ಗುಡ್ಡದ ಮೇಲೆ ಉರಿಯುತ್ತಿರುವ ಬೆಂಕಿ, ಅಂಗಳದಾಚೆ ಅಳುತ್ತಿರುವ ಹೊಲೆಯರು. ಜವಾನರು ಇರುವ ದೀಪವನ್ನೆಲ್ಲ ಹೊತ್ತಿಸಿ ತಂದರು -ಗ್ಯಾಸ್‌ಲೈಟ್, ಲಾಟೀನ್, ಬೆಡ್‌ಲ್ಯಾಂಪು, ಇದು ಯಾವ ಸ್ಥಳ, ನಿದ್ದೆಯೊ, ಕನಸೊ-ಜಗನ್ನಾಥ ತಬ್ಬಿಬ್ಬಾದ. ‘ಶಾಲಿಗ್ರಾಮ ಮುಟ್ಟಿದ್ದರಿಂದ’ ಎಂದು ಚಿಕ್ಕಿ ಅಡಿಗರಿಗೆ ಹೇಳಿದ್ದು ಕೇಳಿಸಿತು. ನೀಲಕಂಠಸ್ವಾಮಿ ಮತ್ತು ರಂಗರಾವ್ ಚುರುಕಾಗಿ ಓಡಾದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಒಳಗಿನಿಂದ ಒಂದು ಗಡಿಗೆ ಜೇನುತುಪ್ಪ ತಂದು ರಂಗರಾವ್ ಸುಟ್ಟ ಗಾಯಗಳಿಗೆ ಹಚ್ಚಿದ. ವಯಸ್ಸಾದ ಹೊಲೆಯರು ರೋದಿಸುತ್ತಿದ್ದರು. ನೀಲಕಂಠಸ್ವಾಮಿ ಹೊಲೆಯರನ್ನು ಗದರಿಸುತ್ತ ಬುದ್ಧಿ ಹೇಳುತ್ತ ಧೈರ್ಯ ತುಂಬುತ್ತ ಓಡಾಡಿದ. ಡಾಕ್ಟರನ್ನು ಕರೆದುತರಲು ಒಬ್ಬ ಸೋಷಲಿಸ್ಟ್ ಹುಡುಗನ ಜೊತೆ ಅನಂತಕೃಷ್ಣ ಹೋದರು. ಜಗನ್ನಾಥ ಪಿಳ್ಳನನ್ನು ಹುಡುಕಿ ‘ಏನಾಯ್ತು’ ಎಂದು ಕೇಳಿದ.

ಎಲ್ಲರೂ ನಿದ್ದೆ ಮಾಡುತ್ತಿದ್ದಾಗ ಗುಡಿಗಳಿಗೆ ಬೆಂಕಿ ಹತ್ತಿತು. ಪಿಳ್ಳ ಕೂಗಿಕೊಂಡು ಹೊರಗೋಡಿದ. ಎಲ್ಲರನ್ನೂ ಎಚ್ಚರಿಸಿ ಹೊರಗೆ ಕರೆದುಕೊಂಡು ಬಂದ. ಬೆಂಕಿಯಿಂದ ಹೊರಗೆ ಬರುವಾಗ ಕೆಲವರಿಗೆ ಸುಟ್ಟಗಾಯಗಳಾಗಿದ್ದವು.

ಆರ್ತ ಕಣ್ಣುಗಳಿಂದ ತನ್ನನ್ನು ನೋಡುತ್ತಿದ್ದ ಹೊಲೆಯರಿಗೆ ಏನು ಹೇಳಬೇಕು ತೋಚದೆ ಜಗನ್ನಾಥ ನೀಲಕಂಠಸ್ವಾಮಿಯನ್ನು ಮೂಲೆಗೆ ಕರೆದುಕೊಂಡು ಹೋಗಿ ‘ಯಾರು ಸತ್ತಿಲ್ಲ ತಾನೆ?’ ಎಂದ.

‘ಒಂದು ಹುಡುಗ ಸತ್ತಿದೆ ಅಂತ ಕಾಣತ್ತೆ. ಡಾಕ್ಟರ್ ಬರೋ ತನಕ ಸುಮ್ಮನಿರಿ.’

ನೀಲಕಂಠಸ್ವಾಮಿ ಸಿಗರೇಟ್ ಹಚ್ಚಿದ. ‘ಈ ರೀತಿ ವಯಲೆನ್ಸ್ ಆಗತ್ತೇಂತ ನನಗೆ ಮೊದಲೇ ಗೊತ್ತಿತ್ತು’ ಎಂದು ಹೊಲೆಯರನ್ನು ಸಮಾಧಾನಪಡಿಸಲು ಹೋದ. ಜಗನ್ನಾಥನೂ ಅವನ ಜೊತೆ ಹೋಗಿ ಗಾಯಗಳಿಗೆ ಜೇನುತುಪ್ಪ ಹಚ್ಚುವುದರಲ್ಲಿ ಸಹಾಯ ಮಾಡಿದ. ಮಂಡ್ಯದಲ್ಲಿ ಹೊಲೆಯನೊಬ್ಬನ ಬೆರಳು ಕತ್ತರಿಸಿ ಹಾಕಿದ್ದನ್ನು ಸೋಷಲಿಸ್ಟ್ ಹುಡುಗನೊಬ್ಬ ವರ್ಣಿಸುತ್ತಿದ್ದ. ಮಲಗೋದೆಲ್ಲಿ, ಇರೋದೆಲ್ಲಿ, ತಮಗಿನ್ನು ದಿಕ್ಕೆಲ್ಲಿ ಎಂದು ಹೊಲತಿಯೊಬ್ಬಳು ಗೋಳಿಡುತ್ತಿದ್ದಳು. ಜಗನ್ನಾಥ ಅವಳಿಗೆ ಧೈರ್ಯ ಹೇಳಲು ಪ್ರಯತ್ನಿಸಿ, ಸೋತು, ಗದರಿಸಿದ.

ತಾನು ಕೂಡಲೆ ಮಾಡಬೇಕಾದ್ದೇನು? ಇನ್ನೂ ಕತ್ತಲು, ಬೆಳಗಾಗಲು ಹೊತ್ತಿದೆ. ಹೊಲೆಯರಿಗೆ ಮಲಗಲೊಂದು ಸೂರು ಬೇಕು. ಆಕಾಶದ ಕೆಳಗೆ ಚಳಿಯಲ್ಲಿ ಮಲಗಲಾರರು. ಬೇರೆ ಹೊಲೆಯರು ಇವರನ್ನು ಹತ್ತಿರ ಸೇರಿಸರು. ಅಡಿಕೆ ಸುಲಿಯುವುದಕ್ಕೆಂದು ಉಪಯೋಗಿಸುತ್ತಿದ್ದ ತಮ್ಮ ಮನೆಗೆ ಒತ್ತಿಕೊಂಡಿದ್ದ ಉದ್ದನೆಯ ಹಜಾರಕ್ಕೆ ಎಲ್ಲರನ್ನೂ ಕರೆದುಕೊಂಡು ಹೋಗಬೇಕೆಂದು ನೀಲಕಂಠಸ್ವಾಮಿ ಹೇಳಿದ.

ಆದರೆ ಒಳಗೆ ಬರಲು ಹೊಲೆಯರು ಹಿಂಜರಿದರು. ನೀಲಕಂಠಸ್ವಾಮಿಯ ಪುಸಲಾವಣೆ ನಡೆಯದಿದ್ದನ್ನು ನೋಡಿ ಜಗನ್ನಾಥ ಗದರಿಸಿ ಒಳಗೆ ಕಳಿಸಬೇಕಾಯ್ತು. ತಾನು ಹೊರಗೆ ನಿಂತಿರುವುದರಿಂದ ಯಾಕೆ ಕಷ್ಟವಾಗಬೇಕೆಂದು ಚಿಕ್ಕಿ ಒಳಗೆ ಹೋದರು.

ಹುಡುಗನ ಹೆಣವನ್ನು ಎದುರಿಗಿಟ್ಟುಕೊಂಡು ಅದರ ಅಪ್ಪ ಅವ್ವ ಮಾತ್ರ ಕೂತೇ ಇದ್ದರು. ಏಳಿ ಎಂದರೆ ಏಳಲಿಲ್ಲ. ಡಾಕ್ಟರ್ ಒಂದು ಮದ್ದು ಕೊಡ್ತಾರೆ ನೀವು ಒಳಗೆ ಹೋಗಿ ಎಂದು ನೀಲಕಂಠಸ್ವಾಮಿ ಹೇಳಿದ್ದನ್ನು ಅವರು ಕೇಳಲಿಲ್ಲ. ಸತ್ತ ಹುಡುಗನ ಮೈ ತುಂಬ ಬೊಕ್ಕೆಗಳಿದ್ದವು. ಮುಖ ಬೆಂದು ವಿಕಾರವಾಗಿತ್ತು. ಆದರೂ ಪ್ರಾಣವಿದೆ ಎಂಬ ಭ್ರಮೆ. ಹುಡುಗ ಅಷ್ಟು ಸುಟ್ಟುಕೊಳ್ಳಲು ಏನು ಕಾರಣವೆಂದು ಜಗನ್ನಾಥನಿಗೆ ಹೊಲೆಯ ಹೇಳಿದ:

ಬೆಂಕಿ ಬಿದ್ದಾಗ ಹುಡುಗ ಅಟ್ಟ ಹತ್ತಿ ಕೂತಿದ್ದ. ಅಟ್ಟದ ಮೇಲೆ ಬಾಳೆಗೊನೆಯಿತ್ತು, ಬಾಯಿ ಚಪಲ ಹುಡುಗನಿಗೆ. ಯಾವಾಗಲೂ ಹೀಗೆ ಬಾಳೆಹಣ್ಣು ಕದ್ದು ತಿನ್ನೊ ಅಭ್ಯಾಸ. ಬೇಡ ಎಂದರೆ ಕೇಳ್ತಿರಲಿಲ್ಲ ದರಿದ್ರ ಮುಂಡೇದು. ಸೂರಿಗೆ ಹತ್ತಿದ ಬೆಂಕಿ ಮುಖಕ್ಕೇ ಬಡಿಯಿತು. ಕೆಳಗೆ ದೊಪ್ಪನೆ ಬಿದ್ದಾಗಲೇ ತಮಗೆ ಗೊತ್ತಾದ್ದು, ಗುಡಿಗೆ ಬೆಂಕಿ ಹೊತ್ತಿದೇಂತ.

ಹುಡುಗ ಸತ್ತಿದ್ದಾನೆಂದು ಇವಕ್ಕೆ ಹೇಗೆ ತಿಳಿಸುವುದೆಂದು ಜಗನ್ನಾಥ ಪ್ರಯತ್ನಿಸಿದ:

‘ಇಲ್ಲಿ ನೋಡಿ, ನಿಮ್ಮ ಹುಡುಗ…’

ಹೊಲತಿ ಯಾಕೆ ಗಾಬರಿಯಿಂದ ತನ್ನ ಮಾತಿನ ನಡುವೆ ಎದ್ದು ನಿಂತಳೆಂದು ಜಗನ್ನಾಥನಿಗೆ ತಿಳಿಯಲಿಲ್ಲ. ಅಳುತ್ತಳುತ್ತ ಅವಳು ಹೇಳಿದಳು :

‘ತ್ವಾಟದಿಂದ ಕದ್ದ ಬಾಳೆಗೊನೆ ಅದಲ್ಲ ಒಡೇರೇ. ನನ್ನವ್ವನ ಊರಿಗೆ ಹ್ವಾದ ವಾರ ನಾ ಹೋಗಿದ್ದೆ. ನನ್ನವ್ವ ತಿನ್ಕ ಅಂತ ಬಾಳೆಗೊನೆ ಕೊಡ್ತು. ಹಣ್ಣಾಗಲಿ ಅಂತ ಅಟ್ಟದ ಮ್ಯಾಲೆ ಮಡಕೇಲಿ ಇಟ್ಟಿದ್ದೆ. ಬೇಕಾದರೆ ಭೂತರಾಯನಿಗೆ ಪರ‍್ಮಾಣ ಮಾಡಿ ನಾ ಹೇಳ್ತೀನಿ – ತ್ವಾಟದಿಂದ ಕದ್ದ ಬಾಳೆಹಣ್ಣಲ್ಲ’.

ಜಗನ್ನಾಥನಿಗೆ ಅವಳ ದೈನ್ಯ ಕಂಡು ಹೇಸಿಗೆಯಾಯಿತು. ಬಾಳೆಗೊನೆ ವಿಷಯ ತಾನು ಎತ್ತುತ್ತಿದ್ದೇನೆಂದು ಹೊಲತಿ ತಿಳೀತಲ್ಲ ಎಂದು ರೇಗಿತು :

‘ನಿನ್ನ ಮಗ ಸತ್ತಿದ್ದಾನೆ’.

ಗದ್ಗದ ಕಂಠದಿಂದ ಜಗನ್ನಾಥ ಹೇಳಿಬಿಟ್ಟ ಕೂಡಲೇ ತಂದೆ ತಾಯಿ ಇಬ್ಬರೂ ಗಟ್ಟಿಯಾಗಿ ಕಿರುಚಿಕೊಂಡು ಅಳಲು ಪ್ರಾರಂಭಿಸಿದರು. ಇದನ್ನು ಕೇಳಿ ಒಳಗಿದ್ದ ಹೊಲೆಯರೆಲ್ಲರೂ ಓಡಿ ಬಂದವು. ಬೆಂಕಿ ಬಿದ್ದಿದ್ದ ಮನೆಯಲ್ಲಿರುವಷ್ಟೇ ಕಷ್ಟ ತನ್ನ ಮನೆಯೊಳಗಿದ್ದಾಗಲೂ ಇವಕ್ಕೆ ಆಗುತ್ತಿರಬಹುದು – ಜಗನ್ನಾಥ ಒಳಗೆ ನಡೀರಿ ಎಂದು ಗದರಿಸಿದ್ದನ್ನು ಯಾರೂ ಕೇಳಲಿಲ್ಲ. ಸತ್ತ ಹುಡುಗನ ಸುತ್ತ ಗುಂಪುಗಟ್ಟಿ ಎಲ್ಲರೂ ಅತ್ತವು. ‘ಅವಕ್ಕೆ ಅಳಬೇಕೆನ್ನಿಸಿದರೆ ಅಳಲಿ’ ಎಂದು ಅಂಗಳದ ಮೂಲೆಯಲ್ಲಿ ಹೋಗಿ ನಿಂತ. ಡಾಕ್ಟರು ಹಚ್ಚಲೆಂದು ಒಂದಷ್ಟು ಮುಲಾಮನ್ನು ತಂದು ಚಾವಡಿಯ ಮೇಲೆ ಕೂತು ಅನಂತಕೃಷ್ಣರ ಜೊತೆ ಮಾತಾಡುತ್ತಿದ್ದರು. ನೀಲಕಂಠಸ್ವಾಮಿ ಮತ್ತು ರಂಗರಾವ್ ತಮ್ಮ ಜೊತೆ ಹುಡುಗರನ್ನು ಕಟ್ಟಿಕೊಂಡು ಯಾರರ್ಯಾರಿಗೆ ತೀರ ಹೆಚ್ಚು ಗಾಯವಾಗಿದೆಯೆಂದು ಹುಡುಕಿ ಡಾಕ್ಟರರ ಹತ್ತಿರ ಕರೆದುಕೊಂಡು ಹೋಗುತ್ತಿದ್ದರು. ಜಗನ್ನಾಥ ಒಬ್ಬನೇ ನಿಂತಿರುವುದು ಕಂಡು ಪಿಳ್ಳ ಅವನ ಹತ್ತಿರ ಬಂದ. ಅಡಿಗರೂ ಬಂದರು. ಸುಮ್ಮನೇ ನಿಂತರು. ಅವರ ಮೌನ ಅಸಹನೀಯವಾಗಿತ್ತು.

‘ಶಾಲಿಗ್ರಾಮ ಮುಟ್ಟಿದ್ರಿಂದ ಹೀಗೆಲ್ಲ ಆಯ್ತೂಂತ ನಂಬ್ತೀರಿ ತಾನೆ?’

ಜಗನ್ನಾಥ ಕ್ರೂರವಾಗಿ ಹೇಳಿ ಕತ್ತಲಲ್ಲಿ ದೂರದಲ್ಲಿ ನಿಂತಿದ್ದ ಪಿಳ್ಳನ ಮುಖ ನೋಡಿದ.

ಅಡಿಗರು ಮಾತಾಡಲಿಲ್ಲ.

‘ಹೇಳಿ. ಯಾಕೆ ಸುಮ್ಮನೆ ನಿಂತಿದೀರಿ’.

‘ಸಿಟ್ಟಿಗಿದು ಕಾಲ ಅಲ್ಲ ಜಗಣ್ಣ’.

ಅಡಿಗರ ಭೋಳೇತನದ ಮಾರ್ದವದಿಂದ ಜಗನ್ನಾಥನಿಗೆ ಹೇಸಿಗೆಯಾಯಿತು.

‘ನನ್ನ ಪ್ರಶ್ನೆಗೆ ಉತ್ತರ ಹೇಳಿ ಅಡಿಗರೆ. ನಿಮ್ಮಂಥೋರ ಮನಸ್ಸು ಹೇಗೆ ಕೆಲಸ ಮಾಡ್ತದೆ ಅನ್ನೋದೇ ನನಗೆ ಆಶ್ಚರ್ಯ.’

‘ಶಾಲಿಗ್ರಾಮ ಮುಟ್ಟಿದ್ರಿಂದ ಆ ಹುಡುಗ ಸಾಯಬೇಕಾಯ್ತು ಅನ್ನೋದು ಪರೋಕ್ಷವಾಗಿ ನಿಜವೆ. ಈ ಚಕ್ರದ ಚಲನೇಗೆ ನೀನು ಮೊದಲು ಕೈ ಹಚ್ಚದೇ ಇದ್ದಿದ್ರೆ ಎಲ್ಲ ಇರೋ ಹಾಗೆ ಇರ್ತಿತ್ತು – ಅಲ್ವ ?’

ಸುಬ್ರಾಯ ಅಡಿಗರ ಶಾಂತವಾದ ಮಾತಿನ ಧಾಟಿ ಕೇಳಿ ಜಗನ್ನಾಥನಿಗೆ ಮೈಯೆಲ್ಲ ಸಿಟ್ಟಿನಲ್ಲಿ ಉರಿಯಿತು.

‘ಅದ್ವೈತ ಮಾತಾಡೋಕೆ ನಾಚಿಕೆಯಾಗಲ್ವ ನಿಮಗೆ?’

‘ಬಾಳೆಹಣ್ಣು ತಿನ್ತ ಇರೋವಾಗ ಒಂದು ಮಗು ಸಾಯ್ತು ಅಂತ ನಿನಗೆ ದುಃಖವಾಗಬೇಕು ಸಿಟ್ಟಲ್ಲ.’

‘ಬ್ರಾಹ್ಮಣರ ಹುಡುಗ ಸತ್ತಿದ್ರೆ?’

‘ಚರ್ಚೆ ಬೇಡ ಜಗಣ್ಣ. ನಿನ್ನ ಜವಾಬ್ದಾರಿ ಏನೂಂತ ಯೋಚಿಸು.’

‘ನಿಮ್ಮ ಅನುಭಾವ, ನಿಮ್ಮ ಶಂಕರಾಚಾರ್ಯ ಎಲ್ಲ ಈ ವ್ಯವಸ್ಥೇನೆ ಎತ್ತಿ ಹಿಡಿಯೋ ಉಪಾಯ ಅಷ್ಟೆ.’

‘ನಿನ್ನ ಕೋಪದಿಂದ ನೀನು ಸುಳ್ಳಾಗ್ತ ಇದಿ ಅಷ್ಟೆ.’

ಕತ್ತಲಿನಲ್ಲಿ ಉರಿಯುತ್ತಿದ್ದ ಗ್ಯಾಸ್‌ಲೈಟ್‌ಗಳ ಶಬ್ದ, ಹೊಲೆಯರ ರೋದನ ಬೆರೆತು ಗುಡ್ಡದ ಮೇಲಿದ್ದ ಮನೆ ಸ್ಮಶಾನದಂತೆ ಕಂಡಿತು.

‘ಕಣ್ಣುನೆಟ್ಟು ನೋಡಬೇಕಾದ್ದನ್ನ ನೀನು ನೋಡ್ತ ಇಲ್ಲ ಜಗಣ್ಣ. ನಿನ್ನ ಮನಸ್ಸು ಕ್ಷುಬ್ದವಾಗಿದೆ.’

ಜಗನ್ನಾಥ ಮಾತಾಡಲಿಲ್ಲ. ಪಿಳ್ಳ ಏನು ಈಗ ಯೋಚಿಸುತ್ತಿದ್ದಾನೆಂದು ಅರಿಯಲು ಪ್ರಯತ್ನಿಸುತ್ತ ಅವನ ಮುಖ ನೋಡಿದ. ಅಡಿಗರು ಶಾಂತವಾಗಿ ಮಾತು ಮುಂದುವರಿಸಿದರು:

‘ದಕ್ಷಿಣೇಶ್ವರದಲ್ಲಿ ಒಬ್ಬ ಸಾಧು ಹೇಳ್ತ ಇದ್ದರು. ಮೈಮೇಲೆ ಎರಗಿ ಬಂದವನೊಬ್ಬನ ಮೇಲೆ ನೀನೂ ಎರಗಿ ಹೋದರೆ ಏನಾಗತ್ತೆ ಹೇಳು? ಮೈಕೈ ನೋವಾಗತ್ತೆ. ಅದರ ಬದಲು ಅವನು ಎರಗಿ ಬಂದ ದಿಕ್ಕಿನಲ್ಲಿ ನೀನೂ ಚಲಿಸು, ಹಾಗೇ ಸರಿದು ನಿಲ್ಲು, ಮುಖಾಮುಖಿ ನೂಕಕ್ಕೆ ಹೋಗಬೇಡ. ಆಗ ಅವ ಮುಕ್ಕರಿಸಿ ಬೀಳ್ತಾನೆ. ನೀನು ಉಳ್ಕೋತಿಯ, ಇದೇ ಚಲನೆಯ ಗುಟ್ಟು. ಹೊಲೇರು ತಮ್ಮ ಪಾಡಿಗೆ ತಾವು ಜೀವಿಸ್ಕೊಂಡಿದ್ರು, ಕುಡಕೊಂಡು ಕುಣಕೊಂಡು ಖುಷಿಯಾಗಿದ್ರು. ಒಗ್ಗಿಕೋತಾ ಹೋದ್ರು. ನಾನು ನಿನ್ನ ಮುಟ್ಟಲ್ಲ ಅಂದ್ರೆ, ನಾನೂ ನಿನ್ನ ಮುಟ್ಟಲ್ಲ ಅಂದ್ರು, ಹೀಗೆ ತಾಳಿಕೊಂಡ್ರು. ಒಗ್ಗೋಕ್ಕಿಂತ ತನ್ಮಯವಾಗಿ ನೋಡೋದು ದೊಡ್ಡದು. ಹಾಗೆ ನೋಡಿದಾಗ ಎಲ್ಲ ಲೀಲೆ – ಈ ಬೆಂಕಿ, ಈ ಹಿಂಸೆ, ಈ ಚಕ್ರದ ಚಲನೇಗೆ ಕೈ ಹಚ್ಚಿರೋ ನೀನು -ಎಲ್ಲ.’

ಎಷ್ಟೊಂದು ಶತಮಾನಗಳ ಮಸಲತ್ತು ಅಡಿಗರು ಯೋಚಿಸುವ ಕ್ರಮದಲ್ಲಿದೆಯೊ! ಜಗನ್ನಾಥನಿಗೆ ತುಂಬ ಬೇಸರವಾಗಿ ಕೇಳಿದ :

‘ನಿಮಗೆ ಕೋಪಾನೇ ಬರಲ್ವ ಅಡಿಗರೆ? ಹೊಲೇರು ಮಲಗಿರುವಾಗ ಬೆಂಕಿ ಹಾಕಿಸಿರೋ ಮನುಷ್ಯ ಒಂದು ಕ್ಷುದ್ರ ಜಂತು ಅಂತ ನಿಮಗೆ ಅನ್ನಿಸಲ್ವ? ಪ್ರಭು ಮಾಡಿರಬಹುದು ಈ ಕೆಲಸಾನ್ನ. ಅಥವಾ ಸೆಟ್ಟಿ, ಯಾರೊ? ಅಂತೂ ನಿಮಗೆ ಯಾಕೆ ಸಿಟ್ಟು ಬರಲ್ಲ ಹೇಳಿ? ಈ ಜಾತಿ ವ್ಯವಸ್ಥೇಂದ ನಿಮ್ಮ ಮನುಷ್ಯತ್ವಾನೇ ಮೊಟಕಾಗಿದೆ ಅಂತ ನಿಮಗೆ ಯಾಕೆ ಅನ್ನಿಸಲ್ಲ ಹೇಳಿ? ಪ್ರಾಣಿಗಳ ಹಂಗೆ ಒದ್ದಾಗ ಒದೆಸಿಕೊಂಡಿದ್ರೆ ಮಾತ್ರ ಹೊಲೇರು ನಿಮ್ಮ ಪ್ರೀತಿಗೆ ಪಾತ್ರರಾಗ್ತಾರಲ್ಲ ಇದು ಹೇಸಿಗೇಂತ ನೀವು ಯಾಕೆ ತಿಳಿಯಲ್ಲ ಹೇಳಿ? ನಿಮ್ಮ ಶಂಕರಾಚಾರ್ಯ, ಮಧ್ವಾಚಾರ್ಯ, ನಿಮ್ಮ ಪರಮಹಂಸ, ನಿಮ್ಮ ರಮಣ ಮಹರ್ಷಿ ಎಲ್ಲರೂ ಹೀಗೇ ನಿಮ್ಮ ಹಾಗೆ ಮುಕ್ಕಾದರು.’

‘ನಾನು ಯಾರು ಬಿಡು’ ಅಡಿಗರು ಸಿಟ್ಟಾಗದೆ ಹೇಳಿದರು: ‘ಹೊಟ್ಟೆಪಾಡಿಗಾಗಿ ಈ ವೇಷ ಹಾಕ್ಕೊಂಡಿದೇನೆ-ಅಷ್ಟೇ. ಸಿಟ್ಟು ಬಂದಾಗ ಹೆಂಡ್ತೀನ ಹೊಡೆಯೋ ನನಗೆ ಯಾವ ಮಾತಾಡೋ ಅಧಿಕಾರನೂ ಇಲ್ಲ. ಆದರೆ ನಿನ್ನ ಕೋಪ ಇದೆಯಲ್ಲ ಅದು ಕರ್ಪೂರಕ್ಕೆ ಹತ್ತಿದ ಬೆಂಕಿಯಂತೆ ಉರೀತಿದೆಯೋ, ಅಥವಾ ಒದ್ದೆ ಕಟ್ಟಿಗೆಗೆ ಹತ್ತಿದ ಬೆಂಕಿಯಂತೆ ನರಳ್ತ ಇದೆಯೋ ಅಂತ ನನಗೆ ಅನುಮಾನ-ಅಷ್ಟೆ.’

ಜಗನ್ನಾಥ ಒಂದು ಕ್ಷಣ ತಬ್ಬಿಬ್ಬಾದ.

ನನ್ನನ್ನ ಅಂತರ್ಮುಖಿ ಮಾಡಿಸಿ ಯಾವ ಕ್ರಿಯೇನೂ ಸಾಧ್ಯವಾಗದ ಹಾಗೆ ಮಾಡತ್ತೆ ಈ ಬಗೆಯ ವಿಚಾರ ಎಂದುಕೊಂಡು ಪಿಳ್ಳನನ್ನು ಮಾತಾಡಿಸಲು ಅವನ ಕಡೆ ನಡೆದ. ಸುಬ್ರಾಯ ಅಡಿಗರು ಅನಂತಕೃಷ್ಣ ಕೂತಲ್ಲಿಗೆ ಹೋದರು.

ಅಂಗಳದಲ್ಲಿ ಕೂತು ಹೊಲೆಯರು ಗೋಳಿಡುತ್ತಿದ್ದ ಕ್ರಮ ಕಂಡು ಜಗನ್ನಾಥನಿಗೆ ನಿರಾಸೆಯಾಯಿತು. ಎಷ್ಟು ನಿಜವಾದ ದುಃಖವಿತ್ತೊ ಅಷ್ಟೇ ತನ್ನ ಸಹಾನುಭೂತಿಯನ್ನು ದೋಚುವ ಉಪಾಯ ಅದರಲ್ಲಿತ್ತು. ಈ ಜನರನ್ನು ನಾನು ನಿಜವಾಗಿ ಪ್ರೀತಿಸಲಾರೆ-ಎನ್ನಿಸಿತು.

ನೀಲಕಂಠಸ್ವಾಮಿ ಆಪ್ತಾಲೋಚನೆಗೆಂದು ಜಗನ್ನಾಥನನ್ನು ಕರೆದ. ಏನೋ ಆತುರದಲ್ಲಿ ಅವನಿದ್ದಂತೆ ಕಂಡಿತು. ಗುಪ್ತಾಲೋಚನೆಯ ಪಿಸುಮಾತಿನ ಧಾಟಿಯಿಂದ ಮುಜುಗರವಾಯಿತು. ಬಗ್ಗಿ ಕಿವಿಯ ಹತ್ತಿರ ಬಂದು ಅವನು ಮಾತಾಡುವಾಗ ಅವನ ಬೆರಳುಗಳು ಆತಂಕದಲ್ಲಿ ಒಂದೊಂದೇ ತಲೆಗೂದಲನ್ನು ವಿಂಗಡಿಸುತ್ತ ಕೀಳುತ್ತಿರಬಹುದು. ಕತ್ತಲೆಯಲ್ಲಿ ನೀಲಕಂಠಸ್ವಾಮಿ ಹೇಳಿದ :

‘ಸಾರ್ ಇದನ್ನೊಂದು ಇಶ್ಯೂ ಮಾಡಬೇಕು. ನಾನು ಸೀದ ಶಿಮೊಗ್ಗಕ್ಕೆ ಹೋಗಿ ಬೆಂಗಳೂರಿಗೆ ಪ್ರೆಸ್ ಟೆಲಿಗ್ರಾಂ ಕಳಿಸ್ತೇನೆ. ಫ್ರಂಟ್ ಪೇಜ್ ನ್ಯೂಸಾಗತ್ತೆ. ನನ್ನ ಕ್ಯಾಮರಾದಿಂದ ಫೋಟೋ ತೆಕ್ಕೋತೇನೆ-ಆ ಹುಡುಗನ ಹೆಸರು ಚೌಡ ಅಂತೆ. ಚೌಡನ್ನ ನಮ್ಮ ಚಳುವಳಿಯ ಹೀರೋ ಮಾಡಬೇಕು’.

ಯಾವ ಆತಂಕವೂ ಇಲ್ಲದೆ ಖುಷಿಯಾಗಿ ಕ್ರಿಯೆಗೆ ಸನ್ನದ್ಧನಾದ ನೀಲಕಂಠಸ್ವಾಮಿಯ ಜೊತೆ ಹೀಗೆ ವ್ಯವಹರಿಸುವುದು ಅಶ್ಲೀಲ ಎನ್ನಿಸಿತು. ಎಲ್ಲರೂ ಸೇರಿ ಏನೋ ಅನ್ಯಾಯ ಮಾಡುತ್ತಿರುವಂತೆ; ಈ ಸಂದರ್ಭದಲ್ಲಿ ಎದುರಿಸಲೇ ಬೇಕಾದ ಯಾವುದೋ ಸತ್ಯವನ್ನು ತಾನು ಕಡೆಗಣಿಸಿ ಇನ್ನೇನೋ ಮಾಡುತ್ತಿದ್ದಂತೆ. ಆದರೆ ಯೋಚನೆ ಸಾಧ್ಯವಾಗದಂತೆ ನೀಲಕಂಠಸ್ವಾಮಿ ತೀವ್ರವಾಗಿ ಪಿಸುಗುಡುತ್ತಲೇ ಹೋದ:

‘ನಮ್ಮ ವೈರಿಗಳಿಗೆ ನಿಮ್ಮ ಸೂಕ್ಷ್ಮ ಇಲ್ಲ ಸಾರ್. ಬೆಂಕಿ ಹಚ್ತಾರೆ. ಕೊಲ್ತಾರೆ. ಹೆದರಿಸ್ತಾರೆ. ನಾವು ಕೈಕಟ್ಟಿ ಕೂರೋದು ಸಾಧ್ಯವಿಲ್ಲ. ಜನರ ಕಾನ್‌ಶನ್ಸ್‌ನ ಡಿಸ್ಟರ‍್ಬ್‌ಮಾಡ್ಬೇಕು. ಅದಕ್ಕಾಗಿ ನ್ಯೂಸ್ ಪೇಪರ್ರು, ರೇಡಿಯೋ ಎಲ್ಲವದನ್ನೂ ಉಪಯೋಗಿಸ್ಕೋಬೇಕು’.

ಗೊತ್ತು. ಆದರೆ ವಿಕಾರವಾಗಿ ಸತ್ತು ಬಿದ್ದಿರುವ ಹುಡುಗ? ನಾನು ಹೊರಬೇಕಾದ ಜವಾಬ್ದಾರಿ? ಅಳುವ ಈ ಅತಂತ್ರ ಮುಗ್ಧರು? ಇವೆಲ್ಲವನ್ನೂ ತನ್ನ ಅಂತರಂಗದಲ್ಲಿ ಒಳಪಡಿಸಿಕೊಂಡು ಕಣ್ಣಿಟ್ಟು ನೋಡಿ ಹುಟ್ಟಬಹುದಾದ ಪರಿಶುದ್ಧ ಕ್ರಿಯೆಗೆ ಮೌನ ಬೇಕಿತ್ತು. ಏಕಾಂತದ ಅಗತ್ಯವಿತ್ತು. ಆದರೆ ಇನ್ನುಮುಂದೆ ಏಕಾಂತವಿಲ್ಲ. ತಾಯಿ ಕೊಟ್ಟ ಶಾಲಿನ ಮೃದುವಿನಲ್ಲಿ ಕಾಲುಮಡಚಿ ಮಲಗಿ ನನ್ನೊಳಗೇ ನಾನು ಸುತ್ತಿಕೊಳ್ಳುವ ಆಪ್ತತೆಯಿಂದ ವರ್ಜ್ಯನಾದೆ. ಆಗಲಿ ಎನ್ನಲೆ, ಬೇಡ ಎನ್ನಲೆ, ಬೇಡ ಎಂದು ಅಡಿಗರ ಜೋಡಿ ಚಾವಡಿಯಲ್ಲಿ ಕೂತು ಧ್ಯಾನಿಸಲೆ – ಹೊಲತಿಯ ರೋದನ ಅಸಹ್ಯವಾಗಿತ್ತು. ‘ಆಗಲಿ’ ಎಂದ.

ನೀಲಕಂಠಸ್ವಾಮಿ ಮಹಡಿಗೆ ಓಡಿಹೋಗಿ ಕ್ಯಾಮರಾ ತಂದ. ರಂಗರಾವ್ ಎಲ್ಲ ಗ್ಯಾಸ್‌ಲೈಟ್‌ಗಳನ್ನೂ ತಂದು ಹೊಲೆಯರ ಸುತ್ತ ಇಟ್ಟ. ಕತ್ತಲಿನ ರಾತ್ರೆಯಲ್ಲಿ ಅಂಗಳದ ಒಂದು ಜಾಗ ಕೃತಕವಾದ ಬೆಳಕಿನಲ್ಲಿ ಅರಳಿಕೊಂಡಿತು. ಲಂಗೋಟಿ ತೊಟ್ಟ ಬೆತ್ತಲೆ ಹೊಲೆಯರು ಈ ಬೆಳಕಿನಲ್ಲಿ. ಕಪ್ಪು ಪೊದೆಗಳ ಹಾಗೆ ಅವರ ಕೂದಲು. ನೀಲಕಂಠಸ್ವಾಮಿ ಈ ವಿಕಾರವನ್ನು, ಈ ಸಂಕಟವನ್ನು ಅತ್ಯಂತ ಸಮರ್ಪಕವಾದ ಕೋನಗಳಲ್ಲಿ ನಿಂತು ಫ್ಯ್ಲಾಶ್ ಬಲ್ಬುಗಳ ಮಿಂಚಿನಲ್ಲಿ ಹಿಡಿಯುತ್ತ ಓಡಾಡಿದ. ಹೊಲೆಯರನ್ನು ಪುಸಲಾಯಿಸಿ ಬೇರೆ ಬೇರೆ ರೀತಿಯಲ್ಲಿ ಕೂರಿಸಿ, ಅವರು ಅಳುವುದಕ್ಕೆ ಕಾದು ಕ್ಯಾಮರಾ ಕ್ಲಿಕ್ ಮಾಡಿದ. ತನ್ನನ್ನು ಕರೆದ. ‘ಚೌಡನಿಗೆ ಎಲ್ಲೆಲ್ಲಿ ಸುಟ್ಟಿದೆ ನೋಡಿ ಹೇಳಿ ಸಾರ್. ವಿವರಗಳನ್ನು ವೈರ್ ಮಾಡಬೇಕು’ ಎಂದ. ಜಗನ್ನಾಥ ಚೌಡನ ಹೆಣವನ್ನು ಪರೀಕ್ಷಿಸುತ್ತಿದ್ದಾಗ ಅವನ ಮುಖ ಉದ್ವಿಗ್ನವಾದ ಘಳಿಗೆಗೆ ಕಾದು ಕ್ಯಾಮರಾ ಕ್ಲಿಕ್ ಮಾಡಿದ. ಬಲ್ಬು ಮಿಂಚಿದ್ದೆ ಜಗನ್ನಾಥನಿಗೆ ಹೇಸಿಗೆಯಾಯಿತು. ಸಿಟ್ಟಿನಿಂದ ಎದ್ದು ನಿಂತ ಜಗನ್ನಾಥನನ್ನು ನೋಡಿ ನೀಲಕಂಠಸ್ವಾಮಿ ಆಪ್ತನಾಗಿ ನಕ್ಕ.

‘ಅದೂ ಬೇಕು ಸಾರ್’.

* * *

ಕಾರು ಬಿಟ್ಟುಕೊಂಡು ನೀಲಕಂಠಸ್ವಾಮಿ ಮತ್ತು ರಂಗರಾವ್ ಶಿವಮೊಗ್ಗಕ್ಕೆ ಹೋದರು, ಅನಂತಕೃಷ್ಣ ಇಬ್ಬರನ್ನೂ ಹೊಗಳಿದರು: ‘ನೀಲಕಂಠಸ್ವಾಮಿ ಮುಂದಿನ ಸಾರಿ ಚುನಾವಣೇಲಿ ಖಂಡಿತ ಗೆಲ್ತಾನೆ. ಅವನ ಕ್ಷೇತ್ರವಾದ ನಂಜನಗೂಡಿನಲ್ಲಿ ಷೆಡ್ಯೂಲ್ಡ್ ಕ್ಯಾಸ್ಟಿನವರ ಸೈಝಬಲ್ ಓಟಿದೆ’ ಎಂದರು.

ಶ್ರೀಪತಿರಾಯರು ಮನೆಯಿಂದ ಬಂದದ್ದೆ ಚೌಡನ ಹೆಣದ ವಿಲೆವಾರಿಗೆ ವ್ಯವಸ್ಥೆ ಮಾಡಿದರು. ಮಾರನೇ ದಿನವೇ ಬೇರೆ ಗುಡಿಗಳನ್ನು ಕಟ್ಟಿಸುವುದಕ್ಕೆ ಏನೇನು ಬೇಕು ಲೆಖ್ಖ ಹಾಕಿದರು. ಜಗನ್ನಾಥನ ಮನೆಯಲ್ಲಿ ಸಾಕಷ್ಟು ಗಳ, ನಾಟ ಇತ್ತು. ಹುಲ್ಲು ಹೊಚ್ಚೋದು ಅಪಾಯ. ಬಡ್ಡೀಮಗ ಪ್ರಭುವಿನಿಂದಲೇ ಜಿಂಕ್ಸೀಟು ಕೊಂಡುತರಬೇಕು, ಅವನೇ ಬೆಂಕಿ ಹಾಕಿಸಿ ಹೇಗೆ ಲಾಭ ಮಾಡಿಕೊಂಡ ನೋಡಿ. ಶಿಮೊಗ್ಗದಿಂದ ತರಿಸೋಣಾಂದ್ರೂ ಲಾರಿ ಪ್ರಭುವಿಂದೆ. ಅವನು ಬೆಂಕಿ ಹಾಕಿಸಿದ್ನೊ, ಅಥವಾ ಜನಾರ್ಧನ ಸೆಟ್ಟಿ ಹಾಕಿಸಿದ್ನೊ ಈಗ್ಯಾಕೆ? ಸತ್ತ ಹುಡುಗ ಸತ್ತ.

ಶ್ರೀಪತಿರಾಯರ ಮಾತು ಕೇಳಿಸಿಕೊಳ್ಳುತ್ತ ಜಗನ್ನಾಥ ಚಾವಡಿಯ ಮೇಲೆ ಕೂತಿದ್ದ. ಅನಂತಕೃಷ್ಣರ ಜೊತೆ ಕೂತಿದ್ದ ಅಡಿಗರು ಮೃದುವಾಗಿ ಹೇಳಿದರು :

‘ಅಲ್ಲೋ ಜಗಣ್ಣ, ಈ ರಾಜಕೀಯದ ಜನ ವಿಚಿತ್ರವಪ್ಪ. ನಿಮ್ಮ ನೀಲಕಂಠಸ್ವಾಮೀನ್ನ ನೋಡು…’

ಜಗನ್ನಾಥನಿಗೆ ನೋವಾಯಿತು.

‘ಅಡಿಗರೆ, ನಿಮ್ಮ ಅನುಭಾವದ ಹಿಂದೆ ದೇವಸ್ಥಾನವಿದೆ, ದುಡ್ಡಿದೆ, ಮೂಢನಂಬಿಕೆಯಿದೆ, ಅಪರಾತ್ರೀಲಿ ಬೆಂಕಿ ಹಚ್ಚಿ ಮಕ್ಕಳನ್ನ ಕೊಲ್ಲೋರಿದಾರೆ. ಹಾಗೆ ನನ್ನಂಥವರ ಹಿಂದೆ ಕುಟಿಲ ರಾಜಕಾರಣ ಮಾಡೋರು ಇದಾರೆ. ಆದರೆ ಇವುಗಳ ನಡುವೆ ನನಗೇನು ಅನ್ನಿಸತ್ತೆ ಹೇಳಲ? ನಿಮ್ಮಂಥವರ ಅಲೌಕಿಕ ದುಃಖಕ್ಕಿಂತ ಈಗ ನೀಲಕಂಠಸ್ವಾಮಿ ಫೋಟೋ ಹಿಡಿದು ಮಾಡ್ತಿರೋ ಕೆಲಸವಿದೆಯಲ್ಲ – ಹೆಚ್ಚು ಅರ್ಥಪೂರ್ಣ.’

ಹೇಳಿದ ಮಾತಿನಲ್ಲಿ ಅನುಮಾನವಿದ್ದರೂ ಅದನ್ನೊಂದು ಕ್ಷಣ ಗೆದ್ದು ಜಗನ್ನಾಥ ಮಾತಾಡಿದ್ದ.

ಅಡಿಗರು ಉತ್ತರ ಕೊಡಲಿಲ್ಲ. ಸುಮ್ಮನಾದರು. ಅನಂತಕೃಷ್ಣ ಗಾಂಧಿಯವರ means ಮತ್ತು ends ಬಗೆಗಿನ ತತ್ವ ಹೇಳಿದರು. ಇನ್ನೇನು ಸುರ್ಯೋದಯವಾಗುವ ಹೊತ್ತು ಸಮೀಪಿಸುತ್ತಿರುವುದನ್ನು ಕಂಡು ಅಮಾವಾಸ್ಯೆಯ ಬೆಳಗಿನ ಸ್ನಾನಕ್ಕೆಂದು ಚೊಂಬು ಹಿಡಿದು ಹೊಳೆಗೆ ಹೊರಟ ಅಡಿಗರು ನಿಂತು ಒಂದು ಕಥೆ ಹೇಳಿದರು :

‘ಬ್ರಾಹ್ಮಣರು ನೀತಿಗೆಟ್ಟಿರೋದೇ ನಮ್ಮ ಸಮಾಜ ಈ ಸ್ಥಿತಿಗೆ ಬಂದಿದೇನ್ನೋಕೆ ಒಂದು ಕಥೆ ಹೇಳ್ತೀನಿ. ಗುಜರಾತ್‌ನಲ್ಲಿ ಒಬ್ಬ ಬೈರಾಗಿ ನನಗೆ ಹೇಳಿದ್ದು. ಒಂದಾನೊಂದು ಕಾಲದಲ್ಲಿ ಒಂದು ಅಗ್ರಹಾರವಿತ್ತಂತೆ. ಅಲ್ಲಿ ನಿಷ್ಠಾವಂತರಾದ ಬ್ರಾಹ್ಮಣರು ವಾಸಮಾಡಿಕೊಂಡಿದ್ರಂತೆ. ಒಬ್ಬೊಬ್ಬ ಬ್ರಾಹ್ಮಣನ ಮನೇಲೂ ಒಂದೊಂದು ಯಜ್ಞಕುಂಡ, ಪ್ರತಿನಿತ್ಯ ಯಾಗ ಮಾಡಿಯೇ ಅವರ ಊಟ. ಒಂದು ದಿನ ಏನಾಯ್ತು? ಒಬ್ಬ ಹಿರಿಯ ಬ್ರಾಹ್ಮಣ ತನ್ನ ಮಗನಿಗೆ ಮದುವೆ ಮಾಡಿ ಮನೆ ತುಂಬಿಸಿಕೊಂಡಿದ್ದ. ಸೊಸೆ ಚಿಕ್ಕವಳು, ಅವತ್ತು ತಾನೆ ಮನೆಗೆ ಬಂದವಳು. ರಾತ್ರಿ ಉಚ್ಚೆಗೆ ಅವಸರವಾಗಿ ಎದ್ದಳು. ಹೊಸ ಮನೆ, ಹೊಸ ಜಾಗ, ಹಿತ್ತಲಿಗೆ ಹೋಗ್ಲಿಕೆ ಭಯ, ಆದ್ರಿಂದ ಉರೀತಿರೋ ಯಜ್ಞ ಕುಂಡದಲ್ಲೇ ಉಚ್ಚೆಹೊಯ್ದು ಬಿಟ್ಟು ಯಾರಿಗೂ ಹೇಳದೆ ಹೋಗಿ ಮಲಗಿಕೊಂಡಳು. ಬ್ರಾಹ್ಮಣರು ಬೆಳಿಗ್ಗೆ ಎದ್ದು ನೋಡ್ತಾನೆ – ಯಜ್ಞಕುಂಡದಲ್ಲೊಂದು ಬಂಗಾರದ ಗಟ್ಟಿ! ಅವನ ಮನಸ್ಸಿಗೆ ತುಂಬ ಕ್ಷೋಭೆಯಾಯ್ತು. ಪವಿತ್ರವಾದ ಯಜ್ಞಕುಂಡದಲ್ಲೊಂದು ಬಂಗಾರದ ಇರೋದೂಂದ್ರೇನು? ಎಲ್ಲೋ ಮೈಲಿಗೆಯಾಗಿದೇಂತ ಅವ ತುಂಬ ಸಂಕಟಪಟ್ಟ. ಆಗ ಸೊಸೆ ಹೆದರಿಕೋತ ಮಾವನ ಹತ್ರ ಬಂದು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತಾನು ಹೀಗೆ ಉಚ್ಚೆ ಹೊಯ್ದುಬಿಟ್ಟೆ ಅನ್ನೋದನ್ನ ಹೇಳಿದ್ದು. ಮಾವ ಒಳ್ಳೇವನು. ಪರಾವಾಯಿಲ್ಲ ಬಿಡು ಎಂದು ಧರ್ಮಶಾಸ್ತ್ರಾನ್ನ ಹುಡುಕಿದ. ಈ ಪಾಪಕ್ಕೆ ಪರಿಹಾರ ಸಿಕ್ಕಿತು. ಆ ಪ್ರಕಾರವಾಗಿ ಯಜ್ಞಕುಂಡವನ್ನು ಶುದ್ಧಮಾಡಿ ಮತ್ತೆ ತನ್ನ ವಿಧಿಗಳನ್ನು ಶುರುಮಾಡಿದ್ದೇ ಅವನಿಗೊಂದು ವಿಚಾರ ಹೊಳೀತು. ಅಲ್ಲ-ಯಜ್ಞಕುಂಡ ಅಪವಿತ್ರವಾದರೆ ಹೇಗಿದ್ರೂ ಅದಕ್ಕೆ ಪರಿಹಾರವಿದೆ. ಅಂದಮೇಲೆ-ಸೊಸೇನ್ನ ಕರ್ದು ಹೇಳಿದ. ನಾಳೇನೂ ನೀನು ಉಚ್ಚೆ ಹೊಯ್ಯಿ ಅಂತ. ಆಯ್ತು? ಪಕ್ಕದ ಮನೆ ಬ್ರಾಹ್ಮಣನಿಗಿದು ಗೊತ್ತಾಯ್ತು. ಅವನು ತನ್ನ ಸೊಸೇಗೆ ಹೇಳ್ದ. ಹೇಗೂ ಶಾಸ್ತ್ರ ಸಮ್ಮತವಾದ ಪರಿಹಾರ ಇದೆಯಲ್ಲ – ನೀನೂ ಉಚ್ಚೆ ಹೊಯ್ಯಿ ಅಂತ. ಹೀಗೇನೆ ಮನೇಂದ ಮನೇಗೆ ಸುದ್ದಿ ಹರಡಿ ಎಲ್ರೂ ಈ ಉದ್ಯೋಗ ಪ್ರಾರಂಭಿಸಿದ್ರು. ಆದ್ರೆ ಒಬ್ಬ ಬಡ ಬ್ರಾಹ್ಮಣ ಮಾತ್ರ ಇದಕ್ಕೊಪ್ಪಲಿಲ್ಲ. ಹೆಂಡ್ತಿ ಒತ್ತಾಯ ಮಾಡಿದ್ರೂ ಕೇಳದೆ ಅವ ಅಗ್ರಹಾರಾನ್ನೇ ಬಿಟ್ಟು ಹೋದ. ಅವನು ಮನೆ ಖಾಲಿ ಮಾಡಿದ್ದೇ ಪಕ್ಕದ ಮನೆ ಬ್ರಾಹ್ಮಣ ಯೋಚಿಸ್ದ. ಅಲ್ಲ – ನನ್ನ ಒಂದು ಯಜ್ಞಕುಂಡದಲ್ಲಿ ಒಂದು ಗಟ್ಟಿ ಬಂಗಾರ ಸಿಗೋ ಹಾಗಿದ್ರೆ ಅವನ ಯಜ್ಞಕುಂಡಾನ್ನೂ ನಾನು ವಶಪಡಿಸಿಕೊಂಡು ಎರಡು ಗಟ್ಟಿ ಬಂಗಾರ ಸಂಪಾದಿಸಿ ಎಲ್ಲರಿಗಿಂತ ಯಾಕೆ ಹೆಚ್ಚು ಶ್ರೀಮಂತ ಆಗಬಾರ್ದು ಅಂತ – ಆಯ್ತ? ಎಲ್ಲ ಬ್ರಾಹ್ಮಣರಿಗೂ ಆಗ ಎಲ್ಲ ಯಜ್ಞಕುಂಡಗಳೂ ತನಗೊಬ್ಬನಿಗೇ ಬೇಕು ಅನ್ನೊ ದುರಾಸೆ ಪ್ರಾರಂಭವಾಯ್ತು. ಕೊನೇಲಿ ಇಡೀ ಅಗ್ರಹಾರ ಬೆಂಕೀಲಿ ಉರಿದು ನಾಶವಾಯ್ತು’.

ಒಟ್ಟು ಸನ್ನಿವೇಶಕ್ಕೂ ತನ್ನ ಕಥೆಗೂ ಏನು ಸಂಬಂಧವೆಂಬುದು ಅಡಿಗರಿಗೆ ಅನುಮಾನವಾಗಿರಬೇಕು. ಇದ್ದಕ್ಕಿದ್ದಂತೆ ‘ಸ್ನಾನ ಮಾಡಿ ಬರುತ್ತೇನೆ’ ಎಂದು ನಡೆದುಬಿಟ್ಟರು.