ಚಿಕ್ಕಿ ನಾಲ್ಕು ಗಡಿಗೆಯ ತುಂಬ ಗಂಜಿ, ಒಂದು ಕಟ್ಟು ಬಾಳೆಲೆ, ಮತ್ತೊಂದು ಎಲೆಯ ಮೇಲೆ ಮಾವಿನ ಮಿಡಿ ಉಪ್ಪಿನಕಾಯಿ ತಂದು ಹೊರಗಿಟ್ಟರು. ಹೊಲೆಯರು ಎತ್ತಿಕೊಂಡು ಹೋಗಿ ಗುಡ್ಡದ ಒಂದು ಮೂಲೆಯಲ್ಲಿ ಕೂತು ಊಟಮಾಡಿದರು. ಜಗನ್ನಾಥ ಪಿಳ್ಳ ಮತ್ತು ಸಂಗಡಿಗರನ್ನು ಕರೆದು,

‘ನೋಡಿ. ನಾವು ನಾಳೆ ದೇವಸ್ಥಾನದೊಳಗೆ ಹೋಗ್ತಿದೀವಿ. ಹೀಗೆಲ್ಲ ಆಯ್ತು ಅಂತ ನೀವು ಹೆದರಬಾರ್ದು. ಇವತ್ತೇ ನಿಮಗೆ ಜಿಂಕ್ಸೀಟು ಹಾಕಿದ ಗುಡಿಗಳನ್ನ ಕಟ್ಟಿಸೋ ವ್ಯವಸ್ಥೆ ಮಾಡ್ತಿದೀನಿ’ ಎಂದ.

ಏನು ಯೋಚಿಸ್ತಿದಿ ಪಿಳ್ಳ ಎಂದು ಕೇಳಬೇಕೆನ್ನಿಸಿತು. ಆದರೆ ಯೋಚನೆ ಎನ್ನುವ ಶಬ್ದವೇ ಅವನಿಗೆ ಹೊಸದಿರಬಹುದು. ಪಿಳ್ಳನನ್ನು ಬಿಟ್ಟು ಉಳಿದವರು ಇನ್ನೂ ತನಗೆ ನಿಜವಾಗಿಲ್ಲ. ಯಾರು ಕರಿಯ, ಯಾರು ಮಾದ, ಯಾರು ಬಸ್ಯ, ಇನ್ನೊಬ್ಬ ನಿಜವಾದ್ದು ಸತ್ತ ಹುಡುಗ ಚೌಡ.

ಕಾಫಿ ತಿಂಡಿ ಮುಗಿಸಿ ಹೊರಟ. ಚಳಿ. ಎಳೆ ಬಿಸಿಲು. ನಡೆಯುತ್ತ ಮೈ ಬೆಚ್ಚಗಾಯಿತು. ದಾರಿಯುದ್ದಕ್ಕೂ ಜನ. ಹೊಳೆಯಲ್ಲಿ ಸ್ನಾನಮಾಡಿ ಹಿಂದಕ್ಕೆ ಬರುತ್ತಿದ್ದ ಪರಿಚಿತ ಮುಖಗಳು ಕೆಲವು : ಇನ್ನೆಷ್ಟೋ ಅಪರಿಚಿತ ಮುಖಗಳು. ಗುಡಿಗಳನ್ನು ಕಟ್ಟಿಸುವ ಜವಾಬ್ದಾರಿ ರಾಯರು ಹೊತ್ತಿದ್ದಾರೆ. ಆದ್ದರಿಂದ ಒಂದಿಷ್ಟು ಆರಾಮಾಗಿರಬಹುದು. ದೇಶದ ಯಾವುಯಾವುದೋ ಮೂಲೆಗಳಿಮದ ಹರಕೆ ಹೊತ್ತು ಬಂದವರನ್ನು ನೋಡುತ್ತ ಹೀಗೆ ಅಡ್ಡಾಡಬಹುದು. ತಾನು ಯೋಚಿಸಿದ್ದ ಕ್ರಿಯೆಯಿಂದ ಯಾರೂ ಬಾಧಿತರಾದಂತೆ ಕಾಣಲಿಲ್ಲ. ಶತಮಾನಗಳಿಂದ ಜನ ಹೀಗೇ ಇದೇ ದಿನ ಸ್ನಾನ ಮಾಡಿದ್ದರೆ ಅದೇ ಕತೆ ಕೇಳಿದ್ದಾರೆ. ಮಕ್ಕಳಿಗೆ ಹೇಳಿದ್ದಾರೆ. ಅಮ್ಮ ನನಗೆ ಹೇಳಿದಂತೆ. ಜಮದಗ್ನಿ ಕಡುಕೋಪಿ. ಹೆಂಡತಿಯಲ್ಲಿ ಹಾದರದ ಬುದ್ದಿ ಮೂಡಿದ್ದು ಕಂಡು ತಾಯಿಯನ್ನು ಕಡಿಯಿರೋ ಎಂದ ಮಕ್ಕಳಿಗೆ. ಯಾರೂ ಮುಂದಾಗಲಿಲ್ಲ – ಪರಶುರಾನನ್ನು ಬಿಟ್ಟು. ಅವನು ಕೊಡಲಿಯೆತ್ತಿ ತಾಯಿಯ ತಲೆ ಕಡಿದ. ತಂದೆಯ ಅಪ್ಪಣೆ ಮೀರಬಾರದೆಂಬ ತತ್ವಕ್ಕೆ ಅವನು ಬದ್ಧ. ಆದರೂ ತಾಯಿಯಲ್ಲವೆ, ತತ್ವಕ್ಕೆ ಮೀರಿದ ಪ್ರೇಮವಿಲ್ಲವೆ – ಪ್ರಸನ್ನನಾದ ತಂದೆ ಏನಾದರೂ ವರ ಕೇಳು ಎಂದದ್ದಕ್ಕೆ ತಾಯಿಯನ್ನು ಬದುಕಿಸು ಎಂದು ಬೇಡಿಕೊಂಡ. ತಾಯಿ ಬದುಕಿದಳು. ಆದರೆ ಕೊಡಲಿಗೆ ಹತ್ತಿದ ರಕ್ತ ಯಾವ ನೀರಿನಲ್ಲಿ ತೊಳೆದರೂ ಹೋಗಲಿಲ್ಲಂತೆ. ಕೊನೇಗೆ ಅವನು ಭಾರತೀಪುರದ ಈ ತುಂಗೆಯಲ್ಲಿ ಕೊಡಲಿ ಅದ್ದಿದನಂತೆ. ರಕ್ತ ಮಾಯವಾಯಿತು. ಕೊಡಲಿರಾಮ ಮಂಜುನಾಥನನ್ನು ಪ್ರತಿಷ್ಠಾಪಿಸಿದ – ಪಾಪ ತೊಳೆದ ನೆನಪಿಗಾಗಿ. ಅವನು ಕೊಡಲಿ ತೊಳದ ಮಡುವಿನಲ್ಲೆ ಸಹಸ್ರಾರು ಜನ ಅಮಾವಾಸ್ಯೆಯ ಪ್ರಾತಃಕಾಲ ಮುಳುಗಿ ಏಳುತ್ತಾರೆ, ಪಾಪವೆಲ್ಲ ಕಳೆಯಿತೆಂದು ಭ್ರಮಿಸಿ ಹರ್ಷರಾಗಿ ಓಡಾಡುತ್ತಾರೆ. ಈ ಪಾಪನಾಶಿನಿ, ಈ ಕೂಪ, ತತ್ವ ಮತ್ತು ತತ್ವಕ್ಕೆ ಮೀರಿದ ಪ್ರೇಮ, ಜಗನ್ನಾಥ ತನ್ನ ನಿಶ್ಚಯದ ಪ್ರಾರಂಭದಲ್ಲಿದ್ದ ತಿಳಿಯಾದ ಶುಭ್ರವಾದ ವಿಚಾರವನ್ನು ತನ್ನ ಅಂತರಂಗದಲ್ಲಿ ಮತ್ತೆ ಪಡೆದುಕೊಳ್ಳಲು ಯತ್ನಿಸುತ್ತ ಹೊಳೆಯ ದಂಡೆಯ ಮೇಲೆ ಬಂದು ನಿಂತ.

ಎಷ್ಟು ಸಾವಿರ ಜನ. ಮುದುಕರು, ಮಕ್ಕಳು, ಹೆಂಗಸರು, ಎಷ್ಟೋ ಹೆತ್ತು ಸುಸ್ತಾದ ಅರಿಸಿನ ಹಚ್ಚಿ ಬಿಳುಚಿದ ಮುಖಗಳು, ನೀರು ಜೊಟ್ಟುವ ಕೂದುಲುಗಳು, ಅಮ್ಮನ ಒದ್ದೆಯಾದ ಹೇರಳವಾಗಿ ಬೆಳೆದ ಕಪ್ಪಾದ ಕೂದಲಿನ ಹಿಂದೆ ನಾನು ಓಡುತ್ತೋಡುತ್ತ ಹಿಂಬಾಲಿಸುತ್ತಿದ್ದೆ.

ಇವರಲ್ಲಿ ಅನುಮಾನ ಹುಟ್ಟಬೇಕು. ಅಷ್ಠೆ ಎಚ್ಚರಾಗಬೇಕು. ದೇವರನ್ನೊದ್ದು ನಿಲ್ಲಬೇಕು. ಭೂತರಾಯನ ಶಕ್ತಿ ಹೊಲೆಯರಲ್ಲುಕ್ಕಬೇಕು, ತಮ್ಮ ಜೀವನಕ್ಕೆ ತಾವೇ ಜವಾಬ್ದಾರರಾಗಬೇಕು. ಅವುಗಳು ಒಂದೇ ಒಂದು ಹೆಜ್ಜೆ ಒಳಗಿಟ್ಟರೆ. ಯಾವತ್ತಿನಿಂದಲೂ ಹೊರಗಿದ್ದ ಅವುಗಳು. ಪಿಳ್ಳನ ಮೊದಲ ಹೆಜ್ಜೆ ಸುಷುಪ್ತಿಯಲ್ಲಿರುವ ಈ ಪ್ರಾಚೀನ ಕ್ಷೇತ್ರದಲ್ಲಿ ತಳಮಳ ಹುಟ್ಟಿಸಬೇಕು. ಚಿಕ್ಕ ದೊಡ್ಡ ಗಂಟೆಗಳನ್ನಾಡಿಸಿಕೊಂಡು ಇದ್ದಂತೇ ಇದ್ದು ಬಿಟ್ಟದ್ದು ಮೈ ಕೊಡವಿ ಏಳಬೇಕು. ಚೌಡನ ಹೆಣ, ಪಿಳ್ಳನ ರಕ್ತ, ಬೆಂಕಿಯಲ್ಲಿ ಉರಿದ ಗುಡಿಗಳು ಹೊಸದೊಂದು ವಾಸ್ತವವನ್ನು ಕೊರೆದು ತೆಗೆಯಬೇಕು.

ಯಾರೂ ತನ್ನನ್ನು ಗಮನಿಸಲಿಲ್ಲವೆಂದು ಸಂತೋಷವಾಯಿತು. ಜಗನ್ನಾಥ ಹಿಂದಕ್ಕೆ ನಡೆದ. ನಾಳೆಗಾಗಿ ಅಲಂಕೃತವಾದ ತೇರು. ಒದ್ದೆಯಾದ ಅದೇ ದಪ್ಪ ಮಿಣಿಗಳು, ಅದೇ ಮರದ ಕೆಳಗೆ ಇನ್ನೊಬ್ಬ ಮಂಗವನ್ನಾಡಿಸುವಾತ. ಯಾವನೋ ದೊಂಬ. ದಾರಿಯುದ್ದಕ್ಕೂ ಬಾಗಿಲು ತೆರೆಯುತ್ತಿರುವ ಅಂಗಡಿಗಳು. ಈ ದೊಡ್ಡ ಗೌಜು. ಸೀಳಿಕೊಂಡು ಒಂದೇ ಒಂದು ಅನುಮಾನ ಬಿರುಕು ಬಿಟ್ಟರೆ ಸಾಕು. ಮಿಠಾಯಿ ಅಂಗಡಿಯ ಬಾಗಿಲು ತೆರೆಯುತ್ತಿದ್ದ ವಾಸು ‘ಏನಯ್ಯ?’ ಎಂದು ಯೋಗಕ್ಷೇಮ ವಿಚಾರಿಸಿದ.