ಪೂರ್ವ ದಿಕ್ಕಿಗೆ ನಡೆದರೆ ಸೀಬಿನಕೆರೆ, ಅದರಾಚೆ ವಿದ್ಯಾಮಂತ್ರಿಗಳು ಉದ್ಘಾಟಿಸಿದ ಹೊಸ ಬಡಾವಣೆ ತಾಷ್ಕೆಂಟ್‌ಪುರ. ಅದಕ್ಕೆ ಮೊದಲು ಸಿಗುವ ಮಂಜುನಾಥ ರೈ‌ಮಿಲ್ಲಿನ ಹಿಂದಿದ್ದ ಗದ್ದೆಯ ಒಳದಾರಿಯಲ್ಲಿ ನಡೆದು ಹೋದರೆ ರಾಘವ ಪುರಾಣಿಕರ ಮನೆಗೆ ಹತ್ತಿರ. ಜೋರಾಗಿ ನಡೆದರೆ ಅರ್ಧ ಗಂಟೆ ಸಾಕು.

ಕಂಡವರನ್ನೆಲ್ಲ ಮಾತಾಡಿಸುತ್ತ ಯೋಗಕ್ಷೇಮ ವಿಚಾರಿಸುತ್ತ ರಾಯರು ನಡೆದರು. ಈ ಸ್ಥಳದಲ್ಲಿ ನಿಜವಾದ ಬೇರುಗಳಿರುವ ಮನುಷ್ಯನೆಂದರೆ ಅವರೆ – ನಾನಲ್ಲ. ಕೊಡೆಯನ್ನು ಕಂಕುಳಲ್ಲಿ ಸಿಕ್ಕಿಸಿ ನಡೆದಿದ್ದ ರೈತನೊಬ್ಬನನ್ನು ‘ನಾನು ಬರೆದುಕೊಟ್ಟ ಅರ್ಜೀನ ಅಮಲ್ದಾರ್ರಿಗೆ ಕೊಟ್ಟೆಯ? ಏನೆಂದರು?’ ಎಂದು ಕೇಳಿದರು. ‘ಮತ್ತೆ ಯಾಕೆ ಬರಬೇಕಂತೆ? ಕೈಬಿಸಿ ಮಾಡದೆ ಏನೂ ನಡೆಯಲ್ಲ’ ಎಂದು ರೇಗಿದರು. ಒಂಟಿಗಳನ್ನು ಹಾಕಿದ್ದ ಯುವಕನೊಬ್ಬನಿಗೆ, ‘ತಂದೆ ಹೇಗಿದ್ದಾರೋ? ಅಂತೋಣಿ ಡಾಕ್ಟರನ್ನ ಮನೆಗೆ ಕರೆದುಕೊಂಡುಹೋಗಿ ತೋರಿಸಯ್ಯ’ ಎಂದರು. ಕಂಡಕೂಡಲೇ ಜೋಡುಗಳನ್ನು ರಸ್ತೆಯ ಮೇಲೆ ಕಳಚಿ ಬರಿಗಾಲಲ್ಲಿ ನಿಂತುಕೈ ಮುಗಿದವನೊಬ್ಬನಿಗೆ, ‘ಆಮೇಲೆ ನೋಡು, ಶಿವಮೊಗ್ಗದಲ್ಲಿ ಲಾಯರಿಗೆ ಕಾಗದ ಕೊಡ್ತೇನೆ, ಮಂಜುನಾಥನ ಹುಯ್ಲಿಗೆ ಸಾಬರೇನೂ ಜಗ್ಗಲ್ಲಾಂತ ನಿಮಗೆ ಗೊತ್ತಿಲ್ವ?’ ಎಂದು ನಕ್ಕರು. ಮಕ್ಕಳು, ಹೆಂಗಸರು ಎಲ್ಲ ಗೊತ್ತು ರಾಯರಿಗೆ. ಅವರ ಹೆಸರು, ಅವರ ಗೋತ್ರ, ಅವರ ಗುಪ್ತ ಕಾಹಿಲೆಗಳು, ಸಂಸಾರ ತಾಪತ್ರಯಗಳು – ಎಲ್ಲ. ಹೀಗೆ ಜೀವನದ ವಿವರಗಳಲ್ಲಿ ತೀರಾ ಆಪ್ತವಾಗಿ ತೊಡಗಿಬಿಟ್ಟಿದ್ದರಿಂದ ಯಾವ ಬದಲಾವಣೆಯೂ ವಿಫಲವೆನ್ನುವ ತೀರ್ಮಾನಕ್ಕೆ ರಾಯರು ಬಂದಿರಬಹುದು.

ಮುಸ್ಲಿಮರಿದ್ದ ಬೀದಿಯಲ್ಲಿ ನಡೆಯುತ್ತಿದ್ದಾಗ ಜಗನ್ನಾಥನಿಗೆ ಇನ್ನೊಂದು ಊರಿಗೇ ಬಂದಂತೆನ್ನಿಸಿತು. ಕಲಾಯ ಮಾಡುತ್ತಲೋ, ಬೀಡಿಗಳನ್ನು ಕಟ್ಟುತ್ತಲೋ ಮನೆಯ ಎದುರು ಕೂತ ಚೌಕುಳಿ ಮುಂಡುಗಳನ್ನುಟ್ಟ ಸಾಬರು ಸಲಾಂ ಸಾಬ್ ಎಂದು ಎದ್ದು ನಿಂತರು. ಚರಂಡಿಗಳಲ್ಲಿ ಕೋಳಿಗಳು; ಕೆಲವು ಮನೆಗಳ ಎದುರು ತಂತಿಯಲ್ಲಿ ಮಾಡಿದ ಬುಟ್ಟಿಯಲ್ಲಿ ತೂಗು ಹಾಕಿದ ಮೊಟ್ಟೆಗಳು. ‘ನಮ್ಮ ಹುಡುಗರೂ ಈಚೆಗೆ ಕದ್ದು ಮೊಟ್ಟೆ ತಿನ್ನೋದೂ ಉಂಟು’ ಎಂದು ರಾಯರು ನಕ್ಕರು.

‘ಹೊಲೆಯರಿಗೆ ಅಕ್ಷರಾಭ್ಯಾಸ ಮಾಡಿಸ್ತೀದೀನಿ ಅಂದ್ಯಲ್ಲ ಜಗಣ್ಣ. ನೀನಾಗಲೀ ಅವರಾಗಲೀ ಒಂದೇ ಒಂದು ಸಾರಿಯಾದರೂ, ಗೊತ್ತಿಲ್ದೇನೇ ಆದರೂ ಮುಟ್ಟಿಕೊಂಡದ್ದಿದೆಯ ಹೇಳು?’

ಜಗನ್ನಾಥ ‘ಇಲ್ಲ’ ಎಂದ.

‘ಅದೇ ನಾನು ಹೇಳೋದು. ನೀನು ಅವರನ್ನ ಮುಟ್ಟುತೀಯೋ ಇಲ್ಲವೋ ಅನ್ನೋದು ಪ್ರಶ್ನೆಯಲ್ಲ. ಅವರಾಗೇ ನಿನ್ನನ್ನ ಮುಟ್ಟುತ್ತಾರೊ, ಮುಟ್ಟೋ ಆಸೆ ಅವರಿಗೆ ಹುಟ್ಟಿದೆಯೊ ಅನ್ನೋದೇ ಮುಖ್ಯ. ನಿನಗೆ ಅವರನ್ನ ಮುಟ್ಟಬೇಕೂಂತ ಅನ್ನಿಸೋದು ಸಹಜ. ನೀನು ವಿದ್ಯಾವಂತ. ನಿನ್ನ ಪ್ರಜ್ಞೆ ಬೆಳೆದಿದೆ. ಎಲ್ಲ ಸೌಭಾಗ್ಯಕ್ಕೂ ಬಾಧ್ಯನಾದ ಮೇಲೆ ನಿನಗೆ ಈ ಆದರ್ಶವಾದ ಹೊಸದೊಂದು ರುಚಿಯಾಗಿದೆ. ನಿನಗೆ ಅದು ಲಕ್ಷುರಿ, ಆದರೆ ಅವರಿಗೆ?’

ಜಗನ್ನಾಥನಿಗೆ ರಾಯರು ನಿಜವಾಗಿ ತನ್ನ ಹತ್ತಿರ ಮಾತಾಡುತ್ತಿದ್ದಾರೆಂದು ಸಂತೋಷವಾಯ್ತು.

‘ನಿಜ ರಾಯರೆ. ಅವರಿಗೆ ಹಾಗೆ ಅನ್ನಿಸಿದ ದಿನ ನಾನು ನಿಜವಾಗಿ ಗೆದ್ದಂತೆ. ಅವರ ಪ್ರಜ್ಞೇಲಿ ಅಂಥ ಒಂದು ಆಸ್ಫೋಟ ಆಗಬೇಕೂಂತ್ಲೆ ನಾನು ಪ್ರಯತ್ನ ಪಡ್ತಿದೀನಿ. ಯಾಕೆಂದರೆ ಹೊಲೇರು ಒಂದು ಹೆಜ್ಜೆ ಮುಂದಿಡೋ ಧೈರ್ಯ ಮಾಡಿದ ದಿನ-’

‘ಬರೀ ನಿನ್ನ ಪ್ರಯತ್ನದಿಂದ ಅದು ಸಾಧ್ಯವಾಗಲ್ಲ ಜಗಣ್ಣ.’

ಜಗನ್ನಾಥ ಮಾತಾಡಲಿಲ್ಲ. ರಾಯರು ಹುರುಪಿನಿಂದ ನಡೆಯುತ್ತ ಹೇಳಿದರು :

‘ಈ ರಾಘವ ಪುರಾಣಿಕರೇ ನನಗೆ ಇಂಗರ್‌ಸಾಲ್‌ನ ಪುಸ್ತಕಗಳನ್ನ ಮೊದಲು ಕೊಟ್ಟವ್ರು’.

ಚಳಿಗಾಲದ ಬಿಸಿಲಿನಲ್ಲಿ ನಡೆಯುತ್ತ ಜಗನ್ನಾಥನಿಗೂ ಖುಷಿಯಾಯಿತು. ಮನಸ್ಸು ನಿರಂಬಳವಾಯಿತು. ಕಣ್ಣು ಹಾಯಿಸಿದಲ್ಲಿ ಹೂಬಿಟ್ಟ ಮಾವಿನ ಮರಗಳು. ತೆಂಗಿನ ಗಿಡಗಳು. ಕಾಡಿನ ಯಾವುದೋ ಗುಪ್ತ ಸಂಧಿಯಲ್ಲಿ ಘಮಘಮಿಸುತ್ತಿದ್ದ ಕೇದಗೆಯನ್ನು ಮುಡಿದು ಎದುರು ಬಂದ ಹೆಗ್ಗಡಿತಿ; ಬುಗುಡಿ, ಕೆನ್ನೆಸರಪಳಿ, ಹಚ್ಚೆ ಕುಚ್ಚಿದ ಕೈಗಳ, ಬರಿಗಾಲಿನಲ್ಲಿ ದೇವಸ್ಥಾನಕ್ಕೆ ವೇಗವಾಗಿ ನಡೆಯುತ್ತಿರುವ ಚೆಲುವೆ. ಶ್ರೀಮಂತ ಒಕ್ಕಲಿಗರ ಮನೆಗಳ ಪಾಗಾರಗಳ ಒಳಗೆ ಬೆಳೆದ ಪಾರಿಜಾತ ಸಂಪಿಗೆ ಮರಗಳು. ಶತಮಾನಗಳಿಂದ ಒಂದೇ ರೀತಿ ಹರಿಯುತ್ತಿರುವ ಜೀವನಕ್ರಮದಲ್ಲೂ ಸೂಕ್ಷ್ಮ ಕಣ್ಣಿಗೆ ದಿನದಿನವೂ ಹೊಸದು ಕಾಣಬಹುದಲ್ಲವೆ ಎಂದು ಜಗನ್ನಾಥ ಯೋಚಿಸಿದ. ಯಾರದೋ ಮನೆಯಲ್ಲಿ ಈಗೊಂದು ಮಗು ಹುಟ್ಟುತ್ತಿರಬಹುದು, ಯಾರೋ ಸತ್ತಿರಬಹುದು; ಯಾವಳೋ ಗರ್ಭಿಣಿಯ ಹೊಟ್ಟೆಯಲ್ಲಿ ಶಿಶು ಚಲಿಸುತ್ತ ಒದೆಯುತ್ತಿರಬಹುದು. ಇಲ್ಲೊಂದು ಗುಲಾಬಿ ಅರಳಿ ನಿಂತು ಗಟ್ಟಿಯಾದ ತೊಟ್ಟಿನಲ್ಲಿ ಹಗುರಾಗಿ ತೂಗುತ್ತಿದೆ. ನಾಲ್ಕು ಕಾಲುಗಳನ್ನು ಬಿಸಿಲಿಗೆತ್ತಿ ನಾಯಿ ಹುಳಿ ಹಿಡಿಯುವ ಆಟ ಆಡುತ್ತಿದೆ. ಕೋಲನ್ನು ಕಾಲಿನ ಸಂದಿಗೆ ಸಿಕ್ಕಿಸಿ ಹುಡುಗನೊಬ್ಬ ಮೋಟಾರ್ ಬಿಡುತ್ತಿದ್ದಾನೆ. ಊಟಕ್ಕೆ ಬರಲೊಲ್ಲದ ಮಗನನ್ನು ಕಿರಿಕಿರಿ ಮುಖದ ತಾಯಿ ಬಯ್ಯುತ್ತ ನಿಂತಿದ್ದಾಳೆ. ಮಾವಿನ ಹೂಗಳಿಗೆ ಜೇನು ಮುತ್ತಿವೆ. ಅಡಿಕೆ ತೋಟಕ್ಕಾಗಿ ಇನ್ನೂ ಕಡಿಯದ ಸಮೃದ್ಧ ಕಾಡುಗಳಲ್ಲಿ ಜೇನಿನ ಗೂಡುಗಳು ನೇತುಬಿದ್ದಿವೆ. ಮನುಷ್ಯನ ಕಣ್ಣಿಗೆ ಬೀಳದ ಮೂಲೆಗಳಲ್ಲಿ ತವಕದ ಕಣ್ಣಿನ ಪ್ರಾಣಿಗಳು ನೆಲ ಮೂಸುತ್ತ ನೆಗೆಯುತ್ತವೆ.

ಶ್ರೀಪತಿರಾಯರು ಮಾತಾಡದೆ ನಡೆಯುತ್ತಿದ್ದರು. ಬದಲಾವಣೆಯಲ್ಲಿ ಜೀವನದ ಸಫಲತೆಯನ್ನು ನಾನು ಹುಡುಕುತ್ತಿದ್ದೇನೆ. ಆದರೆ ದಿನನಿತ್ಯದ ಶಾಶ್ವತದಲ್ಲೂ ಅರಳುವುದನ್ನು ಆನು ಮರೆಯಕೂಡದು. ಆದರೆ ಹೇಗೆ ಕ್ರಿಯೆ ಸಾಧ್ಯ? ನನ್ನ ಪ್ರಾಣರಕ್ಷಣೆಯ ಮೌಢ್ಯದ ಕಿರೀಟ ಹೊತ್ತ ಮಂಜುನಾಥನಿಗೆ ಪ್ರತಿನಿತ್ಯ ಪಳಪಳ ಹೊಳೆಯುವಂತೆ ಬೆಳಗಿದ ತಟ್ಟೆಗಳಲ್ಲಿ ಹೆಂಗಸರು ಹಣ್ಣುಕಾಯಿ ಒಯ್ಯುವರು – ಅವರೇ ಈ ಶಾಶ್ವತದ ನಿಜವಾದ ಬಾಧ್ಯರೋ, ಅಥವಾ ಅವರು ಮಂಜುನಾಥ ಗರ್ಭದಲ್ಲಿರುವ ಪಿಂಡಗಳೋ?

‘ಇಕೋ ಅದೇ ರಾಘವ ಪುರಾಣಿಕರ ಮನೆ’ ಎಂದರು ಶ್ರೀಪತಿರಾಯರು.