ಶ್ರೀಪತಿರಾಯರು ಜಗನ್ನಾಥನ ತಂದೆ ಆನಂದರಾಯರ ಬಾಲ್ಯಮಿತ್ರರು; ತಂದೆ ಸತ್ತ ಮೇಲೆ ತಾಯಿ ಸೀತಾದೇವಿಗೂ ಆಪ್ತರಾಗಿದ್ದವರು. ಜಗನ್ನಾಥ ಮೈಸೂರಿನಲ್ಲಿ ಓದಲು ಹೋಗುವ ಹೊತ್ತಿಗೆ ತಾಯಿಗೆ ಆಪ್ತರಾಗಿದ್ದ ರೈಟರ್ ಕೃಷ್ಣಯ್ಯನವರೂ ಸತ್ತದ್ದರಿಂದ ಶ್ರೀಪತಿರಾಯರ ಅಭಿಪ್ರಾಯ ತಿಳಿಯದೆ ತಾಯಿ ಏನನ್ನೂ ಮಾಡುತ್ತಿರಲಿಲ್ಲ. ಬಿ.ಎ. ಮುಗಿಸಿದ ಮೇಲೆ ಜಗನ್ನಾಥ ಮುಂದಕ್ಕೆ ಓದಲು ಇಂಗ್ಲೆಂಡಿಗೆ ಹೋಗಲು ಸಹ ಶ್ರೀಪತಿರಾಯರೇ ಕಾರಣ. ತಾಯಿಗೆ ಒಬ್ಬನೇ ಮಗ, ದೇಶ ಬಿಟ್ಟು ಹೋಗುವುದು ಸರಿಯೇ ಎಂದು ಜಗನ್ನಾಥ ಅನುಮಾನಿಸುತ್ತಿದ್ದಾಗ (ಜೊತೆಗೇ ತನ್ನ ಅನುಭವಗಳನ್ನು ವಿಸ್ತಿರಿಸಕೊಳ್ಳಬೇಕೆಂದು ಆಸೆಪಡುತ್ತಿದ್ದಾಗ), ಶ್ರೀಪತಿರಾಯರು ತಾಯಿಯ ಜೊತೆ ತನ್ನ ಜೊತೆ ಸಮಾಲೋಚಿಸಿ ಇಂಗ್ಲೆಂಡಿಗೆ ಹೋಗುವುದೇ ಸರಿಯೆಂದು ನಿರ್ಧರಿಸಿದ್ದರು. ಮನಸ್ಸಿನ ನೆಮ್ಮದಿಯನ್ನೂ ಕ್ರಿಯಾಶೀಲತೆಯನ್ನೂ ಕೆಡಿಸುವಷ್ಟು ಆಸ್ತಿ ಜಗನ್ನಾಥನಿಗೆ ಇತ್ತಾದ್ದರಿಂದ, ಈ ಸಂಪತ್ತನ್ನು ಬೆಳೆಸುವ ಪ್ರಯತ್ನಕಷ್ಟೇ ನಿನ್ನ ವ್ಯಕ್ತಿತ್ವ ಸೀಮಿತವಾಗುವುದು ಬೇಡ ಎಂದು ಶ್ರೀಪತಿರಾಯರು ಹೇಳಿದ್ದರು. ತಾಯಿಯೂ ಇದನ್ನು ಒಪ್ಪಿದ್ದರು.

ಬದುಕುವ ಕಲೆ ತಿಳಿದಿದ್ದ ತಾಯಿ ಯಾವುದನ್ನೂ ತೀರಾ ಹಚ್ಚಿಕೊಳ್ಳದಿದ್ದರು ಮುತುವರ್ಜಿಯಿಂದ ತಾನಿಲ್ಲದಿದ್ದಾಗ ಮನೆಯ ನಿರ್ವಹಣೆ ಮಾಡಿದ್ದರು. ರೈಟರ್ ಕೃಷ್ಣಯ್ಯ ಸತ್ತ ಮೇಲೆ ಶ್ರೀಪತಿರಾಯರು ಈ ಭಾರವನ್ನು ಹಗುರಾಗಿ ಹೊರಲು ತಾಯಿಗೆ ಯಾವಾಗಲೂ ನೆರವಾಗಿದ್ದರು. ತಾಯಿ ಇದ್ದಕ್ಕಿದ್ದಂತೆ ಸತ್ತಾಗಲೂ ಅಷ್ಟೇ. ಇಂಗ್ಲೆಂಡಲ್ಲಿ ಓದುತ್ತಿದ್ದ ಜಗನ್ನಾಥ ಸುದ್ದಿ ಕೇಳಿದವನೇ ಹೊರಟುಬಂದ. ಮುಂದೇನು ಮಾಡಬೇಕು ಅವನಿಗೆ ತಿಳಿಯದು. ಆದರೆ ಶ್ರೀಪತಿರಾಯರು ಜಗನ್ನಾಥನನ್ನು ಇಂಗ್ಲೆಂಡಿಗೆ ಹಿಂದಕ್ಕೆ ಕಳುಹಿಸಿದ್ದರು. ಓದು ಮುಗಿಸಿ ಬಾ, ಇಲ್ಲಿನ ಯೋಚನೆ ಬೇಡ ಅಂದಿದ್ದರು. ನೀನು ಹುಟ್ಟಿದಾಗ ನಿಮ್ಮ ಮನೆ ಸೇರಿದ ಚಿಕ್ಕಿ ಇಲ್ಲವೆ? ಬಾಲವಿಧವೆಯಾದ ಅವರಿಗೆ ಅಕ್ಕನ ಮಗ ಸ್ವಂತ ಮಗನಿದ್ದಂತೆಯೇ ಅಲ್ಲವೆ? ಮನೇಲಿ ಶಾನುಭೋಗ ಇದ್ದಾನೆ, ನಾನಿದ್ದೇನೆ, ನಿನಗೆ ಯಾಕೆ ಯೋಚನೆ – ಹೋಗು ಎಂದಿದ್ದರು. ಚಿಕ್ಕಿಯೂ ಒಪ್ಪಿದ್ದರು.

ಇಷ್ಟೇ ಅಲ್ಲ – ಈಗ ತಾನು ಮಾನಸಿಕವಾಗಿ ಏನಾಗಿದ್ದೇನೊ ಅದಕ್ಕೂ ಶ್ರೀಪತಿರಾಯರು ಅನೇಕ ವಿಧದಲ್ಲಿ ಕಾರಣರು. ನಲವತ್ತೆರಡರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜಗನ್ನಾಥ ಮೆಟ್ರಿಕ್ ಓದುತ್ತಿದ್ದ- ಶ್ರೀ ಮಂಜುನಾಥ ಕೃಪಾಪೋಷಿತ ಹೈಸ್ಕೂಲಲ್ಲಿ. (ಈ ಹೈಸ್ಕೂಲನ್ನು ದೇವಸ್ಥಾನದ ಖರ್ಚಿನಿಂದ ಸ್ಥಾಪಿಸುವಂತೆ ಮಾಡಿದವರೂ ಶ್ರೀಪತಿರಾಯರು). ಈ ಪ್ರಾಂತಕ್ಕೆಲ್ಲ ಕಾಂಗ್ರೆಸ್ ನಾಯಕರಾಗಿದ್ದ ಶ್ರೀಪತಿರಾಯರು ತಾಲ್ಲೂಕು ಕಛೇರಿ ಎದುರು ಮುಷ್ಕರ ನಡೆಸಿದ್ದು ಜಗನ್ನಾಥನಿಗೆ ಕಣ್ಣಿಗೆ ಕಟ್ಟಿದಂತಿದೆ. ತಾನೂ ಖಾದಿ ಟೋಪಿ, ಖಾದಿ ಅಂಗಿ ಹಾಕಿ, ಜೈ ಎಂದು ಎರಡು ದಿನ ಜೈಲಿಗೆ ಹೋಗಿದ್ದ, ಗಂಧದ ಮರ ಕಡಿದಿದ್ದ, ಸರಾಯಿ ಅಂಗಡಿ ಎದುರು ಸತ್ಯಾಗ್ರಹ ಮಾಡಿದ್ದ. ಇಂಗರ್‌ಸಾಲ್, ಶಾ, ರಸೆಲ್ ಓದಿದ್ದ ಶ್ರೀಪತಿರಾಯರು ತನ್ನ ಮನಸ್ಸಿನಲ್ಲಿ ಅನುಮಾನದ ಬೀಜಗಳನ್ನು ನೆಟ್ಟಿದ್ದರು. ಶ್ರೀಪತಿರಾಯರ ನೆರಳಿನಲ್ಲಿ ಅಲ್ಲವೆ? – ಆದ್ದರಿಂದ ತಾಯಿಯ ಸಮ್ಮತಿ ಸಹ ಇತ್ತು. ತಂದೆ ಹೇಗೂ ಖಾದಿ ಹಾಕುತ್ತಿದ್ದರು; ಈಗ ತಾಯಿ ಸಹ ಬಿಳಿ ಖಾದಿ ಸೀರೆ ಉಟ್ಟರು. ಮನೆಗೆ ಹರಿಜನ ಪತ್ರಿಕೆ ತರಿಸಿದರು. ಸಾಯಂಕಾಲ ಶ್ರೀಪತಿರಾಯರು ಮನೆಗೆ ಬಂದು ಹರಿಜನ ಪತ್ರಿಕೆ ಓದಿ ಅರ್ಥ ಹೇಳುವುದು. ತಾಯಿ, ಚಿಕ್ಕಿ, ರೈಟರ್ ಕೃಷ್ಣಯ್ಯ, ತಾನು ಕೂತು ಕೇಳಿಸಿಕೊಳ್ಳುವುದು.

ಶ್ರೀಪತಿರಾಯರಲ್ಲದಿದ್ದರೆ ಮಂಜುನಾಥಸ್ವಾಮಿಗೆ ಹೊರತಾದ ಇನ್ನೊಂದು ಲೋಕ ಈ ಮಧ್ಯಯುಗದ ಭಾರತೀಪುರದಲ್ಲಿ ಜಗನ್ನಾಥನಿಗೆ ಸಿಗುತ್ತಿರಲಿಲ್ಲ; ಬಾಲ್ಯದಲ್ಲಂತೂ ಖಂಡಿತ ಸಿಗುತ್ತಿರಲಿಲ್ಲ. ಮೈಸೂರು ದೇಶದ ಕಾಂಗ್ರೆಸ್ ವಲಯದಲ್ಲೆಲ್ಲ ಹಿರಯರಲ್ಲೊಬ್ಬರಾದ ಶ್ರೀಪತಿರಾಯರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಕಳೆದುಕೊಂಡು ಸ್ವಾತಂತ್ರ್ಯ ಬಂದ ಮೇಲೆ ಮೂಲೆಗುಂಪಾದವರು ಕೂಡ. ಆದ್ದರಿಂದಲೇ ಹೊಸದೊಂದು ವಿಚಾರ ಹೊಕ್ಕು ಚಡಪಡಿಸುತ್ತಿದ್ದ ಜಗನ್ನಾಥ ಬಹಳ ದಿನ ಯೋಚಿಸಿ ಈಗ ಶ್ರೀಪತಿರಾಯರ ಹತ್ತಿರ ಮಾತಾಡಬೇಕೆಂದು ಬಂದದ್ದು. ಗಾಂಧಿಯ ಕರೆಗೆ ಸಾವಿರಾರು ರೂಪಾಯಿಯ ಜವಳಿಯನ್ನು ಬೀದಿಯಲ್ಲಿ ರಾಶಿ ಹಾಕಿ ಬೆಂಕಿಕೊಟ್ಟ ಶ್ರೀಪತಿರಾಯರಿಗೆ ಮಾತ್ರ ತನ್ನ ಒಳಗುದಿ ಅರ್ಥವಾದೀತೆಂದು ಜಗನ್ನಾಥನಿಗೆ ಆಸೆ.

ಅಡಿಗೆ ಮನೆಯಲ್ಲಿ ಗಂಡ ಹೆಂಡಿರ ನಡುವೆ ಬಿರುಸಿನ ಮಾತುಕತೆ ನಡೆದಿದ್ದಂತೆ ಕಂಡಿತು. ಜಗನ್ನಾಥನಿಗೆ ಮುಜುಗರವಾಗಿ ‘ರಾಯರೇ’ ಎಂದು ಇನ್ನೊಮ್ಮೆ ಕರೆದ. ಕತ್ತಲಿನ ನಡುಮನೆ ಕಣ್ಣಿಗೆ ನಿಧಾನವಾಗಿ ಒಗ್ಗಿ ಅದರ ಅಸ್ತವ್ಯಸ್ತ ಪ್ರಪಂಚವನ್ನು ನಿಧಾನವಾಗಿ ಕಣ್ಣೆದುರು ಬಿಚ್ಚಿಕೊಂಡಿತು. ಬಲಗಡೆ ಗೋಡೆಗೆ ಒರಗಿದಂತೆ ಬೆಂಚು. ಅದರ ಮೇಲೆ ಸುತ್ತಿಟ್ಟ ಹಾಸಿಗೆಗಳು, ಮಾಸಲು ಬಣ್ಣಕ್ಕೆ ತಿರುಗಿದ, ಪ್ರಾಯಶಃ ಮಲಗಲು ಕಲ್ಲಾದ ಹಾಸಿಗೆಗಳು. ಧೂಳು ಕೂತು ಕೊಳೆಯಾದ ಖಾದಿ ನೂಲಿನ ಸರ ಹಾಕಿದ ಗಾಂಧಿ, ನೆಹರೂ, ಸುಭಾಶ್ಚಂದ್ರ ಬೋಸ್‌ರ ಪಟಗಳು. ಇನ್ನೊಂದು ಗೋಡೆಯ ಮೇಲೆ ಮಂಜುನಾಥಸ್ವಾಮಿಯ ಪಟ. ಅವನಿಗೆ ಮಾತ್ರ ಪ್ರಾಯಶಃ ರಾಯರ ಹೆಂಡತಿ ಭಾಗ್ಯಮ್ಮ ಮಾಡಿದ ಹತ್ತಿಯ ಗೆಜ್ಜೆವಸ್ತ್ರದ ಸರ. ಗೋಡೆಗಳ ತುಂಬ ಮೊಳೆಗಳು. ಅವುಗಳ ಮೇರೆ ರಾಯರ ನಾಲ್ಕೈದು ಮಕ್ಕಳ ಶರ್ಟುಗಳು. ಕೆಂಪು ಬಣ್ಣದ ಹೊಸಲಿನ ಮೇಲೆ ಹಿಟ್ಟಿನ ರಂಗೋಲೆ, ನಾಲ್ಕು ಗೋಡೆಯ ಅಂಚಿಗೂ ಕಪ್ಪು ನೆಲದ ಮೇಲೆ ಹಿಟ್ಟಿನ ಬಿಳಿ ರಂಗೋಲೆ – ಪ್ರಾಯಶಃ ರಾಯರ ದೊಡ್ಡ ಮಗಳು ಸಾವಿತ್ರಿ ಹಾಕಿದ್ದು. ನಾಜೂಕಾಗಿ ನಯವಾಗಿ ಬಿಟ್ಟ ರಂಗೋಲೆ. ಮತ್ತೆ ಕಣ್ಣಿನಲ್ಲಿ ನೀರು ಬರಿಸುವ ಹೊಗೆ. ಅಪ್ರಯತ್ನವಾಗಿ ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡು, ಹೊಗೆ ಬರುವ ದಿಕ್ಕಿನಿಂದ ಮುಖವನ್ನು ಸದಾ ವಾರೆ ಮಾಡಿಕೊಂಡಿರಲು ಪ್ರಯತ್ನಿಸುತ್ತ ಮನೆಯ ಒಳಗೆ ಓಡಾಡಬೇಕು. ಒದ್ದೆ ಪಾಣಿಪಂಚೆಯಲ್ಲಿ, ತೊಟ್ಟ ಅಂಗಿಯಲ್ಲಿ, ಹೊದಿಯುವ ಕಂಬಳಿಯಲ್ಲಿ ಈ ಹೊಗೆಯ ನಿರಂತರವಾದ ವಾಸನೆ. ರಾಯರ ಹೆಂಡತಿ ಏನೋ ಗೊಣಗುತ್ತಿದ್ದರು. ರಾಯರು ಏನೋ ಕೂಗಾಡುತ್ತಿದ್ದರು. ಥಟ್ಟನೇ ಮೌನ. ಊದುಗೊಳವೆಯಲ್ಲಿ ರಾಯರ ಹೆಂಡತಿ ಒಲೆಯನ್ನು ಊದುವ ಸದ್ದು. ಕಬ್ಬಣಿದ ಕೊಳವೆಯನ್ನು ರಗಳೆಯಾಗಿ ನೆಲದ ಮೇಲೆ ಕುಕ್ಕಿದ ಸದ್ದು. ಹೊಗೆ ತುಂಬಿದ ಗಂಟಲಿನ ಕೆಮ್ಮು.

‘ರಾಯರೇ’ ಎಂದು ಜಗನ್ನಾಥ ಮತ್ತೆ ಕೂಗಿದ. ಇನ್ನಷ್ಟು ಹೊಗೆ ತುಂಬಿ ಜಗನ್ನಾಥನ ಕಣ್ಣು ಮಂಜಾಗಿದ್ದವು. ನಡುಮನೆಗೆ ಸರಸರನೆ ನಡೆದು ಬಂದವಳು ರಾಯರ ಹಿರಿಮಗಳು ಸಾವಿತ್ರಿಯಿರಬೇಕು. ಒಳಗವಳು ಓಡಿದ ಸದ್ದು, ನಡುಮನೆಯನ್ನು ಹೊಗೆ ತುಂಬದಿರಲೆಂದು ಬಾಗಿಲು ಹಾಕಿದ ಸದ್ದು.

‘ಯಾರು ಜಗಣ್ಣನೆ?’ ಮೈಮೇಲಿನ ವಸ್ತ್ರದಿಂದ ಕಣ್ಣುಜ್ಜಿಕೊಳ್ಳುತ್ತ ರಾಯರು ಬಂದರು. ‘ಹಾಳು ಹೊಗೆ. ಮೇಲೆ ಹೋಗೋಣ ಬಾ’ ಎಂದು ಮಹಡಿಯ ಮೇಲೆ ಕರೆದುಕೊಂಡು ಹೋದರು.

ಮಹಡಿಯ ಮೇಲೆ ಹೊಗೆ ತುಂಬಿದ್ದರೂ ಹೆಚ್ಚು ಬೆಳಕಿತ್ತು. ರಾಯರು ಬಾಗಿಲು ಹಾಕಿಕೊಂಡರು. ಮುಚ್ಚಿದ್ದ ಕೆಲವು ಕಿಟಕಿಗಳ ಬಾಗಿಲು ತೆರೆದರು. ಮಂಚದ ಮೇಲಿದ್ದ ಬಟ್ಟೆಗಳನ್ನು ಸರಿಸಿ ಕೂತುಕೋ ಎಂದರು. ಮಂಚದ ಬಳಿಯಿದ್ದ ಪುಟ್ಟ ಕಪಾಟಿನಲ್ಲಿ ಬಾಲ್ಯದಿಂದ ತನಗೆ ಪರಿಚಿತವಾಗಿದ್ದ ರಾಯರ ಕೆಲವು ಪುಸ್ತಕಗಳನ್ನು ನೋಡಿದೆ; ಅತ್ಯಂತ ಸಣ್ಣ ಪ್ರಿಂಟಿನಲ್ಲಿ ಎರಡು ಕಾಲಂಗಳಲ್ಲಿ ಅಚ್ಚಾದ ರೆನಾಲ್ಡ್ಸಿನ ಕಾದಂಬರಿಗಳು, ಸ್ಕಾಟಿನ ಕಾದಂಬರಿಗಳು, ಗೋಲ್ಡ್‌ಸ್ಮಿತ್‌ನ ವಿಕಾರ್ ಆಫ್ ದಿ ವೇಕ್‌ಫೀಲ್ಡ್, ಲೈಟ್ ಆಫ್ ಏಶ್ಯ, ಶಾನ ನಾಟಕಗಳು.ಗೋಡೆಯ ಮೇಲೆ ಜಗನ್ನಾಥನ ತಾಯಿಯ ಫೋಟೋ, ಮದುವೆಯಾದ ಹೊಸದರಲ್ಲಿ ಜಾತ್ರೆಯ ಸಮಯದಲ್ಲಿ ತೆಗೆದದ್ದಿರಬೇಕು. ಬಿಸಿಲಿಗಿಟ್ಟು ಡೆವಲಪ್ ಮಾಡಿದ್ದ ಬಣ್ಣದ ಫೋಟೋ. ಕ್ರಮೇಣ ಬಣ್ಣವನ್ನು ಕಳೆದುಕೊಂಡು ಮಾಸಿತ್ತು. ಹಾಗಾಗಿ ಮೊದಲೇ ಮೃದುವಾಗಿದ್ದ ಅವರ ಗುಂಡು ಮುಖ ಇನ್ನಷ್ಟು ಮೃದುವಾಗಿ ಕಂಡಿತು. ಧಾರಾವಳವಾಗಿ ಬೆಳೆದಿದ್ದ ಕಪ್ಪು ಕೂದಲನ್ನ ನಡುವಿಗೆ ಬೈತಲೆ ತೆಗೆದು ಅಮ್ಮ ಎಷ್ಟು ಬಿಗಿಯಾಗಿ ಕಟ್ಟುತ್ತಿದ್ದರು.

ರಾಯರು ಮಾತಾಡಲಿಲ್ಲ. ಸಾಮಾನ್ಯವಾಗಿ ಜಗನ್ನಾಥನನ್ನು ಭೆಟ್ಟಿಯಾದಾಗ ರಾಯರು ಮಾತಾಡುವುದಿಲ್ಲ, ಜಗನ್ನಾಥನೂ ಮಾತಾಡುವುದಿಲ್ಲ. ಸುಮ್ಮನೆ ಒಟ್ಟಿಗಿದ್ದರೂ ಸಾಕು ಇಬ್ಬರಿಗೂ ತೃಪ್ತಿಯಾಗುತ್ತದೆ. ರಾಯರು ಎಲೆಯಡಿಕೆ ಹಾಕಿಕೊಂಡು ತನ್ನಷ್ಟಕ್ಕೆ ನಗುತ್ತ ಏನೋ ಒಂದು ಅರ್ಥಗರ್ಭಿತವಾದ ಮಾತಾಡುತ್ತಾರೆ. ಹತ್ತಾರು ವಾಕ್ಯಗಳನ್ನೆಲ್ಲ ಒಂದು ಮಾತಿಗೆ ಸೂಚ್ಯವಾಗಿ ಭಟ್ಟಿಯಿಳಿಸಿದ ಆ ಮಾತು ಜಗನ್ನಾಥನಿಗೆ ಕುಡಲೇ ಅರ್ಥವಾಗುತ್ತದೆ. ‘ಅಲ್ಲ ಗಾಂಧಿ ಹೇಳಿದ್ದೇನು? ಒಳ್ಳೇ ನೆಹರು…’ ಎಂದು ರಾಯರು ಹೇಳಿದರೆ ಸಾಕು, ಪ್ರಸ್ತುತ ಅರ್ಥನೀತಿ ಇತ್ಯಾದಿಗಳ ಬಗ್ಗೆಯೆಲ್ಲ ರಾಯರು ಜಗನ್ನಾಥನಿಗೆ ಹೇಳಿದಂತೆ. ‘Emotionally ನಾವೆಲ್ಲ ಭಾರತೀಯರು. ಆದರೆ ವಿಚಾರದಲ್ಲಿ ಮಾತ್ರ ಪಾಶ್ಚಾತ್ಯ ಪ್ರಭಾವವಿದೆಯಲ್ಲ…’ ಎಂದು ಜಗನ್ನಾಥ ಮಾತು ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟುಬಿಡುತ್ತಾನೆ. ಈ ತುಣುಕು ರಾಯರ ಮನಸ್ಸಿನಲ್ಲಿ ಇಡೀ ದಿನ ಕೆಲಸ ಮಾಡಿ ಮಾರನೇ ದಿನ ಇನ್ನಷ್ಟು ವಿಚಾರಗಳನ್ನು ಅಂಟಿಸಿಕೊಂಡು ಹೊರಬರುತ್ತದೆ.

ಈ ದಿನ ರಾಯರು ಮಾತಾಡದೇ ಇರೋದಕ್ಕೆ ಅದರ ಮನಸ್ಸಿನ ವ್ಯಗ್ತೆಯೂ ಕಾರಣವಿರಬೇಕೆಂದು ಜಗನ್ನಾಥ ಊಹಿಸಿದ. ಖಾದಿಯ ಚೀಲದಿಂದ ಎಲೆಯಡಿಕೆ ತೆಗೆದು, ಅಡಿಕೆಯನ್ನು ಬಾಯಿಗೆ ಹಾಕಿ ಎಲೆಗೆ ಸುಣ್ಣ ಹಚ್ಚುತ್ತ ಅವರು ಕೂತರು. ಜಗನ್ನಾಥ ಸಿಗರೇಟು ಹಚ್ಚಿ ಬೂದಿ ಹಾಕಲು ಒಂದು ಡಬ್ಬಿ ಹುಡುಕಿದ, ಮೂಲೆಯಲ್ಲಿ ಹಳೆಯದೊಂದು ನಸ್ಯದ ಡಬ್ಬಿ ಸಿಕ್ಕಿತು. ರಾಯರ ಹೆಂಡತಿಗೆ ಹೊರಗಿನವರಿಗೆ ತಿಳಿಯದಂತೆ, ಗಂಡನಿಗೂ ಪ್ರತ್ಯಕ್ಷವಾಗಿ ಕಾಣದಂತೆ ನಸ್ಯ ಹಾಕುವ ಅಭ್ಯಾಸವಿರುವುದು ಎಲ್ಲರಿಗೂ ತಿಳಿದ ವಿಷಯ. ತಿಂಗಳಿಗೊಂದು ನಸ್ಯದ ಡಬ್ಬಿ ತಂದು ಹೆಂಡತಿಗೆ ಸಿಗುವ ಜಾಗದಲ್ಲಿ ಇಡುವವರು ಕೂಡ ರಾಯರೆ. ರಾಯರು ಜೈಲಿನಲ್ಲಿದ್ದಾಗ ನಸ್ಯದ ಸರಬರಾಜಿನ ಗುಪ್ತ ಜವಾಬ್ದಾರಿಯನ್ನು ಹೊತ್ತಿದ್ದವನು ಜಗನ್ನಾಥ. ಪ್ರಾಯಶಃ ಈಗ ಮಗ ಬೆಳೆದಿದ್ದಾನಾದ್ದರಿಂದ, ಸಾವಿತ್ರಿ ಮಿಡ್ಲ್‌ಸ್ಕೂಲ್‌ಮೇಡಂ ಆಗಿ ದುಡಿಯುತ್ತಿರೋದರಿಂದ ರಾಯರು ಹೆಂಡತಿಗೆ ನಸ್ಯ ತಂದುಕೊಡಬೇಕಾಗಿಲ್ಲ.

ಸಣ್ಣಗೆ ಕತ್ತರಿಸಿ ಬಿಳಿ ಕೂದಲು. ಎರಡು ಪೊದೆ ಹುಬ್ಬುಗಳ ಕೆಳಗೆ ಈಗಲೂ ಹುಡುಗಾಟಿಕೆಯಿಂದ ತುಂಟಾಗುವ ಕಣ್ಣುಗಳು, ಕಿವಿಗಳ ತುಂಬ ರೋಮ – ಕುಳ್ಳಗೆ, ತೆಳ್ಳಗೆ, ಚುರುಕಾಗಿ ಓಡಾಡುವ ವ್ಯಕ್ತಿ ಶ್ರೀಪತಿರಾಯರು. ಕುರ್ಚಿಯ ಮೇಲೆ ಬೇಕಾದರೆ ಕೂತಿರಲಿ, ಹುಮ್ಮಸ್ಸು ಬಂದದ್ದೆ ಕಾಲುಗಳನ್ನೆತ್ತಿ ಸರಕ್ಕನೆ ಚಕ್ಕಳಮಕ್ಕಳೆ ಹಾಕಿ ಕೂರುತ್ತಾರೆ, ಇಲ್ಲವೇ ಎದ್ದು ನಡೆದಾಡಲು ಪ್ರಾರಂಭಿಸುತ್ತಾರೆ. ಆದರೆ ಮಾತ್ರ ಮನೆಯಲ್ಲವರನ್ನು ನೋಡಬಾರದು. ಸದಾ ಮಂಕಾಗಿರುತ್ತಾರೆ. ಜಗನ್ನಾಥನಿಗೆ ಇದರ ಕಾರಣ ಗೊತ್ತಿದ್ದರಿಂದ ‘ಹೋಗೋನ ಬನ್ನಿ ರಾಯರೆ’ ಎಂದ.

‘ಸ್ವಲ್ಪ ಇರು’ ಎಂದರು.

ಬಾಗಿಲು ತೆರೆಯಿತು. ರಾಯರ ಹೆಂಡತಿ ಭಾಗ್ಯಮ್ಮ ಎರಡು ಹಿತ್ತಾಳೆಯ ಬಟ್ಟಲಲ್ಲಿ ಕಾಫಿ ತಂದರು. ರಾಯರ ಮನೆಯಲ್ಲಿನ್ನೂ ಸ್ಟೈನ್‌ಲೆಸ್ ಸ್ಟೀಲ್ ಯುಗ ಕಾಲಿಟ್ಟಿರಲಿಲ್ಲ. ಅದ್ಯಾವುದೋ ಕಾಲದ ಸೊಟ್ಟಗಾದ ಬಟ್ಟಲು, ಕೊಳೆ ಶೇಖರವಾಗುವಂತೆ ಮಡಿಸಿದ ಅಂಚು, ಲೋಟವನ್ನು ಬಿಸಿ ಮಾಡಿ ತಾನು ತಣ್ಣಗಾಗುವ ಬೆಲ್ಲದ ಕಾಫಿ.

‘ಹೇಗಿದೀರಿ?’ ಜಗನ್ನಾಥ ಕಾಫಿ ಕುಡಿಯುತ್ತ ಕೇಳಿದ.

‘ಇರೋದಪ್ಪ ಒಟ್ಟಾರೆ. ಹತ್ತು ಹದಿನೈದು ದಿವಸದಿಂದ ಏನು ನೀನು ಕಾಣಲೇ ಇಲ್ಲ.’

ಭಾಗ್ಯಮ್ಮ ಸೆರಗಿನಿಂದ ಮೂಗುಬಟ್ಟನ್ನು ಉಜ್ಜಿಕೊಳ್ಳುತ್ತ ಬೇಸರದಲ್ಲಿ ಮಾತಾಡಿದರು. ಭಾಗ್ಯಮ್ಮ ತೋರವಾದ ಹೆಂಗಸು. ಸಣ್ಣ ಹಣೆ, ಸಣ್ಣ ಕಣ್ಣುಗಳು – ಅವರು ನಗುತ್ತ ಖುಷಿಯಾಗಿದ್ದನ್ನು ನೋಡಿದವರೇ ಇಲ್ಲ. ಚಿಕ್ಕ ಪ್ರಾಯದಲ್ಲಿದ್ದಿರಬಹುದಾದ ಜೀವನ ಸಂತೋಷ ಹೊಗೆ ತುಂಬಿದ ಒಲೆ ಎದುರು ಕೂತುಕೂತು ಮಕ್ಕಳನ್ನು ಹೆತ್ತು ಹೆತ್ತು ಕಳೆದಿರಬಹುದೆ? ಶ್ರೀಪತಿ ರಾಯರು ಮಾತ್ರ ಇನ್ನೂ ಹುಣಿಸೆ ನಾರಿನಂತೆ ಹುರಿಯಾಗಿ ಬಿಗಿಯಾಗಿ ಹೇಗೆ ಉಳಿದರು? ಒಬ್ಬರನ್ನೊಬ್ಬರು ನಾಶ ಮಾಡುವ ಶೀರ ಯುದ್ಧ ಮನೆಯಲ್ಲಿ ಎಷ್ಟೋ ವರ್ಷಗಳಿಂದ ನಡೆದಿರಬೇಕು – ಅದಕ್ಕೆ ರಾಯರು ಹೊರಗೆ ಕಾಲಿಟ್ಟೊಡನೆಯೇ ಚಿಗುರಿಬಿಡುತ್ತಾರೆ. ಸಾಂಸಾರಿಕ ಜೀವನ ವಿಫಲವಾದದ್ದನ್ನು ತಾನು ಕಂಡದ್ದೇ ಹೆಚ್ಚಲ್ಲವೇ? ಎಂದು ಯೋಚಿಸುತ್ತ ಜಗನ್ನಾಥ ಭಾಗ್ಯಮ್ಮನನ್ನು ನೋಡಿದ. ಏನೋ ಮಾತಾಡಲು ಹವಣಿಸುತ್ತ ಭಾಗ್ಯಮ್ಮ ಕಂಬಕ್ಕೆ ಒರಗಿ ನಿಂತಿದ್ದರು; ಶ್ರೀಪತಿರಾಯರು ಕೂತಲ್ಲೆ ಚಡಪಡಿಸುತ್ತಿದ್ದರು. ಜಗನ್ನಾಥನ ಊಹೆ ನಿಜವಾಯಿತು.

‘ನನಗಂತೂ ತಲೆ ಚಚ್ಚಿಕೊಂಡು ಸಾಕಾಯ್ತು ಜಗಣ್ಣ, ಸ್ವಲ್ಪ ನೀನಾದ್ರೂ ಹೇಳು, ಮಾತಾಡೋಕೆ ಹೋದ್ರೆ ಒಳ್ಳೆ ಹುಲಿ ಹಾಗೆ ಮೈಮೇಲೆ ಬರ್ತಾರೆ, ಸಾವಿತ್ರೀನ ಶಿವಮೊಗ್ಗಕ್ಕೆ ವರ್ಗ ಮಾಡಿದಾರೆ. ಊರಿನವರ ಕೆಲಸಾನೆಲ್ಲ ಮಾಡಿಕೊಡೋ ಇವರೀಗೆ ಸ್ವಲ್ಪ ಡಿ.ಇ.ಓ.ಗೆ ಹೇಳಿ ಮಗಳನ್ನು ಇಲ್ಲೇ ಇರಿಸಿಕೊಳ್ಳೋಕಾಗಲ್ವ? ವಿದ್ಯಾಮಂತ್ರಿಗಳು ಜೈಲ್‌ನಲ್ಲಿ ಇವರ ಜೊತೆ ಇದ್ದವರು. ಎಲ್ರೂ ಬೇಕಾದ್ದು ಮಾಡಿಕೊಂಡ್ರು. ನಮ್ಮನ್ನ ಕೇಳೋವ್ರ ಗತಿ ಇಲ್ಲ. ನಮ್ಮಪ್ಪ ಕೊಟ್ಟ ನಾಲ್ಕು ರೇಷ್ಮೆ ಸೀರೇನ್ನೂ ಆಗ ಇವರ ಮಾತು ಕಟ್ಟಿಕೊಂಡು ಬೆಂಕಿಗೆ ಹಾಕಿ ಆಯ್ತು. ಏನೇ ಹೇಳ್ಲಿ- ಮಂಕು ಬಡಿದವರಂತೆ ಸುಮ್ನೆ ಕೂತಿರುತ್ತಾರೆ.’

ಚಡಪಡಿಸುತ್ತ ಕೂತಿದ್ದ ಶ್ರೀಪತಿರಾಯರು.

‘ಸಾಕಿನ್ನು. ಒಳಗೆ ಹೋಗು.’ ಎಂದರು.

‘ಹೋದ ಸಾರಿ ಮುನಿಸಿಪಾಲ್ಟಿ ಎಲೆಕ್ಷನ್‌ಗೆ ನಿಂತಿದ್ರಲ್ಲ ಏನಯ್ತು ಕೇಳಿದೀಯ? ಯಾರೂ ಒಂದು ಚೂರೂ ಗೌರವ ಕೊಡ್ದಿದ್ದ ಮೇಲೆ ಯಾಕಿವ್ರಿಗೆ ಊರಿನ ವ್ಯವಹಾರ ಹೇಳು. ಸ್ವಂತ ಮಗಳನ್ನ ಊರಿನ ಸ್ಕೂಲಲ್ಲಿ ಉಳಿಸಿಕೊಳ್ಳೋ ಯೋಗ್ಯತೆ ಇಲ್ದೇ ಇದ್ದ ಮೇಲೆ…’

‘ಏನಾದ್ರೂ ಮಾಡೋಣ ಅಮ್ಮ. ನಂಗೆ ಈ ವಿಷಯ ಗೊತ್ತೇ ಇರಲಿಲ್ಲ.’ ಜಗನ್ನಾಥ ಸಮಾಧಾನ ಮಾಡಲು ಹೇಳಿದ.

‘ಇಲ್ಲೋ ಜಗಣ್ಣ. ಲಂಚ ಕೊಡದೆ ಡಿ.ಇ.ಓ. ಹತ್ತರ ಆಗಲ್ಲ. ಐದು ಆರು ವರ್ಷ ಒಂದೇ ಕಡೆ ಇದ್ದವರನ್ನ ವರ್ಗ ಮಾಡಬೇಕು ಅಂತ ಇರೋ ಸರ್ಕಾರೀ ಆರ್ಡರನ್ನ ಅವನು ತೋರಿಸಿದ್ರೆ ನಾನೇನು ಹೇಳ್ಲಿ ಹೇಳು.’

ಭಾಗ್ಯಮ್ಮ ಇದ್ದಕ್ಕಿದ್ದಂತೆ ಧ್ವನ ಎತ್ತರಿಸಿದರು.

‘ಬೆಳೆದು ನಿಂತ ಮಗಳಿಗೆ ಮದುವೆ ಮಾಡ್ಲಿಲ್ಲ. ಇವರು ಜೈಲಿಗೆ ಹೋದ್ರು ಅಂತಲೋ ಮನೇಲಿ ನೇಮನಿಷ್ಠೆ ಇಲ್ಲ ಅಂತಲೋ – ಅಂತೂ ಯಾರೂ ಮದ್ವೆಯಾಗಕ್ಕೆ ಬರ್ಲಿಲ್ಲ. ಅವಳು ದುಡೀದೇ ಇದ್ರೆ ಇಲ್ಲಿ ಪಥ ಸಾಗಬೇಕಲ್ಲ – ಹೇಳಿ. ಲಂಚ ಕೊಡಬೇಕಾಗಿ ಬಂದ್ರೆ ಕೊಡ್ಲೇಬೇಕು. ಮಗಳ ಹತ್ರ ದುಡಿಸಿಕೊಂಡು ತಿನ್ನಕ್ಕೆ ನಾಚಿಕೆಯಾಗಲ್ವ?’

ರಾಯರು ಕೋಪದಿಂದ ನಿಸ್ಸಹಾಯಕವಾಗಿ ಉರಿಯುತ್ತಿದ್ದುದು ನೋಡಿ ಜಗನ್ನಾಥನಿಗೆ ಕಷ್ಟವಾಯಿತು. ಎದ್ದು ಹೊರಡುವುದು ಉತ್ತಮ ಅನ್ನಿಸಿತು. ಸಮಾಧಾನದಿಂದ ಹೇಳಿದ :

‘ಏನಾದ್ರೂ ಮಾಡೋಣ ಅಮ್ಮ. ನಾನೇ ಶಿವಮೊಗ್ಗಕ್ಕೆ ಹೋಗಿಬರ್ತೀನಿ ಬೇಕಾದ್ರೆ…’

ಜಗನ್ನಾಥನ ಮಾತು ಭಾಗ್ಯಮ್ಮನ ಕಿವಿಗೆ ಬಿದ್ದಂತೆ ಕಾಣಲಿಲ್ಲ. ಅವರು ಒಂದೇ ಸಮನೆ ಕೂಗಾಡಲು ಪ್ರಾರಂಭಿಸಿದರು – ಹಿಸ್ಟೀರಿಯಾದ ಚಿಹ್ನೆಗಳನ್ನು ಇಳಿ ವಯಸ್ಸಿನ ಹೆಂಗಸಿನಲ್ಲಿ ಕಂಡು ಜಗನ್ನಾಥನಿಗೆ ಪಾಪ ಎನ್ನಿಸಿತು :

‘ತಿನ್ನಲಿಕ್ಕೆ ಗತಿ ಇಲ್ಲದವನು ಧಿಮಾಕು ಮಾಡಿದರೆ ಯಾರು ಕೇಳ್ತಾರೆ? ಬಡವನ ಸಿಟ್ಟು ದವಡೆಗೆ ಮೂಲ ಅಂತ. ಮಗ ಹೈಸ್ಕೂಲು ಮುಗಿಸಿದಾನೆ, ಅವನಿಗೇನಾದ್ರೂ ಕೆಲಸಕ್ಕೆ ದಾರಿ ಮಾಡಿದಾರ? ಬೇರೆ ಹುಡುಗರು ಮಾಡಲ್ವ, ಹಾಗೇನೇ ಬಸ್ ಹತ್ತಿರ ಹೋಗಿ ಯಾರಾದ್ರೂ ಯಾತ್ರಿಕರನ್ನ ಮನೇಗೆ ಕರ್ಕೊಂಡು ಬಾ ಅಂತ ನಾನು ಅವನನ್ನ ಮೊನ್ನೆ ಕಳಿಸಿದ್ದು ನಿಜ. ಕೈಯಲ್ಲಿ ಕಾಸಿಲ್ಲದೆ ಜೀವನ ಹೇಗೆ ಮಾಡಬೇಕು? ರಂಗಣ್ಣ ಹೋಗಿ ಒಂದು ಕುಟುಂಬಾನ್ನ ಕರ್ಕೊಂಡು ಬಂದ, ಪೂಜೆ ಗೀಜೆ ಮಾಡಿಸಕ್ಕೇಂತ ದೇವಸ್ಥಾನಕ್ಕೆ ಕರ್ಕೊಂಡು ಹೋದ. ಇವರು ಮನೆಗೆ ಬಂದವ್ರೆ ಒಳ್ಳೆ ಭೂತ ಮೈಮೇಲೆ ಬಂದ ಹಾಗೆ ಹೇಗೆ ಕುಣಿದ್ರು ಅಂತಿ – ಹೊಟ್ಟೆ ಪಾಡಿಗೇಂತ ನಾನು ಮಾಡಿದ್ದು ತಪ್ಪ? ಇಷ್ಟು ವರ್ಷ ಬಾಯಿಮುಚ್ಚಿಕೊಂಡು ಸೇವೆ ಮಾಡಿದ ನನ್ನ ಹೇಗೆ ಇವರು ಹೊಡೆದರು ಅಂತ ಜಗಣ್ಣ, ನನ್ನ ಅಪ್ಪ ಅಮ್ಮ ಸತ್ತು ಹೋಗಿದಾರೆ ಅಂತ ಇವರ ಜೋರು ಅಲ್ಲವ? ಪೂಜೆ ಮುಗಿಸಿ ಬಂದ ಅವರನ್ನ, ಚಿತ್ರದುರ್ಗದಿಂದ ಬಂದವ್ರು ಪಾಪ, ಹೊರಗೆ ಅಟ್ಟಿದ್ರು. ಅವರಿಗಾಗಿ ಮಾಡಿಟ್ಟ ಅಡಿಗೇನ್ನ ಗೊಬ್ಬರದ ಗುಂಡಿಗೆ ಸುರಿದ್ರು, ರಂಗಣ್ಣನ್ನ ಯದ್ವಾತದ್ವ ಚಚ್ಚಿದರು…’

ಭಾಗ್ಯಮ್ಮ ಗೋಳೋ ಎಂದು ಅಳುತ್ತ ನೆಲಕ್ಕೆ ಕುಸಿದರು. ಬಾಗಿಲ ಮರೆಯಲ್ಲಿ ನಿಂತು ಒದ್ದಾಡುತ್ತಿದ್ದ ಸಾವಿತ್ರಿ ತಾಯಿಯ ರಟ್ಟೆ ಹಿಡಿದೆಳೆದಳು. ಶ್ರೀಪತಿರಾಯರು ಮಂಕಾಗಿ ‘ಹೋಗೋಣಯ್ಯ’ ಎಂದು ಎದ್ದರು. ಏನು ಮಾತಾಡಲೂ ತೋಚದೆ ಜಗನ್ನಾಥನೂ ಹೊರಟ. ಬೀದಿಗೆ ಇಳಿದಿದ್ದೆ ಉಸಿರು ಬಂದಂತಾಯಿತು. ಎದುರು ದೇವಸ್ಥಾನ, ಸ್ವಲ್ಪ ದೂರದಲ್ಲೆ ಹರಿಯುತ್ತಿದ್ದ ಹೊಳೆಯ ಶಬ್ದ ಕೇಳಿ, ‘ಹೊಳೆಯ ಕಡೆ ಹೋಗೋಣವ ರಾಯರೆ’ ಎಂದ. ರಾಯರ ಮುಖ ನೋಡುವುದು ಕೂಡ ಜಗನ್ನಾಥನಿಗೆ ಕಷ್ಟವಾಗಿತ್ತು. ಆದರೆ ಅವರನ್ನು ಒಂಟಿಯಾಗಿ ಬಿಟ್ಟು ಹೋಗುವುದು ಸಹ ಸರಿಯಲ್ಲವೆನಿಸಿತು.

ಒಂದಷ್ಟು ದೂರ ಇಬ್ಬರೂ ಮಾತಾಡದೆ ನಡೆದರು. ಹೊಳೆಯ ದಂಡೆಯ ಮೇಲೆ ನಿಂತರು. ಉಚ್ಚೆ ಹೇಲಿನ ವಾಸನೆಯಿಂದ ಜಗನ್ನಾಥನಿಗೆ ಹೇಸಿಗೆಯಾಗಿ ಮೈ ನಡುಗಿತು. ಬಂಡೆಗಳ ಮೇಲೆ ಬಿಳಿ ಮರಳಿನ ಮೇಲೆ ಸುಡುವ ಬಿಸಿಲು, ಕಣ್ಣಿಗೆ ತಂಪಾಗಿ ಹರಿಯುವ ಶುಭ್ರವಾದ ನೀರು. ಬಂಡೆಗಳಿಂದ ನೀರು ಧುಮುಕವಲ್ಲಿ ನೊರೆ, ಸಡಗರ. ಅಲ್ಲಿ ಸ್ನಾನ ಮಾಡುತ್ತಿರುವ ಹುಡುಗರ ಉಲ್ಲಾಸ. ಜೋಕೆಯಾಗಿ ನೀರಿಗಿಳಿಯುವ ಯಾತ್ರಿಕರು. ಅವರಿಗೆ ಮಂತ್ರ ಹೇಳುತ್ತ ಧೈರ್ಯ ಹೇಳುವ, ಮುಳುಗು ಹಾಕಲು ಪ್ರೋತ್ಸಾಹಿಸುವ ಪುರೋಹಿತರು. ಹೊಳೆಯ ಆಚೆ ಹನುಮಂತನ ಗುಡಿ, ದಂಡೆಯುದ್ದಕ್ಕೂ ಮಾವಿನ, ಹಲಸಿ, ಮುತ್ತುಗದ ಮರಗಳು. ನೆರಳಿದ್ದಲ್ಲೆಲ್ಲ ಉಚ್ಚೆ ಹೇಲಿನ ದುರ್ಗಂಧ. ಸಹಿಸಲಾರದೆ ‘ಅಂಗಡಿಗೆ ಹೋಗೋಣ ರಾಯರೆ’ ಎಂದ. ‘ನಡಿ’ ಎಂದರು. ಶ್ರೀಪತಿರಾಯರು.

‘ನಿಮ್ಮನ್ನು ನೋಡಿ ಸುಮಾರು ಎರಡು ಮೂರು ವಾರವಾಯ್ತಲ್ಲ?’ ಎಂದು ಜಗನ್ನಾತ ಮಾತಿಗೆ ಶುರುಮಾಡಿದ.

‘ಈ ಎರಡು ಮೂರು ವಾರ ನರಕಯಾತನೆ ಅನುಭವಿಸಿದ. ಕೆಲವು ಸಾರಿ ಯಾಕೆ ನೀರಿಗೆ ಬಿದ್ದು ಸಾಯಬಾರ್ದು ಅಂತಲೂ ಅನ್ಸಿದ್ದಿದೆ ಮಾರಾಯ.’

ಶ್ರೀಪತಿರಾಯರ ಬಾಯಿಂದ ಇಂತಹ ಮಾತನ್ನು ಕೇಳುವುದೇ ಜಗನ್ನಾಥನಿಗೆ ಇಷ್ಟವಿರಲಿಲ್ಲ. ಭಾಗ್ಯಮ್ಮ ತನ್ನೆದುರು ರಂಪ ಮಾಡದಿದ್ದರೆ ರಾಯರು ಹೀಗೆ ಮಾತಾಡುವಷ್ಟು ಕುಗ್ಗುತ್ತಲೇ ಇರಲಿಲ್ಲವೆನ್ನಿಸಿ ಜಗನ್ನಾಥನಿಗೆ ದುಃಖವಾಯಿತು. ಮಾತು ಬದಲಾಯಿಸಲು ಹೇಳಿದ :

ಮೊನ್ನೆ ಏನಾಯ್ತು ಅಂತೀರಿ? ಕನ್ನಡಾ ಜಿಲ್ಲೇಲಿ ನಮ್ಮ ವೈವಾಟು ನೋಡಿಕೊಳ್ಳೋ ರಾಜಣ್ಣ ಇದಾರಲ್ಲ – ಅವರು ತುಂಬ ಖಾಹಿಲೇಂತ ಇಲ್ಲಿಗೆ ಬಂದರು. ಡಾಕ್ಟರನ್ನ ನೋಡೋಕಲ್ಲ; ಮಂಜುನಾಥನಿಗೆ ಹರಕೆ ಸಲ್ಲಿಸಲಿಕ್ಕೆ. ಕೈಯಲ್ಲಿದ್ದ ಐದುನೂರು ರೂಪಾಯನ್ನೂ ಕುಂಕುಮಾರ್ಚನೆ ಅದೂ ಇದೂಂತ ಚೆಲ್ಲಿದರು. ನಾನು ಉಪಾಯಮಾಡಿ ಅವರನ್ನ ಡಾಕ್ಟರಿಗೆ ತೋರಿಸಿದೆ. ಕ್ಯಾನ್ಸರ್‌ಇರಬಹುದೂಂತ ಅನುಮಾನ ಪಟ್ಟರು. ಆದರೆ ಅವರಿಗೆ ಬೆಂಗಳೂರಿಗೆ ಹೋಗಕ್ಕೆ ಕೈಯಲ್ಲಿ ಕಾಸಿಲ್ಲ. ನಾನು ಕೊಡಬೇಕಾಯ್ತು. ಮಂಜುನಾಥನಿಗೆ ಇರೋ ದುಡ್ಡನ್ನೆಲ್ಲ ಚೆಲ್ಲಬೇಡಿ ಅಂತ ಸಾಯ್ತಿರೋ ಆ ಮನುಷ್ಯನಿಗೆ ಹೇಳಲಿಕ್ಕೆ ನನಗೆ ಧೈರ್ಯಾನೇ ಬರಲಿಲ್ಲ’.

‘ನೋಡು ಜಗಣ್ಣ, ನನ್ನ ಮಗ ರಂಗ ಬಸ್ಸಿಗೆ ಹೋಗಿ ಯಾತ್ರಿಕರನ್ನ ಕರ್ಕೊಂಡು ಬಂದಾಗ ನನ್ನ ಮಗಳನ್ನ ಸೂಳೆಗಾರಿಕೇಗೆ ಬಿಟ್ಟಷ್ಟೆ ಹೇಸಿಗೆಯಾಯ್ತು ಮಾರಾಯ. ಎಂದೂ ಕೈಯೆತ್ತದೇ ಇರೋವನು ಅವತ್ತು ನನ್ನ ಹೆಂಡತೀನ ಹೊಡೆದೆ. ಸಾವಿತ್ರೀ ತಡೀದೇ ಇದ್ರಿದ್ರೆ ಅವಳನ್ನ ನಾನು ಸಾಯಿಸಿ ಬಿಡ್ತಿದ್ದೇಂತ ಕಾಣುತ್ತೆ. ನನ್ನಲ್ಲಿ ಅಂಥ ರೋಷ ಇದೇಂತ ನಾನು ತಿಳಿದೇ ಇರಲಿಲ್ಲ. ಹೇಗೇ ಈ ದೇವರು ನಿರ್ಬಲನಾಗಿದ್ದಾಗ ನನ್ನನ್ನ ಕಬಳಿಸಕ್ಕೆ ನೋಡ್ದ ನೋಡು.’

ಕೊನೆಯ ಮಾತಾಡುವಾಗ ಶ್ರೀಪತಿರಾಯರು ನಕ್ಕಿದ್ದರು ತಾವಿಬ್ಬರೂ ಒಂದೇ ವಿಚಾರನ್ನ ಮುಟ್ಟಿದಂತೆನ್ನಿಸಿ ಜಗನ್ನಾಥನಿಗೆ ಖುಷಿಯಾಯಿತು. ಆದರೂ ರಾಯರು ಸಂಕಟದಲ್ಲಿದ್ದಾಗ ತನ್ನ ಯೋಜನೆಗಳನ್ನು ಅವರ ಹತ್ತಿರ ಹೇಳಿಕೊಳ್ಳುವುದು ಕ್ಷುಲ್ಲಕವೆನ್ನಿಸಿತು. ಯಾರಿಗೂ ಸೇರದ ಒಣಕಲು ಮಾತುಗಳನ್ನಾಡುವುದೇ ಸರಿಯೆನ್ನಿಸಿ,

‘ಈ ಭೂತರಾಯನ ವಿಷಯ ಗೊತ್ತ ನಿಮಗೆ ರಾಯರೆ?’ ಎಂದ.

‘ಯಾವುಯಾವುದೋ ಭೂತಗಳಿವೆ ಮಾರಾಯ. ಪಂಜುರ್ಲಿ, ಜುಮಾದಿ, ಬೈದೆರ್, ಕಲ್ಕುಡ, ಬೊಬ್ಬರ್ಯ, ಜಟ್ಟಿಗ- ಹೀಗೆ, ಶೂದ್ರರ ಭೂತಗಳು ಇವು. ಹೊಲೆಯರ ಭೂತವೂ ಒಂದಿದೆ – ಕೋರ್ದಬ್ಬುಸಂಧಿ ಅಂತಲೋ ಏನೋ. ಅದರ ಮೇಲೊಂದು ಪಾಡ್ದನವಿದೆಯಂತೆ. ಈ ಭೂತಗಳಿಗೆಲ್ಲ ಒಡೆಯ ಭೂತರಾಯ. ಈ ಭೂತರಾಯನ ಒಡೆಯ ಮಂಜುನಾಥ. ಹಿಂದೂ ಧರ್ಮ ಅಂದರೆ ಏನೂಂತ ತಿಳೀಬೇಕಾದರೆ ನಮ್ಮ ಈ ದೇವಸ್ಥಾನಕ್ಕೆ ಬರ‍್ಬೇಕು.’

‘ಅಲ್ಲ – ಶೂದ್ರರ ಈ ಭೂತರಾಯನ್ನ ಈಗ ಗೇಣೀದಾರರನ್ನ ಹದ್‌ಬಸ್ತಿನಲ್ಲಿ ಇಡೋದಕ್ಕೆ ನಾವು ದುಡಿಸ್ತ ಇದೀವಲ್ಲ – ಆ ನಮ್ಮ ಜಾಣತನ ನೋಡಿ.’

ಶ್ರೀಪತಿರಾಯರು ನಕ್ಕರು. ನಾಗರಾಜ ಜೋಯಿಸರನ್ನು ನೋಡಿದಿಯಾ? ಎಂದು ಸೂಚ್ಯವಾಗಿ ಕೇಳಿದರು. ತನ್ನ ಯೋಜನೆ ರಾಯರ ಕಿವಿಯನ್ನಿನ್ನೂ ಮುಟ್ಟಿಲ್ಲ. ತಿಳಿದರೆ, ಒಂದು ಕಾಲದಲ್ಲಿ ತನ್ನ ಸರ್ವಸ್ವವನ್ನೂ ಸುಟ್ಟು ಚಳುವಳಿಗೆ ಸೇರಿದ ಮನುಷ್ಯ ಹೆದರಲಿಕ್ಕಿಲ್ಲ. ಈಗ ಸದ್ಯ ಇವರ ಮಗಳಿಗಾದ ವರ್ಗವನ್ನ ಕ್ಯಾನ್ಸಲ್ ಮಾಡಿಸಬೇಕು; ಮಗನಿಗೆ ತನ್ನ ಆಫೀಸಲ್ಲೆ ಕೆಲಸ ಕೊಡಬೇಕು. ಇಲ್ಲದಿದ್ದರೆ ಭಾಗ್ಯಮ್ಮ ಮತ್ತೆ ಅವನನ್ನ ಯಾತ್ರಿಕರನ್ನ ಮನೆಗೆ ತರಲು ಅಟ್ಟಿಯೇ ಅಟ್ಟುತ್ತಾರೆ. ಹಾಗೇ ದುಡ್ಡು ಕೊಟ್ಟರೆ ರಾಯರು ತೆಗೆದುಕೊಳ್ಳುವವರಲ್ಲ. ‘ಆಮೇಲೆ ಕೊಡುವಿರಂತೆ’ ಎಂದು ಹೇಳಿ ಜಗನ್ನಾಥನಿಗೆ ಅವರಿಗೆ ಬೇಕಾದಷ್ಟು ಹಣ ಕೊಡುವ ಆಸೆ; ಆದರೆ ಧೈರ್ಯ ಸಾಲದು.

ಪೇಟೆಯ ಚೌಕದಲ್ಲಿದ್ದ ಖಾದಿ ಅಂಗಡಿಗೆ ಬಂದರು. ರಂಗ ಮಳಿಗೆಯ ಬಾಗಿಲು ತೆರೆದು ಕೂತಿದ್ದ. ಅಂಗಡಿಯಲ್ಲಿ ವ್ಯಾಪಾರವಾಗದ ಧೂಳು ತುಂಬಿದ ಥಾನು ಥಾನು ಖಾದಿ ವಸ್ತ್ರಗಳು; ತೂಗು ಹಾಕಿದ ಬಿಳಿ ಟೋಪಿಗಳು. ಮುರಿದ ಚರಕ. ಹಲ್ಲಿಲ್ಲದ ನಗುವಿನ ಗಾಂಧಿಯ ಫೋಟೋ. ಗಾಂಧಿ ಮುಖದ ಪ್ರಿಂಟಿದ್ದ ಖಾದಿ ಚೀಲಗಳು. ‘ಕೂತುಕೋ’ ಎಂದರು. ದಿಂಬಿಗೊರಗಿ ಜಗನ್ನಾಥ ಕೂತ.

ಈ ಅಂಗಡಿಯಲ್ಲೆ ಕೂತು ರಾಯರು ಚಳುವಳಿ ನಡೆಸಿದ್ದು; ಹೊಸ ವಿಚಾರವನ್ನು ತನ್ನಂತಹ ಯುವಕರ ಹತ್ತಿರ ಉತ್ಸಾಹದಿಂದ ಹಂಚಿಕೊಂಡದ್ದು. ಎಲೆಯಡಿಕೆ ಚೀಲ ಬಿಚ್ಚಿ ಎಲೆಗೆ ಸುಣ್ಣ ಹಚ್ಚುತ್ತಿದ್ದಂತೆಯೇ ರಾಯರು ಮನೆಯಲ್ಲಾದ ಘಟನೆಯನ್ನು ಮರೆಯುತ್ತಿರುವಂತೆ ಅನ್ನಿಸಿತು. ಅವರ ಮಾತಿನ ಧ್ವನಿಯಲ್ಲಿ ಮತ್ತೆ ಉತ್ಸಾಹ, ಹಾಸ್ಯ, ತುಂಟತನ ಮೂಡುವ ಚಿಹ್ನೆಗಳು ಅವರ ಪೊದೆ ಪೊದೆ ಹುಬ್ಬುಗಳ ಕೆಳಗೆ ಮಿನುಗುವ ಕಣ್ಣುಗಳಲ್ಲಿ ತೋರಿದವು. ಯಾವತ್ತೂ ಪಳಗಿಸಲಾರದ ಈ ಪ್ರಾಣಿಯನ್ನು ಭಾಗ್ಯಮ್ಮ ದ್ವೇಷಿಸುವುದು ಸಹಜವೇ.

ಪೇಟೆಗೆ ಬಂದಿದ್ದ ಶೂದ್ರರೆಲ್ಲ ಅವಸರವಾಗಿ ದೇವಸ್ಥಾನದ ಕಡೆ ನಡೆಯುತ್ತಿದ್ದರು. ಅವರನ್ನು ನೋಡುತ್ತಿದ್ದ ಜಗನ್ನಾಥನಿಗೆ ರಾಯರು ಹೇಳಿದರು :

‘ಇವಕ್ಕೆಲ್ಲ ಹೊರಪಂಕ್ತಿ, ಕೆಂಪಕ್ಕಿ ಅನ್ನ ಹುರುಳಿ ಸಾರು. ಒಳಗಡೆ ಬ್ರಾಹ್ಮಣರಿಗೆ ಊಟ. ಸಾರು, ಹುಳಿ, ಪಲ್ಯ, ಪಾಯಸ. ನಿಮ್ಮನೇಂದಲೂ ಎಂಟು ಹತ್ತು ಪಲ್ಲ ಅಕ್ಕಿ ದೇವಸ್ಥಾನಕ್ಕೆ ಸಂದಾಯವಾಗುತ್ತೇಂತ ಕಾಣುತ್ತೆ.’

ಜಗನ್ನಾಥ ಹೌದೆಂದು ತಲೆಹಾಕಿದ.

‘ನನ್ನ ಮಕ್ಕಳು, ಹೆಂಡತಿ ನಿತ್ಯಥಾಲೀ ಹಿಡಿದು ದೇವಸ್ಥಾನಕ್ಕೆ ಊಟಕ್ಕೆ ಹೋಗ್ದೇ ಇರೋ ಹಾಗೆ ಏನಾದ್ರೂ ಮಾಡಬೇಕು ಮಾರಾಯ.’

ರಾಯರ ಲೇವಡಿಯಲ್ಲಿ ನೋವಿತ್ತು. Dearest Margaret, we can restore dignity to man only by destroying this God. Otherwise –

‘ನಾವು ಚರಿತ್ರೇಲಿ ಒಳಗಾಗಿ, creative ಆಗೇ ಇಲ್ಲ ನೋಡಿ ರಾಯರೆ.’

‘ಈ ಮಂಜುನಾಥನ ಅಧ್ಯಕ್ಷತೇಲಿ ಜೀವನಾನ್ನೋದು ಕಾಲಾತೀತದಲ್ಲಿ ನಡೆಯೋ ಸಂಭ್ರಮಾಪ್ಪ – ಅಲ್ವೇನೊ ಗಣೇಶ? ನಿಮ್ಮಪ್ಪ ಹೇಳೋದು ಇದೇ ಅಲ್ವೇನೋ?’

ರಾಯರು ಅಂಗಡಿಯ ಬಾಗಿಲಲ್ಲಿ ನಿಂತಿದ್ದ ಯುವಕನನ್ನು ತಮಾಷೆಯಾಗಿ ಕೇಳಿದರು. ಕೈಯಲ್ಲಿ ಔಷಧಿಯ ಬಾಟ್ಲು, ಕಿವಿಗಳೆಲ್ಲ ಮಡಚಿ ಮಾಸಲಾದ ಯಾವುದೋ ಕಾದಂಬರಿ ಹಿಡಿದು ನಿಂತಿದ್ದ ಗಣೇಶ ಪೆಚ್ಚಾಗಿ ನಕ್ಕ. ಸುಮಾರು ಇಪ್ಪತ್ತೈದು ವರ್ಷವೆಂದು ಮುಖದ ಎಲುಬುಗಳು ಹೇಳಿದರೂ, ಹುಡುಗನ ಗಾತ್ರದ ಗಣೇಶನನ್ನು, ಜಗನ್ನಾಥ ಕುತೂಹಲದಿಂದ ನೋಡಿದ. ಪಿಳಿಜುಟ್ಟನ್ನು ಮುಚ್ಚುದ ಕೂದಲು, ಪಂಚೆ, ಧೋತ್ರ, ಹಣೆಯಲ್ಲಿ ವಿಭೂತಿ, ಕಿವಿಗಳಲ್ಲಿ ದೊಡ್ಡ ಹರಳಿನ ಒಂಟಿ- ಇವನನ್ನು ಮುಂಚೆ ನಾನು ನೋಡಿದ್ದೀನ? ಜಗನ್ನಾಥನಿಗೆ ತಿಳಿಯಲಿಲ್ಲ.

‘ತಂಗೀಗೆ ಹುಷಾರಿಲ್ವೇನೊ? ಅಂತೋಣಿ ಡಾಕ್ಟ್ರ ಹತ್ತಿರ ಬಂದಿದ್ಯ?’ ಜಗನ್ನಾಥನ ಕಡೆಗೆ ತಿರುಗಿ ‘ಇವನು ಯಾರು ಗೊತ್ತಾಗ್ಲಿಲ್ವ ಜಗಣ್ಣ? ದೇವಸ್ಥಾನದ ಮುಖ್ಯ ಪೂಜಾರಿಗಳಿದಾರಲ್ಲ ಸೀತಾರಾಮಯ್ಯ – ಅವರ ಹಿರೀಮಗ’ ಎಂದರು.

‘ಓಹೋ’ ಎಂದ ಜಗನ್ನಾತ. ‘ಹೋಗಿ ಬರ್ತೀನಿ’ ಎಂದು ಗಣೇಶ ನಮಸ್ಕಾರ ಮಾಡಿದ. ‘ಆಗ್ಲಿ. ನಮಸ್ಕಾರ’ ಎಂದು ಜಗನ್ನಾಥ, ರಾಯರಿಗೆ ಹೇಳಿದ :

‘ನಮ್ಮನೇಲೇ ಊಟ ಮಾಡೋನ ಬನ್ನಿ’.

‘ಅಂಗಡೀನ್ನ ನೋಡಿಕೊಂಡಿರೊ’ ಎಂದು ರಂಗನಿಗೆ ಹೇಳಿ ರಾಯರು ಎಲೆಯಡಿಕೆ ಚೀಲ ಹೊತ್ತು ಎದ್ದರು. ಅಷ್ಟರಲ್ಲಿ ವಾಸುವೂ ಅಲ್ಲಿಗೆ ಬಂದ. ‘ಮನೇಗೆ ಹೋಗೋಣ ನಡಿ’ ಎಂದು ಜಗನ್ನಾಥ ಕರೆದ. ಜೊತೆಗೆ ಹೊರಟ ವಾಸು, ‘ಏನಯ್ಯ ನಾಗರಾಜ ಜೋಯಿಸರ ಮನೆಗೆ ಹೋಗಿದ್ದಿಯಂತೆ. ಊರಿನ ಸಾಹುಕಾರ‍್ರು ಬಂದ್ರೂಂತ ಅವರ ಸಂಭ್ರಮ ನೋಡಬೇಕು. ಕೊಚ್ಚಿದ್ದೇ ಕೊಚ್ಚಿದ್ದು. ಅವರನ್ನ ಮಾತ್ರ ನೀನು ನಂಬಬೇಡ, ಬೇಕಾದ್ರೆ ರಾಯ್ರನ್ನ ಕೇಳು. ವಯಸ್ಸಾದ್ರೂ ಮುದುಕನಿಗೆ ಚಪಲ ಬಿಡಲಿಲ್ಲ. ಹೆಂಡತೀನ ಸತಾಯಿಸಿ ಕೊಂದು ಈಗ ಸೊಸೇನ್ನ ಇಟ್ಟುಕೊಂಡಿದೆ ಪ್ರಾಣಿ. ಪಾಪ ಮಗ ಶಿವಮೊಗ್ಗದಲ್ಲಿ ದುಡೀತಾ ಇದಾನೆ. ಸೊಸೇನ್ನ ಯಾಕೆ ಮಗನ ಹತ್ರ ಕಳಿಸಬಾರದು? ಮನೇಲಿ ಬರೋವ್ರಿಗೆ ಹೋಗೋವ್ರಿಗೆ ಮಾಡಿಹಾಕಕ್ಕೆ ಯಾರಿದಾರೆ ಅಂತ ನೆವ ಹೇಳ್ತಾನೆ. ನಾನು ರಾಜಾರೋಷ ರಿಜಿಸ್ಟರ್ ಮದುವೆ ಮಾಡಿಕೊಂಡೆ; ಬೇಕೂನ್ನಿಸಿದರೆ ದುಡ್ಡುಕೊಟ್ಟು ಹೋಗ್ತೀನಿ. ಮಡೀಪಂಚ ಮುಸುಕಲ್ಲಿ ಈ ಗೊಡ್ಡುಗಳ ಹಾಗೆ ವ್ಯಭಿಚಾರ ಮಾಡಲ್ಲ. ದೇವಸ್ಥಾನದ ಪೂಜೆ ಹಕ್ಕು ತನಗೇ ಸೇರಿದ್ದು ಅಂತ ಕೇಸು ಹಾಕತ್ತಂತೆ. ಈ ಪ್ರಾಂತದ ಒಂದೇ ಒಂದು ಕೇಸನ್ನು ಕೋರ್ಟಿಗೆ ಹೋಗಲಿಕ್ಕೆ ಭೂತರಾಯ ಬಿಡದೇ ಇರೋವಾಗ ಊರು ಹಾಳುಮಾಡೋ ಬುದ್ದಿ ಯಾಕೆ ಈ ಪ್ರಾಣಿಗೇಂತ? ಬೇರೆಯವರ ಉದ್ಧಾರ ನೋಡಿ ಸಹಿಸದ ಸೂಳೇಮಕ್ಕಳೆ ಈ ಊರಲ್ಲಿ. ಹೊಲಗೇರಿ ಬೇಕು, ಈ ಬ್ರಾಹ್ಮಣರಿರೋ ಪೇಟೆಗಳು ಬೇಡ. ಪಂಚಪಾತ್ರೆ ಹಿಡಿದ, ದೇವಸ್ಥಾನಕ್ಕೆ ಊಟಕ್ಕೆ ಹೋದ – ಆಯಿತು. ಮೈಬಗ್ಗಿ ಕೆಲಸ ಮಾಡೋದು ಅಂದ್ರೇನು ಅಂತ ತಿಳಿದಿದ್ರೆ ತಾನೆ ಇವಕ್ಕೆ?’

ವಿನಾಕಾರಣ ವಾಸು ರೋಷದಿಂದ ಕುದೀತ ಇದಾನೆ. ಎಲ್ಲೆಲ್ಲೂ ವ್ಯಕ್ತವಾಗಲು ಕಾದಿರುವ ಹಿಂಸೆ. ಲಾಠಿ ಏಟಿಗೂ ಜಗ್ಗದ ಅವನು ಯಾರೋ ಇವನು ಯಾರೋ. ಬದುಕುವ ಕ್ರಿಯೆಯಲ್ಲಿ ವಿಕಾರವಾಗದೇ ಉಳಿಯುವುದು ಸಾಧ್ಯವೆ ಮಾರ್ಗರೆಟ್? ರಾಯರ ಮನೆಯಲ್ಲಿ ನಡೆದ ರಂಪ, ಹಿಂಸೆ. ನಿತ್ಯ ಜೀವನದ ಸುಖ ದುಃಖಗಳಲ್ಲಿ ತೊಡಗಿದ್ದೂ ಇತಿಹಾಸದ ಚಕ್ರ ಚಲಿಸುವಂತೆ ಮಾಡುವ ಕ್ರಿಯೆ ಮುಖ್ಯವೆನ್ನಿಸಿಕೊಳ್ಳುವುದು ಹೇಗೆ? ಈಗಿನ ಮನಃಸ್ಥಿತಿಯಲ್ಲಿ ಶ್ರೀಪತಿರಾಯರಿಗೆ pure action ಮುಖ್ಯವೆನ್ನಿಸುವಂತೆ ನಾನು ಮಾಡಬಲ್ಲೆನೆ? ನನ್ನ ವಿಚಾರ ಗಟ್ಟಿಯೆ? ಎಷ್ಟು? – ಇವೆಲ್ಲವನ್ನೂ ಕೂತು ಆಳವಾಗಿ ಯೋಚಿಸಬೇಕು. ಅದಕ್ಕೆ ಏಕಾಂತ ಬೇಕು, ಮುಖವಿಲ್ಲದ ಹೆಸರಿಲ್ಲದ ಅವುಗಳು ಬೇಕು. ಯಾರು ಪಿಳ್ಳ, ಯಾರು ಕರಿಯ, ಯಾರು ಮಾದ. ಭೂತರಾಯನ ಹಕ್ಕುದಾರರಾದ ಈ ಪೂರ್ವಿಕರು. ಹಳಬರಾದ ರಾಯರ ಸಮ್ಮಿತಿಯಿಲ್ಲದೆ, ವಿವೇಕವಿಲ್ಲದೆ ನನ್ನ ನಿಶ್ಚಯ ಗಟ್ಟಿಯಾದೀತೆ. ಅವರಿಗೆ ಹೇಗೆ ಸರಿಯೆನ್ನಿಸುವಂತೆ ಹೇಳಲಿ? ಶತಮಾನಗಳ ಕೊಳೆ ಸೇರಿ ಸೇರಿ ಈ ಪೇಟೆ. ಅವಶ್ಯವಾದರೆ ಕ್ರೌರ್ಯದಲ್ಲೂ ಕೊಚ್ಚಬೇಕು, ನುಗ್ಗಿಸಬೇಕು, ಬಿಡಿಸಬೇಕು, ಅಭಯದಲ್ಲಿ ಮತ್ತೆಲ್ಲ ಅರಳಿಸಬೇಕು. ಶ್ರೀಮಂಜುನಾತ ರೈಸ್ ಮಿಲ್ ಕಡೆ ಹೋಗುತ್ತಿರುವ ಈ ಮೂಟೆ ತುಂಬಿದ ಗಾಡಿಗಳು. ‘ನಮಸ್ಕಾರ’, ‘ದೇವರ ದರ್ಶನ ಮುಗಿಸಿ ಬರುತ್ತಿರೋದೋ?’, ‘ಈ ಸಾರಿ ಒಳ್ಳೆ ಮಾವಿನ ಫಸಲಾದೀತು’, ‘ಹೇಳಕ್ಕಾಗಲ್ಲ. ಅಮಾಸೆ ಹೊತ್ತಿಗೆ ಚಳಿ ಹೆಚ್ಚಾಗಿ ಹೂವೆಲ್ಲ ಉದುರಿದರೂ ಉದುರೀತೆ’. ಬಾವಿಕಟ್ಟೆ ಬಳಿ ಬಟ್ಟೆ ಹಿಂಡುತ್ತ ಎತ್ತಲೋ ನೋಡುವ ಹುಡುಗಿ, ಮೂತಿಯನ್ನು ಚೂಪುಮಾಡಿ ತಿರುಗಿಸುತ್ತ ಹಿಂಡುತ್ತಾಳೆ. ಕೆಳತುಟಿಯನ್ನು ಕಚ್ಚಿ ಕೊಡವಿ, ಹರವುತ್ತಾಳೆ. ಭೂತರಾಯ ಕುಂಕುಮ ಬಳಿದು, ಕೆಂಪು ಮಡಿಯುಟ್ಟು ತಲೆಗೆದರಿ ಕುಣಿಯುತ್ತಾನೆ. ಯಾವುದಕ್ಕಾಗಿ ಕುಣಿಯುತ್ತಾನೆ ನೋಡು. ಒಂದಲ್ಲ ಒಂದು ದಿನ ಸಾಯಲೇಬೇಕಾದ್ದರಿಂದ ಈ ಮಣ್ಣನ್ನು ಮಗುಚುತ್ತಲೇ ಇರಬೇಕು. ಒತ್ತಿ, ನೆಟ್ಟು, ಹೊರಳಿಸಿ, ಪಿಳ್ಳ, ಮಾದ, ಕರಿಯ, ತಲೆಯೆತ್ತಿದರೆ ಮಾತ್ರ. ಒಳಗೊಂದು ಮೊದಲನೇ ಹೆಜ್ಜೆಯಿಟ್ಟರೆ ಮಾತ್ರ. ಶತಮಾನಗಳನ್ನು ಹೆಜ್ಜೆಯೊಂದರಲ್ಲಿ ಅಲ್ಲಗಳೆದು ಚಕ್ರವನ್ನು ಮತ್ತೆ ತಿರುಗಿಸಿದರೆ ಮಾತ್ರ. ಇದು ಮುಖ್ಯವೆಂದು ರಾಯರಿಗೆ ಹೇಗೆ ಮುಟ್ಟಿಸಲಿ. ಕೆಸರು ತುಳಿದು ಉಳುವವನು ಯಾರೊ, ಇಲ್ಲಿ ತಿನ್ನುವನು ಯಾರೊ. ಮಂಜುನಾಥನ ದಾಸೋಹದ ಜಿಡ್ಡಿನಲ್ಲಿ ತೆಪ್ಪಗಾದ ಪ್ರಾಣಶಕ್ತಿ. ಈ ವ್ಯವಸ್ಥೆಯನ್ನು ಕಾಯಲೆಂದು ಕಟ್ಟಿಹಾಕಿದ ಭೂತರಾಯ ಕುಣಿಯುತ್ತಾನೆ, ಸುಮ್ಮನೆ.

ಇಗೋ ದೊಡ್ಡ ಗಂಟೆ ಬಾರಿಸುತ್ತಿದೆ. ನನ್ನ ಹಿರಿಯರು ದಾನ ಮಾಡಿದ ಗಂಟೆ. ಅದರ ನಾದ ಆಕ್ಟೊಪಸ್ ಬೀದಿಗಳ ಪೇಟೆಯನ್ನು ತುಂಬುತ್ತಿದೆ. ಭೂತರಾಯ ಕುಣಿಯುತ್ತಿದ್ದಾನೆ. ಸಿಂಗಾರ ಹಿಡಿದು. ಹಸಿರಾದ ಚಿಗುರಾದ ಪತ್ರೆಗಳನ್ನು ಹೊದ್ದ ಮಂಜುನಾಥನಿಗೆ ಮಹಾ ಮಂಗಳಾರತಿ. ಹೊಟ್ಟೆಪಾಡಿಗೆಂದು ಮಾತ್ರ ತುಳಿಯುವ ಈ ಬೀದಿಗಳಲ್ಲೂ ಗಂಟೆಯ ನಾದ ಕೇಳಿ ಎಂತಹ ಸೂಕ್ಷ್ಮ ಬದಲಾವಣೆ. ಕೊಳ್ಳುತ್ತಿರುವ ಬಕೀಟಿನಲ್ಲಿ ತೂತು ಇದೆಯೊ ಎಂದು ಪರೀಕ್ಷಿಸುತ್ತಿರುವ ಈ ಹಳ್ಳಿಗ ಬಕೀಟನ್ನು ಅಲ್ಲೆ ಇಟ್ಟು ಕ್ಷಣ ಸ್ತಬ್ಧನಾದ. ಆದರೆ ಈ ಗಂಟೆಯ ನಾದದಲ್ಲಿ ಹೊರಳಿಕೊಳ್ಳುವ ಭ್ರಮೆ ಮಾತ್ರ. ಮಧ್ಯಾಹ್ನದ ಊಟಕ್ಕಾಗಿ ಹಸಿವಾಗುತ್ತಿದೆ ಎಂಬುದರ ನೆನಪಾಗುವುದು ಮಾತ್ರ. ಜಡಗಡು ಬಿಡಿಸುವ ದೇವರೆ, ಗೇಣಿ ಕೊಡಿಸುವ ದೇವರೆ, ಹೃದ್ರೋಗಿ ರಾಷ್ಟ್ರಾಧ್ಯಕ್ಷನಿಗೆ ಶತಾಯು ಭರವಸೆ ಕೊಡುವ ದೇವರೆ, ನನ್ನ ಪ್ರಾಣರಕ್ಷಣೆಯ ಕುಂಕುಮವಾದ ದೇವರೆ, ನೂರಾರು ಎಲೆಗಳ ಮೇಲೆ ಕೆಂಪಕ್ಕಿ ಅನ್ನವಾಗಿ, ಬಿಳಿಯನ್ನವಾಗಿ ನಿತ್ಯ ಬೀಳುವ ಹೊಟ್ಟೆಬಾಕರ ದೇವರ, ಹೊಟ್ಟೆ ಹೊರೆಯುವ ದೇವರೆ- ಜಗನ್ನಾಥನ ಮುಖದಲ್ಲೊಂದು ನಗು ಅರಳಿತು. ಬಿರುಸಿನಿಂದ ನಡೆಯುತ್ತಿದ್ದ ರಾಯರು ತಂಬಾಕನ್ನು ತುಪ್ಪಿದರು. ಒಳಗೊಂದು ಹೆಜ್ಜೆಯಿಡಿಸಿ, ತನ್ಮೂಲಕ ಹರಿದು, ಮಗಚಿ, ಪುನಃ ನಿನ್ನನ್ನು ಪಡೆದು, ಪಿಳ್ಳ, ಮಾದ, ಕರಿಯ, ಜೊತೆಗೆ ನೀನು, ಬಿಡಿಸಿ, ಪಡೆದು, ಜೊತೆಗೆ ಈ ತಂಗಳಾದ ಪೇಟೆ ಸೀಳಿ, ಜೊತೆಗೆ ಈ ಮಂಕು ಬಡಿದ ಜನಕ್ಕೆ ಕುಂಡೆಗೊದ್ದಂತಾಗಿ ಅವಾಕ್ಕಾಗಿ, ಬೆಚ್ಚಿ, ಬೀದಿ ಬೀದಿಯಲ್ಲೂ ಭೂತರಾಯ ಕುಣಿದಂತಾಗಿ… ಆದರೆ ಯಾರು ಮಾದ, ಯಾರು ಕರಿಯ, ಯಾರು ಪಿಳ್ಳ – ಬಿಳುಚಿದ ಮಾತುಗಳ ನನಗೆ ಅವರ ಜೊತೆ ಕೊಂಡಿಗಳೆಲ್ಲಿ? ಯಾವ ಕ್ರಿಯೆಯ ಮೂಲಕ? ಇಗೋ – ಅಂಜುತ್ತ ಒಡ್ಡಿರುವುದಷ್ಟೆ, ಒಳಗಿನಿಂದ ಮಾತುಗಳನ್ನು ಕುದಿಸುತ್ತ ಕಾದಿರುವುದಷ್ಟೆ.

ಮತ್ತೊಂದು ಬಸ್ ಬಂದು ಟೋಲ್‌ಗೇಟಿನ ಹತ್ತಿರ ನಿಂತಿತು. ಯಾತ್ರಿಕರಿಗಾಗಿ ಬ್ರಾಹ್ಮಣ ಹುಡುಗರು ಮುತ್ತಿದರು. ‘ಆರಾಮಾದ ಕೆಲಸ ಅಂದ್ರೆ ಇದೊಂದೇ’ ಎಂದ ವಾಸು. ಬಸ್ಸಿನಿಂದಿಳಿದ ಎಂ.ಎಲ್‌.ಎ. ಗುರುಪ್ಪಗೌಡರು ‘ನಮಸ್ಕಾರ ಸೌಕಾರ್ರಿಗೆ, ನಮಸ್ಕಾರ ರಾಯರಿಗೆ’ ಎಂದರು. ಕಚ್ಚೆ ಪಂಚೆ, ಜುಬ್ಬ, ಪುಟ್ಟ ಹೊಟ್ಟೆ – ಕಾಂಗ್ರೆಸ್ ನಾಯಕನ ಠೀವಿಯೆಲ್ಲ ಗೌಡರಲ್ಲಿತ್ತು. ಅವರ ಹಣೆಯ ಮೇಲೆ ಮಂಜುನಾಥನ ಪ್ರಸಾದ ಕುಂಕುಮವಿತ್ತು.

‘ಜಸ್ಟೀಸ್ ಪಾರ್ಟೀಲಿ ಇದ್ದು ಬ್ರಿಟೀಷರ ಪರವಾಗಿದ್ದ ಈ ಜನ ಈಗ ಕಾಂಗ್ರೆಸ್ ಎಂ.ಎಲ್‌.ಎ.ಗಳು’ ಎಂದು ಗೌಡರು ಕಣ್ಮರೆಯಾಗುತ್ತಿದ್ದಂತೆ ರಾಯರು ಕಹಿಯಾಗಿ ಹೇಳಿದರು. ಇಂತಹ ಮಾತು ಹೇಗೆ ಕ್ರಮೇಣ ಬ್ರಾಹ್ಮಣಪರ ಶೂದ್ರವಿರೋಧಿ ರಾಜಕೀಯವಾಗಿ ಅರ್ಥಹೀನವಾಗುತ್ತದೆಂದು ತಿಳಿದಿದ್ದ ಜಗನ್ನಾಥ ಸುಮ್ಮನಾದ. ಪ್ರಸ್ತುತದ ಹೊಲಸು ರಾಜಕೀಯದಿಂದ ಬೇಸತ್ತ ರಾಯರ ಮನಸ್ಸು ಸೂಕ್ಷ್ಮವಾಗಿ ಹೇಗೆ ಜಾತೀಯವಾದಿಯಾಗುತ್ತಿದೆ ಎನ್ನುವುದನ್ನು ಗಮನಿಸಿದ್ದ ಜಗನ್ನಾಥನಿಗೆ ರಾಯರಂಥವರನ್ನು ರಿನ್ಯೂ ಮಾಡಲು ತಾನು ಯೋಜಿಸಿದ್ದ ಕ್ರಿಯೆಯೇ ಸರಿಯೆನ್ನಿಸಿ ಹುಮ್ಮಸ್ಸಿನಿಂದ ನಡೆದ. ಗುಡ್ಡ ಹತ್ತಿ ಮನೆ ಸೇರುವಷ್ಟು ಹೊತ್ತಿಗೆ ಎಲೆ ಹಾಕಿಯಾಗಿತ್ತು, ಹಸಿವೂ ಆಗಿತ್ತು. ಎಂದಿನಂತೆಯೇ ಪೇಟೆಗೆಂದು ಬಂದವರು, ದೇವರ ದರ್ಶನಕ್ಕೆಂದು ಬಂದವರು ಎಂದು ಸುಮಾರು ಇಪ್ಪತ್ತು ಜನ ಊಟಕ್ಕಿದ್ದರು. ರಾಯರನ್ನು ಊಟಕ್ಕೆ ಕರೆದು ತಂದದ್ದು ನೋಡಿ ಚಿಕ್ಕಿಗೆ ತುಂಬ ಹರ್ಷವಾಯಿತು. ‘ಏನು ಒಂದು ತಿಂಗಳಾಯ್ತು ಈ ಕಡೆಗೆ ನೀವು ಬಂದು’ ಎಂದು ಚಿಕ್ಕಿ ರಾಯರಿಗೆ ಟವಲ್ ಕೊಟ್ಟರು.