು ಊರು ಸುತ್ತಿ ಬರುತ್ತೇವೆಂದು ನೀಲಕಂಠಸ್ವಾಮಿಯ ನೇತೃತ್ವದಲ್ಲಿ ಹೊರಟರು. ರಾಯರು ಅವರ ಜೊತೆ ಹೋದರು.

* * *

ಜಗನ್ನಾಥನಿಗೆ ಆಶ್ಚರ್ಯವಾಯಿತು. ದೇವಸ್ಥಾನದ ಅರ್ಚಕರ ಮಗ ಗಣೇಶ ಸೀದ ಅವನ ರೂಮಿಗೆ ಬಂದಿದ್ದ. ಎದ್ದು ಕೂತು ಕುರ್ಚಿ ತೋರಿಸಿ ‘ಕೂತುಕೊಳ್ಳಿ’ ಎಂದ. ಉತ್ಸಾಹ ಬಿರಿಯುತ್ತಿದ್ದ ಕಣ್ಣುಗಳಿಂದ ಜಗನ್ನಾಥನನ್ನು ನೋಡುತ್ತ ಗಣೇಶ ರೂಮಿನ ಬಾಗಿಲು ಹಾಕಿ ಕುರ್ಚಿಯ ಮೇಲೆ ಕೂತ. ಮಾಸಿದ ಅಂಗಿ, ಮಾಸಿದ ಪಂಚೆ, ಹೀಚಲು ಕಾಯಿಯಂಥ ದೇಹಕ್ಕೆ ಮುದಿ ಮುಖ. ಯೌವನವಿಲ್ಲದ, ಮುಪ್ಪಿಲ್ಲದ ವಿಷಾದದ ಮೂರ್ತಿ. ತಲೆಯ ಮೇಲೆ ಅದೆಷ್ಟೋ ತಿಂಗಳಿನ ಕೂದಲು, ಕೂದಲಿಗಿಂತ ಉದ್ದವಾದ ಜುಟ್ಟು. ಗದ್ದದ ಮೇಲೆ ಕುರುಚಲು ಗಡ್ಡ. ಕಿವಿಗಳಲ್ಲಿ ಹರಳಿನ ಒಂಟಿ.

ಮಾತಾಡಲು ಪ್ರಯತ್ನಿಸುತ್ತ ಗಣೇಶ ಉಗ್ಗಲು ಪ್ರಾರಂಭಿಸಿದ.

‘ಪುಸ್ತಕ ಬೇಕಿತ್ತ?’

ಜಗನ್ನಾಥನೇ ಅವನ ಪರವಾಗಿ ಮಾತಾಡಿ ತಾಯಿಗೆ ಇಷ್ಟವಾಗಿದ್ದ ಶರತ್‌ಚಂದ್ರ ಕಾದಂಬರಿಗಳನ್ನು ತಂದುಕೊಟ್ಟ.

‘ನಾನಿಲ್ಲಿ ಬಂದದ್ದನ್ನ ಯಾರಿಗೂ ಹೇಳಬೇಡಿ.’

ಗಣೇಶ ಕಣ್ಣಿನಲ್ಲಿ ಜೀವ ತುಳುಕಿಸುತ್ತ ಉಗ್ಗಿ ಉಗ್ಗಿ ಹೇಳಿದ. ಹೊಸದೊಂದು ನಿಜ ಹುಟ್ಟಿಬರುವ ಯಾತನೆಯಂತಿತ್ತು ಅವನ ಉಗ್ಗು. ಜಗನ್ನಾಥನಿಗೆ ಏನು ಮಾತಾಡಬೇಕು ತಿಳಯದೆ,

‘ನೀವೇ ಹಿರೇಮಗನ?’ ಎಂದ.

ಗಣೇಶ ಹೌದೆಂದು ತಲೆಹಾಕಿದ. ಮತ್ತೆ ಕಣ್ಣುಗಳು ಬಿರಿಯುವಂತೆ ಜಗನ್ನಾಥನನ್ನು ನೋಡಿದ.

‘ನಿಮಗೆ  ಮದುವೆಯಾಗಿದೆಯ?’

ಕೇಳಬಾರದಿತ್ತು ಎನ್ನಿಸಿತು. ಯಾಕೆಂದರೆ ಹತಾಶವಾದ ದೃಷ್ಟಿಯಿಂದ ಗಣೇಶ ಜಗನ್ನಾಥನನ್ನು ನೋಡಿ ಮತ್ತೆ ತಲೆಹಾಕಿದ್ದ. ಅವನಿಗೇನೋ ಹೇಳುವುದು ಅಗತ್ಯವಿತ್ತು. ಅದನ್ನು ಹೇಳಿಸಲು ಅಗತ್ಯವಾದ ಸ್ವಾತಂತ್ರ್ಯದ ವಾತಾವರಣವನ್ನು ಜಗನ್ನಾಥ ಸೃಷ್ಟಿಸಬೇಕಿತ್ತು. ಸಹಾನುಭೂತಿಯಿಂದ ಗಣೇಶನ್ನ ನೋಡುತ್ತ ಕೂತ. ಗಣೇಶ ಕೂತ ಕ್ರಮದಲ್ಲಿ ಏನೋ ಹವಣಿಕೆಯಿತ್ತು. ಯೌವನದಿಂದ ಮುಪ್ಪಿನ ತನಕ ಯಾವ ವಯಸ್ಸಾದರೂ ಆಗಿರಬಹುದಾಗಿದ್ದ ಗಣೇಶ ಕುದಿಯುತ್ತ ಕೂತಿದ್ದಂತೆ ಅನ್ನಿಸಿತು. ಜಗನ್ನಾಥನಿಗೆ ಶೂನ್ಯದೃಷ್ಟಿಯ ಹೊಲೆಯರ ಹುಡುಗರು ನೆನಪಾದರು. ಗಣೇಶನನ್ನು ವಿಕಾರಗೊಳಿಸುತ್ತಿದ್ದುದು ಅವನ ರೂಪ ಮಾತ್ರವಲ್ಲ – ತನ್ನ ಬಿಳುಪಿನಲ್ಲಿ ನೂರಾರು ವರ್ಷದ ಇನ್‌ಬ್ರೀಡಿಂಗಿನ ಕತೆ ಹೇಳುತ್ತಿದ್ದ ಅವನ ಸವೆದ ಮುಖ.

‘ನೀವು ಮಾಡ್ತಿರೋದು ಸರಿ’

ಗಣೇಶ ಒಳಗೆ ಕುದಿಯುತ್ತಿದ್ದುದನ್ನು ಹೊರಗೆ ಹಾಕಿ ಬೆವರಿದ.

‘ಹೋಗ್ತೇನೆ’

ಎಂದು ಎದ್ದು ದಾಪುಕಾಲು ಹಾಕುತ್ತ ನಡೆದುಬಿಟ್ಟ. ಜಗನ್ನಾಥ ಕೆಳಗಿಳಿದು ಬಂದು ಗುಡ್ಡವನ್ನು ಓಡುತ್ತ ಇಳಿಯುತ್ತಿದ್ದ ಗಣೇಶನ ಕುಳ್ಳಗಿನ ರೋಗಗ್ರಸ್ತ ದೇಹದ ಚುರುಕನ್ನು ಆಶ್ಚರ್ಯದಿಂದ ನೋಡುತ್ತಲೇ ನಿಂತ.